Tag: IPL

  • ಗೆಲುವಿನ ಸಂಭ್ರಮಾಚರಣೆ ಮುಂದುವರಿಸಿದ ಸಿಎಸ್‍ಕೆ – ಬ್ರಾವೋ ಹೊಸ ಹಾಡು ವೈರಲ್

    ಗೆಲುವಿನ ಸಂಭ್ರಮಾಚರಣೆ ಮುಂದುವರಿಸಿದ ಸಿಎಸ್‍ಕೆ – ಬ್ರಾವೋ ಹೊಸ ಹಾಡು ವೈರಲ್

    ಚೆನ್ನೈ: ಐಪಿಎಲ್ ಕಪ್ ಗೆದ್ದ ಸಂಭ್ರಮದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಟಗಾರರು ಗೆಲುವಿನ ಸಂಭ್ರಮಾಚರಣೆಯನ್ನು ಮುಂದುವರಿಸಿದ್ದು, ತಮ್ಮ ಅಭಿಮಾನಿಗಳಿಗಾಗಿ ಹೊಸ ಹಾಡನ್ನು ಬ್ರಾವೋ ಬಿಡುಗಡೆಗೊಳಿಸಿದ್ದಾರೆ.

    ಈ ಹಿಂದೆ `ಚಾಂಪಿಯನ್ಸ್’ ಹಾಡಿನ ಮೂಲಕ ಅಭಿಮಾನಿಗಳನ್ನು ಮನರಂಜಿಸಿದ್ದ ಬ್ರಾವೋ ಸದ್ಯ `ವಿ ಆರ್ ದಿ ಕಿಂಗ್ಸ್’ ಹಾಡಿನ ಮೂಲಕ ಮತ್ತೆ ಬಂದಿದ್ದಾರೆ. ಸದ್ಯ ಹಾಡನ್ನು ಬ್ರಾವೋ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ. ವಿಡಿಯೋದಲ್ಲಿ ಧೋನಿ ಮತ್ತೊಮ್ಮೆ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    ಬ್ರಾವೋ ಈ ಹಾಡಿನ ಮೂಲಕ ತಾನು ಕೇವಲ ಆಟಗಾರರ ಮಾತ್ರವಲ್ಲ, ಉತ್ತಮ ಸಂಗೀತಗಾರ ಎಂಬುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಮೇ 28 ರಂದು ಅಪ್ಲೋಡ್ ಆಗಿರುವ ವಿಡಿಯೋ ಯೂ ಟ್ಯೂಬ್ ನಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

    ಟೂರ್ನಿಯಲ್ಲಿ 16 ಪಂದ್ಯಗಳನ್ನು ಆಡಿರುವ ಬ್ರಾವೋ 14 ವಿಕೆಟ್ ಪಡೆದು, 35.25 ಸರಾಸರಿಯಲ್ಲಿ 141 ರನ್ ಗಳಿಸಿದ್ದಾರೆ. ಆಲ್ ರೌಂಡರ್ ಪ್ರದರ್ಶನ ನೀಡುವ ಬ್ರಾವೋ ಐಪಿಎಲ್ ಅಲ್ಲದೇ ಬಿಗ್ ಬಾಷ್ ಟೂರ್ನಿಯಲ್ಲೂ ಭಾಗವಹಿಸಿದ್ದಾರೆ.

    ಟಿ20 ಮಾದರಿಯಲ್ಲಿ 400 ವಿಕೆಟ್ ಪಡೆದ ಸಾಧನೆ ಮಾಡಿರುವ ಕೆರೆಬಿಯನ್ ಆಟಗಾರ ಬ್ರಾವೋ ಕಳೆದ ವರ್ಷಗಳಿಂದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. 2014 ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು.

  • ಸ್ಫೋಟಕ ಬ್ಯಾಟಿಂಗ್ ಹಿಂದಿರುವ ರಹಸ್ಯವನ್ನು ರಿವೀಲ್ ಮಾಡಿದ್ರು ರಾಯುಡು!

    ಸ್ಫೋಟಕ ಬ್ಯಾಟಿಂಗ್ ಹಿಂದಿರುವ ರಹಸ್ಯವನ್ನು ರಿವೀಲ್ ಮಾಡಿದ್ರು ರಾಯುಡು!

    ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‍ನಲ್ಲಿ ಚಾಂಪಿಯನ್ ಆಗಲು ಮುಖ್ಯ ಕಾರಣ ಆ ತಂಡಕ್ಕಿದ್ದ ಬ್ಯಾಟಿಂಗ್ ಬಲ. ಸ್ಟಾರ್ ವಿದೇಶಿ ಆಟಗಾರರ ಜೊತೆ ಸ್ಥಳೀಯ ಆಟಗಾರರು ಬ್ಯಾಟಿಂಗ್‍ನಲ್ಲಿ ಮಿಂಚು ಹರಿಸಿದ್ದರು. ಪವರ್ ಪ್ಲೇನಲ್ಲಿ ತಂಡ ಹೆಚ್ಚಿನ ಮೊತ್ತ ದಾಖಲಿಸಲು ನೆರವಾಗಿದ್ದು ಅಂಬಟಿ ರಾಯುಡು ಸ್ಫೋಟಕ ಬ್ಯಾಟಿಂಗ್.

    16 ಪಂದ್ಯಗಳಿಂದ 43ರ ಸರಾಸರಿಯಲ್ಲಿ 602 ರನ್‍ಗಳಿಸಿದ್ದ ರಾಯುಡು, ಟೂರ್ನಿಯಲ್ಲಿ ಅತೀಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದರು. ಆದರೆ ತನ್ನ ಸ್ಫೋಟಕ ಬ್ಯಾಟಿಂಗ್‍ನ ಹಿಂದಿನ ರಹಸ್ಯವನ್ನು ಸ್ವತಃ ಅಂಬಟಿ ರಾಯುಡು ಇದೀಗ ಬಹಿರಂಗಗೊಳಿಸಿದ್ದಾರೆ. ತಾನು ಐಪಿಎಲ್‍ನಲ್ಲಿ ಶ್ರೇಷ್ಟ ಮಟ್ಟದ ಪ್ರದರ್ಶನ ನೀಡುವಲ್ಲಿ ನೆರವಾಗಿದ್ದು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೀಡಿದ್ದ ಬ್ಯಾಟ್ ಎಂದು ರಾಯುಡು ಹೇಳಿದ್ದಾರೆ.

    ಹರ್ಭಜನ್ ನಡೆಸಿಕೊಡುವ ‘ಕ್ವಿಕ್‍ಹೀಲ್ ಭಜ್ಜಿ ಬ್ಲಾಸ್ಟ್ ಶೋ’ ಕಾರ್ಯಕ್ರಮದಲ್ಲಿ ಮನಸ್ಸು ಬಿಚ್ಚಿ ಮಾತನಾಡಿರುವ ರಾಯುಡು, ಪ್ರತೀ ವರ್ಷವೂ ನಾನು ಕೊಹ್ಲಿಯಿಂದ ಬ್ಯಾಟ್ ಕೇಳಿ ಪಡೆಯುತ್ತಿದ್ದೇನೆ. ಈ ಬ್ಯಾಟ್‍ನಲ್ಲಿ ಆತ್ಮವಿಶ್ವಾಸದಿಂದ ದೊಡ್ಡ ಹೊಡೆತಗಳನ್ನು ಬಾರಿಸುತ್ತೇನೆ ಎಂದು ರಾಯುಡು ಹೇಳಿದ್ದಾರೆ.

    ಕಳೆದ 8 ಆವೃತಿಗಳಲ್ಲಿ ಮುಂಬೈ ಪರ ಬ್ಯಾಟ್ ಬೀಸಿದ್ದ 32 ವರ್ಷದ ರಾಯುಡುರನ್ನು ಈ ಬಾರಿ ಚೆನ್ನೈ, 2.2 ಕೋಟಿ ರೂ. ಕೊಟ್ಟು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಆಡುವ ಅವಕಾಶ ಪಡೆದಿದ್ದ ರಾಯುಡು, ತಂಡದ ಪರ ಟಾಪ್ ಸ್ಕೋರರ್ ಆಗಿ ಮಿಂಚಿದ್ದರು. ಒಟ್ಟು 53 ಬೌಂಡರಿ ಹಾಗೂ 34 ಸಿಕ್ಸರ್ ಸಿಡಿಸಿದ್ದ ರಾಯುಡು, ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. 2010ರಿಂದ 2017ರವರೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ರಾಯುಡು ಒಟ್ಟು 2416 ರನ್‍ಗಳಿಸಿದ್ದರು.

  • ಧೋನಿ ಬ್ಯಾಟಿಂಗ್ ಕ್ರಮಾಂಕ ಚರ್ಚೆಗೆ ಬ್ರೇಕ್ ಹಾಕ್ತ ಐಪಿಎಲ್!

    ಧೋನಿ ಬ್ಯಾಟಿಂಗ್ ಕ್ರಮಾಂಕ ಚರ್ಚೆಗೆ ಬ್ರೇಕ್ ಹಾಕ್ತ ಐಪಿಎಲ್!

    ಮುಂಬೈ: ಧೋನಿ ಬ್ಯಾಟಿಂಗ್ ಆರ್ಡರ್ ಬದಲಾಯಿಸಬೇಕು ಎಂಬ ಹಲವರ ಅಭಿಪ್ರಾಯಕ್ಕೆ ಉತ್ತರ ಸಿಕ್ಕಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪರ ಉನ್ನತ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು ಏಕದಿನ ಮಾದರಿಯಲ್ಲೂ ಇದನ್ನೇ ಮುಂದುವರೆಸಲು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ತಮ್ಮ ಪ್ರತಿಕ್ರಿಯೆ ನೀಡಿರುವ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಶ್ರೀಕಾಂತ್ ಮುಂದಿನ ವಿಶ್ವಕಪ್ ದೃಷ್ಟಿಯಿಂದ ಧೋನಿ ಅವರಿಗೆ ನಂ.5 ಅಥವಾ ನಂ.6 ಕ್ರಮಾಂಕದಲ್ಲಿ ಬ್ಯಾಟಿಂಗ್ ಅವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ತಂಡದಲ್ಲಿ ಯುವ ಆಟಗಾರರಿಗೆ ಸ್ಥಾನ ನೀಡುವ ಉದ್ದೇಶದಿಂದ ಧೋನಿ ಅವರನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಅವಕಾಶ ಉಪಯೋಗಿಸಿಕೊಳ್ಳುವಲ್ಲಿ ಹಲವು ಆಟಗಾರರು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಧೋನಿ ಬ್ಯಾಟಿಂಗ್ ಕ್ರಮಾಂಕದ ದಾಖಲೆಗಳನ್ನು ಪರಿಶೀಲಿಸಿದ ವೇಳೆಯೂ 5ನೇ ಕ್ರಮಾಂಕದಲ್ಲಿ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ.

    ಸದ್ಯ ಧೋನಿ ಇದುವರೆಗೂ 3ನೇ ಕ್ರಮಾಂಕದಲ್ಲಿ 16 ಪಂದ್ಯಗಳನ್ನು ಆಡಿದ್ದು 82.75 ಸರಾಸರಿಯಲ್ಲಿ 993 ರನ್ ಗಳಿಸಿದ್ದಾರೆ. ಉಳಿದಂತೆ 4ನೇ ಕ್ರಮಾಂಕದಲ್ಲಿ 27 ಪಂದ್ಯ ಗಳಿಂದ 1,230 ರನ್ ಹಾಗೂ 5ನೇ ಕ್ರಮಾಂಕದಲ್ಲಿ 68 ಪಂದ್ಯಗಳಿಂದ 53.29 ಸರಾಸರಿಯಲ್ಲಿ 2,718 ರನ್ ಗಳಿಸಿದ್ದಾರೆ. 6ನೇ ಕ್ರಮಾಂಕದಲ್ಲಿ 46.90 ಸರಾಸರಿಯಲ್ಲಿ 3,987 ರನ್ ಗಳಿಸಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದ ತಜ್ಞರು ಧೋನಿ 5ನೇ ಕ್ರಮಾಂಕದಲ್ಲಿ ಆಡಿದರೆ ತಂಡಕ್ಕೆ ಉತ್ತಮ ಶಕ್ತಿ ತುಂಬುತ್ತಾರೆ ಎಂದು ತಿಳಿಸಿದ್ದಾರೆ.

    ಧೋನಿ ಪಂದ್ಯವನ್ನು ಯಾವುದೇ ಕ್ಷಣದಲ್ಲಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಶಕ್ತಿ ಹೊಂದಿದ್ದಾರೆ. ಕ್ರೀಸ್ ನಲ್ಲಿ ನೆಲೆಗೊಳ್ಳಲು ಸಮಯ ಸಿಕ್ಕರೆ ಉತ್ತಮ ಪ್ರದರ್ಶನ ನಿರೀಕ್ಷಿಸಲು ಸಾಧ್ಯ. ಇದು ಅವರಿಗೆ ಪಂದ್ಯವನ್ನು ಗೆಲ್ಲಿಸಿಕೊಡಲು ಅವಕಾಶ ನೀಡುತ್ತದೆ ಎಂದು ತಿಳಿಸಿದ್ದಾರೆ. ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಶ್ರೀಕಾಂತ್ ಸಹ ಧೋನಿ 5ನೇ ಕ್ರಮಾಂಕದಲ್ಲಿ ಆಡಲುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  • ಅಫ್ಘಾನ್ ಪ್ರಧಾನಿ ಬಳಿಕ ಹೆಚ್ಚು ಪ್ರಸಿದ್ಧಿ ಪಡೆದಿದ್ದೇನೆ – ರಶೀದ್ ಖಾನ್

    ಅಫ್ಘಾನ್ ಪ್ರಧಾನಿ ಬಳಿಕ ಹೆಚ್ಚು ಪ್ರಸಿದ್ಧಿ ಪಡೆದಿದ್ದೇನೆ – ರಶೀದ್ ಖಾನ್

    ಮುಂಬೈ: 2018 ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿರುವ ರಶೀದ್ ಖಾನ್, ತನ್ನ ದೇಶದ ಪ್ರಧಾನಿಯ ಬಳಿಕ ತಾನು ಹೆಚ್ಚು ಪ್ರಸಿದ್ಧಿ ಪಡೆದಿರುವುದಾಗಿ ಹೇಳಿದ್ದಾರೆ.

    ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಅತ್ಯುತ್ತಮ ಆಲೌಂಡರ್ ಪ್ರದರ್ಶನ ನೀಡಿದ ರಶೀದ್ ತಂಡ ಫೈನಲ್ ತಲುಪಲು ಕಾರಣರಾಗಿದ್ದರು. ಈ ವೇಳೆ ಸಚಿನ್ ತೆಂಡೂಲ್ಕರ್ ಸಹ ವಿಶ್ವದ ಉತ್ತಮ ಟಿ20 ಬೌಲರ್ ಎಂದು ಹೊಗಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಖಾನ್ ಮೊದಲು ಸಚಿನ್ ರ ಹೊಗಳಿಕೆ ಟ್ವೀಟ್ ನೋಡಿದ ವೇಳೆ ನಂಬಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

    ಸಚಿನ್ ವಿಶ್ವದಲ್ಲೇ ಹೆಚ್ಚು ಅಭಿಮಾನಿಗಳನ್ನು ಪಡೆದ ಆಟಗಾರರು. ಅವರ ಟ್ವೀಟನ್ನು ಅಫ್ಘಾನ್ ನ ಎಲ್ಲರೂ ನೋಡಿರುತ್ತಾರೆ. ಸಚಿನ್ ರ ಹೊಗಳಿಕೆ ತನ್ನಂತಹ ಹಲವು ಯುವ ಆಟಗಾರರಿಗೆ ಹೆಚ್ಚು ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ.

    ಈ ಬಾರಿಯ ಐಪಿಎಲ್ ನಲ್ಲಿ 21 ವಿಕೆಟ್ ಪಡೆದಿರುವ ಖಾನ್ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆ ಪಡೆದರು. ವಿಶೇಷವಾಗಿ ಟೂರ್ನಿಯಲ್ಲಿ ಧೋನಿ, ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ವಿಕೆಟ್ ಪಡೆದಿರುವುದು ಹೆಚ್ಚು ಹೆಮ್ಮೆ ಎನಿಸುತ್ತದೆ. ಈ ಮೂರು ವಿಕೆಟ್ ಗಳು ತನ್ನ ವೃತ್ತಿ ಜೀವನದ ಪ್ರಮುಖ ಸಾಧನೆ ಎಂದು ತಿಳಿಯುತ್ತೇನೆ ಎಂದು ಹೇಳಿದ್ದಾರೆ.

    ಮುಂದಿನ ಜೂನ್ ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಟೆಸ್ಟ್ ಪಂದ್ಯದ ಮೂಲಕ ಅಫ್ಘಾನ್ ತಂಡ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡಲಿದೆ. ಈ ಪಂದ್ಯ ಅತ್ಯಂತ ಮಹತ್ವದಾಗಿದ್ದು, ಇಡೀ ದೇಶವೇ ಎದುರು ನೋಡುತ್ತಿದೆ. ಈ ಪಂದ್ಯಕ್ಕೆ ಆಯ್ಕೆ ಆಗಿರುವ ಎಲ್ಲರು ಲಕ್ಕಿ ಆಟಗಾರರಾಗಿದ್ದು, ಈ ಮೂಲಕ ಇತಿಹಾಸ ಬರೆಯಲಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ಟೀಂ ಇಂಡಿಯಾ ವಿರುದ್ಧ ಆಡುತ್ತಿದ್ದೇವೆ ಎಂಬುವುದೆ ಹೆಮ್ಮೆ ಸಂಗತಿ ಎಂದು ತಿಳಿಸಿದ್ದಾರೆ.

    ಈ ವೇಳೆ ಭಾರತ ಸ್ಟಾರ್ ಆಟಗಾರರು ಪಡೆಯುವ ಸೌಲಭ್ಯಗಳನ್ನು ಪಡೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿ ತಾನು ಅಫ್ಘಾನ್ ದೇಶದ ಪ್ರಧಾನಿ ಬಳಿಕ ಹೆಚ್ಚು ಪ್ರಸಿದ್ಧಿ ಪಡೆದಿದ್ದೇನೆ ಎಂದು ಉತ್ತರಿಸಿದ್ದಾರೆ. ಸದ್ಯ ಅಫ್ಘಾನ್ ನಂತಹ ದೇಶದ ಯುವ ಜನತೆಗೆ ರಶೀದ್ ಖಾನ್ ಈಗ ಸ್ಫೂರ್ತಿಯಾಗಿದ್ದಾರೆ.

  • ಧೋನಿ, ಬ್ರಾವೋ 3 ರನ್ ಡ್ಯಾಶ್ ಚಾಲೆಂಜ್ – ವಿಡಿಯೋ ನೋಡಿ

    ಧೋನಿ, ಬ್ರಾವೋ 3 ರನ್ ಡ್ಯಾಶ್ ಚಾಲೆಂಜ್ – ವಿಡಿಯೋ ನೋಡಿ

    ಮುಂಬೈ: ಕ್ರೀಡೆಯಲ್ಲಿ ವಯಸ್ಸು ಕೇವಲ ನಂಬರ್ ಎಂದು ಸಾಬೀತು ಪಡಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ, ತಮ್ಮದೇ ತಂಡದ ಆಟಗಾರ ಬ್ರಾವೋ ಜೊತೆ 3 ರನ್ ಚಾಲೆಂಜ್ ಸ್ವೀಕರಿಸಿ ತಾವು ಫಿಟ್ ಇರುವುದಾಗಿ ತೋರಿಸಿಕೊಟ್ಟಿದ್ದಾರೆ.

    ಸದ್ಯ ಧೋನಿ ಹಾಗೂ ಬ್ರಾವೋ ರ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ 3 ರನ್ ಓಡುವ ಚಾಲೆಂಜ್ ಪಡೆಯುವ ಧೋನಿ ಹಾಗೂ ಬ್ರಾವೋ ನಡುವೆ ನೆಕ್ ಟು ನೆಕ್ ಫೈಟ್ ನಡೆಯುತ್ತದೆ. ಈ ವೇಳೆ ಧೋನಿ ಗೆದ್ದು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಹೈದರಾಬಾದ್ ವಿರುದ್ಧ ಗೆಲುವಿನ ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಇಬ್ಬರ ನಡುವಿನ 3 ರನ್ ಡ್ಯಾಶ್ ಚಾಲೆಂಜ್ ನಡೆದಿದೆ.

    ಸ್ಟಪಿಂಗ್ ದಾಖಲೆ: ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಧೋನಿ ಸ್ಟಪಿಂಗ್ ದಾಖಲೆಯನ್ನು ಮಾಡಿದ್ದು, ಐಪಿಎಲ್ ನಲ್ಲಿ ಅತೀ ಹೆಚ್ಚು ಸ್ಟಪಿಂಗ್ ಮಾಡಿದ ರಾಬಿನ್ ಉತ್ತಪ್ಪ ದಾಖಲೆಯನ್ನು ಮುರಿದಿದ್ದಾರೆ. ಇದರೊಂದಿಗೆ ಪಟ್ಟಿಯಲ್ಲಿ 175 ಪಂದ್ಯದಲ್ಲಿ 33 ಸ್ಟಪಿಂಗ್ ಮಾಡಿರುವ ಧೋನಿ ಮೊದಲ ಸ್ಥಾನದಲ್ಲಿದ್ದರೆ, ರಾಬಿನ್ ಉತ್ತಪ್ಪ (32, 165 ಪಂದ್ಯ), ದಿನೇಶ್ ಕಾರ್ತಿಕ್ (32, 168 ಪಂದ್ಯ), ಸಹಾ (15, 115 ಪಂದ್ಯ) ಗಳೊಂದಿಗೆ ನಂತರದ ಸ್ಥಾನ ಪಡೆದಿದ್ದಾರೆ.

    ಒಟ್ಟಾರೆ ಐಪಿಎಲ್ ನಲ್ಲಿ 175 ಪಂದ್ಯಗಳನ್ನು ಆಡಿರುವ ಧೋನಿ 40.16 ಸರಾಸರಿಯಲ್ಲಿ 4,016 ರನ್ ಗಳಿಸಿದ್ದು, ಇದರಲ್ಲಿ 20 ಅರ್ಧ ಶತಕಗಳು ಸೇರಿದೆ.

  • ಪರ್ಪಲ್ ಕ್ಯಾಪ್ ವಿನ್ನರ್ ಒಂದು ವಿಕೆಟ್‍ಗೆ ಪಡೆದ ಹಣವೆಷ್ಟು ಗೊತ್ತೆ?

    ಪರ್ಪಲ್ ಕ್ಯಾಪ್ ವಿನ್ನರ್ ಒಂದು ವಿಕೆಟ್‍ಗೆ ಪಡೆದ ಹಣವೆಷ್ಟು ಗೊತ್ತೆ?

    ಮುಂಬೈ: 2018 ಐಪಿಎಲ್ ಪರ್ಪಲ್ ಕ್ಯಾಪ್ ವಿನ್ನರ್ ಪಂಜಾಬ್ ತಂಡದ ಆಸೀಸ್ ಆಟಗಾರ ಅಂಡ್ರ್ಯೂ ಟೈ ಒಂದು ವಿಕೆಟ್ ಗೆ 30 ಲಕ್ಷ ರೂ. ಪಡೆದಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜಿನ ವೇಳೆ ಟೈ ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ 7.2 ಕೋಟಿ ನೀಡಿ ಖರೀದಿಸಿತ್ತು. 31 ವರ್ಷದ ಆಸೀಸ್ ಆಟಗಾರ ಟೈ ಟೂರ್ನಿಯಲ್ಲಿ 14 ಪಂದ್ಯಗಳಿಂದ 24 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರತಿ ವಿಕೆಟ್ ಗೆ 30 ಲಕ್ಷ ರೂ. ನೀಡಿದಂತಾಗಿದೆ.

    ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಹೊರ ಹೊಮ್ಮಿರುವ ಟೈ ಐಪಿಎಲ್ ನಲ್ಲಿ ಪರ್ಪಲ್ ಕ್ಯಾಪ್ ಪಡೆದ ಮೊದಲ ಆಸೀಸ್ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಒಟ್ಟಾರೆ ಟೂರ್ನಿಯಲ್ಲಿ ಟೈ 56 ಓವರ್ ಬೌಲಿಂಗ್ ಮಾಡಿದ್ದು, 18.66 ಸರಾಸರಿಯಲ್ಲಿ 24 ವಿಕೆಟ್ ಪಡೆದಿದ್ದಾರೆ.

    ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ರಶೀದ್ ಖಾನ್, ಸಿದ್ದಾರ್ಥ್ ಕೌಲ್, ಉಮೇಶ್ ಯಾದವ್, ಬೌಲ್ಟ್ ಕ್ರಮವಾಗಿ 21, 21, 20, 18 ವಿಕೆಟ್ ಪಡೆಯುವ ಮೂಲಕ ಟಾಪ್ 5ರ ಒಳಗಡೆ ಸ್ಥಾನ ಪಡೆದಿದ್ದಾರೆ.

    ಯಾರಿಗೆ ಯಾವ ಪ್ರಶಸ್ತಿ:
    ಟೂರ್ನಿಯ ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಶೇನ್ ವಾಟ್ಸನ್ ಗೆ ಸಿಕ್ಕಿದರೆ ಸನ್ ರೈಸರ್ಸ್ ಹೈದರಾಬಾದ್ ನ ಕೇನ್ ವಿಲಿಯಮ್ಸ್ ಗೆ ಆರೆಂಜ್ ಕ್ಯಾಪ್ ಸಿಕ್ಕಿದೆ.

    ಉದಯೋನ್ಮುಖ ಆಟಗಾರ ಹಾಗೂ ಸ್ಟೈಲಿಶ್ ಆಟಗಾರ ಪ್ರಶಸ್ತಿಗಳನ್ನು ಡೆಲ್ಲಿ ತಂಡದ ರಿಷಬ್ ಪಂತ್ ಪಡೆದುಕೊಂಡರೆ, ಉತ್ತಮ ಕ್ಯಾಚ್ ಪ್ರಶಸ್ತಿ ಟ್ರೇನ್ಟ್ ಬೌಲ್ಟ್ ಗೆ ಸಿಕ್ಕಿದೆ. ಸೂಪರ್ ಸ್ಟ್ರೈಕರ್ ಮತ್ತು ಮೌಲ್ಯಯುತ ಆಟಗಾರ ಪ್ರಶಸ್ತಿ ಕೋಲ್ಕತ್ತಾದ ಸುನೀಲ್ ನರೇನ್ ಹಾಗೂ ಫೇರ್ ಪ್ಲೇ ಪ್ರಶಸ್ತಿಯನ್ನು ಮುಂಬೈ ತಂಡ ಪಡೆದುಕೊಂಡಿದೆ.

     

     

  • ಐಪಿಎಲ್ ನಲ್ಲಿ 30 ದಾಖಲೆಗಳು ಉಡೀಸ್!

    ಐಪಿಎಲ್ ನಲ್ಲಿ 30 ದಾಖಲೆಗಳು ಉಡೀಸ್!

    ಮುಂಬೈ: 2018ರ ಐಪಿಎಲ್ ಗೆ ಮುಬೈನಲ್ಲಿ ಅದ್ಧೂರಿಯಾಗಿ ತೆರೆ ಬಿದ್ದಿದ್ದು, ಚೆನ್ನೈ ತಂಡ ಮೂರನೇ ಬಾರಿಗೆ ಕಪ್ ತನ್ನದಾಗಿಸಿಕೊಂಡಿದೆ. ಅಲ್ಲದೇ ಟೂರ್ನಿಯಲ್ಲಿ 30 ಹೊಸ ದಾಖಲೆಗಳು ನಿರ್ಮಾಣವಾಗಿದ್ದು, ಈ ಬಾರಿಯ ಐಪಿಎಲ್ ದಾಖಲಾದ ಪ್ರಮುಖ ದಾಖಲೆಗಳು ಇಂತಿದೆ.

    ಟೂರ್ನಿಯ ಆರಂಭಿಕ ಎರಡನೇ ಪಂದ್ಯದಲ್ಲಿಯೇ ಕನ್ನಡಿಗ ಕೆಎಲ್ 14 ಎಸೆಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಈ ಹಿಂದಿನ ದಾಖಲೆ ಮುರಿದಿದ್ದರು. ಡೆಲ್ಲಿ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅಜೇಯ 128(63) ರನ್ ಬಾರಿಸಿ ಐಪಿಎಲ್ ನಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಬೆಂಗಳೂರು, ಚೆನ್ನೈ ನಡುವಿನ ಪಂದ್ಯವೊಂದರಲ್ಲಿ 33 ಸಿಕ್ಸರ್ ಮೂಡಿ ಬಂದು ಐಪಿಎಲ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿದ ಪಂದ್ಯಕ್ಕೆ ಸಾಕ್ಷಿಯಾಗಿತ್ತು.

    ಚೆನ್ನೈ ತಂಡದ ನಾಯಕ ಧೋನಿ ಐಪಿಎಲ್ ನಲ್ಲಿ 150 ಪಂದ್ಯ ಪೂರ್ಣಗೊಳಿಸಿದ ಆಟಗಾರರಾದರೆ, ಮತ್ತೊಂದೆಡೆ ನಾಯಕನಾಗಿ ಅತೀ ಹೆಚ್ಚು ರನ್ ಸಿಡಿಸಿದ ಗಂಭೀರ್ ದಾಖಲೆ ಮುರಿದರು. ಅಲ್ಲದೇ ಟಿ20 ಮಾದರಿಯಲ್ಲಿ ಅತೀ ಹೆಚ್ಚು (144) ಕ್ಯಾಚ್, 73 ಸ್ಟಪಿಂಗ್ ಹಾಗೂ 186 ಸಿಕ್ಸರ್ ಸಿಡಿಸಿ ದಾಖಲೆ ಬರೆದರು. ಐಪಿಎಲ್ ನಲ್ಲಿ 150 ಪಂದ್ಯಗಳನ್ನು ಗೆದ್ದ ಸಾಧನೆಯನ್ನು ಮಾಡಿದರು. ಅಲ್ಲದೇ ಕೀಪರ್ ಆಗಿ 8 ಬಾರಿಗೆ ಐಪಿಎಲ್ ಫೈನಲ್ ಪ್ರವೇಶ ಪಡೆದರು. ಆದರೆ ಹೈದರಾಬಾದ್ ತಂಡದ ಬೌಲರ್ ತಂಪಿ ಪಂದ್ಯವೊಂದರಲ್ಲಿ 70 ರನ್ ನೀಡಿ ಬೇಡದ ದಾಖಲೆ ಪಡೆದರು. ಈ ಬಾರಿಯ ಐಪಿಎಲ್ ನಲ್ಲಿ ಒಟ್ಟಾರೆ 872 ಸಿಕ್ಸರ್ ಬಾರಿಸಲಾಗಿದ್ದು, ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಸಿಕ್ಸರ್ ದಾಖಲಾಯಿತು.

    ಅಫ್ಘನ್ ನ ಮುಜೀಬ್ ಪಂಜಾಬ್ ಪರ 17 ವರ್ಷಕ್ಕೆ ಕಣಕ್ಕೆ ಇಳಿದು ಐಪಿಎಲ್ ಪಂದ್ಯದಲ್ಲಿ ವಿಕೆಟ್ ಪಡೆದ ಯುವ ಆಟಗಾರ ಎನಿಸಿಕೊಂಡರು. ಅಲ್ಲದೇ ಡೆಲ್ಲಿ ತಂಡದ ಸಂದೀಪ್ ಲಾಮಿಚ್ಚನೆ ಐಪಿಎಲ್ ಆಡಿದ ಮೊದಲ ನೇಪಾಳ ಆಟಗಾರ ಎಂಬ ಇತಿಹಾಸ ಬರೆದರು. ಆಸೀಸ್ ಆಟಗಾರ ಆರೋನ್ ಫಿಂಚ್ ಈ ಬಾರಿಯ ಐಪಿಎಲ್ ನಲ್ಲಿ ಪಂಜಾಬ್ ತಂಡದ ಪರ ಕಣಕ್ಕೆ ಇಳಿಯುವುದರೊಂದಿಗೆ ಐಪಿಎಲ್ ನಲ್ಲಿ 7 ತಂಡಗಳ ಪರ ಭಾಗವಹಿಸಿದ ಆಟಗಾರನಾಗಿ ಹೊರ ಹೊಮ್ಮಿದರು.

    ಪಂದ್ಯವೊಂದರಲ್ಲಿ ಎರಡು ತಂಡದ ನಾಯಕರು ಸಹ 90ಪ್ಲಸ್ ರನ್ ಸಿಡಿಸಿದ ಹೆಗ್ಗಳಿಕೆಗೆ ಮುಂಬೈನ ರೋಹಿತ್, ಆರ್ ಸಿಬಿ ಕೊಹ್ಲಿ ಪಾತ್ರರಾದರು. ಅಲ್ಲದೇ ಕೊಹ್ಲಿ 54 ಅರ್ಧಶತಕ ಸಿಡಿಸಿ ಐಪಿಎಲ್ ಅತಿ ಹೆಚ್ಚು ಅರ್ಧ ಶತಕ ಸಿಡಿಸಿದ ಬ್ಯಾಟ್ಸ್ ಮನ್ ಎನ್ನುವ ಗಿರಿಮೆಗೆ ಪಾತ್ರರಾದರು.

    51 ದಿನಗಳ ಕಾಲ ನಡೆದ ದೇಶಿಯ ಕ್ರಿಕೆಟ್ ಹಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ಅಲ್ಲದೇ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಹಾಗೂ ಅನುಭವಿ ಆಟಗಾರರಿಗೂ ತಮ್ಮ ಸಾಮಥ್ರ್ಯ ಪ್ರದರ್ಶಿಸುವ ವೇದಿಕೆಯಾಗಿ ನಿರ್ಮಾಣವಾಗಿತ್ತು.

  • 2018 ಐಪಿಎಲ್ ವಿನ್ನರ್, ರನ್ನರ್ ತಂಡಕ್ಕೆ ಸಿಗುತ್ತೆ ಕೋಟಿ ಕೋಟಿ ಹಣ!

    2018 ಐಪಿಎಲ್ ವಿನ್ನರ್, ರನ್ನರ್ ತಂಡಕ್ಕೆ ಸಿಗುತ್ತೆ ಕೋಟಿ ಕೋಟಿ ಹಣ!

    ಮುಂಬೈ: 50 ದಿನಗಳ ಐಪಿಎಲ್ ಕ್ರಿಕೆಟ್ ಹಬ್ಬ ಮುಕ್ತಾಯದ ಹಂತ ತಲುಪಿದ್ದು ಟೂರ್ನಿಯಲ್ಲಿ ಕಪ್ ಗೆಲ್ಲುವ ತಂಡ ಕಳೆದ ಬಾರಿಗಿಂತ ಅಧಿಕ ಮೊತ್ತದ ಹಣ ಪಡೆಯಲಿದೆ.

    ಟೂರ್ನಿಯಲ್ಲಿ ಹ್ಯಾಟ್ರಿಕ್ ಕಪ್ ಕನಸು ಕಾಣುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವ ವಿಶ್ವಾಸದಲ್ಲಿದೆ. ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಹೈದರಾಬಾದ್ ತಂಡ ಎರಡನೇ ಬಾರಿಗೆ ಕಪ್ ಗೆಲ್ಲುವ ಆತ್ಮ ವಿಶ್ವಾಸಹೊಂದಿದೆ.

    ಈ ಬಾರಿ ಟೂರ್ನಿಯಲ್ಲಿ ಗೆದ್ದ ತಂಡ ಕಳೆದ ಬಾರಿಗಿಂತ 5 ಕೋಟಿ ರೂ. ಅಧಿಕ ಹಣ ಪಡೆಯಲಿದ್ದು, ಒಟ್ಟಾರೆ 20 ಕೋಟಿ ರೂ. ಪಡೆಯಲಿದೆ. ಟೂರ್ನಿಯ ರನ್ನರ್ ಅಪ್ 12.5 ಕೋಟಿ ರೂ. ಪಡೆಯಲಿದೆ. ಇದರೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಲೀಗ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

    ಇದರೊಂದಿಗೆ ವೈಯಕ್ತಿಕವಾಗಿ ನೀಡುವ ಅತ್ಯುತ್ತಮ ಆಟಗಾರ (ಎಂವಿಪಿ) ಪ್ರಶಸ್ತಿ ಸೇರಿದಂತೆ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಹಾಗೂ ರನ್ ಗಳಿಸಿದ ಆಟಗಾರರಿಗೆ ತಲಾ 10 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಟೂರ್ನಿಯ ವಿಶೇಷ ಬಹುಮಾನ ಎಂದೇ ಕರೆಯಲಾಗುವ ಯುವ ಉದಯೋನ್ಮುಖ ಆಟಗಾರರ ಸಹ 10 ಲಕ್ಷ ರೂ. ಬಹುಮಾನ ಪಡೆಯಲಿದ್ದಾರೆ.

    ಉಳಿದಂತೆ ಟೂರ್ನಿಯಲ್ಲಿ ನೀಡಲಾಗುವ ಉತ್ತಮ ಕ್ಯಾಚ್ ಪಡೆದ ಆಟಗಾರನಿಗೆ 10 ಲಕ್ಷ ರೂ. ಎಫ್‍ಬಿಬಿ ಸ್ಟೈಲಿಷ್ ಆಟಗಾರನಿಗೆ 10 ಲಕ್ಷ ರೂ., ಸ್ಟಾರ್ ಪ್ಲಸ್ ನಯಿ ಸೋಚ್ ಸೀಸನ್ ಆವಾರ್ಡ್ ಸಹ 10 ಲಕ್ಷ ರೂ. ಹೊಂದಿದೆ.

  • ಒಂದೇ ಬಾರಿಗೆ ನಾನು ಎಲ್ಲ ಬೈಕ್ ರೈಡ್ ಮಾಡಲಾರೆ: ಭಜ್ಜಿ ಕುರಿತ ಪ್ರಶ್ನೆಗೆ ಧೋನಿ ಉತ್ತರ

    ಒಂದೇ ಬಾರಿಗೆ ನಾನು ಎಲ್ಲ ಬೈಕ್ ರೈಡ್ ಮಾಡಲಾರೆ: ಭಜ್ಜಿ ಕುರಿತ ಪ್ರಶ್ನೆಗೆ ಧೋನಿ ಉತ್ತರ

    ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪತ್ರಿಕಾಗೋಷ್ಠಿಯಲ್ಲಿ ಸಿಎಸ್‍ಕೆ ಬೌಲರ್ ಹರ್ಭಜನ್ ಸಿಂಗ್ ಕುರಿತು ಪ್ರಶ್ನೆಗೆ ಉತ್ತರಿಸಿ ತನ್ನ ಬಳಿ ಇರುವ ಎಲ್ಲಾ ಬೈಕ್‍ಗಳನ್ನು ಒಮ್ಮೆಲೆ ರೈಡ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಅಂದಹಾಗೆ ಐಪಿಎಲ್ ಫೈನಲ್ ಪಂದ್ಯದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಧೋನಿ ಅವರಿಗೆ ಪತ್ರಕರ್ತರು ಹರ್ಭಜನ್ ಸಿಂಗ್ ಅವರಿಗೆ ಟೂರ್ನಿಯಲ್ಲಿ ಹೆಚ್ಚಿನ ಓವರ್ ಬೌಲ್ ಮಾಡಲು ನೀಡದಿರುವ ಕುರಿತು ಪ್ರಶ್ನಿಸಿದ್ದರು. ಈ ವೇಳೆ ಧೋನಿ ಕಾರು ಬೈಕ್ ಗಳ ಉದಾಹಣೆಯೊಂದಿಗೆ ಹೇಳಿಕೆ ನೀಡಿ ಎಲ್ಲರನ್ನು ನಗೆಗಾಡಲಲ್ಲಿ ತೇಲುವಂತೆ ಮಾಡಿದ್ದಾರೆ.

    ನನ್ನ ಮನೆಯಲ್ಲಿ ಹಲವು ಬೈಕ್ ಹಾಗೂ ಕಾರುಗಳಿದೆ. ಆದರೆ ಒಂದೇ ಸಮಯದಲ್ಲಿ ಅವುಗಳೆಲ್ಲವನ್ನು ಚಲಾಯಿಸಲು ಸಾಧ್ಯವಿಲ್ಲ. ತಂಡದಲ್ಲಿ 6 ರಿಂದ 7 ಬೌಲರ್ ಗಳು ಇರುವ ವೇಳೆ ಪಂದ್ಯದ ಪರಿಸ್ಥಿತಿಗಳು, ಎದುರಾಳಿ ಬ್ಯಾಟ್ಸ್ ಮನ್ ಯಾರು ಎಂಬ ಎಲ್ಲ ಅಂಶಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಉತ್ತರಿಸಿದರು.

    ಈ ಹಿಂದಿನ ಟೂರ್ನಿಗಳಲ್ಲಿ ತಂಡದಲ್ಲಿ ನೇಗಿ ಮತ್ತು ಜಡೇಜಾ ಅವರಿಗೂ ಭಿನ್ನ ಸಂದರ್ಭಗಳಲ್ಲಿ ಬೌಲ್ ಮಾಡಲು ಅವಕಾಶ ನೀಡಿದ್ದೇನೆ. ಪಂದ್ಯದ ಪರಿಸ್ಥಿತಿ ಹಾಗೂ ಎದುರಾಳಿ ಆಟಗಾರರ ಸಾಮರ್ಥ್ಯವನ್ನು ಗಮನಿಸಿ ಬೌಲಿಂಗ್ ನಿರ್ಧರಿಸುತ್ತೇನೆ. ಈ ಹಿಂದಿನ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಬೌಲಿಂಗ್ ಅಗತ್ಯವಾಗಿದ್ದರಿಂದ ಅವಕಾಶ ನೀಡಿದ್ದೆ. ಆದರೆ ಕ್ರಿಕೆಟ್ ನ ಎಲ್ಲಾ ಮಾದರಿಯ ಪಂದ್ಯಗಳನ್ನು ಗಮನಿಸಿದರೆ ಹರ್ಭಜನ್ ಹೆಚ್ಚಿನ ಅನುಭವ ಪಡೆದ ಆಟಗಾರರಾಗಿದ್ದಾರೆ ಎಂದು ವಿವರಿಸಿದರು.

    ಈ ಬಾರಿ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಸ್ಪೀನ್ ಬೌಲರ್ ಎನಿಸಿಕೊಂಡಿದ್ದ ಹರ್ಭಜನ್ 13 ಪಂದ್ಯಗಳಲ್ಲಿ ಆಡಿದ್ದು, 8.48 ರ ಸರಾಸರಿಯಲ್ಲಿ 7 ವಿಕೆಟ್ ಪಡೆದಿದ್ದಾರೆ.

  • ಭಾರತೀಯರಿಗೆ  ಧನ್ಯವಾದ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

    ಭಾರತೀಯರಿಗೆ ಧನ್ಯವಾದ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

    ನವದೆಹಲಿ: ಅಫ್ಘಾನಿಸ್ತಾನದ ಅಧ್ಯಕ್ಷರಾದ ಅಶ್ರಫ್ ಘನಿ ಟ್ವೀಟ್ ಮಾಡುವ ಮೂಲಕ ಭಾರತೀಯರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಶುಕ್ರವಾರ ಈಡನ್ ಗಾರ್ಡನ್ ನಲ್ಲಿ ನಡೆದ ಎಲಿಮಿನೇಟರ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಆಲ್‍ರೌಂಡರ್ ಪ್ರದರ್ಶನ ತೋರುವ ಮೂಲಕ ರಶೀದ್ ಖಾನ್ ಕ್ರೀಡಾಂಗಣದಲ್ಲಿ ಮಿಂಚಿದ್ರು.

    ತನ್ನ ಮಾತೃ ತಂಡ ಸನ್‍ರೈಸರ್ಸ್ ಹೈದರಾಬಾದ್ ಗೆಲುವುಗಾಗಿ ರಶೀದ್ ಖಾನ್‍ಗೆ ಆಲ್‍ರೌಂಡರ್ ಪ್ರರ್ದಶನ ತೋರಿದ್ದಾರೆ. ಮೂಲತಃ ರಶೀದ್ ಖಾನ್ ಅಫ್ಘಾನಿಸ್ತಾನದ ಆಟಗಾರ. ಹೀಗಾಗಿ ಅಲ್ಲಿನ ರಾಷ್ಟ್ರಾಧ್ಯಕ್ಷ ಅಶ್ರಫ್ ಘನಿ ಅವರು ತಮ್ಮ ದೇಶದ ಪ್ರತಿಭೆಗೆ ಅವಕಾಶ ನೀಡಿದ್ದಕ್ಕಾಗಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಹಂತದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎದುರು 14 ರನ್ ಅಂತರದಲ್ಲಿ ಗೆಲವು ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‍ರೈಸರ್ಸ್ ತಂಡದ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿತ್ತು. ರಶೀದ್ ಖಾನ್ ಅವರು ಔಟ್ ಆಗದೆ 10 ಎಸೆತದಲ್ಲಿ 4 ಸಿಕ್ಸ್, 2 ಬೌಂಡರಿ ಮೂಲಕ 34 ರನ್ ಕಲೆ ಹಾಕುವ ಮೂಲಕ ತಂಡದ ಬೃಹತ್ ಮೊತ್ತಗೆ ಸಹಾಯವಾದರು. ಅವರ ಅಮೋಘ ಬ್ಯಾಟಿಂಗ್ ಶೈಲಿ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

    ಬೃಹತ್ ಮೊತ್ತವನ್ನು ಬೆನ್ನಟ್ಟಿ ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತ ತಂಡವನ್ನು 20 ಓವರ್‍ಗಳಲ್ಲಿ 160 ರನ್‍ಗೆ ಕಟ್ಟಿ ಹಾಕಲು ಹೈದರಾಬಾದ್ ತಂಡದ ಬೌಲರ್‍ಗಳು ಯಶಸ್ವಿಯಾದರು. ರಶೀದ್ ಖಾನ್ ಬೌಲಿಂಗ್‍ನಲ್ಲಿಯೂ ಮಿಂಚಿದ್ದಾರೆ. ಒಟ್ಟು 4 ಓವರ್ ಬೌಲ್ ಮಾಡಿದ ಅವರು ಕೇವಲ 19 ರನ್ ನೀಡಿ 4 ವಿಕೆಟ್ ಪಡೆದಿದ್ರು ತಂಡದ ಗೆಲುವಿಗೆ ಕಾರಣರಾದ್ರು.

    ಅಫ್ಘಾನಿಸ್ತಾನ ಜಲಾಲಾಬಾದ್‍ನ 19 ವರ್ಷದ ಆಟಗಾಗರಾಗಿರುವ ರಶೀದ್ ಖಾನ್ ಬಗ್ಗೆ ಅಲ್ಲಿನ ರಾಷ್ಟ್ರಾಧ್ಯಕ್ಷರು ಆಶ್ರಫ್ ಘನಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಮ್ಮ ಹೀರೋ ರಶೀದ್ ಖಾನ್ ಕುರಿತು ಅಫ್ಘಾನಿಸ್ತಾನ ಹೆಮ್ಮೆ ಪಡುತ್ತದೆ. ಅಲ್ಲದೇ ನಮ್ಮ ನೆಲದ ಪ್ರತಿಭೆಗೆ ವೇದಿಕೆ ಒದಗಿಸಿಕೊಟ್ಟ ನನ್ನ ಭಾರತೀಯ ಸಹೋದರರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.