Tag: IPL

  • ಸಿಎಸ್‍ಕೆ ತಂಡದ ಬೌಲರ್ ಸೇರಿ 12 ಮಂದಿ ಸಹಾಯ ಸಿಬ್ಬಂದಿಗೆ ಕೊರೊನಾ

    ಸಿಎಸ್‍ಕೆ ತಂಡದ ಬೌಲರ್ ಸೇರಿ 12 ಮಂದಿ ಸಹಾಯ ಸಿಬ್ಬಂದಿಗೆ ಕೊರೊನಾ

    – ಐಪಿಎಲ್ ಮೇಲೆ ಕೊರೊನಾ ಕರಿನೆರಳು

    ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)2020ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ಮತ್ತು ತಂಡದ 12 ಮಂದಿ ಸಹಾಯಕ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಕೊರೊನಾ ಕಾಣಿಸಿಕೊಂಡ ಚೆನ್ನೈ ತಂಡದ ಎಲ್ಲ ಆಟಗಾರರ ಆರೋಗ್ಯ ಸ್ಥಿರವಾಗಿದ್ದು, ಎಲ್ಲರನ್ನೂ ಐಸೊಲೇಶನ್ ಮಾಡಲಾಗಿದೆ. ಆರೋಗ್ಯ ಅಧಿಕಾರಿಗಳ ನಿರ್ದೇಶನದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಲ್ಲಾ ಸುರಕ್ಷತಾ ಪ್ರೋಟೋಕಾಲ್‍ಗಳನ್ನು ಅನುಸರಿಸುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಂದಿಲ್ಲ.

    ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗಸ್ಟ್ 21ರಂದೇ ಯುಎಇಗೆ ತೆರಳಿತ್ತು. ಎಂದಿನಂತೆ ಎಲ್ಲ ಆಟಗಾರರಿಗೆ ಭಾರತದಲ್ಲೂ ಕೂಡ ಒಂದು ಬಾರಿ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅಂತೆಯೇ ಯುಎಇಗೆ ತೆರಳಿದ ತಂಡ ಅಲ್ಲಿ ಆರು ದಿನಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಿತ್ತು. ಇಂದಿಗೆ ಆ ಅವಧಿ ಮುಗಿಯಲಿದ್ದು, ಇಂದು ಚೆನ್ನೈ ತಂಡ ಅಭ್ಯಾಸ ನಡೆಸಬೇಕಿತ್ತು. ಆದರೆ ಇಂದು ಮಾಡಿದ ಕೊರೊನಾ ಟೆಸ್ಟ್ ನಲ್ಲಿ ತಂಡದ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಸೇರಿದಂತೆ ಬಹುತೇಕ ತಂಡಗಳು ಯುಎಇಯಲ್ಲಿ ಅಭ್ಯಾಸವನ್ನು ಆರಂಭ ಮಾಡಿವೆ. ಅಂತಯೇ ಚೆನ್ನೈ ಕೂಡ ಇಂದು ಅಭ್ಯಾಸದಲ್ಲಿ ತೊಡಗಬೇಕಿತ್ತು. ಆದರೆ ಈಗ ಸದ್ಯಕ್ಕೆ ಚೆನ್ನೈ ತಂಡ ಮತ್ತೆ ಮುಂದಿನ ಆರು ದಿನಗಳು ಕ್ವಾರಂಟೈನ್ ಆಗಬೇಕಿದೆ. ಚೆನ್ನೈ ತಂಡ ಸೆಪ್ಟೆಂಬರ್ 1ರಿಂದ ಅಭ್ಯಾಸ ನಡೆಸುವುದಾಗಿ ಹೇಳಿಕೊಂಡಿದೆ.

    ಕೊರೊನಾ ವೈರಸ್ ಕಾರಣದಿಂದಲೇ ಕಳೆದ ಮಾರ್ಚ್‍ನಲ್ಲೇ ನಡೆಯಬೇಕಿದ್ದ, ಐಪಿಎಲ್-2020 ಮುಂದಕ್ಕೆ ಹೋಗಿತ್ತು. ಭಾರತದಲ್ಲಿ ಕೊರೊನಾ ಹಿಡಿತಕ್ಕೆ ಸಿಗದ ಹಿನ್ನೆಲೆ ಸೋಂಕಿನ ಪ್ರಮಾಣ ಕಮ್ಮಿ ಇರುವ ಯುಎಇಯಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. ಅಂತೆಯೇ ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನವೇ ಐಪಿಎಲ್ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ.

  • 48ನೇ ವಯಸ್ಸಿನಲ್ಲಿ ಸಿಪಿಎಲ್ ಟೂರ್ನಿಗೆ ಪಾದಾರ್ಪಣೆ – ದಾಖಲೆ ಬರೆದ ತಾಂಬೆ

    48ನೇ ವಯಸ್ಸಿನಲ್ಲಿ ಸಿಪಿಎಲ್ ಟೂರ್ನಿಗೆ ಪಾದಾರ್ಪಣೆ – ದಾಖಲೆ ಬರೆದ ತಾಂಬೆ

    ನವದೆಹಲಿ: ಭಾರತದ ದೇಶೀಯ ಕ್ರಿಕೆಟ್ ಆಟಗಾರ ಪ್ರವೀಣ್ ತಾಂಬೆಯವರು ತಮ್ಮ 48ನೇ ವಯಸ್ಸಿನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟೂರ್ನಿಗೆ ಪಾದಾರ್ಪಣೆ ಮಾಡಿದ್ದಾರೆ.

    ಸಿಪಿಎಲ್-2020 ಕೊರೊನಾ ವೈರಸ್ ಕಾರಣದಿಂದ ಮುಂದಕ್ಕೆ ಹೋಗಿತ್ತು. ಆದರೆ ಸಿಪಿಎಲ್‍ನ 8ನೇ ಅವೃತ್ತಿ ಅಗಸ್ಟ್ 18ರಿಂದ ಆರಂಭವಾಗಿದೆ. 2013ರಲ್ಲಿ ಅಧಿಕೃತವಾಗಿ ಆರಂಭಗೊಂಡ ಈ ಟೂರ್ನಿಯಲ್ಲಿ ಪ್ರಪಂಚದ ವಿವಿಧ ದೇಶದ ಕ್ರಿಕೆಟ್ ಆಟಗಾರರು ಭಾಗವಹಿಸುತ್ತಾರೆ. ಆದರೆ ಇಲ್ಲಿಯವರೆಗೂ ಯಾವೊಬ್ಬ ಭಾರತೀಯ ಕ್ರಿಕೆಟ್ ಆಟಗಾರನೂ ಈ ಟೂರ್ನಿಯಲ್ಲಿ ಆಡಿರಲಿಲ್ಲ.

    ಆದರೆ ಕೇವಲ ಐಪಿಎಲ್ ಮತ್ತು ದೇಶೀಯ ಟೂರ್ನಿಯಲ್ಲಿ ಗುರುತಿಸಿಕೊಂಡ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆಯವರು, ಮೊಟ್ಟ ಮೊದಲನೇ ಬಾರಿಗೆ ಸಿಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಭಾರತದಿಂದ ಸಿಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಪ್ರವೀಣ್ ತಾಂಬೆಯವರು ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಲಿದ್ದಾರೆ.

    ಭಾರತದ ಮೊದಲ ಆಟಗಾರ ಸಿಪಿಎಲ್‍ನಲ್ಲಿ ಭಾಗವಹಿಸುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ಸಿಪಿಎಲ್ ಟೂರ್ನಿ ಆಡಳಿತ ಮಂಡಳಿ, ಸಿಪಿಎಲ್‍ಗೆ ನಿಮಗೆ ಸುಸ್ವಾಗತ ಭಾರತ. 48 ವರ್ಷದ ಪ್ರವೀಣ್ ತಾಂಬೆಯವರನ್ನು ಮೊದಲ ಬಾರಿಗೆ ಹೀರೋ ಸಿಪಿಎಲ್‍ನಲ್ಲಿ ನೋಡಲು ನಾವು ಸಂತೋಷಪಡುತ್ತೇವೆ ಎಂದು ಬರೆದುಕೊಂಡಿದೆ. ಸಿಪಿಎಲ್‍ನಲ್ಲಿ ತಾಂಬೆ ಟ್ರಿನ್‍ಬಾಗೊ ನೈಟ್ ರೈಡರ್ಸ್ ಪರವಾಗಿ ಆಡಲಿದ್ದಾರೆ.

    ಪ್ರವೀಣ್ ವಿಜಯ್ ತಾಂಬೆಯವರು ಭಾರತೀಯ ದೇಶೀಯ ಕ್ರಿಕೆಟಿಗರಾಗಿದ್ದು, ತಮ್ಮ 41ನೇ ವಯಸ್ಸಿನಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. 2013ರ ಮೇನಲ್ಲಿ ನಡೆದ ದೆಹಲಿ ಡೇರ್ ಡೆವಿಲ್ಸ್ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಮೊದಲ ಪಂದ್ಯವನ್ನು ಆಡಿದ್ದರು. ಈ ಮೂಲಕ ಐಪಿಎಲ್ ಆಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. ಐಪಿಎಲ್‍ನಲ್ಲಿ 33 ಪಂದ್ಯಗಳನ್ನು ಆಡಿರುವ ತಂಬೆ 28 ವಿಕೆಟ್ ಗಬಳಿಸಿದ್ದಾರೆ. ಸದ್ಯ ನ್ಯೂ ಬಾಂಬೆಯ ಡಿವೈ ಪಾಟೀಲ್ ಸ್ಪೋಟ್ರ್ಸ್ ಅಕಾಡೆಮಿ ಬಿ ತಂಡದ ನಾಯಕರಾಗಿದ್ದಾರೆ.

  • ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬಿಗ್ ರಿಲೀಫ್

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬಿಗ್ ರಿಲೀಫ್

    ಜಮೈಕಾ: ಐಪಿಎಲ್‍ನಲ್ಲಿ ಭಾಗಹಿಸಲು ಯುಎಇಗೆ ಹಾರಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬಿಗ್ ರಿಲೀಫ್ ಸಿಕಿದ್ದು, ತಂಡದ ಪ್ರಮುಖ ಆಟಗಾರ ಕ್ರಿಸ್ ಗೇಲ್ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ.

    ಸೋಮವಾರ ಜಮೈಕಾದ ದಿಗ್ಗಜ ಓಟಗಾರ ಉಸೇನ್ ಬೋಲ್ಟ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದಕ್ಕೂ ಮುನ್ನ ಉಸೇನ್ ಬೋಲ್ಟ್ ಅವರು ಅವರ ಹುಟ್ಟುಹಬ್ಬದ ಸಲುವಾಗಿ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಗೆ ಹಲವಾರು ಕ್ರೀಡಾಪಟುಗಳು ಆಗಮಿಸಿದ್ದರು. ಈ ಪಾರ್ಟಿಯಲ್ಲಿ ಗೇಲ್ ಅವರು ಕೂಡ ಭಾಗಹಿಸಿದ್ದರು.

    ಈ ಬಾರಿಯ ಐಪಿಎಲ್‍ನಲ್ಲಿ ಕ್ರಿಸ್ ಗೇಲ್ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆಡಲಿದ್ದಾರೆ. ಒಂದೇ ವೇಳೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದರೆ, ಅವರು ಯುಎಇಗೆ ಪ್ರಯಾಣ ಬೆಳೆಸಲು ಆಗುತ್ತಿರಲಿಲ್ಲ. ಈಗ ನೆಗೆಟಿವ್ ಬಂದಿದ್ದು, ಪಂಜಾಬ್ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ತನಗೆ ನೆಗೆಟಿವ್ ಬಂದ ಮಾಹಿತಿಯನ್ನು ಸ್ವತಃ ಗೇಲ್ ಅವರೇ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದು, ಎರಡು ಬಾರಿ ನಡೆಸಿದ ಟೆಸ್ಟ್ ನಲ್ಲೂ ನೆಗೆಟಿವ್ ಬಂದಿದೆ ಎಂದಿದ್ದಾರೆ.

    ಕಳೆದ ಅಗಸ್ಟ್ 21ರಂದು ಉಸೇನ್ ಬೋಲ್ಟ್ ಅವರ 34ನೇ ವರ್ಷದ ಹುಟ್ಟುಹಬ್ಬವಿತ್ತು. ಹೀಗಾಗಿ ಅವರು ಸ್ನೇಹಿತರೊಂದಿಗೆ ಭರ್ಜರಿ ಪಾರ್ಟಿ ಮಾಡಿದ್ದರು. ಇದರಲ್ಲಿ ವೆಸ್ಟ್ ಇಂಡೀಸ್‍ನ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್, ಫುಟ್‍ಬಾಲ್ ಆಟಗಾರ ರಹೀಮ್ ಸ್ಟೆರ್ಲಿಂಗ್ ಸೇರಿದಂತೆ ಹಲವು ಗಣ್ಯ ಕ್ರೀಡಾಪಟುಗಳು ಸಹ ಭಾಗಿಯಾಗಿದ್ದರು. ಪಾರ್ಟಿ ವೇಳೆ ಗಣ್ಯರು ಕುಣಿದು ಕುಪ್ಪಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

    ಕೊರೊನಾ ವೈರಸ್ ಕಾರಣದಿಂದ ಈ ಬಾರಿಯ ಐಪಿಎಲ್ ಯುಎಇಯಲ್ಲಿ ನಡೆಯಲಿದೆ. ಈಗಾಗಲೇ ಐಪಿಎಲ್ ತಂಡಗಳು ಯುಎಇಗೆ ತೆರಳಿ ಕ್ವಾರಂಟೈನ್‍ಗೆ ಒಳಗಾಗಿವೆ. ಕೊರೊನಾ ನೆಗೆಟಿವ್ ಬಂದ ಆಟಗಾರು ಮಾತ್ರ ಪಂದ್ಯಗಳಲ್ಲಿ ಭಾಗವಹಿಸಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ತಂಡಗಳು ಪ್ರತ್ಯೇಕ ಹೋಟೆಲ್‍ಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. ಸೆಪ್ಟಂಬರ್ 19ರಿಂದ ಐಪಿಎಲ್ ಆರಂಭವಾಗಲಿದೆ.

  • ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್

    ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್

    ನವದೆಹಲಿ: ಮಂಕಡ್ ರನ್‍ಔಟ್ ಬಗ್ಗೆ ಭಾರತ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅವರು ಟ್ವೀಟ್ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.

    ಈ ಹಿಂದೆ 2019ರ ಐಪಿಎಲ್‍ನಲ್ಲಿ ಅಶ್ವಿನ್ ಜೋಸ್ ಬಟ್ಲರ್ ಅವರನ್ನು ಮಂಕಡ್ ರನ್‍ಔಟ್ ಮಾಡಿ ಬಹಳ ಟ್ರೋಲ್ ಆಗಿದ್ದರು. ಬೌಲರ್ ಬೌಲ್ ಮಾಡುವ ಮೊದಲೇ ನಾನ್ ಸ್ಟ್ರೈಕ್‍ನಲ್ಲಿ ನಿಂತಿರುವ ಬ್ಯಾಟ್ಸ್ ಮ್ಯಾನ್ ಕ್ರೀಸ್‍ನಿಂದ ಮುಂದೆ ಹೋದರೆ ಅವರನ್ನು ಬೌಲ್ ಮಾಡದೇ ರನ್ ಔಟ್ ಮಾಡುವುದಕ್ಕೆ ಮಂಕಡ್ ರನ್‍ಔಟ್ ಎನ್ನುತ್ತಾರೆ. ಇದು ಐಸಿಸಿ ನಿಯಮದಲ್ಲಿ ಇದ್ದರೂ ಜನಾಭಿಪ್ರಾಯದಲ್ಲಿ ಇದಕ್ಕೆ ಭಾರೀ ವಿರೋಧವಿದೆ.

    ಈ ವಿಚಾರದ ಬಗ್ಗೆ ಮೊದಲು ಮಾತನಾಡಿರುವ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು, ಮಂಕಡ್ ರನ್‍ಔಟ್ ನಿಯಮಬದ್ಧವಾಗಿದೆ ಎಂದು ಹಿರಿಯ ಆಟಗಾರಾದ ಸುನೀಲ್ ಗಾವಸ್ಕರ್, ಡಾನ್ ಬ್ರಾಡ್‍ಮನ್ ಅವರೇ ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಐಸಿಸಿ ಮತ್ತು ಎಂಸಿಸಿ ಸಂಸ್ಥೆಗಳೇ ಒಪ್ಪಿಗೆ ಸೂಚಿಸಿವೆ. ಆದರೆ ಇದನ್ನು ಬಳಕೆ ಮಾಡಿದ ಆಟಗಾರರನ್ನು ಜನರು ಏಕೆ ಟ್ರೋಲ್ ಮಾಡುತ್ತಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಇದರ ಬಗ್ಗೆ ಬೇರೆಯವರು ಅಭಿಪ್ರಾಯ ಹಂಚಿಕೊಳ್ಳಿ ಎಂದು ಟ್ವೀಟ್ ಮಾಡಿದ್ದರೆ.

    ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಅಶ್ವಿನ್, ಬೌಲರ್ ಬೌಲ್ ಮಾಡುವ ಮುನ್ನ ನಾನ್ ಸ್ಟ್ರೈಕ್‍ನಲ್ಲಿ ನಿಂತಿರುವ ಬ್ಯಾಟ್ಸ್‍ಮ್ಯಾನ್ ಮುಂದೆ ಹೋದರೆ ಮುಂದಿನ ಎಸೆತವನ್ನು ಫ್ರಿ ಬಾಲ್ ಎಂದು ಘೋಷಿಸಬೇಕು. ಈ ಎಸೆತದಲ್ಲಿ ಬ್ಯಾಟ್ಸ್ ಮನ್ ಔಟ್ ಆದರೆ ತಂಡದ ಐದು ರನ್ ಕಡಿತಗೊಳಿಸಬೇಕು. ಬೌಲರ್‍ಗೂ ಒಂದು ಚಾನ್ಸ್ ಕೊಡಿ. ಈ ಮೂಲಕ ಬೌಲರ್ ಕೂಡ ಆಟವನ್ನು ಆನಂದಿಸಲಿ ಎಂದು ಬರೆದುಕೊಂಡಿದ್ದಾರೆ.

    2019ರ ಐಪಿಎಲ್‍ನಲ್ಲಿ ಮೊದಲ ಬಾರಿಗೆ ಅಶ್ವಿನ್ ಮಂಕಡ್ ರನ್ ಔಟ್ ಮಾಡಿ ಸುದ್ದಿಯಾಗಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಬೌಲ್ ಮಾಡುತ್ತಿದ್ದ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ಅವರನ್ನು ಮಂಕಡ್ ರನ್ ಔಟ್ ಮಾಡಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಅವರನ್ನು ಸಖತ್ ಟ್ರೋಲ್ ಮಾಡಲಾಗಿತ್ತು.

  • ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ – ಆರ್‌ಸಿಬಿ ಚೇರ್‌ಮ್ಯಾನ್ ಹೇಳಿದ್ದೇನು?

    ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ – ಆರ್‌ಸಿಬಿ ಚೇರ್‌ಮ್ಯಾನ್ ಹೇಳಿದ್ದೇನು?

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಈಗಾಗಲೇ ಐಪಿಎಲ್-2020ಗಾಗಿ ಯುಎಇಗೆ ಪ್ರಯಾಣ ಬೆಳೆಸಿದೆ. ಐಪಿಎಲ್‍ಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

    ಐಪಿಎಲ್‍ನಲ್ಲಿ ಆರ್‌ಸಿಬಿ ಬಹಳ ಜನಪ್ರಿಯವಾದ ತಂಡ. ಆದರೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಭಾರತ ತಂಡವನ್ನು ಮುನ್ನಡೆಸುವ ನಾಯಕ ವಿರಾಟ್ ಕೊಹ್ಲಿಯವರೇ ನಾಯಕನಾದರೂ ತಂಡ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಹೀಗಾಗಿ ತಂಡದ ನಾಯಕತ್ವವನ್ನು ಬದಲಿಸಿ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಎಂಬುದು ಕೆಲವರ ವಾದವಾಗಿದೆ.

    ಈ ಪ್ರಶ್ನೆಗೆ ಖಾಸಗಿ ವಾಹಿನಿಯೊಂದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರಿಸಿರುವ ಆರ್‌ಸಿಬಿ ತಂಡದ ಚೇರ್‌ಮ್ಯಾನ್ ಸಂಜೀವ್ ಚುರಿವಾಲಾ, ವಿರಾಟ್ ಭಾರತ ತಂಡದ ನಾಯಕ. ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಆಟಗಾರ. ಆಟ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಆದರೆ ವಿರಾಟ್ ಅವರು ಯಾವ ರೀತಿಯ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಆರ್‌ಸಿಬಿ ತಂಡದ ಮಾಲೀಕನಾಗಿ ನಮಗೆ ಕೊಹ್ಲಿ ತಂಡದ ನಾಯಕನಾಗಿರುವುದು ಹೆಮ್ಮೆ ಎಂದು ಹೇಳಿದ್ದಾರೆ.

    ಈ ಬಾರಿಯ ಆರ್‌ಸಿಬಿ ತಂಡ ಬಹಳ ಬ್ಯಾಲೆನ್ಸ್ ಆಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ತಂಡ ಬಹಳ ಬಲಿಷ್ಠವಾಗಿದೆ. ಹಿಂದಿನ ಆವೃತ್ತಿಯಲ್ಲಿ ನಮ್ಮ ತಂಡಕ್ಕೆ ಇದ್ದ ವೈಫಲ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು, ಈ ಬಾರಿಯ ಹಾರಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿ ಮಾಡಿದ್ದೇವೆ. ಜೊತೆಗೆ ಸಿದ್ಧತೆಯನ್ನು ಕೂಡ ಮಾಡಿಕೊಂಡಿದ್ದೇವೆ. ಹೀಗಾಗಿ ಈ ಬಾರಿ ಕಪ್ ಗೆಲ್ಲುವ ವಿಶ್ವಾದಲ್ಲಿ ಇದ್ದೇವೆ ಎಂದು ಚುರಿವಾಲಾ ತಿಳಿಸಿದ್ದಾರೆ.

    ತಂಡದಲ್ಲಿ ಉತ್ತಮ ಆಟಗಾರರು ಇದ್ದರೂ ಆರ್‌ಸಿಬಿ ತಂಡ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ತಂಡದ ಆಟಗಾರರು ವೈಯಕ್ತಿಕವಾಗಿ ಉತ್ತಮವಾಗಿ ಆಡಿದರೂ ಒಂದು ತಂಡವಾಗಿ ಆಡುವಲ್ಲಿ ವಿಫಲರಾಗಿದ್ದಾರೆ. ಆರ್‌ಸಿಬಿ ಕಳೆದ ಮೂರು ಆವೃತ್ತಿಲ್ಲೂ ಅಂಕಪಟ್ಟಿಯಲ್ಲಿ, 8, 6 ಮತ್ತು 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕಳೆದ ಮೂರು ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಫ್ಲೇಆಪ್ ಹಂತಕ್ಕೂ ಬಂದಿಲ್ಲ. ಇದು ಅಭಿಮಾನಿಗಳನ್ನು ನಿರಾಸೆಗೊಳಿಸಿದೆ.

    ಐಪಿಎಲ್‍ನಲ್ಲಿ ಬ್ಯಾಟ್ಸ್‍ಮ್ಯಾನ್ ಆಗಿ ಉತ್ತಮ ಸಾಧನೆ ಮಾಡಿರುವ ಕೊಹ್ಲಿ, ಐಪಿಎಲ್‍ನಲ್ಲಿ 37.84ರ ಸರಾಸರಿಯೊಂದಿಗೆ ಒಟ್ಟು 5,412 ರನ್ ಗಳಿಸಿದ್ದಾರೆ ಮತ್ತು 131.61 ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದಾರೆ. ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ ಐದು ಶತಕ ಮತ್ತು ಮೂವತ್ತಾರು ಅರ್ಧಶತಕ ಗಳಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಇದುವರೆಗೆ ನಾಯಕನಾಗಿ ಅವರು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ.

  • ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಹೊಡೆದ ಧೋನಿ

    ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಹೊಡೆದ ಧೋನಿ

    ಚೆನ್ನೈ: ಅಭ್ಯಾಸ ವೇಳೆ ಎಂಎಸ್ ಧೋನಿಯವರು ಮೈದಾನದ ಮೂಲೆ ಮೂಲೆಗೂ ಸಿಕ್ಸ್ ಹೊಡೆದರು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಓ ವಿಶ್ವನಾಥನ್ ಅವರು ಹೇಳಿದ್ದಾರೆ.

    ಮುಂದಿನ ತಿಂಗಳು ಯುಎಇಯಲ್ಲಿ ನಡೆಯುವ ಐಪಿಎಲ್‍ಗಾಗಿ ಎಲ್ಲ ತಂಡಗಳು ಭರ್ಜರಿ ಸಿದ್ಧತೆ ನಡೆಸಿವೆ. ಅಂತೆಯೇ ಸಿಎಸ್‍ಕೆ ತಂಡದ ಆಟಗಾರರು ಕೂಡ ಕಳೆದ ಶುಕ್ರವಾರ ಚೆನ್ನೈಗೆ ಆಗಮಿಸಿ ಅಭ್ಯಾಸ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಧೋನಿ ಫಿಟ್ ಆಗಿ ಇದ್ದು, ಮೈದಾನದ ಎಲ್ಲ ದಿಕ್ಕುಗಳಿಗೂ ಸಿಕ್ಸರ್ ಹೊಡೆದರು ಎಂದು ವಿಶ್ವನಾಥನ್ ತಿಳಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ವಿಶ್ವನಾಥನ್, ಧೋನಿ ಅಭ್ಯಾಸದ ವೇಳೆ ಚೆನ್ನಾಗಿ ಬ್ಯಾಟ್ ಬೀಸುತ್ತಿದ್ದಾರೆ. ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಚಚ್ಚಿದ್ದಾರೆ. ಅವರು ಎಂದಿನಂತೆ ತಾಳ್ಮೆ, ಆತ್ಮವಿಶ್ವಾಸ ಮತ್ತು ಸಂತೋಷದಿಂದ ನೆಟ್‍ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅವರು ನಿವೃತ್ತಿ ಹೊಂದುತ್ತಾರೆ ಎಂಬ ವಿಚಾರ ನಮಗೂ ಮುಂಚೆಯೇ ತಿಳಿದಿರಲಿಲ್ಲ. ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿದ ಮೇಲೆಯೇ ನಮಗೂ ಗೊತ್ತಾಯ್ತು ಎಂದು ಹೇಳಿದ್ದಾರೆ.

    ಇದೇ ವೇಳೆ ತಂಡದ ಬಗ್ಗೆ ಮಾತನಾಡಿರುವ ವಿಶ್ವನಾಥನ್, ಕೊರೊನಾ ಲಾಕ್‍ಡೌನ್ ಬ್ರೇಕ್‍ನ ನಂತರ ತಂಡದ ಆಟಗಾರಿಗೆ ಹೆಚ್ಚು ಅಭ್ಯಾಸ ಮಾಡಿಸಿಲ್ಲ. ಒಮ್ಮೆಲೆ ದೇಹಕ್ಕೆ ಹೆಚ್ಚಿನ ಒತ್ತಡ ಬಿದ್ದರೆ ಗಾಯವಾಗುವ ಸಾಧ್ಯತೆಯಿದೆ. ಹೀಗಾಗಿ ಕೇವಲ ಐದು ದಿನದ ಅಭ್ಯಾಸದ ನಂತರ ಇಂದು ನಮ್ಮ ತಂಡ ಯುಎಇಗೆ ಪ್ರಯಾಣ ಬೆಳೆಸಲಿದೆ. ಇಲ್ಲಿ ನಮ್ಮ ಆಟಗಾರರು 6 ದಿನ ಕ್ವಾರಂಟೈನ್‍ಗೆ ಒಳಗಾಗಲಿದ್ದಾರೆ ಎಂದು ತಿಳಿಸಿದ್ದಾರೆ.

    ಕೊರೊನಾ ವೈರಸ್ ಕಾರಣದಿಂದ ಮುಂದೂಡಲಾಗಿದ್ದ ಐಪಿಎಲ್ ಅನ್ನು ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಆಡಿಸಲು ಬಿಸಿಸಿಐ ತೀರ್ಮಾನ ಮಾಡಿದೆ. ಐಪಿಎಲ್-2020 ಸೆಪ್ಟಂಬರ್ 19ರಿಂದ ನವೆಂಬರ್ 10ರವರಗೆ ನಡೆಯಲಿದೆ. ಈಗಾಗಲೇ ಕೆಲ ತಂಡಗಳು ಯುಎಇಗೆ ಪ್ರಯಾಣ ಬೆಳೆಸಿವೆ. ಬಿಸಿಸಿಐ ಹೊರಡಿಸಿರುವ ಮಾರ್ಗಸೂಚಿಯಂತೆ ಕೊರೊನಾ ನೆಗೆಟಿವ್ ಬಂದ ಆಟಗಾರರು ಮಾತ್ರ ಐಪಿಎಲ್‍ನಲ್ಲಿ ಭಾಗವಹಿಸಲಿದ್ದಾರೆ.

  • ಐಪಿಎಲ್‍ಗಾಗಿ ದುಬೈಗೆ ಹಾರಲಿದ್ದಾರೆ ಬಂಗಾಳದ ದಿನಗೂಲಿ ಕೆಲಸಗಾರ

    ಐಪಿಎಲ್‍ಗಾಗಿ ದುಬೈಗೆ ಹಾರಲಿದ್ದಾರೆ ಬಂಗಾಳದ ದಿನಗೂಲಿ ಕೆಲಸಗಾರ

    – ಮೊದಲ ಬಾರಿಗೆ ವಿಮಾನಯಾನ ಮಾಡುತ್ತಿದ್ದಾರೆ ಸೂರ್ಯಕಾಂತ್

    ಕೋಲ್ಕತ್ತಾ: ಪಶ್ಚಿಮಾ ಬಂಗಾಳದ ಕಿರಾಣಿ ಅಂಗಡಿಯಲ್ಲಿ ದೈನಂದಿನ ಕೂಲಿ ಕೆಲಸಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಭಾಗವಹಿಸಲು ಯುಎಇಗೆ ಹಾರಲಿದ್ದಾರೆ.

    ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಿನ್ಸುರಾಹ್ ನಿವಾಸಿ 32 ವರ್ಷದ ಸೂರ್ಯಕಾಂತ್ ಪಾಂಡಾ ಐಪಿಎಲ್-2020ಯ ಸ್ಕೋರ್ ಕೀಪರ್ ಆಗಿ ಸೆಲೆಕ್ಟ್ ಆಗಿದ್ದಾರೆ. 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ಸೂರ್ಯಕಾಂತ್, ಜೀವನೋಪಾಯಕ್ಕಾಗಿ ದಶಕಗಳ ಹಿಂದೆ ಒಡಿಶಾದಿಂದ ಬಂಗಾಳಕ್ಕೆ ಕುಟುಂಬ ಸಮೇತ ವಲಸೆ ಬಂದಿದ್ದರು.

    ಐಪಿಎಲ್‍ನ ಎಲೆಕ್ಟ್ರಾನಿಕ್ ಸ್ಕೋರರ್ ಆಗಿ ದುಬೈಗೆ ಪ್ರಯಾಣಿಸಲು ಸೂರ್ಯಕಾಂತ್ ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿದ್ದಾರೆ. ಸೂರ್ಯಕಾಂತ್ ಕ್ರಿಕೆಟಿಗನಾಗಬೇಕೆಂಬ ಕನಸು ಕಂಡಿದ್ದರು ಆದರೆ ಅವರು ಪಶ್ಚಿಮ ಬಂಗಾಳಕ್ಕೆ ಬಂದ ನಂತರ ಕುಟುಂಬದ ಆರ್ಥಿಕ ಸಮಸ್ಯೆಯಿಂದ ಅವರು ಕ್ರಿಕೆಟ್‍ಗೆ ಸೇರಲು ಆಗಲಿಲ್ಲ. ತಂದೆ ಆಡುಗೆ ಕೆಲಸ ಮಾಡುವಾಗ ಸೂರ್ಯಕಾಂತ್ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.

    ಚಿಕ್ಕ ವಯಸ್ಸಿನಿಂದ ಕ್ರಿಕೆಟರ್ ಆಗುವ ಕನಸು ಕಂಡಿದ್ದ ಸೂರ್ಯಕಾಂತ್, 2002-2003ರ ಅವಧಿಯಲ್ಲಿ ಹೂಗ್ಲಿ ಜಿಲ್ಲಾ ಕ್ರೀಡಾ ಸಂಘದ ಆಧಾರದ ಮೇಲೆ ಕೆಲವು ಪಂದ್ಯಗಳನ್ನು ಆಡಿದರು. ಆದರೆ ಅದನ್ನು ಮುಂದುವರಿಸಲು ಆಗಲಿಲ್ಲ. ಈ ಕಾರಣಕ್ಕೆ ಯಾವಾಗಲೂ ಕ್ರಿಕೆಟ್‍ನೊಂದಿಗೆ ಸಂಪರ್ಕದಲ್ಲಿರಲು ಬಯಸಿ ಎಲೆಕ್ಟ್ರಾನಿಕ್ ಸ್ಕೋರರ್ ಆಗುವ ದಾರಿಯನ್ನು ಆಯ್ಕೆ ಮಾಡಿಕೊಂಡರು.

    ಈ ವಿಚಾರವಾಗಿ ರಾಷ್ಟ್ರೀಯ ಮಾಧ್ಯಮಗಳ ಜೊತೆ ಮಾತನಾಡಿರುವ ಸೂರ್ಯಕಾಂತ್, ನಾನು ಕ್ರಿಕೆಟಿಗನಾಗಲು ಬಯಸಿದ್ದೆ. ಆದರೆ ಹಲವಾರು ಕುಟುಂಬ ಸಮಸ್ಯೆಗಳಿಂದಾಗಿ ನನಗೆ ಅದು ಸಾಧ್ಯವಾಗಲಿಲ್ಲ. ಆಗ ನಾನು ಯಾವಾಗಲೂ ಆಟದೊಂದಿಗೆ ಸಂಪರ್ಕದಲ್ಲಿರಲು ಬಯಸಿ ಸ್ಕೋರರ್ ಮಾರ್ಗವನ್ನು ಆಯ್ಕೆ ಮಾಡಿಕೊಂಡೆ. ಅಂತೆಯೇ 2015 ರಲ್ಲಿ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ ಪರೀಕ್ಷೆ ತೆಗೆದುಕೊಂಡು ಅದರಲ್ಲಿ ಪಾಸ್ ಆಗಿ ಸ್ಕೋರರ್ ಅದೆ ಎಂದು ಹೇಳಿದ್ದಾರೆ.

    2015ರ ನಂತರ ಕೆಲ ದಿನ ಅವರು ಸ್ಕೋರರ್ ಆಗಿ ಕೆಲಸ ಮಾಡಲು ಆಗಲಿಲ್ಲ. ಆದರೆ ನಂತರದ ದಿನದಲ್ಲಿ ಸಿಎಬಿ ನಡೆಸಿದ ಹೆಚ್ಚಿನ ಪಂದ್ಯಗಳಲ್ಲಿ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು. ಅವರ ಸತತ ಪ್ರಯತ್ನ ಮತ್ತು ದೃಢನಿಶ್ಚಯದ ಫಲವಾಗಿ ಅವರಿಗೆ 2018ರಲ್ಲಿ ಅತ್ಯುತ್ತಮ ಸ್ಕೋರರ್ ಪ್ರಶಸ್ತಿ ಲಭಿಸಿತ್ತು. ಇದನ್ನು ಸಿಎಬಿ ಕಾರ್ಯದರ್ಶಿ ಅವಿಶೇಕ್ ಡಾಲ್ಮಿಯಾ ಅವರು ನೀಡಿದ್ದರು. ಈಗ ಐಪಿಎಲ್‍ನಲ್ಲಿ ಸ್ಕೋರರ್ ಆಗಿ ಕಾರ್ಯನಿರ್ವಹಿಸಲು ಸೂರ್ಯಕಾಂತ್ ಆಯ್ಕೆ ಆಗಿದ್ದಾರೆ.

    ಸದ್ಯ ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ನಡೆಸುವ ಕ್ರಿಕೆಟ್ ಪಂದ್ಯಗಳಿಗೆ ಸ್ಕೋರರ್ ಆಗಿರುವ ಸೂರ್ಯಕಾಂತ್ ಮುಂದೆ ಬಿಸಿಸಿಐ ನಡೆದುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಷ್ಟ್ರೀಯ ಪಂದ್ಯಗಳಿಗೆ ಕೆಲಸ ಮಾಡಬೇಕೆಂಬ ಕನಸು ಕಾಣುತ್ತಿದ್ದಾರೆ. ಸೂರ್ಯಕಾಂತ್ ಅವರು ಇಂದು ಬಂಗಾಳದಿಂದ ಬೆಂಗಳೂರಿಗೆ ವಿಮಾನದಲ್ಲಿ ಬರಲಿದ್ದು ಬಳಿಕ ಆಗಸ್ಟ್ 27 ರಂದು ದುಬೈ ವಿಮಾನ ಹತ್ತಲಿದ್ದಾರೆ.

  • ಕೊರೊನಾದಿಂದ ಹೆಚ್ಚಾಯ್ತು ಐಪಿಎಲ್ ಜಾಹೀರಾತು ದರ – 10 ಸೆಕೆಂಡ್‍ಗೆ ಎಷ್ಟು ಹಣ ಕೊಡ್ಬೇಕು?

    ಕೊರೊನಾದಿಂದ ಹೆಚ್ಚಾಯ್ತು ಐಪಿಎಲ್ ಜಾಹೀರಾತು ದರ – 10 ಸೆಕೆಂಡ್‍ಗೆ ಎಷ್ಟು ಹಣ ಕೊಡ್ಬೇಕು?

    ಮುಂಬೈ: ಮುಂದಿನ ತಿಂಗಳಿನಿಂದ ಪ್ರಪಂಚದ ದುಬಾರಿ ಕ್ರಿಕೆಟ್ ಲೀಗ್ ಐಪಿಎಲ್ ಸೆಟ್ಟೇರಲು ಸಜ್ಜಾಗಿದೆ. ಇದರ ಜೊತೆಗೆ ಐಪಿಎಲ್ ಅನ್ನು ಪ್ರಸಾರ ಮಾಡುತ್ತಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ತನ್ನ ಜಾಹೀರಾತು ದರವನ್ನು ನಿಗದಿ ಮಾಡಿದೆ.

    ಈ ಬಾರಿಯ ಐಪಿಎಲ್ ಸೆಪ್ಟಂಬರ್ 19ರಿಂದ ಯುಎಇಯಲ್ಲಿ ಆರಂಭವಾಗಲಿದ್ದು, ಮೊದಲ ಬಾರಿಗೆ ಜನರೇ ಇಲ್ಲದೇ ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. ಹೀಗಾಗಿ ಜನರು ಐಪಿಎಲ್ ಅನ್ನು ಈ ಬಾರಿ ಟಿವಿಯಲ್ಲಿ ನೋಡಬೇಕಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಸ್ಟಾರ್ ಕಂಪನಿ 10 ಸೆಕೆಂಡ್ ಇರುವ ಜಾಹೀರಾತಿಗೆ 12.5 ಲಕ್ಷ ರೂ. ಪಡೆಯಲು ಮುಂದಾಗಿದೆ.

    2019ರ ಐಪಿಎಲ್ ವೇಳೆ 10 ಸೆಕೆಂಡ್ ಇರುವ ಜಾಹೀರಾತಿಗೆ 10 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿತ್ತು. ಆದರೆ ಈ ಮೊತ್ತವನ್ನು ಈ ಬಾರಿ ಶೇ.20ರಷ್ಟು ಜಾಸ್ತಿ ಮಾಡಿರುವ ಸ್ಟಾರ್ ವಾಹಿನಿ, ಈ ಬಾರಿ 12.5 ಲಕ್ಷ ಪಡೆಯಲು ಮುಂದಾಗಿದೆ. ಜೊತೆಗೆ ಕೊರೊನಾ ಕಾರಣದಿಂದ ಜನರು ಮನರಂಜನೆಯಿಂದ ವಂಚಿತರಾಗಿದ್ದು, ಈ ಬಾರಿಯ ಐಪಿಎಲ್‍ಗಾಗಿ ಕಾಯುತ್ತಿದ್ದಾರೆ. ಹೆಚ್ಚು ಜನ ವೀಕ್ಷಣೆ ಮಾಡಲಿದ್ದಾರೆ ಎಂದು ವಾಹಿನಿ ಅಂದಾಜಿಸಿದೆ.

    ಜಾಹೀರಾತು ವೆಚ್ಚವನ್ನು ಜಾಸ್ತಿ ಮಾಡಿರುವುದನ್ನು ಸಮರ್ಥನೆ ಮಾಡಿಕೊಂಡಿರುವ ವಾಹಿನಿ, ಭಾರತ ಮತ್ತು ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಗಳ ಸಮಯದಲ್ಲಿ 10 ಸೆಕೆಂಡ್‍ಗಳ ಜಾಹೀರಾತಿಗೆ 25 ಲಕ್ಷ ರೂ. ಮತ್ತು ವಿಶ್ವಕಪ್‍ನ ಇತರ ಪಂದ್ಯಗಳಿಗೆ 16 ರಿಂದ 18 ಲಕ್ಷ ರೂ. ಪಡೆದುಕೊಳ್ಳುತ್ತೇವೆ. ಇದಕ್ಕೆ ಹೋಲಿಸಿಕೊಂಡರೆ ಐಪಿಎಲ್ ಜಾಹೀರಾತಿಗೆ ನಿಗದಿ ಮಾಡಿದ ಹಣ ದುಬಾರಿಯಲ್ಲ ಎಂದು ತಿಳಿಸಿದೆ. ಇದನ್ನು ಓದಿ: ಭಾರೀ ಮೊತ್ತಕ್ಕೆ ಐಪಿಎಲ್ ಪ್ರಾಯೋಜಕತ್ವ ಪಡೆದ ಡ್ರೀಮ್ 11 ಕಂಪನಿ

    ಈ ಬಾರಿಯ ಐಪಿಎಲ್ ಅನ್ನು ಮನೆಯಲ್ಲೇ ಕುಳಿತು ಜಾಸ್ತಿ ಜನ ವೀಕ್ಷಣೆ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಐಪಿಎಲ್ ಫೈನಲ್ ಪಂದ್ಯಗಳು ದೀಪಾವಳಿ ಸಮಯದಲ್ಲಿ ಬರುವ ಕಾರಣ ಹೆಚ್ಚು ಜನರು ಐಪಿಎಲ್ ಅನ್ನು ನೋಡುತ್ತಾರೆ ಎಂಬ ಕಾರಣಕ್ಕೆ ವಾಹಿನಿ ತನ್ನ ಜಾಹೀರಾತು ದರವನ್ನು ಏರಿಸಿದೆ. ಮುಂದಿನ 10 ದಿನದ ಒಳಗೆ ಜಾಹೀರಾತಿಗೆ ಸಂಬಂಧಪಟ್ಟ ಡೀಲ್ಸ್ ಗಳು ಮುಕ್ತಾಯವಾಗಲಿವೆ.

    ಐಪಿಎಲ್ ಅನ್ನು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. 60 ಪಂದ್ಯ, 51 ದಿನ ಯಾವುದೇ ಪಂದ್ಯಗಳ ಕಡಿತವಿಲ್ಲದೇ ಸಂಪೂರ್ಣ ಟೂರ್ನಿ ನಡೆಯಲಿದೆ. ಈಗಾಗಲೇ ತಂಡಗಳು ಟೂರ್ನಿಗಾಗಿ ಸಿದ್ಧತೆ ನಡೆಸಿದ್ದು, ಕೊರೊನಾ ಪರೀಕ್ಷೆಯ ನಂತರ ಯುಎಇಗೆ ಹಾರಲು ರೆಡಿಯಾಗಿವೆ.

    ಸ್ಟಾರ್ ವಾಹಿನಿ ಎರಡು ರೀತಿಯಲ್ಲಿ ಐಪಿಎಲ್‍ನಿಂದ ಆದಾಯಗಳಿಸುತ್ತದೆ. ಹಾಟ್‍ಸ್ಟಾರ್ ಅಪ್ಲಿಕೇಶನ್‍ನಲ್ಲಿ ಬರುವ ಆನ್‍ಲೈನ್ ಜಾಹೀರಾತು ಬೇರೆ ಬೇರೆ ಆಗಿರುತ್ತದೆ. ಅಷ್ಟೇ ಅಲ್ಲದೇ ಲೈವ್ ಸ್ಕೋರ್, ಚಾಟ್ ಸಮಯದಲ್ಲಿ ಜಾಹೀರಾತುಗಳನ್ನು ಪ್ರದರ್ಶನ ಮಾಡುತ್ತದೆ. 2019ರ ಐಪಿಎಲ್‍ನ್ನು ದೇಶದಲ್ಲಿ 42 ಕೋಟಿ ಜನ ವೀಕ್ಷಣೆ ಮಾಡಿದ್ದರು. ಟಿವಿ ವೀಕ್ಷಣೆಯ ಶೇ.51 ರಷ್ಟು ವೀಕ್ಷಕರು ಈ ಅವಧಿಯಲ್ಲಿ ಐಪಿಎಲ್ ವೀಕ್ಷಿಸಿದ್ದರು.

    ಬಿಡ್‌ ಗೆದಿದ್ದ ಸ್ಟಾರ್‌ ಇಂಡಿಯಾ:
    2018ರಿಂದ 2022ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಜಾಗತಿಕ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ. 2017ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 16,347 ಕೋಟಿ ರೂ. ನೀಡಿ ಟಿವಿ ಮತ್ತು ಡಿಜಿಟಲ್ ಮೀಡಿಯಾದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.

    ಭಾರತದಲ್ಲಿ ಪ್ರಸಾರದ ಹಕ್ಕಿಗಾಗಿ ಸೋನಿ ಪಿಕ್ಚರ್ಚ್ 11,050 ಕೋಟಿ ರೂ. ಹಣವನ್ನು ಬಿಡ್ ಮಾಡಿದ್ದರೆ ಸ್ಟಾರ್ ಇಂಡಿಯಾ 6,196.94 ಕೋಟಿ ರೂ. ಹಣವನ್ನು ಭಾರತದ ಪ್ರಸಾರಕ್ಕೆ ಬಿಡ್ ಮಾಡಿತ್ತು. ಆದರೆ ಸೋನಿ ಪಿಕ್ಚರ್ಸ್ ಇತರ ಹಕ್ಕು ಗಳಿಗೆ ಬಿಡ್ ಮಾಡದ ಕಾರಣ ಅಂತಿಮವಾಗಿ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.

    ಈ ಬಿಡ್ ಪ್ರಕ್ರಿಯೆಯಲ್ಲಿ ಯುಪ್ ಟಿವಿ, ಗಲ್ಫ್ ಡಿಟಿಎಚ್ ಒಎಸ್‍ಎನ್, ಪರ್‍ಫಾರ್ಮ್ ಮೀಡಿಯಾ, ಏರ್‌ಟೆಲ್‌ , ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್, ಅಮೆಜಾನ್, ಇಎಸ್‍ಪಿಎನ್ ಡಿಜಿಟಲ್ ಮೀಡಿಯಾಗಳು ಭಾಗವಹಿಸಿತ್ತು. ಭಾರತದಲ್ಲಿ ಡಿಜಿಟಲ್ ಪ್ರಸಾರದ ಹಕ್ಕಿಗೆ ಏರ್‌ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್ ಬಿಡ್ ಮಾಡಿತ್ತು.

    ಹಕ್ಕು ಇಷ್ಟೊಂದು ಮೊತ್ತಕ್ಕೆ ಹರಾಜು ಆದ ಕಾರಣ ಐಪಿಎಲ್ ಪ್ರತಿ ಪಂದ್ಯದ ಟಿವಿ ಶುಲ್ಕ 2018ರಿಂದ ಹೆಚ್ಚಾಗಲಿದೆ. ಈ ಹಿಂದೆ ಒಂದು ಪಂದ್ಯಕ್ಕೆ 15 ಕೋಟಿ ರೂ. ಆಗಿದ್ದರೆ, ಇನ್ನು ಮುಂದೆ ಈ ಮೌಲ್ಯ ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈಗ ಭಾರತದ ಒಂದು ಏಕದಿನ ಪಂದ್ಯಕ್ಕೆ ಟಿವಿ ಶುಲ್ಕ 45 ಕೋಟಿ ರೂ. ಇದ್ದರೆ, ಐಪಿಎಲ್ ನಲ್ಲಿ 55 ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಹೇಳಿದ್ದರು.

  • ಭಾರೀ ಮೊತ್ತಕ್ಕೆ ಐಪಿಎಲ್ ಪ್ರಾಯೋಜಕತ್ವ ಪಡೆದ ಡ್ರೀಮ್ 11 ಕಂಪನಿ

    ಭಾರೀ ಮೊತ್ತಕ್ಕೆ ಐಪಿಎಲ್ ಪ್ರಾಯೋಜಕತ್ವ ಪಡೆದ ಡ್ರೀಮ್ 11 ಕಂಪನಿ

    ಮುಂಬೈ: ಡ್ರೀಮ್ 11 ಕಂಪನಿ ಈ ಬಾರಿ ಯುಎಇಯಲ್ಲಿ ನಡೆಯುವ ಐಪಿಎಲ್-2020 ಟೈಟಲ್ ಪ್ರಾಯೋಜಕತ್ವವನ್ನು ವಹಿಸಲಿದೆ.

    ಗಾಲ್ವಾನ್ ಗಡಿಯಲ್ಲಿ ನಡೆದ ಚೀನಾ ಮತ್ತು ಭಾರತ ಸೈನಿಕರ ನಡುವಿನ ಘಟನೆಯ ನಂತರ, ಭಾರತದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡಬೇಕು ಎಂಬ ಕೂಗು ಎಂದಿತ್ತು. ಆದರೆ 2018ರಲ್ಲೇ ಚೀನಾ ದೇಶದ ಮೊಬೈಲ್ ಕಂಪನಿ ವಿವೊ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು 5 ವರ್ಷದ ಅವಧಿಗೆ ತೆಗೆದುಕೊಂಡಿತ್ತು. ವಿವೊ ಐಪಿಎಲ್ ನಡೆಸುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ಕೇಳಿ ಬಂದಿತ್ತು.

    ಗಡಿ ಗಲಾಟೆಯ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿವೊ ಕಂಪನಿಯನ್ನು ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ ಕೈಬಿಟ್ಟಿತ್ತು. ನಂತರ ಇಂಡಿಯಾದ ಕಂಪನಿಗಳಿಗೆ ಪ್ರಾಯೋಜಕತ್ವವನ್ನು ಕೊಂಡುಕೊಳ್ಳಲು ಅವಕಾಶ ನೀಡಿಲಾಗಿತ್ತು. ಈಗ ಇಂಡಿಯಾದ ಡ್ರೀಮ್ 11 ಕಂಪನಿಯ ಈ ಪ್ರಾಯೋಜಕತ್ವವನ್ನು ಬರೋಬ್ಬರಿ 222 ಕೋಟಿ ನೀಡಿ ಕೊಂಡುಕೊಂಡಿದೆ ಎಂದು ಬಿಸಿಸಿಐ ಇಂದು ತಿಳಿಸಿದೆ. ವಿವೊ ಬಿಸಿಸಿಐಗೆ ಈ ಹಿಂದೆ 440 ಕೋಟಿ ರೂ. ನೀಡಿತ್ತು.

    ಇಂಡಿಯಾ ಕಂಪನಿಯೊಂದಕ್ಕೆ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಸಿಗಲಿದೆ ಎಂಬ ಮಾಹಿತಿ ಹೊರಬಂದ ನಂತರ, ಜಿಯೋ ಮತ್ತು ಪತಂಜಲಿ ಕಂಪನಿಗಳ ಹೆಸರು ಸಾಮಾಜಿಕ ಜಾಲತಾಣದಲ್ಲಿ ಮುನ್ನೆಲೆಗೆ ಬಂದಿದ್ದವು. ಆದರೆ ಕೊನೆಯಾದಾಗಿ ಬೆಂಗಳೂರಿನ ಬೈಜೂಸ್ ಮತ್ತು ಡ್ರೀಮ್ 11 ಕಂಪನಿಗಳ ನಡುವೆ ಟೈಟಲ್ ಪ್ರಾಯೋಜಕತ್ವಕ್ಕೆ ಪೈಪೋಟಿ ನಡೆದಿತ್ತು. ಆದರೆ ಡ್ರೀಮ್ 11 ಕಂಪನಿ 222 ಕೋಟಿ ನೀಡಿ ಪ್ರಾಯೋಜಕತ್ವ ಪಡೆದುಕೊಂಡಿದೆ.

    ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿದ್ದ ಐಪಿಎಲ್ ಅನ್ನು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. 60 ಪಂದ್ಯ, 51 ದಿನ ಯಾವುದೇ ಪಂದ್ಯಗಳ ಕಡಿತವಿಲ್ಲದೇ ಸಂಪೂರ್ಣ ಟೂರ್ನಿ ನಡೆಯಲಿದೆ. ಐಸಿಸಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಅವಧಿಯಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ಟೂರ್ನಿಯನ್ನು ಮುಂದೂಡಿದ ವೇಳೆಯೇ ಐಪಿಎಲ್ ಟೂರ್ನಿ ನಡೆಯುವುದು ಖಚಿತವಾಗಿತ್ತು.

  • ಧೋನಿ 4ನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ: ಮೈಕ್ ಹಸ್ಸಿ

    ಧೋನಿ 4ನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ: ಮೈಕ್ ಹಸ್ಸಿ

    – ಸಿಎಸ್‍ಕೆ ತಂಡದ ಸಕ್ಸಸ್ ಮಂತ್ರ ಬಿಚ್ಚಿಟ್ಟ ಕೋಚ್

    ಮುಂಬೈ: ಭಾರತದ ಮಾಜಿ ನಾಯಕ ಎಂಎಸ್ ಧೋನಿಯವರು ಐಪಿಎಲ್‍ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಂಟಿಗ್ ಕೋಚ್ ಮೈಕ್ ಹಸ್ಸಿ ಹೇಳಿದ್ದಾರೆ.

    ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಸ್‍ಕೆ ತಂಡದ ಬಗ್ಗೆ ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೇ ವೇಳೆ ನಾನು ಯುಎಇ ಕ್ರಿಕೆಟ್ ಮೈದಾನದಲ್ಲಿ ಜನರಿಲ್ಲದೇ ನಡೆಯುವ ಐಪಿಎಲ್ ಪಂದ್ಯಗಳನ್ನು ನೋಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ಜೊತಗೆ ಯುಎಇನ ಪರಿಸ್ಥಿತಿಗೆ ಆಟಗಾರರು ಹೇಗೆ ಹೊಂದಿಕೊಳ್ಳುತ್ತಾರೆ ನೋಡಬೇಕು ಎಂದು ಹೇಳಿದ್ದಾರೆ.

    ಇದೇ ವೇಳೆ ಸಿಎಸ್‍ಕೆ ತಂಡದ ಬ್ಯಾಟಿಂಗ್ ಬಲದ ಬಗ್ಗೆ ಮಾತನಾಡಿರುವ ಹಸ್ಸಿ, ನಮ್ಮ ತಂಡಕ್ಕೆ ಬ್ಯಾಂಟಿಗ್ ಬಲ ಬಹಳ ಇದೆ. ಜೊತೆಗೆ ನಾವು ಬಹಳ ಬ್ಯಾಲೆನ್ಸ್ ಆಗಿರುವ ಆಟಗಾರರನ್ನು ಹೊಂದಿದ್ದೇವೆ. ನಮ್ಮ ತಂಡ ಎಲ್ಲ ವಿಭಾಗದಿಂದಲೂ ಬಹಳ ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಟೀಂನ ಸಕ್ಸಸ್ ಮಂತ್ರದ ಬಗ್ಗೆ ಮಾತನಾಡಿದ ಹಸ್ಸಿ, ನಮ್ಮ ತಂಡ ಯಶಸ್ಸಿಗೆ ಒಂದು ನಿರ್ದಿಷ್ಟ ಮಂತ್ರ ಎಂದು ಇಲ್ಲ. ಆದರೆ ನಾವು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಆಡುತ್ತೇವೆ. ಜೊತೆಗೆ ಆಟಗಾರ ಉತ್ತಮವಾಗಿ ಆಡಲು ನೆರವಾಗುವ ಪರಿಸರವನ್ನು ನಾವು ಕ್ರಿಯೇಟ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಧೋನಿಯವರು ಯಾವ ಕ್ರಮಾಂಕದಲ್ಲಿ ಆಡಿದರೆ ಬೆಸ್ಟ್ ಎಂಬ ಪ್ರಶ್ನೆಗೆ ಉತ್ತರಿಸಿದ ಹಸ್ಸಿ, ಧೋನಿ 4ನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ. ಆದರೆ ಮಿಡಲ್ ಆರ್ಡರ್ ಬ್ಯಾಟಿಂಗ್‍ನಲ್ಲಿ ನಾವು ಸಮಯಕ್ಕೆ ತಕ್ಕ ಕೆಲ ಬದಲವಾಣೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಬಿಸಿಸಿಐ ಸೂಚಿಸಿರುವ ಮಾರ್ಗ ಸೂಚಿಯ ಬಗ್ಗೆ ಮಾತನಾಡಿದ ಹಸ್ಸಿ, ನಾವು ನಿಯಮಗಳನ್ನು ಪಾಲನೆ ಮಾಡಲೇಬೇಕು. ಅದು ನಮಗೆ ಉಪಯುಕ್ತವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕಳೆದ ಮಾರ್ಚ್ ತಿಂಗಳಲ್ಲೇ ನಡೆಯಬೇಕಿದ್ದ ಐಪಿಎಲ್-2020 ಕೊರೊನಾ ವೈರಸ್ ಕಾರಣದಿಂದ ಮುಂದಕ್ಕೆ ಹೋಗಿತ್ತು. ಈಗ ಮುಂದಿನ ತಿಂಗಳು 19ರಿಂದ ಐಪಿಎಲ್ ಅನ್ನು ಯುಎಇಯಲ್ಲಿ ಆರಂಭ ಮಾಡಲು ಬಿಸಿಸಿಐ ತೀರ್ಮಾನ ಮಾಡಿದೆ. ಅದರಂತೆ ಎಲ್ಲ ತಂಡಗಳು ಈಗಾಗಲೇ ತಯಾರಿ ನಡೆಸುತ್ತಿವೆ. ಎಲ್ಲ ಆಟಗಾರರಿಗೂ ಕೊರೊನಾ ಟೆಸ್ಟ್ ಮಾಡಿಸಲಿದ್ದು, ನೆಗೆಟಿವ್ ವರದಿ ಬಂದ ಆಟಗಾರರು ಐಪಿಎಲ್ ಆಡಲು ಯುಎಇಗೆ ತೆರಳಲಿದ್ದಾರೆ.