Tag: iran

  • ತೈಲ ಬೆಲೆ ಏರಿಕೆ ಎಚ್ಚರಿಕೆ!

    ತೈಲ ಬೆಲೆ ಏರಿಕೆ ಎಚ್ಚರಿಕೆ!

    ಬೆಂಗಳೂರು: ಅಮೆರಿಕ-ಇರಾನ್ ನಡುವಿನ ಪ್ರಕ್ಷುಬ್ದ ವಾತಾವರಣ ಭಾರತದ ಮೇಲೂ ಬೀಳಲಿದೆ. ಇರಾನ್-ಅಮೆರಿಕ ಕ್ಷಿಪ್ರ ದಾಳಿ ಯುದ್ಧದ ಕಡೆ ತಿರುಗಿದ್ದರೆ, ಆರ್ಥಿಕ ಹೊಡೆತ ಎದುರಾಗಲಿದೆ ಎಂದು ವಿಂಗ್ ಕಮಾಂಡರ್ ಅತ್ರಿ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿ ಅವರು, ಭಾರತದ ಆರ್ಥಿಕತೆಯ ಮೇಲೆ ಈ ಬೆಳವಣಿಗೆ ಹೆಚ್ಚು ಪರಿಣಾಮ ಬೀರಲಿದೆ. ಸದ್ಯ ಭಾರತ ಆರ್ಥಿಕವಾಗಿ ಕುಂಟುತ್ತಾ ಸಾಗಿದೆ. ಎರಡು ರಾಷ್ಟ್ರಗಳ ನಡುವೆ ಯುದ್ಧ ಪರಿಸ್ಥಿತಿ ಎದುರಾದರೆ ಇಡೀ ಪ್ರಪಂಚಕ್ಕೆ ಕಷ್ಟ ಎದುರಾಗುತ್ತದೆ. ಕಚ್ಚಾ ತೈಲದ ಬೆಲೆ ಭಾರೀ ದುಬಾರಿಯಾಗಲಿದೆ. ಯುದ್ಧ ಕಾಲ ಹಣಕಾಸಿನ ವೆಚ್ಚ ಹೆಚ್ಚಾಗಲಿದ್ದು, ಆಗ ಇರಾನ್ ತನ್ನ ರಫ್ತಿನ ಮೇಲಿನ ದರ ಏರಿಕೆ ಮಾಡಲಿದೆ. ಇದರ ಪರಿಣಾಮ ತೈಲ ಬೆಲೆಯೂ ಹೆಚ್ಚಾಗಲಿದೆ ಎಂದು ತಿಳಿಸಿದರು.

    ಹೀಗಾಗಿ ಇದನ್ನ ತಪ್ಪಿಸಲು ಪ್ರಧಾನಿ ಮೋದಿ ಶಾಂತಿದೂತನಂತೆ ಪ್ರವೇಶ ಮಾಡಬೇಕಿದೆ. ಇರಾನ್-ಅಮೆರಿಕ ಎರಡು ರಾಷ್ಟ್ರಗಳಲ್ಲಿ ಯಾರದ್ದು ತಪ್ಪಿದೆ ಎನ್ನುವುದನ್ನು ಒಪ್ಪಿಕೊಂಡರೆ ಅವರು ದೊಡ್ಡವರಾಗುತ್ತಾರೆ. ಸದ್ಯ ಭಾರತದ ಮಾತಿಗೆ ಬಾರೀ ಬೆಲೆಯಿದ್ದು, ಕೂಡಲೇ ಭಾರತ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಇರಾನ್ ಕ್ಷಿಪಣಿ ದಾಳಿಗೆ 80 ಅಮೆರಿಕ ಸೈನಿಕರು ಹತ

    ಇರಾನ್ ಕ್ಷಿಪಣಿ ದಾಳಿಗೆ 80 ಅಮೆರಿಕ ಸೈನಿಕರು ಹತ

    – ನಾಳೆ ಬೆಳಗ್ಗೆ ಹೇಳಿಕೆ ನೀಡುತ್ತೇನೆ – ಟ್ರಂಪ್
    – ಯುದ್ಧ ಬಯಸಲ್ಲ, ದಾಳಿ ನಡೆಸಿದ್ರೆ ಹಿಮ್ಮೆಟ್ಟಿಸುತ್ತೇವೆ : ಇರಾನ್

    ದುಬೈ: ಅಮೆರಿಕ ಮತ್ತು ಇರಾನ್ ನಡುವಿನ ಕಿತ್ತಾಟ ಮತ್ತಷ್ಟು ಜೋರಾಗಿದೆ. ಇರಾನ್ ಬುಧವಾರ  ಕ್ಷಿಪಣಿ ದಾಳಿ ನಡೆಸಿ ಅಮೆರಿಕದ 80 ಸೈನಿಕರನ್ನು ಹತ್ಯೆ ಮಾಡಿದೆ.

    ಈ ಸಂಬಂಧ ಇರಾನ್ ಸರ್ಕಾರಿ ಮಾಧ್ಯಮ, ಖಂಡಾಂತರ ಕ್ಷಿಪಣಿ ದಾಳಿ ಮಾಡಿ ಇರಾಕ್‍ನಲ್ಲಿದ್ದ ಅಮೆರಿಕ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ನಮ್ಮ ದಾಳಿಯಲ್ಲಿ 80 ‘ಅಮೆರಿಕ ಉಗ್ರರು’ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.

    ಇರಾನ್ ಅಮೆರಿಕ ತನ್ನ ವೈರಿ ಎಂದು ಈಗಾಗಲೇ ಹೇಳಿಕೊಂಡಿದ್ದು ಉಗ್ರರ ನಾಡು ಎಂದು ಕರೆಯುತ್ತಿದೆ. ಅಮೆರಿಕದ ಸೈನಿಕರನ್ನು ಉಗ್ರಗಾಮಿಗಳಿಗೆ ಹೋಲಿಕೆ ಮಾಡುತ್ತಿದೆ. ತನ್ನ ಸೇನಾ ಕಮಾಂಡರ್ ಖಾಸಿಂ ಸುಲೇಮಾನಿ ಹತ್ಯೆ ಪ್ರತೀಕಾರ ತೀರಿಸುತ್ತೇವೆ ಎಂದು ಇರಾನ್ ಹೇಳಿತ್ತು. ಅದರಂತೆ ಈಗ ಈ ದಾಳಿ ನಡೆಸಿದ್ದೇವೆ ಎಂದು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದೆ.

    ಒಟ್ಟು 15 ಕ್ಷಿಪಣಿಗಳನ್ನು ಇರಾನ್ ಅಮೆರಿಕ ಸೇನೆಯ ಮೇಲೆ ಹಾರಿಸಿದೆ. ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ನಮ್ಮ ಕ್ಷಿಪಣಿಯನ್ನು ಅಮೆರಿಕ ಹೊಡೆದು ಹಾಕಿಲ್ಲ ಎಂದು ಇರಾನ್ ಸರ್ಕಾರಿ ಮಾಧ್ಯಮ ಹೇಳಿಕೊಂಡಿದೆ. ಇದನ್ನೂ ಓದಿ: ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

    ಈ ಸಂಬಂಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ ಇರಾಕ್ ದೇಶದಲ್ಲಿರುವ ನಮ್ಮ ಎರಡು ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದೆ. ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದರ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ. ವಿಶ್ವದಲ್ಲೇ ನಾವು ಬಲಿಷ್ಠವಾದ ಮಿಲಿಟರಿಯನ್ನು ಹೊಂದಿದ್ದು, ನಾಳೆ ಬೆಳಗ್ಗೆ ಹೇಳಿಕೆ ನೀಡುತ್ತೇನೆ ಎಂದು ಟ್ವೀಟ್ ಮಾಡಿ ಮತ್ತೊಂದು ದಾಳಿಯ ಮುನ್ಸೂಚನೆ ನೀಡಿದ್ದಾರೆ.

    ಇರಾನ್ ವಿದೇಶಾಂಗ ಸಚಿವ ಜಾವದ್ ಜರೀಫ್ ಈ ಸಂಬಂಧ ಪ್ರತಿಕ್ರಿಯಿಸಿ, ವಿಶ್ವಸಂಸ್ಥೆಯ 51ನೇ ಚಾರ್ಟರ್ ಅನ್ವಯ, ನಮ್ಮ ದೇಶದ ಪ್ರಜೆ ಮತ್ತು ಅಧಿಕಾರ ಮೇಲೆ ಹೀನ ದಾಳಿ ನಡೆಸಿದ್ದಕ್ಕೆ ಸ್ವಯಂ ರಕ್ಷಣೆಗಾಗಿ ಪ್ರತಿ ದಾಳಿ ನಡೆಸಲಾಗಿದೆ. ನಾವು ಯುದ್ಧವನ್ನು ಬಯಸುವುದಿಲ್ಲ. ಆದರೆ ನಮ್ಮ ಮೇಲೆ ಆಕ್ರಮಣ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

  • ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

    ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

    ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ಜೋರಾಗಿದೆ. ನಾವು ಸೈಬರ್ ವಾರ್ ಆರಂಭಿಸುತ್ತೇವೆ ಎಂದು ಟ್ರಂಪ್ ಘೋಷಿಸಿಕೊಂಡ ಬೆನ್ನಲ್ಲೇ ಈ ಹಿಂದಿನ ನಿಮ್ಮ ಎಡವಟ್ಟನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂಬರ್ಥದಲ್ಲಿ ಟ್ವೀಟ್ ಮಾಡಿ ಇರಾನ್ ತಿರುಗೇಟು ನೀಡಿದೆ.

    ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ವ್ಯಕ್ತಿ ಅಥವಾ ಅಮೆರಿಕದ ಯಾವುದೇ ಆಸ್ತಿಯನ್ನು ಹಾನಿ ಮಾಡಿದರೆ ಇರಾನ್ ದುಬಾರಿ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ನಾವು ದಾಳಿ ಮಾಡಲು 52 ವೆಬ್‍ಸೈಟ್ ಗಳನ್ನು ಟಾರ್ಗೆಟ್ ಮಾಡಿದ್ದೇವೆ ಎಂದು ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದರು.

    ಈ ಬೆದರಿಕೆಗೆ ಜಗ್ಗದ ಇರಾನ್ ಅಧ್ಯಕ್ಷ ಹಸನ್ ರೌಹಾನಿ, ಸಂಖ್ಯೆ 52ನ್ನು ಉಲ್ಲೇಖಿಸುವ ವ್ಯಕ್ತಿಗಳು ಸಂಖ್ಯೆ 290ನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇರಾನ್ ರಾಷ್ಟ್ರಕ್ಕೆ ಯಾವುದೇ ಕಾರಣಕ್ಕೂ ಬೆದರಿಕೆ ಹಾಕದಿರಿ ಎಂದು ಬರೆದು #IR655 ಬಳಸಿ ಟ್ವೀಟ್ ಮಾಡಿದ್ದಾರೆ.

    ಏನಿದು ಸಂಖ್ಯೆ 290?
    ಇರಾನ್ ಮತ್ತು ಅಮೆರಿಕ ಮಧ್ಯೆ ಗುದ್ದಾಟ ನಡೆಯುತ್ತಿರುವಾಗಲೇ 1988ರ ಜುಲೈ 3 ರಂದು ಟೆಹರಾನ್ ನಿಂದ ದುಬೈಗೆ ಇರಾನ್ ಏರ್ ಫೈಟ್ 655 ಪ್ರಯಾಣಿಸುತಿತ್ತು. ಈ ವಿಮಾನವನ್ನು ಅಮೆರಿಕ ತನ್ನ ಕ್ಷಿಪಣಿಯನ್ನು ಬಳಸಿ ನೆಲಕ್ಕೆ ಉರುಳಿಸಿತ್ತು. 66 ಮಕ್ಕಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 290 ಮಂದಿ ಮೃತಪಟ್ಟಿದ್ದರು. ಎಂದಿನ ಮಾರ್ಗದಲ್ಲಿ ವಿಮಾನ ಸಂಚರಿಸುತ್ತಿದ್ದರೂ ಈ ಪ್ರಯಾಣಿಕ ವಿಮಾನದ ಮೇಲೆ ಅಮೆರಿಕ ದಾಳಿ ನಡೆಸಿದ್ದು ಯಾಕೆ ಎನ್ನುವ ಪ್ರಶ್ನೆ ಹುಟ್ಟು ಹಾಕಿತ್ತು. ನಂತರ ತನಿಖೆಯ ವೇಳೆ ಅಮೆರಿಕ ಈ ವಿಮಾನ ಬಾಂಬರ್ ವಿಮಾನ ಎಂದು ತಪ್ಪಾಗಿ ಅರ್ಥೈಸಿಕೊಂಡು ದಾಳಿ ನಡೆಸಿದ ವಿಚಾರ ಬೆಳಕಿಗೆ ಬಂದಿತ್ತು.

    ಇರಾನ್ ಈ ವಿಚಾರವನ್ನು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿತ್ತು. ಅಮೆರಿಕ ಈ ಘಟನೆಯ ಬಗ್ಗೆ ಯಾವುದೇ ಕ್ಷಮೆ ಕೇಳಲಿಲ್ಲ. ಆದರೆ ಅಧ್ಯಕ್ಷ ರೊನಾಲ್ಡ್ ರೇಗನ್ ವಿಷಾದ ವ್ಯಕ್ತಪಡಿಸಿದ್ದರು. ನಂತರ ಅಮೆರಿಕ 61.8 ದಶಲಕ್ಷ ಡಾಲರ್ ಹಣವನ್ನು ಪಾವತಿ ಮಾಡುತ್ತೇನೆ. ಅಷ್ಟೇ ಅಲ್ಲದೇ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯರಿಗೆ 213,103.45 ಡಾಲರ್ ನೀಡುತ್ತೇನೆ ಎಂದು ಹೇಳಿತ್ತು. ಈ ವಿಚಾರವನ್ನು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಪ್ರಸ್ತಾಪಿಸಿ ವ್ಯಂಗ್ಯವಾಗಿ ಡೊನಾಲ್ಡ್ ಟ್ರಂಪ್‍ಗೆ ತಿರುಗೇಟು ನೀಡಿದ್ದಾರೆ.

    ಸುಲೇಮಾನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಟೆಹರಾನ್ ಪ್ರತಿಜ್ಞೆ ಮಾಡಿದ್ದು ವಿಶ್ವದ ಬಲಿಷ್ಠ ರಾಷ್ಟ್ರಗಳೊಂದಿಗಿನ ತನ್ನ 2015ರ ಪರಮಾಣು ಒಪ್ಪಂದದಿಂದ ಹಿಂದೆ ಸರಿಯಲು ಮುಂದಾಗಿದೆ.

    ಮಾನಿ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ, `ದೇವರು ಪ್ರತೀಕಾರ ತೀರಿಸಿಕೊಳ್ಳುವ ಭರವಸೆ ನೀಡಿದ್ದಾನೆ. ದೇವರ ಅಣತಿಯಂತೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳಲಾಗುವುದು’ ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗಾಗಿ ಇರಾನ್ 575 ಕೋಟಿ ಬಹುಮಾನ ಘೋಷಿಸಿದೆ. ಇರಾನ್‍ನಲ್ಲಿ 8 ಕೋಟಿ ಜನರಿದ್ದು ಪ್ರತಿಯೊಬ್ಬರೂ ಒಂದೊಂದು ಡಾಲರ್ ನೀಡಿದರೂ ಅದು ಟ್ರಂಪ್ ತಲೆ ತೆಗೆದವರಿಗೆ ಸೇರುತ್ತದೆ ಎಂದು ಹೇಳಲಾಗಿದೆ. ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಈ ಕುರಿತು ಪ್ರಸಾರ ಮಾಡಿದೆ.

  • ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನಾ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ

    ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನಾ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ

    ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನೆ ಬೀಡು ಬಿಟ್ಟಿರುವ ಅಲ್-ಬಲಾದ್ ವಾಯುನೆಲೆ ಮೇಲೆ ಇರಾನ್ ಎರಡು ರಾಕೆಟ್ ದಾಳಿ ನಡೆಸಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಅಮೆರಿಕದ ಸೈನಿಕರು ನೆಲೆಸಿರುವ ಬಾಗ್ದಾದ್‍ನ ಉತ್ತರದ ಬಾಲಾಡ್ ವಾಯುನೆಲೆಗೆ ಎರಡು ಕತ್ಯುಷಾ ರಾಕೆಟ್‍ಗಳು ಅಪ್ಪಳಿಸಿವೆ ಎಂದು ಭದ್ರತಾ ಮೂಲಗಳು ಹಾಗೂ ಇರಾಕಿ ಮಿಲಿಟರಿ ತಿಳಿಸಿದೆ. ಅಮೆರಿಕ ವಾಯುಪಡೆಯ ಶುಕ್ರವಾರ ನಡೆಸಿದ ದಾಳಿಗೆ ಇರಾನ್‍ನ ಸೇನಾ ಮುಖ್ಯಸ್ಥ ಜನರಲ್ ಖಾಸಿಂ ಸೊಲೇಮನಿ ಸಾವನ್ನಪ್ಪಿದ ಬಳಿಕ ಯುದ್ಧ ಭೀತಿ ಎದುರಾಗಿದೆ. ಇದೀಗ ಅಮೆರಿಕ ಸೇನೆ ತಂಗಿದ್ದ ಸ್ಥಳದಲ್ಲೇ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

    ಬಾಗ್ದಾದ್‍ನಲ್ಲಿನ ಅಮೆರಿಕ ರಾಯಭಾರ ಕಚೇರಿ ಮತ್ತು ದೇಶಾದ್ಯಂತ ಬೀಡುಬಿಟ್ಟಿರುವ 5,200 ಅಮೆರಿಕದ ಸೈನಿಕರು ರಾಕೆಟ್ ದಾಳಿಯನ್ನು ಎದುರಿಸುತ್ತಿದ್ದಾರೆ. ಇರಾನ್‍ನ ಸೇನಾಧಿಕಾರಿಯನ್ನು ಬಾಗ್ದಾದ್‍ನಲ್ಲಿ ರಾಕೆಟ್ ದಾಳಿಯ ಮೂಲಕ ಕೊಂದ ಕೆಲವೇ ಗಂಟೆಗಳ ಬಳಿಕ ಅಮೆರಿಕ ಮತ್ತೆ ವಾಯುದಾಳಿ ನಡೆಸಿತ್ತು. ಶನಿವಾರ ಬೆಳಗ್ಗೆ ಇರಾಕ್‍ನ ಹಶೆಬ್ ಅಲ್ ಶಾಬಿ ಅರೆಸೇನಾ ಪಡೆಯ ವಾಹನಗಳ ಅಮೆರಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು ಆರು ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು.

    ಅಮೆರಿಕ ಶುಕ್ರವಾರ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ ಸುಲೈಮನಿಯನ್ನು ಹತ್ಯೆ ಮಾಡಲಾಗಿತ್ತು. ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ಏರ್‍ಪೋರ್ಟಿಗೆ ಇರಾನ್ ಸೇನಾ ಮುಖ್ಯಸ್ಥರಾಗಿದ್ದ ಸುಲೈಮನಿ ಕಾರಿನಲ್ಲಿ ತೆರಳುತ್ತಿದ್ದರು. ಈ ಇಬ್ಬರು ತೆರಳುತ್ತಿದ್ದ ಕಾರನ್ನು ಟಾರ್ಗೆಟ್ ಮಾಡಿದ ಅಮೆರಿಕ ಸೇನೆಗಳು ಡ್ರೋನ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಿ ಏರ್ ಸ್ಟ್ರೈಕ್ ಮಾಡಿತ್ತು. ದಾಳಿಯ ತೀವ್ರತೆಗೆ ಇಬ್ಬರು ತೆರಳುತ್ತಿದ್ದ ಕಾರುಗಳು ಛಿದ್ರ-ಛಿದ್ರವಾಗಿದ್ದವು.

    ಘಟನೆಯ ಕುರಿತು ಫ್ಲೋರಿಡಾದಲ್ಲಿ ಮಾತನಾಡಿದ್ದ ಟ್ರಂಪ್, ಇತ್ತೀಚೆಗೆ ಅಮೆರಿಕವನ್ನು ಟಾರ್ಗೆಟ್ ಮಾಡಿ ಇರಾಕ್ ನಡೆಸಿದ ದಾಳಿಗಳಲ್ಲಿ ದೇಶದ ಸೈನಿಕ ಸಾವನ್ನಪ್ಪಿದ್ದರು. ಅಲ್ಲದೇ ರಾಕೆಟ್ ದಾಳಿಯಲ್ಲಿ ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬಾಗ್ದಾದ್‍ನ ನಮ್ಮ ವಿದೇಶಾಂಗ ಕಚೇರಿಯ ಮೇಲೆ ಸುಲೈಮನಿ ನಿರ್ದೇಶನದಂತೆ ದಾಳಿ ನಡೆಸಲಾಗಿತ್ತು ಎಂದು ಹೇಳಿದ್ದರು.  ಜೊತೆಗೆ ಇರಾನ್ ಸೇನಾ ಮುಖ್ಯಸ್ಥ ಖಾಸೀಂ ಸುಲೈಮನಿಯನ್ನು ಅಮೆರಿಕ ಏರ್ ಸ್ಟ್ರೈಕ್ ನಡೆಸಿ ಕೊಂದಿರುವುದನ್ನು ಸಮರ್ಥಿಸಿಕೊಂಡಿದ್ದರು.

  • ಅಮೆರಿಕದಿಂದ ಇರಾನ್ ಸೇನಾಧಿಕಾರಿ ಹತ್ಯೆ- ಡೆಡ್ಲಿ ಡ್ರೋನ್ ವಿಶೇಷತೆ ಏನು? ಬೆಲೆ ಎಷ್ಟು?- ವಿಡಿಯೋ ನೋಡಿ

    ಅಮೆರಿಕದಿಂದ ಇರಾನ್ ಸೇನಾಧಿಕಾರಿ ಹತ್ಯೆ- ಡೆಡ್ಲಿ ಡ್ರೋನ್ ವಿಶೇಷತೆ ಏನು? ಬೆಲೆ ಎಷ್ಟು?- ವಿಡಿಯೋ ನೋಡಿ

    ಬಾಗ್ದಾದ್: ಅಮೆರಿಕ ಏರ್ ಸ್ಟ್ರೈಕ್ ನಡೆಸಿ ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸೀಂ ಸುಲೈಮನಿಯನ್ನು ಶುಕ್ರವಾರ ಕೊಲೆಗೈದಿತ್ತು. ಈ ದಾಳಿಯ ಬಳಿಕ ಇಡೀ ವಿಶ್ವವೇ ಬೆಚ್ಚಿ ಬಿದ್ದಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ದಾಳಿಗೆ ಅಮೆರಿಕ ಸೇನೆ ಬಳಿಸಿದ ಮಾನವ ರಹಿತ ಡ್ರೋನ್ ವಿಶ್ವದ ಗಮನ ಸೆಳೆದಿದೆ.

    ಅಮೆರಿಕ ಸೇನೆ ತನ್ನ ವಿರೋಧಿಗಳ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ ಎಂಕ್ಯೂ-9 ಹೆಸರಿನ ರೀಪರ್ ಡ್ರೋನ್ ಬಳಕೆ ಮಾಡುತ್ತದೆ. ಇದು ಪ್ರಿಡೇಟರ್ ಡ್ರೋನ್ ಎಂದೇ ಖ್ಯಾತವಾಗಿದ್ದು, ಪ್ರಿಡೇಟರ್ ಎಂದರೇ ಬೇಟೆಗಾರ ಎಂಬರ್ಥವನ್ನು ಹೊಂದಿದೆ. ಎದುರಾಳಿನ ನೆಲದಲ್ಲಿ ಗೂಢಾಚಾರ ಮತ್ತು ನಿಖರ ದಾಳಿ ನಡೆಸುವ 2 ಸಾಮರ್ಥ್ಯಗಳನ್ನು ಹೊಂದಿರುವುದು ಎಂಕ್ಯೂ-9 ಡ್ರೋನ್‍ನ ವಿಶೇಷತೆಯಾಗಿದೆ.

    ಎಂಕ್ಯೂ-9 ರೀಪರ್ ಡ್ರೋನ್ ನಲ್ಲಿ ‘ಎಂ’ ಅಕ್ಷರ ಅಮೆರಿಕ ರಕ್ಷಣಾ ಪಡೆಗಳ ಬಹುಪಾತ್ರವನ್ನು(Multi Role)ಪ್ರತಿನಿಧಿಸಿದರೆ, ‘ಕ್ಯೂ’ ಅಕ್ಷರವೂ ಮಾನವ ರಹಿತ ಹಾಗೂ 9 ಸಂಖ್ಯೆಯೂ ಈ ಮಾದರಿಯ ಡ್ರೋನ್ ವಿಮಾನಗಳ 9ನೇ ಸರಣಿಯನ್ನು ಪ್ರತಿನಿಧಿಸುತ್ತದೆ. ಎಂಕ್ಯೂ-9 ರೀಪರ್ ಡ್ರೋನ್ ಸುಧಾರಿತ ಕ್ಯಾಮೆರಾ ಮತ್ತು ಕ್ಷಿಪಣಿಗಳನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನವನು ಹೊಂದಿರುವ ಡ್ರೋನ್ ನಿರ್ಧಿಷ್ಟ ಗುರಿಯನ್ನು ತಲುಪಲು ವಿಷ್ಯುವಲ್ ಸೆನ್ಸರ್ ಹೊಂದಿದೆ. ದೂರದಲ್ಲಿದ್ದುಕೊಂಡೇ ಇಬ್ಬರ (ಒಬ್ಬರು ಪೈಲಟ್, ಸೆನ್ಸರ್ ಆಪರೇಟರ್) ಮೂಲಕ ಈ ಡ್ರೋನ್ ನಿಯಂತ್ರಿಸಬಹುದಾಗಿದೆ. ಇದನ್ನು ಓದಿ: ದೆಹಲಿ ದಾಳಿಗೆ ನೆರವು ನೀಡಿದ್ದ ಸುಲೈಮನಿಯನ್ನು ಹತ್ಯೆ ಮಾಡಿದ್ದೇವೆ – ಡೊನಾಲ್ಡ್ ಟ್ರಂಪ್

    ಡ್ರೋನ್ ವಿಶೇಷತೆಗಳು: ಎಂಕ್ಯೂ-9 ರೀಪರ್ ಡ್ರೋನ್ 2,200 ಲೀಟರ್  ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಟೇಕ್ ಆಫ್ ವೇಳೆ ಗರಿಷ್ಠ 4,760 ಕೆಜಿ ತೂಕ ಆಗಿದ್ದು, 1,701 ಕೆಜಿ ತೂಕ ಶಸ್ತ್ರಾಸ್ತ್ರಗಳನ್ನು ಒತ್ತು ಸಾಗುವ ಸಾಮರ್ಥ್ಯವನ್ನು ಹೊಂದಿದೆ. ಭೂಮಿಯಿಂದ 50 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, 1,150 ಮೈಲಿ (1,850 ಕಿ.ಮೀ) ದೂರದ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಡ್ರೋನ್ 66 ಅಡಿ ಅಗಲ, 36 ಅಡಿ ಉದ್ದ ಹಾಗೂ 12.5 ಅಡಿ ಎತ್ತರವನ್ನು ಹೊಂದಿದೆ.

    ಜನರಲ್ ಆಟೋವಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ ಐಎನ್‍ಸಿ ಸಂಸ್ಥೆಯೂ ಎಂಕ್ಯೂ-9 ರೀಪರ್ ಡ್ರೋನ್‍ಗಳನ್ನು ಉತ್ಪಾದಿಸುತ್ತಿದೆ. ಒಂದು ಡ್ರೋನ್ ಯ್ಯೂನಿಟ್‍ಗೆ 2016 ರಂತೆ 64.2 ಮಿಲಿಯನ್ ಡಾಲರ್(ಅಂದಾಜು 460.70 ಕೋಟಿ) ವೆಚ್ಚವಾಗಲಿದ್ದು, ಒಂದು ಯ್ಯೂನಿಟ್ ಏರ್ ಕ್ರಾಫ್ಟ್ ಹಾಗೂ ಸೆನ್ಸರ್ ಗಳನ್ನು ಹೊಂದಿರುತ್ತದೆ. ಇದನ್ನು ಓದಿ: ಅಮೆರಿಕದಿಂದ ಏರ್ ಸ್ಟ್ರೈಕ್ – ಕಚ್ಚಾ ತೈಲ ಬೆಲೆ ಏರಿಕೆ

    ಎಂಕ್ಯೂ-9 ರೀಪರ್ ಡ್ರೋನ್ ಮೂಲಕ ಲೇಸರ್ ಗೈಡೆಡ್ ಕ್ಷಿಪಣಿಗಳನ್ನು ಉಡಾಯಿಸಬಹುದಾಗಿದೆ. ಈ ಕ್ಷಿಪಣಿಗಳು ನಿಖರ ಹಾಗೂ ಕಡಿಮೆ ಹಾನಿಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಗಂಟೆಗೆ 400 ಕಿಮೀ ವೇಗದಲ್ಲಿ ಹಾರುವ ಹಾಗೂ ಸತತ 27 ಗಂಟೆ ಹಾರಬಲ್ಲದು. ಅಮೆರಿಕ ನೌಕಾ ಪಡೆಯಲ್ಲಿ ಎಂಕ್ಯೂ-9 ರೀಪರ್ ಡ್ರೋನ್ ಗಳನ್ನು ಬಳಕೆ ಮಾಡಲಾಗುತ್ತಿದೆ. ವಿಶ್ವದ ಅತಿಹೆಚ್ಚು ಶಕ್ತಿಶಾಲಿ ಡ್ರೋನ್‍ಗಳಲ್ಲಿ ಎಂಕ್ಯೂ-9 ಸ್ಥಾನ ಪಡೆದಿದೆ.

  • ದೆಹಲಿ ದಾಳಿಗೆ ನೆರವು ನೀಡಿದ್ದ ಸುಲೈಮನಿಯನ್ನು ಹತ್ಯೆ ಮಾಡಿದ್ದೇವೆ – ಡೊನಾಲ್ಡ್ ಟ್ರಂಪ್

    ದೆಹಲಿ ದಾಳಿಗೆ ನೆರವು ನೀಡಿದ್ದ ಸುಲೈಮನಿಯನ್ನು ಹತ್ಯೆ ಮಾಡಿದ್ದೇವೆ – ಡೊನಾಲ್ಡ್ ಟ್ರಂಪ್

    – ಲಂಡನ್, ದೆಹಲಿಯಲ್ಲಿ ಸುಲೈಮನಿಯಿಂದ ದಾಳಿ
    – ಯುದ್ಧ ನಿಲ್ಲಿಸಲು ಅಮೆರಿಕದಿಂದ ಏರ್ ಸ್ಟ್ರೈಕ್
    – ಕೃತ್ಯವನ್ನು ಸಮರ್ಥಿಸಿಕೊಂಡ ಡೊನಾಲ್ಡ್ ಟ್ರಂಪ್

    ಲಾಸ್ ಏಂಜಲೀಸ್: ಇರಾನ್ ಸೇನಾ ಮುಖ್ಯಸ್ಥ ಖಾಸೀಂ ಸುಲೈಮನಿಯನ್ನು ಅಮೆರಿಕ ಏರ್ ಸ್ಟ್ರೈಕ್ ನಡೆಸಿ ಕೊಂದಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದು, ಹತ್ಯೆಯಾದ ಖಾಸೀಂ ಸುಲೈಮನಿ, ಲಂಡನ್ ಸೇರಿದಂತೆ ಭಾರತದ ನವದೆಹಲಿಯಲ್ಲಿ ಭಯೋತ್ಪಾದನ ದಾಳಿ ನಡೆಸಲು ನೆರವು ನೀಡಿದ್ದ ಎಂದು ಹೇಳಿದ್ದಾರೆ.

    ಅಮೆರಿಕ ಶುಕ್ರವಾರ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ ಸುಲೈಮನಿಯನ್ನು ಹತ್ಯೆ ಮಾಡಲಾಗಿತ್ತು. ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ಏರ್‍ಪೋರ್ಟಿಗೆ ಇರಾನ್ ಸೇನಾ ಮುಖ್ಯಸ್ಥರಾಗಿದ್ದ ಸುಲೈಮನಿ ಕಾರಿನಲ್ಲಿ ತೆರಳುತ್ತಿದ್ದರು. ಈ ಇಬ್ಬರು ತೆರಳುತ್ತಿದ್ದ ಕಾರನ್ನು ಟಾರ್ಗೆಟ್ ಮಾಡಿದ ಅಮೆರಿಕ ಸೇನೆಗಳು ಡ್ರೋನ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಿ ಏರ್ ಸ್ಟ್ರೈಕ್ ಮಾಡಿತ್ತು. ದಾಳಿಯ ತೀವ್ರತೆಗೆ ಇಬ್ಬರು ತೆರಳುತ್ತಿದ್ದ ಕಾರುಗಳು ಛಿದ್ರ-ಛಿದ್ರವಾಗಿದ್ದವು.

    ಘಟನೆಯ ಕುರಿತು ಫ್ಲೋರಿಡಾದಲ್ಲಿ ಮಾತನಾಡಿದ್ದ ಟ್ರಂಪ್, ಇತ್ತೀಚೆಗೆ ಅಮೆರಿಕವನ್ನು ಟಾರ್ಗೆಟ್ ಮಾಡಿ ಇರಾಕ್ ನಡೆಸಿದ ದಾಳಿಗಳಲ್ಲಿ ದೇಶದ ಸೈನಿಕ ಸಾವನ್ನಪ್ಪಿದ್ದರು. ಅಲ್ಲದೇ ರಾಕೆಟ್ ದಾಳಿಯಲ್ಲಿ ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬಾಗ್ದಾದ್‍ನ ನಮ್ಮ ವಿದೇಶಾಂಗ ಕಚೇರಿಯ ಮೇಲೆ ಸುಲೈಮನಿ ನಿರ್ದೇಶನದಂತೆ ದಾಳಿ ನಡೆಸಲಾಗಿತ್ತು ಎಂದು ಹೇಳಿದ್ದಾರೆ.

    ಸುಲೈಮನಿನ ಕ್ರೂರ ಮನಸ್ಸಿನ ಕಾರಣ ಅಮಾಯಕ ಜನರು ಸಾವನ್ನಪ್ಪಿದ್ದಾರೆ. ಲಂಡನ್ ಸೇರಿದಂತೆ ಭಾರತದ ದೆಹಲಿವರೆಗೂ ಭಯೋತ್ಪಾದಕ ದಾಳಿಗಳಿಗೆ ಸುಲೈಮನಿ ನೆರವು ನೀಡಿದ್ದಾನೆ. ಇಂದು ನಾವು ಸುಲೈಮನಿ ದೌರ್ಜನ್ಯಗಳಿಂದ ಉಂಟಾದ ಸಂತ್ರಸ್ತರನ್ನು ಗೌರವದಿಂದ ನೆನಪಿಸಿಕೊಳ್ಳಬೇಕಿದೆ. ಸುಲೈಮನಿ ಭಯೋತ್ಪಾದನೆಯ ಆಳ್ವಿಕೆ ಅಂತ್ಯವಾಗಿದೆ ಎಂದು ತಿಳಿಸಿದ್ದಾರೆ.

    ಕಳೆದ 20 ವರ್ಷದಗಳಿಂದ ಸುಲೇಮನಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಭಯೋತ್ಪಾದನ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಎಂದು ಟ್ರಂಪ್ ಆರೋಪ ಮಾಡಿದ್ದು, ಅಮೆರಿಕ ಸೇನಾಪಡೆ ಇಂತಹ ದಾಳಿ ಬಹಳ ಹಿಂದೆಯೇ ನಡೆಸಬೇಕಿತ್ತು. ಇದರಿಂದ ಸಾವಿರಾರು ಜನರ ಜೀವವನ್ನು ರಕ್ಷಿಸಬಹುದಿತ್ತು. ಇತ್ತೀಚೆಗಷ್ಟೇ ಸುಲೇಮನಿ ಇರಾನ್ ನಲ್ಲಿ ಕ್ರೂರ ಪ್ರತಿಭಟನೆಗಳನ್ನು ನಡೆಸಲು ಕಾರಣನಾಗಿದ್ದ. ಈ ಪ್ರತಿಭಟನೆಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿಯನ್ನು ಕ್ರೂರವಾಗಿ ಹಿಂಸಿಸಿ ಕೊಲೆ ಮಾಡಿದ್ದಾನೆ. ಆದರೆ ಸುಲೇಮನಿ ಹತ್ಯೆಯೂ ಯುದ್ಧಕ್ಕೆ ದಾರಿ ಮಾಡಿಕೊಡುವುದಿಲ್ಲ. ಯುದ್ಧವನ್ನು ನಿಲ್ಲಿಸಲು ನಾವು ದಾಳಿಯನ್ನು ನಡೆಸಿದ್ದೇವೆ. ಇರಾನಿನ ಜನರ ಬಗ್ಗೆ ನನಗೆ ಅಪಾರ ಗೌರವಿದ್ದು, ಅವರು ವೈಭವದ ಪರಂಪರೆ ಹಾಗೂ ಸಾಮಥ್ರ್ಯವನ್ನು ಹೊಂದಿದ್ದಾರೆ. ಅಮೆರಿಕ ಅಲ್ಲಿನ ಆಡಳಿತ ಬದಲಾವಣೆಯನ್ನು ಬಯಸುವುದಿಲ್ಲ ಎಂದು ದಾಳಿಗೆ ತಮ್ಮ ಸಮರ್ಥನೆಗಳನ್ನು ಟ್ರಂಪ್ ಬಲವಾಗಿ ಮುಂದಿಟ್ಟಿದ್ದಾರೆ.

    ಅಮೆರಿಕದ ಈ ದಾಳಿಯಿಂದ ವಿಶ್ವದಲ್ಲಿ 3ನೇ ಮಹಾಸಮರದ ಕಾರ್ಮೋಡ ಆವರಿಸಿದೆ. ಅಮೆರಿಕದ ದಾಳಿಯನ್ನು ಇರಾನ್ ಉಗ್ರವಾಗಿ ಖಂಡಿಸಿ, ನಿಮ್ಮ ದುಸ್ಸಾಹಸಗಳಿಗೆ ತಕ್ಕ ಬೆಲೆ ತೆರಲಿದ್ದೀರಿ. ಕಟು ಪ್ರತೀಕಾರ ನಿಮಗೆ ಕಾದಿದೆ ಎಂದು ಎಚ್ಚರಿಕೆಯನ್ನು ರವಾನಿಸಿದೆ. ಇದರ ಬೆನ್ನಲ್ಲೇ ಇರಾನ್, ಇರಾಕ್‍ನಲ್ಲಿ ಪ್ರಕ್ಷುಬ್ಧ ವಾತಾವರಣದಿಂದ ಅಮೆರಿಕ ತನ್ನ ಪ್ರಜೆಗಳಿಗೆ ವಾಪಸ್ ಬರುವಂತೆ ಸೂಚನೆ ನೀಡಿದೆ. ಇರಾಕ್‍ನಲ್ಲಿರುವ ತನ್ನ ಸೇನಾಪಡೆಗಳಿಗೂ ಎಚ್ಚರಿಕೆ ವಹಿಸಲು ಸೂಚಿಸಿದೆ.

    ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ವಿಶ್ವ ರಾಷ್ಟ್ರಗಳ ಮೇಲೆ ಬೀರುವ ಸಾಧ್ಯತೆ ಹೆಚ್ಚಿದೆ. ಇರಾನ್-ಇರಾಕ್‍ನಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಭಾರತದಲ್ಲೂ ತೈಲ ದರ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಇದರ ಪರಿಣಾಮ ಎಂಬಾಂತೆ ನಿನ್ನೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಒಂದೇ ದಿನ 760 ರೂ. ಏರಿಕೆಯಾಗಿತ್ತು. ಪರಿಣಾಮ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 41,130 ರೂ. ಗಾಡಿ ದಾಟ್ಟಿತ್ತು.

    2012ರ ದೆಹಲಿಯಲ್ಲಿ ದಾಳಿ:
    ನವದೆಹಲಿಯ ಪ್ರಧಾನಮಂತ್ರಿಗಳ ನಿವಾಸ ಬಳಿ ಕಾರಿನಲ್ಲಿ ಸ್ಫೋಟ ನಡೆಸಲಾಗಿತ್ತು. ಈ ಕಾರು ಇಸ್ರೇಲ್ ರಾಯಭಾರಿ ಕಚೇರಿಗೆ ಸೇರಿದಾಗಿತ್ತು. ಘಟನೆಯಲ್ಲಿ ಇಸ್ರೇಲ್‍ನ ರಾಯಭಾರಿ ಕಚೇರಿಯ ಅಧಿಕಾರಿಯ ಪತ್ನಿ ಸೇರಿದಂತೆ ಇಬ್ಬರು ಭಾರತೀಯರು ಗಾಯಗೊಂಡಿದ್ದರು. ಇಸ್ರೇಲ್ ಅಧಿಕಾರಿಗಳಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಮೇಟಾರು ಸೈಕಲ್‍ನಲ್ಲಿ ಸ್ಫೋಟಕ ಇರಿಸಿ ದಾಳಿ ನಡೆಸಲಾಗಿತ್ತು. ಈ ವೇಳೆ ಭಾರತದ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದ ಅಮೆರಿಕ ದಾಳಿಯ ಹಿಂದೆ ಇರಾನ್ ಪಾತ್ರವಿರುವ ಬಗ್ಗೆ ತಿಳಿಸಿತ್ತು. ದೆಹಲಿಯ ದಾಳಿಯ ದಿನವೇ ಜಾರ್ಜಿಯಾದಲ್ಲಿ ನಡೆದ ದಾಳಿಯಲ್ಲಿ ಇಸ್ರೇಲ್ ಅಧಿಕಾರಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಮರುದಿನ ಥೈಲ್ಯಾಂಡ್‍ನಲ್ಲಿ ನಡೆದ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದರು. ಈ ವೇಳೆ ಪೊಲೀಸರು ಇಬ್ಬರು ಇರಾನ್ ಪ್ರಜೆಗಳನ್ನು ಬಂಧಿಸಿತ್ತು. 2013ರಲ್ಲಿ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿತ್ತು.

    ಇಸ್ರೇಲ್ ಉಪ ಪ್ರಧಾನಿ ಅಂದು ಸುಲೈಮನಿ ದೆಹಲಿಯ ದಾಳಿ ಹಿಂದಿನ ಪ್ರಮುಖ ವ್ಯಕ್ತಿ ಎಂದು ತಿಳಿಸಿದ್ದರು. ಅಲ್ಲದೇ ಥೈಲ್ಯಾಂಡ್, ಜಾರ್ಜಿಯಾ ಹಾಗೂ ದೆಹಲಿಯಲ್ಲಿ ನಡೆದ ಸ್ಫೋಟಕಗಳು ಒಂದೇ ಮಾದರಿಯಾದ್ದು ಎಂದು ತನಿಖೆಯ ವೇಳೆ ಬಯಲಾಗಿತ್ತು. ಅಂದು ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿದ್ದ ಯದ್ಧದ ಹಿನ್ನೆಲೆಯಲ್ಲಿ ಸುಲೈಮನ್ ದೆಹಲಿಯಲ್ಲಿ ದಾಳಿ ನಡೆಸುವ ಸಂಚು ರೂಪಿಸಿದ್ದ. ಇರಾನ್‍ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕುಡ್ಸ್ ಫೋರ್ಸ್ ಮೇಲೆ ಸುಲೈಮನ್ ನಿಯಂತ್ರಣ ಹೊಂದಿದ್ದ. ಈ ಪಡೆ ಇರಾನ್ ಸೇರಿದಂತೆ ವಿಶ್ವದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದನ ದಾಳಿ ನಡೆಸುವುದು ಸೇರಿದಂತೆ, ಇತರೆ ಸಂಘಟನೆಗಳಿಗೆ ನೆರವು ನೀಡುತ್ತಿತ್ತು. ಇಸ್ರೇಲ್ ಈ ಸಂಘಟನೆಯ ಪ್ರಮುಖ ಟಾರ್ಗೆಟ್ ಆಗಿತ್ತು.

  • ಅಮೆರಿಕದಿಂದ ಏರ್ ಸ್ಟ್ರೈಕ್ – ಇರಾನ್ ಸೇನಾಧಿಕಾರಿ ಹತ್ಯೆ, ಕಚ್ಚಾ ತೈಲ ಬೆಲೆ ಏರಿಕೆ

    ಅಮೆರಿಕದಿಂದ ಏರ್ ಸ್ಟ್ರೈಕ್ – ಇರಾನ್ ಸೇನಾಧಿಕಾರಿ ಹತ್ಯೆ, ಕಚ್ಚಾ ತೈಲ ಬೆಲೆ ಏರಿಕೆ

    ಬಾಗ್ದಾದ್: ಇರಾನ್ ಮೇಲೆ ಅಮೆರಿಕ ಶುಕ್ರವಾರ ದಾಳಿ ನಡೆಸಿ ಇರಾನಿನ ಉನ್ನತ ಸೇನಾಧಿಕಾರಿ ಮತ್ತು ಮಿಲಿಟರಿ ಪಡೆಯ ಉಪ ಮುಖ್ಯಸ್ಥನನ್ನು ಹತ್ಯೆ ಮಾಡಿದೆ.

    ಇಂದು ನಸುಕಿನ ಜಾವ ಅಮೆರಿಕ ಸೇನೆ ಡ್ರೋನ್ ದಾಳಿ ನಡೆಸಿ ಬಾಗ್ದಾದ್ ವಿಮಾನ ನಿಲ್ದಾಣ ರಸ್ತೆಯಲ್ಲಿ ಇರಾನಿನ ಉನ್ನತ ಸೇನಾಧಿಕಾರಿ ಜನರಲ್ ಕಸ್ಸೆಮ್ ಸುಲೈಮಾನಿ ಮತ್ತು ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಅಬು ಮಹ್ದಿ ಅಲ್-ಮುಹಂಡೇಸ್ ರನ್ನು ಕೊಂದು ಹಾಕಿದೆ.

    ಇರಾನಿನ ಉನ್ನತ ಸೇನಾಧಿಕಾರಿ ಮತ್ತು ಇರಾನ್ ಮಿಲಿಟರಿ ಪಡೆಯ ಉಪ ಮುಖ್ಯಸ್ಥನನ್ನು ಹತ್ಯೆ ಮಾಡಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ರಾಷ್ಟ್ರಧ್ವಜ ಫೋಟೋವನ್ನು ಅಪ್ಲೋಡ್ ಮಾಡಿ ಟ್ವೀಟ್ ಮಾಡಿದ್ದಾರೆ.

    ದಾಳಿ ನಡೆಸಿದ್ದು ಯಾಕೆ?
    ಅಮೆರಿಕ ಸೇನೆ ನಡೆಸಿದ್ದ ವಾಯುದಾಳಿಯಲ್ಲಿ ಇರಾನ್ ಸೇನೆಯಿಂದ ತರಬೇತಿ ಪಡೆದಿದ್ದ ಪಾಪ್ಯುಲರ್ ಮೊಬಿಲೈಜೇಷನ್ ಫೋರ್ಸಸ್ (ಪಿಎಂಎಫ್) 25 ಮಂದಿ ಹತ್ಯೆಯಾಗಿದ್ದರು. ಈ ಕಾರಣಕ್ಕೆ ಮಂಗಳವಾರ ಬಾಗ್ದಾದ್‍ನಲ್ಲಿ ಅಮೆರಿಕ ರಾಯಭಾರ ಕಚೇರಿಯ ಮೇಲೆ ದಾಳಿ ನಡೆದು ಧ್ವಂಸಗೊಳಿಸುವ ಪ್ರಯತ್ನ ನಡೆದಿತ್ತು. ಈ ದಾಳಿಯನ್ನು ಅಮೆರಿಕ ಖಂಡಿಸಿತ್ತು. ಅಲ್ಲದೇ ಇದಕ್ಕೆ ಪ್ರತೀಕಾರ ತೀರಿಸುವುದಾಗಿ ಹೇಳಿತ್ತು.

    ಈ ಸಂಬಂಧ ಟ್ವಿಟ್ಟರಿನಲ್ಲಿ ಶ್ವೇತಭವನ ಪ್ರತಿಕ್ರಿಯಿಸಿ, ಜನರಲ್ ಕಸ್ಸೆಮ್ ಸುಲೈಮಾನಿ ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಅಮೆರಿಕ ಪ್ರಜೆಗಳ ರಕ್ಷಣೆಗಾಗಿ ಡೊನಾಲ್ಡ್ ಟ್ರಂಪ್ ಅವರ ಆದೇಶದ ಅನ್ವಯ ಈ ದಾಳಿ ನಡೆಸಲಾಗಿದೆ ಎಂದು ಟ್ವೀಟ್ ಮಾಡಿದೆ.

    ದಾಳಿಯನ್ನು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಖಂಡಿಸಿದ್ದು, ದೇಶಕ್ಕಾಗಿ ಕಸ್ಸೆಮ್ ಸುಲೈಮಾನಿ ಪ್ರಾಣವನ್ನು ತೆತ್ತಿದ್ದಾರೆ. ಈ ತ್ಯಾಗವನ್ನು ನಾವು ಮರೆಯುವುದಿಲ್ಲ. ಶೀಘ್ರವೇ ಪ್ರತೀಕಾರವನ್ನು ತೀರಿಸಲಾಗುವುದು ಎಂದು ಹೇಳಿದ್ದಾರೆ. ಹಸನ್ ರೂಹಾನಿಯ ನಂತರ ಇರಾನಿನ ನಂಬರ್ 2 ವ್ಯಕ್ತಿ ಜನರಲ್ ಕಸ್ಸೆಮ್ ಸುಲೈಮಾನಿ ಆಗಿದ್ದರು.

    ತೈಲ ಬೆಲೆ ಏರಿಕೆ:
    ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.4.39 ರಷ್ಟು ಏರಿಕೆಯಾಗಿದ್ದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 69.16 ಡಾಲರ್(ಅಂದಾಜು 4,900 ರೂ.) ತಲುಪಿದೆ. ಈ ಹಿಂದೆ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 66.25 ಡಾಲರ್(ಅಂದಾಜು 4,700 ರೂ.) ಇತ್ತು.

  • ಇರಾಕ್ ಬಂಡೆಯ ಮೇಲೆ ರಾಮನ ಚಿತ್ರ ಪತ್ತೆ

    ಇರಾಕ್ ಬಂಡೆಯ ಮೇಲೆ ರಾಮನ ಚಿತ್ರ ಪತ್ತೆ

    ಲಖನೌ: ಭಾರತೀಯ ನಿಯೋಗವೊಂದು ಜೂನ್‍ನಲ್ಲಿ ಇರಾಕ್ ಯಾತ್ರೆ ಕೈಗೊಂಡಿದ್ದ ವೇಳೆ ಕ್ರಿಸ್ತಪೂರ್ವ 2000ನೇ ಇಸವಿಯ ಕಾಲದ್ದು ಎನ್ನಲಾದ ಪ್ರಾಚೀನ ಬಂಡೆಯ ಮೇಲೆ ಶ್ರೀರಾಮನ ಚಿತ್ರ ಕಾಣಿಸಿಕೊಂಡಿವೆ ಎಂದು ಅಯೋಧ್ಯಾ ಶೋಧ ಸಂಸ್ಥಾನ ಹೇಳಿದೆ.

    ಇರಾಕ್‍ನ ಹೊರೇನ್ ಶೇಖಾನ್ ಪ್ರದೇಶಕ್ಕೆ ಹೋಗುವ ಕಿರುದಾದ ದಾರಿಯ ಎದುರಿನ ಮಣ್ಣಿನ ಗೋಡೆಯೊಂದರಲ್ಲಿ (ದರ್ಬಂದ್-ಇ-ಬೆಲುಲಾ) ಈ ಚಿತ್ರ ಕಂಡುಬಂದಿದೆ. ಈ ಚಿತ್ರದಲ್ಲಿ ಎದೆಯ ಮೇಲೆ ಯಾವುದೇ ಅಲಂಕಾರವಿಲ್ಲದ ರಾಜನೊಬ್ಬ ಧನುಸ್ಸನ್ನು ಹಿಡಿದು ಬಾಣ ಹೂಡುತ್ತಿರುವ ಚಿತ್ರಣವಿದೆ. ಅಲ್ಲದೇ ರಾಜನ ಸೊಂಟಕ್ಕೆ ಖಡ್ಗವನ್ನು ಸಿಕ್ಕಿಸಿಕೊಂಡಂತೆ ಇದೆ. ರಾಜನ ಎದುರಿಗೆ ಪಾದದ ಬಳಿ ಕೈಮುಗಿದು ಕುಳಿತ ಸೇವಕನ ಚಿತ್ರವಿದ್ದು, ಅದು ಹನುಮಂತನದ್ದಾಗಿರಬಹುದು ಎಂದು ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕರು ಹೇಳಿದ್ದಾರೆ.

    ಇರಾಕ್‍ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ನೇತೃತ್ವದ ನಿಯೋಗವು ಅಯೋಧ್ಯಾ ಶೋಧ ಸಂಸ್ಥಾನದ ಕೋರಿಕೆ ಮೇರೆಗೆ ಈ ಪ್ರದೇಶಕ್ಕೆ ಯಾತ್ರೆ ಕೈಗೊಂಡಿತ್ತು. ಅಯೋಧ್ಯಾ ಶೋಧ ಸಂಸ್ಥಾನವು ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಅಧ್ಯಯನ ಸಂಸ್ಥೆಯಾಗಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿ ಚಂದ್ರಮೌಳಿ ಕರ್ಣ, ಸುಲೈಮಾನಿಯಾ ವಿಶ್ವವಿದ್ಯಾಲಯದ ಇತಿಹಾಸ ತಜ್ಞರು ಮತ್ತು ಕುರ್ದಿಸ್ಥಾನದ ಇರಾಕಿ ಗವರ್ನರ್ ಕೂಡ ಈ ಶೋಧ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

    ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕ ಯೋಗೇಂದ್ರ ಪ್ರತಾಪ್ ಸಿಂಗ್ ಹೇಳುವ ಪ್ರಕಾರ, ನಿಯೋಗ ಈಗ ಸಂಗ್ರಹಿಸಿರುವ ಭೌಗೋಳಿಕ ದಾಖಲೆಗಳ ವಿಸ್ತೃತ ಅಧ್ಯಯನದಿಂದ ಭಾರತೀಯ ಮತ್ತು ಮೆಸೊಪೊಟೇಮಿಯಾ ಸಂಸ್ಕೃತಿಗಳ ನಡುವಣ ಕೊಂಡಿಯನ್ನು ಪತ್ತೆ ಮಾಡಬಹುದು. ಮತ್ತು ಮಣ್ಣಿನ ಕೆತ್ತನೆಯಲ್ಲಿ ಕಂಡು ಬರುವ ದೊರೆ ಮತ್ತು ಸೇವಕನ ಚಿತ್ರಣವು ನಮ್ಮಲ್ಲಿ ಹಲವರಿಗೆ ಭಗವಾನ್ ಶ್ರೀರಾಮ ಮತ್ತು ಹನುಮಂತನನ್ನು ನೆನಪಿಗೆ ತಂದಿತು ಎಂದಿದ್ದಾರೆ.

    ಇರಾಕಿನ ವಿದ್ವಾಂಸರು, ಮಣ್ಣಿನ ಗೋಡೆಯ ಚಿತ್ರಣವು ಪರ್ವತ ಪ್ರದೇಶದ ಬುಡಕಟ್ಟು ನಾಯಕ ತಾರ್ದುನ್ನಿಯನ್ನು ಹೋಲುತ್ತದೆ. ಹಿಂದೆಯೂ ಇರಾಕ್‍ನ ಕೆಲವೆಡೆ ಈ ರೀತಿಯ ಮಣ್ಣಿನ ಭಿತ್ತಿ ಕೆತ್ತನೆಗಳಲ್ಲಿ ರಾಜ ಹಾಗೂ ಅವನ ಮುಂದೆ ಮಂಡಿಯೂರಿ ಕುಳಿತ ಸೇವಕನ ಚಿತ್ರಗಳು ಕಂಡು ಬಂದಿವೆ. ಈ ಸೇವಕನನ್ನು ರಾಜನು ಬಂಧಿಸಿ ಕರೆತಂದ ಕೈದಿಯಾಗಿರಬಹುದು ಎಂದು ಹೇಳಿದ್ದಾರೆ.

    ಇರಾಕಿನ ಪ್ರಾಚೀನ ವಸ್ತು ಸಂಶೋಧಕರು ಮತ್ತು ಇತಿಹಾಸಕಾರರ ಪ್ರಕಾರ ಈ ಚಿತ್ರಗಳಿಗೂ ಭಗವಾನ್ ರಾಮನಿಗೂ ಯಾವುದೇ ಸಂಬಂಧವಿಲ್ಲ. ಆದರೆ ಪ್ರತಾಪ್ ಸಿಂಗ್ ಅವರು ಎರಡೂ ನಾಗರಿಕತೆಗಳ ನಡುವಣ ಸಂಬಂಧದ ಕೊಂಡಿಯನ್ನು ಶೋಧಿಸಲು ಇರಾಕ್ ಸರ್ಕಾರದ ಅನುಮತಿ ಅಗತ್ಯವಿದೆ. ಅನುಮತಿಗಾಗಿ ನಾವು ಸರ್ಕಾರಕ್ಕೆ ಕೋರಿಕೆ ಮಾಡಿದ್ದೇವೆ ಎಂದು ತಿಳಿಸಿದರು.

    ಜಗತ್ತಿನ ಹಲವು ಭಾಗಗಳಲ್ಲಿ ಶ್ರೀರಾಮನ ಹೆಜ್ಜೆ ಗುರುತುಗಳ ದಾಖಲೆಗಳು ಲಭ್ಯವಾಗಿವೆ. ಹೀಗೆ ಜಗತ್ತಿನ ನಾನಾ ಭಾಗಗಳಲ್ಲಿ ಪತ್ತೆಯಾದ ದಾಖಲೆಗಳ ಪ್ರತಿಕೃತಿಗಳನ್ನು ಅಯೋಧ್ಯೆಯಲ್ಲಿ ಒಂದೇ ಕಡೆ ಸಂಗ್ರಹಿಸಿ ಇಡುವ ಉದ್ದೇಶವಿದೆ. ಸಿಂಧೂ ನಾಗರಿಕತೆ ಮತ್ತು ಮೆಸೊಪೊಟೇಮಿಯಾ ನಾಗರಿಕತೆಗಳ ನಡುವೆ ಸಂಬಂಧ ಕಲ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮೊದಲ ಅಧಿಕೃತ ಪ್ರಯತ್ನ ಇದಾಗಿದೆ ಎಂದು ಸಿಂಗ್ ತಿಳಿಸಿದರು.

  • ಉಗ್ರರ ಸಂಘಟನೆಗಳನ್ನ ಹತ್ತಿಕ್ಕಿ, ಇಲ್ಲಂದ್ರೆ ನಾವೇ ನುಗ್ಗಿ ಹೊಡೆಯುತ್ತೇವೆ – ಭಾರತದ ಬೆನ್ನಲ್ಲೇ ಪಾಕ್‍ಗೆ ಇರಾನ್ ಎಚ್ಚರಿಕೆ

    ಉಗ್ರರ ಸಂಘಟನೆಗಳನ್ನ ಹತ್ತಿಕ್ಕಿ, ಇಲ್ಲಂದ್ರೆ ನಾವೇ ನುಗ್ಗಿ ಹೊಡೆಯುತ್ತೇವೆ – ಭಾರತದ ಬೆನ್ನಲ್ಲೇ ಪಾಕ್‍ಗೆ ಇರಾನ್ ಎಚ್ಚರಿಕೆ

    ನವದೆಹಲಿ: ಉಗ್ರರ ಸ್ವರ್ಗ ಪಾಕಿಸ್ತಾನಕ್ಕೆ ಭಾರತದ ಎಚ್ಚರಿಕೆ ನೀಡಿದ ಬೆನ್ನಲ್ಲೇ ನೆರೆಯ ಇರಾನ್ ಸಹ ಎಚ್ಚರಿಕೆ ನೀಡಿದೆ. ಉಗ್ರಗಾಮಿ ಸಂಘಟನೆಗಳನ್ನು ಹತ್ತಿಕ್ಕದ್ದಿದ್ದರೆ ಪಾಕ್‍ನೊಳಗೆ ನುಗ್ಗಿ ಹೊಡೆಯುತ್ತೇವೆ ಎಂದು ಇರಾನ್ ಜನರಲ್ ಖಾಸಿಂ ಸೊಲೈಮಾನಿ ಹೇಳಿದ್ದಾರೆ.

    ಭಾರತ ಪಾಕಿಸ್ತಾನದ ಭಯೋತ್ಪಾದನ ಕೇಂದ್ರಗಳ ಮೇಲೆ ಏರ್ ಸ್ಟ್ರೈಕ್ ಮಾಡಿ ಎಚ್ಚರಿಕೆ ರವಾನಿಸಿತ್ತು. ಇದರ ನಡುವೆಯೇ ಹಲವು ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದವು. ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಈ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿ ಕ್ರಮಕೈಗೊಳ್ಳುವ ಬಗ್ಗೆಯೂ ತಿಳಿಸಿದ್ದವು.

    ಸದ್ಯ ಇರಾನ್ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೇ ಹೋಗಿದ್ದು, ನೆರೆಯ ರಾಷ್ಟ್ರಗಳ ಜೊತೆ ನಿಮ್ಮ ಬಾಂಧವ್ಯ ಹೇಗಿದೆ ಎಂಬುವುದು ಗೊತ್ತಿದೆ. ಎಲ್ಲಿ ನೋಡಿದರೂ ಅಶಾಂತಿ ಸೃಷ್ಟಿಸುವುದೇ ನಿಮ್ಮ ಕಾಯಕವಾಗಿದೆ ಎಂದು ವಾಗ್ದಾಳಿ ನಡೆಸಿದ್ದು, ಪಾಕ್ ಜೊತೆ ತಾನು ಹೊಂದಿರುವ ಗಡಿ ಪ್ರದೇಶದಲ್ಲಿ ಬೃಹತ್ ಗೋಡೆ ನಿರ್ಮಿಸುವ ಇರಾನ್ ಸಂಸತ್‍ನಲ್ಲೂ ಪ್ರಸ್ತಾಪವಾಗಿದೆ.

    ಪಾಕ್ ಬೆಂಬಲಿತ ಉಗ್ರ ಸಂಘಟನೆಗಳು ಇರಾನ್‍ನಲ್ಲೂ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದು, ಒಂದೊಮ್ಮೆ ನೀವು ಕ್ರಮಕೈಗೊಳ್ಳಲಿದ್ದಾರೆ ನಾವೇ ಉಗ್ರರ ನೆಲೆಗಳನ್ನು ನಾಶ ಪಡಿಸುತ್ತೇವೆ. ನಮ್ಮ ನಿರ್ಣಯಗಳನ್ನು ಪರೀಕ್ಷೆ ಮಾಡಲು ಮುಂದಾಗ ಬೇಡಿ. ನಿಮ್ಮ ಉಪಟಳದಿಂದ ತೊಂದರೆಗೆ ಒಳಗಾದದ ಒಂದೇ ಒಂದು ನೆರೆ ದೇಶವೂ ಇಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದೆ.

    ಇತ್ತ ಅಫ್ಘಾನಿಸ್ತಾನ ಕೂಡ ಪಾಕಿಸ್ತಾನದ ಮೇಲೆ ಕಿಡಿಕಾರಿದ್ದು, ನಮ್ಮ ದೇಶವನ್ನು ನಾಶ ಮಾಡಲೇ ಬೇಕು ಎಂದು ಉಗ್ರ ಗುಂಪುಗಳನ್ನು ಪಾಕ್ ಬೆಳೆಸುತ್ತಿದೆ. ಬಾಲಾಕೋಟ್ ಮೇಲೆ ಭಾರತ ಮತ್ತಷ್ಟು ದಾಳಿ ನಡೆಸಬೇಕಿತ್ತು ಎಂದು ಅಫ್ಘಾನಿಸ್ತಾನ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ರಹಮತುಲ್ಲಾ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲ್ಯಾಂಡಿಂಗ್ ವೇಳೆ ಗೋಡೆಗೆ ಡಿಕ್ಕಿ ಹೊಡೆದ ವಿಮಾನ – 16 ಜನರ ಪೈಕಿ 15 ಮಂದಿ ದುರ್ಮರಣ

    ಲ್ಯಾಂಡಿಂಗ್ ವೇಳೆ ಗೋಡೆಗೆ ಡಿಕ್ಕಿ ಹೊಡೆದ ವಿಮಾನ – 16 ಜನರ ಪೈಕಿ 15 ಮಂದಿ ದುರ್ಮರಣ

    ಬಾಗ್ದಾದ್: ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡಿಂಗ್ ವೇಳೆ ಮಿಲಿಟರಿ ಸರಕು ವಿಮಾನವೊಂದು ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಮೃತಪಟ್ಟ ಘಟನೆ ಪಶ್ಚಿಮ ಇರಾನಿನ ಫಥ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಬೋಯಿಂಗ್ 707 ಮಿಲಿಟರಿ ಸರಕು ವಿಮಾನವು ಕಿರ್ಗಿಸ್ತಾನ್‍ನ ಬಿಶ್ಕೆಕ್ ನಿಂದ ಮಾಂಸವನ್ನು ಸಾಗಿಸುತ್ತಿತ್ತು. ಆದರೆ ಫಥ್ ಏರ್ ಪೋರ್ಟ್ ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಿತ್ತು. ಫಥ್ ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ಮಾಡುವ ಸಮಯದಲ್ಲಿ ಪೈಲೆಟ್ ಗೆ ನಿಲ್ದಾಣ ಸರಿಯಾಗಿ ಕಾಣಿಸದ ಪರಿಣಾಮ ವಿಮಾನ ರನ್‍ವೇ ದಾಟಿ ತಡೆಗೋಡೆಗೆ ಹೊಡೆದಿದೆ. ಇದರಿಂದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸೇನೆ ಹೇಳಿದೆ.

    ಈ ದುರಂತದಲ್ಲಿ ವಿಮಾನದ ಎಂಜಿನಿಯರ್ ಮಾತ್ರ ಬದುಕುಳಿದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ದುರಂತದ ಮಾಹಿತಿ ತಿಳಿದು ತಕ್ಷಣ ಫಥ್ ಮತ್ತು ಪೇಮ್ ವಿಮಾನ ನಿಲ್ದಾಣಗಳಿಗೆ ರಕ್ಷಣಾ ಪಡೆಯನ್ನು ಕಳುಹಿಸಲಾಗಿದ್ದು, ಜೊತೆಗೆ ಪೊಲೀಸರು ಹೋಗಿ ವಿಮಾನದ ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿರುವ ಮೃತ ಸಿಬ್ಬಂದಿಗಾಗಿ ಪರಿಶೀಲನೆ ಮಾಡುತ್ತಿದ್ದಾರೆ.

    ಈ ವಿಮಾನವು ಕಿರ್ಗಿಸ್ತಾನ್ ಗೆ ಸೇರಿದೆ ಎಂದು ಕಿರ್ಗಿಸ್ತಾನ್ ಮಾನಾಸ್ ವಿಮಾನ ನಿಲ್ದಾಣದ ವಕ್ತಾರರು ಹೇಳಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv