Tag: IPL

  • ಬುಮ್ರಾ ಗಾಯದ ಬಗ್ಗೆ ಮುಂಬೈ ಇಂಡಿಯನ್ಸ್ ಸ್ಪಷ್ಟನೆ

    ಬುಮ್ರಾ ಗಾಯದ ಬಗ್ಗೆ ಮುಂಬೈ ಇಂಡಿಯನ್ಸ್ ಸ್ಪಷ್ಟನೆ

    ಮುಂಬೈ: ಟೀಂ ಇಂಡಿಯಾ ಡೆತ್ ಓವರ್ ಸ್ಪೆಷಲಿಸ್ಟ್ ಎಂಬ ಹೆಗ್ಗಳಿಕೆ ಪಡೆದಿರುವ ಬುಮ್ರಾ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಗಾಯಗೊಂಡಿರುವ ಬಗ್ಗೆ ಮುಂಬೈ ಇಂಡಿಯನ್ಸ್ ಸ್ಪಷ್ಟನೆ ನೀಡಿದೆ. ಬುಮ್ರಾ ಗಾಯದ ಸಮಸ್ಯೆ ಗಂಭೀರ ಸ್ವರೂಪದಲ್ಲ. ಮುಂದಿನ ಪಂದ್ಯದಲ್ಲಿ ಅವರು ಆಡಲಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದೆ.

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಗಾಯಗೊಂಡಿದ್ದರು. ಬೌಲಿಂಗ್ ವೇಳೆ ಚೆಂಡನ್ನು ತಡೆಯಲು ಮುಂದಾದ ಬುಮ್ರಾ ಎಡಗೈ ಜಾರಿದ ಪರಿಣಾಮ ಗಾಯಗೊಂಡು ಮೈದಾನಲ್ಲೇ ನೋವು ಅನುಭವಿಸಿದ್ದರು. ಆ ಬಳಿಕ ಮುಂಬೈ ಬ್ಯಾಟಿಂಗ್ ವೇಳೆ ಅಂತಿಮ 4 ಎಸೆತಗಳು ಉಳಿದರು ಕೂಡ ಬುಮ್ರಾ ಬ್ಯಾಟಿಂಗ್ ನಡೆಸಿರಲಿಲ್ಲ. ಅದ್ದರಿಂದ ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು.

    https://twitter.com/dhonirohitfan1/status/1109858689324744704

    ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಬುಮ್ರಾ ಗಾಯದ ಸಮಸ್ಯೆಗೆ ಸಿಲುಕಿದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಬಿಸಿಸಿಐ ಕೂಡ ಈ ಬಗ್ಗೆ ಮಾಹಿತಿ ಪಡೆದಿದೆ. ಕಳೆದ ವರ್ಷ ಕೂಡ ಬುಮ್ರಾ ಗಾಯದ ಸಮಸ್ಯೆ ಎದುರಿಸಿದ್ದರು. ಪರಿಣಾಮ ಇಂಗ್ಲೆಂಡ್ ವಿರುದ್ಧದ ಸಿಮೀತ ಓವರ್ ಗಳ ಸರಣಿಯಲ್ಲಿ ಬುಮ್ರಾ ಭಾಗವಹಿಸಿರಲಿಲ್ಲ. ಆ ಬಳಿಕ ಟೆಸ್ಟ್ ಸರಣಿಗೆ ಕಮ್ ಬ್ಯಾಕ್ ಮಾಡಿದ್ದರು. ವಿಶ್ವಕಪ್ ಟೂರ್ನಿಗೆ 2 ತಿಂಗಳು ಮಾತ್ರ ಉಳಿದಿರುವುದಿಂದ ಆಟಗಾರರು ಫಿಟ್ನೆಸ್ ಕಾಯ್ದುಕೊಳ್ಳುವುದು ಪ್ರಮುಖವಾಗಿದೆ.

    ಮುಂಬೈ ಇಂಡಿಯನ್ಸ್ ಸರಣಿಯನ್ನು ಸೋಲಿನ ಮೂಲಕ ಆರಂಭ ಮಾಡಿದ್ದು, ಭಾನುವಾರ ನಡೆದ ಪಂದ್ಯದಲ್ಲಿ ಯುವಿ ಅರ್ಧ ಶತಕದ ಹೊರತಾಗಿಯೂ ಸೋಲುಂಡಿತ್ತು. ಡೆಲ್ಲಿ ಆಟಗಾರರ ಪಂತ್ ಸ್ಫೋಟ ಬ್ಯಾಟಿಂಗ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

  • ರಿಷಬ್ ಪಂತ್ ಭವಿಷ್ಯದ ಸ್ಟಾರ್ ಆಟಗಾರ : ಯುವಿ

    ರಿಷಬ್ ಪಂತ್ ಭವಿಷ್ಯದ ಸ್ಟಾರ್ ಆಟಗಾರ : ಯುವಿ

    ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಸ್ಫೋಟಕ ಪ್ರದರ್ಶನ ನೀಡಿದ ಯುವ ಆಟಗಾರ ರಿಷಬ್ ಪಂತ್ ಕುರಿತು ಯುವರಾಜ್ ಸಿಂಗ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದು, ಭವಿಷ್ಯದ ಸ್ಟಾರ್ ಆಟಗಾರ ಎಂದಿದ್ದಾರೆ.

    ಮುಂಬೈ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಪಂತ್ 27 ಎಸೆತಗಳಲ್ಲಿ 78 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ 7 ಸಿಕ್ಸರ್, 7 ಬೌಂಡರಿ ಸಿಡಿಸಿದ್ದರು. ಪಂದ್ಯದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ 2011ರ ವಿಶ್ವಕಪ್ ಹೀರೋ ಯುವಿ, ರಿಷನ್ ಪಂತ್ ವಿಶ್ವಕಪ್ ಆಯ್ಕೆ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ. ಆದರೆ ಕಳೆದ ವರ್ಷ ಪಂತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದು, ಮುಂದಿನ ದಿನಗಳಲ್ಲಿ ಸ್ಟಾರ್ ಆಟಗಾರ ಆಗುವ ವಿಶ್ವಾಸ ಇದೆ ಎಂದಿದ್ದಾರೆ.

    ಇತ್ತ ಟೂರ್ನಿಯ ಆರಂಭದ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಯುವಿ ಕೂಡ ಈ ಬಾರಿ ಮುಂಬೈ ಮಿಂಚುವ ಸೂಚನೆ ನೀಡಿದ್ದಾರೆ. ಆದರೆ ಯುವಿ ಅರ್ಧ ಶತಕದ ನಡುವೆಯೂ ಮುಂಬೈ ಸೋಲುಂಡಿತು. 35 ಎಸೆತಗಳಲ್ಲಿ ಯುವಿ 53 ರನ್ ಗಳಿಸಿದ್ದರು.

    ಕಳೆದ ಎರಡು ವರ್ಷಗಳ ಪ್ರದರ್ಶನದಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಯಿತು. ಆದರೆ ನಾನು ಕ್ರಿಕೆಟ್ ಮೇಲಿನ ಪ್ರೀತಿಯಿಂದಲೇ ಆಡುತ್ತಿದ್ದೇನೆ. ದೇಶ ಪರ ಸದ್ಯ ಆಡಲು ಸಾಧ್ಯವಾಗದಿದ್ದರೂ ಕೂಡ ಈ ಹಿಂದೆ ಅಂಡರ್ 16, 14 ತಂಡದ ಪರ ಆಡಿದಂತೆಯೇ ಸಂತಸದಿಂದ ಆಡುತ್ತಿದ್ದೇನೆ. ಸಚಿನ್ ಅವರೊಂದಿಗೆ ಕಳೆದ ಸಮಯ, ನನ್ನ ಪ್ರದರ್ಶನ ಉತ್ತಮ ಪಡಿಸಲು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

  • ಬೌಲರ್‌ಗಳಿಗೆ ಕೊಹ್ಲಿ ಮೆಚ್ಚುಗೆ – ಪಿಚ್ ಕುರಿತು ಅಸಮಾಧಾನ

    ಬೌಲರ್‌ಗಳಿಗೆ ಕೊಹ್ಲಿ ಮೆಚ್ಚುಗೆ – ಪಿಚ್ ಕುರಿತು ಅಸಮಾಧಾನ

    ಚೆನ್ನೈ: ಐಪಿಎಲ್ ಶುಭಾರಂಭದ ಕನಸು ಹೊತ್ತಿದ್ದ ಆರ್ ಸಿಬಿ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ಸೋಲುಂಡಿದೆ. ಆದರೆ ಪಂದ್ಯದಲ್ಲಿ ತಂಡದ ಬೌಲರ್‍ಗಳ ಪ್ರದರ್ಶನಕ್ಕೆ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕೇವಲ 70 ರನ್ ಗಳ ಗುರಿಯನ್ನು 18ನೇ ಓವರ್ ವರೆಗೂ ಬೌಲರ್ ಗಳು ಡಿಫೆಂಡ್ ಮಾಡಿದ್ದಾರೆ. ಆದರೆ ಪಿಚ್ ಉತ್ತಮ ಗುಣಮಟ್ಟದಿಂದ ಕೂಡಿರದ ಕಾರಣ ಬ್ಯಾಟ್ಸ್ ಮನ್ ರನ್ ಗಳಿಸಲು ಕಷ್ಟವಾಯಿತು ಎಂದಿದ್ದಾರೆ. ಚೆನ್ನೈ ಪಿಚ್ ಬಗ್ಗೆ ಧೋನಿ ಕೂಡ ಪಂದ್ಯದ ಬಳಿಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇಂತಹ ಆರಂಭವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಬ್ಯಾಟಿಂಗ್ ಆರಂಭಿಸಿದ ವೇಳೆ 140 ರಿಂದ 150 ರನ್ ಗುರಿ ನೀಡಿರುವ ಚಿಂತನೆ ನಡೆಸಲಾಗಿತ್ತು. ಆದರೆ ಪಿಚ್ ವರ್ತನೆಯನ್ನು ಊಹೆ ಮಾಡಿರಲಿಲ್ಲ. ಆದರೆ ನಮ್ಮ ಬೌಲರ್ ಗಳು ಹೆಚ್ಚು ರನ್ ನೀಡದೆ ಬೌಲ್ ಮಾಡಿದ್ದಾರೆ ಎಂದಿದ್ದಾರೆ.

    ಪಂದ್ಯದ ಸೋಲಿನಿಂದ ತಂಡ ಹೊರ ಬರುತ್ತಾ ಎಂಬುವುದರ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ. ಕನಿಷ್ಠ 120 ರನ್ ಗುರಿ ನೀಡಿದ್ದರೆ ಮತ್ತಷ್ಟು ಹೋರಾಟ ನೀಡಲು ಸಾಧ್ಯವಾಗುತ್ತಿತ್ತು. ಈ ಗೆಲುವಿಗೆ ಚೆನ್ನೈ ಅರ್ಹವಾಗಿದೆ ಎಂದರು. ಇತ್ತ ಪಂದ್ಯದ ಬಳಿಕ ಧೋನಿ ಕೈಗೆ ಬ್ಯಾಡೆಂಜ್ ಹಾಕಿರುವುದನ್ನು ಕೊಹ್ಲಿ ಸೂಕ್ಷ್ಮವಾಗಿ ಗಮನಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

  • ಅಂತಿಮ ಸೆಕೆಂಡಿನಲ್ಲಿ ಡಿಆರ್‌ಎಸ್‌ ಮನವಿ : ಮತ್ತೊಮ್ಮೆ ಧೋನಿ ಮೋಡಿ – ವಿಡಿಯೋ ನೋಡಿ

    ಅಂತಿಮ ಸೆಕೆಂಡಿನಲ್ಲಿ ಡಿಆರ್‌ಎಸ್‌ ಮನವಿ : ಮತ್ತೊಮ್ಮೆ ಧೋನಿ ಮೋಡಿ – ವಿಡಿಯೋ ನೋಡಿ

    ಚೆನ್ನೈ: ಸಿಎಸ್‍ಕೆ ತಂಡ ನಾಯಕ ಎಂಎಸ್ ಧೋನಿ ಮತ್ತೊಮ್ಮೆ ಡಿಆರ್‍ಎಸ್ ನಿಯಮ ಪಡೆಯುವಲ್ಲಿ ಚಾಣಾಕ್ಷತೆ ತೋರಿದ್ದು, ಅಂತಿಮ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ತಂಡಕ್ಕೆ ಲಾಭ ತಂದುಕೊಟ್ಟಿದೆ.

    ಐಪಿಎಲ್ 12 ಆವೃತ್ತಿಯ ಮೊದಲ ಪಂದ್ಯದಲ್ಲಿ ಧೋನಿ ಬಾಯ್ಸ್ ಗೆದ್ದು ಶುಭಾರಂಭ ಮಾಡಿದ್ದಾರೆ. ಪಂದ್ಯದ 11ನೇ ಓವರ್ ನಲ್ಲಿ ಸ್ಟ್ರೇಕ್ ನಲ್ಲಿದ್ದ ನವದೀಪ್ ಸೈನಿರನ್ನ ತಾಹಿರ್ ಎಲ್‍ಬಿ ಬಲೆಗೆ ಕೆಡವಿದ್ದರು. ಆದರೆ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಈ ವೇಳೆ ಬೌಲರ್‍ರೊಂದಿಗೆ ಚರ್ಚೆ ನಡೆಸಿದ ಧೋನಿ ನಿಗದಿತ 10 ಸೆಕೆಂಡ್‍ನ ಅಂತಿಮ ಕ್ಷಣದಲ್ಲಿ ಡಿಆರ್ ಎಸ್‍ಗೆ ಮನವಿ ಮಾಡಿದರು.

    ಡಿಆರ್ ಎಸ್ ಪಡೆಯುತ್ತಿದಂತೆ ಆಟಗಾರರು ಕೂಡ ಧೋನಿಯ ಟೈಮಿಂಗ್ ಕಂಡು ಅಚ್ಚರಿಗೊಂಡಿದ್ದರು. ಮನವಿ ಸ್ವೀಕರಿಸಿ ಪರಿಶೀಲನೆ ನಡೆಸಿದ ವೇಳೆ ಚೆಂಡು ಬ್ಯಾಟಿಗೆ ಸ್ಪರ್ಶಿಸದೇ ಇರುವುದು ಖಚಿತವಾಗಿದ್ದ ಕಾರಣ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆ ಬಳಿಕ ಪಂದ್ಯದಲ್ಲಿ ರವೀಂದ್ರ ಜಡೇಜಾ ಮನವಿ ಮೇರೆಗೆ ಧೋನಿ ಮತ್ತೊಂದು ರಿವ್ಯೂ ಪಡೆದಿದ್ದರು. ಆದರೆ ನೇರ ಬೌಲರ್ ಬಳಿ ತೆರಳಿದ ಧೋನಿ ಅದು ನಾಟೌಟ್ ಎಂದು ತಿಳಿಸಿದ್ದರು. ಅಂತೆಯೇ ಅಂಪೈರ್ ಕೂಡ ಪರಿಶೀಲನೆ ನಡೆಸಿ ಧೋನಿಯ ತೀರ್ಮಾನವನ್ನು ಬೆಂಬಲಿಸಿದ್ದರು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ 17.1 ಓವರ್ ಗಳಲ್ಲಿ ಅಲೌಟ್ ಆಯ್ತು. ತಂಡದ ಪರ ಪಾರ್ಥಿವ್ ಪಟೇಲ್ 35 ಎಸೆತಗಳಲ್ಲಿ 29 ರನ್ ಗಳಿಸಿದರೆ, ಉಳಿದ ಎಲ್ಲಾ 10 ಆಟಗಾರರು ಎರಡಂಕಿ ದಾಟಲು ವಿಫರಾದರು. ಚೆನ್ನೈ ತಂಡ 17.4 ಓವರ್ ಗಳಲ್ಲಿ ಗುರಿ ಬೆನ್ನಟ್ಟಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

  • ಚೆನ್ನೈ ಬೌಲಿಂಗ್ ದಾಳಿಗೆ ಆರ್‌ಸಿಬಿ ತತ್ತರ – ಶುಭಾರಂಭ ಮಾಡಿದ ಧೋನಿ ಬಾಯ್ಸ್

    ಚೆನ್ನೈ ಬೌಲಿಂಗ್ ದಾಳಿಗೆ ಆರ್‌ಸಿಬಿ ತತ್ತರ – ಶುಭಾರಂಭ ಮಾಡಿದ ಧೋನಿ ಬಾಯ್ಸ್

    ಚೆನ್ನೈ: ಐಪಿಎಲ್ ಸೀಸನ್ 12 ಆರಂಭದಲ್ಲೇ ಚೆನ್ನೈ ಬೌಲಿಂಗ್ ದಾಳಿಗೆ ತತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯಲ್ಲೇ ಸೋಲುಂಡಿದ್ದು, ಚೆನ್ನೈ 7 ವಿಕೆಟ್ ಗೆಲುವು ಪಡೆದು ಶುಭಾರಂಭ ಮಾಡಿದೆ.

    ಚೆನ್ನೈ ಹಾಗೂ ಬೆಂಗಳೂರು ನಡುವೆ ಹೈವೋಲ್ಟೆಜ್ ಪಂದ್ಯವೆಂದೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಚೆನ್ನೈ ತಂಡ ಬೌಲಿಂಗ್ ದಾಳಿಗೆ ತತ್ತರಿಸಿದ ಆರ್ ಸಿಬಿ 17.1 ಓವರ್ ಗಳಲ್ಲಿ 70 ರನ್ ಗಳಿಗೆ ಅಲೌಂಟ್ ಆಯ್ತು. ಸುಲಭ ಗುರಿ ಬೆನ್ನತ್ತಿದ ಚೆನ್ನ ಆಟಗಾರರು 17.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 71 ರನ್ ಸಿಡಿಸಿ ಗೆಲುವು ಪಡೆದರು.

    ಚೆನ್ನೈ ತಂಡ ಪರ ವ್ಯಾಟ್ಸನ್ ಶೂನ್ಯ ಸುತ್ತಿದರೆ, ರೈನಾ 19 ರನ್, ರಾಯುಡು 28 ರನ್ ಗಳಿಸಿ ನಿರ್ಗಮಿಸಿದರು. ಜಾಧವ್ 13 ರನ್ ಹಾಗೂ ಜಡೇಜಾ 6 ರನ್ ಗಳಿಸಿ ಅಜೇಯರಾಗಿ ಉಳಿದರು.

    ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಸಿಎಸ್‍ಕೆ ನಾಯಕ ಧೋನಿ, ಕೊಹ್ಲಿ ಪಡೆಗೆ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದರು. ಆರಂಭಿಕರಾಗಿ ಕಣಕ್ಕೆ ಇಳಿದ ನಾಯಕ ಕೊಹ್ಲಿ (6 ರನ್), ಇಮ್ರಾನ್ ತಾಹಿರ್, ಅಲಿ ವಿಕೆಟ್ ಪಡೆದ ಅನುಭವಿ ಆಟಗಾರ ಹರ್ಭಜನ್ ಮಿಂಚುಹರಿಸಿದರು. ಉಳಿದಂತೆ ಆರಂಭಿಕ ಪಾರ್ಥಿವ್ ಪಾಟೇಲ್ 29 ರನ್ ಗಳಿಸಿದ್ದು ಬಿಟ್ಟರೆ ತಂಡದ ಬೇರಾವ ಆಟಗಾರ ಕೂಡ ಎರಡಂಕ್ಕಿ ಮೊತ್ತ ದಾಟಲಿಲ್ಲ.

    ಚೆನ್ನೈ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಹರ್ಭಜನ್ ಸಿಂಗ್ ಮತ್ತು ತಾಹಿತ್ ತಲಾ 3 ವಿಕೆಟ್ ಪಡೆದರೆ, ಜಡೇಜಾ 2, ಬ್ರಾವೋ 1 ವಿಕೆಟ್ ಕಬಳಿಸಿದರು.

    ಆರ್ ಸಿಬಿ 70 ರನ್ ಗಳಿಗೆ ಅಲೌಟ್ ಆಗುವ ಮೂಲಕ ಜಂಟಿಯಾಗಿ 2ನೇ ಬಾರಿಗೆ ಕಡಿಮೆ ಮೊತ್ತ ಗಳಿಸಿತು. ಈ ಹಿಂದೆ 2014ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 70 ರನ್ ಗಳಿಗೆ ಹಾಗೂ 2017 ರಲ್ಲಿ ಕೆಕೆಆರ್ ವಿರುದ್ಧ 49 ರನ್ ಗಳಿಗೆ ಅಲೌಟಾಗಿತ್ತು.

    5 ಸಾವಿರ ರನ್: ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಟಗಾರ ಸುರೇನ್ ರೈನಾ ಐಪಿಎಲ್‍ನಲ್ಲಿ 5 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. 32 ವರ್ಷದ ರೈನಾ 156 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ 15 ರನ್ ಗಳಿಸಿದ್ದ ವೇಳೆ ರೈನಾ 5 ಸಾವಿರ ರನ್ ದಾಖಲೆ ನಿರ್ಮಾಣವಾಯಿತು.

  • ಐಪಿಎಲ್: ಆರ್‌ಸಿಬಿ ಕೆಲ ಪಂದ್ಯಗಳಿಗೆ ಕೊಹ್ಲಿ ಗೈರು

    ಐಪಿಎಲ್: ಆರ್‌ಸಿಬಿ ಕೆಲ ಪಂದ್ಯಗಳಿಗೆ ಕೊಹ್ಲಿ ಗೈರು

    ಬೆಂಗಳೂರು: ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿಬಿ ತಂಡ 2019 ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸುತ್ತಿದೆ. ಮೊದಲ ಪಂದದಲ್ಲಿ ಟಾಸ್ ಗೆದ್ದ ಚೆನ್ನೈ ಫಿಲ್ಡೀಂಗ್ ಆಯ್ಕೆ ಮಾಡಿಕೊಂಡಿದೆ.

    ಆವೃತ್ತಿ ಆರಂಭದ ವೇಳೆ ಆರ್ ಸಿಬಿ ತಂಡದ ನಾಯಕ ಕೆಲ ಪಂದ್ಯಗಳಿಗೆ ಗೈರಾಗುವ ಸಂಭವವಿದ್ದು, ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿಶ್ವಕಪ್ ಟೂರ್ನಿ ಮೇ 30 ರಿಂದ ಆರಂಭವಾಗಲಿದ್ದು, ಈ ಕುರಿತು ಕೊಹ್ಲಿ ಕೂಡ ಸ್ಪಷ್ಟನೆ ನೀಡಿದ್ದಾರೆ. ವಿಶ್ವಕಪ್ ಎಲ್ಲಾ ಆಟಗಾರರಿಗೂ ಕನಸಿನ ಟೂರ್ನಿಯಾಗಿರುತ್ತದೆ. ಅದ್ದರಿಂದ ಐಪಿಎಲ್ ಕೆಲ ಪಂದ್ಯಗಳಿಗೆ ಮಿಸ್ ಆಗುವ ಸಾಧ್ಯತೆ ಇದೆ ಎಂದಿದ್ದಾರೆ. ವಿಶ್ವಕಪ್‍ಗೂ ಮುನ್ನ ತಂಡದ ಆಟಗಾರರು ಫಿಟ್ ಆಗಿರುವುದು ಬಹಳ ಮುಖ್ಯ. ಈ ಬಗ್ಗೆ ತಂಡದ ಕೋಚ್, ತಜ್ಞರಿಗೆ ಮಾಹಿತಿ ನೀಡುವುದು ಕೂಡ ಅಷ್ಟೇ ಪ್ರಮುಖವಾಗಿರುತ್ತದೆ. ಅದ್ದರಿಂದ ಟೂರ್ನಿಯಲ್ಲಿ ಆಟಗಾರರ ಮೇಲೆ ಬೀಳುವ ಕೆಲಸದ ಒತ್ತಡ ಮೇಲೆ ಇದು ನಿರ್ಧಾರವಾಗುತ್ತದೆ ಎಂದಿದ್ದಾರೆ.

    ಯಾವುದೇ ಆಟಗಾರರ ಪಂದ್ಯದ ವೇಳೆ ತನ್ನ ಶೇ. 150 ರಷ್ಟು ಸಾಮಥ್ರ್ಯವನ್ನು ಹಾಕುವುದು ಅಗತ್ಯ. ಆದರೆ ಯಾವುದೇ ಆಟಗಾರರ ಮೇಲೆ ತಂಡ ಒತ್ತಡ ಹಾಕಿಲ್ಲ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಆರ್ ಸಿಬಿ ಫ್ರಾಂಚೈಸಿ ಕೂಡ ಕೊಹ್ಲಿ ಅವರ ಈ ತೀರ್ಮಾನಕ್ಕೆ ಬೆಂಬಲ ನೀಡಿದೆ ಎನ್ನಲಾಗಿದ್ದು, ಆಟಗಾರರ ಮೇಲಿನ ಒತ್ತಡವನ್ನು ಸೂಕ್ತ ಕ್ರಮಗಳನ್ನು ಕೈಗೊಂಡಿದೆ.

    5 ಸಾವಿರ ರನ್:
    ಕೊಹ್ಲಿ ಐಪಿಎಲ್‍ನಲ್ಲಿ 136 ಪಂದ್ಯಗಳಿಂದ 4,948 ರನ್ ಸಿಡಿಸಿದ್ದು, ಟೂರ್ನಿಯಲ್ಲಿ 5 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಗಳಿಸಲು ಕೇವಲ 52 ರನ್ ಗಳ ಅಗತ್ಯವಿದೆ. ಆದರೆ ಪಂದ್ಯದಲ್ಲಿ ಕೇವಲ ರನ್ ಗಳಿಸಿ ಕೊಹ್ಲಿ ನಿರ್ಗಮಿಸಿದ್ದಾರೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಟಗಾರ ಸುರೇನ್ ರೈನಾ ಕೂಡ 5 ಸಾವಿರ ರನ್ ಸನಿಹದಲ್ಲಿದ್ದು, ಇನ್ನು 15 ರನ್ ಗಳು ಮಾತ್ರ ಅಗತ್ಯವಿದೆ.

  • ಫೆನ್ಸ್ ಹಾರಿ ಅಭಿಮಾನಿಗಳಿಗೆ ಧೋನಿ ಆಟೋಗ್ರಾಫ್ – ವಿಡಿಯೋ ನೋಡಿ

    ಫೆನ್ಸ್ ಹಾರಿ ಅಭಿಮಾನಿಗಳಿಗೆ ಧೋನಿ ಆಟೋಗ್ರಾಫ್ – ವಿಡಿಯೋ ನೋಡಿ

    ಚೆನ್ನೈ: 2019ರ ಐಪಿಎಲ್ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಭಿಮಾನಿಗಳು ಮೊದಲ ಪಂದ್ಯದಲ್ಲಿಯೇ ಭರಪೂರ ಮನರಂಜನೆಯ ನಿರೀಕ್ಷೆಯಲ್ಲಿದ್ದಾರೆ. ಎಲ್ಲಾ ತಂಡಗಳು ಟೂರ್ನಿಗೆ ಭರ್ಜರಿ ತಾಲೀಮು ಕೂಡ ನಡೆಸಿದೆ. ಇದೇ ವೇಳೆ ಅಭಿಮಾನಿಗಳೊಂದಿಗೆ ಧೋನಿ ನಡೆದುಕೊಳ್ಳುವ ರೀತಿ ಮತ್ತೊಮ್ಮೆ ಮೆಚ್ಚುಗೆಗೆ ಕಾರಣವಾಗಿದೆ.

    ಚೆನ್ನೈನ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕಿಳಿದಿದ್ದ ಧೋನಿರನ್ನ ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ನೆರೆದಿದ್ದ ವಿಡಿಯೋ ಕೆಲ ದಿನಗಳ ಸಾಕಷ್ಟು ವೈರಲ್ ಆಗಿತ್ತು. ಅಂತೆಯೇ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಧೋನಿಯವರ ಬಳಿ ಆಟೋಗ್ರಾಫ್ ಕೇಳಿದ್ದು, ತಕ್ಷಣವೇ ಧೋನಿ ಕ್ರೀಡಾಂಗಣದ ಫೇನ್ಸ್ ಹಾರಿ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಚೆನ್ನೈ ಸೂಪರ್ ಕಿಂಗ್ಸ್ ಈ ವಿಡಿಯೋವನ್ನು ತನ್ನ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದೆ. ಸಿಎಸ್‍ಕೆ ಟ್ವೀಟ್‍ಗೆ ಇದುವರೆಗೂ 15 ಸಾವಿರ ಮಂದಿ ಲೈಕ್ ಮಾಡಿದ್ದು, ಸುಮಾರು 3 ಸಾವಿರ ಮಂದಿ ರೀ ಟ್ವೀಟ್ ಮಾಡಿದ್ದಾರೆ. ವಿಡಿಯೋದಲ್ಲಿ ಧೋನಿ ಆಟೋಗ್ರಾಫ್ ಪಡೆದ ಹಲವು ಮಕ್ಕಳು ಹರ್ಷ ವ್ಯಕ್ತಪಡಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    37 ವರ್ಷದ ಧೋನಿ ನಾಯತ್ವದ ಸಿಎಸ್‍ಕೆ ಹಾಗೂ ಆರ್ ಸಿಬಿ ತಂಡಗಳ ಕಾದಾಟದೊಂದಿಗೆ ಈ ಬಾರಿಯ ಐಪಿಎಲ್ ಆರಂಭವಾಗುತ್ತಿದ್ದು, ಕಳೆದ ಬಾರಿಯ ಚಾಂಪಿಯನ್ ತಂಡ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಇತ್ತ ಮೊದಲ ಟ್ರೋಫಿ ಜಯದ ವಿಶ್ವಾಸದಲ್ಲಿರುವ ಆರ್ ಸಿಬಿ ಆವೃತ್ತಿಯ ಶುಭಾರಂಭ ಮಾಡುವ ಉದ್ದೇಶವನ್ನು ಹೊಂದಿದೆ.

  • ಗಂಭೀರ್ ಹೇಳಿಕೆಗೆ ವಿರಾಟ್ ಕೊಹ್ಲಿ ಟಾಂಗ್!

    ಗಂಭೀರ್ ಹೇಳಿಕೆಗೆ ವಿರಾಟ್ ಕೊಹ್ಲಿ ಟಾಂಗ್!

    ನವದೆಹಲಿ: ಐಪಿಎಲ್ ಟೈಟಲ್ ಗೆಲುವಿನ ಬಗ್ಗೆ ತಮ್ಮನ್ನು ವಿಶ್ಲೇಷಣೆ ಮಾಡಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿಕೆಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿ ಟಾಂಗ್ ನೀಡಿದ್ದಾರೆ.

    ಕೆಲವರು ಮನೆಯಲ್ಲಿಯೇ ಕೂತು ಕ್ರಿಕೆಟ್ ಬಗ್ಗೆ ತಿಳಿಯದವರಂತೆ ಮಾತನಾಡುತ್ತಾರೆ. ನಾನು ಕೂಡ ಟೈಟಲ್ ಗೆಲ್ಲಬೇಕೆಂದೇ ಬಯಸುತ್ತೇನೆ. ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ. ಆದರೆ ಐಪಿಎಲ್ ಟೈಟಲ್ ಗೆದ್ದ ಮಾತ್ರಕ್ಕೆ ಯಾವುದೇ ಆಟಗಾರನ ಸಾಮಥ್ರ್ಯದ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ. ನನ್ನಿಂದ ಸಾಧ್ಯವಾದಷ್ಟು ಟೈಟಲ್ ಗೆಲುವಿಗೆ ಶ್ರಮಿಸುತ್ತೇನೆ. ಕೆಲವು ಬಾರಿ ಅದು ಸಾಧ್ಯವಾಗುವುದಿಲ್ಲ. ಅಂದ ಮಾತ್ರಕ್ಕೆ ನನ್ನ ಬಗ್ಗೆ ಕೆಲವರು ಹೊರಗಡೆ ಕೂತು ಮಾತನಾಡುತ್ತಿದ್ದಾರೆ ಎಂದು ಗಂಭೀರ್ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ನಮ್ಮ ತಂಡ 6 ಬಾರಿ ಟೂರ್ನಿಯಲ್ಲಿ ಸೆಮಿ ಫೈನಲ್ ವರೆಗೂ ಪ್ರವೇಶ ಮಾಡಿದೆ. ಆದರೆ ಕೆಲ ತಪ್ಪುಗಳಿಂದ ಟೈಟಲ್ ಗೆಲ್ಲುವ ಅವಕಾಶವನ್ನು ಮಿಸ್ ಮಾಡಿತ್ತು. ಆದರೆ ನಾವು ಮತ್ತಷ್ಟು ಸಿದ್ಧತೆ ನಡೆಸಿ ಈ ಹಿಂದಿನ ತಪ್ಪುಗಳು ನಡೆಯದಂತೆ ಮುನ್ನಡೆಯುತ್ತೇವೆ. ಉತ್ತಮ ನಿರ್ಧಾರಗಳನ್ನು ಕೈಗೊಂಡರೆ ಹಿಂದಿನ ಪ್ರದರ್ಶನಕ್ಕಿಂತಲೂ ಉತ್ತಮ ಆಟ ಆಡುತ್ತೆವೆ ಎಂದು ಟೈಟಲ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಗಂಭೀರ್ ಏನ್ ಹೇಳಿದ್ದರು..?
    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಗಂಭೀರ್, ಆರ್ ಸಿಬಿ ಐಪಿಎಲ್ ಟೈಟಲ್ ಗೆಲ್ಲದಿರುವ ಬಗ್ಗೆ ಕೊಹ್ಲಿರನ್ನ ಮಾತ್ರವೇ ಹೊಣೆ ಮಾಡುವುದು ಸರಿ ಅಲ್ಲ. ಧೋನಿ, ರೋಹಿತ್ ಶರ್ಮಾ ತಲಾ 3 ಬಾರಿ ತಂಡವನ್ನು ಟೈಟಲ್ ಗೆಲುವಿನವರೆಗೂ ಕೊಂಡೊಯ್ದಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಹ್ಲಿರನ್ನು ಅವರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಆದರೆ ಕಳೆದ ಏಳೆಂಟು ವರ್ಷದಿಂದ ಆರ್ ಸಿಬಿ ಕಪ್ ಗೆಲ್ಲದಿದ್ದರು ಕೂಡ ತಂಡದ ಫ್ರಾಂಚೈಸಿ ಕೊಹ್ಲಿರನ್ನೇ ನಾಯಕನಾಗಿ ಮುಂದುವರಿಸುವುದು ಅವರ ಅದೃಷ್ಟ. ಇದಕ್ಕೆ ಕೊಹ್ಲಿ ತಂಡಕ್ಕೆ ಧನ್ಯವಾದ ತಿಳಿಸಬೇಕೆಂದಿದ್ದರು.

    12ನೇ ಅವೃತ್ತಿಯ ಐಪಿಎಲ್ ಟೂರ್ನಿ ಇಂದಿನಿಂದ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಆರ್ ಸಿಬಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

  • ಐವರು ಹುತಾತ್ಮ ಯೋಧರ ಕುಟುಂಬಕ್ಕೆ ಪಂಜಾಬ್ ತಂಡದಿಂದ 25 ಲಕ್ಷ ರೂ. ನೆರವು

    ಐವರು ಹುತಾತ್ಮ ಯೋಧರ ಕುಟುಂಬಕ್ಕೆ ಪಂಜಾಬ್ ತಂಡದಿಂದ 25 ಲಕ್ಷ ರೂ. ನೆರವು

    ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಯೋಧರ ಐದು ಕುಟುಂಬಗಳಿಗೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 25 ಲಕ್ಷ ರೂ. ನೆರವು ನೀಡಿದೆ.

    ಪಂಜಾಬ್ ಹಾಗೂ ಹಿಮಾಚಲ ಪ್ರದೇಶದ ಯೋಧರ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗಿದೆ. ನೆರವಿನ ಹಣವನ್ನು ತಂಡ ಕುಟುಂಬ ಸದಸ್ಯರಿಗೆ ವರ್ಗಾವಣೆ ಮಾಡಲಾಗಿದೆ. ಈ ವೇಳೆ ತಂಡ ನಾಯಕ ಆರ್. ಅಶ್ವಿನ್ ಹಾಗೂ ಸಿಆರ್ ಪಿಎಫ್ ಡಿಐಜಿ ವಿಕೆ ಕುನ್ದಲ್ ಅವರು ಹಾಜರಿದ್ದರು.

    ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಾಲೀಕತ್ವದ ಪಂಜಾಬ್ ತಂಡ ಈ ಬಾರಿಯ ಕಪ್ ಗೆಲ್ಲುವ ರೇಸ್‍ನಲ್ಲಿದ್ದು, ಮೊದಲ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. 2014 ರಲ್ಲಿ ಪಂಜಾಬ್ ತಂಡ ಆಡಿದ 11 ಪಂದ್ಯಗಳನ್ನು ಗೆದ್ದು, 3 ಪಂದ್ಯಗಳಲ್ಲಿ ಮಾತ್ರ ಸೋಲುಂಡಿತ್ತು. ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿರುವ ಪಂಜಾಬ್ ತಂಡ ಗೆಲುವಿನ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಪ್ರಮುಖವಾಗಿದೆ.

    ಕಳೆದ ಐಪಿಎಲ್ ಆವೃತ್ತಿಯಲ್ಲಿ ಆರಂಭದ 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು ವಿಶ್ವಾಸ ಮೂಡಿಸಿತ್ತು. ಆದರೆ ಆ ಬಳಿಕ ನಡೆದ 5 ಪಂದ್ಯಗಳಲ್ಲಿ ಸೋಲುಂಡು ನಿರಾಸೆ ಮೂಡಿಸಿತ್ತು. ಇತ್ತ 23 ರಂದು 12ನೇ ಆವೃತ್ತಿಯ ಟೂರ್ನಿ ಮಾರ್ಚ್ 23 ರಂದು ಆರಂಭವಾಗುತ್ತಿದ್ದು, ಪಂಜಾಬ್ ತಂಡ ಮಾರ್ಚ್ 25 ರಂದು ರಾಜಸ್ಥಾನ ತಂಡವನ್ನು ಎದುರಿಸಲಿದೆ.

  • ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕಿಳಿದ ಧೋನಿಗೆ ಭರ್ಜರಿ ಸ್ವಾಗತ! – ವಿಡಿಯೋ

    ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕಿಳಿದ ಧೋನಿಗೆ ಭರ್ಜರಿ ಸ್ವಾಗತ! – ವಿಡಿಯೋ

    ಚೆನ್ನೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಅಭಿಮಾನಿಗಳು ಎಷ್ಟು ಇಷ್ಟ ಪಡುತ್ತಾರೆ ಎಂಬುವುದಕ್ಕೆ ಸಾಕ್ಷಿಯಾಗಿ ವಿಡಿಯೋ ಲಭ್ಯವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದೆ.

    ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಧೋನಿ ಅವರಿಗೆ ‘ತಲಾ’ ಎಂದೇ ಬಿರುದು ನೀಡಿದ್ದು, ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕಾಗಿ ಆಗಮಿಸಿದ ಧೋನಿ ಅವರನ್ನು ಕಾಣ್ತುಂಬಿಕೊಳ್ಳಲು ಸಾವಿರಾರರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿರುವುದನ್ನು ನಾವು ಕಾಣಬಹುದಾಗಿದೆ.

    ಧೋನಿ ತರಬೇತಿ ಪಡೆಯಲು ಬ್ಯಾಟ್ ಹಿಡಿದು ಬರುತ್ತಿದಂತೆ ಒಮ್ಮೆಲೇ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿ ಸಂತಸ ವ್ಯಕ್ತಪಡಿಸಿದ್ದಾರೆ. ಮೈದಾನದ ಎಲ್ಲೆಡೆ ಧೋನಿ, ಧೋನಿ ಎಂಬ ಘೋಷಣೆ ಕೇಳಿ ಬಂದಿತ್ತು. ಸಾವಿರಾರರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಕಂಡ ಧೋನಿ ಕೂಡ ಕ್ಷಣ ಕಾಲ ಅಚ್ಚರಿಗೊಂಡಂತೆ ಕಂಡು ಬಂತು.

    ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿರುವ ಈ ವಿಡಿಯೋಗೆ ಇದುವರೆಗೂ 28 ಸಾವಿರ ಮಂದಿ ಲೈಕ್ ಮಾಡಿದ್ದು, 6.6 ಸಾವಿರ ಮಂದಿ ರೀ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಕಂಡ ಹಲವು ಹಿರಿಯ ಆಟಗಾರರು ಹಾಗು ಕ್ರಿಕೆಟ್ ವಿಶ್ಲೇಷಕರು ಕೂಡ ಅಭಿಮಾನಿಗಳ ಕ್ರೇಜ್‍ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ವಿಡಿಯೋ ಕುರಿತು ಕೆಲ ಅಭಿಮಾನಿಗಳು ತಮ್ಮ ಅನಿಸಿಕೆಯನ್ನು ಕೂಡ ತಿಳಿಸಿ ರೀ ಟ್ವೀಟ್ ಮಾಡಿದ್ದು, ಅಭಿಮಾನಿಗಳನ್ನು ಹೊಂದುವುದು ಎಂದರೆ ಇದು. ಪಾಕ್ ಸೂಪರ್ ಲೀಗ್ ಫೈನಲ್ ಪಂದ್ಯಕ್ಕೂ ಇಷ್ಟು ಮಂದಿ ಆಗಮಿಸರಿಲಿಲ್ಲ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ, ನಾನು ಧೋನಿ ಹುಟ್ಟಿದ ಊರಿನವನೇ ಆಗಿದ್ದರೂ ಕೂಡ, ಚೆನ್ನೈ ಅಭಿಮಾನಿಗಳನ್ನು ನಮ್ಮನ್ನು ಸೋಲಿಸಿದ್ದಾರೆ ಎಂದಿದ್ದಾರೆ.

    ಅಭ್ಯಾಸ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರೆ, ಇನ್ನು ಮಾರ್ಚ್ 23 ರಂದು ನಡೆಯುವ ಆರ್‍ಸಿಬಿ ಪಂದ್ಯಕ್ಕೆ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಧೋನಿ ನೇತೃತ್ವದ ಚೆನ್ನೈ ತಂಡ 3 ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದು ಬೀಗಿದ್ದು, ಇತ್ತ ಮೊದಲ ಟ್ರೋಫಿ ಗೆಲುವಿನ ವಿಶ್ವಾಸದಲ್ಲಿರುವ ಕೊಹ್ಲಿ ಪಡೆ ಕೂಡ ಭಾರೀ ಸಿದ್ಧತೆ ನಡೆಸಿದೆ.