Tag: IPC Section

  • ಸೆಕ್ಷನ್‌ 498 ಎ ಅತ್ಯಂತ ಕಠಿಣ ಸೆಕ್ಷನ್‌, ಹಲವು ಸುಳ್ಳು ಕೇಸ್‌ಗಳನ್ನು ರದ್ದು ಮಾಡಿದ್ದೇವೆ: ಸುಪ್ರೀಂ

    ಸೆಕ್ಷನ್‌ 498 ಎ ಅತ್ಯಂತ ಕಠಿಣ ಸೆಕ್ಷನ್‌, ಹಲವು ಸುಳ್ಳು ಕೇಸ್‌ಗಳನ್ನು ರದ್ದು ಮಾಡಿದ್ದೇವೆ: ಸುಪ್ರೀಂ

    – ವರದಕ್ಷಿಣೆ ಕೇಸ್‌ ದುರುಪಯೋಗ ಆಗುತ್ತಿರುವ ಬೆನ್ನಲ್ಲೇ ಕೇಸ್‌ಗಳು ರದ್ದು

    ನವದೆಹಲಿ: ಭಾರತೀಯ ದಂಡ ಸಂಹಿತೆ(IPC) ಸೆಕ್ಷನ್‌ 498 ಎ ಅತ್ಯಂತ ಕಠಿಣ ಸೆಕ್ಷನ್‌ ಎಂದು ಸುಪ್ರೀಂ ಕೋರ್ಟ್‌ (Supreme Court) ಅಭಿಪ್ರಾಯಪಟ್ಟಿದೆ.

    ಮದುವೆಯಾದ 1.5 ತಿಂಗಳೊಳಗೆ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸುವ ವೇಳೆ ನ್ಯಾ. ಬಿ. ನಾಗರತ್ನ ಅವರು ನಾವು ಎಲ್ಲಾ ಪ್ರಕರಣಗಳನ್ನು ಸುಳ್ಳು ಎಂದು ಹೇಳುತ್ತಿಲ್ಲ. ಆದರೆ ನಾವು ಹಲವಾರು 498A ಪ್ರಕರಣಗಳನ್ನು ರದ್ದುಗೊಳಿಸಿದ್ದೇವೆ ಎಂದು ಹೇಳಿದರು.

    ಐಪಿಸಿ ಜಾರಿಯಲ್ಲಿದ್ದಾಗ ಮಹಿಳೆ ವರದಕ್ಷಿಣೆ ಕಿರುಕುಳ (Dowry Harassment) ದೂರು ನೀಡಿದಾಗ ಸೆಕ್ಷನ್‌ 498 ಎ ಅಡಿ ಎಫ್‌ಐಆರ್‌ ದಾಖಲಾಗುತ್ತಿತ್ತು. ವರದಕ್ಷಿಣೆ ಪಿಡುಗನ್ನು ತೊಡೆದು ಹಾಕುವುದು ಈ ಸೆಕ್ಷನ್‌ನ ಮೂಲ ಉದ್ದೇಶವಾಗಿತ್ತು. ಆದರೆ ಈ ಸೆಕ್ಷನ್‌ ದುರುಪಯೋಗ ಆಗುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್‌ಗಳು ಹಲವು ಪ್ರಕರಣಗಳು ರದ್ದು ಮಾಡುತ್ತಿವೆ.  ಇದನ್ನೂ ಓದಿ:  ಧರ್ಮಸ್ಥಳ ಕೇಸ್‌ | ರಾಜ್ಯ ಸರ್ಕಾರವನ್ನೇ ಯಾಮಾರಿಸಿದ ʻಬುರುಡೆʼ ಗ್ಯಾಂಗ್ – ಸುಪ್ರೀಂ ಆದೇಶ ಮುಚ್ಚಿಟ್ಟು ಮಹಾ ಮೋಸ

     

    ಐಪಿಸಿ ಸೆಕ್ಷನ್‌ 498 ಎ ಏನು ಹೇಳುತ್ತೆ?
    ಪತಿ ಅಥವಾ ಅತನ  ಸಂಬಂಧಿಗಳು  ಪತ್ನಿಗೆ ಹಿಂಸೆ ನೀಡಿದರೆ ಈ ಸೆಕ್ಷನ್‌ ಅಡಿ ಕೇಸ್‌ ದಾಖಲಿಸಬಹುದು. ಜಾಮೀನು ರಹಿತ ಕೇಸ್‌ ಇದಾಗಿದ್ದು ಆರೋಪ ಸಾಬೀತಾದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

    ಈ ಸೆಕ್ಷನ್‌ ಅಡಿ ಕೌರ್ಯ ಎಂದರೆ ಏನು?
    ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಅಥವಾ ಮಹಿಳೆಯ ಜೀವ, ಅಂಗ ಅಥವಾ ಆರೋಗ್ಯಕ್ಕೆ (ಮಾನಸಿಕ ಅಥವಾ ದೈಹಿಕ) ಗಂಭೀರ ಗಾಯ ಅಥವಾ ಅಪಾಯವನ್ನುಂಟುಮಾಡುವ ಸ್ವಭಾವದ ಯಾವುದೇ ಉದ್ದೇಶಪೂರ್ವಕ ನಡವಳಿಕೆ. ಇದನ್ನೂ ಓದಿದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಿ – ಜಾತಿ ಸಮೀಕ್ಷೆಗೆ ಷರತ್ತು, ಸರ್ಕಾರಕ್ಕೆ ಬಿಗ್‌ ರಿಲೀಫ್‌

    ಯಾವುದೇ ಆಸ್ತಿ ಅಥವಾ ಬೆಲೆಬಾಳುವ ವಸ್ತುಗಳಿಗಾಗಿ ಕಾನೂನುಬಾಹಿರ ಬೇಡಿಕೆಯನ್ನು ಇಡುವುದು, ಬೇಡಿಕೆಯನ್ನು ಪೂರೈಸಲು ಮಹಿಳೆ ಅಥವಾ ಆಕೆಯ ಸಂಬಂಧಿಗಳು ವಿಫಲವಾದರೆ ಆಕೆಯನ್ನು ಒತ್ತಾಯಿಸುವ ಉದ್ದೇಶದಿಂದ ನೀಡುವ ಕಿರುಕುಳ.

    ಅಪರಾಧದಿಂದ ಸಂತ್ರಸ್ತರಾದ ಮಹಿಳೆಯರು ಅಥವಾ ರಕ್ತಸಂಬಂಧ, ವಿವಾಹ ಅಥವಾ ದತ್ತು ಸ್ವೀಕಾರದ ಮೂಲಕ ಅವರಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಸೆಕ್ಷನ್ 498A ಅಡಿಯಲ್ಲಿ ದೂರು ಸಲ್ಲಿಸಬಹುದು. ಒಂದು ವೇಳೆ ಯಾವುದೇ ಸಂಬಂಧಿಗಳು ಇಲ್ಲದೇ ಇದ್ದರೆ ಆಕೆಯ ಪರವಾಗಿ ರಾಜ್ಯ ಸರ್ಕಾರವು ಸೂಚಿಸಬಹುದಾದ ಯಾವುದೇ ಸಾರ್ವಜನಿಕ ಸೇವಕರು ದೂರು ನೀಡಬಹುದು.

  • ʻಡಿʼ ಗ್ಯಾಂಗ್‌ ವಿರುದ್ಧ 9 ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲು – ಏನ್‌ ಹೇಳುತ್ತೆ ಸೆಕ್ಷನ್ಸ್‌?

    ʻಡಿʼ ಗ್ಯಾಂಗ್‌ ವಿರುದ್ಧ 9 ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲು – ಏನ್‌ ಹೇಳುತ್ತೆ ಸೆಕ್ಷನ್ಸ್‌?

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ (Darshan) ಮತ್ತು ಗ್ಯಾಂಗ್‌ ವಿರುದ್ಧ ಪೊಲೀಸರು ಒಟ್ಟು 9 ಸೆಕ್ಷನ್‌ಗಳ (IPC Sections) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಆರಂಭದಲ್ಲಿ 302, 201 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ತನಿಖೆ ವೇಳೆ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿರುವ ಪೊಲೀಸರು 9 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 302, 201, 120-ಬಿ, 355, 384, 143,147,148, ರೆ/ವಿ 149 ಅಡಿಯಲ್ಲಿ ಪ್ರಕರಣಗಳನ್ನ ದಾಖಲಿಸಲಾಗಿದೆ ಎಂದು ʻಪಬ್ಲಿಕ್‌ ಟಿವಿʼಯಲ್ಲಿ ಲಭ್ಯವಾದ ರಿಮ್ಯಾಂಡ್‌ ಕಾಪಿಯಲ್ಲಿ ಪೊಲೀಸರು (Bengaluru Police) ತಿಳಿಸಿದ್ದಾರೆ. ಯಾವ ಸೆಕ್ಷನ್‌ಗಳು ಏನು ಹೇಳುತ್ತವೆ ಎಂಬುದನ್ನು ನಾವಿಲ್ಲಿ ನೋಡಬಹುದು…

    ಸೆಕ್ಷನ್‌ 302 – ಕೊಲೆಗೆ ದಂಡನೆ
    ಸೆಕ್ಷನ್‌ 201 – ಅಪರಾಧಿಯನ್ನು ರಕ್ಷಿಸುವುದಕ್ಕಾಗಿ ತಪ್ಪು ಮಾಹಿತಿ ಕೊಡುವುದು, ಸಾಕ್ಷ್ಯ ನಾಶ
    ಸೆಕ್ಷನ್‌ 120(ಬಿ) – ಕೊಲೆ ಮಾಡಲು ಮಾಡಿಕೊಂಡ ಅಪರಾಧಿಕ ಒಳ ಸಂಚು. ಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಶಿಕ್ಷೆ ವಿಧಿಸಬೇಕು
    ಸೆಕ್ಷನ್‌ 355 – ತೀವ್ರ ಉದ್ರೇಕದಿಂದಲ್ಲದೇ ವ್ಯಕ್ತಿಗೆ ಅವಮಾನ ಮಾಡಲು ಅವನ ಮೇಲೆ ಹಲ್ಲೆ, ಅಥವಾ ಅಪರಾಧಿಕ ಬಲಪ್ರಯೋಗ ಮಾಡುವುದು
    ಸೆಕ್ಷನ್‌ 384 – ಬಲಾಗ್ದ್ರ ಹಣಕ್ಕಾಗಿ ದಂಡನೆ / ಸುಲಿಗೆ
    ಸೆಕ್ಷನ್‌ 143 – ಕಾನೂನು ಬಾಹಿರ ಕೃತ್ಯ ಎಸಗಿದವರಿಗೆ 6 ತಿಂಗಳ ವರೆಗೆ ಜೈಲು ಅಥವಾ ಸಮಾನಾಂತರ ದಂಡ ವಿಧಿಸಬಹುದಾದ ದಂಡನೆ
    ಸೆಕ್ಷನ್‌ 147 – ದೊಂಬಿ ಗಲಾಟೆ ಮಾಡಿದರೆ ದಂಡನೆ
    ಸೆಕ್ಷನ್‌ 148 – ಮಾರಕ ಆಯುಧಗಳನ್ನು ಬಳಸಿ ದೊಂಬಿ ಮಾಡುವುದು
    ಸೆಕ್ಷನ್‌ 149 – ಒಂದೇ ಉದ್ದೇಶ ಈಡೇರಿಸಲು ಮಾಡಲಾದ ಅಪರಾಧಗಳ ಬಗ್ಗೆ ವಿಧಿಸಿರುವ ಕೂಟದ ಪ್ರತಿಯೊಬ್ಬ ಸದಸ್ಯನೂ ತಪ್ಪಿತಸ್ಥನಾಗುವುದು / ಕೃತ್ಯಕ್ಕೆ ಒಳ ಸಂಚು

    ʻಡಿ’ ಗ್ಯಾಂಗ್ ಪೊಲೀಸ್ ಕಸ್ಟಡಿ ಇಂದು ಅಂತ್ಯ:
    ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾ ಗೌಡ, ವಿನಯ್ ಸೇರಿದಂತೆ ಹಲವರ ಪೊಲೀಸ್ ಕಸ್ಟಡಿ ಅವಧಿ ಇಂದು (ಗುರುವಾರ) ಮುಕ್ತಾಯಗೊಳ್ಳಲಿದೆ. ಜೂನ್ 11ರಂದು ಆರೋಪಿಗಳನ್ನು ಬಂಧಿಸಲಾಗಿದ್ದು, ಈವರೆಗೆ ಪೊಲೀಸರು ವಿವಿಧ ರೀತಿಯಲ್ಲಿ ವಿಚಾರಣೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ, ಜೂನ್ 20ರ ಮಧ್ಯಾಹ್ನದ ನಂತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈಗಾಗಲೇ ದರ್ಶನ್ ಮತ್ತವರ ಗ್ಯಾಂಗ್‌ನ ಆರೋಪಿಗಳನ್ನ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದಾರೆ. ಸ್ಥಳ ಮಹಜರು ನಡೆಸಿ, ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ, ಸ್ವಇಚ್ಚಾ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಮತ್ತೆ ಡಿ ಗ್ಯಾಂಗ್ ನ ಪೊಲೀಸ್ ಕಸ್ಟಡಿಗೆ ಕೇಳದಿರಲು ತೀರ್ಮಾನಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮನವಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

  • ಸೆಕ್ಸ್ ನಡೆಸದಿರುವುದು ಹಿಂದೂ ವಿವಾಹ ಕಾಯ್ದೆ ಅಡಿ ಕ್ರೌರ್ಯ – IPC ಸೆಕ್ಷನ್ 498A ಅಡಿ ಅಲ್ಲ

    ಸೆಕ್ಸ್ ನಡೆಸದಿರುವುದು ಹಿಂದೂ ವಿವಾಹ ಕಾಯ್ದೆ ಅಡಿ ಕ್ರೌರ್ಯ – IPC ಸೆಕ್ಷನ್ 498A ಅಡಿ ಅಲ್ಲ

    ಬೆಂಗಳೂರು: ಪತಿಯಿಂದ ದೈಹಿಕ ಸಂಪರ್ಕ ನಿರಾಕರಿಸುವುದು ಹಿಂದೂ ವಿವಾಹ ಕಾಯ್ದೆ 1955ರ (Hindu Marriage Act 1955) ಅಡಿಯಲ್ಲಿ ಕ್ರೌರ್ಯವಾಗಿದೆ. ಆದ್ರೆ ಐಪಿಸಿ ಸೆಕ್ಷನ್ 498A (IPC Section) ಅಡಿಯಲ್ಲಿ ಇದು ಕ್ರೌರ್ಯವಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka Highcourt) ಮಹತ್ವದ ತೀರ್ಪು ಪ್ರಕಟಿಸಿದೆ. ಈ ಮೂಲಕ ಪತಿ ಹಾಗೂ ಪೋಷಕರ ವಿರುದ್ಧ ಪತ್ನಿ ದಾಖಲಿಸಿದ ಕ್ರಿಮಿನಲ್ ಮೊಕದ್ದಮೆಯನ್ನ ವಜಾಗೊಳಿಸಿದೆ.

    ಐಪಿಸಿ ಸೆಕ್ಷನ್ 498ಎ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ-1961ರ (Dowry Prohibition Act) ಸೆಕ್ಷನ್ 4ರ ಅಡಿಯಲ್ಲಿ ಪತಿ ಹಾಗೂ ಪೋಷಕರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಆರೋಪಪಟ್ಟಿಯನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪತ್ನಿ ಸಲ್ಲಿಸಿದ ದೂರನ್ನೇ ವಜಾಗೊಳಿಸಿದೆ.

    ಪತಿ ಆಧ್ಯಾತ್ಮಿಕ ಸಾಧನೆಯತ್ತ ಮುಖ ಮಾಡಿದ್ದರು, ದೈಹಿಕ ಪ್ರೀತಿಗಿಂತ ಆತ್ಮಗಳ ಪ್ರೀತಿ ಮುಖ್ಯ ಎಂದು ನಂಬಿದ್ದರು. ಪತಿ ತನ್ನ ಹೆಂಡತಿಯೊಂದಿಗೆ ದೈಹಿಕ ಸಂಬಂಧ ಹೊಂದಲು ಎಂದಿಗೂ ಉದ್ದೇಶಿಸಿರಲಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಛತ್ತೀಸ್‌ಗಢದ ಮಾವಿನ ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಪ್ರದರ್ಶನ- ಕೆ.ಜಿಗೆ 2.70 ಲಕ್ಷ ರೂ.

    ಮಹಿಳೆಯೊಬ್ಬರು (Women) 2019ರ ಡಿ.18 ರಂದು ವ್ಯಕ್ತಿಯೊಬ್ಬರನ್ನ ವಿವಾಹವಾಗಿದ್ದರು. ವಿವಾಹವಾಗಿ 28 ದಿನ ಜೊತೆಯಲ್ಲಿದ್ದರು. ಇದಾದ ನಂತರ ಪತಿ ಆಧ್ಯಾತ್ಮಿಕ ಸಾಧನೆಯ ಕಡೆ ಮುಖ ಮಾಡಿದ್ದಾರೆ. ಅಲ್ಲದೇ ದೈಹಿಕ ಪ್ರೀತಿಗಿಂತ, ಆತ್ಮಗಳ ಪ್ರೀತಿ ಮುಖ್ಯವೆನ್ನುತ್ತಿದ್ದ ಪತಿ, ಅಧ್ಯಾತ್ಮಿಕ ಸಾಧಕಿಯೊಬ್ಬರ ಉಪನ್ಯಾಸ ವೀಕ್ಷಿಸುವಂತೆ ತನ್ನ ಪತ್ನಿಗೆ ಹೇಳುತ್ತಿದ್ದರು. ಪತಿಯ ನಡೆಯಿಂದ ಮನನೊಂದ ಪತ್ನಿ ದೈಹಿಕ ಸಂಬಂಧದಿಂದ ನಿರಾಸೆ ಹೊಂದಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.

    2020ರ ಫೆಬ್ರವರಿ 5ರಂದು ಸೆಕ್ಷನ್ 498A ಮತ್ತು ವರದಕ್ಷಿಣೆ ಕಾಯ್ದೆಯ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಿಂದೂ ವಿವಾಹ ಕಾಯ್ದೆ ಸೆಕ್ಷನ್-12(1)(A) ಅಡಿಯಲ್ಲಿ ಆಕೆ ಕೌಟುಂಬಿಕ ನ್ಯಾಯಾಲಯದಲ್ಲೂ ದಾವೆ ಹೂಡಿದ್ದರು. ಈ ಮದುವೆಯನ್ನು ರದ್ದುಗೊಳಿಸುವಂತೆ ಕೋರಿದ್ದರು. 2022ರ ನವೆಂಬರ್ 16 ರಂದು ಮದುವೆ ರದ್ದಾದ ನಂತರ ಪತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಧರಿಸಿದರು. ಇದನ್ನೂ ಓದಿ: Odisha Train Tragedy – ವಿಚಾರಣೆ ಎದುರಿಸಿದ್ದ ಜ್ಯೂನಿಯರ್‌ ಎಂಜಿನಿಯರ್‌ ನಾಪತ್ತೆ

    ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ಕೇಸ್‌ನಲ್ಲಿ ಕ್ರಿಮಿನಲ್ ಪ್ರಕ್ರಿಯೆಗಳನ್ನು ಮುಂದುವರಿಸಲು ಅನುಮತಿಸಲಾಗುವುದಿಲ್ಲ. ಹಾಗೆ ಮಾಡಿದರೆ ಅದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿತ್ತದೆ ಎಂದು ಅಭಿಪ್ರಾಯಪಟ್ಟು ಪತಿ ವಿರುದ್ಧದ ಕಾನೂನು ಪ್ರಕ್ರಿಯೆಯನ್ನೇ ರದ್ದುಗೊಳಿಸಿದೆ.

  • ನಟಿ ಆತ್ಮಹತ್ಯೆಗೆ ಕಾರಣರಾದ ಇಬ್ಬರು ನಕಲಿ ಎನ್‍ಸಿಬಿ ಅಧಿಕಾರಿಗಳು ಅರೆಸ್ಟ್

    ನಟಿ ಆತ್ಮಹತ್ಯೆಗೆ ಕಾರಣರಾದ ಇಬ್ಬರು ನಕಲಿ ಎನ್‍ಸಿಬಿ ಅಧಿಕಾರಿಗಳು ಅರೆಸ್ಟ್

    ಮುಂಬೈ: ಭೋಜ್‍ಪುರಿ ನಟಿ ಆತ್ಮಹತ್ಯೆಗೆ ಕಾರಣರಾದ ಇಬ್ಬರು ನಕಲಿ ಎನ್‍ಸಿಬಿ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ರೇವ್ ಪಾರ್ಟಿ ಹೆಸರಿನಲ್ಲಿ ನಕಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‍ಸಿಬಿ) ಅಧಿಕಾರಿಗಳು ದಾಳಿ ಮಾಡಿದ ಪರಿಣಾಮ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಏನಿದು ಘಟನೆ?
    ಮುಂಬೈ ಜೋಗೇಶ್ವರಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ 28 ವರ್ಷದ ಭೋಜ್‍ಪುರಿ ನಟಿ ಮತ್ತು ಆಕೆಯ ಸ್ನೇಹಿತರ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ನಮಗೆ 20 ಲಕ್ಷ ರೂ. ಕೊಡಲಿಲ್ಲವೆಂದರೆ ನಿಮ್ಮನ್ನು ರೇವ್ ಪಾರ್ಟಿಯಲ್ಲಿ ಸಿಕ್ಕಿಸುತ್ತೇವೆ ಎಂದು ಬೆದರಿಕೆಯನ್ನು ಹಾಕಿದ್ದಾರೆ. ಇದನ್ನೂ ಓದಿ: ವೈರಲ್ ಜ್ವರದ ನಂತರ ಮತ್ತೆ ವರ್ಕೌಟ್‍ಗೆ ಮರಳಿದ ಸಮಂತಾ

    ಈ ಪರಿಣಾಮ ಖಿನ್ನತೆಗೆ ಬಳಗಾದ ಭೋಜ್‍ಪುರಿ ನಟಿ ಡಿಸೆಂಬರ್ 23 ರಂದು ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ಆಕೆಯ ಸ್ನೇಹಿತರು ಪೊಲೀಸರಿಗೆ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

    ಈ ಸಂಬಂಧ ಅಂಬೋಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟಿಯು ಇತ್ತೀಚೆಗೆ ಹೋಟೆಲ್‍ನಲ್ಲಿ ಮೂವರು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದಳು ಎಂದು ಪೊಲೀಸರು ತಿಳಿದುಕೊಂಡಿದ್ದು, ಅಲ್ಲಿ ಇಬ್ಬರು ಪುರುಷರು ಎನ್‍ಸಿಬಿ ಅಧಿಕಾರಿಗಳಂತೆ ನಟಿಸಿದ್ದಾರೆ. ನಂತರ ಅವರ ಬಳಿಗೆ ಹೋಗಿ ಡ್ರಗ್ಸ್ ಸೇವಿಸಿದ್ದಕ್ಕಾಗಿ ನಿಮ್ಮನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

    POLICE JEEP

    ನಟಿ ಮತ್ತು ಆಕೆಯ ಸ್ನೇಹಿತರು ಇದರಿಂದ ಹೆದರಿಕೊಂಡ ಈ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದು, ಆರೋಪಿಗಳು 40 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಆದರೆ ಕೊನೆಯಲ್ಲಿ 20 ಲಕ್ಷ ರೂ. ನೀಡುವಂತೆ ಬೆದರಿಕೆಯನ್ನು ಹಾಕಿದ್ದಾರೆ.

    ಆಗ ನಟಿ ಈ ದೊಡ್ಡ ಮೊತ್ತವನ್ನು ಹೇಗೆ ಹೊಂದಿಸುವುದು ಎಂದು ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ ಎಂದು ಆಕೆಯ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು

    ನಂತರ ಈ ಕುರಿತು ಪೊಲೀಸರು ತನಿಖೆ ಮಾಡಿ ನಕಲಿ ಅಧಿಕಾರಿಗಳಾದ ಸೂರಜ್ ಪರದೇಸಿ(32) ಮತ್ತು ಪ್ರವೀಣ್ ವಾಲಿಂಬೆ(28) ಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಜಿ ಮತ್ತು ಇನ್ನೊಬ್ಬ ಆರೋಪಿ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 306(ಆತ್ಮಹತ್ಯೆ ಪ್ರಚೋದನೆ), 170(ಸರ್ಕಾರಿ ನೌಕರನಂತೆ ನಟಿಸುವುದು) 420 (ವಂಚನೆ), 384, 388 ಮತ್ತು 389 (ಸುಲಿಗೆ), 506 (ಕ್ರಿಮಿನಲ್ ಬೆದರಿಕೆ), 120 ಬಿ(ಅಪರಾಧ ಸಂಚು) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.