Tag: IPL Final 2022

  • ಆಡಿದ್ದು ಡೆಲ್ಲಿ ಪರ – ಫೈನಲ್‍ನಲ್ಲಿ ಆ ಒಂದು ಕಾರಣಕ್ಕಾಗಿ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿದ್ರು ಚೇತನ್ ಸಕಾರಿಯಾ

    ಆಡಿದ್ದು ಡೆಲ್ಲಿ ಪರ – ಫೈನಲ್‍ನಲ್ಲಿ ಆ ಒಂದು ಕಾರಣಕ್ಕಾಗಿ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿದ್ರು ಚೇತನ್ ಸಕಾರಿಯಾ

    ಅಹಮದಾಬಾದ್: ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡದ ಬೌಲರ್ ಚೇತನ್ ಸಕಾರಿಯಾ ರಾಜಸ್ಥಾನ ತಂಡದ ಜೆರ್ಸಿ ತೊಟ್ಟು ಚಿಯರ್ ಅಪ್ ಮಾಡಿದ್ದಾರೆ.

    15ನೇ ಆವೃತ್ತಿ ಐಪಿಎಲ್‍ನಲ್ಲಿ ಚೇತನ್ ಸಕಾರಿಯಾ ಡೆಲ್ಲಿ ಕಾಪಿಟಲ್ಸ್ ಪರ ಆಡಿದ್ದರು. ಡೆಲ್ಲಿ ತಂಡ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿ ಲೀಗ್ ಪಂದ್ಯದಿಂದಲೇ ಹೊರಬಿದ್ದಿತು. ಆದರೆ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಸಕಾರಿಯಾ ರಾಜಸ್ಥಾನ ತಂಡದ ಜೆರ್ಸಿ ತೊಟ್ಟು ಸ್ಟೇಡಿಯಂನಲ್ಲಿ ಹಾಜರಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ಚೇತನ್ ಸಕಾರಿಯಾ 14ನೇ ಆವೃತ್ತಿ ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ರಾಜಸ್ಥಾನ ತಂಡದ ಪರ ಉತ್ತಮ ಪ್ರದರ್ಶನ ತೋರಿ ತನ್ನ ಬೌಲಿಂಗ್ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದರು. ನಂತರ ಕೊರೊನಾದಿಂದಾಗಿ ಐಪಿಎಲ್ ಅರ್ಧದಲ್ಲಿ ಸ್ಥಗಿತಗೊಂಡು ಮನೆಗೆ ಸಕಾರಿಯಾ ಹಿಂದಿರುಗುತ್ತಿದ್ದಂತೆ ತಂದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಸಂದರ್ಭ ತನಗೆ ಐಪಿಎಲ್‍ನಲ್ಲಿ ರಾಜಸ್ಥಾನ ತಂಡ ನೀಡಿದ ಹಣದಿಂದಾಗಿ ತಂದೆಗೆ ಗುಜರಾತ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿದ್ದೆ ಎಂದು ಸಕಾರಿಯಾ ರಾಜಸ್ಥಾನ ತಂಡದ ಸಹಾಯವನ್ನು ನೆನಪಿಸಿಕೊಂಡಿದ್ದರು. ಜೊತೆಗೆ ರಾಜಸ್ಥಾನ ತಂಡಕ್ಕೆ ಯಾವತ್ತು ಚಿರಋಣಿಯಾಗಿರುವುದಾಗಿ ಹೇಳಿಕೊಂಡಿದ್ದರು. ಅದರಂತೆ ಈ ಬಾರಿಯ ಫೈನಲ್‍ನಲ್ಲಿ ಸಕಾರಿಯಾ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿ ತಮ್ಮ ಈ ಹಿಂದಿನ ಮಾತಿನಂತೆ ನಡೆದುಕೊಂಡಿದ್ದಾರೆ. ಇದನ್ನೂ ಓದಿ: IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ

    https://twitter.com/Joydip30406345/status/1530957263489290241

    ಇದೀಗ ಸಕಾರಿಯಾರ ಈ ನಡೆ ಕುರಿತಾಗಿ ಅಭಿಮಾನಿಗಳು ಹೊಗಳಿಕೆ ವ್ಯಕ್ತಪಡಿಸುತ್ತಿದ್ದು, ಸಕಾರಿಯಾ ರಾಜಸ್ಥಾನ ತಂಡಕ್ಕೆ ಇಟ್ಟಿರುವ ನಿಷ್ಠೆ ತುಂಬಾ ಅಮೂಲ್ಯವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • ಪಾಂಡ್ಯ ಪರಾಕ್ರಮ – ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಗುಜರಾತ್

    ಪಾಂಡ್ಯ ಪರಾಕ್ರಮ – ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಗುಜರಾತ್

    ಅಹಮದಾಬಾದ್: 15ನೇ ಆವೃತ್ತಿ ಐಪಿಎಲ್‍ನ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರ ಆಲ್‍ರೌಂಡರ್ ಆಟಕ್ಕೆ ಹೇಳ ಹೆಸರಿಲ್ಲದಂತಾದ ರಾಜಸ್ಥಾನ ಸೋಲುಂಡಿದೆ. ಇತ್ತ ಗುಜರಾತ್ ತಂಡ 7 ವಿಕೆಟ್‍ಗಳ ಗೆಲುವಿನೊಂದಿಗೆ ಆಡಿದ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿ ಮೆರೆದಾಡಿದೆ.

    ಗೆಲ್ಲಲು 131 ರನ್‍ಗಳ ಅಲ್ಪ ಮೊತ್ತದ ಗುರಿ ಪಡೆದ ಗುಜರಾತ್ ತಂಡಕ್ಕೆ ಹಾರ್ದಿಕ್ ಪಾಂಡ್ಯ 34 ರನ್ (30 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು 3 ಪ್ರಮುಖ ವಿಕೆಟ್ ಕಿತ್ತು ಅಲ್‍ರೌಂಡರ್ ಆಟದ ಮೂಲಕ ಗಮನಸೆಳೆದರು. ಉಳಿದಂತೆ ತಂಡದ ಗೆಲುವಿಗೆ ಶ್ರಮಿಸಿದ ಶುಭಮನ್ ಗಿಲ್ ಅಜೇಯ 45 ರನ್‌ (43 ಎಸೆತ, 3 ಬೌಂಡರಿ, 1 ಸಿಕ್ಸ್‌) ಸಿಡಿಸಿ 18.1 ಓವರ್‌ಗಳ ಅಂತ್ಯಕ್ಕೆ ಇನ್ನೂ 11 ಎಸೆತ ಬಾಕಿ ಇರುವಂತೆ  ತಂಡಕ್ಕೆ 7 ವಿಕೆಟ್‌ಗಳ ಭರ್ಜರಿ ಗೆಲುವಿನ ಹಾರ ತೊಡಿಸಿ ಕುಣಿದಾಡಿದರು. ಈ ಸೋಲಿನೊಂದಿಗೆ 14 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ರಾಜಸ್ಥಾನ ತಂಡಕ್ಕೆ ನಿರಾಸೆಯಾಗಿದೆ.

    ಆರಂಭದಲ್ಲಿ ಸಣ್ಣ ಮೊತ್ತವನ್ನು ಬೆನ್ನಟ್ಟುವ ವೇಳೆ ವೃದ್ಧಿಮಾನ್ ಸಹಾ 5 ರನ್ ಮತ್ತು ವೇಡ್ 8 ರನ್ ಸಿಡಿಸಿ ಬೇಗನೆ ವಿಕೆಟ್ ಕಳೆದುಕೊಂಡರು. ಆ ಬಳಿಕ ಗುಜರಾತ್ ತಂಡಕ್ಕೆ ಗಿಲ್ ಮತ್ತು ಪಾಂಡ್ಯ ನೆರವಾದರು. ಈ ಜೋಡಿ 3 ನೇ ವಿಕೆಟ್‍ಗೆ 63 ರನ್ (53 ಎಸೆತ) ಜೊತೆಯಾಟವಾಡಿದ್ದು ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು. ಈ ಗೆಲುವಿನೊಂದಿಗೆ ಗುಜರಾತ್ ತಂಡ ರಾಜಸ್ಥಾನ ತಂಡದ ಬಳಿಕ ಆಡಿದ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಎತ್ತಿ ಹಿಡಿದ ಹಿರಿಮೆಗೆ ಪಾತ್ರವಾಯಿತು.

    ಫೈನಲ್ ಪಂದ್ಯದ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಆರಂಭದಲ್ಲೇ ಹೊಡಿಬಡಿ ಆಟಕ್ಕೆ ಮುಂದಾದರು. ಆದರೆ ಈ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಜೈಸ್ವಾಲ್ 22 ರನ್ (16 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈಚೆಲ್ಲಿಕೊಂಡರು.

    ಆ ಬಳಿಕ ಬಂದ ಸಂಜು ಸ್ಯಾಮ್ಸನ್ 14 ರನ್ (11 ಎಸೆತ, 2 ಬೌಂಡರಿ) ಸಿಡಿಸಿ ಸುಸ್ತಾದರು. ಆ ಬಳಿಕ ಬಂದ ಬ್ಯಾಟ್ಸ್‌ಮ್ಯಾನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ಆರಂಭಿಸಿದರು.

    ಪಾಂಡ್ಯ ಘಾತಕ ದಾಳಿ:
    ರಾಜಸ್ಥಾನ ತಂಡದ ಘಟಾನುಘಟಿ ಬ್ಯಾಟ್ಸ್‌ಮ್ಯಾನ್‌ಗಳು ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ದಾಳಿಗೆ ಬೆದರಿದರು. ರಾಜಸ್ಥಾನ ತಂಡದ ಅಗ್ರ ಕ್ರಮಾಂಕದ ಆಟಗಾರರಾದ ಬಟ್ಲರ್ 39 ರನ್ (35 ಎಸೆತ, 5 ಬೌಂಡರಿ) ಸಿಡಿಸಿ ಪಾಂಡ್ಯಗೆ ವಿಕೆಟ್ ಒಪ್ಪಿಸುತ್ತಿದ್ದಂತೆ, ಬಳಿಕ ಬಂದ ಶಿಮ್ರಾನ್ ಹೆಟ್ಮೆಯರ್ 11 ರನ್ (12 ಎಸೆತ, 2 ಬೌಂಡರಿ) ಬಾರಿಸಿ ಪಾಂಡ್ಯ ದಾಳಿಯಲ್ಲಿ ಪಾಂಡ್ಯಗೆ ಕ್ಯಾಚ್ ನೀಡಿ ಹೊರನಡೆದರು. ಈ ಮೂಲಕ ಪ್ರಮುಖ ಮೂರು ವಿಕೆಟ್ ಕಿತ್ತು ಪಾಂಡ್ಯ ರಾಜಸ್ಥಾನಕ್ಕೆ ಕಾಡಿದರು.

    ಇನ್ನೇನೂ ಅಲ್ಪ ಮೊತ್ತಕ್ಕೆ ಕುಸಿಯುವ ಹಂತದಲ್ಲಿದ್ದ ತಂಡಕ್ಕೆ ಕೊನೆಯಲ್ಲಿ ರಿಯಾನ್ ಪರಾಗ್ 15 ರನ್ (15 ಎಸೆತ, 1 ಬೌಂಡರಿ) ಮತ್ತು ಟ್ರೆಂಟ್ ಬೌಲ್ಟ್ 11 ರನ್ (7 ಎಸೆತ, 1 ಸಿಕ್ಸ್) ಸಿಡಿಸಿ ತಂಡದ ಕುಸಿತಕ್ಕೆ ತಡೆಯೊಡ್ಡಿದರು. ಅಂತಿಮವಾಗಿ ರಾಜಸ್ಥಾನ ತಂಡ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್‍ಗಳಿಗೆ ಕುಸಿಯಿತು.

    ಗುಜರಾತ್ ಪರ ಪಾಂಡ್ಯ 3 ವಿಕೆಟ್ ಕಿತ್ತು ಮಿಂಚಿದರೆ, ಸಾಯಿ ಕಿಶೋರ್ 2 ವಿಕೆಟ್ ಪಡೆದರು. ಉಳಿದಂತೆ ಶಮಿ, ಯಶ್ ದಯಾಲ್, ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.