Tag: IPL

  • ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

    ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

    ಹೈದರಾಬಾದ್‌: ಲಕ್ನೋ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ನಿಕೋಲಸ್ ಪೂರನ್ (Nicholas Pooran) ಅವರು ಐಪಿಎಲ್‌ನಲ್ಲಿ (IPL) ವೇಗದ ಅರ್ಧಶತಕ ಸಿಡಿಸಿ ಈ ಐಪಿಎಲ್‌ನಲ್ಲಿ ದಾಖಲೆ ಬರೆದಿದ್ದಾರೆ.

    ಸನ್‌ರೈಸರ್ಸ್‌ ವಿರುದ್ಧ ಕೇವಲ 18 ಎಸೆತಗಳಲ್ಲಿ 50 ರನ್‌ ಸಿಡಿಸಿ ಪೂರನ್‌ ಸಾಧನೆ ಮಾಡಿದ್ದಾರೆ. 4 ರನ್‌ಗೆ 1 ವಿಕೆಟ್‌ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಆಗಮಿಸಿದ ಪೂರನ್‌ ಬೌಂಡರಿ, ಸಿಕ್ಸ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

    ಪೂರನ್‌ ಔಟಾದಾಗ ತಂಡದ ಮೊತ್ತ 120 ಆಗಿತ್ತು. ಈ ಪೈಕಿ ಪೂರನ್‌ ಒಬ್ಬರೇ 70 ರನ್‌ (26 ಎಸೆತ, 6 ಬೌಂಡರಿ, 6 ಸಿಕ್ಸ್‌) ಚಚ್ಚಿದ್ದರು. ಇದನ್ನೂ ಓದಿ: ಕಿಂಗ್ಸ್ ಗೆಲುವಿಗೆ ಕನ್ನಡಿಗನ ಕಾಣಿಕೆ – ವೈಶಾಖ್ ವಿಜಯ್ ಯಾರು?

    2025ರ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಆಟಗಾರರು
    ಪೂರನ್‌ (ಎಲ್‌ಎಸ್‌ಜಿ) – 50 ರನ್‌, 18 ಎಸೆತ
    ಮಾರ್ಷ್‌ (ಎಲ್‌ಎಸ್‌ಜಿ) – 50 ರನ್‌, 21 ಎಸೆತ
    ಹೆಡ್‌(ಎಸ್‌ಆರ್‌ಹೆಚ್‌) – 50 ರನ್‌, 21 ಎಸೆತ

    ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಯಶಸ್ವಿ ಜೈಸ್ವಾಲ್‌ ಹೆಸರಿನಲ್ಲಿದೆ. ಜೈಸಸ್ವಾಲ್‌ 13 ಎಸೆತದಲ್ಲಿ ಅರ್ಧಶತಕ ಸಿಡಿಸಿದರೆ ಕೆಎಲ್‌ ರಾಹುಲ್‌ 14 ಎಸೆತದಲ್ಲಿ 50 ಹೊಡೆದಿದ್ದಾರೆ.

  • ಕಿಂಗ್ಸ್ ಗೆಲುವಿಗೆ ಕನ್ನಡಿಗನ ಕಾಣಿಕೆ – ವೈಶಾಖ್ ವಿಜಯ್ ಯಾರು?

    ಕಿಂಗ್ಸ್ ಗೆಲುವಿಗೆ ಕನ್ನಡಿಗನ ಕಾಣಿಕೆ – ವೈಶಾಖ್ ವಿಜಯ್ ಯಾರು?

    – ಕನ್ನಡದಲ್ಲೇ ಸಂತಸ ಹಂಚಿಕೊಂಡ ವೈಶಾಖ್

    ಅಹಮದಾಬಾದ್: ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಹೊಸ ಹೊಸ ಪ್ರತಿಭೆಗಳು ಗುರುತಿಸಿಕೊಳ್ಳುತ್ತಿವೆ. ಮಂಗಳವಾರ ನಡೆದ ಪಂಜಾಬ್ ಕಿಂಗ್ಸ್ (Punjab Kings), ಗುಜರಾತ್ ಟೈಟನ್ಸ್ ನಡುವಿನ ಜಿದ್ದಾಜಿದ್ದಿ ಕಣದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ವೈಶಾಖ್ ವಿಜಯ್ ಕುಮಾರ್ (Vyshak Vijay Kumar) ತಮ್ಮ ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ.

    ಹೌದು. 243 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದ ಪಂಜಾಬ್, ಟೈಟನ್ಸ್ (Gujarat Titans) ವಿರುದ್ಧ ಕೇವಲ 11 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಆದ್ರೆ ಈ ರೋಚಕ ಗೆಲುವಿಗೆ ಕಾರಣವಾಗಿದ್ದು, ಕನ್ನಡಿಗ ವೈಶಾಖ್ ವಿಜಯ್ ಕುಮಾರ್. ಯಾವುದೇ ವಿಕೆಟ್ ಪಡೆಯದಿದ್ದರೂ ತಮ್ಮ ಬೌಲಿಂಗ್ ಸಾಮರ್ಥ್ಯದಿಂದ ಹೆಚ್ಚು ರನ್ ಬಿಟ್ಟುಕೊಡದೇ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 3 ಓವರ್‌ಗಳಲ್ಲಿ 28 ರನ್ ಬಿಟ್ಟುಕೊಟ್ಟು ತಂಡವನ್ನು ಗೆಲುವಿನ ದಡ ಸೇರಿಸಿದರು.

    ಇನ್ನು ಪಂದ್ಯದ ಬಳಿಕ ಕನ್ನಡದಲ್ಲೇ ಮಾತನಾಡಿದ ವೈಶಾಖ್, ಫೀಲ್ಡ್ ಸೆಟ್ಟಿಂಗ್ ಮೊದಲೇ ಪ್ಲ್ಯಾನ್ ಮಾಡಿದ್ದೆವು. ಪ್ರಾಕ್ಟಿಸ್ ಪಂದ್ಯದಲ್ಲೇ ಈ ಬಗ್ಗೆ ಯೋಜನೆ ರೂಪಿಸಿದ್ದೆವು. ಅದೇ ರೀತಿ ಪಂದ್ಯದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಿದೆವು. ಅದು ಪಂದ್ಯ ಗೆಲ್ಲಲು ಸಹಾಯವಾಯಿತು. ಖಂಡಿತವಾಗಿಯೂ ನಾವು ಗೆಲ್ಲುತ್ತೇವೆ ಎಂದರು.

     

    ವೈಶಾಖ್ ವಿಜಯ್ ಕುಮಾರ್ ಯಾರು?
    ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರ ಹಲವು ಟೂರ್ನಿಗಳಲ್ಲಿ ಆಡಿರುವ ವೈಶಾಖ್ ವಿಜಯ್ ಕುಮಾರ್, 26 ವರ್ಷ ವಯಸ್ಸಿನ ಬಲಗೈ ವೇಗದ ಬೌಲರ್. ವೈಶಾಖ್ 1997ರ ಜನವರಿ 31ರಂದು ಬೆಂಗಳೂರಿನಲ್ಲಿ ಜನಿಸಿದರು.

    2021ರ ಫೆಬ್ರವರಿ 24ರಂದು ವಿಜಯ್ ಹಜಾರೆ ಟ್ರೋಫಿಯಲ್ಲಿ ಒಡಿಶಾ ವಿರುದ್ಧ ತಮ್ಮ ಚೊಚ್ಚಲ ಲಿಸ್ಟ್ ಎ ಪಂದ್ಯ ಆಡಿದರು. ಸರ್ವೀಸಸ್ ತಂಡದ ವಿರುದ್ಧ ಆಡಿದ ಮೊದಲ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ, 25 ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಪಡೆದು ಮಿಂಚಿದ್ದರು. 2022ರ ಫೆಬ್ರವರಿ 17ರಂದು ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.

    ಈಗಾಗಲೇ ವಿಜಯ್ ಹಜಾರೆ ಟ್ರೋಫಿ, ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕದ ಪರ ಆಡಿದ ಅನುಭವ ವೈಶಾಖ್ ವಿಜಯ್‌ಗಿದೆ. ಇದುವರೆಗ ಆಡಿದ 10 ಪ್ರಥಮ ದರ್ಜೆ ಪಂದ್ಯಗಳಲ್ಲಿ, ಅವರು 38 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಇದೇ ವೇಳೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 11 ವಿಕೆಟ್ ಕಬಳಿಸಿದ್ದಾರೆ. ದೇಶಿಯ ಮಟ್ಟದಲ್ಲಿ 14 ಟಿ20 ಪಂದ್ಯಗಳನ್ನು ಆಡಿದ ಅನುಭವವಿರುವ ಯುವ ವೇಗಿ, 22 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.

    ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವೈಶಾಖ್ 10 ಪಂದ್ಯಗಳಿಂದ 15 ವಿಕೆಟ್ ಕಬಳಿಸಿದ್ದರು. ಆ ಮೂಲಕ ಪಂದ್ಯಾವಳಿಯಲ್ಲಿ ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 6.31ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ, ತಾವು ಹೆಚ್ಚು ರನ್ ಸೋರಿಕೆಯಾಗಲು ಅವಕಾಶ ಕೊಡುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದರು.

  • ಅಶುತೋಶ್‌ ಬೆಂಕಿ ಆಟಕ್ಕೆ ಲಕ್ನೋ ಬರ್ನ್‌! – ಇಂಪ್ಯಾಕ್ಟ್‌ ಪ್ಲೇಯರ್‌ ಆಟ, ಡೆಲ್ಲಿಗೆ ರೋಚಕ ಜಯ

    ಅಶುತೋಶ್‌ ಬೆಂಕಿ ಆಟಕ್ಕೆ ಲಕ್ನೋ ಬರ್ನ್‌! – ಇಂಪ್ಯಾಕ್ಟ್‌ ಪ್ಲೇಯರ್‌ ಆಟ, ಡೆಲ್ಲಿಗೆ ರೋಚಕ ಜಯ

    ವಿಶಾಖಪಟ್ಟಣ: 7 ರನ್‌ಗಳಿಗೆ 3 ವಿಕೆಟ್‌ ಪತನಗೊಂಡಿದ್ದರೂ ಕೊನೆಯಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕ್ರೀಸ್‌ಗ ಬಂದ ಅಶುತೋಷ್‌ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ತಂಡ  ಲಕ್ನೋ ವಿರುದ್ಧ 1 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಲಕ್ನೋ 8 ವಿಕೆಟ್‌ ನಷ್ಟಕ್ಕೆ 209 ರನ್‌ ಹೊಡೆಯಿತು. ಕಠಿಣ ಸವಾಲು ಬೆನ್ನತ್ತಿದ ಡೆಲ್ಲಿ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಅಂತಿಮವಾಗಿ 19.3 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 211 ರನ್‌ಗಳಿಸಿ ಗೆಲುವು ಸಾಧಿಸಿತು.

    ಡೆಲ್ಲಿ 7 ರನ್‌ಗಳಿಸುವಷ್ಟರಲ್ಲೇ 3 ವಿಕೆಟ್‌ ಕಳೆದುಕೊಂಡಿತ್ತು. ನಾಯಕ ಅಕ್ಷರ್‌ ಪಟೇಲ್‌ 22 ರನ್ (11 ಎಸೆತ, 3 ಬೌಂಡರಿ, 1 ಸಿಕ್ಸ್‌), ಡುಪ್ಲೆಸಿಸ್‌ 29 ರನ್‌(18 ಎಸೆತ, 3 ಬೌಂಡರಿ, 2 ಸಿಕ್ಸ್‌) ಸಿಡಿಸಿ ಸ್ವಲ್ಪ ಚೇತರಿಕೆ ನೀಡಿದರು. ಟ್ರಿಸ್ಟಾನ್ ಸ್ಟಬ್ಸ್ 34 ರನ್‌(22 ಎಸೆತ, 1 ಬೌಂಡರಿ, 3 ಸಿಕ್ಸ್‌) ಸಿಡಿಸಿ ಔಟಾದಾಗ ಪಂದ್ಯ ಲಕ್ನೋ ಪರ ವಾಲಿತ್ತು.

    7ನೇ ವಿಕೆಟಿಗೆ ಅಶುತೋಷ್‌ ಮತ್ತು ನಿಗಮ್‌ 22 ಎಸೆತಗಳಲ್ಲಿ 55 ರನ್‌ ಹೊಡೆಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಡೆಲ್ಲಿ ಪರ 16ನೇ ಓವರ್‌ನಲ್ಲಿ 20 ರನ್‌, 17 ನೇ ಓವರ್‌ನಲ್ಲಿ 3 ರನ್‌, 18ನೇ ಓವರ್‌ನಲ್ಲಿ 17 ರನ್‌, 19ನೇ ಓವರ್‌ನಲ್ಲಿ 16 ರನ್‌ ಬಂದಿತ್ತು. 20ನೇ ಓವರ್‌ನಲ್ಲಿ 6 ರನ್‌ ಬೇಕಿತ್ತು. ಸ್ಟ್ರೈಕ್‌ನಲ್ಲಿದ್ದ ಮೋಹಿತ್‌ ಶರ್ಮಾ ಮೊದಲ ಎಸೆತದಲ್ಲಿ ಸ್ಟಂಪ್‌ ಔಟಾಗುವ ಸಾಧ್ಯತೆ ಇತ್ತು. ಎರಡನೇ ಎಸೆತದಲ್ಲಿ 1 ರನ್‌ ಓಡಿ ಅಶುತೋಷ್‌ಗೆ ಸ್ಟ್ರೈಕ್‌ ನೀಡಿದರು.3ನೇ ಎಸೆತವನ್ನು ಅಶುತೋಶ್‌ ಸಿಕ್ಸ್‌ಗೆ ಅಟ್ಟುವ ಮೂಲಕ ಡೆಲ್ಲಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ವಿಪ್ರಜ್‌ ನಿಗಮ್‌ 39 ರನ್‌(15 ಎಸೆತ, 5 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದರೆ ಅಶುತೋಷ್‌ ಔಟಾಗದೇ 66 ರನ್‌(31 ಎಸೆತ, 5 ಬೌಂಡರಿ, 5 ಸಿಕ್ಸ್‌) ಸಿಡಿಸಿ ಗೆಲುವು ತಂದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲಕ್ನೋ ಉತ್ತಮ ಆರಂಭ ಪಡೆಯಿತು. ಮಾಕ್ರಮ್‌ ಮತ್ತು ಮಿಚೆಲ್‌ ಮಾರ್ಶ್‌ ಮೊದಲ ವಿಕೆಟಿಗೆ 46 ರನ್‌ ಹೊಡೆದರು. ಎರಡನೇ ವಿಕೆಟಿಗೆ ಮಾರ್ಶ್‌ ಮತ್ತು ನಿಕೂಲಸ್‌ ಪೂರನ್‌ 42 ರನ್‌ ಎಸೆತಗಳಲ್ಲಿ 87 ರನ್‌ ಜೊತೆಯಾಟವಾಡಿದರು.

    ಮಾರ್ಶ್‌ 72 ರನ್‌(36 ಎಸೆತ, 6 ಬೌಂಡರಿ, 6 ಸಿಕ್ಸರ್‌) ಹೊಡೆದರೆ ಪೂರನ್‌ 75 ರನ್‌(30 ಎಸೆತ, 6 ಬೌಂಡರಿ, 7 ಸಿಕ್ಸ್‌) ಹೊಡೆದು ಔಟಾದರು. ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ ಔಟಾಗದೇ 27 ರನ್‌( 19 ಎಸೆತ, 1 ಬೌಂಡರಿ, 2 ಸಿಕ್ಸ್‌) ಸಿಡಿಸಿದ ಪರಿಣಾಮ ಲಕ್ನೋ 200 ರನ್‌ಗಳ ಗಡಿಯನ್ನು ದಾಟಿತು.

  • ಆರ್‌ಸಿಬಿ Vs ಕೋಲ್ಕತ್ತಾ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ

    ಆರ್‌ಸಿಬಿ Vs ಕೋಲ್ಕತ್ತಾ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ

    ಕೋಲ್ಕತ್ತಾ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ನಡುವೆ ಇಂದು ನಡೆಯಲಿರುವ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ.

    ಬೆಳಗ್ಗೆಯಿಂದಲೇ ಕೋಲ್ಕತ್ತಾದಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಇದೇ ರೀತಿಯ ಮಳೆ ರಾತ್ರಿಯು (Rain) ಸುರಿಯುವ ಸಾಧ್ಯತೆಯಿದೆ. ರಾತ್ರಿ ಮಳೆ ಸುರಿಯುವ ಸಾಧ್ಯತೆ 20% ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: ಅಭಿಮಾನಿಗಳೇ ನಮ್ಮನೆ ದೇವ್ರು – ಎರಡು ಕೈ ಜೋಡಿಸಿ ಪಾಟಿದಾರ್‌ ಕೃತಜ್ಞತೆ

    ಐಪಿಎಲ್‌ ಪಂದ್ಯ 7:30ಕ್ಕೆ ಆರಂಭವಾಗುತ್ತದೆ. ಪಂದ್ಯಕ್ಕೂ ಮೊದಲು ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಶ್ರೇಯಾ ಘೋಷಾಲ್‌, ದಿಶಾ ಪಟಾನಿ, ಶಾರೂಖ್‌ ಖಾನ್‌ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಕೊನೆಗೆ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಇದನ್ನೂ ಓದಿ: ಐಪಿಎಲ್‌ 10 ಸೆಕೆಂಡ್‌ ಜಾಹೀರಾತಿಗೆ ಲಕ್ಷ ಲಕ್ಷ – 4,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಜಿಯೋಸ್ಟಾರ್‌

    17 ವರ್ಷಗಳ ಹಿಂದೆ ಐಪಿಎಲ್‌ (IPL) ಆರಂಭಗೊಂಡಾಗ ಆರ್‌ಸಿಬಿ ಮತ್ತು ಕೋಲ್ಕತ್ತಾ ಮುಖಾಮುಖಿಯಾಗಿದ್ದವು. ಈಗ ಮತ್ತೆ ಈ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳು ಹೊಸ ನಾಯಕತ್ವ ಮತ್ತು ಹೊಸ ರೂಪದಲ್ಲಿ ಮಿಂಚುತ್ತಿವೆ.


    ಕಳೆದ ಬಾರಿ ಕೆಕೆಆರ್‌ ಚಾಂಪಿಯನ್‌ ಆಗಿದ್ದರೆ ನಾಯಕನಾಗಿದ್ದ ಶ್ರೇಯಸ್‌ ಅಯ್ಯರ್‌ ಈ ಬಾರಿ ಈ ಪಂಜಾಬ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಡುಪ್ಲೆಸಿಸ್‌ ಅವರನ್ನು ಆರ್‌ಸಿಬಿ ಕೈಬಿಟ್ಟಿದ್ದು ರಜತ್‌ ಪಾಟಿದಾರ್‌ ಅವರನ್ನು ನಾಯಕರಾಗಿದ್ದಾರೆ. ಎರಡು ತಂಡಗಳು ಬಲವಾಗಿದ್ದು ಪಂದ್ಯ ವೀಕ್ಷಿಸಲು ಅಭಿಮಾನಿಗಳು ತಯಾರಾಗಿದ್ದಾರೆ. ಆದರೆ ಈ ರೋಚಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ.

  • ಐಪಿಎಲ್‌ 10 ಸೆಕೆಂಡ್‌ ಜಾಹೀರಾತಿಗೆ ಲಕ್ಷ ಲಕ್ಷ – 4,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಜಿಯೋಸ್ಟಾರ್‌

    ಐಪಿಎಲ್‌ 10 ಸೆಕೆಂಡ್‌ ಜಾಹೀರಾತಿಗೆ ಲಕ್ಷ ಲಕ್ಷ – 4,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಜಿಯೋಸ್ಟಾರ್‌

    ಮುಂಬೈ: ಇಂದಿನಿಂದ ಐಪಿಎಲ್‌ (IPL) ಹಬ್ಬ ಆರಂಭವಾಗಲಿದ್ದು ಪ್ರಸಾರ ಹಕ್ಕುಗಳನ್ನು ಪಡೆದಿರುವ ಜಿಯೋ ಮತ್ತು ಸ್ಟಾರ್‌ ಈ ಬಾರಿಯ ಟೂರ್ನಿಯ ಜಾಹೀರಾತುಗಳಿಂದ ಒಟ್ಟು 4,500 ಕೋಟಿ ರೂ. ಆದಾಯವನ್ನು ನಿರೀಕ್ಷಿಸುತ್ತಿದೆ.

    ಟಿವಿ ಮತ್ತು ಡಿಜಿಟಲ್‌ನಿಂದ 100 ಕೋಟಿ ವೀಕ್ಷಣೆಯ ಗುರಿಯನ್ನು ಹಾಕಲಾಗಿದ್ದು ಹತ್ತು ಸೆಕೆಂಡ್‌ ಟಿವಿ ಜಾಹೀರಾತಿಗೆ 8.5 ಲಕ್ಷ ರೂ. ದರವನ್ನು ನಿಗದಿಪಡಿಸಲಾಗಿದೆ. ಈಗಾಗಲೇ 32 ಕಂಪನಿಗಳು ಜಾಹೀರಾತು ನೀಡಲು ಮುಂದೆ ಬಂದಿದ್ದು ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದೆ.

    ಸಾಧಾರಣವಾಗಿ ಐಪಿಎಲ್‌ನಲ್ಲಿ ದೊಡ್ಡ ಕಂಪನಿಗಳು ಜಾಹೀರಾತು ನೀಡುತ್ತಿದ್ದವು. ಆದರೆ ಈ ಬಾರಿ ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೋದಲ್ಲಿ ಜಾಹೀರಾತು ನೀಡುತ್ತಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು (SME) ಜಿಯೋಹಾಟ್‌ಸ್ಟಾರ್‌ ಸಂಪರ್ಕಿಸಿವೆ. ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ಮಾತ್ರ ಐಪಿಎಲ್‌ ವೀಕ್ಷಣೆ ಉಚಿತ! – ಎಷ್ಟು ರಿಚಾರ್ಜ್‌ ಮಾಡಿದ್ರೆ ಫ್ರೀ?

    ಜಿಯೋಹಾಟ್‌ಸ್ಟಾರ್‌ (JioHotstar) ಐಪಿಎಲ್‌ ಅವಧಿಯಲ್ಲಿ ಒಟ್ಟು 10 ಕೋಟಿ ಸಬ್‌ಸ್ಕ್ರೈಬರ್‌ ಅದರಲ್ಲೂ 4 ಕೋಟಿ ಹೊಸ ಗ್ರಾಹಕರ ಮೇಲೆ ಕಣ್ಣಿಟ್ಟಿದೆ.

    ಕಳೆದ ವರ್ಷ ಟಿವಿ ಮತ್ತು ಡಿಜಿಟಲ್‌ನಿಂದ ಒಟ್ಟು 4,000 ಕೋಟಿ ರೂ. ಆದಾಯ ಬಂದಿತ್ತು.  ಕಳೆದ ಬಾರಿಗಿಂತ  ಬಾರಿ  500 ಕೋಟಿ ರೂ. ಹೆಚ್ಚು ಆದಾಯ ಸಂಗ್ರಹಿಸುವ ಗುರಿಯನ್ನು ಜಿಯೋ ಸ್ಟಾರ್‌ ಹಾಕಿಕೊಂಡಿದೆ. ಇದನ್ನೂ ಓದಿ: ಅಭಿಮಾನಿಗಳೇ ನಮ್ಮನೆ ದೇವ್ರು – ಎರಡು ಕೈ ಜೋಡಿಸಿ ಪಾಟಿದಾರ್‌ ಕೃತಜ್ಞತೆ

    ಐಪಿಎಲ್‌ ಡಿಜಿಟಲ್‌ ರೈಟ್ಸ್‌ ಅನ್ನು ವಯಾಕಾಮ್‌ ಪಡೆದ ನಂತರ ಕ್ರಿಕೆಟ್‌ ಪ್ರೇಮಿಗಳು ಜಿಯೋಸಿನಿಮಾದಲ್ಲಿ (JioCinema) ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದಾಗಿತ್ತು. ಆದರೆ ಈಗ ಜಿಯೋ ಮತ್ತು ಹಾಟ್‌ಸ್ಟಾರ್‌ ವಿಲೀನಗೊಂಡಿದೆ. ಜಿಯೋ ಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವಿಲೀನಗೊಂಡು ಜಿಯೋಸ್ಟಾರ್ ಆಗಿ ಬದಲಾಗಿದ್ದು ಈ ವರ್ಷದಿಂದ ಐಪಿಎಲ್‌ ಅಭಿಮಾನಿಗಳು ಹಣವನ್ನು ಪಾವತಿಸಿ ಕ್ರಿಕೆಟ್‌ ವೀಕ್ಷಣೆ ಮಾಡಬೇಕಾಗುತ್ತದೆ.

    ಮಾಧ್ಯಮ ಹಕ್ಕು ಎಷ್ಟು?
    2008 ಸೋನಿ ನೆಟ್‌ವರ್ವಕ್‌ಗೆ 10 ವರ್ಷ ಕಾಲ ಒಟ್ಟು 8,200 ಕೋಟಿ ರೂ.ಗೆ ನೀಡಿತ್ತು. 2017-22 ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ಅನ್ನು ಡಿಸ್ನಿ ಹಾಟ್‌ಸ್ಟಾರ್‌ ಒಟ್ಟು 16,347 ಕೋಟಿ ರೂ. ನೀಡಿ ಪಡೆದುಕೊಂಡಿತ್ತು. ಆದರೆ 2023-27ರ ಅವಧಿಯ 410 ಪಂದ್ಯಗಳಿಗೆ ಡಿಜಿಟಲ್‌ ಮತ್ತು ಟಿವಿ ರೈಟ್ಸ್‌ ಪ್ರತ್ಯೇಕವಾಗಿ ವಿಂಗಡನೆ ಮಾಡಲಾಗಿತ್ತು. ಡಿಜಿಟಲ್‌ ರೈಟ್ಸ್‌ -ವಯಾಕಾಮ್‌ 23,758 ಕೋಟಿ ರೂ. ನೀಡಿ ಖರೀದಿಸಿದರೆ ಟಿವಿ ಹಕ್ಕುಗಳನ್ನು- 23,575 ಕೋಟಿ ರೂ.ಗೆ ವಾಲ್ಟ್‌  ಡಿಸ್ನಿ ಕಂಪನಿ ನೀಡಿ ಪಡೆದುಕೊಂಡಿತ್ತು.

     

  • ಅಭಿಮಾನಿಗಳೇ ನಮ್ಮನೆ ದೇವ್ರು – ಎರಡು ಕೈ ಜೋಡಿಸಿ ಪಾಟಿದಾರ್‌ ಕೃತಜ್ಞತೆ

    ಅಭಿಮಾನಿಗಳೇ ನಮ್ಮನೆ ದೇವ್ರು – ಎರಡು ಕೈ ಜೋಡಿಸಿ ಪಾಟಿದಾರ್‌ ಕೃತಜ್ಞತೆ

    ಬೆಂಗಳೂರು: ಇಂದಿನಿಂದ 65 ದಿನಗಳ ಐಪಿಎಲ್‌ (IPL) ಹಬ್ಬ ಆರಂಭವಾಗಲಿದ್ದು ಕೋಲ್ಕತ್ತಾದಲ್ಲಿ ಆರ್‌ಸಿಬಿ (RCB) ಮತ್ತು ಕೋಲ್ಕತ್ತಾ ತಂಡಗಳ ನಡವೆ ಮೊದಲ ಪಂದ್ಯ ನಡೆಯಲಿದೆ. ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ನಾಯಕ ರಜತ್‌ ಪಾಟಿದಾರ್‌ (Rajat Patidar) ಅವರು ಎರಡು ಕೈ ಜೋಡಿಸಿ ನಟ ರಾಜ್‌ಕುಮಾರ್‌ ಅವರ ಪ್ರಸಿದ್ಧ “ಅಭಿಮಾನಿಗಳೇ ನಮ್ಮ ದೇವರು” ಡೈಲಾಗ್‌ ಹೊಡೆದು ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

    ಕಳೆದ 16 ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಇಲ್ಲಿಯವರೆಗೆ ಚಾಂಪಿಯನ್‌ ಆಗಿ ಹೊರಹೊಮ್ಮಿಲ್ಲ. ಚಾಂಪಿಯನ್‌ ಆಗದೇ ಇದ್ದರೂ ಅಭಿಮಾನಿಗಳ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ಇದಕ್ಕೆ ಸಾಕ್ಷಿ ಯಾವುದು ಎಂದರೆ ಆರ್‌ಸಿಬಿ  ಪಂದ್ಯಗಳು. ಬೆಂಗಳೂರು ಮಾತ್ರವಲ್ಲ ಬೇರೆ ಕಡೆ ನಡೆದ ಪಂದ್ಯಗಳಲ್ಲೂ ಸ್ಟೇಡಿಯಂ ಭರ್ತಿಯಾಗಿರುತ್ತದೆ. ಅಭಿಮಾನಿಗಳು ಆರ್‌ಸಿಬಿ ಪ್ಲೇ ಕಾರ್ಡ್‌ ಹಿಡಿದು ತಂಡಕ್ಕೆ ಪ್ರೋತ್ಸಾಹ ನೀಡುತ್ತಿರುತ್ತಾರೆ.

    ಬೆಂಗಳೂರಿನಲ್ಲಿ (Bengaluru) ಆರ್‌ಸಿಬಿ ಪಂದ್ಯ ಆಯೋಜನೆಗೊಂಡರೆ ದುಬಾರಿ ಟಿಕೆಟ್‌ ದರ ಇದ್ದರೂ ಇದ್ದರೂ ಅದು ಮಾರಾಟವಾಗುತ್ತದೆ. ಸ್ಟೇಡಿಯಂನಲ್ಲಿ ಆರ್‌ಸಿಬಿ ಆರ್‌ಸಿಬಿ…ಧ್ವನಿ ಮೊಳಗುತ್ತಿರುತ್ತದೆ. ಪುರುಷರ ಕ್ರಿಕೆಟ್‌ ಮಾತ್ರವಲ್ಲ, ಆರ್‌ಸಿಬಿ ಮಹಿಳೆಯರ ತಂಡಕ್ಕೂ ಅಭಿಮಾನಿಗಳು ಪ್ರೋತ್ಸಾಹ ನೀಡುತ್ತಾರೆ. ಈ ಕಾರಣಕ್ಕೆ ಐಪಿಎಲ್‌ ಆರಂಭಕ್ಕೆ ಮೊದಲು ನೂತನ ನಾಯಕ ರಜತ್‌ ಪಾಟಿದಾರ್‌ ಅವರು ಮಿಸ್ಟರ್ ನ್ಯಾಗ್ಸ್‌ ಅವರ ಆರ್‌ಸಿಬಿ  ಇನ್‌ಸೈಡ್‌ ಶೋನಲ್ಲಿ ಅಭಿಮಾನಿಗಳೇ ನಮ್ಮ ದೇವರು ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಇದನ್ನೂ ಓದಿ: UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?

    2021 ರಿಂದ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿರುವ ಮಧ್ಯಪ್ರದೇಶದ ಪಾಟಿದರ್‌ ಈ ವರ್ಷದಿಂದ ತಂಡವನ್ನು ಮುನ್ನಡೆಸಲಿದ್ದಾರೆ. ರಜತ್ ಪಾಟಿದಾರ್ ಅವರಿಗೆ ನಾಯಕತ್ವದ ಅನುಭವ ಇದೆ. ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಲೀಡ್‌ ಮಾಡಿದ್ದರು.

    2022 ರಿಂದ 2024 ರವರೆಗೆ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿಸ್ (Faf du Plessis) ಆರ್​ಸಿಬಿ ನಾಯಕರಾಗಿದ್ದರು. ಆದರೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡುಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ 40 ವರ್ಷದ ಡುಪ್ಲೆಸಿಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ 2 ಕೋಟಿ ರೂ. ನೀಡಿ ಖರೀದಿಸಿತ್ತು.

  • ಈ ಬಾರಿಯೂ ಆರ್‌ಸಿಬಿ ಬೆಂಗಳೂರು ಪಂದ್ಯಗಳ ಟಿಕೆಟ್‌ ದರ ದುಬಾರಿ

    ಈ ಬಾರಿಯೂ ಆರ್‌ಸಿಬಿ ಬೆಂಗಳೂರು ಪಂದ್ಯಗಳ ಟಿಕೆಟ್‌ ದರ ದುಬಾರಿ

    ಬೆಂಗಳೂರು:  ಪ್ರತಿವರ್ಷದಂತೆ  ಬೆಂಗಳೂರಿನಲ್ಲಿ (Bengaluru) ನಡೆಯಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿನ (RCB) ಕ್ರಿಕೆಟ್‌ ಪಂದ್ಯಗಳ ಟಿಕೆಟ್‌ ದರ ದುಬಾರಿಯಾಗಿದ್ದು ಇಳಿಕೆ ಮಾಡುವಂತೆ ಆಗ್ರಹ ಕೇಳಿ ಬಂದಿದೆ.

    ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿಲುಕದ ರೀತಿಯಲ್ಲಿ ಟಿಕೆಟ್ ದರ (Ticket Price) ಇರುವ ಹಿನ್ನೆಲೆಯಲ್ಲಿ ಟಿಕೆಟ್ ದರ ಕಡಿಮೆ ಮಾಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧ್ಯಕ್ಷ ಪ್ರಥಮೇಶ್ ಮಿಶ್ರಾಗೆ ಅವರಿಗೆ ಕನ್ನಡ ಚಳುವಳಿ ಕೇಂದ್ರ ಸಮಿತಿಯಿಂದ ಪತ್ರ ಬರೆಯಲಾಗಿದೆ.

    ಆರ್‌ಸಿಬಿ ಪಂದ್ಯಗಳ ಟಿಕೆಟ್‌ನ ಆರಂಭಿಕ ದರವೇ 2,300 ರೂ. ನಿಂದ ಆರಂಭವಾಗಿ 43,000 ರೂ. ವರೆಗೆ ಇದೆ.  ಬುಧವಾರದಿಂದ ಟಿಕೆಟ್‌ ಮಾರಾಟ ಆರಂಭವಾಗಿದ್ದು ಮೊದಲ ಪಂದ್ಯದ ಟಿಕೆಟ್‌ಗಳು ಈಗಾಗಲೇ ಖಾಲಿಯಾಗಿದೆ.  ಆರ್‌ಸಿಬಿ ಅಭಿಮಾನಿಗಳು ಆರ್‌ಸಿಬಿ ವೆಬ್‌ಸೈಟ್‌ ಅಥವಾ ಬುಕ್‌ಮೈ ಶೋ ವೆಬ್‌ಸೈಟಿನಿಂದ ಐಪಿಎಲ್‌ ಪಂದ್ಯಗಳ ಟಿಕೆಟ್‌ ಖರೀದಿಸಬಹುದು.  ಇದನ್ನೂ ಓದಿ: IPL 2025 | ಸಾರ್ವಕಾಲಿಕ ದಾಖಲೆ ಬರೆದವರು, ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡವರು…

    ಟಿಕೆಟ್ ಬೆಲೆ ಎಷ್ಟಿದೆ?
    ಕೆಐಎ ವೈರ್‌ಗಳು ಮತ್ತು ಕೇಬಲ್‌ಗಳು ಎ ಸ್ಟ್ಯಾಂಡ್: 2,300 ರೂ.
    ಬೋಟ್ ಸಿ ಸ್ಟ್ಯಾಂಡ್ – 3,300
    ಪೂಮಾ ಬಿ ಸ್ಟ್ಯಾಂಡ್ 3,300
    ಟಿಕೆಟಿ ಜಿಟಿ ಅನೆಕ್ಸ್ – 4,000 ರೂ.
    ಕತಾರ್ ಏರ್‌ವೇಸ್ ಜಾವಗಲ್‌ ಶ್ರೀನಾಥ್ ಸ್ಟ್ಯಾಂಡ್ – 10,000 ರೂ.
    ಬಿರ್ಲಾ ಎಸ್ಟೇಟ್ ಬಿಎಸ್ ಚಂದ್ರಶೇಖರ್ ಸ್ಟ್ಯಾಂಡ್ – 15,000 ರೂ.

    ಬೆಂಗಳೂರಿನಲ್ಲಿ ಯಾವ ದಿನ ಪಂದ್ಯ?
    RCB vs GT: ಏಪ್ರಿಲ್ 2
    RCB vs DC: ಏಪ್ರಿಲ್ 10
    RCB vs PBKS: ಏಪ್ರಿಲ್ 18
    RCB vs RR: ಏಪ್ರಿಲ್ 24
    RCB vs CSK: ಮೇ 3
    RCB vs SRH: ಮೇ 13
    RCB vs KKR: ಮೇ 17

     

  • IPL 2025 | 10 ತಂಡಗಳ ನಾಯಕರ ಹೆಸರು ಫೈನಲ್‌ – 9 ಮಂದಿ ಭಾರತೀಯರದ್ದೇ ಆರ್ಭಟ

    IPL 2025 | 10 ತಂಡಗಳ ನಾಯಕರ ಹೆಸರು ಫೈನಲ್‌ – 9 ಮಂದಿ ಭಾರತೀಯರದ್ದೇ ಆರ್ಭಟ

    ಐಸಿಸಿ ಚಾಂಪಿಯನ್ಸ್ ಟ್ರೋಫಿ, ಡಬ್ಲ್ಯೂಪಿಎಲ್‌ ಬಳಿಕ ಕ್ರಿಕೆಟ್ ಪ್ರಿಯರ ಚಿತ್ತ ಈಗ ಐಪಿಎಲ್ ಕಡೆ ತಿರುಗಿದೆ. ಪ್ರತಿಷ್ಠಿಯ 18ನೇ ಆವೃತ್ತಿಯ ಈ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್‌ ಪ್ರೇಮಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈಗಾಗಲೇ ಎಲ್ಲಾ ಹತ್ತು ಫ್ರಾಂಚೈಸ್ ಗಳು ತಮ್ಮತಮ್ಮ ನಾಯಕರ ಹೆಸರನ್ನು ಆಯಾ ಫ್ರಾಂಚೈಸಿಗಳು ಅಂತಿಮಗೊಳಿಸಿವೆ.

    ಹಿಂದೆಲ್ಲಾ ಟೂರ್ನಿಗಳಲ್ಲಿ ವಿದೇಶಿ ಆಟಗಾರರೇ ಹೆಚ್ಚಾಗಿ ನಾಯಕರಾಗಿದ್ದ ಉದಾಹರಣೆಗಳಿವೆ. ಆದರೆ, ಈ ಬಾರಿಯ ಐಪಿಎಲ್ ನಲ್ಲಿ ಒಬ್ಬರು ಮಾತ್ರವೇ ವಿದೇಶಿ ಆಟಗಾರ ನಾಯಕನಾಗಿದ್ದು, ಮಿಕ್ಕೆಲ್ಲ ತಂಡಗಳಿಗೆ ಟೀಂ ಇಂಡಿಯಾದ ಆಟಗಾರರೇ ನಾಯಕರಾಗಿರುವುದು ವಿಶೇಷ. ಈ ಮೊದಲು ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್, ಆಡಂ ಗಿಲ್ಕ್ರಿಸ್ಟ್, ಶೇನ್ ವಾರ್ನ್, ಸ್ಟೀವನ್ ಸ್ಮಿತ್, ಕ್ಯಾಮರೂನ್ ವೈಟ್, ಶ್ರೀಲಂಕಾದ ಕುಮಾರ ಸಂಗಕ್ಕರ, ನ್ಯೂಜಿಲ್ಯಾಂಡ್ ದೇಶದ ಕೇನ್ ವಿಲಿಯಮ್ಸನ್, ಡೇನಿಯಲ್ ವೆಟ್ಟೋರಿ, ಬ್ರಿಂಡನ್‌ ಮಕಲಂ ಮುಂತಾದ ವಿದೇಶಿ ಆಟಗಾರರು ಫ್ರಾಂಚೈಸ್ ನಾಯಕರಾಗಿದ್ದರು.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೂ ಮೂವರು ವಿದೇಶಿ ಆಟಗಾರರು ಮುನ್ನಡೆಸಿದ್ದರು. 2009ರಲ್ಲಿ ಕೆವಿನ್ ಪೀಟರ್ಸನ್, 2011 ಮತ್ತು 2012ರಲ್ಲಿ ಡೇನಿಯಲ್ ವೆಟ್ಟೋರಿ ಮತ್ತು 2022, 2023 ಮತ್ತು 2024ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ನಾಯಕರಾಗಿದ್ದರು. ಇದೇ ರೀತಿ ಬಹುತೇಕ ಎಲ್ಲಾ ಫ್ರಾಂಚೈಸ್ ನಾಯಕರೂ ಕೆಲವು ಆವೃತ್ತಿಗಳಲ್ಲು ನಾಯಕರಾಗಿದ್ದರು. ಉದಾಹರಣೆಗೆ, ಮುಂಬೈ ಇಂಡಿಯನ್ಸ್ ತಂಡವನ್ನು ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ (2008), ವೆಸ್ಟ್ ಇಂಡೀಸ್ ತಂಡದ ಡ್ವೇನ್‌ ಬ್ರಾವೋ (2010) ಮತ್ತು ಕೀರನ್ ಪೊಲಾರ್ಡ್ (2014 – 2021) ಸ್ಟ್ಯಾಂಡ್ ಇನ್ ನಾಯಕರಾಗಿದ್ದರು. ಆದ್ರೆ 18ನೇ ಆವೃತ್ತಿಯಲ್ಲಿ ಭಾರತೀಯರ ಆರ್ಭಟವೇ ಜೋರಾಗಿದೆ. 10 ತಂಡಗಳ ಪೈಕಿ 9 ಮಂದಿ ಭಾರತೀಯರೇ ನಾಯಕರಾಗಿ ಮಿಂಚುತ್ತಿದ್ದಾರೆ.

    ಚಾಂಪಿಯನ್‌ಗೆ ಪಟ್ಟ ಕಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌
    ಡೆಲ್ಲಿ ಕ್ಯಾಪಿಟಲ್ಸ್ ತಂಡವೂ ನಾಯಕರು ಯಾರು ಎನ್ನುವುದನ್ನು ಶುಕ್ರವಾರ (ಮಾ. 14) ಬಹಿರಂಗಗೊಳಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಆಲ್ರೌಂಡ್ ಸಾಧನೆ ತೋರಿದ ಮತ್ತು ತಂಡದ ಸಹ ಆಟಗಾರರಿಂದ ಬಾಪೂ ಎಂದು ಕರೆಯಲ್ಪಡುವ ಅಕ್ಷರ್ ಪಟೇಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕರ್ನಾಟಕ ಮೂಲದ ಕೆ.ಎಲ್.ರಾಹುಲ್ ಅವರನ್ನೂ 14 ಕೋಟಿಗೆ ಖರೀದಿಸಿತ್ತು. ಅಕ್ಷರ್ ಪಟೇಲ್ ಮತ್ತು ಕೆ.ಎಲ್.ರಾಹುಲ್ ನಡುವೆ ನಾಯಕತ್ವಕ್ಕೆ ಪೈಪೋಟಿ ನಡೆದಿತ್ತು. ಆದರೆ, ನಾಯಕನ ಜವಾಬ್ದಾರಿ ರಾಹುಲ್ ಬೇಡ ಎಂದ ಕಾರಣಕ್ಕಾಗಿ ಅಕ್ಷರ್ ಪಟೇಲ್‌ಗೆ ಕ್ಯಾಪ್ಟೆನ್ಸಿ ಒಲಿದು ಬಂತು ಎಂದು ಹೇಳಲಾಗುತ್ತಿದೆ.

    ಐಪಿಎಲ್‌ನ 10 ತಂಡಗಳು ಮತ್ತು ನಾಯಕರ ಪಟ್ಟಿ ಹೀಗಿದೆ…

    1. ಮುಂಬೈ ಇಂಡಿಯನ್ಸ್ – ಹಾರ್ದಿಕ್ ಪಾಂಡ್ಯ
    2. ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಜತ್ ಪಾಟೀದಾರ್
    3. ಕೋಲ್ಕತ ನೈಟ್ ರೈಡರ್ಸ್ – ಅಜಿಂಕ್ಯ ರಹಾನೆ
    4. ಚೆನ್ನೈ ಸೂಪರ್ ಕಿಂಗ್ಸ್ – ರುತುರಾಜ್ ಗಾಯಕ್ವಾಡ್
    5. ಗುಜರಾತ್ ಟೈಟನ್ಸ್ – ಶುಭ್ಮನ್ ಗಿಲ್
    6. ರಾಜಸ್ಥಾನ ರಾಯಲ್ಸ್ – ಸಂಜು ಸ್ಯಾಮ್ಸನ್
    7. ಲಕ್ನೋ ಸೂಪರ್ ಜೈಂಟ್ಸ್‌ – ರಿಷಭ್ ಪಂತ್
    8. ಪಂಜಾಬ್ ಕಿಂಗ್ಸ್ – ಶ್ರೇಯಸ್ ಐಯ್ಯರ್
    9. ಡೆಲ್ಲಿ ಕ್ಯಾಪಿಟಲ್ಸ್ – ಅಕ್ಷರ್ ಪಟೇಲ್
    10. ಸನ್ ರೈಸರ್ಸ್ ಹೈದರಾಬಾದ್ – ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ).
  • ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ಕೋಚಿಂಗ್‌ಗೆ ಬಂದ ರಾಹುಲ್ ದ್ರಾವಿಡ್

    ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ಕೋಚಿಂಗ್‌ಗೆ ಬಂದ ರಾಹುಲ್ ದ್ರಾವಿಡ್

    ಜೈಪುರ: ಕ್ರಿಕೆಟ್ ಆಡುವಾಗ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ರಾಜಸ್ತಾನ ರಾಯಲ್ಸ್ (Rajsthan Royals) ತಂಡದ ಆಟಗಾರರಿಗೆ ಕೋಚಿಂಗ್ ನೀಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಹಲವು ಆಟಗಾರರು ತಂಡ ಸೇರಿಕೊಂಡಿದ್ದು, ತವರು ಮೈದಾನಗಳಲ್ಲಿ ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಈ ಮಧ್ಯೆ ಕಾಲಿಗೆ ಗಂಭೀರ ಗಾಯ ಮಾಡಿಕೊಂಡು ಎದ್ದು ನಿಲ್ಲಲೂ ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿರುವ ರಾಹುಲ್ ದ್ರಾವಿಡ್ ತರಬೇತಿ ಸಲುವಾಗಿ ಮೈದಾನಕ್ಕೆ ಆಗಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ

    ಮಾತ್ರವಲ್ಲದೇ ಕಾಲಿನ ಗಾಯದ ಹೊರತಾಗಿಯೂ ತಂಡದ ತರಬೇತಿ ಅವಧಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕಾಣಿಸಿಕೊಂಡು ಆಟಗಾರರಿಗೆ ತರಬೇತಿ ಕೂಡ ನೀಡಿದ್ದಾರೆ. ಪ್ರಸ್ತುತ ಸರಿಯಾಗಿ ನಡೆಯಲು ಸಾಧ್ಯವಾಗದ ದ್ರಾವಿಡ್, ಗಾಲ್ಫ್ ಕಾರ್ಟ್‌ನಲ್ಲಿ ಮೈದಾನಕ್ಕೆ ಆಗಮಿಸಿದ್ದು, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಮಾರ್ಗದರ್ಶನ ನೀಡುತ್ತಾ ಕ್ರಚಸ್ ಸಹಾಯದಿಂದ ನಿಂತಿದ್ದರು. ಇದನ್ನೂ ಓದಿ: ಅಂಬಾನಿ ಮಗನ ಮದುವೆಯಲ್ಲಿ ಡೈಮಂಡ್ ಕಳೆದುಕೊಂಡ ಕಿಮ್ ಕರ್ದಾಶಿಯಾನ್

    ಈ ವಿಡಿಯೋವನ್ನು ರಾಜಸ್ಥಾನ ರಾಯಲ್ಸ್ ತಂಡ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ‘ಭಾರತದ ಮಾಜಿ ಕೋಚ್ 10 ವರ್ಷಗಳ ನಂತರ ಆರ್‌ಆರ್‌ಗೆ ಮರಳುತ್ತಿದ್ದಾರೆ. ಈ ಹಿಂದೆ ನಾಯಕ ಮತ್ತು ಮಾರ್ಗದರ್ಶಕರಾಗಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದೀಗ ಮತ್ತೆ ಕೋಚ್ ಆಗಿ ತಂಡ ಸೇರ್ಪಡೆಯಾಗಿದ್ದಾರೆ’ ಎಂದು ಸಂತಸ ಹಂಚಿಕೊಂಡಿದೆ. ಇದನ್ನೂ ಓದಿ: ಹಾರ್ದಿಕ್‌ ಪಾಂಡ್ಯ ಕಮಾಲ್‌ – ಜಸ್ಟ್‌ 6 ನಿಮಿಷದಲ್ಲಿ ಕೊಹ್ಲಿ ದಾಖಲೆ ಉಡೀಸ್‌

    ಬೆಂಗಳೂರಿನ ಎಸ್‌ಎಲ್‌ಎಸ್ ಕ್ರೀಡಾಂಗಣದಲ್ಲಿ ಯಂಗ್ ಲಯನ್ಸ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ದ್ರಾವಿಡ್ ಮತ್ತು ಅವರ ಮಗ ಅನ್ವಯ್ ವಿಜಯ ಕ್ರಿಕೆಟ್ ಕ್ಲಬ್ ಅನ್ನು ಪ್ರತಿನಿಧಿಸಿದ್ದರು. ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಗಾಯಗೊಂಡಿದ್ದರು. ಎಡಗಾಲಿಗೆ ದೊಡ್ಡ ಮಟ್ಟದಲ್ಲೇ ಬ್ಯಾಂಡೇಜ್ ಹಾಕಿದ್ದ ವೈದ್ಯರು ವಿಶ್ರಾಂತಿ ಸೂಚಿಸಿದ್ದರು. ಇದು ಐಪಿಎಲ್ ಆರಂಭದ ಸಮಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಆತಂಕಕ್ಕೂ ಕಾರಣವಾಗಿತ್ತು. ಇದನ್ನೂ ಓದಿ: ತುಂಗಾಭದ್ರಾ ಅಣೆಕಟ್ಟಿನಲ್ಲಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರಿನ ಸದ್ಬಳಕೆಗೆ ಕ್ರಮ: ಡಿ.ಕೆ.ಶಿವಕುಮಾರ್

  • ಲಲಿತ್ ಮೋದಿಗೆ ನೀಡಿದ್ದ ವಾನುವಾಟು ಪಾಸ್‌ಪೋರ್ಟ್ ರದ್ದು – ವಾನುವಾಟು ಪ್ರಧಾನಿ ಆದೇಶ

    ಲಲಿತ್ ಮೋದಿಗೆ ನೀಡಿದ್ದ ವಾನುವಾಟು ಪಾಸ್‌ಪೋರ್ಟ್ ರದ್ದು – ವಾನುವಾಟು ಪ್ರಧಾನಿ ಆದೇಶ

    – ಗಡೀಪಾರು ತಪ್ಪಿಸಲು ಪ್ಲ್ಯಾನ್ ಮಾಡಿದ್ದ ಲಲಿತ್ ಮೋದಿ

    ಪೋರ್ಟ್‌ ವಿಲಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸುವಂತೆ ವನವಾಟು ಪ್ರಧಾನಿ ಜೋಥಮ್ ನಪತ್ ಪೌರತ್ವ ಆಯೋಗಕ್ಕೆ ಆದೇಶಿಸಿದ್ದಾರೆ.

    ಮೋದಿಯವರ ವನವಾಟು ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಗಳನ್ನು ತಕ್ಷಣವೇ ಪ್ರಾರಂಭಿಸಲು ನಾನು ಪೌರತ್ವ ಆಯೋಗಕ್ಕೆ ಸೂಚಿಸಿದ್ದೇನೆ ಎಂದು ನಪತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಲಲಿತ್‌ ಮೋದಿಗೆ ಎಚ್ಚರಿಕೆ ನೋಟಿಸ್‌ ಹೊರಡಿಸಬೇಕೆಂಬ ಮನವಿಯನ್ನು ಇಂಟರ್‌ಪೋಲ್‌ ಎರಡು ಬಾರಿ ತಿರಸ್ಕರಿಸಿದೆ. ಅವರ ಹಿನ್ನೆಲೆ ಪರಿಶೀಲಿಸಿದಾಗಲೂ ಯಾವುದೇ ಅಪರಾಧ ಶಿಕ್ಷೆ ಕಂಡುಬಂದಿಲ್ಲ ಎಂದಿದ್ದು, ಅವರ ಅರ್ಜಿಯನ್ನು ರದ್ದು ಮಾಡುವಂತೆ ಸೂಚಿಸಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

    ವನವಾಟು ಪಾಸ್‌ಪೋರ್ಟ್‌ ಒಂದು ಸವಲತ್ತು ಅಷ್ಟೆ. ಅದು ಹಕ್ಕಲ್ಲ. ಅರ್ಜಿದಾರರು ಪೌರತ್ವಕ್ಕಾಗಿ ಕಾನೂನುಬದ್ಧ ಕಾರಣಗಳನ್ನು ಒದಗಿಸಬೇಕು. ಆ ಕಾನೂನುಬದ್ಧ ಕಾರಣಗಳಲ್ಲಿ ಹಸ್ತಾಂತರವನ್ನು ತಪ್ಪಿಸುವ ಪ್ರಯತ್ನದ ಯಾವುದೇ ಅಂಶಗಳನ್ನು ಒಳಗೊಂಡಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.