Tag: International Currency

  • ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲಿದ್ಯಾ ರೂಪಾಯಿ?

    ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲಿದ್ಯಾ ರೂಪಾಯಿ?

    ನವದೆಹಲಿ: ಪ್ರಂಪಚದ ಪ್ರಭಾವಶಾಲಿ ಕರೆನ್ಸಿ ಅಮೆರಿಕದ ಡಾಲರ್‌ಗೆ (Dollar) ಭಾರತದ ರೂಪಾಯಿ (Indian Rupee) ಪ್ರತಿಸ್ಪರ್ಧೆಯೊಡ್ಡುವ ಪ್ರಯತ್ನ ಆರಂಭಿಸಿದೆ. ಹಲವು ದೇಶಗಳ ಜೊತೆಗೆ ಮಾತುಕತೆ ನಡೆಸುತ್ತಿರುವ ಭಾರತ ಸರ್ಕಾರ ಎರಡು ದೇಶಗಳ ನಡುವೆ ನಡೆಯುವ ವ್ಯಾಪಾರ ವಹಿವಾಟುಗಳನ್ನು ರೂಪಾಯಿಯಲ್ಲೇ ನಡೆಸಲು ಪ್ರೋತ್ಸಾಹಿಸುತ್ತಿದೆ.

    ಸರ್ಕಾರದ ಈ ಹೊಸ ಪ್ರಯತ್ನದ ಭಾಗವಾಗಿ ಶ್ರೀಲಂಕಾ (Sri Lanka) ಸರ್ಕಾರವು ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಅನುಮೋದಿಸಿದೆ. ಇನ್ಮುಂದೆ ಭಾರತ ಮತ್ತು ಶ್ರೀಲಂಕಾ ನಡುವೆ ಭಾರತೀಯ ಕರೆನ್ಸಿಯಲ್ಲಿ ವ್ಯಾಪಾರ ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ಭಾರತೀಯ ನಾಗರಿಕರು ಶ್ರೀಲಂಕಾದಲ್ಲಿ ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಭಾರತೀಯ ಕರೆನ್ಸಿಯನ್ನು ಬಳಸಲು ಸಾಧ್ಯವಾಗುತ್ತದೆ.

    ಇನ್ನು ಹಲವು ದೇಶಗಳು ಭಾರತೀಯ ರೂಪಾಯಿಯಲ್ಲಿ ವಹಿವಾಟು ನಡೆಸಲು, ಅಂತಾರಾಷ್ಟ್ರೀಯ ಮನ್ನಣೆ ನೀಡಲು ಆಸಕ್ತಿ ತೋರಿವೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಕಾರ, ವಿಶ್ವದ 64 ದೇಶಗಳು ರೂಪಾಯಿಯಲ್ಲಿ ವ್ಯಾಪಾರ ಮಾಡಲು ಭಾರತದೊಂದಿಗೆ ಮಾತುಕತೆ ನಡೆಸುತ್ತಿವೆ. ಇದರಲ್ಲಿ ಜರ್ಮನಿ, ಇಸ್ರೇಲ್‌ನಂತಹ ದೊಡ್ಡ ದೇಶಗಳೂ ಸೇರಿವೆ. ಮೊದಲ ಬಾರಿಗೆ ಯುರೋಪಿಯನ್ ಒಕ್ಕೂಟದಲ್ಲಿರುವ ಜರ್ಮನಿಯು ಏಷ್ಯಾದ ಯಾವುದೇ ಕರೆನ್ಸಿಯೊಂದಿಗೆ ವ್ಯಾಪಾರ ಮಾಡಲು ಮುಂದೆ ಬಂದಿದೆ. ಇದು ಭಾರತಕ್ಕೆ ಆದ್ಯತೆಯನ್ನೂ ನೀಡಿದೆ. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್‌ ಕರೆನ್ಸಿ ಆಗುತ್ತಾ?

    30 ದೇಶಗಳೊಂದಿಗೆ ಭಾರತದ ವ್ಯವಹಾರವು ರೂಪಾಯಿಯಲ್ಲಿ ಪ್ರಾರಂಭವಾದರೆ ರೂಪಾಯಿ ಅಂತಾರಾಷ್ಟ್ರೀಯ ಕರೆನ್ಸಿಯಾಗುತ್ತದೆ. ರಷ್ಯಾ ಮತ್ತು ಶ್ರೀಲಂಕಾ ಜೊತೆಗೆ ಇತರ 4 ಆಫ್ರಿಕನ್ ದೇಶಗಳು ಇದಕ್ಕೆ ಅನುಮೋದನೆ ನೀಡಿವೆ. ಇದಲ್ಲದೇ 17 ದೇಶಗಳಲ್ಲಿ ಭಾರತದ ಬ್ಯಾಂಕ್‌ಗಳು ವೋಸ್ಟ್ರೋ ಖಾತೆಗಳನ್ನು ತೆರೆದಿದೆ. ಇತರ ದೇಶಗಳೊಂದಿಗೆ ರೂಪಾಯಿಗಳಲ್ಲಿ ವ್ಯಾಪಾರ ಮಾಡಲು ಇದು ಕಡ್ಡಾಯವಾಗಿದೆ.

    ಈ 17 ದೇಶಗಳಲ್ಲಿ 12 ಭಾರತೀಯ ಬ್ಯಾಂಕ್‌ಗಳಿಗೆ ಅನುಮೋದನೆ ನೀಡಲಾಗಿದೆ. ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುಕೊ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಸೇರಿವೆ. ಭಾರತೀಯ ಖರೀದಿದಾರರು ವಿದೇಶಿ ವ್ಯಾಪಾರಿಯೊಂದಿಗೆ ರೂಪಾಯಿಗಳಲ್ಲಿ ವಹಿವಾಟು ನಡೆಸಲು ಬಯಸಿದರೆ, ಸಂಪೂರ್ಣ ಮೊತ್ತವನ್ನು ವೋಸ್ಟ್ರೋ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಭಾರತೀಯ ರಫ್ತುದಾರರು ಸರಬರಾಜು ಮಾಡಿದ ಸರಕುಗಳಿಗೆ ಪಾವತಿ ಮಾಡಬೇಕಾದಾಗ, ಈ ವೋಸ್ಟ್ರೋ ಖಾತೆಯಿಂದ ಕಡಿತಗೊಳಿಸಲಾಗುತ್ತದೆ ಮತ್ತು ಹಣವನ್ನು ರಫ್ತುದಾರರ ಖಾತೆಗೆ ಜಮಾ ಮಾಡಲಾಗುತ್ತದೆ.

    ಭಾರತ ಮತ್ತು ಭಾರತೀಯರಿಗೆ ಏನು ಪ್ರಯೋಜನ?
    ಆರ್ಥಿಕ ತಜ್ಞ ಪ್ರೊ. ಪ್ರಹ್ಲಾದ್ ಪ್ರಕಾರ, ಇಲ್ಲಿಯವರೆಗೆ ಇತರ ದೇಶಗಳೊಂದಿಗೆ ವ್ಯಾಪಾರ ಮಾಡುವಾಗ ಡಾಲರ್‌ಗಳನ್ನು ಖರ್ಚು ಮಾಡಬೇಕಾಗಿತ್ತು. ವಿದೇಶಿ ವಿನಿಮಯ ಸಂಗ್ರಹದಲ್ಲಿ ಡಾಲರ್‌ಗಳ ಕೊರತೆಯೂ ಇದ್ದು, ಇದರಿಂದ ದೇಶದ ಆರ್ಥಿಕ ಬೆಳವಣಿಗೆ ದರದಲ್ಲಿ ಕುಸಿತ ಉಂಟಾಗಿ ಸಾಲವೂ ಹೆಚ್ಚುತ್ತಿದೆ. ಆದರೆ ಇತರ ದೇಶಗಳಿಂದ ರೂಪಾಯಿ ವಹಿವಾಟುಗಳು ಭಾರತೀಯ ವ್ಯಾಪಾರಕ್ಕೆ ಕಡಿಮೆ ಅಪಾಯವನ್ನುಂಟುಮಾಡುತ್ತವೆ. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

     

    ಕಚ್ಚಾ ತೈಲ ಸೇರಿದಂತೆ ಯಾವುದೇ ಉತ್ಪನ್ನವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಂಡರೂ ಅದನ್ನು ರೂಪಾಯಿ ಮೂಲಕ ಪಾವತಿಸಲಾಗುತ್ತದೆ. ಇದರಿಂದ ಪ್ರತಿ ವರ್ಷ ಶತಕೋಟಿ ಡಾಲರ್ ಉಳಿತಾಯವಾಗಲಿದೆ. ಕರೆನ್ಸಿ ಚಂಚಲತೆಯಿಂದ ರಕ್ಷಣೆ ಸಿಗುತ್ತದೆ. ಇದು ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಾಪಾರವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತದೆ. ಅಷ್ಟೇ ಅಲ್ಲ, ಡಾಲರ್ ಸೇರಿದಂತೆ ವಿದೇಶಿ ವಿನಿಮಯ ಮೀಸಲು ಇಡುವ ಅಗತ್ಯವೂ ಕಡಿಮೆಯಾಗುತ್ತದೆ. ವಿದೇಶಿ ಕರೆನ್ಸಿ ವಿಶೇಷವಾಗಿ ಡಾಲರ್ ಮೇಲಿನ ಅವಲಂಬನೆ ಕಡಿಮೆಯಾಗುವುದರಿಂದ ಬಾಹ್ಯ ಪ್ರಭಾವಗಳಿಂದ ಭಾರತಕ್ಕೆ ರಕ್ಷಣೆ ಸಿಗಲಿದೆ.

    ಅಂತಾರಾಷ್ಟ್ರೀಯ ವಹಿವಾಟುಗಳಲ್ಲಿ ರೂಪಾಯಿ ಬಳಕೆಯಿಂದ ಜನಸಾಮಾನ್ಯರಿಗೂ ಹಲವು ಅನುಕೂಲಗಳು ಸಿಗಲಿವೆ. ಇದರಲ್ಲಿ ದೊಡ್ಡ ಲಾಭ ಹಣದುಬ್ಬರದಿಂದ ಆಗಲಿದೆ. ಅನೇಕ ಉತ್ಪನ್ನಗಳು ಅಗ್ಗವಾಗಬಹುದು. ಅಡುಗೆ ಎಣ್ಣೆ, ಡ್ರೈಫ್ರೂಟ್ಸ್, ಅನಿಲ, ಕಲ್ಲಿದ್ದಲು, ಔಷಧಗಳು ಸೇರಿದಂತೆ ಹಲವು ವಸ್ತುಗಳು ಭಾರತ ಮತ್ತು ಇತರ ದೇಶಗಳ ನಡುವೆ ವ್ಯಾಪಾರವಾಗುತ್ತವೆ. ರೂಪಾಯಿಗಳಲ್ಲಿ ವ್ಯಾಪಾರ ಮಾಡುವುದರಿಂದ ವಿನಿಮಯ ದರದ ಅಪಾಯವಿರುವುದಿಲ್ಲ ಮತ್ತು ವ್ಯಾಪಾರಸ್ಥರು ಉತ್ತಮ ಚೌಕಾಶಿ ಮಾಡುವ ಮೂಲಕ ಅಗ್ಗವಾಗಿ ವ್ಯವಹಾರಗಳನ್ನು ಅಂತಿಮಗೊಳಿಸಬಹುದು. ಇದರಿಂದ ಆ ಸರಕುಗಳು ಜನಸಾಮಾನ್ಯರಿಗೆ ಅಗ್ಗವಾಗಿ ತಲುಪುತ್ತವೆ.

    ಭಾರತೀಯ ಕರೆನ್ಸಿಯ ಪ್ರಚಾರ ಯಾಕೆ?
    ಸದ್ಯ ಯುಎಸ್ ಡಾಲರ್ ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿಯಾಗಿದೆ. ಒಟ್ಟು ಜಾಗತಿಕ ವ್ಯಾಪಾರದಲ್ಲಿ ಇದರ ಪಾಲು 80% ಸಮೀಪದಲ್ಲಿದೆ. ಅಂದರೆ ವಿಶ್ವದ ವ್ಯವಹಾರದಲ್ಲಿ 80% ಕ್ಕಿಂತ ಹೆಚ್ಚು ವಹಿವಾಟುಗಳು ಡಾಲರ್‌ಗಳಲ್ಲಿ ನಡೆಯುತ್ತವೆ. ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳು ವಿದೇಶಿ ಆಮದು-ರಫ್ತಿಗೆ ಡಾಲರ್ ಮೇಲೆ ಅವಲಂಬಿತವಾಗಿವೆ. ಬೇರೆ ದೇಶದಿಂದ ಏನನ್ನಾದರೂ ಖರೀದಿಸಬೇಕಾದರೆ ಅಥವಾ ಮಾರಾಟ ಮಾಡಬೇಕಾದರೆ ಡಾಲರ್‌ಗಳಲ್ಲಿ ವಹಿವಾಟು ನಡೆಸಿ ಪಾವತಿಸಬೇಕಿದೆ. ಅದಕ್ಕಾಗಿಯೇ ಇದನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿ ಎಂದು ಪರಿಗಣಿಸಲಾಗಿದೆ.

    ಬಹಳಷ್ಟು ದೇಶಗಳು ತಮ್ಮ ವಿದೇಶಿ ವಿನಿಮಯ ಸಂಗ್ರಹದಲ್ಲಿ ಡಾಲರ್ ಕೊರತೆಯನ್ನು ಎದುರಿಸುತ್ತಿವೆ. ಈ ಹಿನ್ನೆಲೆ ಭಾರತದೊಂದಿಗೆ ವಹಿವಾಟು ನಡೆಸುವ ದೇಶಗಳಿಗೆ ರೂಪಾಯಿಯಲ್ಲಿ ವ್ಯಪಾರ ಮಾಡಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಇದು ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿಯನ್ನು ಬಲಪಡಿಸುತ್ತದೆ. ಇದನ್ನೂ ಓದಿ: ಉತ್ತರದಲ್ಲಿ ಅವಾಂತರದ ಬಳಿಕ ಮುಂಗಾರು ದಕ್ಷಿಣ ಭಾರತಕ್ಕೆ – ಕರ್ನಾಟಕ ಸೇರಿ 3 ರಾಜ್ಯಗಳಲ್ಲಿ ರೆಡ್ ಅಲರ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್‌ ಕರೆನ್ಸಿ ಆಗುತ್ತಾ?

    ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್‌ ಕರೆನ್ಸಿ ಆಗುತ್ತಾ?

    ಡಾಲರ್‌ನಲ್ಲಿ ನಾವು ಹೇಗೆ ವ್ಯವಹಾರ ಮಾಡುತ್ತೇವೆಯೋ ಅದೇ ರೀತಿ ರೂಪಾಯಿನಲ್ಲಿ (Rupee) ಯಾಕೆ ವ್ಯವಹಾರ ಮಾಡಲು ಸಾಧ್ಯವಿಲ್ಲ? ಈ ಪ್ರಶ್ನೆಗೆ ಈಗ ಉತ್ತರ ಸಿಗುವ ಕಾಲ ಹತ್ತಿರ ಬಂದಿದೆ. ಡಾಲರ್‌ (Dollar) ಬದಲು ರೂಪಾಯಿನಲ್ಲೇ ವ್ಯವಹಾರ ನಡೆಸಲು ಭಾರತ (India) ಈಗ ಮುಂದಾಗುತ್ತಿದೆ. ಆರ್‌ಬಿಐ (RBI) ಪ್ರಯತ್ನಗಳು ಫಲ ನೀಡಿದರೆ ಮುಂದೊಂದು ದಿನ ಭಾರತದ ಕರೆನ್ಸಿ ಇಂಟರ್‌ನ್ಯಾಷನಲ್‌ ಕರೆನ್ಸಿಯಾಗುವ (Global Currency) ಸಾಧ್ಯತೆಯಿದೆ. ಹೀಗಾಗಿ ಡಾಲರ್‌ನಲ್ಲೇ ಯಾಕೆ ದೇಶಗಳು ವ್ಯವಹಾರ ನಡೆಸುತ್ತಿವೆ? ಈಗ ಯಾಕೆ ರೂಪಾಯಿನಲ್ಲೇ ವ್ಯವಹಾರ ನಡೆಸಲು ಭಾರತ ಮುಂದಾಗುತ್ತಿದೆ? ರೂಪಾಯಿನಲ್ಲಿ ವ್ಯವಹಾರ ಹೇಗೆ ನಡೆಯುತ್ತದೆ? ಮತ್ತು ಆರ್‌ಬಿಐ ಮುಂದಿರುವ ಸವಾಲುಗಳು ಏನು ಎನ್ನುವುದರ ಕಿರು ಮಾಹಿತಿ ಇಲ್ಲಿದೆ.

    ಡಾಲರ್‌ ವಿಶ್ವದ ಕರೆನ್ಸಿಯಾಗಿದ್ದು ಹೇಗೆ?
    ಡಾಲರ್‌ ವಿಶ್ವದ ಕರೆನ್ಸಿಯಾಗಿ ಹೊರ ಹೊಮ್ಮಿದ್ದು ಹೇಗೆ ಎಂಬುದಕ್ಕೆ ಮೂರು ಪ್ರಮುಖ ಕಾರಣ ನೀಡಬಹುದು. ಎರಡನೇ ಮಹಾಯುದ್ಧದ ಸಮಯದಲ್ಲಿ ಒಂದೊಂದು ದೇಶದಲ್ಲಿ ಒಂದೊಂದು ಕರೆನ್ಸಿ ಇದ್ದ ಕಾರಣ ವ್ಯವಹಾರ ನಡಸಲು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ವಿಶ್ವದಲ್ಲೇ ಚಿನ್ನ ಸಂಗ್ರಹ ಅಮೆರಿಕದ ಬಳಿ ಜಾಸ್ತಿ ಇತ್ತು. ಅಷ್ಟೇ ಅಲ್ಲದೇ ಆರ್ಥಿಕವಾಗಿಯೂ, ಮಿಲಿಟರಿ ಎಲ್ಲಾ ಕ್ಷೇತ್ರದಲ್ಲಿ ಅಮೆರಿಕ ಪವರ್‌ಫುಲ್‌ ದೇಶವಾಗಿ ಹೊರಹೊಮ್ಮಿತ್ತು. ಈ ಕಾರಣಕ್ಕೆ 1944 ರಲ್ಲಿ ಬ್ರೆಟ್ಟನ್‌ ವುಡ್ಸ್‌ (Bretton Woods) ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ಡಾಲರ್‌ನಲ್ಲೇ ವ್ಯವಹಾರ ನಡೆಸಲು ಅಮೆರಿಕದ ಮಿತ್ರ ಪಡೆಗಳು ಒಪ್ಪಿಕೊಂಡಿದ್ದವು. ಈ ಒಪ್ಪಂದದ ಪ್ರಕಾರ ವ್ಯವಹಾರಕ್ಕೆ ಅಮೆರಿಕ ಡಾಲರ್‌ ಅನ್ನು ಎಲ್ಲಾ ದೇಶಗಳು ಬಳಸಲು ಅಧಿಕೃತ ಒಪ್ಪಿಗೆ ಸಿಕ್ಕಿತು. ಒಂದು ಔನ್ಸ್‌ ಅಥವಾ 28.35 ಗ್ರಾಂ ಚಿನ್ನಕ್ಕೆ 35 ಡಾಲರ್‌ ದರವನ್ನು ನಿಗದಿ ಮಾಡಲಾಗಿತ್ತು.

     

    ಎರಡನೇಯದಾಗಿ ಸೌದಿ ಜೊತೆ ಅಮರಿಕ ಕಚ್ಚಾ ತೈಲಕ್ಕೆ ಸಂಬಂಧಿಸಿದ ಒಪ್ಪಂದದಿಂದಾಗಿ ಡಾಲರ್‌ ಶಕ್ತಿ ಹೆಚ್ಚಾಯಿತು. ನಿಮ್ಮ ಎಲ್ಲಾ ಕಚ್ಚಾ ತೈಲ ಘಟಕಗಳಿಗೆ ನಾವು ರಕ್ಷಣೆ ನೀಡುತ್ತೇವೆ, ಆದರೆ ವ್ಯವಹಾರವನ್ನು ಡಾಲರ್‌ನಲ್ಲಿ ಮಾಡಬೇಕು ಎಂದು ಷರತ್ತು ವಿಧಿಸಿತು. ಈ ಷರತ್ತಿಗೆ ಸೌದಿ ಅರೆಬಿಯಾ ಒಪ್ಪಿತು. ಪರಿಣಾಮ ಈಗಲೂ ಕಚ್ಚಾ ತೈಲದ ವ್ಯವಹಾರ ಡಾಲರ್‌ನಲ್ಲೇ ನಡೆಯುತ್ತಿದೆ.

    ಮೂರನೇಯದ್ದು ಬಹಳ ಮುಖ್ಯ ಸ್ವಿಫ್ಟ್‌ ಬ್ಯಾಂಕ್‌ ನೆಟ್‌ವರ್ಕ್‌. ಬ್ರೆಟ್ಟನ್‌ ವುಡ್ಸ್‌ ಒಪ್ಪಂದವನ್ನು ಅಮೆರಿಕ ರದ್ದುಗೊಳಿಸಿದ ನಂತರ 1973ರಲ್ಲಿ ಬೆಲ್ಜಿಯಂನಲ್ಲಿ Society for Worldwide Interbank Financial Telecommunications ಅಥವಾ SWIFT ಜನ್ಮ ತಾಳಿತು. ಇದು ಅಂತರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆಯಾಗಿದ್ದು, ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ನಡೆಯಲು ನೆರವಾಗುವಂತಹ ವ್ಯವಸ್ಥೆ ಸ್ವಿಫ್ಟ್‌ನಲ್ಲಿದೆ.

    ಇಲ್ಲೂ ಡಾಲರನ್ನೇ ಯಾಕೆ ಪರಿಗಣಿಸಿಲಾಯಿತು ಎನ್ನುವುದಕ್ಕೂ ಕಾರಣವಿದೆ. ಈ ಸಂದರ್ಭದಲ್ಲಿ ಅಮೆರಿಕ ಮತ್ತು ರಷ್ಯಾ ಮಧ್ಯೆ ಶೀತಲ ಸಮರ ನಡೆಯುತ್ತಿತ್ತು. ಭವಿಷ್ಯದಲ್ಲಿ ಯುರೋಪ್‌ ದೇಶಗಳ ಮೇಲೆ ಯಾರೇ ಆಕ್ರಮಣ ಮಾಡಿದರೂ ನಾನು ರಕ್ಷಣೆ ನೀಡುತ್ತೇನೆ ಎಂದು ಅಮೆರಿಕ ಭರವಸೆ ನೀಡಿತ್ತು. ಈ ಕಾರಣಕ್ಕೆ ಯುರೋಪ್‌ ರಾಷ್ಟ್ರಗಳು ಸ್ವಿಫ್ಟ್‌ ನೀತಿಯನ್ನು ಒಪ್ಪಿಕೊಂಡವು. ಈ ಎಲ್ಲಾ ಕಾರಣದಿಂದ ಏನು ಮಾಡದೇ ರಾಜತಾಂತ್ರಿಕ ಪ್ರಭಾವ ಬಳಸಿ ಮೀಸಲು ನಿಧಿಯಿಂದಾಗಿ ಅಮೆರಿಕ ವಿಶ್ವದಲ್ಲೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರಹೊಮ್ಮಿತ್ತು.

    ರೂಪಾಯಿಯಲ್ಲಿ ವ್ಯವಹಾರಕ್ಕೆ ಮುಂದಾಗಿದ್ದು ಯಾಕೆ?
    ಈಗ ಭಾರತ ರೂಪಾಯಿಯಲ್ಲಿ ವ್ಯವಹಾರಕ್ಕೆ ಮುಂದಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ರಷ್ಯಾ-ಉಕ್ರೇನ್‌ (Russia- Ukraine) ಯುದ್ಧ. ರಷ್ಯಾ ಉಕ್ರೇನ್‌ ಯುದ್ಧಕ್ಕೆ ಮೊದಲೇ ಭಾರತ ಸ್ಥಳೀಯ ದೇಶಗಳ ಜೊತೆ ರೂಪಾಯಿಯಲ್ಲೇ ವ್ಯವಹಾರ ನಡೆಸಲು ಆಸಕ್ತಿ ತೋರಿಸಿತ್ತು. ಡಾಲರ್‌ ಮೌಲ್ಯ ಜಾಸ್ತಿಯಾದಷ್ಟು ಆಮದು ಮಾಡುವ ವೇಳೆ ವಸ್ತುಗಳ ಬೆಲೆ ಜಾಸ್ತಿ ಆಗುತ್ತಿತ್ತು. ಆದರೆ ರಷ್ಯಾ -ಉಕ್ರೇನ್‌ ಯುದ್ಧದ ಬಳಿಕ ಈ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಉಕ್ರೇನ್‌ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಮತ್ತು ಯುರೋಪ್‌ ರಷ್ಯಾವನ್ನು ಸ್ವಿಫ್ಟ್‌ ಬ್ಯಾಂಕ್‌ ನೆಟ್‌ವರ್ಕ್‌ನಿಂದ ಹೊರಗಿಟ್ಟಿತು. ಅಮೆರಿಕ ರಷ್ಯಾದ ಡಾಲರ್‌ ಖಾತೆಯನ್ನು ಫ್ರೀಜ್‌ ಮಾಡಿತು. ಪರಿಣಾಮ ರಷ್ಯಾಗೆ ಡಾಲರ್‌ನಲ್ಲಿ ಆಮದು ಮತ್ತು ರಫ್ತು ಮಾಡಲು ಸಾಧ್ಯವಾಗಲಿಲ್ಲ. ದಿಢೀರ್‌ ನೀಡಿದ ಶಾಕ್‌ನಿಂದ ರಷ್ಯಾಗೆ ಬಹಳ ಸಮಸ್ಯೆಯಾಯಿತು. ಯಾವಾಗ ರಷ್ಯಾವನ್ನು ಸ್ವಿಫ್ಟ್‌ ಬ್ಯಾಂಕ್‌ನಿಂದ ಹೊರಗಡೆ ಇಡಲಾಯಿತೋ ಆವಾಗ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮದೇ ಕರೆನ್ಸಿಯಲ್ಲಿ ವ್ಯವಹಾರ ನಡೆಸಲು ಆಸಕ್ತಿ ತೋರಿಸಿದವು. ಯಾಕೆಂದರೆ ಮುಂದೊಮ್ಮೆ ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳ ವಿರೋಧ ಕಟ್ಟಿಕೊಂಡರೆ ನಮ್ಮ ರಾಷ್ಟ್ರವನ್ನು ಸ್ವಿಫ್ಟ್‌ ಬ್ಯಾಂಕ್ ನೆಟ್‌ವರ್ಕ್‌ನಿಂದ ಹೊರಗಡೆ ಇಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು? ಈ ಕಾರಣಕ್ಕೆ ಈಗ ಭಾರತ ರೂಪಾಯಿಯಲ್ಲೇ ವ್ಯವಹಾರ ನಡೆಸಲು ಈಗ ವಿಶೇಷ ಆಸಕ್ತಿ ತೋರಿಸುತ್ತಿದೆ.

    ರೂಪಾಯಿಯಲ್ಲೇ ವ್ಯವಹಾರ ಹೇಗೆ ನಡೆಯುತ್ತದೆ?
    ಬಹಳ ಸರಳವಾಗಿ ಹೇಳುವುದಾದರೆ ಈಗ ಹೇಗೆ ನಡೆಯುತ್ತಿದೆಯೋ ಅದೇ ರೀತಿ ವ್ಯವಹಾರ ನಡೆಯುತ್ತದೆ. ಆದರೆ ಅಮೆರಿಕದ ಬ್ಯಾಂಕ್‌ನಲ್ಲಿ ಅಲ್ಲ. ರೂಪಾಯಿಯಲ್ಲಿ ವ್ಯವಹಾರ ನಡೆಸಲು ವೊಸ್ಟ್ರೋ ಮತ್ತು ನೋಸ್ಟ್ರೋ ಖಾತೆಯನ್ನು ತೆರೆಯಬೇಕಾಗುತ್ತದೆ. ವಿದೇಶದ ಬ್ಯಾಂಕು ಭಾರತದಲ್ಲಿ ಬ್ರ್ಯಾಂಚ್‌ ಓಪನ್‌ ಮಾಡಿ ರೂಪಾಯಿ ಖಾತೆಯನ್ನು ತೆರೆದರೆ ಅದನ್ನು ʼವೊಸ್ಟ್ರೋʼ ಖಾತೆ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಬ್ರ್ಯಾಂಚ್‌ ಓಪನ್‌ ಮಾಡದ ವಿದೇಶಿ ಬ್ಯಾಂಕ್‌ ಭಾರತೀಯ ಬ್ಯಾಂಕ್‌ನಲ್ಲಿ ರೂಪಾಯಿ ಖಾತೆ ತೆರೆದರೆ ಅದನ್ನು ನೋಸ್ಟ್ರೋ ಎಂದು ಕರೆಯಲಾಗುತ್ತದೆ.

    ಇಲ್ಲಿಯವರೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಯುಕೋ ಬ್ಯಾಂಕ್‌ನಲ್ಲಿ 30 ವೊಸ್ಟ್ರೋ ಖಾತೆ ತೆರೆಯಲಾಗಿದೆ. ಆರ್‌ಬಿಐ ಇಲ್ಲಿಯವರೆಗೆ ಬೋಟ್ಸ್ವಾನಾ, ಫಿಜಿ, ಜರ್ಮನಿ, ಗಯಾನಾ, ಇಸ್ರೇಲ್, ಕೀನ್ಯಾ, ಮಲೇಷ್ಯಾ, ಮಾರಿಷಸ್, ಮ್ಯಾನ್ಮಾರ್, ನ್ಯೂಜಿಲ್ಯಾಂಡ್, ಓಮನ್, ರಷ್ಯಾ, ಸೀಶೆಲ್ಸ್, ಸಿಂಗಾಪುರ, ಶ್ರೀಲಂಕಾ, ತಾಂಜಾನಿಯಾ, ಯುನೈಟೆಡ್ ಕಿಂಗ್‌ಡಮ್, ಉಗಾಂಡ ದೇಶಗಳ ಬ್ಯಾಂಕುಗಳಿಗೆ ವೊಸ್ಟ್ರೋ ಖಾತೆ ತೆರೆಯಲು ಅನುಮತಿ ನೀಡಿದೆ.

    ಇಂಟರ್‌ನ್ಯಾಷನಲ್‌ ಕರೆನ್ಸಿ ಎಂದರೇನು?
    ಭಾರತದ ಕರೆನ್ಸಿ ಇಂಟರ್‌ನ್ಯಾಷನಲ್‌ ಕರೆನ್ಸಿ ಆಗುತ್ತಾ ಎಂಬುದನ್ನು ತಿಳಿದುಕೊಳ್ಳುವ ಮೊದಲು ಇಂಟರ್‌ನ್ಯಾಷನಲ್‌ ಕರೆನ್ಸಿ ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ. ವಿಶ್ವದೆಲ್ಲೆಡೆ ಒಂದು ದೇಶದ ಕರೆನ್ಸಿಗೆ ಬೇಡಿಕೆ ಜಾಸ್ತಿಯಾದರೆ ಅದನ್ನು ಇಂಟರ್‌ನ್ಯಾಷನಲ್‌ ಕರೆನ್ಸಿ ಎಂದು ಕರೆಯಲಾಗುತ್ತದೆ. ಒಂದು ದೇಶದ ಕರೆನ್ಸಿಗೆ ʼಇಂಟರ್‌ನ್ಯಾಷನಲ್‌ ಕರೆನ್ಸಿʼಯ ಪಟ್ಟವನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ನೀಡುತ್ತದೆ. ಯುಎಸ್ ಡಾಲರ್, ಯುರೋಪಿಯನ್‌ ಯೂನಿಯನ್‌ನ ಯೂರೋ, ಚೈನಾ ಯುವಾನ್‌, ಜಪಾನಿನ ಯೆನ್ ಮತ್ತು ಬ್ರಿಟಿಷ್ ಪೌಂಡ್ ಇಂಟರ್‌ನ್ಯಾಷನಲ್‌ ಕರೆನ್ಸಿಯಾಗಿದೆ. ಒಂದು ದೇಶದ ಆಮದು, ರಫ್ತು, ಆರ್ಥಿಕತೆ ಸೇರಿದಂತೆ ಹಲವು ಮಾನದಂಡಗಳನ್ನು ಪರಿಗಣಿಸಿ ಐಎಂಫ್‌ ಒಂದು ದೇಶದ ಕರೆನ್ಸಿಗೆ ಈ ಸ್ಥಾನಮಾನ ನೀಡುತ್ತದೆ. ಇತ್ತೀಚಿಗೆ ಆರ್‌ಬಿಐ ಸಮಿತಿಯು ರೂಪಾಯಿಯ ಅಂತರಷ್ಟ್ರೀಯ ಕರೆನ್ಸಿಯನ್ನಾಗಿ ಮಾಡಲು ಶಿಫಾರಸು ಮಾಡಿದೆ.

    ರೂಪಾಯಿ ಇಂಟರ್‌ನ್ಯಾಷನಲ್‌ ಕರೆನ್ಸಿ ಆಗುತ್ತಾ?
    ರೂಪಾಯಿ ಇಂಟರ್‌ನ್ಯಾಷನಲ್‌ ಕರೆನ್ಸಿ ಆಗಬೇಕಾದರೆ ಆರ್‌ಬಿಐ ಸಮಿತಿ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡಿದೆ. ಅಲ್ಪಾವಧಿಯಲ್ಲಿ ಭಾರತ ತನ್ನ ಹತ್ತಿರದ ದೇಶಗಳ ಜೊತೆ ರೂಪಾಯಿಯಲ್ಲೇ ವ್ಯವಹಾರ ನಡೆಸುವುದು. ಈಗಾಗಲೇ ನೇಪಾಳ, ಭೂತಾನ್‌, ಶ್ರೀಲಂಕಾದ ಜೊತೆ ರೂಪಾಯಿಯಲ್ಲೇ ವ್ಯವಹಾರ ನಡೆಸುತ್ತಿದೆ. ದೀರ್ಘಾವಧಿಯಲ್ಲಿ ನಡೆಯಬೇಕಾದ ಕೆಲಸ ಬಹಳಷ್ಟಿದೆ. ಬಹಳ ಮುಖ್ಯವಾಗಿ ಆಮದು ಕಡಿಮೆ ಆಗಬೇಕು. ರಫ್ತು ಹೆಚ್ಚಾಗಬೇಕು. 2022- 23ನೇ ಹಣಕಾಸು ವರ್ಷದಲ್ಲಿ ಭಾರತ 447 ಬಿಲಿಯನ್‌ ಡಾಲರ್‌ ರಫ್ತು, 714 ಬಿಲಿಯನ್‌ ಡಾಲರ್‌ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಭಾರತ ಮೇಕ್‌ ಇನ್‌ ಇಂಡಿಯಾ ಹೆಚ್ಚು ಒತ್ತು ನೀಡಲು ಆರಂಭಿದ್ದು ಇದರ ಫಲ ಈಗಲೇ ಸಿಗದೇ ಇದ್ದರೂ ಕೆಲ ವರ್ಷಗಳಲ್ಲಿ ಸಿಗುವ ಸಾಧ್ಯತೆಯಿದೆ.

    ವಿಶ್ವದಲ್ಲೇ ಯುಪಿಐ (UPI) ಪಾವತಿಯಲ್ಲಿ ಭಾರತ ನಂಬರ್‌ ಒನ್‌ ಸ್ಥಾನ ಪಡೆದಿದೆ. ಈಗ ಹಲವು ದೇಶಗಳ ಜೊತೆ ಭಾರತದ ಆರ್‌ಬಿಐ ಯುಪಿಐ ಪಾವತಿ ಸಂಬಂಧ ಸಹಿ ಹಾಕಿದೆ. ಸಿಂಗಾಪುರದ ಜೊತೆ ಈಗಾಗಲೇ ಆರಂಭಗೊಂಡಿದ್ದು, ಕಳೆದ ವಾರ ಪ್ರಧಾನಿ ಮೋದಿ ಅವರು ಫ್ರಾನ್ಸ್‌ ಮತ್ತು ಯುಎಇ ಪ್ರವಾಸದ ಸಮಯದಲ್ಲಿ ಆರ್‌ಬಿಐ ಆ ಎರಡು ದೇಶಗಳ ಜೊತೆ ಯುಪಿಐ ವ್ಯವಹಾರಕ್ಕೆ ಸಹಿ ಹಾಕಿತ್ತು. ಇದರಿಂದಾಗಿ ರಿಯಲ್‌ ಟೈಮ್‌ನಲ್ಲಿ ಹಣವನ್ನು ಕಳುಹಿಸಬಹುದಾಗಿದೆ.   ಇದನ್ನೂ ಓದಿ: ಅಮೆರಿಕದ 1 ನಿರ್ಧಾರ – ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿಯಾದ ಭಾರತ

    ಎರಡು ದೇಶಗಳ ನಡುವಿನ ಚಿಲ್ಲರೆ ಪಾವತಿಗಳು ಸಾಮಾನ್ಯವಾಗಿ ಕಡಿಮೆ ಪಾರದರ್ಶಕವಾಗಿರುತ್ತವೆ ಮತ್ತು ಇದು ದೇಶೀಯ ವಹಿವಾಟುಗಳಿಗಿಂತ ಹೆಚ್ಚು ದುಬಾರಿ. ಗಡಿಯಾಚೆಗಿನ ಹಣ ವ್ಯವಹಾರ ಪಾರದರ್ಶಕವಾಗಿರುತ್ತದೆ. ಅಷ್ಟೇ ಅಲ್ಲದೇ ಅಗ್ಗ ಮತ್ತು ವೇಗವಾಗಿ ಹಣವನ್ನು ಕಳುಹಿಸಬಹುದಾಗಿದೆ. ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಲಾಭವಾಗಲಿದೆ. ಯುಪಿಐ ಮೂಲಕ ಚಿಲ್ಲರೆ ಪಾವತಿಗಳನ್ನು ಭಾರತೀಯ ರೂಪಾಯಿಗಳಲ್ಲಿ ಮಾಡಲಾಗುವುದರಿಂದ ಇದು ವಿದೇಶೀ ವಿನಿಮಯ ಮೀಸಲುಗಳನ್ನು ಉಳಿಸಲು ಸಹಾಯ ಮಾಡುತ್ತದೆ.

    ಸವಾಲುಗಳು ಏನು?
    ಇಂಟರ್‌ನ್ಯಾಷನಲ್‌ ಕರೆನ್ಸಿಯಿಂದ ಲಾಭ ಆದರೂ ಬಹಳಷ್ಟು ಸವಾಲುಗಳಿವೆ. ರೂಪಾಯಿ ಸಂಪೂರ್ಣ ನಿಯಂತ್ರಣ ಆರ್‌ಬಿಐ ಕೈಯಲ್ಲಿ ಇರುವುದಿಲ್ಲ. ಸುಲಭವಾಗಿ ಹಣದ ವರ್ಗಾವಣೆ ಆಗುವ ಕಾರಣ ವಿದೇಶಿ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ದಿನ ಬೆಳಗಾಗುವುದರ ಒಳಗಡೆ ಹೂಡಿಕೆಯನ್ನು ಹಿಂದಕ್ಕೆ ಪಡೆಯಬಹುದು. ಅದೇ ರೀತಿಯಾಗಿ ಸುಲಭವಾಗಿ ಹಣ ವರ್ಗಾವಣೆಯಾಗುವ ಕಾರಣ ದೇಶ ವಿರೋಧಿ ಕೃತ್ಯಗಳಿಗೆ ಹಣ ಬಳಕೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಭಾರತ ಹೆಜ್ಜೆ ಇಡಬೇಕೆಂಬ ಸಲಹೆ ಆರ್ಥಿಕ ಕ್ಷೇತ್ರದ ತಜ್ಞರಿಂದ ವ್ಯಕ್ತವಾಗಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]