Tag: IPO

  • 2026 ರ ಮೊದಲ ಆರು ತಿಂಗಳಲ್ಲಿ ಜಿಯೋ ಐಪಿಒ ಬಿಡುಗಡೆ: ಮುಕೇಶ್ ಅಂಬಾನಿ

    2026 ರ ಮೊದಲ ಆರು ತಿಂಗಳಲ್ಲಿ ಜಿಯೋ ಐಪಿಒ ಬಿಡುಗಡೆ: ಮುಕೇಶ್ ಅಂಬಾನಿ

    – ಜಿಯೋ ಐಪಿಒ; ಇದು ಹೂಡಿಕೆದಾರರಿಗೆ ದೊಡ್ಡ ಅವಕಾಶ
    – ರಿಲಯನ್ಸ್ ಜಿಯೋ ಗ್ರಾಹಕರ ಸಂಖ್ಯೆ ತಲುಪಿದೆ 50 ಕೋಟಿ
    – ಜಿಯೋ ಟ್ರೂ 5ಜಿ ಬಳಕೆದಾರರ ಸಂಖ್ಯೆ 22 ಕೋಟಿ

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಷೇರುದಾರರ ಕಾಯುವಿಕೆ ಅಂತೂ ಕೊನೆಗೊಳ್ಳಲಿದೆ. ಜಿಯೋದ ಐಪಿಒ ಮುಂದಿನ ವರ್ಷದ ಮೊದಲಾರ್ಧದಲ್ಲಿ, ಅಂದರೆ 2026ನೇ ಇಸವಿಯಲ್ಲಿ ಬಿಡುಗಡೆಯಾಗಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 48ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಶುಕ್ರವಾರದಂದು ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಈ ಮಾಹಿತಿಯನ್ನು ಹಂಚಿಕೊಂಡರು.

    ಜಿಯೋ (Reliance Jio) ತನ್ನ ಐಪಿಒಗೆ (IPO) ಅರ್ಜಿ ಸಲ್ಲಿಸುವುದಕ್ಕೆ ತಯಾರಿ ನಡೆಸುತ್ತಿದೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. 2026ನೇ ಇಸವಿಯ ಮೊದಲಾರ್ಧದ ವೇಳೆಗೆ ಜಿಯೋವನ್ನು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡುವುದು ನಮ್ಮ ಗುರಿಯಾಗಿದೆ. ಜಿಯೋ ನಮ್ಮ ಜಾಗತಿಕ ಸಹವರ್ತಿಗಳಂತೆಯೇ ಅದೇ ಮೌಲ್ಯವನ್ನು ಸೃಷ್ಟಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ಎಲ್ಲ ಹೂಡಿಕೆದಾರರಿಗೆ ಬಹಳ ಆಕರ್ಷಕ ಅವಕಾಶವಾಗಲಿದೆ ಎಂದು ನಾನು ನಂಬುತ್ತೇನೆ ಎಂದು ಮುಕೇಶ್ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಜಿಯೋ – ಗಾಜನೂರು, ಪೆದ್ದನಪಾಳ್ಯ, ಹುಗ್ಯಂನಂಥ ಗ್ರಾಮಗಳಲ್ಲೂ ಟವರ್‌

    ರಿಲಯನ್ಸ್ ಜಿಯೋ ಇಂದು ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಕಂಪನಿಯ ಗ್ರಾಹಕರ ಸಂಖ್ಯೆ 50 ಕೋಟಿಯನ್ನು ದಾಟಿದೆ. ಷೇರುದಾರರು ಮತ್ತು ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುತ್ತಾ, ಮುಕೇಶ್ ಅಂಬಾನಿ ಜಿಯೋವನ್ನು ಜೀವನ ಬದಲಾಯಿಸುವಂಥದ್ದು ಎಂದು ಕರೆದರು. ಜಿಯೋದ ಸಾಧನೆಗಳನ್ನು ಪಟ್ಟಿ ಮಾಡುತ್ತಾ, ಧ್ವನಿ ಕರೆಗಳನ್ನು (ವಾಯ್ಸ್ ಕಾಲ್) ಉಚಿತಗೊಳಿಸುವುದು, ಡಿಜಿಟಲ್ ಪಾವತಿಯ ವಿಧಾನಗಳನ್ನು ಬದಲಾಯಿಸುವುದು, ಆಧಾರ್, ಯುಪಿಐ, ಜನ್ ಧನ್‌ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಜೀವ ತುಂಬುವುದು ಮತ್ತು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ (ಎಕೋಸಿಸ್ಟಮ್) ಬೆನ್ನೆಲುಬಾಗಿ ಕಾರ್ಯನಿರ್ವಹಿಸುವುದು ಹೀಗೆ ಜಿಯೋ ಕೆಲವು ಊಹಿಸಲು ಸಹ ಆಗದ ಕಾರ್ಯಗಳನ್ನು ಮಾಡಿದೆ ಎಂದು ಅವರು ಹೇಳಿದರು.

    ದೇಶದಲ್ಲಿ 5ಜಿ ವೇಗವಾಗಿ ಕಾರ್ಯಾಚರಣೆಯನ್ನು ಆರಂಭಿಸಿದ ನಂತರ, ಜಿಯೋದ 5ಜಿ ಗ್ರಾಹಕರ ಸಂಖ್ಯೆಯೂ ವೇಗವಾಗಿ ಹೆಚ್ಚಾಗಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದರು. 22 ಕೋಟಿಗೂ ಹೆಚ್ಚು ಬಳಕೆದಾರರು ಜಿಯೋ ಟ್ರೂ 5ಜಿ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ್ದಾರೆ. ಜಿಯೋ ಶೀಘ್ರದಲ್ಲೇ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಇದನ್ನೂ ಓದಿ: ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸಿ: ಕೇಂದ್ರಕ್ಕೆ ಜಿಯೋ ಪತ್ರ

    ಜಿಯೋ ಟ್ರೂ 5ಜಿ ಡಿಜಿಟಲ್ ಸಂಪರ್ಕದ ವೇಗ, ವಿಶ್ವಾಸಾರ್ಹತೆ ಮತ್ತು ಸಂಪರ್ಕ ವ್ಯಾಪ್ತಿಯನ್ನು ಮರು ವ್ಯಾಖ್ಯಾನಿಸಿದೆ. ಜಿಯೋ ನನ್ನ ಜೀವನವನ್ನು ಬದಲಾಯಿಸಿದೆ ಅಥವಾ ನನಗೆ ಜಿಯೋ ಇಷ್ಟ ಎಂದು ಜನರು ಹೇಳುವುದನ್ನು ನಾನು ಕೇಳಿದ್ದೇನೆ. ಆದರೆ, ನನ್ನ ಹೃದಯದಿಂದ ಹೇಳುತ್ತೇನೆ. ವಾಸ್ತವವಾಗಿ, ಪ್ರತಿ ಭಾರತೀಯ ಜಿಯೋವನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವ ಮೂಲಕ ಇದನ್ನು ರೂಪಿಸಿದ್ದಾರೆ ಎಂದು ಹೇಳಿದರು.

  • ಮೇ 4 ರಿಂದ ಎಲ್‌ಐಸಿ ಐಪಿಒ?

    ಮೇ 4 ರಿಂದ ಎಲ್‌ಐಸಿ ಐಪಿಒ?

    ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) ಮೇ 4ರಿಂದ 9ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

    ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಎಲ್‌ಐಸಿಯಲ್ಲಿರುವ ಶೇ.3.5 ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸಕಾರ ಮುಂದಾಗಿದೆ. ಮಾರಾಟದಿಂದ ಬೊಕ್ಕಸಕ್ಕೆ 21 ಸಾವಿರ ಕೋಟಿ ರೂ. ಬರಲಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ.

    ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್‌ಐಸಿಯ ಶೇ. 5-7ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ 50 ರಿಂದ 65 ಸಾವಿರ ಕೋಟಿ ರೂ. ಸಂಗ್ರಹಿಸಲು ಮುಂದಾಗಿತ್ತು. ಆದರೆ ರಷ್ಯಾ–ಉಕ್ರೇನ್‌ ಯುದ್ಧ ಮತ್ತು ಹೂಡಿಕೆದಾರರಿಂದ ಹೆಚ್ಚಿನ ಬೇಡಿಕೆ ಇಲ್ಲದ ಹಿನ್ನೆಲೆಯಲ್ಲಿ ಐಪಿಒ ಬಿಡುಗಡೆ ಮುಂದೂಡಿಕೆಯಾಗಿತ್ತು. ಇದನ್ನೂ ಓದಿ: ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್

    ಎಲ್‌ಐಸಿಯ ಐಪಿಒ ಗಾತ್ರವನ್ನು ಇಳಿಕೆ ಮಾಡಿದರೂ ಇದು ದೇಶದ ಅತೀ ದೊಡ್ಡ ಐಪಿಒ ಆಗಿ ದಾಖಲೆ ಬರೆಯಲಿದೆ. ಕಳೆದ ನವೆಂಬರ್‌ನಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಪೇಟಿಎಂ 18,300 ಕೋಟಿ ರೂ. ಸಂಗ್ರಹಿಸಿದ್ದೇ ಈವರೆಗೆನ ದೇಶದ ದೊಡ್ಡ ಐಪಿಒ ಆಗಿದೆ. ಕೋಲ್‌ ಇಂಡಿಯಾ 2010 ರಲ್ಲಿ 15,500 ಕೋಟಿ ಮತ್ತು ರಿಲಯನ್ಸ್‌ ಪವರ್‌ 2008ರಲ್ಲಿ 11,700 ಕೋಟಿ ರೂ. ಐಪಿಒ ಮೂಲಕ ಸಂಗ್ರಹಿಸಿತ್ತು.

    ಕೇಂದ್ರ ಸರ್ಕಾರ 2021-22ರ ಹಣಕಾಸು ವರ್ಷದಲ್ಲಿ ಎಲ್‌ಐಸಿಯ 31.6 ಕೋಟಿ ಅಥವಾ ಶೇ.5 ರಷ್ಟು ಪಾಲನ್ನು ಮಾರಾಟ ಮಾಡಿ 60 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಇದು ಮುಂದೂಡಿಕೆಯಾಗಿತ್ತು.