Tag: international womens day

  • ಮಹಿಳೆಯರ ಪರ್ಸ್‌ನಲ್ಲಿ ಲಿಪ್‌ಸ್ಟಿಕ್‌ ಮಾತ್ರ ಅಲ್ಲ ಖಾರದಪುಡಿ, ಚಾಕುನೂ ಇರಲಿ – ಮಹಿಳಾ ದಿನಾಚರಣೆಯಂದು ಮಹಾರಾಷ್ಟ್ರ ಸಚಿವರ ಸಲಹೆ

    ಮಹಿಳೆಯರ ಪರ್ಸ್‌ನಲ್ಲಿ ಲಿಪ್‌ಸ್ಟಿಕ್‌ ಮಾತ್ರ ಅಲ್ಲ ಖಾರದಪುಡಿ, ಚಾಕುನೂ ಇರಲಿ – ಮಹಿಳಾ ದಿನಾಚರಣೆಯಂದು ಮಹಾರಾಷ್ಟ್ರ ಸಚಿವರ ಸಲಹೆ

    ಮುಂಬೈ: ಮಹಿಳೆಯರು ತಮ್ಮ ಪರ್ಸ್‌ನಲ್ಲಿ ಲಿಪ್‌ಸ್ಟಿಕ್ ಮಾತ್ರ ಅಲ್ಲ, ಆತ್ಮರಕ್ಷಣೆಗಾಗಿ ಚಾಕು, ಖಾರದಪುಡಿಯನ್ನೂ ಕೊಂಡೊಯ್ಯಬೇಕು ಎಂದು ಮಹಾರಾಷ್ಟ್ರ ಸಚಿವ ಗುಲಾಬ್‌ರಾವ್ ಪಾಟೀಲ್ ಹೇಳಿದ್ದಾರೆ.

    ಜಲಗಾಂವ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ನಾವು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರೂ, ಇಂದು ಕೆಟ್ಟ ಘಟನೆಗಳು ನಡೆಯುತ್ತಿವೆ. ಇಂದಿನ ಪರಿಸ್ಥಿತಿಯಲ್ಲಿ ಆತ್ಮರಕ್ಷಣೆಗಾಗಿ ಚಾಕು ಮತ್ತು ಮೆಣಸಿನ ಪುಡಿ ಕೊಂಡಯ್ಯಬೇಕು ಎಂಬುದು ನನ್ನ ವಿನಂತಿಯಾಗಿದೆ ಎಂದು ಒತ್ತಿ ಹೇಳಿದ್ದಾರೆ.

    ಫೆಬ್ರವರಿ 25 ರಂದು ಪುಣೆಯ MSRTC ಡಿಪೋದಲ್ಲಿ 26 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಕೇಸ್‌ ಸೇರಿದಂತೆ ಮಹಿಳೆಯರ ವಿರುದ್ಧದ ಇತ್ತೀಚಿನ ಅಪರಾಧ ಪ್ರಕರಣಗಳನ್ನು ಅವರು ಉಲ್ಲೇಖಿಸಿ ಈ ಮಾತನ್ನು ಹೇಳಿದ್ದಾರೆ.

  • ನನ್ನ ಜೀವನವು ಕೋಟ್ಯಂತರ ತಾಯಂದಿರ ಆಶೀರ್ವಾದ: ಲಕ್‌ಪತಿ ದೀದಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಮಾತು

    ನನ್ನ ಜೀವನವು ಕೋಟ್ಯಂತರ ತಾಯಂದಿರ ಆಶೀರ್ವಾದ: ಲಕ್‌ಪತಿ ದೀದಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಮಾತು

    ಗಾಂಧೀನಗರ: ನನ್ನ ಜೀವನವು ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ. ನಾನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದವೇ ನನ್ನ ದೊಡ್ಡ ಶಕ್ತಿ. ಮಹಿಳೆಯರನ್ನು ಗೌರವಿಸುವುದೇ ಅಭಿವೃದ್ಧಿ ಹೊಂದಿದ ಭಾರತಕ್ಕೆ ಮೊದಲ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ಗುಜರಾತ್‌ನ ನವಸಾರಿಯಲ್ಲಿ ಲಕ್‌ಪತಿ ದೀದಿಯರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು ವನಸಿ ಬೋರ್ಸಿ ಗ್ರಾಮದಲ್ಲಿ 25,000 ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳ (ಸ್ವಸಹಾಯ ಗುಂಪುಗಳು) 2.5 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ 450 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ವಿತರಿಸಿದರು. ಗುಜರಾತ್‌ಗೆ 2,587 ಕೋಟಿ ರೂ.ಗಳ ಯೋಜನೆಗಳನ್ನು ಉಡುಗೊರೆಯಾಗಿ ನೀಡಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಗುಜರಾತ್ ಸಫಲ್ ಮತ್ತು ಗುಜರಾತ್ ಮೈತ್ರಿ ಎಂಬ ಎರಡು ಯೋಜನೆಗಳನ್ನು ಇಂದು ಇಲ್ಲಿ ಪ್ರಾರಂಭಿಸಲಾಗಿದೆ. ಸರ್ಕಾರದ ಅನೇಕ ಯೋಜನೆಗಳ ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.

    ಇಂದು ಮಹಿಳೆಯರಿಗೆ ಮೀಸಲಾದ ದಿನ. ‘ಮುಸ್ಲಿಂ ಮಹಿಳೆಯರು ರಕ್ಷಣೆ ಕೋರಿದರು ಮತ್ತು ಅವರ ಜೀವನವು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆಯ ಹಕ್ಕು) ಕಾಯ್ದೆ, 2019 ರ ಅಡಿಯಲ್ಲಿ ಹಾಳಾಗದಂತೆ ರಕ್ಷಿಸಲಾಗಿದೆ. ಕಾಶ್ಮೀರದಲ್ಲಿ 370ನೇ ವಿಧಿ ಜಾರಿಯಲ್ಲಿದ್ದಾಗ, ಅಲ್ಲಿನ ಮಹಿಳೆಯರು ಅನೇಕ ಹಕ್ಕುಗಳಿಂದ ವಂಚಿತರಾಗಿದ್ದರು. ಅವರು ರಾಜ್ಯದ ಹೊರಗೆ ಮದುವೆಯಾದರೆ, ಅವರಿಗೆ ಆಸ್ತಿಯ ಹಕ್ಕು ಸಿಗುತ್ತಿರಲಿಲ್ಲ. 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಈಗ ಅವರು ದೇಶದ ಇತರ ಮಹಿಳೆಯರಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ತಿಳಿಸಿದರು.

    ಮಹಿಳೆಯರಿಗೆ ಶೌಚಾಲಯ (ಇಜ್ಜತ್ ಘರ್) ಕಲ್ಪಿಸುವ ಮೂಲಕ ನಾವು ಅವರಿಗೆ ಗೌರವ ನೀಡಿದ್ದೇವೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ಸಬಲೀಕರಣಗೊಂಡರು. ಅವರಿಗೆ ಉಜ್ವಲ್ ಯೋಜನೆಯಡಿ ಆರೋಗ್ಯ ಸೌಲಭ್ಯಗಳನ್ನು ನೀಡಲಾಯಿತು. ಮೊದಲು ಮಹಿಳೆಯರಿಗೆ 12 ವಾರಗಳ ಹೆರಿಗೆ ರಜೆ ಸಿಗುತ್ತಿತ್ತು. ಆದರೆ, ನಾವು ಅದನ್ನು 26 ವಾರಗಳಿಗೆ ಹೆಚ್ಚಿಸಿದ್ದೇವೆ ಎಂದು ಹೇಳಿದರು.

    ಇಂದು ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳು ನಮ್ಮ ಭಾರತದಲ್ಲಿದ್ದಾರೆ ಎಂದು ನೋಡಿ ನಮಗೆಲ್ಲರಿಗೂ ಹೆಮ್ಮೆಯಾಗುತ್ತದೆ. ಇದು ಮಹಿಳಾ ಸಬಲೀಕರಣದ ಶಕ್ತಿಯ ಒಂದು ಉದಾಹರಣೆಯಾಗಿದೆ. ಅದು ರಾಜಕೀಯ ಕ್ಷೇತ್ರವಾಗಿರಲಿ, ಕ್ರೀಡೆಯಾಗಿರಲಿ, ನ್ಯಾಯಾಂಗವಾಗಿರಲಿ ಅಥವಾ ಪೊಲೀಸ್ ಆಗಿರಲಿ, ದೇಶದ ಪ್ರತಿಯೊಂದು ವಲಯದಲ್ಲಿ, ಪ್ರತಿಯೊಂದು ಆಯಾಮದಲ್ಲಿ ಮಹಿಳೆಯರ ಧ್ವಜವು ಎತ್ತರಕ್ಕೆ ಹಾರುತ್ತಿದೆ.

    2014 ರಿಂದ ಸುಮಾರು 3 ಕೋಟಿ ಮಹಿಳೆಯರು ಗೃಹಿಣಿಯರಾಗಿದ್ದಾರೆ. ಇಂದು ಜಲ ಜೀವನ್ ಮಿಷನ್ ಬಗ್ಗೆ ಪ್ರಪಂಚದಾದ್ಯಂತ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ಇಂದು, ಜಲ ಜೀವನ್ ಮಿಷನ್ ಮೂಲಕ ದೇಶದ ಪ್ರತಿಯೊಂದು ಹಳ್ಳಿಗೂ ನೀರು ತಲುಪುತ್ತಿದೆ. ದೇಶದ ಆತ್ಮ ಗ್ರಾಮೀಣ ಭಾರತದಲ್ಲಿದೆ ಎಂದು ಗಾಂಧೀಜಿ ಹೇಳುತ್ತಿದ್ದರು. ಇಂದು ನಾನು ಅದಕ್ಕೆ ಇನ್ನೊಂದು ಸಾಲನ್ನು ಸೇರಿಸುತ್ತೇನೆ. ಗ್ರಾಮೀಣ ಭಾರತದ ಆತ್ಮ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿದೆ ಎಂದರು.

  • ನಾರಿ ಶಕ್ತಿಗೆ ನನ್ನ ನಮನ – ಮಹಿಳೆಯರಿಗೆ ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯ

    ನಾರಿ ಶಕ್ತಿಗೆ ನನ್ನ ನಮನ – ಮಹಿಳೆಯರಿಗೆ ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯ

    ನವದೆಹಲಿ: ಮಹಿಳೆಯರ ದಿನದಂದು ನಾರಿ ಶಕ್ತಿಗೆ ನನ್ನ ನಮನಗಳು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಹಿಳೆಯರಿಗೆ ಶುಭಕೋರಿದ್ದಾರೆ.

    ದೇಶ್ಯಾದ್ಯಂತ ಇಂದು ಮಹಿಳಾ ದಿನಾಚರಣೆ ಸಂಭ್ರಮ ಜೋರಾಗಿದ್ದು, ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಶುಭಾಶಯಗಳನ್ನು ತಿಳಿಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಎರಡು ಬಣಗಳಿವೆ – ಪಕ್ಷದ ವೇದಿಕೆಯಲ್ಲೇ ರಾಹುಲ್ ಗಾಂಧಿ ಅಸಮಾಧಾನ

    ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಮಹಿಳಾ ದಿನದಂದು ನಾರಿ ಶಕ್ತಿಗೆ ನನ್ನ ನಮನಗಳು. ನಮ್ಮ ಸರ್ಕಾರ ಯಾವಾಗಲೂ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿದ್ದು, ಇದರ ಪ್ರತಿಫಲ ನಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಎದ್ದುಕಾಣಿಸುತ್ತದೆ. ಮನ್ ಕಿ ಬಾತ್‌ನಲ್ಲಿ ಭರವಸೆ ನೀಡಿದ ಹಾಗೇ ಇಂದು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸುತ್ತಿರುವ ಮಹಿಳೆಯರಿಗೆ ಹಸ್ತಾಂತರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಶುಭಕೋರಿದ ರಾಷ್ಟ್ರಪತಿ ಮುರ್ಮು ಅವರು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಇಂದು ನಾವೆಲ್ಲರು ಮಹಿಳೆಯರ ಸಾಧನೆ, ದೇಶಕ್ಕೆ, ಜಗತ್ತಿಗೆ ಮಹಿಳೆಯರ ಕೊಡುಗೆಗಳೇನು ಎನ್ನುವುದನ್ನು ಕೊಂಡಾಡುತ್ತೇವೆ. ಜೊತೆಗೆ ಮಹಿಳಾ ಹಕ್ಕುಗಳು, ಸಮಾನತೆ ಮತ್ತು ಸಬಲೀಕರಣದ ಉದ್ದೇಶಗಳನ್ನು ಬಲಪಡಿಸಬೇಕೆಂದು ನಾವೆಲ್ಲರು ಸಂಕಲ್ಪ ಮಾಡಿಕೊಳ್ಳುತ್ತೇವೆ.

    ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮ ಚೌಕಟ್ಟಿನ ಗಡಿಯನ್ನು ದಾಡಿ ಮುನ್ನೆಲೆಗೆ ಬರುತ್ತಿದ್ದಾರೆ. ಈ ಮಹಿಳಾ ದಿನದಂದು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯುತ್ತೇವೆ ಎಂದು ಪ್ರತಿಜ್ಞೆ ಮಾಡೋಣ. ಯಾವುದೇ ಹಿಂಜರಿಕೆಯಿಲ್ಲದೆ ಲಿಂಗ ಸಮಾನ ಜಗತ್ತನ್ನು ಕಟ್ಟೋಣ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಇನ್ನೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಭಕೋರಿದ್ದು, ಮಹಿಳೆಯರು ನಮ್ಮ ಸಮಾಜದ ಬೆನ್ನೆಲುಬು. ಅವರ ಶಕ್ತಿ, ಧ್ವನಿ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಈ ಅಂತಾರಾಷ್ಟ್ರೀಯ ಮಹಿಳಾ ದಿನದಂದು, ನಾನು ನಿಮ್ಮೊಂದಿಗೆ ಮತ್ತು ನಿಮ್ಮ ಪರವಾಗಿ ನಿಲ್ಲುತ್ತೇನೆ. ಪ್ರತಿಯೊಬ್ಬ ಮಹಿಳೆ ತನ್ನ ಹಣೆಬರಹವನ್ನು ಸ್ವತಃ ರೂಪಿಸಿಕೊಳ್ಳಲು, ಕನಸುಗಳ ಬೆನ್ನಟ್ಟಲು ಮತ್ತು ಉನ್ನತ ಸ್ಥಾನಕ್ಕೇರಿ, ಸ್ವತಂತ್ರಳಾಗುವವರೆಗೂ ಅವರ ಎಲ್ಲಾ ಏಳು-ಬೀಳುಗಳಲ್ಲಿ ನಾವು ಜೊತೆಯಾಗಿರುತ್ತೇವೆ ಎಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾಗೆ ಮತ್ತೊಂದು ಸಂಕಷ್ಟ – ಸಿಬಿಐನಿಂದ ಪ್ರತ್ಯೇಕ FIR ದಾಖಲು

  • ಮಹಿಳೆಯರ ಖಾತೆಗೆ 2,500 ರೂ. – ಇಂದು ಮಹಿಳೆಯರಿಗೆ ದೆಹಲಿ ಸರ್ಕಾರದಿಂದ ಸಿಗುತ್ತಾ ಗುಡ್‌‌ ನ್ಯೂಸ್?

    ಮಹಿಳೆಯರ ಖಾತೆಗೆ 2,500 ರೂ. – ಇಂದು ಮಹಿಳೆಯರಿಗೆ ದೆಹಲಿ ಸರ್ಕಾರದಿಂದ ಸಿಗುತ್ತಾ ಗುಡ್‌‌ ನ್ಯೂಸ್?

    – ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಸಿಎಂ ರೇಖಾ ಕೊಡ್ತಾರಾ ಗಿಫ್ಟ್?‌

    ನವದೆಹಲಿ: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day) ಹಿನ್ನೆಲೆಯಲ್ಲಿ ಮಹಿಳೆಯರಿಗೆ ದೆಹಲಿ ಸರ್ಕಾರದಿಂದ ಬಂಪರ್‌ ಗಿಫ್ಟ್‌ ನೀಡುವ ಸಾಧ್ಯತೆ ಇದೆ.

    ಮಹಿಳೆಯರ ಖಾತೆಗೆ 2,500 ರೂ. ಹಾಕುವ ಬಗ್ಗೆ ಇಂದು ನಿರ್ಧಾರ ಆಗಬಹುದು ಎನ್ನಲಾಗಿದೆ. ಬೆಳಗ್ಗೆ 10 ಗಂಟೆಗೆ ಸಿಎಂ ರೇಖಾ ಗುಪ್ತಾ (Rekha Gupta) ಅವರು ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಕ್ಷೇತ್ರ ಪುನರ್ ವಿಂಗಡಣೆ – ಕೇಂದ್ರದ ಪ್ರಕ್ರಿಯೆ ವಿರುದ್ಧ ಹೋರಾಟಕ್ಕೆ ಕರೆ; ಕರ್ನಾಟಕ ಸೇರಿ 7 ರಾಜ್ಯದ ಸಿಎಂಗಳಿಗೆ ಸ್ಟಾಲಿನ್ ಪತ್ರ

    ಸಚಿವ ಸಂಪುಟ ಸಭೆಯಲ್ಲಿ ಮಹಿಳೆರ ಖಾತೆಗೆ ಹಣ ಹಾಕುವ ‘ಮಹಿಳಾ ಸಮೃದ್ಧಿ ಯೋಜನೆ’ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹೋಳಿ ಹಬ್ಬಕ್ಕೆ ಉಚಿತ ಸಿಲಿಂಡರ್ ನೀಡುವ ಬಗ್ಗೆ ತಿರ್ಮಾನ ಕೈಗೊಳ್ಳಬಹುದು ಎನ್ನಲಾಗಿದೆ.

    ಮಧ್ಯಾಹ್ನ 12 ಕ್ಕೆ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಮೊದಲ ಸಂಪುಟದಲ್ಲೇ ಮಹಿಳಾ ಸಮೃದ್ಧಿ ಯೋಜನೆಯ ಭರವಸೆಯನ್ನು ಬಿಜೆಪಿ ನೀಡಿತ್ತು. ಇದಲ್ಲದೇ ಹೋಳಿ, ದೀಪಾವಳಿಗೆ ಉಚಿತ ಸಿಲಿಂಡರ್ ಭರವಸೆಯನ್ನೂ ನೀಡಿತ್ತು. ಇದನ್ನೂ ಓದಿ: ಹರಿಯಾಣದಲ್ಲಿ ವಾಯುಪಡೆಯ ಜಾಗ್ವಾರ್ ಫೈಟರ್ ಜೆಟ್ ಪತನ – ಪೈಲಟ್ ಸೇಫ್‌

  • ಮಹಿಳಾ ದಿನಾಚರಣೆ – ಪ್ರಧಾನಿ ಕಾರ್ಯಕ್ರಮಕ್ಕೆ ಸಂಪೂರ್ಣ ಮಹಿಳಾ ಪೊಲೀಸ್ ತುಕಡಿಯಿಂದ ಭದ್ರತೆ

    ಮಹಿಳಾ ದಿನಾಚರಣೆ – ಪ್ರಧಾನಿ ಕಾರ್ಯಕ್ರಮಕ್ಕೆ ಸಂಪೂರ್ಣ ಮಹಿಳಾ ಪೊಲೀಸ್ ತುಕಡಿಯಿಂದ ಭದ್ರತೆ

    ಅಹಮದಾಬಾದ್: ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (PM Narendra Modi) ಭಾಗಿಯಾಗಲಿದ್ದು, ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣ ಮಹಿಳಾ ಪೊಲೀಸ್ ತುಕಡಿಯೇ ನಿರ್ವಹಿಸಲಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ (Harsh Sanghavi) ಹೇಳಿದ್ದಾರೆ.

    ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ನಡೆಯುತ್ತಿದೆ. ಪ್ರಧಾನ ಮಂತ್ರಿಗಳು ವಂಶಿ ಬೋರ್ಸಿ ಗ್ರಾಮದಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸುವುದರಿಂದ ಹಿಡಿದು ಕಾರ್ಯಕ್ರಮದ ಸ್ಥಳದವರೆಗೆ ಅವರ ಭದ್ರತೆಯನ್ನು ಮಹಿಳಾ ಪೊಲೀಸ್ ಸಿಬ್ಬಂದಿಯೇ ನಿಭಾಯಿಸಲಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಶ್ರೀಲಂಕಾ ಭೇಟಿ ಸಾಧ್ಯತೆ

    ಮಹಿಳಾ ಭದ್ರತಾ ತಂಡದಲ್ಲಿ 2,100 ಮಹಿಳಾ ಕಾನ್‌ಸ್ಟೆಬಲ್‌ಗಳು, 187 ಸಬ್-ಇನ್ಸ್ಪೆಕ್ಟರ್‌ಗಳು, 61 ಪೊಲೀಸ್ ಇನ್ಸ್ಪೆಕ್ಟರ್‌ಗಳು, 16 ಉಪಪೊಲೀಸ್ ವರಿಷ್ಠಾಧಿಕಾರಿಗಳು (ಡಿಎಸ್ಪಿಗಳು), 5 ಪೊಲೀಸ್ ಸೂಪರಿಂಟೆಂಡೆಂಟ್‌ಗಳು, 1 ಪೊಲೀಸ್ ಮಹಾನಿರ್ದೇಶಕರು (ಐಜಿಪಿ), 1 ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಇರಲಿದ್ದಾರೆ. ಭದ್ರತಾ ವ್ಯವಸ್ಥೆಗಳನ್ನು ಹಿರಿಯ ಐಪಿಎಸ್ ಅಧಿಕಾರಿ ಮತ್ತು ಗೃಹ ಕಾರ್ಯದರ್ಶಿ ನಿಪುನಾ ತೊರವಾನೆ ಅವರು ಮೇಲ್ವಿಚಾರಣೆ ಮಾಡಲಿದ್ದಾರೆ.

    ರಾಜ್ಯ ಸರ್ಕಾರದ ಈ ಕ್ರಮದ ಮಹತ್ವವನ್ನು ಒತ್ತಿ ಹೇಳಿದ ಹರ್ಷ ಸಂಘವಿ, ಸಂಪೂರ್ಣ ಮಹಿಳೆಯರೇ ಇರುವ ಭದ್ರತಾ ಪಡೆಗಳ ನಿಯೋಜನೆಯು ಸುರಕ್ಷತೆ ಮತ್ತು ಭದ್ರತೆಗೆ ಮಹಿಳೆಯರ ಕೊಡುಗೆಯನ್ನು ಮಹಿಳಾ ದಿನಾಚರಣೆಯಂದು ಜಗತ್ತಿಗೆ ಬಲವಾದ ಸಂದೇಶವನ್ನು ನೀಡುತ್ತದೆ. ಮಹಿಳಾ ಶಕ್ತಿ ಗುಜರಾತ್ ಅನ್ನು ಹೇಗೆ ಸುರಕ್ಷಿತ ಮತ್ತು ಸುಭದ್ರ ರಾಜ್ಯವನ್ನಾಗಿ ಮಾಡಲು ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

    ಪ್ರಧಾನಿ ಮೋದಿ ಮಾರ್ಚ್ 8 ಮತ್ತು 9 ರಂದು ಗುಜರಾತ್ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಮಾರ್ಚ್ 8 ರಂದು ವಂಶಿ ಬೋರ್ಸಿ ಗ್ರಾಮದಲ್ಲಿ ನಡೆಯಲಿರುವ `ಲಖ್ಪತಿ ದೀದಿ ಸಮ್ಮೇಳನ’ದಲ್ಲಿ ಅವರು ಮಾತನಾಡಲಿದ್ದಾರೆ. ಇದು ಆರ್ಥಿಕ ಸ್ವಾತಂತ್ರ‍್ಯ ಮತ್ತು ಸ್ವಾವಲಂಬನೆ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಸಬಲೀಕರಣ ಅಭಿಯಾನವಾಗಿದೆ.ಇದನ್ನೂ ಓದಿ: ಪುತ್ತೂರಿಗೆ ಮೆಡಿಕಲ್ ಕಾಲೇಜು: ಬಜೆಟ್‌ನಲ್ಲಿ ವೈದ್ಯಕೀಯ, ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕ ಕೊಡುಗೆಗಳೇನು?

     

     

  • ಇಸ್ರೋ ಯಶಸ್ಸಿನ ವ್ಯಾಪ್ತಿ ವಿಶಾಲವಾಗಿದೆ – ಮನ್ ಕೀ ಬಾತ್‌ನಲ್ಲಿ ಮೋದಿ ಶ್ಲಾಘನೆ

    ಇಸ್ರೋ ಯಶಸ್ಸಿನ ವ್ಯಾಪ್ತಿ ವಿಶಾಲವಾಗಿದೆ – ಮನ್ ಕೀ ಬಾತ್‌ನಲ್ಲಿ ಮೋದಿ ಶ್ಲಾಘನೆ

    -ಮಹಿಳಾ ದಿನಕ್ಕೆ ವಿಶೇಷ ತಯಾರಿ ಎಂದ ಪ್ರಧಾನಿ

    ನವದೆಹಲಿ: ಬಾಹ್ಯಾಕಾಶ ವಲಯದಲ್ಲಿ ನಮ್ಮ ಯಶಸ್ಸಿನ ಪಟ್ಟಿ ಹೆಚ್ಚು ಉದ್ದವಾಗಿದೆ. ಉಡಾವಣಾ ವಾಹನಗಳ ತಯಾರಿಕೆಯಾಗಿರಲಿ, ಚಂದ್ರಯಾನ, ಮಂಗಳಯಾನ, ಆದಿತ್ಯ ಎಲ್ -1ರ ಯಶಸ್ಸಾಗಿರಲಿ ಅಥವಾ ಒಂದೇ ರಾಕೆಟ್‌ನಿಂದ ಒಂದೇ ಬಾರಿಗೆ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಅಭೂತಪೂರ್ವ ಧ್ಯೇಯವಾಗಿರಲಿ. ಇಸ್ರೋ (ISRO) ಯಶಸ್ಸಿನ ವ್ಯಾಪ್ತಿ ವಿಶಾಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಶ್ಲಾಘಿಸಿದ್ದಾರೆ.

    ಮನ್ ಕೀ ಬಾತ್‌ನಲ್ಲಿ (Mann Ki Baat) ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಸುಮಾರು 460 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಇವುಗಳಲ್ಲಿ ಇತರ ದೇಶಗಳ ಅನೇಕ ಉಪಗ್ರಹಗಳು ಸಹ ಸೇರಿವೆ. ಕಳೆದ ತಿಂಗಳು ದೇಶವು ಇಸ್ರೋದ 100ನೇ ರಾಕೆಟ್ ಉಡಾವಣೆಗೆ ಸಾಕ್ಷಿಯಾಯಿತು. ಇದು ಕೇವಲ ಒಂದು ಸಂಖ್ಯೆಯಲ್ಲ. ಪ್ರತಿದಿನ ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸ ಎತ್ತರವನ್ನು ಮುಟ್ಟುವ ನಮ್ಮ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದರು.ಇದನ್ನೂ ಓದಿ: ತುಮಕೂರು | ಮಧುಗಿರಿ ಪಟ್ಟಣ ಅಭಿವೃದ್ಧಿಗೆ ಸರ್ಕಾರದಿಂದ 25 ಕೋಟಿ‌ ಅನುದಾನ

    ಇತ್ತೀಚೆಗೆ ನಾನು ಎಐ ಕುರಿತ ಬೃಹತ್ ಸಮ್ಮೇಳನದಲ್ಲಿ ಭಾಗವಹಿಸಲು ಪ್ಯಾರಿಸ್‌ಗೆ ಹೋಗಿದ್ದೆ. ವಿಶ್ವವೇ ಭಾರತ ಎಐ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿರುವುದನ್ನು ಮೆಚ್ಚಿಕೊಂಡಿದೆ. ನಮ್ಮ ದೇಶದಲ್ಲಿ ಇಂದು ಜನರು ಎಐ ಅನ್ನು ವಿವಿಧ ರೀತಿಯಲ್ಲಿ ಬಳಸುತ್ತಿರುವ ಉದಾಹರಣೆಗಳನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದರು.

    ಮುಂದಿನ ತಿಂಗಳು ಮಾರ್ಚ್ 8ರಂದು `ಅಂತಾರಾಷ್ಟ್ರೀಯ ಮಹಿಳಾ ದಿನ’. ನಮ್ಮ ಮಹಿಳಾ ಶಕ್ತಿಗೆ ಗೌರವ ಸಲ್ಲಿಸಲು ಇದು ವಿಶೇಷ ಸಂದರ್ಭ. ವಿದ್ಯಾ: ಎಲ್ಲವೂ: ನೀವು ವಿಶಿಷ್ಟತೆಯ ದೇವತೆ: ಮಹಿಳೆಯರು: ಎಲ್ಲವೂ: ಇಡೀ ಪ್ರಪಂಚ. ಅಂದರೆ, ಎಲ್ಲಾ ಜ್ಞಾನವು ದೇವಿಯ ವಿವಿಧ ರೂಪಗಳ ಅಭಿವ್ಯಕ್ತಿಯಾಗಿದೆ. ಅವಳು ಜಗತ್ತಿನ ಎಲ್ಲಾ ಸ್ತ್ರೀ ಶಕ್ತಿಯಲ್ಲಿಯೂ ಪ್ರತಿಫಲಿಸುತ್ತಾಳೆ ಎಂದು ನಮ್ಮ ದೇವಿ ಮಹಾತ್ಮೆöಯಲ್ಲಿ ಹೇಳಲಾಗಿದೆ. ನಮ್ಮ ಸಂಸ್ಕೃತಿಯಲ್ಲಿ, ಹೆಣ್ಣುಮಕ್ಕಳಿಗೆ ಗೌರವ ನೀಡುವುದು ಅತ್ಯಂತ ಮುಖ್ಯ. ಈ ಬಾರಿ ಮಹಿಳಾ ದಿನದಂದು ನಾನು ನಮ್ಮ ಮಹಿಳಾ ಶಕ್ತಿಗೆ ಮೀಸಲಾಗಿರುವ ಉಪಕ್ರಮವನ್ನು ತೆಗೆದುಕೊಳ್ಳಲಿದ್ದೇನೆ. ಈ ವಿಶೇಷ ಸಂದರ್ಭದಲ್ಲಿ, ನಾನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳಾದ ಎಕ್ಸ್, ಇನ್‌ಸ್ಟಾಗ್ರಾಮ್ ಅನ್ನು ದೇಶದ ಕೆಲವು ಸ್ಪೂರ್ತಿದಾಯಕ ಮಹಿಳೆಯರಿಗೆ ಒಂದು ದಿನದ ಮಟ್ಟಿಗೆ ಹಸ್ತಾಂತರಿಸಲಿದ್ದೇನೆ. ಅವರು ಮಾರ್ಚ್ 8ರಂದು ತಮ್ಮ ಕೆಲಸ ಮತ್ತು ಅನುಭವಗಳನ್ನು ದೇಶವಾಸಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದರು.

    ಮುಂದಿನ ಕೆಲವು ದಿನಗಳಲ್ಲಿ ನಾವು `ರಾಷ್ಟ್ರೀಯ ವಿಜ್ಞಾನ ದಿನ’ವನ್ನು ಆಚರಿಸಲಿದ್ದೇವೆ. ನಮ್ಮ ಮಕ್ಕಳು ಹಾಗೂ ಯುವಕರು ವಿಜ್ಞಾನದಲ್ಲಿ ಆಸಕ್ತಿ, ಉತ್ಸಾಹ ಹೊಂದಿರುವುದು ಬಹಳ ಮುಖ್ಯ. ಇದರ ಬಗ್ಗೆ ನನಗೆ ಒಂದು ಕಲ್ಪನೆ ಇದೆ. ನೀವು `ಒಂದು ದಿನ ವಿಜ್ಞಾನಿಯಾಗಿ ಬದುಕಬಹುದು’ ಅಂದರೆ, ನೀವು ವಿಜ್ಞಾನಿಯಾಗಿ ಒಂದು ದಿನ ಕಳೆಯಲು ಪ್ರಯತ್ನಿಸಬಹುದು. ನಿಮ್ಮ ಅನುಕೂಲ ಮತ್ತು ಇಚ್ಛೆಗೆ ಅನುಗುಣವಾಗಿ ನೀವು ಯಾವುದೇ ದಿನವನ್ನು ಆಯ್ಕೆ ಮಾಡಬಹುದು ಎಂದು ತಿಳಿಸಿದರು.ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಕ್ಯಾಂಟರ್ ಭಸ್ಮ – ಚಾಲಕ ಪಾರು

     

  • ವರ್ಚಸ್‌ ನ್ಯಾಷನಲ್‌ ಸೇವಾ ಟ್ರಸ್ಟ್‌ನಿಂದ ಮಹಿಳಾ ದಿನಾಚರಣೆ

    ವರ್ಚಸ್‌ ನ್ಯಾಷನಲ್‌ ಸೇವಾ ಟ್ರಸ್ಟ್‌ನಿಂದ ಮಹಿಳಾ ದಿನಾಚರಣೆ

    – ಸ್ವಾವಲಿಂಬಿ ಬದುಕು ಕಟ್ಟಿಕೊಳ್ಳಲು 500 ಕ್ಕೂ ಹೆಚ್ಚು ಬಡ ಮಹಿಳೆಯರಿಗೆ ಟೈಲರಿಂಗ್‌ ಮಷಿನ್‌ ವಿತರಣೆ

    ಬೆಂಗಳೂರು: ಇಲ್ಲಿನ ಲಗ್ಗೆರೆಯಲ್ಲಿ ವರ್ಚಸ್‌ ನ್ಯಾಷನಲ್‌ ಸೇವಾ ಟ್ರಸ್ಟ್‌ (Varchass National Seva Trust) ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (International Women’s Day) ಆಚರಿಸಲಾಯಿತು. ‌ಕಾರ್ಯಕ್ರಮಕ್ಕೆ‌ ನ್ಯಾಯಮೂರ್ತಿ ಕೆ‌.ಸೋಮಶೇಖರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

    ಮಹಿಳೆಯರು ಸ್ವಾವಲಂಬಿಯಾಗಿ‌ ಬದುಕು ಕಟ್ಟಿಕೊಳ್ಳಬೇಕು ಎನ್ನುವ‌ ಉದ್ದೇಶದಿಂದ 500 ಕ್ಕೂ ಹೆಚ್ಚು ಬಡ ಮಹಿಳೆಯರನ್ನು ಗುರುತಿಸಿ‌ ಟೈಲರಿಂಗ್‌ ತರಬೇತಿ ನೀಡಿರುವ ವರ್ಚಸ್ ನ್ಯಾಷನಲ್ ಸೇವಾ ಸಂಸ್ಥೆ, ಆ ಮಹಿಳೆಯರಿಗೆ ಟೈಲರಿಂಗ್ ಮಷನ್ ವಿತರಣೆ ಮಾಡಿತು. ಆ ಮೂಲಕ ಇಂದು (ಭಾನುವಾರ) ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದನ್ನೂ ಓದಿ: ನೆಲ್ಸನ್ ಮಂಡೇಲಾರಿಗೆ ದೊರೆತಿದ್ದ ಪ್ರಶಸ್ತಿಗೆ ಈಗ ನೀತಾ ಅಂಬಾನಿ ಆಯ್ಕೆ!

  • ಸ್ತ್ರೀ ಶಕ್ತಿಗೆ ಪಬ್ಲಿಕ್ ಟಿವಿ ಸಲಾಂ – 10 ಸಾಧಕಿಯರಿಗೆ ನಾರಿ ನಾರಾಯಣಿ ಪ್ರಶಸ್ತಿ

    ಸ್ತ್ರೀ ಶಕ್ತಿಗೆ ಪಬ್ಲಿಕ್ ಟಿವಿ ಸಲಾಂ – 10 ಸಾಧಕಿಯರಿಗೆ ನಾರಿ ನಾರಾಯಣಿ ಪ್ರಶಸ್ತಿ

    – ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ ವನಿತೆಯರಿಗೆ ಸನ್ಮಾನ

    ಬೆಂಗಳೂರು: ಅಕ್ಕರೆಯ ಅಮ್ಮನಾಗಿ, ಮುದ್ದಿನ ಮಗಳಾಗಿ, ಮನೆ ಬೆಳಗುವ ಮಮತಾಮಯಿ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಜ್ಜೆ ಇಟ್ಟು ಸಾಧನೆ ಮಾಡಿದ್ದಾಳೆ. ಸಾಧನೆ ಮಾಡಿದ ಸಾಧಕಿಯರನ್ನು ಸನ್ಮಾನಿಸಿದರೆ ಮತ್ತಷ್ಟು ಮಂದಿಗೆ ಆ ಸಾಧನೆ ಪ್ರೇರಣೆಯಾಗುತ್ತದೆ. ಈ ಕಾರಣಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಮಂದಿ ಸಾಧಕಿಯರನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (International Women’s Day) ಈ ವಿಶೇಷ ದಿನದಂದು ಪಬ್ಲಿಕ್‌ ಟಿವಿ ʼನಾರಿ ನಾರಾಯಣಿʼ ಪ್ರಶಸ್ತಿ ನೀಡಿ ಗೌರವಿಸಿತು.

    ಕೆನರಾ ಬ್ಯಾಂಕ್ ಹಾಗೂ ಕೆಎಂಎಫ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ (PUBLiC TV) ಬೆಂಗಳೂರಿನ ಯವನಿಕ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಹೆಚ್‌ಆರ್‌ ರಂಗನಾಥ್‌ (HR Ranganath), ಎಲೆ ಮರೆಕಾಯಿಯಂತೆ ಸಾಧನೆಗೈಯುತ್ತಿರುವ ಹತ್ತು ಜನ ಮಹಿಳೆಯರ ಸಾಧನೆಗೆ ನಾವು ಹೆಮ್ಮೆ ಪಡಬೇಕು. ಇವರೆಲ್ಲರೂ ನಾರಿ ನಾರಾಯಣಿಯ (Nari Narayani) ಪ್ರತಿನಿಧಿಯಾಗಿದ್ದಾರೆ ಎಂದು ಬಣ್ಣಿಸಿದರು.

    ನಾರಿ ನಾರಾಯಣಿ ಪ್ರಶಸ್ತಿ ಪಡೆದ ಸಾಧಕಿಯರ ವಿವರ

    ರಾಧಿಕಾ, ಮಂಗಳೂರು
    ಕೆಲವೊಮ್ಮೆ ಬದುಕಿನ ಬಡತನ, ಜೀವನ ಕಟ್ಟಿಕೊಳ್ಳುವ ಅನಿವಾರ್ಯತೆ ಜೀವನವನ್ನು ಅಸಾಧಾರಣ ಸಾಧನೆಯತ್ತ ಕೊಂಡೊಯ್ಯುತ್ತದೆ. ಇಂತಹ ಅಪರೂಪದ ಸಾಧನೆಗೆ ಸಾಕ್ಷಿಯಾದವರು ಮಂಗಳೂರು ಮೂಲದ ರಾಧಿಕಾ. ಸಾಮಾನ್ಯವಾಗಿ ಮಹಿಳೆಯರು ಅತ್ಯಂತ ಕಡಿಮೆ ಆಯ್ಕೆ ಮಾಡಿಕೊಳ್ಳುವ ಉದ್ಯೋಗ ಅಂದರೆ ಅದು ಅಂಬುಲೆನ್ಸ್ (Ambulance) ಚಾಲನೆಯ ವೃತ್ತಿ. ಆದರೆ ಈ ಗಟ್ಟಿಗಿತ್ತಿ ರಾಧಿಕಾ (Radhika) ಅಂಬುಲೆನ್ಸ್ ಚಾಲನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡ್ರು. ಬಡಕುಟುಂಬದಿಂದ ಬಂದ ಇವರು ಅಂಬುಲೆನ್ಸ್‌ ಚಾಲಕ ಸುರೇಶ್‌ ಅವರನ್ನು ಮದುವೆಯಾದರು. ಆದರೆ ಪತಿ ಅಕಾಲಿಕವಾಗಿ ಮರಣವನ್ನಪ್ಪುತ್ತಾರೆ. ಜೀವನ ಸಾಗಿಸಲು ಉದ್ಯೋಗ ಅನಿವಾರ್ಯ. ಹೀಗಾಗಿ ಪತಿಯ ವೃತ್ತಿಯನ್ನು ಮುಂದುವರಿಸುತ್ತಾರೆ. ಆರಂಭದಲ್ಲಿ ಎಲ್ಲರೂ ಹೀಯಾಳಿಸಿದವರೇ. ಅವಮಾನವನ್ನೇ ಸನ್ಮಾನವನ್ನಾಗಿ ಸ್ವೀಕರಿಸಿದ ರಾಧಿಕ ಛಲ ಬಿಡದೇ ಸ್ವಂತ ಅಂಬುಲೆನ್ಸ್ ಖರೀದಿ ಮಾಡಿದರು. ಅಷ್ಟೇ ಯಾಕೆ ಬೇರೆ ರಾಜ್ಯಗಳಿಗೂ ತಾನೇ ಅಂಬುಲೆನ್ಸ್ ಡ್ರೈವ್‌ ಮಾಡಿಕೊಂಡು ಹೋಗುತ್ತಾರೆ. ಅಲ್ಲದೇ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಅಂಬುಲೆನ್ಸ್ ಸೇವೆಯನ್ನು ನೀಡುತ್ತಿದ್ದಾರೆ.

    ರೂಪ ಎಂವಿ, ಬೆಂಗಳೂರು
    ಚಂದ್ರಯಾನ-3 (Chandrayaan-3)ಯೋಜನೆಯಲ್ಲಿ ಡೆಪ್ಯೂಟಿ ಡೈರೆಕ್ಟರ್ ಆಗಿದ್ದವರು ನಮ್ಮ ಹೆಮ್ಮೆಯ ಕನ್ನಡತಿ ರೂಪ ಎಂವಿ. 15ಕ್ಕೂ ಹೆಚ್ಚು ವರ್ಷಗಳ ಕಾಲ ಇಸ್ರೋದಲ್ಲಿ (ISRO) ಕಾರ್ಯನಿರ್ವಹಿಸುತ್ತಿರುವ ಮೈಸೂರು ಮೂಲದ ಬೆಂಗಳೂರು ನಿವಾಸಿ ರೂಪ (Roopa MV) ಭಾರತದ ಹೆಮ್ಮೆಯ ಚಂದ್ರಯಾನ -3 ಯೋಜನೆಯಲ್ಲಿ ಡೆಪ್ಯೂಟಿ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ಖುದ್ದು ಪ್ರಧಾನಿ ಮೋದಿಯೇ ಅಂದು ಚಂದ್ರಯಾನ-3ರಲ್ಲಿ ಭಾಗಿಯಾಗಿದ್ದ ನಾರಿಶಕ್ತಿಯನ್ನು ಅಭಿನಂದಿಸಿದ್ದರು. ಚಂದ್ರಯಾನ -3 ಮಾತ್ರವಲ್ಲ ಮಂಗಳಯಾನದ ಮಹತ್ತರ ಜವಾಬ್ಧಾರಿಯನ್ನು ಕೂಡ ಹೆಗಲಿಗೇರಿಸಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡಿದ್ದಾರೆ.

     

    ಶ್ರಾವಣಿ ಪವಾರ್, ಹುಬ್ಬಳ್ಳಿ
    ಬದುಕಿನಲ್ಲಿ ತಾನು ಬೆಳೆಯಬೇಕು ಸಾಧಿಸಬೇಕು ಅನ್ನೋದು ಇರುತ್ತೆ. ಆದರೆ ತನ್ನ ಜೊತೆ ಕಷ್ಟದಲ್ಲಿದ್ದವರನ್ನು ಬೆಳೆಸಿ ಅವರ ಬದುಕು ಬೆಳಗಬೇಕು ಅಂತಾ ಅಂದುಕೊಳ್ಳುವವರ ಸಂಖ್ಯೆ ಕಡಿಮೆ. ಆದರೆ ಶ್ರಾವಣಿ ಪವಾರ್ (Shravani Pawar), ಬೇರೆಯವರ ಏಳಿಗೆ ಕಂಡು ಖುಷಿ ಪಟ್ಟ ಜೀವ. ಶ್ರಾವಣಿ ಪವಾರ್ ಸೇಫ್ ಹ್ಯಾಂಡ್ 24*7 ಎನ್ನುವ ಅಪರೂಪದ ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಆರಂಭಿಸಿದ ಸಂಸ್ಥೆ ಬೆಳೆದು ನಿಂತಿದ್ದು, ಈಗ ಬೆಂಗಳೂರಿನಲ್ಲಿಯೂ ಬ್ರಾಂಚ್ ಇದೆ. ಬಡ ಮಧ್ಯಮ ಹಾಗೂ ಅನಕ್ಷರಸ್ಥ ಮಹಿಳೆಯರ ಬದುಕಿಗೆ ಇವರು ದೇವರಂತೆ. ಸೆಕ್ಯೂರಿಟಿ ಗಾರ್ಡ್, ಹೌಸ್ ಕೀಪಿಂಗ್ ಕೆಲಸ ಹೀಗೆ ನಾನಾ ಕೆಲಸದ ತರಬೇತಿಯನ್ನು ಉಚಿತವಾಗಿ ನೀಡಿ ಕೆಲಸದ ಅನಿವಾರ್ಯತೆ ಇರುವ ಮಹಿಳೆಯರಿಗೆ ಕೆಲಸವನ್ನು ನೀಡುತ್ತಾರೆ. 2009 ರಲ್ಲಿ ಆರಂಭವಾದ ಈ ಸಂಸ್ಥೆಯಿಂದ ಸಾವಿರಾರು ಜನ ಬಡವರು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ. 1000ಕ್ಕೂ ಹೆಚ್ಚು ಜನ ಮಹಿಳೆಯರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸವನ್ನು ಮಾಡುತ್ತಿದ್ದಾರೆ.

     

    ವರ್ಷಾ, ಚಾಮರಾಜನಗರ
    ಕಸದಿಂದ ರಸ ಅಂತಾರಲ್ಲ ಹಾಗೆ. ನಾವೆಲ್ಲ ಅನುಪಯುಕ್ತ ಅಂತಾ ಎಸೆಯುವ ವಸ್ತುವನ್ನೇ ಬಳಸಿಕೊಂಡು ಹೊಸ ಉದ್ಯೋಗವನ್ನೇ ಸೃಷ್ಟಿಸಿಕೊಂಡವರು ಚಾಮರಾಜನಗರದ ವರ್ಷಾ (Varsha).  ಇವರ ಯಶೋಗಾಥೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ. ಪ್ರಧಾನಿ ಮೋದಿಯವರ (PM Modi) ಮನ್ ಕಿ ಬಾತ್‌ನಿಂದ ಪ್ರೇರಣೆಗೊಂಡು ತನ್ನ ಬದುಕಿನ ಚಿತ್ರಣವನ್ನೇ ಬದಲಾಯಿಸಿಕೊಂಡು ಅಚ್ಚರಿ ಮೂಡಿಸಿದ ಯುವತಿಯ ಕಥೆ ಇದು. ರೈತರು ಬಾಳೆಗೊನೆ ಕೊಯ್ದು, ಬಾಳೆದಿಂಡನ್ನು ಅನುಪಯುಕ್ತ ಎಂದು ಎಸೆಯುತ್ತಾರೆ. ಆದರೆ ಇದೇ ಅನುಪಯುಕ್ತ ಬಾಳೆ ದಿಂಡಿನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್ ಗಳನ್ನು ತಯಾರಿಸಿ ಕಾಯಕವನ್ನು ಶುರುಮಾಡಿದ್ದಾರೆ ವರ್ಷಾ. ತನ್ನ ಘಟಕದಲ್ಲಿ ಐವರು ಮಹಿಳೆಯರಿಗೆ ಉದ್ಯೋಗ ನೀಡಿರುವ ವರ್ಷಾ, ಆನ್‌ಲೈನ್‌ ವೆಬ್‌ಸೈಟ್‌ ಮೂಲಕ ತಮ್ಮ ವಸ್ತುಗಳನ್ನು ಮಾರಾಟ ಮಾಡಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದಾರೆ.

    ಮಲ್ಲಮ್ಮ ಯಳವಾರ, ಬಿಜಾಪುರ
    ಗ್ರಾಮೀಣ ಭಾಗದಲ್ಲಿ ಮಹಿಳೆಯರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದ್ವೀತಿಯ ಸಾಹಸ ಮಾಡಿದ ಮಲ್ಲಮ್ಮನ (Mallamma Yalawara) ಕಹಾನಿ ಕೇಳಿದರೆ ಭೇಷ್ ಎನ್ನಲೇಬೇಕು. ಮಲ್ಲಮ್ಮ ಯಾಳವಾರ ವಿಜಯಪುರದ ನಿವಾಸಿ. ಇವರಿಗೆ ಅದೆಂಥ ದೂರದೃಷ್ಟಿ ಅಂದರೆ ಮಹಿಳೆಯರಿಗಾಗಿಯೇ ವಿಜಯಪುರದಲ್ಲಿ ಬ್ಯಾಂಕ್ ಉದ್ಯಮವನ್ನು ಧೈರ್ಯದಿಂದ ಸ್ಥಾಪಿಸಿದ್ದಾರೆ. ʼಮಹಿಳಾ ಚೈತನ್ಯ ಬ್ಯಾಂಕ್ʼ ಎಂದು ಇದಕ್ಕೆ ಹೆಸರಿಟ್ಟು ಮಹಿಳೆಯರ ಬದುಕಿಗೆ ಹೊಸ ಚೈತನ್ಯವನ್ನೇ ತುಂಬಿದ್ದಾರೆ. ಈ ಬ್ಯಾಂಕ್ ಸಂಪೂರ್ಣ ಮಹಿಳಾಮಯವಾಗಿರುವುದು ವಿಶೇಷ. ಮಹಿಳೆಯರ ಪಾಲಿಗೆ ಉದ್ಯೋಗದಾತ ಬ್ಯಾಂಕ್ ಇದು. ಬ್ಯಾಂಕ್‌ನಲ್ಲಿ ಗುಮಾಸ್ತ ಹುದ್ದೆಯಿಂದ ಹಿಡಿದು ಮ್ಯಾನೇಜರ್‌ವರೆಗೆ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅದ್ಭುತ ಸಾಧನೆ ಮಾಡಿರುವ ಮಲ್ಲಮ್ಮ ಬರೋಬ್ಬರಿ 4 ಶಾಖೆಗಳನ್ನು ವಿಜಯಪುರ ಜಿಲ್ಲೆಯಲ್ಲಿ ತೆರೆದಿದ್ದಾರೆ. ಸಾವಿರಾರು ಕೋಟಿ ವಹಿವಾಟು ನಡೆಸಿ ಈ ಬ್ಯಾಂಕ್ ಸದೃಢವಾಗಿದೆ.

    ಬಿಂದು, ಬೆಂಗಳೂರು
    ನಾರಿಶಕ್ತಿಯ ಅದ್ಭುತ ಸಾಧನೆ, ಎಲ್ಲರ ಪಾಲಿಗೂ ಸ್ಫೂರ್ತಿ, ಈ ಸ್ಫೂರ್ತಿಯ ಹಾದಿಯಲ್ಲಿ ಗಟ್ಟಿಯಾಗಿ ನಿಲ್ಲುವವರು ಅಂದರೆ ಬೆನಕ ಗೋಲ್ಡ್ (Benaka Gold) ಕಂಪನಿಯ ನಿರ್ದೇಶಕಿ ಬಿಂದು ಎಲ್.ಎ.ಯವರು. ದೂರದೃಷ್ಟಿ, ಸಾಧಿಸುವ ಛಲ, ಹೊಸತನ, ನಾಯಕತ್ವದ ಅದ್ಭುತ ಗುಣದ ಮೂಲಕ ಚಿನ್ನಾಭರಣ ಉದ್ಯಮದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದವರು ಬೆನಕ ಗೋಲ್ಡ್ ಕಂಪನಿಯ ನಿರ್ದೇಶಕಿ ಬಿಂದು. ಬೆನಕ ಗೋಲ್ಡ್ ಕಂಪನಿ ಗ್ರಾಹಕರ ಮನಸ್ಸಿನಲ್ಲಿ ಇಂದು ನಂಬಿಕೆಯ ಸಂಸ್ಥೆಯಾಗಿ ನೆಲೆವೂರಲು ಕಾರಣವಾಗಿದ್ದು, ಬಿಂದುರವರ (Bindu)  ಸಾಧನೆಗೆ ಹಿಡಿದ ಕೈಗನ್ನಡಿ. ಎಪಿಎಸ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಸ್ ಆರ್ ಎನ್ ಆದರ್ಶ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿಯಾಗಿರುವ ಬಿಂದು, ಯಶಸ್ವಿ ಉದ್ಯಮಿಯಾಗಿ ಬೆನಕ ಗೋಲ್ಡ್ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಇವರಿಗೆ ರಾಷ್ಟ್ರೀಯ ಮಹಿಳಾ ಸಾಧಕಿ -2023ರ ಪ್ರಶಸ್ತಿಯೂ ಸಿಕ್ಕಿದೆ.

    ಶೀತಲ್, ಬೆಂಗಳೂರು
    ಕೆಲವರ ಬದುಕಿನ ಸಾಧನೆ ಬೇರೆಯವರ ಬದುಕಿಗೂ ಬೆಳಕಾಗಬಲ್ಲದು. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆಯ ಮೂಲಕ ಕ್ರಾಂತಿಯ ಹೆಜ್ಜೆ ಇಟ್ಟ ಕೇಂಬ್ರಿಡ್ಜ್ ಸ್ಕೂಲ್‌ನ (Chembridge School) ನಿರ್ದೇಶಕಿ ಶೀತಲ್ (Sheetal) ಸಾಧನೆ ನಿಜಕ್ಕೂ ಅಪರೂಪ ಅನನ್ಯ. ಶಿಕ್ಷಣ ಎಂದರೆ ಬರೀ ಪುಸ್ತಕದ ಪಾಠವನ್ನು ಕಲಿಸೋದು ಮಾತ್ರವಲ್ಲ, ಮಕ್ಕಳ ವ್ಯಕ್ತಿತ್ವ ವಿಕಸನ, ಶಿಸ್ತು ಬದ್ಧತೆಯನ್ನು ಕಲಿಸಿ ಜವಾಬ್ಧಾರಿಯುತ ನಾಗರಿಕರನ್ನಾಗಿ ಸಮಾಜದಲ್ಲಿ ರೂಪಿಸುವುದು ಅಂತಾ ನಂಬಿಕೆಯಿಟ್ಟವರು. 2012ರಲ್ಲಿ ಈ ಶಿಕ್ಷಣ ಸಂಸ್ಥೆಗೆ ಸಾರಥಿಯಾದ ಶೀತಲ್ ಬೋಧನೆ ಮತ್ತು ಕಲಿಕೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ನಿರಂತರ ಶ್ರಮ ಪಡುತ್ತಿದ್ದಾರೆ. ಶಿಕ್ಷಣದಲ್ಲಿ ಹೊಸ ಹೊಸ ತಂತ್ರಜ್ಞಾನ, ಪ್ರಾಯೋಗಿಕ ತರಗತಿಯನ್ನು ನಡೆಸಿ ವಿದ್ಯಾರ್ಥಿಗಳನ್ನು ಸದಾ ಚಟುವಟಿಕೆಯಿಂದ ಇರುವಂತೆ ಮಾಡುವಲ್ಲಿ ಶೀತಲ್ ಪ್ರಮುಖ ಪಾತ್ರವಹಿಸಿದ್ದು, ವಿದ್ಯಾರ್ಥಿಗಳಿಗೆ ಇವರನ್ನು ಕಂಡರೆ ಅಚ್ಚುಮೆಚ್ಚು.

    ಆಶಾ ಸತೀಶ್, ಬೆಂಗಳೂರು
    ನಾಯಕತ್ವ, ಹೊಸತನಕ್ಕೆ ತುಡಿಯುವ ಮನಸಿನ ಆಶಾ ಸತೀಶ್ ಆರ್ಕಿಟೆಕ್ಟ್ ಕ್ಷೇತ್ರದಲ್ಲಿ ಸಾಧನೆಗೈದು ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಆರ್ಕಿಟೆಕ್ಟ್ ಕ್ಷೇತ್ರದಲ್ಲಿ ತನ್ನದೇ ಆದ ಕಮಾಲ್ ಮೂಡಿಸಿ, ನವೀನ ವಿನ್ಯಾಸ, ವಿಶೇಷ ಅಭಿರುಚಿಯೊಂದಿಗೆ ಮನೆ, ಅಪಾರ್ಟ್‌ ಮೆಂಟ್‌ನ  ಒಳಾಂಗಣ ವಿನ್ಯಾಸದ ಕಾರ್ಯದಲ್ಲಿ ನುರಿತವರು ಆಶಾ ಸತೀಶ್ ಅವರು. ಡಿಎಸ್ ಮ್ಯಾಕ್ಸ್ ಅಪಾರ್ಟ್‌ ಮೆಂಟ್‌ ಗಳು ಜನಮನ್ನಣೆಗಳಿಸಿ, ಎಲ್ಲರ ಮನಸೂರೆಗೊಳ್ಳಲು ಕಾರಣ ಆಶಾ ಅಸೆಟ್ಸ್‌ ಎಂಡಿ ಆಶಾ ಸತೀಶ್ (Asha Satish) ಅವರ ಅರ್ಕಿಟೆಕ್ಟ್ ಕ್ಷೇತ್ರದಲ್ಲಿನ ಅನುಭವ. ಕೇವಲ ಔದ್ಯೋಗಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಕೆವಿಎಸ್ ಚಾರಿಟೇಬಲ್ ಟ್ರಸ್ಟ್‌ ಹುಟ್ಟುಹಾಕಿ ಬಡ ಮಕ್ಕಳ ಭವಿಷ್ಯಕ್ಕೆ ಅವರ ವಿದ್ಯಾಭ್ಯಾಸಕ್ಕೆ ಬದುಕಿಗೆ ನೆರವಾಗಿದ್ದಾರೆ.

    ವಿಜಯಕಲಾ ಕೆ, ಬೆಂಗಳೂರು
    ಶ್ರೀರಾಮ ಎಂಟರ್‌ಪ್ರೈಸಸ್‌ ಮೂಲಕ ಆಡ್ – 6 ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿ, ಮಾಧ್ಯಮ ಯೋಜನೆ, ಮಾರ್ಕೆಟಿಂಗ್ ಮತ್ತು ಅಕೌಂಟ್ ಮ್ಯಾನೇಜ್‌ಮೆಂಟ್ ಟೀಮ್ ಅನ್ನು ಮುನ್ನಡೆಸುತ್ತಿದ್ದಾರೆ ವಿಜಯಕಲಾ ಕೆ (Vijayakala K). ಈ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿ ಸೃಜನಶೀಲ ಟೀಮ್ ಕಟ್ಟಿ ಬೆಳೆಸಿದವರು ವಿಜಯಕಲಾ. ಪರಿಣಿತ ಅನುಭವ ಹೊಂದಿರುವ ಆಡ್ -6 (Ad6) ಸಂಸ್ಥೆ ಈಗ ಅಪರೂಪದ ಸೇವೆಯನ್ನು ನೀಡುತ್ತಿದೆ. ಕೇವಲ ಈ ಕ್ಷೇತ್ರ ಮಾತ್ರವಲ್ಲ ಶಿಕ್ಷಣ ರಿಯಲ್ ಎಸ್ಟೇಟ್, ಟೆಲಿಕಾಂ, ಆಟೋಮೊಬೈಲ್ಸ್ ಕ್ಷೇತ್ರದಲ್ಲಿಯೂ ವಿಜಯಕಲಾ ಪರಿಣಿತರು. ಶ್ರಮ ಪಟ್ಟು ಸಂಸ್ಥೆಯನ್ನು ಬೆಳೆಸಿ ಪೋಷಿಸಿ ಈಗ ಯಶಸ್ವಿ ಉದ್ಯಮಿಯಾಗಿ ವಿಜಯಕಲಾ ಸದ್ದು ಮಾಡಿದ್ದಾರೆ.

    ಕೀರ್ತಿ ಮಹಾದೇವ, ಬೆಂಗಳೂರು
    ಸ್ವಂತ ಉದ್ದಿಮೆಗಳನ್ನು ಸ್ಥಾಪಿಸುವುದು ಸವಾಲಿನ ಕೆಲಸ. ಅಂತದ್ರಲ್ಲಿ ಕರ್ನಾಟಕದ ಮೊದಲ ಬಿಸಿನೀರು ಉತ್ಪಾದಿಸುವ ʼಹೀಟ್‌ಪಂಪ್ʼ ಕಂಪನಿಯನ್ನು ಸ್ಥಾಪಿಸಿ, ಭಾರತದಲ್ಲಿಯೇ ಬೆಸ್ಟ್ ಸಂಸ್ಥೆ ಅಂತಾ ಹೆಗ್ಗಳಿಕೆಗೆ ಪಾತ್ರವಾದವರು ಕೀರ್ತಿ ಮಹಾದೇವ (Keerthi Mahadeva). ಆರಂಭದಲ್ಲಿ ಸ್ವಂತ ಉದ್ದಿಮೆ ಶುರುಮಾಡಬೇಕು ಅದು ಕನಸು ಕಂಡು ಸಾಯಿ ಹೀಟಿಂಗ್ ಮತ್ತು ಕೂಲಿಂಗ್ ಸೊಲ್ಯುಷನ್ ನಿಯೋ ಹೀಟ್ ಪಂಪ್ ಉದ್ಯಮ ಶುರುಮಾಡಿದರು. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಕರ್ನಾಟಕದ ಮೊದಲ ಕಂಪನಿಯಾದ ನಿಯೋ ಹೀಟ್ ಪಂಪ್ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಸದ್ದು ಮಾಡಿತ್ತು. ಇಬ್ಬರಿಂದ ಶುರುವಾದ ಕಂಪನಿ ಈಗ ಇನ್ನೂರಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ಹೊಂದಿದೆ. ಇದಕ್ಕೆ ಕಾರಣವಾಗಿದ್ದು ಕೀರ್ತಿ ಅವರ ಅಪಾರ ಶ್ರಮ. ಕೆಲವೇ ಸೆಕೆಂಡ್‌ಗಳಲ್ಲಿ ಬಿಸಿ ನೀರು ಕೊಡಬಲ್ಲ ಹೀಟ್ ಪಂಪ್‌ಗಳನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುವ ಮೂಲಕ ಜನಮೆಚ್ಚುಗೆಗೆ ಕೀರ್ತಿ ಪಾತ್ರರಾಗಿದ್ದಾರೆ.

  • ಪಬ್ಲಿಕ್‌ ಟಿವಿಯಿಂದ 10 ಮಂದಿ ಸಾಧಕಿಯರಿಗೆ ನಾರಿ ನಾರಾಯಣಿ ಪ್ರಶಸ್ತಿ ಪ್ರದಾನ

    ಪಬ್ಲಿಕ್‌ ಟಿವಿಯಿಂದ 10 ಮಂದಿ ಸಾಧಕಿಯರಿಗೆ ನಾರಿ ನಾರಾಯಣಿ ಪ್ರಶಸ್ತಿ ಪ್ರದಾನ

    ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ (International Women’s Day) ಅಂಗವಾಗಿ ಪಬ್ಲಿಕ್ ಟಿವಿ (PUBLiC TV) 10 ಮಂದಿ ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ ವಿಶೇಷ ಪ್ರಶಸ್ತಿ (Nari Narayani PUBLiC Hero Special Award) ಪ್ರದಾನ ಮಾಡಿ ಪುರಸ್ಕರಿಸಿದೆ.

    ಯವನಿಕಾ ಸಭಾಂಗಣದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಹಾಗೂ ಪರಿಶ್ರಮ NEET ಅಕಾಡೆಮಿಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಾಧಕಿಯರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

    ನಾಗವೇಣಿ
    ಇವತ್ತಿನ ಕಾಲಘಟ್ಟದಲ್ಲಿ ಎಷ್ಟು ಸಿಕ್ಕರೂ ಸಾಲದು ಎಂಬ ಮನಸ್ಥಿತಿ ಇರಬೇಕಾದ್ರೆ ಬಂದಿದ್ದರಲ್ಲೇ ಮತ್ತೊಬ್ಬರಿಗೆ ಹಂಚಿ ಬದುಕುವವರು ವಿರಳ. ಅಂತಹ ಉದಾರ ಮನಸಿನ ಸಮಾಜ ಸೇವಕಿ ಮತ್ತು ಸಾಧಕಿ ಬೀದರ್‌ನ ನಾಗವೇಣಿ.

    ಬೀದರ್ ತಾಲೂಕಿನ ಕೊಳಾರ ಕೆ ಗ್ರಾಮದ ನಿವಾಸಿಯಾಗಿರುವ ನಾಗವೇಣಿ (Nagaveni) ಖಾನಾವಳಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಇವರ ಸದುದ್ದೇಶ ಇಂದು ಎಷ್ಟೋ ಕುಟುಂಬಗಳ ಜೀವನವನ್ನು ಬೆಳಗಿದೆ. ಕನ್ನಡ ಶಾಲೆಯ ಉಳಿವಿವಾಗಿ ಪಣತೊಟ್ಟಿರುವ ನಾಗವೇಣಿ 22 ವರ್ಷಗಳಿಂದ ರೊಟ್ಟಿ ತಟ್ಟುತ್ತಾ ಬರೋಬ್ಬರಿ 345 ಕಡು ಬಡತನದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

    ಮಹಾರಾಷ್ಟ್ರ ಮೂಲದವರಾದರೂ ಬೀದರ್ ತಾಲೂಕಿನ ಕೊಳಾರ ಕೆ ಗ್ರಾಮದ ಬಳಿ ವಿದ್ಯಾಚೇತನ ಶಿಕ್ಷಣ ಸಂಸ್ಥೆಯ ಬಸವಚೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಘಾಳೆಪ್ಪ ಕೋಟೆ ಎಂಬ ಪ್ರೌಢ ಶಾಲೆಯ 345 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಊಟದ ಮನೆ ಎಂಬ ಖಾನಾವಳಿ ನಡೆಸುತ್ತಿರುವ ಇವರು ಬಂದ ಹಣವನ್ನು ಶಾಲೆಯ 18 ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೂ ನೀಡಿ ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ.

    22 ವರ್ಷಗಳಿಂದ ಹೋಟೆಲ್‍ನಿಂದ ಬಂದ ಸಂಪಾದನೆಯಲ್ಲಿ ಶಾಲೆ ನಡೆಸುತ್ತಿರುವ ನಾಗವೇಣಿಗೆ ನಡುವೆ ಆರ್ಥಿಕ ಸಂಕಷ್ಟವೂ ಎದುರಾಗಿತ್ತು. ಆದರೆ ಮರಾಠಿ, ತೆಲುಗು, ಉರ್ದು, ಹಿಂದಿ ಸೇರಿದಂತ್ತೆ ಹಲವು ಭಾಷೆಗಳ ಪ್ರಭಾವಿರುವ ಗಡಿ ಜಿಲ್ಲೆಯಲ್ಲಿ ಕನ್ನಡ ಶಾಲೆಯನ್ನು ಉಳಿಸಬೇಕು ಎಂದು ಪಣ ತೊಟ್ಟು ಕಷ್ಟದಲ್ಲೂ ಶಾಲೆಯನ್ನೂ ಕೈಬಿಡದೆ ನಡೆಸಿಕೊಂಡು ಬಂದಿದ್ದಾರೆ. ಈ ಶಾಲೆಯಲ್ಲಿ ಓದಿದ ಅದೇಷ್ಟೋ ಬಡ ವಿದ್ಯಾರ್ಥಿಗಳು ಒಳ್ಳೆಯ ಕೆಲಸ ಪಡೆದಿದು ಸುಂದರ ಜೀವನವನ್ನು ಕಟ್ಟಿಕೊಂಡಿದ್ದಾರೆ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಕೋಟಿ ಕೋಟಿ ಆಸ್ತಿ ಮಾಡಬೇಕು ಅನ್ನುವವರ ನಡುವೆ ರೊಟ್ಟಿ ತಟ್ಟಿ ಬಂದ ಹಣದಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುತ್ತಾ ಕನ್ನಡ ಶಾಲೆ ಉಳಿಸುವ ಕೆಲಸ ಮಾಡುತ್ತಿದ್ದಾರೆ.

    ಡಾ.ಲತಾ ದಾಮ್ಲೆ
    ವಿಜ್ಞಾನ ಮತ್ತು ಔಷಧ ಕ್ಷೇತ್ರದಲ್ಲಿ ಮಹಿಳೆಯರೂ ಕೂಡ ಮಹೋನ್ನತ ಸಾಧನೆಗಳನ್ನು ಮಾಡುತ್ತಿದ್ದಾರೆ. ಅಂತವರಲ್ಲಿ ಡಾಕ್ಟರ್ ಲತಾ ದಾಮ್ಲೆ (Dr. Latha Damle) ಕೂಡ ಪ್ರಮುಖರು. ಮೂಲತಃ ಉಡುಪಿಯ ಕುಂದಾಪುರದವರಾದ ಲತಾ ದಾಮ್ಲೆಯ ತಂದೆ ಯೋಧರಾಗಿದ್ದರು. ಬಾಲ್ಯದಲ್ಲೇ ಸಂಗೀತದ ಮೇಲೆ ಆಸಕ್ತಿ. ತಂದೆ ಮಗಳು ಆಸೆ ಐಎಎಸ್ ಆಗಬೇಕು ಎಂದು ಕನಸು ಕಂಡಿದ್ದರು. ಆದರೆ ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡುವ ಲತಾ ದಾಮ್ಲೆ ಇವತ್ತು ಅಟ್ರಿಮೆಡ್ ಬಯೋಟೆಕ್ ಸಂಸ್ಥೆ ಮೂಲಕ ಔಷಧ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ್ದಾರೆ.

    ಲಂಡನ್‍ನ ಡ್ರಗ್ ಡಿಸ್ಕವರಿ ಆಂಡ್ ಡೆವಲಪ್ಮೆಂಟ್‍ನಲ್ಲಿ ಎಂಎಸ್ ಮಾಡಿರುವ ಲತಾ ದಾಮ್ಲೆ ಬೆಂಗಳೂರಿನಲ್ಲಿ ಪ್ಲಾಂಟ್ ಫಾರ್ಮಕಾಲಜಿಯಲ್ಲಿ ಎಂಡಿ ಮುಗಿಸಿದ್ದರು. 25 ವರ್ಷಗಳ ಕಾಲ ರೇರ್ ಆಯುರ್ವೇದಿಕ್ ಸೆಂಟರ್‌ನಲ್ಲಿ ಮುಖ್ಯ ವೈದ್ಯೆಯಾಗಿ ಕೆಲಸ ಮಾಡಿರುವ ಲತಾ ದಾಮ್ಲೆ 2016ರಲ್ಲಿ ತನ್ನದೇ ಆದ ಅಟ್ರಿಮೆಡ್ ಬಯೋಟೆಕ್ ಸಂಸ್ಥೆ ಸ್ಥಾಪಿಸುತ್ತಾರೆ. ಇಲ್ಲಿ ಆಯುರ್ವೇದ ಸಸ್ಯಗಳ ಮೇಲೆ ಸಂಶೋಧನೆಗಳನ್ನು ನಡೆಸಿ ಔಷಧಗಳನ್ನು ಕಂಡುಹಿಡಿಯುವ ಕೆಲಸ ಮಾಡುತ್ತಿದ್ದಾರೆ.

    ಉರಿಯೂತ, ಕ್ಯಾನ್ಸರ್ ಇಮ್ಯುನಾಲಜಿ, ಗಾಯಗಳಿಗೆ ಚಿಕಿತ್ಸೆ, ಚರ್ಮರೋಗಗಳು ಹಾಗೂ ಡಯಾಬಿಟೀಸ್ ರೋಗಕ್ಕೆ ಸಂಬಂಧಪಟ್ಟ ಔಷಧಗಳ ಸಂಶೋಧನೆಯನ್ನು ಇವರು ನಡೆಸಿದ್ದಾರೆ. ಸೋರಿಯಾಸಿಸ್, ಆಸ್ತಮಾ, ಡಯಾಬಿಟಿಸ್, ಅಲರ್ಜಿ ಮುಂತಾದ ರೋಗಗಳಿಗೆ ಹರ್ಬಲ್ ಮೆಡಿಸಿನ್‍ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ್ದಾರೆ.

    ವೈಶಾಲಿ
    ಎಷ್ಟೋ ಬಾರಿ ಪ್ರತಿಭೆಗೆ ಅತಿದೊಡ್ಡ ಪ್ರತಿಸ್ಪರ್ಧಿಯಾಗುವುದು ಬಡತನ. ಅದರಲ್ಲೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧಿಸಬೇಕು ಅಂದರೆ ಮೊದಲ ಸೋಲಿಸಬೇಕಾಗಿರೋದು ಈ ಬಡತವನ್ನು. ಛಲ ಇದ್ದರೆ ಬಡತನ ಅಡ್ಡಿಬರುವುದಿಲ್ಲ ಎನ್ನುವುದಕ್ಕೆ ಉದಾಹರಣೆಯೇ ಕುರಿಗಾಹಿ ಬಂಗಾರದ ಹುಡುಗಿ ವೈಶಾಲಿ.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಯುವತಿ ವೈಶಾಲಿ (Vaishali) ದನದ ಗುಡಿಸಲಿನಲ್ಲಿ ಅರಳಿದ ಕ್ರೀಡಾಪ್ರತಿಭೆ. ಗುರುಪ್ರಕಾಶ ಹಾಗೂ ಲಕ್ಷ್ಮಿದೇವಿಯವರ ಕೊನೆಯ ಮಗಳಾದ ವೈಶಾಲಿ ಕಡುಬಡತನದಲ್ಲೇ ಬೆಳೆದ ಈಕೆಗೆ ಕ್ರೀಡೆಯ ಕಡೆಗೆ ಸೆಳೆತ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇವರು ಮಲೇಷ್ಯಾದ ಅಂತಾರಾಷ್ಟ್ರೀಯ ಥ್ರೋಬಾಲ್ (Throw Ball) ಸ್ಪರ್ಧೆಗೆ ಆಯ್ಕೆಯಾಗ್ತಾರೆ. ಭಾರತದ ರಾಷ್ಟ್ರೀಯ ಥ್ರೋಬಾಲ್ ತಂಡದಲ್ಲಿ ಸ್ಥಾನ ಪಡೆದ ಬಳಿಕ ಮಲೇಷ್ಯಾಗೆ ತೆರಳಲು ತೀವ್ರ ಹಣಕಾಸಿನ ಅಡಚಣೆಯಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಜಿಲ್ಲೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಾಗಿರಲಿಲ್ಲ. ಆಗ ವದ್ದಿಕೆರೆ ಗ್ರಾಮಸ್ಥರು ಇಡೀ ಗ್ರಾಮದಲ್ಲಿ ಚಂದ ಹಣ ಸಂಗ್ರಹಿಸಿ ವೈಶಾಲಿ ಗೆದ್ದು ಬರುವಂತೆ ಹರಸಿ ಮಲೇಶಿಯಾಕ್ಕೆ ಕಳುಹಿಸುತ್ತಾರೆ. ಹೀಗಾಗಿ ಛಲ ಬಿಡದೇ ಆಧುನಿಕ ಓಬವ್ಬಳಂತೆ ಸೆಣಸಾಡಿರೊ ವೈಶಾಲಿ ಮಲೇಶಿಯಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

    ವೈಶಾಲಿಯವರು 2022 ರಿಂದ 2023 ರ ಒಂದು ವರ್ಷದ ಅವಧಿಯಲ್ಲೇ ಕೇರಳ ಹಾಗೂ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಥ್ರೋಬಾಲ್ ಮತ್ತು ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಾಗೆಯೇ ಮಲೇಶಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಯಲ್ಲೂ ಬಂಗಾರದ ಪದಕ ಗಳಿಸಿ ಮಿಂಚಿದ್ದಾರೆ. ಕುರು ಜಾನುವಾರುಗಳನ್ನು ಕಾದುಕೊಂಡೇ ತಮ್ಮ ಜಮೀನಿನಲ್ಲಿ ಅಭ್ಯಾಸ ಮಾಡ್ತಿದ್ದ ವೈಶಾಲಿ ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದಿರೋದು ಕೇವಲ ವದ್ದಿಕೆರೆ ಗ್ರಾಮಕ್ಕೆ ಮಾತ್ರವಲ್ಲ ಇಡೀ ಕರ್ನಾಟಕ ರಾಜ್ಯ ಹಾಗೂ ಭಾರತಕ್ಕೂ ಹೆಮ್ಮೆ.

    ಡಾ.ಯಮುನಾ ಬಿ ಎಸ್
    ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಭಾರತದ ಸಾಂಪ್ರದಾಯಿಕ ಆರ್ಯುವೇದ ವೈದ್ಯ ಪದ್ಧತಿ ಕಡೆಗೆ ಒಲವು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದ ಆಯುರ್ವೇದ ಕ್ಷೇತ್ರದಲ್ಲಿ ಇವತ್ತು ಹೆಸರು ಮಾಡುತ್ತಿರೋದು ಗುಡುಚಿ-ದಿ ಆಯುರ್ವೇದಿ ಸಂಸ್ಥೆ. 2014ರಲ್ಲಿ ಆರಂಭವಾದ ಈ ಸಂಸ್ಥೆ ಇದು ದೇಶ ವಿದೇಶಗಳಲ್ಲಿ ತನ್ನ ಛಾಪು ಮೂಡಿಸಿದೆ. ಇದರ ಹಿಂದಿರುವ ರೂವಾರಿಯೇ ಮಹಿಳಾ ಸಾಧಕಿ, ಆಯುರ್ವೇದ ವೈದ್ಯೆ ಡಾ ಯಮುನಾ ಬಿಎಸ್.

    ಬೆಂಗಳೂರಿನ ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ 2008ರಲ್ಲಿ ಬಿಎಎಂಎಸ್ ಪದವಿ ಮುಗಿಸಿದ ಯಮುನಾ ಬಿಎಸ್ (Dr. Yamuna B S) 2013ರವರೆಗೆ ಅನನ್ಯಾ ಆಯುರ್ವೇದದಲ್ಲಿ ಕೆಲಸ ಮಾಡಿದರು. ನಂತರ ಗುಡುಚಿ ಆಯುರ್ವೇದ (Ayurveda) ಕ್ಲಿನಿಕ್ ಆರಂಭಿಸಿದ ಡಾ.ಯಮುನಾ ಕೆಲವೇ ವರ್ಷಗಳಲ್ಲಿ ಅದನ್ನು ಬ್ರ್ಯಾಂಡ್ ಅನ್ನಾಗಿ ಮಾಡಿದ್ರು. ಕಳೆದ ಎಂಟು ವರ್ಷಗಳಲ್ಲಿ 250ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿರುವ ಡಾ.ಯಮುನಾ ಉಡುಪಿಯಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದಾರೆ. ಇಲ್ಲಿಂದ ಬ್ರಿಟನ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಆಯುರ್ವೇದ ಉತ್ನನ್ನಗಳು ರಫ್ತಾಗುತ್ತವೆ.

    ಔಷಧರಹಿತ ಜೀವನದ ಗುರಿ ಇಟ್ಟುಕೊಂಡು ಸಂತಾನಹೀನತೆ, ಡಯಾಬಿಟಿಸ್, ಪಿಸಿಒಎಸ್, ಹೈಪೋಥೈರಾಯ್ಡ್ ಹಾಗೂ ಕ್ಯಾನ್ಸರ್‌ನಂತಹ ರೋಗಗಳಿಗೆ ಚಿಕಿತ್ಸೆ ನೀಡುತ್ತಾರೆ ಡಾ.ಯಮುನಾ. ಇವತ್ತು ಗುಡುಚಿ ಆಯುರ್ವೇದ 60ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿದೆ. ಆರೋಗ್ಯಕರ ಸಮಾಜದ ಗುರಿ ಇಟ್ಟುಕೊಂಡು, ಜೀವನಪರ್ಯಂತ ಔಷಧ ಸೇವಿಸುವಂತ ಕಾಯಿಲೆಯನ್ನೂ ಗುಣಪಡಿಸಿ, ಔಷಧರಹಿತ ಸುದೀರ್ಘ ಜೀವನ ನಡೆಸುವಂತಾಗಲು ಶ್ರಮಿಸುತ್ತಿದ್ದಾರೆ.

    ಸುಮಿತಾ ನವಲಗುಂದ
    ಸ್ವಾವಲಂಬಿಯಾಗಬೇಕು ಎನ್ನುವ ಹಠ ಅಸಾಮಾನ್ಯ ಸಾಧನೆಗೆ ದಾರಿಯಾಗುತ್ತದೆ. ಬಡತನ, ಪತಿಯ ಅಕಾಲಿಕ ಮರಣ, ಮಗಳನ್ನು ಸಾಕುವ ಜವಾಬ್ದಾರಿ. ಹೀಗೆ ಜೀವನದ ಸವಾಲವನ್ನೇ ಸಾಧನೆಯ ಮೆಟ್ಟಿಲನ್ನಾಗಿ ಮಾಡಿರುವ ಧೀರ ಮಹಿಳೆ ಸುಮಿತಾ ನವಲಗುಂದ.

    17 ವರ್ಷಗಳ ಹಿಂದೆನೇ ತನ್ನ ಪತಿಯನ್ನು ಕಳೆದುಕೊಂಡು, ಒಂದು ಹೆಣ್ಣು ಮಗುವಿನ ತಾಯಿಯೂ ಆಗಿರುವ ಸುಮಿತಾ (Sumitha Nvalagunda) ಹೆಗಲ ಮೇಲೆ ಸಂಸಾರದ ಜವಾಬ್ದಾರಿ ಬೀಳುತ್ತದೆ. ತನ್ನ ತಾಯಿಯ ಜೊತೆ ಧಾರವಾಡದ ಮುರುಘಾಮಠದ ಬಳಿ ನೆಲೆಸಿರುವ ಸುಮಿತ್ರಾ ಜೀವನ ಕಟ್ಟಿಕೊಳ್ಳಲು ಆರಂಭದಲ್ಲಿ ಎನ್‍ಜಿಒ ಒಂದರಲ್ಲಿ ಕೆಲಸ ಮಾಡ್ತಾರೆ. ನಂತರ ಬ್ಯೂಟಿ ಪಾರ್ಲರ್ ತೆರೆದ್ರೂ ಜೀವನ ನಡೆಸೋದು ಕಷ್ಟವಾಗಿದ್ದಾಗ ಸುಮಿತ್ರಾ ತೋರಿದ ಅದೊಂದು ಧೈರ್ಯ ಅವರನ್ನು ಇವತ್ತು ಈ ಮಟ್ಟಿಗೆ ತಂದು ನಿಲ್ಲಿಸಿದೆ.

    ಕೆಲ ವರ್ಷಗಳ ಹಿಂದೆ ಒಂದು ಮಾರ್ಕೆಟಿಂಗ್ ಕಂಪನಿ ಹುಣಸೇಹಣ್ಣಿನ ಚಿಗಳಿ ಮಾಡುವುದಕ್ಕೆ ಆಹ್ವಾನ ಕೊಟ್ಟಿದ್ದರು. ಇದರಲ್ಲಿ ಭಾಗವಹಿಸಿದ್ದ ಸುಮಿತ್ರಾ ಮನೆಯಲ್ಲೇ ಸ್ವಲ್ಪ ಚಿಗಳಿ ತಯಾರಿಸಿಕೊಂಡು ಹೋಗಿದ್ದರು. ಇವರ ಚಿಗಳಿ ಮಾಡುವ ಆರ್ಡರ್ ಕೊಡ್ತಾರೆ. ಸಿಕ್ಕ ಅವಕಾಶ ತಪ್ಪಿಸಿಕೊಳ್ಳಬಾರದು ಅಂತ ನಿರ್ಧರಿಸಿ ಸುಮಿತ್ರಾ ಹಾಗೂ ಆಕೆಯ ತಾಯಿ ಮೊದಲು ಮನೆಯಲ್ಲೇ ಹಗಲು ರಾತ್ರಿ ಎನ್ನದೇ ಕೈಯಿಂದ ಕುಟ್ಟಿ ಚಿಗಳಿ ತಯಾರು ಮಾಡಿ ಕಳಿಹಿಸುತ್ತಾರೆ. ಆರಂಭದಲ್ಲಿ ಸುಮಿತ್ರಾಗೆ ವಾರಕ್ಕೆ 1800 ಚಿಗಳಿ ಆರ್ಡರ್ ಮಾತ್ರ ಮಾಡಲು ಸಾಧ್ಯವಾಗುತಿತ್ತು. ಆದರೆ ಇವತ್ತು ಇದೇ ಸುಮಿತ್ರಾ ದಿನಕ್ಕೆ 30 ಸಾವಿರ ಚಿಗಳಿ ತಯಾರು ಮಾಡ್ತಾರೆ. ಕೇವಲ 2 ಸಾವಿರ ರೂಪಾಯಿ ಹಣ ಹಾಕಿ ಆರಂಭ ಮಾಡಿದ್ದ ಈ ಚಿಗಳಿ ವ್ಯಾಪಾರ ಈಗ ಲಕ್ಷ ಲಕ್ಷ ಹಣ ಗಳಿಸುತ್ತಿದೆ.

    ಮೊದಲು ತನ್ನ ಮನೆ ನಡೆಸಲು ಕಷ್ಟ ಪಡುತಿದ್ದ ಈ ಮಹಿಳೆ ಈಗ 63 ಕುಟುಂಬಗಳಿಗೆ ಬೆಳಕಾಗಿದ್ದಾರೆ. ಮನೆಯಿಂದ ಆರಂಭವಾದ ಈ ಉದ್ಯಮ ಇಂದು ಒಂದು ಗೋಡೌನ್‍ನಲ್ಲಿ ನಡೆಯುತ್ತಿದ್ದು 63 ಮಹಿಳೆಯರು ಇಲ್ಲಿ ಕೆಲಸ ಮಾಡುತ್ತಾರೆ. ಕಷ್ಟದ ಬದುಕನ್ನ ಸಾಗಿಸುತಿದ್ದ ಈ ಮಹಿಳೆಯರು ಇವತ್ತು ಸುಮಿತ್ರಾ ಕೊಟ್ಟ ಕೆಲಸದಿಂದ ಒಂದು ತುತ್ತು ಅನ್ನ ತಿನ್ನುವಂತೆ ಆಗಿದೆ.

    ಡಾ.ಕಿರಣ್ ರೆಡ್ಡಿ
    ನಹಿ ಜ್ಞಾನೇನ ಸದೃಶಂ’ ಅಂತ ಭಾರತದ ಪ್ರಾಚೀನ ಗೀತಾಮೃತದಲ್ಲಿ ಹೇಳಲಾಗಿದೆ. ಇಂತಹ ಜ್ಞಾನ ತುಂಬವ ಕೆಲಸವನ್ನು ಮಾಡುತ್ತಿರುವುದು ನಮ್ಮ ಶಿಕ್ಷಣ ಸಂಸ್ಥೆಗಳು. ಕಳೆದ 36 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತನ್ನದೇ ಆದ ಛಾಪು ಮೂಡಿಸಿರುವವರು ಡಾ ಕಿರಣ್ ರೆಡ್ಡಿ.

    ಆಚಾರ್ಯ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಸೈನ್ಸ್ (Acharya Institute of Management and Sciences, Bengaluru) ಸಂಸ್ಥೆಯನ್ನು ಹುಟ್ಟುಹಾಕಿದ ಕಿರಣ್ ರೆಡ್ಡಿ (Dr Kiran Reddy) ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಜ್ಞಾನ ಮತ್ತು ಕೌಶಲ್ಯವನ್ನು ಸಂಪಾದನೆ ಮಾಡಿ ನಾಡಿಗೆ ಹೆಸರು ತಂದಿದ್ದಾರೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರಿಂದ ಹಿಡಿದು ಸಂಸ್ಥೆಯ ಮುಖ್ಯಸ್ಥೆಯಾಗಿ ಆಡಳಿತ ನಡೆಸುತ್ತಾ ವಿವಿಧ ರಾಜ್ಯಮಟ್ಟದ ಶೈಕ್ಷಣಿಕ ಸಮಿತಿಗಳ, ಒಕ್ಕೂಟಗಳ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ ಕಿರಣ್ ರೆಡ್ಡಿ. ಬೆಂಗಳೂರು ವಿಶ್ವವಿದ್ಯಾಲಯದ ಸ್ಥಳೀಯ ವಿಚಾರಣಾ ಸಮಿತಿಯ ಮುಖ್ಯಸ್ಥೆಯಾಗಿಯೂ ಕೆಲಸ ಮಾಡಿದ್ದಾರೆ.

    28 ವರ್ಷಗಳಿಂದ ಆಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್ ಆಂಡ್ ಸೈನ್ಸ್‌ ಕಟ್ಟಿ ಬೆಳೆಸಿ ಇವತ್ತು ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಗಳ ಜೊತೆ ಸ್ಪರ್ಧಿಸುವಷ್ಟು ಪ್ರಬಲ ಸಂಸ್ಥೆಯನ್ನಾಗಿ ಮಾಡುವುದರಲ್ಲಿ ಇವರ ಕೊಡುಗೆ ದೊಡ್ಡದಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಂಶೋಧನೆಗಳನ್ನು ನಡೆಸಿ ಹತ್ತಾರು ಉಪನ್ಯಾಸಗಳನ್ನು ನೀಡಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಡಾ.ಕಿರಣ್ ರೆಡ್ಡಿ.

    ಜಯಮ್ಮ
    2023ನೇ ವರ್ಷವನ್ನು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ( International Year Millets) ಘೋಷಿಸಿದೆ. ಇವತ್ತು ಸಿರಿಧಾನ್ಯಗಳಿಗೆ ಅಷ್ಟರಮಟ್ಟಿಗೆ ಮಹತ್ವವಿದೆ. ಇದೇ ಸಿರಿಧಾನ್ಯ ಕೃಷಿಯಲ್ಲಿ ಅಪೂರ್ವ ಸಾಧನೆ ಮಾಡಿದವರು ಹಾವೇರಿಯ ಜಯಮ್ಮ.

    ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ದೊಡ್ಡಗುಬ್ಬಿ ಗ್ರಾಮದ ಜಯಮ್ಮ (Jaymamma) ಆರಂಭದಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದರು. ಸುಮಾರು 4 ವರ್ಷ ನರ್ಸ್ ಆಗಿ ಕೆಲಸ ಮಾಡಿರುವ ಜಯಮ್ಮಗೆ ಕೃಷಿಯ ಕಡೆಗೆ ಒಲವು ಬೆಳೆಯುತ್ತದೆ. ಸಾವಯವ ಕೃಷಿಯ ತರಬೇತಿ ಪಡೆಯುವ ಜಯಮ್ಮ ಇದ್ದ ಒಂದು ಎಕರೆಯಲ್ಲೇ ಸಾವಯವ ಬೆಳೆಯನ್ನು ಬೆಳೆಯಲು ಪ್ರಾರಂಭಿಸುತ್ತಾರೆ. ಅದರಲ್ಲೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ನವಣೆ, ಸಾವೆ, ಸಜ್ಜೆ, ಬರಗು, ತೊಗರೆ ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನ ಬೆಳೆದು ಮಾರಾಟ ಮಾಡುತ್ತಿದ್ದರು. ಅದರೆ ಅದರಲ್ಲಿ ಯಾವುದೇ ಲಾಭ ಸಿಗುತ್ತಿರಲಿಲ್ಲ. ಈ ಸಂದರ್ಭ ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಯ ಮೂಲಕ ಮಾರ್ಗದರ್ಶನ ಹಾಗೂ ತರಬೇತಿ ಪಡೆದು ಸಿರಿಧಾನ್ಯಗಳಿಂದ ಸ್ವಯಂ ಉತ್ಪನ್ನಗಳನ್ನ ರೆಡಿ ಮಾಡಲು ಪ್ರಾರಂಭಿಸುತ್ತಾರೆ. ಇಲ್ಲಿಂದ ಇವರ ಯಶೋಗಾಥೆ ಆರಂಭವಾಗುತ್ತದೆ.

    2009ರಿಂದ ಸಾವಯವ ಕೃಷಿಯಲ್ಲಿ ಸಿರಿಧಾನ್ಯಗಳನ್ನು ಬೆಳೆದು ತಾವೇ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಜಯಮ್ಮ.ಗಗನ್ ಎಂಟರ್‍ಪ್ರೈಸರ್ ಎಂಬ ಸಂಸ್ಥೆಯ ಮೂಲಕ ಹತ್ತಾರು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿರುವ ಜಯಮ್ಮ ಗ್ರಾಮದ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರಿಗೆ ಸಿರಿಧಾನ್ಯಗಳ ಮಾಹಿತಿ, ಹಾಗೂ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಗ್ರಾಮದ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದ್ದಾರೆ.

    ಅಂಜಲಿ ರಾಮಚಂದ್ರ
    21ನೇ ಶತಮನಾದಲ್ಲಿ ಮಹಿಳೆ ಮನೆಯೊಳಗೆ ಮಾತ್ರವಲ್ಲ ಮನೆಯ ಹೊರಗೆನೂ ಮಲ್ಟಿಟಾಸ್ಕಿಂಗ್‍ನಲ್ಲಿ ಮಿಂಚುತ್ತಿದ್ದಾಳೆ. ಹೀಗೆ ನಮ್ಮ ನಡುವೆ ಇರುವ ಬಹುಮುಖಪ್ರತಿಭೆಯಲ್ಲೊಬ್ಬರು ಅಂಜಲಿ ರಾಮಚಂದ್ರ. ಸಿನಿಮಾ, ನಿರೂಪಣೆ, ಉಪನ್ಯಾಸ, ನೃತ್ಯ, ಕೊರಿಯಾಗ್ರಫಿ ಹೀಗೆ ಅಂಜಲಿ ಮುಟ್ಟದ ಕ್ಷೇತ್ರಗಳಿಲ್ಲ.

    ಕ್ರಿಯೇಟಿಕ್ಸ್ ಮೀಡಿಯಾ ಮತ್ತು ಮಹಾವತಾರ ಮೀಡಿಯಾ ಕಮ್ಯುನಿಕೇಶನ್‍ನ ಸಂಸ್ಥಾಪಕಿ ಮತ್ತು ಸಿಇಒ ಆಗಿರುವ ಅಂಜಲಿ ರಾಮಚಂದ್ರ (Anjali Ramachandra) ಮೀಡಿಯಾ ಟೆಕ್ ಸ್ಟಾರ್ಟಪ್ ಮೂಲಕ ಉದ್ಯಮಕ್ಕೆ ಬಂದವರು. ಮೂಲತಃ ನಟಿಯಾಗಿದ್ದ ಅಂಜಲಿ ಮನರೋಥ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿಯಾಗಿದ್ದರು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ ಅಂಜಲಿ ನಟನೆಗಷ್ಟೇ ತಮ್ಮನ್ನು ಸೀಮಿತಗೊಳಿಸಲಿಲ್ಲ. ಕ್ರಿಯೇಟಿಕ್ಸ್ ಮೀಡಿಯಾ ಮತ್ತು ಮಹಾವತಾರ್ ಮೀಡಿಯಾ ಕಮ್ಯುನಿಕೇಶನ್ ಪ್ರಾರಂಭಿಸಿದರು.

    ಜಾಹೀರಾತು, ಕಾರ್ಪೋರೇಟ್ ಫಿಲ್ಮ್ಸ್, ಡಾಕ್ಯುಮೆಂಟರಿಗಳು, ಬ್ರ್ಯಾಂಡ್ ಮ್ಯಾನೇಜ್ಮೆಂಟ್ ಸೇರಿದಂತೆ ಎಲ್ಲವನ್ನೂ ಮಾಡುತ್ತದೆ ಈ ಸಂಸ್ಥೆ. ಇದರ ಜೊತೆಗೆ ಅಂಜಲಿ ಕನ್ನಡದ ಪ್ರಖ್ಯಾತ ಮನರಂಜನಾ ವಾಹಿನಿಗಳಲ್ಲಿ ಆಂಕರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ತನ್ನ ಪ್ರತಿಭೆ ತೋರಿಸಿದ್ದಾರೆ. ಡ್ಯಾನ್ಸರ್ ಆಗಿಯೂ ಗುರುತಿಸಿಕೊಂಡಿರುವ ಅಂಜಲಿ ಹಲವು ಪ್ರದರ್ಶನಗಳನ್ನು ನೀಡಿದ್ದಾರೆ. ಅಂಜಲಿ ಸ್ಕೂಲ್ ಆಫ್ ಡ್ಯಾನ್ಸ್ ಆಂಡ್ ಮ್ಯೂಸಿಕ್ ಅನ್ನೋ ಸಂಸ್ಥೆಯ ಮೂಲಕ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಳಕಾಗಿದ್ದಾರೆ. ಇವರ ಸಾಧನೆಗೆ ಡಾಟರ್ ಆಫ್ ಇಂಡಿಯಾ, ರಾಮ್‍ನಾಥ್ ಗೋಯೆಂಕಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

    ದಿವ್ಯಜ್ಯೋತಿ
    ಕಷ್ಟ ಕಾಲಕ್ಕೆ ಆದವರೇ ನಿಜವಾದ ನೆಂಟರು ಎಂಬ ಮಾತಿದೆ. ಸ್ತ್ರೀ ಸ್ವಸಹಾಯ ಗುಂಪುಗಳು ನಿಸ್ಸಂದೇಹವಾಗಿ ಇಂದು ಆಪತ್ಬಾಂಧವನ ಪಾತ್ರ ನಿರ್ವಹಿಸುತ್ತಿವೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆಂದೇ ರಚನೆಗೊಂಡ ಸ್ವಸಹಾಯ ಸಂಘಗಳ ಪೈಕಿ ಕೊಪ್ಪಳ ಜಿಲ್ಲೆಯ ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯ್ತಿ (Divya Jyothi Grama Panchayat) ಒಕ್ಕೂಟಕ್ಕೆ ವಿಶೇಷ ಸ್ಥಾನ.

    ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ಮಂಗಳೂರು ಗ್ರಾಮದ ಈ ಸಂಘ, ಸಾವಿರಾರು ಮಹಿಳೆಯರ ಆದಾಯಕ್ಕೊಂದು ದಾರಿ ಮಾಡಿಕೊಟ್ಟಿದೆ. ಈ ಒಕ್ಕೂಟದಿಂದ ನೆರವು ಪಡೆದ ಅದೆಷ್ಟೋ ವನಿತೆಯರು ಸ್ವಯಂ ಸಮೃದ್ಧ ಬದುಕು ಕಟ್ಟಿಕೊಂಡಿದ್ದಾರೆ. ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ ಆರಂಭವಾಗಿದ್ದು 2015ರಲ್ಲಿ. ಕೇವಲ ಒಂದು ಲಕ್ಷ ರೂಪಾಯಿ ಸದಸ್ಯರ ಬಂಡವಾಳದೊಂದಿಗೆ ಶುರುವಾದ ಈ ಒಕ್ಕೂಟ ಇಂದು ಹೆಮ್ಮರವಾಗಿ ಬೆಳೆದಿದೆ. ಸದ್ಯ ಈ ಸ್ವಸಹಾಯ ಗುಂಪಿನ ಬಳಿ ಒಂದೂವರೆ ಕೋಟಿ ರೂಪಾಯಿ ಸಮುದಾಯ ಬಂಡವಾಳ ನಿಧಿ ಇದೆ ಎಂದರೆ ಅದು ಇವರ ಪರಿಶ್ರಮ ಸಿಕ್ಕ ಬೆಲೆ.

    ಮಂಗಳೂರು ಗ್ರಾಮದಲ್ಲಿ ಕೆಲವರು ಕೃಷಿ ಮಾಡ್ತಾರೆ, ತರಕಾರಿ ಬೆಳೆದು ಮಾರುತ್ತಾರೆ, ಕೌದಿ ಹೊಲೆಯುತ್ತಾರೆ, ಕಿರಾಣಿ ಅಂಗಡಿ, ಹಿಟ್ಟಿನ ಗಿರಣಿ ಇಟ್ಕೊಂಡಿದ್ದಾರೆ. ಹೀಗೆ ಸ್ವಸಹಾಯ ಗುಂಪಿನಿಂದ ಸಾಲ ಪಡೆದು ನಿತ್ಯ ದುಡಿಮೆ ಮಾಡುತ್ತಿದ್ದಾರೆ. ಬಸಮ್ಮ ಎಂಬಾಕೆಯ ಬಟ್ಟೆ ಅಂಗಡಿ 10 ಲಕ್ಷ ರೂಪಾಯಿವರೆಗೂ ವಹಿವಾಟು ನಡೆಸುತ್ತಿದೆ ಎಂದರೆ ನೀವು ನಂಬಲೇಬೇಕು. ಇಡೀ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಒಬ್ಬೊಬ್ಬರು ಸ್ವಸಹಾಯ ಗುಂಪಿನ ಸದಸ್ಯರಾಗಿ. ಅದರ ಲಾಭ ಪಡೆದು ಸ್ವಾವಲಂಬಿಗಳಾಗಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ವತಿಯಿಂದ 10 ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ 2022 ವಿಶೇಷ ಪ್ರಶಸ್ತಿ ಪ್ರದಾನ

    ರಮ್ಯಾ
    ಸಾಮಾನ್ಯವಾಗಿ ಮನೆಯಲ್ಲಿ ಅಡುಗೆ ಮನೆ ಜವಾಬ್ದಾರಿ ಹೆಣ್ಣುಮಕ್ಕಳದ್ದೇ ಆಗಿದ್ರೂ ಹೋಟೆಲ್ ಉದ್ಯಮದಲ್ಲಿ ಮಹಿಳೆಯರು ಹೆಸರು ಮಾಡಿರುವುದು ವಿರಳ. ಇದಕ್ಕೆ ಅಪವಾದ ಎಂಬಂತೆ ಇದ್ದಾರೆ ರಮ್ಯಾ. ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಪದವಿ ಮುಗಿಸಿದ ರಮ್ಯಾ (Ramya) ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಾರ್ಟ್‍ಟರ್ಮ್ ಕೋರ್ಸ್ ಮಾಡಿದ್ದಾರೆ. ಆಹಾರಗಳ ಮೇಲೆ ವಿಶೇಷ ಆಸಕ್ತಿಹೊಂದಿದ್ದ ರಮ್ಯಾ ಎಂಟು ವರ್ಷಗಳ ಕಾಲ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡಿದ್ದರು.

    ತಾನು ಎಲ್ಲರಿಗಿಂತ ವಿಭಿನ್ನವಾದದ್ದನ್ನು ಜನರಿಗೆ ಕೊಡಬೇಕು ಎನ್ನುವುದು ಇವರಿಗೆ ಯಾವಾಗಲೂ ಕಾಡುತ್ತಿತ್ತು. ಲಾಕ್‍ಡೌನ್ ಸಮಯದಲ್ಲಿ ತನ್ನ ಸೋದರಿ ಶ್ವೇತಾ ಜೊತೆ ಸೇರಿ ಆರ್‍ಎನ್‍ಆರ್ ದೊನ್ನೆ ಬಿರಿಯಾನಿ ಹೋಟೆಲ್ (RNR Donne Biryani Hotel) ಶುರುಮಾಡುತ್ತಾರೆ. ಸಾಂಪ್ರದಾಯಿಕ ದೊನ್ನೆ ಬಿರಿಯಾನಿಗೆ ವಿಶಿಷ್ಟವಾದ ಮಸಾಲೆ ಮತ್ತು ಫ್ಲೇವರ್‌ ಸೇರಿಸಿ ಕಡಿಮೆ ಅವಧಿಯಲ್ಲೇ ಜನಪ್ರಿಯತೆ ಗಳಿಸುತ್ತಾರೆ.

    ಸದ್ಯ ಬೆಂಗಳೂರಿನಲ್ಲಿ ಮನೆ ಮಾತಾಗಿರುವ ಆರ್‌ಎನ್‍ಆರ್ ದೊನ್ನೆ ಬಿರಿಯಾನಿ 2020ನೇ ಸಾಲಿನ `ಬೆಸ್ಟ್ ಬ್ರ್ಯಾಂಡ್ ಲಾಂಚ್’ ಅನ್ನೋ ಹೆಸರು ಗಳಿಸಿತ್ತು. ಈ ಮೂಲಕ ಹೋಟೆಲ್ ಉದ್ಯಮದಲ್ಲಿ ತನ್ನದೇ ಆದ ಬ್ರ್ಯಾಂಡ್ ಸೃಷ್ಟಿಸಿದ್ದಾರೆ ರಮ್ಯಾ.

  • ವಿಶ್ವ ಮಹಿಳಾ ದಿನಾಚರಣೆ – ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕರಿಗೆ ಗೌರವ

    ವಿಶ್ವ ಮಹಿಳಾ ದಿನಾಚರಣೆ – ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕರಿಗೆ ಗೌರವ

    ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಟಿ.ದಾಸರಹಳ್ಳಿಯ ಪೀಣ್ಯ ಕೈಗಾರಿಕಾ ಪ್ರದೇಶದ ಗೋಕಲ್ ದಾಸ್ ಎಕ್ಸ್ ಪ್ರೋರ್ಟ್ಸ್ ಲಿಮಿಟೆಡ್ ಕಂಪನಿಯಲ್ಲಿ ಹಿರಿಯ ಪರಿಸರವಾದಿ, ವಿಶ್ವದ ಪ್ರಭಾವಿ ಮಹಿಳೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸಾಲುಮರದ ತಿಮ್ಮಕ್ಕ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

     Saalumarada Thimmakka

    ಈ ವೇಳೆ ಮಾತನಾಡಿದ ಸಾಲುಮರದ ತಿಮ್ಮಕ್ಕನವರು ಮಹಿಳಾ ಸಾಧಕಿಯರನ್ನು ನೆನೆದು ಎಲ್ಲಾ ಮಹಿಳೆಯರು ಒಂದಲ್ಲಾ ಒಂದು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವಂತವರಾಗಿ ಎಂದು ಶುಭಹಾರೈಸಿದರು. ತಮ್ಮ ಕುಟುಂಬ ಮತ್ತು ಮಕ್ಕಳ ಲಾಲನೆ, ಪಾಲನೆ ಮಾಡುತ್ತಾ ಬಂದಿರುವ ಮಹಿಳಾಯರನ್ನು ಕೊಂಡಾಡಿದರು. ಉತ್ತಮ ಪರಿಸರಕ್ಕಾಗಿ ಎಲ್ಲರು ಪರಿಸರ ಕಾಳಜಿಯಿಂದ ಒಂದೊಂದು ಗಿಡ ನೆಟ್ಟು ಪರಿಸರ ಬೆಳಸಿ ಉಳಿಸಿ ಎಂದರು. ಇದನ್ನೂ ಓದಿ: ಯುಪಿ ಚುನಾವಣಾ ಫಲಿತಾಂಶ ನಮಗೊಂದು ಪಾಠ: ಮಾಯಾವತಿ

    ಗೋಕಲ್ ದಾಸ್ ಎಕ್ಸ್ ಪ್ರೋರ್ಟ್ಸ್ ಲಿಮಿಟೆಡ್ ಇಸಿಸಿ ಘಟಕದ ಉಪಾಧ್ಯಕ್ಷ ಕೇಶವ ಹಾಗೂ ಸೀನಿಯರ್ ಜನರಲ್ ಮ್ಯಾನೇಜರ್ ಹೆಚ್.ಆರ್.ಮಲ್ಲಿಕಾರ್ಜುನ ಅವರು ಮಾತನಾಡಿ, ಈ ಇಳಿ ವಯಸ್ಸಿನಲ್ಲಿ ತಿಮ್ಮಕ್ಕನವರ ಪರಿಸರದ ಕಾಳಜಿ ಹುಮ್ಮಸ್ಸು. ಒಂದೆಲ್ಲಾ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಿದೆ. ಅವರ ಅಪಾರ ಶ್ರಮ ಮತ್ತು ಸಾಧನೆಯನ್ನು ಹಂಚಿಕೊಂಡರು.

     Saalumarada Thimmakka

    ಈ ಕಾರ್ಯಕ್ರಮದಲ್ಲಿ ವಿಶ್ವದ ಪ್ರಭಾವಿ ಮಹಿಳೆ ಸಾಲುಮರದ ತಿಮ್ಮಕ್ಕ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಪ್ರೊಡಕ್ಷನ್ ಮ್ಯಾನೇಜರ್ ರಾಜು, ಹರೀಶ್, ಕಾರ್ಮಿಕ ಕಲ್ಯಾಣಾಧಿಕಾರಿ ರಜನಿ, ವರಲಕ್ಷ್ಮಿ, ಅಜಿತ್, ಸಿಬ್ಬಂದಿ ಉಪಸ್ಥಿತರಿದ್ದರು. ಇದನ್ನೂ ಓದಿ: Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌, ಬುಲ್ಡೋಜರ್‌ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ