Tag: IPL

  • `ಸೂಪರ್ ಮ್ಯಾನ್’ ಧೋನಿ – 28 ಮೀಟರ್ ಕ್ರಮಿಸಲು ತೆಗೆದುಕೊಂಡಿದ್ದು 6.12 ಸೆಕೆಂಡ್!

    `ಸೂಪರ್ ಮ್ಯಾನ್’ ಧೋನಿ – 28 ಮೀಟರ್ ಕ್ರಮಿಸಲು ತೆಗೆದುಕೊಂಡಿದ್ದು 6.12 ಸೆಕೆಂಡ್!

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಸೂಪರ್ ಮ್ಯಾನ್ ರೀತಿ ಓಡಿ ಬೌಂಡರಿ ಬಳಿ ಬಾಲನ್ನು  ತಡೆದಿದ್ದಾರೆ.

    36 ವರ್ಷದ ಎಂಎಸ್ ಧೋನಿ ವಿಕೆಟ್ ಗಳ ಮಧ್ಯೆ ವೇಗವಾಗಿ ಓಡಿ ರನ್ ಕದಿಯುವ ವಿಷಯ ಎಲ್ಲರಿಗೂ ತಿಳಿದ ಸಂಗತಿ. ಆದರೆ ಕೆಲ ದಿನಗಳ ಹಿಂದೆ ಧೋನಿ ಕಳಪೆ ಆಟ ಪ್ರದರ್ಶಿಸಿದ ವೇಳೆ ಅವರ ವಯಸ್ಸನ್ನು ಪ್ರಶ್ನಿಸಿ ಹಲವರು ನಿವೃತ್ತಿ ಘೋಷಿಸುವಂತೆ ಸಲಹೆ ನೀಡಿದ್ದರು. ಆದರೆ ಈ ಪಂದ್ಯದಲ್ಲಿ ವಯಸ್ಸಿನ ವಿಚಾರವನ್ನು ಪ್ರಸ್ತಾಪಿಸಿ ಟೀಕಿಸಿದವರಿಗೆ ತಿರುಗೇಟು ಎನ್ನುವಂತೆ ತನ್ನ ಆಟ ಏನು ಎನ್ನುವಂತೆ ಧೋನಿ ತೋರಿಸಿಕೊಟ್ಟಿದ್ದಾರೆ.

    ಚಿನ್ನಸ್ವಾಮಿಯಲ್ಲಿ ಅವರು ನೀಡಿದ ಪ್ರದರ್ಶನ ವೀಕ್ಷಿಸಿದ ಹಲವರು ಮತ್ತೆ ಧೋನಿ ತಮ್ಮ ನೈಜ ಆಟಕ್ಕೆ ಮರಳಿದ್ದಾರೆ ಎಂದು ಪ್ರಶಂಸಿದ್ದಾರೆ. ಆರ್ ಸಿಬಿ ಬ್ಯಾಟಿಂಗ್ 3ನೇ ಓವರ್ ವೇಳೆ ಡಿ ಕಾಕ್ ಅವರ ಬ್ಯಾಟ್ ನ ಟಾಪ್ ಎಡ್ಜ್ ಗೆ ತಾಗಿದ ಚೆಂಡು ಧೋನಿ ಅವರ ಕೈ ತಪ್ಪಿ ಬೌಂಡರಿ ಕಡೆ ಸಾಗಿತ್ತು. ಈ ವೇಳೆ ಪ್ಯಾಡ್ ಧರಿಸಿಯೇ ಚೆಂಡನ್ನು ಬೆನ್ನತ್ತಿ 6.12 ಸೆಕೆಂಡ್‍ನಲ್ಲಿ 28 ಮೀಟರ್ ದೂರವನ್ನು ಕ್ರಮಿಸಿ ಬೌಂಡರಿ ತಡೆದು ತಂಡಕ್ಕೆ 2 ರನ್ ಉಳಿಸಿದ್ದರು.

    5 ಸಾವಿರ ರನ್ ದಾಖಲೆ: ರಾಯಲ್ ಚಾಲೆಂಜರ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಧೋನಿ ಕೇವಲ 30 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್ ನೆರವಿನಿಂದ ಅಜೇಯ 70 ರನ್ ಸಿಡಿಸಿದರು. ಈ ಮೂಲಕ ಟ್ವೆಂಟಿ 20 ಮಾದರಿಯಲ್ಲಿ 5 ಸಾವಿರ ರನ್ ಗಳಿಸಿದ ಮೊದಲ ನಾಯಕ ಎನ್ನುವ ದಾಖಲೆಯನ್ನು ಬರೆದರು.

  • ಧೋನಿ, ಕೊಹ್ಲಿ ಅಪ್ಪುಗೆಯ ಫೋಟೋಗೆ ನೆಟ್ಟಿಗರು ಫುಲ್‍ಖುಷ್!

    ಧೋನಿ, ಕೊಹ್ಲಿ ಅಪ್ಪುಗೆಯ ಫೋಟೋಗೆ ನೆಟ್ಟಿಗರು ಫುಲ್‍ಖುಷ್!

    ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಬೆಂಗಳೂರು ಎರಡು ತಂಡಗಳ ನಾಯಕರಾಗಿರುವ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿಯ ಅಪ್ಪುಗೆಯ ಫೋಟೋ ಗೆ ಸಾಮಾಜಿಕ ಜಾಲತಾಣದಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ತಿಳಿಸಿ ಮರುಟ್ವೀಟ್ ಮಾಡುತ್ತಿದ್ದಾರೆ.

    ಚಿನ್ನಸ್ವಾಮಿಯಲ್ಲಿ ನಡೆದ ಬುಧವಾರ ನಡೆದ ಪಂದ್ಯದಲ್ಲಿ ಎರಡು ತಂಡಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಿದ್ದವು. ಐಪಿಎಲ್ ಆವೃತ್ತಿಯಲ್ಲಿ ಹೈವೋಲ್ಟೇಜ್ ಪಂದ್ಯವೆಂದು ಕರೆಯಲಾಗಿದ್ದ ಈ ಪಂದ್ಯದಲ್ಲಿ ಚೆನ್ನೈ ರೋಚಕ ಗೆಲವು ಪಡೆಯಿತು. ಈ ಪಂದ್ಯಕ್ಕೂ ಮುನ್ನ ಪ್ರಾಕ್ಟಿಸ್ ವೇಳೆ ಕೊಹ್ಲಿ ಮತ್ತು ಧೋನಿ ಅಪ್ಪಿಕೊಂಡಿರುವ ಫೋಟೋ ಈಗ ಎಲ್ಲರ ಗಮನ ಸೆಳೆದಿದೆ.

    ಪಂದ್ಯದ ಬಳಿಕ ಮಾತನಾಡಿದ್ದ ಕೊಹ್ಲಿ, ಧೋನಿ ಅವರು ಸಿಕ್ಸರ್ ಸಿಡಿಸುವುದು ನೋಡುವುದು ಇಷ್ಟ. ಆದರೆ ಅದು ನಮ್ಮ ತಂಡದ ವಿರುದ್ಧ ಅಲ್ಲ. ಟೂರ್ನಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದನ್ನು ನೋಡಲು ಸಂತೋಷವಾಗುತ್ತದೆ. ಧೋನಿ ಅವರು ಬ್ಯಾಟಿಂಗ್ ಮಾಡುವುದನ್ನು ನಾನು ಆನಂದಿಸುತ್ತೇನೆ ಎಂದು ಹೇಳಿದ್ದಾರೆ. ಧೋನಿ ಹಾಗೂ ಕೊಹ್ಲಿ ಅಪ್ಪುಗೆಗೆ ಸಂಬಂಧಿಸಿದ ಕೆಲ ಟ್ವೀಟ್ ಗಳನ್ನು ಇಲ್ಲಿ ನೀಡಲಾಗಿದೆ.

    https://twitter.com/dhonikohli_fc/status/989137556682956800?

    https://twitter.com/simhadriii/status/989221821965783040?

  • ಚೆನ್ನೈ ವಿರುದ್ಧ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್: ಕೊಹ್ಲಿಗೆ ಭಾರೀ ದಂಡ

    ಚೆನ್ನೈ ವಿರುದ್ಧ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್: ಕೊಹ್ಲಿಗೆ ಭಾರೀ ದಂಡ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ನಿಧಾನಗತಿ ಬೌಲಿಂಗ್ ಮಾಡಿದಕ್ಕೆ ನಾಯಕ ವಿರಾಟ್ ಕೊಹ್ಲಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ.

    ನಿಗದಿತ ಅವಧಿಯಲ್ಲಿ ಬೌಲಿಂಗ್ ಪೂರ್ಣಗೊಳಿಸದ ಕಾರಣ ಪಂದ್ಯದ ರೆಫರಿ ನಾಯಕ ಕೊಹ್ಲಿಗೆ 12 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ. ಈ ಮೂಲಕ 2018ರ ಐಪಿಎಲ್ ಆವೃತ್ತಿಯಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಮೊದಲ ತಂಡ ಎಂಬ ಕುಖ್ಯಾತಿಯನ್ನು ಆರ್‌ಸಿಬಿ ಪಡೆದುಕೊಂಡಿದೆ.

    ಚೆನ್ನೈ ಹಾಗೂ ಆರ್‌ಸಿಬಿ ನಡುವೆ ನಡೆದ ಹೈವೋಲ್ಟೇಜ್ ಪಂದ್ಯ ಕಾರಣ ಕ್ರೀಡಾಂಗಣದ ತುಂಬಾ ಅಭಿಮಾನಿಗಳು ತುಂಬಿದ್ದರು. ಅಭಿಮಾನಿಗಳ ನಿರೀಕ್ಷೆಯಂತೆ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ ತಂಡ 205 ರನ್‍ಗಳ ಸವಾಲಿನ ಮೊತ್ತವನ್ನು ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಪರ ರಾಯುಡು ಹಾಗೂ ನಾಯಕ ಎಂಎಸ್ ಧೋನಿ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಧೋನಿ ಕೇವಲ 30 ಎಸೆತಗಳಲ್ಲಿ ಅಜೇಯ 70 ರನ್ (3ಬೌಂಡರಿ, 8 ಸಿಕ್ಸರ್) ಸಿಡಿಸಿದರೆ, ಇದಕ್ಕೂ ಮುನ್ನ ಅಂಬಟಿ ರಾಯುಡು 82 (53 ಎಸೆತ 3 ಬೌಂಡರಿ, 8 ಸಿಕ್ಸರ್) ರನ್ ಸಿಡಿಸಿದ್ದರು.

    ಚೆನ್ನೈ ತಂಡದ ಬ್ಯಾಟಿಂಗ್ ಕಟ್ಟಿ ಹಾಕಲು ಯತ್ನಿಸಿದ ಕೊಹ್ಲಿ ಹಲವು ಬಾರಿ ಬೌಲಿಂಗ್ ನಲ್ಲಿ ಬದಲಾವಣೆಯನ್ನು ತಂದರು. ಅದರು ಆರ್‌ಸಿಬಿ ಬೌಲರ್ ಗಳನ್ನು ಸಮರ್ಥವಾಗಿ ದಂಡಿಸಿದ ಚೆನ್ನೈ ಆಟಗಾರರು ಗೆಲುವಿನ ಸಿಹಿ ಪಡೆದರು.

  • ಅಂಬಟಿ ರಾಯುಡು ಜೊತೆ ಕ್ಷಮೆ ಕೇಳಿದ ಸುರೇಶ್ ರೈನಾ – ವಿಡಿಯೋ ನೋಡಿ

    ಅಂಬಟಿ ರಾಯುಡು ಜೊತೆ ಕ್ಷಮೆ ಕೇಳಿದ ಸುರೇಶ್ ರೈನಾ – ವಿಡಿಯೋ ನೋಡಿ

    ಹೈದರಾಬಾದ್ : ಸನ್ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಅಂಬಟಿ ರಾಯುಡು ಔಟ್ ಆಗಲು ಕಾರಣರಾದ ಸುರೇಶ್ ರೈನಾ ಆನ್ ಫೀಲ್ಡ್ ನಲ್ಲೇ ಕ್ಷಮೆ ಕೋರಿದ್ದಾರೆ.

    ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಇಬ್ಬರು ಉತ್ತಮ ಬ್ಯಾಟಿಂಗ್ ನಡೆಸಿ ಅರ್ಧ ಶತಕಗಳನ್ನು ಪೂರೈಸಿದ್ದರು. ಆದರೆ 17 ನೇ ಓವರ್ 4 ಎಸೆತದಲ್ಲಿ ಆನ್ ಫೀಲ್ಡ್ ನಿಂದ ರನ್ ಕದಿಯಲು ಯತ್ನಿಸಿದ ರೈನಾ, ರಾಯುಡು ರನೌಟ್ ಆಗಲು ಕಾರಣರಾದರು. ಈ ವೇಳೆ ಅರ್ಧ ಶತಕ ಪೂರೈಸಿ ಉತ್ತಮ ಲಯ ಕಂಡುಕೊಂಡಿದ್ದ ರಾಯುಡು ತೀವ್ರ ಅಸಮಾಧಾನಗೊಂಡರು. ಆದರೆ ಮರುಕ್ಷಣದಲ್ಲೇ ರೈನಾ ಕಡೆ ನೋಡಿ ನಗು ಚೆಲ್ಲಿ ಪೆವಿಲಿಯನ್ ನತ್ತ ನಡೆದರು. ಈ ವೇಳೆ ರೈನಾ, ರಾಯುಡು ಬಳಿ ಬಂದು ಕ್ಷಮೆ ಕೇಳಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರ ಆನ್ ಫೀಲ್ಡ್ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    https://twitter.com/iconicdeepak/status/988038632501104641

    ಈ ಪಂದ್ಯದಲ್ಲಿ ರಾಯುಡು ಕೇವಲ 37 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ನೆರವನಿಂದ 79 ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಉಳಿದಂತೆ ರೈನಾ 43 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 54 ರನ್ ಸಿಡಿಸಿ ಔಟಾಗದೆ ಉಳಿದರು. ಸಿಎಸ್‍ಕೆ ತಂಡ ಈ ಪಂದ್ಯದ ಮೊದಲ 10 ಓವರ್ ಗಳಲ್ಲಿ 54 ರನ್ ಗಳಿಸಿದ್ದರೆ, ಕೊನೆಯ 10 ಓವರ್ ಗಳಲ್ಲಿ 128 ರನ್ ಗಳಿಸಿದ್ದು ವಿಶೇಷವಾಗಿತ್ತು.

  • ನಿವೃತ್ತಿ ಬಗ್ಗೆ ಸುಳಿವು ನೀಡಿದ್ರು ಯುವರಾಜ್ ಸಿಂಗ್!

    ನಿವೃತ್ತಿ ಬಗ್ಗೆ ಸುಳಿವು ನೀಡಿದ್ರು ಯುವರಾಜ್ ಸಿಂಗ್!

    ನವದೆಹಲಿ: ಮುಂಬರುವ 2019 ರ ಐಸಿಸಿ ವಿಶ್ವಕಪ್ ಬಳಿಕ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ 2011 ವಿಶ್ವ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.

    ಖಾಸಗಿ ಮಾಧ್ಯಮವೊಂದಕ್ಕೆ ಈ ಕುರಿತು ಪ್ರತಿಕ್ರಿಯಿಸಿದ 36 ವರ್ಷದ ಯುವರಾಜ್ ಸಿಂಗ್, ಸದ್ಯ 2019 ವಿಶ್ವಕಪ್ ವೇಳೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಕಡೆ ಗಮನ ಹರಿಸಿದ್ದು, ಬಳಿಕ ನಿವೃತ್ತಿಯ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಕಳೆದ ಎರಡು ದಶಕಗಳಿಂದ ತಾನು ಭಾರತದ ತಂಡದ ಪರ ಆಡುತ್ತಿದ್ದೇನೆ. ಆದರೆ ಮುಂದೊಂದು ದಿನ ನನ್ನ ನಿವೃತ್ತಿಯ ಜೀವನ ಎದುರಾಗುತ್ತದೆ ಎಂದರು. 2011 ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಟೂರ್ನಿಯಲ್ಲಿ 90.50 ಸರಾಸರಿಯಲ್ಲಿ 362 ರನ್ ಹಾಗೂ 15 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು.

    ಸದ್ಯ ನಡೆಯುತ್ತಿರುವ 2018 ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕುರಿತು ಮಾತನಾಡಿ ಯುವರಾಜ್ ಸಿಂಗ್ ನಮ್ಮ ತಂಡವು ಗೇಲ್, ಕೆಎಲ್ ರಾಹುಲ್ ಸೇರಿದಂತೆ ಹಲವು ಉತ್ತಮ ಆಟಗಾರರೊಂದಿಗೆ ಬಲಿಷ್ಠವಾಗಿದ್ದು, ಫೈನಲ್ ತಲುಪುವ ವಿಶ್ವಾಸವಿದೆ. ಚೆನ್ನೈ ಹಾಗೂ ಕೊಲ್ಕತ್ತಾ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಹೆಚ್ಚು ಪೈಪೋಟಿ ನೀಡುತ್ತಿದೆ ಎಂದು ಹೇಳಿದರು.

    2000 ರಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇದುವರೆಗೂ 304 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದಾರೆ. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ  ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.

    ಕ್ರಿಕೆಟ್ ವೃತ್ತಿ ಜೀವನದ ಆರಂಭ 6, 7 ವರ್ಷಗಳ ಕಾಲ ಉತ್ತಮವಾಗಿ ಆಡಿದ್ದೇನೆ. ನಂತರ ಅವಧಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು. ಆದರೆ ಕ್ಯಾನ್ಸರ್ ನಿಂದ ಗುಣಮುಖನಾದೆ. ಬಳಿಕ ತಂಡದಲ್ಲಿ ನನಗೆ ನಿರಂತರವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು ಎಂದು ಈ ಹಿಂದೆ ಯುವಿ ತಿಳಿಸಿದ್ದರು.

    2011ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ತಂಡದಲ್ಲಿ ನಿರಂತರವಾಗಿ ಆಡಿದ್ದ ಯುವಿ ಆನಂತರ ಕ್ಯಾನ್ಸರ್ ನಿಂದ ಬಳಲಿದ್ದರು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದ ಅವರು ಬಳಿಕ ಫಾರ್ಮ್ ಸಮಸ್ಯೆಯಿಂದ ಬಳಲಿದ್ದರು.

  • ಐಪಿಎಲ್‍ನಲ್ಲಿ ಡಿಎಲ್‍ಎಸ್ ಬದಲಾಗಿ ಭಾರತೀಯ ವಿಜೆಡಿ ನಿಯಮಗಳನ್ನು ಬಳಸಿ: ದಿನೇಶ್ ಕಾರ್ತಿಕ್

    ಐಪಿಎಲ್‍ನಲ್ಲಿ ಡಿಎಲ್‍ಎಸ್ ಬದಲಾಗಿ ಭಾರತೀಯ ವಿಜೆಡಿ ನಿಯಮಗಳನ್ನು ಬಳಸಿ: ದಿನೇಶ್ ಕಾರ್ತಿಕ್

    ಕೊಲ್ಕತ್ತಾ: ಐಪಿಎಲ್ ನಲ್ಲಿ ಡಕ್ವರ್ತ್ ಲೂಯಿಸ್ ನಿಯಮಗಳ ಬದಲಾಗಿ ಭಾರತೀಯ ಜಯದೇವನ್ ಅವರು ರೂಪಿಸಿರುವ ವಿಜೆಡಿ ನಿಯಮಗಳನ್ನು ಏಕೆ ಬಳಕೆ ಮಾಡಬಾರದು ಎಂದು ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಪ್ರಶ್ನಿಸಿದ್ದಾರೆ.

    ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಶನಿವಾರ 9 ವಿಕೆಟ್ ಅಂತರದಲ್ಲಿ ಸೋಲುಂಡ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್, ಮಳೆಯ ಬಳಿಕ ಆರಂಭವಾದ ಪಂದ್ಯದಲ್ಲಿ ಎದುರಾಳಿ ತಂಡ ಎಸೆತಕ್ಕೆ ಒಂದು ರನ್ ಗಳಿಸುವ ಗುರಿ ಪಡೆದಿತ್ತು. ಈ ನಿಯಮಗಳು ತನಗೆ ಅರ್ಥವಾಗಲಿಲ್ಲ. ಪ್ರಸ್ತುತ ಹಲವರು ಡಿಎಲ್‍ಎಸ್ ನಿಯಮಗಳಲ್ಲಿ ಗೊಂದಲ ಮಾಡಿಕೊಳ್ಳುತ್ತಾರೆ. ಅದ್ದರಿಂದ ವಿಜೆಡಿ ನಿಯಮಗಳನ್ನು ಬಳಕೆ ಮಾಡಕೊಳ್ಳಬಹುದು ಎಂದರು.

    ಐಪಿಎಲ್ ಟೂರ್ನಿಯನ್ನು ಐಸಿಸಿ ನಿಯಮಗಳ ಅಡಿಯಲ್ಲಿ ನಡೆಸಲಾಗುತ್ತಿದೆ. ಆದರೆ ಬಿಸಿಸಿಐ ಭಾರತೀಯ ಜಯದೇವನ್ ಅವರು ರೂಪಿಸಿರುವ ನಿಯಮಗಳನ್ನು ಬಳಕೆ ಮಾಡಬಹುದು. ಐಪಿಎಲ್ ದೇಶಿಯ ಟೂರ್ನಿ ಆಗಿರುವುದರಿಂದ ಇದು ಸಾಧ್ಯ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ನಿಯಮಗಳ ಕುರಿತು ಪ್ರಚಾರ ಮಾಡಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಮ್ಮ ತಂಡ 10 ರಿಂದ 12 ರನ್ ಹೆಚ್ಚು ಗಳಿಸುವ ಅವಕಾಶವಿತ್ತು. ಅಲ್ಲದೇ ನಮ್ಮ ತಂಡದ ಬೌಲರ್ ಗಳು ನಿರಿಕ್ಷೀತ ಪ್ರದರ್ಶನ ನೀಡಿಲ್ಲ. ಗೇಲ್ ಹಾಗೂ ರಾಹುಲ್ ಪಂಜಾಬ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು ಹೇಳಿದರು.

    ಗೆಲ್ಲಲು 192 ರನ್ ಗುರಿ ಪಡೆದ ಕಿಂಗ್ಸ್ 8.2 ಓವರ್ ಗಳಲ್ಲಿ 96 ರನ್ ಗಳಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ಈ ವೇಳೆ ಪಂಜಾಬ್ 12 ಓವರ್ ಗಳಲ್ಲಿ 103 ರನ್ ಗಳಿಸ ಬೇಕಿತ್ತು. 95 ನಿಮಿಷಗಳ ಬಳಿಕ ಪಂದ್ಯ ಆರಂಭವಾದ ಪಂದ್ಯದಲ್ಲಿ ಡಿಎಲ್‍ಎಸ್ ನಿಯಮಗಳ ಪ್ರಕಾರ ಪಂಜಾಬ್ 28 ಎಸೆಗಳಲ್ಲಿ 29 ರನ್ ಅಂದರೆ 13 ಓವರ್ ಗಳಿಗೆ 125 ರನ್ ಗುರಿ ನೀಡಲಾಗಿತ್ತು.

    ಪಂಜಾಬ್ ಪರ ಭರ್ಜರಿ ಬ್ಯಾಟಿಂಗ್ ಪ್ರದಶನ ನೀಡಿದ ಗೇಲ್ 38 ಎಸೆತಗಳಲ್ಲಿ 62 ರನ್ (5 ಬೌಂಡರಿ, 6ಸಿಕ್ಸರ್) ಹಾಗೂ ಕನ್ನಡಿಗ ಕೆಎಲ್ ರಾಹುಲ್ 27 ಎಸೆತಗಳಲ್ಲಿ 60 ರನ್ (9ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

  • ಗೇಲ್ ಶತಕದ ಅಬ್ಬರಕ್ಕೆ ಯುವಿ ಗಂಗ್ನಮ್ ಡ್ಯಾನ್ಸ್ ಸಂಭ್ರಮ – ವಿಡಿಯೋ ನೋಡಿ

    ಗೇಲ್ ಶತಕದ ಅಬ್ಬರಕ್ಕೆ ಯುವಿ ಗಂಗ್ನಮ್ ಡ್ಯಾನ್ಸ್ ಸಂಭ್ರಮ – ವಿಡಿಯೋ ನೋಡಿ

    ಮೊಹಾಲಿ: ಇಲ್ಲಿನ ಪಂಜಾಬ್ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕ್ರಿಸ್ ಗೇಲ್ ಭರ್ಜರಿ ಶತಕ ಸಿಡಿಸಿದರೆ, ಪೆವಿಲಿಯನ್ ನಲ್ಲಿ ಕುಳಿತಿದ್ದ ಯುವರಾಜ್ ಗಂಗ್ನಮ್ ಸ್ಟೈಲ್ ನಲ್ಲಿ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.

    ಪಂದ್ಯದಲ್ಲಿ 61ನೇ ಎಸೆತದಲ್ಲಿ 1 ರನ್ ಗಳಿಸುವ ಮೂಲಕ ಗೇಲ್ ಶತಕ ಪೂರೈಸಿದರು. ಈ ವೇಳೆ ಯುವಿ ಗಂಗ್ನಮ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಅಲ್ಲದೇ ಪಂಜಾಬ್ ತಂಡದ ಮಾಲೀಕರಾಗಿರುವ ನಟಿ ಪ್ರೀತಿ ಜಿಂಟಾ ಸಹ ವಿಐಪಿ ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸಿದರು. ಪಂದ್ಯದ ಬಳಿಕವೂ ಗೇಲ್ ರ ಶತಕದ ಸಂಭ್ರಮದ ಆಚರಣೆ ಮುಂದುವರೆದಿದ್ದು ಈ ಕುರಿತ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೆರೆಬಿಯನ್ ಆಟಗಾರ ಗೇಲ್ ಶತಕ ಸಿಡಿಸುವ ಮೂಲಕ ತಮ್ಮನ್ನು ಟೀಕಿಸುತ್ತಿದ್ದವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಈ ಮೂಲಕ ತಮ್ಮಲ್ಲಿ ಇನ್ನು ಬ್ಯಾಟಿಂಗ್ ನಡೆಸುವ ಶಕ್ತಿ ಇದೆ ಎಂದು ಸಾಬೀತು ಪಡಿಸಿದ್ದಾರೆ. ಕೇವಲ 63 ಎಸೆತಗಳನ್ನು ಎದುರಿಸಿದ ಗೇಲ್ ಔಟಾಗದೆ 11 ಸಿಕ್ಸರ್, 1 ಬೌಂಡರಿ ಮೂಲಕ 104 ರನ್ ಸಿಡಿಸಿದ್ದರು. ಅಲ್ಲದೇ ಟೂರ್ನಿಯ ಮೊದಲ ಶತಕ ದಾಖಲಿಸಿದ್ದರು. ಇದನ್ನೂ ಓದಿ: ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಲ್

    ಕಳೆದ ಹಲವು ಆವೃತ್ತಿಗಳಲ್ಲಿ ಆರ್ ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಗೇಲ್ ರನ್ನು ಈ ಬಾರಿ ಪಂಜಾಬ್ ಖರೀದಿಸಿತ್ತು. ಆದರೆ ಗೇಲ್ ಅವರಿಗೆ ಆರಂಭದ ಎರಡು ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ನೀಡಿರಲಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯಕ್ಕೆ ಅವಕಾಶ ಪಡೆದ ಗೇಲ್ 62 ರನ್ ಸಿಡಿಸಿ ಭರವಸೆ ಮೂಡಿಸಿದ್ದರು. ಬಳಿಕ ಗುರುವಾರ ರಾತ್ರಿ ನಡೆದ ಹೈದರಾಬಾದ್ ವಿರುದ್ಧವೂ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

     

  • ಐಪಿಎಲ್‍ನಿಂದಾಗಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ!

    ಐಪಿಎಲ್‍ನಿಂದಾಗಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ!

    ಬೆಂಗಳೂರು: ಐಪಿಎಲ್ ಬೆಟ್ಟಿಂಗ್ ಕಟ್ಟಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಚ್.ಎಸ್.ಆರ್ ಲೇಔಟ್ ಬಳಿಯಿರುವ ಹೊಟೇಲ್ ಪ್ರಶಾಂತ್ ನಲ್ಲಿ ನಡೆದಿದೆ.

    ಯೋಗೀಶ್ (30) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯೋಗೀಶ್ ರೂಪೇನ ಆಗ್ರಹಾರದ ನಿವಾಸಿಯಾಗಿದ್ದು, ಹೆಚ್.ಎಸ್.ಆರ್ ಲೇಔಟ್ ಬಳಿಯಿರುವ ಹೊಟೇಲ್ ಪ್ರಶಾಂತ್ ನಲ್ಲಿ ಒಂದು ರೂಮು ಬಾಡಿಗೆ ಪಡೆದು ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮಧ್ಯಾಹ್ನ ಸುಮಾರು 12.30ಕ್ಕೆ ನೇಣಿಗೆ ಶರಣಾಗಿದ್ದಾನೆ. ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಲಕ್ಷಾಂತರ ರೂ. ಗಳನ್ನು ಕಳೆದುಕೊಂಡು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಸದ್ಯ ಈ ಬಗ್ಗೆ ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ನಾನ್ ಸ್ಟ್ರೈಕರ್ ನಲ್ಲಿ ಉಮೇಶ್ ಯಾದವ್ ನಿಂತಿದ್ರೂ ಔಟ್: ಮೂರನೇ ಅಂಪೈರ್ ಎಡವಟ್ಟು

    ನಾನ್ ಸ್ಟ್ರೈಕರ್ ನಲ್ಲಿ ಉಮೇಶ್ ಯಾದವ್ ನಿಂತಿದ್ರೂ ಔಟ್: ಮೂರನೇ ಅಂಪೈರ್ ಎಡವಟ್ಟು

    ಮುಂಬೈ: ಆರ್‌ಸಿಬಿ ಮುಂಬೈ ನಡುವಿನ ಪಂದ್ಯದಲ್ಲಿ ಉಮೇಶ್ ಯಾದವ್ ಔಟ್ ಪರಿಶೀಲನೆ ವೇಳೆ 3ನೇ ಅಂಪೈರ್ ಪ್ರಮಾದ ಎಸಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಅವರ ನಾಟೌಟ್ ತೀರ್ಪು ವಿವಾದಕ್ಕೆ ಕಾರಣವಾದ ಬಳಿಕ ಪ್ರಸ್ತುತ ಬುಮ್ರಾ ಎಸೆತದಲ್ಲಿ ಯಾದವ್ ಔಟ್ ನೀಡಿರುವ ವೇಳೆ 3ನೇ ಅಂಪೈರ್ ಮಾಡಿರುವ ಪ್ರಮಾದ ಭಾರೀ ಚರ್ಚೆಗೆ ಕಾರಣವಾಗಿದೆ.

    ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನೆತ್ತಿದ್ದ ಆರ್‌ಸಿಬಿ 18 ಓವರ್ ಅಂತ್ಯಕ್ಕೆ 8 ವಿಕೆಟ್ ಗೆ 137 ರನ್ ಗಳಿಸಿತ್ತು. ಈ ವೇಳೆ ಸ್ಟ್ರೇಕ್ ನಲ್ಲಿದ್ದ ಉಮೇಶ್ ಯಾದವ್ ಬುಮ್ರಾ ಅವರ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಈ ವೇಳೆ ನೋಬಾಲ್ ಚೆಕ್ ಮಾಡಲು 3ನೇ ಅಂಪೈರ್ ಗೆ ಮನವಿ ಸಲ್ಲಿಸಲಾಗಿತ್ತು. ವಿಡಿಯೋ ಪರಿಶೀಲನೆ ವೇಳೆ ನಾನ್ ಸ್ಟ್ರೈಕರ್ ನಲ್ಲಿ ಉಮೇಶ್ ಯಾದವ್ ನಿಂತಿರುವುದು ಸೆರೆಯಾಗಿದ್ದರೂ ಅಂಪೈರ್ ಔಟ್ ಎಂದು ಘೋಷಿಸಿದ್ದರು.

    ಎಡವಟ್ಟು ಆಗಿದ್ದು ಎಲ್ಲಿ?
    ಅಂಪೈರ್ ಉಮೇಶ್ ಯಾದವ್ ಎಸೆತವನ್ನು ಪರಿಶೀಲನೆ ನಡೆಸುವ ಬದಲು ಕೊಹ್ಲಿ ಆಡಿದ ಎಸೆತವನ್ನು ಪರಿಶೀಲನೆ ನಡೆಸಿದ್ದರು. ಆದರೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಸದ್ಯ ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ 3 ನೇ ಅಂಪೈರ್ ಮಾಡಿದ ಪ್ರಮಾದ ಬೆಳಕಿಗೆ ಬಂದಿದೆ.

    ಇದೇ ಮೊದಲಲ್ಲ: ಪಂದ್ಯದ ಸಂದರ್ಭದಲ್ಲಿ 3ನೇ ಅಂಪೈರ್ ಈ ರೀತಿ ಪ್ರಮಾದ ಎಸಗಿರುವುದು ಇದೇ ಮೊದಲಲ್ಲ. ಈ ಹಿಂದೆ 2011 ರಲ್ಲೂ ಇಂತಹ ಘಟನೆ ನಡೆದಿತ್ತು. ವಾಂಖೆಡೆ ಕ್ರೀಡಾಂಗಣದಲ್ಲಿ ಅಮಿತ್ ಮಿಶ್ರಾ ಅವರ ಬೌಲಿಂಗ್ ನಲ್ಲಿ ಸಚಿನ್ ರನ್ನು ಔಟ್ ಎಂದು ತೀರ್ಪು ನೀಡಲಾಗಿತ್ತು. ಆದರೆ ನೋಬಾಲ್ ಪರಿಶೀಲನೆ ವೇಳೆ ಸಚಿನ್ ನಾನ್ ಸ್ಟ್ರೈಕ್ ನಲ್ಲಿದ್ದ ವಿಡಿಯೋ ಪರಿಶೀಲನೆ ನಡೆಸಿ ಔಟ್ ಎಂದು ತೀರ್ಪು ನೀಡಲಾಗಿತ್ತು. ಈ ಎಡವಟ್ಟಿಗೆ ಸ್ಪಷ್ಟನೆ ನೀಡಿದ್ದ ಐಪಿಎಲ್ ಆಡಳಿತ ಮಾನವ ಸಹಜ ತಪ್ಪಿನಿಂದಾಗಿ ತೀರ್ಪು ಪ್ರಕಟವಾಗಿದೆ. ತಾಂತ್ರಿಕ ಸಮಸ್ಯೆಯಿಂದಲೂ ನಡೆದಿರುವ ಸಾಧ್ಯತೆ ಇದೆ. ಅಂಪೈರ್ ಬಳಿಯಿದ್ದ ಕಂಪ್ಯೂಟರ್ ಪ್ಯಾಡ್ ಸಹ ಇದಕ್ಕೆ ಕಾರಣವಾಗಿರಬಹುದು ಎಂದು ತಿಳಿಸಿತ್ತು.

  • ಆರೆಂಜ್ ಕ್ಯಾಪ್ ಧರಿಸಲ್ಲ ಎಂದ್ರು ವಿರಾಟ್ ಕೊಹ್ಲಿ!

    ಆರೆಂಜ್ ಕ್ಯಾಪ್ ಧರಿಸಲ್ಲ ಎಂದ್ರು ವಿರಾಟ್ ಕೊಹ್ಲಿ!

    ಬೆಂಗಳೂರು: ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ಐಪಿಎಲ್ ನಲ್ಲಿ ಟಾಪ್ ರನ್ ಗಳಿಸಿರುವ ಆಟಗಾರರಾಗಿದ್ದು, ಆದರೆ ಆರೆಂಜ್ ಕ್ಯಾಪ್ ಧರಿಸುವುದಿಲ್ಲ ಎಂದು ಹೇಳಿದ್ದಾರೆ.

    ಮುಂಬೈ ವಿರುದ್ಧ ಪಂದ್ಯದಲ್ಲಿ ಆಕರ್ಷಕ 92 ರನ್ ಸಿಡಿಸಿದ ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್ ರನ್ನು ರನ್ ಪಟ್ಟಿಯಲ್ಲಿ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ.

    ಮುಂಬೈ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಈ ಸಂದರ್ಭದಲ್ಲಿ ತಾನು ಆರೆಂಜ್ ಕ್ಯಾಪ್ ಧರಿಸಲು ಇಷ್ಟಪಡುವುದಿಲ್ಲ. ಮುಂಬೈ ವಿರುದ್ಧದ ಪಂದ್ಯದಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲು ಯತ್ನಿಸಿತು. ಆದರೆ ಗೆಲುವು ಪಡೆಯಲು ಸಾಧ್ಯವಾಗಿಲ್ಲ. ಮುಂಬೈ ಬ್ಯಾಟಿಂಗ್ ಮೊದಲ ಪವರ್ ಪ್ಲೇ ಬಳಿಕ ಮತ್ತೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಎಂದರು.

    ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ನಮ್ಮ ತಂಡದ ಆಟಗಾರರು ಸಹ ಬ್ಯಾಟಿಂಗ್ ವೇಳೆ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲರಾಗಿ ವಿಕೆಟ್ ಕೈಚೆಲ್ಲಿದರು. ಆದರೆ ಎದುರಾಳಿ ತಂಡದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು.

    ಮುಂಬೈ ವಿರುದ್ಧ ಪಂದ್ಯದಲ್ಲಿ ಕೊಹ್ಲಿ(4,559) 32 ರನ್ ಗಳಿಸಿದ್ದ ವೇಳೆ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಈಗ ಕೊಹ್ಲಿ 4,558 ರನ್ ಗಳಿಸಿದ್ದ ರೈನಾ ರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (4345), ಗಂಭೀರ್ (4210), ವಾರ್ನರ್ (4104) ರನ್ ಗಳಿಂದ ಅನುಕ್ರಮವಾಗಿ ಮೂರು, ನಾಲ್ಕು, ಐದನೇ ಸ್ಥಾನ ಪಡೆದಿದ್ದಾರೆ.

    11 ನೇ ಆವೃತ್ತಿಯ ಟಾಪ್ ರನ್ ಗಳಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ಸಂಜು ಸ್ಯಾಮ್ಸನ್ (178 ರನ್ 3 ಪಂದ್ಯ) ರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಪಡೆದರು. ಮುಂಬೈ ವಿರುದ್ಧದ ಸೋಲಿನೊಂದಿಗೆ ಐಪಿಎಲ್ 2018 ರ ತಂಡಗಳ ಅಂಕ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ.