Tag: International Yoga Competition

  • ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆ – ಮಂಡ್ಯದ ಅರ್ಪಿತ ಸಾಧನೆ

    ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆ – ಮಂಡ್ಯದ ಅರ್ಪಿತ ಸಾಧನೆ

    ಮಂಡ್ಯ: ಮಲ್ಲೇಷಿಯಾದಲ್ಲಿ ನಡೆದ ಏಷ್ಯಾ ಪ್ಯಾನಿಕ್ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ (International Yoga Competition) ಮಂಡ್ಯದ ಜೆ.ಕೆ ಅರ್ಪಿತ 3ನೇ ಸ್ಥಾನ ಪಡೆದಿದ್ದಾರೆ.

    ಮಂಡ್ಯ (Mandya) ತಾಲ್ಲೂಕಿನ ಜವನಹಳ್ಳಿ ಗ್ರಾಮದ ಕುಮಾರ್ ಎಂಬುವರ ಪುತ್ರಿ ಅರ್ಪಿತಾ ಅಕ್ಟೋಬರ್ 14ರಂದು ನಡೆದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಮಂಡ್ಯಕ್ಕೆ ಕೀರ್ತಿ ತಂದಿದ್ದಾರೆ.

    ಪ್ರಸ್ತುತ ಹಾಸನ ಜಿಲ್ಲೆಯ ಶ್ರವಣಬೆಳಗೋಳದಲ್ಲಿ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಅರ್ಪಿತಾ, ಕಳೆದ ಜೂನ್‌ನಲ್ಲಿ ಶಿವಮೊಗ್ಗದ ಸಾಗರದಲ್ಲಿ ನಡೆದ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಹಾಗೂ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಡಬ್ಲ್ಯೂಎಫ್ ಯೋಗಾಸನ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದಿದ್ದರು. ಬಳಿಕ ಕೇರಳದ ಎರ್ನಾಕಲಂನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಭಾಗಿಯಾಗಿ ಉತ್ತಮ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದರು.  

    ಈವರೆಗೆ ಎರಡು ರಾಜ್ಯಮಟ್ಟದ ಹಾಗೂ ಎರಡು ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಾಗುವ ಜೊತೆಗೆ ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ 3ನೇ ಬಹುಮಾನ ಪಡೆಯುವ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

  • ಯೋಗ ಸ್ಪರ್ಧೆಯಲ್ಲಿ ಗಮನ ಸೆಳೆದ ಪುಟಾಣಿಗಳು

    ಯೋಗ ಸ್ಪರ್ಧೆಯಲ್ಲಿ ಗಮನ ಸೆಳೆದ ಪುಟಾಣಿಗಳು

    ಮೈಸೂರು: ವಿವಿಧ ಭಂಗಿಯ ಯೋಗಗಳ ಮೂಲಕ ತಮ್ಮ ದೇಹವನ್ನು ಮಣಿಸಿ ಮಕ್ಕಳು ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದರು. ಅಲ್ಲದೆ ಈ ಸ್ಫರ್ದೆಯಲ್ಲಿ ಜಯಗಳಿಸುವ ಮೂಲಕ ವಿದೇಶದಲ್ಲಿ ತಮ್ಮ ಯೋಗ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಪಡೆದರು.

    ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್‍ಶಿಪ್‍ನಲ್ಲಿ ವಿವಿಧ ವಯೋಮಾನದ 1,400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ, ವಿವಿಧ ಭಂಗಿಯ ಯೋಗ ಪ್ರದರ್ಶಿಸಿದರು.

    ಯೋಗದ ಮಹತ್ವ ಸಾರುವ ಈ ಸ್ಪರ್ಧೆಯಲ್ಲಿ 8-10, 10-12, 12-15 ವರ್ಷದ ಬಾಲಕ, ಬಾಲಕಿಯರು ಸೇರಿದಂತೆ 60 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನವರು ಭಾಗವಹಿಸಿದ್ದರು. ಅಥ್ಲೆಟಿಕ್ ಯೋಗಾಸನ, ಆರ್ಟ್ ಸ್ಟಿಕ್ ಸೋಲೊ ಯೋಗಾಸನ, ಸಮೂಹ ಆರ್ಟ್‍ಸ್ಟಿಕ್ ಯೋಗಾಸನ, ರಿದಮ್ಟಿಕ್ ಯೋಗಾಸನವನ್ನು ಪ್ರದರ್ಶಿಸಲಾಯಿತು. ಈ ಸ್ಪರ್ಧೆಯಲ್ಲಿ ವಿಜೇತರಾದವರನ್ನು ವಿದೇಶಗಳಲ್ಲಿ ನಡೆಯುವ ಸ್ಪರ್ಧೆಗಳಿಗೆ ಕಳುಹಿಸಲಾಗುತ್ತದೆ.

    8 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ 5.5 ವರ್ಷದ ನಿಕಿತಾ ಯೋಗ ಸಾಹಸ ಮಾಡಿ ದ್ವಿತೀಯ ಸ್ಥಾನ ಪಡೆದಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ದುಬೈ, ಮಲೇಶಿಯಾ, ಶ್ರೀಲಂಕಾ ಹಾಗೂ ಥೈಲ್ಯಾಂಡಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪುಟಾಣಿ ಭಾಗವಹಿಸಲಿದ್ದಾಳೆ.