Tag: Iron Man

  • ವಿಶ್ವದ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ 53 ವರ್ಷದ ಸೇನಾಧಿಕಾರಿ

    ವಿಶ್ವದ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ 53 ವರ್ಷದ ಸೇನಾಧಿಕಾರಿ

    ಬೆಳಗಾವಿ: ದೇಹದಾರ್ಢ್ಯ ಸೇರಿದಂತೆ ದೇಹ ದಂಡಿಸುವ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಬಹುತೇಕ ಮಾಂಸಾಹಾರಿ ಆಗಿರುತ್ತಾರೆ. ಆದರೆ ಸಸ್ಯಾಹಾರಿ ಸೇನಾಧಿಕಾರಿಯೊಬ್ಬರು ಮಲೇಷಿಯಾದಲ್ಲಿ ನಡೆದ ಐರನ್ ಮ್ಯಾನ್ ಕಠಿಣ ದೇಹ ದಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

    ಇತ್ತೀಚೆಗೆ ಮಲೆಷ್ಯಾದಲ್ಲಿ ನಡೆದ ಐರನ್ ಮ್ಯಾನ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಅದರಲ್ಲಿ ಪ್ರಥಮ ಸ್ಥಾನ ಪಡೆದು ಶಂಕರ್ ಕರಜಗಿ ಕೀರ್ತಿ ತಂದಿದ್ದಾರೆ. ಶಂಕರ್ ಕರಜಗಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿಯಾಗಿದ್ದು, ಭಾರತ ಪೆಟ್ರೋಲಿಯಂ ಕರ್ನಾಟಕದ ಹೆಡ್ ಹಾಗೂ ಟೆರಿಟರಲ್ ಆರ್ಮಿಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

    17 ಗಂಟೆಯ ಅವಧಿಯಲ್ಲಿ ಶಂಕರ್ ಅವರು 3 ಕಿ.ಮೀ ಸಮುದ್ರದಲ್ಲಿ ಈಜುವ, 42 ಕಿ.ಮೀ ಬೆಟ್ಟ ಗುಡ್ಡಗಳಲ್ಲಿ ಓಡುವ ಹಾಗೂ 40 ಡಿಗ್ರಿ ತಾಪಮಾನವಿರುವ ಬೆಟ್ಟ ಗುಡ್ಡಗಳ ಸಾಲಿನಲ್ಲಿ 180 ಕಿ.ಮೀ ಸೈಕಲ್ ಸವಾರಿ ಮಾಡುವ ಚಾಲೆಂಜ್ ಸ್ವೀಕರಿಸಿ 15 ಗಂಟೆ 43 ನಿಮಿಷಗಳಲ್ಲಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಐರನ್ ಮ್ಯಾನ್ ಪ್ರಶಸ್ತಿ ಪಡೆದು ಭಾರತೀಯ ಸೇನೆ ಹಾಗು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸೇನಾಧಿಕಾರಿ ಅವರ ಈ ಸಾಧನೆಗೆ ಮೆಚ್ಚಿ ಸೇನಾ ಮೆಡಲ್ ಪುರಸ್ಕಾರ ನೀಡುವಂತೆ ಸೇನಾಧಿಕಾರಿಗಳು ಶಿಪಾರಸ್ಸು ಮಾಡಿದ್ದಾರೆ.

    ಇಷ್ಟೆಲ್ಲ ಸಾಧನೆ ಮಾಡಿರುವ ಶಂಕರ್ ಅವರು ಯಾವುದೇ ನಾನ್ ವೆಜ್ ಆಹಾರ ಸ್ವೀಕರಿಸದೆ ಕೇವಲ ಸಸ್ಯಾಹಾರಿಯಾಗಿರುವುದು ವಿಶೇಷ ಸಂಗತಿ. ಇಷ್ಟೆಲ್ಲಾ ದೇಹ ದಂಡಿಸುವ ಸ್ಪರ್ಧೆ ಮಾಡಿದರು ಮೊಟ್ಟೆಯನ್ನು ಕೂಡ ಶಂಕರ್ ಅವರು ಸೇವಿಸುವುದಿಲ್ಲ. ರಾತ್ರಿ ಊಟ ಕೂಡ ಮಾಡದೆ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಶಂಕರ್ ಅವರಿಗೆ ಸದ್ಯ 53 ವಯಸ್ಸು ಈ ವಯಸ್ಸಿನಲ್ಲಿ ಗಣನೀಯ ಪ್ರಮಾಣದ ಸಾಹಸ ಸಾಧನೆ ಮಾಡಿರುವ ಶಂಕರ್ ಅವರನ್ನು ಇತ್ತೀಚೆಗೆ ಕುಟುಂಬಸ್ಥರು ಸತ್ಕರಿಸಿ ಸನ್ಮಾನಿಸಿದರು.

  • ಸರ್ದಾರ್ ವಲ್ಲಭಾಬಾಯಿ ಪಟೇಲರಂತೆ ಅಮಿತ್ ಶಾ ಕೂಡ ಉಕ್ಕಿನ ಮನುಷ್ಯ: ಕೋಟ

    ಸರ್ದಾರ್ ವಲ್ಲಭಾಬಾಯಿ ಪಟೇಲರಂತೆ ಅಮಿತ್ ಶಾ ಕೂಡ ಉಕ್ಕಿನ ಮನುಷ್ಯ: ಕೋಟ

    ಉಡುಪಿ: ಜಮ್ಮು-ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರದ ಈ ಐತಿಹಾಸಿಕ ನಿರ್ಧಾರವನ್ನು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಐತಿಹಾಸಿಕ ನಿರ್ಧಾರವನ್ನು ಲೋಕಸಭೆಯಲ್ಲಿ ಮಂಡಿಸಿದ ಅಮಿತ್ ಶಾ ಅವರು ಸರ್ದಾರ್ ವಲ್ಲಭಾಬಾಯಿ ಪಟೇಲರಂತೆ ಉಕ್ಕಿನ ಮನುಷ್ಯರಾಗಿದ್ದಾರೆ. ಭಾರತದ ಜನ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿದ್ದು ಇಂದು ಸಾರ್ಥಕವಾಯಿತು ಎಂದು ಹೇಳಿದರು.

    ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿಯ ಮೂಲಕ ಕಾಶ್ಮೀರದ ಭೂಮಿಯನ್ನು ಬೇರೆ ಯಾವ ಭಾರತದ ಪ್ರಜೆಯೂ ಕೊಂಡುಕೊಳ್ಳಲು ಆಗುವುದಿಲ್ಲ. ಇದರ ಜೊತೆಗೆ ಭಾರತದ ಸಂವಿಧಾನದ ಯಾವುದೇ ಕಾನೂನುಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ಈ ಎಲ್ಲಾ ವಿಚಾರದಿಂದ ಭಾರತದಿಂದ ಕಾಶ್ಮೀರ ಬೇರ್ಪಟ್ಟು ಹೋಗುತ್ತದೆ ಎನ್ನು ಆತಂಕ ಎಲ್ಲರಲ್ಲೂ ಎದುರಾಗಿತ್ತು.

    ಆದರೆ ಮೋದಿ ಮತ್ತು ಅಮಿತ್ ಶಾ ಇಂದು ಆ ವಿಧಿಯನ್ನು ತೆಗೆದು ಹಾಕುವ ಮೂಲಕ ಆತಂಕವನ್ನು ದೂರ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪ್ರತಿಯೊಬ್ಬ ರಾಷ್ಟ್ರಭಕ್ತನೂ ಪಕ್ಷ ಬೇಧ ಮರೆತು ಬೆಂಬಲಿಸಬೇಕು. ನಾನು ಭಾರತೀಯ ಎಂದು ಹೇಳಿಕೊಳ್ಳಲು ಇಂದು ಹೆಮ್ಮೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದರು.