Tag: IPL

  • ಪಾಕ್ ಆಟಗಾರರಿಗೆ ಐಪಿಎಲ್‍ನಲ್ಲಿ ಅವಕಾಶ ನೀಡಬೇಕು – ಪಿಸಿಬಿ ನಿರ್ದೇಶಕ ವಾಸೀಂ ಖಾನ್

    ಪಾಕ್ ಆಟಗಾರರಿಗೆ ಐಪಿಎಲ್‍ನಲ್ಲಿ ಅವಕಾಶ ನೀಡಬೇಕು – ಪಿಸಿಬಿ ನಿರ್ದೇಶಕ ವಾಸೀಂ ಖಾನ್

    ಕರಾಚಿ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನೂತನ ನಿರ್ದೇಶಕರಾಗಿ ಆಯ್ಕೆ ಆಗಿರುವ ವಾಸೀಂ ಖಾನ್ ಪಾಕ್ ಆಟಗಾರರಾಗಿಗೆ ಐಪಿಎಲ್ ನಲ್ಲಿ ಆಡಲು ಅವಕಾಶ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಬೋರ್ಡ್ ನಿರ್ದೇಶಕರಾಗಿ ಆಯ್ಕೆ ಆದ ಬಳಿಕ ತಮ್ಮ ಮುಂದಿನ ಉದ್ದೇಶಗಳ ಬಗ್ಗೆ ಮಾತನಾಡಿರುವ ವಾಸೀಂ ಖಾನ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದು ನನ್ನ ಉದ್ದೇಶವಾಗಿದೆ. ಎರಡು ಕ್ರಿಕೆಟ್ ಮಂಡಳಿಗಳು ಉತ್ತಮ ಸಂಬಂಧ ಸಾಧಿಸುವುದು ಅಗತ್ಯವಾಗಿದ್ದು, ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಪಾಕ್ ಆಟಗಾರರಿಗೆ ಕೂಡ ಐಪಿಎಲ್ ಸ್ವಾಗತ ನೀಡಬೇಕು ಎಂದರು.

    ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ವಿವಾದಗಳು ಕ್ರಿಕೆಟ್ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದು, ಎರಡು ರಾಷ್ಟ್ರಗಳ ಕ್ರಿಕೆಟ್ ಸಂಬಂಧ ಹಿಂದುಳಿಯಲು ಕಾರಣವಾಗಿದೆ. ಅದರಿಂದ ವಿವಾದಗಳನ್ನು ಬದಿಗೊತ್ತಿ ಕ್ರಿಕೆಟ್‍ಗೆ ಹೆಚ್ಚಿನ ಪ್ರಮುಖ್ಯತೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ 2008 ರಲ್ಲಿ ಪಾಕಿಸ್ತಾನ ಆಟಗಾರರು ಐಪಿಎಲ್ ನಲ್ಲಿ ಭಾಗವಹಿಸಿದ್ದರು, ಆದರೆ ಮುಂಬೈ ದಾಳಿ ನಡೆದ ಬಳಿಕ ಸಂಪೂರ್ಣವಾಗಿ ಪಾಕ್ ಆಟಗಾರರನ್ನು ಐಪಿಎಲ್‍ನಿಂದ ಕೈ ಬಿಡಲು ಭಾರತ ಸರ್ಕಾರ ನಿರ್ದೇಶಿಸಿತ್ತು. ಅಲ್ಲದೇ ಕೆಲ ದಿನಗಳ ಹಿಂದೆಯಷ್ಟೇ ದ್ವಿಪಕ್ಷೀಯ ಸರಣಿ ಆಡದ ಕಾರಣ ಬಿಸಿಸಿಐ ತಮಗೆ 70 ದಶಲಕ್ಷ ಡಾಲರ್ (ಅಂದಾಜು 471 ಕೋಟಿ ರೂ.) ಪರಿಹಾರ ನೀಡಬೇಕೆಂದು ಐಸಿಸಿಯಲ್ಲಿ ಪಾಕ್ ದಾಖಲಿಸಿದ್ದ ಪ್ರಕರಣವನ್ನು ಐಸಿಸಿ ವಜಾ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವರಾಜ್ ಸಿಂಗ್ ಮೇಲೆ ಅನುಕಂಪ ತೋರಿದ ಮುಂಬೈ ಇಂಡಿಯನ್ಸ್

    ಯುವರಾಜ್ ಸಿಂಗ್ ಮೇಲೆ ಅನುಕಂಪ ತೋರಿದ ಮುಂಬೈ ಇಂಡಿಯನ್ಸ್

    – ರೋಹಿತ್‍ಗೆ ವಿಶೇಷ ಸಂದೇಶ ರವಾನಿಸಿದ ಯುವಿ

    ಜೈಪುರ: ಟೀಂ ಇಂಡಿಯಾದ ಸ್ಫೋಟಕ ಆಟಗಾರ, ವಿಶ್ವಕಪ್ ಹೀರೋ ಎಂದೇ ಖ್ಯಾತಿ ಪಡೆದಿದ್ದ ಯುರಾಜ್ ಸಿಂಗ್‍ಗೆ ಅವರಿಗೆ ಈ ಬಾರಿ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಜೀವದಾನ ನೀಡಿದ್ದು, ಯುವಿ ಮೂಲ ಬೆಲೆ 1 ಕೋಟಿ ರೂ. ಗೆ ಖರೀದಿ ಮಾಡಿದೆ.

    ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯುವರಾಜ್ ರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಹಿಂದೇಟು ಹಾಕಿದ್ದರು. ಮೊದಲ ಸುತ್ತಿನಲ್ಲಿ ಯುವಿರನ್ನು ಖರೀದಿ ಮಾಡಲು ಯಾವ ತಂಡಗಳು ಮುಂದೆ ಬರಲಿಲ್ಲ. ಬಳಿಕ 2ನೇ ಸುತ್ತಿನಲ್ಲಿ ಮುಂಬೈ ಖರೀದಿ ಮಾಡಿತು. ಈಗಾಗಲೇ 2019ರ ವಿಶ್ವಕಪ್ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಸಿದ್ಧತೆಯಲ್ಲಿ ಇರುವ ಯುವಿ, ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಒತ್ತಡದಲ್ಲಿದ್ದಾರೆ.

    ಇತ್ತ ಮುಂಬೈ ತಂಡ ಯುವಿರನ್ನು ಆಯ್ಕೆ ಮಾಡುತ್ತಿದಂತೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಯುವರಾಜ್ ಸಿಂಗ್ ಮುಂಬೈ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ನಾಯಕ ರೋಹಿತ್ ಶರ್ಮಾಗೆ ವಿಶೇಷ ಸಂದೇಶ ನೀಡಿರುವ ಯುವಿ, ಮುಂದಿನ ಟೂರ್ನಿಗಾಗಿ ಕಾಯುತ್ತಿದ್ದು, ಬಹು ಬೇಗ ಭೇಟಿ ಆಗೋಣ ಎಂದು ಶರ್ಮಾಗೆ ತಿಳಿಸಿದ್ದಾರೆ.

    ಐಪಿಎಲ್ ಆರಂಭದಲ್ಲಿ ಬಹು ಬೇಡಿಕೆಯ ಆಟಗಾರರಾಗಿದ್ದ ಯುವಿ ಸತತ ವೈಫಲ್ಯ ಆನುಭವಿಸಿದ ಕಾರಣ ಬೇಡಿಕೆ ಕಳೆದುಕೊಂಡರು. ಮಹಾಮಾರಿ ಕ್ಯಾನ್ಸರ್ ನಿಂದ ಗೆದ್ದು ಬಂದ ಬಳಿಕ ಯುವಿ ಮತ್ತೆ ಕ್ರಿಕೆಟ್‍ನಲ್ಲಿ ತಮ್ಮ ಹಿಂದಿನ ಲಯ ಕಂಡುಕೊಳ್ಳಲು ಸಾಕಷ್ಟು ಅಭ್ಯಾಸ ನಡೆಸಿದ್ದರು.

    ತಮ್ಮ ವೃತ್ತಿ ಜೀವನದ ಅತ್ಯುನ್ನತ್ತ ಶಿಖರದಲ್ಲಿರುವಾಗ ಯುವಿ 2014 ರಲ್ಲಿ ಬರೋಬ್ಬರಿ 16 ಕೋಟಿ ರೂ. ಹಾಗೂ 2015ರಲ್ಲಿ 16 ಕೋಟಿ ರೂ. ಗಳಿಗೆ ಹರಾಜುಗೊಳ್ಳುವ ಮೂಲಕ ದುಬಾರಿ ಆಟಗಾರನೆಂಬ ದಾಖಲೆ ಬರೆದಿದ್ದರು. ಆದರೆ ಆ ಬಳಿಕ 2017, 2018, 2019 ರಲ್ಲಿ ಕ್ರಮವಾಗಿ 7, 2, 1 ಕೋಟಿ ರೂ.ಗೆ ಹರಾಜು ಆಗಿದ್ದರು.

    ಯುವಿ ಟೀಂ ಇಂಡಿಯಾ ಪರ 2017 ಜೂನ್‍ನಲ್ಲಿ ಅಂತಿಮ ಪಂದ್ಯವಾಡಿದ್ದರು. ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು. ಆದರೆ ಟೂರ್ನಿಯಲ್ಲಿ 8 ಇನ್ನಿಂಗ್ಸ್ ಗಳಿಂದ ಕೇವಲ 65 ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು. ಉಳಿದಂತೆ ಮುಂಬೈ ಇಂಡಿಯನ್ಸ್ ತಂಡ ಶ್ರೀಲಂಕಾದ ಹಿರಿಯ ಅನುಭವಿ ಆಟಗಾರ ಲಸಿತ್ ಮಾಲಿಂಗರನ್ನು ಖರೀದಿ ಮಾಡಿದ್ದು, ಮತ್ತೊಮ್ಮೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 2019 ಐಪಿಎಲ್ ಹರಾಜು: ಹೆಚ್ಚು ಮೊತ್ತಕ್ಕೆ ಹರಾಜದ ಟಾಪ್ 5 ಯುವ ಆಟಗಾರರು

    2019 ಐಪಿಎಲ್ ಹರಾಜು: ಹೆಚ್ಚು ಮೊತ್ತಕ್ಕೆ ಹರಾಜದ ಟಾಪ್ 5 ಯುವ ಆಟಗಾರರು

    ಜೈಪುರ: 2019ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಭಾರತೀಯ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಲಭಿಸಿದ್ದು, ಟೂರ್ನಿಯ 8 ತಂಡಗಳು ಹೊಸ ಮುಖಗಳನ್ನು ಖರೀದಿ ಮಾಡುವ ಮೂಲಕ ತಂಡದ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿವೆ.

    ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಪರ ಇದುವರೆಗೂ ಆಡದ ಆಟಗಾರರು ಕೂಡ ಹೆಚ್ಚಿನ ಮೊತ್ತವನ್ನು ಪಡೆದಿದ್ದಾರೆ. ಇದರಲ್ಲಿ ತಮಿಳುನಾಡಿನ ವರುಣ್ ಚಕ್ರವರ್ತಿ ಮೊದಲ ಸ್ಥಾನದಲ್ಲಿದ್ದು, ಪಂಜಾಬ್ ತಂಡ 8.4 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಉಳಿದಂತೆ ಟಾಪ್ 5 ಆಟಗಾರರ ಪಟ್ಟಿ ಇಂತಿದೆ.

    ವರುಣ್ ಚಕ್ರವರ್ತಿ – 8.4 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ತಮಿಳುನಾಡಿನ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಬಾರಿ ಹೆಚ್ಚು ಮೊತ್ತ ಗಳಿಸಿದ ಆಟಗಾರರಾಗಿದ್ದು, ಈ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಪಂಜಾಬ್, ಕೋಲ್ಕತ್ತಾ ಹಾಗೂ ಚೆನ್ನೈ ತಂಡಗಳ ನಡುವೆ ಉಂಟಾದ ಪೈಪೋಟಿಯಿಂದ ವರುಣ್ ಹೆಚ್ಚಿನ ಮೊತ್ತಕ್ಕೆ  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ  ಖರೀದಿ ಮಾಡಿದೆ.

    ಶಿವಂ ದುಬೆ – 5 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಮಹಾರಾಷ್ಟ್ರ ತಂಡದ ಆಲ್‍ರೌಂಡರ್ ಆಗಿರುವ ಶಿವಂ ದುವೆ ಹರಾಜು ಪ್ರಕ್ರಿಯೆ ಮುನ್ನವೇ ಚರ್ಚೆಗೆ ಕಾರಣರಾಗಿದ್ದರು. ಏಕೆಂದರೆ ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ದುಬೆ, 489 ರನ್ ಗಳಿಸಿ 17 ವಿಕೆಟ್ ಕೂಡ ಪಡೆದಿದ್ದರು. ಅಲ್ಲದೇ ಎಲ್ಲಾ ಐಪಿಎಲ್ ತಂಡಗಳು ದುಬೆರನ್ನು ಖರೀದಿ ಮಾಡಲು ಉತ್ಸಾಹ ತೋರಿತ್ತು. ಅಂತಿಮವಾಗಿ ಆರ್‌ಸಿಬಿ ತಂಡ 5 ಕೋಟಿ ರೂ. ನೀಡಿ ಅವರನ್ನು ಖರೀದಿ ಮಾಡಿದೆ.

    ಪ್ರಭಾಸಿಮ್ರನ್ ಸಿಂಗ್ – 4.8 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಪೂರ್ವ ನಿಗದಿ ಎಂಬಂತೆ ಹರಾಜು ಪ್ರಕ್ರಿಯೆ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರಭಾಸಿಮ್ರನ್ ಸಿಂಗ್‍ರನ್ನು ಖರೀದಿ ಮಾಡಿದೆ. 4.8 ಕೋಟಿ ರೂ. ಮೊತ್ತಕ್ಕೆ ಪಂಜಾಬ್ ತಂಡ ಪ್ರಭಾಸಿಮ್ರನ್‍ರನ್ನು ಖರೀದಿ ಮಾಡಿದ್ದು, ಈ ಮೂಲಕ ಎಲ್ಲ ಫ್ರಾಂಚೈಸಿಗಳಿಗೂ ಹೆಚ್ಚು ಪೈಪೋಟಿ ನೀಡಿತು. ವಿಕೆಟ್ ಕೀಪರ್ ಹಾಗು ಬ್ಯಾಟ್ಸ್ ಮನ್ ಆಗಿರುವ ಪ್ರಭಾಸಿಮ್ರನ್ ಅಂಡರ್ 23 ಟೂರ್ನಿಯ ಪಂದ್ಯದಲ್ಲಿ ಇತ್ತೀಚೆಗಷ್ಟೇ 298 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ 2017-18ರ ಕೂಚ್ ಬಿಹಾರ್ ಟ್ರೋಫಿಯಲ್ಲಿ ಪಂಜಾಬ್ ಪರ 547 ರನ್ ಗಳಿಸಿದ್ದರು.

    ಅಕ್ಷದೀಪ್ ನಾಥ್ – 3.6 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಉತ್ತರ ಪ್ರದೇಶದ ಆಲ್‍ರೌಂಡರ್ ಆಗಿರುವ ಅಕ್ಷದೀಪ್ ನಾಥ್ ಯುಪಿಯ ಅಂಡರ್ 19 ತಂಡದ ನಾಯಕರಾಗಿ 2011-12ರಲ್ಲಿ ವಿನೂ ಮಕಂಡ್ ಟ್ರೋಫಿಯಲ್ಲಿ ತಂಡದವನ್ನು ಚಾಂಪಿಯನ್ ಆಗಿಸಿದ್ದರು. 2016 ರಿಂದಲೂ ಐಪಿಎಲ್ ಭಾಗವಾಗಿದ್ದರೂ ಸರಿಯಾದ ಅವಕಾಶಗಳನ್ನು ಪಡೆದಿಲ್ಲ. ಆದರೆ ಈ ಬಾರಿ ಆರ್‌ಸಿಬಿ ತಂಡ ಈ ಬಾರಿ 3.6 ಕೋಟಿ ರೂ ನೀಡಿ ಅಕ್ಷದೀಪ್ ನಾಥ್ ರನ್ನು ಖರೀದಿ ಮಾಡಿದೆ. ಬಲಗೈ ಮಧ್ಯಮ ವೇಗಿಯಾಗಿರುವ ಅಕ್ಷದೀಪ್ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕ ಬ್ಯಾಟಿಂಗ್‍ಗೆ ಶಕ್ತಿ ತುಂಬವ ಸಾಮಥ್ರ್ಯ ಹೊಂದಿದ್ದಾರೆ. ಇತ್ತೀಚೆಗೆ ಅಂತ್ಯವಾದ ರಣಜಿ ಟ್ರೋಫಿಯಲ್ಲಿ ಅಕ್ಷದೀಪ್ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿದ್ದರು.

    ಪ್ರಯಾಸ್ ರೇ ಬರ್ಮನ್ – 1.5 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ ಕೇವಲ 16 ವರ್ಷದ ವಯಸ್ಸಿನವರಾಗಿದ್ದು, ವಿಜಯ್ ಹಜಾರೆ ಟ್ರೋಪಿಯಲ್ಲಿ 11 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೇ ಜಮ್ಮು ಕಾಶ್ಮೀರದ ವಿರುದ್ಧ 4 ವಿಕೆಟ್ ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಆದರೆ ಈ ಬಾರಿ ಅಚ್ಚರಿ ಎಂಬಂತೆ ಆರ್‌ಸಿಬಿ 1.5 ಕೋಟಿ ರೂ. ನೀಡಿ ಪ್ರಯಾಸ್‍ರನ್ನು ಖರೀದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಪಿಎಲ್ ಅಚ್ಚರಿ: ಮಿಲಿಯನ್ ಡಾಲರ್ ಬೇಬಿ ವರುಣ್ ಚಕ್ರವರ್ತಿ!

    ಐಪಿಎಲ್ ಅಚ್ಚರಿ: ಮಿಲಿಯನ್ ಡಾಲರ್ ಬೇಬಿ ವರುಣ್ ಚಕ್ರವರ್ತಿ!

    ಜೈಪುರ: 2019ರ ಐಪಿಎಲ್ ಭಾರತೀಯ ಕ್ರಿಕೆಟರ್‍ಗಳ ಪಾಲಿನ ಅತ್ಯುತ್ತಮ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಕರೆಯಬಹುದಾಗಿದ್ದು, ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಹೆಚ್ಚು ಯುವ ಆಟಗಾರು ಕೋಟಿ ಕೋಟಿ ರೂ. ಮೊತ್ತಕ್ಕೆ ಹರಾಜು ಆಗುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

    ಐಪಿಎಲ್ ಅಚ್ಚರಿಯ ಸಾಲಿಗೆ ಸೇರಿದ ಮತ್ತೊಬ್ಬ ಯುವ ಆಟಗಾರ ವರುಣ್ ಚಕ್ರವರ್ತಿ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬರೋಬ್ಬರಿ 8.4 ಕೋಟಿ ರೂ.ಗೆ ಖರೀದಿ ಮಾಡಿದೆ. 27 ವರ್ಷದ ವರುಣ್ ತಮಿಳುನಾಡು ತಂಡದ ಆಟಗಾರರಾಗಿದ್ದು, ಕಳೆದ ವರ್ಷದ ವಿಜಯ್ ಹಜರೆ ಟ್ರೋಫಿ ಹಾಗೂ ಈ ವರ್ಷದ ತಮಿಳುನಾಡು ಪ್ರೀಮಿಯರ್ ಲೀಗ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿರುವ ವರುಣ್ ಚಕ್ರವರ್ತಿ, ಪ್ರೀಮಿಯರ್ ಲೀಗ್ ಬಳಿಕ ನನಗೆ ಹೆಚ್ಚಿನ ಅವಕಾಶಗಳು ಲಭಿಸುವ ಬಗ್ಗೆ ಆತ್ಮವಿಶ್ವಾಸ ಇತ್ತು. ಆದರೆ ಪಂಜಾಬ್ ತಂಡ ಇಷ್ಟು ಮೊತ್ತಕ್ಕೆ ನನ್ನನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ನಾನು ಊಹೆ ಕೂಡ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

    ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಬೌಲರ್ ಎಂದು ಗುರುತಿಸಿಕೊಂಡಿದ್ದ ವರುಣ್, 22 ವಿಕೆಟ್ ಪಡೆಯುವ ಮೂಲಕ 4.23 ಎಕಾನಮಿಯಲ್ಲಿ ಟೂರ್ನಿಯ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದರು. ಅಲ್ಲದೇ ವರುಣ್ 8 ಶೈಲಿಯಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

    ಸದ್ಯ ನಾನು ಐದು ಶೈಲಿಗಳನ್ನು ಮಾತ್ರ ಇದುವರೆಗೂ ಆಟದಲ್ಲಿ ಪ್ರಯೋಗ ಮಾಡಿದ್ದು, ಸ್ಟ್ರೈಟ್, ಇನ್ ಸ್ವಿಂಗ್, ಔಟ್ ಸ್ವಿಂಗ್, ಫ್ಲಿಪರ್, ಝೂಟರ್ ಶೈಲಿಗಳಲ್ಲಿ ಎಸೆದಿದ್ದೇನೆ. ಮತ್ತು ಕೆಲ ಬದಲಾವಣೆಗಳನ್ನು ನನ್ನ ಬೌಲಿಂಗ್‍ನಲ್ಲಿ ಕಾಣಬಹುದು. ಕಳೆದ 2 ವರ್ಷಗಳಲ್ಲಿ ನನ್ನ ಬೌಲಿಂಗ್‍ನಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಸಿಕ್ಕ ಎಲ್ಲಾ ಜವಾಬ್ದಾರಿಗಳನ್ನು ಸಾಮರ್ಥವಾಗಿ ನಿಭಾಯಿಸಿದ್ದಾಗಿ ವರುಣ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ನೆಟ್ ಬೌಲರ್ ಆಗಿಯೂ ವರುಣ್ ಕಾರ್ಯನಿರ್ವಹಿಸಿದ್ದರು. ಹರಾಜು ಪ್ರಕ್ರಿಯೆ ವೇಳೆ ಇತ್ತಂಡಗಳು ಪಂಜಾಬ್ ತಂಡಕ್ಕೆ ಪೈಪೋಟಿ ನೀಡಿದ ಕಾರಣ ವರುಣ್ ಕೋಟಿ ಕೋಟಿ ರೂ. ಹಣಗಳಿಸಲು ಕಾರಣವಾಯಿತು.

    ಆರ್ ಅಶ್ವಿನ್ ಮುಂದಾಳತ್ವದ ಪಂಜಾಬ್ ಅಂತಿಮವಾಗಿ ವರುಣ್‍ರನ್ನು ಪಡೆಯಲು ಸಫಲವಾಯಿತು. 1991 ರಲ್ಲಿ ಜನಿಸಿರುವ ವರುಣ್ 9 ಲಿಸ್ಟ್ `ಎ’ ಪಂದ್ಯಗಳನ್ನು ಆಡಿದ್ದು, 22 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಏಕೈಕ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದಾರೆ. ಅಂದಹಾಗೇ ಈ ಬಾರಿ ಪಂಜಾಬ್ ಪರ ದುಬಾರಿ ಪ್ಲೇಯರ್ ಕೂಡ ಆಗಿದ್ದಾರೆ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 16ನೇ ವರ್ಷಕ್ಕೆ ಕೋಟ್ಯಾಧಿಪತಿಯಾದ ಪ್ರಯಾಸ್ – ಆರ್‌ಸಿಬಿ ಖರೀದಿ ಮಾಡಿದ್ದು ಯಾಕೆ?

    16ನೇ ವರ್ಷಕ್ಕೆ ಕೋಟ್ಯಾಧಿಪತಿಯಾದ ಪ್ರಯಾಸ್ – ಆರ್‌ಸಿಬಿ ಖರೀದಿ ಮಾಡಿದ್ದು ಯಾಕೆ?

    ಜೈಪುರ: 2019ರ ಐಪಿಎಲ್ ಆವೃತ್ತಿಯಲ್ಲಿ ಭಾರತದ ಯುವ ಆಟಗಾರರು ಹೆಚ್ಚಿನ ಅವಕಾಶಗಳನ್ನು ಪಡೆದಿದ್ದು, 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ 16 ವರ್ಷದ ಪ್ರಯಾಸ್ ರೇ ಬರ್ಮನ್ ಬರೋಬ್ಬರಿ 1.5 ಕೋಟಿ ರೂ.ಗೆ ಹರಾಜು ಆಗುವ ಮೂಲಕ ದಾಖಲೆ ಬರೆದಿದ್ದಾರೆ.

    ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ 16 ವರ್ಷಕ್ಕೆ ಕೋಟಿ ರೂ. ಮೊತ್ತಕ್ಕೆ ಹರಾಜದ ಹೆಗ್ಗಳಿಕೆಯನ್ನು ಪಡೆದಿದ್ದು, ಆರ್‌ಸಿಬಿ ತಂಡ ಪ್ರಯಾಸ್ ಅವರನ್ನು ಖರೀದಿಸಿದೆ. ಕೇವಲ ಪ್ರಯಾಸ್ ಮಾತ್ರವಲ್ಲದೇ ಹಲವು ಯುವ ಭಾರತೀಯ ಆಟಗಾರರಿಗೆ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಹಲವು ಅಚ್ಚರಿ ಫಲಿತಾಂಶಗಳನ್ನು ನೀಡಿದೆ.

    ಯುವ ಆಟಗಾರ ಕೊಹ್ಲಿ ನಾಯಕತ್ವದ ತಂಡಕ್ಕೆ ಆಗುವ ಮೂಲಕ ತನ್ನ ಸಾಮರ್ಥ್ಯವನ್ನ ಸಾಬೀತು ಪಡಿಸಲು ಉತ್ತಮ ಅವಕಾಶವನ್ನು ಪಡೆದಿದ್ದು, `ಮಿಸ್ಟರಿ’ ಸ್ಪಿನ್ನರ್ ಎಂಬ ಹೆಸರು ಪಡೆದಿರುವ ಪ್ರಯಾಸ್ 20 ರನ್ ನೀಡಿ 4 ವಿಕೆಟ್ ಪಡೆದಿರುವುದು ಇದೂವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. 2002 ರಲ್ಲಿ ಜನಿಸಿರುವ ಪ್ರಯಾಸ್ ಬೌಲರ್ ಮಾತ್ರವಲ್ಲದೇ ಉತ್ತಮ ಆಲ್‍ರೌಂಡರ್ ಆಗಿದ್ದು, ಬಲಗೈ ಬ್ಯಾಟ್ಸ್ ಮನ್ ಕೂಡ ಆಗಿದ್ದಾರೆ.

    ಇದುವರೆಗೂ ಆಡಿರುವ 9 ಲಿಸ್ಟ್ ಪಂದ್ಯಗಳನ್ನು ಆಡಿರುವ ಪ್ರಯಾಸ್ 6 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ನಡೆಸಿ 47 ರನ್ ಗಳಿಸಿದ್ದರೆ ಹಾಗೂ ಬೌಲಿಂಗ್‍ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಉಳಿದಂತೆ ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಎಕಾನಮಿಯೊಂದಿಗೆ 11 ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲು ದೆಹಲಿ ತಂಡದ ಪರ ಆಡಿದ್ದ ಪ್ರಯಾಸ್ ಬಳಿಕ ಬೆಂಗಾಲ್ ತಂಡವನ್ನು ಸೇರಿಕೊಂಡಿದ್ದರು.

    ರಾತ್ರೋರಾತ್ರಿ ದೇಶಾದ್ಯಂತ ಸುದ್ದಿಯಾಗಿರುವ ಪ್ರಯಾಸ್ ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ನಾಯಕ ಕೊಹ್ಲಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹವಣಿಸುತ್ತದ್ದರು. ಆದರೆ ಇಂದು ಕೊಹ್ಲಿ ನಾಯಕತ್ವದ ತಂಡದಲ್ಲಿ ಸ್ಥಾನಗಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಯಾಸ್ ಆಯ್ಕೆಯ ಕುರಿತು ಭಾರೀ ಚರ್ಚೆ ಕೂಡ ನಡೆದಿದ್ದು, ಪ್ರಯಾಸ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಯದೇವ್‌ ಉನದ್ಕತ್‌ಗೆ 8.4 ಕೋಟಿ- ಯಾರು ಎಷ್ಟು ಮೊತ್ತಕ್ಕೆ ಸೇಲ್ ಆಗಿದ್ದಾರೆ?

    ಜಯದೇವ್‌ ಉನದ್ಕತ್‌ಗೆ 8.4 ಕೋಟಿ- ಯಾರು ಎಷ್ಟು ಮೊತ್ತಕ್ಕೆ ಸೇಲ್ ಆಗಿದ್ದಾರೆ?

    -ಅಚ್ಚರಿ ಮೂಡಿಸಿದ ವರುಣ್, ಶಿವಂ ದುಬೆ

    ಜೈಪುರ: ಐಪಿಎಲ್ 12ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಇಂದು ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದು, ಎಡಗೈ ವೇಗಿ ಜಯದೇವ್ ಉನದ್ಕತ್ ಅವರನ್ನು ಈ ಬಾರಿಯೂ ರಾಜಸ್ಥಾನ ರಾಯಲ್ಸ್ 8.4 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಉನದ್ಕತ್ ಅವರಿಗೆ 1.5 ಕೋಟಿ ರೂ. ಮೂಲ ಬೆಲೆ ನಿಗದಿ ಮಾಡಲಾಗಿತ್ತು.

    ಕಳೆದ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಜಯದೇವ್ ಉನದ್ಕತ್ 11.5 ಕೋಟಿ ರೂ.ಗೆ ಮಾರಾಟವಾಗಿದ್ದರು. ಇತ್ತ ವರುಣ್ ಚಕ್ರವರ್ತಿ ಆಯ್ಕೆ ಅಚ್ಚರಿ ಮೂಡಿಸಿದೆ. ಕೇವಲ 20 ಲಕ್ಷ ಮೂಲ ಬೆಲೆ ಹೊಂದಿದ್ದ ವರುಣ್‍ಗೆ 8.4 ಕೋಟಿ ರೂ. ನೀಡಿ ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿ ಮಾಡಿದೆ. 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಶಿವಂ ದುಬೆ 5 ಕೋಟಿ ರೂ.ಗೆ ಆರ್‌ಸಿಬಿಗೆ ಮಾರಾಟವಾಗಿದ್ದಾರೆ.

    ಸರ್ಫರಾಜ್ ಖಾನ್ ಅವರನ್ನು 25 ಲಕ್ಷ ರೂ.ನೀಡಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿಸಿದೆ. ಆದರೆ ಭಾರೀ ನಿರೀಕ್ಷೆ ಮೂಡಿಸಿದ್ದ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ 2 ಕೋಟಿ ರೂ. ಮೂಲ ಬೆಲೆಗೆ ಮುಂಬೈನಲ್ಲಿಯೇ ಉಳಿದುಕೊಂಡಿದ್ದಾರೆ.

    ಯುವಿಗೆ ಮೊದಲ ಬಿಡ್‍ನಲ್ಲಿ ಶಾಕ್:
    ಆಲ್‍ರೌಂಡರ್ ಯುವರಾಜ್ ಸಿಂಗ್‍ಗೆ ಮೊದಲ ಬಿಡ್‍ನಲ್ಲಿ ಅನ್‍ಸೋಲ್ಡ್ ಅಂತಾ ಘೋಷಿಸಲಾಯಿತು. ಇತ್ತ ಟೀಂ ಇಂಡಿಯಾದ ಆಟಗಾರರಾದ ಚೇತೇಶ್ವರ ಪೂಜಾರ, ಮನೋಜ್ ತಿವಾರಿ, ಅಕ್ಷದೀಪ್ ನಾಥ್, ಮಿಥುನ್ ಅಭಿಮನ್ಯು, ವಿನಯ್ ಕುಮಾರ್, ಸೌರಭ್ ತಿವಾರಿ, ಇಂಗ್ಲೆಂಡ್ ಆಟಗಾರ ಅಲೆಕ್ಸ್ ಹೆಲ್ಸ್, ನ್ಯೂಜಿಲೆಂಡಿನ ಮಾರ್ಟಿನ್ ಗುಪ್ಟಿಲ್ ಹಾಗೂ ಬ್ರೆಂಡನ್ ಮೆಕಲಮ್, ದಕ್ಷಿಣ ಆಫ್ರಿಕಾದ ವೇಗಿಗಳಾದ ಡೇಲ್ ಸ್ಟೈನ್ ಮತ್ತು ಮೊರ್ನೆ ಮಾರ್ಕೆಲ್, ಆಸ್ಟ್ರೇಲಿಯಾದ ಕೇನ್ ರಿಚರ್ಡ್ ಸನ್, ಗ್ಲೆನ್ ಪಿಲಿಪ್ಸ್, ಕುಸಾನ್ ಪರೇರಾ, ಜೇಸನ್ ಹೋಲ್ಡರ್, ಪರ್ವೆಜ್ ರಸೂಲ್, ಆ್ಯಂಗಲೋ ಮ್ಯಾಥ್ಯೂನ್, ಜೇಮ್ಸ್ ನಿಶಂ, ಹಾಶೀಮ್ ಆಮ್ಲಾ, ಶಾನ್ ಮಾರ್ಶ್, ಉಸ್ಮಾನ್ ಖಾನ್ ಮಾರಾಟವಾಗದೆ ಉಳಿದಿದ್ದಾರೆ.


    ಯಾರು ಎಷ್ಟಕ್ಕೆ ಮಾರಾಟವಾದ್ರು?:
    ಲೂಕಿ ಫೆಗ್ರ್ಯೂಸನ್ ಅವರನ್ನು ಕೆಕೆಆರ್ 1.6 ಕೋಟಿ ರೂ.ಗೆ ಖರೀದಿಸಿದೆ. ಬರಿಂದರ್ ಸ್ರಾನ್ ಮುಂಬೈ ಇಂಡಿಯನ್ಸ್ (3.4 ಕೋಟಿ), ಹೆನ್ರಿ ಕ್ಲಾಸೆನ್ ಆರ್ ಸಿಬಿ (50 ಲಕ್ಷ), ಸ್ಯಾಮ್ ಕರ್ರನ್ ಕಿಂಗ್ಸ್ ಇಲೆವೆನ್ ಪಂಜಾಬ್ (7.2 ಕೋಟಿ), ಕಾಲಿನ್ ಇನ್‍ಗ್ರಾಂ ಡೆಲ್ಲಿ ಕ್ಯಾಪಿಟಲ್ಸ್
    (6.4 ಕೋಟಿ), ನಾಥು ಸಿಂಗ್ ಡೆಲ್ಲಿ ಕ್ಯಾಪಿಟಲ್ಸ್ (20 ಲಕ್ಷ), ಅಂಕುಶ್ ಬೈನ್ಸ್ ಡೆಲ್ಲಿ ಕ್ಯಾಪಿಟಲ್ಸ್ (20 ಲಕ್ಷ), ಅಮೋಲ್ ಪ್ರೀತ್ ಸಿಂಗ್ ಮುಂಬೈ ಇಂಡಿಯನ್ಸ್ (80 ಲಕ್ಷ), ದೇಬದತ್ ಪಡಿಕ್ಕಲ್ ಆರ್‌ಸಿಬಿ (20 ಲಕ್ಷ), ಮೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ (5 ಕೋಟಿ), ವರುನ್ ಅರೋನ್ ರಾಜಸ್ಥಾನ ರಾಯಲ್ಸ್ (2.4 ಕೋಟಿ), ಮೊಹಮ್ಮದ್ ಶಮಿ ಕಿಂಗ್ಸ್ ಇಲೆವೆನ್ ಪಂಜಾಬ್ (4.8 ಕೋಟಿ), ಇಶಾಂತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ (1.1 ಕೋಟಿ), ವೃದ್ಧಿಮಾನ್ ಸಹಾ ಸನ್‍ರೈಸರ್ಸ್ ಹೈದರಾಬಾದ್ (1.2 ಕೋಟಿ), ನಿಕೋಲ್ ಪೂರನ್ ಕಿಂಗ್ಸ್ ಇಲೆವೆನ್ ಪಂಜಾಬ್ (4.2 ಕೋಟಿ), ಜಾನಿ ಬೇನ್ ಸ್ಟೋ ಸನ್‍ರೈಸರ್ಸ್ ಹೈದರಾಬಾದ್ (2.2 ಕೋಟಿ), ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ (5 ಕೋಟಿ), ಗುರ್‍ಕೀರಾತ್ ಸಿಂಗ್ ಆರ್‌ಸಿಬಿ (50 ಲಕ್ಷ), ಮೊಯಿಸಿಸ್ ಹೆನ್ರಿಕ್ಸ್ ಕಿಂಗ್ಸ್ ಇಲೆವೆನ್ ಪಂಜಾಬ್ (1 ಕೋಟಿ), ಕಾರ್ಲಸ್ ಬ್ರಾತ್‍ವೇಟ್ ಕೋಲ್ಕತ್ತಾ ನೈಟ್ ರೈಡರ್ಸ್ (5 ಕೋಟಿ), ಶಿಮ್ರಾನ್ ಹೆಟ್ಮಯಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (4.2 ಕೋಟಿ), ಹನುಮ ವಿಹಾರಿ ಡೆಲ್ಲಿ ಕ್ಯಾಪಿಟಲ್ಸ್ ( 2 ಕೋಟಿ).

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೂರದರ್ಶನದಲ್ಲೂ ಪ್ರಸಾರ ಆಗುತ್ತಾ ವಿದೇಶಿ ಕ್ರಿಕೆಟ್ ಟೂರ್ನಿ?

    ದೂರದರ್ಶನದಲ್ಲೂ ಪ್ರಸಾರ ಆಗುತ್ತಾ ವಿದೇಶಿ ಕ್ರಿಕೆಟ್ ಟೂರ್ನಿ?

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್, ಫಿಫಾ ವಿಶ್ವಕಪ್ ಹಾಗೂ ಒಲಿಂಪಿಕ್ ಕ್ರೀಡೆಗಳ ಲೈವ್ ಪ್ರಸಾರ ಮಾಡಿದ್ದ ದೂರದರ್ಶನ ಸದ್ಯ ವಿದೇಶಿ ನೆಲದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ಕೂಡ ಪ್ರಸಾರ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

    ಹೌದು. ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಟೂರ್ನಿಗಳ ಪ್ರಸಾರದ ಹಕ್ಕು ಪಡೆಯುವ ಕುರಿತು ದೂರದರ್ಶನ ಚಿಂತನೆ ನಡೆಸಿದೆ. ಇದರಂತೆ ಭಾರತ ಸರ್ಕಾರದ ತನ್ನ ಪ್ರಸಾರ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

    ಐಪಿಎಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳ ನೇರ ಪ್ರಸಾರಕ್ಕೆ ಅವಕಾಶ ಪಡೆದಿದ್ದ ಡಿಡಿ ಸದ್ಯ ನಡೆಯುತ್ತಿರುವ ಆಸೀಸ್ ವಿರುದ್ಧದ ಟೂರ್ನಿಯನ್ನು ಏಕೆ ಪ್ರಸಾರ ಮಾಡುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ. ಈ ಸಂಬಂಧ ಡಿಡಿ ಕ್ರೀಡಾ ಪ್ರಸಾರ ಸಿಗ್ನಲ್ ಕಾಯ್ದೆಯ ಅನ್ವಯ ಜಾಹೀರಾತು ರಹಿತ ಲೈವ್ ಪ್ರಸಾರ ಮಾಡುವ ಕುರಿತಂತೆ ಪ್ರಸಾರ ಭಾರತಿಯೊಂದಿಗೆ ಚರ್ಚೆ ನಡೆಸಿದೆ.

    ಆಸೀಸ್ ಟೂರ್ನಿಯ ಟೆಸ್ಟ್ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 5 ಗಂಟೆಗೆ ಆರಂಭವಾಗುತ್ತದೆ. ಈಗಲೂ ಭಾರತದ ಗ್ರಾಮೀಣ ವಲಯ ಹಾಗೂ ಹಲವು ಪಟ್ಟಣಗಳಲ್ಲಿ ಡಿಡಿ ವಾಹಿನಿಯನ್ನೇ ಜನರು ನೆಚ್ಚಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಕ್ರಿಕೆಟ್ ಟೂರ್ನಿಯ ಪ್ರಸಾರದ ಕುರಿತು ಡಿಡಿ ಚಿಂತನೆ ನಡೆಸಿದೆ.

    ಈ ವರ್ಷ ನಡೆದ 11ನೇ ಆವೃತ್ತಿಯ ಐಪಿಎಲ್ ಟಿ20 ಟೂರ್ನಿ ಡಿಡಿಯಲ್ಲಿ ಪ್ರಸಾರ ಆಗಿತ್ತು. ನಂತರ ನಡೆದ ಇಂಗ್ಲೆಂಡ್ ನಲ್ಲಿ ನಡೆದ ಟೂರ್ನಿಯನ್ನು ಪ್ರಸಾರ ಮಾಡಿರಲಿಲ್ಲ. ಈಗ ಐಪಿಎಲ್ ಟೂರ್ನಿ ಹತ್ತಿರವಾಗುತ್ತಿರುವುದರಿಂದ ಆಸೀಸ್ ಸರಣಿಯ ಹಕ್ಕುಗಳನ್ನು ಹೊಂದಿರುವ ಸೋನಿ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಆದರೆ ಈ ಕುರಿತು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಮತ್ತು ಡಿಡಿ ನಡುವೆ ಭಿನ್ನಭಿಪ್ರಾಯ ಮೂಡಿತ್ತು. ಆದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶದ ಮಾಡಿದ ಕಾರಣ ಖಾಸಗಿ ವಾಹಿನಿ ಒಪ್ಪಂದದ ಮೇರೆಗೆ ಪ್ರಸಾರ ದೃಶ್ಯಗಳನ್ನು ಹಂಚಿಕೆ ಮಾಡಲು ಸಮ್ಮತಿ ಸೂಚಿಸಿತ್ತು. ಸದ್ಯ ಇಂತಹ ಗೊಂದಲಗಳಿಗೆ ತೆರೆ ಎಳೆಯಲು ಕೇಂದ್ರ ಸರ್ಕಾರ ಈಗ ಕ್ರೀಡಾ ಪ್ರಸಾರ ಸಿಗ್ನಲ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

    ವಿಶೇಷವೆಂದರೆ ಡಿಡಿ ವಾಹಿನಿ ಪ್ರೋ ಕಬಡ್ಡಿ ಕ್ರೀಡಾಕೂಟದ ಪ್ರಸಾರ ಹಕ್ಕುಗಳನ್ನ ಪಡೆಯಲು ಇದುವರೆಗೂ ಸ್ಟಾರ್ ವಾಹಿನಿಯನ್ನು ಸಂಪರ್ಕ ಮಾಡಿರಲಿಲ್ಲ. ಕಬಡ್ಡಿಗೆ ಭಾರತದ ಗ್ರಾಮೀಣ ಭಾಗದಲ್ಲೇ ಹೆಚ್ಚು ಜನ ಪ್ರೇಕ್ಷಕರು ಹೊಂದಿದ್ದರೂ ಈ ಕುರಿತು ಚಿಂತನೆ ನಡೆಸದಿರುವುದು ಅಚ್ಚರಿ ಮೂಡಿಸಿದೆ. ಫುಟ್ಬಾಲ್ ಲೀಗ್ ಪ್ರಸಾರದಲ್ಲೂ ಡಿಡಿ ಇದೇ ನಡೆಯನ್ನು ತೋರಿದೆ.

    ತಡವಾಗಿ ಐಪಿಎಲ್ ಪ್ರಸಾರ:
    ಭಾರತದಲ್ಲಿ ನಡೆಯುವ ಪಂದ್ಯಗಳನ್ನು ಜನರ ಅನುಕೂಲಕ್ಕಾಗಿ ಐಪಿಎಲ್ ಪ್ರಸಾರ ಮಾಡಲು ಅವಕಾಶ ಮಾಡಿಕೊಡಬೇಕೆಂಬ ದೂರದರ್ಶನದ ಮನವಿ ಮಾಡಿತ್ತು. ಡಿಡಿ ವಾಹಿನಿಗೆ ಆದಾಯ ಸೃಷ್ಟಿ ಮಾಡುವ ಉದ್ದೇಶದಿಂದ ವಾರ್ತಾ ಸಚಿವಾಲಯದ ಅಭಿಪ್ರಾಯದ ಮೇರೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಈ ಮನವಿಯನ್ನು ಸ್ಟಾರ್ ಸಂಸ್ಥೆಯ ಮುಂದೆ ಪ್ರಸ್ತುತ ಪಡಿಸಿತ್ತು.

    ಈ ಮನವಿಗೆ ಸ್ಪಂದಿಸಿದ ಸ್ಟಾರ್ ನೆಟ್‍ವರ್ಕ್ ಐಪಿಎಲ್ ನ ಭಾನುವಾರ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಪ್ರಸಾರ ಮಾಡಲು ಅನುಮತಿ ನೀಡಿದೆ. ಅಲ್ಲದೇ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾದ ಬಳಿಕ ಒಂದು ಗಂಟೆ ತಡವಾಗಿ ದೂರದರ್ಶನ ಚಾನೆಲ್ ನಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರವಾಗಲಿದೆ. ದೂರದರ್ಶನದಲ್ಲಿ ಪ್ರಸಾರವಾಗುವ ಪಂದ್ಯಗಳಿಂದ ಗಳಿಸುವ ಆದಾಯದಲ್ಲಿ ಶೇ.50 ಆಧಾರ ಮೇಲೆ ಹಂಚಿಕೆ ಮಾಡಲಾಗಿದೆ.

    2017ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಐಪಿಎಲ್ ನೇರ ಪ್ರಸಾರದ ಮಾರಾಟ ಹಕ್ಕುಗಳನ್ನು ಸ್ಟಾರ್ ವಾಹಿನಿ ಪಡೆದುಕೊಂಡಿತ್ತು. ಸದ್ಯ ಇದರ ಜೊತೆಗೆ ಭಾರತದಲ್ಲಿ ನಡೆಯುವ ಎಲ್ಲಾ ದ್ವಿಪಕ್ಷೀಯ ಸರಣಿಯ ನೇರ ಪ್ರಸಾರದ ಹಕ್ಕನ್ನು ಸ್ಟಾರ್ ಸಂಸ್ಥೆ 6,138 ಕೋಟಿ ರೂ. ಗೆ ಪಡೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಪಿಎಲ್ ಹರಾಜು: ಯುವರಾಜ್ ಸಿಂಗ್ ಹಿಂದಿಕ್ಕಿದ ಜಯದೇವ್ ಉನದ್ಕತ್!

    ಐಪಿಎಲ್ ಹರಾಜು: ಯುವರಾಜ್ ಸಿಂಗ್ ಹಿಂದಿಕ್ಕಿದ ಜಯದೇವ್ ಉನದ್ಕತ್!

    ಜೈಪುರ: ಐಪಿಎಲ್ 12ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಕೆಲ ದಿನಗಳಷ್ಟೇ ಬಾಕಿ ಇದ್ದು, 2018ರ ಟೂರ್ನಿಯ ಬಳಿಕ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಯುವರಾಜ್ ಸಿಂಗ್ 1 ಕೋಟಿ ರೂ. ಮೂಲ ಬೆಲೆ ಹೊಂದಿದ್ದು, ಟೀಂ ಇಂಡಿಯಾದ ಯುವ ಆಟಗಾರ ಜಯದೇವ್ ಉನದ್ಕತ್ 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    2018ರ ಹರಾಜಿನಲ್ಲಿ 11.5 ಕೋಟಿ ರೂ. ಗೆ ಹರಾಜು ಆಗುವ ಮೂಲಕ ಅಚ್ಚರಿ ಮೂಡಿಸಿದ್ದ ಜಯದೇವ್‍ರನ್ನು ರಾಜಸ್ಥಾನ್ ರಾಯಲ್ಸ್ ತಂಡ ಖರೀದಿ ಮಾಡಿತ್ತು. ಮೂಲಗಳ ಪ್ರಕಾರ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಜಯದೇವ್ ಅವರ ಮೂಲ ಬೆಲೆ 2 ಕೋಟಿ ರೂ.ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ.

    ಇತ್ತ ಫಿಟ್‍ನೆಸ್ ಹಾಗೂ ಬ್ಯಾಟಿಂಗ್ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಯುವರಾಜ್ ರೊಂದಿಗೆ ಬೌಲರ್ ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ವೃದ್ಧಿಮಾನ್ ಸಹಾ ಕೂಡ 1 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಇದರೊಂದಿಗೆ ವಿದೇಶಿ ಆಟಗಾರರಾದ ಸ್ಯಾಮ್ ಕರ್ರನ್, ಕೋರೆ ಆ್ಯಂಡರ್ ಸನ್, ಕಾಲಿನ್ ಇಂಗ್ರಾಮ್, ಲಸಿತ್ ಮಾಲಿಂಗ, ಶಾನ್ ಮಾರ್ಷ್, ಏಂಜೆಲೋ ಮ್ಯಾಥ್ಯೂಸ್, ಬ್ರೆಂಡನ್ ಮೆಕಲಮ್, ಡಾರ್ಚಿ ಶಾರ್ಟ್, ಕ್ರಿಸ್ ವೋಕ್ಸ್ 2 ಕೋಟಿ ರೂ. ಕ್ಲಬ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    ಐಪಿಎಲ್ ಆಟಗಾರರ ಹರಾಜಿನ ಕುರಿತು ಈಗಾಗಲೇ ಬಿಸಿಸಿಐ ಮಾಹಿತಿ ನೀಡಿದ್ದು, ಈ ಬಾರಿಯ ಹರಾಜಿಗೆ ಇದುವರೆಗೂ 1 ಸಾವಿರ ನೋಂದಣಿಗಳಾಗಿದೆ ಎಂದು ತಿಳಿಸಿದೆ. ಐಪಿಎಲ್ ಅಧಿಕೃತ ಟ್ವಿಟ್ಟರಿನಲ್ಲಿ ನೀಡಿರುವ ಮಾಹಿತಿಯಂತೆ ಈ ಬಾರಿ 1,003 ಆಟಗಾರರು ಹರಾಜಿನಲ್ಲಿ ಭಾಗವಹಿಸಿಲಿದ್ದಾರೆ. ಇದರಲ್ಲಿ 232 ವಿದೇಶಿ ಆಟಗಾರರು ಒಳಗೊಂಡಿದ್ದು, 8 ತಂಡಗಳ ಫ್ರಾಂಚೈಸಿಗಳು ಒಟ್ಟು 145.25 ಕೋಟಿ ರೂ. ಮೊತ್ತದಲ್ಲಿ ಆಟಗಾರರನ್ನು ಖರೀದಿ ಮಾಡಲಿದ್ದಾರೆ.

    ಉಳಿದಂತೆ ಈ ಬಾರಿಯ ಐಪಿಎಲ್ ನಲ್ಲಿ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ ವೆಲ್, ಆರೋನ್ ಫಿಂಚ್ ಭಾಗವಹಿಸುವುದು ಅನುಮಾನವಾಗಿದೆ. ಈಗಾಗಲೇ ಬಿಡುವಿಲ್ಲದ ಕ್ರಿಕೆಟ್ ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡ ಭಾಗವಹಿಸುತ್ತಿದ್ದು, ಮುಂದಿನ ವಿಶ್ವಕಪ್ ಟೂರ್ನಿಯ ಉದ್ದೇಶದಿಂದ ಐಪಿಎಲ್‍ನಲ್ಲಿ ಭಾಗವಹಿಸಿದಿರಲು ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರಿಗೆ ಸಲಹೆ ನೀಡಿದೆ.

    ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್ ನಲ್ಲಿ ನಡೆಯುತ್ತಿದ್ದ ಐಪಿಎಲ್ ಹರಾಜು ಈ ಬಾರಿ ಡಿಸೆಂಬರ್ 18 ರಂದು ಜೈಪುರದಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚುನಾವಣೆಯಲ್ಲಿ ತಮ್ಮ ಹೆಸರು ಬಳಸಿಕೊಂಡ ರಾಜಕೀಯ ಪಕ್ಷಕ್ಕೆ ತಿರುಗೇಟು ಕೊಟ್ಟ ಸೆಹ್ವಾಗ್

    ಚುನಾವಣೆಯಲ್ಲಿ ತಮ್ಮ ಹೆಸರು ಬಳಸಿಕೊಂಡ ರಾಜಕೀಯ ಪಕ್ಷಕ್ಕೆ ತಿರುಗೇಟು ಕೊಟ್ಟ ಸೆಹ್ವಾಗ್

    ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹೆಸರು ಬಳಕೆ ಮಾಡಿ ಪ್ರಚಾರ ಪಡೆಯುತ್ತಿದ್ದ ಸ್ಥಳೀಯ ರಾಜಕೀಯ ಪಕ್ಷಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಿರುಗೇಟು ನೀಡಿದ್ದು, ಇಂತಹ ಸುಳ್ಳು ಪ್ರಚಾರಕ್ಕೆ ಮೋಸ ಹೋಗದಂತೆ ಜನರಲ್ಲಿ ಮನವಿ ಮಾಡಿದ್ದಾರೆ.

    ರಾಜಸ್ಥಾನದ ಪ್ರಾದೇಶಿಕ ಪಕ್ಷವಾದ ರಾಷ್ಟ್ರಿಯ ಲೋಕತಾಂತ್ರಿಕ್ ಪಕ್ಷ ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ತಮ್ಮ ಪ್ರಚಾರ ಸಭೆಯಲ್ಲಿ ಸೆಹ್ವಾಗ್ ಕಾರ್ಯಕರ್ತರನ್ನು ಮಾತನಾಡಲಿದ್ದಾರೆ ಎಂದು ತಿಳಿಸಿತ್ತು. ಅಲ್ಲದೇ ಜಾಹೀರಾತು ಪ್ರತಿಯಲ್ಲಿ ಪಕ್ಷದ ಚಿಹ್ನೆಯಾದ ಬಾಟಲ್ ಹಾಗೂ ನಾಯಕರ ಫೋಟೋವನ್ನು ಪ್ರಕಟಿಸಿತ್ತು.

    ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನ ಫೋಟೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ನಾನು ದುಬೈನಲ್ಲಿದ್ದೇನೆ. ಯಾವುದೇ ರಾಜಕೀಯ ಪಕ್ಷದೊಂದಿಗೆ ಮಾತುಕತೆ ನಡೆಸಿಲ್ಲ. ಅದರೂ ಯಾವುದೇ ನಾಚಿಕೆ ಇಲ್ಲದೆ ಪ್ರಚಾರಕ್ಕಾಗಿ ಇಂತಹ ಸುಳ್ಳು ಹೇಳುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಎಷ್ಟು ಮೋಸ ಮಾಡಬಹುದು. ಅದ್ದರಿಂದ ಮೋಸಗಾರರು ಮತ್ತು ಸುಳ್ಳುಗಾರರಗಿಂತ ಉತ್ತಮರನ್ನು ಆಯ್ಕೆ ಮಾಡಿ ಎಂದು ತಿಳಿಸಿದ್ದಾರೆ.

    ವೀರೇಂದ್ರ ಸೆಹ್ವಾಗ್ ಸದ್ಯ ದುಬೈನಲ್ಲಿ ನಡೆಯುತ್ತಿರುವ ಟಿ10 ಲೀಗ್ ನಲ್ಲಿ ಭಾಗವಹಿಸಿದ್ದು, ಮರಾಠ ಅರೇಬಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮರಾಠ ಅರೇಬಿಯನ್ಸ್ ತಂಡದ ಪರವೇ ಸೆಹ್ವಾಗ್ ಆಡಿದ್ದರು. ಕಳೆದ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಆಗಿದ್ದ ಸೆಹ್ವಾಗ್, 2019ರ ಆವೃತ್ತಿಗೆ ತಂಡದಿಂದ ಹೊರ ನಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2019 ಐಪಿಎಲ್: ಅಂತ್ಯವಾಗುತ್ತಾ ಈ ಐದು ಆಟಗಾರರ ಐಪಿಎಲ್ ಭವಿಷ್ಯ?

    2019 ಐಪಿಎಲ್: ಅಂತ್ಯವಾಗುತ್ತಾ ಈ ಐದು ಆಟಗಾರರ ಐಪಿಎಲ್ ಭವಿಷ್ಯ?

    ಮುಂಬೈ: 2019ರ ಐಪಿಎಲ್ ಟೂರ್ನಿಗೆ ಸಿದ್ಧತೆ ನಡೆಸಿರುವ ತಂಡದ ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿ ಉಳಿಸಿಕೊಂಡಿರುವ 10 ಆಟಗಾರರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆಲ ಸ್ಟಾರ್ ಆಟಗಾರರು ಇದ್ದು, 2019ನೇ ಆವೃತ್ತಿಯೊಂದಿಗೆ ಅವರ ಐಪಿಎಲ್ ಕ್ರಿಕೆಟ್ ಭವಿಷ್ಯ ಅಂತ್ಯವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ತಂಡಗಳ ಮ್ಯಾನೇಜ್‍ಮೆಂಟ್ ಉತ್ತಮ ತಂಡದ ಕಾಂಬಿನೇಷನ್ ಆಯ್ಕೆ ಮಾಡಿಕೊಳ್ಳಲು ಇನ್ನು 1 ತಿಂಗಳು ಕಾಲ ಸಮಯಾವಕಾಶವಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ಹೆಚ್ಚಿನ ಬದಲಾವಣೆ ಮಾಡದೇ ತಂಡವನ್ನು ಉಳಿಸಿಕೊಂಡಿದೆ.

    ಇತ್ತ ಕಳೆದ ಬಾರಿ ರಾಜಸ್ಥಾನ ತಂಡದ ಪರ 11.9 ಕೋಟಿ ರೂ.ಗೆ ಹರಾಜು ಆಗಿದ್ದ ಜಯದೇವ್ ಉನದ್ಕತ್, ಅನುಭವಿ ಆಟಗಾರ ಗೌತಮ್ ಗಂಭೀರ್, ಮ್ಯಾಕ್ಸ್‍ವೆಲ್, ವೃದ್ಧಿಮಾನ್ ಸಹಾ, ಮೆಕಲಮ್, ಅರೋನ್ ಫಿಂಚ್, ಅಕ್ಷರ್ ಪಟೇಲ್, ಯುವರಾಜ್ ಸಿಂಗ್, ವಿನಯ್ ಕುಮಾರ್, ಕ್ರಿಸ್ ವೋಕ್ಸ್ ಸೇರಿ 50 ಆಟಗಾರರನ್ನು ತಂಡಗಳು ಕೈಬಿಟ್ಟಿದೆ.

    ಪ್ರಮುಖವಾಗಿ 36 ವರ್ಷದ ಯುವರಾಜ್ ಸಿಂಗ್ ಅವರಿಗೆ ಈ ಐಪಿಎಲ್ ಮಹತ್ವದಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚಿದ್ದ ಯುವಿ ಐಪಿಎಲ್‍ನಲ್ಲಿ ವಿಫಲರಾಗಿದ್ದಾರೆ. ಇದುವರೆಗೂ 128 ಐಪಿಎಲ್ ಪಂದ್ಯವಾಡಿರುವ ಯುವಿ 24.78 ಸರಾಸರಿಯಲ್ಲಿ 2,652 ರನ್ ಗಳಿಸಿದ್ದಾರೆ. ಸದ್ಯ ಯುವಿ ಅವರಿಂದ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನಿರೀಕ್ಷೆ ಮಾಡುವುದು ಕಷ್ಟಸಾಧ್ಯವಾಗಿದೆ. ಇದುವರೆಗೂ ಯುವಿ ಪಂಜಾಬ್, ಪುಣೆ, ಆರ್‍ಸಿಬಿ, ಡೆಲ್ಲಿ, ಹಾಗೂ ಹೈದರಾಬಾದ್ ತಂಡಗಳಲ್ಲಿ ಆಡಿದ್ದಾರೆ.

    ಉಳಿದಂತೆ ಕನ್ನಡಿಗ ವಿನಯ್ ಕುಮಾರ್ ದೇಶಿಯ ಕ್ರಿಕೆಟ್‍ನಲ್ಲಿ ಮಿಂಚಿದ್ದರು, ಅಂತರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲು ವಿಫಲರಾಗಿದ್ದಾರೆ. 34 ವರ್ಷದ ವಿನಯ್ ಕಳೆದ ಐಪಿಎಲ್ ನಲ್ಲಿ ಕೇವಲ 6 ಪಂದ್ಯಗಳನ್ನು ಆಡಿದ್ದು, 10.5 ಓವರ್ ಗಳನ್ನು ಬೌಲ್ ಮಾಡಿದ್ದಾರೆ. ವಿನಯ್ ಇದುವರೆಗೂ ಆರ್‍ಸಿಬಿ, ಕೇರಳ, ಕೆಕೆಆರ್ ಹಾಗೂ ಮುಂಬೈ ಪರ ಆಡಿದ್ದು, 105 ಪಂದ್ಯಗಳಿಂದ 105 ವಿಕೆಟ್ ಪಡೆದಿದ್ದಾರೆ.

    ಇತ್ತ ವಿದೇಶಿ ಆಟಗಾರರಲ್ಲಿ ಜೆಪಿ ಡುಮಿನಿ, ಮಿಚೆಲ್ ಜಾನ್ಸನ್ ಹಾಗೂ ಡೇನಿಯಲ್ ಕ್ರಿಶ್ಚಿಯನ್ ಅವರನ್ನು ಮುಂದಿನ ಆವೃತ್ತಿಗಳಲ್ಲಿ ಕಾಣುವುದು ಕಷ್ಟಸಾಧ್ಯ ಎನ್ನಬಹುದು. ಮಿಚೆಲ್ ಜಾನ್ಸನ್ ಆರಂಭಿಕ ಆವೃತ್ತಿಗಳಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು, ಆದರೆ ಕಳೆದ ಆವೃತ್ತಿಯಲ್ಲಿ ಕೆಕೆಆರ್ ಪರ 6 ಪಂದ್ಯಗಳಿಂದ ಕೇವಲ 2 ವಿಕೆಟ್ ಪಡೆದಿದ್ದು, ಪ್ರತಿ ಓವರಿನಲ್ಲಿ ಸರಾಸರಿ 10 ರನ್ ನೀಡಿ ದುಬಾರಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews