Tag: International Border

  • ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಹಿಂದೆ ಪಾಕ್‌ ಕೈವಾಡ – ರಹಸ್ಯ ಬಯಲು!

    ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಹಿಂದೆ ಪಾಕ್‌ ಕೈವಾಡ – ರಹಸ್ಯ ಬಯಲು!

    – ಪೂಂಚ್, ರಜೌರಿಯಲ್ಲೂ ಉಗ್ರರ ದಾಳಿಗೆ ಪಾಕ್‌ ಸಂಚು – ಗುಪ್ತಚರ ಇಲಾಖೆ ಮಾಹಿತಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ (IB) ಬಳಿ ಹಳ್ಳಿಯೊಂದರಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ (Kathua Encounter) ಭದ್ರತಾಪಡೆಗಳು ಹತ್ಯೆಗೈದ ಇಬ್ಬರು ಭಯೋತ್ಪಾದಕರಲ್ಲಿ ಓರ್ವ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಕಮಾಂಡರ್‌ ಎಂದು ಮೂಲಗಳಿಂದ ತಿಳಿದುಬಂದಿದೆ.

    ಮೂಲಗಳ ಪ್ರಕಾರ, ಹತ್ಯೆಗೀಡಾದ ಇಬ್ಬರಲ್ಲಿ ಓರ್ವ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಕಮಾಂಡರ್ ರಿಹಾನ್ ಎಂದು ಗುರುತಿಸಲಾಗಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಪಾಕ್‌ (Pakistan) ಕೈವಾಡವಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ದೆಹಲಿಯ ಯಮುನಾ ಬಳಿಯ ಪ್ರಾಚೀನ ಶಿವಮಂದಿರ ಕೆಡವಲು ನೀಡಿದ ಆದೇಶ ಎತ್ತಿಹಿಡಿದ ಸುಪ್ರೀಂ

    ಹತ್ಯೆಗೀಡಾದ ರಿಹಾನ್‌, ಉಪಗ್ರಹ ಸಂವಹನ ಸಾಧನ‌ (ಸ್ಯಾಟಲೈಟ್‌ ಫೋನ್‌) ಹಾಗೂ ಅತ್ಯಾಧುನಿಕ M4 ರೈಫಲ್‌ ಅನ್ನು ಹೊತ್ತೊಯ್ಯುತ್ತಿದ್ದ. ಪಾಕಿಸ್ತಾನ ಸೇನೆ, ನೌಕಾಪಡೆ ಹಾಗೂ ವಾಯುಸೇನೆಗಾಗಿ ಈ ಮೈಕ್ರೋ ಸ್ಯಾಟಲೈಟ್‌ ಫೋನ್‌ ಅನ್ನು ಖರೀದಿಸಲಾಗಿತ್ತು ಎಂದು ಉನ್ನ ಮೂಲಗಳಿಂದ ತಿಳಿದುಬಂದಿದೆ.

    ಈ ಉಗ್ರರ ಹತ್ಯೆ ನಡೆಯುವುದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ವೇಳೆ ಭಯೋತ್ಪಾದಕ ದಾಳಿ ನಡೆದಿತ್ತು. ಬಸ್‌ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಬಸ್‌ ಕಮರಿಗೆ ಉರುಳಿ ಬಿದ್ದಿತ್ತು. ಈ ವೇಳೆ 9 ಪ್ರಯಾಣಿಕರು ಹತರಾಗಿದ್ದರು. ಇದಾದ ಬಳಿಕ ದೋಡಾ ಜಿಲ್ಲೆಯಲ್ಲಿ 4 ಭಯೋತ್ಪಾದಕ ದಾಳಿ ನಡೆದಿತ್ತು. ಉಗ್ರರು ಮತ್ತು ಸೇನೆ ನಡುವಿನ ಗುಂಡಿನ ಚಕಮಕಿಯಲ್ಲಿ ಸಿಆರ್‌ಪಿಎಫ್‌ ಯೋಧ ಮತ್ತು ಇಬ್ಬರು ಭಯೋತ್ಪಾದಕರು ಸೇರಿ 11 ಮಂದಿ ಹತರಾಗಿದ್ದರು.

    ಉಗ್ರರ ಮಹತ್ವದ ಸಭೆ:
    ಜೂನ್‌ 9ರಂದು ರಿಯಾಸಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಜೈಶ್‌ ಎ ಮೊಹಮ್ಮದ್‌ ಮತ್ತು ಹಿಜ್ಬ್‌-ಉಲ್‌ ಮುಜಾಹಿದ್ದೀನ್‌ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ರಾವಲಕೋಟ್‌ನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದವು. ಈ ವೇಳೆ ಭಾರತದ ಮೇಲಿನ ದಾಳಿಗೆ ಯೋಜಿಸಿದ್ದವು ಎಂದು ತಿಳಿದುಬಂದಿದೆ.

    ಇದೀಗ ಕಳೆದ 2 ವರ್ಷಗಳಿಂದ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪ್ಲ್ಯಾನ್‌ ಮಾಡಿರುವ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿದ್ದು, ಭದ್ರತಾ ಪಡೆಗಳು ಹದ್ದಿನಕಣ್ಣಿಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದುರಹಂಕಾರಿಗಳಾಗಿ ಬದಲಾಗಿದ್ದಕ್ಕೆ ರಾಮನೇ 241 ಸ್ಥಾನಕ್ಕೆ ನಿಲ್ಲಿಸಿದ: ಬಿಜೆಪಿ ವಿರುದ್ಧ ಆರ್‌ಎಸ್‌ಎಸ್ ಮುಖಂಡ ವಾಗ್ದಾಳಿ

  • ಪಾಕ್‍ನಿಂದ ಜಮ್ಮು ಕಾಶ್ಮೀರಕ್ಕೆ ಗುಪ್ತ ಸುರಂಗ

    ಪಾಕ್‍ನಿಂದ ಜಮ್ಮು ಕಾಶ್ಮೀರಕ್ಕೆ ಗುಪ್ತ ಸುರಂಗ

    ಶ್ರೀನಗರ: ಜಮ್ಮು ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಭಾರತ ಹಾಗೂ ಪಾಕಿಸ್ತಾನ ಗಡಿ ದಾಟುವ ವರೆಗೂ ಗುಪ್ತ ಸುರಂಗ ಮಾರ್ಗ ಇರುವುದನ್ನು ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಪತ್ತೆ ಹಚ್ಚಿದೆ.

    ಶನಿವಾರ ಈ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಈ ಗುಪ್ತ ಸುರಂಗ ಮಾರ್ಗ ಪಾಕಿಸ್ತಾನದಿಂದ ಆರಂಭವಾಗಿ ಭಾರತಕ್ಕೆ ತಲುಪಿದೆ. ಪಾಕಿಸ್ತಾನದ ಕುಮ್ಮಕ್ಕು ಇಲ್ಲದೆ ಈ ಪರಿಪ್ರಮಾಣದ ಸುರಂಗ ಮಾರ್ಗ ಕೊರೆಯಲು ಸಾಧ್ಯವೇ ಇಲ್ಲ. ಇದಕ್ಕೆ ಪಾಪಿ ಪಾಕಿಸ್ತಾನ ಕುಮ್ಮಕ್ಕು ನೀಡಿದೆ. ಇದನ್ನು ಭಾರತ ಖಂಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಕುರಿತು ಜಮ್ಮುವಿನ ಬಿಎಸ್‍ಎಫ್ ಐಜಿ ಎನ್.ಎಸ್.ಜಮ್ವಾಲ್ ಮಾಹಿತಿ ನೀಡಿದ್ದು, ಸಾಂಬಾ ಪ್ರದೇಶದಲ್ಲಿ ಗುಪ್ತ ಸುರಂಗ ಮಾರ್ಗ ಇರುವುದನ್ನು ನಮ್ಮ ಭದ್ರತಾ ಸಿಬ್ಬಂದಿ ಪತ್ತೆಹಚ್ಚಿದ್ದು, ಈ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಅಲ್ಲದೆ ಸುರಂಗವನ್ನು ಮರಳು ಚೀಲಗಳಿಂದ ಮುಚ್ಚಲಾಗಿತ್ತು ಎಂದು ತಿಳಿಸಿದ್ದಾರೆ.

    ಮರಳು ಚೀಲಗಳ ಮೇಲೆ ಪಾಕಿಸ್ತಾನದ ಗುರುತು ಇದೆ. ಯಾರೋ ಯೋಜನೆ ರೂಪಿಸಿಯೇ ಈ ಸುರಂಗವನ್ನು ತೋಡಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಅಲ್ಲದೆ ಎಂಜಿನಿಯರಿಂಗ್ ತಂಡ ಸಹ ಇದನ್ನೇ ಹೇಳಿದೆ. ಈ ಸುರಂಗ ಗಡಿ ಫೆನ್ಸಿಂಗ್ ಬಳಿಯ ಭಾರತದ ಭೂಭಾಗದಲ್ಲಿ 20 ಅಡಿಗಳಷ್ಟು ಉದ್ದವಿದ್ದು, 3-4 ಅಡಿಯಷ್ಟು ಅಳತೆಯನ್ನು ಹೊಂದಿದೆ.

    ಈ ಸುರಂಗ ಮಾರ್ಗ ಯಾರಿಗೂ ಗೊತ್ತಾಗಬಾರದೆಂದು ಮರಳುಗಳನ್ನು ತುಂಬಿದ ಚೀಲಗಳಿಂದ ಮುಚ್ಚಲಾಗಿದೆ. ಈ ಮರಳು ಚೀಲಗಳು ಪಾಕಿಸ್ತಾನದ ನಿರ್ಮಿತವಾಗಿದ್ದು, ಇದರ ಮೇಲೆ ಶಕರ್‍ಗರ್, ಕರಾಚಿ ಎಂದು ಬರೆಯಲಾಗಿದೆ. ಈ ಸುರಂಗ ತೆರೆದಿರುವ ಸ್ಥಳ ಅಂತರಾಷ್ಟ್ರೀಯ ಗಡಿಯಿಂದ ಭಾರತದ ಕಡೆಗೆ ಸುಮಾರು 170 ಮೀಟರ್ ದೂರದಲ್ಲಿದೆ ಎಂದು ಜಮ್ವಾಲ್ ತಿಳಿಸಿದ್ದಾರೆ.

    ಪಾಕಿಸ್ತಾನಿ ರೇಂಜರ್ ಹಾಗೂ ಇತರೆ ಏಜೆನ್ಸಿಗಳ ಅನುಮತಿ ಹಾಗೂ ಸಹಾಯವಿಲ್ಲದೆ ಈ ಪರಿಪ್ರಮಾಣದ ಸುರಂಗವನ್ನು ಅಗೆಯಲು ಸಾಧ್ಯವೇ ಇಲ್ಲ. ಈ ಕುರಿತು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಅಲ್ಲದೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಪಾಕಿಸ್ತಾನದ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ವಿವರಿಸಿದ್ದಾರೆ.

    ಬಿಎಸ್‍ಎಫ್ ಯೋಧರು ಈ ಕುರಿತು ಬೃಹತ್ ಕಾರ್ಯಾಚರಣೆ ನಡೆಸುತ್ತಿದ್ದು, ಅಂತರಾಷ್ಟ್ರೀಯ ಗಡಿ ಪ್ರದೇಶದುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಇತ್ತೀಚೆಗೆ ಪಂಜಾಬ್ ನಲ್ಲಿ ಐವರು ನುಸುಳುಕೋರರನ್ನು ಹತ್ಯೆ ಮಾಡಿದ ಸ್ಥಳ ಸೇರಿದಂತೆ ಜಮ್ಮು ಹಾಗೂ ವಿವಿಧ ಪ್ರದೇಶಗಳಲ್ಲಿ ಹೆಚ್ಚಿ ನಿಗಾ ವಹಿಸಲಾಗಿದೆ. ಭಾರತದೊಳಗೆ ನುಸುಳಲು ಹಲವು ಉಗ್ರರು ಕಾಯುತ್ತಿದ್ದಾರೆ ಎಂಬ ಗುಪ್ತಚರ ದಳದ ಮಾಹಿತಿ ಹಿನ್ನೆಲೆ ಭಾರತದ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಜಮ್ಮು, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್ ಸೇರಿದಂತೆ 3,300 ಕಿ.ಮೀ.ಯ ಅಂತರಾಷ್ಟ್ರೀಯ ಗಡಿಯುದ್ದಕ್ಕೂ ಬಿಎಸ್‍ಎಫ್ ಯೋಧರನ್ನು ನಿಯೋಜಿಸಲಾಗಿದೆ. ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಜಮ್ವಾಲ್ ಮಾಹಿತಿ ನೀಡಿದ್ದಾರೆ.