Tag: IPL

  • ಡೆಲ್ಲಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಕೊನೆಯ ಸ್ಥಾನಕ್ಕೆ ಜಾರಿದ ಆರ್‌ಸಿಬಿ

    ಡೆಲ್ಲಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಕೊನೆಯ ಸ್ಥಾನಕ್ಕೆ ಜಾರಿದ ಆರ್‌ಸಿಬಿ

    ಲಕ್ನೋ: ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಗೆಲ್ಲಲು 168 ರನ್‌ಗಳ ಸವಾಲು ಪಡೆದ ಡೆಲ್ಲಿ ಇನ್ನೂ 11 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 170 ರನ್‌ ಹೊಡೆದು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದೆ.

    ಡೇವಿಡ್‌ ವಾರ್ನರ್‌ (David Warner) ಬೇಗನೇ ಔಟಾದರೂ ಪೃಥ್ವಿ ಶಾ 32 ರನ್‌ (22 ಎಸೆತ, 4 ಬೌಂಡರಿ), ಜೇಕ್ ಫ್ರೇಸರ್ 55 ರನ್(35‌ ಎಸೆತ, 2 ಬೌಂಡರಿ, 5 ಸಿಕ್ಸರ್‌), ರಿಷಭ್‌ ಪಂತ್‌ (Rishab Pant) 41 ರನ್‌(24 ಎಸೆತ, 4 ಬೌಂಡರಿ, 2 ಸಿಕ್ಸ್‌) ಸಿಡಿಸಿದ ಪರಿಣಾಮ ಡೆಲ್ಲಿ ಜಯಗಳಿಸಿತು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಲಕ್ನೋಗೆ ಕ್ವಿಂಟನ್‌ ಡಿ ಕಾಕ್‌ 19 ರನ್‌, ನಾಯಕ ಕೆಎಲ್‌ ರಾಹುಲ್‌ (KL Rahul) 39 ರನ್‌(22 ಎಸೆತ, 5 ಬೌಂಡರಿ, 1 ಸಿಕ್ಸರ್‌), ಕೊನೆಯಲ್ಲಿ ಆಯುಷ್ ಬದೋನಿ ಅವರ ಸ್ಫೋಟಕ ಔಟಾಗದೇ 55 ರನ್‌(35 ಎಸೆತ, 5 ಬೌಂಡರಿ, 1 ಸಿಕ್ಸರ್‌) ನೆರವಿನಿಂದ ಲಕ್ನೋ 7 ವಿಕೆಟ್‌ ನಷ್ಟಕ್ಕೆ 167 ರನ್‌ ಹೊಡೆಯಿತು.  ಕುಲದೀಪ್‌ ಯಾದವ್‌ 20 ರನ್‌ ನೀಡಿ 3 ವಿಕೆಟ್‌ ಕಿತ್ತರು.

    ಕೊನೆಯಲ್ಲಿ ಆರ್‌ಸಿಬಿ:
    ಇಂದಿನ ಪಂದ್ಯವನ್ನು ಡೆಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಏರಿದರೆ ಆರ್‌ಸಿಬಿ (RCB) ಕೊನೆಯ ಸ್ಥಾನಕ್ಕೆ ಜಾರಿದೆ. ಡೆಲ್ಲಿ 6 ಪಂದ್ಯಗಳ ಪೈಕಿ 2 ರಲ್ಲಿ ಜಯ ಸಾಧಿಸಿದ್ದರೆ ಆರ್‌ಸಿಬಿ 6 ಪಂದ್ಯಗಳ ಪೈಕಿ 5 ರಲ್ಲಿ ಸೋಲುವ ಮೂಲಕ 2 ಅಂಕ ಸಂಪಾದಿಸಿ 10ನೇ ಸ್ಥಾನಕ್ಕೆ ಕುಸಿದಿದೆ.

  • ಕಳಪೆ ಬೌಲಿಂಗ್‌, ಫೀಲ್ಡಿಂಗ್‌ – ಬುಮ್ರಾ, ಕಿಶನ್‌, ಸೂರ್ಯ ಆಟಕ್ಕೆ ಆರ್‌ಸಿಬಿ ಬರ್ನ್‌

    ಕಳಪೆ ಬೌಲಿಂಗ್‌, ಫೀಲ್ಡಿಂಗ್‌ – ಬುಮ್ರಾ, ಕಿಶನ್‌, ಸೂರ್ಯ ಆಟಕ್ಕೆ ಆರ್‌ಸಿಬಿ ಬರ್ನ್‌

    ಮುಂಬೈ: ಕಳಪೆ ಬೌಲಿಂಗ್‌ಗೆ, ಕಳಪೆ ಫೀಲ್ಡಿಂಗ್‌ಗೆ ಮತ್ತೆ ಆರ್‌ಸಿಬಿ (RCB) ಬೆಲೆ ತೆತ್ತಿದೆ. ಆರಂಭಿಕ ಆಟಗಾರ ಇಶನ್‌ ಕಿಶನ್‌, ನಂತರ ಸೂರ್ಯಕುಮಾರ್‌ ಯಾದವ್‌ ಅವರ ಸ್ಫೋಟಕ ಅರ್ಧಶತಕದ ಆಟದಿಂದ ಮುಂಬೈ ಇಂಡಿಯನ್ಸ್‌ (Mumbai Indians) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಗೆಲ್ಲಲು 197 ರನ್‌ಗಳ ಗುರಿಯನ್ನು ಪಡೆದ ಮುಂಬೈ 15.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆಯಿತು. ಈ ಮೂಲಕ ಮೂರು ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಎರಡನೇ ಜಯ ಸಾಧಿಸಿತು. 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಆರ್‌ಸಿಬಿ ಸೋತಿದ್ದು ಡೆಲ್ಲಿ 2 ಅಂಕ ಗಳಿಸಿ ಕೊನೆಯ ಸ್ಥಾನದಲ್ಲಿದೆ.

    ಈಶನ್‌ ಕಿಶನ್‌ (Ishan Kishan) ಮತ್ತು ರೋಹಿತ್‌ ಶರ್ಮಾ (Rohit Sharma) ಸ್ಫೋಟಕ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟಿಗೆ 101 ರನ್‌ ಜೊತೆಯಾಟವಾಡಿದರು. ಇಶನ್‌ ಕಿಶನ್‌ 69 ರನ್‌(34 ಎಸೆತ, 7 ಬೌಂಡರಿ, 5 ಸಿಕ್ಸ್‌), ರೋಹಿತ್‌ ಶರ್ಮಾ 38 ರನ್‌(24 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರು.

     

    ಗಾಯಗೊಂಡು ತಂಡದಿಂದ ಹೊರಗೆ ಇದ್ದ ಸೂರ್ಯಕುಮಾರ್‌ ಯಾದವ್‌ (Surya Kumar Yadav) ತಮ್ಮ ಎಂದಿನ ಲಯದಲ್ಲಿ ಬ್ಯಾಟ್‌ ಬೀಸಿದರು. ಪರಿಣಾಮ ಕೇವಲ 19 ಎಸೆತದಲ್ಲಿ 52 ರನ್‌ (5 ಬೌಂಡರಿ, 4 ಸಿಕ್ಸರ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ ಔಟಾಗದೇ 21 ರನ್‌(6 ಎಸೆತ, 3 ಬೌಂಡರಿ) ತಿಲಕ್‌ ವರ್ಮಾ ಔಟಾಗದೇ 16 ರನ್‌ ಹೊಡೆದರು.

    ಟಾಸ್‌ ಸೋತು ಬ್ಯಾಟಿಂಗ್‌ ಇಳಿದ ಆರ್‌ಸಿಬಿ ಪರ ಮೂವರು ಆಟಗಾರರು ಮಾತ್ರ ಎರಡಂಕಿ ದಾಟಿದ್ದರು. ನಾಯಕ ಫಾ ಡುಪ್ಲೆಸಿಸ್‌ 61 ರನ್‌(40 ಎಸೆತ, 4 ಬೌಂಡರಿ, 3 ಸಿಕ್ಸರ್‌), ರಜತ್‌ ಪಟೀದಾರ್‌ 50 ರನ್‌ (26 ಎಸೆತ, 3 ಬೌಂಡರಿ, 4 ಸಿಕ್ಸರ್‌), ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ (Dinesh Karthik) ಸ್ಫೋಟಕ 53 ರನ್‌(23 ಎಸೆತ, 5 ಬೌಂಡರಿ, 4 ಸಿಕ್ಸರ್‌) ಆಟದಿಂದ 8 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆಯಿತು.

    ಜಸ್‌ಪ್ರೀತ್‌ ಬುಮ್ರಾ 21 ರನ್‌ ನೀಡಿ 5 ವಿಕೆಟ್‌ ಕೀಳುವ ಮೂಲಕ ಆರ್‌ಸಿಬಿ ಬೆನ್ನೆಲುಬನ್ನು ಮುರಿದರು. 4 ಎಸೆತ ಎದುರಿಸಿದ ಮ್ಯಾಕ್ಸ್‌ ವೆಲ್‌ ಶೂನ್ಯ ಸುತ್ತಿ ಮತ್ತೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

  • ಕೊನೆಯ ಎಸೆತದಲ್ಲಿ ಬೌಂಡರಿ – ಗುಜರಾತಿಗೆ ರೋಚಕ ಜಯ: ಕೊನೆಯ ಓವರ್‌ ಹೀಗಿತ್ತು

    ಕೊನೆಯ ಎಸೆತದಲ್ಲಿ ಬೌಂಡರಿ – ಗುಜರಾತಿಗೆ ರೋಚಕ ಜಯ: ಕೊನೆಯ ಓವರ್‌ ಹೀಗಿತ್ತು

    ಜೈಪುರ: ನಾಯಕ ಶುಭಮನ್‌ ಗಿಲ್‌ (Shubman Gill)‌ ಅರ್ಧಶತಕ ಕೊನೆಗೆ ರಶೀದ್‌ ಖಾನ್‌ (Rashid Khan) ಮತ್ತು ರಾಹುಲ್‌ ತೆವಾಟಿಯ ಅವರ ಸ್ಫೋಟಕ ಆಟದಿಂದ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಗುಜರಾತ್‌ ಟೈಟಾನ್ಸ್‌ (Gujarat Titans) ರೋಚಕ 3 ವಿಕೆಟ್‌ ಜಯ ಸಾಧಿಸಿದೆ.

    ಗೆಲ್ಲಲು 196 ರನ್‌ಗಳ ಕಠಿಣ ಗುರಿಯನ್ನು ಪಡೆದ ಗುಜರಾತ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆಯಿತು. ರಶೀದ್‌ ಖಾನ್‌ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಸತತ 4 ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನಕ್ಕೆ 5 ಪಂದ್ಯದಲಿ ಸೋಲಾಗಿದೆ.

    ರಾಜಸ್ಥಾನಕ್ಕೆ ಕೊನೆಯ 24 ಎಸೆತದಲ್ಲಿ 59 ರನ್‌ ಬೇಕಿತ್ತು. ಅಶ್ವಿನ್‌ ಎಸೆದ 17ನೇ ಓವರ್‌ನಲ್ಲಿ 17 ರನ್‌ ಬಂದರೆ 18ನೇ ಓವರ್‌ನಲ್ಲಿ 7 ರನ್‌ ಬಂತು. ಕುಲದೀಪ್‌ ಸೇನ್‌ 19ನೇ ಓವರ್‌ನಲ್ಲಿ 20 ರನ್‌ ನೀಡಿದರು. ಈ ಓವರ್‌ನಲ್ಲಿ 4ನೇ ಎಸೆತ ನೋಬಾಲ್‌ ಆಗಿತ್ತು. ಆ ಎಸೆತವನ್ನು ರಶೀದ್‌ ಖಾನ್‌ ಬೌಂಡರಿಗೆ ಅಟ್ಟಿದ್ದರು.

    ಕೊನೆಯ ಓವರ್‌ನಲ್ಲಿ 15 ರನ್‌ ಬೇಕಿತ್ತು. ಈ ವೇಳೆ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ 4 ಆಟಗಾರರು ಮಾತ್ರ ಬೌಂಡರಿ ಬಳಿ ಫೀಲ್ಡಿಂಗ್‌ ಮಾಡಲು ಅವಕಾಶವಿತ್ತು. ಇದರ ಲಾಭವನ್ನು ರಶೀದ್‌ ಖಾನ್‌ ಮತ್ತು ತೆವಾಟಿಯ ಪಡೆದರು. ಅವೇಶ್‌ ಖಾನ್‌ ಎಸೆದ ಮೊದಲ ಎಸೆತವನ್ನು ರಶೀದ್‌ ಖಾನ್‌ ಬೌಂಡರಿಗೆ ಅಟ್ಟಿದರೆ ಎರಡನೇ ಎಸೆತದಲ್ಲಿ 2 ರನ್‌, ಮೂರನೇ ಎಸೆತದಲ್ಲಿ ಬೌಂಡರಿ ಹೊಡೆದರು. 4ನೇ ಎಸೆತದಲ್ಲಿ ಒಂದು ರನ್‌ ತೆಗೆದರೆ 5ನೇ ಎಸೆತದಲ್ಲಿ ಮೂರು ರನ್‌ ತೆಗೆಯುವಾಗ ತವಾಟಿಯಾ ರನೌಟ್‌ ಆದರು. ಕೊನೆಯ ಒಂದು ಎಸೆತದಲ್ಲಿ 2 ರನ್‌ ಬೇಕಿದ್ದಾಗ ರಶೀದ್‌ ಖಾನ್‌ ಬೌಂಡರಿ ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಗುಜರಾತ್‌ ಪರ ನಾಯಕ ಶುಭಮನ್‌ ಗಿಲ್‌ 72 ರನ್‌(44 ಎಸೆತ, 6 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರೆ ಸಾಯಿ ಸುದರ್ಶನ್‌ 35 ರನ್‌ (29 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.

    ಮಧ್ಯಮ ಕ್ರಮಾಂಕದ ಆಟಗಾರರು ಬೇಗನೇ ಔಟಾದ ಪರಿಣಾಮ ಗುಜರಾತ್‌ ಸೋಲಿನ ಕಡೆ ಜಾರಿತ್ತು. ಆದರೆ ರಶೀದ್‌ ಖಾನ್‌ ಮತ್ತು ತೆವಾಟಿಯಾ 14 ಎಸೆತದಲ್ಲಿ 36 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡತ್ತ ತಂದರು. ರಶೀದ್‌ ಖಾನ್‌ ಔಟಾಗದೇ 24 ರನ್‌(11 ಎಸೆತ, 4 ಬೌಂಡರಿ) ತವಾಟಿಯಾ 22 ರನ್‌ (11 ಎಸೆತ, 3 ಬೌಂಡರಿ) ಹೊಡೆದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 42 ರನ್‌ ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್‌ 24 ರನ್‌(19 ಎಸೆತ, 5 ಬೌಂಡರ), ಜೋಸ್‌ ಬಟ್ಲರ್‌ ಅವರ ವಿಕೆಟ್‌ ಕಳೆದುಕೊಂಡಿತ್ತು. ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಸಂಜು ಸ್ಯಾಮ್ಸನ್‌ ಮತ್ತು ರಿಯಾನ್‌ ಪರಾಗ್‌ ನಿಧಾನವಾಗಿ ಇನ್ನಿಂಗ್ಸ್‌ ಕಟ್ಟಿದರು. ಇವರಿಬ್ಬರು ಮೂರನೇ ವಿಕೆಟಿಗೆ 78 ಎಸೆತಗಳಲ್ಲಿ 130 ರನ್‌ ಹೊಡೆದರು.

    ರಿಯಾನ್‌ ಪರಾಗ್‌ 76 ರನ್‌(48 ಎಸೆತ, 3 ಬೌಂಡರಿ, 5 ಸಿಕ್ಸರ್‌) ಹೊಡೆದು ಔಟಾದರೆ ನಾಯಕ ಸಾಮ್ಸನ್‌ ಔಟಾಗದೇ 68 ರನ್‌ (38 ಎಸೆತ, 7 ಬೌಂಡರಿ, 2 ಸಿಕ್ಸರ್‌), ಹೆಟ್ಮೇಯರ್‌ 13 ರನ್‌ (5 ಎಸೆತ, 1 ಬೌಂಡರಿ, 1 ಸಿಕ್ಸರ್‌) ಹೊಡೆದ ಪರಿಣಾಮ ರಾಜಸ್ಥಾನ 3 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆಯಿತು.

     

  • ಕೊನೆಯ ಓವರ್‌ನಲ್ಲಿ 26 ರನ್‌ ಬಿಟ್ಟುಕೊಟ್ಟರೂ ಹೈದರಾಬಾದ್‌ಗೆ ರೋಚಕ 2 ರನ್‌ ಗೆಲುವು

    ಕೊನೆಯ ಓವರ್‌ನಲ್ಲಿ 26 ರನ್‌ ಬಿಟ್ಟುಕೊಟ್ಟರೂ ಹೈದರಾಬಾದ್‌ಗೆ ರೋಚಕ 2 ರನ್‌ ಗೆಲುವು

    ಮುಲ್ಲನಪುರ್‌: ಕೊನೆಯ ಓವರ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆ, ಇತರ ರನ್‌ಗಳು, ಕೈ ಚೆಲ್ಲಿದ ಕ್ಯಾಚ್‌ಗಳು.. ಸೋಲಿನತ್ತ ವಾಲಿದ್ದ ಸನ್‌ರೈಸರ್ಸ್‌ ಹೈದರಾಬಾದ್ (Sunrisers Hyderabad) ಕೊನೆಗೂ ಗೆಲುವಿನ ನಗೆ ಬೀರಿದೆ. ಪಂಜಾಬ್‌ ಕಿಂಗ್ಸ್‌ (Panjab Kings) ವಿರುದ್ಧ ಹೈದರಾಬಾದ್‌ 2 ರನ್‌ಗಳ ರೋಚಕ ಜಯ ಸಾಧಿಸಿದೆ.

    183 ರನ್‌ಗಳ ಗುರಿಯನ್ನು ಪಡೆದ ಪಂಜಾಬ್‌ಗೆ ಕೊನೆಯ ಓವರ್‌ನಲ್ಲಿ 29 ರನ್‌ ಬೇಕಿತ್ತು. ಜಯದೇವ್ ಉನದ್ಕತ್ (Jaydev Unadkat) ಎಸೆದ ಮೊದಲ ಎಸೆತವನ್ನು ಅಶುತೋಶ್‌ ಶರ್ಮಾ (Ashutosh Sharma) ಸಿಕ್ಸರ್‌ಗೆ ಅಟ್ಟಿದರು. ನಂತರ ಎರಡು ವೈಡ್‌ ರನ್‌ ಬಂತು.

    ಎರಡನೇ ಎಸೆತವನ್ನು ಅಶುತೋಶ್‌ ಸಿಕ್ಸರ್‌ಗೆ ಅಟ್ಟುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಂತರ ಎರಡು ಎಸೆತಗಳಲ್ಲಿ 2 ರನ್‌ ಬಂದರೆ 5ನೇ ಎಸೆತ ವೈಡ್‌ ಆಯ್ತು. ನಂತರದ ಎಸೆತದಲ್ಲಿ ಅಶುತೋಶ್‌ ಸಿಕ್ಸರ್‌ ಅಟ್ಟುವ ಪ್ರಯತ್ನ ಮಾಡಿದರು. ಆದರೆ ಡಿಪ್‌ ಮಿಡ್‌ ವಿಕೆಟ್‌ ಬಳಿ ತ್ರಿಪಾಠಿ ಕ್ಯಾಚ್‌ ಕೆಚೆಲ್ಲಿದರು. ಈ ಎಸೆತದಲ್ಲಿ 1 ರನ್‌ ಬಂತು. ಕೊನೆಯ ಎಸೆತವನ್ನು ಶಶಾಂಕ್‌ ಸಿಂಗ್‌ (Shashank Singh) ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ಕೊನೆಯ ಓವರ್‌ನಲ್ಲಿ 26 ರನ್‌ ಬಂತು.

    ಕೊನೆಯ 18 ಎಸೆತಗಳಲ್ಲಿ ಪಂಜಾಬ್‌ ಗೆಲ್ಲಲು 50 ರನ್‌ಗಳು ಬೇಕಿತ್ತು. 18 ಓವರ್‌ನಲ್ಲಿ ಪ್ಯಾಟ್‌ ಕಮ್ಮಿನ್ಸ್‌ 11 ರನ್‌ ಕೊಟ್ಟರೆ 19ನೇ ಓವರ್‌ನಲ್ಲಿ ನಟರಾಜನ್‌ ಕೇವಲ 10 ರನ್‌ ನೀಡಿದ್ದುಹೈದರಬಾದ್‌ ಗೆಲುವಿಗೆ ಕಾರಣವಾಯಿತು. ಉನದ್ಕತ್‌ ಒತ್ತಡಕ್ಕೆ ಒಳಗಾದ ಸಮಯದಲ್ಲಿ ಪ್ಯಾಟ್‌ ಕಮ್ಮಿನ್ಸ್‌ (Pat Cummins) ನಗು ಮುಖದಿಂದ ಅವರನ್ನು ಮಾತನಾಡಿಸಿ ಆತ್ಮಸ್ಥೈರ್ಯ ತುಂಬಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು.

    ಪಂಜಾಬ್‌ ಪರ ಶಶಾಂಕ್‌ ಸಿಂಗ್‌ ಔಟಾಗದೇ 46 ರನ್‌ (25 ಎಸೆತ, 6 ಬೌಂಡರಿ,1 ಸಿಕ್ಸರ್‌), ಅಶುತೋಶ್‌ ಶರ್ಮಾ ಔಟಾಗದೇ 33 ರನ್‌ (15 ಎಸೆತ, 3 ಬೌಂಡರಿ, 2 ಸಿಕ್ಸರ್)‌ ಹೊಡೆದರು. ಶಶಾಂಕ್‌ ಸಿಂಗ್‌ ಮತ್ತು ಅಶುತೋಶ್‌ ಮುರಿಯದ 7ನೇ ವಿಕೆಟಿಗೆ 27 ಎಸೆತಗಳಲ್ಲಿ 66 ರನ್‌ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡದ ಹತ್ತಿರ ತಂದಿದ್ದರು. ಜಿತೇಶ್‌ ಶರ್ಮಾ 19 ರನ್‌, ಸಿಕಂದರ್‌ ರಾಜಾ 28 ರನ್‌, ಸ್ಯಾಮ್‌ ಕರ್ರನ್‌ 29 ರನ್‌ ಹೊಡೆದು ಔಟಾದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತ್ತು. 39 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಹೀಗಿದ್ದರೂ 20 ವರ್ಷದ ಕಿರಿಯ ಆಟಗಾರ ನಿತೀಶ್‌ ಕುಮಾರ್‌ ರೆಡ್ಡಿ 64 ರನ್‌ (37 ಎಸೆತ, 4 ಬೌಂಡರಿ,5 ಸಿಕ್ಸ್‌) ಸಿಡಿಸಿ ತಂಡಕ್ಕೆ ನೆರವಾದರು. ಅಬ್ದುಲ್‌ ಸಮಾದ್‌ 25 ರನ್‌ (12 ಎಸೆತ, 5 ಬೌಂಡರಿ) ಹೊಡೆದರು. ಕೊನೆಯಲ್ಲಿ ವಿಕೆಟ್‌ ಕಳೆದುಕೊಂಡ ಪರಿಣಾಮ ಹೈದರಾಬಾದ್‌ 9 ವಿಕೆಟ್‌ ನಷ್ಟಕ್ಕೆ 182 ರನ್‌ ಹೊಡೆಯಿತು.

  • ತವರಿನಲ್ಲಿ ಆರ್‌ಸಿಬಿಗೆ ಹೀನಾಯ ಸೋಲು – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

    ತವರಿನಲ್ಲಿ ಆರ್‌ಸಿಬಿಗೆ ಹೀನಾಯ ಸೋಲು – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

    – 15 -18 ಓವರ್‌ನಲ್ಲಿ ಆರ್‌ಸಿಬಿ ಹೊಡೆದದ್ದು ಕೇವಲ 29 ರನ್‌
    – ದಿಢೀರ್‌ ಕುಸಿತ ಕಂಡ ಆರ್‌ಸಿಬಿಯ ಮಧ್ಯಮ ಕ್ರಮಾಂಕ

    ಬೆಂಗಳೂರು: ಬೌಲರ್‌ಗಳ ಕೆಟ್ಟ ಪ್ರದರ್ಶನದಿಂದಾಗಿ ತವರಿನಲ್ಲಿ ಆರ್‌ಸಿಬಿ (RCB) ಪಂದ್ಯವನ್ನು ಸೋತಿದ್ದು ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) 7 ವಿಕೆಟ್‌ಗಳ ಜಯ ಸಾಧಿಸಿದೆ. ಸತತ ಎರಡು ಜಯ ಸಾಧಿಸುವ ಮೂಲಕ ಕೋಲ್ಕತ್ತಾ ಐಪಿಎಲ್‌ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

    ಗೆಲ್ಲಲು 183 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ  16.5 ಓವರ್‌ಗಳಲ್ಲಿ 3  ವಿಕೆಟ್‌ ನಷ್ಟಕ್ಕೆ  186 ರನ್‌ ಹೊಡೆದು ಜಯ ಸಾಧಿಸಿತು. ಇಲ್ಲಿಯವರೆಗೆ ತವರಿನಲ್ಲಿ ನಡೆದ ಎಲ್ಲಾ 9 ಪಂದ್ಯಗಳನ್ನು ತವರಿನ ತಂಡಗಳೇ ಜಯಗಳಿಸಿದ್ದವು. ಆದರೆ ಆರ್‌ಸಿಬಿ ತವರಿನ ಎರಡನೇ ಪಂದ್ಯದಲ್ಲಿ ಎಡವಿದೆ. ಇದನ್ನೂ ಓದಿ: ದೈವಕೋಲದ ವೇಳೆ ಸಾರ್ವಜನಿಕ ಸಭೆ – ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೇಸ್

    ಸ್ಫೋಟಕ ಆರಂಭ: ಆರಂಭಿಕ ಆಟಗಾರರಾದ ಪಿಲ್‌ ಸಾಲ್ಟ್‌ (Phil Salt) ಮತ್ತು ಸುನೀಲ್‌ ನರೈನ್‌ (Sunil Narine) ಕೇವಲ 39 ಎಸೆತಗಳಲ್ಲಿ 86 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿದರು. ನರೈನ್‌ 47 ರನ್‌ (22 ಎಸೆತ, 2 ಬೌಂಡರಿ, 5 ಸಿಕ್ಸ್‌) ಹೊಡೆದರೆ ಕೀಪರ್‌ ಪಿಲ್‌ ಸಾಲ್ಟ್‌ 30 ರನ್‌ (20 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು.

    ಆರಂಭಿಕ ಆಟಗಾರರು ಔಟಾದರೂ ವೆಂಕಟೇಶ್‌ ಅಯ್ಯರ್‌ ಬಿರುಸಿನ ಆಟವಾಡಿ 50 ರನ್‌ (30 ಎಸೆತ, 3 ಬೌಂಡರಿ, 4 ಸಿಕ್ಸರ್‌) ಹೊಡೆದು ಕ್ಯಾಚ್‌ ನೀಡಿ ಹೊರನಡೆದರು. ಇದನ್ನೂ ಓದಿ: ಮುಲಾಯಂ ಸರ್ಕಾರದಿಂದ ರಕ್ಷಣೆ – ಅನ್ಸಾರಿಯನ್ನು ಬಂಧಿಸಿದ್ದಕ್ಕೆ ಡಿಎಸ್‌ಪಿಗೆ ರಾಜೀನಾಮೆ ಶಿಕ್ಷೆ!

    ನಾಯಕ ಶ್ರೇಯಸ್‌ ಅಯ್ಯರ್‌ ಔಟಾಗದೇ 39 ರನ್‌(24 ಎಸೆತ, 2 ಬೌಂಡರಿ, 2 ಸಿಕ್ಸ್‌), ರಿಂಕು ಸಿಂಗ್‌ ಔಟಾಗದೇ 5 ರನ್‌ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.

    ಮಧ್ಯಮ ಕ್ರಮಾಂಕದಲ್ಲಿ ಕುಸಿತ:   ಡುಪ್ಲೆಸಿಸ್‌ 8 ರನ್‌ ಗಳಿಸಿ ಔಟಾದರೂ ಕ್ಯಾಮರೂನ್‌ ಗ್ರೀನ್‌ 33 ರನ್‌ (21 ಎಸೆತ, 4 ಬೌಂಡರಿ, 2 ಸಿಕ್ಸರ್‌), ಮ್ಯಾಕ್ಸ್‌ವೆಲ್‌ 28 ರನ್‌(19 ಎಸೆತ, 3 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು.

    ರಜತ್‌ ಪಾಟೀದರ್‌ ಮತ್ತು ಅನುಜ್‌ ರಾವತ್‌ ತಲಾ 3 ರನ್‌ ಗಳಿಸಿ ಔಟಾದ್ದರಿಂದ ರನ್‌ ದಿಢೀರ್‌ ಕುಸಿತವಾಯಿತು. ಹೀಗಿದ್ದರೂ ಕೊಹ್ಲಿ (Virat Kohli) ಮತ್ತು ದಿನೇಶ್‌ ಕಾರ್ತಿಕ್‌ (Dinesh Karthik) ಕೊನೆಯಲ್ಲಿ ಸಿಕ್ಸ್‌, ಬೌಂಡರಿ ಸಿಡಿಸಿದ ಪರಿಣಾಮ ಆರ್‌ಸಿಬಿ 6 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿತು.

    ಆರ್‌ಸಿಬಿ ಸೋತಿದ್ದು ಹೇಗೆ?
    ಇನ್ನಿಂಗ್ಸ್‌ 15ನೇ ಓವರ್‌ನಲ್ಲಿ 10 ರನ್‌, 16ನೇ ಓವರ್‌ನಲ್ಲಿ 7 ರನ್‌, 17ನೇ ಓವರ್‌ನಲ್ಲಿ 7 ರನ್‌, 18ನೇ ಓವರ್‌ನಲ್ಲಿ 5 ರನ್‌ ಗಳಿಸಿತು. ಈ ಓವರ್‌ಗಳಲ್ಲಿ ಸಿಕ್ಸ್‌, ಬೌಂಡರಿಗಳು ಸಿಡಿಯಲ್ಪಟ್ಟಿದ್ದರೆ ಪಂದ್ಯ ಸ್ವಲ್ಪ ಫೈಟ್‌ ಬರುತ್ತಿತ್ತು. ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ 13 ರನ್‌ ಬಂದರೆ 20ನೇ ಓವರ್‌ನಲ್ಲಿ 16 ರನ್‌ ಬಂದಿತ್ತು. ಇದರೊಂದಿಗೆ ಬೌಲರ್‌ಗಳು ವಿಕೆಟ್‌ ಕಿತ್ತು ಒತ್ತಡ ಹೇರಲಿಲ್ಲ. ಇತರೇ ರೂಪದಲ್ಲಿ 15 ರನ್‌ ( ಲೆಗ್‌ ಬೈ7, ವೈಡ್‌ 8 ) ಬಿಟ್ಟು ಕೊಟ್ಟ ಕಾರಣ ಆರ್‌ಸಿಬಿ ಪಂದ್ಯವನ್ನು ಸೋತಿದೆ.

  • ಸಿಕ್ಸರ್‌, ಬೌಂಡರಿಗಳ ಆಟದಲ್ಲಿ ಗೆದ್ದ ಹೈದರಾಬಾದ್‌ – ಹೋರಾಡಿ ಸೋತ ಮುಂಬೈ

    ಸಿಕ್ಸರ್‌, ಬೌಂಡರಿಗಳ ಆಟದಲ್ಲಿ ಗೆದ್ದ ಹೈದರಾಬಾದ್‌ – ಹೋರಾಡಿ ಸೋತ ಮುಂಬೈ

    ಹೈದರಾಬಾದ್‌: ಸಿಕ್ಸರ್‌ ಬೌಂಡರಿಗಳ ಆಟದಲ್ಲಿ ಸನ್‌ರೈಸರ್ಸ್‌ ಹೈದಾಬಾದ್‌ (Sunrisers Hyderabad) ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ 31 ರನ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 278 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 246 ರನ್‌ ಹೊಡೆದು ಸತತ ಎರಡನೇ ಸೋಲನ್ನು ಅನುಭವಿಸಿತು. ಎರಡು ತಂಡಗಳು ಮೊತ್ತ 500 ರನ್‌ಗಳ ಗಡಿಯನ್ನು ದಾಟಿದ್ದು ವಿಶೇಷ.

    ಮೂರು ದಾಖಲೆ ಸೃಷ್ಟಿ: ಒಟ್ಟು 523 ರನ್‌ ಸಿಡಿದಿದ್ದು ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲು. ಇಂದಿನ ಪಂದ್ಯದಲ್ಲಿ 31 ಬೌಂಡರಿ, 38 ಸಿಕ್ಸ್‌ ಸಿಡಿಯಲ್ಪಟ್ಟಿದೆ. ಐಪಿಎಲ್‌ನಲ್ಲಿ ಇಷ್ಟು ಬೌಂಡರಿ, ಸಿಕ್ಸ್‌ ಚಚ್ಚುವ ಮೂಲಕ ಮತ್ತೊಂದು ದಾಖಲೆ ಬರೆಯಲಾಗಿದೆ.

    ಇಂದಿನ ಪಂದ್ಯದಲ್ಲಿ ಹೈದರಾಬಾದ್‌ 277 ರನ್‌ ಹೊಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಹೈದರಾಬಾದ್‌ ಪಾತ್ರವಾಯಿತು. ಈ ಹಿಂದೆ ಅತಿ ಹೆಚ್ಚು ರನ್‌ ಸಿಡಿಸಿದ ದಾಖಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಹೆಸರಿನಲ್ಲಿ ಇತ್ತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 263 ರನ್‌ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಔಟಾಗದೇ 175 ರನ್‌ ಚಚ್ಚಿದ್ದರು.

    ಭಾರೀ ದೊಡ್ಡ ಮೊತ್ತವಿದ್ದ ಹಿನ್ನೆಲೆಯಲ್ಲಿ ಆರಂಭದಲ್ಲೇ ರೋಹಿತ್‌ ಶರ್ಮಾ (Rohit Sharma) ಮತ್ತು ಇಶನ್‌ ಕಿಶನ್‌ (Ishan Kishan) ಅಬ್ಬರಿಸಲು ಆರಂಭಿಸಿದರು. ಇಬ್ಬರು 20 ಎಸೆತಗಳಲ್ಲಿ 56 ರನ್‌ ಚಚ್ಚಿದರು.

    ಈಶನ್‌ ಕಿಶನ್‌ 34 ರನ್‌(13 ಎಸೆತ, 2 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರೆ ರೋಹಿತ್‌ ಶರ್ಮಾ 26 ರನ್‌ (12 ಎಸೆತ, 1 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರು. ನಂತರ ನಮನ್‌ ಧೀರ್‌ 30 ರನ್‌(14 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದು ಕ್ಯಾಚ್‌ ನೀಡಿದರು.

    ವಿಕೆಟ್‌ ಉರುಳಿದರೂ ಗೆಲ್ಲಲೇಬೇಕೆಂದು ಕ್ರೀಸ್‌ಗೆ ಇಳಿದ ತಿಲಕ್‌ ವರ್ಮಾ ಹೈದರಾಬಾದ್‌ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. 24 ಎಸೆತಗಳಲ್ಲಿ ಅರ್ಧಶತಕ ಹೊಡೆದ ವರ್ಮಾ 64 ರನ್‌ (34 ಎಸೆತ, 2 ಬೌಂಡರಿ, 6 ಸಿಕ್ಸರ್‌) ಗಳಿಸಿದ್ದಾಗ ಸಿಕ್ಸ್‌ ಸಿಡಿಸಲು ಹೋಗಿ ಕ್ಯಾಚ್‌ ನೀಡಿ ಔಟಾದರು. ಹಾರ್ದಿಕ್‌ ಪಾಂಡ್ಯ 24 ರನ್‌ ಹೊಡೆದರು ಔಟಾದರೆ ಡಿಮ್‌ ಡೇವಿಡ್‌ ಔಟಾಗದೇ 42 ರನ್‌ (22 ಎಸೆತ, 2 ಬೌಂಡರಿ, 3 ಸಿಕ್ಸರ್‌) ಹೊಡೆದರು. ಇದನ್ನೂ ಓದಿ: ಆರ್‌ಸಿಬಿ ದಾಖಲೆ ಉಡೀಸ್‌ – ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೈದರಾಬಾದ್‌

    ನಾಯಕ ಪ್ಯಾಟ್‌ ಕಮ್ಮಿನ್ಸ್‌ 4 ಓವರ್‌ ಎಸೆದು 35 ರನ್‌ ನೀಡಿ ರೋಹಿತ್‌ ಶರ್ಮಾ ಮತ್ತು ತಿಕಲ್‌ ವರ್ಮಾ ವಿಕೆಟ್‌ ಪಡೆದು ಹೈದರಾಬಾದ್‌ಗೆ ಮಹತ್ವದ ಮುನ್ನಡೆ ತಂದುಕೊಟ್ಟರು.

    ಮುಂಬೈ ರನ್‌ ಏರಿದ್ದು ಹೇಗೆ?
    50 ರನ್‌ – 18 ಎಸೆತ
    100 ರನ್‌ – 45 ಎಸೆತ
    150 ರನ್‌ – 63 ಎಸೆತ
    200 ರನ್‌ – 101 ಎಸೆತ
    246 ರನ್‌ – 120 ಎಸೆತ

  • ಚೆನ್ನೈ ಸಿಡಿಸಿದ ರನ್‌ ಮಳೆಗೆ ಕೊಚ್ಚಿ ಹೋಯ್ತು ಟೈಟಾನ್ಸ್‌ – ಮೊದಲ ಸ್ಥಾನಕ್ಕೆ ಜಿಗಿದ ಸಿಎಸ್‌ಕೆ

    ಚೆನ್ನೈ ಸಿಡಿಸಿದ ರನ್‌ ಮಳೆಗೆ ಕೊಚ್ಚಿ ಹೋಯ್ತು ಟೈಟಾನ್ಸ್‌ – ಮೊದಲ ಸ್ಥಾನಕ್ಕೆ ಜಿಗಿದ ಸಿಎಸ್‌ಕೆ

    ಚೆನ್ನೈ: ತವರಿನಲ್ಲಿ ಚೆನ್ನೈ ಸಿಡಿಸಿದ ರನ್‌ ಮಳೆಗೆ ಗುಜರಾತ್‌ ಟೈಟಾನ್ಸ್‌ (Gujarat Titans) ಕೊಚ್ಚಿ ಹೋಗಿದೆ. ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) 63 ರನ್‌ಗಳ ಭರ್ಜರಿ ಜಯದೊಂದಿಗೆ ಐಪಿಎಲ್‌ (IPL) ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ 6 ವಿಕೆಟ್‌ ನಷ್ಟಕ್ಕೆ 206 ರನ್‌ ಗಳಿಸಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ತಂಡದ ಮೊತ್ತ 28 ರನ್‌ಗಳಿಸಿದಾಗ ಶುಭಮನ್‌ ಗಿಲ್‌ (Shubaman Gill) 8 ರನ್‌ ಗಳಿಸಿ ಎಲ್‌ಬಿಗೆ ಔಟಾದರು. 55 ರನ್‌ಗಳಿಸುವಷ್ಟರಲ್ಲಿ ಗುಜರಾತ್‌ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. 12 ರನ್‌ಗಳಿಸಿದ್ದ ವಿಜಯ್‌ ಶಂಕರ್‌ ಅವರ ಕ್ಯಾಚನ್ನು ಧೋನಿ (Dhoni) ಹಾರಿ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. 21 ರನ್‌ ಗಳಿಸಿ ಸಿಕ್ಸ್‌ ಸಿಡಿಸಲು ಹೋಗಿ ರಹಾನೆ ಹಿಡಿದ ಉತ್ತಮ ಕ್ಯಾಚ್‌ಗೆ ಡೇವಿಡ್‌ ಮಿಲ್ಲರ್‌ ಔಟಾದರು.

    ಸಾಯಿ ಸುದರ್ಶನ್‌ 37 ರನ್‌ (31 ಎಸೆತ, 3 ಬೌಂಡರಿ), ಡೇವಿಡ್‌ ಮಿಲ್ಲರ್‌ 21 ರನ್‌ ಗಳಿಸಿ ಔಟಾದರು. ಟೈಟಾನ್ಸ್‌ ಪರ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಆಟಗಾರರು ಆಡದ ಕಾರಣ ಸೋಲೊಪ್ಪಿಕೊಂಡಿತು. ದೀಪಕ್‌ ಚಹರ್‌ 4 ಓವರ್‌ ಎಸೆದು 28 ರನ್‌ ನೀಡಿ 2 ವಿಕೆಟ್‌ ಕಿತ್ತರೆ, ತುಷಾರ್‌ ದೇಶಾಪಂಡೆ 4 ಓವರ್‌ ಎಸೆದು 21 ರನ್‌ ನೀಡಿ 2 ವಿಕೆಟ್‌ ಕಿತ್ತರು. ಮುಸ್ತಫಿಜುರ್ ರೆಹಮಾನ್ 30 ರನ್‌ ನೀಡಿ 2 ವಿಕೆಟ್‌ ಪಡೆದರು.

    ಸ್ಪೋಟಕ ಆರಂಭ: ಚೆನ್ನೈ ಆರಂಭಿಕ ಆಟಗಾರರಾದ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಮತ್ತು ರಚಿನ್‌ ರವೀಂದ್ರ (Rachin Ravindra) ಸ್ಫೋಟಕ ಆರಂಭ ನೀಡಿದರು. ಇಬ್ಬರು ಮೊದಲ ವಿಕೆಟಿಗೆ 32 ಎಸೆತಗಳಲ್ಲಿ 62 ರನ್‌ ಜೊತೆಯಾಟ ನೀಡಿದರು. ರಚಿನ್‌ ರವೀಂದ್ರ 46 ರನ್‌ (20 ಎಸೆತ, 6 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರೆ ಗಾಯಕ್ವಾಡ್‌ 46 ರನ್‌ (36 ಎಸೆತ, 5 ಬೌಂಡರಿ, 1 ಸಿಕ್ಸರ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಇದನ್ನೂ ಓದಿ: ಆರ್‌ಸಿಬಿ ಪಂದ್ಯ ಗೆದ್ದ ಖುಷಿಯಲ್ಲಿ ಫ್ಯಾಮಿಲಿಗೆ ವೀಡಿಯೋ ಕರೆ ಮಾಡಿ ಕೊಹ್ಲಿ ಮಾತು

    ಅಜಿಂಕ್ಯಾ ರಹಾನೆ 12 ರನ್‌ ಗಳಿಸಿ ಔಟಾದರು. ನಂತರ ಬಂದ ಶಿವಂ ದುಬೆ (Shivam Dube) ಸಿಕ್ಸರ್‌ಗಳ ಮಳೆಯನ್ನೇ ಸುರಿಸಿದರು. 23 ಎಸೆತಗಳಲ್ಲಿ 5 ಸಿಕ್ಸ್‌, 2 ಬೌಂಡರಿಯೊಂದಿಗೆ 51 ರನ್‌ ಚಚ್ಚಿ ಔಟಾದರು.

    ಕೊನೆಯಲ್ಲಿ ಡೆರೆಲ್‌ ಮಿಚೆಲ್‌ ಔಟಾಗದೇ 24 ರನ್‌ ಮತ್ತು ಸಮೀರ್‌ ರಿಜ್ವಿ 14 ರನ್‌ ಹೊಡೆದರು. 6 ಮಂದಿ ಬೌಲರ್‌ಗಳು ಬೌಲ್‌ ಮಾಡಿದರೂ ಚೆನ್ನೈ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.

  • ಕೊಹ್ಲಿ, ಕಾರ್ತಿಕ್‌, ಮಹಿಪಾಲ್‌ ಸ್ಫೋಟಕ ಆಟ – ಆರ್‌ಸಿಬಿಗೆ 4 ವಿಕೆಟ್‌ಗಳ ರೋಚಕ ಜಯ

    ಕೊಹ್ಲಿ, ಕಾರ್ತಿಕ್‌, ಮಹಿಪಾಲ್‌ ಸ್ಫೋಟಕ ಆಟ – ಆರ್‌ಸಿಬಿಗೆ 4 ವಿಕೆಟ್‌ಗಳ ರೋಚಕ ಜಯ

    ಬೆಂಗಳೂರು: ವಿರಾಟ್‌ ಕೊಹ್ಲಿ (Virat kohli) ಸ್ಫೋಟಕ ಅರ್ಧಶತಕ ಮತ್ತು ಕೊನೆಯಲ್ಲಿ ಕಾರ್ತಿಕ್‌ (Dinesh Karthik), ಮಹಿಪಾಲ್‌ (Mahipal Lomror) ಅವರ ಸಿಕ್ಸರ್‌ ಬೌಂಡರಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಗೆಲ್ಲಲು 177 ರನ್‌ಗಳ ಕಠಿಣ ಗುರಿಯನ್ನು ಪಡೆದ ಆರ್‌ಸಿಬಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 178 ರನ್‌ ಹೊಡೆದು ಮೊದಲ ಜಯ ದಾಖಲಿಸಿತು.

    ಕೊನೆಯ 30 ಎಸೆತಗಳಲ್ಲಿ 59 ರನ್‌ ಬೇಕಿತ್ತು. 16ನೇ ಓವರ್‌ನಲ್ಲಿ 12 ರನ್‌ ಬಂದರೂ ಕೊಹ್ಲಿ 77 ರನ್‌(49 ಎಸೆತ, 11 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದ ಕಾರಣ ಪಂದ್ಯ ರೋಚಕ ತಿರುವು ಪಡೆದುಕೊಂಡಿತ್ತು. 16.2 ನೇ ಓವರ್‌ನಲ್ಲಿ ಅನುಜ್‌ ರಾವತ್‌ ಎಲ್‌ಬಿ ಔಟಾಗಿದ್ದರಿಂದ ಪಂದ್ಯ ಪಂಜಾಬ್‌ ಕಡೆಗೆ ವಾಲಿತ್ತು. ಇದನ್ನೂ ಓದಿ: ಭಾರತದಲ್ಲೇ ಐಪಿಎಲ್‌ – ಪೂರ್ಣ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಮ್ಯಾಚ್‌?

    ಈ ವೇಳೆ ಜೊತೆಯಾದ ಕಾರ್ತಿಕ್‌ ಮತ್ತು ಇಂಪ್ಯಾಕ್ಟ್‌ ಪ್ಲೇಯರ್‌ ಮಹಿಪಾಲ್‌ ಮುರಿಯದ 7ನೇ ವಿಕೆಟಿಗೆ ಕೇವಲ 18 ಎಸೆತಗಳಲ್ಲಿ 48 ರನ್‌ ಜೊತೆಯಾಟವಾಡಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟರು.  ವಿಕೆಟ್‌ ಪತನವಾಗುತ್ತಿದ್ದರೂ ಕ್ರೀಸ್‌ನಲ್ಲಿ ನಿಂತು ಸ್ಫೋಟಕ ಅರ್ಧಶತಕ ಸಿಡಿಸಿದ ಕೊಹ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾರದರು.

    17ನೇ ಓವರ್‌ನಲ್ಲಿ 11 ರನ್‌ ಬಂದರೆ 18ನೇ ಓವರ್‌ನಲ್ಲಿ 13 ರನ್‌ ಬಂತು. 19ನೇ ಓವರ್‌ನಲ್ಲಿ ಕಾರ್ತಿಕ್‌ ಬೌಂಡರಿ, ಸಿಕ್ಸ್‌ ಸಿಡಿಸಿದ ಪರಿಣಾಮ 13 ರನ್‌ ಬಂತು. ಕೊನೆಯ 6 ಎಸೆತದಲ್ಲಿ 10 ರನ್‌ ಬೇಕಿತ್ತು. ಅರ್ಶ್‌ದೀಪ್‌ ಸಿಂಗ್‌ ಎಸೆದ ಮೊದಲ ಎಸೆತವನ್ನು ಕಾರ್ತಿಕ್‌ ಸಿಕ್ಸರ್‌ಗೆ ಅಟ್ಟಿದರು. ಎರಡನೇ ಎಸೆತದಲ್ಲಿ ಬೌಂಡರಿಗೆ ಸಿಡಿಸಿ ತವರು ನೆಲದಲ್ಲಿ ಆರ್‌ಸಿಬಿಗೆ ಜಯ ತಂದುಕೊಟ್ಟರು.

    ಕಾರ್ತಿಕ್‌ ಔಟಾಗದೇ 28 ರನ್‌(10 ಎಸೆತ, 3 ಬೌಂಡರಿ, 2 ಸಿಕ್ಸರ್‌), ಮಹಿಪಾಲ್‌ ಔಟಾಗದೇ 17 ರನ್‌ (8 ಎಸೆತ, 2 ಬೌಂಡರಿ, 1 ಸಿಕ್ಸರ್‌) ರನ್‌ ಹೊಡೆದರು.

    ಆರ್‌ಸಿಬಿ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತು. ನಾಯಕ ಡುಪ್ಲೆಸಿಸ್‌ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬೆನ್ನಲ್ಲೇ ಕ್ಯಾಮರೂನ್‌ ಗ್ರೀನ್‌ 3 ರನ್‌ ಗಳಿಸಿ ಔಟಾದರು. ನಂತರ ಬಂದ ರಜತ್‌ ಪಾಟಿದರ್‌ 18 ರನ್‌ ( 18 ಎಸೆತ, 1 ಬೌಂಡರಿ) ಹೊಡೆದು ಬೌಲ್ಡ್‌ ಆದರು. ಬೆನ್ನಲ್ಲೇ ಮ್ಯಕ್ಸ್‌ವೆಲ್‌ 3 ರನ್‌ ಗಳಿಸಿ ಹರ್‌ಪ್ರೀತ್‌ ಬ್ರಾರ್‌ಗೆ ಬೌಲ್ಡ್‌ ಆದರು.

    ಟಾಸ್‌ ಸೋತು ಮೊದಲ ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ಗೆ ನಾಯಕ ಶಿಖರ್‌ ಧವನ್‌ ಬಲ ತುಂಬಿ 45 ರನ್‌ (37 ಎಸೆತ, 4 ಬೌಂಡರಿ) ಹೊಡೆದು ಔಟಾದರು. ನಂತರ ಪ್ರಭಾಸಿಮ್ರಾನ್ ಸಿಂಗ್ 25 ರನ್‌, ಲಿವಿಂಗ್‌ ಸ್ಟೋನ್‌ 17 ರನ್‌, ಸ್ಯಾಮ್‌ ಕರ್ರನ್‌ 23 ರನ್‌ ರನ್‌ ಹೊಡೆದರು. ಕೊನೆಯಲ್ಲಿ ಶಶಾಂಕ್‌ ಸಿಂಗ್‌ 21 ರನ್‌ ( 8 ಎಸೆತ, 1 ಬೌಂಡರಿ, 2 ಸಿಕ್ಸರ್‌) ಜಿತೇಶ್‌ ಶರ್ಮಾ 27 ರನ್‌ (20 ಎಸೆತ, 1 ಬೌಂಡರಿ, 2 ಸಿಕ್ಸರ್‌) ಹೊಡೆದರು. ಅಂತಿಮವಾಗಿ ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿತು.

    ಸಿರಾಜ್‌ 2 ಮತ್ತು ಮ್ಯಾಕ್ಸ್‌ವೆಲ್‌ ತಲಾ ಎರಡು ವಿಕೆಟ್‌ ಪಡೆದರೆ ಯಶ್‌ ದಯಾಳ್‌, ಅಲ್ಜಾರಿ ಜೋಸೆಫ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಭಾರತದಲ್ಲೇ ಐಪಿಎಲ್‌ – ಪೂರ್ಣ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಮ್ಯಾಚ್‌?

    ಭಾರತದಲ್ಲೇ ಐಪಿಎಲ್‌ – ಪೂರ್ಣ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಮ್ಯಾಚ್‌?

    ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಈ ಬಾರಿ ಭಾರತದಲ್ಲಿ ನಡೆಯಲಿದ್ದು ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಪ್ರಕಟಿಸಿದೆ.

    ಲೋಕಸಭಾ ಚುನಾವಣೆ (Lok Sabha Election) ನಡೆಯಲಿರುವ ಕಾರಣ ಈ ಹಿಂದೆ ಬಿಸಿಸಿಐ ಏಪ್ರಿಲ್‌ 7ರವರೆಗಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈಗ ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಐಪಿಎಲ್‌ ಅಂಗಳದಲ್ಲಿ ಕ್ಯಾಪ್ಟನ್ಸಿ ಕಿಚ್ಚು – ಕರ್ಮ ಸುಮ್ಮನೆ ಬಿಡಲ್ಲ; ಪಾಂಡ್ಯ ವಿರುದ್ಧ ಫ್ಯಾನ್ಸ್‌ ಫುಲ್‌ ಗರಂ

    ಕ್ವಾಲಿಫೈಯರ್‌, ಎಲಿಮಿನೇಟರ್‌, ಫೈನಲ್‌ ಸೇರಿ ಒಟ್ಟು 74 ಪಂದ್ಯಗಳು ನಡೆಯಲಿದೆ. ಮೇ 21, 22 ರಂದು ಗುಜರಾತಿನ ಅಹಮದಾಬಾದ್‌ನಲ್ಲಿ ಕ್ವಾಲಿಫೈಯರ್‌ 1 ಮತ್ತು ಎಲಿಮಿನೇಟರ್‌ ಪಂದ್ಯ ನಡೆಯಲಿದ್ದರೆ ಚೆನ್ನೈನಲ್ಲಿ ಮೇ 24 ರಂದು ಕ್ವಾಲಿಫೈಯರ್‌ 2 ನಡೆದರೆ ಮೇ 26 ರಂದು ಫೈನಲ್‌ ಪಂದ್ಯ ನಡೆಯಲಿದೆ. ಕೆಲ ಶನಿವಾರ ಮತ್ತು ಭಾನುವಾರ ಎರಡು ಪಂದ್ಯಗಳು ನಡೆಯಲಿದೆ. ಇದನ್ನೂ ಓದಿ: ನೀತಿ ಆಯೋಗದ ಮಾಜಿ ಉದ್ಯೋಗಿ ಲಂಡನ್‌ನಲ್ಲಿ ಅಪಘಾತಕ್ಕೆ ಬಲಿ

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭದ್ರತಾ ಕಾರಣದಿಂದಾಗಿ ಈ ಬಾರಿ ಐಪಿಎಲ್‌ ಟೂರ್ನಿ ವಿದೇಶದಲ್ಲಿ ನಡೆಯಲಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಈ ವರದಿಯನ್ನು ತಳ್ಳಿ ಹಾಕಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್‌ಶಾ (Jay Shah) ಐಪಿಎಲ್‌ ಟೂರ್ನಿ ಸಂಪೂರ್ಣವಾಗಿ ಭಾರತದಲ್ಲೇ (India) ನಡೆಯಲಿದೆ ಎಂದು ಸ್ಪಷ್ಟನೆ ನೀಡಿದ್ದರು.

     

  • ಐಪಿಎಲ್ ಮ್ಯಾಚ್ ಪ್ರೇಕ್ಷಕರಿಗಾಗಿ ನಮ್ಮ ಮೆಟ್ರೋ ಅವಧಿ ವಿಸ್ತರಣೆ

    ಐಪಿಎಲ್ ಮ್ಯಾಚ್ ಪ್ರೇಕ್ಷಕರಿಗಾಗಿ ನಮ್ಮ ಮೆಟ್ರೋ ಅವಧಿ ವಿಸ್ತರಣೆ

    – ಬಿಡದಿ ಮ್ಯಾರಥಾನ್‍ಗಾಗಿ ಬೆಳಗ್ಗೆ 4 ಗಂಟೆಗೆ ಸಂಚರಿಸಲಿರೋ ಮೆಟ್ರೋ

    ಬೆಂಗಳೂರು: ಮಾ.24, 29 ಮತ್ತು ಏ.2 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ (IPL 2024) ಮ್ಯಾಚ್ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗಾಗಿ ಬಿಎಂಆರ್‌ಸಿಎಲ್ (BMRCL) ಮೆಟ್ರೋ‌ (NammaMetro) ಅವಧಿ ವಿಸ್ತರಣೆ ಮಾಡಿದೆ. ಎಲ್ಲಾ ಮೆಟ್ರೋ ನಿಲ್ದಾಣಗಳಿಂದ ತನ್ನ ಕೊನೆಯ ರೈಲು ಸೇವೆಗಳನ್ನು ರಾತ್ರಿ 11:30 ಕ್ಕೆ ವಿಸ್ತರಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

    ಮೂರು ಪಂದ್ಯಗಳ ದಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‍ಗಳು 50 ರೂ.ಗೆ ಖರೀದಿಸಬಹುದು. ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು, ರಾತ್ರಿ 8 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ. ಬದಲಾಗಿ ಎಂದಿನಂತೆ, ಕ್ಯೂಆರ್ ಕೋಡ್ ಟಿಕೆಟ್‍ಗಳು, ಸ್ಮಾರ್ಟ್ ಕಾರ್ಡ್‌ಗಳನ್ನು ಮತ್ತು ಎನ್‍ಸಿಎಂಸಿ ಕಾರ್ಡ್‍ಗಳನ್ನು ಸಹ ಬಳಸಬಹುದು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ- ಎನ್‍ಐಎಗೆ ಸಿಕ್ಕಿತು ಚೆನ್ನೈ ಲಿಂಕ್

    ವಾಟ್ಸಪ್, ನಮ್ಮ ಮೆಟ್ರೋ ಆಪ್, ಪೇ ಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಕ್ಯೂಆರ್ ಟಿಕೆಟ್‍ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು, ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ಸೌಲಭ್ಯ ಮಾಡಿಕೊಡಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

    ಭಾನುವಾರ ನಡೆಯಲಿರುವ ಬಿಡದಿ ಮ್ಯಾರಥಾನ್‍ಗಾಗಿ ಮುಂಚಿತವಾಗಿ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ. ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಿಡದಿ ಹಾಫ್ ಮ್ಯಾರಥಾನ್‍ನಲ್ಲಿ ಭಾಗವಹಿಸುವ ಪ್ರಯಾಣಿಕರ ಅನುಕೂಲಕ್ಕಾಗಿ, ಬೆಳಗ್ಗೆ 7 ಗಂಟೆಯ ಬದಲಾಗಿ 4 ಗಂಟೆಯಿಂದ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ಇದನ್ನೂ ಓದಿ: ಆರ್.ಸಿ.ಬಿಗಾಗಿ ಹಾಡು ಬರೆದ ಯೋಗರಾಜ್ ಭಟ್, ಹಾಡಿದ ಧ್ರುವ ಸರ್ಜಾ