Tag: IPL

  • ಆಸೀಸ್ ಆಟಗಾರರು ವಿರಾಟ್ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ: ಕ್ಲಾರ್ಕ್

    ಆಸೀಸ್ ಆಟಗಾರರು ವಿರಾಟ್ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ: ಕ್ಲಾರ್ಕ್

    ಸಿಡ್ನಿ: ನಮ್ಮ ಆಟಗಾರರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.

    ಆಸ್ಟ್ರೇಲಿಯಾದ ಕ್ರಿಕೆಟಿಗರು ಮೈದಾನದಲ್ಲಿ ಅತ್ಯುತ್ತಮ ಸ್ಲೆಡ್ಜರ್‍ಗಳು. ಟೀಂ ಇಂಡಿಯಾ ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್ ಅಥವಾ ಸಚಿನ್ ತೆಂಡೂಲ್ಕರ್ ಅವರಂತಹ ಶಾಂತ ಸ್ವಭಾವದ ಅನೇಕ ಕ್ರಿಕೆಟಿಗರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಆಟಗಾರರ ಸ್ಲೆಡ್ಜಿಂಗ್‍ಗೆ ತಮ್ಮ ಶಾಂತತೆಯನ್ನು ಕಳೆದುಕೊಂಡ ಪ್ರಸಂಗಗಳಿವೆ. ಆದರೆ ಈಗ ಆಸ್ಟ್ರೇಲಿಯಾ ಆಟಗಾರರು ಟೀಂ ಇಂಡಿಯಾ ಆಟಗಾರರ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹಿಂದೇಟು ಆಗುತ್ತಿದ್ದಾರೆ ಎಂದು ಮೈಕಲ್ ಕ್ಲಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ.

    ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಆರ್ಥಿಕ ವಿಷಯಗಳಲ್ಲಿ ಭಾರತ (ಬಿಸಿಸಿಐ) ಎಷ್ಟು ಪ್ರಬಲವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅದು ಅಂತರರಾಷ್ಟ್ರೀಯ ಕ್ರಿಕೆಟ್ ಆಗಿರಲಿ ಅಥವಾ ಐಪಿಎಲ್ ಆಗಿರಲಿ. ಎಲ್ಲ ಕ್ಷೇತ್ರದಲ್ಲೂ ಭಾರತ ಪ್ರಬಲವಾಗಿದೆ. ಹೀಗಾಗಿ ಐಪಿಎಲ್ ಒಪ್ಪಂದವನ್ನು ಉಳಿಸಿಕೊಳ್ಳಲು ಆಸ್ಟ್ರೇಲಿಯಾದ ಆಟಗಾರರು ಭಾರತೀಯ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಭಯಪಡುತ್ತಿದ್ದಾರೆ ಎಂದು ದೂರಿದ್ದಾರೆ.

    2018-19ರಲ್ಲಿ ನಡೆದ ಸರಣಿಯನ್ನು ಉಲ್ಲೇಖಿಸಿದ ಕ್ಲಾರ್ಕ್, ನಮ್ಮ ಆಟಗಾರರು ಕೊಹ್ಲಿ ಮತ್ತು ಉಳಿದ ಭಾರತೀಯ ಆಟಗಾರರಿಗೆ ಸ್ವಲ್ಪ ಭಯಭೀತರಾಗಿದ್ದರು. ಏಕೆಂದರೆ ಅವರು 2019ರ ಏಪ್ರಿಲ್‍ನಲ್ಲಿ ಅವರೊಂದಿಗೆ ಐಪಿಎಲ್ ಆಡಬೇಕಾಗಿತ್ತು. ಆದ್ದರಿಂದ ನಮ್ಮ ಕ್ರಿಕೆಟಿಗರು ಸ್ಲೆಡ್ಜಿಂಗ್‍ಗೆ ಹೆದರುತ್ತಿದ್ದರು. ಭಾರತದ ಆಟಗಾರರ ವಿರುದ್ಧ ಹೆಚ್ಚು ಸ್ಲೆಡ್ಜಿಂಗ್ ಮಾಡಿದರೆ ಐಪಿಎಲ್‍ನಲ್ಲಿ ಕೋಟ್ಯಂತರ ರೂಪಾಯಿಗಳ ಒಪ್ಪಂದವನ್ನು ಕಳೆದುಕೊಳ್ಳಬಹುದು ಅಂತ ಆಸ್ಟ್ರೇಲಿಯಾದ ಆಟಗಾರರು ಆತಂಕದಲ್ಲಿದ್ದರು ಎಂದು ಕ್ಲಾರ್ಕ್ ಹೇಳಿದ್ದಾರೆ.

    ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಮವಾಗಿ ಐಪಿಎಲ್‍ನಲ್ಲಿ ಬೆಂಗಳೂರು ಮತ್ತು ಮುಂಬೈ ತಂಡಗಳ ನಾಯಕರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ತಂಡವನ್ನು ಆಯ್ಕೆ ಮಾಡುವಲ್ಲಿ ಅವರಿಗೆ ಪ್ರಮುಖ ಪಾತ್ರ ಇರುತ್ತದೆ. ಅದಕ್ಕಾಗಿಯೇ ಆಸೀಸ್ ಆಟಗಾರರು ಕೊಹ್ಲಿಯನ್ನು ಸ್ಲೆಡ್ಜಿಂಗ್ ಮಾಡುವುದಿಲ್ಲ ಅಂತ ನಾನು ಭಾವಿಸುತ್ತೇನೆ ಎಂದು ಕ್ಲಾರ್ಕ್ ತಿಳಿಸಿದ್ದಾರೆ.

    2018-19ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದ ಕೈಗೊಂಡಿತ್ತು. ಈ ವೇಳೆ ಭಾರತೀಯ ತಂಡವು 4 ಟೆಸ್ಟ್ ಸರಣಿಯಲ್ಲಿ ಆತಿಥೇಯರನ್ನು 2-1ರಿಂದ ಸೋಲಿಸಿತ್ತು. ಇದು ಆಸ್ಟ್ರೇಲಿಯಾದ ನೆಲದಲ್ಲಿ ಏಷ್ಯಾದ ದೇಶಗಳ ಮೊದಲ ಟೆಸ್ಟ್ ಸರಣಿಯ ಗೆಲುವು ಆಗಿದೆ.

    2008ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತಿವರ್ಷ ಮಾರ್ಚ್- ಮೇ ತಿಂಗಳ ಮಧ್ಯದಲ್ಲಿ ಟೂರ್ನಿ ನಡೆಯುತ್ತದೆ. ಎಂಟು ತಂಡಗಳು ಭಾರತದ ಎಂಟು ವಿವಿಧ ನಗರಗಳನ್ನು ಪ್ರತಿನಿಧಿಸುತ್ತವೆ.

    ಭಾರತ ಮತ್ತು ಆಸ್ಟ್ರೇಲಿಯಾ ಈ ಹಿಂದೆ ಅನೇಕ ಆನ್-ಫೀಲ್ಡ್ ಸ್ಲೆಡ್ಜಿಂಗ್ ಜಗಳಗಳಿಗೆ ಸಾಕ್ಷಿಯಾಗಿವೆ. 2008ರಲ್ಲಿ ‘ಮಂಕಿ ಗೇಟ್’ ಘಟನೆಯನ್ನು ಮರೆಯುವಂತಿಲ್ಲ. ಸಿಡ್ನಿಯಲ್ಲಿ ನಡೆಸಿದ್ದ ಟೆಸ್ಟ್ ಪಂದ್ಯವೊಂದರಲ್ಲಿ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಆಸ್ಟ್ರೇಲಿಯಾದ ಆಲ್‍ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಅವರನ್ನು ಹಲವು ಬಾರಿ ಮಂಕಿ ಎಂದು ಕರೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕಾಗಿ ಹರ್ಭಜನ್ ಸಿಂಗ್ ವಿರುದ್ಧ ಐಸಿಸಿ ಮೂರು ಪಂದ್ಯಗಳ ನಿಷೇಧ ಹೇರಿತ್ತು.

  • ‘ಐಪಿಎಲ್ ನಡೆಯಲೇಬೇಕು’: ಟೂರ್ನಿ ನಡೆಸುವ ಬಗ್ಗೆ ಪೀಟರ್ಸನ್ ಸಲಹೆ

    ‘ಐಪಿಎಲ್ ನಡೆಯಲೇಬೇಕು’: ಟೂರ್ನಿ ನಡೆಸುವ ಬಗ್ಗೆ ಪೀಟರ್ಸನ್ ಸಲಹೆ

    ಮುಂಬೈ: ವಿಶ್ವಾದ್ಯಂತ ಹಾಗೂ ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ತೊಂದರೆಗೆ ಸಿಲುಕಿದೆ. ಆದರೆ ಏನೇ ಆದರೂ ಈ ಬಾರಿಯ ಟೂರ್ನಿ ನಡೆಯಲೇ ಬೇಕು ಅಂತ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಟೂರ್ನಿ ನಡೆಸುವ ಬಗ್ಗೆ ಸಲಹೆ ಕೂಡ ನೀಡಿದ್ದಾರೆ.

    ಖಾಲಿ ಮೈದಾನ, ಕ್ರಿಕೆಟ್ ಅಭಿಮಾನಿಗಳಿಲ್ಲದ ಮೂರು ಸುರಕ್ಷಿತ ಕ್ರೀಡಾಂಗಣಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿಯೇ ಟೂರ್ನಿ ನಡೆಸಬೇಕು. ಇದರಿಂದ ಪ್ರೇಕ್ಷಕರ ಜೀವಕ್ಕೆ ಯಾವುದೇ ಅಪಾಯವಿಲ್ಲ ಇರುವುದಿಲ್ಲ ಎಂದು ಪಿಟರ್ಸನ್ ಸಲಹೆ ನೀಡಿದ್ದಾರೆ.

    ಐಪಿಎಲ್ ಟೂರ್ನಿ ಮೂರು ಅಥವಾ ನಾಲ್ಕು ವಾರಗಳಲ್ಲಿ ಕೊನೆಗೊಳ್ಳಬೇಕು. ಹೀಗಾಗಿ ಈ ಬಾರಿ ಐಪಿಎಲ್‍ನ ಸ್ವರೂಪವೂ ಚಿಕ್ಕದಾಗಿರಬೇಕು ಎಂದು ಪೀಟರ್ಸನ್ ಸಲಹೆ ನೀಡಿದ್ದಾರೆ.

    ಕೊರೊನಾ ವೈರಸ್ ಹಾಗೂ ವಿದೇಶಿ ಆಟಗಾರರಿಗೆ ವೀಸಾ ನಿರ್ಬಂಧದಿಂದಾಗಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮಾರ್ಚ್ 29ರಿಂದ ಏಪ್ರಿಲ್ 15ರವರೆಗೆ ಮುಂದೂಡಿದೆ. ಮೊದಲ ಪಂದ್ಯ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಬೇಕಿತ್ತು.

    “ಜುಲೈ-ಆಗಸ್ಟ್‍ನಲ್ಲಿ ಕ್ರೀಡಾ ಚಟುವಟಿಕೆ ಆರಂಭವಾಗಬೇಕು. ಐಪಿಎಲ್‍ನ 13ನೇ ಆವೃತ್ತಿಯನ್ನು ಸಹ ನಡೆಸಬೇಕು ಎಂದು ಬಯಸುತ್ತೇನೆ. ವಿಶ್ವದ ಪ್ರತಿಯೊಬ್ಬ ಆಟಗಾರನೂ ಇದನ್ನೇ ಬಯಸುತ್ತಿದ್ದಾರೆ. ಅವರು ಸಹ ಟೂರ್ನಿಯಲ್ಲಿ ಆಡಲೇಬೇಕು ಎನ್ನುವ ಇಚ್ಛೆಯನ್ನು ಹೊಂದಿದ್ದಾರೆ. ಆಟಗಾರರು ಮತ್ತು ಫ್ರಾಂಚೈಸಿಗಳ ಜೊತೆಗೆ ತೆರೆಮರೆಯಲ್ಲಿ ಕೆಲಸ ಮಾಡುವವರಿಗೆ ಐಪಿಎಲ್ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಫ್ರ್ಯಾಂಚೈಸಿ ಸ್ವಲ್ಪ ಹಣವನ್ನು ಉಳಿಸುವ ಮಾರ್ಗವನ್ನು ಸಹ ಕಂಡುಕೊಳ್ಳಬೇಕು. ಉದಾಹರಣೆಗೆ ಎಲ್ಲಾ ಪಂದ್ಯಗಳನ್ನು ಪ್ರೇಕ್ಷಕರು ಇಲ್ಲದೆ ಮೂರು ಸುರಕ್ಷಿತ ಕ್ರೀಡಾಂಗಣಗಳಲ್ಲಿ ನಡೆಸಲಾಗುತ್ತದೆ. ಹೀಗಾಗಿ ಟೂರ್ನಿಯನ್ನು ಮೂರು ಅಥವಾ ನಾಲ್ಕು ವಾರಗಳಿಗೆ ಕಡಿತಗೊಳಿಸಬಹುದು” ಎಂದು ಸಲಹೆ ನೀಡಿದ್ದಾರೆ.

    ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಕೂಡ ಐಪಿಎಲ್‍ನ ಮಹತ್ವವನ್ನು ವ್ಯಕ್ತಪಡಿಸಿದ್ದಾರೆ. ಪೀಟರ್ಸನ್ ಅವರ ಸಲಹೆಗೆ ಸಹಮತ ನೀಡಿರುವ ಮಂಜ್ರೇಕರ್, ಸರ್ಕಾರ, ಮಂಡಳಿ ಮತ್ತು ಫ್ರಾಂಚೈಸಿಗಳು ಸೇರಿದಂತೆ ಇತರ ಎಲ್ಲಾ ಸಂಬಂಧಿತ ಸಂಸ್ಥೆಗಳಿಂದ ಒಪ್ಪಿಗೆ ಪಡೆದು ಐಪಿಎಲ್ ನಡೆಸಬೇಕು. ಇದು ವಿಶೇಷ ಆರ್ಥಿಕತೆಯನ್ನು ಸಹ ಪ್ರಾರಂಭಿಸುತ್ತದೆ. ಏಕೆಂದರೆ ಈ ಟೂರ್ನಿ ನಡೆಬೇಕಾಗಿರುವುದು ಮುಂಬೈ ಇಂಡಿಯನ್ಸ್, ಎಂ.ಎಸ್.ಧೋನಿ ಅಥವಾ ವಿರಾಟ್ ಕೊಹ್ಲಿ ಅವರಿಗಾಗಿ ಅಷ್ಟೇ ಅಲ್ಲ. ಐಪಿಎಲ್‍ನಿಂದ ಉದ್ಯೋಗ ಪಡೆಯುವವರಿಗೆ ಟೂರ್ನಿ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಜಸ್ಟಿನ್ ಲ್ಯಾಂಗರ್, ನೀವು ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ ನಿಮ್ಮ ಮುಂದೆ ಜನಸಂದಣಿ ಇರುತ್ತಿರಲಿಲ್ಲ. ಆಗಲೇ ಕ್ರಿಕೆಟ್ ಆಡಿದ್ದೀರಿ. ಏಕೆಂದರೆ ನೀವು ಆಟವನ್ನು ಇಷ್ಟಪಡುತ್ತೀರಿ. ನಿಮ್ಮ ತಂಡದ ಆಟಗಾರರೊಂದಿಗೆ ಆಡಲು ಇಷ್ಟಪಡುತ್ತೀರಿ. ಈ ಆಟದ ಪ್ರೀತಿಯಿಂದಾಗಿ ಇಂದು ಹೆಚ್ಚಿನ ಜನರು ಟಿವಿ ಮಾಧ್ಯಮ ಮತ್ತು ರೇಡಿಯೋ ಮೂಲಕ ಜನರನ್ನು ರಂಜಿಸಲು ಸಮರ್ಥರಾಗಿದ್ದೀರಿ. ಇದಕ್ಕಾಗಿಯೇ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ನಡೆಸುವುದು ಮುಖ್ಯವಾಗಿದೆ. ಇದು ಸ್ವಲ್ಪ ವಿಭಿನ್ನವಾಗಿರುತ್ತದೆ. ಆದರೆ ನಾವೆಲ್ಲರೂ ಎಷ್ಟು ಅದೃಷ್ಟವಂತರು ಎಂಬುದನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ಐಪಿಎಲ್ ಟೂರ್ನಿ ನಡೆಸುವ ಬಗ್ಗೆ ಸಲಹೆ ನೀಡಿದ್ದಾರೆ.

  • ಗಂಡು ಮಗುವಿನ ತಂದೆಯಾದ ಸುರೇಶ್ ರೈನಾ

    ಗಂಡು ಮಗುವಿನ ತಂದೆಯಾದ ಸುರೇಶ್ ರೈನಾ

    -‘ಕುಟ್ಟಿ ತಲಾ’ಗೆ ವೆಲ್‍ಕಮ್ ಎಂದ ಸಿಎಸ್‍ಕೆ

    ಮುಂಬೈ: ಟೀಂ ಇಂಡಿಯಾ ಅನುಭವಿ ಆಟಗಾರ ಸುರೇಶ್ ರೈನಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು, ರೈನಾ ಪತ್ನಿ ಪ್ರಿಯಾಂಕಾ ಅವರು 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕುಟ್ಟಿ ತಲಾಗೆ ಸ್ವಾಗತ ಕೋರಿದೆ.

    ರೈನಾ ದಂಪತಿಗೆ 2016ರಲ್ಲಿ ಹೆಣ್ಣು ಮಗುವಾಗಿತ್ತು. ಈಗ ರೈನಾ ಪತ್ನಿ ಪ್ರಿಯಾಂಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ರೈನಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಭಿಮಾನಿಗಳು ರೈನಾ ದಂಪತಿಗೆ ಶುಭಕೋರಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಸುರೇಶ್ ರೈನಾ ಸ್ವತಃ ತಾವು 2ನೇ ಬಾರಿ ತಂದೆಯಾಗಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡಿದ್ದು, ಗಂಡು ಮಗುವಾಗಿದೆ ಎಂದಿದ್ದಾರೆ. ಅಲ್ಲದೇ ಪುತ್ರನ ಹೆಸರನ್ನು ರೈನಾ ರಿವೀಲ್ ಮಾಡಿದ್ದಾರೆ. ಗ್ರೇಸಿಯಾ ರೈನಾಗೆ ಸಹೋದರ ರಿಯೊ ರೈನಾ ಎಂದು ತಿಳಿಸಿದ್ದಾರೆ. ರೈನಾ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಹರ್ಭಜನ್ ಸಿಂಗ್ ದಂಪತಿಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

    ರೈನಾಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇತ್ತ ಶುಭಕೋರಿರುವ ಪತ್ರಕರ್ತ ಬೋರಿಯ ಮಜುಂದಾರ್, ರೈನಾ ತಂದೆಯಾಗಿರುವುದಕ್ಕೆ ಅಭಿನಂದನೆಗಳು. ದೇವರ ದಯೆಯಿಂದ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

    2018ರ ಜುಲೈನಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವಾಡಿರುವ ರೈನಾ 2020ರ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಭರವಸೆಯಲ್ಲಿದ್ದರು. 2011ರ ವಿಶ್ವಕಪ್ ಗೆದ್ದ ತಂಡದಲ್ಲಿ ಭಾಗಿದ್ದ ರೈನಾ, 2019ರಲ್ಲಿ ಗಾಯದ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 2020ರ ಐಪಿಎಲ್ ಆವೃತ್ತಿಯ ಸಿಎಸ್‍ಕೆ ತರಬೇತಿಗೆ ಹಾಜರಾಗಿದ್ದ ರೈನಾ ಕೊರೊನಾದಿಂದ ಟೂರ್ನಿ ರದ್ದಾಗುತ್ತಿದ್ದಂತೆ ತವರಿಗೆ ವಾಪಸ್ ಆಗಿದ್ದರು. ಕೋವಿಡ್-18 ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಭಾನುವಾರ ಧನ್ಯವಾದ ತಿಳಿಸಿ ರೈನಾ ಟ್ವೀಟ್ ಮಾಡಿದ್ದರು.

  • ಜೂನ್-ಸೆಪ್ಟೆಂಬರ್‌ನಲ್ಲಿ ಐಪಿಎಲ್- ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ಇಲ್ಲಿದೆ ನೋಡಿ

    ಜೂನ್-ಸೆಪ್ಟೆಂಬರ್‌ನಲ್ಲಿ ಐಪಿಎಲ್- ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ಇಲ್ಲಿದೆ ನೋಡಿ

    – ಭಾರತದಲ್ಲಿ ಸಾಧ್ಯವಾಗದಿದ್ದರೆ ವಿದೇಶದಲ್ಲಿ ಐಪಿಎಲ್
    – ಈ ವರ್ಷ ಟೂರ್ನಿ ನಡೆಸಲು ಪಣ ತೊಟ್ಟ ಬಿಸಿಸಿಐ

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯನ್ನು ಜೂನ್-ಸೆಪ್ಟೆಂಬರ್ ನಡುವೆ ನಡೆಸಲು ಬಿಸಿಸಿಐ ಚಿಂತನೆ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಸಿಸಿಐ ಏಪ್ರಿಲ್ 15ರವರೆಗೆ ಟೂರ್ನಿಯನ್ನು ರದ್ದುಗೊಳಿಸಿದೆ. ಆದರೆ ಐಪಿಎಲ್ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳು ತುಂಬಾ ವಿರಳ ಎಂಬ ವಾತಾವರಣ ಸೃಷ್ಟಿಯಾಗಿದೆ. ಈ ಮಧ್ಯೆ ಮಹತ್ವದ ಬೆಳವಣಿಗೆಯ ಪ್ರಕಾರ ಜೂನ್-ಸೆಪ್ಟೆಂಬರ್‌ನಲ್ಲಿ ಟೂರ್ನಿ ನಡೆಸಲು ಐಪಿಎಲ್ ಮುಂದಾಗಿದೆ ಎನ್ನಲಾಗುತ್ತಿದೆ.

    ಈ ವರ್ಷ ಐಪಿಎಲ್ ನಡೆಸಲೇಬೇಕೆಂದು ಬಿಸಿಸಿಐ ಪಣ ತೊಟ್ಟಂತೆ ಕಾಣುತ್ತಿದ್ದು ಕಳೆದ ವಾರ ಎರಡು ಪ್ಲ್ಯಾನ್ ರೂಪಿಸಿತ್ತು. ಪ್ಲ್ಯಾನ್ ಎ ಪ್ರಕಾರ ಶನಿವಾರ ಎರಡು ಪಂದ್ಯ ನಡೆಸುವುದು. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೆ ಮಿನಿ ಐಪಿಎಲ್ ನಡೆಸಲು ಮುಂದಾಗಿತ್ತು.

    ಆದರೆ ಈಗ ಏಪ್ರಿಲ್ ನಲ್ಲೂ ಐಪಿಎಲ್ ನಡೆಸುವುದು ಅನುಮಾನವಾಗಿದೆ. ಮುಂಬರುವ ದಿನಗಳಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಸುಧಾರಿಸದಿದ್ದರೆ ಜುಲೈ-ಸೆಪ್ಟೆಂಬರ್‌ನಲ್ಲಿ ಬಿಸಿಸಿಐ ಐಪಿಎಲ್‍ಗೆ ಆತಿಥ್ಯ ವಹಿಸಲು ಯೋಜಿಸುತ್ತಿದೆ ಎಂಬುದಾಗಿ ವರದಿಯಾಗಿದೆ.

    ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಐರ್ಲೆಂಡ್ ಕಪ್ ಟಿ20 ನಡೆಯಲಿದೆ. ಜುಲೈ ಮತ್ತು ಸೆಪ್ಟೆಂಬರ್ ತಿಂಗಳುಗಳ ನಡುವೆ 2020ರ ಫ್ಯೂಚರ್ ಟೂರ್ಸ್ ಪ್ರೋಗ್ರಾಂ (ಎಫ್‍ಟಿಪಿ)ಗಳು ಐಪಿಎಲ್ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

    ದೇಶದಲ್ಲಿ ಐಪಿಎಲ್‍ಗೆ ಆತಿಥ್ಯ ವಹಿಸಲು ಸಾಧ್ಯವಾಗದಿದ್ದರೆ ಬೇರೆ ವಿದೇಶಗಳಲ್ಲಿ ಆಡಿಸಲು ಬಿಸಿಸಿಐ ನಿರ್ಧರಿಸಿದೆ. ಸದ್ಯಕ್ಕೆ ಎಲ್ಲಾ ಆಟಗಾರರು ಲಭ್ಯವಿಲ್ಲದಿದ್ದರೂ ಸಹ ಜೂನ್-ಸೆಪ್ಟೆಂಬರ್ ನಲ್ಲಿ ಬರುತ್ತಾರೆ. ಆಗ ಐಪಿಎಲ್ ಟೂರ್ನಿಯನ್ನು ಆಯೋಜಿಸಬಹುದು ಎನ್ನುವುದು ಬಿಸಿಸಿಐ ಲೆಕ್ಕಾಚಾರ.

    ಈ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಟೂರ್ನಿ ನಡೆದರೆ ಉಳಿದ ದೇಶದ ಆಟಗಾರರಿಗೆ ಯಾವುದೇ ಟೂರ್ನಿಗಳು ಇರುವುದಿಲ್ಲ. ಹೀಗಾಗಿ ಉಳಿದ ಆಟಗಾರರಿಗೆ ಸಮಸ್ಯೆ ಆಗಲಾರದು ಎಂಬ ತೀರ್ಮಾನಕ್ಕೆ ಬಿಸಿಸಿಐ ಬಂದಿದೆ ಎನ್ನಲಾಗುತ್ತಿದೆ. ಒಂದು ವೇಳೆ ಭಾರತದಲ್ಲಿ ಆಡಿಸಲು ಸಾಧ್ಯವಾಗದೇ ಇದ್ದಲ್ಲಿ ವಿದೇಶದಲ್ಲಿ ಟೂರ್ನಿ ನಡೆಸಲು ಚಿಂತನೆ ನಡೆಸಲಾಗಿದೆ.

    ಟೀಂ ಇಂಡಿಯಾ ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ಮತ್ತು ಜೂನ್-ಜುಲೈ ನಡುವೆ ಶ್ರೀಲಂಕಾದಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳು ನಿಗದಿಯಾಗಿವೆ. ವಿಶ್ವದ ಕ್ರಿಕೆಟ್ ನಲ್ಲಿ ಹಣಕಾಸು ವಿಚಾರದಲ್ಲಿ ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರವನ್ನು ಪಾಕ್ ಹೊರತು ಪಡಿಸಿ ಉಳಿದ ಏಷ್ಯಾದ ರಾಷ್ಟ್ರಗಳು ವಿರೋಧಿಸುವುದು ಕಡಿಮೆ. ಹೀಗಾಗಿ ಈ ವೇಳಾಪಟ್ಟಿಯನ್ನು ಕೊಂಚ ಬದಲಾಯಿಸಲು ಬಿಸಿಸಿಐ ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

    ದ.ಆಫ್ರಿಕಾದಲ್ಲಿ ನಡೆದಿದ್ದ ಐಪಿಎಲ್:
    2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭದ್ರತೆ ನೀಡಲು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಡಿಸಲಾಗಿತ್ತು. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮೊದಲಾರ್ಧದ ಪಂದ್ಯಗಳನ್ನು ಯುಎಇಯಲ್ಲಿ ಆಡಿಸಲಾಗಿತ್ತು. ಇದರಿಂದಾಗಿ ಯುಎಇಯಲ್ಲಿ ಕ್ರಿಕೆಟ್ ಈಗ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ.

  • ಐಪಿಎಲ್ ತರಬೇತಿ ಶಿಬಿರ ರದ್ದುಗೊಳಿಸಿದ ಫ್ರಾಂಚೈಸಿಗಳು- ಮನೆಗಳಿಗೆ ಹಿಂದಿರುಗಿದ ಆಟಗಾರರು

    ಐಪಿಎಲ್ ತರಬೇತಿ ಶಿಬಿರ ರದ್ದುಗೊಳಿಸಿದ ಫ್ರಾಂಚೈಸಿಗಳು- ಮನೆಗಳಿಗೆ ಹಿಂದಿರುಗಿದ ಆಟಗಾರರು

    ಮುಂಬೈ: ಕೊರೊನಾ ವೈರಸ್ ಕಾರಣದಿಂದ 2020ರ ಐಪಿಎಲ್ ಆವೃತ್ತಿಯನ್ನು ತಾತ್ಕಾಲಿಕವಾಗಿ ಮುಂದೂಡಿರುವ ಬಿಸಿಸಿಐ, ಟೂರ್ನಿಯನ್ನು ರೀ ಶೆಡ್ಯೂಲ್ ಮಾಡುವ ಕಾರ್ಯದಲ್ಲಿದೆ. ಇದರ ನಡುವೆಯೇ ದೇಶ ವ್ಯಾಪ್ತಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎಚ್ಚೆತ್ತಿರುವ ಐಪಿಎಲ್ ಫ್ರಾಂಚೈಸಿಗಳು ಆಟಗಾರರ ತರಬೇತಿ ಶಿಬಿರಗಳನ್ನು ರದ್ದುಗೊಳಿಸಿವೆ.

    ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ತಾತ್ಕಾಲಿಕವಾಗಿ ಏ.15ಕ್ಕೆ ವಿಸ್ತರಣೆ ಮಾಡಿದ ಮೂರು ದಿನಗಳ ಬಳಿಕ ಫ್ರಾಂಚೈಸಿಗಳು ತರಬೇತಿ ಶಿಬಿರಗಳನ್ನು ರದ್ದುಪಡಿಸಿವೆ. ಸೋಮವಾರ ಆರ್‌ಸಿಬಿ ತಂಡ ತರಬೇತಿ ಶಿಬಿರವನ್ನು ರದ್ದು ಪಡಿಸಿದ್ದು, ಚೆನ್ನೈ, ಕೋಲ್ಕತ್ತಾ ಹಾಗೂ ಮುಂಬೈ ತಂಡಗಳ ಶಿಬಿರಗಳು ಈಗಾಗಲೇ ರದ್ದುಗೊಳಿಸಲಾಗಿದೆ.

    ಆಟಗಾರರು ಹಾಗೂ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಮಾರ್ಚ್ 21ರಿಂದ ಆರಂಭವಾಗಬೇಕಿದ್ದ ತರಬೇತಿ ಶಿಬಿರವನ್ನು ಮುಂದಿನ ಆದೇಶವರೆಗೂ ರದ್ದು ಮಾಡಲಾಗಿದೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ನೀಡಿರುವ ಸೂಚನೆಗಳ ಹಿನ್ನೆಲೆಯಲ್ಲಿ ಎಲ್ಲರೂ ಎಚ್ಚರಿಕೆ ವಹಿಸಕೊಳ್ಳಬೇಕಾಗಿ ಮನವಿ ಮಾಡುತ್ತಿರುವುದಾಗಿ ಆರ್‌ಸಿಬಿ ತನ್ನ ಟ್ವೀಟ್ ಖಾತೆಯಲ್ಲಿ ಮಾಹಿತಿ ನೀಡಿದೆ.

    ಐಪಿಎಲ್‍ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಶನಿವಾರ ತರಬೇತಿ ಶಿಬಿರವನ್ನು ರದ್ದು ಮಾಡಿದ್ದು, ತರಬೇತಿ ನಿಮಿತ್ತ ಚೆನ್ನೈ ಆಗಮಿಸಿದ್ದ ಸಿಎಸ್‍ಕೆ ತಂಡದ ನಾಯಕ ಧೋನಿ ಕೂಡ ತವರಿಗೆ ಮರಳಿದ್ದಾರೆ. ಐಪಿಎಲ್ ಪಂದ್ಯ ಆಯೋಜಿಸಲು ಮೂರು ರಾಜ್ಯಗಳು ಅನುಮತಿ ನಿರಾಕರಣೆ ಹಾಗೂ ಕೇಂದ್ರ ಸರ್ಕಾರ ವಿದೇಶಿ ವೀಸಾ ರದ್ದು ಮಾಡಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿತ್ತು.

    ಇತ್ತ ಫ್ರಾಂಚೈಸಿಗಳು ಏಪ್ರಿಲ್ 15ರ ವೇಳೆಗೆ ಲೀಗ್ ಆರಂಭವಾಗುವ ವಿಶ್ವಾಸದಲ್ಲಿದ್ದಾರೆ. ಬಿಸಿಸಿಐ ಕೂಡ ಟೂರ್ನಿಯನ್ನು ಆರಂಭಿಸಲು 5 ದಿನಾಂಕಗಳ ಪ್ರಸ್ತಾಪವನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಏ.14 ರಂದು ಫ್ರಾಂಚೈಸಿಗಳೊಂದಿಗೆ ಸಭೆ ನಡೆಲು ಬಿಸಿಸಿಐ ನಿರ್ಧರಿಸಿದೆ. ಸದ್ಯ ಬಿಸಿಸಿಐ ಏ.15, ಏ.21, ಏ.25, ಮೇ 1 ಮತ್ತು ಮೇ 5 ರಂದು ಐಪಿಎಲ್ ಆರಂಭಿಸುವ ಕುರಿತು ಪ್ರಸ್ತಾಪಗಳನ್ನು ಮುಂದಿಟ್ಟಿದೆ ಎನ್ನಲಾಗಿದೆ. ಐಪಿಎಲ್ ಮುಂದೂಡಿದ ಹಿನ್ನೆಲೆಯಲ್ಲಿ ಈಗಾಗಲೇ ಕನಿಷ್ಟ 15 ದಿನಗಳನ್ನು ಬಿಸಿಸಿಐ ಕಳೆದುಕೊಂಡಿದೆ. ಆದ್ದರಿಂದ ಟೂರ್ನಿಯ ಪಂದ್ಯಗಳ ಸಂಖ್ಯೆಯಲ್ಲೂ ಕಡಿತ ಮಾಡುವ ಯೋಚನೆ ಬಿಸಿಸಿಐ ಮುಂದಿದೆ.

  • ವೆಲ್ ಸೇಡ್, ಕಾಕಾ- ಗೇಲ್ ವಿಡಿಯೋ ಹಂಚಿಕೊಂಡ ಯುವಿ

    ವೆಲ್ ಸೇಡ್, ಕಾಕಾ- ಗೇಲ್ ವಿಡಿಯೋ ಹಂಚಿಕೊಂಡ ಯುವಿ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಫನ್ನಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಯುವರಾಜ್ ಸಿಂಗ್, ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗೇಲ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಕ್ರಿಸ್ ಗೇಲ್ ಹಿಂದಿ ಮಾತನಾಡಲು ಕಷ್ಟಪಡುತ್ತಿರುವುದನ್ನು ಕಾಣಬಹುದು. ಇದರಲ್ಲಿ ಗೇಲ್ “ಕಾನ್ಫಿಡೆನ್ಸ್ ಮೇರಾ, ಕಬರ್ ಬನೇಗಿ ತೇರಿ” ಎಂದು ಹಿಂದಿ ಡೈಲಾಗ್ ಹೇಳಿದ್ದಾರೆ.

    https://twitter.com/YUVSTRONG12/status/1239111700659318786

    ಕೇವಲ 17 ಸೆಕೆಂಡ್ ಇರುವ ವಿಡಿಯೋವನ್ನು ಹಂಚಿಕೊಂಡಿರುವ ಯುವಿ, ಕಾನ್ಫಿಡೆನ್ಸ್ ಮೇರಾ, ಕಬರ್ ಬನೇಗಿ ತೇರಿ, ಚೆನ್ನಾಗಿ ಹೇಳಿದ್ದೀರಾ ಕ್ರಿಸ್ ಗೇಲ್ ಕಾಕಾ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಕಾನ್ಫಿಡೆನ್ಸ್ ಮೇರಾ ಎಂದು ಸರಿಯಾಗಿ ಹೇಳುವ ಗೇಲ್, ಮುಂದಿನ ಪದವನ್ನು ಹೇಳಲು ಕಷ್ಟಪಡುತ್ತಾರೆ. ಯುವಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ ಯುವಿ, ಈಗ ಕೆಲ ವಿದೇಶಿ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸದ್ಯ ಯುವರಾಜ್ ಸಿಂಗ್, ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಇಂಡಿಯಾ ಲೆಜೆಂಡ್ಸ್ ಪರವಾಗಿ ಆಡುತ್ತಿದ್ದಾರೆ. ಆದರೆ ಕೆಲ ಪಂದ್ಯಗಳು ಮಾತ್ರ ನಡೆದಿದ್ದ ಈ ಟೂರ್ನಿ ವಿಶ್ವದದ್ಯಾಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

    ಟಿ-20 ಮಾದರಿಯ ಕ್ರಿಕೆಟ್‍ನಲ್ಲಿ ಒಂದು ದೈತ್ಯ ಪ್ರತಿಭೆ ಹೊಡಿಬಡಿ ಆಟಕ್ಕೆ ಹೇಳಿಮಾಡಿಸಿದಂತೆ ಬ್ಯಾಟ್ ಬೀಸುವ ಗೇಲ್, ಈ ಮಾದರಿಯ ಕ್ರಿಕೆಟ್‍ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಗೇಲ್ ಇಲ್ಲಿಯವರೆಗೆ ಟಿ-20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದಾರೆ. ಇದರ ಜೊತೆಗೆ ಚುಟುಕು ಮಾದರಿ ಪಂದ್ಯದಲ್ಲಿ ಅತಿ ಹೆಚ್ಚು ಸೆಂಚುರಿ ಬಾರಿಸಿದ ಆಟಗಾರನಾಗಿದ್ದು, ಗೇಲ್ ಇಲ್ಲಿಯವರೆಗೆ ಟಿ-20ಯಲ್ಲಿ 22 ಶತಕ ದಾಖಲಿಸಿದ್ದಾರೆ.

    ಈಗ ಗೇಲ್ ವಿವಿಧ ವಿದೇಶಿ ಟಿ-20 ಟೂರ್ನಿಯನ್ನು ಆಡುತ್ತಿದ್ದಾರೆ. ಈಗ ಮುಂಬರುವ ಐಪಿಎಲ್ 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಗೇಲ್ ಆಡಲಿದ್ದಾರೆ. ಐಪಿಎಲ್‍ನಲ್ಲಿ ಪಂಜಾಬ್ ತಂಡ ಇಲ್ಲಿಯವರೆಗೂ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಈ ಬಾರಿ ಕನ್ನಡಿಗ ಕೆ.ಎಲ್. ರಾಹುಲ್ ಪಂಜಾಬ್ ತಂಡವನ್ನು ಮುನ್ನೆಡೆಸುತ್ತಿದ್ದು, ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

    ಈ ಬಾರಿಯ ಐಪಿಎಲ್‍ಗೂ ಕೂಡ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ಇದೇ ತಿಂಗಳ 29 ರಂದು ಆರಂಭವಾಗಬೇಕಿದ್ದ ಟೂರ್ನಿಯನ್ನು ಮುಂದೂಡಲಾಗಿದೆ. ಜೊತೆಗೆ ದೆಹಲಿ ಸರ್ಕಾರ ನಮ್ಮ ರಾಜ್ಯದಲ್ಲಿ ಈಗ ಇರುವ ಪರಿಸ್ಥಿತಿಗೆ ಯಾವುದೇ ಕ್ರಿಕೆಟ್ ಪಂದ್ಯ ನಡೆಸಲು ಅನುಮತಿ ಕೊಡುವುದಿಲ್ಲ ಎಂದು ಹೇಳಿದೆ. ಆದ್ದರಿಂದ ಬಿಸಿಸಿಐ ಜನರ ಆರೋಗ್ಯದ ಹಿತದೃಷ್ಠಿಯಿಂದ ಐಪಿಎಲ್ ಅನ್ನು ಮುಂದೂಡಿದೆ.

  • ಕೊರೊನಾ ಎಫೆಕ್ಟ್- ಭಾರತ, ದ.ಆಫ್ರಿಕಾ ನಡುವನ ಸರಣಿ ರದ್ದು

    ಕೊರೊನಾ ಎಫೆಕ್ಟ್- ಭಾರತ, ದ.ಆಫ್ರಿಕಾ ನಡುವನ ಸರಣಿ ರದ್ದು

    ಮುಂಬೈ: ಕೊರೊನಾ ವೈರಸ್ ಕರಿನೆರಳು ಕ್ರಿಕೆಟ್ ಅಂಗಳಕ್ಕೂ ತಟ್ಟಿದೆ. ಬಿಸಿಸಿಐಗೆ ಭಾರೀ ಆದಾಯ ತಂದುಕೊಂಡುವ ಐಪಿಎಲ್ ದಿನಾಂಕ ಮುಂದೂಡಿದ ಬೆನ್ನಲ್ಲೇ ಭಾರತ, ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ರದ್ದುಗೊಳಿಸಲಾಗಿದೆ.

    ಈಗಾಗಲೇ ಆರಂಭವಾಗಿರುವ ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವಿನ ಮೂರು ಏಕದಿನ ಪಂದ್ಯಗಳ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಉಳಿದ ಎರಡು ಪಂದ್ಯಗಳನ್ನು ಖಾಲಿ ಮೈದಾನದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿತ್ತು. ಆದರೆ ಈಗ ಸರಣಿಯನ್ನು ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯವು ಲಕ್ನೋದಲ್ಲಿ ಮಾರ್ಚ್ 15ರಂದು ಹಾಗೂ ಮೂರನೇ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್‍ನಲ್ಲಿ ಮಾರ್ಚ್ 18 ರಂದು ನಡೆಯಬೇಕಿತ್ತು. ಬಿಸಿಸಿಐ ಸರಣಿಯನ್ನು ರದ್ದುಗೊಳಿಸಿದ್ದರಿಂದ ಹರಿಣರು ತಮ್ಮ ತಾಯ್ನಾಡಿಗೆ ಮರಳಲಿದ್ದಾರೆ.

    ದೇಶದಲ್ಲಿ ಮಹಾಮಾರಿ ಕೊರೊನಾ ಹೆಚ್ಚಾಗುತ್ತಿದೆ. ಹೀಗಾಗಿ ಐಪಿಎಲ್ ಟೂರ್ನಿಯನ್ನು ಮುಂದೂಡಬೇಕು. ಇಲ್ಲವೇ ರದ್ದುಗೊಳಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಇದರಿಂದಾಗಿ ಬಿಸಿಸಿಐ ಜಾಗತಿಕ ಕಾಳಜಿಯ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಯನ್ನು ಏಪ್ರಿಲ್ 15ಕ್ಕೆ ಮುಂದೂಡಿದೆ. ಚೆನ್ನೈನಲ್ಲಿ ಮಾರ್ಚ್ 29ರಂದು ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಮುಂದೂಡಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೇ ಶಾ ಹಾಗೂ ಐಪಿಎಲ್‍ನ ಉನ್ನತ ಆಡಳಿತ ಮಂಡಳಿ ನಿರ್ಧಾರ ಪ್ರಕಟಿಸಿದೆ.

    ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಕ್ರಿಕೆಟ್ ವೀಕ್ಷಿಸಲು ಸಾವಿರಾರು ಮಂದಿ ಕ್ರೀಡಾಂಗಣಕ್ಕೆ ಬರುತ್ತಾರೆ. ಯಾರು ಬರುತ್ತಾರೆ? ಅವರು ಎಲ್ಲಿಂದ ಬರುತ್ತಿದ್ದಾರೆ ಎನ್ನುವುದು ತಿಳಿಯುವುದು ಅಸಾಧ್ಯ. ಒಬ್ಬ ವ್ಯಕ್ತಿ ಬಂದರೂ ಹಲವು ಮಂದಿಗೆ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಐಪಿಎಲ್ ಸೇರಿದಂತೆ ಎಲ್ಲ ಕ್ರೀಡಾ ಕಾರ್ಯಕ್ರಮವನ್ನು ರದ್ದುಪಡಿಸುತ್ತಿದ್ದೇವೆ ಎಂದು ಹೇಳಿದ್ದರು.

  • ದೆಹಲಿಯಲ್ಲಿ ಎಲ್ಲ ಐಪಿಎಲ್ ಪಂದ್ಯ ರದ್ದು

    ದೆಹಲಿಯಲ್ಲಿ ಎಲ್ಲ ಐಪಿಎಲ್ ಪಂದ್ಯ ರದ್ದು

    ನವದೆಹಲಿ: ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಎಲ್ಲ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ.

    ಕ್ರಿಕೆಟ್ ವೀಕ್ಷಿಸಲು ಸಾವಿರಾರು ಮಂದಿ ಕ್ರೀಡಾಂಗಣಕ್ಕೆ ಬರುತ್ತಾರೆ. ಯಾರು ಬರುತ್ತಾರೆ? ಅವರು ಎಲ್ಲಿಂದ ಬರುತ್ತಿದ್ದಾರೆ ಎನ್ನುವುದು ತಿಳಿಯುವುದು ಅಸಾಧ್ಯ. ಒಬ್ಬ ವ್ಯಕ್ತಿ ಬಂದರೂ ಹಲವು ಮಂದಿಗೆ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಐಪಿಎಲ್ ಸೇರಿದಂತೆ ಎಲ್ಲ ಕ್ರೀಡಾ ಕಾರ್ಯಕ್ರಮವನ್ನು ರದ್ದುಪಡಿಸುತ್ತಿದ್ದೇವೆ ಎಂದು ತಿಳಿಸಿದರು.

    ಏಕದಿನ ಪಂದ್ಯಗಳನ್ನು ಪ್ರೇಕ್ಷಕರು ಇಲ್ಲದೇ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ಐಪಿಎಲ್ ಪಂದ್ಯಗಳನ್ನು ಪ್ರೇಕ್ಷಕರು ಇಲ್ಲದೇ ಆಯೋಜಿಸುತ್ತಾ ಎನ್ನುವುದು ಇನ್ನು ನಿರ್ಧಾರವಾಗಿಲ್ಲ.

    ಈಗಾಗಲೇ ದೆಹಲಿ ಸರ್ಕಾರ ಸಾರ್ವಜನಿಕವಾಗಿ 200ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ಸಮಾರಂಭವನ್ನು ನಿಷೇಧಿಸಿದ್ದು, ಶಾಲಾ, ಕಾಲೇಜು, ಸಿನಿಮಾ ಮಂದಿರಗಳು ಮಾರ್ಚ್ 31ರವರೆಗೆ ಮುಚ್ಚುವಂತೆ ಆದೇಶಿಸಿದೆ.

     

  • ಧೋನಿ ರೀ ಎಂಟ್ರಿಗಾಗಿ ಪಾಕ್ ವೇಟಿಂಗ್!

    ಧೋನಿ ರೀ ಎಂಟ್ರಿಗಾಗಿ ಪಾಕ್ ವೇಟಿಂಗ್!

    ಇಸ್ಲಾಮಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ವಿಶ್ವಾದ್ಯಂತ ದೊಡ್ಡ ಫ್ಯಾನ್ ಕ್ಲಬ್ ಇದ್ದು, ಅಭಿಮಾನಿಗಳು ಅವರನ್ನು ಫಾಲೋ ಮಾಡ್ತಾರೆ. ಸದ್ಯ ಧೋನಿ ಅವರ ರೀ ಎಂಟ್ರಿಗಾಗಿ ಭಾರತದ ಅಭಿಮಾನಿಗಳು ಮಾತ್ರವಲ್ಲದೇ ಪಾಕ್ ಅಭಿಮಾನಿಗಳು ಕೂಡ ಕಾದು ಕುಳಿತಿದ್ದಾರೆ. ಐಪಿಎಲ್ ಮಾದರಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯವೊಂದನ್ನು ವೀಕ್ಷಿಸಲು ಆಗಮಿಸಿದ ಅಭಿಮಾನಿಯೊಬ್ಬ ಧೋನಿ ಜೆರ್ಸಿ ಹಾಕಿಕೊಂಡು ಪೋಸ್ ಕೊಟ್ಟಿದ್ದು, ಈ ಫೋಟೋಗಳನ್ನು ಕಂಡು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಧೋನಿ ಹೆಸರು ಹಾಗೂ ಜೆರ್ಸಿ ನಂ.7 ಎಂದು ಮುದ್ರಿಸಿದ್ದ ಪಾಕಿಸ್ತಾನದ ತಂಡದ ಜೆರ್ಸಿಯನ್ನು ಅಭಿಮಾನಿ ಧರಿಸಿದ್ದ. ಪರಿಣಾಮ ಆತ ಕ್ರೀಡಾಂಗಣದಲ್ಲಿ ಪ್ರತ್ಯೇಕವಾಗಿ ಕಂಡಿದ್ದ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆತ ಪಿಎಸ್‍ಎಲ್ ಟೂರ್ನಿಯ ಇಸ್ಲಾಮಾಬಾದ್ ತಂಡಕ್ಕೆ ಬೆಂಬಲಿಸಲು ಆಗಮಿಸಿದ್ದೇನೆ. ಆದರೆ ಧೋನಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದ. ಅಲ್ಲದೇ ಈ ಅಭಿಮಾನಿ 2019ರ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಪಾಕ್ ಜೆರ್ಸಿ ಮೇಲೆ ಧೋನಿ ಹೆಸರು, ಜೆರ್ಸಿ ನಂಬರ್ ಮುದ್ರಿಸಿ ಸುದ್ದಿ ಮಾಡಿದ್ದ. ಯುವಕನ ಅಭಿಮಾನಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    2019ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಕ್ರಿಕೆಟ್‍ಗೆ ದೂರವಾಗಿ ಉಳಿದಿರುವ ಧೋನಿ 2020ರ ಐಪಿಎಲ್ ಟೂರ್ನಿಯಲ್ಲಿ ರೀ ಎಂಟ್ರಿ ನೀಡುವ ಸಿದ್ಧತೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡು ಅಭ್ಯಾಸ ಆರಂಭಿಸಿದ್ದಾರೆ. ಪಾಕ್ ವಿರುದ್ಧ ಶತಕ ಸಿಡಿಸಿ ಕ್ರಿಕೆಟ್ ವೃತ್ತಿ ಜೀವನದಲ್ಲಿ ಗಟ್ಟಿಯಾಗಿ ನೆಲೆನಿಂತ ಧೋನಿ ಪಾಕ್ ವಿರುದ್ಧ ಸ್ಮರಣೀಯ ಇನ್ನಿಂಗ್ಸ್ ಗಳನ್ನು ಆಡಿದ್ದರು. ಅಂದು ಪಾಕ್ ಅಧ್ಯಕ್ಷರಾಗಿದ್ದ ಪರ್ವೇಜ್ ಮುಷರಫ್ ಕೂಡ ಧೋನಿ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದನ್ನು ಇಲ್ಲಿ ಸ್ಮರಿಸಬಹುದಾಗಿದೆ.

    ಮಾರ್ಚ್ 29ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಹಾಗೂ ಚೆನ್ನೈ ತಂಡಗಳು ಎದುರಾಗುತ್ತಿದ್ದು, ರೋಚಕ ಆರಂಭಿಕ ಪಂದ್ಯಕ್ಕೆ ವಾಂಖೆಡೆ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಈ ಬಾರಿಯ ಐಪಿಎಲ್ ಟೂರ್ನಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಸರಣಿಯಲ್ಲಿ ಧೋನಿ ಟೀಂ ಇಂಡಿಯಾ ಪರ ಕಮ್‍ಬ್ಯಾಕ್ ಮಾಡುತ್ತಾರಾ ಎಂಬುದನ್ನು ನಿರ್ಧರಿಸಲಿದೆ.

  • ಐಪಿಎಲ್ ರದ್ದುಗೊಳಿಸುವಂತೆ ಮದ್ರಾಸ್ ಹೈಕೋರ್ಟಿಗೆ ಅರ್ಜಿ

    ಐಪಿಎಲ್ ರದ್ದುಗೊಳಿಸುವಂತೆ ಮದ್ರಾಸ್ ಹೈಕೋರ್ಟಿಗೆ ಅರ್ಜಿ

    ಚೆನ್ನೈ: ಕೊರೊನಾ ವೈರನ್‍ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಿಕ್ಕಟ್ಟಿಗೆ ಸಿಲುಕಿದೆ. ಐಪಿಎಲ್ ರದ್ದುಗೊಳಿಸುವಂತೆ ಕೋರಿ ವಕೀಲ ಜಿ.ಅಲೆಕ್ಸ್ ಬೆಂಜಿಗರ್ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ಬಿಸಿಸಿಐ ಐಪಿಎಲ್ ನಡೆಸದಂತೆ ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಬೇಕು ಎಂದು ಜಿ.ಅಲೆಕ್ಸ್ ಬೆಂಜಿಗರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಈ ಬಾರಿ ಪಂದ್ಯಾವಳಿ ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಲಿದೆ. ಇದನ್ನೂ ಓದಿ: ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

    ಇತ್ತ ಮಿಜೋರಾಂನ ರಾಜಧಾನಿ ಐಜ್ವಾಲ್‍ನಲ್ಲಿ ನಡೆಯಲಿರುವ ಹೀರೋ ಸಂತೋಷ್ ಟ್ರೋಫಿಯ 2019-20ರ ಅಂತಿಮ ಸುತ್ತನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಐಎಫ್‍ಎಫ್) ಮುಂದೂಡಿದೆ. ಏಪ್ರಿಲ್ 14ರಿಂದ27 ರವರೆಗೆ ಪಂದ್ಯ ನಡೆಯಬೇಕಿತ್ತು. ಫುಟ್ಬಾಲ್ ಟೂರ್ನಿ ಬೆನ್ನಲ್ಲೇ ಐಪಿಎಲ್‍ಗೂ ಈ ಬಿಸಿ ತಟ್ಟಿದೆ.

    ಅರ್ಜಿಯಲ್ಲಿ ಏನಿದೆ?:
    ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ವೆಬ್‍ಸೈಟ್‍ನ ಪ್ರಕಾರ ಕೊರೊನಾ ವೈರಸ್‍ಗೆ ಇನ್ನೂ ಯಾವುದೇ ಔಷಧಿಯನ್ನು ಸಂಶೋಧಿಸಿಲ್ಲ. ಜೊತೆಗೆ ಅದನ್ನು ತಡೆಯಲು ಯಾವುದೇ ಮಾರ್ಗಗಳಿಲ್ಲ. ಇದು ವಿಶ್ವಾದ್ಯಂತ ವೇಗವಾಗಿ ಹರಡುತ್ತಿದ್ದು, ಭಾರೀ ಅನಾಹುತ ಸೃಷ್ಟಿಸಿದೆ. ಇಟಲಿ ಫುಟ್ಬಾಲ್ ಫೆಡರೇಶನ್ ಲೀಗ್‍ಗೂ ಸಹ ಕೊರೊನಾ ವೈರಸ್ ಬಿಸಿ ತಟ್ಟಿದೆ. ಹೀಗಾಗಿ ಫುಟ್ಬಾಲ್ ಟೂರ್ನಿಯನ್ನು ಏಪ್ರಿಲ್‍ನಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಐಪಿಎಲ್‍ಗೆ ಸಂಬಂಧಿಸಿದಂತೆ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಕೀಲ ಜಿ.ಅಲೆಕ್ಸ್ ಬೆಂಜಿಗರ್ ಮನವಿ ಮಾಡಿಕೊಂಡಿದ್ದಾರೆ.

    ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಎಂ.ಎಂ.ಸುಂದ್ರೇಶ್ ಹಾಗೂ ಕೃಷ್ಣನ್ ರಾಮಸ್ವಾಮಿ ಅವರ ನೇತೃತ್ವದ ನ್ಯಾಯಪೀಠವು ಮಾರ್ಚ್ 12ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಭಾರತದಲ್ಲಿ ಬುಧವಾರದವರೆಗೆ ಒಟ್ಟು 61 ಕೊರೊನ ವೈರಸ್ ಪ್ರಕರಣಗಳು ವರದಿಯಾಗಿವೆ. ಕೊರೊನಾ ಸೋಂಕನ್ನು ತಡೆಗಟ್ಟಲು ಸರ್ಕಾರ ಮತ್ತು ಆರೋಗ್ಯ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಮಂಗಳವಾರ ದೇಶಾದ್ಯಂತ 14 ಹೊಸ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಕೇರಳ 8 ಪ್ರಕರಣ, ಪುಣೆ ಹಾಗೂ ಕರ್ನಾಟಕದಲ್ಲಿ ತಲಾ ಮೂರು ಪ್ರಕರಣಗಳು ವರದಿಯಾಗಿವೆ.

    ಜಿ.ಅಲೆಕ್ಸ್ ಬೆಂಜಿಗರ್ ಅವರು ಈ ಹಿಂದೆ ಐಪಿಎಲ್ ನಡೆಸದಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದರು. ಆದರೆ ಅಧಿಕಾರಿಗಳಿಂದ ಅವರಿಗೆ ಯಾವುದೇ ರೀತಿಯ ಉತ್ತರ ಸಿಗಲಿಲ್ಲ. ಹೀಗಾಗಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗಷ್ಟೇ ಮಾತನಾಡಿ, ಐಪಿಎಲ್ ರದ್ದು ಅಥವಾ ಮುಂದೂಡುವುದನ್ನು ತಳ್ಳಿಹಾಕಿದ್ದಾರೆ. ಕೊರೊನಾ ವೈರಸ್ ಐಪಿಎಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.