Tag: INX Media

  • ಸಂಸತ್ ಕಲಾಪಕ್ಕೆ ಆಗಮಿಸಿದ ಪಿ.ಚಿದಂಬರಂ

    ಸಂಸತ್ ಕಲಾಪಕ್ಕೆ ಆಗಮಿಸಿದ ಪಿ.ಚಿದಂಬರಂ

    ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನಿನ್ನೆಯಷ್ಟೇ ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದಿದ್ದ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯರಾದ ಪಿ.ಚಿದಂಬರಂ ಇಂದು ಸಂಸತ್ ಕಲಾಪಕ್ಕೆ ಹಾಜರಾದರು.

    ದೆಹಲಿಯ ತಿಹಾರ್ ಜೈಲಿನಲ್ಲಿ ಬರೋಬ್ಬರಿ 105 ದಿನಗಳ ಕಾಲ ಇದ್ದ ಚಿದಂಬರಂ ಅವರನ್ನು ಆಗಸ್ಟ್ 21 ರಂದು ಸಿಬಿಐ ಬಂಧನ ಮಾಡಿತ್ತು. 2007 ರಲ್ಲಿ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶಿ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿಯಿಂದ ದೊರೆತ ಅನುಮೋದನೆಯನ್ನು ಪುತ್ರ ಕಾರ್ತಿ ಚಿದಂಬರಂ ಅವರ ಶಿಫಾರಸಿನ ಮೇಲೆ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಅವರ ಮೇಲೆ ಕೇಳಿ ಬಂದಿತ್ತು.

    ನ್ಯಾ. ಆರ್ ಭಾನುಮತಿ ನೇತೃತ್ವದ ತ್ರಿ ಸದಸ್ಯ ಪೀಠ ಚಿದಂಬರಂ ಡಿ.4 ರಂದು ಷರತ್ತುಬದ್ಧ ಜಾಮೀನು ನೀಡಿತ್ತು. ಈ ಮೂಲಕ ಸುಮಾರು 105 ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದ ಕೇಂದ್ರದ ಮಾಜಿ ಸಚಿವರಿಗೆ ಬುಧವಾರ ಬಿಡುಗಡೆಯ ಭಾಗ್ಯ ದೊರೆತಿತ್ತು. 2 ಲಕ್ಷ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಸೇರಿದಂತೆ, ಅನುಮತಿಯಿಲ್ಲದೆ ದೇಶ ಬಿಡುವಂತಿಲ್ಲ ಎಂದು ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.

    ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಮಾಜಿ ಸಚಿವರು ಸಾರ್ವಜನಿಕ ಹೇಳಿಕೆ ಹಾಗೂ ಯಾವುದೇ ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು ಎಂದು ಕೋರ್ಟ್ ಸೂಚಿಸಿತ್ತು. ನವೆಂಬರ್ 15ರಂದು ಪ್ರಕರಣ ಸಂಬಂಧ ಅರ್ಜಿ ವಿಚಾರಣೆ ನಡೆಸಿ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಐಎನ್ ಎಕ್ಸ್ ಪ್ರಕರಣದಲ್ಲಿ ಚಿದಂಬರಂ ಅವರದ್ದು ಪ್ರಮುಖ ಪಾತ್ರವಿದ್ದು, ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

    ಏನಿದು ಪ್ರಕರಣ?
    ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿತ್ತು.  ಇದನ್ನೂ ಓದಿ:  ಬಂಧನಕ್ಕೊಳಗಾದ ನಂತರ ಚಿದಂಬರಂ ತೂಕ 8-9 ಕೆಜಿ ಕಡಿಮೆಯಾಗಿದೆ – ಕುಟುಂಬಸ್ಥರ ಬೇಸರ

  • ಸಿಬಿಐನಿಂದ ಚಿದಂಬರಂ ಅರೆಸ್ಟ್ – ಅಮಿತ್ ಶಾ ವಿಡಿಯೋ ವೈರಲ್

    ಸಿಬಿಐನಿಂದ ಚಿದಂಬರಂ ಅರೆಸ್ಟ್ – ಅಮಿತ್ ಶಾ ವಿಡಿಯೋ ವೈರಲ್

    ಬೆಂಗಳೂರು: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ಬಂಧನವಾಗುತ್ತಿದ್ದಂತೆ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    “ನನ್ನ ವಿರುದ್ಧ ದೂರು ದಾಖಲಾದಾಗ ನಾನು ಹೆದರಲಿಲ್ಲ. ನಾನು ನೇರವಾಗಿ ಸಿಬಿಐ ಕಚೇರಿಗೆ ಹೋಗಿದ್ದೆ. ತಪ್ಪು ಮಾಡದೇ ಇದ್ದರೆ ನಾನು ಯಾಕೆ ಹೆದರಬೇಕು? ನಾನು ಪಲಾಯನವಾದಿಯಲ್ಲ. ಮಾಧ್ಯಮಗಳಿಗೆ ಚಾರ್ಜ್ ಶೀಟ್ ಸಿಕ್ಕಿದೆ. ನನ್ನ ವಿರುದ್ಧ ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಾಗಿದೆ. ಚಾರ್ಜ್ ಶೀಟ್ ನ್ಯಾಯಾಲಯದಲ್ಲಿ ಸಲ್ಲಿಕೆಯಾದ ಬಳಿಕ ಕಾನೂನು ಹೋರಾಟ ಮಾಡುತ್ತೇನೆ. ನನಗೆ ನ್ಯಾಯಾಲಯದಲ್ಲಿ ವಿಶ್ವಾಸವಿದೆ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲಾಗಿದೆ. ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ರಾಜಕೀಯವಾಗಿ ಯಾವ ಹೋರಾಟ ಮಾಡಬೇಕೋ ಆ ಹೋರಾಟವನ್ನು ರಾಜಕೀಯ ಅಂಗಳದಲ್ಲಿ ಮಾಡುತ್ತೇನೆ. ಈ ಪ್ರಕರಣದಲ್ಲಿ ಆರೋಪ ಮುಕ್ತವಾಗಿ ಬರುತ್ತೇನೆ ಎನ್ನುವ ವಿಶ್ವಾಸ ನನಗಿದೆ” ಎಂದು ಅಮಿತ್ ಶಾ ಈ ವಿಡಿಯೋದಲ್ಲಿ ಹೇಳಿದ್ದರು.

    ಏನಿದು ಪ್ರಕರಣ?
    ಸುಮಾರು 60 ಪ್ರಕರಣಗಳಲ್ಲಿ ಬೇಕಿದ್ದ ಕ್ರಿಮಿನಲ್ ಸೊಹ್ರಾಬುದ್ದೀನ್ ಶೇಖ್ ನನ್ನು 2005 ರಲ್ಲಿ ಗುಜರಾತ್ ಪೊಲೀಸರು ಎನ್ ಕೌಂಟರ್ ಮಾಡಿದ್ದರು. ಅಂದಿನ ಗೃಹಮಂತ್ರಿಯಾಗಿದ್ದ ಅಮಿತ್ ಶಾ ಆದೇಶ ಮೇರೆಗೆ ಈ ಎನ್‍ಕೌಂಟರ್ ಮಾಡಲಾಗಿದೆ. ಇದು ನಕಲಿ ಎನ್‍ಕೌಂಟರ್ ಎಂದು ಆರೋಪಿಸಿ ಈ ಪ್ರಕರಣವನ್ನು ಯುಪಿಎ ಸರ್ಕಾರ 2010ರ ಜನವರಿಯಲ್ಲಿ ಸಿಬಿಐಗೆ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಚಿದಂಬರಂ ಗೃಹ ಸಚಿವರಾಗಿದ್ದರು.

    2010ರ ಜುಲೈ ನಲ್ಲಿ ಅಮಿತ್ ಶಾ ಅವರನ್ನು ಸಿಬಿಐ ಬಂಧಿಸಿತ್ತು. ಜಾಮೀನು ಅರ್ಜಿಗೆ ಸಿಬಿಐ ವಿರೋಧಿಸಿ 3 ತಿಂಗಳ ನಂತರ 2010ರ ಅಕ್ಟೋಬರ್ 29 ರಂದು ಅಮಿತ್ ಶಾ ಅವರಿಗೆ ಜಾಮೀನು ಮಂಜೂರಾಗಿತ್ತು. ಈ ಸಂದರ್ಭದಲ್ಲಿ 2 ವರ್ಷದ ವರೆಗೆ ಗುಜರಾತ್ ಪ್ರವೇಶಿಸದಂತೆ ಅಮಿತ್ ಶಾ ಅವರಿಗೆ ಕೋರ್ಟ್ ಷರತ್ತು ವಿಧಿಸಿತ್ತು. ಅಂದು ಬಂಧನಕ್ಕೊಳಗಾಗಿದ್ದ ಅಮಿತ್ ಶಾ ಚಿದಂಬರಂ ಹಾಗೂ ಕಾಂಗ್ರೆಸ್ ವಿರುದ್ಧ ರಾಜಕೀಯ ವಿರೋಧಿಗಳನ್ನು ಟಾರ್ಗೆಟ್ ಮಾಡಲು ಸಿಬಿಐ ಬಳಸಿಕೊಳ್ಳುತ್ತಿರುವ ಆರೋಪ ಮಾಡಿದ್ದರು. ಇಂದು ಕಾಂಗ್ರೆಸ್ ಈ ಆರೋಪವನ್ನು ಮೋದಿ ಸರ್ಕಾರದ ವಿರುದ್ಧ ಮಾಡುತ್ತಿದೆ.

    ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಚಿದಂಬರಂ ನಾಪತ್ತೆಯಾಗಿದ್ದರು. ಸಿಬಿಐ ಅಧಿಕಾರಿಗಳು ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ 2 ಗಂಟೆಯ ಒಳಗಡೆ ವಿಚಾರಣೆ ಹಾಜರಾಗಬೇಕು ಎಂದು ಸೂಚಿಸಿದ್ದರು. ಚಿದಂಬರಂ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಎಲ್ಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿರಲಿಲ್ಲ.

    ಚಿದಂಬರಂ ನಾಪತ್ತೆಯಾದ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ಪ್ರತ್ಯಾರೋಪ ಆರಂಭಗೊಂಡಿತ್ತು. ತಪ್ಪು ಮಾಡಿಲ್ಲ ಎಂದರೆ ಹೆದರಿ ಓಡಿ ಹೋಗುವುದು ಯಾಕೆ? ದೇಶ ಬಿಟ್ಟು ಪರಾರಿಯಾಗಿರುವ ಮಲ್ಯನಿಗೂ ಚಿದಂಬರಂ ಇಬ್ಬರು ಒಂದೇ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕಾಗಿ ವಿರೋಧಿಗಳ ಕೈಯನ್ನು ಕಟ್ಟಿ ಹಾಕುವ ಕೆಲಸ ಮಾಡುತ್ತಿದೆ. ಚಿದಂಬರಂ ವಿರುದ್ಧ ಮಾಡಿರುವ ಷಡ್ಯಂತ್ರ ಇದು ಎಂದು ಟೀಕಿಸುತ್ತಿದ್ದರು.

    ಉದ್ಘಾಟಿಸಿದ ಕಟ್ಟಡವೇ ಲಾಕಪ್:
    ದೆಹಲಿಯ ಲೋಧಿ ರಸ್ತೆಯಲ್ಲಿರುವ ಸಿಬಿಐ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು 2011 ರಲ್ಲಿ ಗೃಹ ಮಂತ್ರಿಯಾಗಿದ್ದ ಚಿದಂಬರಂ ಉದ್ಘಾಟಿಸಿದ್ದರು. ಈಗ ಬಂಧನವಾಗಿರುವ ಚಿದಂಬರಂ ಅವರನ್ನು ಕಚೇರಿಯ ಲಾಕಪ್ ನಲ್ಲಿ ಇಡಲಾಗಿದೆ. ಕೆಳ ಅಂತಸ್ತಿನ ಸೂಟ್ ನಂಬರ್ 5ನೇ ಗೆಸ್ಟ್ ರೂಂನಲ್ಲಿ ಚಿದಂಬರಂ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

  • ಕಾನೂನಿನ ಯಾವ ನಿಬಂಧನೆ ಅಡಿ ಚಿದಂಬರಂಗೆ ನೋಟಿಸ್ – ಸಿಬಿಐಗೆ ವಕೀಲರ ಪ್ರಶ್ನೆ

    ಕಾನೂನಿನ ಯಾವ ನಿಬಂಧನೆ ಅಡಿ ಚಿದಂಬರಂಗೆ ನೋಟಿಸ್ – ಸಿಬಿಐಗೆ ವಕೀಲರ ಪ್ರಶ್ನೆ

    ನವದೆಹಲಿ: ಕಾನೂನಿನ ಯಾವ ನಿಬಂಧನೆ ಅಡಿಯಲ್ಲಿ ನನ್ನ ಕಕ್ಷಿದಾರರಿಗೆ ನೋಟಿಸ್ ನೀಡಿದ್ದೀರಿ ಎಂದು ಚಿದಂಬರಂ ಪರ ವಕೀಲರು ಸಿಬಿಐ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.

    ಐಎನ್‍ಎಕ್ಸ್ ಮೀಡಿಯಾ ಮತ್ತು ಏರ್‍ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಚಿದಂಬರಂ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕೃತಗೊಳಿಸಿದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಬಂಧನಕ್ಕಾಗಿ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಅವರು ಮನೆಯಲ್ಲಿ ಇಲ್ಲದ ಕಾರಣ 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಿ ಎಂದು ಸಿಬಿಐ ಅಧಿಕಾರಿಗಳು ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ.

    ನೋಟಿಸಿನಲ್ಲಿ 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಿದ್ದನ್ನು ಪ್ರಶ್ನೆ ಮಾಡಿರುವ ಚಿದಂಬರಂ ಪರ ವಕೀಲ ಅರ್ಶದೀಪ್ ಸಿಂಗ್ ಖುರಾನ, ನನ್ನ ಕಕ್ಷಿದಾರರು 2 ಗಂಟೆಯ ಒಳಗಡೆ ವಿಚಾರಣೆ ಹಾಜರಾಗಬೇಕೆಂದು ನೋಟಿಸಿನಲ್ಲಿ ಉಲ್ಲೇಖಿಸಿದ್ದೀರಿ. 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಬೇಕೆಂದು ಕಾನೂನಿನ ಯಾವ ನಿಬಂಧನೆ ಅಡಿ ಇದೆ ಎಂದು ಪ್ರಶ್ನೆ ಮಾಡಿದ್ದಾರೆ.

    ಚಿದಂಬರಂ ಅವರು ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಬೆಳಗ್ಗೆ 10.30ಕ್ಕೆ ತುರ್ತು ಅರ್ಜಿ ನಡೆಯಲಿದೆ. ಹೀಗಾಗಿ ಈ ಅರ್ಜಿ ವಿಚಾರಣೆ ನಡೆಯುವರೆಗೂ ನನ್ನ ಕಕ್ಷಿದಾರರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ವಕೀಲರು ಮನವಿ ಮಾಡಿದ್ದಾರೆ.

    ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಜಾಮೀನು ವಜಾಗೊಂಡ ಬೆನ್ನಲ್ಲೇ ಚಿದಂಬರಂ ನಾಪತ್ತೆಯಾಗಿದ್ದು ಫೋನ್ ನಂಬರ್ ಸ್ವಿಚ್ಛ್ ಆಫ್ ಆಗಿದೆ.

    ಏನಿದು ಪ್ರಕರಣ?
    ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿತ್ತು.