Tag: IPL2021

  • ಎಬಿಡಿ ಸ್ಫೋಟಕ ಆಟ – ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ರೋಚಕ ಜಯ

    ಎಬಿಡಿ ಸ್ಫೋಟಕ ಆಟ – ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ರೋಚಕ ಜಯ

    – 5 ವಿಕೆಟ್ ಕಿತ್ತು ಹರ್ಷಲ್ ಪಟೇಲ್ ಇತಿಹಾಸ ಸೃಷ್ಟಿ

    ಚೆನ್ನೈ: ಹರ್ಷಲ್ ಪಟೇಲ್ ಭರ್ಜರಿ ಬೌಲಿಂಗ್,  ಎಬಿಡಿ ವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಮುಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಬೆಂಗಳೂರು ತಂಡ ಜಯವನ್ನು ಸಾಧಿಸಿ ಶುಭಾರಂಭ ಮಾಡಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು 20ನೇ ಓವರಿನ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ಪಂದ್ಯವನ್ನು 2 ವಿಕೆಟ್‍ಗಳಿಂದ ಗೆದ್ದುಕೊಂಡಿತು.

    ಗೆದ್ದದ್ದು ಹೇಗೆ?
    14 ಓವರ್ ಅಂತ್ಯಕ್ಕೆ ಜಯಗಳಿಸಲು  36 ಎಸೆತಕ್ಕೆ 57 ರನ್ ಬೇಕಿತ್ತು. 18ನೇ ಓವರ್‌ನಲ್ಲಿ 1 ಸಿಕ್ಸ್, 1 ಬೌಂಡರಿ ಸೇರಿದಂತೆ 15 ರನ್ ಬಂದ ಕಾರಣ ಕೊನೆಯ 12 ಎಸೆತದಲ್ಲಿ 19 ರನ್ ಬೇಕಿತ್ತು. ಬುಮ್ರಾ ಎಸೆದ 19ನೇ ಓವರ್‌ನಲ್ಲಿ ಎಬಿಡಿ ವಿಲಿಯರ್ಸ್ 2 ಬೌಂಡರಿ ಹೊಡೆದ ಪರಿಣಾಮ 12 ರನ್ ಬಂತು. ಕೊನೆಯ 6 ಬಾಲಿಗೆ 7 ರನ್ ಬೇಕಿತ್ತು. ಈ ವೇಳೆ ಜನ್‍ಸೇನ್ ಎಸೆದ ಮೊದಲ ಮೂರು ಎಸೆತಕ್ಕೆ 1, 2, 1 ರನ್ ಬಂತು. 4ನೇ ಎಸೆತದಲ್ಲಿ ಎಬಿಡಿ 2 ರನ್ ಓಡಲು ಹೋಗಿ ರನೌಟ್ ಆದರು. ಕೊನೆಯ 2 ಎಸೆತದಲ್ಲಿ 2 ರನ್ ಬೇಕಿತ್ತು. 5ನೇ ಎಸೆತದಲ್ಲಿ ಲೆಗ್‍ಬೈ ಮೂಲಕ 1 ರನ್ ಬಂದರೆ ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್ ಶಾರ್ಟ್ ಫೈನ್ ಕಡೆಗೆ ಬಾಲ್ ತಳ್ಳಿ 1 ರನ್ ಗಳಿಸಿ ಆರ್‌ಸಿಬಿ  ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಎಬಿಡಿ ವಿಲಿಯರ್ಸ್ 48 ರನ್(27 ಎಸೆತ, 4 ಬೌಂಡರಿ, 2 ಸಿಕ್ಸರ್), ಗ್ಲೇನ್ ಮ್ಯಾಕ್ಸ್‌ವೆಲ್ 39 ರನ್(28 ಎಸೆತ, 3 ಬೌಂಡರಿ, 2 ಸಿಕ್ಸರ್) ನಾಯಕ ವಿರಾಟ್ ಕೊಹ್ಲಿ 33 ರನ್(29 ಎಸೆತ, 4 ಬೌಂಡರಿ) ಹೊಡೆದು ಔಟಾದರು.

    ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಕ್ರಿಸ್ ಲೀನ್ ಉತ್ತಮ ಆರಂಭ ಒದಗಿಸಿದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕ್ರಿಸ್ ಲೀನ್ 49 ರನ್(35 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ 1 ರನ್ ನಿಂದ ಅರ್ಧಶತಕ ವಂಚಿತರಾಗಿ ಔಟ್ ಆದರು.

    ಈ ಮೊದಲೇ ರೋಹಿತ್ ಶರ್ಮಾ 19 ರನ್(15 ಎಸೆತ, 1 ಬೌಂಡರಿ ಮತ್ತು 1 ಸಿಕ್ಸರ್) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ನಡೆಸಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 31 ರನ್‍ಗೆ ಔಟಾದರು.

    ಬಳಿಕ ಬಂದ ಯಾವ ಬ್ಯಾಟ್ಸ್‍ಮ್ಯಾನ್ ಕೂಡ ಹೆಚ್ಚುಹೊತ್ತು ಕ್ರಿಸ್‍ನಲ್ಲಿ ಅಬ್ಬರಿಸಲಿಲ್ಲ. ಇಶಾನ್ ಕಿಶನ್ ಸ್ವಲ್ಪ ಹೊತ್ತು ಬ್ಯಾಟಿಂಗ್ ಪರಾಕ್ರಮ ತೋರಿಸಿದರು ಕೂಡ 28 ರನ್(19 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಆಡುತ್ತಿದ್ದಾಗ ಹರ್ಷಲ್ ಪಟೇಲ್ ಬೌಲಿಂಗ್‍ನಲ್ಲಿ ಎಲ್‍ಬಿ ಬಲೆಗೆ ಬಿದ್ದರು.

    ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ಹಾರ್ದಿಕ್ ಪಾಂಡ್ಯ 13ರನ್, ಕೀರನ್ ಪೋಲಾರ್ಡ್ 7 ರನ್, ಕೃಣಲ್ ಪಾಂಡ್ಯ 7 ರನ್ ಮತ್ತು ಮಾರ್ಕೊ ಜಾನ್ಸೆನ್ ಮತ್ತು ರಾಹುಲ್ ಚಹಾರ್ ಕ್ರಮವಾಗಿ ಸೊನ್ನೆ ಸುತ್ತಿದರು.

    ಆರ್‍ಸಿಬಿ ಪರ ಉತ್ತಮ ದಾಳಿ ಸಂಘಟಿಸಿದ ಹರ್ಷಲ್ ಪಟೇಲ್ 4 ಓವರ್ ಎಸೆದು 27 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರೆ, ಕೈಲ್ ಜಾಮೀಸನ್ ಮತ್ತು ವಾಷಿಂಗ್ಟ್‍ನ್ ಸುಂದರ್ ತಲಾ ಒಂದು ವಿಕೆಟ್ ಕಿತ್ತರು.

  • ಮೊದಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ಹರ್ಷಲ್ ಪಟೇಲ್

    ಮೊದಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ಹರ್ಷಲ್ ಪಟೇಲ್

    ಚೆನ್ನೈ: 2021ರ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿಯ ವೇಗಿ ಹರ್ಷಲ್ ಪಟೇಲ್ ಮುಂಬೈ ವಿರುದ್ಧ ಇತಿಹಾಸ ನಿರ್ಮಿಸಿದ್ದಾರೆ.

    5 ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ತಂಡದ ವಿರುದ್ಧ ಇಲ್ಲಿಯಯವರೆಗೆ ಯಾರೂ 5 ವಿಕೆಟ್ ಪಡೆದಿರಲಿಲ್ಲ. ಆದರೆ ಈ ಬಾರಿ ಹರ್ಷಲ್ ಪಟೇಲ್ 5 ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಹರ್ಯಾಣದ ಮಧ್ಯಮ ವೇಗಿ ಬೌಲರ್ ಹರ್ಷಲ್ ಪಟೇಲ್ ಅವರನ್ನು ಕೊಹ್ಲಿ 5ನೇಯವರಾಗಿ ಬೌಲಿಂಗ್ ಇಳಿಸಿದ್ದರು. ಹರ್ಷಲ್ ಪಟೇಲ್ ಬೌಲಿಂಗ್‍ಗೆ ಇಳಿದದ್ದೇ ತಡ 105 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಮುಂಬೈ ತಂಡದ ವಿಕೆಟ್ ದಿಢೀರ್ ಪತನಗೊಳ್ಳಲು ಆರಂಭವಾಯಿತು.

    ಇಶನ್ ಕಿಶಾನ್ ಅವರನ್ನು ಎಲ್‍ಬಿಗೆ ಕೆಡವಿ ನಂತರ ಹಾರ್ದಿಕ್ ಪಾಂಡ್ಯ, ಕಿರಾನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಮಾರ್ಕೋ ಜನ್‍ಸೆನ್ ಅವರನ್ನು ಔಟ್ ಮಾಡಿ ರನ್‍ಗೆ ಕಡಿವಾಣ ಹಾಕಿದರು. ಅಂತಿಮವಾಗಿ ಹರ್ಷಲ್ ಪಟೇಲ್ 4 ಓವರ್ ಎಸೆದು 27 ರನ್ ನೀಡಿ 5 ವಿಕೆಟ್ ಪಡೆದರು.

    ಈ ಸಂಭ್ರಮವನ್ನು ಹಂಚಿಕೊಂಡ ಹರ್ಷಲ್ ಪಟೇಲ್, ನನ್ನ ಟಿ20 ಕ್ರಿಕೆಟ್ ಜೀವನದಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದಿದ್ದೇನೆ. ಅದರಲ್ಲೂ ಮಂಬೈ ತಂಡದ ವಿರುದ್ಧ ಈ ಸಾಧನೆ ಮಾಡಿದ್ದಕ್ಕೆ ನನಗೆ ಬಹಳ ಸಂತಸವಿದೆ ಎಂದು ಹೇಳಿದ್ದಾರೆ.