Tag: iphone

  • ಮುಖ್ಯಮಂತ್ರಿ ಭೇಟಿಯಾದ ಫಾಕ್ಸ್‌ಕಾನ್‌ ಮುಖ್ಯಸ್ಥ ರಾಬರ್ಟ್‌ ವೂ

    ಮುಖ್ಯಮಂತ್ರಿ ಭೇಟಿಯಾದ ಫಾಕ್ಸ್‌ಕಾನ್‌ ಮುಖ್ಯಸ್ಥ ರಾಬರ್ಟ್‌ ವೂ

    ಬೆಂಗಳೂರು: ಐಫೋನ್ (iPhone) ಮತ್ತು ಅದರ ಬಿಡಿಭಾಗಗಳ ತಯಾರಿಕೆಗೆ ಹೆಸರಾಗಿರುವ ಫಾಕ್ಸ್‌ಕಾನ್‌ (Foxconn) ಕಂಪನಿಯ ಭಾರತದ ಮುಖ್ಯಸ್ಥ ರಾಬರ್ಟ್‌ ವೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭಾನುವಾರ ಭೇಟಿಯಾಗಿ, ಮತ್ತಷ್ಟು ಬಂಡವಾಳ ಹೂಡಿಕೆ ಮತ್ತಿತರ ಸಂಗತಿಗಳ ಬಗ್ಗೆ ಚರ್ಚಿಸಿದರು.

    ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ್‌, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್‌.ಮುನಿಯಪ್ಪ ಕೂಡ ಇದ್ದರು. ಇದನ್ನೂ ಓದಿ: ಸರ್ವೇಗೆ ಹೋದಾಗ ಬೆಂಗಳೂರಲ್ಲಿ ಕುರಿ, ಕೋಳಿ, ಚಿನ್ನ, ಫ್ರಿಡ್ಜ್ ಬಗ್ಗೆ ಪ್ರಶ್ನೆ ಕೇಳಬೇಡಿ: ಅಧಿಕಾರಿಗಳಿಗೆ ಡಿಸಿಎಂ ಮೌಖಿಕ ಸೂಚನೆ

    ವೂ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ‘ಫಾಕ್ಸ್‌ಕಾನ್‌ ಕಂಪನಿಯು ದೇವನಹಳ್ಳಿಯ ತನ್ನ ಘಟಕದಲ್ಲಿ ಕೈಗಾರಿಕಾ ಚಟುವಟಿಕೆ ಆರಂಭಿಸಿರುವುದು ಒಳ್ಳೆಯದು. ಇನ್ನೂ ಘಟಕದ ವಿಸ್ತರಣೆಗೆ ಅಗತ್ಯ ಇರುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

    ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ದೇವನಹಳ್ಳಿಯಲ್ಲಿರುವ ಘಟಕವು ಫಾಕ್ಸ್‌ಕಾನ್‌ ಕಂಪನಿಯ ಎರಡನೇ ಅತಿದೊಡ್ಡ ಘಟಕವಾಗಿದೆ. ಆಪಲ್‌ ಕಂಪನಿಗೆ ಇದು ಜಾಗತಿಕ ಮಟ್ಟದಲ್ಲಿ ಮುಂಚೂಣಿ ಪೂರೈಕೆದಾರ ಸಂಸ್ಥೆಯಾಗಿದೆ. ದೇವನಹಳ್ಳಿಯಲ್ಲಿ ತಯಾರಾಗುವ ಐಫೋನ್‌ಗಳನ್ನು ಜಾಗತಿಕ ಸ್ತರದಲ್ಲಿ ರಫ್ತು ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಕಂಪನಿಯು ಇಲ್ಲಿ 22 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಸೋಮಣ್ಣ ಮನೆಯಲ್ಲಿ ಜಾತಿಗಣತಿಗೆ 9 ಸಿಬ್ಬಂದಿ – ಸರ್ವೇಗೆ ಇಷ್ಟು ಜನ ಯಾಕೆ ಬಂದ್ರಿ ಅಂತ ಕ್ಲಾಸ್

    ಈ ಭೇಟಿಯ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ ಮತ್ತು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಕೂಡ ಉಪಸ್ಥಿತರಿದ್ದರು.

  • ಐಫೋನ್‌ 17 ಬಿಡುಗಡೆ – ಯಾವ ದೇಶದಲ್ಲಿ ಎಷ್ಟು ದರ? ಕಡಿಮೆ ದರ ಎಲ್ಲಿ?

    ಐಫೋನ್‌ 17 ಬಿಡುಗಡೆ – ಯಾವ ದೇಶದಲ್ಲಿ ಎಷ್ಟು ದರ? ಕಡಿಮೆ ದರ ಎಲ್ಲಿ?

    ನವದೆಹಲಿ: ಆಪಲ್ (Apple) ಕಂಪನಿ 4 ಮಾದರಿಯ ಐಫೋನ್ (iPhone) ಬಿಡುಗಡೆ ಮಾಡಿದೆ. ಭಾರತದಲ್ಲಿ ಸೆ.12 ರಿಂದ ಬುಕ್ಕಿಂಗ್‌ ಮಾಡಬಹುದಾಗಿದ್ದು ಸೆ.19 ರಿಂದ ಐಫೋನ್‌ ವಿತರಣೆ ಮಾಡಲಾಗುವುದು ಎಂದು ಆಪಲ್‌ ಕಂಪನಿ ಹೇಳಿದೆ.

    ಯಾವ ದೇಶದಲ್ಲಿ ಎಷ್ಟು ದರ?
    ಐಫೋನ್‌ 17
    256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್‌
    ಭಾರತ: 82,900
    ಅಮೆರಿಕ: 799 ಡಾಲರ್‌
    ಜಪಾನ್‌ : 129,800 ಜಪಾನ್‌ ಯೆನ್‌
    ಯುಎಇ: 3,099 ದಿರ್ಹಮ್
    ಜರ್ಮನಿ: 949 ಯುರೋ
    ಯುಕೆ: 949 ಪೌಂಡ್‌

    ಐಫೋನ್‌ ಏರ್‌
    256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್‌
    ಭಾರತ: 1,19,990 ರೂ.
    ಅಮೆರಿಕ: 999 ಡಾಲರ್‌
    ಜಪಾನ್‌ : 1,59,800 ಜಪಾನ್‌ ಯೆನ್‌
    ಯುಎಇ: 3,499 ದಿರ್ಹಮ್
    ಜರ್ಮನಿ: 1,199 ಯುರೋ
    ಯುಕೆ: 999 ಪೌಂಡ್‌

    ಐಫೋನ್‌ 17 ಪ್ರೋ
    6.3 ಇಂಚಿನ ಸ್ಕ್ರೀನ್‌, 256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್‌
    ಭಾರತ: 1,34,990 ರೂ.
    ಅಮೆರಿಕ: 1,099 ಡಾಲರ್‌
    ಜಪಾನ್‌ : 1,79,800 ಜಪಾನ್‌ ಯೆನ್‌
    ಯುಎಇ: 4,299 ದಿರ್ಹಮ್
    ಜರ್ಮನಿ: 1299 ಯುರೋ
    ಯುಕೆ: 1,099 ಪೌಂಡ್‌

    ಐಫೋನ್‌ 17 ಪ್ರೋ ಮ್ಯಾಕ್ಸ್‌
    6.9 ಇಂಚಿನ ಸ್ಕ್ರೀನ್‌, 256 ಜಿಬಿ ಆಂತರಿಕ ಮೆಮೊರಿ/ 12 ಜಿಬಿ ರ‍್ಯಾಮ್‌
    ಭಾರತ: 1,49,990 ರೂ.
    ಅಮೆರಿಕ: 1,999 ಡಾಲರ್‌
    ಜಪಾನ್‌ : 1,94,800 ಜಪಾನ್‌ ಯೆನ್‌
    ಯುಎಇ: 4,699 ದಿರ್ಹಮ್
    ಜರ್ಮನಿ: 1,449 ಯುರೋ
    ಯುಕೆ: 1,199 ಪೌಂಡ್‌  ಇದನ್ನೂ ಓದಿ:  ಇದನ್ನೂ ಓದಿ: ಆಪಲ್‌ ಐಫೋನ್‌ 17, 17 ಪ್ರೋ, 17 ಮ್ಯಾಕ್ಸ್‌, ಐಫೋನ್‌ ಏರ್‌ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?  ಭಾರತದಲ್ಲಿ ದರ ಎಷ್ಟು?

    ಯಾವ ದೇಶದಲ್ಲಿ ಕಡಿಮೆ ದರ?
    ಈ ಮೇಲಿನ ದರ ನೋಡಿದರೆ ಐಫೋನ್‌ 17ಕ್ಕೆ ಭಾರತದಲ್ಲಿ 82,900 ರೂ. ದರ ಇದೆ. ಜಪಾನಿನ ದರಕ್ಕೆ ಹೋಲಿಕೆ ಮಾಡಿದರೆ 78,800 ರೂ, ಯುಎಇ ಅಂದಾಜು 75,000 ರೂ., ಜರ್ಮನಿಯಲ್ಲಿ ಅಂದಾಜು 98,000 ರೂ., ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಅಂದಾಜು 1,14,000 ರೂ. ಆಗಲಿದೆ.

    ಐಫೋನ್‌ ಬೆಲೆ ಅಮೆರಿಕದಲ್ಲಿ ಕಡಿಮೆಯಿದೆ ಅಲ್ಲಿ ಅಂದಾಜು 70,432 ರೂ.ಗೆ ಐಫೋನ್‌ ಸಿಗುತ್ತಿದೆ. ಹೊಸ ಐಫೋನ್‌ ಪೈಕಿ ಇಸಿಮ್‌ ಮಾದರಿಯ ಫೋನ್‌ಗಳು ಅಮೆರಿಕದಲ್ಲಿ ಮಾತ್ರ ಲಭ್ಯವಿದೆ.

    ಬೆಲೆ ಏರಿಕೆಗೆ ಕಾರಣ ಏನು?
    ಭಾರತದಲ್ಲಿ ಐಫೋನ್‌ ಉತ್ಪಾದನೆಯಾದರೂ ಹಲವು ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಬಕಾರಿ ಸುಂಕ ಪಾವತಿ ಮಾಡಿದ ಬಳಿಕ ವಸ್ತುಗಳು ಭಾರತಕ್ಕೆ ಆಮದು ಆಗುತ್ತಿದೆ. ಆಮದು ಮಾಡಿಕೊಳ್ಳುವ ವಸ್ತುಗಳಿಗೆ ತೆರಿಗೆ ಹಾಕುವುದರಿಂದ ಅದನ್ನು ಗ್ರಾಹಕರ ಮೇಲೆಯೇ ಹಾಕುತ್ತದೆ. ಫೋನ್‌ಗಳ ಮೇಲೆ ಶೇ.18 ಜಿಎಸ್‌ಟಿ ಇದೆ. ಅಬಕಾರಿ ಸುಂಕವನ್ನು ಕಂಪನಿಗಳು ಹಾಕುವ ಪರಿಣಾಮ ಫೋನ್‌ ಬೆಲೆ ಶೇ.35 ರಷ್ಟು ಹೆಚ್ಚಿರುತ್ತದೆ.

    ಅಮೆರಿಕ, ಜಪಾನ್‌, ಚೀನಾಗೆ ಹೋಲಿಸಿದರೆ ಭಾರತದಲ್ಲಿ ಐಫೋನ್‌ ಬಳಕೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಬೇಡಿಕೆ ಜಾಸ್ತಿ ಇದ್ದಾಗ ಫೋನ್‌ಗಳ ಬೆಲೆ ಕಡಿಮೆ ಇರುವುದು ಸಾಮಾನ್ಯ. ಭಾರತದಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ಬೆಲೆ ಜಾಸ್ತಿ ಇದೆ.

    ಆಪಲ್‌ ಭಾರತದಲ್ಲಿ ವಿಶೇಷ ಮಾರುಕಟ್ಟೆ ತಂತ್ರವನ್ನು ಬಳಕೆ ಮಾಡುತ್ತಿದೆ. ಹೊಸ ಐಫೋನ್‌ ಬಿಡುಗಡೆ ಮಾಡುವ ಸಮಯದಲ್ಲಿ ಹಳೆಯ ಐಫೋನ್‌ ಬೆಲೆಗಳು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡುತ್ತದೆ. ಆದರೆ ಬೇರೆ ಕಂಪನಿಗಳ ಫೋನ್‌ ದರಗಳು ಇಳಿಕೆಯಾದರೂ ಅಷ್ಟೊಂದು ದರ ಇಳಿಕೆಯಾಗುವುದಿಲ್ಲ.

    ಡಾಲರ್‌ ಬೆಲೆ ಏರಿಕೆಯಾದಂತೆ ಇಲ್ಲೂ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಕಾರಣದಿಂದ ಭಾರತದಲ್ಲೂ ಐಫೋನ್‌ ದರ ಹೆಚ್ಚಿರುತ್ತದೆ.

  • ಬೆಂಗಳೂರಿನಲ್ಲಿ ಹೊಸ ಆ್ಯಪಲ್ ಕಚೇರಿ – ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ

    ಬೆಂಗಳೂರಿನಲ್ಲಿ ಹೊಸ ಆ್ಯಪಲ್ ಕಚೇರಿ – ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ

    – 10 ವರ್ಷಕ್ಕೆ 1,000 ಕೋಟಿ ರೂ. ವೆಚ್ಚ

    ನವದೆಹಲಿ: ಐಫೋನ್ ತಯಾರಕ ಆ್ಯಪಲ್ (Apple) ಕಂಪನಿ ಬೆಂಗಳೂರಿನ ಡೌನ್‌ಟೌನ್‌ನಲ್ಲಿರುವ ಮಿನ್ಸ್ಕ್ ಸ್ಕ್ವೇರ್‌ನಲ್ಲಿ ಹೊಸ ಕಚೇರಿಯನ್ನು ತೆರೆದಿದೆ. ಸುಮಾರು 2.7 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು 10 ವರ್ಷಗಳ ಕಾಲ ಲೀಸ್‌ಗೆ (Lease) ಪಡೆದಿದ್ದು, ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ (Rent) ಪಾವತಿಸಲಿದೆ ಎಂದು ಡೇಟಾ ಅನಾಲಿಟಿಕ್ಸ್ ಸಂಸ್ಥೆ ಪ್ರಾಪ್‌ಸ್ಟ್ಯಾಕ್ ತಿಳಿಸಿದೆ.

    ಬೆಂಗಳೂರಿನ ವಸಂತ ನಗರದ ಸ್ಯಾಂಕಿ ರಸ್ತೆಯಲ್ಲಿರುವ ಎಂಬೆಸಿ ಜೆನಿತ್ ಕಟ್ಟಡದ 5ರಿಂದ 13ನೇ ಮಹಡಿಯಲ್ಲಿ ಆಪಲ್‌ನ ಹೊಸ ಕಚೇರಿಯಿದೆ. ಈ ಎಲ್ಲ ಮಹಡಿಗಳಿಗೆ ಕಂಪನಿಯು ಪಾರ್ಕಿಂಗ್, ನಿರ್ವಹಣಾ ಶುಲ್ಕಾ ಸೇರಿದಂತೆ ಮಾಸಿಕ 6.31 ಕೋಟಿ ರೂ.ಗಳ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಪ್ರತಿ ಚದರ ಅಡಿಗೆ 235 ರೂ. ಬಾಡಿಗೆ ಬೀಳಲಿದೆ. ಇದನ್ನೂ ಓದಿ: Asia Cup 2025: ಟೀಂ ಇಂಡಿಯಾ ಪ್ರಕಟ- ಸೂರ್ಯಕುಮಾರ್‌ ನಾಯಕ, ಕನ್ನಡಿಗ ವರುಣ್‌ಗೆ ಸ್ಥಾನ

    ರಿಯಲ್ ಎಸ್ಟೇಟ್ ಸಂಸ್ಥೆ ಎಂಬಸಿ ಗ್ರೂಪ್‌ನಿಂದ (Embassy Group) ಕಾರ್ ಪಾರ್ಕಿಂಗ್ ಸ್ಥಳ ಸೇರಿದಂತೆ ಬಹು ಮಹಡಿ ಕಟ್ಟಡವನ್ನು ಆ್ಯಪಲ್ ಕಂಪನಿ 10 ವರ್ಷಗಳ ಕಾಲ ಗುತ್ತಿಗೆಗೆ ತೆಗೆದುಕೊಂಡಿದೆ. ಆ್ಯಪಲ್ ಕಂಪನಿ 31.57 ಕೋಟಿ ರೂ. ಭದ್ರತಾ ಠೇವಣಿ ಇಟ್ಟಿದೆ. ವಾರ್ಷಿಕ ಬಾಡಿಗೆ 4.5%ರಷ್ಟು ಹೆಚ್ಚಳವಾಗಲಿದೆ. ಈ ವರ್ಷದ ಏಪ್ರಿಲ್ 3ರಿಂದ ಲೀಸ್ ಪ್ರಾರಂಭವಾಗಿದ್ದು, ಜುಲೈನಲ್ಲಿ ನೋಂದಾಯಿಸಲಾಗಿದೆ. ಆಪಲ್ 1.5 ಕೋಟಿ ರೂ.ಗಳ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದೆ ಎಂದು ದಾಖಲೆಗಳು ಬಹಿರಂಗಪಡಿಸಿವೆ. ಇದನ್ನೂ ಓದಿ: ಎಸ್‌ಸಿ ಒಳಮೀಸಲಾತಿ ಜಾರಿಗೆ ವಿಶೇಷ ಸಭೆ; 101 ಜಾತಿಗಳಿಗೂ ನ್ಯಾಯ ಕೊಡಿ: ವಿಜಯೇಂದ್ರ ಆಗ್ರಹ

    2024-25ರ ಆರ್ಥಿಕ ವರ್ಷದಲ್ಲಿ ಆ್ಯಪಲ್ ಕಂಪನಿ ಸುಮಾರು 1.5 ಲಕ್ಷ ಕೋಟಿ ರೂ. ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ ಪವರ್‌ ಕಟ್‌?

  • Uttar Pradesh | ರೀಲ್ಸ್ ಮಾಡೋಕೆ ಐಫೋನ್‌ಗಾಗಿ ಬೆಂಗಳೂರು ಯುವಕನ ಕೊಲೆ

    Uttar Pradesh | ರೀಲ್ಸ್ ಮಾಡೋಕೆ ಐಫೋನ್‌ಗಾಗಿ ಬೆಂಗಳೂರು ಯುವಕನ ಕೊಲೆ

    ಲಕ್ನೋ: ರೀಲ್ಸ್ ಮಾಡಲು ಐಫೋನ್‌ಗಾಗಿ ಬೆಂಗಳೂರು (Bengaluru) ಯುವಕನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಹ್ರೈಚ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮೃತ ವ್ಯಕ್ತಿಯನ್ನು ಬೆಂಗಳೂರು ಮೂಲದ ಶಾದಾಬ್ (19) ಎಂದು ಗುರುತಿಸಲಾಗಿದೆ. ಮಾವನ ಮದುವೆಗಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: ಅರೇರೇ ಯಾರೋ ಇವಳು ಅಂತಿದ್ದಾರೆ ವಿನಯ್ ರಾಜ್ ಕುಮಾರ್!

    ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡೋದು, ಲೈಕ್ಸ್ ಪಡೆಯೋದು ಟ್ರೆಂಡ್ ಆಗಿಬಿಟ್ಟಿದೆ. ಇದೀಗ ರೀಲ್ಸ್ ಮಾಡೋಕೆ ಐಫೋನ್‌ಗಾಗಿ ಒಂದು ಕೊಲೆಯೇ ನಡೆದುಬಿಟ್ಟಿದೆ. ಹೌದು. ಉತ್ತರ ಪ್ರದೇಶದ ಇಬ್ಬರು ಅಪ್ರಾಪ್ತರಿಗೆ ರೀಲ್ಸ್ ಮಾಡೋದಕ್ಕೆ ಐಫೋನ್ ಬೇಕಿತ್ತು. ಇದೇ ವೇಳೆ ಮೃತ ಯುವಕ ತಮ್ಮ ಮಾವನ ಮದುವೆಗಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದ. ಯುವಕನ ಬಳಿ ಐಫೋನ್ ಇರೋದನ್ನ ಕಂಡ ಅಪ್ರಾಪ್ತರು ಕೊಲೆಗೆ ಸಂಚು ರೂಪಿಸಿದ್ರು.

    ಕೊಲೆ ನಡೆದಿದ್ದು ಹೇಗೆ?
    ಮಾವನ ಮದುವೆಗಾಗಿ ಬೆಂಗಳೂರು ಮೂಲದ ಶಾದಾಬ್ ಬಹ್ರೈಚ್‌ಗೆ ಬಂದಿದ್ದ. ಆತನ ಬಳಿ ಐಫೋನ್ ಇರೋದನ್ನ ಕಂಡ ಅಪ್ರಾಪ್ತರು. ಮಾರನೇ ದಿನ ಮೃತ ಶಾಬಾದ್‌ನನ್ನ ವಿಡಿಯೋ ಶೂಟ್ ಮಾಡ್ಬೇಕು ಅಂತ ಹೇಳಿ, ಗ್ರಾಮದ ಹೊರಗಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಅಲ್ಲೇ ಅವನ ಮೇಲೆ ದಾಳಿ ನಡೆಸಿದ್ದಾರೆ. ಕತ್ತು ಸೀಳಿ, ಬಳಿಕ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಅಪ್ರಾಪ್ತರ ಸಂಬಂಧಿಕರು ಚಾಕು ಮುಚ್ಚಿಡಲು ಸಹಾಯ ಮಾಡಿ, ನಾಲ್ವರು ಪರಾರಿಯಾಗಿದ್ದಾರೆ.

    ಜೂ.20ರಂದು ಕೊಳವೆ ಬಾವಿಯ ಬಳಿ ಆತನ ಶವ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ಸದ್ಯ ಇಬ್ಬರು ಅಪ್ರಾಪ್ತರು ಹಾಗೂ ಅವರ ಸಂಬಂಧಿಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಇಬ್ಬರು ಅಪ್ರಾಪ್ತರು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಮೃತ ಯುವಕ ಊರಿಗೆ ಬಂದಾಗ ಆತನ ಬಳಿಯಿರುವ ಐಫೋನ್ ನೋಡಿ, ನಾಲ್ಕು ದಿನಗಳ ಹಿಂದೆಯೇ ಕೊಲೆಗೆ ಸಂಚು ಹಾಕಿರುವುದಾಗಿ ತಿಳಿಸಿದ್ದಾರೆ. ಇಬ್ಬರಿಂದ ಐಫೋನ್, ಕೊಲೆಗೆ ಬಳಸಿದ ಚಾಕು ಹಾಗೂ ಇಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ.

    ಸದ್ಯ ಇನ್ನೋರ್ವನಿಗಾಗಿ ಹುಡುಕಾಟ ನಡೆಸಿದ್ದು, ನಾಲ್ವರ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಅಪ್ರಾಪ್ತರನ್ನು ಬಾಲಾಪರಾಧಿ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಓರ್ವ ಸಂಬಂಧಿಯನ್ನ ಜೈಲಿಗೆ ಕಳುಹಿಸಲಾಗಿದೆ.ಇದನ್ನೂ ಓದಿ: ಮೂರು ಮೆಗಾ ಪ್ರಾಜೆಕ್ಟ್ ಒಪ್ಪಿದ ಧ್ರುವ ಸರ್ಜಾ

  • ಟ್ರಂಪ್‌ ಹೆಸರಿನಲ್ಲಿ ಫೋನ್‌ –  ಮೊಬೈಲ್‌ ಉದ್ಯಮಕ್ಕೆ ಕಾಲಿಟ್ಟ ಟ್ರಂಪ್‌ | ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಟ್ರಂಪ್‌ ಹೆಸರಿನಲ್ಲಿ ಫೋನ್‌ – ಮೊಬೈಲ್‌ ಉದ್ಯಮಕ್ಕೆ ಕಾಲಿಟ್ಟ ಟ್ರಂಪ್‌ | ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ವಾಷಿಂಗ್ಟನ್‌: ಐಫೋನ್‌ಗಳನ್ನು (iPhone) ಅಮೆರಿಕದಲ್ಲಿ ಉತ್ಪಾದನೆ ಮಾಡುವಂತೆ ಆಪಲ್‌ಗ ಸೂಚಿಸಿದ್ದ ಡೊನಾಲ್ಡ್‌ ಟ್ರಂಪ್‌ (Donald Trump) ಈಗ ಮೊಬೈಲ್‌ ಫೋನ್‌ ಮತ್ತು ವಯರ್‌ಲೆಸ್‌ ಸೇವಾ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಟ್ರಂಪ್‌ ಕುಟುಂಬ ಈಗ Trump Mobile T1 Phone ಹೆಸರಿನಲ್ಲಿ ಆಂಡ್ರಾಯ್ಡ್‌ ಫೋನ್‌ ಮಾರುಕಟ್ಟೆ ಬಿಡುಗಡೆ ಮಾಡಿದೆ.

    ಚಿನ್ನದ ಬಣ್ಣದ ಫೋನ್‌ ಇದಾಗಿದ್ದು 499 ಡಾಲರ್‌ (ಅಂದಾಜು 43,000 ರೂ.) ದರವನ್ನು ನಿಗದಿ ಮಾಡಲಾಗಿದೆ. ಈ ಫೋನನ್ನು ಅಮೆರಿಕದಲ್ಲೇ ಉತ್ಪಾದನೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. The Trump Organization ನಲ್ಲಿ ಎರಿಕ್‌ ಟ್ರಂಪ್‌ ಮತ್ತು ಡೊನಾಲ್ಡ್‌ ಟ್ರಂಪ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.

    T1 ಮೊಬೈಲ್ ಸೇವೆಯು ʼ47 ಪ್ಲಾನ್ʼ ಹೆಸರಿನ ಸೇವೆಯನ್ನು ನೀಡುತ್ತಿದೆ. ಟ್ರಂಪ್‌ ಅಮೆರಿಕದ 47ನೇ ಅಧ್ಯಕ್ಷರಾಗಿದ್ದಾರೆ. ಈ ಕಾರಣಕ್ಕೆ ಈ ಸೇವೆಗೆ 47 ಪ್ಲಾನ್‌ ಎಂಬ ಹೆಸರನ್ನು ಇಡಲಾಗಿದೆ

    ಟ್ರಂಪ್ ಮೊಬೈಲ್ ವರ್ಚುವಲ್ ಆಪರೇಟರ್ ಆಗಿ ಕೆಲಸ ಮಾಡುತ್ತದೆ. ಅಂದರೆ ಇದು ಅಮೆರಿಕದ ಟೆಲಿಕಾಂ ದೈತ್ಯ ಕಂಪನಿಗಳಾದ Verizon, AT&T ಮತ್ತು T-Mobile ನಿಯಂತ್ರಿಸುವ ನೆಟ್‌ವರ್ಕ್‌ಗಳ ಮೂಲಕ ಸೇವೆಗಳನ್ನು ನೀಡುತ್ತದೆ. 5G ಸೇವೆಗೆ ಮಾಸಿಕ 47.45 ಡಾಲರ್‌(4,097 ರೂ.) ದರವನ್ನು ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಇರಾನ್‌ ಜನ ತಕ್ಷಣವೇ ಟೆಹ್ರಾನ್‌ ಖಾಲಿ ಮಾಡಿ: ಟ್ರಂಪ್‌ ಸೂಚನೆ


    ಫೋನಿನ ಗುಣವೈಶಿಷ್ಟ್ಯಗಳೇನು?
    6.78 ಇಂಚಿನ AMOLED ಸ್ಕ್ರೀನ್‌, 1080 x 2460 ಪಿಕ್ಸೆಲ್‌, ~396 ಪಿಪಿಐ ಹೊಂದಿದೆ. ನ್ಯಾನೋ ಸಿಮ್‌ + ಇ ಸಿಮ್‌ ಹಾಕಬಹುದಾಗಿದ್ದು ಅಕ್ಟಾಕೋರ್‌ ಪ್ರೊಸೆಸರ್‌ನೊಂದಿಗೆ ಬಂದಿದೆ.

    ಆಂಡ್ರಾಯ್ಡ್‌ 15 ಆಪರೇಟಿಂಗ್‌ ಸಿಸ್ಟಂ,  12GB RAM, 256GB ಆಂತರಿಕ ಮೆಮೊರಿ ಹೊಂದಿದ್ದು ಕಾರ್ಡ್‌ ಮೂಲಕ ಹೆಚ್ಚುವರಿ ಮೆಮೊರಿ ವಿಸ್ತರಿಸಬಹುದಾಗಿದೆ.  ಇದನ್ನೂ ಓದಿ: ಟ್ರಂಪ್‌ 25% ಸುಂಕ ಹೇರಿದ್ರೂ ಭಾರತದ ಐಫೋನ್‌ ಚೀಪ್‌ – ಅಮೆರಿಕದ್ದು ದುಬಾರಿ

    ಹಿಂದು ಗಡೆ 50 ಎಂಪಿ (ವೈಡ್‌), 2 ಎಂಪಿ(ಮ್ಯಾಕ್ರೋ), 2 ಎಂಪಿ(ಡೆಪ್ತ್)‌ ಕ್ಯಾಮೆರಾವನ್ನು ನೀಡಲಾಗಿದೆ. ಮುಂದುಗಡೆ 16 ಎಂಪಿ ಕ್ಯಾಮೆರಾವನ್ನು ಹೊಂದಿದೆ.  ಫೋನಿಗೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಜೊತೆ 5000 mAh ಬ್ಯಾಟರಿಯನ್ನು ನೀಡಲಾಗಿದೆ.

    ಈ ಫೋನ್‌ ಖರೀದಿಸುವ ಗ್ರಾಹಕರು www.trumpmobile.com ಹೋಗಿ ಪ್ರಿ ಆರ್ಡರ್‌ ಮಾಡಬಹುದಾಗಿದೆ.

  • ಟ್ರಂಪ್‌ 25% ಸುಂಕ ಹೇರಿದ್ರೂ ಭಾರತದ ಐಫೋನ್‌ ಚೀಪ್‌ – ಅಮೆರಿಕದ್ದು ದುಬಾರಿ

    ಟ್ರಂಪ್‌ 25% ಸುಂಕ ಹೇರಿದ್ರೂ ಭಾರತದ ಐಫೋನ್‌ ಚೀಪ್‌ – ಅಮೆರಿಕದ್ದು ದುಬಾರಿ

    ನವದೆಹಲಿ: ಭಾರತದಲ್ಲಿ ಉತ್ಪಾದನೆಯಾದ ಐಫೋನ್‌ಗಳಿಗೆ (iPhone) ಡೊನಾಲ್ಡ್‌ ಟ್ರಂಪ್‌ 25% ತೆರಿಗೆ ವಿಧಿಸಿದರೂ ಅಮೆರಿಕದಲ್ಲಿ (USA) ಉತ್ಪಾದನೆಯಾದ ಐಫೋನ್‌ಗಳಿಗೆ ಹೋಲಿಕೆ ಮಾಡಿದರೆ ದರ ಕಡಿಮೆ ಇರಲಿದೆ ಎಂದು ಗ್ಲೋಬಲ್‌ ಟ್ರೇಡ್‌ ರಿಸರ್ಚ್‌ ಇನಿಶಿಟೇಟಿವ್‌ (GTRI) ಹೇಳಿದೆ.

    ಐಫೋನ್‌ ಉತ್ಪಾದನಾ ವೆಚ್ಚ ಅಮೆರಿಕಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ (India) ಬಹಳ ಕಡಿಮೆಯಿದೆ ಎಂದು ತಿಳಿಸಿದೆ.

    ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಭಾರತದಲ್ಲಿ ಉತ್ಪಾದನೆಯಾದ ಐಫೋನ್‌ಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಿದರೆ 25% ತೆರಿಗೆ ವಿಧಿಸುವುದಾಗಿ ಆಪಲ್‌ ಕಂಪನಿ ಎಚ್ಚರಿಕೆ ನೀಡಿದ್ದಾರೆ. ಆಪಲ್‌ ಚೀನಾದಲ್ಲಿ ಐಫೋನ್‌ ಘಟಕ ತೆಗೆದ ಬಳಿಕ ಚೀನಾ ಅಭಿವೃದ್ಧಿಯಾಗಿದೆ. ಭಾರತದಲ್ಲಿ ತಮ್ಮ ಆಪಲ್‌ ಉದ್ಯಮವನ್ನು ವಿಸ್ತರಿಸುವುದಕ್ಕೆ ನನ್ನ ಆಕ್ಷೇಪವಿದೆ. ಭಾರತವು ತನ್ನನ್ನು ತಾನು ನೋಡಿಕೊಳ್ಳುವ ದೇಶವಾಗಿದೆ. ನೀವ್ಯಾಕೆ ಅಮೆರಿಕದಲ್ಲಿ ಘಟಕವನ್ನು ತೆರೆಯಬಾರದು ಎಂದು ಸಿಇಒ ಟಿಮ್‌ ಕುಕ್‌ ಅವರನ್ನು ಟ್ರಂಪ್‌ ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

    ಭಾರತದಲ್ಲಿ ವೆಚ್ಚ ಕಡಿಮೆ ಯಾಕೆ?
    ಭಾರತದಲ್ಲಿ ಫೋನ್‌ ಬಿಡಿ ಭಾಗಗಳಲ್ಲಿ ಜೋಡಿಸುವರಿಗೆ ತಿಂಗಳಿಗೆ 230 ಡಾಲರ್‌ (ಅಂದಾಜು 20 ಸಾವಿರ ರೂ.) ವೇತನ ಇದೆ. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇದೇ ಕೆಲಸ ಮಾಡುವವರಿಗೆ ತಿಂಗಳಿಗೆ 2,900 ಡಾಲರ್‌ ವೇತನ (2.46 ಲಕ್ಷ ರೂ.)ಪಾವತಿಸಬೇಕಾಗುತ್ತದೆ.

    ಭಾರತದಲ್ಲಿ ಒಂದು ಐಫೋನ್‌ ಜೋಡಣೆಗೆ ಅಂದಾಜು 30 ಡಾಲರ್‌ (2,500 ರೂ.) ಖರ್ಚಾದರೆ ಅಮೆರಿಕದಲ್ಲಿ ಒಂದು ಐಫೋನ್‌ ಜೋಡನೆಗೆ 390 ಡಾಲರ್‌ (33,200 ರ.) ವೆಚ್ಚವಾಗಲಿದೆ. ಅಷ್ಟೇ ಅಲ್ಲದೇ ಭಾರತ ಸರ್ಕಾರ Production Linked Incentive (PLI) ಅಡಿ ಹಲವು ರಿಯಾಯಿತಿಗಳು ಸಹ ಸಿಗುತ್ತಿದೆ.

    ಒಂದು ವೇಳೆ ಆಪಲ್‌ ತನ್ನ ಐಫೋನ್ ಜೋಡಣೆಯನ್ನು ಅಮೆರಿಕಕ್ಕೆ ಸ್ಥಳಾಂತರಿಸಿದರೆ, ಪ್ರತಿ ಐಫೋನ್‌ನ ಲಾಭವು ಪ್ರತಿ ಯೂನಿಟ್‌ಗೆ 450 ಡಾಲರ್‌ನಿಂದ ಕೇವಲ 60 ಡಾಲರ್‌ಗೆ ಇಳಿಯಲಿದೆ. ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾದರೆ ಐಫೋನ್‌ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಬೇಕಾಗುತ್ತದೆ.

    ಭಾರತಕ್ಕೆ ಎಷ್ಟು ಹಣ ಸಿಗುತ್ತೆ?
    1,000 ಡಾಲರ್‌ ಮೌಲ್ಯದ ಒಂದು ಐಫೋನ್‌ನಿಂದಾಗಿ ಹಲವು ದೇಶಗಳಿಗೆ ಆದಾಯ ಸಿಗುತ್ತದೆ. ಆಪಲ್‌ ಕಂಪನಿ 450 ಡಾಲರ್‌ ಲಾಭ ಪಡೆದರೆ ಅಮೆರಿಕದ ಕ್ವಾಲ್ಕಾಮ್ ಮತ್ತು ಬ್ರಾಡ್‌ಕಾಮ್ ಸುಮಾರು 80 ಡಾಲರ್‌ ಪಡೆಯುತ್ತದೆ. ಚಿಪ್ ತಯಾರಿಕೆಯಿಂದ ತೈವಾನ್‌ಗೆ 150 ಡಾಲರ್‌, OLED ಪರದೆಗಳು ಮತ್ತು ಮೆಮೊರಿ ಚಿಪ್‌ಗಳಿಂದಾಗಿ ದಕ್ಷಿಣ ಕೊರಿಯಾಗೆ 90 ಡಾಲರ್‌, ಕ್ಯಾಮೆರಾ ಲೆನ್ಸ್‌ನಿಂದಾಗಿ ಜಪಾನ್‌ 85 ಡಾಲರ್‌ ಪಡೆಯುತ್ತದೆ.

    ಭಾರತ ಮತ್ತು ಚೀನಾ ಜೋಡಿಸುವ ಪ್ರತಿ ಯೂನಿಟ್‌ಗೆ ಸುಮಾರು 30 ಡಾಲರ್‌ (2,500 ರೂ.) ಗಳಿಸುತ್ತವೆ. ಇದು ಐಫೋನ್‌ನ ಚಿಲ್ಲರೆ ಮೌಲ್ಯದ 3% ಕ್ಕಿಂತ ಕಡಿಮೆ. ಆದರೆ ಐಫೋನ್ ಜೋಡಣೆಯಿಂದಾಗಿ ಭಾರತದಲ್ಲಿ ಸುಮಾರು 60,000 ಉದ್ಯೋಗ ಸೃಷ್ಟಿಯಾದರೆ ಚೀನಾದಲ್ಲಿ 3,00,000 ಉದ್ಯೋಗ ಸೃಷ್ಟಿಯಾಗಿದೆ.

  • ಭಾರತದಲ್ಲಿ ಐಫೋನ್‌ ತಯಾರಿಸಿದರೆ 25% ಸುಂಕ – ಆಪಲ್‌ಗೆ ಟ್ರಂಪ್‌ ವಾರ್ನಿಂಗ್‌

    ಭಾರತದಲ್ಲಿ ಐಫೋನ್‌ ತಯಾರಿಸಿದರೆ 25% ಸುಂಕ – ಆಪಲ್‌ಗೆ ಟ್ರಂಪ್‌ ವಾರ್ನಿಂಗ್‌

    ವಾಷಿಂಗ್ಟನ್‌: ಭಾರತ (India) ಅಥವಾ ಬೇರೆ ಎಲ್ಲಿಯಾದರೂ ಐಫೋನ್‌ (iPhone) ತಯಾರಿಸಿದರೆ 25% ಸುಂಕವನ್ನು ವಿಧಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಆಪಲ್‌ ಕಂಪನಿಗೆ ಎಚ್ಚರಿಕೆ ನೀಡಿದ್ದಾರೆ.

    ಕಳೆದ ಒಂದು ವಾರದಲ್ಲಿ ಟ್ರಂಪ್‌ ಭಾರತದಲ್ಲಿ ಐಫೋನ್‌ ಫ್ಯಾಕ್ಟರಿ ತೆರೆಯಬೇಡಿ ಎಂದು ಟ್ರಂಪ್‌ ಹೇಳುತ್ತಿರುವುದು ಇದು ಎರಡನೇ ಬಾರಿ. ಭಾರತ ಅಥವಾ ಬೇರೆಲ್ಲಿಯಾದರೂ ತಯಾರಿಸಿದ ಐಫೋನ್‌ಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಿದರೆ 25% ಸುಂಕವನ್ನು ಎದುರಿಸಬೇಕಾಗುತ್ತದೆ. ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಅಮೆರಿಕದಲ್ಲಿ ತಯಾರಾಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜೈಶಂಕರ್‌ ಕರೆ ಬೆನ್ನಲ್ಲೇ ತಾಲಿಬಾನ್‌ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್‌ ಜೊತೆ ಕೈ ಕುಲುಕಿಸಿದ ಚೀನಾ!

    ನಾನು ಆಪಲ್‌ ಸಿಇಒ ಟಿಮ್ ಕುಕ್‌ಗೆ ಬಹಳ ಹಿಂದೆಯೇ ತಿಳಿಸಿದ್ದೇನೆ. ಆಪಲ್‌ ಫೋನ್‌ಗಳು ಅಮೆರಿಕದಲ್ಲೇ ತಯಾರಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

    ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹಾಳಾಗುತ್ತಿದ್ದ ಬೆನ್ನಲ್ಲೇ ಆಪಲ್‌ ಭಾರತದಲ್ಲಿ ಐಫೋನ್‌ ಉತ್ಪಾದನಾ ಘಟಕಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಟ್ರಂಪ್‌ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ. ಇದನ್ನೂ ಓದಿ: ಜೈಶಂಕರ್‌ ಕರೆ ಬೆನ್ನಲ್ಲೇ ತಾಲಿಬಾನ್‌ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್‌ ಜೊತೆ ಕೈ ಕುಲುಕಿಸಿದ ಚೀನಾ!

    ಈ ಹಿಂದೆ ಟ್ರಂಪ್‌, ಭಾರತ ಮತ್ತೊಂದು ಚೀನಾ ಆಗುವುದು ಬೇಡ. ಆಪಲ್‌ ಭಾರತದಲ್ಲಿ ಹೂಡಿಕೆ ಮಾಡುವ ಅಗತ್ಯವಿಲ್ಲ. ಆಪಲ್‌ ಅಮೆರಿಕದಲ್ಲಿ ಹೂಡಿಕೆ ಮಾಡಬೇಕು. ಇಲ್ಲಿನ ಜನರಿಗೆ ಉದ್ಯೋಗ ನೀಡಬೇಕು ಎಂದು ಹೇಳಿದ್ದರು.

  • ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ಗಳಿಗೆ ಸುಂಕ ವಿನಾಯ್ತಿ – ಆ್ಯಪಲ್ ಸೇರಿ ಹಲವು ಕಂಪನಿಗಳು ಸೇಫ್‌

    ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ಗಳಿಗೆ ಸುಂಕ ವಿನಾಯ್ತಿ – ಆ್ಯಪಲ್ ಸೇರಿ ಹಲವು ಕಂಪನಿಗಳು ಸೇಫ್‌

    ವಾಷಿಂಗ್ಟನ್: ಚೀನಾ ಮೇಲೆ 145% ರಷ್ಟು ತೆರಿಗೆ ಹೇರಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್, ಚಿಪ್ ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ಸುಂಕವನ್ನು ಕೈಬಿಟ್ಟಿದ್ದಾರೆ.

    ಎಲೆಕ್ಟ್ರಾನಿಕ್ಸ್ ವಸ್ತುಗಳ ಸುಂಕವನ್ನು ಕೈಬಿಟ್ಟ ನಿರ್ಧಾರದಿಂದ ಚೀನಾದಲ್ಲಿ ಅತಿ ಹೆಚ್ಚು ಐಫೋನ್ (iPhone) ಉತ್ಪಾದನೆ ಮಾಡುತ್ತಿದ್ದ ಆ್ಯಪಲ್ ಕಂಪನಿ ಸೇರಿ ಹಲವು ಕಂಪನಿಗಳು ದರ ಏರಿಕೆಯ ಬರೆಯಿಂದ ಪಾರಾಗಿವೆ. ಇದನ್ನೂ ಓದಿ: ‘ಆಪಲ್‌’ ಮೇಲೆ ಟ್ರಂಪ್‌ ಟ್ಯಾರಿಫ್‌ ಎಫೆಕ್ಟ್‌; ಮುಂದಿನ ಐಫೋನ್‌ ಉತ್ಪಾದನಾ ಕೇಂದ್ರವಾಗುತ್ತಾ ಭಾರತ?

    ಚೀನಾ ಮೇಲೆ 145% ರಷ್ಟು ತೆರಿಗೆ ಘೋಷಣೆಯಿಂದ ಅಮೆರಿಕ ಮೂಲದ ಕಂಪನಿ ಆ್ಯಪಲ್‌ಗೆ ಸಮಸ್ಯೆಯಾಗಿತ್ತು. ಐಫೋನ್ ದರ 50%ರಷ್ಟು ಹೆಚ್ಚುವ ಸಾಧ್ಯತೆ ಇತ್ತು. ಈಗ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನ್ನು ಸುಂಕದ ಪಟ್ಟಿಯಿಂದ ತೆಗೆಯಲಾಗಿದೆ. ಇನ್ನೂ ಚೀನಾ ಮೇಲಿನ 145% ಸುಂಕ ಮಾತ್ರವಲ್ಲ, ಇತರ ದೇಶಗಳ ಮೇಲಿನ 10% ರಷ್ಟು ಮೂಲ ಸುಂಕ ದರವೂ ಇವುಗಳಿಗೆ ಅನ್ವಯ ಆಗುವುದಿಲ್ಲ ಎಂದು ಅಮೆರಿಕ ತಿಳಿಸಿದೆ. ಇದನ್ನೂ ಓದಿ: Donald Trump | ಭಾರತ ಸೇರಿದಂತೆ ಅಮೆರಿಕದಲ್ಲಿರುವ ವಿದೇಶಿಗರು 24×7 ವೀಸಾ ಹೊಂದಿರಬೇಕು

  • ‘ಆಪಲ್‌’ ಮೇಲೆ ಟ್ರಂಪ್‌ ಟ್ಯಾರಿಫ್‌ ಎಫೆಕ್ಟ್‌; ಮುಂದಿನ ಐಫೋನ್‌ ಉತ್ಪಾದನಾ ಕೇಂದ್ರವಾಗುತ್ತಾ ಭಾರತ?

    ‘ಆಪಲ್‌’ ಮೇಲೆ ಟ್ರಂಪ್‌ ಟ್ಯಾರಿಫ್‌ ಎಫೆಕ್ಟ್‌; ಮುಂದಿನ ಐಫೋನ್‌ ಉತ್ಪಾದನಾ ಕೇಂದ್ರವಾಗುತ್ತಾ ಭಾರತ?

    ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಸುಂಕ ಅಸ್ತçವನ್ನು ಪ್ರಯೋಗಿಸಿರುವುದು ಜಾಗತಿಕ ವ್ಯಾಪಾರ ವಲಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಇದು ‘ವಿಶ್ವ ವ್ಯಾಪಾರ ಯುದ್ಧ’ ಎನ್ನುವಂತೆಯೇ ಬಿಂಬಿತವಾಗಿದೆ. ವಿವಿಧ ದೇಶಗಳಲ್ಲಿ ಉತ್ಪನ್ನಗಳನ್ನು ತಯಾರಿಸಿ ಅಮೆರಿಕಗೆ ರಫ್ತು ಮಾಡುತ್ತಿದ್ದ ದೈತ್ಯ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ತಮ್ಮ ಉತ್ಪನ್ನಗಳ ಮೇಲೆ ಬೀಳುವ ಹೆಚ್ಚಿನ ಸುಂಕದಿಂದ ತಪ್ಪಿಸಿಕೊಳ್ಳಲು ಪರಿಹಾರ ಮಾರ್ಗವನ್ನು ಹುಡುಕುತ್ತಿವೆ. ಟ್ರಂಪ್ ಕಡಿಮೆ ಟ್ಯಾರಿಫ್ ಹಾಕಿರುವ ರಾಷ್ಟ್ರಗಳತ್ತ ಈ ಕಂಪನಿಗಳು ತಮ್ಮ ದೃಷ್ಟಿ ನೆಟ್ಟಿವೆ.

    ಟ್ರಂಪ್ ಪ್ರತಿಸುಂಕ ನೀತಿಯು ಉದ್ಯಮ ವಲಯದಲ್ಲಿ ಕೆಲವು ರಾಷ್ಟ್ರಗಳಿಗೆ ವಿಫುಲ ಅವಕಾಶಗಳಿಗೆ ದಾರಿ ಮಾಡಿಕೊಡಲಿದೆ ಎಂಬುದು ಉದ್ಯಮ ತಜ್ಞರ ಅಭಿಪ್ರಾಯವಾಗಿದೆ. ತನ್ನ ನೆಲದಲ್ಲಿ ಐಫೋನ್ ಉತ್ಪಾದನಾ ಕೇಂದ್ರವಾಗಬೇಕೆಂಬ ಆಸೆಯನ್ನು ಭಾರತ ಹೊಂದಿತ್ತು. ಭಾರತದ ಈ ಮಹತ್ವಾಕಾಂಕ್ಷೆಗೆ ಟ್ರಂಪ್ ನೀತಿ ನೀರೆರೆದು ಪೋಷಿಸುವಂತಿದೆ. ಭಾರತವು ತನ್ನನ್ನು ತಾನು ಚೀನಾಕ್ಕೆ ಪರ್ಯಾಯವಾಗಿ ಪ್ರಸ್ತುತಪಡಿಸಲು ಇದೊಂದು ಸದಾವಕಾಶ ಎಂಬುದು ತಜ್ಞರ ಮಾತಾಗಿದೆ.

    ‘ಆಪಲ್’ಗೆ ಟ್ಯಾರಿಫ್ ಪೆಟ್ಟು
    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ಯಾರಿಫ್ ನೀತಿಯು ಆಪಲ್ ಐಫೋನ್ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ತನ್ನ ಉತ್ಪಾದನಾ ಕೇಂದ್ರ ರಾಷ್ಟçದ ಮೇಲೆ ಹೆಚ್ಚಿನ ಸುಂಕ ವಿಧಿಸಿರುವುದು ಆಪಲ್ ಕಂಪನಿಗೆ ತಲೆನೋವಾಗಿ ಪರಿಣಮಿಸಿದೆ. ಪರಿಣಾಮವಾಗಿ ತನ್ನ ಐಫೋನ್ ರಫ್ತಿಗೆ ಹೆಚ್ಚಿನ ಸುಂಕ ತೆರಬೇಕಾದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ತಾತ್ಕಾಲಿಕವಾಗಿ ಅಮೆರಿಕದ ಪೆಟ್ಟಿನಿಂದ ಪಾರಾಗಲು 5 ವಿಮಾನಗಳಷ್ಟು ಐಫೋನ್ ಮತ್ತು ಇತರೆ ಉತ್ಪನ್ನಗಳನ್ನು ಭಾರತದ ಮೂಲಕ ಆಪಲ್ ಕಂಪನಿ ರಫ್ತು ಮಾಡಿದೆ.

    ಭಾರತದತ್ತ ಆಪಲ್ ಚಿತ್ತ?
    ಐಫೋನ್ ಉತ್ಪಾದನೆ ಮೇಲೆ ಯುಎಸ್ ಸುಂಕದ ಹೊಡೆತ ಬಿದ್ದಿದೆ. ಹೀಗಾಗಿ, ಆಪಲ್ ತನ್ನ ಪೂರೈಕೆ ಸರಪಳಿಯನ್ನು ಚೀನಾದಿಂದ ಕಳಚಿಕೊಂಡು ಭಾರತ ಮತ್ತು ವಿಯೆಟ್ನಾಂ ಜೊತೆ ಜೋಡಿಸಿಕೊಳ್ಳಲು ಯೋಜಿಸಿದೆ. ಜಾಗತಿಕ ಐಫೋನ್ ಉತ್ಪಾದನೆಯ ಶೇ.14 ರಷ್ಟನ್ನು ಹೊಂದಿರುವ ಭಾರತಕ್ಕೆ ಯುಎಸ್ ಶೇ.26 ಸುಂಕ ವಿಧಿಸಿದೆ. ಚೀನಾಗೆ ವಿಧಿಸಿರುವ 142%, ವಿಯೆಟ್ನಾಂನ 46%ಗಿಂತ ಕಡಿಮೆಯಿದೆ. ಆದರೆ, ಭಾರತೀಯ ಉದ್ಯಮ ಸಂಸ್ಥೆಗಳು ಎಲೆಕ್ಟಾçನಿಕ್ ರಫ್ತು ಮತ್ತು ಉತ್ಪಾದನೆಯ ಮೇಲೆ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸಿವೆ. ಚೀನಾ ಮತ್ತು ಭಾರತದಲ್ಲಿ ಆಪಲ್ ಐಫೋನ್ ಮೇಲೆ ಅಮೆರಿಕ ಸುಂಕದ ಪರಿಣಾಮ ಏನು? ಈ ಬೆಳವಣಿಗೆ ಭಾರತದ ಪರವಾಗಿ ಹೇಗೆ ಕೆಲಸ ಮಾಡಬಹುದು?

    ಭಾರತಕ್ಕೆ ಹೇಗೆ ಹೊಡೆತ ಬಿದ್ದಿದೆ?
    ಯುಎಸ್ ಭಾರತದ ಏಕೈಕ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿದ್ದು, ಒಟ್ಟು ಸರಕುಗಳ ರಫ್ತಿನ 18% ರಷ್ಟನ್ನು ಹೊಂದಿದೆ. 26% ಟ್ಯಾರಿಫ್ ಎಲೆಕ್ಟ್ರಾನಿಕ್ಸ್ ಸಾಗಣೆಗಳ ಮೇಲೆ ಪರಿಣಾಮ ಬೀರಬಹುದು. ಲಾಭದಾಯಕತೆಯನ್ನು ಕಡಿಮೆ ಮಾಡುತ್ತದೆ. ಪೂರೈಕೆ ಸರಪಳಿಗಳನ್ನು ಅಸ್ಥಿರಗೊಳಿಸಬಹುದು. ಯುಎಸ್ ವಿಧಿಸಿರುವ 26% ಸುಂಕಗಳು ಭಾರತದ ರಫ್ತಿಗೆ ಗಮನಾರ್ಹ ಸವಾಲನ್ನು ಒಡ್ಡುತ್ತದೆ. ಭಾರತವು ಇತರ ಅನೇಕ ಆರ್ಥಿಕತೆಗಳಿಗಿಂತ ಉತ್ತಮ ಸ್ಥಾನದಲ್ಲಿದ್ದರೂ, ಈ ಸುಂಕಗಳು ದೇಶೀಯ ಕೈಗಾರಿಕೆಗಳ ಮೇಲೆ ಪ್ರಭಾವ ಬೀರಬಹುದು. ವ್ಯಾಪಾರದ ಹರಿವಿಗೆ ಅಡ್ಡಿಪಡಿಸಬಹುದು. ಲಾಭದ ಪ್ರಮಾಣವನ್ನು ತಗ್ಗಿಸಬಹುದು ಎಂದು ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಚಂದಕ್ ಹೇಳಿದ್ದಾರೆ.

    ಆಪಲ್ ಲಾಭಕ್ಕೆ ಪೆಟ್ಟು?
    ಚೀನೀ ಆಮದುಗಳ ಮೇಲೆ ಈಗ 124% ಸುಂಕದ ಪರಿಣಾಮ ಎದುರಿಸುತ್ತಿರುವ ಆಪಲ್‌ಗೆ ಅಸ್ತಿತ್ವದ ಬಿಕ್ಕಟ್ಟು ಎದುರಾಗಿದೆ. 799 ಡಾಲರ್ ಬೆಲೆಯೊಂದಿಗೆ ಯುಎಸ್‌ನಲ್ಲಿ ಬಿಡುಗಡೆ ಮಾಡಲಾದ ಅಗ್ಗದ ಐಫೋನ್ 16 ಮಾದರಿಗೆ ಪ್ರತಿಸುಂಕದಿಂದ 1,142 ಡಾಲರ್ ವೆಚ್ಚವಾಗಬಹುದು. ರೋಸೆನ್‌ಬ್ಲಾಟ್ ಸೆಕ್ಯುರಿಟೀಸ್‌ನ ಲೆಕ್ಕಾಚಾರಗಳ ಪ್ರಕಾರ, ವೆಚ್ಚವು 43% ರಷ್ಟು ಹೆಚ್ಚಾಗಬಹುದು. 599 ಡಾಲರ್ ಬೆಲೆಯ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾದ ಅಗ್ಗದ ಐಫೋನ್ 16ಇ ಮಾದರಿಯು ಪ್ರತಿಸುಂಕದ ಕಾರಣದಿಂದಾಗಿ 856 ಡಾಲರ್‌ನೊಂದಿಗೆ 43% ಹೆಚ್ಚಳ ಆಗಬಹುದು. ಇತರ ಆಪಲ್ ಉತ್ಪನ್ನಗಳ ಬೆಲೆಗಳು ಕೂಡ ಹೆಚ್ಚಾಗಬಹುದು. ಟ್ರಂಪ್ ಟ್ಯಾರಿಫ್ ಘೋಷಣೆ ಬಳಿಕ ಕಳೆದ ವಾರ ಆಪಲ್‌ನ ಷೇರುಗಳು ಸುಮಾರು 9% ರಷ್ಟು ಕುಸಿತ ಕಂಡಿತು.

    ಸಿಎಫ್‌ಆರ್‌ಎ ರಿಸರ್ಚ್‌ನ ಇಕ್ವಿಟಿ ವಿಶ್ಲೇಷಕ ಏಂಜೆಲೊ ಝಿನೋ, ಆಪಲ್ ತನ್ನ ವೆಚ್ಚದ 5% ರಿಂದ 10% ರಷ್ಟುನ್ನು ಗ್ರಾಹಕರಿಗೆ ವರ್ಗಾಯಿಸುತ್ತದೆ ಎಂದು ಅಂದಾಜಿಸಿದ್ದಾರೆ. ಆಪಲ್ ಈಗಾಗಲೇ ಯುಎಸ್ ಹೂಡಿಕೆಯಲ್ಲಿ 500 ಡಾಲರ್ ಶತಕೋಟಿಯನ್ನು ಬದ್ಧವಾಗಿದೆ. ಟೆಕ್ಸಾಸ್‌ನಲ್ಲಿ ಎಐ ಸರ್ವರ್ ಸೌಲಭ್ಯವನ್ನು ತೆರೆಯಿತು. ಕೆಲವು ಪೂರೈಕೆ ಸರಪಳಿಗಳನ್ನು ಸ್ಥಳಾಂತರಿಸಿದೆ. ಆದರೆ ಎವರ್‌ಕೋರ್ ಐಎಸ್‌ಐ ಪ್ರಕಾರ, ಅದರ ಸುಮಾರು 90% ಐಫೋನ್‌ಗಳು ಇನ್ನೂ ಚೀನಾದಲ್ಲಿ ತಯಾರಾಗ್ತಿವೆ. ಟ್ಯಾರಿಫ್‌ನಿಂದಾಗಿ ಐಫೋನ್ ಬೆಲೆಗಳಲ್ಲಿ ಸಂಭಾವ್ಯ ಹೆಚ್ಚಳ ಕಂಡುಬರುವುದರಿAದ ಐಫೋನ್‌ಗಳ ಬೇಡಿಕೆಯನ್ನು ಕುಗ್ಗಿಸಬಹುದು. ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ಗೆ ಇದು ವರದಾನ ಆಗಬಹುದು.

    ಭಾರತಕ್ಕೆ ವರದಾನ?
    ಟ್ರಂಪ್ ಸುಂಕಗಳು ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಚೀನಾದ ವಿರುದ್ಧ ಭಾರತವನ್ನು ಪ್ರಮುಖ ಆಯ್ಕೆಯನ್ನಾಗಿ ಮಾಡುತ್ತದೆ. ಆಪಲ್ ಜಾಗತಿಕವಾಗಿ ಎಲ್ಲಾ ಐಫೋನ್‌ಗಳಲ್ಲಿ ಸುಮಾರು 25% ರಷ್ಟನ್ನು ಭಾರತದಲ್ಲಿ ತಯಾರಿಸಲು ಗುರಿಯನ್ನು ಹೊಂದಿದೆ ಎಂದು ಸರ್ಕಾರದ ಸಚಿವರು 2023 ರಲ್ಲಿ ಹೇಳಿದ್ದರು. ಚೀನಾದ ಮೇಲಿರುವ 126% ಸುಂಕದ ಹೊತ್ತಲ್ಲಿ, ಆಪಲ್‌ಗೆ ಈಗ ಭಾರತ ಬಿಟ್ಟು ಬೇರೆ ಆಯ್ಕೆಯಿಲ್ಲ. ಇದು 2025 ರ ಅಂತ್ಯದ ವೇಳೆಗೆ ಭಾರತದ ಐಫೋನ್ ಉತ್ಪಾದನಾ ಸಾಮರ್ಥ್ಯವನ್ನು 15%-20% ಗೆ ಹೆಚ್ಚಿಸಬಹುದು ಎಂದು ಬರ್ನ್ಸ್ಟೈನ್ ವಿಶ್ಲೇಷಕರು ಅಂದಾಜಿಸಿದ್ದಾರೆ. ಎವರ್‌ಕೋರ್ ಐಎಸ್‌ಐ ಸುಮಾರು 10% ರಿಂದ 15% ರಷ್ಟು ಐಫೋನ್‌ಗಳನ್ನು ಪ್ರಸ್ತುತ ಭಾರತದಲ್ಲಿ ಜೋಡಿಸಲಾಗಿದೆ ಎಂದು ಹೇಳಿದೆ. ಭಾರತದ ನೆಲೆಯನ್ನು ಬಲಪಡಿಸಲು ಆಪಲ್, ಮೈಕ್ರೋಸಾಫ್ಟ್, ಗೂಗಲ್‌ನಂತಹ ನಿಗಮಗಳಿಂದ ಬೆಂಬಲ ಪಡೆಯಬಹುದು ಎಂದು ಉದ್ಯಮ ತಜ್ಞರು ಹೇಳುತ್ತಾರೆ.

    ಆಪಲ್‌ನ ಗುತ್ತಿಗೆ ತಯಾರಕರಾದ ಫಾಕ್ಸ್ಕಾನ್, ಟಾಟಾ ಮತ್ತು ಪೆಗಾಟ್ರಾನ್ ನೇತೃತ್ವದಲ್ಲಿ ಭಾರತದ ಬೃಹತ್ ಸ್ಮಾರ್ಟ್ಫೋನ್ ರಫ್ತು ಚಾಲನೆಯು ಅದರ ಹೆಚ್ಚುತ್ತಿರುವ ಸಾಮರ್ಥ್ಯದ ಪುರಾವೆಯಾಗಿದೆ. ಭಾರತವು 2024ರ ಏಪ್ರಿಲ್ ಮತ್ತು 2025 ಜನವರಿಯ ನಡುವೆ ಸುಮಾರು 1 ಲಕ್ಷ ಕೋಟಿ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. 2023 ರಲ್ಲಿ ಅದೇ ಅವಧಿಯಲ್ಲಿ 60,000 ಕೋಟಿ ರೂ. ಮೌಲ್ಯದ ಐಫೋನ್ ರಫ್ತಾಗಿದೆ. ಆಪಲ್ ಪಾಲುದಾರರು ಆ ಸಬ್ಸಿಡಿಗಳಲ್ಲಿ 75% ಅನ್ನು ಪಡೆಯುವುದರೊಂದಿಗೆ ತನ್ನ ಪಿಎಲ್‌ಐ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್) ಯೋಜನೆಯಡಿಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಉತ್ತೇಜಿಸಲು ಭಾರತ ಸರ್ಕಾರವು 8,700 ಕೋಟಿ ರೂ. ವಿತರಿಸಿದೆ.

    ಭಾರತೀಯ ಉದ್ಯಮ ಸಂಸ್ಥೆಗಳು ಹೇಳೋದೇನು?
    ಹಲವಾರು ಅಭಿವೃದ್ಧಿಶೀಲ ಆರ್ಥಿಕತೆಗಳು ಈಗ ಹೆಚ್ಚು ಆಕರ್ಷಕವಾದ ವ್ಯಾಪಾರ ಅವಕಾಶ ನೀಡುತ್ತಿವೆ ಎಂದು ಭಾರತೀಯ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ತಿಳಿಸಿದೆ. ಬ್ರೆಜಿಲ್, ಟರ್ಕಿ, ಸೌದಿ ಅರೇಬಿಯಾ, ಯುಎಇ-ಎಲ್ಲವೂ ಭಾರತಕ್ಕೆ ಹೋಲಿಸಿದರೆ ಕಡಿಮೆ ಸುಂಕದ ದರಗಳನ್ನು ಪಡೆದುಕೊಂಡಿವೆ. ಕೆಲವು ದೇಶಗಳಿಗೆ 10%, ಫಿಲಿಪೈನ್ಸ್ 17% ಟ್ಯಾರಿಫ್ ಹಾಕಲಾಗಿದೆ. ಸೌದಿ ಅರೇಬಿಯಾ ಮತ್ತು ಯುಎಇ ತಮ್ಮ ವಿಶೇಷ ಆರ್ಥಿಕ ವಲಯಗಳ ಕಾರಣದಿಂದಾಗಿ ಕಡಿಮೆ ಪ್ರತಿಸುಂಕಕ್ಕೆ ಒಳಗಾಗಿವೆ.

    ಚೀನಾ ಟ್ಯಾರಿಫ್ ಹೊಡೆತ ಹೇಗೆ ತಡೆದುಕೊಂಡಿದೆ?
    ಟ್ರಂಪ್ ಆಡಳಿತವು ಚೀನಾದ ಆಮದುಗಳ ಮೇಲೆ 125% ಸುಂಕವನ್ನು ವಿಧಿಸಿದೆ. ಹೆಚ್ಚುವರಿ 34% ಸುಂಕ ಮತ್ತು 20% ಪರಂಪರೆ ಸುಂಕವನ್ನು ಟ್ರಂಪ್ ವಿಧಿಸಿದ್ದಾರೆ. ಅದು ಕೇವಲ ಐಫೋನ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಗ್ರಾಹಕ ಎಲೆಕ್ಟ್ರಾನಿಕ್ಸ್ ಶ್ರೇಣಿಯ ಮೇಲೂ ಪರಿಣಾಮ ಬೀರುತ್ತದೆ. ಸುಂಕಗಳ ಹಿಂದಿನ ತಾರ್ಕಿಕತೆಯು ನ್ಯಾಯಸಮ್ಮತವಾಗಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ‘ಸುಂಕಗಳು ನಮಗೆ ಮಾತುಕತೆ ನಡೆಸಲು ಹೆಚ್ಚಿನ ಶಕ್ತಿಯನ್ನು ನೀಡುತ್ತವೆ’ ಎಂದು ತಿಳಿಸಿದ್ದಾರೆ.

    ಎವರ್‌ಕೋರ್ ಐಎಸ್‌ಐ ಅಂದಾಜಿನ ಪ್ರಕಾರ, ಆಪಲ್‌ನ ಉತ್ಪಾದನಾ ಸಾಮರ್ಥ್ಯದ ಸುಮಾರು 80% ರಷ್ಟು ಚೀನಾವನ್ನು ಹೊಂದಿದೆ. ಸುಮಾರು 90% ಐಫೋನ್‌ಗಳನ್ನು ಚೀನಾದಲ್ಲಿ ಜೋಡಿಸಲಾಗಿದೆ. ಆಪಲ್‌ನ 55% ಮ್ಯಾಕ್ ಉತ್ಪನ್ನಗಳು ಮತ್ತು 80% ಐಪ್ಯಾಡ್‌ಗಳನ್ನು ಚೀನಾದಲ್ಲಿ ಜೋಡಿಸಲಾಗಿದೆ ಎಂದು ತಿಳಿಸಿದೆ. ಆಪಲ್‌ನ 2017 ಮತ್ತು 2020 ರ ಆರ್ಥಿಕ ವರ್ಷದ ನಡುವೆ ಚೀನಾದಲ್ಲಿ ಉತ್ಪಾದನೆ ಸಂಖ್ಯೆ ಕಡಿಮೆಯಾಗಿತ್ತು. ನಂತರ ಮತ್ತೆ ಹೆಚ್ಚಾಯಿತು. ಚೀನೀ ಪೂರೈಕೆದಾರರು ಆಪಲ್‌ನ ಒಟ್ಟು 40% ರಷ್ಟಿದ್ದಾರೆ ಎಂದು ಬರ್ನ್ಸ್ಟೈನ್ ಹೇಳಿದ್ದಾರೆ.

  • ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

    ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

    ನವದೆಹಲಿ: ಡೊನಾಲ್ಡ್‌ ಟ್ರಂಪ್‌ (Donald Trump) ವಿಧಿಸಿದ ತೆರಿಗೆ ಸುಂಕದಿಂದ ಪಾರಾಗಲು ಆಪಲ್‌ (Apple) ಕಂಪನಿ ಭಾರತದಿಂದ 5 ವಿಮಾನದಷ್ಟು ಐಫೋನ್‌ (iPhone) ಮತ್ತು ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ (USA) ರಫ್ತು ಮಾಡಿದೆ.

    ಟ್ರಂಪ್‌ ತೆರಿಗೆ ಸಮರ ಆರಂಭಿಸಿದ್ದು ವಿದೇಶದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲಿದ್ದ ಸುಂಕವನ್ನು ಹೆಚ್ಚಿಸಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿ ವಿದೇಶದಿಂದ ಆಮದಾಗುವ ವಸ್ತುಗಳ ಬೆಲೆ ಏರಿಕೆಯಾಗಲಿದೆ.

    ವಸ್ತುಗಳ ಬೆಲೆ ಏರಿಕೆಯಿಂದ ಪಾರಾಗಲು ಆಪಲ್‌ ಕಂಪನಿ ಭಾರೀ ಪ್ರಮಾಣದಲ್ಲಿ ಐಫೋನ್‌ ಮತ್ತು ಇತರ ವಸ್ತುಗಳನ್ನು ಭಾರತದಿಂದ ರಫ್ತು ಮಾಡಿದೆ ಎಂದು ವರದಿಯಾಗಿದೆ.

    ಭಾರತದ ಮೇಲೆ ಟ್ರಂಪ್‌ 26% ಚೀನಾದ ಮೇಲೆ 52%, ತೈವಾನ್‌ ಮೇಲೆ 32%, ವಿಯೆಟ್ನಾಂ ಮೇಲೆ 46% ತೆರಿಗೆ ವಿಧಿಸಿದ್ದಾರೆ. ಐಫೋನ್‌ ಅಮೆರಿಕ ಕಂಪನಿಯಾದರೂ ಬಹುತೇಕ ಐಫೋನ್‌ಗಳು, ಅದರ ಬಿಡಿಭಾಗಗಳು ಭಾರತ, ವಿಯೆಟ್ನಾಂ, ತೈವಾನ್‌, ಚೀನಾದಲ್ಲಿ ತಯಾರಾಗುತ್ತವೆ. ಹೀಗಾಗಿ ಈ ದೇಶಗಳಿಂದ ರಫ್ತಾಗುವ ಐಫೋನ್‌ಗಳೂ ದುಬಾರಿ ಆಗಲಿವೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಮೇಲೆ ವಿಧಿಸಿದ ಸುಂಕ ಕಡಿಮೆಯಿದೆ. ಇದನ್ನೂ ಓದಿ: ಸುಂಕ ನೀತಿಗೆ ವ್ಯಾಪಕ ವಿರೋಧ, ಟ್ರಂಪ್‌ ವಿರುದ್ಧ ತಿರುಗಿಬಿದ್ದ ಜನ – ಅಮೆರಿಕದ 1,200 ಸ್ಥಳಗಳಲ್ಲಿ‌ ಬೃಹತ್‌ ಪ್ರತಿಭಟನೆ

    ಮಾರ್ಚ್ ಕೊನೆಯ ವಾರದಲ್ಲಿ ಆಪಲ್‌ ಐಫೋನ್‌ಗಳನ್ನು ರಫ್ತು ಮಾಡಿದೆ. ಏಪ್ರಿಲ್ 5 ರಿಂದ ಜಾರಿಗೆ ಬಂದ ಟ್ರಂಪ್ ಆಡಳಿತವು ವಿಧಿಸಿದ 10% ಪ್ರತಿ ತೆರಿಗೆ ಮೊದಲು ರಫ್ತಾಗಿದೆ.

    ಚೀನಾದ ಸರಕುಗಳ ಮೇಲೆ 54% ತೆರಿಗೆ ವಿಧಿಸಿದರೆ ಭಾರತದ ವಸ್ತುಗಳ ಮೇಲೆ 26% ತೆರಿಗೆ ವಿಧಿಸಲಾಗುತ್ತಿದೆ. ಈ ನಿರ್ಧಾರದಿಂದ ಭಾರತವು ಆಪಲ್‌ನ ದೊಡ್ಡ ಜಾಗತಿಕ ಉತ್ಪಾದನಾ ನೆಲೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಅಂದಾಜು ಅಮೆರಿಕಕ್ಕೆ 9 ಶತಕೋಟಿ ಡಾಲರ್‌ ಮೌಲ್ಯದ ಐಫೋನ್‌ಗಳನ್ನು ಭಾರತ ರಫ್ತು ಮಾಡುತ್ತಿದೆ.

    ಮುಂಬೈನಿಂದ ಅಮೆರಿಕಕ್ಕೆ ರತ್ನಗಳು ಮತ್ತು ಆಭರಣಗಳ ರಫ್ತು ಏಪ್ರಿಲ್ 1 ಮತ್ತು 4 ರ ನಡುವೆ ಆರು ಪಟ್ಟು ಹೆಚ್ಚಾಗಿ 344 ಮಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ರಫ್ತು 61 ಮಿಲಿಯನ್ ಡಾಲರ್‌ ಆಗಿತ್ತು. ಇದನ್ನೂ ಓದಿ: ಏ.10ರಿಂದ ಅಮೆರಿಕದ ಸರಕುಗಳ ಮೇಲೆ 34% ಆಮದು ಸುಂಕ – ಚೀನಾ ಪ್ರತೀಕಾರದ ಸುಂಕಕ್ಕೆ ದೊಡ್ಡಣ್ಣ ಗರಂ

    ಫಾಕ್ಸ್‌ಕಾನ್‌ 2019ರಿಂದ ಆಪಲ್‌ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸುತ್ತಿದ್ದು, ತಮಿಳುನಾಡಿನಲ್ಲಿ ತನ್ನ ಘಟಕ ತೆರದಿದೆ. ಕರ್ನಾಟಕದ ಕೋಲಾರದ ನರಸಾಪುರ ಮತ್ತು ಬೆಂಗಳೂರಿನ ಪೀಣ್ಯದಲ್ಲಿ ವಿಸ್ಟ್ರಾನ್‌ ಕಂಪನಿ ಐಫೋನ್‌ ತಯಾರಿಸುತ್ತಿದೆ.