Tag: internet handling fee

  • ಸಿನಿ ಪ್ರಿಯರಿಗೆ ಬುಕ್‍ಮೈಶೋದಿಂದ ವಂಚನೆ – ಗ್ರಾಹಕ ನ್ಯಾಯಾಲಯದಲ್ಲಿ ಕೇಸ್ ದಾಖಲು

    ಸಿನಿ ಪ್ರಿಯರಿಗೆ ಬುಕ್‍ಮೈಶೋದಿಂದ ವಂಚನೆ – ಗ್ರಾಹಕ ನ್ಯಾಯಾಲಯದಲ್ಲಿ ಕೇಸ್ ದಾಖಲು

    ಹೈದರಾಬಾದ್: ಸಿನಿಮಾ ಟಿಕೆಟ್ ಗಳನ್ನು ಬುಕ್ ಮಾಡುವ ಬುಕ್‍ಮೈಶೋ ಗ್ರಾಹಕರಿಗೆ ವಂಚಿಸುತ್ತಿದೆ ಎಂದು ಆರೋಪಿಸಿ ಹೈದರಾಬಾದಿನ ಗ್ರಾಹಕರೊಬ್ಬರು ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

    ಹೈದರಾಬಾದ್ ಮೂಲದ ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ವಿಜಯ್ ಗೋಪಾಲ್ ಅವರು ಆರ್‌ಟಿಐ ಅಡಿ ಆರ್‌ಬಿಐ ನೀಡಿದ ಮಾಹಿತಿಯನ್ನು ಉಲ್ಲೇಖಿಸಿ ಗ್ರಾಹಕ ನ್ಯಾಯಾಲಯದಲ್ಲಿ ಬುಕ್‍ಮೈ ಶೋ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಪಿವಿಆರ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯನ್ನೂ ಪ್ರತಿವಾದಿಯನ್ನಾಗಿಸಿದ್ದು ಮಾರ್ಚ್ 23 ರಂದು ಈ ಅರ್ಜಿ ವಿಚಾರಣೆಗೆ ಬರಲಿದೆ.

     ಆರ್‌ಬಿಐ ಏನು ಹೇಳುತ್ತೆ?
    ಸಿನಿಮಾ ಟಿಕೆಟ್ ಬುಕಿಂಗ್ ಸೇವೆಗಳನ್ನು ಒದಗಿಸುವ ಅಂತರ್ಜಾಲ ನಿರ್ವಹಣೆ ಗ್ರಾಹಕರಿಂದ ಶುಲ್ಕ ಪಡೆಯಲು ಯಾವುದೇ ಅಧಿಕಾರವಿಲ್ಲ. ಶುಲ್ಕ ವಿಧಿಸಿದರೆ ಆರ್‌ಬಿಐನ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ನಿಬಂಧನೆಗಳನ್ನು ಉಲ್ಲಂಘಿಸಿದಂತಾಗುತ್ತದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳ ಮೂಲಕ ಗ್ರಾಹಕರ ಪಾವತಿಗಳನ್ನು ಸ್ವೀಕರಿಸಲು ಬ್ಯಾಂಕ್‍ಗೆ ವ್ಯಾಪಾರಿಯು ಪಾವತಿಸುವ ಹಣವು ಗೇಟ್ವೇ ಶುಲ್ಕವಾಗಿರುತ್ತದೆ ಎಂದು ಆರ್‌ಬಿಐ ಆರ್‌ಟಿಐ ಅಡಿ ಉತ್ತರ ನೀಡಿದೆ.

    ಗೋಪಾಲ್ ಆರೋಪ ಏನು?
    ಉದಾಹರಣೆಗೆ, ಹೈದರಾಬಾದನಲ್ಲಿ ಬುಕ್‍ಮೈಶೋ ಪೋರ್ಟಲ್ ಮೂಲಕ ಬುಕ್ ಮಾಡಿದರೆ ಒಂದು ಟಿಕೆಟ್‍ಗೆ 157.82 ರೂ. ಪಾವತಿಸಬೇಕು. ಅದೇ ಸಿನಿಮಾವನ್ನು ಪಿವಿಆರ್ ಮಾಲ್ ಗೆ ಹೋಗಿ ಟಿಕೆಟ್ ಪಡೆದರೆ ಕೇವಲ 138 ರೂ. ಇರುತ್ತದೆ. ಈ ಮೂಲಕ ಹೆಚ್ಚುವರಿಯಾಗಿ ಒಂದು ಟಿಕೆಟ್‍ಗೆ 19.82 ರೂ. ಪಾವತಿಸಬೇಕಾಗುತ್ತದೆ. ಈ ಮೊತ್ತದಲ್ಲಿ ಅಂತರ್ಜಾಲ ನಿರ್ವಹಣೆ ಶುಲ್ಕ 16.80 ರೂ. ಮತ್ತು ರೂ 3.02 ಇಂಟಿಗ್ರೇಟೆಡ್ ಜಿಎಸ್‍ಟಿ (ಐಜಿಎಸ್‍ಟಿ) ಶೇ.18 ಒಳಗೊಂಡಿದೆ.

    ಕ್ಯೂ ನಲ್ಲಿ ನಿಲ್ಲಲು ಆಗದಿರುವುದಕ್ಕೆ ಕೆಲ ಗ್ರಾಹಕರು ಇಷ್ಟು ಹೆಚ್ಚಿನ ಹಣವನ್ನು ಪಾವತಿಸುತ್ತಿದ್ದಾರೆ. ಆದರೆ ಯಾವೊಬ್ಬ ಗ್ರಾಹಕರು ಈ ಬಗ್ಗೆ ಯೋಚನೆ ಮಾಡಿಲ್ಲ. ನಿಯಮದ ಪ್ರಕಾರ ಬುಕ್‍ಮೈಶೋ ತನ್ನ ಬ್ಯಾಂಕ್ ಖಾತೆಯ ಮೂಲಕ 16.80 ರೂ. ಪಾವತಿಸಬೇಕೇ ಹೊರತು ಗ್ರಾಹಕರಿಂದಲ್ಲ. ನಾವು ಶಾಪಿಂಗ್ ಮಾಲ್ ಗಳಿಗೆ ಹೋದಾಗ ಒಂದು ಉತ್ಪನ್ನದ ಬೆಲೆ 100 ರೂ. ಆಗಿದ್ದರೆ ನಾವು ಕಾರ್ಡ್ ಮೂಲಕ 100 ರೂ. ಮಾತ್ರ ಪಾವತಿಸುತ್ತೇವೆ. ಆದರೆ ಬುಕ್ ಮೈ ಶೋದಲ್ಲಿ ಟಿಕೆಟ್ ನಿಜವಾದ ಬೆಲೆ ಒಂದು, ಗ್ರಾಹಕರು ಪಾವತಿಸುವ ಬೆಲೆ ಮತ್ತೊಂದು ಆಗಿರುತ್ತದೆ. ಇದು ಎಷ್ಟು ಸರಿ ಎಂದು ವಿಜಯ್ ಗೋಪಾಲ್ ಅವರು ಪ್ರಶ್ನಿಸಿದ್ದಾರೆ.

    ಆನ್ ಲೈನ್ ವ್ಯವಹಾರದ ಸಂದರ್ಭದಲ್ಲಿ ಗ್ರಾಹಕರು, ಹಣಕಾಸು ಸಂಸ್ಥೆಗಳು ವ್ಯಾಪಾರಿಗಳ ಜೊತೆ ಸೇತುವೆಯಂತೆ ರೂಪೇ/ ಮಾಸ್ಟರ್ ಕಾರ್ಡ್ ನಂತಹ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಗ್ರಾಹಕ ತನ್ನ ಡೆಬಿಟ್/ ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿಸುತ್ತಾನೆ. ಗ್ರಾಹಕನ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿ ಅದರಲ್ಲಿ ಹಣ ಇದ್ದರೆ ಮಾತ್ರ ಆತನ ಬ್ಯಾಂಕಿನಿಂದ ಆನ್ ಲೈನ್ ಶಾಪಿಂಗ್ ತಾಣದ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಕೆಲಸವನ್ನು ಕಾರ್ಡ್ ನೀಡುವ ಕಂಪನಿಗಳು ನಿರ್ವಹಿಸುತ್ತದೆ. ಇವುಗಳ ನಿರ್ವಹಣೆಗೆ ಬ್ಯಾಂಕ್ ಗಳಿಂದ ಶುಲ್ಕವನ್ನು ವಸೂಲಿ ಮಾಡುತ್ತವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv