Tag: IPL

  • ‘ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ’- ಜೇಮ್ಸ್ ನೀಶಮ್‍ ಸವಾಲು ಸ್ವೀಕರಿಸಿದ ಕೆಎಲ್ ರಾಹುಲ್

    ‘ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ’- ಜೇಮ್ಸ್ ನೀಶಮ್‍ ಸವಾಲು ಸ್ವೀಕರಿಸಿದ ಕೆಎಲ್ ರಾಹುಲ್

    ಮೌಂಟ್ ಮಾಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಕೆ.ಎಲ್.ರಾಹುಲ್ ಹಾಗೂ ಜೇಮ್ಸ್ ನೀಶಮ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಪಂದ್ಯದ ಬಳಿಕ ಈ ಕುರಿತು ಟ್ವೀಟ್ ಮಾಡಿದ್ದ ಜೇಮ್ಸ್ ನೀಶಮ್, ರಾಹುಲ್ ಕಾಲೆಳೆಯಲು ಪ್ರಯತ್ನಿಸಿದ್ದರು. ಸದ್ಯ ಜೇಮ್ಸ್ ನೀಶಮ್ ಸವಾಲಿಗೆ ತಿರುಗೇಟು ನೀಡಿರುವ ರಾಹುಲ್ ಏಪ್ರಿಲ್‍ನಲ್ಲಿ ಇದನ್ನು ಸೆಟ್ಲ್ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ.

    ಮೌಂಟ್ ಮಾಂಗನುಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಟೀಂ ಇಂಡಿಯಾ 19.5ನೇ ಓವರಿನಲ್ಲಿ ರಾಹುಲ್ ರನ್ ಓಟಕ್ಕೆ ಜೇಮ್ಸ್ ನೀಶಮ್ ಅಡ್ಡ ಬಂದಿದ್ದರು. ಶ್ರೇಯಸ್ ಅಯ್ಯರ್ ರೊಂದಿಗೆ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಂಗಲ್ ರನ್ ಓಡಲು ಯತ್ನಿಸಿದ್ದರು. ಆದರೆ ಬೌಲಿಂಗ್ ಮಾಡುತ್ತಿದ್ದ ಜೇಮ್ಸ್ ನೀಶಮ್ ಕ್ರಿಸ್‍ನಲ್ಲಿ ರಾಹುಲ್ ಓಟಕ್ಕೆ ಅಡ್ಡಲಾಗಿ ನಿಂತಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ರಾಹುಲ್ ಅಲ್ಲಿಯೇ ಜೇಮ್ಸ್ ನೀಶಮ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.

    ಇತ್ತ ಪಂದ್ಯದ ಬಳಿಕ ಈ ಘಟನೆಯ ಕುರಿತು ಫೋಟೋ ಟ್ವೀಟ್ ಮಾಡಿದ್ದ ಜೇಮ್ಸ್ ನೀಶಮ್, ‘ಪೇಪರ್, ಸಿಸರ್ಸ್, ರಾಕ್’ ಎಂದು ಬರೆದು ಹಲ್ಲು ಕಿಸಿಯುವ ಇಮೋಜಿ ಹಾಕಿದ್ದರು. ಅಲ್ಲದೇ ಪಂದ್ಯದ ಬಳಿಕ ಮಾತನಾಡಿದ್ದ ಜೇಮ್ಸ್ ನೀಶಮ್ ಕೆಎಲ್ ರಾಹುಲ್ ಅವರ ಬ್ಯಾಟಿಂಗ್‍ಗೆ ಪ್ರಶಂಸೆ ವ್ಯಕ್ತಪಡಿಸಿ, ಏಪ್ರಿಲ್‍ನಲ್ಲಿ ನಡೆಯಲಿರುವ ಐಪಿಎಲ್‍ಗೂ ರನ್‍ಗಳನ್ನು ಉಳಿಸಿಕೊಳ್ಳುವಂತೆ ತಮಾಷೆ ಮಾಡಿದ್ದರು. ಇತ್ತ ಜೇಮ್ಸ್ ನೀಶಮ್‍ರ ಟ್ವೀಟನ್ನು ರೀ ಟ್ವೀಟ್ ಮಾಡಿದ್ದ ಐಸಿಸಿ, ‘ಸೂಪರ್ ಓವರ್ ಬದಲು ನಾವು ಇದನ್ನು ಶುರು ಮಾಡಬೇಕೇನೋ’ ಎಂದು ಪ್ರಶ್ನಿಸಿ ಟ್ರೋಲ್ ಮಾಡಿತ್ತು.

    ಸದ್ಯ ಜೇಮ್ಸ್ ನೀಶಮ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಇದನ್ನು ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ ಎಂದು ಪ್ರತಿಕ್ರಿಯೆ ನೀಡಿ ಸವಾಲು ಸ್ವೀಕರಿಸಿದ್ದಾರೆ. ಅಂದಹಾಗೆ ಜೇಮ್ಸ್ ನೀಶಮ್ ಮುಂದಿನ ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಲಿದ್ದಾರೆ. 50 ಲಕ್ಷ ರೂ.ಗೆ ಜೇಮ್ಸ್ ನೀಶಮ್‍ರನ್ನು ಪಂಜಾಬ್ ತಂಡ ಖರೀದಿ ಮಾಡಿದೆ. ಅಂದಹಾಗೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಈ ಬಾರಿಯ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.

  • ಕೆಕೆಆರ್ ಆಟಗಾರನಿಗೆ ಶಾಕ್‍ ಕೊಟ್ಟ ಬಿಸಿಸಿಐ

    ಕೆಕೆಆರ್ ಆಟಗಾರನಿಗೆ ಶಾಕ್‍ ಕೊಟ್ಟ ಬಿಸಿಸಿಐ

    – ಪ್ರವೀಣ್ ತಾಂಬೆ ಐಪಿಎಲ್‍ಗೆ ಅನರ್ಹ

    ಮುಂಬೈ: ಐಪಿಎಲ್ ಕ್ರಿಕೆಟ್ ಲೀಗ್ 2020ಕ್ಕೆ ಮುಂಬೈ ಮೂಲದ ಅನುಭವಿ ಸ್ಪಿನ್ ಆಟಗಾರ ಪ್ರವೀಣ್ ತಾಂಬೆರನ್ನು ಅನರ್ಹಗೊಳಿಸಿ ಬಿಸಿಸಿಐ ಆದೇಶ ಪ್ರಕಟಿಸಿದೆ.

    48 ವರ್ಷದ ಪ್ರವೀಣ್ ತಾಂಬೆ ಅವರನ್ನು ಈ ಬಾರಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿ ಮಾಡಿತ್ತು. ಮೂಲ ಬೆಲೆ 20 ಲಕ್ಷ ರೂ.ಗಳನ್ನು ಹೊಂದಿದ್ದ ಪ್ರವೀಣ್ ಅವರನ್ನು ಬೇರೆ ಯಾವುದೇ ತಂಡದ ಮಾಲೀಕರು ಖರೀದಿ ಮಾಡಲು ಮುಂದಾಗದ ಕಾರಣ ಕೋಲ್ಕತ್ತಾ ತಂಡದ ಸುಲಭವಾಗಿ ಪ್ರವೀಣ್‍ರನ್ನು ಪಡೆದಿತ್ತು.

    ಪ್ರವೀಣ್ ಕಳೆದ ವರ್ಷ ನಡೆದ ಅಬುಧಾಬಿಯಲ್ಲಿ ನಡೆದ ಸಿಂಥಿನ್ ಟಿ10 ಟೂರ್ನಿಯಲ್ಲಿ ಭಾಗಿಯಾಗಿದ್ದರು. ಬಿಸಿಸಿಐ ನಿಯಮಗಳ ಅನ್ವಯ ಯಾವುದೇ ಕ್ರಿಕೆಟ್ ಆಟಗಾರ ಟೀಂ ಇಂಡಿಯಾ ಅಥವಾ ಐಪಿಎಲ್ ಆಡಬೇಕು ಎಂದರೆ ವಿದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುವಂತಿಲ್ಲ. ಒಂದೊಮ್ಮೆ ಭಾಗವಹಿಸಿದ್ದರೂ ಬಿಸಿಸಿಐನಿಂದ ಎನ್‍ಒಸಿ ಪಡೆದುಕೊಳ್ಳಬೇಕೆಂಬ ಷರತ್ತು ವಿಧಿಸಲಾಗಿದೆ. ಆದರೆ ಪ್ರವೀಣ್ ತಾಂಬೆ ಬಿಸಿಸಿಐ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕಾರಣ ಸದ್ಯ ಐಪಿಎಲ್‍ಗೆ ದೂರವಾಗಿದ್ದಾರೆ.

    ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಭಾರತೀಯ ಕ್ರಿಕೆಟ್ ಆಟಗಾರರು ಐಪಿಎಲ್ ಆಡಲು ಇಷ್ಟಪಟ್ಟರೆ ವಿದೇಶಿ ಟೂರ್ನಿಗಳಲ್ಲಿ ಆಡುವಂತಿಲ್ಲ. ಐಪಿಎಲ್ ಬೇಡ ಎಂದರೆ ಅವರು ಯಾವ ಟೂರ್ನಿ ಬೇಕಾದರೂ ಆಡಬಹುದು. ಪ್ರವೀಣ್ ಅಬುಧಾಬಿಯಲ್ಲಿ ನಡೆದ ಟಿ10 ಲೀಗ್‍ಗೆ ಆಟಗಾರರ ಡ್ರಾಫ್ಟ್ ಲಿಸ್ಟ್ ನಲ್ಲಿ ಹೆಸರು ಕಳುಹಿಸಿದ್ದರು. ಇದೇ ವೇಳೆ ಐಪಿಎಲ್ ಟೂರ್ನಿಗೂ ಹೆಸರು ನೀಡಿದ್ದರು. ಆದ್ದರಿಂದ ಅವರನ್ನು ಐಪಿಎಲ್‍ನಿಂದ ದೂರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಪ್ರವೀಣ್ ತಾಂಬೆ ರಾಜಸ್ಥಾನ್ ರಾಯಲ್ಸ್, ಗುಜರಾತ್ ಲಯನ್ಸ್, ಹೈದರಾಬಾದ್ ತಂಡಗಳ ಪರ ಆಡಿದ್ದರು. 2013ರಲ್ಲಿ ಐಪಿಎಲ್‍ನಲ್ಲಿ ಪಾದಾರ್ಪಣೆ ಮಾಡಿರುವ ಪ್ರವೀಣ್ ಇದುವರೆಗೂ 33 ಪಂದ್ಯಗಳಿಂದ 28 ವಿಕೆಟ್ ಪಡೆದಿದ್ದಾರೆ.

  • ಐಪಿಎಲ್‍ನಲ್ಲಿ ಕೋಟಿ ಬೆಲೆಗೆ ಚಾಲಕ, ಪಾನಿಪುರಿ ಮಾರುವವರ ಮಕ್ಕಳು ಸೇಲ್

    ಐಪಿಎಲ್‍ನಲ್ಲಿ ಕೋಟಿ ಬೆಲೆಗೆ ಚಾಲಕ, ಪಾನಿಪುರಿ ಮಾರುವವರ ಮಕ್ಕಳು ಸೇಲ್

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಹರಾಜು ಪ್ರಕ್ರಿಯೆಯಲ್ಲಿ 17 ವರ್ಷದ ಬ್ಯಾಟ್ಸ್ ಮ್ಯಾನ್ ಯಶಸ್ವಿ ಜಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 2.40 ಕೋಟಿ ಕೊಟ್ಟು ಖರೀದಿ ಮಾಡಿದರೆ ಪ್ರಿಯಮ್ ಗಾರ್ಗ್ ಅವರನ್ನು ಹೈದರಾಬಾದ್ ತಂಡ 1.9 ಕೋಟಿ ರೂ. ನೀಡಿ ಖರೀದಿ ಮಾಡಿದೆ.

    ಗುರುವಾರ ಐಪಿಎಲ್ 13 ನೇ ಆವೃತ್ತಿ ಆಟಗಾರರ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ಆರಂಭವಾಗಿದ್ದು, ತಂಡಗಳು ತಮಗೆ ಬೇಕಾದ ಆಟಗಾರರನ್ನು ಬಿಡ್ ಮಾಡುತ್ತಿವೆ. ಗುರುವಾರ ನಡೆದ ಹರಾಜಿನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 15.50 ಕೋಟಿಗೆ ಕೆಕೆಆರ್ ತಂಡದ ಪಾಲಾಗಿ ದುಬಾರಿ ಆಟಗಾರನಾಗಿದ್ದಾರೆ. ಈ ಹರಾಜಿನಲ್ಲಿ ನಮ್ಮ ದೇಶೀಯ ಪ್ರತಿಭೆಗಳಿಗೂ ಉತ್ತಮ ಬೆಲೆ ಸಿಕ್ಕಿದ್ದು, ಮಹಾರಾಷ್ಟ್ರದ ಆಟಗಾರ ಯಶಸ್ವಿ ಜಸ್ವಾಲ್ ಮತ್ತು ಭಾರತದ ಅಂಡರ್-19 ತಂಡದ ನಾಯಕ ಪ್ರಿಯಮ್ ಗಾರ್ಗ್ ಹರಾಜಿನಲ್ಲಿ ಮಿಂಚಿದ್ದಾರೆ.

    ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಮಹಾರಾಷ್ಟ್ರದ ಆಟಗಾರ ಯಶಸ್ವಿ ಜಸ್ವಾಲ್ ಅವರನ್ನು ಶಿಲ್ಪ ಶೆಟ್ಟಿ ಮಾಲೀಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಬರೋಬ್ಬರಿ 2.40 ಕೋಟಿ ಕೊಟ್ಟು ಖರೀದಿ ಮಾಡಿದೆ. ಜಸ್ವಾಲ್ ಬಡಕುಟಂಬದ ಹುಡುಗನಾಗಿದ್ದು ಈ ಮೂಲಕ ಮುಂಬೈನ ರಸ್ತೆಬದಿಯಲ್ಲಿ ಪಾನಿಪುರಿ ಮಾರಿ ಮಗನನ್ನು ಕ್ರಿಕೆಟರ್ ಆಗಿ ಮಾಡಿದ ತಂದೆಯ ಪರಿಶ್ರಮಕ್ಕೆ ಬೆಲೆ ಸಿಕ್ಕಂತೆ ಆಗಿದೆ. ಇದನ್ನು ಓದಿ: ಫಿಂಚ್, ಮೋರಿಸ್ ಆರ್‌ಸಿಬಿಗೆ- ದಾಖಲೆ ಬೆಲೆಗೆ ಪ್ಯಾಟ್ ಕಮಿನ್ಸ್ ಸೇಲ್

    ಚಾಲಕನ ಮಗನಿಗೆ ಕೋಟಿ ಬೆಲೆ
    ಭಾರತದ ಅಂಡರ್-19 ತಂಡದ ಕ್ಯಾಪ್ಟನ್ ಆಗಿರುವ ಪ್ರಿಯಮ್ ಗಾರ್ಗ್ ಮೂಲತಃ ಉತ್ತರ ಪ್ರದೇಶದವರು. ಗಾರ್ಗ್ ಅವರ ತಂದೆ ಉತ್ತರ ಪ್ರದೇಶದ ಪರೀಕ್ಷಿತ್ ನಗರದಲ್ಲಿ ಶಾಲಾ ವಾಹನವನ್ನು ಚಾಲಯಿಸುತ್ತಾರೆ. ಆದರೆ ತುಂಬಾ ಕಠಿಣ ಪರಿಸ್ಥಿತಿಯಲ್ಲೂ ಕ್ರಿಕೆಟ್ ಅಭ್ಯಾಸ ಬಿಡದ ಗಾರ್ಗ್ ಭಾರತದ ಅಂಡರ್-19 ತಂಡದ ನಾಯಕನಾಗಿ ಮಿಂಚಿದ್ದರು. ಈಗ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 1.9 ಕೋಟಿ ನೀಡಿ ಖರೀದಿ ಮಾಡಿದೆ.

    ಆರೋನ್ ಪಿಂಚ್, ಮೋರಿಸ್  ಆರ್‌ಸಿಬಿಗೆ
    ಆರ್‌ಸಿಬಿ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮ್ಯಾನ್ ಆರೋನ್ ಫಿಂಚ್ ಅವರನ್ನು 4.40 ಕೋಟಿ ನೀಡಿ ಖರೀದಿ ಮಾಡಿತು. ನಂತರ ಸೌಥ್ ಆಫ್ರಿಕಾದ ಆಲ್‍ರೌಂಡರ್ ಕ್ರಿಸ್ ಮೋರಿಸ್ ಅವರನ್ನು 10 ಕೋಟಿಗೆ ಖರೀದಿ ಮಾಡಿದೆ. ನಂತರ ಕೇನ್ ರಿಚಡ್ರ್ಸನ್ 4.40 ಕೋಟಿ, ಜೊಶುವಾ ಫಲಿಪ್ 20 ಲಕ್ಷ, ಪವನ್ ದೇಶಪಾಂಡೆ 20 ಲಕ್ಷಕ್ಕೆ ಖರೀದಿ ಮಾಡಿದೆ.

  • ಉತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟುತ್ತೇವೆ – ಕೊಹ್ಲಿ

    ಉತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟುತ್ತೇವೆ – ಕೊಹ್ಲಿ

    ನವದೆಹಲಿ: ನಾಳೆ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟುತ್ತೇವೆ ಎಂದು ಆರ್.ಸಿ.ಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

    ನಾಳೆ ಕೋಲ್ಕತ್ತಾದಲ್ಲಿ ಐಪಿಎಲ್ 2020 ರ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ತಂಡಗಳು ತಮಗೆ ಬೇಕಾದ ಆಟಗಾರರು ಬಿಡ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ನಡೆಸಿವೆ. 971 ಮಂದಿಯ ಪಟ್ಟಿಯನ್ನು 332ಕ್ಕೆ ಇಳಿಕೆ ಮಾಡಿ ಐಪಿಎಲ್ ಆಡಳಿತ ಮಂಡಳಿ ಪಟ್ಟಿಯನ್ನು ತಂಡದ ಫ್ರಾಂಚೈಸಿಗಳಿಗೆ ನೀಡಿದೆ. ಈ ಪಟ್ಟಿಯಲ್ಲಿ ಭಾರತದ 19 ಮಂದಿ ಆಟಗಾರರು ಹಾಗೂ ಫ್ರಾಂಚೈಸಿಗಳು ಮನವಿ ಮಾಡಿದ 24 ಮಂದಿ ಕ್ರಿಕೆಟಿಗರು ಸೇರಿದ್ದಾರೆ.

    ಈಗ ಈ ಹರಾಜು ಪ್ರಕ್ರಿಯೆ ವಿಚಾರವಾಗಿ ವಿಡಿಯೋವೊಂದನ್ನು ಮಾಡಿರುವ ವಿರಾಟ್ ಕೊಹ್ಲಿ, ವಿಡಿಯೋದಲ್ಲಿ ಎಲ್ಲಾ ನನ್ನ ಆರ್‍ಸಿಬಿ ಅಭಿಮಾನಿಗಳಿಗೂ ನಮಸ್ಕಾರ ಮುಂಬರುವ ಐಪಿಎಲ್ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿರುವುದು ನಿಮಗೆ ಗೊತ್ತಿದೆ. ನೀವು ನಮ್ಮ ತಂಡದ ಜೊತೆ ಸದಾ ಇರುತ್ತೀರಿ ಎಂಬುದು ನನಗೆ ಗೊತ್ತಿದೆ. ತಂಡದ ಆಡಳಿತ ಮಂಡಳಿ ಮತ್ತು ಕೋಚ್‍ಗಳಾದ ಮೈಕ್ ಹೆಸ್ಸನ್ ಮತ್ತು ಸೈಮನ್ ಕ್ಯಾಟಿಚ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹರಾಜು ಪ್ರಕ್ರಿಯೆ ವಿಚಾರವಾಗಿ ನಾವು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಮುಂಬರುವ ಆವೃತ್ತಿಗಾಗಿ ಬೇಕಾಗಿರುವ ಆಟಗಾರರನ್ನು ಹರಾಜಿನಲ್ಲಿ ತೆಗೆದುಕೊಂಡು ಉತ್ತಮ ಮತ್ತು ಬಲಿಷ್ಠ ತಂಡ ಕಟ್ಟುತ್ತೇವೆ. ನಿಮ್ಮ ಪ್ರೀತಿಗೆ ನಾವು ಬೆಲೆ ಕಟ್ಟಲು ಆಗಲ್ಲ. ಇದೇ ರೀತಿ ಮುಂಬರುವ 2020 ರ ಆವೃತ್ತಿಯಲ್ಲೂ ನಮಗೆ ನೀವು ಬೆಂಬಲಿಸಬೇಕು ಎಂದು ಕೊಹ್ಲಿ ವಿಡಿಯೋದಲ್ಲಿ ಹೇಳಿದ್ದಾರೆ. ಕೊಹ್ಲಿ ಅವರ ಈ ವಿಡಿಯೋವನ್ನು ಆರ್.ಸಿ.ಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ.

    ವಿರಾಟ್ ಕೊಹ್ಲಿ 2013 ರಿಂದ ಆರ್.ಸಿ.ಬಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದು, ಇಲ್ಲಿಯವರಿಗೆ ಕಪ್ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ಕಳೆದ ಕೆಲ ಆವೃತ್ತಿಗಳಲ್ಲಿ ನಿರಾಶದಾಯಕ ಆಟ ಪ್ರದರ್ಶನ ನೀಡಿರುವ ಬೆಂಗಳೂರು ತಂಡ 2016 ಫೈನಲಿಗೆ ಹೋಗಿ ಹೈದರಾಬಾದ್ ವಿರುದ್ಧ ಸೋತ ನಂತರ ಅಂಕಪಟ್ಟಿಯಲ್ಲಿ 2017 ರಲ್ಲಿ ಕೊನೆಯ ಸ್ಥಾನ, 2018 ರಲ್ಲಿ ಆರನೇ ಸ್ಥಾನ ಮತ್ತು 2019 ರಲ್ಲಿ ಮತ್ತೆ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇದನ್ನು ಓದಿ: ಯುವಿಗೆ 16 ಕೋಟಿ, ಬೆನ್‌ ಸ್ಟೋಕ್ಸ್‌ಗೆ 14.50 ಕೋಟಿ – 2014 ರಿಂದ 2019 ರವರಗಿನ ದುಬಾರಿ ಆಟಗಾರರ ಪಟ್ಟಿ

  • ಯುವಿಗೆ 16 ಕೋಟಿ, ಬೆನ್‌ ಸ್ಟೋಕ್ಸ್‌ಗೆ 14.50 ಕೋಟಿ – 2014 ರಿಂದ 2019 ರವರಗಿನ ದುಬಾರಿ ಆಟಗಾರರ ಪಟ್ಟಿ

    ಯುವಿಗೆ 16 ಕೋಟಿ, ಬೆನ್‌ ಸ್ಟೋಕ್ಸ್‌ಗೆ 14.50 ಕೋಟಿ – 2014 ರಿಂದ 2019 ರವರಗಿನ ದುಬಾರಿ ಆಟಗಾರರ ಪಟ್ಟಿ

    ಬೆಂಗಳೂರು: ಕ್ರಿಕೆಟ್ ಜಗತ್ತಿನ ದುಬಾರಿ ಟೂರ್ನಿ ಎಂದೇ ಹೆಸರುವಾಸಿ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

    ಇದೇ ತಿಂಗಳ 19 ರಂದು ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದ್ದು, 971 ಮಂದಿಯ ಪಟ್ಟಿಯನ್ನು 332ಕ್ಕೆ ಇಳಿಕೆ ಮಾಡಿ ಐಪಿಎಲ್ ಆಡಳಿತ ಮಂಡಳಿ ಪಟ್ಟಿಯನ್ನು ತಂಡದ ಫ್ರಾಂಚೈಸಿಗಳಿಗೆ ನೀಡಿದೆ. ಈ ಪಟ್ಟಿಯಲ್ಲಿ ಭಾರತದ 19 ಮಂದಿ ಆಟಗಾರರು ಹಾಗೂ ಫ್ರಾಂಚೈಸಿಗಳು ಮನವಿ ಮಾಡಿದ 24 ಮಂದಿ ಕ್ರಿಕೆಟಿಗರು ಸೇರಿದ್ದಾರೆ.

    ಇಲ್ಲಿಯವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ನಮ್ಮ ದೇಶಿಯ ಆಟಗಾರರೇ ಹೆಚ್ಚು ದುಬಾರಿ ಹಣಕ್ಕೆ ಬಿಡ್ ಆಗಿದ್ದು, 2015 ರಲ್ಲಿ 16 ಕೋಟಿಗೆ ಬಿಡ್ ಆಗಿದ್ದ ಭಾರತದ ಮಾಜಿ ಆಟಗಾರರು ಯುವರಾಜ್ ಸಿಂಗ್ ಅತೀ ಹೆಚ್ಚು ದುಬಾರಿ ಆಟಗಾರ ಆಗಿದ್ದಾರೆ. ಕಳೆದ ವರ್ಷ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾರತದ ವೇಗಿ ಜಯದೇವ್ ಉನಾದ್ಕಟ್ ಅವರು 8.40 ಕೋಟಿಗೆ ಬಿಡ್ ಆಗಿದ್ದು, 2019 ರ ದುಬಾರಿ ಆಟಗಾರ ಆಗಿದ್ದರು.

    2014 ರಿಂದ 2019 ರವರಗಿನ ಅತೀ ಹೆಚ್ಚು ದುಬಾರಿ ಆಟಗಾರರ ಪಟ್ಟಿ

    2019 ಟಾಪ್ ಫೈವ್ ದುಬಾರಿ ಆಟಗಾರರು
    8.40 ಕೋಟಿ – ಜಯದೇವ್ ಉನಾದ್ಕಟ್ (ಆರ್.ಆರ್)
    8.40 ಕೋಟಿ – ವರುಣ್ ಚಕ್ರವರ್ತಿ (ಕಿಂಗ್ಸ್ ಇಲೆವನ್)
    7.20 ಕೋಟಿ – ಸ್ಯಾಮ್ ಕರ್ರನ್ (ಕಿಂಗ್ಸ್ ಇಲೆವನ್)
    6.40 ಕೋಟಿ – ಕಾಲಿನ್ ಇಂಗ್ರಾಮ್ (ಡಿಸಿ)
    5.00 ಕೋಟಿ – ಮೋಹಿತ್ ಶರ್ಮಾ (ಸಿಎಸ್‍ಕೆ), ಅಕ್ಷರ್ ಪಟೇಲ್ (ಡಿಸಿ), ಕಾರ್ಲೋಸ್ ಬ್ರಾಥ್‍ವೈಟ್ (ಕೆಕೆಆರ್), ಶಿವಂ ದುಬೆ (ಆರ್. ಸಿ.ಬಿ)

    2018 ಟಾಪ್ ಫೈವ್ ದುಬಾರಿ ಆಟಗಾರರು
    12.50 ಕೋಟಿ – ಬೆನ್ ಸ್ಟೋಕ್ಸ್ (ಆರ್.ಆರ್)
    11.50 ಕೋಟಿ – ಜಯದೇವ್ ಉನಾದ್ಕಟ್ (ಆರ್.ಆರ್)
    11.00 ಕೋಟಿ – ಕೆಎಲ್ ರಾಹುಲ್ (ಕಿಂಗ್ಸ್ ಇಲೆವನ್)
    11.00 ಕೋಟಿ – ಮನೀಶ್ ಪಾಂಡೆ (ಎಸ್.ಆರ್.ಹೆಚ್)
    9.60 ಕೋಟಿ – ಕ್ರಿಸ್ ಲಿನ್ (ಕೆಕೆಆರ್)

    2017 ಟಾಪ್ ಫೈವ್ ದುಬಾರಿ ಆಟಗಾರರು
    14.50 ಕೋಟಿ – ಬೆನ್ ಸ್ಟೋಕ್ಸ್ (ಆರ್.ಪಿ.ಎಸ್)
    12.00 ಕೋಟಿ – ಟೈಮಲ್ ಮಿಲ್ಸ್ (ಆರ್.ಸಿ.ಬಿ)
    5.00 ಕೋಟಿ – ಕಗಿಸೊ ರಬಾಡಾ (ಡಿಡಿ)
    5.00 ಕೋಟಿ – ಟ್ರೆಂಟ್ ಬೌಲ್ಟ್ (ಕೆಕೆಆರ್)
    4.50 ಕೋಟಿ – ಪ್ಯಾಟ್ ಕಮ್ಮಿನ್ಸ್ (ಡಿಡಿ)

    2016 ಟಾಪ್ ಫೈವ್ ದುಬಾರಿ ಆಟಗಾರರು
    9.50 ಕೋಟಿ – ಶೇನ್ ವ್ಯಾಟ್ಸನ್ (ಆರ್.ಸಿ.ಬಿ)
    8.50 ಕೋಟಿ – ಪವನ್ ನೇಗಿ (ಡಿಡಿ)
    7.00 ಕೋಟಿ – ಯುವರಾಜ್ ಸಿಂಗ್ (ಎಸ್.ಆರ್.ಹೆಚ್)
    7.00 ಕೋಟಿ – ಕ್ರಿಸ್ ಮೋರಿಸ್ (ಡಿಡಿ)
    6.50 ಕೋಟಿ – ಮೋಹಿತ್ ಶರ್ಮಾ (ಕಿಂಗ್ಸ್ ಇಲೆವನ್)

    2015 ಟಾಪ್ ಫೈವ್ ದುಬಾರಿ ಆಟಗಾರರು
    16.0 ಕೋಟಿ – ಯುವರಾಜ್ ಸಿಂಗ್ (ಡಿಡಿ)
    10.5 ಕೋಟಿ – ದಿನೇಶ್ ಕಾರ್ತಿಕ್ (ಆರ್.ಸಿಬಿ)
    7.50 ಕೋಟಿ – ಏಂಜೆಲೊ ಮ್ಯಾಥ್ಯೂಸ್ (ಡಿಡಿ)
    4.00 ಕೋಟಿ – ಜಹೀರ್ ಖಾನ್ (ಡಿಡಿ)
    3.80 ಕೋಟಿ – ಟ್ರೆಂಟ್ ಬೌಲ್ಟ್ (ಎಸ್.ಆರ್.ಹೆಚ್)

    2014 ಟಾಪ್ ಫೈವ್ ದುಬಾರಿ ಆಟಗಾರರು
    14.0 ಕೋಟಿ – ಯುವರಾಜ್ ಸಿಂಗ್ (ಆರ್.ಸಿ.ಬಿ)
    12.5 ಕೋಟಿ – ದಿನೇಶ್ ಕಾರ್ತಿಕ್ (ಡಿಡಿ)
    9.00 ಕೋಟಿ – ಕೆವಿನ್ ಪೀಟರ್ಸನ್ (ಡಿಡಿ)
    6.50 ಕೋಟಿ – ಮಿಚೆಲ್ ಜಾನ್ಸನ್ (ಕಿಂಗ್ಸ್ ಇಲೆವನ್)
    6.00 ಕೋಟಿ – ಗ್ಲೆನ್ ಮ್ಯಾಕ್ಸ್ ವೆಲ್ (ಕಿಂಗ್ಸ್ ಇಲೆವನ್)

  • ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಿ: ಪಂಜಾಬ್ ಮಾಲೀಕ ಮನವಿ

    ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಿ: ಪಂಜಾಬ್ ಮಾಲೀಕ ಮನವಿ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರತಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುವಂತೆ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಬಿಸಿಸಿಐಗೆ ಮನವಿ ಮಾಡಿದ್ದಾರೆ.

    ಈ ವಿಚಾರವಾಗಿ ಬಿಸಿಸಿಐಗೆ ಪತ್ರ ಬರೆದಿರುವ ವಾಡಿಯಾ, ಐಪಿಎಲ್ ಟೂರ್ನಿಯ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿದಕ್ಕೆ ಬಿಸಿಸಿಐ ನಡೆಯನ್ನು ಶ್ಲಾಘಿಸಿದ್ದಾರೆ. ಈ ವೇಳೆ 2020 ರ ಐಪಿಎಲ್ ಆವೃತ್ತಿಯ ಪ್ರತಿ ಪಂದ್ಯಕ್ಕೂ ಮುನ್ನ ನಮ್ಮ ಹೆಮ್ಮೆಯ ರಾಷ್ಟ್ರಗೀತೆಯನ್ನು ಹಾಡಿಸಬೇಕು ಎಂದು ಬಿಸಿಸಿಐಗೆ ಒತ್ತಾಯ ಮಾಡಿದ್ದಾರೆ.

    ಸಾಮಾನ್ಯವಾಗಿ ಅಂತಾರಾಷ್ಟೀಯ ಮಟ್ಟದ ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುತ್ತಾರೆ. ಆದರೆ ಐಪಿಎಲ್ ಕೂಡ ವಿಶ್ವದ ನಂಬರ್ ಒನ್ ಕ್ರಿಕೆಟ್ ಲೀಗ್ ಆಗಿದೆ. ಆದ್ದರಿಂದ ಐಪಿಎಲ್ ಪ್ರತಿ ಪಂದ್ಯದ ಆರಂಭಕ್ಕೂ ಮುಂಚೆ ರಾಷ್ಟ್ರಗೀತೆ ಹಾಡಿಸಬೇಕು. ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಮಾಡಿದ್ದು ಅತ್ಯುತ್ತಮ ನಡೆ. ಸಮಾರಂಭಕ್ಕೆ ಅಪಾರ ಪ್ರಮಾಣದ ಹಣ ಖರ್ಚು ಮಾಡುವ ಬದಲು ಪಂದ್ಯ ಮತ್ತು ಕ್ರೀಡಾ ಕೂಟದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಬೇಕು ಎಂದು ವಾಡಿಯಾ ಹೇಳಿದ್ದಾರೆ.

    ನಾನು ಈ ವಿಚಾರವಾಗಿ ಈ ಮುಂಚೆಯೇ ಬಿಸಿಸಿಐಗೆ ಪತ್ರ ಬರೆದಿದ್ದೆ. ಆದರೆ ಈಗ ನೇರವಾಗಿ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಅವರಿಗೆ ಪತ್ರ ಬರೆದಿದ್ದೇನೆ. ರಾಷ್ಟ್ರಗೀತೆಯನ್ನು ನಮ್ಮ ದೇಶದಲ್ಲಿ ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್) ಮತ್ತು ಪ್ರೊ-ಕಬ್ಬಡಿ ಲೀಗ್ ಪಂದ್ಯಗಳ ಆರಂಭಕ್ಕೂ ಮುನ್ನ ಹಾಡಿಸುತ್ತಾರೆ. ಹೊರ ದೇಶಗಳಲ್ಲೂ ಕೂಡ ಈ ವಿಧಾನ ಜಾರಿಯಲ್ಲಿದೆ. ಆದ್ದರಿಂದ ಐಪಿಎಲ್ ಲೀಗ್‍ನಲ್ಲೂ ಈ ವಿಧಾನ ಜಾರಿಗೆ ತರಬೇಕು ಎಂದು ವಾಡಿಯಾ ಮನವಿ ಮಾಡಿದ್ದಾರೆ.

    ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಭಾರತೀಯ ಕ್ರಿಕೆಟ್‍ನಲ್ಲಿ ಹಲವಾರು ಮಹತ್ವದ ಬದಲಾವಣೆಯನ್ನು ತರುತ್ತಿದ್ದಾರೆ. ಪ್ರತಿ ಐಪಿಎಲ್ ಆವೃತ್ತಿ ಆರಂಭದ ಸಮಯದಲ್ಲಿ ಉದ್ಘಾಟನಾ ಸಮಾರಂಭ ಆಯೋಜನೆ ಆಗುತಿತ್ತು. ಈ ಉದ್ಘಾಟನಾ ಸಮಾರಂಭಕ್ಕೆ ಸೌರವ್ ಗಂಗೂಲಿ ಬ್ರೇಕ್ ಹಾಕಿದ್ದಾರೆ. ಇಲ್ಲಿಯವರೆಗೆ ಬಿಸಿಸಿಐ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿರಲಿಲ್ಲ. ಗಂಗೂಲಿ ಅಧ್ಯಕ್ಷರಾದ ಬಳಿಕ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಒಪ್ಪಿಗೆ ಸಿಕ್ಕಿದೆ. ಮೊದಲ ಹಗಲು ರಾತ್ರಿ ಪಂದ್ಯ ಬಾಂಗ್ಲಾ ವಿರುದ್ಧ ನ.22 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

  • ಐಪಿಎಲ್ ಉದ್ಘಾಟನಾ ಸಮಾರಂಭ ‘ವೇಸ್ಟ್ ಆಫ್ ಮನಿ’ ಎಂದ ಬಿಸಿಸಿಐ

    ಐಪಿಎಲ್ ಉದ್ಘಾಟನಾ ಸಮಾರಂಭ ‘ವೇಸ್ಟ್ ಆಫ್ ಮನಿ’ ಎಂದ ಬಿಸಿಸಿಐ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದ್ಧೂರಿ ಉದ್ಘಾಟನಾ ಸಮಾರಂಭ ಮಾಡುವುದು ವೇಸ್ಟ್ ಆಫ್ ಮನಿ ಎಂದು ಬಿಸಿಸಿಐ ಅಭಿಪ್ರಾಯ ವ್ಯಕ್ತಪಡಿಸಿದೆ.

    ಐಪಿಎಲ್ ಎಂದರೆ ಒಂದು ವರ್ಣ ರಂಜಿತ ಕ್ರಿಕೆಟ್ ಹಬ್ಬ. ವಿಶ್ವ ಕ್ರಿಕೆಟಿನಲ್ಲಿ ದುಡ್ಡಿನ ಹೊಳೆಯನ್ನೇ ಹರಿಸುವ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಉದ್ಘಾಟನಾ ಸಮಾರಂಭ ವರ್ಷ ವರ್ಷ ಬಹಳ ಅದ್ಧೂರಿಯಾಗಿ ಆಯೋಜನೆ ಆಗುತಿತ್ತು. ಆದರೆ ಈ ವರ್ಷದಿಂದ ಅದಕ್ಕೆ ಬ್ರೇಕ್ ಹಾಕಲು ಬಿಸಿಸಿಐ ತೀರ್ಮಾನ ಮಾಡಿದೆ.

    ಕಳೆದ ವರ್ಷ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಲಾಗಿತ್ತು. ಸಮಾರಂಭ ಆಯೋಜಿಸಲು ನಿಗದಿಯಾಗಿದ್ದ ಹಣವನ್ನು ಬಿಸಿಸಿಐ ಸೇನೆಗೆ ನೀಡಿತ್ತು. ಪ್ರತಿ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲು ಅಂದಾಜು 20 ಕೋಟಿ ರೂ ಖರ್ಚಾಗುತ್ತಿತ್ತು. ಅದರಲ್ಲಿ 2019ರ ಪುಲ್ವಾಮಾ ದಾಳಿಯಲ್ಲಿ ಹುತತ್ಮಾರಾದ ಸೈನಿಕರಿಗೆ 11 ಕೋಟಿ ರೂ. ಸಿಆರ್‌ಪಿಎಫ್‌ಗೆ 7 ಕೋಟಿ ರೂ, ನೌಕಾಪಡೆ ಮತ್ತು ವಾಯುಪಡೆಗೆ ತಲಾ 1 ಕೋಟಿ ರೂ. ನೀಡಿತ್ತು.

    ಈ ವಿಚಾರವಾಗಿ ಮಾತನಾಡಿರುವ ಬಿಸಿಸಿಐನ ಆಡಳಿತ ಅಧಿಕಾರಿಗಳ ಮುಖ್ಯಸ್ಥ ವಿನೋದ್ ರಾಯ್ ಪ್ರತಿ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಅದ್ಧೂರಿಯಾಗಿ ಮಾಡುವುದರಿಂದ ಸುಮ್ಮನೆ ದುಡ್ಡು ವ್ಯರ್ಥವಾಗುತ್ತಿದೆ. ಯಾವ ಕ್ರೀಡಾಭಿಮಾನಿಯು ಸಹ ಈ ಕಾರ್ಯಕ್ರಮವನ್ನು ಇಷ್ಟಪಡುತ್ತಿಲ್ಲ. ಇದಕ್ಕೆ ಸುಮ್ಮನೇ ಅಪಾರ ಪ್ರಮಾಣದ ಹಣವನ್ನು ಖರ್ಚುಮಾಡುವ ಬದಲಿಗೆ ಈ ಹಣವನ್ನು ಸಮಾಜಕ್ಕೆ ಒಳ್ಳೆಯದಾಗುವ ಕೆಲಸಕ್ಕೆ ಉಪಯೋಗಿಸಬಹುದು. ಆದ್ದರಿಂದ ಈ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಬಾರದು ಎಂದು ನಾವು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

    ಪ್ರತಿ ವರ್ಷ ಐಪಿಎಲ್ ಆರಂಭವಾಗುವ ದಿನ ವರ್ಣರಂಜಿತ ಅದ್ಧೂರಿ ಉದ್ಘಾಟನಾ ಸಮಾರಂಭ ಮಾಡಲಾಗುತ್ತಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ಸ್ ಭಾಗವಹಿಸುತ್ತಿದ್ದರು. ಇವರ ಜೊತೆಗೆ ಅಂತಾರಾಷ್ಟ್ರೀಯ ತಾರೆಗಳು ಪ್ರದರ್ಶನ ನೀಡುತ್ತಿದ್ದರು.

  • ಕೊಹ್ಲಿ ಎಫೆಕ್ಟ್ – ಐಪಿಎಲ್‌ನಲ್ಲಿ ಇನ್ಮುಂದೆ ನೋಬಾಲ್ ಅಂಪೈರ್

    ಕೊಹ್ಲಿ ಎಫೆಕ್ಟ್ – ಐಪಿಎಲ್‌ನಲ್ಲಿ ಇನ್ಮುಂದೆ ನೋಬಾಲ್ ಅಂಪೈರ್

    ಮುಂಬೈ: ರಾಯಲ್ಸ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂಪೈರ್ ಲೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ನೋಬಾಲ್ ಗುರುತಿಸಲೆಂದೇ ಪ್ರತ್ಯೇಕ ಅಂಪೈರ್ ನೇಮಕವಾಗಲಿದ್ದಾರೆ.

    ಮಂಗಳವಾರ ಮುಂಬೈನಲ್ಲಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ನೇತೃತ್ವದಲ್ಲಿ ನಡೆದ ಐಪಿಎಲ್ ಆಡಳಿತ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಈ ಸಭೆಯಲ್ಲಿ ನೋಬಾಲ್ ಗಮನಿಸಲೆಂದೇ ಪ್ರತ್ಯೇಕ ಅಂಪೈರ್ ನಿಯೋಜಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.

    ನೋಬಾಲ್ ಗಮನಿಸಲು ಪ್ರತ್ಯೇಕ ಅಂಪೈರ್ ನೇಮಕಕ್ಕೆ ಐಪಿಎಲ್ ಮುಂದಾಗಿದ್ದು ಯಾಕೆ ಎನ್ನುವುದಕ್ಕೆ ಅಧಿಕೃತ ಕಾರಣ ಸಿಗದೇ ಇದ್ದರೂ ಕಳೆದ ಬಾರಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಐಪಿಎಲ್ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.

    ಸಭೆಯ ಬಳಿಕ ಮಾತನಾಡಿದ ಅಧಿಕಾರಿಯೊಬ್ಬರು, ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಅಂಪೈರ್ ಅಲ್ಲದೇ ನೋಬಾಲ್ ಗಮನಿಸಲೆಂದೇ ಅಂಪೈರ್ ಇರಲಿದ್ದಾರೆ. ಈ ಕಲ್ಪನೆ ನಿಮಗೆ ಸ್ವಲ್ಪ ವಿಚಿತ್ರ ಎನಿಸಬಹುದು. ಈ ವಿಚಾರದ ಬಗ್ಗೆ ಮೊದಲ ಐಪಿಎಲ್ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

    ನೋಬಾಲ್ ಗಮನಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ. ಈ ಅಂಪೈರ್ ಮೂರು ಅಥವಾ ನಾಲ್ಕನೇಯ ಅಂಪೈರ್ ಅಲ್ಲ ಎಂದು ಅಧಿಕಾರಿ ವಿವರಿಸಿದರು.

    ಪವರ್ ಪ್ಲೇಯರ್ ಕಲ್ಪನೆಗೆ ತಡೆ:
    2020ರ ಐಪಿಎಲ್‌ನಲ್ಲಿ ಪವರ್ ಪ್ಲೇಯರ್ ಕಲ್ಪನೆ ಜಾರಿಗೆ ಬರಲಿದೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಸಮಯದ ಅಭಾವದಿಂದಾಗಿ ಈ ಕಲ್ಪನೆಯನ್ನು ಕೈಬಿಡಲಾಗಿದೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಪವರ್ ಪ್ಲೇಯರ್ – ಕೊನೆಯ ಓವರಿನಲ್ಲಿ ಪಂದ್ಯದ ಫಲಿತಾಂಶವೇ ಬದಲಾಗುತ್ತೆ

    ಅಂದು ಏನಾಗಿತ್ತು?
    ಮಾರ್ಚ್ 28 ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 8 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಬೆಂಗಳೂರು ತಂಡಕ್ಕೆ ಕೊನೆಯ ಓವರಿನಲ್ಲಿ 17 ರನ್ ಬೇಕಿತ್ತು. ಕ್ರೀಸಿನಲ್ಲಿ ಎಬಿಡಿ ವಿಲಿಯರ್ಸ್ 68 (39 ಎಸೆತ) ರನ್ ಗಳಿಸಿದ್ದರೆ ಶಿವಂ ದುಬೆ 1 ರನ್ ಗಳಿಸಿದ್ದರು. ಮಾಲಿಂಗ ಎಸೆದ ಕೊನೆಯ ಓವರಿನ ಮೊದಲ ಎಸೆತವನ್ನು ದುಬೆ ಸಿಕ್ಸರ್‌ಗೆ ಅಟ್ಟಿದ್ದರು. ಒಟ್ಟು ಐದು ಎಸೆತಗಳಲ್ಲಿ 10 ರನ್ ಬಂದಿತ್ತು. ಕೊನೆಯ ಎಸೆತದಲ್ಲಿ ಜಯಗಳಿಸಲು 7 ರನ್ ಬೇಕಿತ್ತು. ಮಾಲಿಂಗ ಎಸೆದ ಕೊನೆಯ ಎಸೆತದಲ್ಲಿ ದುಬೆ ಬಲವಾಗಿ ಹೊಡೆದರೂ ಬಾಲ್ ಬ್ಯಾಟಿಗೆ ತಾಗದ ಕಾರಣ ಯಾವುದೇ ರನ್ ಬಂದಿರಲಿಲ್ಲ. ಆದರೆ ಟಿವಿ ರಿಪ್ಲೇಯಲ್ಲಿ ಮಾಲಿಂಗ ನೋಬಾಲ್ ಎಸೆದಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಮುಂದಿನ ಎಸೆತ ಫ್ರೀ ಹಿಟ್ ಆಗಬೇಕಿತ್ತು. ಆದರೆ ಅಂಪೈರ್ ರವಿ ನೋಬಾಲ್ ನೀಡದ ಪರಿಣಾಮ ಮುಂಬೈ ತಂಡ 6 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

    ಕೊಹ್ಲಿ ಹೇಳಿದ್ದು ಏನು?
    ಪಂದ್ಯದ ಬಳಿಕ ಕೊಹ್ಲಿ ಮಾತನಾಡಿ, ನಾವು ಐಪಿಎಲ್ ಪಂದ್ಯ ಆಡುತ್ತಿದ್ದೇವೆ ಹೊರತು ಕ್ಲಬ್ ಕ್ರಿಕೆಟ್ ಆಡುತ್ತಿಲ್ಲ. ಅಂಪೈರ್ ಗಳು ಕಣ್ಣನ್ನು ತೆರೆದು ಗಮನಿಸುತ್ತಿರಬೇಕು. ಅಂಪೈರ್ ನೋಬಾಲ್ ನೀಡುತ್ತಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆ ಇತ್ತು. ನೋಬಾಲ್ ಮತ್ತು ಫ್ರೀ ಹಿಟ್ ನೀಡಿದ್ದರೆ ನಾವು ಗೆಲ್ಲುವ ಸಾಧ್ಯತೆ ಇತ್ತು. ಅಂಪೈರ್ ನಿರ್ಲಕ್ಷ್ಯದಿಂದ ಎಲ್ಲ ಹಾಳಾಯಿತು. ಅಂಪೈರ್ ಗಳು ಮೈದಾನದಲ್ಲಿ ಜಾಗೃತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಆಕ್ರೋಶ ಹೊರಹಾಕಿದ್ದರು.

    ಮೈದಾನ ಪ್ರವೇಶಿಸಿದ್ದ ಧೋನಿ:
    ರಾಜಸ್ಥಾನ ಮತ್ತು ಚೆನ್ನೈ ತಂಡದ ವೇಳೆಯೂ ಅಂಪೈರ್ ನೋಬಾಲ್ ನೀಡಿರಲಿಲ್ಲ. ಈ ವೇಳೆ ನಾಯಕ ಧೋನಿ ಮೈದಾನ ಪ್ರವೇಶಿಸಿ ಅಂಪೈರ್ ಜೊತೆ ಜಗಳವಾಡಿದ್ದರು. ಅಂಪೈರ್ ಎಡವಟ್ಟುಗಳಿಂದ ಪದೇ ಪದೇ ಮುಜುಗರಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಮಾದ ಆಗದಂತೆ ತಡೆಯಲು ನೋಬಾಲ್ ಗಮನಿಸಲೆಂದೇ ಪ್ರತ್ಯೇಕ ಅಂಪೈರ್ ನಿಯೋಜಿಸಲು ಐಪಿಎಲ್ ಆಡಳಿತ ಮಂಡಳಿ ಮುಂದಾಗಿದೆ.

  • ಐಪಿಎಲ್‌ನಲ್ಲಿ ಪವರ್ ಪ್ಲೇಯರ್ – ಕೊನೆಯ ಓವರಿನಲ್ಲಿ ಪಂದ್ಯದ ಫಲಿತಾಂಶವೇ ಬದಲಾಗುತ್ತೆ

    ಐಪಿಎಲ್‌ನಲ್ಲಿ ಪವರ್ ಪ್ಲೇಯರ್ – ಕೊನೆಯ ಓವರಿನಲ್ಲಿ ಪಂದ್ಯದ ಫಲಿತಾಂಶವೇ ಬದಲಾಗುತ್ತೆ

    ಮುಂಬೈ: ವಿಶ್ವ ಕ್ರಿಕೆಟಿನಲ್ಲಿ ಹಣದ ಹೊಳೆ ಹರಿಸುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮತ್ತಷ್ಟು ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಬಿಸಿಸಿಐ ‘ಪವರ್ ಪ್ಲೇಯರ್’ ಎನ್ನುವ ಹೊಸ ಪರಿಕಲ್ಪನೆ ಜಾರಿ ಮಾಡಲು ಮುಂದಾಗುತ್ತಿದೆ.

    ಇಂದು ಮುಂಬೈನಲ್ಲಿ ಬಿಸಿಸಿಐ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಧ್ಯಕ್ಷ ಸೌರವ್ ಗಂಗೂಲಿ ಒಪ್ಪಿಗೆ ನೀಡಿದರೆ ಮುಂದಿನ ವರ್ಷವೇ ಈ ಪವರ್ ಪ್ಲೇಯರ್ ಕಲ್ಪನೆ ಜಾರಿಯಾಗುವ ಸಾಧ್ಯತೆಯಿದೆ. ಅಧ್ಯಕ್ಷ ಸ್ಥಾನ ವಹಿಸಿದ ಬಳಿಕ ದೇಶದಲ್ಲಿ ಮೊದಲ ಬಾರಿಗೆ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಒಪ್ಪಿಗೆ ನೀಡಿರುವ ಗಂಗೂಲಿ ಈ ಪ್ರಸ್ತಾಪಕ್ಕೂ ಒಪ್ಪಿಗೆ ನೀಡಬಹುದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

    ಈಗ ಪಂದ್ಯಕ್ಕೂ ಮುನ್ನ ಎರಡೂ ತಂಡಗಳು ಆಡುವ ಹನ್ನೊಂದು ಮಂದಿಯ ಬಳಗವನ್ನು ಹೆಸರಿಸುತ್ತದೆ. ಆದರೆ ಈ ಪವರ್ ಪ್ಲೇಯರ್ ನಲ್ಲಿ 11 ರ ಬದಲಾಗಿ 15 ಮಂದಿ ಆಟಗಾರರ ಹೆಸರನ್ನು ಹೆಸರಿಸಬೇಕಾಗುತ್ತದೆ. ಈ ಕಲ್ಪನೆ ಕಾರ್ಯಗತವಾದರೆ ತಂಡಗಳಿಗೆ ಪಂದ್ಯದ ಯಾವುದೇ ಹಂತದಲ್ಲಿ ವಿಕೆಟ್ ಪತನಗೊಂಡಾಗ ಇಲ್ಲವೇ ಓವರ್ ಮುಕ್ತಾಯಗೊಂಡಾಗ ಬದಲಿ ಆಟಗಾರನ್ನು ಕಣಕ್ಕೆ ಇಳಿಸಬಹುದಾಗಿದೆ.

    ಪಂದ್ಯದ ದಿಕ್ಕೇ ಬದಲಾಗುತ್ತೆ:
    ಪವರ್ ಪ್ಲೇಯರ್ ಜಾರಿಯಾದರೆ ಪಂದ್ಯದ ಫಲಿತಾಂಶವೇ ಬದಲಾಗಬಹುದು. ಉದಾಹರಣೆಗೆ ಒಂದು ತಂಡ 9 ವಿಕೆಟ್ ಕಳೆದುಕೊಂಡಿರುತ್ತದೆ. ಈ ತಂಡ ಜಯಗಳಿಸಲು ಕೊನೆಯ ಓವರ್ ನಲ್ಲಿ 18 ರನ್ ಗಳಿಸಬೇಕಾದ ಒತ್ತಡದಲ್ಲಿರುತ್ತದೆ. ಈ ವೇಳೆ ಆಡುವ 11ರಲ್ಲಿ ಸ್ಥಾನ ಪಡೆಯದ ಬ್ಯಾಟ್ಸ್ ಮನ್ ಕ್ರೀಸಿಗೆ ಆಗಮಿಸಿ ಸಿಕ್ಸರ್, ಬೌಂಡರಿ ಹೊಡೆದು ಪಂದ್ಯವನ್ನೇ ಬದಲಾಯಿಸುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಕೊನೆಯ ಓವರ್‌ನಲ್ಲಿ 8 ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾಗ 11ರ ಬಳಗದಲ್ಲಿ ಸ್ಥಾನ ಪಡೆಯದ ಬೌಲರಿಗೆ ಒವರ್ ಎಸೆಯಲು  ಅವಕಾಶ ಸಿಗುತ್ತದೆ.

    ಫ್ರಾಂಚೈಸಿಗಳು ಒಪ್ಪುತ್ತಾ?
    ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನಲ್ಲಿ ಫ್ರಾಂಚೈಸಿಗಳು ಭಾರೀ ಹೂಡಿಕೆ ಮಾಡಿವೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಪಂದ್ಯ ಕೈ ಜಾರಲಿರುವ ಕಾರಣ ಇವುಗಳ ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದೇ ಈಗ ಕುತೂಹಲಕ್ಕೆ ಕಾರಣವಾಗಿದೆ.

    ಅಭಿಮಾನಿಗಳಿಗೆ ಮನರಂಜನೆ:
    ಐಪಿಎಲ್ ಅಭಿಮಾನಿಗಳ ಕೊರತೆ ಇಲ್ಲ. ಸುಲಭವಾಗಿ ಪಂದ್ಯವನ್ನು ಗೆದ್ದರೆ ಅದರಲ್ಲಿ ಯಾವುದೇ ಮನರಂಜನೆ ಇರುವುದಿಲ್ಲ. ಪವರ್ ಪ್ಲೇಯರ್ ಕಲ್ಪನೆ ಬಂದರೆ ಕೊನೆ ಕ್ಷಣದವರೆಗೂ ರೋಚಕತೆ ಇರುತ್ತದೆ. ಅಷ್ಟೇ ಅಲ್ಲದೇ ನಾಯಕ ಮತ್ತು ಕೋಚ್ ನಿರ್ಧಾರ ಸಹ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

  • ರೋಹಿತ್ ಶರ್ಮಾ ಪುತ್ರಿ ಚೆನ್ನೈ ಫ್ಯಾನ್- ಸಾಕ್ಷಿ ಕೊಟ್ಟ ಸಿಎಸ್‍ಕೆ!

    ರೋಹಿತ್ ಶರ್ಮಾ ಪುತ್ರಿ ಚೆನ್ನೈ ಫ್ಯಾನ್- ಸಾಕ್ಷಿ ಕೊಟ್ಟ ಸಿಎಸ್‍ಕೆ!

    ಮುಂಬೈ: ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಪುತ್ರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿ ಎಂದು ಸಿಎಸ್‍ಕೆ ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿದೆ. ಅಲ್ಲದೇ ಫೋಟೋ ಟ್ವೀಟ್ ಮಾಡಿ ಸಾಕ್ಷಿಯನ್ನು ನೀಡಿದೆ.

    ಸಿಎಸ್‍ಕೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‍ಕೆ ತಂಡಗಳ ನಡುವೆ ಗೆಲುವಿಗಾಗಿ ಭಾರೀ ಪೈಪೋಟಿ ನಡೆಯುತ್ತದೆ. 2019ರ ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಸೋಲಿಸಿ ಮುಂಬೈ ತಂಡ ಗೆಲುವು ಪಡೆದು ಕಪ್ ತನ್ನದಾಗಿಸಿಕೊಂಡಿತ್ತು.

    ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ 4 ಬಾರಿ ಕಪ್ ಗೆಲುವು ಪಡೆದಿದ್ದು, ಧೋನಿ ನಾಯಕತ್ವದ ತಂಡ 3 ಬಾರಿ ಕಪ್ ಗೆದ್ದಿದೆ. ಪರಿಣಾಮ ಈ ಎರಡು ತಂಡಗಳ ನಡುವೆ ಪಂದ್ಯ ನಡೆದರೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನದ ತಂಡದ ಪರ ಟ್ವೀಟ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಟ್ವಿಟ್ಟರ್ ನಲ್ಲಿ ಸಿಎಸ್‍ಕೆ ತಂಡ ನಿರಂತರವಾಗಿ ಆ್ಯಕ್ಟೀವ್ ಆಗಿದ್ದು, ರೋಹಿತ್ ಶರ್ಮಾರ ಪುತ್ರಿಯ ಫೋಟೋಗಳನ್ನು ಸಿಎಸ್‍ಕೆ ಟ್ವೀಟ್ ಮಾಡಿದೆ.

    ಸಿಎಸ್‍ಕೆ ಹಂಚಿಕೊಂಡಿರುವ ಫೋಟೋದಲ್ಲಿ ರೋಹಿತ್ ಪುತ್ರಿ ಸಮೈರಾ, ಚೆನ್ನೈ ತಂಡದ ಜೆರ್ಸಿ ಬಣ್ಣದ ಡ್ರೆಸ್ ಧರಿಸಿದ್ದು, ಶಿಳ್ಳೆ ಹಾಕುವ ರೀತಿಯಲ್ಲಿ ಫೋಟೋಗೆ ಪೋಸ್ ನೀಡಿರುವ ಮತ್ತೊಂದು ಫೋಟೋ ಕಾಣಬಹುದು. ಈ ಫೋಟೋ ಹಂಚಿಕೊಂಡಿರುವ ಸಿಎಸ್‍ಕೆ ಸಮೈರಾ ಸಿಎಸ್‍ಕೆ ಅಭಿಮಾನಿ ಎಂಬರ್ಥದ ರೀತಿಯಲ್ಲಿ ಟ್ವೀಟ್ ಮಾಡಿದೆ.

    https://www.instagram.com/p/B4HwgH5hWWV/

    https://www.instagram.com/p/B0giRNph6dD/