Tag: IPL

  • ಅಂದು ಕೊಹ್ಲಿ ಏಕೆ ಬೌಲಿಂಗ್ ಮಾಡಿದರೆಂದು ಇಂದಿಗೂ ತಿಳಿದಿಲ್ಲ: ಅಲ್ಬಿ ಮಾರ್ಕೆಲ್

    ಅಂದು ಕೊಹ್ಲಿ ಏಕೆ ಬೌಲಿಂಗ್ ಮಾಡಿದರೆಂದು ಇಂದಿಗೂ ತಿಳಿದಿಲ್ಲ: ಅಲ್ಬಿ ಮಾರ್ಕೆಲ್

    ಮುಂಬೈ: ದಕ್ಷಿಣ ಆಫ್ರಿಕಾ ಆಲ್‍ರೌಂಡರ್ ಅಲ್ಬಿ ಮಾರ್ಕೆಲ್ ಐಪಿಎಲ್ ನಲ್ಲಿ ಚೆನ್ನೈ ತಂಡದ ಪರ ಆಡಿದ ಪಂದ್ಯದ ಬಗ್ಗೆ ಮಾತನಾಡಿದ್ದು, ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದೇಕೆ ಎಂದು ಇಂದಿಗೂ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

    2012ರಲ್ಲಿ ಸಿಎಸ್‍ಕೆ ಪರ ಮಾರ್ಕೆಲ್ ಆಡಿದ್ದರು. ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ 7 ಎಸೆತಗಳಲ್ಲಿ 28 ರನ್ ಗಳಿಸಿ ಪಂದ್ಯ ಗೆಲ್ಲಿಸಿಕೊಟ್ಟು ತಂಡದ ಪರ ಹೀರೋ ಆಗಿ ಹೊರಹೊಮ್ಮಿದ್ದರು. ಬಹುಮುಖ್ಯವಾಗಿ ಅಂದು ವಿರಾಟ್ ಕೊಹ್ಲಿ ಎಸೆದ 19ನೇ ಓವರಿನಲ್ಲಿ ಮಾರ್ಕೆಲ್ 28 ರನ್ ಸಿಡಿಸಿದ್ದರು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬೆಂಗಳೂರು ತಂಡ 20 ಓವರ್ ಗಳಲ್ಲಿ 205 ರನ್ ಗಳಿಸಿತ್ತು. ಆ ಬಳಿಕ ಬ್ಯಾಟಿಂಗ್ ಮಾಡಿದ್ದ ಚೆನ್ನೈ ಬಹುಬೇಗ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ 2 ಓವರ್ ಗಳಲ್ಲಿ ಚೆನ್ನೈ ತಂಡಕ್ಕೆ 43 ರನ್‍ಗಳ ಅಗತ್ಯವಿತ್ತು. ಆದರೆ ಈ ಸಂದರ್ಭದಲ್ಲಿ ಯಾರು ಊಹಿಸಿದಂತೆ ಆರ್ ಸಿಬಿ ನಾಯಕರಾಗಿದ್ದ ಡೇನಿಲ್ ವೆಕ್ಟೋರಿ 19ನೇ ಓವರ್ ಎಸೆಯಲು ವಿರಾಟ್ ಕೊಹ್ಲಿ ಅವರಿಗೆ ಚೆಂಡು ನೀಡಿದ್ದರು. ಕೊಹ್ಲಿ ಎಸೆದ ಓವರಿನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಲ್ಬಿ ಮಾರ್ಕೆಲ್ 3 ಸಿಕ್ಸರ್, 2 ಬೌಂಡರಿ ಸಿಡಿಸಿ ಮಿಂಚಿದ್ದರು. ಆದರೆ ಕೊಹ್ಲಿ ಏಕೆ ಬೌಲಿಂಗ್ ಮಾಡಿದ್ದರು ಎಂದು ಇಂದಿಗೂ ಯಾವುದೇ ಐಡಿಯಾ ಇಲ್ಲ ಎಂದು ಮಾರ್ಕೆಲ್ ಹೇಳಿದ್ದಾರೆ.

    ನಾನು ಬ್ಯಾಟಿಂಗ್ ಆಗಮಿಸುವ ವೇಳೆಗೆ 2 ಓವರ್ ಮಾತ್ರ ಬಾಕಿ ಇತ್ತು. 43 ರನ್ ಗೆಲುವಿಗೆ ಅಗತ್ಯವಿತ್ತು. ಆ ವೇಳೆ 2 ಭರ್ಜರಿ ಹೊಡೆತ ಸಿಡಿಸಿದರೆ ಗೆಲುವಿನ ಕುರಿತು ಚಿಂತಿಸಬಹುದು ಎಂದು ಕೊಂಡು ಬ್ಯಾಟಿಂಗ್ ಆರಂಭಿಸಿದ್ದೆ. ಅಂತಹ ಸಂದರ್ಭದಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದು, ನನ್ನ ಕೆಲಸವನ್ನ ಸುಲಭ ಮಾಡಿತ್ತು ಎಂದು ಮಾರ್ಕೆಲ್ ಅಂದಿನ ಸನ್ನಿವೇಶವನ್ನು ಸ್ಮರಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಅಲ್ಬಿ ಮಾರ್ಕೆಲ್ ಔಟಾದ ಬಳಿಕ ಬ್ರಾವೋ ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅಂತಿಮವಾಗಿ 5 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ 208 ರನ್ ಗಳಿಸಿ ಗೆಲುವು ಪಡೆದಿತ್ತು.

  • ಮುಂಬೈ-ಚೆನ್ನೈ ಪಂದ್ಯವನ್ನ ಇಂಡೋ-ಪಾಕ್‍ಗೆ ಹೋಲಿಸಿದ ಬಜ್ಜಿ

    ಮುಂಬೈ-ಚೆನ್ನೈ ಪಂದ್ಯವನ್ನ ಇಂಡೋ-ಪಾಕ್‍ಗೆ ಹೋಲಿಸಿದ ಬಜ್ಜಿ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನು ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಇಂಡೋ-ಪಾಕ್ ಪಂದ್ಯಕ್ಕೆ ಹೋಲಿಕೆ ಮಾಡಿದ್ದಾರೆ.

    ದೊಡ್ಡ ಅಭಿಮಾನಿ ಬಳಗ, ಅನುಭವಿ ಆಟಗಾರರ ಉಪಸ್ಥಿತಿ ಮತ್ತು ಸ್ಥಿರ ಪ್ರದರ್ಶನ ನೀಡುತ್ತ ಬಂದ ಮುಂಬೈ ಇಂಡಿಯನ್ಸ್- ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಯಾವಾಗಲೂ ರೋಚಕವಾಗಿರುತ್ತದೆ. ಟೂರ್ನಿಯ ಇತಿಹಾಸದಲ್ಲಿ ಸಿಎಸ್‍ಕೆ ಅತ್ಯಂತ ಸ್ಥಿರವಾದ ತಂಡವಾಗಿದ್ದರೆ, ಹೆಚ್ಚು ಬಾರಿ ಚಾಂಪಿಯನ್ ಆದ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ. ಐಪಿಎಲ್ 2013ರಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾದ ರೋಹಿತ್ ಶರ್ಮಾ ಅವರು ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ.

    ಐಪಿಎಲ್‍ನ ಪ್ರತಿ ಆವೃತ್ತಿಯಲ್ಲಿ ಸಿಎಸ್‍ಕೆ ತಂಡವನ್ನು ಮುನ್ನಡೆಸಿದ ಎಂ.ಎಸ್.ಧೋನಿ, ಮೂರು ಬಾರಿ ಚಾಂಪಿಯನ್ ಪಟ್ಟಿಗೆ ಸೇರಿಸಿದ್ದಾರೆ. ಉಭಯ ತಂಡಗಳು ಈವರೆಗೆ ನಾಲ್ಕು ಐಪಿಎಲ್ ಫೈನಲ್‍ಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ 3-1 ಅಂತರದಿಂದ ಮುನ್ನಡೆ ಸಾಧಿಸಿದೆ. ಹೀಗಾಗಿ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ಮುಂಬೈ-ಚೆನ್ನೈ ಪೈಪೋಟಿಯನ್ನು ಭಾರತ-ಪಾಕಿಸ್ತಾನದ ಪಂಡ್ಯಕ್ಕೆ ಹೋಲಿಸಿದ್ದಾರೆ. ಜೊತೆಗೆ ಹಳದಿ (ಸಿಎಸ್‍ಕೆ) ಜರ್ಸಿ ಧರಿಸಿದ ತಮ್ಮ ಮೊದಲ ಅನುಭವವನ್ನು ಹಂಚಿಕೊಂಡಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ಪರ ಮೊದಲ ಬಾರಿ ಆಡಿದ ಬಜ್ಜಿ, ನನಗೆ ಆ ಗಳಿಗೆ ತುಂಬಾ ವಿಚಿತ್ರವಾಗಿತ್ತು. ಇದು ಕನಸೇ ಅಥವಾ ನಿಜವೇ ಎಂದು ಗೊಂದಲಕ್ಕೆ ಒಳಗಾಗಿದ್ದೆ. ಮುಂಬೈ-ಚೆನ್ನೈ ನಡುವನ ಪಂದ್ಯವು ಭಾರತ-ಪಾಕಿಸ್ತಾನ ಪಂದ್ಯದಂತೆಯೇ ಭಾಸವಾಗುತ್ತಿತ್ತು. ಹಳದಿ ಜೆರ್ಸಿ ಧರಿಸುವುದು ಕಷ್ಟಕರವಾಗಿತ್ತು. ವಿಚಿತ್ರವೆಂದರೆ ನಾನು ಚೆನ್ನೈ ತಂಡ ಸೇರಿದಾಗ ಮೊದಲ ಆಡಿದ್ದೆ ಮುಂಬೈ ತಂಡದ ವಿರುದ್ಧ. ಟೂರ್ನಿಯ ಆರಂಭದಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ್ದೇ ಒಳ್ಳೆಯದಾಯಿತು. ಇಲ್ಲದಿದ್ದರೆ ಆವೃತ್ತಿಯುದ್ದಕ್ಕೂ ಮುಂಬೈ ವಿರುದ್ಧದ ಪಂದ್ಯವು ಕಷ್ಟಕರವಾಗುತ್ತಿತ್ತು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

    ಐಪಿಎಲ್‍ನಲ್ಲಿ 2008ರಿಂದ 2017ರವರೆಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಹರ್ಭಜನ್ ಸಿಂಗ್ ಅವರನ್ನು 2018ರ ಹರಾಜಿಗೆ ಮುಂಚಿತವಾಗಿ ಬಿಡುಗಡೆ ಮಾಡಲಾಯಿತು. ಹರಾಜಿನಲ್ಲಿ ಹೆಚ್ಚಿನ ಬೆಲೆಯನ್ನು ಗಳಿಸುವ ಭರಸವೆ ಹೊಂದಿದ್ದ ಹರ್ಭಜನ್ ಸಿಂಗ್ ಆಶ್ಚರ್ಯಕರವಾಗಿ ಕೇವಲ ಒಂದು ಬಿಡ್‍ಗೆ ಸೀಮಿತವಾಗಿದ್ದರು. ಅವರು ಚೆನ್ನೈ ಸೂಪರ್ ಕಿಂಗ್ಸ್‍ಗೆ ತಮ್ಮ ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಯಾಗಿದ್ದರು.

    ಸಿಎಸ್‍ಕೆ ಸೇರಿದ ಮೊದಲ ಆವೃತ್ತಿಯಲ್ಲಿ ಬಜ್ಜಿ 13 ಪಂದ್ಯಗಳಲ್ಲಿ ಏಳು ವಿಕೆಟ್‍ಗಳನ್ನು ಪಡೆದರು. ಆದರೆ ಮುಂದಿನ ಆವೃತ್ತಿ (2019)ರಲ್ಲಿ 11 ಪಂದ್ಯಗಳಲ್ಲಿ 16 ವಿಕೆಟ್‍ಗಳನ್ನು ಕಿತ್ತು ಮಿಂಚಿದರು. ಹರ್ಭಜನ್ ಅವರ ಮೂರು ವರ್ಷಗಳ ಸಿಎಸ್‍ಕೆ ಒಪ್ಪಂದವು ಐಪಿಎಲ್ 2020ರ ಆವೃತ್ತಿಯ ಬಳಿಕ ಕೊನೆಗೊಳ್ಳುತ್ತದೆ. ಅವರು ಈಗ ಐಪಿಎಲ್ ಮಾತ್ರ ಆಡುತ್ತಿರುವುದರಿಂದ ಶೀಘ್ರದಲ್ಲೇ ಭಾರತೀಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹರ್ಭಜನ್ ಸಿಂಗ್ ಕಳೆದ ವರ್ಷ ದಿ ಹಂಡ್ರೆಡ್ಸ್ ಡ್ರಾಫ್ಟ್‍ಗೆ ಪ್ರವೇಶಿಸಿದ್ದರು. ಆದರೆ ಸಿಎಸ್‍ಕೆ ಪರ ಇನ್ನೂ ಒಂದು ವರ್ಷ ಆಡಲು ಬಯಸಿದ್ದರಿಂದ ಹಿಂದೆ ಸರಿದರು.

  • ವಿಕೆಟ್ ಕಬಳಿಸಿದರೆ ಹ್ಯಾಂಡ್‍ಶೇಕ್ ಬದಲು ನಮಸ್ಕಾರ ಮಾಡಿ: ರಹಾನೆ

    ವಿಕೆಟ್ ಕಬಳಿಸಿದರೆ ಹ್ಯಾಂಡ್‍ಶೇಕ್ ಬದಲು ನಮಸ್ಕಾರ ಮಾಡಿ: ರಹಾನೆ

    ಮುಂಬೈ: ಕೊರೊನಾ ವೈರಸ್ ಕಾರಣದಿಂದ ಮುಂದಿನ ದಿನಗಳಲ್ಲಿ ಆಟಗಾರರು ಕ್ರೀಡಾಂಗಣದಲ್ಲಿ ಸಾಮಾಜಿಕ ಅಂತರ ಪಾಲಿಸಲು ಈಗಾಗಲೇ ದೇಶೀಯ ಕ್ರಿಕೆಟ್ ಸಂಸ್ಥೆಗಳು ಸೂಚನೆ ನೀಡಿವೆ. ಅಲ್ಲದೇ ಚೆಂಡಿನ ಹೊಳಪು ಕಾಪಾಡಲು ಕ್ರಿಕೆಟಿಗರು ಎಂಜಲು ಬಳಸಬಾರದು ಎಂದು ಐಸಿಸಿ ಆದೇಶ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಿಬಂಧನೆಗಳು ಜಾರಿಯಾಗಿರುವ ಅವಕಾಶಗಳು ಕಾಣಿಸುತ್ತಿದ್ದು, ಸದ್ಯ ಬೌಲರ್ ಗಳು ವಿಕೆಟ್ ಪಡೆದ ವೇಳೆ ಹ್ಯಾಂಡ್‍ಶೇಕ್ ಬದಲು ನಮಸ್ಕಾರ ಮಾಡಿ ಎಂದು ಟೀಂ ಇಂಡಿಯಾ ಆಟಗಾರ ರಹಾನೆ ಹೊಸ ಸಲಹೆಯನ್ನು ನೀಡಿದ್ದಾರೆ.

    ಕ್ರಿಕೆಟ್ ಮತ್ತೆ ಆರಂಭವಾದ ಬಳಿಕ ಬೌಲರ್ ವಿಕೆಟ್ ಪಡೆದರೆ ನಮಸ್ಕಾರ ಅಥವಾ ಬೇರೆ ವಿಧಾನದ ಮೂಲಕ ಸಂಭ್ರಮ ಮಾಡಬೇಕು. ಅಲ್ಲದೇ ಎಲ್ಲ ಆಟಗಾರರು ಪಿಚ್ ಬಳಿ ಬಂದು ಅಭಿನಂದನೆ ಹೇಳುವ ಅವಕಾಶವೂ ಇರುವುದಿಲ್ಲ. ಬೌಂಡರಿ ಲೈನ್‍ನಿಂದಲೇ ಫೀಲ್ಡರ್ ನಮಸ್ಕರಿಸಿ ಅಭಿನಂದನೆ ಸಲ್ಲಿಸಬೇಕಿದೆ. ಇದು ಬರಿ ಕ್ರಿಕೆಟ್‍ನಲ್ಲಿ ಮಾತ್ರವಲ್ಲ ಸಾಮಾಜಿಕವಾಗಿಯೂ ಆಚರಣೆ ಮಾಡಬೇಕಿದೆ ಎಂದು ರಹಾನೆ ತಿಳಿಸಿದ್ದಾರೆ.

    ಟೀಂ ಇಂಡಿಯಾ ಪರ ಏಕದಿನ ಹಾಗೂ ಟಿ20 ಮಾದರಿ ಕ್ರಿಕೆಟ್‍ನಿಂದ ದೂರವಾಗಿರುವ ರಹಾನೆ, ಟೆಸ್ಟ್ ಕ್ರಿಕೆಟ್‍ನಲ್ಲಿ ತಂಡದ ಉಪನಾಯಕರಾಗಿದ್ದಾರೆ. 2019ರ ಐಪಿಎಲ್ ಟೂರ್ನಿವರೆಗೂ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ರಹಾನೆಯನ್ನು 2020ರ ಆವೃತ್ತಿಯಲ್ಲಿ ಡೆಲ್ಲಿ ತಂಡ ಖರೀದಿ ಮಾಡಿದೆ. ಸದ್ಯ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ ಆರಂಭವಾಗುವ ಕುರಿತು ಅನುಮಾನಗಳು ಅಭಿಮಾನಿಗಳಲ್ಲಿ ಹೆಚ್ಚಾಗುತ್ತಿದೆ.

  • ದ್ರಾವಿಡ್‍ರ ಮಾತು ನನ್ನ ಕನಸನ್ನು ನನಸು ಮಾಡಿತ್ತು: ಸಂಜು ಸ್ಯಾಮ್ಸನ್

    ದ್ರಾವಿಡ್‍ರ ಮಾತು ನನ್ನ ಕನಸನ್ನು ನನಸು ಮಾಡಿತ್ತು: ಸಂಜು ಸ್ಯಾಮ್ಸನ್

    ತಿರುವನಂತಪುರಂ: ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ‘ನನ್ನ ತಂಡದಲ್ಲಿ ಆಡುತ್ತೀಯಾ’ ಎಂದು ಕೇಳಿದ ಮಾತನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಯುವ ಆಟಗಾರ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

    2013ರ ಐಪಿಎಲ್ ವೇಳೆ ದ್ರಾವಿಡ್ ಅವರು ನನ್ನ ತಂಡದಲ್ಲಿ ಆಡುತ್ತೀಯಾ ಎಂದು ಕೇಳಿದ ತಕ್ಷಣ ನನ್ನ ಹೃದಯದಲ್ಲಿ ಕೋಟಿ ವೀಣೆ ಮಿಡಿದ ಅನುಭವ ಆಗಿತ್ತು. ದಿಗ್ಗಜ ಕ್ರಿಕೆಟ್ ಆಟಗಾರ ದ್ರಾವಿಡ್ ಅವರ ಮಾತು ಹೇಳಿದ ತಕ್ಷಣ ನನ್ನ ಕನಸು ನನಸಾದ ಅನುಭವ ಆಗಿತ್ತು ಎಂದು ಸ್ಯಾಮ್ಸನ್ ಹೇಳಿದ್ದಾರೆ. ಅಂದಹಾಗೆ ದ್ರಾವಿಡ್, ಸ್ಯಾಮ್ಸನ್ ಐಪಿಎಲ್‍ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಆಡಿದ್ದರು.

    ವಿಶ್ವ ಕ್ರಿಕೆಟ್‍ನಲ್ಲಿ ದ್ರಾವಿಡ್ ಅವರಂತಹ ವ್ಯಕ್ತಿ ಮತ್ತೊಬ್ಬರು ಇರುವುದಿಲ್ಲ. ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ತಕ್ಕ ಪರಿಹಾರ ಮಾರ್ಗವನ್ನು ನೀಡುತ್ತಿದ್ದರು. ತಂಡದ ಎಲ್ಲಾ ಆಟಗಾರರಿಗೂ ಅವರು ಯಾವುದೇ ಸಮಯದಲ್ಲಾದರೂ ಲಭ್ಯರಾಗಿರುತ್ತಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್, ಜೋಸ್ ಬಟ್ಲರ್ ಯಾವ ರೀತಿ ತಯಾರಿ ನಡೆಸುತ್ತಾರೆ ಎಂದು ಗಮನಿಸುವ ಅವಕಾಶ ಲಭಿಸಿತ್ತು ಎಂದು ಸ್ಯಾಮ್ಸನ್ ವಿವರಿಸಿದ್ದಾರೆ.

    ಟೀಂ ಇಂಡಿಯಾ ತಂಡಕ್ಕೆ ಆಯ್ಕೆ ಆಗಿದ್ದು ಸಂತಸ ತಂದಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಆಟಗಾರರೊಂದಿಗೆ ಆಡುವುದು ಅತ್ಯುತ್ತಮ ಅನುಭವ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಸೂಪರ್ ಓವರ್ ವೇಳೆ ನನ್ನ ಮೇಲೆ ಭರವಸೆ ಇಟ್ಟು ಅವಕಾಶ ನೀಡಿದ್ದರು. ಅವರೊಂದಿಗೆ ನನ್ನನ್ನು ಮ್ಯಾಚ್ ವಿನ್ನರ್ ಎಂದು ಪರಿಗಣಿಸಿದ್ದು ಸಂತಸ ತಂದಿದೆ ಎಂದು ಸ್ಯಾಮ್ಸನ್ ಹೇಳಿದ್ದಾರೆ.

    25 ವರ್ಷ ವಯಸ್ಸಿನ ಸ್ಯಾಮ್ಸನ್ ಐಪಿಎಲ್‍ನಲ್ಲಿ 93 ಪಂದ್ಯಗಳನ್ನು ಆಡಿ 2,209 ರನ್ ಗಳಿಸಿದ್ದಾರೆ. ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‍ನಲ್ಲಿ ಸ್ಯಾಮ್ಸನ್ ತೋರಿದ ಪ್ರದರ್ಶನ ಟೀಂ ಇಂಡಿಯಾಗೆ ಆಯ್ಕೆ ಆಗಲು ಪ್ರಮುಖ ಕಾರಣವಾಗಿತ್ತು. ಅಲ್ಲದೇ 2020ರ ಟಿ20 ವಿಶ್ವಕಪ್ ತಂಡದ ಆಯ್ಕೆಯ ರೇಸ್‍ನಲ್ಲೂ ತಂದು ನಿಲ್ಲಿಸಿದೆ.

  • ಮೋದಿಗೆ ಧನ್ಯವಾದ ತಿಳಿಸಿದ ಆರ್‌ಸಿಬಿಯ ಮೈಕ್ ಹೆಸ್ಸನ್

    ಮೋದಿಗೆ ಧನ್ಯವಾದ ತಿಳಿಸಿದ ಆರ್‌ಸಿಬಿಯ ಮೈಕ್ ಹೆಸ್ಸನ್

    ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಿರ್ವಹಣಾ ನಿರ್ದೇಶಕ ಮೈಕ್ ಹೆಸ್ಸನ್ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕೊರೊನಾ ಕಾರಣದಿಂದ ಭಾರತದಲ್ಲಿ ಲಾಕ್‍ಡೌನ್ ವಿಧಿಸಲಾಗಿದೆ. ಐಪಿಎಲ್ ಲೀಗ್ ಟೂರ್ನಿಯಲ್ಲಿ ಭಾಗಿಯಾಗಲು ನ್ಯೂಜಿಲೆಂಡ್‍ನ ಮಾಜಿ ಕೋಚ್ ಮೈಕ್ ಹೆಸ್ಸನ್ ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಲಾಕ್‍ಡೌನ್ ಘೋಷಣೆಯಾದ ಕಾರಣ ಭಾರತದಲ್ಲೇ ಉಳಿದುಕೊಂಡಿದ್ದರು.

    ಇತ್ತೀಚೆಗೆ ಕೇಂದ್ರ ಸರ್ಕಾರ ಭಾರತದಲ್ಲಿ ಲಾಕ್‍ಡೌನ್ ಕಾರಣಕ್ಕೆ ದೇಶದಲ್ಲಿ ಸಿಲುಕಿದ್ದ ವಿದೇಶಿಗರಿಗೆ ತಮ್ಮ ಸ್ವದೇಶಕ್ಕೆ ಮರಳುವ ಅವಕಾಶ ನೀಡಿತ್ತು. ಮೈಕ್ ಹೆಸ್ಸನ್ ಅವರು ಕೂಡ ಇದೇ ಸಾಲಿನಲ್ಲಿ ಒಂದು ತಿಂಗಳ ಬಳಿಕ ಸ್ವದೇಶಕ್ಕೆ ಮರಳಿದ್ದರು.

    ಬಹಳ ಸಮಯದ ಬಳಿಕ ಮನೆಗೆ ತೆರಳಿದ್ದ  ಮೈಕ್ ಹೆಸ್ಸನ್ ಸಂತಸ ವ್ಯಕ್ತಪಡಿಸಿದ್ದಾರೆ. ಕೊರೊನಾದಂತಹ ಕಷ್ಟದ ಸನ್ನಿವೇಶದಲ್ಲಿ ತಮ್ಮನ್ನು ಸ್ವದೇಶಕ್ಕೆ ಕಳುಹಿಸಿದ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಇತ್ತ ಕೊರೊನಾ ಕಾರಣದಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂದು ಖ್ಯಾತಿ ಪಡೆದಿರುವ ಐಪಿಎಲ್ ಸೇರಿದಂತೆ ವಿವಿಧ ಕ್ರೀಡಾ ಟೂರ್ನಿಗಳನ್ನು ಮುಂದೂಡಲಾಗಿದೆ. ಕೊರೊನಾ ಸ್ಥಿತಿ ಇನ್ನು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೆಲ ಟೂರ್ನಿಗಳು ಆರಂಭವಾಗುವುದು ಅನುಮಾನ ಎನ್ನಲಾಗಿದೆ.

  • ಧೋನಿ ರೀ ಎಂಟ್ರಿ ಸಾಧ್ಯ ಎಂದ ಟೀಂ ಇಂಡಿಯಾ ವೇಗಿ

    ಧೋನಿ ರೀ ಎಂಟ್ರಿ ಸಾಧ್ಯ ಎಂದ ಟೀಂ ಇಂಡಿಯಾ ವೇಗಿ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬಹು ಸಮಯದಿಂದ ತಂಡದಿಂದ ದೂರ ಉಳಿದಿದ್ದಾರೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಿರುವ ಧೋನಿ ರೀ ಎಂಟ್ರಿ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಿರಿಯ ಕ್ರಿಕೆಟ್ ಆಟಗಾರರು ಸೇರಿದಂತೆ ಕ್ರಿಕೆಟ್ ವಿಶ್ಲೇಷಕರು ಧೋನಿ ಕಮ್‍ಬ್ಯಾಕ್ ಕುರಿತು ತಮ್ಮದೇ ಅಭಿಪ್ರಾಯ ತಿಳಿಸಿದ್ದಾರೆ. ಸದ್ಯ ಟೀ ಇಂಡಿಯಾ ಯುವ ವೇಗಿ ದೀಪಕ್ ಚಹಾರ್ ಕೂಡ ಧೋನಿ ರೀ ಎಂಟ್ರಿ ಕುರಿತು ಕುತೂಹಲದ ಹೇಳಿಕೆಯನ್ನು ನೀಡಿದ್ದಾರೆ.

    ಲಾಕ್‍ಡೌನ್ ಕಾರಣದಿಂದ ಮನೆಯಲ್ಲಿ ಉಳಿದಿರುವ ಚಹರ್ ಇನ್‍ಸ್ಟಾದಲ್ಲಿ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. 2020ರ ಐಪಿಎಲ್ ಟೂರ್ನಿ ನಡೆದು, ಅದರಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ತಂಡಕ್ಕೆ ಕಮ್‍ಬ್ಯಾಕ್ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕಳೆದ ಎರಡು ವರ್ಷಗಳ ಹಿಂದೆ ಧೋನಿ ನಾಯಕತ್ವದ ಏಷ್ಯಾಕಪ್ ಟೂರ್ನಿಯಲ್ಲಿ ಚಹಾರ್ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. ಆದಾಗಲೇ ಧೋನಿ ನಿವೃತ್ತಿ ಘೋಷಿಸಿದ್ದರು ಆ ವೇಳೆ ನಡೆದ ಬೆಳೆವಣಿಗೆಗಳ ಕಾರಣದಿಂದ ತಂಡದ ನಾಯಕತ್ವವನ್ನು ಮತ್ತೆ ವಹಿಸಿಕೊಂಡಿದ್ದರು. ವಿಶೇಷ ಎಂಬಂತೆ ಆ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದು ನನ್ನ ಅದೃಷ್ಠ ಎಂದು ಚಹಾರ್ ಹೇಳಿದ್ದಾರೆ. ಅಲ್ಲದೇ ಧೋನಿ ಟೀಂ ಇಂಡಿಯಾ ಪರ ಆಡುವ ಅಂತಿಮ ಪಂದ್ಯದ ತಂಡದಲ್ಲಿ ನಾನು ಇರಬೇಕು ಎಂದು ಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

    ಧೋನಿ ಅವರ ಫಿಟ್ನೆಸ್ ಲೆವೆಲ್ ಸಹ ಅತ್ಯುತ್ತಮವಾಗಿದೆ. ಈಗಲೂ ಅವರು ತಂಡದ ಪರ ಆಡುವ ಸಾಮಥ್ರ್ಯವನ್ನು ಹೊಂದಿದ್ದಾರೆ ಎಂದು ಚಹರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದಹಾಗೇ ಚಹರ್ ಐಪಿಎಲ್‍ನಲ್ಲಿ ಚೆನ್ನೈ ಪರ ವೇಗದ ಬೌಲರ್ ಆಗಿ ಆಗಮನ ಸೆಳೆದಿದ್ದರು. ಧೋನಿ ನಾಯಕತ್ವದ ಸಿಎಸ್‍ಕೆ ತಂಡದ ಪ್ರಮುಖ ಆಟಗಾರ ಸ್ಥಾನವನ್ನು ಚಹರ್ ಪಡೆದಿದ್ದಾರೆ.

  • ‘ಸಿಕ್ಸರ್ ಹೊಡೆದ ಚೆಂಡನ್ನು ಬ್ಯಾಟ್ಸ್‌ಮನ್ ತೆಗೆದುಕೊಂಡು ಬರಲಿ’

    ‘ಸಿಕ್ಸರ್ ಹೊಡೆದ ಚೆಂಡನ್ನು ಬ್ಯಾಟ್ಸ್‌ಮನ್ ತೆಗೆದುಕೊಂಡು ಬರಲಿ’

    ಮುಂಬೈ: ಕೊರೊನಾ ಎಫೆಕ್ಟ್ ನಿಂದ ಹಲವು ಕ್ರೀಡಾ ಚಟುವಟಿಕೆಗಳನ್ನು ಮುಂದೂಡಲಾಗಿದೆ. ಆಟಗಾರರು ಕೂಡ ಮನೆಯಲ್ಲೇ ಇರುವುದರಿಂದ ಮತ್ತೆ ಕ್ರೀಡಾ ಚಟುವಟಿಕೆಗಳು ಆರಂಭವಾದರೆ ಫಾರ್ಮ್‍ಗೆ ಮರಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಟೀಂ ಇಂಡಿಯಾ ಆಟಗಾರ ಚಹಲ್ ಹೇಳಿದ್ದಾರೆ.

    ಆಟಗಾರರು ಬಹುಬೇಗ ಫಾರ್ಮ್‍ಗೆ ಮರಳಬೇಕಾದರೆ ಯಾವುದೇ ಟೂರ್ನಿಗೂ ಮುನ್ನ ಐಪಿಎಲ್ ನಿರ್ವಹಿಸಿದರೆ ಅದು ಸಹಕಾರಿಯಾಗುತ್ತದೆ ಎಂದು ಚಹಲ್ ಅಭಿಪ್ರಾಯಪಟ್ಟಿದ್ದಾರೆ.

    ಇದೇ ವೇಳೆ ಚೆಂಡನ್ನು ಶೈನ್ ಮಾಡಲು ಆಟಗಾರರು ಬಳಸುವ ವಿಧಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಚಹಲ್, ಚೆಂಡು ಹಳೆಯದಾದಂತೆ ಶೈನ್ ಉಳಿಸಿಕೊಳ್ಳಲಿದ್ದಾರೆ ಬೌಲರ್ ಗಳಿಂದ ಸ್ವಿಂಗ್ ಮಾಡಲು ಸಾಧ್ಯವಿಲ್ಲ. ಆಗ ವಿಕೆಟ್ ಪಡೆಯುವುದು ಕೂಡ ಕಷ್ಟಸಾಧ್ಯವಾಗುತ್ತದೆ. ಉಳಿದಂತೆ ಬ್ಯಾಟ್ಸ್ ಮನ್ ಸಿಕ್ಸರ್ ಸಿಡಿಸಿದರೆ ಆತನೇ ಆ ಚೆಂಡನ್ನು ಮತ್ತೆ ತಂಡುಕೊಡುವಂತೆ ಬೇಕು ಎಂಬ ನಿಯಮ ಜಾರಿ ಮಾಡುವ ಅಗತ್ಯವಿದೆ ಎಂದು ಚಹಲ್ ತಮಾಷೆಯಾಗಿ ಹೇಳಿದ್ದಾರೆ.

    ಕೊರೊನಾ ಕಾರಣದಿಂದ ಅಕ್ಟೋಬರ್ ನಲ್ಲಿ ಆರಂಭವಾಗಬೇಕಿರುವ ಟಿ20 ವಿಶ್ವಕಪ್ ಆಯೋಜಿಸುವ ಕುರಿತು ಅನುಮಾನ ಉಂಟಾಗುತ್ತಿದೆ. ಈಗಾಗಲೇ ಐಸಿಸಿ ಸಭೆ ನಡೆಸಿ ವಿಶ್ವಕಪ್ ಆಯೋಜನೆ ಕುರಿತು ಚರ್ಚೆ ನಡೆಸಿದರು ಆ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ. ಅಲ್ಲದೇ ಕೊರೊನಾ ತೀವ್ರತೆ ಇದೇ ರೀತಿ ಮುಂದುವರಿದರೆ ಟಿ20 ವಿಶ್ವಕಪ್ 2021ರ ಫೆಬ್ರವರಿ-ಮಾರ್ಚ್ ನಲ್ಲಿ ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಈ ಚಿಂತನೆಗೆ ಪ್ರಮುಖ ಕಾರಣ ಅಕ್ಟೋಬರ್ ವೇಳೆಗೆ ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಖಾಲಿ ಕ್ರೀಡಾಂಗಣದಲ್ಲಿ ಪ್ರೇಕ್ಷರಿಲ್ಲದೆ ಟೂರ್ನಿ ಆಯೋಜಿಸಲು ಐಸಿಸಿ ಸಿದ್ಧವಿಲ್ಲ ಎನ್ನಲಾಗಿದೆ.

  • ಐಪಿಎಲ್‍ನಲ್ಲಿ ಕೊಹ್ಲಿಗಿಂತ ಧೋನಿಗೆ ಹೆಚ್ಚು ಸೋಲು

    ಐಪಿಎಲ್‍ನಲ್ಲಿ ಕೊಹ್ಲಿಗಿಂತ ಧೋನಿಗೆ ಹೆಚ್ಚು ಸೋಲು

    ನವದೆಹಲಿ: ಎಂ.ಎಸ್.ಧೋನಿ ನೇತೃತ್ವದ ಟೀಂ ಇಂಡಿಯಾ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಉದ್ಘಾಟನಾ ಟಿ20 ವಿಶ್ವಕಪ್ ಆವೃತ್ತಿಯನ್ನು ಗೆದ್ದ ಬೀಗಿತ್ತು. ಈ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಿ ಕ್ರಿಕೆಟ್ ಅಭಿಮಾನಿಗಳಿಗಳಿಗೆ ಮತ್ತಷ್ಟು ರಂಗು ನೀಡಿತು. ಐಪಿಎಲ್ ದೇಶ ಅಷ್ಟೇ ಅಲ್ಲದೆ ವಿದೇಶದಲ್ಲೂ ಹೆಚ್ಚು ಜನಪ್ರಿಯವಾಗಿದೆ.

    ಹಣದ ಮಳೆಯನ್ನೇ ಸುರಿಸುವ ಐಪಿಎಲ್‍ನ ಟೂರ್ನಿ 12 ಆವೃತ್ತಿಗಳು ಕಳೆದಿವೆ. ಎಂ.ಎಸ್. ಧೋನಿ, ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಐಪಿಎಲ್ ನಾಯಕರಾಗಿ ಸಾಕಷ್ಟು ಯಶಸ್ಸನ್ನು ಕಂಡಿದ್ದಾರೆ. ಎಂಎಸ್‍ಡಿ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‍ಜೈಂಟ್ ತಂಡದ ನಾಯಕರಾಗಿ ಆಡಿದ್ದಾರೆ. ಆದರೆ ಐಪಿಎಲ್ ಇತಿಹಾಸದಲ್ಲಿ ಹೆಚ್ಚಿನ ಸೋಲು ಅನುಭವಿಸಿದ ಪಟ್ಟಿಯಲ್ಲಿ ಧೋನಿ ಅಗ್ರಸ್ಥಾನದಲ್ಲಿದ್ದಾರೆ.

    ಐಪಿಎಲ್‍ನಲ್ಲಿ 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ನಾಯಕ ಎಂಬ ಹೆಗ್ಗಳಿಕೆ ಎಂ.ಎಸ್.ಧೋನಿ ಅವರಿಗೆ ಇದೆ. ಅತಿ ಹೆಚ್ಚು 69 ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿದ ಕೆಟ್ಟ ದಾಖಲೆ ಕೂಡ ಅವರ ಹೆಸರಿನಲ್ಲಿದೆ. ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಇದ್ದಾರೆ. ಅವರ ನಾಯಕತ್ವದ ತಂಡವು 57 ಬಾರಿ ಸೋಲು ಕಂಡಿದೆ. ಟೀಂ ಇಂಡಿಯಾ ನಾಯಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಅವರ ಖಾತೆಯಲ್ಲಿ 55 ಸೋಲುಗಳು ಸೇರಿಕೊಂಡಿವೆ.

    ಯಾರಿಗೆ ಎಷ್ಟು ಸೋಲು?:
    ಎಂ.ಎಸ್.ಧೋನಿ – 69
    ಗೌತಮ್ ಗಂಭೀರ್- 57
    ವಿರಾಟ್ ಕೊಹ್ಲಿ- 55
    ರೋಹಿತ್ ಶರ್ಮಾ- 42
    ಆಡಮ್ ಗಿಲ್‍ಕ್ರಿಸ್ಟ್- 39

    ಐಪಿಎಲ್‍ನಲ್ಲಿ ನಾಯಕ ಹೆಚ್ಚು ಪಂದ್ಯಗಳನ್ನು ಆಡಿದ ಪಟ್ಟಿಯಲ್ಲಿ ಎಂ.ಎಸ್.ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಅವರು 179 ಪಂದ್ಯಗಳಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗೌತಮ್ ಗಂಭೀರ್ 134 ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿದ್ದರು.

    ಐಪಿಎಲ್‍ನಲ್ಲಿ ಯಶಸ್ವಿ ನಾಯಕರ ಪಟ್ಟಿಯಲ್ಲಿ ಧೋನಿ ಕೂಡ ಒಬ್ಬರಾಗಿದ್ದಾರೆ. ಅವರು ಮೂರು ಬಾರಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ)ಗೆ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ನಾಲ್ಕು ಬಾರಿ ಚಾಂಪಿಯನ್ ಆಗಿದೆ.

  • ಐಪಿಎಲ್‍ಗಾಗಿ ಏಷ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ: ಪಿಸಿಬಿ

    ಐಪಿಎಲ್‍ಗಾಗಿ ಏಷ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ: ಪಿಸಿಬಿ

    ಇಸ್ಲಾಮಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಏಪ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.

    ಪಿಸಿಬಿ ಈ ತಿಂಗಳಲ್ಲಿ ಎರಡನೇ ಬಾರಿಗೆ ಏಷ್ಯಾ ಕಪ್ ಮತ್ತು ಐಪಿಎಲ್ ಬಗ್ಗೆ ಹೇಳಿಕೆ ನೀಡಿದೆ. ಏಷ್ಯಾಕಪ್‍ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಪಿಸಿಬಿ ಸಿಇಒ ವಾಸಿಮ್ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕೊರೊನೊ ವೈರಸ್ ಬಿಕ್ಕಟ್ಟು ಕಡಿಮೆಯಾದರೆ ಯುಎಇಯಲ್ಲಿ ಏಪ್ಯಾಕಪ್ ಟೂರ್ನಿಯು ಸೆಪ್ಟೆಂಬರ್‍ನಲ್ಲಿ ನಡೆಯಲಿದೆ. ಆದರೆ ಟೂರ್ನಿಯನ್ನು ಐಪಿಎಲ್‍ಗಾಗಿಯೇ ಮುಂದೂಡಲು ಆಗುವುದಿಲ್ಲ ಎಂದು ಪಿಸಿಬಿ ಸಿಇಒ ವಾಸಿಮ್ ಖಾನ್ ಹೇಳಿದ್ದಾರೆ.

    ”ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದ್ದು, ಏಷ್ಯಾಕಪ್ ಸೆಪ್ಟೆಂಬರ್‍ನಲ್ಲಿ ನಡೆಯಲಿದೆ. ಆ ಸಮಯದಲ್ಲಿ ಕೊರೊನಾ ಭೀತಿ ಇದ್ದರೆ ಮಾತ್ರ ಟೂರ್ನಿಯನ್ನು ಮುಂದೂಡಲಾಗುತ್ತದೆ. ಆದರೆ ಐಪಿಎಲ್‍ಗಾಗಿ ಏಷ್ಯಾಕಪ್‍ನ ವೇಳಾಪಟ್ಟಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ಅದನ್ನು ಒಪ್ಪುವುದಿಲ್ಲ. ಏಷ್ಯಾಕಪ್ ಟೂರ್ನಿಯನ್ನು ನವೆಂಬರ್ ಅಥವಾ ಡಿಸೆಂಬರ್‍ಗೆ ಮುಂದೂಡುವ ಬಗ್ಗೆ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಇದು ನಮಗೆ ಸಾಧ್ಯವಿಲ್ಲ. ಯಾವುದೇ ಒಂದು ಸದಸ್ಯ ದೇಶಕ್ಕಾಗಿ ಏಷ್ಯಾಕಪ್ ಟೂರ್ನಿಯ ದಿನಾಂಕವನ್ನು ಬದಲಾಯಿಸುವುದು ಸರಿಯಲ್ಲ. ಇದಕ್ಕೆ ನಮ್ಮ ಬೆಂಬಲ ಇಲ್ಲ” ಎಂದು ವಾಸಿಮ್ ಖಾನ್ ತಿಳಿಸಿದ್ದಾರೆ.

    ಏಷ್ಯಾಕಪ್ ಭಾರತ-ಪಾಕ್ ವಿಷಯವಲ್ಲ:
    ಇದಕ್ಕೂ ಮುನ್ನ ಏಪ್ರಿಲ್ 14ರಂದು ಪಿಸಿಬಿ ಅಧ್ಯಕ್ಷ ಎಹ್ಸಾನ್ ಮನಿ ಕೂಡ ಇದೇ ಮಾತನ್ನು ಹೇಳಿದ್ದರು. ”ನಾನು ಈ ಎಲ್ಲಾ ಊಹಾಪೋಹಗಳ ಬಗ್ಗೆ ಓದಿದ್ದೇನೆ ಮತ್ತು ಕೇಳಿದ್ದೇನೆ. ಆದರೆ ಈಗ ಏಷ್ಯಾಕಪ್ ನಡೆಸಬೇಕೋ ಬೇಡವೋ ಎಂಬುದು ಕೇವಲ ಭಾರತ-ಪಾಕಿಸ್ತಾನದ ವಿಷಯವಲ್ಲ. ಈ ಟೂರ್ನಿಯಲ್ಲಿ ಇನ್ನೂ ಅನೇಕ ದೇಶಗಳು ಭಾಗವಹಿಸುತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ನಿರ್ಧಾರಾ ಕೈಗೊಳ್ಳಬೇಕು” ಎಂದಿದ್ದರು.

    ಈ ಮೊದಲ ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಭಾರತದ ಆಕ್ಷೇಪಣೆಯ ನಂತರ ಅದನ್ನು ಯುಎಇಗೆ ವರ್ಗಾಯಿಸಲಾಯಿತು. ಟೂರ್ನಿಯ ಆಯೋಜಿಸುವ ಜವಾಬ್ದಾರಿ ಪಾಕಿಸ್ತಾನಕ್ಕಿದೆ. ಹೀಗಾಗಿ ಪಿಸಿಬಿ ಪಟ್ಟು ಸಾಧಿಸಲು ಮುಂದಾಗಿದೆ.

    ಏಷ್ಯಾಕಪ್‍ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಅವುಗಳೆಂದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ. ಆರನೇ ತಂಡವನ್ನು ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ. ಮೊದಲ ಏಷ್ಯಾ ಕಪ್ ಟೂರ್ನಿ 1984ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡೆಸಿತ್ತು. ಟೂರ್ನಿಯು ಪ್ರತಿ 2 ವರ್ಷಗಳಿಗೊಮ್ಮೆ ನಡೆಯುತ್ತದೆ. ಟೀಂ ಇಂಡಿಯಾ ಇದುವರೆಗೆ 7 ಬಾರಿ ಏಷ್ಯಾ ಕಪ್ ಗೆದ್ದು ಬೀಗಿದೆ. ಶ್ರೀಲಂಕಾ 5 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಚಾಂಪಿಯನ್ ಆಗಿವೆ. ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಈವರೆಗೂ ಏಪ್ಯಾ ಕಪ್ ಗೆದ್ದಿಲ್ಲ.

    ಐಪಿಎಲ್ ಅನ್ನು ಮಾರ್ಚ್ 29ರಿಂದ ಆರಂಭಿಸಬೇಕಿತ್ತು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಮೊದಲು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಆ ಬಳಿಕ ಲಾಕ್‍ಡೌನ್ ಅನ್ನು ಮೇ 3ರವರೆಗೂ ಕೇಂದ್ರ ಸರ್ಕಾರ ವಿಸ್ತರಿಸಿದ ಬೆನ್ನಲ್ಲೇ ಬಿಸಿಸಿಐ ಅನಿರ್ದಿಷ್ಟಾವಧಿಗೆ ಐಪಿಎಲ್ ಮುಂದೂಡಿತು.

    ಮೂಲಗಳ ಪ್ರಕಾರ ಏಷ್ಯಾಕಪ್ ಟೂರ್ನಿಯನ್ನು ಮುಂದೂಡಿದರೆ ಸೆಪ್ಟೆಂಬರ್ ಅಥವಾ ನವೆಂಬರ್-ಡಿಸೆಂಬರ್ ನಡುವೆ ಬಿಸಿಸಿಐ ಐಪಿಎಲ್ ಅನ್ನು ನಡೆಸಲು ಮುಂದಾಗಿದೆ. ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ.

  • ಸಿಎಸ್‍ಕೆ ಕರೆಗಾಗಿ ಎದುರು ನೋಡ್ತಿರೋ ಕೆಕೆಆರ್ ಕ್ಯಾಪ್ಟನ್!

    ಸಿಎಸ್‍ಕೆ ಕರೆಗಾಗಿ ಎದುರು ನೋಡ್ತಿರೋ ಕೆಕೆಆರ್ ಕ್ಯಾಪ್ಟನ್!

    ಮುಂಬೈ: ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕರೆಗಾಗಿ 13 ವರ್ಷಗಳಿಂದ ಎದುರು ನೋಡುತ್ತಿರುವುದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

    2008ರಲ್ಲಿ ನಡೆದಿದ್ದ ಮೊದಲ ಐಪಿಎಲ್ ಆವೃತ್ತಿಯ ಹರಾಜು ಪ್ರಕ್ರಿಯೆ ವೇಳೆ ಸಿಎಸ್‍ಕೆ ತನ್ನನ್ನು ಫಸ್ಟ್ ಖರೀದಿ ಮಾಡುತ್ತೆ ಎಂದು ಯೋಚಿಸಿದ್ದೆ. ಆದರೆ ಎಂಎಸ್ ಧೋನಿ ಅವರನ್ನು ಆಯ್ಕೆ ಮಾಡಿದ್ದು ನನಗೆ ಅಚ್ಚರಿ ಮೂಡಿಸಿತ್ತು ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

    2008ರ ಮೊದಲ ಐಪಿಎಲ್ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಡೆಲ್ಲಿ ತಂಡ ಖರೀದಿ ಮಾಡಿತ್ತು. ಮೂರು ಆವೃತ್ತಿಗಳ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಕಾರ್ತಿಕ್‍ರನ್ನು ಖರೀದಿ ಮಾಡಿತ್ತು. ಉಳಿದಂತೆ ಐಪಿಎಲ್‍ನಲ್ಲಿ ಆರು ತಂಡಗಳನ್ನು ಪ್ರತಿನಿಧಿಸಿರುವ ಕಾರ್ತಿಕ್, ಸದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ. ಇದುವರೆಗೂ ತವರಿನ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಕಾರ್ತಿಕ್ ಅವರನ್ನು ಕಾಡುತ್ತಿದೆ.

    2008ರ ಐಪಿಎಲ್ ಆವೃತ್ತಿಯ ಹರಾಜು ಪ್ರಕ್ರಿಯೆ ವೇಳೆ ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಮಿಳುನಾಡಿಗೆ ಸೇರಿದ ಕಾರಣದಿಂದ ಅದೇ ರಾಜ್ಯದ ಫ್ರಾಂಚೈಸಿ ನನ್ನನ್ನು ಖರೀದಿ ಮಾಡುತ್ತೆ ಎಂದು ಭಾವಿಸಿದ್ದೆ. ಅಲ್ಲದೇ ಅಂದು ಟೀಂ ಇಂಡಿಯಾ ತಂಡದಲ್ಲಿ ಆಡುತ್ತಿದ್ದ ಕಾರಣ ನನ್ನನ್ನು ಖರೀದಿ ಮಾಡುತ್ತಾರೆ ಎಂಬ ಆಸೆಯೊಂದಿಗೆ ತಂಡದ ಕ್ಯಾಪ್ಟನ್ ಸ್ಥಾನ ನೀಡುತ್ತಾರಾ ಎಂಬ ಸಂದೇಹ ಎದುರಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಧೋನಿರನ್ನು ಫ್ರಾಂಚೈಸಿ ಮೊದಲು ಖರೀದಿ ಮಾಡಿತ್ತು. ಆ ವೇಳೆಗೆ ಧೋನಿ ಕೂಡ ನನ್ನ ಪಕ್ಕದಲ್ಲೇ ಇದ್ದರು. ಇದನ್ನು ಧೋನಿ ಕೂಡ ಊಹೆ ಮಾಡಿರುವುದಿಲ್ಲ. ಕಳೆದ 13 ವರ್ಷಗಳಿಂದ ಚೆನ್ನೈ ಫ್ರಾಂಚೈಸಿ ಕರೆಗಾಗಿ ಎದುರು ನೋಡುತ್ತಿದ್ದೇನೆ ಎಂದು ಕಾರ್ತಿಕ್ ಹೇಳಿದ್ದಾರೆ.

    2018ರ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವದಿಂದ ಗೌತಮ್ ಗಂಭೀರ್ ದೂರ ಉಳಿದ ಕಾರಣ ದಿನೇಶ್ ಕಾರ್ತಿಕ್ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಕಳೆದ 2 ವರ್ಷಗಳಲ್ಲಿ ದಿನೇಶ್ ಕಾರ್ತಿಕ್ ನಾಯತ್ವದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದ ಕಾರಣ ಅಭಿಮಾನಿಗಳಿಂದ ನಾಯಕತ್ವ ಬದಲಾವಣೆ ಕೂಗು ಕೇಳಿ ಬರುತ್ತಿದೆ. ನಾಯಕತ್ವದಲ್ಲಿ ರೇಸ್‍ನಲ್ಲಿ ಶುಬ್‍ಮನ್ ಗಿಲ್ ಮೊದಲ ಸ್ಥಾನದಲ್ಲಿದ್ದಾರೆ.