Tag: Interpol

  • ದೇಶಭ್ರಷ್ಟರ ಬೇಟೆಗೆ ಮೋದಿ ಸರ್ಕಾರದಿಂದ ʼಭಾರತ್‌ ಪೋಲ್‌ʼ – ವಿದೇಶದಲ್ಲಿ ಅವಿತವರನ್ನು ಕರೆತರಲು ಹೇಗೆ ಸಹಕಾರಿ?

    ದೇಶಭ್ರಷ್ಟರ ಬೇಟೆಗೆ ಮೋದಿ ಸರ್ಕಾರದಿಂದ ʼಭಾರತ್‌ ಪೋಲ್‌ʼ – ವಿದೇಶದಲ್ಲಿ ಅವಿತವರನ್ನು ಕರೆತರಲು ಹೇಗೆ ಸಹಕಾರಿ?

    ಳೆದ 10 ವರ್ಷಗಳಲ್ಲಿ ರಕ್ಷಣೆ ಹಾಗೂ ಕಾನೂನಿನ ವಿಷಯದಲ್ಲಿ ಮೋದಿ ಸರ್ಕಾರ ಬಹಳ ದೊಡ್ಡ ದೊಡ್ಡ ಬದಲಾವಣೆಗಳನ್ನು ತಂದಿದೆ. ಈಗಾಗಲೇ ಐಪಿಸಿ ಕಾನೂನುಗಳನ್ನು ಬಿಎನ್‌ಎಸ್‌ ಜೊತೆ ಬದಲಾಯಿಸಿರುವ ಕೇಂದ್ರ ಈಗ ಕಾನೂನಿಗೆ ಸಂಬಂಧಪಟ್ಟಂತೆ ಮತ್ತೊಂದು ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ದೊಡ್ಡ ದೊಡ್ಡ ಅಕ್ರಮಗಳನ್ನು ಎಸಗಿ ವಿದೇಶದಲ್ಲಿ ತಲೆಮರೆಸಿಕೊಂಡವರನ್ನು ಬೇಟೆಯಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಅಂತರಾಷ್ಟ್ರೀಯ ಪೊಲೀಸರ ಜೊತೆ ಸಂಪರ್ಕ ಸಾಧಿಸುವ ʼಭಾರತ್‌ ಪೋಲ್‌ʼ ಎಂಬ ಪೋರ್ಟಲ್‌ ಅನ್ನು ಆರಂಭಿಸಿದೆ. ಹಾಗಿದ್ರೆ ಏನಿದು ಭಾರತ್‌ ಪೋಲ್?‌ ಇದರ ಎಸಲ ಹೇಗೆ? ವಿದೇಶದಲ್ಲಿ ಅಡಗಿರುವವರನ್ನು ಕರೆತರುವಲ್ಲಿ ಇದರ ಪಾತ್ರ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

    ಭಾರತ್‌ ಪೋಲ್‌ ಎಂದರೇನು?
    ಭಾರತ್‌ ಪೋಲ್‌ ಎಂಬುದು ಹೆಸರೇ ಸೂಚಿಸಿದಂತೆ ಇಂಟರ್‌ಪೋಲ್‌ಗೆ ಸಂಬಂಧಿಸಿದ್ದಾಗಿದೆ.ಭಾರತ್‌ಪೋಲ್‌ ಪೋರ್ಟಲ್‌ಗೆ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಿದ್ದಾರೆ. ಇದನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಭಿವೃದ್ಧಿಪಡಿಸಿದೆ. ಅಂತಾರಾಷ್ಟ್ರೀಯ ತನಿಖಾ ಏಜೆನ್ಸಿಗಳ ನಡುವೆ ಸಂಪರ್ಕ ಸಾಧಿಸುವುದು ಇದೆ ಮುಖ್ಯ ಉದ್ದೇಶವಾಗಿದೆ. ಈ ಪೋರ್ಟಲ್‌ ಮೂಲಕ ಭಾರತದ ತನಿಖಾ ಸಂಸ್ಥೆಗಳು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳೊಂದಿಗೆ ಅಪರಾಧಿಗಳ ರಿಯಲ್‌ ಟೈಮ್‌ ಮಾಹಿತಿಗಳನ್ನು ಹಂಚಿಕೊಳ್ಳಬಹುದು. ಭಾರತ್‌ ಪೋಲ್‌ ಕೂಡ ಇಂಟರ್‌ಪೋಲ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ವಿಶ್ವದ 195 ರಾಷ್ಟ್ರಗಳು ಈ ಪೋರ್ಟಲ್‌ ಮೂಲಕ ಸಂಪರ್ಕಕ್ಕೆ ಸಿಗುತ್ತದೆ.

     

    ಭಾರತ್‌ ಪೋಲ್‌ ಜಾರಿಗೆ ಬಂದಿದ್ದೇಕೆ?
    ಸೈಬರ್ ಅಪರಾಧ, ಹಣಕಾಸು ವಂಚನೆ, ಮಾನವ ಕಳ್ಳಸಾಗಣೆ, ಡ್ರಗ್‌ ಟ್ರಾಫಿಕಿಂಗ್‌ ಮತ್ತು ಸಂಘಟಿತ ಅಪರಾಧಗಳಂತಹ ಕ್ರೈಮ್‌ಗಳು ಹೆಚ್ಚುತ್ತಿರೋ ಸಮಯದಲ್ಲಿ ಭಾರತ್‌ ಪೋಲ್‌ ಪೋರ್ಟಲ್‌ ಅನುಷ್ಠಾನಕ್ಕೆ ಬಂದಿದೆ. ಈ ಅಪರಾಧಗಳು ಅನೇಕ ದೇಶಗಳನ್ನು ವ್ಯಾಪಿಸಿದ್ದು, ಅಪರಾಧಿಗಳನ್ನು ಹಿಡಿಯಲು ಜಾಗತಿಕ ಸಹಕಾರ ಅಗತ್ಯವಾಗಿ ಬೇಕಿದೆ. ಅದರಲ್ಲೂ ಭಾರತ ಈ ರೀತಿಯ ಅಪರಾಧಗಳಿಗೆ ಈಗೀಗ ಹೆಚ್ಚು ಗುರಿಯಾಗುತ್ತಿರುವುದರಿಂದ ಅಂತಾರಾಷ್ಟ್ರೀಯ ಸಹಕಾರ ಅಗತ್ಯ ಇದೆ. ಈ ಹಿನ್ನೆಲೆ ಭಾರತ್‌ಪೋಲ್‌ ಅನ್ನು ಜಾರಿಗೆ ತರಲಾಗಿದ್ದು, ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು ಹಾಗೂ ಭಾರತೀಯ ತನಿಖಾ ಸಂಸ್ಥೆಗಳ ನಡುವೆ ಸೇತುವೆಯಾಗಿ ಈ ಪೋರ್ಟಲ್‌ ಕೆಲಸ ಮಾಡಲಿದೆ.

    ಕಾರ್ಯನಿರ್ವಹಣೆ ಹೇಗೆ?
    ಅಪರಾಧಿಗಳು ಬೇರೆ ರಾಜ್ಯದಲ್ಲಿ ತಲೆಮರೆಸಿಕೊಂಡರೇ ಅಲ್ಲಿನ ಪೊಲೀಸರ ಸಹಾಯದೊಂದಿಗೆ ಅವರನ್ನು ಬಂಧಿಸಬಹುದು. ಆದರೆ ದೊಡ್ಡ ದೊಡ್ಡ ಕ್ರಿಮಿನಲ್‌ಗಳು ಅಪರಾಧವೆಸಗಿ ವಿದೇಶದಲ್ಲಿ ತಲೆಮರೆಸಿಕೊಂಡರೇ ನೇರವಾಗಿ ಹೋಗಿ ಬಂಧಿಸಲು ನಮ್ಮ ಪೊಲೀಸರಿಗೆ ಅವಕಾಶವಿಲ್ಲ. ಆಗ ಕೇಂದ್ರೀಯ ಸಂಸ್ಥೆಗಳ ಸಹಾಯ ಪಡೆದುಕೊಳ್ಳುವುದು ಅನಿವಾರ್ಯವಾಗುತ್ತದೆ.

    ಈ ಹಿಂದೆ ಇಂಟರ್‌ಪೋಲ್‌ ಜೊತೆ ಸಂಪರ್ಕ ಸಾಧಿಸಬೇಕು ಎಂದರೆ ಆ ಕೇಸ್‌ ಸಿಬಿಐಗೆ ವರ್ಗವಾಗಿ ಸಿಬಿಐ ಇಂಟರ್‌ಪೋಲ್‌ ಅನ್ನು ಸಂಪರ್ಕಿಸಬೇಕಿತ್ತು. ಆದರೆ, ಈಗ ಭಾರತ್‌ಪೋಲ್‌ ಪೋರ್ಟಲ್‌ ಅಕ್ಸೆಸ್‌ ಅನ್ನು ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶದ ಪೊಲೀಸರು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡಲಾಗಿದ್ದು, ಈ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಿಂದ ನೇರವಾಗಿ ಅಂತಾರಾಷ್ಟ್ರೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಸಲ್ಲಿಸಬಹುದಾಗಿದೆ. ಇದು ಅತ್ಯಂತ ವೇಗ ಹಾಗೂ ನೇರವಾಗಿರಲಿದೆ ಎಂದು ಹೇಳಲಾಗುತ್ತಿದೆ. ತಪ್ಪೆಸಗಿ ದೇಶ ಬಿಟ್ಟು ಪರಾರಿಯಾದವರ ಬಗ್ಗೆ ಇಂಟರ್‌ಪೋಲ್‌ ಬಳಿ ನೇರವಾಗಿ ಮಾಹಿತಿಯನ್ನು ದೇಶದ ಯಾವುದೇ ಪೊಲೀಸರು ನೇರವಾಗಿ ಪಡೆಯಬಹುದಾಗಿದೆ.

    5 ಹಂತದಲ್ಲಿ ಕಾರ್ಯನಿರ್ವಹಣೆ:
    ಭಾರತ್‌ ಪೋಲ್‌ ಪ್ರಮುಖವಾಗಿ 5 ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಮೊದಲಿಗೆ ಅಂತಾರಾಷ್ಟ್ರೀಯ ಪೊಲೀಸ್‌ ಸಂಸ್ಥೆಗಳ ಜೊತೆ ಸಂಪರ್ಕವನ್ನು ಸಾಧಿಸುತ್ತದೆ. ಬಳಿಕ ಇಂಟರ್‌ಪೋಲ್‌ನ ನೋಟಿಸ್‌ಗಳ ಮೂಲಕ ಅಪರಾಧಿಗಳನ್ನು ಪತ್ತೆ ಹಚ್ಚುತ್ತದೆ. ನಂತರ ಅಪರಾಧಿಗಳ ಉಲ್ಲೇಖಗಳನ್ನು ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ. ಬಳಿಕ ಅಪರಾದಿಗಳ ಬಗ್ಗೆ ಮಾಹಿತಿಯನ್ನು ಹಂಚುತ್ತದೆ. ಕೊನೆಯಲ್ಲಿ ತನ್ನ ಬಳಿ ಇರುವ ಸಂಪನ್ಮೂಲಗಳನ್ನು ಬಳಸಿ ಅಪರಾಧಿಗಳನ್ನು ಸೆರೆಹಿಡಿಯುತ್ತದೆ.

    ರೆಡ್‌ ನೋಟಿಸ್‌ ನೀಡಲು ಸುಲಭ:
    ಇನ್ನು, ಭಾರತ್‌ಪೋಲ್‌ನಿಂದ ಉಂಟಾಗುವ ಮಹತ್ವದ ಪ್ರಯೋಜನವೆಂದರೆ ಅಪರಾಧಿಗಳಿಗೆ, ತಲೆ ಮರೆಸಿಕೊಂಡವರಿಗೆ ನೀಡಲಾಗುತ್ತಿದ್ದ ರೆಡ್‌ ನೋಟಿಸ್‌ನಂತಹ ಇಂಟರ್‌ನ್ಯಾಷನಲ್‌ ನೋಟಿಸ್‌ಗಳನ್ನು ನೇರವಾಗಿಯೇ ನೀಡಬಹುದಾಗಿದೆ. ಈ ಮೂಲಕ ಸದಸ್ಯ ರಾಷ್ಟ್ರಗಳಿಗೆ ಕ್ರಿಮಿನಲ್‌ಗಳ ಬಗ್ಗೆ ಎಚ್ಚರಿಕೆಯನ್ನು ವೇಗವಾಗಿ ನೀಡಬಹುದು. ಇದರಿಂದ ಅಪರಾಧಿಗಳು ಪೊಲೀಸರಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗಲಿದೆ. ಇಷ್ಟು ದಿನ ಪತ್ರ, ಫ್ಯಾಕ್ಸ್‌ ಮತ್ತು ಇಮೇಲ್‌ ಮೂಲಕ ಈ ನೋಟಿಸ್‌ಗಳನ್ನು ನೀಡಲಾಗುತ್ತಿತ್ತು, ಇದರಿಂದ ಆ ನೋಟಿಸ್‌ಗಳು ಕಾರ್ಯರೂಪಕ್ಕೆ ಬರುವುದು ಬಹಳಷ್ಟು ತಡವಾಗುತ್ತಿತ್ತು. ಇದನ್ನೇ ಅಪರಾಧಿಗಳು ಕೂಡ ಅಡ್ವಾಂಟೇಜ್‌ ಆಗಿ ಮಾಡಿಕೊಂಡಿದ್ದರು. ಆದರೆ, ಈಗ ಅಪರಾಧಿಗಳಿಗೆ ಭಾರತ್‌ಪೋಲ್‌ ಪೋರ್ಟಲ್‌ ಕಂಟಕವಾಗಿದೆ.

    ಅದರಲ್ಲೂ ಈ ಪೋರ್ಟಲ್‌ಗೆ ಸ್ಥಳೀಯ ಮಟ್ಟದ ಪೊಲೀಸರಿಗೂ ಅಕ್ಸೆಸ್‌ ನೀಡಲು ಭಾರತ ಸರ್ಕಾರ ಮುಂದಾಗಿದೆ. ಇದು ಪೊಲೀಸರಿಗೆ ಭಾರೀ ಅನುಕೂಲ ಮಾಡಿಕೊಡಲಿದ್ದು, ಇಷ್ಟು ದಿನ ಇಂಟರ್‌ಪೋಲ್‌ನಲ್ಲಿ ಮಾಹಿತಿ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಪ್ಪಲಿದ್ದು, ವಿಚಾರಣೆ ವೇಗ ಪಡೆಯಲಿದೆ. ಇನ್ನು, 2021ರಿಂದ ಭಾರತ ಇಂಟರ್‌ಪೋಲ್‌ ಸಹಕಾರದೊಂದಿಗೆ 100ಕ್ಕೂ ಅಪರಾಧಿಗಳನ್ನು ಹೆಡೆಮುರಿ ಕಟ್ಟಿ ದೇಶಕ್ಕೆ ಕರೆದುಕೊಂಡು ಬಂದಿದೆ. 2024ರಲ್ಲಿಯೇ 26 ಕ್ರಿಮಿನಲ್‌ಗಳನ್ನು ಭಾರತಕ್ಕೆ ಕರೆದುಕೊಂಡು ಬರಲಾಗಿದ್ದು, ಭಾರತ್‌ಪೋಲ್‌ ಬಂದ ಬಳಿಕ ಈ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುವ ಸಾಧ್ಯತೆ ಇದೆ.

    ಹೇಗಿದೆ ಸಿಬಿಐನ ಭಾರತ್‌ ಪೋಲ್?‌
    ಏಕೀಕೃತ ವ್ಯವಸ್ಥೆ: ಈ ವ್ಯವಸ್ಥೆ ಇಂಟರ್‌ಪೋಲ್‌ನೊಂದಿಗೆ ಸಿಬಿಐ ರೀತಿಯಲ್ಲಿ ಸಂಪರ್ಕವನ್ನು ಏರ್ಪಡಿಸಿಕೊಡುತ್ತದೆ. ಭಾರತದ ಎಲ್ಲಾ ಕಾನೂನು ಜಾರಿ ಅಧಿಕಾರಿಗಳು, ಪೊಲೀಸ್‌ ಕಮಿಷನರ್ಗಳು ಮತ್ತು ಪೊಲೀಸ್‌ ಸೂಪರಿಟೆಂಡೆಂಟ್‌ಗಳನ್ನು ಸಂಯೋಜಿಸುತ್ತದೆ.

    ಸರಳಿಕೃತ ವಿನಂತಿ: ಅಪರಾಧಿಗಳನ್ನು ಹುಡುಕಲು 195 ರಾಷ್ಟ್ರಗಳಲ್ಲಿ ಬಳಕೆ ಮಾಡಲಾಗುತ್ತಿರುವ ಟೆಂಪ್ಲೇಟ್‌ಗಳನ್ನು ಬಳಕೆ ಮಾಡಿಕೊಂಡು ಸುಲಭವಾಗಿ ಮತ್ತು ತ್ವರಿತವಾಗಿ ಅಂತಾರಾಷ್ಟ್ರೀಯ ಸಹಕಾರ ಕೋರಲು ಇದು ಸಹಾಯ ಮಾಡುತ್ತದೆ.

     

    ಕ್ಷಿಪ್ರ ಮಾಹಿತಿ ಪ್ರಸರಣ: ಇಂಟರ್‌ಪೋಲ್‌ಗೆ ಅನುಮತಿ ನೀಡಿರುವ ಎಲ್ಲಾ 195 ದೇಶಗಳ ಗುಪ್ತಚರ ಮಾಹಿತಿಯನ್ನು ಭಾರತದ ತನಿಖಾ ಸಂಸ್ಥೆಗಳಿಗೆ ಭಾರತ್‌ ಪೋಲ್‌ ಅತ್ಯಂತ ವೇಗವಾಗಿ ಒದಗಿಸುತ್ತದೆ. ಇದರಿಂದ ತನಿಖೆಯ ವೇಗ ಹೆಚ್ಚಾಗಲಿದೆ.

    ನೋಟಿಸ್‌ ನೀಡುವುದು ಸುಲಭ: ಅಂತಾರಾಷ್ಟ್ರೀಯವಾಗಿ ತಲೆ ಮರೆಸಿಕೊಂಡಿರುವ ಅಪರಾಧಿಗಳಿಗೆ ನೋಟಿಸ್‌ ತಲುಪಿಸುವುದು ಈಗ ಸುಲಭವಾಗಲಿದೆ. ಈ ಪೋರ್ಟಲ್‌ನಲ್ಲಿ ಅಪ್ಲೋಡ್‌ ಆಗುವಂತಹ ಮಾಹಿತಿಗಳು ಅಂತಾರಾಷ್ಟ್ರೀಯ ಪೊಲೀಸರಿಗೆ ಸುಲಭವಾಗಿ ಲಭ್ಯವಾಗಲಿದೆ.

    ಸಾಮರ್ಥ್ಯ ಹೆಚ್ಚಳ: ಈ ಭಾರತ್‌ ಪೋಲ್‌ ಪೋರ್ಟಲ್‌ನಲ್ಲಿ ಕ್ಷಿಪ್ರವಾಗಿ ಮಾಹಿತಿಗಳು ಲಭ್ಯವಾಗುವ ಕಾರಣ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕೇಡಿಗಳನ್ನು ಹುಡುಕುವ ಅಧಿಕಾರ ಸಾಮರ್ಥ್ಯ ಹೆಚ್ಚುತ್ತದೆ. ವಿದೇಶದಲ್ಲಿ ತನಿಖೆ ನಡೆಸಲು ಇದು ಅನುವು ಮಾಡಿಕೊಡುತ್ತದೆ.

    ಇಂಟರ್‌ ಪೋಲ್‌ ಬಗ್ಗೆ ಒಂದಿಷ್ಟು:
    ಇಂಟರ್‌ ಪೋಲ್‌ ಎಂಬುದು ಜಾಗತಿಕ ಕ್ರಮಿನಲ್‌ ಪೊಲೀಸ್‌ ಸಂಸ್ಥೆಯಾಗಿದೆ. ಇದನ್ನು ಅಂತಾರಾಷ್ಟ್ರೀಯ ಪೊಲೀಸ್‌ ಠಾಣೆ ಎಂದೂ ಕರೆಯಲಾಗುತ್ತದೆ. ಈ ಸಂಸ್ಥೆಗೆ 195 ರಾಷ್ಟ್ರಗಳು ತಮ್ಮಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಿದೆ. ಇದರ ಪ್ರಧಾನ ಕಚೇರಿ ಫ್ರಾನ್ಸ್‌ನ ಲಿಯಾನ್‌ನಲ್ಲಿದೆ. ಪ್ರಪಂಚದಲ್ಲಿ 7 ಬ್ಯೂರೋಗಳನ್ನು ಹೊಂದಿರುವ ಇಂಟರ್‌ ಪೋಲ್‌ಗೆ 1949ರಿಂದಲೂ ಭಾರತ ಸದಸ್ಯ ರಾಷ್ಟ್ರ. ಆಯಾ ದೇಶದ ಪ್ರಮುಖ ತನಿಖಾ ಸಂಸ್ಥೆಗಳ ಜೊತೆ ಸೇರಿ ಇದು ಕಾರ್ಯಾಚರಣೆ ನಡೆಸುತ್ತದೆ. ಪ್ರತಿ ದೇಶದಿಂದಲೂ ಒಬ್ಬ ದಕ್ಷ ಪೊಲೀಸ್‌ ಅಧಿಕಾರಿ ಇಂಟರ್‌ ಪೋಲ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಂತಾರಾಷ್ಟ್ರೀಯವಾಗಿ ಅಪರಾಧವನ್ನು ಹತ್ತಿಕ್ಕುವ ಕೆಲಸವನ್ನು ಇದು ಮಾಡುತ್ತದೆ.

  • ವಿಚಾರಣೆಗೆ ಪ್ರಜ್ವಲ್‌ ಗೈರು – ಭಾರತಕ್ಕೆ ಕರೆ ತರೋದು ಹೇಗೆ? ಎಸ್‌ಐಟಿ ಮುಂದಿರುವ ಆಯ್ಕೆ ಏನು?

    ವಿಚಾರಣೆಗೆ ಪ್ರಜ್ವಲ್‌ ಗೈರು – ಭಾರತಕ್ಕೆ ಕರೆ ತರೋದು ಹೇಗೆ? ಎಸ್‌ಐಟಿ ಮುಂದಿರುವ ಆಯ್ಕೆ ಏನು?

    ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ (Prajwal Revanna) ಅವರನ್ನು ಸ್ವದೇಶಕ್ಕೆ ಕರೆ ತರಲು ವಿಶೇಷ ತನಿಖಾ ತಂಡದ (SIT) ಮುಂದಿರುವ ಏಕೈಕ ಆಯ್ಕೆ ಅಂದ್ರೆ ಅದು ರೆಡ್‌ ಕಾರ್ನರ್‌ ನೋಟಿಸ್‌.

    ರೆಡ್‌ ಕಾರ್ನರ್‌ ನೋಟಿಸ್‌ (Red Corner Notice) ಅನ್ನು ಅಷ್ಟು ಸುಲಭವಾಗಿ ಹೊರಡಿಸಲು ಸಾಧ್ಯವಿಲ್ಲ. ಬಹಳಷ್ಟು ಪ್ರಕ್ರಿಯೆ ನಡೆದ ಬಳಿಕ ಈ ನೋಟಿಸ್‌ ಹೊರಡಿಸಲಾಗುತ್ತದೆ. ಇದನ್ನೂ ಓದಿ: ಟಿ20 ವಿಶ್ವಕಪ್‌: ಸ್ಕಾಟ್ಲೆಂಟ್‌ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌ ಲೋಗೋ

     

    ರೆಡ್‌ ಕಾರ್ನರ್‌ ನೋಟಿಸ್‌ ಹೇಗೆ ಹೊರಡಿಸಲಾಗುತ್ತೆ?
    ಪ್ರಜ್ವಲ್ ರೇವಣ್ಣ ಬಂಧನವಾಗದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಆರೋಪಪಟ್ಟಿ (Absconding Chargesheet) ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕು. ಆಗ ಕೋರ್ಟ್‌ ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ಸಮನ್ಸ್‌ ಜಾರಿ ಮಾಡುತ್ತದೆ. ಈ ವೇಳೆ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಎಸ್‌ಐಟಿ ಮಾಹಿತಿ ನೀಡುತ್ತದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಕಣ್ಣಾಮುಚ್ಚಾಲೆ ಆಟ – ವಿಮಾನ ನಿಲ್ದಾಣದಿಂದ ಬರಿಗೈಯಲ್ಲಿ ಪೊಲೀಸರು ವಾಪಸ್‌

    ಸಮನ್ಸ್‌ಗೆ ಗೈರಾದರೆ ಪ್ರಜ್ವಲ್ ಪತ್ತೆಗೆ ಕೋರ್ಟ್‌ ಅನುಮತಿಯೊಂದಿಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಸಿಬಿಐಗೆ ಎಸ್‌ಐಟಿ ಮನವಿ ಮಾಡುತ್ತದೆ. ಬಳಿಕ ಸಿಬಿಐ ಇಂಟರ್‌ಪೋಲ್ (Interpol) ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸುತ್ತದೆ. ರೆಡ್ ಕಾರ್ನರ್ ನೋಟಿಸ್ ಜಾರಿಯಾದ್ರೆ ಪ್ರಜ್ವಲ್ ಯಾವ ದೇಶದಲ್ಲಿ ಇದ್ದಾರೋ ಆ ದೇಶದ ಪೊಲೀಸರೇ ಅವರನ್ನು ವಶಕ್ಕೆ ಪಡೆಯಲು ಅನುಮತಿ ನೀಡುತ್ತದೆ. ವಶಕ್ಕೆ ಪಡೆದ ನಂತರ ಆ ದೇಶದ ಪೊಲೀಸರು ಭಾರತಕ್ಕೆ ಒಪ್ಪಿಸುತ್ತಾರೆ. ಈ ಎಲ್ಲಾ ಪ್ರಕ್ರಿಯೆ ನಡೆಸಬೇಕಾದರೆ ಎಸ್‌ಐಟಿಗೆ ಕನಿಷ್ಠ 40 ದಿನ ಬೇಕಾಗಬಹುದು.

     

    ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದಿಲ್ಲ ಯಾಕೆ?
    ಪ್ರಜ್ವಲ್‌ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಕಾರಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿ ಜರ್ಮನಿ ಹೋಗಿದ್ದಾರೆ. ಹೀಗಾಗಿ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್‌ ಅಷ್ಟು ಸುಲಭವಾಗಿ ರದ್ದು ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದಿಂದ ಆದೇಶ ಬಂದ ಬಳಿಕವಷ್ಟೇ ವಿದೇಶಾಂಗ ಸಚಿವಾಲಯ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದು ಮಾಡಬಹುದಾಗಿದೆ.

     

  • ಏನಿದು ಲುಕ್‌ಔಟ್ ನೋಟಿಸ್, ರೆಡ್ ಕಾರ್ನರ್, ಬ್ಲೂ ಕಾರ್ನರ್ ನೋಟಿಸ್? ಇವು ಹೇಗೆ ಕೆಲಸ ಮಾಡುತ್ತವೆ?

    ಏನಿದು ಲುಕ್‌ಔಟ್ ನೋಟಿಸ್, ರೆಡ್ ಕಾರ್ನರ್, ಬ್ಲೂ ಕಾರ್ನರ್ ನೋಟಿಸ್? ಇವು ಹೇಗೆ ಕೆಲಸ ಮಾಡುತ್ತವೆ?

    ಬೆಂಗಳೂರು: ದೇಶಾದ್ಯಂತ ಸದ್ಯ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ (Prajwal Pendrive Case) ಭಾರೀ ಸದ್ದು ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆಗೆ ಒಳಪಡಿಸಲು ವಿಶೇಷ ತನಿಖಾ ತಂಡ ಲುಕ್‌ಔಟ್ ನೋಟಿಸ್ ಹೊರಡಿಸಿದೆ. ಆದ್ರೆ ಪ್ರಜ್ವಲ್ ವಿದೇಶದಲ್ಲಿ ಇರೋದ್ರಿಂದ ಅವರ ಪತ್ತೆ ಮತ್ತು ಬಂಧನಕ್ಕೆ ರೆಡ್ ಕಾರ್ನರ್ ಮತ್ತು ಬ್ಲೂ ಕಾರ್ನರ್ ನೋಟಿಸ್‌ಗಳನ್ನು ಹೊರಡಿಸುವಂತೆ ಸಿಬಿಐಗೆ ಮನವಿ ಕಳುಹಿಸಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಅಷ್ಟಕ್ಕೂ ಲುಕ್ ಔಟ್ ನೋಟಿಸ್ (lookout Notice), ರೆಡ್ ಕಾರ್ನರ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ (Blue Corner Notice,) ಎಂದರೇನು? ಯಾವ ಸಂದರ್ಭದಲ್ಲಿ ಇವುಗಳನ್ನು ಬಳಕೆ ಮಾಡಲಾಗುತ್ತದೆ? ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಏನಿದು ಲುಕ್ ಔಟ್ ನೋಟಿಸ್?
    ಕ್ರಿಮಿನಲ್ ಪ್ರಕರಣಗಳಲ್ಲಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಜಾರಿಗೊಳಿಸಲಾಗುವ ವಿಶೇಷವಾದ ನೋಟಿಸ್ ಇದಾಗಿದೆ. ಇದನ್ನು ಲುಕ್ ಔಟ್ ಸರ್ಕ್ಯೂಲರ್ (LOC) ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದನ್ನು ವಿದೇಶಾಂಗ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಬ್ಯೂರೋ ಆಫ್ ಇಮಿಗ್ರೇಷನ್ (BOI) ಜಾರಿಗೊಳಿಸುತ್ತದೆ. ಯಾವುದೇ ರಾಜ್ಯಗಳಲ್ಲಿ ಸಂಭವಿಸಿದ ಕ್ರಿಮಿನಲ್ ಪ್ರಕರಣಗಳಿಗೆ ಸಂಬAಧಿಸಿದAತೆ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆ ಹಚ್ಚಲು, ಆಯಾ ರಾಜ್ಯ ಸರ್ಕಾರಗಳ ಅಧೀನ ಕಾರ್ಯದರ್ಶಿ ಹಾಗೂ ಅದಕ್ಕೆ ತತ್ಸಮಾನ ಹುದ್ದೆಗಳಲ್ಲಿರುವ ಅಧಿಕಾರಿಗಳು ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ಮನವಿ ಸಲ್ಲಿಸಿದರೆ ಮಾತ್ರ ಇಂಥ ನೋಟಿಸ್ ಜಾರಿಗೊಳಿಸುತ್ತದೆ. ಇದಲ್ಲದೆ, ರಾಜ್ಯ ಸರ್ಕಾರಗಳು ರಚನೆ ಮಾಡುವ ವಿಶೇಷ ತನಿಖಾ ತಂಡಗಳಿಗೂ (SIT) ಇಂಥ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಅವಕಾಶವಿದೆ. ಇದು ಜಾರಿಯಾಗುತ್ತಲೇ ಆ ಆರೋಪಿಯ ಬಗೆಗಿನ ಎಲ್ಲಾ ವಿವರಗಳು, ಯಾವುದೇ ದೇಶವನ್ನು ಪ್ರವೇಶಿಸಲು ಇರುವ ಮಾರ್ಗಗಳಾದ ವಿಮಾನ ನಿಲ್ದಾಣಗಳು, ಬಂದರುಗಳು, ಅಂತಾರಾಷ್ಟ್ರೀಯ ಹೆದ್ದಾರಿಗಳ ಚೆಕ್ ಪಾಯಿಂಟ್ ಗಳನ್ನು ತಲುಪುತ್ತವೆ. ವಿದೇಶದಲ್ಲಿರುವ ಆರೋಪಿಯು ತನ್ನ ವೀಸಾ ಅವಧಿ ಮುಗಿದ ನಂತರ ಇಮಿಗ್ರೇಷನ್ ವಿಭಾಗವನ್ನು ಸಂಪರ್ಕಿಸಲೇಬೇಕು. ಆಗ ಆತನನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ.

    ಏನಿದು ಇಂಟರ್‌ಪೋಲ್ ರೆಡ್ ನೋಟಿಸ್ ಅಥವಾ ರೆಡ್ ಕಾರ್ನರ್ ನೋಟಿಸ್?
    ರೆಡ್ ಕಾರ್ನರ್ ನೋಟಿಸ್ ಎನ್ನುವುದು ಹಸ್ತಾಂತರ, ಶರಣಾಗತಿ ಅಥವಾ ಅಂತಹದ್ದೇ ಕಾನೂನು ಕ್ರಮಕ್ಕೆ ಬಾಕಿ ಇರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸುವುದಕ್ಕೆ ವಿಶ್ವಾದ್ಯಂತ ಕಾನೂನು ಜಾರಿಗೊಳಿಸಲು ಮಾಡುವ ವಿನಂತಿಯಾಗಿದೆ. ಇದು ಕೋರುವ ದೇಶದಲ್ಲಿ ನ್ಯಾಯಾಂಗ ಅಧಿಕಾರಿಗಳು ನೀಡಿದ ಬಂಧನದ ವಾರಂಟ್ ಅಥವಾ ನ್ಯಾಯಾಲಯದ ಆದೇಶವನ್ನು ಇದಕ್ಕಾಗಿ ಒದಗಿಸಬೇಕು. ಆದಾಗ್ಯೂ, ಆ ವ್ಯಕ್ತಿಯನ್ನು ಬಂಧಿಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವಾಗ ಸದಸ್ಯ ರಾಷ್ಟ್ರಗಳು ತಮ್ಮದೇ ಆದ ಕಾನೂನುಗಳ ಪ್ರಕಾರ ನಡೆದುಕೊಳ್ಳುತ್ತವೆ. ರೆಡ್ ನೋಟಿಸ್ ಎಂಬುದು ಬೇಕಾಗಿರುವ ವ್ಯಕ್ತಿಗೆ (ವಾಂಟೆಡ್) ನೀಡುವ ಅಂತಾರಾಷ್ಟ್ರೀಯ ಎಚ್ಚರಿಕೆ ಮಾತ್ರ, ಇದು ಬಂಧನದ ವಾರಂಟ್ ಅಲ್ಲ. ಆದ್ದರಿಂದ ಅಗತ್ಯವಿರುವ ವ್ಯಕ್ತಿಯನ್ನು ಗುರುತಿಸಲು ಮಾಹಿತಿ, ಅವರ ಹೆಸರು, ಹುಟ್ಟಿದ ದಿನಾಂಕ, ರಾಷ್ಟ್ರೀಯತೆ, ಕೂದಲು ಮತ್ತು ಕಣ್ಣಿನ ಬಣ್ಣ, ಛಾಯಾಚಿತ್ರಗಳು ಮತ್ತು ಬೆರಳಚ್ಚುಗಳು ಲಭ್ಯವಿದ್ದರೆ ಅವುಗಳನ್ನು ಒದಗಿಸುತ್ತಾರೆ

    ಏನಿದು ಬ್ಲೂ ಕಾರ್ನರ್ ನೋಟಿಸ್?
    ವಿದೇಶಗಳಲ್ಲಿ ಅಡಗಿಕೊಂಡಿರುವ ಆರೋಪಿಗಳ ಮಾಹಿತಿ ಸಂಗ್ರಹಕ್ಕೆ ಇಂಟರ್‌ಪೋಲ್‌ಗಳ ಮೂಲಕ ಹೊರಡಿಸುವ ನೋಟಿಸ್ ಇದಾಗಿದೆ. ಇಂಟರ್‌ಪೋಲ್ ತನ್ನ ಸದಸ್ಯ ರಾಷ್ಟ್ರಗಳಲ್ಲಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿ ಆರೋಪಿಯ ಗುರುತು, ಸ್ಥಳ, ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕುತ್ತದೆ. ಇಂಟರ್ ಪೋಲ್ ಒಟ್ಟು 7 ರೀತಿಯ ನೋಟಿಸ್‌ಗಳನ್ನು ನೀಡಬಹುದು. ಅದರಲ್ಲಿ ಬ್ಲೂ ಕಾರ್ನರ್ ನೋಟಿಸ್ ಆರೋಪಿಯ ವಿರುದ್ಧ ಮಾಹಿತಿ ಸಂಗ್ರಹಕ್ಕೆ, ರೆಡ್ ಕಾರ್ನರ್ ಬಂಧನಕ್ಕೆ, ಯೆಲ್ಲೋ ಕಾರ್ನರ್ ನೋಟಿಸ್ ನಾಪತ್ತೆಯಾದವನ ಪತ್ತೆಗೆ ಬಳಸಲಾಗುತ್ತದೆ. ಆದ್ರೆ ಭಾರತದಲ್ಲಿ ಇಂಟರ್ ಪೋಲ್‌ಗೆ ಸಿಬಿಐ ನೋಡಲ್ ಏಜೆನ್ಸಿಯಾಗಿದ್ದು, ಯಾವುದೇ ತನಿಖಾ ಸಂಸ್ಥೆಗಳು ನೋಟಿಸ್ ನೀಡಲು ಮೊದಲು ಸಿಬಿಐಗೆ ಮನವಿ ಸಲ್ಲಿಸಬೇಕಾಗುತ್ತದೆ.

  • ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಔಟ್‌- ಇನ್ನು ಮುಂದೆ ವಿಶ್ವದೆಲ್ಲೆಡೆ ವಂಚಕ ಮೆಹುಲ್‌ ಚೋಕ್ಸಿ ಸಂಚರಿಸಬಹುದು

    ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಔಟ್‌- ಇನ್ನು ಮುಂದೆ ವಿಶ್ವದೆಲ್ಲೆಡೆ ವಂಚಕ ಮೆಹುಲ್‌ ಚೋಕ್ಸಿ ಸಂಚರಿಸಬಹುದು

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ 13 ಸಾವಿರ ಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ (Mehul Choksi) ಹೆಸರನ್ನು ಇಂಟರ್‌ಪೋಲ್‌ (Interpol) ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ತೆಗೆದು ಹಾಕಿದೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೆಹುಲ್ ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್, ನಮ್ಮ ಕಾನೂನು ತಂಡದ ಪ್ರಯತ್ನಗಳಿಂದಾಗಿ ನನ್ನ ಕಕ್ಷಿದಾರರ ಮೇಲಿರುವ ಆರೋಪ ಮತ್ತು ಅವರ ಮೇಲೆ ಹೇರಿದ ಹಲವಾರು ಷರತ್ತುಗಳನ್ನು ಅಂತರರಾಷ್ಟ್ರೀಯ ಸಮುದಾಯವು ಅನುಮೋದಿಸದ ಕಾರಣ ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಇಂಟರ್‌ಪೋಲ್‌ ತೆಗೆದು ಹಾಕಿದೆ ಎಂದು ತಿಳಿಸಿದ್ದಾರೆ.

    ರೆಡ್‌ ಕಾರ್ನರ್‌ ನೋಟಿಸ್‌ (Red Corner Notice) ಪಟ್ಟಿಯಿಂದ ತಮ್ಮ ಹೆಸರು ತೆಗೆದು ಹಾಕುವಂತೆ ಚೋಕ್ಸಿ ಪರ ವಕೀಲರು ಫ್ರಾನ್ಸ್‌ನ ಲಿಯಾನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಗೆ ಮನವಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಅವರ ಹೆಸರನ್ನು ಡೇಟಾಬೇಸ್‌ನಿಂದ ಕೈಬಿಡಲಾಗಿದೆ. ಇಂಟರ್‌ಪೋಲ್‌ ನಿರ್ಧಾರದ ಬಗ್ಗೆ ಕೇಂದ್ರೀಯ ತನಿಖಾ ದಳ (CBI) ಇಲ್ಲಿಯರೆಗೆ ಯಾವುದೇ ಪ್ರತಿಕ್ರಿಯೆನೀಡಿಲ್ಲ.

    ಮುಂದೇನು?
    ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ಆರೋಪಿಗಳು ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧನ ಮಾಡಬಹುದು. ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಹೆಸರನ್ನು ತೆಗೆದ ಹಿನ್ನೆಲೆಯಲ್ಲಿ ಭಾರತವನ್ನು ಹೊರತುಪಡಿಸಿ ಮೆಹುಲ್ ಚೋಕ್ಸಿ ಯಾವುದೇ ದೇಶಕ್ಕೆ ಮುಕ್ತವಾಗಿ ಪ್ರಯಾಣಿಸಬಹುದು.

    ಚೋಕ್ಸಿ ವಿರುದ್ಧ ಆರೋಪ ಏನು?
    ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ (Red Corner Notice) ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಮನವಿ ಮಾಡಿಕೊಂಡಿತ್ತು.  ಇದನ್ನೂ ಓದಿ: ಭಾರತದಲ್ಲಿ ವಂಚನೆ ಮಾಡಿದವರು ಕೆರಿಬಿಯನ್ ದ್ವೀಪಕ್ಕೆ ಓಡುವುದು ಯಾಕೆ?

    ಅತಿ ಹೆಚ್ಚು ಸಾಲ ಮನ್ನಾ ಮಾಡಿಸಿಕೊಂಡ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮೆಹುಲ್ ಚೋಕ್ಸಿ ಹೆಸರಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ಸಾಲ ಮರುಪಾವತಿಸದೆ 2018ರಿಂದ ಬಾರ್ಬಡೋಸ್‍ನ ಆಂಟಿಗುವಾದಲ್ಲಿ ಮೆಹುಲ್ ಚೋಕ್ಸಿ ತಲೆಮರೆಸಿಕೊಂಡಿದ್ದು ಭಾರತಕ್ಕೆ ಕರೆ ತರಲು ಸರ್ಕಾರ ಅಲ್ಲಿನ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸುತ್ತಿದೆ.

    ಏನಿದು ರೆಡ್‌ ಕಾರ್ನರ್‌ನೋಟಿಸ್‌?
    ಇಂಟರ್‌ಪೋಲ್‌ ತನ್ನ 192 ಸದಸ್ಯ ರಾಷ್ಟ್ರಗಳಿಗೆ ಆರೋಪಿ ತಮ್ಮ ದೇಶದಲ್ಲಿ ತಲೆಮರೆಸಿಕೊಂಡಿದ್ದಲ್ಲಿ ಅವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸೂಚಿಸುವ ಆದೇಶವೇ ರೆಡ್‌ ಕಾರ್ನರ್‌ ನೋಟಿಸ್‌. ಚಾರ್ಜ್‌ಶೀಟ್‌ ಸಲ್ಲಿಕೆಯಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪರಾರಿಯಾಗಿರುವ ಆರೋಪಿಗಳ ಇತರ ದೇಶಗಳಿಗೆ ಎಚ್ಚರಿಸುವುದು ರೆಡ್ ಕಾರ್ನರ್ ನೋಟಿಸ್‌ ನೀಡುವುದರ ಉದ್ದೇಶ.

    ಈ ನೋಟಿಸ್‌ ಜಾರಿಯಾದ ಬಳಿಕ ಆರೋಪಿಗಳು ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಪ್ರಯಾಣಿಸುವುದು ಅಸಾಧ್ಯವಾಗಲಿದೆ. ಬಂಧನದ ಬಳಿಕ ಆ ದೇಶದಿಂದ ಆರೋಪಿಗಳನ್ನು ಇನ್ನೊಂದು ದೇಶಕ್ಕೆ ಕಳುಹಿಸಲಾಗುತ್ತದೆ.

    ಪೌರತ್ವ ಹೇಗೆ ಸಿಗುತ್ತದೆ?
    ಕೆರಿಬಿಯನ್ ದ್ವೀಪ ರಾಷ್ಟಗಳ ಪೌರತ್ವ ಪಡೆಯುವುದು ಅತ್ಯಂತ ಸರಳ ಪ್ರಕ್ರಿಯೆಯಾಗಿದೆ. ಈ ರಾಷ್ಟ್ರಗಳ ಪೌರತ್ವ ಪಡೆಯಲು ಅಲ್ಲಿನ ಶುಗರ್ ಇಂಡಸ್ಟ್ರಿ ಡೈವರ್ಸಿಫಿಕೇಷನ್ ಫೌಂಡೇಶನ್‍ಗೆ 1.6 ಕೋಟಿ ರೂ. ದೇಣಿಗೆ ಅಥವಾ ಪೂರ್ವ ನಿಗದಿತ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ 2.8 ಕೋಟಿ ರೂ. ಹಣ ಹೂಡಿಕೆ ಮಾಡಿದರೆ ಆ ದೇಶದ ಪೌರತ್ವ ಸಿಗುತ್ತದೆ. ಆಂಟಿಗುವಾದಲ್ಲಿರುವ ಚೋಕ್ಸಿ ಭಾರತಕ್ಕೆ ಹಸ್ತಾಂತರ ಮಾಡಬೇಕಾದರೆ ಕಾನೂನು ಸಮರ ಮಾಡಬೇಕಾಗುತ್ತದೆ. ಅಲ್ಲಿನ ಕೋರ್ಟ್‌ ಭಾರತದ ವಾದವನ್ನು ಪುರಸ್ಕರಿಸಿದರೆ ಮಾತ್ರ ಚೋಕ್ಸಿಯನ್ನು ಮರಳಿ ದೇಶಕ್ಕೆ ಕರೆ ತರಬಹುದು.

  • ಬಿಟ್ ಕಾಯಿನ್ ಹಗರಣ – ತನಿಖೆಗೆ ಇಡಿ, ಇಂಟರ್‌ಪೋಲ್‌ಗೆ ಪತ್ರ ಬರೆದಿದ್ದ ಸರ್ಕಾರ

    ಬಿಟ್ ಕಾಯಿನ್ ಹಗರಣ – ತನಿಖೆಗೆ ಇಡಿ, ಇಂಟರ್‌ಪೋಲ್‌ಗೆ ಪತ್ರ ಬರೆದಿದ್ದ ಸರ್ಕಾರ

    ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಹ್ಯಾಕರ್ ಶ್ರೀಕಿ ಅರೆಸ್ಟ್ ಆದ ಬಳಿಕ ರಾಜ್ಯ ಸರ್ಕಾರ ಹೆಚ್ಚಿನ ತನಿಖೆ ನಡೆಸಲು ಇಡಿ(ಜಾರಿ ನಿರ್ದೇಶನಾಲಯ) ಮತ್ತು ಇಂಟರ್‌ಪೋಲ್‌ಗೆ ಪತ್ರ ಬರೆದ ವಿಚಾರ ಈಗ ಬೆಳಕಿಗೆ ಬಂದಿದೆ.

    ಇದು ಅಂತಾರಾಷ್ಟ್ರೀಯ ಮಟ್ಟದ ಹಗರಣವಾದ ಕಾರಣ ಹೆಚ್ಚಿನ ತನಿಖೆ ನಡೆಸಲು ಕೋರಿ ಈ ವರ್ಷದ ಮಾರ್ಚ್ 3ರಂದು ಇಡಿಗೆ, ಏಪ್ರಿಲ್ 28ರಂದು ಇಂಟರ್‌ಪೋಲ್‌ಗೆ ರಾಜ್ಯ ಸರ್ಕಾರ ಪತ್ರ ಬರೆದಿತ್ತು.

    ಆರೋಪಿ ಶ್ರೀಕೃಷ್ಣನ ಜಾಲ ವಿದೇಶದಲ್ಲಿಯೂ ಹಬ್ಬಿದೆ. ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮತ್ತು ಹ್ಯಾಕಿಂಗ್ ಪ್ರಕರಣದ ಬಗ್ಗೆ ಇಂಟರ್‌ಪೋಲ್‌ ಹೆಚ್ಚಿನ ತನಿಖೆ ನಡೆಸಬೇಕು ಅಥವಾ ಸೂಕ್ತ ಏಜೆನ್ಸಿ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಕೋರಿತ್ತು. ಇದನ್ನೂ ಓದಿ: ಐಪಿಎಲ್ ಬಿಡ್ಡಿಂಗ್‍ನಲ್ಲಿ ಈ ಇಬ್ಬರಿಗೆ ಭಾರೀ ಬೇಡಿಕೆ

    ತನಿಖೆಗೆ ಕೋರಿದ್ದ ಸಾಕ್ಷ್ಯ ಕೊಡಿ ಎಂದು ವಿಪಕ್ಷ ನಾಯಕರು ಕೇಳುತ್ತಿರುವ ಹೊತ್ತಲ್ಲಿಯೇ ಈ ದಾಖಲೆಗಳು ಬಿಡುಗಡೆ ಆಗಿವೆ. ಈ ಮಧ್ಯೆ, ಜೀವನ್‍ಭೀಮಾ ನಗರ ಪೊಲೀಸರು ಶ್ರೀಕಿಯ ಲ್ಯಾಪ್‍ಟಾಪ್ ತೆರೆಯಲು ಕಸರತ್ತು ಮುಂದುವರೆಸಿದ್ದಾರೆ.

  • ಟ್ರಂಪ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ ಹೊರಡಿಸಿದ ಇರಾನ್‌

    ಟ್ರಂಪ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ ಹೊರಡಿಸಿದ ಇರಾನ್‌

    ಟೆಹರಾನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಇರಾನ್‌ ಅರೆಸ್ಟ್‌ ವಾರೆಂಟ್‌ ಹೊರಡಿಸಿದ್ದು ಇಂಟರ್‌ಪೋಲ್‌ ಬಳಿ ಸಹಾಯ ಮಾಡುವಂತೆ ಮನವಿ ಮಾಡಿದೆ.

    ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ ಅವರನ್ನು ಅಮೆರಿಕ ಸೇನೆ ಈ ವರ್ಷದ ಜನವರಿ 3 ರಂದು ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್‌ ಸೇರಿದಂತೆ 30 ಮಂದಿ ವಿರುದ್ಧ ಅರೆಸ್ಟ್‌ ವಾರಂಟ್‌ ಹೊರಡಿಸಿದೆ.

    ಇರಾನ್‌ ಸರ್ಕಾರ ಟ್ರಂಪ್‌ ಮತ್ತು 30 ಮಂದಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡುವಂತೆ ಇಂಟರ್‌ಪೋಲ್‌ ಬಳಿ ಮನವಿ ಮಾಡಿಕೊಂಡಿದೆ. ಫ್ರಾನ್ಸಿನ ಲಿಯಾನ್‌ನಲ್ಲಿರುವ ಇಂಟರ್‌ಪೋಲ್‌ ಇಲ್ಲಿಯವರೆಗೆ ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಆರೋಪಿಯನ್ನು ಬಂಧಿಸಲು ಅಥವಾ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಗಡೀಪಾರು ಮಾಡಲು ಸರ್ಕಾರಗಳು ಇಂಟರ್‌ಪೋಲ್‌ ಬಳಿ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡುವಂತೆ ಮನವಿ ಮಾಡುತ್ತವೆ. ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾದರೆ ಆರೋಪಿಯನ್ನು ಬಂಧಿಸಿ ಕರೆ ತರಲು ದೇಶಗಳಿಗೆ ಸಹಾಯವಾಗುತ್ತದೆ.

    ಸಾಮಾನ್ಯವಾಗಿ ದೇಶಗಳಿಂದ ಮನವಿ ಬಂದ ಬಳಿಕ ಇಂಟರ್‌ಪೋಲ್‌(ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಪೊಲೀಸ್‌ ಸಂಘಟನೆ) ತನ್ನ ಸಮಿತಿಯ ಬಳಿ ಚರ್ಚೆ ನಡೆಸಿ ನೋಟಿಸ್‌ ನೀಡಬೇಕೇ? ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಸುತ್ತದೆ. ರಾಜಕೀಯ ಉದ್ದೇಶಕ್ಕಾಗಿ ಅಥವಾ ತನ್ನ ಮಾರ್ಗದರ್ಶಿ ನಿಯಮದ ಉಲ್ಲಂಘನೆಯಾಗಿದ್ದಲ್ಲಿ ಇಂಟರ್‌ಪೋಲ್‌ ಸಾಮಾನ್ಯವಾಗಿ ಮನವಿಯನ್ನು ತಿರಸ್ಕರಿಸಿತ್ತದೆ.

    ವೈಮಾನಿಕ ದಾಳಿಯ ಮೂಲಕ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ ಸುಲೇಮಾನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ವಿಮಾನ ನಿಲ್ದಾಣಕ್ಕೆ ಇರಾನ್ ಸೇನಾ ಮುಖ್ಯಸ್ಥರಾಗಿದ್ದ ಸುಲೇಮಾನಿ ಕಾರಿನಲ್ಲಿ ತೆರಳುತ್ತಿದ್ದರು. ಈ ಇಬ್ಬರು ತೆರಳುತ್ತಿದ್ದ ಕಾರನ್ನು ಟಾರ್ಗೆಟ್ ಮಾಡಿದ ಅಮೆರಿಕ ಸೇನೆಗಳು ಡ್ರೋನ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಿ ಏರ್ ಸ್ಟ್ರೈಕ್ ಮಾಡಿತ್ತು. ದಾಳಿಯ ತೀವ್ರತೆಗೆ ಇಬ್ಬರು ತೆರಳುತ್ತಿದ್ದ ಕಾರುಗಳು ಛಿದ್ರ-ಛಿದ್ರವಾಗಿದ್ದವು. ಇದನ್ನೂ ಓದಿ: ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

    ಘಟನೆಯ ಕುರಿತು ಫ್ಲೋರಿಡಾದಲ್ಲಿ ಮಾತನಾಡಿದ್ದ ಟ್ರಂಪ್, ಇತ್ತೀಚೆಗೆ ಅಮೆರಿಕವನ್ನು ಟಾರ್ಗೆಟ್ ಮಾಡಿ ಇರಾಕ್ ನಡೆಸಿದ ದಾಳಿಗಳಲ್ಲಿ ದೇಶದ ಸೈನಿಕ ಸಾವನ್ನಪ್ಪಿದ್ದರು. ಅಲ್ಲದೇ ರಾಕೆಟ್ ದಾಳಿಯಲ್ಲಿ ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬಾಗ್ದಾದ್‍ನ ನಮ್ಮ ವಿದೇಶಾಂಗ ಕಚೇರಿಯ ಮೇಲೆ ಸುಲೈಮನಿ ನಿರ್ದೇಶನದಂತೆ ದಾಳಿ ನಡೆಸಲಾಗಿತ್ತು, ಉಗ್ರರಿಗೆ ಸಹಕಾರ ನೀಡುತ್ತಿದ್ದರು. ಈ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಟ್ರಂಪ್‌ ಏರ್‌ಸ್ಟ್ರೈಕ್‌ ಸಮರ್ಥಿಸಿಕೊಂಡಿದ್ದರು.

    ಸುಲೇಮಾನಿ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ, “ದೇವರು ಪ್ರತೀಕಾರ ತೀರಿಸಿಕೊಳ್ಳುವ ಭರವಸೆ ನೀಡಿದ್ದಾನೆ. ದೇವರ ಅಣತಿಯಂತೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳಲಾಗುವುದು” ಎಂದು ಈ ಹಿಂದೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದರು. ಡೊನಾಲ್ಡ್ ಟ್ರಂಪ್ ಅವರ ಹತ್ಯೆಗಾಗಿ ಇರಾನ್ ಬಹುಮಾನವನ್ನು ಈಗಾಗಲೇ ಘೋಷಿಸಿದೆ. ಇರಾನ್‍ನಲ್ಲಿ 8 ಕೋಟಿ ಜನರಿದ್ದು ಪ್ರತಿಯೊಬ್ಬರೂ ಒಂದೊಂದು ಡಾಲರ್ ನೀಡಿದರೂ ಅದು ಟ್ರಂಪ್ ತಲೆ ತೆಗೆದವರಿಗೆ ಸೇರುತ್ತದೆ ಎಂದು ಹೇಳಿದೆ.

  • ದುಬಾರಿ ಜಾಕೆಟ್ ಧರಿಸಿ ಲಂಡನ್‍ನಲ್ಲಿ ನೀರವ್ ಮೋದಿ ಸುತ್ತಾಟ – ಪ್ರಶ್ನೆಗಳಿಗೆ ನೋ ಕಮೆಂಟ್ಸ್

    ದುಬಾರಿ ಜಾಕೆಟ್ ಧರಿಸಿ ಲಂಡನ್‍ನಲ್ಲಿ ನೀರವ್ ಮೋದಿ ಸುತ್ತಾಟ – ಪ್ರಶ್ನೆಗಳಿಗೆ ನೋ ಕಮೆಂಟ್ಸ್

    ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿ ರಾಜರೋಷವಾಗಿ ಓಡಾಡುತ್ತಿದ್ದಾರೆ.

    ಲಂಡನ್ ನಗರದಲ್ಲಿ ಓಡಾಡುತ್ತಿರುವ ನೀರವ್ ಮೋದಿ ಬಗ್ಗೆ ಟೆಲಿಗ್ರಾಫ್ ವರದಿ ಮಾಡಿದೆ. ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೆ “ನೋ ಕಮೆಂಟ್ಸ್” ಎಂದು ಉತ್ತರಿಸಿದ್ದಾರೆ. 13 ಸಾವಿರ ಕೋಟಿ ರೂ. ವಂಚನೆಗೈದ ಆರೋಪಿ ನೀರವ್ ಮೋದಿಗೆ ಇನ್ನು ಎಷ್ಟು ದಿನ ಲಂಡನ್ ನಲ್ಲಿ ಇರಲಿದ್ದೀರಿ ಎನ್ನುವ ಪ್ರಶ್ನೆಗೆ ಅವರಿಂದ ಯಾವುದೇ ಉತ್ತರ ಬರಲಿಲ್ಲ.

    48 ವರ್ಷದ ನೀರವ್ ಮೋದಿ ಲಂಡನ್ ನಗರದಲ್ಲಿ ಹೋದ ಎಲ್ಲ ಕಡೆ ಪತ್ರಕರ್ತರು ಅವರನ್ನು ಹಿಂಬಾಲಿಸಿದ್ದಾರೆ. ಆದರೆ ಯಾವುದೇ ಪ್ರಶ್ನೆಗೆ ಉತ್ತರಿಸಲಿಲ್ಲ. ಕೊನೆಗೆ ನೀರವ್ ಮೋದಿ ಟ್ಯಾಕ್ಸಿ ಮಾಡಿ ಹೊರಟು ಹೋಗಿರುವ ದೃಶ್ಯ ಸೆರೆಯಾಗಿದೆ.

    ನೀರವ್ ಮೋದಿ ಪಶ್ಚಿಮ ಲಂಡನ್ ನಲ್ಲಿರುವ ಸೊಹೊ ಪ್ರದೇಶದಲ್ಲಿ ಹೊಸ ವಜ್ರದ ವ್ಯಾಪಾರ ಆರಂಭಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಪ್ರಶ್ನೆ ಕೇಳುವಾಗ ನೀರವ್ ಮೋದಿ ಕಪ್ಪು ಬಣ್ಣದ ಆಸ್ಟ್ರೀಚ್ ಕಂಪನಿಯ ಜಾಕೆಟ್ ಧರಿಸಿದ್ದಾರೆ. ಸಾಧಾರಣವಾಗಿ ಆಸ್ಟ್ರೀಚ್ ಕಂಪನಿಯ ಈ ಜಾಕೆಟ್ ಬೆಲೆ 10 ಸಾವಿರ ಡಾಲರ್(6.99 ಲಕ್ಷ ರೂ.)ನಿಂದ ಆರಂಭವಾಗುತ್ತದೆ.

    ಜೀವಕ್ಕೆ ಅಪಾಯವಿದೆ:
    ಭಾರತಕ್ಕೆ ಬಂದರೆ ನನ್ನ ಕಕ್ಷಿದಾರರ ಜೀವಕ್ಕೆ ಅಪಾಯವಿದೆ ಎಂದು ವಜ್ರ ವ್ಯಾಪಾರಿ ನೀರವ್ ಮೋದಿ ವಕೀಲರು ಈ ಹಿಂದೆ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದರು. ಒಂದು ವೇಳೆ ನಾನು ಭಾರತಕ್ಕೆ ಬಂದರೆ ಜೀವಕ್ಕೆ ಅಪಾಯವಿದೆ. ಕೊಲೆ ಬೆದರಿಕೆ ಕೇಳಿಬಂದಿದೆ. ಇದರಿಂದಾಗಿ ನಾನು ಭಾರತಕ್ಕೆ ಬರುವುದಿಲ್ಲ ಅಂತಾ ನೀರವ್ ಮೋದಿ ತಿಳಿಸಿದ್ದಾರೆ ಎಂದು ವಕೀಲ ಇಡಿ ಅಧಿಕಾರಿಗಳಿಗೆ ತಿಳಿಸಿದ್ದರು.

    ಇಡಿ ಅಧಿಕಾರಿಗಳು ನೀರವ್ ಕಂಪನಿ, ಆಸ್ತಿಯನ್ನು ವಶಕ್ಕೆ ಪಡೆದಿದ್ದರಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಅಷ್ಟೇ ಅಲ್ಲದೇ ನೀರವ್ ಬಾಡಿಗೆ ಪಡೆದಿದ್ದ ಜಾಗದ ಮಾಲೀಕರಿಗೆ ಹಣ ಪಾವತಿಸಿಲ್ಲ, ವಜ್ರಾಭರಣಕ್ಕಾಗಿ ಮುಂಗಡ ಹಣ ನೀಡಿದ್ದವರು ತಮ್ಮ ಹಣವನ್ನು ಮರಳಿಸುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಪ್ರಾಣ ಬೆದರಿಕೆ ಇರುವ ಕಾರಣ ನೀರವ್ ಮೋದಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ವಕೀಲರು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಒಂದೇ ಸೆಕೆಂಡಿನಲ್ಲಿ ನೀರವ್ ಮೋದಿಯ 100 ಕೋಟಿ ರೂ. ಮೌಲ್ಯದ ಮನೆ ಧ್ವಂಸ ವಿಡಿಯೋ ನೋಡಿ

    ಏನಿದು ಪ್ರಕರಣ?:
    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಪರಾರಿಯಾಗಿದ್ದಾರೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯಕ್ಕೆ ಮುಟ್ಟುಗೋಲು ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ!

    ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ!

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧನಕ್ಕೆ ಆದೇಶ ಸಿಕ್ಕಿದೆ.

    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ನೀರವ್ ಮೋದಿ ದೂರು ದಾಖಲಾಗುತ್ತಿದ್ದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ನೀರವ್ ಮೋದಿ ಹಾಗೂ ಅವರ ಅಂಕಲ್ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್ ಗೆ ಮನವಿ ಮಾಡಿಕೊಂಡಿತ್ತು.

    ಈ ಸಂಬಂಧ ಸಿಬಿಐ ನೀರವ್ ಮೋದಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ನೀರವ್ ಮೋದಿ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದ್ದು ಯಾವುದೇ ದೇಶದಲ್ಲಿದ್ದರೂ ಬಂಧಿಸುವ ಸಾಧ್ಯತೆ ಇದೆ.

    ಸಿಬಿಐ ನೀರವ್ ಸೇರಿ ಇನ್ನಿತರೆ ಆರೋಪಿಗಳ ಭಾರತೀಯ ಪಾಸ್‍ಪೋರ್ಟ್‍ಗಳನ್ನು ರದ್ದುಪಡಿಸಿ, ಅವರ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಿತ್ತು. ಅಲ್ಲದೇ ನೀರವ್ ಮೋದಿ ವಾಸದ ಖಚಿತಪಡಿಸುವ ಬಗ್ಗೆ ಲಂಡನ್‍ಗೂ ಮಾಹಿತಿ ರವಾನಿಸಿ ಕ್ರಮ ಕೈಗೊಂಡಿತ್ತು. ಆದರೆ ನೀರವ್ ಮೋದಿ ಪಾಸ್ ಪೋರ್ಟ್ ರದ್ದಾದ ಬಳಿಕವೂ ಬೇರೆ ದೇಶದ ಪಾಸ್‍ಪೋರ್ಟ್ ಬಳಸಿ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸಿದ್ದ ಮಾಹಿತಿಯನ್ನು ಇಂಟರ್‍ಪೋಲ್ ಅಧಿಕಾರಿಗಳಿಗೆ ಒದಗಿಸಲಾಗಿದೆ.

    ಏನಿದು ರೆಡ್ ಕಾರ್ನರ್ ನೋಟಿಸ್?
    ಸ್ವದೇಶದಲ್ಲಿ ಯಾವುದೇ ಒಬ್ಬ ವ್ಯಕ್ತ ಅಪರಾಧಿ ಹಿನ್ನೆಲೆಯಲ್ಲಿ ದೇಶವನ್ನು ತೊರೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೆ, ಅಂತಹ ವ್ಯಕ್ತಿಯನ್ನು ಹುಡುಕಿ ಬಂಧಿಸಿ ಅವನನ್ನು ಮರಳಿ ಆ ದೇಶಕ್ಕೆ ಹಸ್ತಾಂತರಿಸುವಂತೆ ಇಂಟರ್ ಪೋಲ್ ಹೊರಡಿಸುವ ನೋಟಿಸಿಗೆ ರೆಡ್ ಕಾರ್ನರ್ ನೋಟಿಸ್ ಎಂದು ಕರೆಯಲಾಗುತ್ತದೆ.

  • ಸೈಫ್ ಅಲಿ ಖಾನ್‍ಗೆ ಇಂಟರ್ ಪೋಲ್ ನಿಂದ ನೋಟಿಸ್ ಜಾರಿ

    ಸೈಫ್ ಅಲಿ ಖಾನ್‍ಗೆ ಇಂಟರ್ ಪೋಲ್ ನಿಂದ ನೋಟಿಸ್ ಜಾರಿ

    ನವದೆಹಲಿ: ಬಲ್ಗೇರಿಯಾದಲ್ಲಿ ಕಾಡು ಹಂದಿ ಬೇಟೆಯಾಡಿದ್ದರ ಕುರಿತು ಸೈಫ್ ಅಲಿ ಖಾನ್ ಗೆ ಇಂಟರ್ ಪೋಲ್ ನೋಟಿಸ್ ಜಾರಿ ಮಾಡಿದೆ.

    ಬೇಟೆಯಾಡಿರುವುದರ ವಿಚಾರ ಕುರಿತು ಸೈಫ್ ಅಲಿ ಖಾನ್ ಅವರಿಂದ ಹೇಳಿಕೆ ಪಡೆಯುವಂತೆ ಬಲ್ಗೇರಿಯಾ ಸರ್ಕಾರ ಇಂಟರ್ ಪೋಲ್ ಗೆ ಸೂಚನೆ ನೀಡಿದೆ.

    ಅನುಮತಿ ಹಾಗೂ ಪರವಾನಗಿ ಪಡೆದುಕೊಳ್ಳದೆ ಸೈಫ್ ಅಲಿ ಖಾನ್ ಅವರ ಏಜೆಂಟ್ ಕಾಡು ಹಂದಿ ಬೇಟೆಯನ್ನು ವ್ಯವಸ್ಥೆ ಮಾಡಿದ್ದರು ಹಾಗಾಗಿ ಏಜೆಂಟ್ ನನ್ನು ಬಲ್ಗೇರಿಯಾ ಪೊಲೀಸರು ಪ್ರಕರಣದಲ್ಲಿ ಸೇರಿಸಿದ್ದಾರೆ. ಪ್ರಕರಣದಲ್ಲಿ ಸೈಫ್ ಅಲಿ ಖಾನ್ ಸಾಕ್ಷಿಯಾಗಿದ್ದು ಒಂದು ತಿಂಗಳ ಹಿಂದೆ ಸೈಫ್ ಅಲಿ ಖಾನ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು.

    ಬಲ್ಗೇರಿಯಾದಲ್ಲಿ ಬೇಟೆಯಾಡಲು ನಿಯಮಗಳಿದ್ದು, ಬೇಟೆಯ ಕಾನೂನಿನ ಪ್ರಕಾರ ಬೇಟೆಯಾಡುವವರು ಆ ದೇಶದ ಬೇಟೆಯಾಡುವ ಪರವಾನಗಿ ಹೊಂದಿರಬೇಕು ಅಥವಾ ಬಲ್ಗೇರಿಯಾ ದೇಶದ ಪರೀಕ್ಷೆಯನ್ನು ಪಾಸ್ ಮಾಡಿ ಪರವಾನಗಿಯನ್ನು ಪಡೆದಿರಬೇಕು.

    ಸೈಫ್ ಅಲಿ ಖಾನ್ ಅವರ ಹೇಳಿಕೆಯನ್ನು ಪಡೆಯುವಂತೆ ಇಂಟರ್ ಪೋಲ್ ನಿಂದ ಬಾಂದ್ರಾ ಘಟಕದ ಕ್ರೈಂ ವಿಭಾಗಕ್ಕೆ ಸೂಚನೆ ಬಂದ ಬೆನ್ನಲ್ಲೇ ಪೊಲೀಸರು ಖಾನ್ ಅವರ ಉಪನಗರ ನಿವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

    ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಸಿಬಿಐ ಮೂಲಕ ಇಂಟರ್ ಪೋಲ್ ನಿಂದ ಕೆಲವು ದಾಖಲೆಗಳು ಬಂದಿತು ಅದನ್ನು ಖಾನ್ ಅವರಿಗೆ ಕಳಿಸಿಕೊಡಲಾಗಿದೆ ಹೇಳಿಕೆಯನ್ನು ಇನ್ನೂ ಪಡೆದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಕಾಡು ಪ್ರಾಣಿಗಳ ಬೇಟೆಯನ್ನು ನಿಷೇಧಿಸಲಾಗಿದೆ.