Tag: International Players

  • ಗೋಧಿ ಕೊಯ್ಲು, ರಾಶಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಫುಲ್ ಬ್ಯುಸಿ

    ಗೋಧಿ ಕೊಯ್ಲು, ರಾಶಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಫುಲ್ ಬ್ಯುಸಿ

    ನವದೆಹಲಿ: ಕೊರೊನಾ ವೈರಸ್‍ನಿಂದಾಗಿ ಜಗತ್ತಿನಾದ್ಯಂತ ಒಲಿಂಪಿಕ್ಸ್, ಕ್ರಿಕೆಟ್ ಸೇರಿದಂತೆ ಅನೇಕ ಟೂರ್ನಿ ಹಾಗೂ ಕ್ರೀಡಾಕೂಡಗಳು ಮುಂದೂಡಲ್ಪಟ್ಟಿವೆ ಅಥವಾ ರದ್ದುಗೊಂಡಿವೆ. ಹೀಗಾಗಿ ಆಟಗಾರರು, ಕ್ರೀಡಾಪಟುಗಳು ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಆದರೆ ಕೆಲ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಗೋಧಿ ಕೊಯ್ಲು ಹಾಗೂ ರಾಶಿ ಮಾಡುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ಕೃಷಿ ಕಾರ್ಮಿರ ಕೊರೊತೆ ಉಂಟಾಗಿ ರೈತರು ಹೆಚ್ಚಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಕೃಷಿ ಕೆಲಸದಲ್ಲಿ ನಿರತರಾಗಿದ್ದಾರೆ. ಬಾಕ್ಸರ್ ಅಮಿತ್ ಪಂಗಲ್, ಮನೋಜ್ ಕುಮಾರ್, ಮಹಿಳಾ ಹಾಕಿ ತಂಡದ ಆಟಗಾರ್ತಿ ಪೂನಂ ಮಲಿಕ್ ಅವರು ತಮ್ಮನ್ನ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ರಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಜಾವೆಲಿನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ರಿಂಕು ಹುಡಾ, “9 ಎಕರೆ ಗೋಧಿಯನ್ನು ಯಂತ್ರದ ಸಹಾಯದಿಂದ ಕೊಯ್ಲು ಮಾಡಿದ್ದೇನೆ. ಇನ್ನೂ ಅರ್ಧ ಎಕರೆ ಉಳಿದಿದೆ. ಮಳೆಗೂ ಮುನ್ನವೇ ಗೋಧಿ ರಾಶಿ ಮಾಡಲಾಗುವುದು” ಎಂದು ಹೇಳಿದ್ದಾರೆ.

    ಕಳೆದ ವರ್ಷ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಮೊದಲ ಬಾಕ್ಸರ್ ಅಮಿತ್ ಪಂಗಲ್ ಅವರು ಸದ್ಯ ಹರ್ಯಾಣದ ರೋಹ್ಟಕ್‍ನ ತಮ್ಮ ಮಾನ್ಯ ಗ್ರಾಮದಲ್ಲಿದ್ದಾರೆ. ಅಲ್ಲಿ ಅವರು ಕುಟುಂಬಕ್ಕೆ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಪಂಗಲ್, “ಯಾವಾಗಲೂ ನನ್ನ ಕುಟುಂಬಕ್ಕೆ ಕೃಷಿಯಲ್ಲಿ ಸಹಾಯ ಮಾಡುತ್ತೇನೆ. ಆದರೆ ಬಾಕ್ಸಿಂಗ್ ಕಾರಣದಿಂದಾಗಿ ಗೋಧಿ ಕೊಯ್ಲು ಮಾಡುವ ಸಮಯದಲ್ಲಿ ಹಳ್ಳಿಯಿಂದ ಹೊರಗುಳಿದಿದ್ದೆ. ಲಾಕ್‍ಡೌನ್‍ನಿಂದಾಗಿ ನಾನು ನಮ್ಮೂರಲ್ಲಿದ್ದೇನೆ. ಈಗ ಕುಟುಂಬದೊಂದಿಗೆ ಗೋಧಿ ಕೊಯ್ಲು ಮತ್ತು ಪ್ಯಾಕ್ ಮಾಡಲು ನನಗೆ ಅವಕಾಶ ಸಿಕ್ಕಿದೆ. ರೈತ ಮಗನಾಗಿ ಈ ಕೆಲಸ ಮಾಡಲು ನನಗೆ ತೃಪ್ತಿ ಸಿಕ್ಕಿದೆ” ಎಂದು ಬರೆದುಕೊಂಡಿದ್ದಾರೆ.

    200 ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿರುವ ಹಿಸಾರ್ ಹಾಕಿ ಆಟಗಾರ್ತಿ ಪೂನಂ ಮಲಿಕ್ ಅವರು ಕೂಡ ಲಾಕ್‍ಡೌನ್‍ನಿಂದಾಗಿ ಹರ್ಯಾಣದ ತಮ್ಮ ಗ್ರಾಮ ಉಮ್ರಾದಲ್ಲಿದ್ದಾರೆ. ಕೊರೊನಾ ಭೀತಿಯಿಂದಾಗಿ ಹಾಕಿ ತರಬೇತಿ ಶಿಬಿರಗಳನ್ನು ಸಹ ಮುಂದೂಡಲಾಗಿದೆ. ಲಾಕ್‍ಡೌನ್‍ನಿಂದಾಗಿ ಕಾರ್ಮಿಕರು ಗೋಧಿ ಕೊಯ್ಲು ಮಾಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೂನಂ ಕುಟುಂಬ ಸದಸ್ಯರೊಂದಿಗೆ ತಮ್ಮ ಜಮೀನಿಗೆ ಹೋಗಿ ಗೋಧಿಯನ್ನು ಕೊಯ್ಲು ಮಾಡಿದ್ದಾರೆ. ವಿಶೇಷವೆಂದರೆ ಅವರು ಮೊದಲ ಬಾರಿಗೆ ಗೋಧಿ ಕೊಯ್ಲು ಮಾಡಿದ್ದಾರೆ.

    ನಾಲ್ಕು ದಿನ ಗೋಧಿ ಕೊಯ್ಲು ಮಾಡಲು ತನ್ನ ಕುಟುಂಬ ಸದಸ್ಯರೊಂದಿಗೆ ಹೋಗಿದ್ದಾಗಿ ಪೂನಂ ಮಲಿಕ್ ಹೇಳಿದ್ದಾರೆ. ಅವರು ಮತ್ತು ಕುಟುಂಬದ ಇತರ ನಾಲ್ಕು ಸದಸ್ಯರೊಂದಿಗೆ ನಾಲ್ಕು ದಿನಗಳಲ್ಲಿ ಒಂದು ಎಕರೆ ಗೋಧಿ ಕೊಯ್ಲು ಮಾಡುವ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಅವರು ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಗೋಧಿ ಕೊಯ್ಲು ಮಾಡಲು ಹೊಲಕ್ಕೆ ಹೋಗುತ್ತಿದ್ದರು.

    ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಬಾಕ್ಸಿಂಗ್ ತಂಡವನ್ನು ಪ್ರತಿನಿಧಿಸಿರುವ ಮನೋಜ್ ಕುಮಾರ್ ಕೂಡ ಗೋಧಿ ಕೊಯ್ಲು ಮಾಡಿದ್ದಾರೆ. ಅವರು ಬಾಲ್ಯದಲ್ಲಿ ಹಿರಿಯರು ಗೋಧಿ ಕೊಯ್ಲು ಮಾಡುವುದನ್ನು ನೋಡಿದ್ದರು. ಅನೇಕ ಬಾರಿ ಸುಮ್ಮನೆ ಗೋಧಿ ಕೊಯ್ಲು ಮಾಡಲು ಅವರೊಂದಿಗೆ ಹೋಗುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಕಾರ್ಮಿಕರು ಸಿಗದೆ ಇರುವುದಿಂದ ಮನೋಜ್ ಕುಮಾರ್ ಜಮೀನಿಗೆ ಹೋಗಿ ಗೋಧಿ ಕೊಯ್ಲು ಮಾಡಿದ್ದಾರೆ.