Tag: IPL

  • ಚೀನಾದ ಪ್ರಾಯೋಜಕತ್ವ ಕೈಬಿಟ್ರೆ ಬಿಸಿಸಿಐಗೆ ಎಷ್ಟು ಕೋಟಿ ಲಾಸ್- ಇಲ್ಲಿದೆ ಲೆಕ್ಕ

    ಚೀನಾದ ಪ್ರಾಯೋಜಕತ್ವ ಕೈಬಿಟ್ರೆ ಬಿಸಿಸಿಐಗೆ ಎಷ್ಟು ಕೋಟಿ ಲಾಸ್- ಇಲ್ಲಿದೆ ಲೆಕ್ಕ

    ಮುಂಬೈ: ಲಡಾಖ್‍ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಜನ ಸೈನಿಕರು ಹುತಾತ್ಮರಾದ ಹಿನ್ನೆಲೆ ಚೀನಾ ವಸ್ತು, ಸೇವೆ ಕೈಬಿಡುವಂತೆ ಒತ್ತಾಯ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಕೂಡ ಮಹತ್ವದ ಹೆಜ್ಜೆ ಇಟ್ಟಿದೆ.

    ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ ಪ್ರಾಯೋಜಕತ್ವವನ್ನು ಪರಿಶೀಲಿಸಲು ನಿರ್ಧರಿಸಿದೆ. ಇಂಡೋ-ಚೀನಾ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್‍ನ ಆಡಳಿತ ಮಂಡಳಿ ಮುಂದಿನ ವಾರ ಸಭೆ ಕರೆದು ಲೀಗ್‍ನ ಪ್ರಾಯೋಜಕತ್ವದ ಒಪ್ಪಂದವನ್ನು ಪರಿಶೀಲಿಸಲಿದೆ. ಈ ವೇಳೆ ಚೀನಾದ ಕಂಪನಿ ವಿವೊ ಜೊತೆಗಿನ ಒಪ್ಪಂದದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಐಪಿಎಲ್‍ನ ಶೀರ್ಷಿಕೆ ಪ್ರಾಯೋಜಕರು ವಿವೋ ವಹಿಸಿದ್ದು, ಅದು ಪ್ರತಿವರ್ಷ 440 ಕೋಟಿ ರೂ.ನಂತೆ ಮಂಡಳಿಗೆ ನೀಡಿ ಐದು ವರ್ಷಗಳ ಕಾಲ ಒಪ್ಪಂದವು ಮಾಡಿಕೊಂಡಿದೆ. ಆದರೆ ಒಪ್ಪಂದವು 2022ರಲ್ಲಿ ಕೊನೆಗೊಳ್ಳುತ್ತದೆ.

    ವಿವೊ ಜೊತೆಗೆ, ಮೊಬೈಲ್ ಪಾವತಿ ಸೇವೆ ಪೇಟಿಎಂ ಸಹ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದದ ಭಾಗವಾಗಿದೆ. ಚೀನಾದ ಕಂಪನಿ ಅಲಿಬಾಬಾ ಕೂಡ ಈ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ಪೇಟಿಎಂನಲ್ಲಿ ಅಲಿಬಾಬಾ ಶೇ.37.15ರಷ್ಟು ಪಾಲನ್ನು ಹೊಂದಿದೆ. ಇದಲ್ಲದೆ ಚೀನಾದ ವಿಡಿಯೋ ಗೇಮ್ ಕಂಪನಿ ಟೆನ್ಸೆಂಟ್ ಸ್ವಿಗ್ಗಿ ಮತ್ತು ಡ್ರೀಮ್-11ನಲ್ಲಿ ಶೇ.5.27 ರಷ್ಟು ಪಾಲನ್ನು ಹೊಂದಿದೆ. ಈ ಎಲ್ಲಾ ಚೀನೀ ಕಂಪನಿಗಳು ಬಿಸಿಸಿಐ ಪ್ರಾಯೋಜಕತ್ವ ಹೊಂದಿವೆ.

    ಟೀಂ ಇಂಡಿಯಾದ ಜರ್ಸಿ ಪ್ರಯೋಜಕತ್ವವನ್ನು ಬೈಜೂಸ್ (Byju’s) ಕಂಪನಿ ಪಡೆದುಕೊಂಡಿದೆ. ಬೈಜೂಸ್ ಕಂಪನಿಯಲ್ಲಿ ಚೀನಾ ಟೆನ್ಸೆಂಟ್ ಕಂಪನಿ ಹೂಡಿಕೆ ಮಾಡಿದೆ. ಕಳೆದ ವರ್ಷ ಬಿಸಿಸಿಐ ಜೊತೆ ಐದು ವರ್ಷಗಳ ಒಪ್ಪಂದಕ್ಕೆ ಬೈಜೂಸ್ ಸಹಿ ಹಾಕಿದೆ. ಈ ಮೂಲಕ ಬಿಸಿಸಿಐಗೆ 1,079 ಕೋಟಿ ರೂ. ನೀಡುತ್ತದೆ ಎಂದು ವರದಿಯಾಗಿದೆ. ಆದರೆ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ವಿವೊದೊಂದಿಗಿನ ಒಪ್ಪಂದವನ್ನು 2022ರವರೆಗೆ ಮುಂದುವರಿಸಬೇಕೆ ಅಥವಾ ರದ್ದುಗೊಳಿಸಬೇಕೆ ಎಂದು ನಿರ್ಧರಿಸಲಾಗುತ್ತದೆ.

    ಚೀನಾದ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಬ್ರಾಂಡ್ ಪ್ರಚಾರದ ಹೆಸರಿನಲ್ಲಿ ಮಾರಾಟ ಮಾಡುವ ಮೂಲಕ ಗಳಿಸುವ ಬಹುಪಾಲು ಹಣವನ್ನು ಬಿಸಿಸಿಐ ಪಡೆಯುತ್ತದೆ. ಆ ಗಳಿಕೆಯ ಮೇಲೆ ಬಿಸಿಸಿಐ ಕೇಂದ್ರ ಸರ್ಕಾರಕ್ಕೆ ಶೇ.42ರಷ್ಟು ತೆರಿಗೆಯನ್ನು ಪಾವತಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಒಪ್ಪಂದವು ಚೀನಾಕ್ಕೆ ಅಲ್ಲ ಆದರೆ ಭಾರತದ ಹಿತಕ್ಕಾಗಿ ಅಗತ್ಯವಿದೆ ಎಂಬ ಮಾತುಗಳು ಕೇಳಿ ಬಂದಿವೆ.

  • ‘ಬಿಸಿಸಿಐ ಹಣಕ್ಕಾಗಿ ಐಪಿಎಲ್ ಆಡಿಸುತ್ತಿದೆ’ – ಟೀಕಾಕಾರರಿಗೆ ಅರುಣ್ ಧುಮಾಲ್ ಆರ್ಥಿಕ ಪಾಠ

    ‘ಬಿಸಿಸಿಐ ಹಣಕ್ಕಾಗಿ ಐಪಿಎಲ್ ಆಡಿಸುತ್ತಿದೆ’ – ಟೀಕಾಕಾರರಿಗೆ ಅರುಣ್ ಧುಮಾಲ್ ಆರ್ಥಿಕ ಪಾಠ

    – ಐಪಿಎಲ್ ನಿಂತರೆ ಅದರ ಪರಿಣಾಮ ನೇರವಾಗಿ ಆಟಗಾರರ ಮೇಲೆ ಬೀಳುತ್ತದೆ

    ಮುಂಬೈ: ಬಿಸಿಸಿಐ ಹಣಕ್ಕಾಗಿ ಆಟಗಾರರ ಜೀವವನ್ನೇ ಪಣಕ್ಕಿಟ್ಟು ಐಪಿಎಲ್ ಆಡಿಸಲು ಮುಂದಾಗಿದೆ ಎಂಬ ಟೀಕಾಕಾರರ ಪ್ರಶ್ನೆಗೆ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು ಆರ್ಥಿಕ ಪಾಠ ಮಾಡಿದ್ದಾರೆ.

    ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸುತ್ತೇವೆ ಎಂದು ಬಿಸಿಸಿಐ ಹೇಳಿದ ತಕ್ಷಣ ಕೆಲ ಟೀಕಾಕಾರರು, ಬಿಸಿಸಿಐ ಸ್ವಾರ್ಥಿಯಾಗಿ ಯೋಚನೆ ಮಾಡುತ್ತಿದೆ. ಆಟಗಾರರ ಜೀವವನ್ನು ಪಣಕ್ಕಿಟ್ಟು, ಅವರ ಆರೋಗ್ಯವನ್ನು ಲೆಕ್ಕಿಸದೆ, ಕೇವಲ ಹಣಕ್ಕಾಗಿ ಐಪಿಎಲ್ ಮಾಡಲು ಮುಂದಾಗಿದೆ ಎಂದು ದೂರಿದ್ದರು. ಇದಕ್ಕೆ ಅರುಣ್ ಧುಮಾಲ್ ಅವರು ಉತ್ತರ ನೀಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಧುಮಾಲ್, ಹೌದು ಕೆಲವರು ಬಿಸಿಸಿಐ ಹಣದ ಬಗ್ಗೆ ಯೋಚನೆ ಮಾಡುತ್ತಿದೆ ಎಂದು ಟೀಕೆ ಮಾಡುತ್ತಾರೆ. ಆದರೆ ಟೀಕೆ ಮಾಡುವ ಯಾರೂ ಕೂಡ ಐಪಿಎಲ್‍ನಿಂದ ಆರ್ಥಿಕ ಲಾಭ ಎಷ್ಟಿದೆ ಎಂಬುದರ ಬಗ್ಗೆ ಒಂದು ನಿಮಿಷವೂ ಯೋಚನೆ ಮಾಡುವುದಿಲ್ಲ. ಐಪಿಎಲ್ ಕೇವಲ ಮನರಂಜನೆಯಲ್ಲ ಅದು ಕೂಡ ಒಂದು ವ್ಯವಹಾರ. ಜೊತೆಗೆ ಹಲವಾರು ವಿಭಾಗದಲ್ಲಿ ಸಾವಿರಾರು ಜನರಿಗೆ ಐಪಿಎಲ್‍ನಿಂದ ಕೆಲಸ ಸಿಗುತ್ತದೆ. ಆರ್ಥಿಕ ಮುಗ್ಗಟ್ಟು ಸರಿಹೋಗಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

    ಒಂದು ವೇಳೆ ಐಪಿಎಲ್ ಆಡಿಸದ್ದಿದ್ದರೆ ಮುಂದೆ ಭಾರತದಲ್ಲಿ ಕ್ರಿಕೆಟಿಂಗ್ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಬಿಸಿಸಿಐಗೆ ಐಪಿಎಲ್ ಟೂರ್ನಿ ಹೆಚ್ಚು ಹಣವನ್ನು ತಂದು ಕೊಡುತ್ತದೆ. ಈ ಹಣದಿಂದಲೇ ಬಿಸಿಸಿಐ ವರ್ಷಕ್ಕೆ ಸುಮಾರು 2000 ದೇಶಿಯ ಪಂದ್ಯಗಳನ್ನು ಆಡಿಸುತ್ತದೆ. ಆದ್ದರಿಂದ ಐಪಿಎಲ್ ನಿಂತರೆ ಅದರ ಪರಿಣಾಮ ನೇರವಾಗಿ ಯುವ ಆಟಗಾರರ ಮೇಲೆ ಬೀಳುತ್ತದೆ. ಅದರ ಜೊತೆಗೆ ನಾವು ಐಪಿಎಲ್ ಆಡಿಸುವ ವೇಳೆ ಆಟಗಾರರ ಸುರಕ್ಷತೆ ಬಗ್ಗೆಯೂ ಗಮನ ನೀಡುತ್ತೇವೆ ಎಂದು ಧುಮಾಲ್ ತಿಳಿಸಿದ್ದಾರೆ.

    ಈ ವರ್ಷ ಟಿ-20 ವಿಶ್ವಕಪ್ ಟೂರ್ನಿ ಆಯೋಜನೆಯನ್ನು ಆಸ್ಟ್ರೇಲಿಯಾ ಮಾಡಬೇಕಿದೆ. ಅವರು ಟೂರ್ನಿಯನ್ನು ನಡೆಸುತ್ತೇವೆ ಎಂದರೆ ನಮಗೇನೂ ಅಭ್ಯಂತರವಿಲ್ಲ. ನಾವು ಆಡುತ್ತೇವೆ. ಆದರೆ ಒಂದು ವೇಳೆ ಅವರು ಟೂರ್ನಿಯನ್ನು ಆಯೋಜನೆ ಮಾಡಲು ಆಗಲ್ಲ ಎಂದರೆ ನಮಗೆ ತಿಳಿಸಬೇಕು. ಆಗ ನಾವು ಬೇರೆ ಏನಾದರೂ ಪ್ಲಾನ್‍ಗಳನ್ನು ರೂಪಿಸಿಕೊಳ್ಳುತ್ತೇವೆ ಎಂದು ಅರುಣ್ ಧುಮಾಲ್ ಟಿ-20 ವಿಶ್ವಕಪ್ ಬಗ್ಗೆ ಮಾತನಾಡಿದ್ದಾರೆ.

    ಈ ವಿಚಾರವಾಗಿ ಗುರುವಾರ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿಯವರು ಎಲ್ಲ ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಪತ್ರ ಬರೆದಿದ್ದು, ಐಪಿಎಲ್ ಅನ್ನು ಖಾಲಿ ಸ್ಟೇಡಿಯಂನಲ್ಲಿ ಆಡಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ ಎಂದು ಕೇಳಿದ್ದರು. ಜೊತೆಗೆ ಇತ್ತೀಚಿಗೆ ಭಾರತ ಸೇರಿದಂತೆ ವಿದೇಶದ ಆಟಗಾರರು ಈ ವರ್ಷ ಐಪಿಎಲ್ ಆಡಲು ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಶೀಘ್ರವೇ ಟೂರ್ನಿಯನ್ನು ಹೇಗೆ ಆಯೋಜಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.

  • ಈ ವರ್ಷ ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್‌ – ಹಣ ಹೇಗೆ ಬರುತ್ತೆ?

    ಈ ವರ್ಷ ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್‌ – ಹಣ ಹೇಗೆ ಬರುತ್ತೆ?

    – ರಾಜ್ಯದ ಕ್ರಿಕೆಟ್‌ ಮಂಡಳಿಗೆ ಗಂಗೂಲಿ ಪತ್ರ
    – ಐಸಿಸಿ ಟಿ20 ಕ್ರಿಕೆಟ್‌ ಮುಂದೂಡಿಕೆ ಸಾಧ್ಯತೆ

    ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಕ್ರಿಕೆಟ್‌ನ್ನು ಮುಂದೂಡಲು ಐಸಿಸಿ ಚಿಂತನೆ ನಡೆಸಿದ ಬೆನ್ನಲ್ಲೇ ಬಿಸಿಸಿಐ ಐಪಿಎಲ್‌ ಆಡಿಸಲು ಮುಂದಾಗುತ್ತಿದೆ.

    ಹೌದು, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಈ ಸಂಬಂಧ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ನಡೆಸುವ ಸಂಬಂಧ ರಾಜ್ಯದ ಕ್ರಿಕೆಟ್‌ ಮಂಡಳಿಗಳಿಗೆ ಪತ್ರ ಬರೆದು ನಿಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿಕೊಂಡಿದ್ದಾರೆ.

    ಈ ವರ್ಷ ಐಪಿಎಲ್‌ ಆಯೋಜಿಸಲು ಬಿಸಿಸಿಐ ವಿವಿಧ ಆಯ್ಕೆಗಳನ್ನು ಹುಡುಕುತ್ತಿದೆ. ಈ ಸಂಬಂಧ ಖಾಲಿ ಸ್ಟೇಡಿಯಂನಲ್ಲೂ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಅಭಿಮಾನಿಗಳು, ಫ್ರಾಂಚೈಸಿಗಳು, ಆಟಗಾರರು, ಪ್ರಸಾರದ ಹಕ್ಕು ಪಡೆದುಕೊಂಡವರು, ಆಯೋಜಕರು ಸೇರಿದಂತೆ ಎಲ್ಲರೂ ಈ ವರ್ಷವೇ ಐಪಿಎಲ್‌ ಆಯೋಜಿಸುವ ಸಂಬಂಧ ಎದುರು ನೋಡುತ್ತಿದ್ದಾರೆ ಎಂದು ಗಂಗೂಲಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇತ್ತೀಚಿಗೆ ಭಾರತ ಸೇರಿದಂತೆ ವಿದೇಶದ ಆಟಗಾರರು ಈ ವರ್ಷ ಐಪಿಎಲ್‌ ಆಡಲು ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಶೀಘ್ರವೇ ಟೂರ್ನಿಯನ್ನು ಹೇಗೆ ಆಯೋಜಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಬಿಸಿಸಿಐ ಐಪಿಎಲ್‌ ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದರೂ ವಿಶ್ವಕಪ್‌ ಆಯೋಜನೆ ಬಗ್ಗೆ ಐಸಿಸಿ ನಿರ್ಧಾರ ಸ್ಪಷ್ಟವಾಗಿರಲಿಲ್ಲ. ಬುಧವಾರ ಐಸಿಸಿಯ ಸಭೆ ನಡೆದಿತ್ತು. ಈ ವೇಳೆ ವಿಶ್ವಕಪ್‌ ಆಯೋಜನೆ ಕುರಿತು ಐಸಿಸಿಯ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಐಪಿಎಲ್‌ ಆಯೋಜನೆ ಕುರಿತು ಸೌರವ್‌ ಗಂಗೂಲಿ ಈಗ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಗಂಗೂಲಿ ಇನ್ನು ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ ಬಿಸಿಸಿಐ ಆಯೋಜಿಸುವ ದೇಶೀಯ ಟೂರ್ನಿಯಲ್ಲೂ ಬದಲಾವಣೆ ತರಲಾಗುವುದು ಎಂದು ಹೇಳಿದ್ದಾರೆ. ಮುಂದಿನ ದಿನದಲ್ಲಿ ಈ ಬಗ್ಗೆ ಪೂರ್ಣವಾದ ವಿವರಗಳನ್ನು ನೀಡಲಾಗುವುದು ತಿಳಿಸಿದ್ದಾರೆ.

    ಹೇಗೆ ಆದಾಯ ಬರುತ್ತೆ?
    ಪಂದ್ಯದ ಟಿಕೆಟ್‌ ಮಾರಾಟದಿಂದ ಪ್ರಾಂಚೈಸಿಗಳಿಗೆ ಮತ್ತು ಬಿಸಿಸಿಐಗೆ ದುಡ್ಡು ಬರುತ್ತಿತ್ತು. ಆದರೆ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಆಯೋಜಿಸಿದರೆ ಪ್ರೇಕ್ಷಕರು ಬಾರದೇ ಇರುವ ಕಾರಣ ಈ ಹಣ ಬರುವುದಿಲ್ಲ.

    ಬಿಸಿಸಿಐ ಅತಿ ಹೆಚ್ಚು ಹಣ ಟಿವಿ ಮತ್ತು ಡಿಜಿಟಲ್‌ ಪ್ರಸಾರದಿಂದ ಬರುತ್ತದೆ. ಇದರ ಜೊತೆ ಬೌಂಡರಿ ಬಳಿ ಇರುವ ಡಿಜಿಟಲ್‌ ಬೋರ್ಡ್‌ ಜಾಹೀರಾತು, ಬೌಂಡರಿ ಗೆರೆಯ ಲೈನ್‌ ಮೇಲೂ ಜಾಹೀರಾತು ಇರುತ್ತದೆ.

    ಬಿಡ್‌ ಗೆದ್ದಿದ್ದು ಸ್ಟಾರ್‌ ಇಂಡಿಯಾ:
    2018ರಿಂದ 2022ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಜಾಗತಿಕ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ. 2017ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 16,347 ಕೋಟಿ ರೂ. ನೀಡಿ ಟಿವಿ ಮತ್ತು ಡಿಜಿಟಲ್ ಮೀಡಿಯಾದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.

    ಭಾರತದಲ್ಲಿ ಪ್ರಸಾರದ ಹಕ್ಕಿಗಾಗಿ ಸೋನಿ ಪಿಕ್ಚರ್ಚ್ 11,050 ಕೋಟಿ ರೂ. ಹಣವನ್ನು ಬಿಡ್ ಮಾಡಿದ್ದರೆ ಸ್ಟಾರ್ ಇಂಡಿಯಾ 6,196.94 ಕೋಟಿ ರೂ. ಹಣವನ್ನು ಭಾರತದ ಪ್ರಸಾರಕ್ಕೆ ಬಿಡ್ ಮಾಡಿತ್ತು. ಆದರೆ ಸೋನಿ ಪಿಕ್ಚರ್ಸ್ ಇತರ ಹಕ್ಕು ಗಳಿಗೆ ಬಿಡ್ ಮಾಡದ ಕಾರಣ ಅಂತಿಮವಾಗಿ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.

    ಈ ಬಿಡ್ ಪ್ರಕ್ರಿಯೆಯಲ್ಲಿ ಯುಪ್ ಟಿವಿ, ಗಲ್ಫ್ ಡಿಟಿಎಚ್ ಒಎಸ್‍ಎನ್, ಪರ್‍ಫಾರ್ಮ್ ಮೀಡಿಯಾ, ಏರ್‌ಟೆಲ್‌ , ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್, ಅಮೆಜಾನ್, ಇಎಸ್‍ಪಿಎನ್ ಡಿಜಿಟಲ್ ಮೀಡಿಯಾಗಳು ಭಾಗವಹಿಸಿತ್ತು.

    ಭಾರತದಲ್ಲಿ ಡಿಜಿಟಲ್ ಪ್ರಸಾರದ ಹಕ್ಕಿಗೆ ಏರ್‌ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್ ಬಿಡ್ ಮಾಡಿತ್ತು.

    ಹಕ್ಕು ಇಷ್ಟೊಂದು ಮೊತ್ತಕ್ಕೆ ಹರಾಜು ಆದ ಕಾರಣ ಐಪಿಎಲ್ ಪ್ರತಿ ಪಂದ್ಯದ ಟಿವಿ ಶುಲ್ಕ 2018ರಿಂದ ಹೆಚ್ಚಾಗಲಿದೆ. ಈ ಹಿಂದೆ ಒಂದು ಪಂದ್ಯಕ್ಕೆ 15 ಕೋಟಿ ರೂ. ಆಗಿದ್ದರೆ, ಇನ್ನು ಮುಂದೆ ಈ ಮೌಲ್ಯ ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈಗ ಭಾರತದ ಒಂದು ಏಕದಿನ ಪಂದ್ಯಕ್ಕೆ ಟಿವಿ ಶುಲ್ಕ 45 ಕೋಟಿ ರೂ. ಇದ್ದರೆ, ಐಪಿಎಲ್ ನಲ್ಲಿ 55 ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಹೇಳಿದ್ದರು.

  • ಐಪಿಎಲ್‍ಗಾಗಿ ಟಿ-20 ವಿಶ್ವಕಪ್ ಮುಂದೂಡಿಕೆ ಒಪ್ಪಲ್ಲ: ಪಾಕ್

    ಐಪಿಎಲ್‍ಗಾಗಿ ಟಿ-20 ವಿಶ್ವಕಪ್ ಮುಂದೂಡಿಕೆ ಒಪ್ಪಲ್ಲ: ಪಾಕ್

    ಇಸ್ಲಾಮಾಬಾದ್: ಭಾರತದಲ್ಲಿ ನಡೆಯುವ ಐಪಿಎಲ್ ಟೂರ್ನಿಗಾಗಿ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡುವ ಐಸಿಸಿ ಚಿಂತನೆಯನ್ನು ಒಪ್ಪುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನ.15 ರವರೆಗೂ ಟಿ20 ವಿಶ್ವಕಪ್ ನಡೆಯಬೇಕಿದೆ. ಆದರೆ ಕೊರೊನಾ ಕಾರಣದಿಂದ ಕೆಲ ದೇಶಗಳಲ್ಲಿ ಸೆಪ್ಟೆಂಬರ್ ವರೆಗೂ ಲಾಕ್‍ಡೌನ್ ಮುಂದುವರಿಯುವ ಅವಕಾಶವಿರುವುದರಿಂದ 2020ರ ಟೂರ್ನಿಯನ್ನು 2022ಕ್ಕೆ ಮುಂದೂಡುವ ಚಿಂತನೆಯನ್ನು ಐಸಿಸಿ ಮಾಡಿದ್ದಾಗಿ ವರದಿಗಳು ಪ್ರಕಟವಾಗಿದ್ದವು. ಇಂದು ಐಸಿಸಿ ತನ್ನ ಸದಸ್ಯರ ರಾಷ್ಟ್ರಗಳೊಂದಿಗೆ ಸಭೆ ನಡೆಸಲಿದ್ದು, ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ.

    ಟಿ20 ವಿಶ್ವಕಪ್ ಮುಂದೂಡಿದರೆ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಐಪಿಎಲ್ ಆವೃತ್ತಿ ನಿರ್ವಹಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಕುರಿತು ಈಗಾಗಲೇ ಬಿಸಿಸಿಐ ಅಧ್ಯಕ್ಷರ ಸೌರವ್ ಗಂಗೂಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಸೇರಿದಂತೆ ಕೆಲ ಕ್ರಿಕೆಟ್ ಬೋರ್ಡ್‍ಗಳ ಬೆಂಬಲ ಪಡೆದಿದ್ದಾರೆ. ಉಳಿದಂತೆ ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಅಫ್ಘಾನಿಸ್ತಾನದಂತಹ ತಂಡಗಳು ಸದಸ್ಯದ ಸಂದರ್ಭದಲ್ಲಿ ಬಿಸಿಸಿಐಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಅವಕಾಶವಿಲ್ಲ. ಪರಿಣಾಮ ಟಿ20 ವಿಶ್ವಕಪ್ ಮುಂದೂಡಲು ಮತ್ತಷ್ಟು ಬೆಂಬಲ ಲಭಿಸಿತ್ತು.

    ಇತ್ತ ಟಿ20 ವಿಶ್ವಕಪ್ ಟೂರ್ನಿ ಮುಂದೂಡುವ ವರದಿಗಳು ಪ್ರಕಟವಾಗುತ್ತಿದಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಪ್ರತಿಕ್ರಿಯೆ ನೀಡಿದ್ದು, ನಾವು ಇನ್ನು ಮೇ ತಿಂಗಳಿನಲ್ಲಿದ್ದೇವೆ. ಆದ್ದರಿಂದ ಐಸಿಸಿ ಟಿ20 ವಿಶ್ವಕಪ್ ವಿಚಾರದಲ್ಲಿ ಸ್ವಲ್ಪ ತಾಳ್ಮೆ ವಹಿಸಬೇಕಿದೆ. ಕೊರೊನಾ ಪರಿಸ್ಥಿತಿ ನೋಡಿಕೊಂಡು ಮುಂದಿನ 2 ತಿಂಗಳ ಬಳಿಕ ನಿರ್ಧಾರವನ್ನು ಪ್ರಕಟಿಸಬಹುದಾಗಿದೆ. ಆದರೆ ಬಿಸಿಸಿಐ ಆಯೋಜಿಸುವ ದೇಶೀಯ ಐಪಿಎಲ್ ಟೂರ್ನಿಗಾಗಿ ಟಿ20 ವಿಶ್ವಕಪ್ ಮುಂದೂಡುವ ನಿರ್ಧಾರವನ್ನು ಪಾಕ್ ಕ್ರಿಕೆಟ್ ಬೋರ್ಡ್ ಒಪ್ಪುವುದಿಲ್ಲ ಎಂದು ಪಿಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ಟಿ20 ವಿಶ್ವಕಪ್ ಮುಂದೂಡಿಕೆ?- ಐಪಿಎಲ್‍ಗೆ ಸಿಗುತ್ತಾ  ಚಾನ್ಸ್

    ಟಿ20 ವಿಶ್ವಕಪ್ ಮುಂದೂಡಿಕೆ?- ಐಪಿಎಲ್‍ಗೆ ಸಿಗುತ್ತಾ ಚಾನ್ಸ್

    ದುಬೈ: ಆಸ್ಟ್ರೇಲಿಯಾದಲ್ಲಿ ಈ ವರ್ಷ ಅಕ್ಟೋಬರ್-ನವೆಂಬರ್ ನಲ್ಲಿ ನಡೆಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಎರಡು ವರ್ಷಗಳವರೆಗೆ ಮುಂದೂಡುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮೂಲಗಳು ತಿಳಿಸಿವೆ.

    ಐಸಿಸಿ ಉನ್ನತ ಸಭೆಯು ಮೇ 28ರಂದು ನಡೆಯಲಿದ್ದು, ಬಳಿಕ ಈ ಕುರಿತು ಅಧಿಕೃತ ಪ್ರಕಟಣೆ ನೀಡಲಾಗುವುದು. ಆದರೆ ಕೊರೊನಾ ವೈರಸ್ ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಇದ್ದರೆ ಮಾತ್ರ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ದಾದಾ ಕೈ ತಪ್ಪಿದ ಐಸಿಸಿ ಅಧ್ಯಕ್ಷ ಪಟ್ಟ

    ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡಿದರೆ ಬಿಸಿಸಿಐ ಸೆಪ್ಟೆಂಬರ್-ಅಕ್ಟೋಬರ್ ಅಥವಾ ಅಕ್ಟೋಬರ್-ನವೆಂಬರ್ ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿ ಆಯೋಜಿಸಲು ಸಾಧ್ಯವಾಗುತ್ತದೆ. ಈ ಹಿಂದೆ ಐಪಿಎಲ್ ಮಾರ್ಚ್ 29ರಂದು ಪ್ರಾರಂಭವಾಗಬೇಕಿತ್ತು. ಆದರೆ ಕೋವಿಡ್-19 ಏಕಾಏಕಿ ಹರಡಿದ ಪರಿಣಾಮ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

    2021ರಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಸುವ ಬಗ್ಗೆ ಐಸಿಸಿ ಚರ್ಚೆ ನಡೆಸಲಿದೆ. ಆದರೆ 2021ರ ಈಗಾಗಲೇ ವೇಳಾಪಟ್ಟಿ ಸಿದ್ಧವಾಗಿರುವುದರಿಂದ ಐಸಿಸಿಗೆ 2022ರಲ್ಲಿ ಟೂರ್ನಿಯನ್ನು ನಡೆಸುವುದನ್ನು ಬಿಟ್ಟರೆ ಬೇರೆ ಆಯ್ಕೆಗಳೇ ಇಲ್ಲ ಎಂದು ಹೇಳಲಾಗುತ್ತಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಸಿಸಿ ವಕ್ತಾರರು, ಟಿ20 ವಿಶ್ವಕಪ್ ಟೂರ್ನಿ ಮುಂದೂಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಗುರುವಾರ ನಡೆಯಲಿರುವ ಉನ್ನತ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಮಾನ್ಸೂನ್ ಬಳಿಕ ಭಾರತದಲ್ಲಿ ಐಪಿಎಲ್: ಬಿಸಿಸಿಐ ಸಿಇಒ

    ಮಾನ್ಸೂನ್ ಬಳಿಕ ಭಾರತದಲ್ಲಿ ಐಪಿಎಲ್: ಬಿಸಿಸಿಐ ಸಿಇಒ

    ನವದೆಹಲಿ: ಮಾನ್ಸೂನ್ ಬಳಿಕ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಆವೃತ್ತಿ ಆಯೋಜಿಸುವ ಸಾಧ್ಯತೆ ಇದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿಇಒ ರಾಹುಲ್ ಜೋಹ್ರಿ ಹೇಳಿದ್ದಾರೆ.

    ವಿಶ್ವ ಕ್ರಿಕೆಟಿನ ಅತ್ಯುತ್ತಮ ಆಟಗಾರರು ಐಪಿಎಲ್ ಆಡುತ್ತಾರೆ. ಈ ಲೀಗ್ ಅಭಿಮಾನಿಗಳನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಣಯದ ಮೇಲೆ ನಮ್ಮ ನಿರ್ಧಾರ ತೀರ್ಮಾನವಾಗುತ್ತದೆ. ಕ್ರಮಬದ್ಧ ವಿಧಾನದಲ್ಲಿ ಲೀಗ್ ಆಯೋಜಿಸುವ ಅಗತ್ಯ ದೇಶದಲ್ಲಿ ನಿರ್ಮಾಣವಾಗಿದೆ. ಲಾಕ್‍ಡೌನ್ ಮುಗಿಯುತ್ತಿದಂತೆ ಮಾನ್ಸೂನ್ ಆರಂಭವಾಗುತ್ತದೆ. ಆ ಬಳಿಕವೇ ಐಪಿಎಲ್ ಕುರಿತು ಯೋಚಿಸಬೇಕಿದೆ. ಪ್ರೇಕ್ಷಕರಿಲ್ಲದೇ ಐಪಿಎಲ್ ನಿರ್ವಹಿಸುವುದರಿಂದ ಉಂಟಾಗುವ ನಷ್ಟ ಕಡಿಮೆ ಎಂದು ಮಾಧ್ಯಮಗಳೊಂದಿಗೆ ಜೋಹ್ರಿ ಹೇಳಿದ್ದಾರೆ.

    ಮಾರ್ಚ್ 29ರಂದು ಪ್ರಾರಂಭವಾಬೇಕಿದ್ದ ಐಪಿಎಲ್ 2020 ಆವೃತ್ತಿ ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಐಪಿಎಲ್ ಆವೃತ್ತಿ ಆಯೋಜಿಸಲು ಕನಿಷ್ಠ 2 ತಿಂಗಳ ಅವಧಿ ಅಗತ್ಯವಿದ್ದು, ದೇಶದಲ್ಲಿ ವಿಧಿಸಲಾಗಿರುವ ಲಾಕ್‍ಡೌನ್ ಮೇ 31ಕ್ಕೆ ಮುಕ್ತಾಯವಾಗಲಿದೆ. ಆ ಬಳಿಕ ಮತ್ತೆ ಲಾಕ್‍ಡೌನ್ ಅವಧಿ ಹೆಚ್ಚಿಸಲಾಗುತ್ತಾ? ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಲಭಿಸಿಲ್ಲ. ಇತ್ತ ಭಾರತದಲ್ಲಿ ಜೂನ್‍ನಿಂದಲೇ ಮಳೆ ಆರಂಭವಾಗುವ ಸೂಚನೆ ಲಭಿಸುತ್ತಿದ್ದು, ಸೆಪ್ಟೆಂಬರ್ ವರೆಗೂ ಮಳೆ ಬೀಳುವ ಸಾಧ್ಯತೆ ಇದೆ. ಪರಿಣಾಮ ಅಕ್ಟೋಬರ್-ನವೆಂಬರ್ ನಡುವಿನ ಅವಧಿಯಲ್ಲಿ ಮಾತ್ರ ಐಪಿಎಲ್ 2020ರ ಆವೃತ್ತಿ ನಿರ್ವಹಿಸಲು ಅವಕಾಶವಿದೆ. ಇದೇ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 15ರ ವರೆಗೂ ಟಿ20 ವಿಶ್ವಕಪ್ ನಡೆಯಲಿದೆ. ಆದ್ದರಿಂದ ಟಿ20 ವಿಶ್ವಕಪ್ ಮುಂದೂಡಿದರೆ ಮಾತ್ರ ಐಪಿಎಲ್ ನಿರ್ವಹಿಸುವ ಅವಕಾಶವಿದೆ. ಮೇ28ಕ್ಕೆ ಟಿ20 ವಿಶ್ವಕಪ್ ಆಯೋಜಿಸುವ ಕುರಿತು ಐಸಿಸಿ ಪ್ರಮುಖ ನಿರ್ಣಯ ಕೈಗೊಳ್ಳಲಿದೆ.

  • ‘ನನ್ನ ನಿರ್ಣಯವೇ ಕ್ರಿಕೆಟ್ ಕೆರಿಯರ್‌ಗೆ ಮುಳುವಾಯಿತು’: ರಾಬಿನ್ ಉತ್ತಪ್ಪ

    ‘ನನ್ನ ನಿರ್ಣಯವೇ ಕ್ರಿಕೆಟ್ ಕೆರಿಯರ್‌ಗೆ ಮುಳುವಾಯಿತು’: ರಾಬಿನ್ ಉತ್ತಪ್ಪ

    ಮುಂಬೈ: ಟೆಸ್ಟ್ ಕ್ರಿಕೆಟ್ ಆಡುವ ಲಕ್ಷ್ಯದಿಂದ 25ನೇ ವಯಸ್ಸಿನಲ್ಲಿ ಬ್ಯಾಟಿಂಗ್ ಟೆಕ್ನಿಕ್‍ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂಬ ನಿರ್ಣಯವೇ ತನ್ನ ಕ್ರಿಕೆಟ್ ಕೆರಿಯರ್‌ಗೆ ಮುಳುವಾಯಿತು ಎಂದು ಟೀಂ ಇಂಡಿಯಾ ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಹೇಳಿದ್ದಾರೆ. ಈ ತಪ್ಪಿನಿಂದಲೇ ತನ್ನ ಸ್ಫೋಟಕ ಬ್ಯಾಟಿಂಗ್‍ಗೆ ಬ್ರೇಕ್ ಬಿತ್ತು. ಪರಿಣಾಮ ಕೆರಿಯರ್ ಗ್ರಾಫ್ ಕೆಳಗಿಳಿಯಿತು ಎಂದು ಉತ್ತಪ್ಪ ಅಭಿಪ್ರಾಯ ಪಟ್ಟಿದ್ದಾರೆ.

    ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ ಪರ ಆಡುತ್ತಿರುವ ಉತ್ತಪ್ಪ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಸೆಷನ್‍ನಲ್ಲಿ ತಮ್ಮ ವೃತ್ತಿ ಜೀವನ ಕುರಿತು ಆಸಕ್ತಿಕರ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

    ಭಾರತ ಪರ ಟೆಸ್ಟ್ ಕ್ರಿಕೆಟ್ ಆಡುವುದು ನನ್ನ ಮುಖ್ಯ ಗುರಿಯಾಗಿತ್ತು. ಇದರಂತೆ ನಾನು 20-21ರ ವಯಸ್ಸಿನಲ್ಲೇ ಪ್ರಯತ್ನ ನಡೆಸಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ ನಾನು 25ನೇ ವಯಸ್ಸಿನಲ್ಲಿ ಬ್ಯಾಟಿಂಗ್ ಟೆಕ್ನಿಕ್ ಬದಲಿಸಿಕೊಂಡಿದ್ದೆ. ಅಲ್ಲಿವರೆಗೂ ಸ್ಥಿರವಾಗಿ ಸಾಗುತ್ತಿದ್ದ ನನ್ನ ಬ್ಯಾಟಿಂಗ್ ಸ್ಪೀಡ್ ಕಡಿಮೆ ಆಗಿತ್ತು. ಆದರೆ ನಾನು ಜೀವನದ ಯಾವುದೇ ನಿರ್ಧಾರದ ಕುರಿತು ಪಶ್ಚಾತ್ತಾಪ ಪಡುವುದು ಬೇಡ ಎಂದು ಕೊಂಡಿದ್ದು, ಅತ್ಯುತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದೇನೆ. ಈ ಕಾರಣದಿಂದಲೇ ಕೋಚ್ ಬಳಿ ಬ್ಯಾಟಿಂಗ್ ಟೆಕ್ನಿಕ್ ಬದಲಿಸಿಕೊಂಡು ಉತ್ತಮ ಪ್ರದರ್ಶನ ನೀಡಬೇಕೆಂದುಕೊಂಡಿದ್ದೇನೆ ಎಂದು ಉತ್ತಪ್ಪ ವಿವರಿಸಿದ್ದಾರೆ.

    ಇದೇ ವೇಳೆ 2007ರ ವಿಶ್ವಕಪ್ ಗೆಲುವಿನ ಸಂಭ್ರಮದ ಬಗ್ಗೆ ಮಾತನಾಡಿರುವ ಉತ್ತಪ್ಪ, ವಿಶ್ವಕಪ್ ಗೆಲುವಿನಲ್ಲಿ ನೀವು ಒಂದು ಭಾಗವಾಗಿರುವುದರ ಅನುಭವವೇ ಬೇರೆಯಾಗಿರುತ್ತದೆ. 1983ರ ಬಳಿಕ ಮೊದಲ ವಿಶ್ವಕಪ್ ಗೆದ್ದದ್ದು ಬಹಳ ನಿರಾಳ ತಂದು ಕೊಟ್ಟಿತ್ತು. ವಿಶ್ವಕಪ್ ಗೆದ್ದ ಭಾರತಕ್ಕೆ ಹಿಂದಿರುಗಿದ್ದ ನಮಗೆ ಭವ್ಯ ಸ್ವಾಗತ ಲಭಿಸಿತ್ತು. ಅಂದು ಮೂರು ದಿನಗಳ ಕಾಲ ನಾನು ನಿದ್ದೆ ಮಾಡಿರಲಿಲ್ಲ ಎಂದು ಉತ್ತಪ್ಪ ಹೇಳಿದ್ದಾರೆ.

    2006ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಉತ್ತಪ್ಪ, ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. 2007ರ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ಉತ್ತಪ್ಪ ಆ ಬಳಿಕ ತಂಡದಿಂದ ದೂರವಾಗಿದ್ದರು. 13 ವರ್ಷಗಳ ವೃತ್ತಿ ಜೀವನದಲ್ಲಿ ಉತ್ತಪ್ಪ 46 ಏಕದಿನ, 13 ಟಿ20 ಪಂದ್ಯಗಳನ್ನಾಡಿದ್ದಾರೆ. 2015ರಲ್ಲಿ ಜಿಂಬಾಂಬ್ವೆ ವಿರುದ್ಧದ ಸರಣಿಯಲ್ಲಿ ಉತ್ತಪ್ಪ ಅಂತಿಮ ಪಂದ್ಯವನ್ನು ಆಡಿದ್ದರು. ಉಳಿದಂತೆ ಉತ್ತಮ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಮೊದಲ ಅರ್ಧ ಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

  • ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಪಟ್ಟಕ್ಕೇರಿದ ಸೀಕ್ರೆಟ್ ರಿವೀಲ್ ಮಾಡಿದ ಹಿಟ್‍ಮ್ಯಾನ್

    ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಪಟ್ಟಕ್ಕೇರಿದ ಸೀಕ್ರೆಟ್ ರಿವೀಲ್ ಮಾಡಿದ ಹಿಟ್‍ಮ್ಯಾನ್

    ಮುಂಬೈ: ಐಪಿಎಲ್‍ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಇದುವರೆಗೂ 4 ಬಾರಿ ಚಾಂಪಿಯನ್ ಆಗಿದೆ. ರೋಹಿತ್ ಶರ್ಮಾ ಮುಂಬೈ ತಂಡದ ಕ್ಯಾಪ್ಟನ್ ಆಗುವ ಮುನ್ನ ಐದು ವರ್ಷ ಮುಂಬೈ ಇಂಡಿಯನ್ಸ್ ತಂಡವನ್ನು ಐವರು ಆಟಗಾರರು ಮುನ್ನಡೆಸಿದ್ದರು. 2008ರಲ್ಲಿ ಆರಂಭವಾದ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ಅವರು ಮುಂಬೈ ತಂಡವನ್ನು ಮುನ್ನಡೆಸಿದ್ದರು. ಆ ಬಳಿಕ ಹರ್ಭಜನ್ ಸಿಂಗ್, ಶಾನ್ ಪೊಲಾಕ್, ಬ್ರಾವೋ, ರಿಕಿ ಪಾಂಟಿಂಗ್ ತಂಡದ ನಾಯಕತ್ವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

    ರೋಹಿತ್ ಶರ್ಮಾ ಕೂಡ ಐಪಿಎಲ್ ಆರಂಭದ ಆವೃತ್ತಿಯಿಂದಲೂ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿಲ್ಲ. 2010ರ ವರೆಗೂ ಡೆಕ್ಕನ್ ಚಾರ್ಜರ್ಸ್ ತಂಡದ ಪರ ರೋಹಿತ್ ಶರ್ಮಾ ಆಡಿದ್ದರು. 2011ರಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾರನ್ನು ಖರೀದಿ ಮಾಡಿತ್ತು. ಆ ಬಳಿಕ 2013ರಲ್ಲಿ ಯಾರು ಊಹೆ ಮಾಡದ ರೀತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಗೆ ವಹಿಸಲಾಗಿತ್ತು. ಆ ವರ್ಷ ಪಾಂಟಿಂಗ್ ನಾಯಕತ್ವದಿಂದ ದೂರ ಸರಿದ ಹಿನ್ನೆಲೆ ತಂಡದ ನಾಯಕತ್ವ ಯಾರಿಗೆ ಎಂಬ ಪ್ರಶ್ನೆ ಎದುರಾಗಿತ್ತು. ಆ ವೇಳೆ ಟೀಂ ಇಂಡಿಯಾ ಮತ್ತೊಬ್ಬ ಆಟಗಾರ ದಿನೇಶ್ ಕಾರ್ತಿಕ್ ನಾಯಕತ್ವದ ರೇಸ್‍ನಲ್ಲಿ ಮುಂದಿದ್ದರು. ಆದರೆ ಅಂತಿಮ ಕ್ಷಣದಲ್ಲಿ ರೋಹಿತ್‍ಗೆ ನಾಯಕತ್ವ ವಹಿಸಲಾಗಿತ್ತು. ಆ ವರ್ಷ ತಂಡಕ್ಕೆ ಟೈಟಲ್ ಗೆದ್ದು ತಂದಿದ್ದ ರೋಹಿತ್, ಆ ಬಳಿಕ 2015, 2017, 2019ರಲ್ಲೂ ತಂಡವನ್ನು ಚಾಂಪಿಯನ್ ಸ್ಥಾನದಲ್ಲಿ ತಂದು ನಿಲ್ಲಿಸಿದ್ದರು.

    ಈ ಕುರಿತಂತೆ ಟೀಂ ಇಂಡಿಯಾ ಅನುಭವಿ ವೇಗಿ ಅಶ್ವಿನ್‍ರೊಂದಿಗೆ ಲೈವ್ ಇನ್‍ಸ್ಟಾ ಸೆಷನ್‍ನಲ್ಲಿ ರೋಹಿತ್ ಶರ್ಮಾ ಮಾತನಾಡಿದ್ದು, ನಾಯಕತ್ವ ಲಭಿಸಿದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಮುಂಬೈ ತಂಡಕ್ಕೆ ನಾನು ಬಂದ ಮೊದಲ ದಿನವೇ ತಂಡದ ನಾಯಕತ್ವ ಲಭಿಸುತ್ತದೆ ಎಂದು ಅಂದುಕೊಂಡಿದ್ದೆ. ಆದರೆ 2013ರಲ್ಲಿ ಪಾಂಟಿಂಗ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದ ಸಂದರ್ಭದಲ್ಲಿ ಅವರೊಂದಿಗೆ ನಾಯಕತ್ವ ರೇಸ್‍ನಲ್ಲಿ ನಿಲ್ಲುವುದು ಕಷ್ಟ ಎನಿಸಿತ್ತು. ಆದರೆ ಪಾಂಟಿಂಗ್ ನಾಯಕತ್ವ ಬೇಡ ಎಂದ ಪರಿಣಾಮ ಮೊದಲು ದಿನೇಶ್ ಕಾರ್ತಿಕ್ ಹೆಸರು ಕೇಳಿ ಬಂದಿತ್ತು. ಆದರೆ ಪಾಂಟಿಂಗ್ ನನ್ನ ಹೆಸರನ್ನು ಸೂಚಿಸಿ ತಂಡವನ್ನು ಮುನ್ನಡೆಸುವಂತೆ ಹೇಳಿದ್ದರು. ಪರಿಣಾಮ ನನಗೆ ನಾಯಕತ್ವ ಲಭಿಸಿತ್ತು ಎಂದು ರೋಹಿತ್ ಹೇಳಿದ್ದಾರೆ.

  • ಟಿ20 ವಿಶ್ವಕಪ್‍ಗಿಂತಲೂ ಐಪಿಎಲ್ ಬಹುಮುಖ್ಯ: ರವಿಶಾಸ್ತ್ರಿ

    ಟಿ20 ವಿಶ್ವಕಪ್‍ಗಿಂತಲೂ ಐಪಿಎಲ್ ಬಹುಮುಖ್ಯ: ರವಿಶಾಸ್ತ್ರಿ

    ಮುಂಬೈ: ಕೊರೊನಾ ವೈರಸ್ ಮಹಾಮಾರಿಯ ಸಂದಿಗ್ಧ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಕ್ರೀಡೆಗಳು ಪ್ರಾರಂಭವಾದರೆ ಮೊದಲು ದೇಶೀಯ ಕ್ರಿಕೆಟ್, ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿ ಆರಂಭಿಸಲು ಪ್ರಾಮುಖ್ಯತೆ ನೀಡಬೇಕು ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

    ಪ್ರಸ್ತುತ ಗ್ಲೋಬಲ್ ಕ್ರಿಕೆಟ್ ಟೂರ್ನಿಗಳಿಗೆ ನಾನು ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಮೊದಲು ದೇಶೀಯ ಕ್ರಿಕೆಟ್ ಪರಿಸ್ಥಿತಿ ಸುಧಾರಣೆ ಆಗಬೇಕು. ಅಂತರರಾಷ್ಟ್ರೀಯ ಕ್ರಿಕೆಟಿಗರು, ದೇಶೀಯ ಕ್ರಿಕೆಟಿಗರು ಕ್ರೀಡಾಂಗಣಕ್ಕೆ ಆಗಮಿಸಬೇಕು. ಆ ಬಳಿಕ ದ್ವಿಪಕ್ಷೀಯ ಟೂರ್ನಿ ಕ್ರಿಕೆಟ್ ಟೂರ್ನಿಗಳು ಆರಂಭವಾಗಬೇಕಿದೆ. ಸದ್ಯದ ಸ್ಥಿತಿಯಲ್ಲಿ ಗ್ಲೋಬಲ್ ಟೂರ್ನಿಗಳನ್ನು ಆಯೋಜಿಸುವುದಕ್ಕಿಂತ ಐಪಿಎಲ್ ರೀತಿಯ ಟೂರ್ನಿ ನಿರ್ವಹಿಸುವುದು ಉತ್ತಮ. ಕ್ರಿಕೆಟ್ ಜಗತ್ತು ಮತ್ತೆ ಚೇತರಿಸಿಕೊಳ್ಳಲು ಟಿ20 ವಿಶ್ವಕಪ್‍ಗಿಂತಲೂ ಐಪಿಎಲ್ ಮುಖ್ಯ. ದೇಶೀಯ ಕ್ರಿಕೆಟ್ ಟೂರ್ನಿಗಳಿಗಿಂತ ಅಂತರರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸುವುದು ಸದ್ಯದ ಸ್ಥಿತಿಯಲ್ಲಿ ಕಷ್ಟಸಾಧ್ಯ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

    ದ್ವಿಪಕ್ಷೀಯ ಟೂರ್ನಿಗಳಲ್ಲಿ ಒಂದು ತಂಡದ ಮಾತ್ರ ಪ್ರವಾಸ ಕೈಗೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾವು ಹೆಚ್ಚಿನ ಜಾಗೃತಿ ವಹಿಸಿಕೊಳ್ಳಬಹುದು. ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಿದರೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಅಲ್ಲದೇ ಐಪಿಎಲ್, ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಒಂದು ಅಥವಾ ಎರಡು ಸ್ಥಳಗಳಲ್ಲಿ ಆಯೋಜಿಸಬಹುದು. ಇದು ವಿಶ್ವಕಪ್ ದೃಷ್ಟಿಯಿಂದ ಸಾಧ್ಯವಲ್ಲ. ಈ ಎಲ್ಲಾ ಅಂಶಗಳನ್ನು ಐಸಿಸಿ ಗಮನಿಸಿ ನಿರ್ಣಯ ಕೈಗೊಳ್ಳಬೇಕಿದೆ ಎಂದು ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ 2 ತಿಂಗಳು ಕ್ರೀಡಾಪಟುಗಳ ಜೀವನದಲ್ಲಿ ಬಹುಮುಖ್ಯವಾಗುತ್ತದೆ. ಏಕೆಂದರೆ ಆಟಗಾರರಿಗೆ ನಿರಂತರ ತರಬೇತಿ ಅಗತ್ಯ. ಕ್ರಿಕೆಟ್ ಮಾತ್ರವಲ್ಲದೇ ಯಾವುದೇ ಕ್ರೀಡಾಪಟುಗಳನ್ನು ತೆಗೆದುಕೊಂಡರು ಇದು ಬಹುಮುಖ್ಯ ಸವಾಲು. ಲಾಕ್‍ಡೌನ್ ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರಗಳನ್ನು ಆರಂಭಿಸಲಾಗುವುದು ಎಂದು ರವಿಶಾಸ್ತ್ರಿ ಮಾಹಿತಿ ನೀಡಿದ್ದಾರೆ.

  • ಸಿಎಸ್‍ಕೆ ಪರ ಧೋನಿಗಿಂತಲೂ ಹೆಚ್ಚು ಪಂದ್ಯ ಆಡಿದ್ದಾರೆ ರೈನಾ

    ಸಿಎಸ್‍ಕೆ ಪರ ಧೋನಿಗಿಂತಲೂ ಹೆಚ್ಚು ಪಂದ್ಯ ಆಡಿದ್ದಾರೆ ರೈನಾ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತ್ಯಂತ ಸ್ಥಿರವಾದ ಫ್ರ್ಯಾಂಚೈಸ್‍ಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಇದುವರೆಗೂ ಒಬ್ಬ ನಾಯಕನನ್ನು ಮಾತ್ರ ಹೊಂದಿದೆ. ಎಂ.ಎಸ್ ಧೋನಿ ಅವರು ಮೊದಲು 9.5 ಕೋಟಿ ರೂ.ಗೆ ತಂಡವನ್ನು ಸೇರಿಕೊಂಡಿದ್ದರು. ಅವರು ಪ್ರತಿ ಬಾರಿಯ ಐಪಿಎಲ್‍ನಲ್ಲಿ ಸಿಎಸ್‍ಕೆ ತಂಡವನ್ನು ಮುನ್ನಡೆಸಿದ್ದಾರೆ. ಅವರ ನೇತೃತ್ವದಲ್ಲಿ ಸಿಎಸ್‍ಕೆ ತಂಡವು ಪ್ರತಿ ಬಾರಿಯೂ ಪ್ಲೇಆಫ್‍ನಲ್ಲಿ ಸ್ಥಾನ ಪಡೆಯುತ್ತಾ ಬಂದಿದೆ. ಅಷ್ಟೇ ಅಲ್ಲದೆ ಮತ್ತು ಇದುವರೆಗೂ ಮೂರು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿದೆ.

    190 ಐಪಿಎಲ್ ಪಂದ್ಯಗಳನ್ನು ಆಡಿದ ಧೋನಿ, ಸಿಎಸ್‍ಕೆ ಪರ ಹೆಚ್ಚು ಪಂದ್ಯ ಆಡಿದ ಆಟಗಾರರಲ್ಲಿ ಒಬ್ಬರು. ಆದರೆ ಅವರು ಸಿಎಸ್‍ಕೆ ಪರ ಹೆಚ್ಚು ಪಂದ್ಯ ಆಡಿದ ಆಟಗಾರರಲ್ಲ. ಹೌದು, ಸಿಎಸ್‍ಕೆ ಪರ 160 ಪಂದ್ಯಗಳನ್ನು ಆಡಿರುವ ಧೋನಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹಾಗಾದರೆ ಯಾರು ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ ಅಂತ ನಿಮಗೆ ಗೊತ್ತಾ?

    ಸುರೇಶ್ ರೈನಾ ಅವರು ಸಿಎಸ್‍ಕೆ ಪರ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್‍ನಲ್ಲಿ ಸಿಎಸ್‍ಕೆ ಇದುವರೆಗೂ 165 ಪಂದ್ಯಗಳನ್ನು ಆಡಿದ್ದು, ಈ ಪೈಕಿ 164 ಪಂದ್ಯಗಳಲ್ಲಿ ಎಡಗೈ ಬ್ಯಾಟ್ಸ್‍ಮನ್ ರೈನಾ ಆಡಿದ್ದಾರೆ. ಸ್ನಾಯು ಸೆಳೆತದ ಹಿನ್ನೆಲೆಯಲ್ಲಿ ರೈನಾ ಅವರು ಸಿಎಸ್‍ಕೆ ಪರ ಆಡುವುದನ್ನು ಮೊದಲ ಬಾರಿಗೆ ತಪ್ಪಿಸಿಕೊಂಡಿದ್ದರು.

    ರೈನಾ ಸಿಎಸ್‍ಕೆಗೆ ಮಾತ್ರವಲ್ಲ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಪಂದ್ಯವನ್ನು ಆಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಅವರು ಐಪಿಎಲ್‍ನಲ್ಲಿ 193 ಪಂದ್ಯಗಳನ್ನು ಆಡಿದ್ದಾರೆ. ಧೋನಿ 190 ಪಂದ್ಯಗಳನ್ನು ಆಡಿ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರ ನಂತರ ಸ್ಥಾನದಲ್ಲಿರುವ ರೋಹಿತ್ ಶರ್ಮಾ 188 ಪಂದ್ಯ, ದಿನೇಶ್ ಕಾರ್ತಿಕ್ 182 ಪಂದ್ಯ ಮತ್ತು ವಿರಾಟ್ ಕೊಹ್ಲಿ 177 ಪಂದ್ಯ ಆಡಿದ್ದಾರೆ.

    ಧೋನಿ 2010ರಲ್ಲಿ ಸಿಎಸ್‍ಕೆ ಪರ ಆಡುವುದನ್ನು ಮೊದಲ ಬಾರಿಗೆ ತಪ್ಪಿಸಿಕೊಂಡಿದ್ದರು. ಆ ಬಳಿಕ 2011ರಿಂದ 2015 ರವರೆಗೆ ಮತ್ತು 2017 ಮತ್ತು 2018ರಲ್ಲಿ ಅವರು ಒಂದೇ ಒಂದು ಪಂದ್ಯವನ್ನು ತಪ್ಪಿಸಲಿಲ್ಲ. ಬೆನ್ನು ನೋವಿನಿಂದಾಗಿ ಐಪಿಎಲ್ 2019ರಲ್ಲಿ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಟೀಂ ಇಂಡಿಯಾ ಮಾಜಿ ನಾಯಕ 2019ರ ವಿಶ್ವಕಪ್‍ಗೆ ಸ್ವಲ್ಪ ಮುಂಚಿತವಾಗಿ ಬೆನ್ನಿನ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು. ಆಗ ಎರಡು ಪಂದ್ಯಗಳಿಗೆ ಅವರು ಅಲಭ್ಯವಾಗಿದ್ದರು.