Tag: IPC

  • ಕಲ್ಲಿನಿಂದ ಹೊಡೆದು ಕೋತಿಯನ್ನು ಕೊಂದ ದುಷ್ಟರು – ಮೂವರು ಅರೆಸ್ಟ್

    ಕಲ್ಲಿನಿಂದ ಹೊಡೆದು ಕೋತಿಯನ್ನು ಕೊಂದ ದುಷ್ಟರು – ಮೂವರು ಅರೆಸ್ಟ್

    ಲಕ್ನೋ: ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಕಲ್ಲಿನಿಂದ ಹೊಡೆದು ಕೋತಿಯನ್ನು ಕೊಂದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಯುವಕರನ್ನು ಬಂಧಿಸಲಾಗಿದೆ.

    ಅಮೇಥಿ ಜಿಲ್ಲೆಯ ಪಿಪರ್‌ಪುರ ಪೊಲೀಸ್ ವೃತ್ತದ ವ್ಯಾಪ್ತಿಯ ದುರ್ಗಾಪುರ ಮಾರುಕಟ್ಟೆಯ ಬಿಯರ್ ಅಂಗಡಿಯ ಬಳಿ ಈ ಘಟನೆ ನಡೆದಿದ್ದು, ಸಂಗಮ್, ರಾಧೆ ಮತ್ತು ಸೂರಜ್ ಎಂಬ ಮೂವರನ್ನು ಬಂಧಿಸಲಾಗಿದೆ ಎಂದು ಪಿಪರ್‌ಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಧೀರೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ಉದ್ಭವ್ ಠಾಕ್ರೆ ರಾಜೀನಾಮೆ ಬೆನ್ನಲ್ಲೆ ಮತ್ತೆ ಸಿಡಿದೆದ್ದ ಕಂಗನಾ ರಣಾವತ್

    ಕೋತಿಯನ್ನು ರಕ್ಷಿಸಲು ಯತ್ನಿಸಿದ ದೇವೇಂದ್ರ ಸಿಂಗ್ ಎಂಬಾತನ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 147 (ದೊಂಬಿ ಗಲಾಟೆ ಮಾಡಿದ ಆರೋಪ), ಸೆಕ್ಷನ್ 223 (ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ) ಹಾಗೂ ಸೆಕ್ಷನ್ 429 (ಪ್ರಾಣಿಯನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಳೇ ಹುಬ್ಬಳ್ಳಿ ಗಲಾಟೆ – ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

    ಮದ್ಯದ ಅಮಲಿನಲ್ಲಿದ್ದ ಯುವಕರು ಬಿಯರ್ ಶಾಪ್‌ನಿಂದ ಹೊರಬಂದಾಗ ಕೋತಿ ಗಾಯಗೊಂಡು ರಸ್ತೆಬದಿಯಲ್ಲಿ ಕುಳಿತಿದ್ದ ವೇಳೆ ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕಳೆಬರವನ್ನು ಸಾಗಿಸಿದ್ದಾರೆ.

    Live Tv

  • ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಘೋರ, ಜಾಮೀನು ರಹಿತ ಅಪರಾಧ – ಹೈಕೋರ್ಟ್

    ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಘೋರ, ಜಾಮೀನು ರಹಿತ ಅಪರಾಧ – ಹೈಕೋರ್ಟ್

    ತಿರುವನಂತಪುರಂ: ದೈಹಿಕವಾಗಿ ಯಾವುದೇ ರೀತಿಯಿಂದ ಹಲ್ಲೆ ನಡೆಸದಿದ್ದರೂ ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅದು ಘೋರ ಹಾಗೂ ಜಾಮೀನು ರಹಿತ ಅಪರಾಧವಾಗುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.

    ಹಲ್ಲೆ ನಡೆಸದೇ ಇದ್ದರೂ ಕೇರಳ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಆರೋಗ್ಯ ಸೇವಾ ಸಂಸ್ಥೆಗಳ (ಹಿಂಸಾಚಾರ ಮತ್ತು ಆಸ್ತಿ ಹಾನಿ ತಡೆ) ಕಾಯ್ದೆ ಅಡಿಯಲ್ಲಿ ಗಂಭೀರ ಜಾಮೀನು ರಹಿತ ಅಪರಾಧವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಯುವತಿ ಸ್ನೇಹಿತೆಯಾದ ಮಾತ್ರಕ್ಕೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆಯಿದೆ ಎಂದರ್ಥವಲ್ಲ – ಹೈಕೋರ್ಟ್

    ಸಾಂದರ್ಭಿಕ ಚಿತ್ರ

    ವೈದ್ಯೆಯೊಬ್ಬರಿಗೆ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆರೋಪಿಯೊಬ್ಬ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರಿದ್ದ ಏಕ ಸದಸ್ಯ ಪೀಠವು ಈ ಆದೇಶ ನೀಡಿದ್ದು ಅರ್ಜಿದಾರರಿಗೆ ಜಾಮೀನು ನಿರಾಕರಿಸಿದೆ. ಆರೋಗ್ಯ ಸೇವೆ ಒದಗಿಸುವವರ ವಿರುದ್ಧದ ಎಲ್ಲಾ ರೀತಿಯ ಹಿಂಸಾಚಾರ ತಡೆಯುವುದು ಶಾಸನದ ಉದ್ದೇಶವಾಗಿದೆ ಎಂದು ಒತ್ತಿ ಹೇಳಿದೆ. ಇದನ್ನೂ ಓದಿ: ಪ್ರವಾದಿಗಾಗಿ ಒಂದು ಕೊಲೆ ಮಾಡೋಕಾಗಲ್ವೆ? – ಉದಯಪುರ ಹತ್ಯೆಯ ಮಾಸ್ಟರ್‌ಮೈಂಡ್ ವೀಡಿಯೋ ವೈರಲ್

    ಸಾಂದರ್ಭಿಕ ಚಿತ್ರ

    ಕಾಯ್ದೆಯಲ್ಲಿರುವ ಹಿಂಸೆ ಪದಕ್ಕೆ ಸಾಕಷ್ಟು ವ್ಯಾಪಕತೆ ಇದೆ. ಕಾಯ್ದೆ ರೂಪಿಸಿರುವ ಶಾಸಕಾಂಗದ ಉದ್ದೇಶ ನಿಸ್ಸಂದೇಹವಾಗಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ಯಾವುದೇ ಬೆದರಿಕೆ ಅಥವಾ ಅಡ್ಡಿ ಉಂಟು ಮಾಡುವುದನ್ನು ತಡೆಯಬೇಕು ಎಂಬುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

    ಆರೋಪಿ ವಿರುದ್ಧ IPC ಸೆಕ್ಷನ್ 341 (ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), ಸೆಕ್ಷನ್ 353 (ಸಾರ್ವಜನಿಕ ಸೇವಕರ ಕರ್ತವ್ಯವನ್ನು ತಡೆಯಲು ಹಲ್ಲೆ ಮಾಡುವುದು), ಸೆಕ್ಷನ್ 506 (ಕ್ರಿಮಿನಲ್ ಅಪರಾಧಕ್ಕಾಗಿ ದಂಡನೆ) ಹಾಗೂ ಸೆಕ್ಷನ್ 3 ಮತ್ತು 4(1) ಆರೋಗ್ಯ ಆರೈಕೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

    ಅರ್ಜಿದಾರರ ಪರ ವಕೀಲ ಆರ್.ಶ್ರೀಹರಿ ವಾದ ಮಂಡಿಸಿದರು. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎ.ನೌಶಾದ್ ಪ್ರತಿವಾದಿಯಾಗಿದ್ದರು.

    Live Tv

  • ನೂಪುರ್ ಶರ್ಮಾ ಶಿರಚ್ಛೇದನ ವೀಡಿಯೋ ಅಪ್‌ಲೋಡ್ ಪ್ರಕರಣ- ಯುಟ್ಯೂಬರ್‌ಗೆ ಕೋರ್ಟ್ ಜಾಮೀನು

    ನೂಪುರ್ ಶರ್ಮಾ ಶಿರಚ್ಛೇದನ ವೀಡಿಯೋ ಅಪ್‌ಲೋಡ್ ಪ್ರಕರಣ- ಯುಟ್ಯೂಬರ್‌ಗೆ ಕೋರ್ಟ್ ಜಾಮೀನು

    ನವದೆಹಲಿ: ನೂಪುರ್ ಶರ್ಮಾರ ಶಿರಚ್ಛೇದನ ಮಾಡುವಂತೆ ಚಿತ್ರಿಸಲಾಗಿದ್ದ ವೀಡಿಯೋ ಅಪ್‌ಲೋಡ್ ಮಾಡಿ ಜಮ್ಮು ಕಾಶ್ಮೀರ ಪೊಲೀಸರಿಂದ ಬಂಧಿತನಾಗಿದ್ದ ಯೂಟ್ಯೂಬರ್ ಫೈಸಲ್ ವಾನಿಗೆ ಶ್ರೀನಗರ ನ್ಯಾಯಾಲಯ ಜಾಮೀನು ನೀಡಿದೆ.

    ಆರೋಪಿಯ ವಿರುದ್ಧದ ಅಪರಾಧಗಳು ಕಾನೂನಿನಡಿ ಕಠಿಣ ಶಿಕ್ಷೆಗೆ ಒಳಗಾಗುವಂತಹದ್ದಲ್ಲ. ಅಲ್ಲದೆ ಆರೋಪಿ ದೇಶದಿಂದ ಪಲಾಯನ ಮಾಡುವ ಸಂದರ್ಭವಾಗಲಿ ಕ್ರಿಮಿನಲ್ ಹಿನ್ನೆಲೆಯಾಗಲಿ ಇಲ್ಲ. ಹಾಗಾಗಿ ಇಂತಹ ಪ್ರಕರಣದಲ್ಲಿ ಜಾಮೀನು ನಿರಾಕರಿಸುವುದು ಅನ್ಯಾಯವಾಗುತ್ತದೆ ಎಂದು ಜಾಮೀನು ನೀಡುವ ವೇಳೆ ಶ್ರೀನಗರದ ಪ್ರಥಮ ದರ್ಜೆ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಅಜಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: RSS ಕಾರ್ಯಕರ್ತರು ಸೇನೆಗೆ ಸೇರೋದ್ರಲ್ಲಿ ತಪ್ಪೇನು: ಸುಧಾಕರ್ ಪ್ರಶ್ನೆ

    court order law

    ಆರೋಪಿ ಕಳೆದ 7 ದಿನಗಳಿಂದ ಪೊಲೀಸ್ ಬಂಧನದಲ್ಲಿದ್ದಾನೆ. ಆತನನ್ನು ಇನ್ನಷ್ಟು ಕಾಲ ಬಂಧನದಲ್ಲಿಡುವುದರಿಂದ ಉಪಯುಕ್ತ ಉದ್ದೇಶ ಈಡೇರುವುದಿಲ್ಲ. ಹಾಗಾಗಿ ಆರೋಪಿಗೆ ಜಾಮೀನು ನಿರಾಕರಿಸುವುದು ಅನ್ಯಾಯವಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ನನ್ನ ತಾಯಿಯನ್ನು ನೆನಪಿಸಿಕೊಂಡರು ಎಂದು ಕಣ್ಣೀರಿಟ್ಟ ರಾಮದಾಸ್ – ಇದು ಕೌಟುಂಬಿಕ ಸಂಬಂಧ

    ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ್ದಾರೆಂದು ದೇಶವ್ಯಾಪಿ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದವು. ಇದೇ ವೇಳೆ ಯುಟ್ಯೂಬರ್ ಒಬ್ಬರು ಅವರ ಶಿರಚ್ಛೇದನ ಮಾಡಿರುವಂತೆ ವೀಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದರು. ಈ ಸಂಬಂಧ ಐಪಿಸಿ ಸೆಕ್ಷನ್ 505(2) (ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಹೇಳಿಕೆ), ಐಪಿಸಿ 506ರ(ಬೆದರಿಕೆ) ಅಡಿ ಆರೋಪಿಯನ್ನು ಬಂಧಿಸಲಾಗಿತ್ತು.

    ಅಪ್‌ಲೋಡ್ ಮಾಡಿದ ಕೂಡಲೇ ವೀಡಿಯೋ ಡಿಲೀಟ್ ಮಾಡಿ ನಂತರ ಕ್ಷಮೆ ಕೋರುವ ಮತ್ತೊಂದು ವೀಡಿಯೋವನ್ನು ಆರೋಪಿ ಹಾಕಿದ್ದ ಎಂದು ವಾನಿ ಪರ ವಕೀಲರು ವಾದಿಸಿದ್ದರು.

    Live Tv

  • ಪೊಲೀಸ್ ಅಧಿಕಾರಿ ಕೊರಳಪಟ್ಟಿ ಹಿಡಿದು ಎಳೆದಾಡಿದ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿರುದ್ಧ FIR

    ಪೊಲೀಸ್ ಅಧಿಕಾರಿ ಕೊರಳಪಟ್ಟಿ ಹಿಡಿದು ಎಳೆದಾಡಿದ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿರುದ್ಧ FIR

    ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಇಡಿ ಸಮನ್ಸ್ ನೀಡಿರುವುದನ್ನು ಖಂಡಿಸಿ ಇಂದು ನಡೆದ `ಚಲೋ ರಾಜಭವನ್’ ಪ್ರತಿಭಟನೆ ವೇಳೆ ಕಾಂಗ್ರೆಸ್ ಮಹಿಳಾ ನಾಯಕಿಯೊಬ್ಬರು ಪೊಲೀಸ್ ಅಧಿಕಾರಿಯ ಕೊರಳಪಟ್ಟಿ ಹಿಡಿದು ಎಳೆದಾಡಿರುವ ಘಟನೆ ನಡೆದಿದೆ.

    ಕಾಂಗ್ರೆಸ್ ಮುಖಂಡರಾದ ರೇಣುಕಾ ಚೌಧರಿ ಅವರು ಕರ್ತವ್ಯದಲ್ಲಿದ್ದ ತೆಲಂಗಾಣ ಪೊಲೀಸ್ ಅಧಿಕಾರಿಯೊಬ್ಬರ ಕೊರಳ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಅಲ್ಲದೆ ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೂ ತನ್ನ ದರ್ಪ ಮೆರೆದಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಮೆಟ್ರೋ ಸಂಚಾರ ರಾತ್ರಿ 1.30ರ ವರೆಗೂ ವಿಸ್ತರಣೆ – ಯಾಕೆ ಗೊತ್ತೇ? 

    ರೇಣುಕಾ ಚೌಧರಿ ವಿರುದ್ಧ ಐಪಿಸಿ ಸೆಕ್ಷನ್ 353 (ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು ರಾಜಭವನ ಚಲೋ ಪ್ರಾರಂಭಿಸಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮಾಂದಾಗಿದ್ದು, ಹಲವೆಡೆ ಹೈಡ್ರಾಮಾ ಸೃಷ್ಟಿಸಿದೆ. ಇದನ್ನೂ ಓದಿ: ಸೋನಿಯಾ ಗಾಂಧಿಗೆ ಮನೆ ಬೇಕಿದ್ರೆ ಇಂದೇ ಅರ್ಜಿ ಸಲ್ಲಿಸಿ: ಡಿಕೆಶಿಗೆ ಬಿಜೆಪಿ ಟಾಂಗ್

    Live Tv

  • ಅತ್ಯಾಚಾರ ಪ್ರಕರಣ ದಾಖಲಿಸಿ, ರದ್ದುಗೊಳಿಸಲು ನ್ಯಾಯಾಲಯಕ್ಕೆ ತರುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕು – ಹೈಕೋರ್ಟ್‌

    ಅತ್ಯಾಚಾರ ಪ್ರಕರಣ ದಾಖಲಿಸಿ, ರದ್ದುಗೊಳಿಸಲು ನ್ಯಾಯಾಲಯಕ್ಕೆ ತರುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕು – ಹೈಕೋರ್ಟ್‌

    ನವದೆಹಲಿ: ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿ, ಅವುಗಳನ್ನು ರದ್ದುಗೊಳಿಸಲು ನ್ಯಾಯಾಲಯಕ್ಕೆ ತರುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

    ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 (ಅತ್ಯಾಚಾರ), 354 (ಮಹಿಳೆಯ ಮೇಲೆ ಹಲ್ಲೆ) ಮತ್ತು 498-A (ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವ ಪತಿ ಅಥವಾ ಪತಿಯ ಸಂಬಂಧಿ) ಅಡಿಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ಪಟ್ಟಿದೆ. ಇದನ್ನೂ ಓದಿ: ಕುತುಬ್ ಮಿನಾರ್ ಮಸೀದಿಯಲ್ಲಿ ನಮಾಜ್ ತಡೆಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಕೋರ್ಟ್ ನಕಾರ

    ಕಕ್ಷಿದಾರ ಮಹಿಳೆಯೊಬ್ಬರು ‌ಸೆಕ್ಷನ್‌ 376, 354 ಮತ್ತು 498-A ಅಡಿಯಲ್ಲಿ ತನ್ನ ಮಾವನ ವಿರುದ್ಧ ದಾಖಲಿಸಿದ್ದ FIR ಅನ್ನು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ರದ್ದುಗೊಳಿಸಿದ ಈ ಅಭಿಪ್ರಾಯ ಪಟ್ಟಿದ್ದಾರೆ.

    ಸಾಮಾನ್ಯವಾಗಿ IPC ಸೆಕ್ಷನ್ 376ರ ಅಡಿಯಲ್ಲಿ ದಾಖಲಿಸಲಾದ ಪ್ರಕರಣಗಳನ್ನು ರದ್ದುಗೊಳಿಸಬಾರದು, ಅವರನ್ನು ಸಮಾಜದ ವಿರುದ್ಧ ಅಪರಾಧಿಗಳೆಂದು ಪರಿಗಣಿಸಬೇಕು. ಹೀಗಿದ್ದೂ ಮಹಿಳೆಯ ಭವಿಷ್ಯದ ಮೇಲೆ ಅವಲಂಬಿತವಾದಾಗ, ಆಕೆ ತನ್ನನ್ನು ಅತ್ಯಾಚಾರ ಎಸಗಿಲ್ಲ ಎಂದು ಹೇಳಿದಾಗ ಎಫ್‌ಐಆರ್‌ ರದ್ದುಗೊಳಿಸುವುದು ನಮ್ಮ ಹಿತಾಸಕ್ತಿಯಾಗಿದೆ ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಹಲವು ದೇಶಗಳಲ್ಲಿ ಬ್ಯಾನ್ : ಭಾರತದ ಹೆಸರು ಕೆಡಿಸುವ ಹುನ್ನಾರ ಎಂದ ನಿರ್ದೇಶಕ

    STOP RAPE

    ಐಪಿಸಿಯ ಸೆಕ್ಷನ್ 376, 377, 498-A ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಇದೇ ಸೆಕ್ಷನ್‌ ಅಡಿಯಲ್ಲಿ ಚಾರ್ಜ್‌ ಶೀಟ್‌ ಸಹ ಸಲ್ಲಿಸಲಾಗಿದೆ. ಆದರೆ ಅಪರಾಧ ಪ್ರಕ್ರಿಯಾ ಸಂಹಿತೆಯ (CRPC) ಸೆಕ್ಷನ್ 164ರ ಅಡಿಯಲ್ಲಿ ನೀಡಿದ ಹೇಳಿಕೆಯಲ್ಲಿ ದೂರುದಾರರು ತನ್ನ ಮಾವ ಅತ್ಯಾಚಾರ ಪ್ರಯತ್ನ ಮಾತ್ರ ಮಾಡಿದ್ದಾರೆ ಅತ್ಯಾಚಾರ ಮಾಡಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ.

    ತನ್ನ ಸ್ವಂತ ಇಚ್ಛೆಯಿಂದ ಆಕೆ ರಾಜಿ ಮಾಡಿಕೊಂಡಿದ್ದಾರೆ. ಇದರಿಂದ ಎಫ್‌ಐಆರ್ ರದ್ದುಗೊಳಿಸಲು ಯಾವುದೇ ಅಭ್ಯಂತರವಿಲ್ಲ ಎಂದು ದೂರುದಾರರು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನೂ ಓದಿ: ಜೂನ್ 13 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್

    court

    ದೂರುದಾರರು ರಾಜಿ ಮಾಡಿಕೊಳ್ಳಲು 10 ಲಕ್ಷ ರೂ. ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸ್ವೀಕರಿಸಿದ್ದಾರೆ. ಹಾಗಾಗಿ ಪ್ರಕರಣವನ್ನು ರದ್ದುಗೊಳಿಸುವುದು ಸೂಕ್ತವೆಂದು ನ್ಯಾಯಾಲಯ ಪರಿಗಣಿಸಿತು. ಅಲ್ಲದೆ ಅರ್ಜಿದಾರರಿಗೆ ಒಂದು ವಾರದೊಳಗೆ ದೆಹಲಿ ಹೈಕೋರ್ಟ್ ವಕೀಲರ ಕಲ್ಯಾಣ ನಿಧಿಗೆ 12,500 ರೂ ಮೊತ್ತವನ್ನು ಠೇವಣಿ ಮಾಡುವಂತೆ ಸೂಚಿಸಿತು.

    ಯಾವುದೇ ಪ್ರಕರಣವು ಮುಕ್ತಾಯವಾಗುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಅಲ್ಲದೆ ಇದು ವಿಚಾರಣೆಯನ್ನು ಕಡಿಮೆ ಮಾಡುತ್ತದೆ ಎಂದು ನ್ಯಾಯಮೂರ್ತಿ ಶರ್ಮಾ ದೂರುದಾರರ ನಿಲುವನ್ನು ಶ್ಲಾಘಿಸಿದರು. ಅರ್ಜಿದಾರರ ಪರ ವಕೀಲರಾದ ಅಭಿಷೇಕ್ ಶರ್ಮಾ, ರಾಹುಲ್ ಶರ್ಮಾ ಮತ್ತು ಹಿರಿಯ ವಕೀಲ ಅರುಣ್ ಭಾರದ್ವಾಜ್ ವಾದ ಮಂಡಿಸಿದ್ದರು.

  • ಅಪ್ರಾಪ್ತ ಹುಡುಗಿಯ ಕೈ ಹಿಡಿದು ಸುಂದರವಾಗಿವೆ ಅನ್ನೋದು ಲೈಂಗಿಕ ಅಪರಾಧವಲ್ಲ – ಹೈಕೋರ್ಟ್

    ಅಪ್ರಾಪ್ತ ಹುಡುಗಿಯ ಕೈ ಹಿಡಿದು ಸುಂದರವಾಗಿವೆ ಅನ್ನೋದು ಲೈಂಗಿಕ ಅಪರಾಧವಲ್ಲ – ಹೈಕೋರ್ಟ್

    ನವದೆಹಲಿ: ಅಪ್ರಾಪ್ತ ಹುಡುಗಿಯ ಕೈ ಹಿಡಿದುಕೊಂಡು ಸುಂದರವಾಗಿವೆ ಎಂದು ಹೇಳಿದರೆ, ಅದು ಯಾವುದೇ ಲೈಂಗಿಕ ಉದ್ದೇಶದಿಂದ ಕೂಡಿಲ್ಲದೇ ಇದ್ದರೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯನ್ವಯ ಅದು ಲೈಂಗಿಕ ದೌರ್ಜನ್ಯವಾಗುವುದಿಲ್ಲ ಎಂದು ಮೇಘಾಲಯ ಹೈಕೋರ್ಟ್ ಹೇಳಿದೆ.

    crime

    ಕಳೆದ ಮೇ 26ರಂದು ಘಟನೆಗೆ ಸಂಬಂಧಿಸಿದ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಬ್ಲ್ಯೂ. ದಿಯೆಂಗ್ಡೋಹ್, ಅಂತಹ ಪ್ರಕರಣಗಳಲ್ಲಿ ಆರೋಪಿ ಲೈಂಗಿಕ ಉದ್ದೇಶ ಹೊಂದಿಲ್ಲದೆ ಇದ್ದರೆ ಲೈಂಗಿಕ ದೌರ್ಜನ್ಯ ಎಂದು ಹೇಳಲಾಗುವುದಿಲ್ಲ ಎಂದು ತೀರ್ಪು ನೀಡಿದ್ದಾರೆ. ಇದನ್ನೂ ಓದಿ: ಗಂಗಾ ನದಿಯಲ್ಲಿ ಮೀನಿನ ವೈವಿಧ್ಯತೆ ಶೇ.36 ರಷ್ಟು ಹೆಚ್ಚಳ

    ಏನಿದು ಘಟನೆ?: ಒಂಬತ್ತು ವರ್ಷದ ಸಂತ್ರಸ್ತ ಬಾಲಕಿಯ ಬಳಿ 55 ವರ್ಷದ ಅಂಗಡಿ ಮಾಲೀಕನೊಬ್ಬ ನೀರು ತರಲು ಕೇಳಿದ್ದಾನೆ. ಹುಡುಗಿ ನೀರು ತಂದುಕೊಟ್ಟಾಗ ಆರೋಪಿಯು ಆಕೆಯ ಕೈ ಹಿಡಿದುಕೊಂಡು ನೇವರಿಸಿದ್ದಾನೆ. ನಂತರ ಆಕೆಯ ಕೈಗಳು ಸುಂದರವಾಗಿವೆ ಎಂದು ಹೇಳಿದ್ದಾನೆ. ಇದರಿಂದ ಸಂತ್ರಸ್ತೆ ತಕ್ಷಣವೇ ಸ್ಥಳದಿಂದ ತೆರಳಿದ್ದು ತನ್ನ ತಾಯಿಗೆ ಘಟನೆ ಬಗ್ಗೆ ತಿಳಿಸಿದ್ದಾಳೆ. ನಂತರ ತಾಯಿಯೊಂದಿಗೆ ತೆರಳಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ರಜೆ ಬೇಕೆಂದ್ರೆ ಲಾಡ್ಜ್‌ಗೆ ಬನ್ನಿ – ಮಹಿಳಾ ನೌಕರರಿಗೆ ಎಸ್‌ಪಿ ಕಚೇರಿ ಅಧಿಕಾರಿಯಿಂದ ಕಿರುಕುಳ

    crime

    ಆರೋಪಿ ವಿರುದ್ಧ IPC ಸೆಕ್ಷನ್ 354 (ಮಹಿಳೆಯರ ಮೇಲಿನ ದೌರ್ಜನ್ಯ), 354 A (ಲೈಂಗಿಕ ಕಿರುಕುಳ), ಪೋಕ್ಸೋ ಕಾಯ್ದೆ ಸೆಕ್ಷನ್- 7 (ಲೈಂಗಿಕ ದೌರ್ಜನ್ಯ) ಮತ್ತು ಸೆಕ್ಷನ್ 9 (ಉಲ್ಭಣಗೊಂಡ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನೂ ಓದಿ; 7 ಬಾರಿ ಗುಂಡೇಟು ತಿಂದಿದ್ದ ಅಧಿಕಾರಿ UPSCಯಲ್ಲಿ ಪಾಸ್

    ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ದಿಯೆಂಗ್ಡೋಹ್, ಘಟನೆ ಹಗಲು ಹೊತ್ತಿನಲ್ಲೇ ನಡೆದಿದೆ. ಅರ್ಜಿದಾರರು ಸಹ ಬಾಲಕಿಯ ಕೈಗಳನ್ನು ಕೆಲ ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಂಡಿದ್ದಾರೆ. ಆದರೆ ಆ ಭಾಗವು ಲೈಂಗಿಕ ಉದ್ದೇಶದಿಂದ ಕೂಡಿದೆ ಎಂದು ಹೇಳಲಾಗುವುದಿಲ್ಲ. ಇದರಲ್ಲಿ ಲೈಂಗಿಕವಲ್ಲದ ಉದ್ದೇಶವನ್ನೂ ಊಹಿಸಬಹುದು ಎಂದು ಹೇಳಿದೆ. ಆದ್ದರಿಂದ ಆರೋಪಿ ವಿರುದ್ಧ ಪೋಕ್ಸೊ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ ಎಂದು ತೀರ್ಪು ನೀಡಿದ್ದಾರೆ.

    CRIME

    ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಎಸ್.ಸಿ.ಚಕ್ರವರ್ತಿ, ಎ.ಬರುವಾ ವಾದ ಮಂಡಿಸಿದರೆ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಬಿ.ಭಟ್ಟಾಚಾರ್ಯ ಮತ್ತು ಸರ್ಕಾರಿ ವಕೀಲ ಆರ್.ಕಾಲ್ನಿ ಪ್ರತಿವಾದಿಯಾಗಿದ್ದರು.

  • ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ಸಾವು ಪ್ರಕರಣ – ಪತಿಗೆ 10 ವರ್ಷ ಜೈಲು, 12 ಲಕ್ಷ ದಂಡ

    ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ಸಾವು ಪ್ರಕರಣ – ಪತಿಗೆ 10 ವರ್ಷ ಜೈಲು, 12 ಲಕ್ಷ ದಂಡ

    ತಿರುವನಂತಪುರಂ: ಇಡೀ ಕೇರಳ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ್ದ ಕೇರಳದ ನರ್ಸಿಂಗ್ ವಿದ್ಯಾರ್ಥಿನಿ ವಿಸ್ಮಯಾಳ (22) ಸಾವಿನ ಪ್ರಕರಣದಲ್ಲಿ ಆರೋಪಿಯಾಗಿದ್ದ ಆಕೆಯ ಪತಿ ಎಸ್.ಕಿರಣ್ ಕುಮಾರ್‌ಗೆ 10 ವರ್ಷ ಜೈಲು ಶಿಕ್ಷೆ ಹಾಗೂ 12.55 ಲಕ್ಷ ರೂ. ದಂಡ ವಿಧಿಸಿದೆ.

    ವಿಸ್ಮಯಾಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕಾಗಿ 6 ವರ್ಷ ಜೈಲು 2 ಲಕ್ಷ ರೂ. ದಂಡ, ಕ್ರಿಮಿನಲ್ ಬೆದರಿಕೆಯ ಅಪರಾಧಕ್ಕಾಗಿ 2 ವರ್ಷ ಜೈಲು, 50 ಸಾವಿರ ದಂಡ, ವರ್ದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ 6 ವರ್ಷ ಜೈಲು 10 ಲಕ್ಷ ರೂ. ದಂಡ, ವರದಕ್ಷಿಣೆ ಕಿರುಕುಳ ನೀಡಿದ ಅಪರಾಧಕ್ಕಾಗಿ 1 ವರ್ಷ ಜೈಲು ಹಾಗೂ 5 ಸಾವಿರ ದಂಡ ಸೇರಿದಂತೆ ಒಟ್ಟಾರೆ 25 ವರ್ಷ ಜೈಲು ಶಿಕ್ಷೆ ವಿಧಿಸಿದ್ದರೂ, 10 ವರ್ಷ ಅವರು ಜೈಲು ವಾಸ ಅನುಭವಿಸಬೇಕಾಗುತ್ತದೆ. ಜೊತೆಗೆ 12.55 ಲಕ್ಷ ರೂಪಾಯಿಗಳನ್ನು ವಿಸ್ಮಯಾ ಪೋಷಕರಿಗೆ ಪರಿಹಾರವಾಗಿ ನೀಡಬೇಕಾಗುತ್ತದೆ ಎಂದು ಕೊಲ್ಲಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.

    ಪ್ರಕರಣದ ಏಕೈಕ ಆರೋಪಿಯಾಗಿರುವ ಕಿರಣ್‌ಗೆ ಭಾರತೀಯ ದಂಡ ಸಂಹಿತೆ(IPC)ಯ ಅನ್ವಯ 304B (ವರದಕ್ಷಿಣೆ ಸಾವು), 498 A (ವರದಕ್ಷಿಣೆ ಕಿರುಕುಳ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಈ 3 ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ವಿಸ್ಮಯಾ ಸಾವಿಗೂ ಮುನ್ನ ಗಂಡ-ಹೆಂಡತಿ ನಡುವಿನ ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದಲ್ಲಿ ಪ್ರಮುಖ ಪುರಾವೆಯಾಗಿ ಸಿಕ್ಕಿದ್ದನ್ನು ಆಧಾರಿಸಿ ತೀರ್ಪು ಪ್ರಕಟಿಸಿದೆ.

    ನರ್ಸಿಂಗ್ ವಿದ್ಯಾರ್ಥಿನಿ ವಿಸ್ಮಯಾಳ ಸಾವಿನ ಪ್ರಕರಣದಲ್ಲಿ ಪತಿಯೇ ತಪ್ಪಿತಸ್ಥ ಎಂದು ಕೊಲ್ಲಂ ಕೋರ್ಟ್ ನಿನ್ನೆ ತೀರ್ಪು ನೀಡಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಎನ್.ಸುಜಿತ್ ಅವರು, ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿದ್ದರು.

    ವರದಕ್ಷಿಣೆ ಕಿರುಕುಳದಿಂದ ವಿಸ್ಮಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇರಳ ಪೊಲೀಸರು 500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. 22 ವರ್ಷದ ವಿಸ್ಮಯಾ ಜೂನ್ 21, 2021 ರಂದು ಕೊಲ್ಲಂ ಜಿಲ್ಲೆಯ ಸಾಸ್ತಾಮ ಕೋಟಾದಲ್ಲಿ ತನ್ನ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಘಟನೆಗೆ ಒಂದು ದಿನ ಮೊದಲೇ ವಿಸ್ಮಯಾ ತನ್ನ ಸಂಬಂಧಿಕರಿಗೆ ವರದಕ್ಷಿಣೆ ಕಿರುಕುಳದ ಆರೋಪದ ಬಗ್ಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದಳು. ಜೊತೆಗೆ ತನ್ನ ದೇಹದ ಮೇಲೆ ಗಾಯಗಳು ಹಾಗೂ ಹೊಡೆದ ಗುರುತುಗಳ ಫೋಟೋಗಳನ್ನು ಕಳುಹಿಸಿದ್ದಳು.

    2020ರಲ್ಲಿ ನಡೆದ ವಿವಾಹದ ವೇಳೆ ಕುಮಾರ್‌ಗೆ ವರದಕ್ಷಿಣೆಯಾಗಿ 10 ಲಕ್ಷ ರೂ. ಮೌಲ್ಯದ ಕಾರನ್ನು ನೀಡಿದ್ದಲ್ಲದೆ 100 ಸವರನ್ ಚಿನ್ನ ಹಾಗೂ 1 ಎಕರೆಗೂ ಹೆಚ್ಚು ಭೂಮಿ ನೀಡಲಾಗಿತ್ತು. ಆದರೆ ಕುಮಾರ್‌ಗೆ ಕಾರು ಇಷ್ಟವಾಗದೆ 10 ಲಕ್ಷ ರೂ. ನಗದು ಬೇಕೆಂದು ಬಯಸಿದ್ದ. ಅದು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಆಕೆಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದಾನೆ ಎಂದು ವಿಸ್ಮಯಾಳ ತಂದೆ ಹೇಳಿದ್ದರು. ಈ ಪ್ರಕರಣ ಇಂದು ಅಂತ್ಯಕಂಡಿದ್ದು, ವಿಸ್ಮಯಾಳ ಪತಿಗೆ ಶಿಕ್ಷೆ ವಿಧಿಸಲಾಗಿದೆ.

  • 12 ದಿನಗಳ ಜೈಲುವಾಸದ ನಂತರ ಪತಿಯನ್ನು ನೋಡಿ ಕಣ್ಣೀರಿಟ್ಟ ನವನೀತ್ ರಾಣಾ

    12 ದಿನಗಳ ಜೈಲುವಾಸದ ನಂತರ ಪತಿಯನ್ನು ನೋಡಿ ಕಣ್ಣೀರಿಟ್ಟ ನವನೀತ್ ರಾಣಾ

    ಮುಂಬೈ: 12 ದಿನಗಳ ಜೈಲುವಾಸದ ನಂತರ ಮತ್ತೆ ಶಾಸಕ ಪತಿ ರವಿ ರಾಣಾ ಮತ್ತು ಅಮರಾವತಿ ಸಂಸದೆ ನವನೀತ್ ರಾಣಾ ಒಂದಾಗಿದ್ದು, ಕಣ್ಣೀರಿಟ್ಟಿದ್ದಾರೆ.

    ಗುರುವಾರ ನವನೀತ್ ರಾಣಾ ಬೈಕುಲ್ಲಾ ಜೈಲಿನಿಂದ ಬಿಡುಗಡೆಯಾಗಿದ್ದು, ಆಕೆಯ ಪತಿ ರವಿ ರಾಣಾ ತಲೋಜಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ವೇಳೆ ನವನೀತ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿನ್ನೆಲೆ ರವಿ, ಆಸ್ಪತ್ರೆಗೆ ಮಡದಿಯನ್ನು ನೋಡಲು ಬಂದಿದ್ದಾರೆ. ಪತಿಯನ್ನು ನೋಡಿದ ತಕ್ಷಣ ನವನೀತ್ ಅಳಲು ಪ್ರಾರಂಭ ಮಾಡಿದ್ದಾರೆ. ದಂಪತಿ ಭಾವನಾತ್ಮಕವಾಗಿ ಒಬ್ಬರನ್ನೊಬ್ಬರು ನೋಡಿಕೊಂಡಿದ್ದು, ನಂತರ ರವಿ ಅವರು ಸಾಂತ್ವನ ಮಾಡಿದರು. ಇದನ್ನೂ ಓದಿ: ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್

    ನವನೀತ್ ರಾಣಾ ಅವರ ವಕೀಲರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸಂಸದರು ಅಸ್ವಸ್ಥರಾಗಿದ್ದರು. ಅವರ ರಕ್ತದೊತ್ತಡ ಹೆಚ್ಚಾಗಿದೆ. ಅವರಿಗೆ ದೇಹದಲ್ಲಿ ನೋವು ಮತ್ತು ಸ್ಪಾಂಡಿಲೈಟಿಸ್ ಇತ್ತು. ನಂತರ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದರು.

    Navneet Rana Ravi Rana 2

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124(ಎ) (ದೇಶದ್ರೋಹ) ಮತ್ತು 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ರಾಣಾ ದಂಪತಿಯನ್ನು ಏಪ್ರಿಲ್ 23 ರಂದು ಖಾರ್ ಪೊಲೀಸರು ಬಂಧಿಸಿದ್ದರು.

  • 15 ವರ್ಷದ ಹುಡುಗಿ ಮೇಲೆ ಅತ್ಯಾಚಾರ- ಇಬ್ಬರು ಅಪ್ರಾಪ್ತರು ಸೇರಿ ನಾಲ್ವರ ಬಂಧನ

    ಕೋಲ್ಕತ್ತಾ: ಇತ್ತೀಚೆಗಷ್ಟೇ ಹಿಂಸಾಚಾರ ಕೃತ್ಯ ನಡೆದು, ತನಿಖೆ ಸಿಬಿಐ ಹಂತದಲ್ಲಿರುವಾಗಲೇ ಪಶ್ಚಿಮ ಬಂಗಳಾದ ಬೀರ್ಭುಮ್ ಜಿಲ್ಲೆಯಲ್ಲಿ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್ 14ರ ರಾತ್ರಿ 15 ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

    CRIME 2

    ಘಟನೆಗೆ ಸಂಬಂಧಿಸಿದಂತೆ 14 ವರ್ಷದ ಇಬ್ಬರು ಹುಡುಗರು ಸೇರಿ ನಾಲ್ವರು ಆರೋಪಿಗಳನ್ನು ಬೀರ್ಭುಮ್ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು, ಆರೋಪಿಗಳು ಸ್ಥಳೀಯ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಲಕ್ಷ್ಮೀರಾಮ್ ಸೂರೇನ್ ಮತ್ತು ಸುನೀಲ್ ಇಬ್ಬರು ಯುವಕರನ್ನು ಭಾನುವಾರ ತಡರಾತ್ರಿ ಪರುಯಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಅಪ್ರಾಪ್ತ ಬಾಲಕರನ್ನೂ ಪತ್ತೆಹಚ್ಚಲಾಗಿದೆ ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ತಂದೆಯನ್ನು ಕೊಂದ ಮಾನಸಿಕ ಅಸ್ವಸ್ಥೆ ಅರೆಸ್ಟ್

    ಹುಡುಗಿಯು ಇಲ್ಲಿನ ಶಾಂತಿನಿಕೇತನ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಸ್ಥಳೀಯ ಯುವಕನೊಂದಿಗೆ ಕುಳಿತಿದ್ದಾಗ, ಆತನನ್ನು ಗೆಳೆಯನೆಂದು ಭಾವಿಸಿ, ಕೆಲ ಯುವಕರು ಇಬ್ಬರ ಮೇಲೆ ಮೇಲೆ ಹಲ್ಲೆ ನಡೆಸಿ, ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.

    CRIME (1)

    ಸ್ಥಳೀಯ ನ್ಯಾಯಾಲಯವು ಸೋಮವಾರ ಇಬ್ಬರು ಯುವಕರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಅಪ್ರಾಪ್ತ ಬಾಲಕರನ್ನು ರಿಮ್ಯಾಂಡ್ ರೂಂಗೆ ಕಳುಹಿಸಲಾಗಿದೆ. ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅತ್ಯಾಚಾರದಲ್ಲಿ ನಾಲ್ವರು ಭಾಗಿಯಾಗಿದ್ದಾರೆಯೇ ಇಲ್ಲವೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಬಿರ್ಭೂಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಂದ್ರ ನಾಥ್ ತ್ರಿಪಾಠಿ ಎಚ್‌ಟಿಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    ಪಶ್ಚಿಮ ಬಂಗಾಳ ಮಹಿಳಾ ಆಯೋಗದ ಅಧ್ಯಕ್ಷೆ ಲೀನಾ ಗಂಗೋಪಾಧ್ಯಾಯ ಅವರು ಬಾಲಕಿಯನ್ನು ಭೇಟಿಯಾಗಿ, ಆಕೆಯ ಕುಟುಂಬಸ್ಥರು ಹಾಗೂ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದಾರೆ.

  • ಪಾಕ್ ಹೊಗಳುವ ಹಾಡು ಹಾಕಿದ ಇಬ್ಬರ ವಿರುದ್ಧ ಕೇಸ್

    ಪಾಕ್ ಹೊಗಳುವ ಹಾಡು ಹಾಕಿದ ಇಬ್ಬರ ವಿರುದ್ಧ ಕೇಸ್

    ಲಕ್ನೋ: ಪಾಕಿಸ್ತಾನವನ್ನು ಹೊಗಳುವ ಹಾಡನ್ನು ಹಾಕಿದ ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ಯುಪಿಯ ಬರೇಲಿಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಫೋನ್‍ನಲ್ಲಿ ಪಾಕಿಸ್ತಾನವನ್ನು ಹೊಗಳುವ ಹಾಡನ್ನು ಹಾಕಿಕೊಂಡಿದ್ದರು. ಈ ರೀತಿ ಮಾಡುವುದು ರಾಷ್ಟ್ರೀಯ ಏಕೀಕರಣಕ್ಕೆ ಅಡ್ಡಿಪಡಿಸಿದಂತೆ ಎಂಬ ಆರೋಪದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೈಕ್‍ಗೆ ಲಾರಿ ಡಿಕ್ಕಿ – ಫಾರ್ಮಾ ಕಂಪನಿ ನೌಕರ ಸಾವು

    PAK

    ಪಾಕಿಸ್ತಾನವನ್ನು ಹೊಗಳುವ ಹಾಡನ್ನು ಹಾಕಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದರೂ, ಅವರು ಮತ್ತೆ ಮತ್ತೆ ಅದೇ ಕೆಲಸ ಮಾಡುತ್ತಾರೆ ಎಂದು ಗ್ರಾಮಸ್ಥರಾದ ಆಶಿಶ್ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈ ವ್ಯಕ್ತಿಗಳು ಸಿಂಘೈ ಮುರಾವಾನ್ ಗ್ರಾಮದ ನಿವಾಸಿಗಳು ಎಂದು ಪೊಲೀಸರು ವಿವರಿಸಿರು.

    ನಡೆದಿದ್ದೇನು?
    ಆರೋಪಿಗಳು ಗ್ರಾಮದಲ್ಲಿ ಬೇರೆಯವರಿಗೂ ಕೇಳಿಸುವಂತೆ ಪಾಕಿಸ್ತಾನ್ ಹೊಗಳುವ ಹಾಡನ್ನು ಜೋರಾಗಿ ಹಾಕಿಕೊಂಡಿದ್ದಾರೆ. ಇದನ್ನು ಆಕ್ಷೇಪಿಸಿ ಆಶಿಶ್ ಪ್ರಶ್ನಿಸುತ್ತಾರೆ. ಈ ಹಿನ್ನೆಲೆ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಘಟನೆಯ ವೀಡಿಯೋವನ್ನು ಫೋನ್‍ನಲ್ಲಿ ಸೆರೆಹಿಡಿಯಲಾಗಿದ್ದು, ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.

    ಇದು ಪೊಲೀಸರ ಗಮನಕ್ಕೂ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆದ ಬಳಿಕ ಆಶಿಶ್ ಆರೋಪಿಗಳ ವಿರುದ್ಧ ದೂರನ್ನು ನೀಡಿದ್ದಾರೆ ಎಂದು ಬರೇಲಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್‍ಕುಮಾರ್ ಅಗರ್‍ವಾಲ್ ತಿಳಿಸಿದರು. ಇದನ್ನೂ ಓದಿ:  ರಾಯಬಾಗದಲ್ಲಿ ಆರನೇ ವಾರಕ್ಕೆ ಕಾಲಿಟ್ಟ ‘ಕನ್ನೇರಿ’ ಚಿತ್ರ – ಪ್ರೇಕ್ಷಕರಿಂದ ಸಂಭ್ರಮಾಚರಣೆ

    ರಾಷ್ಟ್ರೀಯ ಏಕೀಕರಣಕ್ಕೆ ಅಡ್ಡಿಪಡಿಸುವ ಕೃತ್ಯಗಳಿಗೆ ಸಂಬಂಧಿಸಿದ ಐಪಿಸಿಯ ಸೆಕ್ಷನ್ 153 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.