Tag: IPL

  • ಉಮ್ರಾನ್ ಮಲಿಕ್, ಭುವಿ ಬೌಲಿಂಗ್‌ ಬಿರುಗಾಳಿ – ಪಂಜಾಬ್‌ ವಿರುದ್ಧ  ಹೈದರಾಬಾದ್‌ಗೆ 7 ವಿಕೆಟ್‌ಗಳ ಜಯ

    ಉಮ್ರಾನ್ ಮಲಿಕ್, ಭುವಿ ಬೌಲಿಂಗ್‌ ಬಿರುಗಾಳಿ – ಪಂಜಾಬ್‌ ವಿರುದ್ಧ ಹೈದರಾಬಾದ್‌ಗೆ 7 ವಿಕೆಟ್‌ಗಳ ಜಯ

    ಮುಂಬೈ: ಬೌಲಿಂಗ್‍ನಲ್ಲಿ ಉಮ್ರಾನ್ ಮಲಿಕ್ ಮತ್ತು ಭುವನೇಶ್ವರ್ ಕುಮಾರ್ ಮಿಂಚಿದರೆ, ಬ್ಯಾಟಿಂಗ್‍ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಹೈದರಾಬಾದ್ ತಂಡ ಪಂಜಾಬ್ ವಿರುದ್ಧ 7 ವಿಕೆಟ್‍ಗಳ ಜಯ ಸಾಧಿಸಿದೆ.

    ಹೈದರಾಬಾದ್ ಪರ ಮಾಕ್ರಾರ್ಮ್ ಅಜೇಯ 41 ರನ್ (27 ಎಸೆತ, 4 ಬೌಂಡರಿ, 1 ಸಿಕ್ಸ್) ಮತ್ತು ನಿಕೋಲಸ್ ಪೂರನ್ 35 ರನ್ (30 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಇನ್ನೂ 7 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಜಯ ಸಾಧಿಸಿತು.

    ಗೆಲ್ಲಲು 152 ರನ್ ಗುರಿ ಪಡೆದ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕೇನ್ ವಿಲಿಯಮ್ಸನ್ 3 ರನ್‍ಗೆ ಸುಸ್ತಾದರು. ಅಭಿಷೇಕ್ ಶರ್ಮಾ 31 ರನ್ (25 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ರಾಹುಲ್ ತ್ರಿಪಾಠಿ 34 ರನ್ (22 ಎಸೆತ, 4 ಬೌಂಡರಿ, 1 ಸಿಕ್ಸ್ ) ಸಿಡಿಸಿ ಕೆಲಕಾಲ ಸ್ಫೋಟಕ ಆಟಕ್ಕೆ ಸಾಕ್ಷಿಯಾದರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶಿಖರ್ ಧವನ್ ನೇತೃತ್ವದ ಪಂಜಾಬ್ ತಂಡಕ್ಕೆ ಹೈದರಾಬಾದ್ ಬೌಲರ್‌ಗಳು ಆರಂಭದಲ್ಲೇ ವಿಕೆಟ್ ಬೇಟೆ ಆರಂಭಿಸಿದರು. ಕೇವಲ 38 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಲಿಯಾಮ್ ಲಿವಿಂಗ್ಸ್ಟೋನ್ ಎಂದಿನಂತೆ ಬೌಂಡರಿ, ಸಿಕ್ಸರ್‌ಗಳ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು.


    ಇತ್ತ ವಿಕೆಟ್ ಉರುಳುತ್ತಿದ್ದರೂ ಲಿವಿಂಗ್ಸ್ಟೋನ್ ಮಾತ್ರ ತಮ್ಮ ಬ್ಯಾಟ್ ಇರುವುದು ರನ್ ಹೊಡೆಯಲು ಎಂಬಂತೆ ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಟ್ಟಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶಾರೂಖ್ ಖಾನ್ 26 ರನ್ (28 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಮೊದಲು ಈ ಜೋಡಿ 5ನೇ ವಿಕೆಟ್‍ಗೆ 71 ರನ್ (49 ಎಸೆತ) ಜೊತೆಯಾಟವಾಡಿ ಮಿಂಚಿತು. ಆ ಬಳಿಕ ಕೆಲ ಕಾಲ ಸ್ಫೋಟಿಸಿದ ಲಿವಿಂಗ್ಸ್ಟೋನ್ 60 ರನ್ (33 ಎಸೆತ, 5 ಬೌಂಡರಿ, 4 ಸಿಕ್ಸ್) ಬಾರಿಸಿ ಔಟ್ ಆದರು.

    ನಂತರ ದಿಢೀರ್ ಕುಸಿತ ಕಂಡ ಪಂಜಾಬ್ 20 ಓವರ್‌ಗಳಲ್ಲಿ 151 ರನ್‍ಗಳಿಗೆ ಆಲೌಟ್ ಆಯಿತು. ಹೈದರಾಬಾದ್ ಪರ ಬೌಲಿಂಗ್‍ನಲ್ಲಿ ಮಿಂಚಿದ ಉಮ್ರಾನ್ ಮಲಿಕ್ 4 ಮತ್ತು ಭುವನೇಶ್ವರ್ ಕುಮಾರ್ 3 ವಿಕೆಟ್ ಕಿತ್ತು ಪಂಜಾಬ್ ತಂಡಕ್ಕೆ ಕಡಿವಾಣ ಹಾಕಿದರು.

  • IPLನಲ್ಲಿ ಪಂದ್ಯ ನೂರು, ಶತಕ ಮೂರು ಸಿಡಿಸಿ ಮೆರೆದಾಡಿದ ಕನ್ನಡಿಗ ಕೆ.ಎಲ್.ರಾಹುಲ್

    IPLನಲ್ಲಿ ಪಂದ್ಯ ನೂರು, ಶತಕ ಮೂರು ಸಿಡಿಸಿ ಮೆರೆದಾಡಿದ ಕನ್ನಡಿಗ ಕೆ.ಎಲ್.ರಾಹುಲ್

    ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 103 ರನ್ ಗಳಿಸಿದ ಕನ್ನಡಿಗ ಕೆ.ಎಲ್.ರಾಹುಲ್ ಇಡೀ ಐಪಿಎಲ್ ಆವೃತ್ತಿಯಲ್ಲಿ 100 ಪಂದ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಕೀರ್ತಿಗಳಿಸಿದ್ದಾರೆ.

    2022ರ 15ನೇ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹೊಸ ತಂಡದ ನಾಯಕನಾಗಿ ಪ್ರತಿನಿಧಿಸಿರುವ ಕೆ.ಎಲ್.ರಾಹುಲ್, ಇದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ 20 ಪಂದ್ಯಗಳು, ಆರ್‌ಸಿಬಿ ತಂಡದ ಪರ 19 ಹಾಗೂ ಕಿಂಗ್ಸ್ ಪಂಜಾಬ್ ತಂಡದ ಪರ 55 ಪಂದ್ಯಗಳನ್ನಾಡಿ, 134 ಸ್ಟ್ರೈಕ್‌ ರೇಟ್‌ನಲ್ಲಿದ್ದಾರೆ. ಒಟ್ಟು 99 ಇನ್ನಿಂಗ್ಸ್ಗಳಲ್ಲಿ 3,508 ರನ್‌ಗಳಿಸುವ ಮೂಲಕ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ದಾಖಲೆಗಳನ್ನೂ ಸರಿಗಟ್ಟಿದ್ದರು. ಇದನ್ನೂ ಓದಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬೆನ್ನೇರಿದ ಬ್ಯಾನ್ ಭೀತಿ

    RAHUL

    ಐಪಿಎಲ್‌ನಲ್ಲಿ 3ನೇ ಶತಕ: ಕೆ.ಎಲ್.ರಾಹುಲ್ 2019ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 64 ಎಸೆತಗಳಲ್ಲಿ 100 ರನ್ (6 ಬೌಂಡರಿ, 6 ಸಿಕ್ಸರ್) ಪೇರಿಸಿದ್ದರು. 2020ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 69 ಎಸೆತಗಳಲ್ಲಿ 69 ಎಸೆತಕ್ಕೆ ಸ್ಫೋಟಕ 132 ರನ್ (14 ಬೌಂಡರಿ, 7 ಸಿಕ್ಕರ್), ಇದೀಗ 2022ರಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 60 ಎಸೆತಗಳಲ್ಲಿ 103 ರನ್ (9 ಬೌಂಡರಿ, 5 ಸಿಕ್ಸರ್) ಸಿಡಿಸುವ ಮೂಲಕ ತಮ್ಮ ನೂರನೇ ಐಪಿಎಲ್ ಪಂದ್ಯದಲ್ಲಿ ಶತಕದ ಸಂಭ್ರಮ ಮೆರೆದಿದ್ದಾರೆ. ಇಡೀ ಐಪಿಎಲ್ ಆವೃತ್ತಿಯಲ್ಲಿ ಇದು ಕೆ.ಎಲ್.ರಾಹುಲ್ ಅವರ 3ನೇ ಶತಕವಾಗಿದೆ.

    KL RAHUL 02

    ಹಲವು ಪ್ರಶಸ್ತಿಗಳ ಕಿರೀಟ: ಮುಂಬೈ ಇಂಡಿಯನ್ಸ್ ವಿರುದ್ಧ 60 ಎಸೆತಗಳಲ್ಲಿ 103 ರನ್‌ಗಳಿಸಿದ ಕೆ.ಎಲ್.ರಾಹುಲ್ ಅವರಿಗೆ ಡ್ರೀಮ್-11 ಗೇಮ್ ಚಾರ್ಜರ್ ಆಫ್ ದಿ ಮ್ಯಾಚ್ ಪ್ರಶಸ್ತಿ, ಅನ್‌ಅಕಾಡೆಮಿ ಲೆಟ್ಸ್ ಕ್ರಾಕ್‌ಇಟ್ ಸಿಕ್ಸಸ್‌, ಅಪ್‌ಸ್ಟಾಕ್ಸ್ ಮೋಸ್ಟ್ ವ್ಯಾಲ್ಯುಯೆಬಲ್ ಅಸೆಟ್ ಆಫ್ ದಿ ಮ್ಯಾಚ್, ರೂಪೆ ಆನ್ ದಿ ಗೋ ಫೋರ್‌ ದಿ ಮ್ಯಾಚ್ ಹಾಗೂ ಪಂದ್ಯಶ್ರೇಷ್ಠ ಶ್ರೇಷ್ಠ ಪ್ರಶಸ್ತಿಯ ಕಿರೀಟಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: 7 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾಗೆ ಶೇ.20ರಷ್ಟು ದಂಡ

    KL RAHUL 04

    ಆರೆಂಜ್‌ಕ್ಯಾಪ್ ರೇಸ್‌ನಲ್ಲಿ ರಾಹುಲ್: ಲಕ್ನೋ ಸೂಪರ್‌ಜೈಂಟ್ಸ್ ಪರ 6 ಪಂದ್ಯಗಳನ್ನಾಡಿರುವ ರಾಹುಲ್, ನೆನ್ನೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 103 ರನ್ ಬಾರಿಸುವ ಮೂಲಕ 235 ರನ್ ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಜಿಗಿದಿದ್ದಾರೆ.

  • ಬಲಿಷ್ಠ ತಂಡಗಳ ಹಣಾ-ಹಣಿ ಇಂದು – ಐಪಿಎಲ್ ಪ್ರಿಯರಿಗೆ ಡಬಲ್ ಧಮಾಕ

    ಬಲಿಷ್ಠ ತಂಡಗಳ ಹಣಾ-ಹಣಿ ಇಂದು – ಐಪಿಎಲ್ ಪ್ರಿಯರಿಗೆ ಡಬಲ್ ಧಮಾಕ

    ಮುಂಬೈ: ತಲಾ 3 ಪಂದ್ಯಗಳನ್ನು ಗೆದ್ದು ವಿಶ್ವಾಸದಲ್ಲಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕತ್ವದ ಕಿಂಗ್ಸ್ ಪಂಜಾಬ್ ಮತ್ತು ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಸೆಣಸಲಿವೆ.

    ಸಂಜೆ 7.30ಕ್ಕೆ ನಡೆಯುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಹಣಾಹಣಿ ನಡೆಸಲಿವೆ. ಇದನ್ನೂ ಓದಿ: ಡಿಕೆ ಸ್ಫೋಟಕ ಫಿಫ್ಟಿ – ಕೊಹ್ಲಿ ಸ್ಟನ್ನಿಂಗ್ ಕ್ಯಾಚ್‌ – ಡೆಲ್ಲಿ ವಿರುದ್ಧ ಆರ್​ಸಿಬಿಗೆ 16 ರನ್‍ಗಳ ಜಯ

    IPL 2022 SRH (1)

    ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂಜಾಬ್ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಗಲಿವೆ. ಎರಡೂ ತಂಡಗಳೂ ಈ ಟೂರ್ನಿಯಲ್ಲಿ ಸಿಹಿ, ಕಹಿಯನ್ನು ಸಮನಾಗಿ ಅನುಭವಿಸಿದ್ದು, 5ಕ್ಕೆ ತಲಾ 3 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಈವರೆಗೆ 17 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 5 ಪಂದ್ಯಗಳಲ್ಲಿ ಪಂಜಾಬ್ ಹಾಗೂ 12 ಪಂದ್ಯಗಳಲ್ಲಿ ಹೈದರಾಬಾದ್ ಗೆಲುವು ಸಾಧಿಸಿದೆ.

    ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಹೈದ್ರಾಬಾದ್ ತಂಡವು ಸತತ 3 ಪಂದ್ಯಗಳಲ್ಲಿ ಜಯ ಸಾಧಿಸಿತು. ಬ್ಯಾಟಿಂಗ್ ಲಯಕ್ಕೆ ಮರಳಿರುವ ಜೇಸನ್ ರಾಯ್ ಮತ್ತು ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸುತ್ತಿದ್ದರೆ, ಜೇಸನ್ ಹೋಲ್ಡರ್, ಭುವನೇಶ್ವರ್ ಕುಮಾರ್, ರಶೀದ್ ಖಾನ್ ಬೌಲಿಂಗ್‌ನಲ್ಲಿ ತಮ್ಮ ಪ್ರಾಬಲ್ಯ ಮೆರೆಯುತ್ತಾ ಗೆಲುವಿನ ಹಾದಿಗೆ ತರುತ್ತಿದ್ದಾರೆ.

    IPL 2022 CSK (1)

    ಪಂಜಾಬ್ ತಂಡವು ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಸೋಲಿಸಿದೆ. ಅಲ್ಲದೆ ತಾನು ಸೋತ ಎರಡು ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಮಯಾಂಕ್ ಅಗರ್ವಾಲ್, ಶಿಖರ್ ಧವನ್, ಹೊಸಪ್ರತಿಭೆ ಜಿತೇಶ್ ಶರ್ಮಾ ಉತ್ತಮ ಲಯದಲ್ಲಿದ್ದಾರೆ. ಇದನ್ನೂ ಓದಿ: 7 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾಗೆ ಶೇ.20ರಷ್ಟು ದಂಡ

    ಆಲ್‌ರೌಂಡರ್‌ಗಳ ಸವಾಲ್
    ಮೊದಲ ಬಾರಿಗೆ ಐಪಿಎಲ್ ನಾಯಕತ್ವದ ಹೊಣೆ ಹೊತ್ತಿರುವ ಭಾರತ ಕ್ರಿಕೆಟ್ ತಂಡದ ಇಬ್ಬರು ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡಗಳು ಇಂದು ಮುಖಾಮುಖಿಯಾಗವೆ. ಗುಜರಾತ್ ಹೊಸ ತಂಡದ ಸೇರ್ಪಡೆಯಿಂದ ಇದೇ ಮೊದಲಬಾರಿಗೆ ತಂಡಗಳು ಮುಖಾಮುಖಿಯಾಗುತ್ತಿದ್ದು, ಪಂದ್ಯವು ಸಂಜೆ 7.30ಕ್ಕೆ ಪುಣೆಯಲ್ಲಿರುವ ಮಹಾರಾಷ್ಟç ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದನ್ನೂ ಓದಿ: ಅಯ್ಯರ್‌ಗೆ 12 ಲಕ್ಷ ದಂಡ – ಐಪಿಎಲ್‌ನಲ್ಲಿ ದಂಡ ಹಾಕೋದು ಯಾಕೆ?

    IPL 2022 SRH (1)

    ಬಲಿಷ್ಠ ತಂಡಗಳ ಪೈಕಿ ಈಗಾಗಲೇ ವೋಟಿಂಗ್‌ಪೋಲ್ ನಡೆಸಲಾಗುತ್ತಿದ್ದು, ಪಂಜಾಬ್ ಗೆಲುವಿಗೆ 19,764 ಮಂದಿ, ಎಸ್‌ಆರ್‌ಎಚ್‌ಗೆ 20,554 ಮಂದಿ ಬೆಂಬಲಿಸಿದ್ದಾರೆ. ಅಂತೆಯೇ ಗುಜರಾತ್ ಟೈಟನ್ಸ್‌ಗೆ 9,682 ಮಂದಿ ಪ್ರೋತ್ಸಾಹಿಸಿದ್ದು, ಚೆನ್ನೈ 10,618 ಜನರ ಬೆಂಬಲ ಗಳಿಸಿದೆ. ಚೆನ್ನೈ ಈಗಾಗಲೇ ಐಪಿಎಲ್ ಕ್ರಮಾಂಕದಲ್ಲಿ ಕೆಳಕ್ಕೆ ಕುಸಿದಿದ್ದು, ಪ್ಲೆ-ಆಫ್ ತಲುಪಲು ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.

  • ಡಿಕೆ ಸ್ಫೋಟಕ ಫಿಫ್ಟಿ – ಕೊಹ್ಲಿ ಸ್ಟನ್ನಿಂಗ್ ಕ್ಯಾಚ್‌ –  ಡೆಲ್ಲಿ ವಿರುದ್ಧ ಆರ್​ಸಿಬಿಗೆ 16 ರನ್‍ಗಳ ಜಯ

    ಡಿಕೆ ಸ್ಫೋಟಕ ಫಿಫ್ಟಿ – ಕೊಹ್ಲಿ ಸ್ಟನ್ನಿಂಗ್ ಕ್ಯಾಚ್‌ – ಡೆಲ್ಲಿ ವಿರುದ್ಧ ಆರ್​ಸಿಬಿಗೆ 16 ರನ್‍ಗಳ ಜಯ

    ಮುಂಬೈ: ಆರ್​ಸಿಬಿ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ಒಂದು ಹಂತದಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು. ಈ ವೇಳೆ ರಿಷಭ್ ಪಂತ್ ಅವರ ಅದ್ಭುತ ಕ್ಯಾಚ್ ಒಂದನ್ನು ಹಿಡಿದ ವಿರಾಟ್ ಕೊಹ್ಲಿ ಡೆಲ್ಲಿ ಗೆಲುವಿನ ಆಸೆಗೆ ತಣ್ಣಿರೇರಚಿದರು.

    ಆರ್​ಸಿಬಿ ಪರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಬೌಲರ್‌ಗಳ ಆಟಕ್ಕೆ ತಲೆ ಬಾಗಿದ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 173 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲಿಗೆ ಶರಣಾಯಿತು. ಆರ್‌ಸಿಬಿ 16 ರನ್‌ಗಳ ಗೆಲುವಿನ ನಗೆ ಬೀರಿತು.

    190 ರನ್‍ಗಳ ಟಾರ್ಗೆಟ್ ಪಡೆದ ಡೆಲ್ಲಿಗೆ ಡೇವಿಡ್ ವಾರ್ನರ್ ಸ್ಫೋಟಕ 66 ರನ್ (38 ಎಸೆತ, 4 ಬೌಂಡರಿ, 5 ಸಿಕ್ಸ್) ಚಚ್ಚಿ ಗೆಲುವಿನ ಭರವಸೆ ಮೂಡಿಸಿದರು. ವಾರ್ನರ್ ವಿಕೆಟ್ ಕಳೆದುಕೊಂಡ ಬಳಿಕ ಪೆವಿಲಿಯನ್ ಪರೇಡ್ ನಡೆಸಿದ ಡೆಲ್ಲಿ ತಂಡಕ್ಕೆ ರಿಷಭ್ ಪಂತ್ ಕೊನೆಯಲ್ಲಿ 34 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಗೆಲುವಿನ ಬಾಗಿಲು ಮುಚ್ಚಿಕೊಂಡಿತು.

    ಮಾಕ್ಸಿ,ಕಾರ್ತಿಕ್ ಬೊಂಬಾಟ್ ಬ್ಯಾಟಿಂಗ್
    ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬೆಂಗಳೂರು ತಂಡ ಆರಂಭಿಕ ಅಘಾತ ಅನುಭವಿಸಿತು. ಆರಂಭಿಕ ಆಟಗಾರ ಅನುಜ್ ರಾವತ್ ಸೊನ್ನೆ ಸುತ್ತಿದರೆ, ಡು ಪ್ಲೆಸಿಸ್ ಗಳಿಗೆ 8 ರನ್ (11 ಎಸೆತ, 2 ಬೌಂಡರಿ)ಗೆ ಅಂತ್ಯವಾಯಿತು. ಮತ್ತೆ ಬಂದ ವಿರಾಟ್ ಕೊಹ್ಲಿ 12 ರನ್ (14 ಎಸೆತ, 1 ಬೌಂಡರಿ) ಸಿಡಿಸಿ ರನೌಟ್ ಆಗಿ ಹೊರನಡೆದರು.


    ಆ ಬಳಿಕ ಗ್ಲೇನ್ ಮ್ಯಾಕ್ಸ್‌ವೆಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಚೇತರಿಕೆ ನೀಡಿದರು. ಅಲ್ಲದೆ ವೈಯಕ್ತಿಕ 55 ರನ್ (34 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ಬಿಗ್ ಹಿಟ್ ಸಿಡಿಸಲು ಹೋಗಿ ಕೈ ಸುಟ್ಟುಕೊಂಡರು. ನಂತರ ಜೊತೆಯಾದ ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ಅಹಮದ್ ಆರ್‌ಸಿಬಿ ತಂಡದ ರನ್ ಏರಿಕೆಯ ಜವಾಬ್ದಾರಿ ಹೊತ್ತರು. ಈ ಜೋಡಿ ಸ್ಲಾಗ್ ಓವರ್‌ಗಳಲ್ಲಿ ಬೌಂಡರಿ, ಸಿಕ್ಸರ್‌ಗಳನ್ನು ಸರಾಗವಾಗಿ ಸಿಡಿಸಿ ನೋಡ ನೋಡುತ್ತಿದ್ದಂತೆ ತಂಡದ ಮೊತ್ತವನ್ನು 180ರ ಗಡಿದಾಟಿಸಿದರು. ಈ ಜೋಡಿ 6ನೇ ವಿಕೆಟ್‍ಗೆ 97 ರನ್ (52 ಎಸೆತ)ಗಳ ಜೊತೆಯಾಟವಾಡಿ ಡೆಲ್ಲಿ ಬೌಲರ್‌ಗಳನ್ನು ಡಲ್ ಹೊಡೆಸಿತು. ಅಂತಿಮವಾಗಿ ಶಹಬಾಜ್ ಅಹಮದ್ ಅಜೇಯ 32 ರನ್ (21 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 66 ರನ್ (34 ಎಸೆತ, 5 ಬೌಂಡರಿ, 5 ಸಿಕ್ಸ್) ಸಿಡಿಸಿ ಬ್ಯಾಟಿಂಗ್ ದರ್ಬಾರ್ ನಡೆಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 189 ಪೇರಿಸಿತು.

    ಡೆಲ್ಲಿ ಪರ ಶಾರ್ದೂಲ್ ಠಾಕೂರ್, ಖಲೀಲ್ ಅಹಮದ್, ಅಕ್ಷರ್ ಪಟೇಲ್ ಮತ್ತು ಕುಲ್‍ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

  • ಶತಕ ಸಿಡಿಸಿ ರಾರಾಜಿಸಿದ ರಾಹುಲ್ – ಮುಂಬೈಗೆ ಸತತ 6ನೇ ಸೋಲು

    ಶತಕ ಸಿಡಿಸಿ ರಾರಾಜಿಸಿದ ರಾಹುಲ್ – ಮುಂಬೈಗೆ ಸತತ 6ನೇ ಸೋಲು

    ಮುಂಬೈ: ಮುಂಬೈ ವಿರುದ್ಧ ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಿದ ಫಲವಾಗಿ ಲಕ್ನೋ 18 ರನ್‌ಗಳಿಂದ ಗೆದ್ದರೆ, 15ನೇ ಆವೃತ್ತಿ ಐಪಿಎಲ್‍ನಲ್ಲಿ ಹೀನಾಯ ಪ್ರದರ್ಶನ ನೀಡಿದ ಮುಂಬೈ ತಂಡ ಸತತ 6ನೇ ಸೋಲುಕಂಡು ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದಿದೆ.

    ಮುಂಬೈ ಗೆಲುವಿಗೆ ಕೀರನ್ ಪೋಲಾರ್ಡ್ ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದರೂ ಜಯ ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 181 ರನ್ ಸಿಡಿಸಿ 18  ರನ್‌ಗಳಿಂದ ಸೋಲೊಪ್ಪಿಕೊಂಡಿತು.

    200 ರನ್‍ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್ ಶರ್ಮಾ 6 ರನ್ (7 ಎಸೆತ, 1 ಬೌಂಡರಿ) ಬಾರಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಇಶಾನ್ ಕಿಶನ್ 13 ರನ್ (17 ಎಸೆತ, 2 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಆ ಬಳಿಕ ಡೆವಾಲ್ಡ್ ಬ್ರೆವಿಸ್ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾಗಿ 31 ರನ್ (13 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಆ ಬಳಿಕ ಬಂದ ಸೂರ್ಯ ಕುಮಾರ್ ಯಾದವ್ 37 ರನ್ (27 ಎಸೆತ, 3 ಬೌಂಡರಿ) ಮತ್ತು ತಿಲಕ್ ವರ್ಮಾ 26 ರನ್ (2 ಬೌಂಡರಿ) ಸಿಡಿಸಿ ತಂಡಕ್ಕೆ ಅಲ್ಪಮಟ್ಟಿನ ಕೊಡುಗೆ ನೀಡಿದರು.

    ಈ ಮೊದಲು ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಎದುರಾಳಿ ಲಕ್ನೋ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಲಕ್ನೋ ತಂಡ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಂತೆ ನಾಯಕ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್‍ನಲ್ಲಿ ಆರ್ಭಟಿಸಿದರು. ಆರಂಭದಿಂದಲೇ ಮುಂಬೈ ಬೌಲರ್‌ಗಳಿಗೆ ಬೆವರಿಳಿಸಿದ ಈ ಜೋಡಿ ಮೊದಲ ವಿಕೆಟ್‍ಗೆ 52 ರನ್ (33 ಎಸೆತ) ಸಿಡಿಸಿ ಉತ್ತಮ ಆರಂಭ ನೀಡಿತು. ಈ ವೇಳೆ ದಾಳಿಗಿಳಿದ ಫ್ಯಾಬಿಯನ್ ಅಲೆನ್, ಡಿ ಕಾಕ್ 24 ರನ್ (13 ಎಸೆತ, 4 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

    ಮುಂಬೈಗೆ ಕಾಡಿದ ಕನ್ನಡಿಗ ಜೋಡಿ
    ಡಿ ಕಾಕ್ ಔಟ್ ಆದ ಬಳಿಕ ಜೊತೆಯಾದ ಮನೀಶ್ ಪಾಂಡೆ ಮತ್ತು ಕೆ.ಎಲ್ ರಾಹುಲ್ ತಮ್ಮ ಆಟಕ್ಕೆ ವೇಗ ನೀಡಿದರು. ಇಬ್ಬರೂ ಮುಂಬೈ ಬೌಲರ್‌ಗಳ ಬೆಂಕಿ ಚೆಂಡಿಗೆ ಬೌಂಡರಿ, ಸಿಕ್ಸರ್‌ಗಳನ್ನು ಸರಾಗವಾಗಿ ಸಿಡಿಸಿದ ಈ ಜೋಡಿ 2ನೇ ವಿಕೆಟ್‍ಗೆ 72 ರನ್ (47 ಎಸೆತ) ಜೊತೆಯಾಟವಾಡಿತು. ಈ ವೇಳೆ ಮನೀಶ್ ಪಾಂಡೆ 38 ರನ್ (29 ಎಸೆತ, 6 ಬೌಂಡರಿ) ಸಿಡಿಸಿ ವಿಕೆಟ್ ಕೈ ಚೆಲ್ಲಿಕೊಂಡರು.

    ರಾಹುಲ್ ಶತಕದ ವೈಭವ
    ಇತ್ತ ರಾಹುಲ್ ಮಾತ್ರ ಮುಂಬೈ ಬೌಲರ್‌ಗಳನ್ನು ಕೊನೆಯ ಎಸೆತದವರೆಗೆ ಕಾಡಿದರು. ಜೊತೆಗೆ ಐಪಿಎಲ್ ಇತಿಹಾಸದಲ್ಲಿ ತಮ್ಮ ಮೂರನೇ ಶತಕ ಸಿಡಿಸಿ ಮಿಂಚಿದರು. ಅಂತಿಮವಾಗಿ ರಾಹುಲ್ ಅಜೇಯ 103 ರನ್ (60 ಎಸೆತ, 9 ಬೌಂಡರಿ, 5 ಸಿಕ್ಸ್) ಚಚ್ಚಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಲಕ್ನೋ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಸಿಡಿಸಿತು.

    ರನ್ ಏರಿದ್ದು ಹೇಗೆ
    50 ರನ್ 32 ಎಸೆತ
    100 ರನ್ 69 ಎಸೆತ
    150 ರನ್ 90 ಎಸೆತ
    199 ರನ್ 120 ಎಸೆತ

  • ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬೆನ್ನೇರಿದ ಬ್ಯಾನ್ ಭೀತಿ

    ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬೆನ್ನೇರಿದ ಬ್ಯಾನ್ ಭೀತಿ

    ಮುಂಬೈ: 15ನೇ ಐಪಿಎಲ್ ಆವೃತ್ತಿಗೆ ಹೊಸ ತಂಡಗಳಾಗಿ ಸೇರ್ಪಡೆಗೊಂಡರೂ ಅಬ್ಬರ ಆಟದಿಂದ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮಿಂಚುತ್ತಿವೆ. ಆದರೆ 5 ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಸತತ 5 ಪಂದ್ಯಗಳಲ್ಲಿ ಸೋತು, ಟೀಕೆಗಳಿಗೆ ಗುರಿಯಾಗಿದೆ.

    ರೋಹಿತ್ ಶರ್ಮಾ ನಾಯಕತ್ವವಿದ್ದರೆ ಗೆಲುವು ಬಹುತೇಕ ಖಚಿತ ಎನ್ನುತ್ತಿದ್ದವರು, ಸರಣಿ ಸೋಲಿನಿಂದಾಗಿ ಟೀಕೆ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ರೋಹಿತ್ ಶರ್ಮಾಗೆ ಬ್ಯಾನ್ ಭೀತಿ ಶುರುವಾಗಿದೆ. ಇದನ್ನೂ ಓದಿ: 7 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾಗೆ ಶೇ.20ರಷ್ಟು ದಂಡ

    ROHITH SHARMA (1)

    ಹೌದು. ರೋಹಿತ್ ಶರ್ಮಾ ಸರಣಿ ಪಂದ್ಯಗಳಲ್ಲಿ ತಮ್ಮ ನಾಯಕತ್ವ ವಿಫಲವಾಗುತ್ತಿರುವ ತಲೆ ಬಿಸಿಯ ನಡುವೆಯೇ ಪಂದ್ಯದಿಂದ ನಿಷೇಧವಾಗುವ ಭಯದಲ್ಲಿದ್ದಾರೆ. ಈ ನಿಷೇಧದಿಂದ ತಪ್ಪಿಸಿಕೊಳ್ಳಲು ಮುಂದಿನ ಪಂದ್ಯಗಳಲ್ಲಿ ಎಚ್ಚರಿಕೆಯ ಆಟವನ್ನು ಆಡಲೇಬೇಕಿರುವ ರೋಹಿತ್ ಶರ್ಮಾ ನಿಷೇಧದಿಂದ ತಪ್ಪಿಸಿಕೊಳ್ಳುತ್ತಾರಾ ಎನ್ನುವುದು ಕಾದುನೋಡಬೇಕಿದೆ.

    ಲಕ್ನೋ ವಿರುದ್ಧ ಗೆಲವು ಅನಿವಾರ್ಯ: ಸತತ 5 ಪಂದ್ಯಗಳಲ್ಲಿ ಸೋತಿರುವ ಮುಂಬೈ ಇಂದಿನ ಲಕ್ನೋ ಸೂಪರ್‌ಜೈಂಟ್ಸ್ ತಂಡ ವಿರುದ್ಧ ಗೆಲ್ಲುವುದು ಅನಿವಾರ್ಯವಾಗಿದೆ. ಅದಕ್ಕಾಗಿ ರೋಹಿತ್ ಶರ್ಮಾ ಹೊಸ ಆಲೋಚನಾ ಕ್ರಮ ಅನುಸರಿಸಲಿದ್ದಾರೆ. ಈ ಕುರಿತು ನೆನ್ನೆಯಷ್ಟೇ ಪ್ರತಿಕ್ರಿಯೆಯನ್ನೂ ನೀಡಿದ್ದರು.

    IPL

    ಬ್ಯಾನ್ ಭೀತಿಗೆ ಕಾರಣವೇನು?: ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈವರೆಗೆ ನಡೆದ ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದು, ದಂಡ ತೆತ್ತಿದೆ. ಈ ಬಾರಿ ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಿತ್ತು. ಇದೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣ ನಾಯಕ ರೋಹಿತ್ ಶರ್ಮಾಗೆ 12 ಲಕ್ಷ ರೂ. ದಂಡ ಕೂಡ ವಿಧಿಸಲಾಗಿತ್ತು. ಇನ್ನೂ ಕೊನೆಯದ್ದಾಗಿ ಆಡಿದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ನಿಧಾನಗತಿಯ ಬೌಲಿಂಗ್‌ನಿಂದ 24 ಲಕ್ಷ ದಂಡ ತೆತ್ತಿದ್ದಾರೆ ಹಾಗೂ ತಂಡದ ಉಳಿದ ಆಟಗಾರರಿಗೆ 6 ಲಕ್ಷ ದಂಡ ವಿಧಿಸಲಾಗಿದೆ ಈ ಎಲ್ಲ ಕಾರಣಗಳು ಅವರನ್ನು ಬ್ಯಾನ್ ಸಂಕಷ್ಟಕ್ಕೆ ತಂದಿಟ್ಟಿವೆ. ಇದನ್ನೂ ಓದಿ: ಅಯ್ಯರ್‌ಗೆ 12 ಲಕ್ಷ ದಂಡ – ಐಪಿಎಲ್‌ನಲ್ಲಿ ದಂಡ ಹಾಕೋದು ಯಾಕೆ?

    IPL 2022 RR VS LSG

    ಎಂಐಗೆ ಒಂದು ಪಂದ್ಯ ನಿಷೇಧ?: ಮುಂಬೈ ಇಂಡಿಯನ್ಸ್ ಈಗಾಗಲೇ 2 ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದು, ಮುಂದಿನ ಪಂದ್ಯದಲ್ಲೂ ಇದೇ ರೀತಿ ನಿಧಾನಗತಿಯ ಬೌಲಿಂಗ್ ಮಾಡಿಸಿದರೆ ರೋಹಿತ್ ಶರ್ಮಾ ಐಪಿಎಲ್ ನಿಯಮದ ಪ್ರಕಾರ 30 ಲಕ್ಷ ರೂ. ದಂಡ ತೆರುವ ಜೊತೆಗೆ, ಮುಂದಿನ ಒಂದು ಪಂದ್ಯದಲ್ಲಿ ನಿಷೇಧಕ್ಕೆ ಒಳಗಾಗಲಿದ್ದಾರೆ ಎಂದು ಐಪಿಎಲ್ ಮಂಡಳಿ ಎಚ್ಚರಿಕೆ ನೀಡಿದೆ.

    ದಂಡ ವಿಧಿಸುವುದು ಏಕೆ?: ಐಪಿಎಲ್ ನಲ್ಲಿ ಮೊದಲ ಬಾರಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಈ ತಪ್ಪನ್ನು ಮಾಡಿದರೆ ನಾಯಕನಿಗೆ 24 ಲಕ್ಷ ರೂ. ದಂಡದ ಜೊತೆ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ. ಐಪಿಎಲ್ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದನ್ನೂ ಓದಿ: 3 ವಿಕೆಟ್‌ ಕಿತ್ತು ರೋಚಕ ತಿರುವು – ತಾಯಿಯ ಬಗ್ಗೆ ರಶೀದ್‌ ಖಾನ್‌ ಭಾವನಾತ್ಮಕ ಮಾತು

    IPL 2022 RCB VS MI

    ಏನಿದು ಸ್ಟ್ರೆಟಜಿಕ್‌ ಟೈಮ್‌ಔಟ್?: ಪ್ರತಿ ಪಂದ್ಯದಲ್ಲಿ 3 ನಿಮಿಷದ 4 ಸ್ಟ್ರೆಟಜಿಕ್‌ ಟೈಮ್ ಔಟ್ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್‌ ಬೌಲಿಂಗ್ ತಂಡ 6-9 ಓವರ್ ಮಧ್ಯೆ, 2ನೇ ಸ್ಟ್ರೆಟಜಿಕ್‌ ಟೈಮ್ ಔಟ್ ಅನ್ನು ಬ್ಯಾಟಿಂಗ್ ತಂಡ 13-16 ಓವರ್ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.

    ದಂಡ ಯಾಕೆ?: ಐಪಿಎಲ್ ಅಂದ್ರೆ ಬಿಸಿನೆಸ್. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪ್ರತಿ ಸೆಕೆಂಡ್ ಬಹಳ ಮುಖ್ಯ. ಮಳೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಅದು ಬೇರೆ ವಿಷಯ. ಆದರೆ ಒಂದು ತಂಡ ನಿಧಾನಗತಿ ಬೌಲಿಂಗ್ ಮಾಡಿದರೆ ಅದು ಐಪಿಎಲ್ ದಿನದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚಗಳು ಜಾಸ್ತಿಯಾಗುತ್ತದೆ.

  • ಹೈದರಾಬಾದ್‍ಗೆ ಗೆಲುವಿನ ಮಾರ್ಗ ತೋರಿಸಿದ ತ್ರಿಪಾಠಿ, ಮಾರ್ಕ್ರಾಮ್ – ರೆಸೆಲ್ ಆಟ ವ್ಯರ್ಥ

    ಹೈದರಾಬಾದ್‍ಗೆ ಗೆಲುವಿನ ಮಾರ್ಗ ತೋರಿಸಿದ ತ್ರಿಪಾಠಿ, ಮಾರ್ಕ್ರಾಮ್ – ರೆಸೆಲ್ ಆಟ ವ್ಯರ್ಥ

    ಮುಂಬೈ: ಹೈದರಾಬಾದ್‍ಗೆ ಗೆಲುವು ದಕ್ಕಿಸಲೇ ಬೇಕು ಎಂಬಂತೆ ಬ್ಯಾಟ್‍ಬೀಸಿದ ರಾಹುಲ್ ತ್ರಿಪಾಠಿ ಮತ್ತು ಮಾರ್ಕ್ರಾಮ್ ಜೋಡಿಯ ಭರ್ಜರಿ ಆಟಕ್ಕೆ ಕೋಲ್ಕತ್ತಾ ಸೋಲೊಪ್ಪಿಕೊಂಡಿದೆ. ಹೈದರಾಬಾದ್ ತಂಡ ಇನ್ನೂ 17 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಜಯ ಸಾಧಿಸಿದೆ.

    ಗೆಲ್ಲಲು 176 ರನ್ ಟಾರ್ಗೆಟ್ ಪಡೆದ ಹೈದರಾಬಾದ್ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್‍ರನ್ನು 39 ರನ್ ಆಗುವಷ್ಟರಲ್ಲಿ ಕಳೆದುಕೊಂಡಿತು. ಬಳಿಕ ಜೊತೆಯಾದ ರಾಹುಲ್ ತ್ರಿಪಾಠಿ ಮತ್ತು ಮಾರ್ಕ್ರಾಮ್ ಹೈದರಾಬಾದ್‍ಗೆ ಗೆಲುವಿನ ಆಸೆ ಚಿಗುರಿಸಿದರು. ಈ ಜೋಡಿ 3ನೇ ವಿಕೆಟ್‍ಗೆ 94 ರನ್ (54 ಎಸೆತ) ಒಟ್ಟುಗೂಡಿಸಿ ಮಿಂಚಿತು. ತ್ರಿಪಾಠಿ 71 ರನ್ (37 ಎಸೆತ, 4 ಬೌಂಡರಿ, 6 ಸಿಕ್ಸ್) ಚಚ್ಚಿ ವಿಕೆಟ್ ಒಪ್ಪಿಸಿದರು. ಆದರೆ ಮಾರ್ಕ್ರಾಮ್ ಬ್ಯಾಟಿಂಗ್ ವೈಭವ ತಂಡದ ಗೆಲುವಿನ ವರೆಗೆ ನಿಲ್ಲಲಿಲ್ಲ. ಅಂತಿಮವಾಗಿ ಅಜೇಯ 68 ರನ್ (37 ಎಸೆತ, 6 ಬೌಂಡರಿ, 4 ಸಿಕ್ಸರ್) ಸಿಡಿಸಿ ತಂಡಕ್ಕೆ 7 ವಿಕೆಟ್ ಅಂತರದ ಗೆಲುವು ತಂದುಕೊಟ್ಟರು.

    ಟಾಸ್ ಸೋತ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಕೋಲ್ಕತ್ತಾ ಪರ ಅಗ್ರ ಕ್ರಮಾಂಕದ ಯಾವೊಬ್ಬ ಆಟಗಾರ ಕೂಡ ಕೋಲ್ಕತ್ತಾಗೆ ಆಸರೆಯಾಗಲಿಲ್ಲ. ಪರಿಣಾಮ 70 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಕೋಲ್ಕತ್ತಾ ಸಂಕಷ್ಟಕ್ಕೆ ಸಿಲುಕಿತು.

    ರಾಣಾ, ರೆಸೆಲ್ ಆರ್ಭಟ
    ನಂತರ ಒಂದಾದ ನಿತೇಶ್ ರಾಣಾ ಮತ್ತು ಆಂಡ್ರೆ ರೆಸೆಲ್ ಹೈದರಾಬಾದ್ ಬೌಲರ್‌ಗಳ ಬೆಂಡೆತ್ತಿದರು. ರಾಣಾ 54 ರನ್ (36 ಎಸೆತ, 6 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರೆ ರೆಸೆಲ್ ಕೊನೆಯ ಎಸೆತದವರೆಗೆ ಬೌಂಡರಿ, ಸಿಕ್ಸರ್ ಚಚ್ಚಿ ತಂಡದ ಮೊತ್ತವನ್ನು 170ರ ಗಡಿದಾಟಿಸಿದರು. ಅಂತಿಮವಾಗಿ ರೆಸೆಲ್ ಅಜೇಯ 49 ರನ್ (25 ಎಸೆತ, 4 ಬೌಂಡರಿ, 4 ಸಿಕ್ಸ್) ಬಾರಿಸಿ ಮಿಂಚಿದರು. ಅಂತಿಮವಾಗಿ ಕೋಲ್ಕತ್ತಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್ ಪೇರಿಸಿತು.

    ಹೈದರಾಬಾದ್ ಪರ ಟಿ.ನಟರಾಜನ್ 3 ಮತ್ತು ಉಮ್ರಾನ್ ಮಲಿಕ್ 2 ವಿಕೆಟ್ ಕಿತ್ತರು. ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸನ್ ಮತ್ತು ಜಗದೀಶ್ ಸುಜೀತ್ ತಲಾ 1 ವಿಕೆಟ್ ಪಡೆದರು.

  • ಹಾರ್ದಿಕ್ ಪಾಂಡ್ಯ ಸ್ಟ್ರಾಂಗ್ ಕಮ್‍ಬ್ಯಾಕ್ – ಐಪಿಎಲ್‍ನಲ್ಲಿ ಬುಲೆಟ್ ಥ್ರೋ, ವಿಕೆಟ್ ಕಟ್

    ಹಾರ್ದಿಕ್ ಪಾಂಡ್ಯ ಸ್ಟ್ರಾಂಗ್ ಕಮ್‍ಬ್ಯಾಕ್ – ಐಪಿಎಲ್‍ನಲ್ಲಿ ಬುಲೆಟ್ ಥ್ರೋ, ವಿಕೆಟ್ ಕಟ್

    ಮುಂಬೈ: ಗಾಯಗೊಂಡು ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಸ್ಟ್ರಾಂಗ್ ಕಮ್‍ಬ್ಯಾಕ್ ಮಾಡಿದ್ದು ಐಪಿಎಲ್‌ನಲ್ಲಿ ಹಳೆಯ ಲಯಕ್ಕೆ ಮರಳಿದ್ದಾರೆ.

    ಕಳಪೆ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದ್ದ ಪಾಂಡ್ಯ ಮೂರು ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್‍ನಿಂದ ದೂರ ಸರಿದಿದ್ದರು. ಆ ಬಳಿಕ ಐಪಿಎಲ್‍ನ ನೂತನ ತಂಡ ಗುಜರಾತ್ ಟೈಟಾನ್ಸ್ ಪಾಂಡ್ಯರನ್ನು ಖರೀದಿಸಿ ತಂಡದ ನಾಯಕತ್ವ ವಹಿಸಿತ್ತು. ಕ್ರಿಕೆಟ್‍ಗೆ ಬ್ರೇಕ್ ಪಡೆದಿದ್ದ ಪಾಂಡ್ಯ 15ನೇ ಆವೃತ್ತಿ ಐಪಿಎಲ್‍ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಕಾಲಿಗೆ ನಮಸ್ಕರಿಸಿದ ಜಾಂಟಿ ರೋಡ್ಸ್


    ಹೌದು ಪಾಂಡ್ಯ ಗುಜರಾತ್ ತಂಡದ ನಾಯಕತ್ವದ ಜೊತೆಗೆ ಬ್ಯಾಟಿಂಗ್, ಬೌಲಿಂಗ್ ಫೀಲ್ಡಿಂಗ್‍ನಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‍ರನ್ನು ತಮ್ಮ ಬುಲೆಟ್ ಥ್ರೋ ಮೂಲಕ ರನ್ ಔಟ್ ಬಲೆಗೆ ಬೀಳಿಸಿದ ಪಾಂಡ್ಯರ ಡೈರೆಕ್ಟ್ ಹಿಟ್ ವಿಕೆಟ್ ಮುರಿದು ಬೀಳುವಷ್ಟು ಪವರ್‌ಫುಲ್ ಆಗಿತ್ತು. ಇದನ್ನೂ ಓದಿ: ಐಪಿಎಲ್ ಟಿಆರ್‌ಪಿ ದಿಢೀರ್ ಕುಸಿತ – ಇಲ್ಲಿದೆ ಅಸಲಿ ಕಾರಣ

    https://twitter.com/Cricupdates2022/status/1514647359220686857

    ಪಾಂಡ್ಯ ಈ ಬಾರಿಯ ಐಪಿಎಲ್‍ನಲ್ಲಿ 5 ಪಂದ್ಯಗಳಿಂದ 2 ಅರ್ಧಶತಕ ಸಹಿತ 228 ರನ್ ಮತ್ತು 4 ವಿಕೆಟ್ ಪಡೆದು ಆಲ್‍ರೌಂಡರ್ ಆಗಿ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಈ ಮೂಲಕ ಪಾಂಡ್ಯ ಮತ್ತೆ ಟೀಂ ಇಂಡಿಯಾದಲ್ಲಿ ಆಲ್‍ರೌಂಡರ್ ಕೋಟಾ ತುಂಬಲು ವಾಪಸ್ ಬಂದಿರುವಂತೆ ಸೌಂಡ್ ಮಾಡುತ್ತಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ಬಲಿಷ್ಠ ತಂಡ ಕಟ್ಟುವ ಯೋಜನೆಯಲ್ಲಿರುವ ಟೀಂ ಇಂಡಿಯಾಗೆ ಪಾಂಡ್ಯ ಆಲ್‍ರೌಂಡರ್ ವಿಭಾಗದಲ್ಲಿ ಮೊದಲ ಆಯ್ಕೆ ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಈ ಮೂಲಕ ಪವರ್‌ಫುಲ್ ಕಮ್‍ಬ್ಯಾಕ್‍ಗೆ ಪಾಂಡ್ಯಗೆ ಈ ಬಾರಿಯ ಐಪಿಎಲ್ ವೇದಿಕೆಯಾದಂತಿದೆ.

  • ಸಚಿನ್ ತೆಂಡೂಲ್ಕರ್ ಕಾಲಿಗೆ ನಮಸ್ಕರಿಸಿದ ಜಾಂಟಿ ರೋಡ್ಸ್

    ಸಚಿನ್ ತೆಂಡೂಲ್ಕರ್ ಕಾಲಿಗೆ ನಮಸ್ಕರಿಸಿದ ಜಾಂಟಿ ರೋಡ್ಸ್

    ಮುಂಬೈ: ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ ವರ್ಷಗಳೇ ಕಳೆದರೂ ಎಷ್ಟು ಆಟಗಾರಿಗೆ ತಮ್ಮ ಸ್ಟಾರ್‌ಗಳ ಮೇಲಿನ ಭಕ್ತಿ ಕಡಿಮೆಯಾಗಿಲ್ಲ ಎಂಬುದಕ್ಕೆ ಬುಧವಾರ ಐಪಿಎಲ್ ವೇಳೆ ಕಂಡುಬಂದ ದೃಶ್ಯವೊಂದು ಸಾಕ್ಷಿಯಾಯಿತು.

    ROADS

    ಹೌದು… 2022ನೇ ಸಾಲಿನ 15ನೇ ಆವೃತ್ತಿಯ ವೇಳೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಸಚಿನ್ ತೆಂಡೂಲ್ಕರ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಕಿಂಗ್ಸ್ ಪಂಜಾಬ್ ನಡುವಣ ಪಂದ್ಯದ ಬಳಿಕ ಎರಡೂ ತಂಡದ ಆಟಗಾರರೂ ಪರಸ್ಪರ ಹಸ್ತಲಾಘವ ಮಾಡುತ್ತಿದ್ದ ವೇಳೆ ರೋಡ್ಸ್ ಸಚಿನ್ ಕಾಲಿಗೆ ನಮಸ್ಕರಿಸಿದ್ದಾರೆ. ಈ ವೇಳೆ ಸಚಿನ್ ತಡೆಯಲು ಪ್ರಯತ್ನಿಸಿದ್ದಾದರೂ ರೋಡ್ಸ್ ತಮ್ಮ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    ಪ್ರಸ್ತುತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚ್ಚಿನ್‌ಗಿಂತಲೂ ನಾಲ್ಕು ವರ್ಷ ದೊಡ್ಡವರಾಗಿರುವ ಜಾಂಟಿ ರೋಡ್ಸ್ (52) ಅವರ ವಿನಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 2009ರಿಂದ 2017ರ ವರೆಗೆ ಮುಂಬೈ ತಂಡದ ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ಕರ್ತವ್ಯ ನಿರ್ವಹಿಸಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇದನ್ನೂ ಓದಿ: ಧೋನಿಯೇ ಮುಖ್ಯವಾದ್ರೆ ಉಳಿದ ಆಟಗಾರರು ಲಸ್ಸಿ ಕುಡಿಯಲು ಹೋಗಿದ್ರಾ: ಭಜ್ಜಿ ಪ್ರಶ್ನೆ

    ಪಂಜಾಬ್ ಕಿಂಗ್ಸ್ ತಂಡದ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಜವಾಬ್ದಾರಿಯನ್ನು ಜಾಂಟಿ ರೋಡ್ಸ್ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ 12 ರನ್ ಅಂತರದ ಗೆಲುವು ದಾಖಲಿಸಿತ್ತು. ಈ ಹಿಂದೆ ಭಾರತದ ಮೇಲಿನ ಪ್ರೀತಿಗಾಗಿ ಜಾಂಟಿ ರೋಡ್ಸ್ ತನ್ನ ಮಗಳಿಗೆ `ಇಂಡಿಯಾ’ ಎಂದು ಹೆಸರಿಟ್ಟಿದ್ದರು ಎನ್ನುವುದು ಇಲ್ಲಿ ವಿಶೇಷ.

  • ಐಪಿಎಲ್ ಟಿಆರ್‌ಪಿ ದಿಢೀರ್ ಕುಸಿತ – ಇಲ್ಲಿದೆ ಅಸಲಿ ಕಾರಣ

    ಐಪಿಎಲ್ ಟಿಆರ್‌ಪಿ ದಿಢೀರ್ ಕುಸಿತ – ಇಲ್ಲಿದೆ ಅಸಲಿ ಕಾರಣ

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಯುವ ಸಮೂಹಕ್ಕೆ ಒಂದು ಕ್ರೇಜ್. ಅತೀ ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಹೊಳೆ ಹರಿಸುವ ಮೂಲಕ ಗಮನ ಸೆಳೆಯುವ ಈ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ದೇಶದಲ್ಲಿ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಹೋಟೆಲ್‌ಗಳನ್ನು ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತದೆ.

    ಅದರಲ್ಲೂ 2022ನೇ ಸಾಲಿನ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಎಷ್ಟೋ ಯುವ ತಾರೆಗಳಿಗೆ ವೇದಿಕೆಯಾಗಿದ್ದು, ಮತ್ತಷ್ಟು ಕ್ರೇಜ್ ಹುಟ್ಟಿಕೊಂಡಿದೆ. ಆದರೆ, ಪ್ರತಿ ವರ್ಷವೂ ಐಪಿಎಲ್ ವೇಳೆ ಹೆಚ್ಚಿನ ವೀಕ್ಷಕರಿಂದ ದೊಡ್ಡಮಟ್ಟದ ಆದಾಯ ತಂದುಕೊಡುತ್ತಿದ್ದ ಐಪಿಎಲ್‌ನಲ್ಲಿ ಈ ಬಾರಿ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಬಾರೀ ಇಳಿಕೆ ಕಂಡಿದೆ. ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ತೊರೆದ ಜೋ ರೂಟ್

    IPL 2022 RR VS LSG

    ಬಿಎಆರ್‌ಸಿ-ಬಾರ್ಕ್ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್)ನೀಡುವ 2021ರ ಐಪಿಎಲ್ ಆವೃತ್ತಿಯ ಮೊದಲವಾರದಲ್ಲಿ ಟಿವಿ ರೇಟಿಂಗ್‌ಗಳಲ್ಲಿ ಶೇ.33 ರಷ್ಟು ಕುಸಿತ ಕಂಡಿದೆ. ಐಪಿಎಲ್ -2021ರ ಒಟ್ಟಾರೆ ಟಿವಿ ವೀಕ್ಷಕರ ಸಂಖ್ಯೆಗೆ ಹೋಲಿಸಿದರೆ 2022ರ ರಲ್ಲಿ ಶೇ.14 ರಷ್ಟು ರೇಟಿಂಗ್ಸ್ ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣಗಳನ್ನೂ ಇಲ್ಲಿವೆ.

    IPL 2022 RR VS LSG

    ಮುಂಬೈ- ಸಿಎಸ್‌ಕೆ ಕಳಪೆ ಪ್ರದರ್ಶನ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸಲ್ಲೇ ಹೆಚ್ಚಿನ ಮನ್ನಣೆ ಪಡೆದಿರುವ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕಳಪೆ ಪ್ರದರ್ಶನ ನೀಡುತ್ತಿವೆ. 9 ಬಾರಿ ಚಾಂಪಿಯನ್ ಪಟ್ಟಗಳನ್ನು ಅಲಂಕರಿಸಿರುವ ಎರಡೂ ತಂಡಗಳೂ ಗೆಲುವಿನ ಹಾದಿ ಹಿಡಿಯಲು ಹೆಣಗಾಡುತ್ತಿವೆ. ಕಳೆದ 4 ಪಂದ್ಯಗಳಲ್ಲೂ ಸತತ ಸೋಲು ಕಂಡಿದ್ದ ಚೆನ್ನೈ 5ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರೋಚಕ ಜಯ ಸಾಧಿಸಿತು. ಆದರೆ, ಭರವಸೆಯ ಮುಂಬೈ ತಂಡ ಸತತ 5 ಪಂದ್ಯಗಳಲ್ಲೂ ಮುಖಬಂಗ ಅನುಭವಿಸಿದೆ. ಮುಂಬೈ ತಂಡಕ್ಕೆ ಅತಿಹೆಚ್ಚು ಮೌಲ್ಯಕ್ಕೆ ಖರೀದಿಯಾದ ಈಶಾನ್‌ಕಿಶನ್ ಸಹ ಆರಂಭಿಕ ಎರಡು ಪಂದ್ಯಗಳನ್ನು ಹೊರತುಪಡಿಸಿದರೆ, ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದಿರುವುದ ತಂಡಕ್ಕೆ ದೊಡ್ಡ ಪೆಟ್ಟಾಗಿದೆ. ಇದನ್ನೂ ಓದಿ: ಪಾಂಡ್ಯ ಆಲ್‍ರೌಂಡರ್ ಆಟ ರಾಜಸ್ಥಾನ ಪರದಾಟ – ಮುಂದುವರಿದ ಗುಜರಾತ್ ಗೆಲುವಿನ ಓಟ

    IPL 2022 RR VS LSG

    ಕ್ರೇಜ್ ಹೆಚ್ಚಿಸಿದ್ದ ತಾರೆಯರೇ ನಾಪತ್ತೆ: ಪ್ರತಿ ಐಪಿಎಲ್ ಆವೃತ್ತಿಯಲ್ಲೂ ಒಂದು ಮೆಮೊರೆಬಲ್ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದ್ದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕ್ರೀಡಾ ಬದುಕಿನಿಂದ ನಿವೃತ್ತಿಯಾಗಿದ್ದಾರೆ. ಹಾಗೆಯೇ ವೆಸ್ಟ್ಇಂಡೀಸ್ ಮಾಜಿಕ್ರಿಕೆಟಿಗ ಕ್ರಿಸ್‌ಗೇಲ್, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್, ಸುರೇಶ್ ರೈನಾ, ಜೋ ರೂಟ್ ಹೀಗೆ ರೇಸ್‌ನಲ್ಲಿದ್ದ ಕ್ರಿಕೆಟಿಗರು ಇಲ್ಲದಿರುವುದು ಐಪಿಎಲ್ ವೀಕ್ಷಕರ ಕೊರತೆಯಾಗಲು ಮುಖ್ಯ ಕಾರಣವಾಗಿದೆ.

    ಆಟಗಾರರ ಬದಲಾವಣೆ: ತಮ್ಮ ನೆಚ್ಚಿನ ತಂಡಗಳಲ್ಲಿ ನೆಚ್ಚಿನ ಆಟಗಾರರು ಬದಲಾಗಿರುವುದೂ ಪ್ರೇಕ್ಷಕರ ವೀಕ್ಷಕರು ತಂಡಗಳ ಮೇಲಿನ ಉತ್ಸಾಹ ಕಳೆದುಕೊಳ್ಳುವಂತೆ ಮಾಡಿದೆ. ಆರ್‌ಸಿಬಿ ತಂಡದಲ್ಲಿದ್ದ ದೇವದತ್ ಪಡಿಕಲ್ ಹಾಗೂ ಯಜುವೇಂದ್ರಚಾಹಲ್ ರಾಜಾಸ್ತಾನ್ ತಂಡಕ್ಕೆ, ಡೇವಿಡ್ ವಾರ್ನರ್ ಡೆಲ್ಲಿ ತಂಡಕ್ಕೆ, ಇನ್ನೂ ಚೆನ್ನೂ ಸೂಪರ್‌ಕಿಂಗ್ಸ್‌ ನಲ್ಲಿ ಆರಂಭಿಕ ಆಟಗಾರನಾಗಿದ್ದ ಡು ಪ್ಲೆಸಿಸ್ ಆರ್‌ಸಿಬಿ ತಂಡದ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡಗಳ ಮೇಲಿನ ಅಭಿಮಾನ ಪ್ರಮುಖ ಆಟಗಾರರ ಮೇಲಿನ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ. ಇದನ್ನೂ ಓದಿ: ಧೋನಿಯೇ ಮುಖ್ಯವಾದ್ರೆ ಉಳಿದ ಆಟಗಾರರು ಲಸ್ಸಿ ಕುಡಿಯಲು ಹೋಗಿದ್ರಾ: ಭಜ್ಜಿ ಪ್ರಶ್ನೆ

    ABD

    ಓವರ್ ಡೋಸ್ ಐಪಿಎಲ್: ಕೋವಿಡ್ ಕಾರಣದಿಂದಾಗಿ ತಡವಾಗಿ ಆರಂಭಗೊಂಡ 2021ರ ಸಾಲಿನ ಐಪಿಎಲ್ ಟೂರ್ನಿಯು 6 ತಿಂಗಳ ಹಿಂದೆಯಷ್ಟೇ ಕೊನೆಗೊಂಡಿತ್ತು. ಮಧ್ಯಂತರಲ್ಲಿ ಮತ್ತೆ ಐಪಿಎಲ್ ಮುಂದೂಡಲಾಯಿತು. ಹೆಚ್ಚಿನ ಸಮಯದ ಅಂತರ ಸಿಗದೇ ಇರುವುದರಿಂದ ಕ್ರಿಕೆಟ್ ಪ್ರೇಕ್ಷಕರಿಗೆ ಓವರ್ ಡೋಸ್ ಕೊಂಟ್ಟಂತೆ ಆಗಿದ್ದು, ರೇಟಿಂಗ್ಸ್ ಕುಸಿತಕ್ಕೆ ಕಾರಣವಾಗಿದೆ.

    IPL

    ಹಾಟ್ ಸ್ಟಾರ್ ಹವಾ: ಕೇಬಲ್ ಟಿವಿಗಳಿಗಿಂತಲೂ ಅಗ್ಗದ ಬೆಲೆಗೆ ಸಿಗುತ್ತಿರುವ ಇಂಟರ್‌ನೆಟ್ ಸಹ ಟಿವಿ ವೀಕ್ಷರ ಕೊರತೆಗೆ ಕಾರಣವಾಗಿದೆ. ಶೇ.90 ರಷ್ಟು ಯುವ ಸಮೂಹ ಮೊಬೈಲ್ ಹಾಟ್‌ಸ್ಟಾರ್ ಪ್ಯಾಕೇಜ್‌ಗಳಲ್ಲೇ ಐಪಿಎಲ್ ವೀಕ್ಷಣೆ ಮಾಡುತ್ತಿದ್ದಾರೆ. ಕಳೆದ ಮರ‍್ನಾಲ್ಕು ಪಂದ್ಯಗಳಲ್ಲಿ 50 ಲಕ್ಷಕ್ಕೂ ಹೆಚ್ಚಿನ ಪ್ರೇಕ್ಷಕರು ಹಾಟ್‌ಸ್ಟಾರ್‌ನಲ್ಲೇ ಐಪಿಎಲ್ ವೀಕ್ಷಿಸಿದ್ದಾರೆ. ಇದರಿಂದ ಸಹಜವಾಗಿಯೇ ಟಿವಿ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ.