ಜೈಪುರ: 2019ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಭಾರತೀಯ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಲಭಿಸಿದ್ದು, ಟೂರ್ನಿಯ 8 ತಂಡಗಳು ಹೊಸ ಮುಖಗಳನ್ನು ಖರೀದಿ ಮಾಡುವ ಮೂಲಕ ತಂಡದ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿವೆ.
ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಪರ ಇದುವರೆಗೂ ಆಡದ ಆಟಗಾರರು ಕೂಡ ಹೆಚ್ಚಿನ ಮೊತ್ತವನ್ನು ಪಡೆದಿದ್ದಾರೆ. ಇದರಲ್ಲಿ ತಮಿಳುನಾಡಿನ ವರುಣ್ ಚಕ್ರವರ್ತಿ ಮೊದಲ ಸ್ಥಾನದಲ್ಲಿದ್ದು, ಪಂಜಾಬ್ ತಂಡ 8.4 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಉಳಿದಂತೆ ಟಾಪ್ 5 ಆಟಗಾರರ ಪಟ್ಟಿ ಇಂತಿದೆ.
ವರುಣ್ ಚಕ್ರವರ್ತಿ – 8.4 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
ತಮಿಳುನಾಡಿನ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಬಾರಿ ಹೆಚ್ಚು ಮೊತ್ತ ಗಳಿಸಿದ ಆಟಗಾರರಾಗಿದ್ದು, ಈ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಪಂಜಾಬ್, ಕೋಲ್ಕತ್ತಾ ಹಾಗೂ ಚೆನ್ನೈ ತಂಡಗಳ ನಡುವೆ ಉಂಟಾದ ಪೈಪೋಟಿಯಿಂದ ವರುಣ್ ಹೆಚ್ಚಿನ ಮೊತ್ತಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿ ಮಾಡಿದೆ.
ಶಿವಂ ದುಬೆ – 5 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
ಮಹಾರಾಷ್ಟ್ರ ತಂಡದ ಆಲ್‍ರೌಂಡರ್ ಆಗಿರುವ ಶಿವಂ ದುವೆ ಹರಾಜು ಪ್ರಕ್ರಿಯೆ ಮುನ್ನವೇ ಚರ್ಚೆಗೆ ಕಾರಣರಾಗಿದ್ದರು. ಏಕೆಂದರೆ ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ದುಬೆ, 489 ರನ್ ಗಳಿಸಿ 17 ವಿಕೆಟ್ ಕೂಡ ಪಡೆದಿದ್ದರು. ಅಲ್ಲದೇ ಎಲ್ಲಾ ಐಪಿಎಲ್ ತಂಡಗಳು ದುಬೆರನ್ನು ಖರೀದಿ ಮಾಡಲು ಉತ್ಸಾಹ ತೋರಿತ್ತು. ಅಂತಿಮವಾಗಿ ಆರ್‌ಸಿಬಿ ತಂಡ 5 ಕೋಟಿ ರೂ. ನೀಡಿ ಅವರನ್ನು ಖರೀದಿ ಮಾಡಿದೆ.
ಪ್ರಭಾಸಿಮ್ರನ್ ಸಿಂಗ್ – 4.8 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
ಪೂರ್ವ ನಿಗದಿ ಎಂಬಂತೆ ಹರಾಜು ಪ್ರಕ್ರಿಯೆ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರಭಾಸಿಮ್ರನ್ ಸಿಂಗ್‍ರನ್ನು ಖರೀದಿ ಮಾಡಿದೆ. 4.8 ಕೋಟಿ ರೂ. ಮೊತ್ತಕ್ಕೆ ಪಂಜಾಬ್ ತಂಡ ಪ್ರಭಾಸಿಮ್ರನ್‍ರನ್ನು ಖರೀದಿ ಮಾಡಿದ್ದು, ಈ ಮೂಲಕ ಎಲ್ಲ ಫ್ರಾಂಚೈಸಿಗಳಿಗೂ ಹೆಚ್ಚು ಪೈಪೋಟಿ ನೀಡಿತು. ವಿಕೆಟ್ ಕೀಪರ್ ಹಾಗು ಬ್ಯಾಟ್ಸ್ ಮನ್ ಆಗಿರುವ ಪ್ರಭಾಸಿಮ್ರನ್ ಅಂಡರ್ 23 ಟೂರ್ನಿಯ ಪಂದ್ಯದಲ್ಲಿ ಇತ್ತೀಚೆಗಷ್ಟೇ 298 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ 2017-18ರ ಕೂಚ್ ಬಿಹಾರ್ ಟ್ರೋಫಿಯಲ್ಲಿ ಪಂಜಾಬ್ ಪರ 547 ರನ್ ಗಳಿಸಿದ್ದರು.
ಅಕ್ಷದೀಪ್ ನಾಥ್ – 3.6 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
ಉತ್ತರ ಪ್ರದೇಶದ ಆಲ್‍ರೌಂಡರ್ ಆಗಿರುವ ಅಕ್ಷದೀಪ್ ನಾಥ್ ಯುಪಿಯ ಅಂಡರ್ 19 ತಂಡದ ನಾಯಕರಾಗಿ 2011-12ರಲ್ಲಿ ವಿನೂ ಮಕಂಡ್ ಟ್ರೋಫಿಯಲ್ಲಿ ತಂಡದವನ್ನು ಚಾಂಪಿಯನ್ ಆಗಿಸಿದ್ದರು. 2016 ರಿಂದಲೂ ಐಪಿಎಲ್ ಭಾಗವಾಗಿದ್ದರೂ ಸರಿಯಾದ ಅವಕಾಶಗಳನ್ನು ಪಡೆದಿಲ್ಲ. ಆದರೆ ಈ ಬಾರಿ ಆರ್‌ಸಿಬಿ ತಂಡ ಈ ಬಾರಿ 3.6 ಕೋಟಿ ರೂ ನೀಡಿ ಅಕ್ಷದೀಪ್ ನಾಥ್ ರನ್ನು ಖರೀದಿ ಮಾಡಿದೆ. ಬಲಗೈ ಮಧ್ಯಮ ವೇಗಿಯಾಗಿರುವ ಅಕ್ಷದೀಪ್ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕ ಬ್ಯಾಟಿಂಗ್‍ಗೆ ಶಕ್ತಿ ತುಂಬವ ಸಾಮಥ್ರ್ಯ ಹೊಂದಿದ್ದಾರೆ. ಇತ್ತೀಚೆಗೆ ಅಂತ್ಯವಾದ ರಣಜಿ ಟ್ರೋಫಿಯಲ್ಲಿ ಅಕ್ಷದೀಪ್ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿದ್ದರು.
ಪ್ರಯಾಸ್ ರೇ ಬರ್ಮನ್ – 1.5 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ ಕೇವಲ 16 ವರ್ಷದ ವಯಸ್ಸಿನವರಾಗಿದ್ದು, ವಿಜಯ್ ಹಜಾರೆ ಟ್ರೋಪಿಯಲ್ಲಿ 11 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೇ ಜಮ್ಮು ಕಾಶ್ಮೀರದ ವಿರುದ್ಧ 4 ವಿಕೆಟ್ ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಆದರೆ ಈ ಬಾರಿ ಅಚ್ಚರಿ ಎಂಬಂತೆ ಆರ್‌ಸಿಬಿ 1.5 ಕೋಟಿ ರೂ. ನೀಡಿ ಪ್ರಯಾಸ್‍ರನ್ನು ಖರೀದಿ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv