Tag: IPL 2019

  • ತಂತ್ರಗಾರಿಕೆ, ಅದೃಷ್ಟ ಪರೀಕ್ಷೆಯಲ್ಲಿ ಧೋನಿಯನ್ನು ಮಣಿಸಿದ ರೋಹಿತ್ ಶರ್ಮಾ!

    ತಂತ್ರಗಾರಿಕೆ, ಅದೃಷ್ಟ ಪರೀಕ್ಷೆಯಲ್ಲಿ ಧೋನಿಯನ್ನು ಮಣಿಸಿದ ರೋಹಿತ್ ಶರ್ಮಾ!

    ಹೈದರಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ಬಗ್ಗೆ ಎಲ್ಲರಿಗೂ ಮೆಚ್ಚುಗೆ ಇದೆ. ಧೋನಿ ನಾಯಕತ್ವದಲ್ಲೇ ಟೀಂ ಇಂಡಿಯಾ ಹಲವು ಟ್ರೋಫಿಗಳನ್ನು ಜಯಿಸಿದೆ. ಇತ್ತ ಐಪಿಎಲ್ ನಲ್ಲೂ ಧೋನಿ ಚೆನ್ನೈ ತಂಡವನ್ನು ಫೈನಲ್ ವರೆಗೆ ತಂದಿದ್ದರು. ಆದರೆ ಫೈನಲ್ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ತಂತ್ರಗಾರಿಕೆಯಿಂದ ಚೆನ್ನೈ ತಂಡವನ್ನು ಸೋಲಿಸಿದ್ದಾರೆ.

    2019ರ ಟೂರ್ನಿಯಲ್ಲಿ ಮುಂಬೈ ತಂಡ ಫೈನಲ್‍ಗೂ ಮುನ್ನ 3 ಬಾರಿ ಚೆನ್ನೈ ವಿರುದ್ಧ ಆಡಿತ್ತು. ರೋಹಿತ್ ಬಳಗ ಮೂರು ಪಂದ್ಯಗಳಲ್ಲಿ ಜಯಗಳಿಸಿತ್ತು. ಈ ಆತ್ಮವಿಶ್ವಾಸದಿಂದಲೇ ಫೈನಲ್ ಪಂದ್ಯದಲ್ಲೂ ರೋಹಿತ್, ಚೆನ್ನೈ ತಂಡದ ವಿರುದ್ಧ ತಂತ್ರ ರೂಪಿಸಿ ಯಶಸ್ವಿಯಾಗಿದ್ದಾರೆ.

    ಟಿ 20ಯಲ್ಲಿ 150 ರನ್ ಸವಾಲು ಅಲ್ಲವೇ ಅಲ್ಲ. ಆದರಲ್ಲೂ ಬಲಿಷ್ಠ ಬ್ಯಾಟಿಂಗ್ ಹೊಂದಿರುವ ಚೆನ್ನೈ ಸುಲಭವಾಗಿ ಗೆಲ್ಲಬಹುದು ಎನ್ನುವ ನಿರೀಕ್ಷೆ ಆರಂಭದಲ್ಲಿತ್ತು. ಆದರೆ ಈ ನಿರೀಕ್ಷೆಯನ್ನು ರೋಹಿತ್ ಶರ್ಮಾ ತಮ್ಮ ತಂತ್ರದ ಮೂಲಕ ತಲೆಕೆಳಗೆ ಮಾಡಿದ್ದರು.

    ಲತಿಸ್ ಮಾಲಿಂಗ ಹಾಗೂ ಬುಮ್ರಾರ ಓವರಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಪಂದ್ಯವನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದರು. ಧೋನಿ ಬ್ಯಾಟಿಂಗ್ ವೇಳೆ ಬುಮ್ರಾ, ಹಾರ್ದಿಕ್ ಬೌಲಿಂಗ್ ಆಯ್ಕೆ ರೋಹಿತ್ ಮುಂದಿತ್ತು.

    ಕೃನಾಲ್ ಪಾಂಡ್ಯ ಎಸೆದ 18ನೇ ಓವರ್ ನಲ್ಲಿ ವಾಟ್ಸನ್ 3 ಸಿಕ್ಸರ್ ಸಿಡಿಸಿದ್ದರು. ಕೊನೆಯ 12 ಎಸೆತಗಳಲ್ಲಿ 18 ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾಗ ಬುಮ್ರಾ ಕೈಗೆ ಬಾಲ್ ಕೊಟ್ಟರು. ಉತ್ತಮವಾಗಿ ದಾಳಿ ಮಾಡಿದ ಬುಮ್ರಾ ಒಂದು ವಿಕೆಟ್ ಪಡೆಯುವುದರ ಜೊತೆ ಕೇವಲ 5 ರನ್ ನೀಡಿದ್ದರು. ಆದರೆ ಕೊನೆಯ ಎಸೆತವನ್ನು ಕೀಪರ್ ಕಾಕ್ ಹಿಡಿಯದ ಪರಿಣಾಮ ಬೈ ಮೂಲಕ 4 ಇತರೇ ರನ್ ಬಂದಿತು.

    ಕೊನೆಯ 6 ಎಸೆತಗಳಲ್ಲಿ 9 ರನ್ ಬೇಕಿದ್ದಾಗ ಅನುಭವಿ ಬೌಲರ್, ಹಿರಿಯ ಆಟಗಾರ ಮಾಲಿಂಗ ಕೈಗೆ ರೋಹಿತ್ ಬಾಲ್ ನೀಡಿದರು. ಕೊನೆ ಓವರ್ ಮಾಲಿಂಗ ಕೈಗೆ ಕೊಟ್ಟಾಗ ಕ್ರಿಕೆಟ್ ಅಭಿಮಾನಿಗಳು ಒಮ್ಮೆ ಅಚ್ಚರಿ ವ್ಯಕ್ತಪಡಿಸಿದ್ದರು. ಯಾಕೆಂದರೆ ಇನ್ನಿಂಗ್ಸ್ ನ 16ನೇ ಓವರಿನಲ್ಲಿ ಮಾಲಿಂಗ 20 ರನ್ ನೀಡಿದ್ದರು. ಬ್ರಾವೋ ಒಂದು ಸಿಕ್ಸರ್ ಸಿಡಿಸಿದ್ದರೆ ವಾಟ್ಸನ್ ಹ್ಯಾಟ್ರಿಕ್ ಫೋರ್ ಚಚ್ಚಿದ್ದರು. ಹೀಗಾಗಿ ಕೊನೆಯ ಓವರಿನಲ್ಲಿ ಪಂದ್ಯ ಏನಾಗುತ್ತದೆ ಎನ್ನುವ ಕುತೂಹಲವಿತ್ತು. ಈ ಓವರಿನಲ್ಲಿ ಮಾಲಿಂಗ ಕೇವಲ 7 ರನ್ ನೀಡಿ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನು ಉಳಿಸಿ ಪಂದ್ಯವನ್ನು ಗೆದ್ದುಕೊಟ್ಟರು.

    ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಜಸ್‍ಪ್ರೀತ್ ಬೂಮ್ರಾ. 4 ಓವರ್ ಎಸೆದ ಬುಮ್ರಾ ಕೇವಲ 14 ರನ್ ನೀಡಿ ಚೆನ್ನೈ ತಂಡದ ರನ್ನಿಗೆ ಕಡಿವಾಣ ಹಾಕಿದರು. ವಿಶೇಷ ಏನೆಂದರೆ ರೋಹಿತ್ ಶರ್ಮಾ ಮೆಕ್ಲಾಗನ್, ಕೃನಾಲ್ ಪಾಂಡ್ಯ, ಮಾಲಿಂಗ ಬಳಿಕ ನಾಲ್ಕನೇ ಬೌಲರ್ ಆಗಿ ಬುಮ್ರಾ ಅವರನ್ನು ಇಳಿಸಿದ್ದರು. ಇನ್ನಿಂಗ್ಸಿನ 5, 11, 17, 19ನೇ ಓವರ್ ಎಸೆದ ಬುಮ್ರಾ ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

    ತಂಡದ ಆಯ್ಕೆಯೊಂದಿಗೆ ಸಮರ್ಥವಾಗಿ ಪಂದ್ಯದ ಸಂದರ್ಭವನ್ನು ಆರ್ಥೈಸಿಕೊಂಡು ಗೇಮ್ ಪ್ಲಾನ್ ಬದಲಾಯಿಸಿದ್ದ ರೋಹಿತ್ ನಡೆಗೆ ಸಚಿನ್ ಕೂಡ ಮೆಚ್ಚುಗೆ ನೀಡಿದ್ದಾರೆ. ಅಲ್ಲದೇ ಅಂತರ್ ರಾಷ್ಟ್ರಿಯ ಮಟ್ಟದಲ್ಲಿ ನಾಯಕತ್ವವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಆಟಗಾರ ಎಂದಿದ್ದಾರೆ. ಧೋನಿ ಕುರಿತು ಪ್ರಸ್ತಾಪ ಮಾಡಿರುವ ಸಚಿನ್, ಇಬ್ಬರು ಆಟಗಾರರು ಪಂದ್ಯ ಸಂದರ್ಭಗಳನ್ನು ಬಹುಬೇಗ ತಿಳಿಯುವ ಗುಣವನ್ನು ಹೊಂದಿದ್ದು, ವಿಶ್ವಕಪ್ ತಂಡದಲ್ಲಿ ಇದು ತಂಡದ ನೆರವಿಗೆ ಬರುತ್ತದೆ ಎಂದು ವಿಶ್ಲೇಷಿಸಿದ್ದಾರೆ.

    ಸಾಧಾರಣವಾಗಿ ಟಿ 20 ಪಂದ್ಯದಲ್ಲಿ ಟಾಸ್ ಗೆದ್ದವರು ಫೀಲ್ಡಿಂಗ್ ಆಯ್ಕೆ ಮಾಡುತ್ತಾರೆ. ಆದರೆ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆಯನ್ನು ಮಾಡಿಕೊಂಡಿದ್ದರು. ಮೊದಲು ಬ್ಯಾಟಿಂಗ್ ಆಯ್ಕೆಯ ಹಿಂದೆ ಮುಂಬೈ ಅದೃಷ್ಟ ಇದೆ. ಈ ಕಾರಣಕ್ಕೆ ಆಯ್ಕೆ ಮಾಡಿರಲೂಬಹುದು ಎನ್ನುವ ವಿಶ್ಲೇಷಣೆ ಈಗ ಕೇಳಿ ಬರುತ್ತಿದೆ. ಯಾಕೆಂದರೆ ಈ ಹಿಂದೆ 2013, 2015, 2017ರ ಫೈನಲಿನಲ್ಲೂ ಮುಂಬೈ ತಂಡ ಮೊದಲ ಬ್ಯಾಟಿಂಗ್ ಮಾಡಿ ಕಪ್ ಗೆದ್ದುಕೊಂಡಿತ್ತು. ಹೀಗಾಗಿ ಈ ಬಾರಿಯೂ ಅದೃಷ್ಟ ಪರೀಕ್ಷೆಯಲ್ಲಿ ರೋಹಿತ್ ಶರ್ಮಾ ಅವರ ಈ ತಂತ್ರಗಾರಿಕೆಯೂ ಪಾಸ್ ಆಗಿದೆ.

    ಐಪಿಎಲ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಇದುವರೆಗೂ ಶೇ. 63.60 ರಷ್ಟು ಗೆಲುವು ಪಡೆದಿವೆ. ಇದರಂತೆ ಕಡಿಮೆ ಮೊತ್ತ ಗಳಿಸಿದರೂ ಚೆನ್ನೈ ತಂಡದ ಆಟಗಾರರನ್ನು ನಿಯಂತ್ರಿಸಬೇಕು ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಇತ್ತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

  • 2019 ಐಪಿಎಲ್ ಫೈನಲ್ ಕದನಕ್ಕೆ ಕ್ಷಣಗಣನೆ – ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತ

    2019 ಐಪಿಎಲ್ ಫೈನಲ್ ಕದನಕ್ಕೆ ಕ್ಷಣಗಣನೆ – ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತ

    ಹೈದರಾಬಾದ್: 2019 ಐಪಿಎಲ್ ಟೂರ್ನಿನ ಪೈನಲ್ ಕದನ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದು, ಪ್ರಶಸ್ತಿಗಾಗಿ ಚೆನ್ನೈ, ಮುಂಬೈ ತಂಡಗಳ ನಡುವೆ ಭಾರೀ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಟೂರ್ನಿಯಲ್ಲಿ ಜಯ ಪಡೆದ ತಂಡ ಭಾರೀ ಬಹುಮಾನದ ಮೊತ್ತವನ್ನು ಪಡೆಯಲಿದೆ.

    ಟೂರ್ನಿಯ ಚಾಂಪಿಯನ್ ಪಟ್ಟ ಪಡೆಯುವ ತಂಡಕ್ಕೆ ಬರೋಬ್ಬರಿ 25 ಕೋಟಿ ರೂ. ಬಹುಮಾನ ಹಾಗೂ ಟ್ರೋಫಿ ಸಿಗಲಿದೆ. ಇದರಲ್ಲಿ ಅರ್ಧ ಮೊತ್ತ ಫ್ರಾಂಚೈಸಿಗಳು ಪಡೆದರೆ, ಉಳಿದ ಹಣ ತಂಡದ ಆಟಗಾರರಿಗೆ ಲಭ್ಯವಾಗಲಿದೆ. ರನ್ನರ್ ಅಪ್ ಆದ ತಂಡಕ್ಕೆ 12.5 ಕೋಟಿ ರೂ. ಸಿಗಲಿದೆ.

    ಟೂರ್ನಿಯಲ್ಲಿ 3ನೇ ಸ್ಥಾನ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 10.5 ಕೋಟಿ ಹಾಗೂ 4ನೇ ಸ್ಥಾನ ಪಡೆದ ಹೈದರಾಬಾದ್‍ಗೆ 8.5 ಕೋಟಿ ರೂ. ಮೊತ್ತ ಸಿಗಲಿದೆ. ವೈಯಕ್ತಿಕ ಪ್ರಶಸ್ತಿ ಪಟ್ಟಿಯಲ್ಲಿ ಬ್ಯಾಟಿಂಗ್ (ಆರೆಂಜ್ ಕ್ಯಾಪ್), ಬೌಲಿಂಗ್ (ಪರ್ಪಲ್ ಕ್ಯಾಪ್) ಸೇರಿದಂತೆ ಹಲವು ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಪ್ರಶಸ್ತಿಗಳು ಕೂಡ ನಗದು ಬಹುಮಾನವನ್ನು ಹೊಂದಿದ್ದು, ಟೂರ್ನಿಯ ಉದಯೋನ್ಮುಖ ಆಟಗಾರನಿಗೆ ಆಕರ್ಷಕ ಟ್ರೋಫಿಯೊಂದಿಗೆ 10 ಲಕ್ಷ ರೂ. ಬಹುಮಾನ ಸಿಗಲಿದೆ.

    ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ 10 ಲಕ್ಷ ರೂ. ಸಿಗಲಿದೆ. ಈ ಬಾರಿ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ ಈ ಪ್ರಶಸ್ತಿಗೆ ಆರ್ಹರಾಗಿದ್ದಾರೆ. ಟೂರ್ನಿಯ ಮಧ್ಯದಲ್ಲೇ ವಾರ್ನರ್ ಮರಳಿದ್ದರೂ ಕೂಡ ಆಡಿರುವ 12 ಪಂದ್ಯಗಳಿಂದ 692 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಇತ್ತ ಬೆಸ್ಟ್ ಬೌಲರ್ ಕೂಡ 10 ಲಕ್ಷ ರೂ. ಬಹುಮಾನ ಪಡೆಯಲಿದ್ದು, ಈ ಪಟ್ಟಿಯಲ್ಲಿ ಸದ್ಯ ರಬಾಡ 25 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 24 ವಿಕೆಟ್ ಗಳಿಸಿ ಚೆನ್ನೈನ ಇಮ್ರಾನ್ ತಹೀರ್ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಟೂರ್ನಿಯ ‘ಮೋಸ್ಟ್ ವ್ಯಾಲುಬಲ್ ಪ್ಲೇಯರ್’ 10 ಲಕ್ಷ ರೂ. ಪಡೆಯಲಿದ್ದಾರೆ.

    ಇತ್ತೀಚೆಗೆ ಮುಗಿದ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ತಂಡ 1 ದಶಲಕ್ಷ ಡಾಲರ್ (ಸುಮಾರು 6.99 ಕೋಟಿ ರೂ.) ರನ್ನರ್ ಅಪ್ ಗಳಿಗೆ 700 ಡಾಲರ್ (ಸುಮಾರು 4.89 ಕೋಟಿ) ರೂ. ನಗದು ಬಹುಮಾನವನ್ನು ನೀಡಿತ್ತು.

  • ಚೆನ್ನೈ Vs ಮುಂಬೈ – ಬಲಾಬಲ ಹೇಗಿದೆ? ಈ ಬಾರಿ ಕಪ್ ಯಾರಿಗೆ?

    ಚೆನ್ನೈ Vs ಮುಂಬೈ – ಬಲಾಬಲ ಹೇಗಿದೆ? ಈ ಬಾರಿ ಕಪ್ ಯಾರಿಗೆ?

    – ಆತ್ಮವಿಶ್ವಾಸದಲ್ಲಿ ರೋಹಿತ್ ಬಳಗ
    – ಸೇಡು ತೀರಿಸಿಕೊಳ್ಳುತ್ತಾ ಚೆನ್ನೈ?

    ಹೈದರಾಬಾದ್: ಹಲವು ವಿಶೇಷಗಳೊಂದಿಗೆ ಆರಂಭವಾಗಿ ತಂಡಗಳ ಹೋರಾಟದ ನಡುವೆ ಸಾಗಿದ 2019ರ ಐಪಿಎಲ್ ಅಂತಿಮ ಫೈನಲ್ ಪಂದ್ಯಕ್ಕೆ ಹೈದರಾಬಾದ್‍ನ ಕ್ರೀಡಾಂಗಣ ಸಿದ್ಧವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಟೈಟಲ್‍ಗಾಗಿ ಮುಖಾಮುಖಿ ಆಗಲಿದೆ.

    ಈ ಬಾರಿಯ ಟೂರ್ನಿಯ ಲೀಗ್ ಹಂತದ ಪಂದ್ಯಗಳಲ್ಲಿ ಎರಡು ಬಾರಿ, ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಮಣಿಸಿದ ರೋಹಿತ್ ಶರ್ಮಾ ನಾಯಕತ್ವದ ತಂಡ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ. ಇತ್ತ ಟೂರ್ನಿಯಲ್ಲಿ ಟೈಟಲ್ ಉಳಿಸಿಕೊಳ್ಳಲು ಚೆನ್ನೈ ಸಿದ್ಧತೆ ನಡೆಸಿದ್ದು, ಧೋನಿ ಬಳಗ ಪ್ರತಿಕಾರ ತೀರಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

    ಸೇಡು ತೀರಿಸಿಕೊಳ್ಳುತ್ತಾ ಚೆನ್ನೈ?
    ಟೂರ್ನಿಯಲ್ಲಿ ಈಗಾಗಲೇ 3 ಬಾರಿ ಚೆನ್ನೈ ತಂಡವನ್ನು ಸೋಲಿಸಿರುವ ಮುಂಬೈ ಹೆಚ್ಚು ಆತ್ಮವಿಶ್ವಾಸ ಹೊಂದಿದೆ ಎಂದು ಹೇಳಬಹುದು. ಮುಂಬೈ ತಂಡ ಬಿಟ್ಟು ಬೇರೆ ಯಾವುದೇ ತಂಡ ವಿರುದ್ಧದ ಕೂಡ ಚೆನ್ನೈ ನೀರಸ ಪ್ರದರ್ಶನ ತೋರಿಲ್ಲ. ಫೈನಲ್ ಪಂದ್ಯದಲ್ಲಿ ಚೆನ್ನೈಗೆ ಉತ್ತಮ ಅವಕಾಶ ಲಭಿಸಿದೆ ಎನ್ನಬಹುದು. ಆರಂಭಿಕಾಗಿ ಚೆನ್ನೈಗೆ ವ್ಯಾಟ್ಸನ್, ಡು ಪ್ಲೆಸಿಸ್ ಉತ್ತಮ ಫಾರ್ಮ್ ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್ ಆಗಿದೆ. ರೈನಾ, ರಾಯುಡು, ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಿದರೆ, ಧೋನಿ, ಬ್ರಾವೋ ಅಂತಿಮ ಹಂತದಲ್ಲಿ ಸ್ಕೋರ್ ಹೆಚ್ಚಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ.

    ಇತ್ತ ಡೆಲ್ಲಿ ತಂಡದ ವಿರುದ್ಧ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುರಳಿ ವಿಜಯ್ ಬದಲಾಗಿ ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಶಾರ್ದೂಲ್ ಪಂದ್ಯದಲ್ಲಿ ವಿಫಲರಾಗಿದ್ದರು ಮತ್ತೊಂದು ಅವಕಾಶ ಪಡೆಯುವ ಸಾಧ್ಯತೆ ಇದೆ. ಅಲ್ಲದೇ ಮತ್ತದೆ ತಂಡವನ್ನು ಧೋನಿ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಉಳಿದಂತೆ ಐವರು ಬೌಲರ್ ಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದು, ತಹೀರ್, ಹರ್ಭಜನ್ ಸಿಂಗ್, ಜಡೇಜಾ ಮೋಡಿ ಮಾಡುವ ನಿರೀಕ್ಷೆ ಇದೆ.

    ಮತ್ತೊಂದು ಜಯದ ನಿರೀಕ್ಷೆಯಲ್ಲಿ ಮುಂಬೈ:
    ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ್ದು, ತಂಡದ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಡಿಕಾಕ್, ರೋಹಿತ್ ಉತ್ತಮ ಫಾರ್ಮ್ ನಲ್ಲಿದ್ದು, ಒಂದೊಮ್ಮೆ ಇಬ್ಬರು ವಿಫಲರಾದರೂ, ಸೂರ್ಯಕುಮಾರ್ ತಂಡಕ್ಕೆ ಆಸೆರೆಯಾಗುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಉಳಿದಂತೆ ಇಶಾನ್ ಕಿಶಾನ್, ಪೋಲಾರ್ಡ್, ಹಾರ್ದಿಕ್, ಕೃನಾಲ್ ಪಾಂಡ್ಯರೊಂದಿಗೆ ತಂಡ ಲೈನಪ್ ಹೊಂದಿದೆ. ಬೌಲಿಂಗ್ ನಲ್ಲಿ ಬುಮ್ರಾ, ಮಾಲಿಂಗ, ಕೃನಾಲ್, ರಾಹುಲ್ ಚಹರ್ ಸ್ಪಿನ್ನರ್ ಗಳಾಗಿ ಉತ್ತಮ ಸಾಥ್ ನೀಡುತ್ತಿದ್ದಾರೆ.

    ಮುಂಬೈ ಸಾಧನೆ: 2013, 2015, 2017 ರಲ್ಲಿ ಮುಂಬೈ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದೆ. 2013 ರಲ್ಲಿ 23 ರನ್, 2015 ರಲ್ಲಿ 41 ರನ್ ಗಳಲ್ಲಿ ಚೆನ್ನೈ ತಂಡವನ್ನು ಸೋಲಿಸಿದ್ದು ಮುಂಬೈ ಮಹತ್ವದ ಸಾಧನೆ ಆಗಿದೆ. 2017ರಲ್ಲಿ ಹೈದರಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲೂ ಕೂಡ ಪುಣೆ ತಂಡವನ್ನು ಮುಂಬೈ 1 ರನ್ ಅಂತರದಲ್ಲಿ ರೋಚಕ ಜಯ ಪಡೆದಿತ್ತು.

    ಚೆನ್ನೈ ಸಾಧನೆ: 2010 ರಲ್ಲಿ ಚೆನ್ನೈ ತಂಡ 22 ರನ್ ಗಳ ಹಂತದಲ್ಲಿ ಮುಂಬೈ ವಿರುದ್ಧ ಗೆದ್ದು ಮೊದಲ ಬಾರಿಗೆ ಕಪ್ ಜಯಿಸಿತ್ತು. 2011 ರಲ್ಲಿ ಆರ್ ಸಿಬಿ ವಿರುದ್ಧ 58 ರನ್ ಗಳ ಹಂತದಲ್ಲಿ ಹಾಗೂ 2018 ರಲ್ಲಿ ಹೈದರಾಬಾದ್ ವಿರುದ್ಧ 8 ವಿಕೆಟ್ ಹಂತದಲ್ಲಿ ಜಯ ಪಡೆದು ಸಂಭ್ರಮಿಸಿತ್ತು. ಸದ್ಯ ಎರಡು ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು, ಇತ್ತಂಡಗಳು 3 ಬಾರಿ ಕಪ್ ಗೆದ್ದಿರುವ ಹಿನ್ನೆಲೆಯಲ್ಲಿ 4ನೇ ಬಾರಿಗೆ ಕಪ್ ಯಾವ ತಂಡ ಗೆಲ್ಲಲಿದೆ ಎಂಬುವುದು ಕುತೂಹಲ ಮೂಡಿಸಿದೆ.

  • ಬೆಂಗಳೂರು ತಂಡ ಪೇಪರ್ ಮೇಲೆ ಬಲಿಷ್ಠ: ವಿಜಯ್ ಮಲ್ಯ ವ್ಯಂಗ್ಯ

    ಬೆಂಗಳೂರು ತಂಡ ಪೇಪರ್ ಮೇಲೆ ಬಲಿಷ್ಠ: ವಿಜಯ್ ಮಲ್ಯ ವ್ಯಂಗ್ಯ

    ಬೆಂಗಳೂರು: 2019ರ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪ್ರದರ್ಶನದ ಕುರಿತು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ವ್ಯಂಗ್ಯವಾಡಿದ್ದಾರೆ.

    ಬೆಂಗಳೂರು ತಂಡ ಯಾವಾಗಲೂ ಬಲಿಷ್ಠ ತಂಡವಾಗಿರುತ್ತದೆ. ಆದರೆ ಅದು ಪೇಪರ್ ಮೇಲೆ ಮಾತ್ರ ಎಂದು ಹೇಳಿದ್ದಾರೆ.

    ಬ್ಯಾಂಕ್‍ಗಳಿಗೆ ಸಾಲ ಮರುಪಾವತಿ ಮಾಡದೇ ಮಲ್ಯ ದೇಶ ತೋರೆದು ಹೋಗಿರುವುದು ಲ್ಲರಿಗೂ ತಿಳಿಸಿದ ಸಂಗತಿ. 2008 ರಲ್ಲಿ ನಡೆದ ಹರಾಜುಪ್ರಕ್ರಿಯೆಯಲ್ಲಿ ವಿಜಯ್ ಮಲ್ಯ ಆರ್ ಸಿಬಿ ತಂಡ ಮಾಲೀಕತ್ವ ಪಡೆದಿದ್ದರು. ಆದರೆ ಆರಂಭದ ಸೀಸನ್ ಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇದುವರೆಗೂ ನಡೆದಿರುವ 12 ಟೂರ್ನಿಗಳಲ್ಲಿ ಬೆಂಗಳೂರು ತಂಡ 2 ಬಾರಿ ಮಾತ್ರ ಫೈನಲ್ ಪ್ರವೇಶ ಮಾಡಿದ್ದು, ಒಮ್ಮೆಯೂ ಪ್ರಶಸ್ತಿಯನ್ನು ಗೆದ್ದಿಲ್ಲ.

    2019ರ ಟೂರ್ನಿಯಲ್ಲೂ ಕೂಡ ಆರ್‍ಸಿಬಿ ನೀರಸ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ತಂಡಕ್ಕೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಮಲ್ಯ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿ ವ್ಯಂಗ್ಯವಾಡಿದ್ದಾರೆ. ಆರ್ ಸಿಬಿ ಯಾವಾಗಲೂ ಉತ್ತಮ ಲೈನಪ್ ಹೊಂದಿರುತ್ತದೆ. ಇಲ್ಲಿ ಯೋಚನೆ ಮಾಡಬೇಕಾದ ವಿಷಯ ಏನೆಂದರೆ ಅದು ಪೇಪರ್ ಮೇಲೆ ಮಾತ್ರ ಎಂದು ಹೇಳಿ ಟ್ವಿಟ್ಟರ್‍ನಲ್ಲಿ ವಂಗ್ಯವಾಡಿದ್ದಾರೆ.

  • ವಿಶ್ವಕಪ್ ನೋವು ಇನ್ನು ದೂರವಾಗಿಲ್ಲ: ರಿಷಬ್ ಪಂತ್

    ವಿಶ್ವಕಪ್ ನೋವು ಇನ್ನು ದೂರವಾಗಿಲ್ಲ: ರಿಷಬ್ ಪಂತ್

    – ಅಂಕ ಪಟ್ಟಿಯಲ್ಲಿ ಡೆಲ್ಲಿ ನಂ.1

    ಜೈಪುರ: 2019ರ ವಿಶ್ವಕಪ್ ಟೂರ್ನಿಗೆ ತಮ್ಮನ್ನು ಕೈಬಿಟ್ಟ ಪ್ರಕ್ರಿಯೆ ನೋವು ಇನ್ನು ದೂರವಾಗಿಲ್ಲ ಎಂದು ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಹೇಳಿದ್ದಾರೆ.

    ಡೆಲ್ಲಿ ಕ್ಯಾಪಿಟಲ್, ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ 36 ಎಸೆತಗಳಲ್ಲಿ ಸ್ಫೋಟಕ 78 ರನ್ (36 ಎಸೆತ, 8 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡ 6 ವಿಕೆಟ್ ಗೆಲುವು ಪಡೆಯಲು ಪಂತ್ ಕಾರಣರಾಗಿದ್ದರು.

    ಪಂದ್ಯದ ಬಳಿಕ ಮಾತನಾಡಿದ ಪಂತ್, ಇಂದಿನ ಪ್ರದರ್ಶನ ನನಗೆ ಖುಷಿ ತಂದಿದೆ. ತಂಡಕ್ಕೆ ಈ ಪಂದ್ಯ ಬಹುಮುಖ್ಯವಾದದ್ದು ಎಂಬ ಅರಿವು ನನಗಿತ್ತು. ಆದರೆ ನಾನು ಸುಳ್ಳು ಹೇಳಲು ಬಯಸುವುದಿಲ್ಲ. ಈಗಲೂ ವಿಶ್ವಕಪ್ ಆಯ್ಕೆ ಪ್ರಕ್ರಿಯೆಯ ನೋವು ನನ್ನ ಮನಸ್ಸಿನಲ್ಲಿದೆ ಎಂದರು.

    ರಾಜಸ್ಥಾನ್ ರಾಯಲ್ಸ್ ಮಾಜಿ ನಾಯಕ ರಹಾನೆ ಶತಕ (105 ರನ್, 63 ಎಸೆತ, 11 ಬೌಂಡರಿ, 3 ಸಿಕ್ಸರ್)ದ ನೆರವಿನಿಂದ ಡೆಲ್ಲಿಗೆ 192 ರನ್ ಟಾರ್ಗೆಟ್ ನೀಡಿತ್ತು. ಡೆಲ್ಲಿ ಪರ ರಿಷಬ್ ಪಂತ್ 78 ರನ್, ಪೃಥ್ವಿ ಶಾ 42 ರನ್, ಅನುಭವಿ ಆಟಗಾರ ಶಿಖರ್ ಧವನ್ 54 ರನ್‍ಗಳ ಉತ್ತಮ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ 4 ಎಸೆತ ಬಾಕಿ ಇರುವಂತೆಯೇ ಗೆಲುವು ಪಡೆಯಿತು. ರಿಷಬ್ ಪಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಪಡೆದರು.

    ಈ ಬಾರಿಯ ವಿಶ್ವಕಪ್ ಆಯ್ಕೆ ಪ್ರಕ್ರಿಯೆಲ್ಲಿ ರಿಷಬ್ ಪಂತ್ ಕೈ ಬಿಟ್ಟು ದಿನೇಶ್ ಕಾರ್ತಿಕ್‍ರನ್ನು ಆಯ್ಕೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

    https://twitter.com/cricketfeverrr/status/1120396549115338752

    ಡೆಲ್ಲಿ ಸಾಧನೆ: ಇತ್ತ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಡೆಲ್ಲಿ ತಂಡದ ಯುವ ನಾಯಕ ಶ್ರೇಯಸ್ ಅಯ್ಯರ್ ತಂಡದ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಈ ಬಾರಿ ಹೆಸರು ಬದಲಿಸಿಕೊಂಡು ಕಣಕ್ಕೆ ಇಳಿದಿತ್ತು. ಆರಂಭದಿಂದಲೂ ಭರ್ಜರಿಯಾಗಿ ಪ್ರದರ್ಶನ ನೀಡುತ್ತಿರುವ ಯಂಗ್ ಕ್ಯಾಪ್ಟನ್ ನೇತೃತ್ವದ ತಂಡ ಅಂಕಪಟ್ಟಿಯಲ್ಲಿ ಮೊಲದ ಸ್ಥಾನ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ 10 ಪಂದ್ಯದಲ್ಲಿ 14 ಅಂಕಗಳಿಸಿ 2ನೇ ಸ್ಥಾನ ಪಡೆದಿದ್ದು, 11 ಪಂದ್ಯಗಳಿಂದ ಡೆಲ್ಲಿ 14 ಅಂಕ ಪಡೆದಿದೆ. ಕಳೆದ 11 ಆವೃತ್ತಿ ಗಳಲ್ಲಿ ಡೆಲ್ಲಿ ಮೊದಲ ಸ್ಥಾನವನ್ನು ಪಡೆದಿರಲಿಲ್ಲ.

    ಡೆಲ್ಲಿ ತಂಡದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬಗ್ಗೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ. ಡೆಲ್ಲಿ ನಂ.1 ಸ್ಥಾನ ಪಡೆದಿರುವುದನ್ನು ನಂಬಲು ಆಗುತ್ತಿಲ್ಲ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ, ಈ ಹಿಂದೆ ಡೆಲ್ಲಿ ವಾಯಮಾಲಿನ್ಯದಲ್ಲಿ ನಂ.1 ಪಟ್ಟ ಪಡೆದಿತ್ತು, ಆದರೆ ಈಗ ಐಪಿಎಲ್ ನಲ್ಲಿ ನಂ.1 ಎಂದರೆ ಅಚ್ಚರಿ ತಂದಿದೆ ಎಂದು ಕಾಲೆಳೆದಿದ್ದಾರೆ.

  • ರಾಜಸ್ಥಾನ್ ರಾಯಲ್ಸ್ ನಾಯಕತ್ವದಿಂದ ರಹಾನೆ ಕಿಕ್ ಔಟ್

    ರಾಜಸ್ಥಾನ್ ರಾಯಲ್ಸ್ ನಾಯಕತ್ವದಿಂದ ರಹಾನೆ ಕಿಕ್ ಔಟ್

    ಮುಂಬೈ: 2019ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ರಹಾನೆ ನಾಯಕತ್ವದಲ್ಲಿ ಸತತ 6 ಪಂದ್ಯಗಳಲ್ಲಿ ಸೋಲುಂಡು ಸಂಕಟ ಅನುಭವಿಸಿದ್ದು, ಈ ಹಿನ್ನೆಲೆಯಲ್ಲಿ ತಂಡದ ನಾಯಕತ್ವ ಬದಲಾವಣೆ ಮಾಡಿ ಇಂದಿನ ಪಂದ್ಯದಲ್ಲಿ ಸ್ಮಿತ್‍ಗೆ ಕ್ಯಾಪ್ಟನ್ ಜವಾಬ್ದಾರಿ ವಹಿಸಲಾಗಿದೆ.

    ಇತ್ತ ಟೂರ್ನಿಯಲ್ಲಿ ಮೊದಲ ಬಾರಿಗೆ ನಾಯಕತ್ವ ಪಡೆದ ಸ್ಮಿತ್ ಮುಂಬೈ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ 5 ವಿಕೆಟ್ ಗೆಲುವಿನೊಂದಿಗೆ ಮುನ್ನಡೆಸಿದ್ದಾರೆ. ಇದರೊಂದಿಗೆ ರಾಜಸ್ಥಾನ ಆಡಿದ 9 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ಪಡೆದಿದೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಮುಂದುವರೆದಿದೆ. ನಾಯಕತ್ವ ಜವಾಬ್ದಾರಿ ಕಳೆದುಕೊಂಡರು ಕೂಡ ರಹಾನೆ ಉಪನಾಯಕನ ಪಟ್ಟದಲ್ಲಿ ತಂಡದಲ್ಲಿ ಮುಂದುವರಿದಿದ್ದಾರೆ.

    ಪ್ಲೇ ಆಫ್ ಪ್ರವೇಶ ಪಡೆಯಲು ರಾಜಸ್ಥಾನ್ ತಂಡಕ್ಕೆ ಇಂದಿನ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 35 ರನ್, ಸ್ಮಿತ್ 59 ರನ್ ಹಾಗೂ ಅಂತಿಮ ಹಂತದಲ್ಲಿ ಸ್ಫೋಟಕ ಪ್ರದರ್ಶನ ನೀಡಿದ 17 ವರ್ಷದ ರಿಯಾನ್ ಪರಾಗ್ 29 ಎಸೆತಗಳಲ್ಲಿ 43 ರನ್ ಗಳಿಸಿ ತಂಡ ಗೆಲುವಿಗೆ ಕಾರಣರಾದರು. ಮುಂಬೈ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿದತ್ತು. ಈ ಗುರಿ ಬೆನ್ನತ್ತಿದ್ದ ರಾಜಸ್ಥಾನ ತಂಡ 19.5 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯ ಪಡೆಯಿತು.

    ಚೆಂಡು ವಿರೂಪಗಳಿಸಿದ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಅನುಭವಿಸಿದ್ದ ಸ್ಮಿತ್ ಮೊದಲ ಬಾರಿಗೆ ಆರ್ ಆರ್ ನಾಯಕತ್ವ ವಹಿಸಿಕೊಂಡಿದ್ದರು. ಅಲ್ಲದೇ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಅಲ್ಲದೇ ಈ ಬಾರಿಯ ಆಸ್ಟೇಲಿಯಾ ವಿಶ್ವಕಪ್ ಟೂರ್ನಿಗೆ ಸ್ಮಿತ್ ಆಸೀಸ್ ಪರ ಆಯ್ಕೆ ಆಗಿದ್ದು, ತಂಡಕ್ಕೆ ಬಲ ತುಂಬಿದ್ದಾರೆ.

  • ಪತಿಯನ್ನ ಟ್ರೋಲ್ ಮಾಡಿದವರಿಗೆ ಸ್ಟುವರ್ಟ್ ಪತ್ನಿ ತಿರುಗೇಟು

    ಪತಿಯನ್ನ ಟ್ರೋಲ್ ಮಾಡಿದವರಿಗೆ ಸ್ಟುವರ್ಟ್ ಪತ್ನಿ ತಿರುಗೇಟು

    ಮೊಹಾಲಿ: ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಪತಿ ಸ್ಟುವರ್ಟ್ ಬಿನ್ನಿ ಅವರನ್ನು ಟ್ರೋಲ್ ಮಾಡಿದವರಿಗೆ ಪತ್ನಿ ಮಯಾಂತಿ ತಿರುಗೇಟು ನೀಡಿದ್ದಾರೆ.

    ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟ್ ನಡೆಸಿದ ಸ್ಟುವರ್ಟ್ ಬಿನ್ನಿ 2019ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಿದರು. ಪಂದ್ಯದಲ್ಲಿ ಸ್ಫೋಟಕ 33 ರನ್ ಗಳಿಸಿದರೂ ಕೂಡ ರಾಜಸ್ಥಾನ ತಂಡಕ್ಕೆ ಗೆಲುವು ತಂದುಕೊಡಲು ವಿಫಲರಾದರು. ಪರಿಣಾಮ ಬಿನ್ನಿಯನ್ನು ಕೆಲ ಮಂದಿ ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿ ಕಾಲೆಳೆದಿದ್ದರು. ಈ ಟ್ರೋಲ್ ಗಳಿಗೆ ಪ್ರತಿಕ್ರಿಯೆ ನೀಡಿರುವ ಸ್ಟುವರ್ಟ್ ಬಿನ್ನಿ ಅವರ ಪತ್ನಿ ತಿರುಗೇಟು ನೀಡಿದ್ದಾರೆ.

    11 ಎಸೆತಗಳನ್ನು ಎದುರಿಸಿದ ಬಿನ್ನಿ 2 ಬೌಂಡರಿ, 3 ಸಿಕ್ಸರ್ ನೆರವಿನಿಂದ 33 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ ತಂಡ 20 ಓವರಿನಲ್ಲಿ 190 ರನ್ ಗಳಿಸಿ 12 ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು.

    ಬಿನ್ನಿ ಪಂದ್ಯದಲ್ಲಿ ತೋರಿದ ಪ್ರದರ್ಶನದ ಬಳಿಕ ಮಯಾಂತಿ ತಮ್ಮ ಡಿಪಿ ಫೋಟೋವನ್ನು ಪತಿಯೊಂದಿಗೆ ಹಾಕಿಕೊಂಡಿರುತ್ತಾರೆ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ಕಾಲೆಳೆದಿದ್ದರು. ಈ ಟ್ವೀಟ್ ಪ್ರತಿಕ್ರಿಯೆ ನೀಡಿರುವ ಮಯಾಂತಿ, ನಿಮ್ಮ ಬಳಿ ನನ್ನ ನಂಬರ್ ಇಲ್ಲದ ಕಾರಣ ನಾನು ಯಾವ ಡಿಪಿ ಹಾಕಿದ್ದೇನೆ ಎನ್ನುವುದು ನಿಮಗೆ ತಿಳಿಯುವುದಿಲ್ಲ. ಆದರೂ ಈ ವಿಚಾರವನ್ನು ಕೆದಕಿದ್ದಕ್ಕೆ ಧನ್ಯವಾದ. ಸೂಪರ್ ಪಿಕ್ ಎಂದು ಬರೆದು ತಿರುಗೇಟು ನೀಡಿದ್ದಾರೆ.

    ಕ್ರಿಕೆಟಿನಲ್ಲಿ ತಮ್ಮ ಹಾಟ್ ಮತ್ತು ಬೋಲ್ಡ್ ಹೋಸ್ಟ್ ಆಗಿ ಹೆಸರು ಮಾಡಿರುವ ಮಯಾಂತಿ ಅವರನ್ನು ಪತಿ ಸ್ಟುವರ್ಟ್ ಬಿನ್ನಿ ಅವರೊಂದಿಗೆ ಕೆಲ ಮಂದಿ ಟ್ರೋಲ್ ಮಾಡುವುದು ಎಲ್ಲರಿಗೂ ತಿಳಿದ ಸಂಗತಿ. ಈ ಹಿಂದೆಯೂ ತಮ್ಮನ್ನು ಡಿನ್ನರ್‍ಗೆ ಆಹ್ವಾನ ನೀಡಿದ್ದ ವ್ಯಕ್ತಿಗೆ ತಿರುಗೇಟು ನೀಡಿದ್ದ ಮಯಾಂತಿ ತಮ್ಮ ಈ ನಡೆಯಿಂದಲೇ ಮತ್ತಷ್ಟು ಹೆಸರು ಪಡೆದಿದ್ದರು.

  • 10 ವರ್ಷದ ಹಿಂದಿನ ದಾಖಲೆ ಮುರಿದ ದೀಪಕ್ ಚಹಾರ್

    10 ವರ್ಷದ ಹಿಂದಿನ ದಾಖಲೆ ಮುರಿದ ದೀಪಕ್ ಚಹಾರ್

    – 24 ಎಸೆತಗಳಲ್ಲಿ 20 ಡಾಟ್ ಬಾಲ್

    ಚೆನ್ನೈ: ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಚೆನ್ನೈ ಬೌಲರ್ ಗಳು ಪಂದ್ಯ ಗೆಲುವಿಗೆ ಕಾರಣರಾದರೆ, ತಂಡದ ಯುವ ಬೌಲರ್ ದೀಪಕ್ ಚಹಾರ್ ಅದ್ಭುತವಾಗಿ ತಮ್ಮ ಸ್ಪೆಲ್ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ.

    ಪಂದ್ಯದಲ್ಲಿ 24 ಎಸೆತ ಅಂದರೆ 4 ಓವರ್ ಬೌಲ್ ಮಾಡಿದ ಚಹಾರ್ ಅದರಲ್ಲಿ 20 ಎಸೆತಗಳನ್ನು ಡಾಟ್ ಮಾಡಿ ದಾಖಲೆ ಬರೆದಿದ್ದಾರೆ. ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಎಸೆದಿದ್ದ ನೆಹ್ರಾ, ಮುನಾಫ್ ಪಟೇಲ್, ಎಡ್ವರ್ಡ್ ಅವರ ದಾಖಲೆಯನ್ನ ಮುರಿದಿದ್ದಾರೆ. 2009 ಟೂರ್ನಿಯಲ್ಲಿ ಈ ಮೂವರು ಆಟಗಾರರು ಪಂದ್ಯವೊಂದರಲ್ಲಿ 19 ಡಾಟ್ ಬಾಲ್ ಎಸೆದು ಜಂಟಿಯಾಗಿ ದಾಖಲೆ ಬರೆದಿದ್ದರು.

    ಪಂದ್ಯದಲ್ಲಿ ತಮ್ಮ ಸ್ಪೆಲ್‍ನಲ್ಲಿ 20 ರನ್ ನೀಡಿ 3 ವಿಕೆಟ್‍ಗಳನ್ನು ಪಡೆಯುವ ಚಹಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಕೋಲ್ಕತ್ತಾ ವಿರುದ್ಧದ ಪಂದ್ಯವನ್ನು ಗೆಲ್ಲವು ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

    ಕೋಲ್ಕತ್ತಾ ಪಂದ್ಯಕ್ಕೂ ಮುನ್ನದ ಮ್ಯಾಚ್‍ನಲ್ಲಿ ಚಹಾರ್ ವಿರುದ್ಧ ಕೂಲ್ ಕ್ಯಾಪ್ಟನ್ ಗರಂ ಆಗಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಧೋನಿ ಚಹಾರ್ ಮೇಲೆ ಕೋಪಗೊಂಡಿದ್ದರು. ಪಂಜಾಬ್ ಬ್ಯಾಟಿಂಗ್ ವೇಳೆ 19ನೇ ಓವರ್ ಎಸೆದ ಚಹಾರ್, ಸತತ 2 ನೋ ಬಾಲ್ ಎಸೆದಿದ್ದರು. ಇದರಿಂದ ಅಸಮಾಧಾನಗೊಂಡ ಧೋನಿ ಗರಂ ಆಗಿ ಚಹಾರ್ ಬಳಿ ಬಂದು ಕೆಲ ಸಲಹೆಗಳನ್ನ ನೀಡಿದರು. ಪರಿಣಾಮ ಮರು ಎಸೆತದಲ್ಲೇ ಡೇವಿಡ್ ಮಿಲ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಚಹಾರ್ ಮೆಚ್ಚುಗೆ ಪಡೆದಿದ್ದರು.

  • ಚೆಂಡು ತಾಗಿದರೂ ಹಾರದ ಬೇಲ್ಸ್- ‘ಬೆಸ್ಟ್ ಫೆವಿಕಾಲ್ ಜಾಹೀರಾತು’ ಎಂದ್ರು ಟ್ವಿಟ್ಟಿಗರು

    ಚೆಂಡು ತಾಗಿದರೂ ಹಾರದ ಬೇಲ್ಸ್- ‘ಬೆಸ್ಟ್ ಫೆವಿಕಾಲ್ ಜಾಹೀರಾತು’ ಎಂದ್ರು ಟ್ವಿಟ್ಟಿಗರು

    ಜೈಪುರ: ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ಗೆಲುವು ಪಡೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಕೆಆರ್ ತಂಡದ ಕ್ರಿಸ್ ಲೀನ್ ಜೀವದಾನ ಪಡೆದಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ನಡೆದಿದ್ದೇನು?
    ರಾಜಸ್ಥಾನ ರಾಯಲ್ಸ್ ತಂಡದ ನೀಡಿದ ಗುರಿ ಬೆನ್ನತ್ತಿದ ಕೆಕೆಆರ್ ಪರ ಕ್ರಿಸ್ ಲೀನ್ ಆರಂಭಿಕರಾಗಿ ಕಣಕ್ಕೆ ಇಳಿದು ಭರ್ಜರಿ ಪ್ರದರ್ಶನ ತೋರಿದ್ದರು. ಆದರೆ ಇನ್ನಿಂಗ್ಸ್ ಆರಂಭದ 4ನೇ ಓವರಿನಲ್ಲಿ 13 ರನ್ ಗಳಿಸಿ ಆಡುತ್ತಿದ್ದ ಕ್ರಿಸ್ ಲೀನ್, ಧವಲ್ ಕುಲಕರ್ಣಿ ಬೌಲಿಂಗ್‍ನಲ್ಲಿ ಔಟಾಗುವ ಸಂದರ್ಭ ಎದುರಿಸಿದ್ದು ಧವಲ್ ಎಸೆತದ ಚೆಂಡು ಲೀನ್ ಬ್ಯಾಟಿಗೆ ತಾಗಿ ನೇರ ವಿಕೆಟ್‍ಗೆ ಅಪ್ಪಳಿಸಿತ್ತು. ಆದರೆ ಬಾಲ್ ತಾಗಿದ ವೇಗಕ್ಕೆ ಬೇಲ್ಸ್ ಸ್ವಲ್ಪ ಮೇಲಕ್ಕೆ ಹಾರಿ ಲೈಟ್ ಮಿನುಗಿದರು ಮತ್ತೆ ವಿಕೆಟ್ ನಡುವೆಯೇ ಬೇಲ್ಸ್ ಬಂದು ಕುಳಿತಿತ್ತು.

    ಇತ್ತ ಬೌಲಿಂಗ್ ಮಾಡುತ್ತಿದ್ದ ಕುಲಕರ್ಣಿ ವಿಕೆಟ್ ಪಡೆದ ಸಂಭ್ರಮ ಕ್ಷಣ ಮಾತ್ರದಲ್ಲಿ ನಿರಾಸೆ ಅನುಭವಿಸುವಂತೆ ಮಾಡಿತು. ರಾಜಸ್ಥಾನ ತಂಡದ ನಾಯಕ ರಹಾನೆ ಕೂಡ ಅಚ್ಚರಿಗೊಂಡು ಕ್ಷಣಕಾಲ ನಿರಾಸೆ ಅನುಭವಿಸಿದರು. ಅದೃಷ್ಟದ ಜೀವದಾನ ಪಡೆದ ಲೀನ್ ಪಂದ್ಯದಲ್ಲಿ 32 ಎಸೆತಗಳಲ್ಲೇ ಅರ್ಧ ಶತಕ ಪೂರೈಸಿ ಮಿಂಚಿದರು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಈ ಸಂದರ್ಭವನ್ನು ಫೆವಿಕಾಲ್ ಸಂಸ್ಥೆ ಜಾಹೀರಾತು ನೀಡಲು ಉತ್ತಮ ಸಂದರ್ಭ ಎಂದು ತಿಳಿಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತು ಕೆಲವರು ಕ್ರಿಕೆಟ್ ನಿಯಮಗಳ ಬದಲಾವಣೆಯ ಸಂದರ್ಭದ ಎದುರಾಗಿದೆ ಎಂದಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಇಂತಹದೇ ಘಟನೆಗಳು ಪುನರವರ್ತನೆ ಆಗಿದ್ದು, ಎಂಎಸ್ ಧೋನಿ ಹಾಗೂ ಕೆಎಲ್ ರಾಹುಲ್ ಕೂಡ ಇದೇ ರೀತಿ ಅದೃಷ್ಟದ ಜೀವದಾನ ಪಡೆದಿದ್ದರು.

  • ಐಪಿಎಲ್ 2019: ಡ್ವೇನ್ ಬ್ರಾವೋ ಔಟ್

    ಐಪಿಎಲ್ 2019: ಡ್ವೇನ್ ಬ್ರಾವೋ ಔಟ್

    ಚೆನ್ನೈ: 2019ರ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ತಂಡವನ್ನು ಎದುರಿಸುತ್ತಿದೆ. ಆದರೆ ಇದೇ ವೇಳೆ ಗಾಯದ ಸಮಸ್ಯೆಯಿಂದ ಡ್ವೇನ್ ಬ್ರಾವೋ ಎರಡು ವಾರಗಳ ಕಾಲ ಐಪಿಎಲ್ ನಿಂದ ಹೊರಬಿದ್ದಿದ್ದಾರೆ.

    ಈ ಕುರಿತು ಸಿಎಸ್‍ಕೆ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಸ್ಪಷ್ಟಪಡಿಸಿದ್ದು, ಬ್ರಾವೋ ಮುಂದಿನ ಪಂದ್ಯಕ್ಕೆ ಲಭ್ಯವಾಗುವುದು ತಂಡಕ್ಕೆ ನಷ್ಟವಾಗಿದೆ. ಆದರೆ ಉತ್ತಮ ಕಾಂಬಿನೇಷನ್ ರೂಪಿಸಿ ಬಲಿಷ್ಠ ತಂಡವನ್ನು ಕಣಕ್ಕೆ ಇಳಿಸಲಾಗುವುದು ಎಂದಿದ್ದಾರೆ.

    ಬ್ರಾವೋ ಸಿಎಸ್‍ಕೆ ತಂಡದ ಪರ ಪ್ರಮುಖ ಬೌಲರ್ ಆಗಿದ್ದು, ಅದರಲ್ಲೂ ಪಂದ್ಯದ ಡೆತ್ ಓವರ್ ಗಳಲ್ಲಿ ಉತ್ತಮ ದಾಳಿ ನಡೆಸುತ್ತಿದ್ದರು. ಸದ್ಯ ತಂಡ ಬೇರೆ ಆಟಗಾರರ ಬಗ್ಗೆ ಗಮನ ಹರಿಸಬೇಕಿದೆ. ಶರ್ದೂಲ್ ಠಾಕೂರ್, ಮೋಹಿತ್ ಶರ್ಮಾ ಸಿಎಸ್‍ಕೆ ಹೆಚ್ಚಿನ ಬೌಲಿಂಗ್ ಆಯ್ಕೆ ಆಗಿದ್ದಾರೆ.

    ಈ ಬಾರಿಯ ಟೂರ್ನಿಯಲ್ಲಿ ಸಿಎಸ್‍ಕೆ ತಂಡ ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ದಕ್ಷಿಣ ಆಫ್ರಿಕಾದ ಲುಂಗಿ ಎನ್ಗಿ, ನ್ಯೂಜಿಲೆಂಡ್ ತಂಡದ ಡೇವಿಡ್ ವಿಲ್ಲೆ ವೈಯಕ್ತಿಕ ಕಾರಣಗಳಿಂದ ಟೂರ್ನಿಯ ಆರಂಭದಲ್ಲೇ ಹಿಂದೆ ಸರಿದಿದ್ದರು.