Tag: IPL

  • ಕೊಹ್ಲಿಯನ್ನು ಟಗರಿಗೆ ಹೋಲಿಸಿದ ಶಿವಣ್ಣ – ಕ್ರಿಕೆಟ್ ಬಗ್ಗೆ ರಾಜ್ ಪುತ್ರನ ಮಾತು

    ಕೊಹ್ಲಿಯನ್ನು ಟಗರಿಗೆ ಹೋಲಿಸಿದ ಶಿವಣ್ಣ – ಕ್ರಿಕೆಟ್ ಬಗ್ಗೆ ರಾಜ್ ಪುತ್ರನ ಮಾತು

    – ಧೋನಿಯನ್ನು ಹೊಗಳಿದ ಹ್ಯಾಟ್ರಿಕ್ ಹೀರೋ

    ಬೆಂಗಳೂರು: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಟಗರಿಗೆ ಹೋಲಿಸಿದ್ದಾರೆ.

    ನಾಳೆಯಿಂದ ಐಪಿಎಲ್ ಹಂಗಾಮ ಆರಂಭವಾಗಲಿದೆ. ಐಪಿಎಲ್ ಆಡಲು ಆರ್‌ಸಿಬಿ ತಂಡ ಕೂಡ ಯುಎಇಯಲ್ಲಿ ಭರ್ಜರಿ ಸಿದ್ಧತೆ ನಡೆಸಿದೆ. ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲು ಬೆಂಗಳೂರು ತಂಡ ಕಾತುರದಿಂದ ಕಾಯುತ್ತಿದೆ. ಈ ಮಧ್ಯೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಮಾತನಾಡಿರುವ ಶಿವಣ್ಣ ಕೊಹ್ಲಿಯನ್ನು ಹೊಗಳಿದ್ದಾರೆ.

    ಮಾಜಿ ಕ್ರಿಕೆಟ್ ಆಟಗಾರ ಕನ್ನಡಿಗ ವಿಜಯ್ ಭಾರದ್ವಾಜ್ ಅವರ ಜೊತೆ ಶಿವಣ್ಣ ಮಾತನಾಡಿದ್ದಾರೆ. ಎನರ್ಜಿಗೆ ಇನ್ನೊಂದು ಹೆಸರು ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಸ್ಯಾಂಡಲ್‍ವುಡ್ ಟಗರು ಜೊತೆ ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಮಾತುಕತೆ ಎಂದು ಬರೆದು ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಿಡಿಯೋವನ್ನು ಶೇರ್ ಮಾಡಿದೆ.

    ಈ ವಿಡಿಯೋದಲ್ಲಿ ಮಾತನಾಡಿರುವ ಶಿವಣ್ಣ ಕ್ರಿಕೆಟ್ ಎಂಬುದು ಒಂದು ಟ್ರಿಕ್ಕಿ ಗೇಮ್. ಕ್ರಿಸ್ ಗೇಲ್ ಅವರು ಒಂದು ಸೀಸನ್‍ನಲ್ಲಿ ಹೊಡೆದು ಹೊಡೆದು ಸಿಕ್ಸ್ ಗೆ ಬೆಲೆಯೇ ಇಲ್ಲದಂತೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಒಂಥರ ಟಗರು ಇದ್ದಂತೆ, ಆ ಆಟಿಟ್ಯೂಡ್ ಅವರಿಗಿದೆ ಎಂದಿದ್ದಾರೆ. ಜೊತೆಗೆ ತಮ್ಮ ಕ್ರಿಕೆಟ್ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ. ಧೋನಿ ನೋಡಲು ಮಾಸ್ ಆಗಿ ಕಾಣುತ್ತಾರೆ. ಆತನಲ್ಲಿ ಶಾಂತಿ ಮತ್ತು ಕ್ರಾಂತಿಯ ಗುಣಗಳು ಎರಡು ಇದೆ ಎಂದು ಹೇಳಿ ಹೊಗಳಿದರು.

    ಇದೇ ವೇಳೆ ಬೌಲರ್ ಗಳಲ್ಲಿ ಪಾಕಿಸ್ತಾನ ವಾಸಿಮ್ ಅಕ್ರಮ್ ಅವರನ್ನು ನೆನಪಿಸಿಕೊಂಡ ಶಿವಣ್ಣ, ಅವರು ಜಿಂಕೆ ರೀತಿಯಲ್ಲಿ ಓಡಿ ಬಂದು ಬೌಲ್ ಮಾಡುತ್ತಾರೆ. ಅವರ ಓಟದ ಶೈಲಿ ಬಹಳ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ನಮ್ಮ ಜೀವನ ಇಷ್ಟೇ ಎಂದು ಸಾಯಬಾರದು, ಹೋರಾಡಬೇಕು. ನಾನು ಯಾವತ್ತು ಇನ್ನೊಬ್ಬರನ್ನು ನೋಡಿ ಹೊಟ್ಟೆ ಉರಿದುಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.

    ಕಳೆದ ಮಾರ್ಚ್ ತಿಂಗಳಿನಲ್ಲೇ ಆರಂಭವಾಗಬೇಕಿದ್ದ ಐಪಿಎಲ್ ಕೊರೊನಾ ಕಾರಣದಿಂದ ನಾಳೆಯಿಂದ ಆರಂಭವಾಗುತ್ತದೆ. ನಾಳೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮೊದಲ ಪಂದ್ಯವನ್ನು ಆಡಲಿವೆ. ನಂತರ ನಮ್ಮ ಬೆಂಗಳೂರು ತಂಡ ಸೆಪ್ಟಂಬರ್ 21ಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ.

  • ಮಾಯಂತಿ ಲ್ಯಾಂಗರ್ ಔಟ್ – ಐಪಿಎಲ್ ಹೊಸ ನಿರೂಪಕರ ಲಿಸ್ಟ್ ಬಿಡುಗಡೆ

    ಮಾಯಂತಿ ಲ್ಯಾಂಗರ್ ಔಟ್ – ಐಪಿಎಲ್ ಹೊಸ ನಿರೂಪಕರ ಲಿಸ್ಟ್ ಬಿಡುಗಡೆ

    ನವದೆಹಲಿ: ಐಪಿಎಲ್‍ನಲ್ಲಿ ನಿರೂಪಣೆ ಮಾಡುವ ಆ್ಯಂಕರ್ಸ್ ಗಳ ಪಟ್ಟಿಯನ್ನು ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಟಾರ್ ನಿರೂಪಕಿ, ಸ್ಟುವರ್ಟ್ ಬಿನ್ನಿ ಪತ್ನಿ ಮಾಯಂತಿ ಲ್ಯಾಂಗರ್ ಅವರ ಹೆಸರನ್ನು ಕೈಬಿಡಲಾಗಿದೆ.

    ನಾಳೆಯಿಂದ ಐಪಿಎಲ್ ಹಬ್ಬ ಶುರುವಾಗಲಿದೆ. 6 ತಿಂಗಳು ತಡವಾಗಿ ಐಪಿಎಲ್ ಆರಂಭವಾಗುತ್ತಿದೆ. ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‍ಗಾಗಿ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ. ಇದಕ್ಕೆ ತಕ್ಕ ಸಿದ್ಧತೆಗಳನ್ನು ಬಿಸಿಸಿಐ ಕೂಡ ಮಾಡಿಕೊಳ್ಳುತ್ತಿದೆ. ಪಾಕಿಸ್ತಾನ ಹೊರತು ಪಡಿಸಿ ಪ್ರಪಂಚದ 120 ದೇಶದಲ್ಲಿ ಐಪಿಎಲ್ ಪ್ರಸಾರವಾಗಲಿದೆ.

    ಐಪಿಎಲ್-2020 ಮೊದಲ ಪಂದ್ಯ ನಾಳೆ ಆರಂಭವಾಗಲಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸಿರುವ ಸ್ಟಾರ್ ಸ್ಪೋರ್ಟ್ಸ್ ರಂಗುರಂಗಾಗಿ ಮಾತನಾಡುವ ನಿರೂಪಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಈ ಹಿಂದೆ ಐಪಿಎಲ್‍ನಲ್ಲಿ ನಿರೂಪಣೆ ಮಾಡುತ್ತಿದ್ದ ಸ್ಟಾರ್ ನಿರೂಪಕಿ ಮಾಯಂತಿ ಲ್ಯಾಂಗರ್ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅವರನ್ನು ಕೈಬಿಡಲು ಕಾರಣವೇನು ಎಂಬುದನ್ನು ಸ್ಟಾರ್ ಸ್ಪೋರ್ಟ್ಸ್ ತಿಳಿಸಿಲ್ಲ. ಇದರ ಬಗ್ಗೆ ಮಾಯಂತಿ ಲ್ಯಾಂಗರ್ ಕೂಡ ಇಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.

    ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ ನಿರೂಪಕರ ಪಟ್ಟಿ
    ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್, ಧೀರಜ್ ಜುನೇಜಾ, ಜತಿನ್ ಸಪ್ರು, ಸುಹೇಲ್ ಚಂದೋಕ್, ಸಂಜನಾ ಗಣೇಶನ್, ಅನಂತ್ ತ್ಯಾಗಿ ಸೇರಿದಂತೆ 9 ಮಂದಿ ನಿರೂಪಕರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಕನ್ನಡದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಂಗಳೂರಿನ ವೀಣಾ ಡಿಸೋಜಾ ನಿರೂಪಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಮಾಯಂತಿ ಲ್ಯಾಂಗರ್ ಕಾಣದಿರುವುದು ಕೆಲ ಅಭಿಮಾನಿಗಳಿಗೆ ನಿರಾಸೆಯಾಗಿದೆ.

    ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಮುಂಬರುವ ಐಪಿಎಲ್‍ಗಾಗಿ ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕ ನೆರೋಲಿ ಮೆಡೋಸ್ ಅವರನ್ನು ಕರೆತಂದಿದೆ. ಉಳಿದ ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್ ಮತ್ತು ಧೀರಜ್ ಜುನೇಜಾ ಐಪಿಎಲ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದು, ಸುರೇನ್ ಸುಂದರಂ ಇದಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿರೂಪಕರಾಗಿದ್ದರು. ಅವರು ಕಳೆದ ವರ್ಷದಿಂದ ಸ್ಟಾರ್ ನೆಟ್‍ವರ್ಕ್‍ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

    ಕಿರಾ ನಾರಾಯಣನ್ ಭಾರತೀಯ ಚಲನಚಿತ್ರ ಮತ್ತು ರಂಗಭೂಮಿ ನಟಿಯಾಗಿದ್ದು, ಕ್ರೀಡಾ ನಿರೂಪಕಿಯಾಗಿಯೂ ಹೆಸರುವಾಸಿಯಾಗಿದ್ದಾರೆ. ತಾನ್ಯಾ ಪುರೋಹಿತ್ ಕೂಡ ನಟಿಯಾಗಿದ್ದು, ಹಲವಾರು ಸಿನಿಮಾದಲ್ಲಿ ಮತ್ತು ಟಿವಿ ಚಾನೆಲ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾನ್ಯಾ ಅನುಷ್ಕಾ ಶರ್ಮಾ ಅಭಿನಯದ ಎನ್‍ಎಚ್-10 ಚಿತ್ರದಲ್ಲಿ ನಟಿಸಿದ್ದಾರೆ. ಮಾಯಂತಿ ಲ್ಯಾಂಗರ್ ಅವರ ಅನುಪಸ್ಥಿತಿಯಲ್ಲಿ, ಈ ಬಾರಿಯ ಐಪಿಎಲ್‍ನಲ್ಲಿ ಹೊಸ ನಿರೂಪಕರ ತಂಡ ಕೆಲಸ ಮಾಡಲಿದೆ.

  • ಕ್ವಾರಂಟೈನ್‍ನಲ್ಲಿದ್ದರೂ ತಂಡಕ್ಕಾಗಿ ‘ಪ್ರೀತಿ’ಯ ಸಂದೇಶ

    ಕ್ವಾರಂಟೈನ್‍ನಲ್ಲಿದ್ದರೂ ತಂಡಕ್ಕಾಗಿ ‘ಪ್ರೀತಿ’ಯ ಸಂದೇಶ

    – ಪಂಜಾಬ್ ತಂಡದಲ್ಲಿ ಕನ್ನಡಿಗರದ್ದೇ ಪಾರುಪತ್ಯ

    ಅಬುಧಾಬಿ: ಕ್ವಾರಂಟೈನ್‍ನಲ್ಲಿದ್ದರೂ ಕೂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ತಮ್ಮ ತಂಡಕ್ಕಾಗಿ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

    ಐಪಿಎಲ್ ಹಬ್ಬ ಶುರುವಾಗಲು ಇನ್ನು ಕೇವಲ ಮೂರು ದಿನ ಬಾಕಿ ಇದೆ. ಈಗಾಗಲೇ ಸಿದ್ಧತೆಯಲ್ಲಿ ತೊಡಗಿರುವ ಎಲ್ಲ ತಂಡಗಳು ಕೂಡ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ನೂತನ ಸಾರಥಿ ಮತ್ತು ಹೊಸ ಉತ್ಸಹದೊಂದಿಗೆ ಕಿಂಗ್ಸ್ ಇಲೆವೆನ್ ತಂಡ ತನ್ನ ಚೊಚ್ಚಲ ಟ್ರೋಫಿ ಗೆಲ್ಲಲು ತುದಿಗಾಲಲ್ಲಿ ನಿಂತಿದೆ. ಆಟಗಾರರನ್ನು ಹುರಿದುಂಬಿಸಲು ಗುಳಿಕನ್ನೆ ಮಾಲಕಿ ಪ್ರೀತಿ ಜಿಂಟಾ ಕೂಡ ಬಂದಿದ್ದಾರೆ.

    https://www.instagram.com/p/CFKYDbGpe8F/

    ಈಗ ತಮ್ಮ ತಂಡಕ್ಕಾಗಿ ವಿಡಿಯೋ ಸಂದೇಶವೊಂದನ್ನು ಕಳುಹಿಸಿರುವ ಜಿಂಟಾ, ನೀವು ಕಠಿಣವಾಗಿ ಅಭ್ಯಾಸ ಮಾಡುತ್ತಿರುವುದನ್ನು ನಾನು ಸಾಮಾಜಿಕ ಜಾಲತಾಣದ ಮೂಲಕ ನೋಡಿದ್ದೇನೆ. ನೀವು ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದೀರಾ, ನಾನು ಈ ಕ್ವಾರಂಟೈನ್ ಅವಧಿ ಮುಗಿಸಿ ನಿಮ್ಮನ್ನು ಸೇರಲು ಬಹಳ ಉತ್ಸುಕತೆಯಿಂದ ಕಾಯುತ್ತಿದ್ದೇನೆ. ನಿಮ್ಮನ್ನು ಬಹುಬೇಗ ಸೇರಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಐಪಿಎಲ್‍ಗಾಗಿ ಯುಇಎಗೆ ಹೋಗಿರುವ ಜಿಂಟಾ ಅಲ್ಲಿ ಕ್ವಾಂರಟೈನ್ ಆಗಿದ್ದಾರೆ.

    ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿ ಕಾಣುವ ಪಂಜಾಬ್ ತಂಡ ಮೊದಲ ಬಾರಿಗೆ ಟ್ರೋಫಿ ಗೆಲ್ಲಲು ಸಿದ್ಧತೆ ನಡೆಸಿದೆ. ಪಂಜಾಬ್ ತಂಡದಲ್ಲಿ ಈ ಬಾರಿ ಅತೀ ಹೆಚ್ಚು ಕನ್ನಡಿಗರೇ ಇದ್ದಾರೆ. ಅಶ್ವಿನ್ ಡೆಲ್ಲಿ ಕ್ಯಾಪಿಟಲ್ ತಂಡ ಸೇರಿದ ನಂತರ ತಂಡದ ನಾಯಕನ ಪಟ್ಟವನ್ನು ಕನ್ನಡಿಗ ಕೆ.ಎಲ್ ರಾಹುಲ್ ವಹಿಸಿಕೊಂಡಿದ್ದಾರೆ. ಜೊತೆಗೆ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ಅನಿಲ್ ಕುಂಬ್ಳೆ ಇದ್ದಾರೆ. ಉಳಿದಂತೆ ಕರ್ನಾಟಕದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಬೌಲರ್ ಸುಚಿತ್ ಸಹ ತಂಡದಲ್ಲಿ ಇದ್ದಾರೆ. ಇದನ್ನು ಓದಿ: ಐಪಿಎಲ್‍ನಲ್ಲಿ ಹೆಚ್ಚು ಇಂಡಿಯನ್ ಕೋಚ್‍ಗಳನ್ನು ನೋಡ ಬಯಸುತ್ತೇನೆ: ಅನಿಲ್ ಕುಂಬ್ಳೆ

    ಕನ್ನಡಿಗರ ಜೊತೆ ವಿದೇಶಿ ಆಟಗಾರರಾಗಿ ಬ್ಯಾಂಟಿಂಗ್ ದೈತ್ಯ ಕ್ರಿಸ್ ಗೇಲ್, ವೆಸ್ಟ್ ಇಂಡೀಸ್‍ನ ನಿಕೋಲಸ್ ಪೂರನ್ ಮತ್ತು ಆಸ್ಟ್ರೇಲಿಯಾದ ಸ್ಫೋಟಕ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಇರಲಿದ್ದಾರೆ. ಇವರ ಜೊತೆಗೆ ಬೌಲಿಂಗ್ ನಲ್ಲಿ ಬಲ ತುಂಬಲು ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ, ವೆಸ್ಟ್ ಇಂಡೀಸ್‍ನ ಶೆಲ್ಡನ್ ಕಾಟ್ರೆಲ್ ಮತ್ತು ಮುಜೀಬ್-ಉರ್-ರೆಹ್ಮಾನ್ ಇದ್ದಾರೆ. ಪಂಜಾಬ್ ಸೆ. 20ರಂದು ದೆಹಲಿ ತಂಡದ ವಿರುದ್ಧ ಮೊದಲ ಪಂದ್ಯ ಆಡಲಿದೆ.

    ಈ ಹಿಂದೆ ತಮ್ಮ ತಂಡದ ಬಗ್ಗೆ ಮಾತನಾಡಿದ ಮುಖ್ಯ ಕೋಚ್ ಅನಿಲ್ ಕುಂಬ್ಳೆಯವರು, ನಮ್ಮ ತಂಡ ಎಲ್ಲ ವಿಭಾಗದಲ್ಲೂ ಬಹಳ ಬಲಿಷ್ಠವಾಗಿದೆ. ಯುವ ಆಟಗಾರರು ಇದ್ದಾರೆ. ಪ್ರತಿಭಾನ್ವಿತ ವಿದೇಶಿ ಆಟಗಾರರು ಇದ್ದಾರೆ ಎಂದು ಹೇಳಿದ್ದರು. ಜೊತೆಗೆ 40 ವರ್ಷದ ಗೇಲ್ ಅವರು ತಂಡದಲ್ಲಿ ಆಡಲಿದ್ದು, ಅವರು ಓರ್ವ ಆಟಗಾರನ ಜೊತಗೆ ಹಿರಿಯ ಮಾರ್ಗದರ್ಶಕರಾಗಿಯೂ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ತಿಳಿಸಿದ್ದರು. ಇದನ್ನು ಓದಿ: ಕ್ಯಾಪ್ಟನ್ ತ್ರಯರಿಂದ ಸಾಕಷ್ಟು ಕಲ್ತಿದ್ದೇನೆ: ಕೆಎಲ್ ರಾಹುಲ್

    ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿರುವ ಬಗ್ಗೆ ಮಾತನಾಡಿದ್ದ ಕೆಎಲ್ ರಾಹುಲ್, ಧೋನಿ, ಕೊಹ್ಲಿ ರೋಹಿತ್ ಅವರೊಂದಿಗೆ ಕಳೆದ 10 ವರ್ಷಗಳಿಂದ ಆಡುತ್ತಿದ್ದು, ಅವರ ನಾಯಕತ್ವದಲ್ಲಿ ಆಡಲು ನನಗೆ ಅವಕಾಶ ಲಭಿಸಿದೆ. ಕೊಹ್ಲಿ, ಧೋನಿ ವ್ಯಕ್ತಿಗತವಾಗಿ ಭಿನ್ನವಾಗಿದ್ದರೂ, ತಂಡವನ್ನು ಮುನ್ನಡೆಸುವ ವಿಚಾರದಲ್ಲಿ ಒಂದೇ. ಆದರೆ ಆ ಪದ್ಧತಿಗಳು ಮಾತ್ರ ಬೇರೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಇತ್ತ ಸಾಕಷ್ಟು ಅನುಭವವನ್ನು ಹೊಂದಿರುವ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿ ತಮ್ಮ ಪಕ್ಕದಲ್ಲೇ ಇರುವುದು ಸಾಕಷ್ಟು ಸಂತಸ ತಂದಿದೆ ಎಂದಿದ್ದರು.

  • ಪಾಕ್‌ ಕ್ರಿಕೆಟಿಗರ ಬ್ಲರ್‌ ಫೋಟೋ ಅಪ್ಲೋಡ್‌ – ಮತ್ತೆ ಸುದ್ದಿಯಲ್ಲಿ ಗಂಗೂಲಿ

    ಪಾಕ್‌ ಕ್ರಿಕೆಟಿಗರ ಬ್ಲರ್‌ ಫೋಟೋ ಅಪ್ಲೋಡ್‌ – ಮತ್ತೆ ಸುದ್ದಿಯಲ್ಲಿ ಗಂಗೂಲಿ

    ಅಬುಧಾಬಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅಪ್ಲೋಡ್‌ ಮಾಡಿದ ಫೋಟೋ ನೆಟ್ಟಿಗರ ಗಮನ ಸೆಳೆದಿದೆ.

    ಗಂಗೂಲಿ ಸಿದ್ಧತೆ ವೀಕ್ಷಿಸಲು ಶಾರ್ಜಾ ಸ್ಟೇಡಿಯಂಗೆ ತೆರಳಿದ್ದರು. ಈ ವೇಳೆ ಅಲ್ಲಿ ಅಲ್ಲಿನ ಸಿಬ್ಬಂದಿ, ಅಧಿಕಾರಿಗಳ ಜೊತೆ ಗಂಗೂಲಿ ಗ್ರೂಪ್‌ ಫೋಟೋ ತೆಗೆದಿದ್ದರು. ಇದನ್ನೂ ಓದಿ: ಐಪಿಎಲ್‍ಗಾಗಿ ದುಬೈಗೆ ಹಾರಿದ ಬಂಗಾಳದ ದಿನಗೂಲಿ ಕೆಲಸಗಾರ

     

    View this post on Instagram

     

    Famous Sharjah stadium all set to host IPL 2020

    A post shared by SOURAV GANGULY (@souravganguly) on

    ಕ್ರೀಡಾಂಗಣದಲ್ಲಿ ನಿಂತು ಗ್ರೂಪ್‌ ಫೋಟೋವನ್ನು ತೆಗೆಯುವಾಗ ಹಿಂದುಗಡೆಯಿದ್ದ ಪಾಕಿಸ್ತಾನ ಕ್ರಿಕೆಟಿಗರ ಫೋಟೋ ಸೆರೆಯಾಗಿತ್ತು. ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್‌ ಮಾಡುವಾಗ ಪಾಕಿಸ್ತಾನ ಕ್ರಿಕೆಟಿಗರ ಫೋಟೋ ಬ್ಲರ್‌ ಮಾಡಿ ಅಪ್ಲೋಡ್‌ ಮಾಡಿದ್ದಾರೆ.

    ಗಂಗೂಲಿ ಮೂರು ಫೋಟೋ ಅಪ್ಲೋಡ್‌ ಮಾಡಿದ್ದು ಈಗ ಬ್ಲರ್‌ ಮಾಡಿದ ಫೋಟೋ ನೆಟ್ಟಿಗರ ಗಮನ ಸೆಳೆದಿದೆ. ಪಾಕ್‌ ಮಾಜಿ ಆಟಗಾರರಾದ ಜಾವೆದ್‌ ಮಿಯಾಂದಾದ್‌, ರಶೀದ್‌ ಲತೀಫ್‌, ಮಿಸ್ಬಾ ಉಲ್‌ ಹಕ್‌, ಅಜರ್‌ ಮೊಹಮ್ಮದ್‌ ಈ ಫೋಟೋದಲ್ಲಿ ಇದ್ದರು. ಯಾವ ಕಾರಣಕ್ಕೆ ಫೋಟೋವನ್ನು ಗಂಗೂಲಿ ಬ್ಲರ್‌ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.

    ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್‌ ಅನ್ನು ಸಂಪೂರ್ಣವಾಗಿ ಯುಎಇಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

    2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭದ್ರತೆ ನೀಡಲು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಡಿಸಲಾಗಿತ್ತು. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮೊದಲಾರ್ಧದ ಪಂದ್ಯಗಳನ್ನು ಯುಎಇಯಲ್ಲಿ ಆಡಿಸಲಾಗಿತ್ತು. ಇದರಿಂದಾಗಿ ಯುಎಇಯಲ್ಲಿ ಕ್ರಿಕೆಟ್ ಈಗ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ.

  • ವಯಸ್ಸು 39 ಆದ್ರೂ, ನೆಟ್ಸ್‌ನಲ್ಲಿ ಧೋನಿ, ವಾಟ್ಸನ್ ಘರ್ಜನೆ – ವಿಡಿಯೋ

    ವಯಸ್ಸು 39 ಆದ್ರೂ, ನೆಟ್ಸ್‌ನಲ್ಲಿ ಧೋನಿ, ವಾಟ್ಸನ್ ಘರ್ಜನೆ – ವಿಡಿಯೋ

    ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮತ್ತು ಆರಂಭಿಕ ಬ್ಯಾಟ್ಸ್ ಮ್ಯಾನ್ ಶೇನ್ ವಾಟ್ಸನ್ ಅವರು ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

    ತಂಡದಲ್ಲಿ ಇಬ್ಬರು ಆಟಗಾರಿಗೆ ಮತ್ತು 11 ಮಂದಿ ಸಹಾಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಚೆನ್ನೈ ತಂಡ ಸ್ವಲ್ಪ ತಡವಾಗಿ ಅಭ್ಯಾಸವನ್ನು ಆರಂಭ ಮಾಡಿತ್ತು. ಸದ್ಯ ನಿರಂತರ ಅಭ್ಯಾಸದಲ್ಲಿ ನಿರತವಾಗಿರುವ ಧೋನಿ ನೇತೃತ್ವದ ಸಿಎಸ್‍ಕೆ ತಂಡ, ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಮಾರ್ಗದರ್ಶನದಲ್ಲಿ ಯುಇಎಯ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದೆ.

    ಭಾನುವಾರದ ಅಭ್ಯಾಸದ ವೇಳೆ 39 ವರ್ಷದ ಶೇನ್ ವಾಟ್ಸನ್ ಮತ್ತು ಎಂಎಸ್ ಧೋನಿ ನೆಟ್ಸ್ ಪ್ರಾಕ್ಟೀಸ್‍ನಲ್ಲಿ ಬೌಲರ್ ಗಳನ್ನು ದಂಡಿಸುತ್ತಿರುವುದು ಕಂಡು ಬಂದಿದೆ. ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಶೇನ್ ವಾಟ್ಸನ್, 39ರ ವಯಸ್ಸಿನಲ್ಲೂ, ಈ ಇಬ್ಬರು ಹಳೆಯ ವ್ಯಕ್ತಿಗಳು ಮಾಡುತ್ತಿರುವ ಅಭ್ಯಾಸವು ಇಷ್ಟವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಓದಿ: ಕೊಹ್ಲಿ ದಾಖಲೆ, ಆಸೀಸ್ ಆಟಗಾರರ ಮೇಲುಗೈ – ಐಪಿಎಲ್ ಆರೆಂಜ್ ಕ್ಯಾಪ್ ಲಿಸ್ಟ್ ಇಲ್ಲಿದೆ

    ಐಪಿಎಲ್‍ನಲ್ಲಿ ಹೆಚ್ಚು ಬಾರಿ ರಾಜಸ್ಥಾನ್ ರಾಯಲ್ಸ್ ತಂಡಕ್ಕಾಗಿ ಆಡಿದ್ದ ವಾಟ್ಸನ್ ಕಳೆದ ಎರಡು ಆವೃತ್ತಿಯಿಂದ ಚೆನ್ನೈ ತಂಡದಲ್ಲಿ ಆಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನನಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲೇ ಉಳಿಯಬೇಕು ಮತ್ತು ಶೇನ್ ವಾರ್ನ್ ಅವರ ಮಾರ್ಗದರ್ಶನದಲ್ಲಿ ಆಡಬೇಕು ಎಂದು ಇಷ್ಟವಿತ್ತು. ಆದರೆ ಅದೂ ಆಗಲಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ನಂತಹ ದೊಡ್ಡ ತಂಡಕ್ಕಾಗಿ ಆಡುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದಿದ್ದಾರೆ.

    ಚೆನ್ನೈ ತಂಡ ನನ್ನ ಮೇಲೆ ಬಹಳ ನಂಬಿಕೆಯನ್ನು ಇಟ್ಟಿದೆ. ಚೆನ್ನೈ ಒಂದು ಒಳ್ಳೆಯ ತಂಡ. ನಾನು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಇದ್ದಾಗ ಚೆನ್ನೈ ವಿರುದ್ಧ ಆಡುವ ಪಂದ್ಯದಲ್ಲಿ ಎಂಎಸ್ ಧೋನಿ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರನ್ನು ಮೆಚ್ಚಿಕೊಂಡಿದ್ದೆ. ಅವರು ಪಂದ್ಯದಲ್ಲಿ ಮತ್ತು ಪಂದ್ಯದಿಂದ ಹೊರಗೂ ತಮ್ಮ ತಂಡದ ಆಟಗಾರರನ್ನು ನಡೆಸಿಕೊಳ್ಳುವ ರೀತಿಯನ್ನು ನಾನು ಮೆಚ್ಚಿಕೊಂಡಿದ್ದೆ ಎಂದು ವಾಟ್ಸನ್ ತಿಳಿಸಿದ್ದಾರೆ. ಇದನ್ನು ಓದಿ: ಅನುಭವ ಮಾರ್ಕೆಟಿನಲ್ಲಿ ಸಿಗಲ್ಲ – ಧೋನಿಯನ್ನು ಹಾಡಿಹೊಗಳಿದ ಆಕಾಶ್ ಚೋಪ್ರಾ

    ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿದ್ದ ಐಪಿಎಲ್ ಯುಎಇಯಲ್ಲಿ ರಂಗೇರಲು ಸಿದ್ಧವಾಗಿದೆ. ಇದೇ ಸೆಪ್ಟಂಬರ್ 19ರಿಂದ ಐಪಿಎಲ್ ಹಂಗಾಮ ಶುರುವಾಗಲಿದೆ. ಆರಂಭಿಕ ಪಂದ್ಯದಲ್ಲಿ ಕಳೆದ ಆವೃತ್ತಿಯಲ್ಲಿ ಫೈನಲ್ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡ ಕಣಕ್ಕೀಳಿಯಲಿವೆ. ಒಟ್ಟು 46 ದಿನ 56 ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.

  • ಕೊಹ್ಲಿ ದಾಖಲೆ, ಆಸೀಸ್ ಆಟಗಾರರ ಮೇಲುಗೈ – ಐಪಿಎಲ್ ಆರೆಂಜ್ ಕ್ಯಾಪ್ ಲಿಸ್ಟ್ ಇಲ್ಲಿದೆ

    ಕೊಹ್ಲಿ ದಾಖಲೆ, ಆಸೀಸ್ ಆಟಗಾರರ ಮೇಲುಗೈ – ಐಪಿಎಲ್ ಆರೆಂಜ್ ಕ್ಯಾಪ್ ಲಿಸ್ಟ್ ಇಲ್ಲಿದೆ

    ನವದೆಹಲಿ: ಐಪಿಎಲ್-2020ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವಾರದಲ್ಲಿ ಐಪಿಎಲ್ ಹಂಗಾಮ ಶುರುವಾಗಲಿದೆ. ಈ ಚುಟುಕು ಪಂದ್ಯಗಳಲ್ಲಿ ಆ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದವರಿಗೆ ಆರೆಂಜ್ ಕ್ಯಾಪ್ ಮತ್ತು ಹೆಚ್ಚು ವಿಕೆಟ್ ಗಬಳಿಸಿದ ಬೌಲರ್ ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಹೆಚ್ಚು ಆರೆಂಜ್ ಕ್ಯಾಪ್ ಅನ್ನು ಆಸೀಸ್ ನ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಅವರು ಗೆದ್ದಿದ್ದಾರೆ.

    ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಆಸೀಸ್ ಆಟಗಾರರೇ ಮೇಲುಗೈ ಸಾಧಿಸಿದ್ದಾರೆ. ಡೇವಿಡ್ ವಾರ್ನರ್ ಮೂರು ಬಾರಿ ಕ್ಯಾಪ್ ಗೆದ್ದುಕೊಂಡರೆ, ಶಾನ್ ಮಾರ್ಷ್, ಮೈಕ್ ಹಸ್ಸಿ, ಮ್ಯಾಥ್ಯೂ ಹೇಡನ್ ತಲ ಒಂದು ಬಾರಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದಾರೆ. ಈ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಭಾರತೀಯ ಆಟಗಾರ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದು, ಆರೆಂಜ್ ಕ್ಯಾಪ್ ಪಡೆದವರ ಪಟ್ಟಿಯಲ್ಲಿ ಅತೀ ಹೆಚ್ಚು ರನ್ (973) ಭಾರಿಸಿ ದಾಖಲೆ ನಿರ್ಮಿಸಿದ್ದಾರೆ.

    1. 2008ರಲ್ಲಿ ಮೊದಲ ಬಾರಿಗೆ ಐಪಿಎಲ್ ಆರಂಭವಾಗಿತ್ತು. ಈ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದುಕೊಂಡಿತ್ತು. ಆದರೆ ಈ ಆವೃತ್ತಿಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಆರೆಂಜ್ ಕ್ಯಾಪ್ ವಿನ್ ಆಗಿದ್ದರು. ಇವರು ಟೂರ್ನಿಯಲ್ಲಿ ಒಟ್ಟು 616 ರನ್ ಸಿಡಿಸಿದ್ದರು.

    2. 2009ರ ಐಪಿಎಲ್ ಟ್ರೋಫಿಯನ್ನು ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಗೆದ್ದುಕೊಂಡಿತ್ತು. ಆಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದ ದೈತ್ಯ ಆರಂಭಿಕ ಬ್ಯಾಟ್ಸ್ ಮ್ಯಾನ್ ಮ್ಯೂಥ್ಯೂ ಹೇಡನ್ ಅವರು ಆರೆಂಜ್ ಕ್ಯಾಪ್ ಗೆದ್ದಿದ್ದರು. ಹೇಡನ್ ಆ ಟೂರ್ನಿಯಲ್ಲಿ ಒಟ್ಟು 572 ರನ್ ಭಾರಿಸಿದ್ದರು.

    3. 2010ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಪ್ ಗೆದ್ದಿತ್ತು. ಆದರೆ ಅಂದು ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. ಈ ಮೂಲಕ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದರು. ಇವರು ಟೂರ್ನಿಯಲ್ಲಿ ಒಟ್ಟು 618 ರನ್ ಗಳಿಸಿದ್ದರು.

    4. 2011ರ ಐಪಿಎಲ್‍ನಲ್ಲಿ ಮತ್ತೆ ಎರಡನೇ ಬಾರಿಗೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿತ್ತು. ಆದರೆ ಅಂದಿನ ಅವೃತ್ತಿಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಸ್ ಗೇಲ್ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. ಅಂದು ಗೇಲ್ ಟೂರ್ನಿಯಲ್ಲಿ 608 ರನ್ ಚಚ್ಚಿದ್ದರು.

    5. 2012 ಐಪಿಎಲ್‍ನಲ್ಲಿ ಮೊದಲ ಬಾರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಆದರೆ ತನ್ನ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ್ದ ಗೇಲ್ ಅಂದು ಕೂಡ ಸತತ ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. ಅಂದು ಅವರು ಬರೋಬ್ಬರಿ 733 ರನ್ ಸಿಡಿಸಿದ್ದರು.

    6. 2013ರ ಐಪಿಎಲ್‍ನಲ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್ ಮೈಕ್ ಹಸ್ಸಿಯವರು ಆರೆಂಜ್ ಕ್ಯಾಪ್ ವಿನ್ನರ್ ಆಗಿದ್ದರು. ಇವರು 16 ಪಂದ್ಯಗಳನ್ನಾಡಿ 733 ರನ್ ಬಾರಿಸಿದ್ದರು.

    7. 2014ರಲ್ಲಿ ಮತ್ತೆ ಎರಡನೇ ಬಾರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಈ ವೇಳೆ ಇದೇ ತಂಡದಲ್ಲಿ ಆರಂಭಿಕ ಬ್ಯಾಟ್ಸ್ ಮ್ಯಾನ್ ಆಗಿ ಮಿಂಚಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಅವರು ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು. ಅಂದು ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಉತ್ತಪ್ಪ 660 ರನ್ ಗಳಿಸಿದ್ದರು.

    8. 2015 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಎರಡನೇ ಬಾರಿಗೆ ಚಾಂಪಿಯನ್ ಆಗಿತ್ತು. ಈ ವೇಳೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಅವರು ಆರೆಂಜ್ ಕ್ಯಾಪ್ ಗೆದ್ದು ಬೀಗಿದ್ದರು. ಅವರು ಅಂದಿನ ಟೂರ್ನಿಯಲ್ಲಿ ಒಟ್ಟು 562 ರನ್ ಗಳಿಸಿದ್ದರು.

    9. 2016ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಸನ್ ರೈಸರ್ಸ್ ಹೈದರಾಬಾದ್ ಟ್ರೋಫಿ ಎತ್ತಿ ಹಿಡಿದಿತ್ತು. ಆದರೆ ಆ ಟೂರ್ನಿಯಲ್ಲಿ ದಾಖಲೆ ಬರೆದಿದ್ದ ಭಾರತದ ನಾಯಕ ಕಿಂಗ್ ಕೊಹ್ಲಿ, ಶತಕಗಳ ಮೇಲೆ ಶತಕ ಸಿಡಿಸಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು. ಒಟ್ಟು 16 ಪಂದ್ಯಗಳನ್ನಾಡಿ ದಾಖಲೆಯ 973 ರನ್ ಸಿಡಿಸಿದ್ದರು. ಈ ಮೂಲಕ ಐಪಿಎಲ್‍ನ ಒಂದೇ ಆವೃತ್ತಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು.

    10. 2017ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೂರನೇ ಬಾರಿಗೆ ಚಾಂಪಿಯನ್ ಆಗಿ ದಾಖಲೆ ಬರೆದಿತ್ತು. ಅಂದಿನ ಈ ಆವೃತ್ತಿಯಲ್ಲಿ ಮತ್ತೆ ಎರಡನೇ ಬಾರಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು.

    11. 2018 ಐಪಿಎಲ್‍ನಲ್ಲಿ ಮೂರನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಪಿಂಯನ್ ಆಗಿತ್ತು. ಈ ಟೂನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ನಾಯಕನಾಗಿದ್ದ ಕೀವೀಸ್ ಆಟಗಾರ ಕೇನ್ ವಿಲಿಯಮ್ಸನ್ ಅರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. ಅಂದು ಅವರು ಬರೋಬ್ಬರಿ 735 ರನ್ ಕಬಳಿಸಿದ್ದರು.

    12. ಕಳೆದ ವರ್ಷ ನಡೆದ 2019ರ ಐಪಿಎಲ್ ಟೂರ್ನಿಯಲ್ಲಿ ನಾಲ್ಕನೇ ಬಾರಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿಗೆ ಮತ್ತಿಕ್ಕಿತ್ತು. ಈ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಅವರು ಆರೆಂಜ್ ಕ್ಯಾಪ್ ಗೆಲ್ಲುವ ಮೂಲಕ, ಮೂರನೇ ಬಾರಿ ಆರೆಂಜ್ ಕ್ಯಾಪ್ ಗೆದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಆವೃತ್ತಿಲ್ಲಿ ವಾರ್ನರ್ 691 ರನ್ ಸಿಡಿಸಿದ್ದರು.

  • ಅನುಭವ ಮಾರ್ಕೆಟಿನಲ್ಲಿ ಸಿಗಲ್ಲ – ಧೋನಿಯನ್ನು ಹಾಡಿಹೊಗಳಿದ ಆಕಾಶ್ ಚೋಪ್ರಾ

    ಅನುಭವ ಮಾರ್ಕೆಟಿನಲ್ಲಿ ಸಿಗಲ್ಲ – ಧೋನಿಯನ್ನು ಹಾಡಿಹೊಗಳಿದ ಆಕಾಶ್ ಚೋಪ್ರಾ

    – ಧೋನಿ ಇರುವವರೆಗೂ ಚೆನ್ನೈ ತಂಡ ಉಸಿರಾಡುತ್ತಿರುತ್ತದೆ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿಯವರು ಐಪಿಎಲ್-2020ಯನ್ನು ಆಳುತ್ತಾರೆ ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

    ಐಪಿಎಲ್ ಆರಂಭಕ್ಕೆ ಕೇವಲ ಇನ್ನು ಒಂದು ವಾರ ಬಾಕಿಯಿದೆ. ಎಲ್ಲ ತಂಡಗಳು ಯುಎಇ ಮೈದಾನದಲ್ಲಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿವೆ. ತಡವಾದರೂ ಚೆನ್ನೈ ತಂಡ ಕೂಡ ಅಭ್ಯಾಸವನ್ನು ಆರಂಭಿಸಿದೆ. ಈ ನಡುವೆ ಅವರದ್ದೇ ವಾಹಿನಿಯ ಯುಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಎಂಎಸ್ ಧೋನಿಯನ್ನು ಹಾಡಿ ಹೊಗಳಿದ್ದಾರೆ.

    ಧೋನಿ ಚೆನ್ನೈ ತಂಡದ ಅತಿದೊಡ್ಡ ಶಕ್ತಿ, ಇಡೀ ಫ್ರಾಂಚೈಸಿಯೇ ಅವರ ಮೇಲೆ ಅವಲಂಬಿತವಾಗಿದೆ. ಆತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆತ್ಮವಿದ್ದಂತೆ. ಧೋನಿ ತಂಡದಲ್ಲಿ ಇರುವವರೆಗೂ ಚೆನ್ನೈ ತಂಡ ನಿರಳವಾಗಿ ಉಸಿರಾಡುತ್ತದೆ. ಜೊತೆಗೆ ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಾರೆ. ಎಂಎಸ್ ಧೋನಿ ಓರ್ವ ಆಟಗಾರನಾಗಿ ಮತ್ತು ತಂಡದ ನಾಯಕನಾಗಿ ತಂಡದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತಾರೆ ಎಂದು ಚೋಪ್ರಾ ಹೇಳಿದ್ದಾರೆ.

    ಧೋನಿ ಕಳೆದ ಕೆಲ ದಿನಗಳಿಂದ ಕ್ರಿಕೆಟ್ ಆಡಿಲ್ಲ. ಇದು ಕೆಲವರಿಗೆ ಧೋನಿ ಮುಂಚೆಯಂತೆಯೇ ಮೈದಾನದಲ್ಲಿ ಬ್ಯಾಟ್ ಬೀಸುತ್ತಾರಾ, ಓಡುತ್ತಾರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ ನಾವೆಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕು ಆತ ಬಹಳ ಅನುಭವವುಳ್ಳ ಆಟಗಾರ, ಅನುಭವವನ್ನು ನಾವು ಸೂಪರ್ ಮಾರ್ಕೆಟಿನಲ್ಲಿ ಕೊಂಡುಕೊಳ್ಳಲು ಆಗುವುದಿಲ್ಲ. ಈ ಬಾರಿ ಧೋನಿ ಉತ್ತಮವಾಗಿ ಆಡುತ್ತಾರೆ ಎಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಧೋನಿಯವರು ನಮ್ಮ ತಂಡದ ಜೀವನ ಮತ್ತು ಆತ್ಮ ಎಂದು ಈ ಹಿಂದೆಯೇ ಚೆನ್ನೈ ತಂಡ ಹೇಳಿಕೊಂಡಿದೆ. ಹೀಗಾಗಿ ಧೋನಿ ಈ ಬಾರಿ ಎಲ್ಲರಿಗಿಂತ ಬಹಳ ಚೆನ್ನಾಗಿ ಆಡುತ್ತಾರೆ. ಧೋನಿ ಬ್ಯಾಟ್ಸ್ ಮ್ಯಾನ್ ಆಗಿ ಹೆಚ್ಚು ಪ್ರಭಾವ ಬೀರುತ್ತಾರೆ. ಯಾವಾಗ ಸ್ಪಿನ್ನರ್ ಗಳು ಬೌಲ್ ಮಾಡುತ್ತಾರೋ ಆಗ ಧೋನಿ ಉತ್ತಮವಾಗಿ ಆಡುತ್ತಾರೆ. ನನಗೆ ನಂಬಿಕೆ ಇದೆ ಎಂಎಸ್ ಧೋನಿ ಈ ಬಾರಿಯ ಐಪಿಎಲ್ ಅನ್ನು ಆಳುತ್ತಾರೆ ಎಂದು ಅಂತಾ ಆಕಾಶ್ ಚೋಪ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಚೆನ್ನೈ ತಂಡದ ಪ್ರಮುಖ ಇಬ್ಬರು ಆಟಗಾರಾದ ರೈನಾ ಮತ್ತು ಹರ್ಭಜನ್ ವೈಯಕ್ತಿಕ ಕಾರಣದಿಂದ ಐಪಿಎಲ್‍ನಿಂದ ಹೊರೆಗೆ ಬಂದಿದ್ದಾರೆ. ಅದರೂ ಚೆನ್ನೈ ತಂಡ ಬಲಿಷ್ಠವಾಗಿದೆ ಎಂದು ಚೋಪ್ರಾ ಹೇಳಿದ್ದಾರೆ. ಯುಎಇ ಮೈದಾನಗಳು ಸ್ಪಿನ್ನರ್ ಗೆ ಹೆಚ್ಚು ಸಹಾಯಕವಾಗಲಿದ್ದು, ಜಡೇಜಾ, ತಾಹೀರ್, ಚಾವ್ಲಾ ಉತ್ತಮವಾಗಿ ಸ್ಪಿನ್ ಮಾಡಲಿದ್ದಾರೆ ಎಂದು ಚೋಪ್ರಾ ತಿಳಿಸಿದ್ದಾರೆ.

  • ಐಪಿಎಲ್‍ನಲ್ಲಿ ಹೆಚ್ಚು ಇಂಡಿಯನ್ ಕೋಚ್‍ಗಳನ್ನು ನೋಡ ಬಯಸುತ್ತೇನೆ: ಅನಿಲ್ ಕುಂಬ್ಳೆ

    ಐಪಿಎಲ್‍ನಲ್ಲಿ ಹೆಚ್ಚು ಇಂಡಿಯನ್ ಕೋಚ್‍ಗಳನ್ನು ನೋಡ ಬಯಸುತ್ತೇನೆ: ಅನಿಲ್ ಕುಂಬ್ಳೆ

    – 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರೆ

    ನವದೆಹಲಿ: ಐಪಿಎಲ್‍ನಲ್ಲಿ ಹೆಚ್ಚು ಭಾರತೀಯ ಮುಖ್ಯ ಕೋಚ್‍ಗಳನ್ನು ನೋಡಲು ನಾನು ಬಯಸುತ್ತೇನೆ ಎಂದು ಕಿಂಗ್ಸ್ ಇಲೆವೆನ್ ತಂಡದ ಮುಖ್ಯ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ ಅವರು ಹೇಳಿದ್ದಾರೆ.

    ಐಪಿಎಲ್-2020 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಯುಎಇ ತಲುಪಿರುವ ಎಲ್ಲ ತಂಡಗಳು ಖಾಲಿ ಮೈದಾನದಲ್ಲಿ ಆಡಲು ಭರ್ಜರಿ ಸಿದ್ಧತೆ ನಡೆಸಿವೆ. ಅಂತಯೇ ಕಿಂಗ್ಸ್ ಇಲೆವೆನ್ ತಂಡ ಕೂಡ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ತಾಲೀಮು ಮಾಡುತ್ತಿದೆ. ಈ ವೇಳೆ ಅನ್‍ಲೈನ್ ಸಂವಾದದಲ್ಲಿ ಮಾತನಾಡಿರುವ ಅನಿಲ್, 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರೆ ಎಂದು ಹೇಳಿದ್ದಾರೆ.

    ಈ ಸಂವಾದ ಕಾರ್ಯಕ್ರಮದಲ್ಲಿ ಕೋಚ್‍ಗಳ ಬಗ್ಗೆ ಮಾತನಾಡಿರುವ ಅವರು, ನಾನು ಐಪಿಎಲ್‍ನಲ್ಲಿ ಹೆಚ್ಚು ಭಾರತೀಯ ಮುಖ್ಯ ಕೋಚ್‍ಗಳನ್ನು ನೋಡಲು ಬಯಸುತ್ತೇನೆ. ಆದರೆ ವಿಪರ್ಯಾಸ ಎಂಬಂತೆ ನಮ್ಮ ಐಪಿಎಲ್‍ನಲ್ಲಿ ಭಾರತೀಯರಿಗಿಂತ ವಿದೇಶಿಗರೇ ಮುಖ್ಯ ಕೋಚ್ ಆಗಿರುತ್ತಾರೆ. ಭಾರತೀಯರು ಕೋಚ್ ಆಗಿ ಕಾಣಿಸಿಕೊಳ್ಳುವುದು ಕಡಿಮೆ. ಮುಂದಿನ ದಿನಗಳಲ್ಲಿ ನಮ್ಮವರೇ ಹೆಚ್ಚು ಮುಖ್ಯ ಕೋಚ್‍ಗಳು ಆಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಕುಂಬ್ಳೆ, ಗೇಲ್ ತಂಡದಲ್ಲಿ ಇರುವುದು ಮುಖ್ಯವಾಗುತ್ತದೆ. ಏಕೆಂದರೆ ಗೇಲ್ ಕೇವಲ ಬ್ಯಾಟ್ಸ್ ಮ್ಯಾನ್ ಆಗಿ ಇರುವುದಿಲ್ಲ. ತಂಡದಲ್ಲಿ ಓರ್ವ ಮಾರ್ಗದರ್ಶಕನಾಗಿ, ಅನುಭವಿ ಆಟಗಾರನಾಗಿ ಇರುತ್ತಾರೆ. ಪಂದ್ಯದ ವೇಳೆ ಅವರ ಸಲಹೆಯನ್ನು ಸ್ವೀಕರಿಸಬೇಕಾಗುತ್ತದೆ. ಜೊತೆಗೆ ಟಾಪ್ ಆರ್ಡರ್ ನಲ್ಲಿ ಈಗಲೂ ದೊಡ್ಡ ಹೊಡೆತಗಳಿಗೆ ಗೇಲ್ ಹೆಸರುವಾಸಿ. ಹೀಗಾಗಿ ಅವರು ತಂಡದಲ್ಲಿ ಇರಬೇಕು ಎಂದು ತಿಳಿಸಿದ್ದಾರೆ.

    ನಮ್ಮ ತಂಡ ಎಲ್ಲ ವಿಭಾಗದಲ್ಲೂ ಬಹಳ ಬಲಿಷ್ಠವಾಗಿದೆ. ಯುವ ಆಟಗಾರರು ಇದ್ದಾರೆ. ಪ್ರತಿಭಾನ್ವಿತ ವಿದೇಶಿ ಆಟಗಾರರು ಇದ್ದಾರೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರ ಧೋನಿ ಐಪಿಎಲ್ ಆಡುತ್ತಿರುವ ಬಗ್ಗೆ ಮಾತನಾಡಿದ ಅವರು, ನನಗೆ ಧೋನಿ ಬಗ್ಗೆ ಚೆನ್ನಾಗಿ ಗೊತ್ತಿದೆ. ಆತ ಈ ಬಾರಿ ಐಪಿಎಲ್‍ನಲ್ಲಿ ಚೆನ್ನಾಗಿ ಆಡುತ್ತಾನೆ. ನಾನೂ ಕೂಡ ನಿವೃತ್ತಿ ಹೊಂದಿದ ಬಳಿಕ ಐಪಿಎಲ್ ಆಡಿದ್ದೇನೆ ಎಂದಿದ್ದಾರೆ.

    ಭಾರತೀಯರಲ್ಲದ ಮುಖ್ಯ ಕೋಚ್ ಹೊಂದಿರುವ ಐಪಿಎಲ್ ತಂಡಗಳು
    ರಿಕಿ ಪಾಂಟಿಂಗ್ (ದೆಹಲಿ ಕ್ಯಾಪಿಟಲ್ಸ್), ಬ್ರೆಂಡನ್ ಮೆಕಲಮ್ (ಕೆಕೆಆರ್), ಸ್ಟೀಫನ್ ಫ್ಲೆಮಿಂಗ್ (ಸಿಎಸ್‍ಕೆ), ಮಹೇಲಾ ಜಯವರ್ಧನೆ (ಮುಂಬೈ ಇಂಡಿಯನ್ಸ್), ಟ್ರೆವರ್ ಬೇಲಿಸ್ (ಸನ್‍ರೈಸರ್ಸ್), ಸೈಮನ್ ಕ್ಯಾಟಿಚ್ (ಆರ್.ಸಿ.ಬಿ) ಆಂಡ್ರ್ಯೂ ಮೆಕ್‍ಡೊನಾಲ್ಡ್ (ರಾಜಸ್ಥಾನ್ ರಾಯಲ್ಸ್). ಪಂಜಾಬ್ ತಂಡಕ್ಕೆ ಮಾತ್ರ ಭಾರತೀಯರಾದ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿದ್ದಾರೆ.

  • ಚೆನ್ನೈ ಜೊತೆ ಮೊದಲ ಪಂದ್ಯ, ಮೂರನೇ ದಿನ ಬೆಂಗಳೂರು ಮ್ಯಾಚ್

    ಚೆನ್ನೈ ಜೊತೆ ಮೊದಲ ಪಂದ್ಯ, ಮೂರನೇ ದಿನ ಬೆಂಗಳೂರು ಮ್ಯಾಚ್

    – ಕೊನೆಗೂ ಪ್ರಕಟವಾಯ್ತು ಐಪಿಎಲ್ ವೇಳಾಪಟ್ಟಿ

    ಅಬುಧಾಬಿ: ಕ್ರೀಡಾ ಪ್ರೇಮಿಗಳು ನಿರೀಕ್ಷೆ ಮಾಡುತ್ತಿದ್ದ ಐಪಿಎಲ್-2020ರ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಸೆಪ್ಟಂಬರ್ 19ರಿಂದ ಪಂದ್ಯಗಳು ಆರಂಭವಾಗಲಿವೆ.

    ಮೊದಲ ಪಂದ್ಯವನ್ನು ಸಂಪ್ರಾದಯದಂತೆ ಕಳೆದ ಟೂರ್ನಿಯಲ್ಲಿ ಫೈನಲ್ ಆಡಿದ್ದ ಮುಂಬೈ ಇಂಡಿಯನ್ಸ್ ತಂಡ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಆಡಲಿವೆ. ನಂತರ ಎರಡನೇ ಪಂದ್ಯದಲ್ಲಿ ಡೆಲ್ಲಿ ಮತ್ತು ಪಂಜಾಬ್ ತಂಡಗಳು ಮುಖಾಮುಖಿಯಾಗಲಿದ್ದು, ಮೂರನೇ ಪಂದ್ಯ ಆರ್‌ಸಿಬಿ ಮತ್ತು ಹೈದರಾಬಾದ್ ತಂಡಗಳ ನಡುವೆ ನಡೆಯಲಿದೆ.

    ಈ ಮೊದಲು ಆಟಗಾರರಲ್ಲಿ ಮತ್ತು ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲ ಪಂದ್ಯವನ್ನು ಚೆನ್ನೈ ಆಡುವುದು ಅನುಮಾನ ಎಂದು ವರದಿಯಾಗಿತ್ತು. ಆದರೆ ಈಗ ಈ ಅನುಮಾನಕ್ಕೆ ವೇಳಾಪಟ್ಟಿ ಉತ್ತರ ನೀಡಿದೆ.

    ಟೂರ್ನಿಯಲ್ಲಿ ನವೆಂಬರ್ ಮೂರರವರೆಗೆ ಒಟ್ಟು 56 ಪಂದ್ಯಗಳು ನಡೆಯಲಿದ್ದು, 45ದಿನಗಳ ಕಾಲ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ವಾರದ ದಿನದಲ್ಲಿ ಎಂದಿನಂತೆ ಕೇವಲ ಒಂದೇ ಪಂದ್ಯ ನಡೆಯುತ್ತದೆ. ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿದೆ. ಇನ್ನೂ ಶನಿವಾರ ಮತ್ತು ಭಾನುವಾರ ಎರಡು ಪಂದ್ಯಗಳಿದ್ದು, ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಎರಡನೇ ಪಂದ್ಯ 7.30ಕ್ಕೆ ಆರಂಭವಾಗಲಿದೆ.

    ದುಬೈ, ಶಾರ್ಜಾ ಮತ್ತು ಅಬುಧಾಬಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಅಬುಧಾಬಿ ಸ್ಟೇಡಿಯಂನಲ್ಲಿ ನಡೆಯಲಿದೆ. ಕೊನೆಯ ಲೀಗ್ ಪಂದ್ಯ ಶಾರ್ಜಾ ಮೈದಾನದಲ್ಲಿ ನಡೆಯಲಿದೆ. ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಸಿಸಿಐ ಬಿಡುಗಡೆ ಮಾಡಿದ್ದು, ನಂತರ ನಡೆಯುವ ಕ್ವಾಲಿಫಯರ್, ಫೈನಲ್ ಪಂದ್ಯದ ಸ್ಥಳಗಳ ಮಾಹಿತಿಯನ್ನು ಪ್ರಕಟಿಸಿಲ್ಲ.

    ಇಂದು ಬಿಡುಗಡೆ ಮಾಡಿರುವ ಐಪಿಎಲ್ ವೇಳಾಪಟ್ಟಿಯನ್ನು ಬಿಸಿಸಿಐ ಕಳೆದ ತಿಂಗಳಲ್ಲೇ ಬಿಡುಗಡೆ ಮಾಡಬೇಕಾಗಿತ್ತು. ಇದರ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರಿಗೆ ಮತ್ತು ಸಿಬ್ಬಂದಿ ವರ್ಗದವರಗೆ ಕೊರೊನಾ ಪಾಸಿಟಿವ್ ಬಂದಿತ್ತು ಹೀಗಾಗಿ ತಡವಾಗಿತ್ತು. ನಂತರ ಕಳೆದ ಶುಕ್ರವಾರ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಅಂದು ಕೂಡ ಆಗಿರಲಿಲ್ಲ.

    ಕಳೆದ ಮಾರ್ಚ್ ತಿಂಗಳಿನಲ್ಲೇ ನಡೆಯಬೇಕಿದ್ದ ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿತ್ತು. ಈ ನಡುವೆ ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಐಪಿಎಲ್ ಅನ್ನು ಯುಎಇಯಲ್ಲಿ ಆಡಿಸಲು ಬಿಸಿಸಿಐ ತೀರ್ಮಾನ ಮಾಡಿತ್ತು. ಅಂತಯೇ ಈಗಾಗಲೇ ಎಲ್ಲ ತಂಡಗಳು ಯುಎಇ ತಲುಪಿದ್ದಿ. ಸೆಪ್ಟೆಂಬರ್ 19ರಿಂದ ಐಪಿಎಲ್ ಹಂಗಾಮ ಆರಂಭವಾಗಲಿದೆ.

  • ಆರ್‌ಸಿಬಿ ಕೊಹ್ಲಿ, ಎಬಿಡಿ ಮೇಲೆ ಅವಲಂಬಿತವಾಗಿಲ್ಲ: ಉಮೇಶ್ ಯಾದವ್

    ಆರ್‌ಸಿಬಿ ಕೊಹ್ಲಿ, ಎಬಿಡಿ ಮೇಲೆ ಅವಲಂಬಿತವಾಗಿಲ್ಲ: ಉಮೇಶ್ ಯಾದವ್

    – ರಣಜಿಯಲ್ಲಿ ಖಾಲಿ ಮೈದಾನದಲ್ಲಿ ಆಡಿ ಅಭ್ಯಾಸವಿದೆ

    ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಅವಲಂಬಿತವಾಗಿದೆ ಎಂಬ ಮಾತನ್ನು ಆರ್‌ಸಿಬಿ  ತಂಡದ ಅನುಭವಿ ವೇಗಿ ಉಮೇಶ್ ಯಾದವ್ ಅವರು ತಳ್ಳಿ ಹಾಕಿದ್ದಾರೆ.

    ಆರ್‌ಸಿಬಿ ತಂಡ ಐಪಿಎಲ್ ಆಡಲು ಈಗಾಗಲೇ ಯುಎಇಗೆ ತೆರಳಿ ಅಭ್ಯಾಸವನ್ನು ಆರಂಭಿಸಿದೆ. ಈ ಬಾರಿ ಕಪ್ ಗೆಲ್ಲುವ ತವಕದಲ್ಲಿ ಭರ್ಜರಿ ಸಿದ್ಧತೆಯನ್ನು ಕೂಡ ನಡೆಸಿದೆ. ಅಂತಯೇ ತಂಡದ ಪ್ರಮುಖ ವೇಗಿ ಉಮೇಶ್ ಯಾದವ್ ಅವರು ಮಾತನಾಡಿ, ರಣಜಿಯಲ್ಲಿ ಖಾಲಿ ಮೈದಾನದಲ್ಲಿ ಆಡಿ ಅಭ್ಯಾಸವಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಆರ್‌ಸಿಬಿ ತಂಡ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಜಾಸ್ತಿ ಅವಲಂಬಿತವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಜನರು ನಾವು ಅವರ ಮೇಲೆ ಅವಲಂಬಿತವಾಗಿದ್ದೇವೆ ಎಂದು ಹೇಳುತ್ತಾರೆ. ಅವರು ಕೆಲ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ನಿಜ. ಆದರೆ ಇಡೀ ತಂಡವೇ ಅವರ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಒಪ್ಪುವುದಿಲ್ಲ. ಒಂದು ಪಂದ್ಯ ಗೆಲ್ಲಬೇಕಾದರೆ ತಂಡದ ಪ್ರತಿಯೊಬ್ಬ ಆಟಗಾರನ ಶ್ರಮವಿರುತ್ತದೆ ಎಂದು ತಿಳಿಸಿದ್ದಾರೆ.

    ತಂಡದಲ್ಲಿ 11 ಜನರು ಒಟ್ಟಿಗೆ ಆಡುತ್ತೇವೆ. ಅದರಲ್ಲಿ ನಾವು ಇಬ್ಬರೇ ಆಟಗಾರರ ಮೇಲೆ ಅವಲಂಬಿತವಾದರೆ, ಇನ್ನುಳಿದ ಆಟಗಾರರು ಏನೂ ಮಾಡುತ್ತಾರೆ. ತಂಡದಲ್ಲಿ ಪ್ರತಿಯೊಬ್ಬ ಆಟಗಾರನೂ ಕೂಡ ಪಂದ್ಯ ಗೆಲ್ಲಲು ತನ್ನದೇ ಆದ ಕೊಡುಗೆ ನೀಡಿರುತ್ತಾನೆ. ಆದರೆ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಉಳಿದ ಆಟಗಾರರಿಗಿಂತ ಜಾಸ್ತಿ ಕೊಡುಗೆ ನೀಡಿದ್ದಾರೆ ಅಷ್ಟೆ. ತಂಡಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅವರು ಜಾಸ್ತಿ ಶ್ರಮಪಟ್ಟಿದ್ದಾರೆ ಎಂದು ಉಮೇಶ್ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಜೊತೆಗೆ ಖಾಲಿ ಮೈದಾನದಲ್ಲಿ ಐಪಿಎಲ್ ಆಡುವ ಬಗ್ಗೆ ಮಾತನಾಡಿರುವ ಅವರು, ಖಾಲಿ ಮೈದಾನದಲ್ಲಿ ಆಡುವುದು ನಮಗೆ ಹೊಸದೇನಲ್ಲ. ನಾವು ಅದನ್ನು ಯುಎಇಯಲ್ಲಿ ನೋಡಿಲ್ಲ. ಆದರೆ ಭಾರತದಲ್ಲಿ ಬಹಳ ರಣಜಿ ಟ್ರೋಫಿ ಪಂದ್ಯಗಳನ್ನು ಖಾಲಿ ಮೈದಾನದಲ್ಲಿ ಆಡಿದ್ದೇವೆ. ಹಲವಾರು ರಣಜಿ ಪಂದ್ಯದ ನಂತರ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಬಂದಿದ್ದೇನೆ. ಹೀಗಾಗಿ ಖಾಲಿ ಮೈದಾನದಲ್ಲಿ ನಮ್ಮನ್ನು ನಾವೇ ಹೇಗೆ ಹುರಿದುಂಬಿಸಿಕೊಳ್ಳಬೇಕು ಎಂದು ಗೊತ್ತಿದೆ ಎಂದಿದ್ದಾರೆ.

    ಆರ್‌ಸಿಬಿ ಕಳೆದ ಅಗಸ್ಟ್ 21ರಂದೇ ಯುಎಇಗೆ ಹೋಗಿದ್ದು, ಆರು ದಿನಗಳ ಕ್ವಾಂರಟೈನ್ ಅವಧಿಯನ್ನು ಮುಗಿಸಿ ಅಭ್ಯಾಸವನ್ನು ಆರಂಭ ಮಾಡಿದೆ. ಸೆಪ್ಟಂಬರ್ 19ರಿಂದ ಖಾಲಿ ಮೈದಾನದಲ್ಲಿ ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯ ಮುಂಬೈ ಮತ್ತು ಚೆನ್ನೈ ತಂಡಗಳ ನಡುವೆ ನಡೆಯಬೇಕಿತ್ತು. ಆದರೆ ಚೆನ್ನೈ ತಂಡದಲ್ಲಿ 13 ಮಂದಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಆರ್‌ಸಿಬಿ ಆರಂಭಿಕ ಪಂದ್ಯವನ್ನು ಮುಂಬೈ ಎದುರು ಆಡಲಿದೆ ಎಂದು ಹೇಳಲಾಗಿದೆ.