Tag: IPL

  • ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಮರೆಯಲಾಗದ ದಿನ – ಇತಿಹಾಸ ಸೃಷ್ಟಿಸಿದ್ದ ಗೇಲ್

    ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಮರೆಯಲಾಗದ ದಿನ – ಇತಿಹಾಸ ಸೃಷ್ಟಿಸಿದ್ದ ಗೇಲ್

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಇಂದು ಮರೆಯಲಾಗದ ದಿನ ಏಕೆಂದರೆ 7 ವರ್ಷದ ಹಿಂದೆ ಇದೇ ಏಪ್ರಿಲ್ 23ರಂದು ಕ್ರಿಸ್ ಗೇಲ್ ಅವರು ಇತಿಹಾಸವನ್ನು ಸೃಷ್ಟಿ ಮಾಡಿದ್ದರು.

    2013ರ ಐಪಿಎಲ್ 6ರ ಅವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿ ಆಡುತ್ತಿದ್ದ ವೆಸ್ಟ್ ಇಂಡೀಸ್‍ನ ದೈತ್ಯ ಆಟಗಾರ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧ ವೈಯಕ್ತಿಯ ಅತೀ ಹೆಚ್ಚು ರನ್ ಸಿಡಿಸಿದ್ದರು. 2013ರ ಐಪಿಲ್ 6ನೇ ಅವೃತ್ತಿಯ 31ನೇ ಪಂದ್ಯದಲ್ಲಿ ಪುಣೆ ಬೌಲರ್ಸ್‍ಗಳು ಕಾಡಿದ್ದ ಗೇಲ್, ಅಂದು ಕೇವಲ 66 ಎಸೆತಗಳಲ್ಲಿ 175 ರನ್ (17 ಸಿಕ್ಸ್ 13 ಬೌಂಡರಿ) ಸಿಡಿಸಿ ಹೊಸ ದಾಖಲೆ ಬರೆದಿದ್ದರು.

    ಪುಣೆ ಬೌಲರ್ ಗಳ ಮೇಲೆ ಸವಾರಿ ಮಾಡಿದ್ದ ಗೇಲ್, ಚಿನ್ನಸ್ವಾಮಿ ಕ್ರೀಡಾಂಗಣದ ಮೂಲೆ ಮೂಲೆಗೆ ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 30 ಎಸೆತದಲ್ಲಿ ವೇಗದ ಸೆಂಚೂರಿ ಸಿಡಿಸಿದ್ದರು. ಜೊತೆಗೆ ಒಂದು ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 17 ಸಿಕ್ಸರ್ ಸಿಡಿಸಿದ ದಾಖಲೆಯನ್ನು ಮಾಡಿದ್ದರು ಹಾಗೂ 175 ರನ್ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ವೈಯಕ್ತಿಕ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಕ್ಕೂ ಮುಂಚೆ ಬ್ರೆಂಡನ್ ಮೆಕಲಮ್ ಅವರು 158 ರನ್ ಸಿಡಿಸಿದ್ದು ವೈಯಕ್ತಿಕ ಅತೀ ಹೆಚ್ಚು ರನ್ ಆಗಿತ್ತು.

    ಅಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಪುಣೆ ತಂಡ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಅಹ್ವಾನ ಮಾಡಿತ್ತು. ಅಂತೆಯೇ ಕ್ರಿಸ್ ಗೇಲ್ ಮತ್ತು ದಿಲ್ಶನ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದರು. ಆದರೆ ಒಂದು ಓವರ್ ಮುಗಿದ ನಂತರ ಮಳೆ ಬಂದು ಪಂದ್ಯ ಅರ್ಧ ಗಂಟೆ ನಿಂತು ಹೋಗಿತ್ತು. ನಂತರ ಬ್ಯಾಟಿಂಗ್ ಇಳಿದ ಗೇಲ್ ಪುಣೆ ಬೌಲರ್ಸ್ ಗಳನ್ನು ಅಕ್ರಮಣಕಾರಿಯಾಗಿ ದಂಡಿಸಿದ್ದರು. ಗೇಲ್ ಅವರ 175 ರನ್, ದಿಲ್ಶನ್ ಅವರ 33 ರನ್ ಹಾಗೂ ಎಬಿಡಿ ವಿಲಿಯರ್ಸ್ ಸ್ಫೋಟಕ 8 ಬಾಲಿಗೆ 31 ರನ್‍ಗಳ ನೆರವಿನಿಂದ ಆರ್‍ಸಿಬಿ ಒಟ್ಟು 263 ರನ್ ಗಳಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಗಳಿಸಿದ ತಂಡವಾಗಿ ದಾಖಲೆ ಬರೆದಿತ್ತು.

    ನಂತರ ಬ್ಯಾಟಿಂಗ್‍ಗೆ ಬಂದ ಪುಣೆ ವಾರಿಯರ್ಸ್ ತಂಡ ಬೆಂಗಳೂರು ತಂಡದ ಬಿಗು ಬೌಲಿಂಗ್ ದಾಳಿಗೆ ನಲುಗಿ ಹೋಗಿತ್ತು. ರವಿ ರಮ್‍ಪಾಲ್ ಮತ್ತು ಜೈದೇವ್ ಉನಾದ್ಕತ್ ಅವರ ಮಾರಕ ದಾಳಿಗೆ ತತ್ತರಿಸಿದ ಪುಣೆ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 133 ರನ್ ಗಳಿಸಿತ್ತು. ಈ ಮೂಲಕ ಬೆಂಗಳೂರು ತಂಡ 130 ರನ್‍ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಪುಣೆ ಪರ ಸ್ಟೀವ್ ಸ್ಮಿತ್ ಅವರು 42 ರನ್ ಹೊಡೆದಿದದ್ದರು.

    ಆಲ್‍ರೌಂಡರ್ ಆಟ ಪ್ರದರ್ಶಸಿದ್ದ ಗೇಲ್
    ಅಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರದಿದ್ದ ಜನರಿಗೆ ಗೇಲ್ ಉತ್ತಮ ಮನರಂಜನೆ ನೀಡಿದ್ದರು. ಬ್ಯಾಟಿಂಗ್ ನಲ್ಲಿ ಸಿಕ್ಸ್ ಮೇಲೆ ಸಿಕ್ಸ್ ಭಾರಿಸಿ ಅಭಿಮಾನಿಗಳು ಹುಚ್ಚೆಂದು ಕುಣಿಯುವಂತೆ ಮಾಡಿದ್ದ ಗೇಲ್, ನಂತರ ಬೌಲಿಂಗ್‍ನಲ್ಲೂ ಕಮಾಲ್ ಮಾಡಿದ್ದರು. ಪಂದ್ಯದ ಕೊನೆಯ ಓವರ್ ಅನ್ನು ಬೌಲ್ ಮಾಡಿದ್ದ ಗೇಲ್ 5 ರನ್ ನೀಡಿ ಎರಡು ವಿಕೆಟ್‍ಗಳನ್ನು ಪಡೆದಿದ್ದರು. ಆ ಓವರ್ ನಲ್ಲಿ ವಿಕೆಟ್ ಪಡೆದು ಗೇಲ್ ಸಂಭ್ರಮಿಸಿದ್ದ ರೀತಿ ಮತ್ತು ಆಂಪೈರ್ ಗೆ ಔಟ್ ಎಂದು ಮನವಿ ಮಾಡಿದ್ದ ಶೈಲಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು.

  • ಸದ್ಯದಲ್ಲಿ ಯಾವುದೇ ಕ್ರಿಕೆಟ್ ಟೂರ್ನಿ ಭಾರತದಲ್ಲಿ ಇರುವುದಿಲ್ಲ: ಗಂಗೂಲಿ

    ಸದ್ಯದಲ್ಲಿ ಯಾವುದೇ ಕ್ರಿಕೆಟ್ ಟೂರ್ನಿ ಭಾರತದಲ್ಲಿ ಇರುವುದಿಲ್ಲ: ಗಂಗೂಲಿ

    ಮುಂಬೈ: ಕೊರೊನಾ ವೈರಸ್ ಕಾರಣದಿಂದ ಭಾರತದಲ್ಲಿ ಸದ್ಯದ ಅವಧಿಯಲ್ಲಿ ಯಾವುದೇ ಕ್ರಿಕೆಟ್ ಚಟುವಟಿಕೆ ಇರುವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

    ಜರ್ಮನಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿರುವ ಕಾರಣ ಅಲ್ಲಿ ಫುಟ್‍ಬಾಲ್ ಟೂರ್ನಿ ಏರ್ಪಡಿಸಲು ಮೇ ಮೊದಲ ವಾರದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಪರಿಣಾಮ ಭಾರತದಲ್ಲಿ ಕ್ರಿಕೆಟ್ ಟೂರ್ನಿಗಳು ಕೂಡ ಆರಂಭವಾಗುವ ಅವಕಾಶ ಇದೆಯಾ ಎಂಬ ಪ್ರಶ್ನೆಗೆ ಗಂಗೂಲಿ ಉತ್ತರಿಸಿದ್ದಾರೆ.

    ಜಮರ್ನಿಗೆ ಹೋಲಿಸಿದರೆ ಭಾರತದಲ್ಲಿ ಇರುವ ಸಾಮಾಜಿಕ ಪರಿಸ್ಥಿತಿಗಳು ಭಿನ್ನವಾಗಿದೆ. ಆದ್ದರಿಂದ ಸದ್ಯದ ಸ್ಥಿತಿಯಲ್ಲಿ ಕ್ರಿಕೆಟ್ ಆರಂಭವಾಗುವ ಅವಕಾಶವಿಲ್ಲ. ಅಲ್ಲದೇ ಕ್ರಿಕೆಟ್ ಸಾಕಷ್ಟು ವಿಚಾರಗಳೊಂದಿಗೆ ಸಂಬಂಧ ಹೊಂದಿದೆ. ಕ್ರೀಡೆಗಾಗಿ ಎಲ್ಲರ ಜೀವವನ್ನು ಅಪಾಯದಲ್ಲಿಡಲು ಸಾಧ್ಯವಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

    ಇತ್ತ ದಕ್ಷಿಣ ಕೊರಿಯಾದಲ್ಲಿ ಈಗಾಗಲೇ ಬೆಸ್‍ಬಾಲ್ ಪಂದ್ಯಗಳನ್ನು ಆರಂಭಿಸಲಾಗಿದೆ. ಆದರೆ ಮೊದಲಿನಂತೆ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಆಗಮಿಸಲು ಅವಕಾಶ ನೀಡಿಲ್ಲ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಭಾರತದಲ್ಲೂ ಸೆಪ್ಟೆಂಬರ್-ಅಕ್ಟೋಬರ್ ನಡುವೆ ಐಪಿಎಲ್ ನಿರ್ವಹಿಸಲು ಅವಕಾಶ ಲಭಿಸಿದರೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವ ಸಾಧ್ಯತೆ ಇದೆ.

    ಇತ್ತ 2020ರ ಅಕ್ಟೋಬರ್ ನಲ್ಲಿ ಆರಂಭವಾಗ ಬೇಕಿರುವ ಟಿ20 ವಿಶ್ವಕಪ್ ಮೇಲೆ ಕೊರೊನಾ ವೈರಸ್ ಪ್ರಭಾವ ಬೀರಿದೆ. ಕೊರೊನಾ ಕಾರಣದಿಂದ ಆಸ್ಟ್ರೇಲಿಯಾ ಸರ್ಕಾರ ಸೆಪ್ಟೆಂಬರ್ 31ರ ವರೆಗೂ ವಿದೇಶಿಗರ ಆಗಮನಕ್ಕೆ ನಿಷೇಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಟೂರ್ನಿ ಮುಂದೂಡಲಾಗುತ್ತಾ ಅಥವಾ ನಿಗದಿತ ವೇಳಪಟ್ಟಿಯಂತೆ ಆರಂಭವಾಗಲಿದೆಯಾ ಎಂಬ ಚರ್ಚೆ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಸಿಸಿ ವಕ್ತಾರರು, ಟಿ20 ವಿಶ್ವಕಪ್ ಭವಿಷ್ಯದ ಬಗ್ಗೆ ನಾವು ಕ್ರಿಕೆಟ್ ತಜ್ಞರು ಹಾಗೂ ಆಸ್ಟ್ರೇಲಿಯಾ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ.

  • ಐಪಿಎಲ್ ಇತಿಹಾಸದಲ್ಲೇ ಹೆಚ್ಚು ಮೇಡನ್ ಓವರ್ ಮಾಡಿದ್ಯಾರು?

    ಐಪಿಎಲ್ ಇತಿಹಾಸದಲ್ಲೇ ಹೆಚ್ಚು ಮೇಡನ್ ಓವರ್ ಮಾಡಿದ್ಯಾರು?

    ನವದೆಹಲಿ: ಐಸಿಸಿ 2007ರಲ್ಲಿ ಆರಂಭಿಸಿದ ಟಿ20 ವಿಶ್ವಕಪ್ ಟೂರ್ನಿಯನ್ನು ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತ ಗೆದ್ದು ಬೀಗಿತ್ತು. ಇದಾದ ಬಳಿಕ ಅಂದ್ರೆ 2008ರಲ್ಲಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಆರಂಭಿಸಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿತ್ತು.

    ಐಪಿಎಲ್ ಟೂರ್ನಿಯು ವಿಶ್ವದ ಅತ್ಯುತ್ತಮ ಟಿ20 ಲೀಗ್ ಎಂದು ಪ್ರಶಂಸಿಸಲ್ಪಟ್ಟಿದೆ. ಏಕೆಂದರೆ ಇದು ಟೀಂ ಇಂಡಿಯಾದ ಸ್ಟಾರ್ ಆಟಗಾರರನ್ನು ವಿದೇಶಿ ಕ್ರಿಕೆಟಿಗರೊಂದಿಗೆ ಅಥವಾ ವಿರುದ್ಧವಾಗಿ ಆಡಲು ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಯುವ ಭಾರತೀಯ ಪ್ರತಿಭೆಗಳಿಗೆ ತಮ್ಮ ಪ್ರದರ್ಶನವನ್ನು ನೀಡಲು ಒಂದು ಉತ್ತಮ ವೇದಿಕೆಯನ್ನು ನೀಡುತ್ತಿದೆ.

    ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವ ಕ್ರಿಕೆಟ್‍ಗೆ ಸಾಕಷ್ಟು ದೊಡ್ಡ ಬ್ಯಾಟ್ಸ್‌ಮನ್‌ಗಳನ್ನು ನೀಡಿದೆ ಎಂದು ಅನೇಕರು ನಂಬಿದ್ದಾರೆ. ಜೊತೆಗೆ ಬೌಲರ್‌ಗಳ ಕೌಶಲ್ಯವನ್ನೂ ಅಭಿಮಾನಿಗಳು ಗೌರವಿಸುತ್ತಾರೆ. ರನ್ ಏರಿಕೆ ನಿಯಂತ್ರಿಸಲು ಮತ್ತು ಸಿಕ್ಸರ್, ಬೌಂಡರಿಗಳನ್ನು ಮಿತಿಗೊಳಿಸಲು ಅನೇಕ ಬೌಲರ್‌ಗಳು ಶ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ಐಪಿಎಲ್ ಇತಿಹಾಸದಲ್ಲೇ ಯಾರು ಹೆಚ್ಚಿನ ಸಂಖ್ಯೆಯ ಮೇಡನ್ ಓವರ್‌ಗಳನ್ನು ಮಾಡಿದ್ದಾರೆ ಎನ್ನುವುದು ತಿಳಿಯುವುದು ಅಗತ್ಯವಾಗಿದೆ.

    ವಿಶೇಷವೆಂದರೆ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೇಡನ್ ಓವರ್ ಮಾಡಿದ ಬೌಲರ್‌ಗಳ ಪಟ್ಟಿಯ ಟಾಪ್ ತ್ರಿಯಲ್ಲಿ ಭಾರತೀಯರೇ ಇದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟರ್, 84 ಅಂತರರಾಷ್ಟ್ರೀಯ ಪಂದ್ಯಗಳನ್ನ ಆಡಿರುವ ಅನುಭವಿ ಪ್ರವೀಣ್ ಕುಮಾರ್ ಅವರು ಅಗ್ರಸ್ಥಾನದಲ್ಲಿದ್ದಾರೆ.  2 ಸ್ಥಾನದಲ್ಲಿ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇರ್ಫಾನ್ ಪಠಾಣ್ ಇದ್ದಾರೆ.

    ಯಾರು ಎಷ್ಟು ಮೇಡನ್‍ ಓವರ್?:
    ಪ್ರವೀಣ್ ಕುಮಾರ್- 14
    ಇರ್ಫಾನ್ ಪಠಾಣ್- 10
    ಧವಲ್ ಕುಲಕರ್ಣಿ- 8
    ಲಸಿತ್ ಮಾಲಿಂಗ- 8
    ಸಂದೀಪ್ ಶರ್ಮಾ- 8

    ಪ್ರವೀಣ್ ಕುಮಾರ್ ಅವರು ಐಪಿಎಲ್ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಸನ್‍ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್), ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) ಮತ್ತು ಗುಜರಾತ್ ಲಯನ್ಸ್ (ಜಿಎಲ್) ಪರ ಆಡಿದ್ದಾರೆ. 33ರ ಹರೆಯದ ಪ್ರವೀಣ್ ಕುಮಾರ್ 2017ರ ಆವೃತ್ತಿಯಲ್ಲಿ ಸುರೇಶ್ ರೈನಾ ನೇತೃತ್ವದ ಜಿಎಲ್ ತಂಡದ ಪರ ಕೊನೆಯದಾಗಿ ಆಡಿದ್ದರು.

    ಐಪಿಎಲ್ ಇತಿಹಾಸದಲ್ಲಿ ಹೆಚ್ಚಿನ ವಿಕೆಟ್ ಪಡೆದ ಅಗ್ರ 20 ಬೌಲರ್‌ಗಳಲ್ಲಿ ಪ್ರವೀಣ್ ಕುಮಾರ್ ಕೂಡ ಒಬ್ಬರಾಗಿದ್ದಾರೆ. ಅವರು ಒಟ್ಟು 119 ಐಪಿಎಲ್ ಪಂದ್ಯಗಳನ್ನು ಆಡಿ 90 ವಿಕೆಟ್ ಉರುಳಿಸಿದ್ದಾರೆ.

    2020ರ ಐಪಿಎಲ್ ಆವೃತ್ತಿಯು ಕೊರೊನಾ ವೈರಸ್‍ನಿಂದಾಗಿ ಮುಂದೂಡಲ್ಪಟ್ಟಿದೆ. ಹೀಗಾಗಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ. ಲಾಕ್‍ಡೌನ್‍ನಿಂದಾಗಿ ಕ್ರಿಕೆಟ್ ಆಟಗಾರರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

  • ವಿದೇಶಿ ನೆಲದಲ್ಲಿ ಐಪಿಎಲ್ 2020- ಆರ್‌ಸಿಬಿ ಹ್ಯಾಪಿ ಎಂದ ಕೋಚ್

    ವಿದೇಶಿ ನೆಲದಲ್ಲಿ ಐಪಿಎಲ್ 2020- ಆರ್‌ಸಿಬಿ ಹ್ಯಾಪಿ ಎಂದ ಕೋಚ್

    ಮುಂಬೈ: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ 2020 ಟೂರ್ನಿಯನ್ನು ಬಿಸಿಸಿಐ ಅಧಿಕೃತವಾಗಿ ಮುಂದೂಡಿದೆ. ಶೆಡ್ಯೂಲ್ ಅನ್ವಯ ಮಾರ್ಚ್ 29 ರಿಂದ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಏ.15ಕ್ಕೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ ದೇಶಾದ್ಯಂತ ಲಾಕ್‍ಡೌನ್ ಮೇ 3ರ ವರೆಗೂ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಮತ್ತೆ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ.

    ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಆದರೂ ದೇಶ ಸಹಜ ಸ್ಥಿತಿಗೆ ಮರಳುವ ಕುರಿತು ಖಚಿತತೆ ಇಲ್ಲ. ಈ ಹಿನ್ನೆಲೆಯಲ್ಲಿ ಐಪಿಎಲ್ ಆರಂಭವಾಗುವ ಕುರಿತು ಬಿಸಿಸಿಐ ಸ್ಪಷ್ಟನೆಯನ್ನು ನೀಡಿಲ್ಲ. ಇತ್ತ ಟೂರ್ನಿ ಆಯೋಜಿಸಲು ಬೇರೆ ಬೇರೆ ಮಾರ್ಗಗಳತ್ತ ಚಿಂತನೆ ನಡೆಸಿರುವ ಬಿಸಿಸಿಐ, ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ಆಯೋಜಿಸುವ ಚಿಂತನೆಯಲ್ಲಿದೆ ಎನ್ನಲಾಗಿದೆ.

    ವಿದೇಶಿ ನೆಲದಲ್ಲಿ ಐಪಿಎಲ್ ಆಯೋಜಿಸುವ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಸಿಬಿ ಕೋಚ್ ಸೈಮನ್ ಕ್ಯಾಟಿಚ್, ಟೂರ್ನಿ ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಿದರೆ ಅದು ಆರ್ ಸಿಬಿಗೆ ನೆರವಾಗಲಿದೆ. ಒಂದೊಮ್ಮೆ ಐಪಿಎಲ್ ವಿದೇಶಿ ನೆಲದಲ್ಲಿ ನಡೆದರೆ ತಂಡಕ್ಕೆ ತುಂಬಾ ಸಂತೋಷವಾಗುತ್ತದೆ. ಆರ್‌ಸಿಬಿ ಮಾತ್ರವಲ್ಲದೇ ಇದು ಹಲವು ತಂಡಗಳಿಗೆ ಸಹಕಾರಿ ಆಗಲಿದೆ. ಏಕೆಂದರೆ ನಮ್ಮ ತಂಡದಲ್ಲಿ ಎರಡು ದೇಶದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ತಮ್ಮ ತವರು ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶ ಹೆಚ್ಚಿಸುತ್ತದೆ ಎಂದಿದ್ದಾರೆ. ಅಲ್ಲದೇ 2020ರ ಐಪಿಎಲ್ ಟೂರ್ನಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ತಂಡದಲ್ಲಿ ಎಬಿ ಡಿಲಿಯರ್ಸ್ (ದಕ್ಷಿಣ ಆಫ್ರಿಕಾ), ಅರೋನ್ ಫಿಂಚ್ (ಆಸ್ಟ್ರೇಲಿಯಾ), ಕ್ರಿಸ್ ಮೋರಿಸ್ (ದಕ್ಷಿಣ ಆಫ್ರಿಕಾ), ಕೇನ್ ರಿಚರ್ಡ್ಸನ್ (ಆಸ್ಟ್ರೇಲಿಯಾ), ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ)ದ ವಿದೇಶಿ ಆಟಗಾರರು ಇದ್ದಾರೆ. ಈಗಾಗಲೇ 2020ರ ಐಪಿಎಲ್ ಟೂರ್ನಿ ಆಯೋಜಿಸಲು ತಾವು ಸಿದ್ಧರಾಗಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ವಿಶ್ವದ ಶ್ರೀಮಂತ ಕ್ರಿಕೆಟ್‍ ಟೂರ್ನಿ ಐಪಿಎಲ್ ಆಯೋಜಿಸುವ ಅವಕಾಶವನ್ನು ಯಾವುದೇ ದೇಶ ಬಿಟ್ಟುಕೊಡುವುದಿಲ್ಲ. ಆದ್ದರಿಂದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಕೂಡ ಈ ರೇಸ್‍ನಲ್ಲಿದೆ ಎನ್ನಲಾಗಿದೆ. 2009ರಲ್ಲಿ ದೇಶದಲ್ಲಿ ಚುನಾವಣೆ ನಡೆಯುತ್ತಿದ್ದ ಕಾರಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಏರ್ಪಡಿಸಲಾಗಿತ್ತು. ಅಲ್ಲದೇ 2014ರ ಟೂರ್ನಿಯ ಕೆಲ ಪಂದ್ಯಗಳು ಯುಎಇನಲ್ಲಿ ನಡೆಸಲಾಗಿತ್ತು.

  • ಪೆರ್ರಿ ತುಂಬ ಚೆನ್ನಾಗಿದ್ದಾರೆ, ಅವ್ರ ಜೊತೆ ಡಿನ್ನರ್ ಹೋಗಬೇಕು: ಮುರಳಿ ವಿಜಯ್

    ಪೆರ್ರಿ ತುಂಬ ಚೆನ್ನಾಗಿದ್ದಾರೆ, ಅವ್ರ ಜೊತೆ ಡಿನ್ನರ್ ಹೋಗಬೇಕು: ಮುರಳಿ ವಿಜಯ್

    ಮುಂಬೈ: ಭಾರತದ ಕ್ರಿಕೆಟ್ ಆಟಗಾರ ಮುರಳಿ ವಿಜಯ್ ಅವರು ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರು ನೋಡಲು ಬಹಳ ಸುಂದರವಾಗಿ ಇದ್ದಾರೆ ಅವರ ಜೊತೆ ಡಿನ್ನರ್ ಗೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಕೊರೊನಾ ಭಯದಿಂದ 60 ವರ್ಷದ ನಂತರ ಕ್ರಿಕೆಟ್ ತನ್ನೆಲ್ಲ ಚುಟುವಟಿಗಳನ್ನು ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಉಳಿದಿರುವ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇದ್ದು, ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇನ್ನೂ ಕೆಲವರು ಇನ್‍ಸ್ಟಾ, ಫೇಸ್‍ಬುಕ್‍ಗಳಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ.

    https://www.instagram.com/p/BqG-b4GBeQQ/

    ಸದ್ಯ ಮನೆಯಲ್ಲೇ ಇರುವ ಮುರಳಿ ವಿಜಯ್ ಕೂಡ ಲೈವ್ ಬಂದಿದ್ದು, ತಮ್ಮ ಅಭಿಮಾನಿಗಳ ಜೊತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನೀವು ಯಾರಿಬ್ಬರ ಜೊತೆ ಡಿನ್ನರ್ ಹೋಗಲು ಇಷ್ಟಪಡುತ್ತೀರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಮತ್ತು ಭಾರತದ ಆಟಗಾರ ಶಿಖರ್ ಧವನ್ ಅವರ ಜೊತೆ ಊಟಕ್ಕೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಈ ವೇಳೆ ಅಭಿಮಾನಿಯೋರ್ವ ಯಾಕೆ ಈ ಇಬ್ಬರರನ್ನು ಆಯ್ಕೆ ಮಾಡಿಕೊಂಡ್ರಿ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿದ ವಿಜಯ್ ಎಲ್ಲಿಸ್ ಪೆರ್ರಿ ಅವರು ನೋಡಲು ಬಹಳ ಸುಂದರವಾಗಿ ಇದ್ದಾರೆ. ಜೊತೆಗೆ ಅವರು ಎಂದರೆ ನನಗೆ ತುಂಬ ಇಷ್ಟ ಅದಕ್ಕೆ ಅವರ ಜೊತೆ ಹೋಗಬೇಕು ಎಂದು ಹೇಳಿದೆ. ಜೊತೆಗೆ ಶಿಖರ್ ಧವನ್ ಅವರು ನನಗೆ ಒಳ್ಳೆಯ ಸ್ನೇಹಿತ ಮತ್ತು ಬಹಳ ತಮಾಷೆ ಮಾಡುತ್ತಾರೆ ಈ ಕಾರಣಕ್ಕೆ ಈ ಇಬ್ಬರ ಜೊತೆ ಹೋಗಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

    https://www.instagram.com/p/Bmx4j84n1eC/

    ಈ ವೇಳೆ ತಾವು ಐಪಿಎಲ್ ಆಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಮಾತನಾಡಿದ ಮುರುಳಿ ವಿಜಯ್, ಸಿಎಸ್‍ಕೆ ಒಂದು ಉತ್ತಮ ತಂಡ. ಈ ತಂಡದಲ್ಲಿ ಇರುವ ಕೆಲ ಆಟಗಾರರು ಮೊದಲಿನಿಂದಲೂ ಇದೇ ತಂಡಕ್ಕಾಗಿ ಆಡಿದ್ದಾರೆ. ಅವರೆಲ್ಲರು ಕ್ರಿಕೆಟಿನ ದಂತಕಥೆಗಳು. ಅವರು ಯುವ ಆಟಗಾರರನ್ನು ಡ್ರೆಸ್ಸಿಂಗ್ ರೂಮ್‍ನಲ್ಲಿ ಹುರಿದುಂಬಿಸುತ್ತಾರೆ. ಅವರನ್ನು ನೋಡಿ ಕಲಿಯುವುದೇ ನಮಗೆ ಬೇಕಾದಷ್ಟು ಇದೆ ಎಂದು ಮುರಳಿ ವಿಜಯ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    https://www.instagram.com/p/BhqnWYlg2D_/

    ಒಂದು ಕಾಲದಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ಖಾಯಂ ಆರಂಭಿಕ ಆಟಗಾರನಾಗಿದ್ದ ವಿಜಯ್, ಇದ್ದಕ್ಕಿದಂತೆ ಫಾರ್ಮ್ ಕಳೆದುಕೊಂಡ ಕಾರಣ ಟೀಂ ಇಂಡಿಯಾದಿಂದ ಹೊರಗೆ ಉಳಿದಿದ್ದಾರೆ. ಆದರೆ ಐಪಿಎಲ್ 13ನೇ ಅವೃತ್ತಿಯಲ್ಲಿ ಚೆನ್ನೈ ತಂಡದ ಪರ ಆಡಲು ಮುರಳಿ ವಿಜಯ್ ಅವರು ಸಕಲ ಸಿದ್ಧತೆಗಳನ್ನು ನಡೆಸಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಮುಂದೂಡಿಕೆಯಾಗಿದೆ.

  • ಎಂಎಸ್‍ಡಿ ನಿವೃತ್ತಿ ಘೋಷಿಸಿದ್ರೆ ಸಿಎಸ್‍ಕೆ ಮುಂದಿನ ನಡೆ ಏನು?

    ಎಂಎಸ್‍ಡಿ ನಿವೃತ್ತಿ ಘೋಷಿಸಿದ್ರೆ ಸಿಎಸ್‍ಕೆ ಮುಂದಿನ ನಡೆ ಏನು?

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಯಲ್ಲಿ ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಈ ಬಾರಿಯ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಕೆಲ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಅಂತೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಮೈಕೆಲ್ ಹಸ್ಸಿ ಅವರು, ಒಂದು ವೇಳೆ ಧೋನಿ ನಿವೃತ್ತಿ ಘೋಷಿಸಿದರೆ ಸಿಎಸ್‍ಕೆ ಮುಂದಿನ ನಡೆ ಏನು ಎಂಬುದರ ಬಗ್ಗೆ ವಿವರಿಸಿದ್ದಾರೆ.

    2019ರ ಐಸಿಸಿ ವಿಶ್ವಕಪ್ ಟೂರ್ನಿಯ ಬಳಿಕ ಎಂ.ಎಸ್. ಧೋನಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯವು ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಎಂಎಸ್‍ಡಿ ಟೀಂ ಇಂಡಿಯಾಗೆ ಮರಳಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಐಪಿಎಲ್ ಮುಂದೂಡಲ್ಪಟ್ಟಿದೆ.

    ಧೋನಿ ಅಂತಿಮವಾಗಿ ಎಲ್ಲಾ ರೀತಿಯ ಆಟಗಳಿಂದ ನಿವೃತ್ತಿ ಘೋಷಿಸುವ ಸನ್ನಿವೇಶವನ್ನು ವಿವರಿಸಿದ ಹಸ್ಸಿ, ಸಿಎಸ್‍ಕೆ ಧೋನಿ ಅವರನ್ನು ವಿಶೇಷ ಸ್ಥಾನದೊಂದಿಗೆ ತಂಡದಲ್ಲಿ ಉಳಿಸಿಕೊಳ್ಳಬಹುದು ಎಂದು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

    ”ಎಂ.ಎಸ್.ಧೋನಿ ನಿವೃತ್ತಿಯ ನಿರ್ಧಾರದ ಬಗ್ಗೆ ನಾನು ಕುತೂಹಲದಿಂದ ನೋಡುತ್ತಿರುವೆ. ಧೋನಿ ಅವರನ್ನು ತಂಡದಲ್ಲಿ ತೊಡಗಿಸಿಕೊಳ್ಳಲು ಸಿಎಸ್‍ಕೆ ಮಾಲೀಕರು ಬಯಸುತ್ತಾರೆ ಎಂಬ ನಂಬಿಕೆ ಇದೆ” ಎಂದು ಹಸ್ಸಿ ವಿಡಿಯೋ ಕಾಲ್ ಮೂಲಕ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

    ”ಆದಾಗ್ಯೂ ಆಟಗಾರರ ಬದಲಾವಣೆಯು ಸಂಭವಿಸಿದಾಗ, ಸಿಎಸ್‍ಕೆ ಹೊಸ ತಂಡವನ್ನು ಕಟ್ಟಲು ಬಯಸಬಹುದು. ಮುಂದಿನ ದಶಕದಲ್ಲಿ ಐಪಿಎಲ್ ಪ್ರವೇಶಿಸುವಾಗ ಧೋನಿ ಪ್ಲಾನ್‍ಗಳನ್ನು ಸಿಎಸ್‍ಕೆ ಬಳಸಿಕೊಳ್ಳಬಹುದು. ಇದು ಖಂಡಿತವಾಗಿಯೂ ಪ್ರಸ್ತುತ ಹೆಚ್ಚು ಸವಾಲಿನ ಸಂಗತಿಯಾಗಿದೆ” ಎಂದು ಹಸ್ಸಿ ಹೇಳಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿದಾಗ ಎಂಎಸ್‍ಡಿಯಿಂದ ಕಲಿತ ಕೆಲವು ವಿಚಾರಗಳನ್ನು ಹಸ್ಸಿ ಬಹಿರಂಗಪಡಿಸಿದ್ದಾರೆ. ”ಪಂದ್ಯದ ಆರಂಭದಲ್ಲಿ ಒಂದು ಓವರಿನಲ್ಲಿ 12 ಅಥವಾ 13 ರನ್‍ಗಳ ಚಚ್ಚಲು ನಾನು ಪ್ರಯತ್ನಿಸಲಿಲ್ಲ. ಇದನ್ನು ಎಂ.ಎಸ್. ಧೋನಿ ಅವರಿಂದ ಕಲಿತಿದ್ದೇನೆ. ರನ್ ಗಳಿಸುವುದರಲ್ಲಿಯೇ ಹೆಚ್ಚು ಗಮನಹಸಿರಿದರೆ ಬ್ಯಾಟ್ಸ್‌ಮನ್‌ ಭಯಭೀತರಾಗುತ್ತಾರೆ. ಹೀಗಾಗಿ ಪಂದ್ಯವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಧೋನಿ ನಂಬಿಸಿದ್ದಾರೆ. ಆದ್ದರಿಂದ ಧೋನಿ ಕೂಲ್ ಆಗಿರುತ್ತಾರೆ ಮತ್ತು ಬೌಲರ್ ಗಳ ಮೇಲೂ ಒತ್ತಡ ಬೀಳದಂತೆ ನೋಡಿಕೊಳ್ಳುತ್ತಾರೆ” ಎಂದು ಹಸ್ಸಿ ತಿಳಿಸಿದ್ದಾರೆ.

  • ಐಪಿಎಲ್‍ಗೆ ತಟ್ಟಿದ ಲಾಕ್‍ಡೌನ್ ವಿಸ್ತರಣೆ ಬಿಸಿ- ಬಿಸಿಸಿಐ ಮುಂದಿನ ಹೆಜ್ಜೆ ಏನು?

    ಐಪಿಎಲ್‍ಗೆ ತಟ್ಟಿದ ಲಾಕ್‍ಡೌನ್ ವಿಸ್ತರಣೆ ಬಿಸಿ- ಬಿಸಿಸಿಐ ಮುಂದಿನ ಹೆಜ್ಜೆ ಏನು?

    ನವದೆಹಲಿ: ಲಾಕ್‍ಡೌನ್ ಅನ್ನು ದೇಶದಲ್ಲಿ ಮೇ 3ರವರೆಗೆ ವಿಸ್ತರಿಸಿದ್ದರಿಂದ ಐಪಿಎಲ್ ಮುಂದೂಡಲಾಗಿದೆ. ಮಂಗಳವಾರ ಮಧ್ಯಾಹ್ನ ಬಿಸಿಸಿಐ ಮೂಲಗಳು ಈ ಮಾಹಿತಿಯನ್ನು ನೀಡಿವೆ.

    ಐಪಿಎಲ್‍ನ ಮುಂದೇನು ವೇಳಾಪಟ್ಟಿ ಬಗ್ಗೆ ಮಂಡಳಿಯ ಮೂಲಗಳು ಏನನ್ನೂ ಹೇಳಿಲ್ಲ. ಆದಾಗ್ಯೂ ಪ್ರಸ್ತುತ ಪರಿಸ್ಥಿತಿ ಮತ್ತು ಅಂತರರಾಷ್ಟ್ರೀಯ ವೇಳಾಪಟ್ಟಿಯಿಂದಾಗಿ, ಕಳೆದ ಡಿಸೆಂಬರ್ ನಲ್ಲಿ ಟೂರ್ನಿ ನಡೆಸುವುದು ಕಷ್ಟವಾಗಲಿದೆ. ಮಳೆಗಾಲ ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 20ರಿಂದ ನವೆಂಬರ್ ಮಧ್ಯದವರೆಗೆ ಟಿ20 ವಿಶ್ವಕಪ್ ನಡೆಯಲಿದೆ. ಈ ವೇಳಾಪಟ್ಟಿಯ ಮಧ್ಯೆ ಬಿಸಿಸಿಐ ಐಪಿಎಲ್‍ಗಾಗಿ ಖಾಲಿ ದಿನಾಂಕಗಳನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಹಾಗೆ ಟೂರ್ನಿ ನಡೆಸಿದರೂ ಡಿಸೆಂಬರ್ ಗೂ ಮುನ್ನವೇ ಐಪಿಎಲ್ ಟುರ್ನಿ ಮುಗಿಸಲು ಸಾಧ್ಯವಿಲ್ಲ. ಹೀಗಾಗಿ ಟೂರ್ನಿಯ ಸ್ವರೂಪವು ಮೊದಲಿಗಿಂತ ಚಿಕ್ಕದಾಗಿರಬಹುದು ಎಂಬ ಮಾತುಗಳು ಕೇಳಿ ಬಂದಿವೆ.

    ಐಪಿಎಲ್ ಟೂರ್ನಿಯನ್ನು ಈ ಮೊದಲು ಮಾರ್ಚ್ 29ರಂದು ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಮತ್ತು ವೀಸಾ ನಿರ್ಬಂಧದಿಂದಾಗಿ ಏಪ್ರಿಲ್ 15ರವರೆಗೆ ಮುಂದೂಡಲಾಯಿತ್ತು. ಈಗ ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

    ಈ ಬಾರಿ ಐಪಿಎಲ್ 50 ದಿನಗಳ ಬದಲು 44 ದಿನಗಳು ಮಾತ್ರ ನಡೆಯಬಹುದು. ಎಲ್ಲಾ 8 ತಂಡಗಳು 9 ನಗರಗಳಲ್ಲಿ ತಲಾ ಪಂದ್ಯಗಳನ್ನು ಆಡಬೇಕಾಗಿದೆ. ಇವುಗಳಲ್ಲದೆ ಮೇ 24ರಂದು ವಾಂಖೆಡೆನಲ್ಲಿ 2 ಸೆಮಿಫೈನಲ್, 1 ನಾಕೌಟ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಆದರೆ ಬಿಸಿಸಿಐ ಈಗ 2009ರಂತೆ 37 ದಿನಗಳವರೆಗೆ ಸ್ವರೂಪವನ್ನು ಕಡಿಮೆ ಮಾಡಬಹುದು. 2009ರ ಲೋಕಸಭಾ ಚುನಾವಣೆಯಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಆಡೆದಿತ್ತು. ಐದು ವಾರ ಮತ್ತು ಎರಡು ದಿನಗಳಲ್ಲಿ ಅದು ಮುಗಿದಿತ್ತು.

    ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್:
    ಏಷ್ಯಾ ಕಪ್ ಟಿ20 ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಡೆಯಲಿದೆ. ಇದರ ನಂತರ ಆಟಗಾರರು ಐಸಿಸಿ ಟಿ20 ವಿಶ್ವಕಪ್ ಅನ್ನು ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ಆಡಲಿದ್ದಾರೆ. ಆದರೆ ಏಷ್ಯಾ ಕಪ್ ಮತ್ತು ವಿಶ್ವಕಪ್ ಬಗ್ಗೆ ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಏಷ್ಯಾ ಕಪ್ ಮುಂದೂಡುವ ಸಾಧ್ಯತೆ ಇದೆ. ಈ ವೇಳಾಪಟ್ಟಿಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಐಪಿಎಲ್ ವೇಳಾಪಟ್ಟಿಯನ್ನು ರೂಪಿಸಬಹುದು. ಮಂಡಳಿಯ ಮೂಲಗಳ ಪ್ರಕಾರ, ಏಷ್ಯಾ ಕಪ್ ಮತ್ತು ವಿಶ್ವಕಪ್ ಮುಂದೂಡಿದಲ್ಲಿ ಐಪಿಎಲ್ ನವೆಂಬರ್ ಅಂತ್ಯದಿಂದ ಡಿಸೆಂಬರ್ ವರೆಗೆ ಸಾಧ್ಯತೆ ಇದೆ.

    ದಾದಾ ಅಭಿಪ್ರಾಯ:
    ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾರ್ಚ್ 13ರಂದು ಹೇಳಿದ್ದರು.

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಬಿಸಿಸಿಐ ಪದಾಧಿಕಾರಿಗಳೊಂದಿಗೆ ಮಾತನಾಡಿದ ನಂತರ ಐಪಿಎಲ್ ಅನ್ನು ಮತ್ತಷ್ಟು ಮುಂದೂಡಲಾಗುತ್ತದೆಯೇ ಎಂಬ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಾಗುತ್ತದೆ. ಆದರೆ ಪ್ರಾಯೋಗಿಕವಾಗಿ ಹೇಳುವುದಾದರೆ, ಕೊರೊನಾ ವೈರಸ್‍ನಿಂದಾಗಿ ಪ್ರಪಂಚದ ಎಲ್ಲೆಡೆ ಜೀವನವು ಸ್ಥಗಿತಗೊಂಡಾಗ ಕ್ರೀಡೆಯಲ್ಲಿ ಭವಿಷ್ಯ ಎಲ್ಲಿದೆ ಎಂದು ಪ್ರಶ್ನಿಸಿದ್ದರು.

    ಕೊರೊನಾ ವೈರಸ್‍ನಿಂದ ಉಂಟಾಗಿರುವ ಸದ್ಯದ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಪ್ರಸ್ತುತ ಕ್ಷಣದಲ್ಲಿ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿವೆ, ಜನರು ಮನೆಯಲ್ಲಿ ಲಾಕ್‍ಡೌನ್ ಆಗಿದ್ದಾರೆ. ಕಚೇರಿಗಳು ಲಾಕ್ ಆಗಿವೆ. ಯಾರೂ ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಮೇ ಮಧ್ಯದವರೆಗೆ ಇದೇ ವಾತಾವರಣ ಇರುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ ಎಂದು ಗಂಗೂಲಿ ಹೇಳಿದ್ದರು.

    ಇಂತಹ ಪರಿಸ್ಥಿತಿಯಲ್ಲಿ ಆಟಗಾರರನ್ನು ನೀವು ಎಲ್ಲಿಂದ ಕರೆದುಕೊಂಡು ಬರಲು ಸಾಧ್ಯ. ಹೋಗಲಿ ಆಟಗಾರರು ಪ್ರಯಾಣಿಸುವ ಅವಕಾಶ ಎಲ್ಲಿದೆ? ಈ ಸಮಯದಲ್ಲಿ ಪ್ರಪಂಚದ ಯಾವುದೇ ದೇಶದಲ್ಲೂ ಕ್ರೀಡೆಯ ಪರವಾದ ವಾತಾವರಣವಿಲ್ಲ. ಹೀಗಾಗಿ ಐಪಿಎಲ್ ಅನ್ನು ಮರೆತುಬಿಡಿ ಅಂತ ಹೇಳುವುದು ಸರಳ, ಸಾಮಾನ್ಯ ಜ್ಞಾನವಾಗಿದೆ ಎಂದು ದಾದಾ ತಿಳಿಸಿದ್ದರು.

  • 2009ರಲ್ಲಿ ಗಿಲ್ಲಿ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ: ಪ್ರಗ್ಯಾನ್ ಓಜಾ

    2009ರಲ್ಲಿ ಗಿಲ್ಲಿ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ: ಪ್ರಗ್ಯಾನ್ ಓಜಾ

    – ಐಪಿಎಲ್ 2ನೇ ಆವೃತ್ತಿಯ ಫೈನಲ್ ಕಥೆ ಬಿಚ್ಚಿಟ್ಟ ಓಜಾ

    ನವದೆಹಲಿ: 2009ರ ಐಪಿಎಲ್ ಸಮಯದಲ್ಲಿ ಅಂದು ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕನಾಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಮ್ ಗಿಲ್‍ಕ್ರಿಸ್ಟ್ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಹೇಳಿದ್ದಾರೆ.

    ಐಪಿಎಲ್‍ನ ಮೊದಲ ಆವೃತ್ತಿಯಲ್ಲಿ ಅಂಕಪಟ್ಟಿಯ ಕೊನೆಯಲ್ಲಿ ಇದ್ದ ಡೆಕ್ಕನ್ ಚಾರ್ಜರ್ಸ್ ತಂಡ, ಐಪಿಎಲ್ ಎರಡನೇ ಅವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿದು ಎಲ್ಲರನ್ನು ಹುಬ್ಬೇರುವಂತೆ ಮಾಡಿತ್ತು. ಬೆಂಗಳೂರು ತಂಡವನ್ನು ಬಗ್ಗುಬಡಿದ ಡೆಕ್ಕನ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಅಂದು ತಂಡ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಪಂದ್ಯಗಳನ್ನು ಆಡಿತ್ತು ಎಂದು ಅಂದು ತಂಡದಲ್ಲಿದ್ದ ಆಟಗಾರ ಪ್ರಗ್ಯಾನ್ ಓಜಾ ಹೇಳಿದ್ದಾರೆ.

    ಈ ವಿಚಾರವಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಓಜಾ, ನಮ್ಮ ತಂಡ ಐಪಿಎಲ್ ಒಂದನೇ ಅವೃತ್ತಿಯಲ್ಲಿ ಕೆಟ್ಟ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಕಾರಣದಿಂದ ನಮ್ಮ ತಂಡಕ್ಕೆ ಸ್ಪಾನ್ಸರ್ ಮಾಡಲು ಯಾರು ಮುಂದೆ ಬಂದಿರಲಿಲ್ಲ. ನಮಗೆ ಆಡಲು ತಂಡದಲ್ಲಿ ಬಟ್ಟೆ ಮತ್ತು ಕಿಟ್‍ಗಳ ಬಹಳ ತೊಂದರೆಯಾಗಿತ್ತು. ಆದರೂ ನಾವು ಪಂದ್ಯಗಳನ್ನು ಆಡಲು ಸೌಥ್ ಆಫ್ರಿಕಾಗೆ ಹೋಗಿದ್ದವು ಎಂದು ಹೇಳಿದ್ದಾರೆ.

    ಅಂದು ಸೌಥ್ ಆಫ್ರಿಕಾ ತಲುಪಿದ ನಮಗೆ ತಂಡದ ನಾಯಕ ಆಡಮ್ ಗಿಲ್‍ಕ್ರಿಸ್ಟ್ ಒಂದು ಮಾತನ್ನು ಹೇಳಿದ್ದರು. ಆದನ್ನು ನಾವು ಎಂದಿಗೂ ಮರೆಯುವುದಿಲ್ಲ. ಅಂದು ನಮ್ಮ ಬಳಿ ಬಂದ ಗಿಲ್ಲಿ, ಒಂದು ಬಾರಿ ನಾವು ಚಾಂಪಿಯನ್ ಆದರೆ ಈಗ ತಂಡದಲ್ಲಿ ಇರುವ ತೊಂದರೆಗಳು ನಮಗೆ ಕಾಣಿಸುವುದಿಲ್ಲ. ಒಂದು ಬಾರಿ ಕಪ್ ಗೆದ್ದರೆ ಈ ಎಲ್ಲವೂ ಬದಲಾಗುತ್ತವೆ ಎಂದು ನಮ್ಮನ್ನು ಹುರಿದುಂಬಿಸಿದ್ದರು ಎಂದು ಓಜಾ ತಿಳಿಸಿದ್ದಾರೆ.

    2009ರಲ್ಲಿ ಸೌಥ್ ಅಫ್ರಿಕಾದಲ್ಲಿ ನಡೆದ ಐಪಿಎಲ್‍ನ ಎರಡನೇ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಉತ್ತಮ ಲಯದಲ್ಲಿ ಇತ್ತು. ಆಡಿದ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿದ್ದ ಗಿಲ್‍ಕ್ರಿಸ್ಟ್ ನೇತೃತ್ವದ ತಂಡ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇತ್ತು. ಅಂದು ತಂಡದಲ್ಲಿದ್ದ ಹರ್ಷಲ್ ಗಿಬ್ಸ್, ಆಂಡ್ರ್ಯೂ ಸೈಮಂಡ್ಸ್ ಮತ್ತು ಪ್ರಗ್ಯಾನ್ ಓಜಾ ಉತ್ತಮ ಲಯದಲ್ಲಿ ಇದ್ದರು.

    ಸರಣಿ ಉದ್ದಕ್ಕೂ ಅತ್ಯುತ್ತಮವಾಗಿ ಆಡಿಕೊಂಡು ಬಂದಿದ್ದ ಡೆಕ್ಕನ್‍ಗೆ ಸೆಮಿಪೈನಲ್‍ನಲ್ಲಿ ಡೆಲ್ಲಿ ತಂಡ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು 6 ವಿಕೆಟ್ ಅಂತರದಲ್ಲಿ ಗೆದ್ದ ಗಿಲ್ಲಿಪಡೆಗೆ ಫೈನಲ್‍ನಲ್ಲಿ ಬೆಂಗಳೂರು ತಂಡ ಎದುರಾಳಿಯಾಗಿತ್ತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ಗಿಬ್ಸ್ ಅವರ ಅರ್ಧಶತಕದ ಸಲುವಾಗಿ 143 ರನ್ ಗಳನ್ನು ಸೇರಿಸಿತ್ತು. ಆದರೆ ಇದನ್ನು ಬೆನ್ನಟ್ಟಿದ ಬೆಂಗಳೂರು ತಂಡ ಓಜಾ ಅವರ ಮಾರಕ ದಾಳಿಗೆ ನಲುಗಿ 137 ರನ್‍ಗೆ ಆಟ ಮುಗಿಸಿತ್ತು. ಈ ಮೂಲಕ 6 ರನ್‍ಗಳ ಅಂತರದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಈ ಪಂದ್ಯದಲ್ಲಿ ಓಜಾ ಮೂರು ವಿಕೆಟ್ ಪಡೆದಿದ್ದರು.

  • ಆಟಗಾರರನ್ನು ಎಲ್ಲಿಂದ ತರುತ್ತೀರಿ? ಐಪಿಎಲ್ ಮರೆತುಬಿಡಿ – ದಾದಾ

    ಆಟಗಾರರನ್ನು ಎಲ್ಲಿಂದ ತರುತ್ತೀರಿ? ಐಪಿಎಲ್ ಮರೆತುಬಿಡಿ – ದಾದಾ

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಿಸಿಸಿಐ ಪದಾಧಿಕಾರಿಗಳೊಂದಿಗೆ ಮಾತನಾಡಿದ ನಂತರ ಐಪಿಎಲ್ ಅನ್ನು ಮತ್ತಷ್ಟು ಮುಂದೂಡಲಾಗುತ್ತದೆಯೇ ಎಂಬ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಾಗುತ್ತದೆ. ಆದರೆ ಪ್ರಾಯೋಗಿಕವಾಗಿ ಹೇಳುವುದಾದರೆ, ಕೊರೊನಾ ವೈರಸ್‍ನಿಂದಾಗಿ ಪ್ರಪಂಚದ ಎಲ್ಲೆಡೆ ಜೀವನವು ಸ್ಥಗಿತಗೊಂಡಿರುವಾಗ ಕ್ರೀಡೆಯಲ್ಲಿ ಭವಿಷ್ಯ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

    ಕೊರೊನಾ ವೈರಸ್‍ನಿಂದ ಉಂಟಾಗಿರುವ ಸದ್ಯದ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಪ್ರಸ್ತುತ ಕ್ಷಣದಲ್ಲಿ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿವೆ, ಜನರು ಮನೆಯಲ್ಲಿ ಲಾಕ್‍ಡೌನ್ ಆಗಿದ್ದಾರೆ. ಕಚೇರಿಗಳು ಲಾಕ್ ಆಗಿವೆ. ಯಾರೂ ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಮೇ ಮಧ್ಯದವರೆಗೆ ಇದೇ ವಾತಾವರಣ ಇರುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ ಎಂದು ಗಂಗೂಲಿ ಹೇಳಿದರು.

    ಇಂತಹ ಪರಿಸ್ಥಿತಿಯಲ್ಲಿ ಆಟಗಾರರನ್ನು ನೀವು ಎಲ್ಲಿಂದ ಕರೆದುಕೊಂಡು ಬರಲು ಸಾಧ್ಯ. ಹೋಗಲಿ ಆಟಗಾರರು ಪ್ರಯಾಣಿಸುವ ಅವಕಾಶ ಎಲ್ಲಿದೆ? ಈ ಸಮಯದಲ್ಲಿ ಪ್ರಪಂಚದ ಯಾವುದೇ ದೇಶದಲ್ಲೂ ಕ್ರೀಡೆಯ ಪರವಾದ ವಾತಾವರಣವಿಲ್ಲ. ಹೀಗಾಗಿ ಐಪಿಎಲ್ ಅನ್ನು ಮರೆತುಬಿಡಿ ಅಂತ ಹೇಳುವುದು ಸರಳ, ಸಾಮಾನ್ಯ ಜ್ಞಾನವಾಗಿದೆ ಎಂದು ದಾದಾ ತಿಳಿಸಿದರು.

    ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ದೇಶಾದ್ಯಂತ ಹಲವಾರು ರಾಜ್ಯಗಳು ಲಾಕ್‍ಡೌನ್ ಅನ್ನು ವಿಸ್ತರಿಸಿವೆ. ಏಪ್ರಿಲ್ 15ರಂದು ಕೊನೆಗೊಳ್ಳಬೇಕಿದ್ದ ಲಾಕ್‍ಡೌನ್ ಏಪ್ರಿಲ್ 30ರವರೆಗೂ ವಿಸ್ತರಣೆಗೊಂಡಿದೆ. ಕೊರೊನಾ ಭೀತಿ ಹಿನ್ನೆಯಲ್ಲಿ ಮಾರ್ಚ್ 29ರಂದು ನಡೆಯಬೇಕಿದ್ದ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಿತ್ತು. ಆದರೆ ದೇಶದಲ್ಲಿ ಕೊರೊನಾ ಆತಂಕ ಇನ್ನೂ ಕಡಿಮೆ ಆಗಿಲ್ಲ. ಹೀಗಾಗಿ ಟೂರ್ನಿ ನಡೆಯುತ್ತೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ.

    ಬಿಸಿಸಿಐ ಅಧಿಕಾರಿಯೊಬ್ಬರು ಶನಿವಾರ ಮಾತನಾಡಿ, ”ಪಂಜಾಬ್, ಮಹಾರಾಷ್ಟ್ರ ಮತ್ತು ಕರ್ನಾಟಕ ಈಗಾಗಲೇ ಲಾಕ್‍ಡೌನ್ ವಿಸ್ತರಿಸುವುದಾಗಿ ಹೇಳಿವೆ. ಐಪಿಎಲ್ ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲ. ಆದರೆ ಟೂರ್ನಿ ಖಂಡಿತವಾಗಿಯೂ ರದ್ದುಗೊಳ್ಳುವುದಿಲ್ಲ. ಅನಿರ್ದಿಷ್ಟವಾಗಿ ಮುಂದೂಡಲಾಗುವುದು” ಎಂದು ತಿಳಿಸಿದ್ದರು.

    ”ನಾವು ಐಪಿಎಲ್ ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಬಿಸಿಸಿಐಗೆ 3,000 ಕೋಟಿ ರೂ. ನಷ್ಟವಾಗಿದೆ. ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳೊಂದಿಗೆ ಪರಿಹಾರವನ್ನು ಕಂಡುಕೊಳ್ಳುವ ಕೆಲಸ ಮಾಡುತ್ತಿದೆ. ಆದರೆ ಅದಕ್ಕಾಗಿ ಕೊರೊನಾದಿಂದ ಉಂಟಾಗಿರುವ ಆತಂಕವು ಸಾಮಾನ್ಯ ಸ್ಥಿತಿಗೆ ಮರಳಬೇಕಾಗಿದೆ. ಆಗ ಐಪಿಎಲ್ ಟೂರ್ನಿ ನಡೆಸಬಹುದು” ಎಂದು ಹೇಳಿದ್ದರು.

    ಬಿಸಿಸಿಐ ಮುಂದೆ ಸದ್ಯ ಎರಡು ಆಯ್ಕೆಗಳಿವೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೂ ಮೊದಲೇ ಐಪಿಎಲ್ ಆಯೋಜಿಸಬೇಕು. ಇಲ್ಲವೆ ಐಸಿಸಿ, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹಾಗೂ ಫ್ರಾಂಚೈಸ್‍ಗಳು ಒಪ್ಪಿದರೆ ಟಿ20 ವಿಶ್ವಕಪ್ ನಂತರ ಐಪಿಎಲ್ ಟೂರ್ನಿ ನಡೆಸುವುದು.

  • ವರ್ಷಾಂತ್ಯದಲ್ಲಿ ಐಪಿಎಲ್- ಆಶಿಶ್ ನೆಹ್ರಾ

    ವರ್ಷಾಂತ್ಯದಲ್ಲಿ ಐಪಿಎಲ್- ಆಶಿಶ್ ನೆಹ್ರಾ

    ನವದೆಹಲಿ: ವರ್ಷಾಂತ್ಯದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿ ನಡೆಯಲಿದೆ ಎಂದು ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಐಪಿಎಲ್ ಅನ್ನು ಮಾರ್ಚ್ 29ರಿಂದ ಏಪ್ರಿಲ್ 15ರವರೆಗೆ ಮುಂದೂಡಲಾಗಿದೆ. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಟೂರ್ನಿ ನಡೆಯುತ್ತೋ, ಇಲ್ಲವೋ ಎನ್ನುವ ಗೊಂದಲ ಇನ್ನೂ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅವರು, ಐಪಿಎಲ್ ಟೂರ್ನಿ ವರ್ಷದ ಕೊನೆಯಲ್ಲಿ ನಡೆಯಬಹದು. ಏಪ್ರಿಲ್-ಆಗಸ್ಟ್ ಮಧ್ಯನಲ್ಲಿ ಟೂರ್ನಿ ನಡೆಸಲು ಸಾಧ್ಯವೇ ಇಲ್ಲ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಐಪಿಎಲ್ ನಡೆಯಲೇಬೇಕು’: ಟೂರ್ನಿ ನಡೆಸುವ ಬಗ್ಗೆ ಪೀಟರ್ಸನ್ ಸಲಹೆ

    ಸಂದರ್ಶನವೊಂದರಲ್ಲಿ ಮಾತನಾಡಿದ ನೆಹ್ರಾ, ‘ಏಪ್ರಿಲ್‍ನಲ್ಲಿ ಐಪಿಎಲ್ ನಡೆಸುವ ಸಾಧ್ಯತೆ ತೀರಾ ಕಡಿಮೆ ಇದೆ. ಟೂರ್ನಿಯನ್ನು ಆಗಸ್ಟ್ ಗೆ ಮುಂದೂಡಿದರೆ ಆಗ ಮಳೆಗಾಲ ಇರುತ್ತದೆ. ಹೀಗಾಗಿ ಅನೇಕ ಪಂದ್ಯಗಳು ರದ್ದಾಗುವ ಸಾಧ್ಯತೆ ಇರುತ್ತದೆ. ಅಕ್ಟೋಬರ್ ವೇಳೆಗೆ ವಿಶ್ವವ್ಯಾಪಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದರೆ ವರ್ಷದ ಕೊನೆಯಲ್ಲಿ ಐಪಿಎಲ್ ನಡೆಯಬಹುದು ಎಂಬ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

    ಆಶಿಶ್ ನೆಹ್ರಾ ಇದುವರೆಗೆ ಐಪಿಎಲ್‍ನಲ್ಲಿ 88 ಪಂದ್ಯಗಳನ್ನು ಆಡಿದ್ದು, 23.54 ಸರಾಸರಿಯಲ್ಲಿ 106 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ಆಸೀಸ್ ಆಟಗಾರರು ವಿರಾಟ್ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ: ಕ್ಲಾರ್ಕ್

    ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಸ್ಟೀವ್ ಸ್ಮಿತ್ ಹಾಗೂ ಇಂಗ್ಲೆಂಡ್ ಕ್ರಿಕೆಟರ್ ಜೋಸ್ ಬಟ್ಲರ್ ಕೂಡ, ಈ ವರ್ಷ ಐಪಿಎಲ್ ನಡೆಯಲಿದೆ ಎಂಬ ಭರವಸೆ ಇದೆ. ಆದರೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಸಹ ಅಕ್ಟೋಬರ್‍ನಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್ ನಡೆಸುವುದು ಬಿಸಿಸಿಐಗೆ ಸವಾಲಿನ ಕೆಲಸವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರನ್ನಿಂಗ್ ಕ್ಯಾಚ್ ಹಿಡಿದು ಸ್ವಚ್ಛ ಕೈಗಳ ಸಂದೇಶ ಕೊಟ್ಟ ಕೈಫ್

    ಇತ್ತ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಅವರನ್ನು ನೋಡಿ ಉತ್ಸುಕನಾಗಿದ್ದೇನೆ ಎಂದಿದ್ದರು. ರಾಜಸ್ಥಾನ್ ರಾಯಲ್ಸ್ ಫೇಸ್‍ಬುಕ್ ಪುಟದಲ್ಲಿ ಸಹ ಆಟಗಾರ ಇಶ್ ಸೋಧಿ ಅವರೊಂದಿಗಿನ ಸಂಭಾಷಣೆಯಲ್ಲಿ ಸ್ಮಿತ್ ಈ ವಿಷಯ ತಿಳಿಸಿದ್ದರು.

    ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಈ ಹಿಂದೆ ಮಾತನಾಡಿ, ಜಗತ್ತಿನಾದ್ಯಂತ ಜನರು ಇಂದು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯನ್ನು ನೋಡಿದರೆ ನಾವು ಇದೀಗ ಕ್ರಿಕೆಟ್ ಬಗ್ಗೆ ಯೋಚಿಸಬಾರದು. ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಯುದ್ಧದಂತೆ ಒಟ್ಟಿಗೆ ಹೋರಾಡಬೇಕಾಗಿದೆ. ಪರಿಸ್ಥಿತಿಯನ್ನು ನಿವಾರಿಸುವುದು ನಮ್ಮ ಮೊದಲ ಪ್ರಯತ್ನವಾಗಬೇಕು. ಆ ಬಳಿಕ ನಾವು ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದರು.