Tag: Intermediaries

  • ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ – 50 ಲಕ್ಷ ಮೌಲ್ಯದ ಡ್ರಗ್ಸ್ ವಶ

    ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ – 50 ಲಕ್ಷ ಮೌಲ್ಯದ ಡ್ರಗ್ಸ್ ವಶ

    ಬೆಂಗಳೂರು: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದವರನ್ನು ಸಿಲಿಕಾನ್ ಸಿಟಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶ ಮೂಲದ ಹರಿಕೃಷ್ಣನ್, ಮಹಮ್ಮದ್, ಫಿಬಿನ್, ಹರಿಶಂಕರ್, ರಾಹುಲ್ ಎಂದು ಗುರುತಿಸಲಾಗಿದೆ. ವಿಶೇಷ ಎಂದರೆ ಬಂಧಿತ ಆರೋಪಿಗಳೆಲ್ಲ ಎಂಎಸ್ಸಿ, ಬಿಎಸ್ಸಿ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ ವಿದ್ಯಾರ್ಥಿಗಳಾಗಿರೋದು ದುರಂತ. ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಡ್ರಗ್ಸ್ ಗಳನ್ನು ತರುತ್ತಿದ್ದ ಆರೋಪಿಗಳು, ನಗರದ ಶ್ರೀಮಂತರ ಮಕ್ಕಳನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದರು.

    ಬೆಂಗಳೂರು ಪೊಲೀಸರು ಡ್ರಗ್ಸ್ ಮಾರಾಟದ ವಿರುದ್ಧ ಎಷ್ಟೇ ಕಠಿಣ ಕ್ರಮ ಕೈಕೊಳ್ಳುತ್ತಿದ್ದರು, ಡ್ರಗ್ಸ್ ಮಾರಾಟ ದಂಧೆ ಮಾತ್ರ ನಿಲ್ಲುತ್ತಿರಲಿಲ್ಲ. ನಗರದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೇರೆ ಬೇರೆ ರಾಜ್ಯದಿಂದ ವಿವಿಧ ರೀತಿಯ ಡ್ರಗ್ಸ್ ಗಳನ್ನು ಮಾರಾಟ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇತ್ತು. ಹೀಗಾಗಿ ನಗರ ಪೂರ್ವ ವಿಭಾಗದ ಪ್ರತಿಷ್ಠಿತ ಕಾಲೇಜುಗಳು, ಪಬ್‍ಗಳು, ಐಟಿಬಿಟಿ ಸೆಕ್ಟರ್ ಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಾಹಿತಿ ಬೆಂಗಳೂರು ಸಿಸಿಬಿ ಪೊಲೀಸರು ವಿವಿಧ ಕಡೆಗಳಲ್ಲಿ ದಾಳಿ ನಡೆಸಿದರು.

    ದಾಳಿ ವೇಳೆ ಕೆಆರ್ ಪುರ, ಮಾರತ್ತಹಳ್ಳಿ ಸುತ್ತಮುತ್ತಲಿನ ಕಾಲೇಜುಗಳ ಬಳಿ ಆಂಧ್ರದಿಂದ ವಿವಿಧ ಮಾದರಿಯ ಡ್ರಗ್ಸ್‍ಗಳನ್ನು ತಂದು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ನಾಲ್ವರು ಮಧ್ಯವರ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 50 ಲಕ್ಷ ಮೌಲ್ಯದ ಡ್ರಗ್ಸ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

    ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರದ ಬೇರೆ ಯಾವ ಜಾಗಗಳಲ್ಲಿ ಇದನ್ನು ಮಾರಾಟ ಮಾಡುತ್ತಿದ್ದರು ಎನ್ನುವುದರ ಬಗ್ಗೆ ವಿಚಾರಣೆ ಮುಂದುವರಿದಿದೆ.

  • ಸರ್ಕಾರಿ ಕಚೇರಿಯಲ್ಲಿ ಖಾಸಗಿ ದರ್ಬಾರ್-ಲಂಚ ಕೊಟ್ರೆ ಮಾತ್ರ ಆಗುತ್ತೆ ನಿಮ್ಮ ಕೆಲಸ

    ಸರ್ಕಾರಿ ಕಚೇರಿಯಲ್ಲಿ ಖಾಸಗಿ ದರ್ಬಾರ್-ಲಂಚ ಕೊಟ್ರೆ ಮಾತ್ರ ಆಗುತ್ತೆ ನಿಮ್ಮ ಕೆಲಸ

    ಕೋಲಾರ: ಜಿಲ್ಲೆಯ ಮಾಲೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಲಂಚ ನೀಡಿದರೆ ಮಾತ್ರ ನಿಮ್ಮ ಕೆಲಸಗಳು ನಡೆಯುತ್ತವೆ ಎಂಬ ಆರೋಪಗಳು ಕೇಳಿ ಬಂದಿವೆ.

    ಇಲ್ಲಿನ ಸರ್ಕಾರಿ ಕಚೇರಿಯೊಳಗೆ ಖಾಸಗಿ ವ್ಯಕ್ತಿಗಳು ಪತ್ಯೇಕ ಆಸನದ ವ್ಯವಸ್ಥೆ ಮಾಡಿಕೊಂಡು ದರ್ಬಾರ್ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಚೇರಿಯಿಂದ ಹೊರಗೆ ಸಾರ್ವಜನಿಕರೊಂದಿಗೆ ಮಧ್ಯವರ್ತಿಗಳು ಅಧಿಕಾರಿಗಳ ಮುಂದೆಯೇ ವ್ಯಾಪಾರ ಮಾಡುತ್ತಾರೆ.

    ಹೌದು, ಇಲ್ಲಿ ದಿನದಿಂದ ದಿನಕ್ಕೆ ಮಧ್ಯವರ್ತಿಗಳ ದರ್ಬಾರ್ ಮಿತಿಮೀರಿದೆ. ಕಚೇರಿಯಲ್ಲಿ ದಲ್ಲಾಳಿಗಳಿಗೆ ಟೇಬಲ್ ವ್ಯವಸ್ಥೆ ಮಾಡಿಕೊಟ್ಟು ಸಾರ್ವಜನಿಕರಿಂದ ನೇರವಾಗಿ ಅಧಿಕಾರಿಗಳೇ ಸುಲಿಗೆ ಮಾಡಿಸುತ್ತಿದ್ದಾರೆ. ಇದನ್ನು ತಿಳಿಯದ ಸಾರ್ವಜನಿಕರು, ಮಧ್ಯವರ್ತಿಗಳನ್ನೇ ಸರ್ಕಾರಿ ನೌಕರರೆಂದು ಭಾವಿಸಿ ಕೇಳಿದಷ್ಟು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕಚೇರಿಯ ಉಪನೊಂದಣಾಧಿಕಾರಿ ಪದ್ಮಾವತಿ ಸಹ ನಿಗದಿಗಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ.

    ಈ ಮಧ್ಯವರ್ತಿಗಳಿಗೆ ಹಣ ಕೊಡಲಿಲ್ಲ ಅಂದರೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಜನರನ್ನು ಪದೇ-ಪದೇ ಕಚೇರಿಗೆ ಅಲೆಯುವಂತೆ ಮಾಡುತ್ತಾರೆ. ಹೆಚ್ಚಿನ ಹಣ ನೀಡಿದರೆ ಕಣ್ಮುಚ್ಚಿ ಸಹಿ ಹಾಕುವುದು ಇಲ್ಲಿ ಹವ್ಯಾಸವಾಗಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ವಿಷಯ ತಿಳಿದ ಮಾಧ್ಯಮಗಳು ಕಚೇರಿಗೆ ತೆರಳಿದರೆ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದ ಮಧ್ಯವರ್ತಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ಖಾಸಗಿ ವ್ಯಕ್ತಿಗಳು ಕಚೇರಿಯಲ್ಲಿ ಕೆಲಸ ಮಾಡುತ್ತಿರೋದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

    ಒಟ್ಟಿನಲ್ಲಿ ನಿವೇಶನ, ಮದುವೆ ನೊಂದಣಿಗೆ ಎಂದು ಬರುವ ಅಮಾಯಕರನ್ನು ಯಾಮಾರಿಸಿ ಪರ್ಸಂಟೇಜ್ ಫಿಕ್ಸ್ ಮಾಡಿ ಸಾರ್ವಜನಿಕರಿಂದ ಹಗಲು ದರೋಡೆ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.