Tag: IPL

  • ಕೊರೊನಾ ಪರೀಕ್ಷೆಗೆ ಮುಂದಾದ ಧೋನಿ

    ಕೊರೊನಾ ಪರೀಕ್ಷೆಗೆ ಮುಂದಾದ ಧೋನಿ

    ಮುಂಬೈ: ಕ್ರಿಕೆಟ್‍ನಿಂದ ಸಲ್ಪ ಸಮಯ ದೂರ ಉಳಿದಿದ್ದ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಕೊರೊನಾ ಟೆಸ್ಟ್‍ಗೆ ಒಳಾಗಿದ್ದಾರೆ.

    ಕೊರೊನಾ ವೈರಸ್ ಕಾರಣದಿಂದ ಮುಂದಕ್ಕೆ ಹೋಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯನ್ನು ಸೆಪ್ಟೆಂಬರ್ 19ರಿಂದ ಪ್ರಾರಂಭ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನ ಮಾಡಿದೆ. ಭಾರತದಲ್ಲಿ ಸೋಂಕು ಹಿಡಿತಕ್ಕೆ ಬಾರದ ಕಾರಣ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ಈ ನಡುವೆ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಿವೆ.

    2019ರ ಜುಲೈನಿಂದ ಕ್ರಿಕೆಟ್‍ನಿಂದ ದೂರವಾಗಿದ್ದ ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಪ್ರಸ್ತುತ ರಾಂಚಿಯಲ್ಲಿದ್ದಾರೆ. ಜೊತೆಗೆ ಐಪಿಎಲ್ ಆಡಲು ತಯಾರಿ ಕೂಡ ಮಾಡುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳ ವರದಿಯಂತೆ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ತಂಡದ ಆಟಗಾರ ಮೋನು ಕುಮಾರ್ ಅವರು ಬುಧವಾರ ತಮ್ಮ ಗಂಟಲು ದ್ರವದ ಮಾದರಿಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

    ಗುರುನಾನಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಭಾಗವಾಗಿರುವ ಮೈಕ್ರೊಪ್ರಾಕ್ಸಿಸ್ ಲ್ಯಾಬ್ಸ್‍ನ ಹಿರಿಯ ಕಾರ್ಯನಿರ್ವಾಹಕರು ಧೋನಿ ಅವರ ತೋಟದ ಮನೆಗೆ ಬಂದು ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದಾರೆ. ಧೋನಿ ಮತ್ತು ಮೋನು ಕುಮಾರ್ ಇಬ್ಬರೂ ಕೊರೊನಾ ವರದಿ ನೆಗೆಟಿವ್ ಬಂದರೆ, ಆಗಸ್ಟ್ 14ರಂದು ಚೆನ್ನೈಗೆ ತೆರಳಲಿದ್ದಾರೆ. ಚೆನ್ನೈ ಜೊತೆಗೆ ಸೂಪರ್ ಕಿಂಗ್ಸ್ ಆಗಸ್ಟ್ 22 ರಂದು ಯುಎಇಗೆ ತೆರಳುವ ನಿರೀಕ್ಷೆಯಿದೆ.

    ಕಳೆದ ಎರಡು ವಾರಗಳಲ್ಲಿ ಐಪಿಎಲ್ ಫ್ರಾಂಚೈಸಿಗಳಲ್ಲಿ ನಡೆದ ಕೊರೊನಾ ಪರೀಕ್ಷೆಯಲ್ಲಿ, ಆಗಸ್ಟ್ 12ರಂದು ರಾಜಸ್ಥಾನ್ ರಾಯಲ್ಸ್ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಜೊತೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‍ಮನ್ ಕರುಣ್ ನಾಯರ್ ಸಹ ವೈರಸ್‍ಗೆ ತುತ್ತಾಗಿದ್ದರು. ಆದರೆ ಅವರು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಬಿಸಿಸಿಐ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಐಪಿಎಲ್‍ನಲ್ಲಿ ಭಾಗವಹಿಸುವ ಎಲ್ಲ ಆಟಗಾರರು ಕೊರೊನಾ ಟೆಸ್ಟ್‍ಗೆ ಒಳಪಡಬೇಕು. ವರದಿಯಲ್ಲಿ ನೆಗೆಟಿವ್ ಬಂದವರು ಮಾತ್ರ ಟೂರ್ನಿಯಲ್ಲಿ ಭಾಗವಹಿಸಬಹುದಾಗಿದೆ.

  • ಅನುಮಾನ ಬೇಡ, ಮಹಿಳೆಯರ ಐಪಿಎಲ್‌ ನಡೆಯುತ್ತೆ: ಗಂಗೂಲಿ

    ಅನುಮಾನ ಬೇಡ, ಮಹಿಳೆಯರ ಐಪಿಎಲ್‌ ನಡೆಯುತ್ತೆ: ಗಂಗೂಲಿ

    ಮುಂಬೈ: ಪುರುಷರ ಕ್ರಿಕೆಟ್‌ ಜೊತೆಗೆ ಮಹಿಳೆಯರ ಐಪಿಎಲ್‌ ಆಯೋಜನೆ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

    ಯುಎಇಯಲ್ಲಿ ಐಪಿಎಲ್‌ ಆಯೋಜನೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇಂದು ಐಪಿಎಲ್‌ ಅಧಿಕಾರಿಗಳ ಜೊತೆ ಸಭೆ ನಡೆಯಿತು. ಈ ಸಭೆಯಲ್ಲಿ ಪುರುಷರ ಕ್ರಿಕೆಟ್‌ ಜೊತೆಗೆ 4 ತಂಡಗಳಿರುವ ಮಹಿಳಾ ಐಪಿಎಲ್‌ ಆಯೋಜನೆಗ ನಡೆಸುವುದಾಗಿ ಗಂಗೂಲಿ ಹೇಳಿದ್ದಾರೆ ಎಂದು ವರದಿಯಾಗಿದೆ.

    ನವೆಂಬರ್‌ 1 ರಿಂದ 10ರ ಒಳಗಡೆ ಮಹಿಳೆಯರ ಕ್ರಿಕೆಟ್‌ ನಡೆಸಲು ಸಿದ್ಧತೆ ನಡೆದಿದೆ. ಶೀಘ್ರದಲ್ಲೇ ಮಹಿಳಾ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

    ದುಬೈ, ಅಬುಧಾಬಿ, ಶಾರ್ಜಾದಲ್ಲಿ ಐಪಿಎಲ್‌ ಸೆಪ್ಟೆಂಬರ್‌ 19 ರಿಂದ ನವೆಂಬರ್‌ 10ರವರೆಗೆ ನಡೆಯಲಿದೆ. ನವೆಂಬರ್‌ ಮೊದಲ ವಾರದಲ್ಲಿ ಪ್ಲೇ ಆಫ್‌, ನಂತರ ಕ್ವಾಲಿಫಯರ್‌ ಬಳಿಕ ಫೈನಲ್‌ ಪಂದ್ಯ ನಡೆಯಲಿದೆ. ನಿರಂತರವಾಗಿ ತಂಡಗಳು ಪಂದ್ಯವಾಡಲು ಸಾಧ್ಯವಿಲ್ಲ. ಹೀಗಾಗಿ ವಿರಾಮದ ದಿನ ಮಹಿಳೆಯರ ಐಪಿಎಲ್‌ ಪಂದ್ಯ ನಡೆಯಲಿದೆ.

    ಪುರುಷರ ಐಪಿಎಲ್‌ ಜೊತೆ ಮಹಿಳೆಯರ ಐಪಿಎಲ್‌ ನಡೆಯುತ್ತಾ? ಇಲ್ಲವೋ ಎನ್ನುವ ಪ್ರಶ್ನೆಗಳು ಎದ್ದಿತ್ತು. 2018, 2019ರಲ್ಲಿ ಮಹಿಳೆಯರ ಐಪಿಎಲ್‌ ನಡೆದಿದ್ದು, ಎರಡು ಬಾರಿಯೂ ಸೂಪರ್‌ ನೋವಾ ತಂಡ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು.

    ಈ ಮೊದಲು ಐಪಿಎಲ್‌ ಸೆಪ್ಟೆಂಬರ್‌ 19 ರಿಂದ ಆರಂಭಗೊಂಡು ನವೆಂಬರ್‌ 8ರ ವರೆಗೆ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ ಈಗ ನವೆಂಬರ್‌ 10ರವರೆಗೆ ನಡೆಯಲಿದೆ. ಸಾಧಾರಣವಾಗಿ ಭಾನುವಾರ, ಶನಿವಾರ ಫೈನಲ್‌ ಪಂದ್ಯ ಆಯೋಜನೆಗೊಳ್ಳುತ್ತದೆ. ಆದರೆ ಈ ಬಾರಿ ಮಂಗಳವಾರ ಐಪಿಎಲ್ ಫೈನಲ್‌ ಪಂದ್ಯ ನಡೆಯಲಿದೆ.

    ಐಪಿಎಲ್‌ಗೂ ಮೊದಲು ಭಾರತದ ಮಹಿಳಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ಐಪಿಎಲ್‌ ಬಳಿಕ ವೆಸ್ಟ್‌ ಇಂಡೀಸ್‌ ಪ್ರವಾಸ ಮಾಡಲಿದೆ.

  • ಆರ್‌ಸಿಬಿಗೆ ಶಾಕ್ – ಎಬಿಡಿ, ಮೋರಿಸ್ ಐಪಿಎಲ್ ಆರಂಭದ ಪಂದ್ಯಗಳನ್ನಾಡುವುದು ಡೌಟ್?

    ಆರ್‌ಸಿಬಿಗೆ ಶಾಕ್ – ಎಬಿಡಿ, ಮೋರಿಸ್ ಐಪಿಎಲ್ ಆರಂಭದ ಪಂದ್ಯಗಳನ್ನಾಡುವುದು ಡೌಟ್?

    ನವದೆಹಲಿ: ಕೊರೊನಾ ವೈರಸ್ ಕಾರಣದಿಂದ ಎಬಿಡಿ ವಿಲಿಯರ್ಸ್ ಸೇರಿದಂತೆ ಸೌತ್ ಆಫ್ರಿಕಾದ ಎಲ್ಲ ಆಟಗಾರರು ಐಪಿಎಲ್ ಆರಂಭದ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ ಎಂದು ವರದಿಯಾಗಿದೆ.

    ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಐಪಿಎಲ್ ಸೆಪ್ಟಂಬರ್ 19ರಿಂದ ಯುಎಇಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಆದರೆ ಇದೇ ಕೊರೊನಾ ವೈರಸ್ ಕಾರಣದಿಂದ ದಕ್ಷಿಣ ಆಫ್ರಿಕಾದ ಹಲವು ಆಟಗಾರರು ಐಪಿಎಲ್ ಆರಂಭದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಬೆಂಗಳೂರು ತಂಡಕ್ಕೆ ಹೆಚ್ಚು ನಷ್ಟವಾಗಲಿದೆ.

    ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ, ದಕ್ಷಿಣ ಆಫ್ರಿಕಾದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ಅಲ್ಲಿನ ಸರ್ಕಾರ ಸೆಪ್ಟಂಬರ್ ಅಂತ್ಯದವರೆಗೂ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದೆ. ಜೊತೆಗೆ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸಂಪೂರ್ಣವಾಗಿ ನಿರ್ಬಂಧ ಮಾಡಿದೆ. ದಕ್ಷಿಣ ಆಫ್ರಿಕಾದ ತಜ್ಞರು ಸೆಪ್ಟಂಬರ್ ಅಂತ್ಯದವರೆಗೂ ಲಾಕ್‍ಡೌನ್ ತೆರವು ಮಾಡುವುದು ಬೇಡ ಎಂದು ಸರ್ಕಾರ ಸಲಹೆ ನೀಡಿದ್ದಾರೆ. ಈ ಕಾರಣದಿಂದ ಸೆಪ್ಟಂಬರ್ ಮಧ್ಯಭಾಗದಿಂದ ಆರಂಭವಾಗುವ ಐಎಪಿಲ್ ಆರಂಭದ ಪಂದ್ಯಗಳಿಗೆ ಸೌತ್ ಆಫ್ರಿಕಾದ ಆಟಗಾರರು ಅಲಭ್ಯರಾಗಲಿದ್ದಾರೆ.

    ಈ ನಡುವೆ ಐಪಿಎಲ್ ಪ್ರಾಂಚೈಸಿಗಳು ವಿಶೇಷ ವಿಮಾನ ಮೂಲಕ ಆಟಗಾರರನ್ನು ಕರೆಸಿಕೊಳ್ಳುವುದಾಗಿ ಹೇಳಿಕೊಂಡಿವೆ. ಆದರೆ ಸೌತ್ ಆಫ್ರಿಕಾ ಸರ್ಕಾರ ಈ ಬಗ್ಗೆ ಯಾವುದೇ ಅನುಮತಿಯನ್ನು ಈವರೆಗೆ ನೀಡಿಲ್ಲ. ಒಂದು ವೇಳೆ ಅಲ್ಲಿನ ಸರ್ಕಾರ ಅನುಮತಿ ನೀಡದಿದ್ದರೆ ಆರ್ಸಿಬಿ ತಂಡಕ್ಕೆ ಹೆಚ್ಚಿನ ನಷ್ಟವಾಗಲಿದೆ. ಆರ್‌ಸಿಬಿ ಸೌತ್ ಆಫ್ರಿಕಾದ ಮೂರು ಪ್ರಮುಖ ಆಟಗಾರರನ್ನು ಮಿಸ್ ಮಾಡಿಕೊಳ್ಳಲಿದೆ. ತಂಡದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಎಬಿಡಿ ವಿಲಿಯರ್ಸ್, ವೇಗಿ ಡೇಲ್ ಸ್ಟೇನ್ ಹಾಗೂ ಆಲ್‍ರೌಂಡರ್ ಕ್ರಿಸ್ ಮೋರಿಸ್ ಅವರು ಮಿಸ್ ಆಗಲಿದ್ದಾರೆ. ಮೋರಿಸ್ ಅವರನ್ನು ಆರ್ಸಿಬಿ 10 ಕೋಟಿ ಕೊಟ್ಟು ಖರೀದಿ ಮಾಡಿದೆ.

    ಸ್ಪಿನ್ನರ್ ಇಮ್ರಾನ್ ತಹೀರ್ ಹೊರತುಪಡಿಸಿ ಸೌತ್ ಆಫ್ರಿಕಾದ ಎಲ್ಲ ಆಟಗಾರರು ಐಪಿಎಲ್ ಆರಂಭದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಎಬಿ ಡಿವಿಲಿಯರ್ಸ್ (ಆರ್‌ಸಿಬಿ), ಕ್ವಿಂಟನ್ ಡಿ ಕಾಕ್ (ಎಂಐ), ಡೇಲ್ ಸ್ಟೇನ್ (ಆರ್‌ಸಿಬಿ), ಕ್ರಿಸ್ ಮೋರಿಸ್ (ಆರ್‌ಸಿಬಿ), ಕಗಿಸೊ ರಬಾಡಾ (ಡಿಸಿ), ಲುಂಗಿ ಎನ್‍ಜಿಡಿ (ಸಿಎಸ್‍ಕೆ), ಫಾಫ್ ಡು ಪ್ಲೆಸಿಸ್ (ಸಿಎಸ್‍ಕೆ), ಇಮ್ರಾನ್ ತಾಹಿರ್ (ಸಿಎಸ್‍ಕೆ) , ಡೇವಿಡ್ ಮಿಲ್ಲರ್ (ಆರಾರ್), ಹಾರ್ಡಸ್ ವಿಲ್ಜೋಯೆನ್ (ಕೆಎಕ್ಸ್‍ಐಪಿ) ಈ ಎಲ್ಲ ಆಟಗಾರರು ಈ ಬಾರಿಯ ಐಪಿಎಲ್ ಆಡಲು ಸಿದ್ಧರಿದ್ದರು.

  • ಐಪಿಎಲ್ ಕ್ರಿಕೆಟ್‌ – ಅಭಿಮಾನಿಗಳಿಲ್ಲ, ಆಟಗಾರರಿಗೆ ಎರಡು ವಾರದಲ್ಲಿ 4 ಕೋವಿಡ್‌ ಪರೀಕ್ಷೆ

    ಐಪಿಎಲ್ ಕ್ರಿಕೆಟ್‌ – ಅಭಿಮಾನಿಗಳಿಲ್ಲ, ಆಟಗಾರರಿಗೆ ಎರಡು ವಾರದಲ್ಲಿ 4 ಕೋವಿಡ್‌ ಪರೀಕ್ಷೆ

    – ಬಿಸಿಸಿಐ ಸಿದ್ಧಪಡಿಸಿದೆ ಕೋವಿಡ್‌ 19 ಮಾರ್ಗಸೂಚಿ
    – ಶೀಘ್ರವೇ ಐಪಿಎಲ್‌ ತಂಡಗಳಿಗೆ ಎಸ್‌ಒಪಿ ರವಾನೆ

    ಮುಂಬೈ: ಕ್ರೀಡಾಂಗಣದಲ್ಲಿ ಅಭಿಮಾನಿಗಳು ಇರಬಾರದು, ವೀಕ್ಷಕ ವಿವರಣೆಗಾರರು 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಡ್ರೆಸ್ಸಿಂಗ್‌ ಕೋಣೆಯಲ್ಲಿ 15ಕ್ಕಿಂತ ಹೆಚ್ಚಿನ ಆಟಗಾರರು ಸೇರುವಂತಿಲ್ಲ. ಎರಡು ವಾರದಲ್ಲಿ 4 ಬಾರಿ ಕೋವಿಡ್‌ ಪರೀಕ್ಷೆ.  ಪಂದ್ಯ ಮುಗಿದ ಬಳಿಕ ನಡೆಯುವ ಬಹುಮಾನ ವಿತರಣೆ ವೇಳೆಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು – ಇದು ಐಪಿಎಲ್‌ ಫ್ರಾಂಚೈಸಿಗಳಿಗೆ ಬಿಸಿಸಿಐ ಸಿದ್ಧಪಡಿಸಿರುವ ಕೋವಿಡ್‌-19 ಸುರಕ್ಷಾ ಮಾರ್ಗಸೂಚಿ.

    ಯುಎಇಯಲ್ಲಿ ಈ ಬಾರಿ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಐಪಿಎಲ್‌ ನಡೆಸಲು ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಐಪಿಎಲ್‌ ಫ್ರಾಂಚೈಸಿಗಳು ಅಳವಡಿಸಿಕೊಳ್ಳಬೇಕಾದ ಕೋವಿಡ್‌ ಮಾರ್ಗಸೂಚಿಯನ್ನು ತಯಾರಿಸಿದ್ದು ಶೀಘ್ರವೇ ಎಲ್ಲ ತಂಡಗಳಿಗೆ ರವಾನಿಸಲಿದೆ.

    ಈಗಾಗಲೇ ಬಿಸಿಸಿಐ ಮನವಿಯನ್ನು ಸ್ವೀಕರಿಸಿರುವ ಎಮಿರೇಟ್ಸ್‌ ಕ್ರಿಕೆಟ್‌ ಬೋರ್ಡ್‌ ಐಪಿಎಲ್‌ ಆಯೋಜಿಸಲು ಒಪ್ಪಿಗೆ ನೀಡಿದೆ. ಐಪಿಎಲ್ -13 ಅನ್ನು ಯುಎಇಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಇಲ್ಲಿಯವರೆಗೆ ಅನುಮೋದನೆ ನೀಡಿಲ್ಲ

    ಎಸ್‌ಒಪಿಯಲ್ಲಿ ಏನಿದೆ?
    ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ರೂಪಿಸಿದ ಮಾನದಂಡಗಳ ಪ್ರಕಾರ ಬಿಸಿಸಿಐ ಎಸ್‌ಒಪಿ ಸಿದ್ಧಪಡಿಸಿದೆ. ಪಂದ್ಯಾವಳಿಯ ಪ್ರಾರಂಭದ ಎರಡು ವಾರಗಳ ಮೊದಲು ಪ್ರತಿ ಆಟಗಾರನು ನಾಲ್ಕು ಕೋವಿಡ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಎರಡು ಪರೀಕ್ಷೆ ನಿರ್ಗಮನಕ್ಕೆ ಮೊದಲು ಭಾರತದಲ್ಲಿ ನಡೆದರೆ ಇನ್ನು ಎರಡು ಯುಎಇಯಲ್ಲಿ ಕ್ವಾರಂಟೈನ್‌ ಆಗಿರುವಾಗ ನಡೆಯಬೇಕು.

    ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮದ ಜೊತೆ ಮಾತನಾಡಿ, ಮೈದಾನದಲ್ಲಿರುವ ಆಟಗಾರರು ಮಾತ್ರವಲ್ಲ, ಅವರ ಪತ್ನಿಯರು/ಗೆಳತಿಯರು, ಫ್ರ್ಯಾಂಚೈಸ್ ಮಾಲೀಕರು, ಚಾಲಕರು ಎಲ್ಲರೂ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಎಲ್ಲರಿಗೂ ನಿಯಮಗಳು ಅನ್ವಯವಾಗುತ್ತಿದ್ದು ‘ಬಯೋ ಬಬಲ್‌ʼ ಅನ್ನು ಯಾರೂ ಉಲ್ಲಂಘಿಸುವಂತಿಲ್ಲ ಎಂದು ತಿಳಿಸಿದ್ದಾರೆ.

    ಪತ್ನಿಯಂದಿರು, ಕುಟುಂಬದ ಸದಸ್ಯರು ಆಟಗಾರರ ಜೊತೆ ಬರಬೇಕೇ ಬೇಡವೇ ಎಂಬುದನ್ನು ಬಿಸಿಸಿಐ ನಿರ್ಧರಿಸುವುದಿಲ್ಲ. ಈ ಆಯ್ಕೆಯನ್ನು ಫ್ರಾಂಚೈಸಿಗೆ ನೀಡಲಾಗಿದೆ. ಒಂದು ಬಾರಿ ತಂಡದ ಜೊತೆ ಸಂಪರ್ಕಕ್ಕೆ ಬಂದರೆ ಎಲ್ಲರೂ ಮಾರ್ಗಸೂಚಿಯನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು.

    ತಂಡದ ಆಟಗಾರರು, ಸಿಬ್ಬಂದಿ ಒಂದು ಬಾರಿ ಹೋಟೆಲ್‌ನಲ್ಲಿ ವ್ಯವಸ್ಥೆ ಕಲ್ಪಿಸಿದ ಬಳಿಕ ಮತ್ತೆ ಹೋಟೆಲ್‌ ಬದಲಾವಣೆಗೆ ಅವಕಾಶವಿಲ್ಲ. ನೆಗೆಟಿವ್‌ ಬಂದಿರುವ ಹೋಟೆಲ್‌ ಸಿಬ್ಬಂದಿಗೆ ಮಾತ್ರ ಆಟಗಾರರ ಡ್ರೆಸ್ಸಿಂಗ್‌ ರೂಂಗೆ ಪ್ರವೇಶ ನೀಡಲಾಗುತ್ತದೆ. ಬಿಸಿಸಿಐ ಈಗಾಗಲೇ ಆಟಗಾರರ ಸುರಕ್ಷತೆ ದೃಷ್ಟಿಯಿಂದ ಕೋವಿಡ್‌ ನಿಯಮಗಳು ಪಾಲನೆ ಮಾಡಲು ಸಾಧ್ಯವಿರುವ ಹೋಟೆಲ್‌ಗಳನ್ನು ಬುಕ್‌ ಮಾಡುವಂತೆ ಫ್ರಾಂಚೈಸಿಗಳಿಗೆ ಸೂಚಿಸಿದೆ.

    ಅಭಿಮಾನಿಗಳಿಗೆ ಪ್ರವೇಶ ನೀಡಲಾಗುತ್ತಾ ಎಂಬ ಪ್ರಶ್ನೆಗೆ, ಟೂರ್ನಿಯ ಆರಂಭದಲ್ಲಿ ನಾವು ಈ ರಿಸ್ಕ್‌ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂದೆ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದರು.

    ಗಲ್ಫ್ ನ್ಯೂಸ್ ಪ್ರಕಾರ, ಯುಎಇಯಲ್ಲಿ ಬುಧವಾರ 375 ಮಂದಿಗೆ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೆ ಒಟ್ಟು 59,921 ಮಂದಿಗೆ ಸೋಂಕು ಬಂದಿದ್ದು, ಇಲ್ಲಿಯವರೆಗೆ 53,202 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ.

    ಏನಿದು ಬಯೋ ಬಬಲ್‌?
    ಕೋವಿಡ್‌ 19 ಬಳಿಕ ಈ ಬಯೋಬಬಲ್‌ ಪದ ಸಾಕಷ್ಟು ಸದ್ದು ಮಾಡುತ್ತಿದೆ. ಇಂಗ್ಲೆಂಡ್‌ ಕ್ರಿಕೆಟ್‌ ಬೋರ್ಡ್‌ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಇದನ್ನು ಅಳವಡಿಸಿತ್ತು. ಆಟಗಾರರು ಹೊರ ಪ್ರಪಂಚದದಿಂದ ಪ್ರತ್ಯೇಕವಾಗಿ ಸುರಕ್ಷಿತ ವಾತವರಣದಲ್ಲಿರುವ  ಪ್ರದೇಶವೇ ಬಯೋ ಬಬಲ್‌. ಈ ನಿರ್ಧಿಷ್ಟ ಪ್ರದೇಶದಲ್ಲಿ ಕೆಲವೇ ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಮಾಧ್ಯಮದರ ಪ್ರವೇಶಕ್ಕೂ ನಿರ್ಬಂಧ ಹೇರಲಾಗುತ್ತದೆ. ಈ ಜಾಗದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಬೇಕಾಗುತ್ತದೆ. ಉಷ್ಣಾಂಶ ತಪಾಸಣೆ, ಪ್ರತಿದಿನವೂ ಆರೋಗ್ಯದ ವರದಿಯನ್ನು ನಮೂದಿಸಬೇಕಾಗುತ್ತದೆ.

  • ಅನುಷ್ಕಾಳನ್ನು ಭೇಟಿಯಾಗದಿದ್ದರೆ ನಾನು ಬದಲಾಗುತ್ತಿರಲಿಲ್ಲ: ಪತ್ನಿಯನ್ನು ಹಾಡಿಹೊಗಳಿದ ವಿರಾಟ್

    ಅನುಷ್ಕಾಳನ್ನು ಭೇಟಿಯಾಗದಿದ್ದರೆ ನಾನು ಬದಲಾಗುತ್ತಿರಲಿಲ್ಲ: ಪತ್ನಿಯನ್ನು ಹಾಡಿಹೊಗಳಿದ ವಿರಾಟ್

    – ನನ್ನನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಿದ್ದು ಅನುಷ್ಕಾ

    ನವದೆಹಲಿ: ಅನುಷ್ಕಾಳನ್ನು ಭೇಟಿಯಾಗದಿದ್ದರೆ ಜೀವನದಲ್ಲಿ ನಾನು ಬದಲಾಗುತ್ತಿರಲಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಹೇಳಿದ್ದಾರೆ.

    ಕೊರೊನಾ ಲಾಕ್‍ಡೌನ್ ನಂತರ ಭಾರತ ಕ್ರಿಕೆಟ್ ತಂಡ ಯಾವುದೇ ಕ್ರಿಕೆಟ್ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಮನೆಯಲ್ಲೇ ಉಳಿದಿರುವ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದಾರೆ. ಈಗ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಜೊತೆ ‘ಓಫನ್ ನೆಟ್ಸ್ ವಿತ್ ಅಗರ್ವಾಲ್’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿರಾಟ್, ಪತ್ನಿಯನ್ನು ಹಾಡಿಹೊಗಳಿದ್ದಾರೆ.

    ನಾನು ನನ್ನ ಬವದಲಾವಣೆಯ ಪೂರ್ಣ ಪ್ರಮಾಣದ ಕ್ರೆಡಿಟ್ ಅನ್ನು ಅನುಷ್ಕಾಗೆ ನೀಡುತ್ತೇನೆ. ಆಕೆ ನನ್ನ ಬಾಳ ಸಂಗಾತಿಯಾಗಿರುವುದಕ್ಕೆ ನನಗೆ ಬಹಳ ಹೆಮ್ಮೆ ಇದೆ. ಜೀವನದಲ್ಲಿ ಮಾಡುವ ಒಳ್ಳೆಯ ಕೆಲಸಗಳು ಇನ್ನೂ ಮುಂದೆ ಬಹಳ ಇದೆ ಎಂದು ಆಕೆ ನನಗೆ ಮನವರಿಕೆ ಮಾಡಿಕೊಟ್ಟಿದ್ದಾಳೆ. ಒಬ್ಬ ಆಟಗಾರನಾಗಿ ನನ್ನ ಜವಾಬ್ದಾರಿ ಏನು? ನಾನು ಈಗಿರುವ ಸ್ಥಾನದಲ್ಲಿ ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಉತ್ತಮ ಗುಣಗಳ ಮೂಲಕ ಜನರಿಗೆ ಒಳ್ಳೆಯ ಮಾದರಿಯಾಗಿರಬೇಕು ಎಂಬುದೆಲ್ಲವನ್ನು ಕಲಿಸಿ ಕೊಟ್ಟವಳು ಅನುಷ್ಕಾ ಎಂದು ವಿರಾಟ್ ತಿಳಿಸಿದ್ದಾರೆ.

    ನಾನು ಅನುಷ್ಕಾಳನ್ನು ಭೇಟಿ ಮಾಡದಿದ್ದರೆ ನಾನು ಮುಕ್ತ ವ್ಯಕ್ತಿಯಾಗುತ್ತಿರಲಿಲ್ಲ. ನನ್ನ ಸ್ವಭಾವ ತುಂಬಾ ಕಠಿಣವಾಗಿದ್ದರಿಂದ ನಾನು ಬದಲಾಗುತ್ತಿರಲಿಲ್ಲ. ಆದರೆ ಇಂದು ಅವಳು ಒಳ್ಳೆಯ ವ್ಯಕ್ತಿಯಾಗಿ ನನ್ನನ್ನು ಬದಲಾಯಿಸಿದ್ದಾಳೆ ಎಂದು ಪತ್ನಿ ಅನುಷ್ಕಾ ಶರ್ಮಾರನ್ನ ವಿರಾಟ್ ಹಾಡಿಹೊಗಳಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ನಾನು ಅನುಷ್ಕಾಳಿಗಾಗಿ ಅವಳ ಹುಟ್ಟುಹಬ್ಬದ ದಿನ ಕೇಕ್ ಮಾಡಿದ್ದೆ ಎಂದು ಕೊಹ್ಲಿ ತಿಳಿಸಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ಕಳೆದ ಮಾರ್ಚ್‍ನಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದಕ್ಕೆ ಹೋಗಿತ್ತು. ಈಗ ಈ ವರ್ಷದ ಐಪಿಎಲ್ ಅನ್ನು ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. ಎಂದಿನಂತೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ)ಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 177 ಪಂದ್ಯಗಳನ್ನು ಆಡಿದ್ದಾರೆ.

    ಐಪಿಎಲ್‍ನಲ್ಲಿ ಬ್ಯಾಟ್ಸ್ ಮ್ಯಾನ್ ಆಗಿ ಉತ್ತಮ ಸಾಧನೆ ಮಾಡಿರುವ ಕೊಹ್ಲಿ, ಐಪಿಎಲ್‍ನಲ್ಲಿ 37.84ರ ಸರಾಸರಿಯೊಂದಿಗೆ ಒಟ್ಟು 5,412 ರನ್ ಗಳಿಸಿದ್ದಾರೆ ಮತ್ತು 131.61 ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದಾರೆ. ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ ಐದು ಶತಕ ಮತ್ತು ಮೂವತ್ತಾರು ಅರ್ಧಶತಕ ಗಳಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಇದುವರೆಗೆ ನಾಯಕನಾಗಿ ಅವರು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ.

  • ಸೆ.19ರಿಂದ ಐಪಿಎಲ್ ಟೂರ್ನಿ ಆರಂಭ- ನ.8 ರಂದು ಫೈನಲ್

    ಸೆ.19ರಿಂದ ಐಪಿಎಲ್ ಟೂರ್ನಿ ಆರಂಭ- ನ.8 ರಂದು ಫೈನಲ್

    -51 ದಿನ, 60 ಪಂದ್ಯ ನಡೆಯಲಿದೆ: ಬ್ರಿಜೇಶ್ ಪಟೇಲ್

    ನವದೆಹಲಿ: ಬಹು ನಿರೀಕ್ಷಿತ 2020ರ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ ಎಂದು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಘೋಷಿಸಿದ್ದಾರೆ.

    ಟೂರ್ನಿಯ ಕುರಿತ ಅಂತಿಮ ವಿವರಗಳನ್ನು ಹಾಗೂ ವೇಳಾಪಟ್ಟಿಯನ್ನು ಅನುಮೋದಿಸಲು ಮುಂದಿನ ವಾರ ಆಡಳಿತ ಮಂಡಳಿ ಸಭೆ ನಡೆಸಲಾಗುತ್ತದೆ. ಬಿಸಿಸಿಐ ಟೂರ್ನಿ ಯೋಜನೆಯ ಬಗ್ಗೆ ಅನೌಪಚಾರಿಕವಾಗಿ ಈಗಾಗಲೇ ಐಪಿಎಲ್ ಫ್ರಾಂಚೈಸಿಗಳಿಗೆ ತಿಳಿಸಿದೆ ಎಂಬ ಮಾಹಿತಿ ಲಭಿಸಿದೆ.

    ಶೀಘ್ರವೇ ಆಡಳಿತ ಸಮಿತಿ ಸಭೆ ಕರೆದು ವೇಳಾಪಟ್ಟಿಯನ್ನು ಫೈನಲ್ ಮಾಡಲಾಗುವುದು. ಟೂರ್ನಿ ಸೆ.19 ರಿಂದ ನ.8ರ ವರೆಗೂ ನಡೆಯಲಿದೆ. ಸರ್ಕಾರ ಅನುಮತಿಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. 60 ಪಂದ್ಯ, 51 ದಿನ ಯಾವುದೇ ಪಂದ್ಯಗಳ ಖಡಿತವಿಲ್ಲದೇ ಸಂಪೂರ್ಣ ಟೂರ್ನಿ ನಡೆಯಲಿದೆ ಎಂದು ಬ್ರಿಜೇಶ್ ಪಟೇಲ್ ಸುದ್ದಿ ಸಂಸ್ಛೆ ಪಿಟಿಐ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಐಸಿಸಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಅವಧಿಯಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ಟೂರ್ನಿಯನ್ನು ಮುಂದೂಡಿದ ವೇಳೆಯೇ ಐಪಿಎಲ್ ಟೂರ್ನಿ ನಡೆಯುವುದು ಖಚಿತವಾಗಿತ್ತು. ಭಾರತದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟೂರ್ನಿ ಯುಎಇನಲ್ಲಿ ನಡೆಯಲಿದೆ. ಉಳಿದಂತೆ ಟೂರ್ನಿಯಲ್ಲಿ 5 ಡಬಲ್ ಶೆಡ್ಯೂಲ್ ಪಂದ್ಯಗಳು ಮಾತ್ರ ನಡೆಯುವ ಅವಕಾಶವಿದೆ.

  • ಐಪಿಎಲ್‍ಗೂ ಮುನ್ನ ಭಾರತ, ದಕ್ಷಿಣ ಆಫ್ರಿಕಾ ನಡುವೆ ಟಿ20 ಸರಣಿ?

    ಐಪಿಎಲ್‍ಗೂ ಮುನ್ನ ಭಾರತ, ದಕ್ಷಿಣ ಆಫ್ರಿಕಾ ನಡುವೆ ಟಿ20 ಸರಣಿ?

    ಮುಂಬೈ: ಐಪಿಎಲ್ 2020ರ ಆವೃತ್ತಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಪಂದ್ಯದ ತರಬೇತಿಗಾಗಿ ಅಂತಾರಾಷ್ಟ್ರೀಯ ಟಿ20 ಸರಣಿಯೊಂದನ್ನು ನಿರ್ವಹಿಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸ್ಟೇಕ್ ಹೋಲ್ಡರ್ಸ್ ಒತ್ತಡ ತಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕೊರೊನಾ ಕಾರಣದಿಂದ ಕಳೆದ ಮಾರ್ಚ್ ತಿಂಗಳಿನಿಂದ ಆಟಗಾರರು ಮನೆಯಲ್ಲೇ ಉಳಿದಿದ್ದಾರೆ. ಅಲ್ಲದೇ ಕೇವಲ ನೆಟ್ ತರಬೇತಿ ಮಾತ್ರ ಪಡೆದಿದ್ದಾರೆ. ಪರಿಣಾಮ ನೆಟ್ ತರಬೇತಿ ಪಡೆದು ಐಪಿಎಲ್‍ನಲ್ಲಿ ಆಟಗಾರರು ಫಾರ್ಮ್‍ಗೆ ಮರಳುವುದು ಕಷ್ಟಸಾಧ್ಯವಾಗಲಿದೆ ಎಂಬುವುದು ಸ್ಟೇಕ್ ಹೋಲ್ಡರ್ಸ್ ಅಭಿಪ್ರಾಯವಾಗಿದೆ. ಆದ್ದರಿಂದ ಆಗಸ್ಟ್ ನಲ್ಲಿ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ ಆಡುವ ಸಾಧ್ಯತೆ ಇದೆ. ಇದನ್ನೂ ಓದಿ: ಸೆಪ್ಟೆಂಬರ್ 26 ರಿಂದ ಐಪಿಎಲ್ ಆರಂಭ..!

    ಈಗಾಗಲೇ ಬಿಸಿಸಿಐ ಸೆ.26 ರಿಂದ ನ.8 ವರೆಗೆ ದುಬೈನಲ್ಲಿ ಐಪಿಎಲ್ ಟೂರ್ನಿ ನಡೆಸಲು ಚಿಂತನೆ ನಡೆಸಿದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಟೂರ್ನಿಯನ್ನು ಶೆಡ್ಯೂಲನ್ನು ಬಿಸಿಸಿಐ ಬಿಡುಗಡೆ ಮಾಡಲಿದೆ. ಆದ್ದರಿಂದ ಐಪಿಎಲ್ ಸರಣಿಗೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಟಿ20 ಸರಣಿ ಆಯೋಜಿಸುವ ಒತ್ತಡ ಬಿಸಿಸಿಐ ಮೇಲಿದೆ.

    ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮಾರ್ಚ್‍ನಲ್ಲಿ ಮೂರು ಪಂದ್ಯಗಳ ಟಿ20 ಸರಣಿ ನಡೆಯಬೇಕಾಗಿತ್ತು. ಆದರೆ ಮೊದಲ ಪಂದ್ಯ ಮಳೆಯಿಂದ ರದ್ದಾದರೆ, ಉಳಿದ 2 ಪಂದ್ಯಗಳನ್ನು ಕೊರೊನಾ ಕಾರಣದಿಂದ ಬಿಸಿಸಿಐ ಮುಂದೂಡಿತ್ತು. ಆ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಬ್ರೇಕ್ ಬಿದ್ದಿತ್ತು. ಪರಿಣಾಮ ಬಿಸಿಸಿಐ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರ್ ಆರಂಭಿಸುವ ಚಿಂತನೆ ಹೊಂದಿದ್ದು, ದುಬೈನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಯೋಜಿಸುವ ಸಾಧ್ಯತೆ ಇದೆ.

    ಇತ್ತ ಬಿಸಿಸಿಐ ಒಪ್ಪಂದ ಹೊಂದಿರುವ ಆಟಗಾರರಿಗೆ ಅಹ್ಮದಾಬಾದ್‍ನಲ್ಲಿ ತರಬೇತಿ ಶಿಬಿರ ಆಯೋಜಿಸುವ ಸಾಧ್ಯತೆ ಇದೆ. ಕೇವಲ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಆಟಗಾರರು ಮನೆಯಲ್ಲಿ ದೇಹ ದಂಡಿಸುತ್ತಿದ್ದರು. ಬಿಸಿಸಿಐ ಶಿಬಿರ ಆಟಗಾರರಿಗೆ ಕ್ರಿಕೆಟ್‍ಗೆ ಮರಳಲು ಅವಕಾಶ ನೀಡಲಿದೆ.

  • ಸೆಪ್ಟೆಂಬರ್ 26 ರಿಂದ ಐಪಿಎಲ್ ಆರಂಭ..!

    ಸೆಪ್ಟೆಂಬರ್ 26 ರಿಂದ ಐಪಿಎಲ್ ಆರಂಭ..!

    ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿದ ಬೆನ್ನಲ್ಲೇ ಐಪಿಎಲ್ ಆರಂಭಕ್ಕಾಗಿ ಕ್ರಿಕೆಟ್ ಆಭಿಮಾನಿಗಳು ಕಾತುರರಾಗಿದ್ದಾರೆ.

    ಟಿ20 ವಿಶ್ವಕಪ್ ಮುಂದೂಡುವುದು ಖಚಿತ ಎಂದು ತಿಳಿದಿದ್ದ ಬಿಸಿಸಿಐ ಐಪಿಎಲ್ ನಡೆಯುವ ವೇದಿಕೆ ಹಾಗೂ ದಿನಾಂಕವನ್ನು ನಿಗದಿ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿತ್ತು. ಅಲ್ಲದೇ ಫ್ರಾಂಚೈಸಿಗಳಿಗೆ ಸೆ.26 ರಿಂದ ನ.8 ಅವಧಿಯಲ್ಲಿ ಯುಎಇ ನಲ್ಲಿ ಟೂರ್ನಿ ಆಯೋಜಿಸುವ ಕುರಿತು ಮಾಹಿತಿ ನೀಡಿದೆ ಎನ್ನಲಾಗಿದೆ. ಆದರೆ ಆಟಗಾರರ ವೀಸಾ, ಪ್ರಯಾಣಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಅನುಮತಿಗಾಗಿ ಬಿಸಿಸಿಐ ಕಾಯುತ್ತಿದೆ. ಸರ್ಕಾರ ಅನುಮತಿ ನೀಡಿದ ಕೂಡಲೇ ಐಪಿಎಲ್ ಆರಂಭವಾಗುವ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ.

    2020ರ ಆವೃತ್ತಿಯನ್ನು 44 ದಿನಗಳ ಅವಧಿಯಲ್ಲಿ 60 ಪಂದ್ಯಗಳನ್ನು ನಿರ್ವಹಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಟೂರ್ನಿಯ ಅವಧಿಯನ್ನು ಮತ್ತೊಂದು ವಾರ ವಿಸ್ತರಿಸಲು ಟೂರ್ನಿಯ ಪ್ರಸಾರ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಬೇಡಿಕೆ ಇಟ್ಟಿದೆ. ಏಕೆಂದರೆ ನ.15ರ ವರೆಗೂ ಟೂರ್ನಿ ನಡೆದರೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮತ್ತಷ್ಟು ಜಾಹೀರಾತು ಪಡೆಯುವುದು ವಾಹಿನಿಯ ಉದ್ದೇಶವಾಗಿದೆ. ಆದರೆ ವಾಹಿನಿಯ ಬೇಡಿಕೆಗೆ ಬಿಸಿಸಿಐ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ.

    ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಬೇಡಿಕೆಗೆ ಬಿಸಿಸಿಐ ಒಪ್ಪಿಗೆ ಸೂಚಿಸದಿರಲು ಪ್ರಮುಖ ಕಾರಣವಿದ್ದು, ನ.15ರ ವರೆಗೂ ಟೂರ್ನಿ ನಡೆದರೆ ಡಿ.3 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ಆಟಗಾರರು ಸಿದ್ಧತೆ ನಡೆಸಲು ಕಡಿಮೆ ಸಮಯದ ಲಭಿಸಲಿದೆ. ಇತ್ತ ಕೇಂದ್ರ ಯುಎಇನಲ್ಲಿ ಟೂರ್ನಿ ನಡೆಸಲು ಕೇಂದ್ರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಆಟಗಾರರಿಗೆ ಅಲ್ಲಿ ಕ್ಯಾಂಪ್ ಪ್ರಾರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಮುಂದಿನ ವಾರ ಬಿಸಿಸಿಐ ಆಡಳಿತ ಸಮಿತಿ ಸಭೆ ನಡೆಯಲಿದ್ದು, 2020ರ ಐಪಿಎಲ್ ಆವೃತ್ತಿಯ ಶೆಡ್ಯೂಲ್ ಹಾಗೂ ಎಲ್ಲಿ ಟೂರ್ನಿ ನಡೆಯಬೇಕು ಎಂಬ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ.

  • ಐಪಿಎಲ್‍ನಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಹೊರಹಾಕಿದ್ದಕ್ಕೆ ಬಿಸಿಸಿಐಗೆ 4,800 ಕೋಟಿ ದಂಡ

    ಐಪಿಎಲ್‍ನಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಹೊರಹಾಕಿದ್ದಕ್ಕೆ ಬಿಸಿಸಿಐಗೆ 4,800 ಕೋಟಿ ದಂಡ

    – ಬಿಸಿಸಿಐ ಮಾಡಿದ ಎಡವಟ್ಟೇನು?

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಯಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಹೊರಹಾಕಿದ್ದಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಈಗ 4800 ಕೋಟಿ ದಂಡ ಕಟ್ಟುವ ಪರಿಸ್ಥಿತಿ ಎದುರಾಗಿದೆ.

    2012ರಲ್ಲಿ ಐಪಿಎಲ್ ತಂಡದಿಂದ ಬಿಸಿಸಿಐ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಕೈಬಿಟ್ಟಿತ್ತು. ಐಪಿಎಲ್ ನಿಯಮಾವಳಿಗಳನ್ನು ಡೆಕ್ಕನ್ ಚಾರ್ಜರ್ಸ್ ತಂಡ ಉಲ್ಲಂಘನೆ ಮಾಡಿದೆ ಎಂದು ಬಿಸಿಸಿಐ ಐಪಿಎಲ್‍ನಲ್ಲಿ ಒಂದು ಬಾರಿ ಚಾಂಪಿಯನ್ ಆಗಿದ್ದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಅಮಾನತು ಮಾಡಿತ್ತು. ಇದನ್ನು ಪ್ರಶ್ನಿಸಿ ತಂಡದ ಫ್ರಾಂಚೈಸಿ ಕೋರ್ಟ್ ಮೊರೆ ಹೋಗಿತ್ತು.

    ವರದಿಯ ಪ್ರಕಾರ ಐಪಿಎಲ್‍ನಲ್ಲಿ ಮುಂದುವರೆಯಲು ಡೆಕ್ಕನ್ ಚಾರ್ಜರ್ಸ್ ತಂಡ ಬಿಸಿಸಿಐಗೆ 100 ಕೋಟಿ ಹಿಂದಿರುಗಿಸಲಾಗದ ಹಣವನ್ನು ಕಟ್ಟಬೇಕಿತ್ತು. ಆದರೆ ಬಿಸಿಸಿಐ ನೀಡಿದ ಅವದಿಯೊಳಗೆ ಫ್ರಾಂಚೈಸಿ ಹಣವನ್ನು ಕಟ್ಟುವಲ್ಲಿ ವಿಫಲವಾಗಿತ್ತು. ಇದರಿಂದ ಬಿಸಿಸಿಐ ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ ಶೋಕಾಸ್ ನೋಟಿಸ್ ನೀಡಿ, 30 ದಿನದ ಒಳಗೆ ಈ ಹಣವನ್ನು ಕಟ್ಟುವಂತೆ ತಂಡಕ್ಕೆ ಗಡುವು ನೀಡಿತ್ತು. ಆದರೆ ಅವದಿ ಮುಗಿಯಲು ಇನ್ನೂ ಒಂದು ದಿನ ಬಾಕಿ ಇರುವಾಗಲೇ 29 ದಿನಕ್ಕೆ ಸಭೆ ಮಾಡಿದ್ದ ಬಿಸಿಸಿಐ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಐಪಿಎಲ್‍ನಿಂದ ಹೊರ ಹಾಕಿತ್ತು. ಜೊತೆಗೆ ದಂಡನ್ನು ವಿಧಿಸಿತ್ತು.

    ನಮ್ಮ ಕಕ್ಷೀದಾರರಾದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದವನ್ನು ಹಣ ಕಟ್ಟಲು ನೀಡಿದ ಅವದಿ ಮುಗಿಯು ಮುನ್ನವೇ ಟೂರ್ನಿಯಿಂದ ಅಮಾನತು ಮಾಡಲಾಗಿದೆ. ಇದರಿಂದ ನಮ್ಮ ತಂಡಕ್ಕೆ ಬಹಳ ಆರ್ಥಿಕ ನಷ್ಟವಾಗಿದೆ. ಈ ನಷ್ಟವನ್ನು ನಮ್ಮ ಮಾಲೀಕರಿಗೆ ಬಿಸಿಸಿಐ ಬಡ್ಡಿ ಸಮೇತ ತುಂಬಿಕೊಂಡಬೇಕು ಎಂದು ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಪರ ವಕೀಲರಾದ ಧೀರ್ ಅಂಡ್ ಧೀರ್ ಅಸೋಸಿಯೇಟ್ಸ್ ಸಂಸ್ಥೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.

    ಈ ಪ್ರಕರಣವನ್ನು ವಿಚಾರಣೆ ಮಾಡಲು ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿಕೆ ಠಾಕೂರ್ ಅವರನ್ನು ಮಧ್ಯಸ್ಥಿಕೆ ನ್ಯಾಯಮೂರ್ತಿಗಳಾಗಿ ನೇಮಿಸಿತ್ತು. ಈ ಮಧ್ಯೆ ಡೆಕ್ಕನ್ ಚಾರ್ಜರ್ಸ್ ತಂಡ ನಮಗೆ 6,046 ಕೋಟಿ ರೂಗಳ ನಷ್ಟವಾಗಿದ್ದು, ಅದನ್ನು ಬಡ್ಡಿ ಸಮೇತ ವಾಪಸ್ ಕೋಡಿಸಬೇಕು ಎಂದು ಕೋರ್ಟಿಗೆ ಮನವಿ ಮಾಡಿತ್ತು. ಜೊತೆಗೆ ಬಿಸಿಸಿಐ ನೀಡಿದ್ದ 30 ದಿನದ ಅವದಿಯ ಕೊನೆಯ ದಿನ ನಮ್ಮ ಕಕ್ಷೀದಾರರು ಬಿಸಿಸಿಐ ಹೇಳಿದ್ದ ಹಣವನ್ನು ಕಟ್ಟಲು ಸಿದ್ಧವಿದ್ದರು ಎಂದು ಫ್ರಾಂಚೈಸಿ ಪರ ವಕೀಲರು ವಾದಿಸಿದ್ದರು.

    ಈ ಪ್ರಕರಣದ ವಿಚಾರವಾಗಿ 2017ರಲ್ಲೇ ವಿಚಾರಣೆ ಮುಗಿಸಿದ್ದ ಬಾಂಬೆ ಹೈಕೋರ್ಟ್ ಇಂದು ತನ್ನ ತೀರ್ಪುನ್ನು ನೀಡಿದೆ. ಈ ತೀರ್ಪಿನ ಪ್ರಕಾರ ಬಿಸಿಸಿಐ ತಾನು ಕೊಟ್ಟಿದ್ದ 30 ದಿನದ ಕಾಲವಕಾಶವನ್ನು ತಂಡ ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಲು ಅವಕಾಶ ನೀಡಬೇಕಿತ್ತು. ಕೊಟ್ಟ ಅವದಿಗೂ ಮುನ್ನವೇ ತಂಡವನ್ನು ಅಮಾನತು ಮಾಡಿದ್ದು ತಪ್ಪು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಬಿಸಿಸಿಐ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಮಾಲೀಕರಿಗೆ ಆದ ನಷ್ಟವನ್ನು ಬಡ್ಡಿ ಸಮೇತ ತುಂಬಿ ಕೋಡಬೇಕು. ಜೊತೆಗೆ ವಿಚಾರಣೆಗಾಗಿ ತಂಡ ಖರ್ಚು ಮಾಡಿರುವ 50 ಲಕ್ಷ ರೂಗಳನ್ನು ಬಿಸಿಸಿಐ ಭರಿಸಬೇಕು ಎಂದು ಹೇಳಿದೆ.

    ಈ ಪ್ರಕರಣದಲ್ಲಿ ಬಿಸಿಸಿಐಗೆ ಕೂಡ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಕೋರ್ಟ್ ನೀಡಿದೆ. ಆದರೆ ಇನ್ನು ಈ ಬಗ್ಗೆ ಬಿಸಿಸಿಐ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

  • ಐಪಿಎಲ್‍ಗೆ ಅತಿಥ್ಯ- ಟ್ವಿಸ್ಟ್ ಕೊಟ್ಟ ನ್ಯೂಜಿಲೆಂಡ್

    ಐಪಿಎಲ್‍ಗೆ ಅತಿಥ್ಯ- ಟ್ವಿಸ್ಟ್ ಕೊಟ್ಟ ನ್ಯೂಜಿಲೆಂಡ್

    ನವದೆಹಲಿ: 2020ರ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜಿಸಲು ಅತಿಥ್ಯ ವಹಿಸಿಕೊಳ್ಳುತ್ತೇವೆ ಎಂದು ನಾವು ಹೇಳಿಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಸ್ಪಷ್ಟನೆ ನೀಡಿದ್ದು, ಆ ಮೂಲಕ ಬಿಸಿಸಿಐ ವಕ್ತಾರರ ಹೇಳಿಕೆಗೆ ಟ್ವಿಸ್ಟ್ ನೀಡಿದೆ.

    ಟಿ20 ವಿಶ್ವಕಪ್ ಟೂರ್ನಿ ಕೊರೊನಾ ಕಾರಣದಿಂದ ಮುಂದೂಡುವ ಸೂಚನೆ ಲಭಿಸಿರುವುದರಿಂದ ಆ ಅವಧಿಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಭಾರತದಲ್ಲಿ ಅಕ್ಟೋಬರ್-ನವೆಂಬರ್ ವೇಳೆಗೆ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದೇಶದಲ್ಲಿ ಟೂರ್ನಿ ಆಯೋಜಿಸುವ ಚಿಂತನೆ ಬಿಸಿಸಿಐ ಮುಂದಿದೆ.

    ಇತ್ತೀಚೆಗಷ್ಟೇ ಈ ಕುರಿತು ಸ್ಪಷ್ಟನೆ ನೀಡಿದ್ದ ಬಿಸಿಸಿಐ ವಕ್ತಾರರು, ಯುಎಇ, ಶ್ರೀಲಂಕಾ ಸೇರಿದಂತೆ ನ್ಯೂಜಿಲೆಂಡ್ ಕೂಡ ಐಪಿಎಲ್ ಆಯೋಜಿಸಲು ಮನವಿ ಮಾಡಿದೆ ಎಂದಿದ್ದರು. ಆದರೆ ಬಿಸಿಸಿಐನ ಈ ಹೇಳಿಕೆಯನ್ನು ತಿರಸ್ಕರಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ವಕ್ತಾರ ರಿಚರ್ಡ್, ನಾವು ಐಪಿಎಲ್ ಆಯೋಜಿಸುವ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಐಪಿಎಲ್ ಅತಿಥ್ಯ ವಹಿಸಿಕೊಳ್ಳುವ ಬಗ್ಗೆ ಬಿಸಿಸಿಐಗೆ ನ್ಯೂಜಿಲೆಂಡ್ ಕ್ರಿಕೆಟ್ ಯಾವುದೇ ಪ್ರಸ್ತಾವನೆ ಸಲ್ಲಿಕೆ ಮಾಡಿಲ್ಲ. ಇಂತಹ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ. ಈ ವಿಚಾರವಾಗಿ ನಾವು ಬಿಸಿಸಿಐನೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ರಿಚರ್ಡ್ ಹೇಳಿದ್ದಾರೆ.

    ಭಾರತದಲ್ಲಿ 2009 ಸಾರ್ವತ್ರಿಕ ಚುನಾವಣೆ ಕಾರಣದಿಂದ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲಾಗಿತ್ತು. 2014ರ ಚುನಾವಣೆ ವೇಳೆಯೂ ಕೆಲ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಉಳಿದಂತೆ ಐಪಿಎಲ್‍ನ ಎಲ್ಲಾ ಆವೃತ್ತಿಗಳು ಭಾರತದಲ್ಲೇ ಆಯೋಜಿಸಲಾಗಿದೆ.