– ಪ್ರೇಮಿಗಳ ದಿನದಂದೇ ಆರ್ಸಿಬಿ ಲೋಗೋ ಬಿಡುಗಡೆ
ಬೆಂಗಳೂರು: ಪ್ರೇಮಿಗಳ ದಿನದಂದೇ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊಸ ಹೆಸರಿನೊಂದಿಗೆ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ.
ಆರ್ಸಿಬಿ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ನೂತನ ಲೋಗೋ ವಿಡಿಯೋವನ್ನು ಟ್ವೀಟ್ ಮಾಡಿದೆ. ಧೈರ್ಯಶಾಲಿ ಹೆಮ್ಮೆ ಮತ್ತು ಚಾಲೆಂಜರ್ ಮನೋಭಾವವನ್ನು ಸಾಕಾರಗೊಳಿಸುತ್ತಾ, ಕೆರಳಿದ ಸಿಂಹವನ್ನು ರಾಯಲ್ ವಂಶಕ್ಕೆ ಹಿಂದಿರುಗಿಸುತ್ತೇವೆ. ಹೊಸ ದಶಕ, ಹೊಸ ಆರ್ಸಿಬಿ ಮತ್ತು ಹೊಸ ಲೋಗೋ ಎಂದು ಬರೆಯಲಾಗಿದೆ. ಗುರುವಾರ ಹೆಸರಲ್ಲೂ ನೀವೇ, ಉಸಿರಲ್ಲೂ ನೀವೇ, ಎಲ್ಲೆಲ್ಲೂ ನೀವೇ ಎಂದು ಕನ್ನಡ ಕವನವನ್ನು ಪ್ರಕಟಿಸಿತ್ತು. ಇದನ್ನೂ ಓದಿ: ಕಪ್ ಗೆಲ್ಲಲು ಆರ್ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ
ಮೂರನೇ ಬಾರಿಗೆ ಲೋಗೋ ಬದಲಾವಣೆ:
2008ರಿಂದ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಯಾವುದೇ ಪ್ರಶಸ್ತಿಗಳನ್ನು ಗೆದ್ದಿಲ್ಲ. ಆದರೆ ಈವರೆಗೂ ಮೂರನೇ ಬಾರಿಗೆ ತನ್ನ ಲೋಗೋವನ್ನು ಬದಲಾಯಿಸಿಕೊಂಡಿದೆ. ಈ ಬಾರಿಯ ಲೋಗೋದಲ್ಲಿ ಕಿರಿಟ ಹಾಕಿಕೊಂಡು ಎರಡು ಕಾಲಿನ ಮೇಲೆ ನಿಂತ ಸಿಂಹವನ್ನು ಆರ್ಸಿಬಿ ಹೊಂದಿದೆ. ಅಷ್ಟೇ ಅಲ್ಲದೆ ತಂಡದ ಹೆಸರಿನೊಂದಿಗೆ ಬೆಂಗಳೂರನ್ನು ಬೇರ್ಪಡಿಸಿ ಕೇವಲ ರಾಯಲ್ ಚಾಲೆಂಜರ್ಸ್ ಇಡಲಾಗಿದೆ. ಈ ವಿಚಾರವಾಗಿ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿಯನ್ನು ಗೇಲಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ಮೊದಲ ಮಹಿಳಾ ಸಹಾಯಕ ಸಿಬ್ಬಂದಿಯನ್ನು ನೇಮಿಸಿದ ಆರ್ಸಿಬಿ
ತಂಡದ ನಾಯಕ ವಿರಾಟ್ ಕೊಹ್ಲಿಗೆ ಮಾಹಿತಿ ನೀಡದೆ ಆರ್ಸಿಬಿ ಆಡಳಿತ ಮಂಡಳಿಯು ಗುರುವಾರ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಪ್ರೊಫೈಲ್ ಮತ್ತು ಕವರ್ ಸೇರಿದಂತೆ ಎಲ್ಲಾ ಫೋಟೋಗಳು ಮತ್ತು ಪೋಸ್ಟ್ಗಳನ್ನು ತೆಗೆದುಹಾಕಿತ್ತು. ಐಪಿಎಲ್ನ 13ನೇ ಸೀಸನ್ ಮಾರ್ಚ್ 29ರಿಂದ ಪ್ರಾರಂಭವಾಗಲಿದೆ. ಅಂತಿಮ ಪಂದ್ಯವು ಮೇ 24 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ವಿರಾಟ್ ಕೊಹ್ಲಿ 2008ರಿಂದ ಆರ್ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ 2013ರಿಂದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಮೂಲಕ ಐಪಿಎಲ್ ಆವೃತ್ತಿಯಲ್ಲಿ ನಾಯಕರಾಗಿ ಒಂದು ತಂಡವನ್ನು ದೀರ್ಘ ಅವಧಿ ಮುನ್ನಡೆಸಿದ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.
ಐಪಿಎಲ್ ಟೂರ್ನಿಯ ಕಳೆದ ಎರಡು ಆವೃತ್ತಿಗಳಲ್ಲಿ ಆರ್ಸಿಬಿ ಕಳಪೆ ಪ್ರದರ್ಶನ ನೀಡಿತ್ತು. ಇಲ್ಲಿಯವರೆಗೆ 12 ಆವೃತ್ತಿಗಳು ನಡೆದಿದ್ದರೂ ಒಂದು ಬಾರಿಯೂ ಆರ್ಸಿಬಿ ಟ್ರೋಫಿ ಗೆದ್ದಿಲ್ಲ. ಹೀಗಾಗಿ ನಾಯಕ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಡಲು ತಂಡವು ನಿರ್ಧರಿಸಿದ್ದು, ಡಿವಿಲಿಯರ್ಸ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈ ಎಲ್ಲ ಊಹಾಪೋಹಗಳಿಗೆ ತಂಡವು ಸ್ಪಷ್ಟನೆ ನೀಡಿ, ಕೊಹ್ಲಿ ನಾಯಕತ್ವದಲ್ಲೇ ತಂಡವನ್ನು ಮುನ್ನಡೆಸಲಾಗುತ್ತದೆ ಎಂದು ತಿಳಿಸಿತ್ತು.

ಗೆಲ್ಲದ ತಂಡಗಳು:
ಇಲ್ಲಿವರೆಗೆ ಐಪಿಎಲ್ 12 ಆವೃತ್ತಿಗಳು ನಡೆದಿದ್ದು, ಮೂರು ತಂಡಗಳು ಇಲ್ಲಿವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ ಗೆಲ್ಲದೆ ಇರುವ ತಂಡಗಳಾಗಿದೆ.
2019ರ ಐಪಿಎಲ್ ಆವೃತ್ತಿಯಲ್ಲಿ ಗೆಲ್ಲುವ ಮೂಲಕ ಮುಂಬೈ ನಾಲ್ಕನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡ ತಂಡವಾಗಿ ಹೊರ ಹೊಮ್ಮಿತು. ಈ ಮೂಲಕ ಐಪಿಎಲ್ ಸೀಸನ್ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಚೊಚ್ಚಲ ಸೀಸನ್ (2008)ರಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 3, ಕೋಲ್ಕತ್ತಾ ನೈಟ್ರೈಡರ್ಸ್ 2 ಹಾಗೂ ಸನ್ರೈಸರ್ಸ್ ಹೈದರಾಬಾದ್ ಒಂದು ಬಾರಿ ಟ್ರೋಫಿ ಗೆದ್ದುಕೊಂಡಿದೆ.
