Tag: Interim Budget

  • ಹಣ್ಣುಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರದ ಮಾಸ್ಟರ್ ಪ್ಲ್ಯಾನ್ – ಏನಿದು ಕ್ಲೀನ್ ಪ್ಲಾಂಟ್ ಪ್ರೋಗ್ರಾಂ?

    ಹಣ್ಣುಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರದ ಮಾಸ್ಟರ್ ಪ್ಲ್ಯಾನ್ – ಏನಿದು ಕ್ಲೀನ್ ಪ್ಲಾಂಟ್ ಪ್ರೋಗ್ರಾಂ?

    ಭಾರತದಲ್ಲಿ ತೋಟಗಾರಿಕೆ ಬೆಳೆಗಳ ಇಳುವರಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕ್ಲೀನ್ ಪ್ಲಾಂಟ್ ಯೋಜನೆಗೆ (CPP) ಕೇಂದ್ರ ಸಚಿವ ಸಂಪುಟ (Union Cabinet) ಅನುಮೋದನೆ ನೀಡಿದೆ. ಈ ಯೋಜನೆ ರಾಷ್ಟ್ರದಾದ್ಯಂತ ಹಣ್ಣಿನ ಬೆಳೆಗಳ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

    ಫೆಬ್ರವರಿ 2023 ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಮಧ್ಯಂತರ ಬಜೆಟ್ (Interim Budget) ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು. ಈ ಕಾರ್ಯಕ್ರಮಕ್ಕಾಗಿ ಕೃಷಿ ಸಚಿವಾಲಯ (Ministry of Agriculture) 1,765 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಇದರಲ್ಲಿ ಅರ್ಧದಷ್ಟು ಭಾಗವನ್ನು ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್ ಆಫ್ ಹಾರ್ಟಿಕಲ್ಚರ್ (MIDH) ನ ಬಜೆಟ್‌ನಿಂದ ಪಡೆಯಲಾಗಿದೆ. ಈ ಯೋಜನೆಗೆ ಬೇಕಾದ ಉಳಿದ ಅರ್ಧ ಹಣವನ್ನು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ (ADB) ಸಾಲದ ರೂಪದಲ್ಲಿ ಪಡೆಯಲಾಗುತ್ತದೆ. 

    CPP ಯೋಜನೆ ಎಂದರೇನು? 

    ತೋಟಗಾರಿಕೆ ಬೆಳೆಗಳ ಇಳುವರಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಹಾಕಿಕೊಂಡ ಯೋಜನೆ ಇದಾಗಿದೆ. ಈ ಯೋಜನೆ ಮೂಲಕ ಉತ್ತಮ ಸಸಿಗಳನ್ನು ರೈತರಿಗೆ ಒದಗಿಸಿ ಹಣ್ಣಿನ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಹೊಂದಿದೆ. 

    CPP ಯೋಜನೆಯ ಮುಖ್ಯ ಉದ್ದೇಶವೇನು? 

    ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಮತ್ತು ಆದಾಯ ಹೆಚ್ಚಿಸಲು ಆರೋಗ್ಯವಂತ ಉತ್ತಮ ಗುಣಮಟ್ಟದ ಸಸ್ಯಗಳನ್ನು ರೈತರಿಗೆ ಒದಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. 

    ಇದಕ್ಕಾಗಿ ಸರ್ಕಾರ ಕೈಗೊಳ್ಳಲಿರುವ ಯೋಜನೆಗಳೇನು? 

     9 ಕ್ಲೀನ್ ಪ್ಲಾಂಟ್ ಸೆಂಟರ್‌ಗಳ (CPCs) ಅಭಿವೃದ್ಧಿ ಮಾಡುವುದು. ಇದು ರೋಗ ಸಸಿಗಳನ್ನು ರೈತರಿಗೆ ಒದಗಿಸಲು ಅನುಕೂಲವಾಗಲಿದೆ. 

     CPC ಯಿಂದ ಪಡೆದ ಮೂಲ ಸಸ್ಯಗಳನ್ನು ನರ್ಸರಿಗಳಲ್ಲಿ ಬೆಳೆಸಿ, ಹೆಚ್ಚಿನ ಸಸ್ಯಗಳ ಅಭಿವೃದ್ಧಿಪಡಿಸಿ ರೈತರಿಗೆ ವಿತರಿಸಲಾಗುತ್ತದೆ. 

     ಸಸಿಗಳ ಮಾರಾಟದ ಸಂಪೂರ್ಣ ಹೊಣೆಗಾರಿಕೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಮಿತಿ ರಚನೆ. 

    CPPಯ ಅವಶ್ಯಕತೆ ಏನು?

    ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಹಣ್ಣುಗಳು ಮತ್ತು ತರಕಾರಿಗಳನ್ನು ಉತ್ಪಾದಿಸುವ ದೇಶವಾಗಿದೆ. 2013-14 ರಿಂದ 2023-24ರವರೆಗೆ, ತೋಟಗಾರಿಕೆ ಬೆಳೆಗಳ ವ್ಯಾಪ್ತಿಯು 2.4 ಕೋಟಿ ಹೆಕ್ಟೇರ್‌ಗಳಿಂದ 2.86 ಕೋಟಿ ಹೆಕ್ಟೇರ್‌ಗಳಿಗೆ ಏರಿದೆ. ಉತ್ಪಾದನೆಯು 27.74 ಕೋಟಿ ಮೆಟ್ರಿಕ್ ಟನ್‌ಗಳಿಂದ (ಎಂಟಿ) 35.2 ಕೋಟಿ ಮೆಟ್ರಿಕ್‌ ಟನ್‌ಗೆ ಏರಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತವು 1.15 ಶತಕೋಟಿ ಡಾಲರ್‌ ಮೌಲ್ಯದ ತಾಜಾ ಹಣ್ಣುಗಳನ್ನು ರಫ್ತು ಮಾಡಿದೆ. ಉತ್ಪಾದನೆ ಹೆಚ್ಚಿಸುವ ಗುರಿ ಹಾಗೂ ರಫ್ತನ್ನು ಹೆಚ್ಚಿಸುವ ಉದ್ದೇಶದಿಂದ ಸಿಪಿಪಿ ಯೋಜನೆ ಬಹಳ ಪ್ರಾಮುಖ್ಯತೆ ಪಡೆದಿದೆ. 

    ವಿದೇಶಗಳಿಂದ ಭಾರತ ಯಾವೆಲ್ಲ ಹಣ್ಣಿನ ಸಸಿಗಳನ್ನು ಆಮದು ಮಾಡಿಕೊಂಡಿದೆ? 

    ಮೂಲಗಳ ಪ್ರಕಾರ 2018-20 ರ ನಡುವೆ, EXIM ಸಮಿತಿಯು 2018 ರಲ್ಲಿ 21.44 ಲಕ್ಷ ಸೇಬಿನ ಗಿಡಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿತು, ಇದು 2020 ರಲ್ಲಿ 49.57 ಲಕ್ಷಕ್ಕೆ ಏರಿತು. 2018 ರಲ್ಲಿ ಕೇವಲ 1,000 ಆವಕಾಡೊಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿತ್ತು.  ಇದು 2020 ರಲ್ಲಿ 26,500 ಕ್ಕೆ ಏರಿತು. ಹಾಗೆಯೇ, ಬ್ಲೂಬೆರ್ರಿ ಸಸ್ಯಗಳ ಆಮದು 2020 ರಲ್ಲಿ 4.35 ಲಕ್ಷಕ್ಕೆ ಏರಿಕೆ ಕಂಡಿದೆ. 

    ಪ್ರಸ್ತುತ ಸಸ್ಯಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೆ ತೊಡಕಾಗಿದೆ, ಆಮದು ಮಾಡಿದ ಸಸ್ಯಗಳನ್ನು ಎರಡು ವರ್ಷಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತಿದೆ. CPC ಗಳು ಈ ಅವಧಿಯನ್ನು ಆರು ತಿಂಗಳ ಕಡಿತಗೊಳಿಸುತ್ತವೆ ಮತ್ತು ಭಾರತದಲ್ಲಿ ತೋಟಗಾರಿಕಾ ಬೆಳೆಗಳಿಗೆ ಆರೋಗ್ಯವಂತ ಸಸಿಗಳನ್ನು ಒದಗಿಸಲು ಇದು ಅನುಕೂಲವಾಗಲಿದೆ.

    ಕ್ಲೀನ್ ಪ್ಲಾಂಟ್ ಪ್ರೋಗ್ರಾಂ (CPP) ನ ಪ್ರಮುಖ ಪ್ರಯೋಜನಗಳೇನು?

    ರೈತರು: ಸಿಪಿಪಿ ವೈರಸ್-ಮುಕ್ತ, ಉತ್ತಮ ಗುಣಮಟ್ಟದ ಸಸಿಗಳನ್ನು ಒದಗಿಸುತ್ತದೆ. ಇದು ಹೆಚ್ಚಿನ ಇಳುವರಿ ಮತ್ತು ಆದಾಯಕ್ಕೆ ಕಾರಣವಾಗುತ್ತದೆ. 

    ನರ್ಸರಿಗಳು: ಸುವ್ಯವಸ್ಥಿತ ನರ್ಸರಿಗಳನ್ನು ಉತ್ತೇಜಿಸುವ ಮೂಲಕ, ಉತ್ತಮ ಸಸಿಗಳ ಅಭಿವೃದ್ಧಿಗೆ ಸಹಾಯವಾಗಲಿದೆ. 

    ಗ್ರಾಹಕರು: ಹಣ್ಣುಗಳ ರುಚಿ, ಆಕಾರ ಮತ್ತು ಪೌಷ್ಟಿಕಾಂಶ ಹೆಚ್ಚಾಗುವುದರಿಂದ ಗ್ರಾಹಕರನ್ನು ಸೆಳೆಯಲಿದೆ. 

    ರಫ್ತು: ಉತ್ತಮ ಗುಣಮಟ್ಟದ ಹಣ್ಣುಗಳ ಉತ್ಪಾದನೆ ಭಾರತವು ಪ್ರಮುಖ ಜಾಗತಿಕ ರಫ್ತುದಾರನಾಗಿ ಬೆಳೆಯಲು ಸಹಾಯಕವಾಗಲಿದೆ. ಅಂತರರಾಷ್ಟ್ರೀಯ ಹಣ್ಣಿನ ವ್ಯಾಪಾರದಲ್ಲಿ ತನ್ನ ಪಾಲನ್ನು ಈ ಯೋಜನೆ ಹೆಚ್ಚಿಸಲಿದೆ.

    ಇಷ್ಟೇ ಅಲ್ಲದೇ, ಸಣ್ಣ ಹಿಡುವಳಿದಾರರನ್ನು, ರೈತ ಮಹಿಳೆಯರನ್ನು ಈ ಯೋಜನೆ ತಲುಪುವಂತೆ ಕಾರ್ಯಗತಗೊಳಿಸಲು ಸರ್ಕಾರ ಮುಂದಾಗಿದೆ. ಸರ್ಕಾರ ರೈತರಿಗೆ ಸೂಕ್ತ ತರಬೇತಿ ಹಾಗೂ ತಂತ್ರಜ್ಞಾನಗಳ ಪರಿಚಯ ಮಾಡಿಸಲು ಅಗತ್ಯ ಕ್ರಮಕೈಗೊಳ್ಳಲಿದೆ.  

    CPP ಯ ಪ್ರಮುಖ ಅಂಶಗಳು

    ಕ್ಲೀನ್ ಪ್ಲಾಂಟ್ ಸೆಂಟರ್‌ಗಳು (CPC ಗಳು): ಸುಧಾರಿತ ರೋಗನಿರ್ಣಯದ ಚಿಕಿತ್ಸಕಗಳು ಮತ್ತು ಅಂಗಾಂಶ ಕೃಷಿ ಪ್ರಯೋಗಾಲಯಗಳೊಂದಿಗೆ ಸುಸಜ್ಜಿತವಾದ ಒಂಬತ್ತು ವಿಶ್ವದರ್ಜೆಯ ಅತ್ಯಾಧುನಿಕ CPC ಗಳನ್ನು ಭಾರತದಾದ್ಯಂತ ಸ್ಥಾಪಿಸಲಾಗುತ್ತದೆ. 

    ಇವುಗಳಲ್ಲಿ ದ್ರಾಕ್ಷಿ (NRC, ಪುಣೆ), ಸಮಶೀತೋಷ್ಣ ಹಣ್ಣುಗಳು – ಸೇಬು, ಬಾದಾಮಿ, ವಾಲ್‌ನಟ್ಸ್ ಇತ್ಯಾದಿ (CITH, ಶ್ರೀನಗರ & ಮುಕ್ತೇಶ್ವರ), ಸಿಟ್ರಸ್ ಹಣ್ಣುಗಳು (CCRI, ನಾಗ್ಪುರ್ & CIAH, ಬಿಕಾನೇರ್), ಮಾವು / ಪೇರಲೆ / ಆವಕಾಡೊ (IIHR, ಬೆಂಗಳೂರು); ಮಾವು / ಪೇರಲೆ / ಲಿಚಿ (CISH, ಲಕ್ನೋ), ದಾಳಿಂಬೆ (NRC, ಶೋಲಾಪುರ), ಮತ್ತು ಪೂರ್ವ ಭಾರತದಲ್ಲಿ ಉಷ್ಣವಲಯದ/ಉಪ ಉಷ್ಣವಲಯದ ಹಣ್ಣಿನ ಸಸಿಗಳನ್ನು ಈ ಕೇಂದ್ರಗಳಲ್ಲಿ ಬೆಳೆಸಲಾಗುತ್ತದೆ.  

    ಪ್ರಮಾಣೀಕರಣ ಮತ್ತು ಕಾನೂನು ಚೌಕಟ್ಟು: ಬೀಜಗಳ ಕಾಯಿದೆ 1966 ರ ಅಡಿಯಲ್ಲಿ ದೃಢವಾದ ಪ್ರಮಾಣೀಕರಣ ವ್ಯವಸ್ಥೆಯನ್ನು ಅಳವಡಿಸುವುದು. 

    ಮೂಲಸೌಕರ್ಯಗಳ ಅಭಿವೃದ್ಧಿ: ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದ ನರ್ಸರಿಗಳಿಗೆ ಬೆಂಬಲವನ್ನು ಒದಗಿಸುವುದು. ಈ ಮೂಲಕ ಉತ್ತಮ ಸಸಿಗಳ ಸಂಖ್ಯೆಯನ್ನು ಹೆಚ್ಚಿಸುವುದು. 

    ಈ ಕಾರ್ಯಕ್ರಮವು ಭಾರತವನ್ನು ಪ್ರಮುಖ ಜಾಗತಿಕ ಹಣ್ಣುಗಳ ರಫ್ತುದಾರನಾಗಿ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಸಹಯೋಗದೊಂದಿಗೆ ಕಾರ್ಯಗತಗೊಳಿಸುತ್ತದೆ. CPC ಗಳು ಅಮೆರಿಕ, ಇಸ್ರೇಲ್ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ದೇಶಗಳಲ್ಲಿನ ಯಶಸ್ವಿ ಯೋಜನೆಯಾಗಿದೆ. 

  • ವಿಕಸಿತ ಭಾರತ್ ಬಜೆಟ್ – ಹಣಕಾಸು ಸಚಿವೆಗೆ ಪ್ರಧಾನಿ ಮೋದಿ ಶ್ಲಾಘನೆ

    ವಿಕಸಿತ ಭಾರತ್ ಬಜೆಟ್ – ಹಣಕಾಸು ಸಚಿವೆಗೆ ಪ್ರಧಾನಿ ಮೋದಿ ಶ್ಲಾಘನೆ

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಡಿಸಿದ ಮಧ್ಯಂತರ ಬಜೆಟ್‍ನ್ನು (Interim Budget) ಪ್ರಧಾನಿ ನರೇಂದ್ರ ಮೋದಿಯವರು (Narendra Modi) ವಿನೂತನ ಬಜೆಟ್ ಎಂದು ಕರೆದಿದ್ದಾರೆ. ಈ ಬಜೆಟ್ ಯುವ ಭಾರತದ ಯುವ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

    ಬಜೆಟ್‍ನಲ್ಲಿ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ 1 ಲಕ್ಷ ಕೋಟಿ ರೂ. ನಿಧಿಯನ್ನು ಘೋಷಿಸಲಾಗಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಭರವಸೆಯನ್ನು ಈ ಬಜೆಟ್ ನೀಡುತ್ತದೆ. ಇದು ವಿಕಸಿತ ಭಾರತದ ಎಲ್ಲಾ 4 ಸ್ತಂಭಗಳಾದ ಯುವ, ಗರೀಬ್, ಮಹಿಳಾ ಮತ್ತು ಕಿಸಾನ್ ಅಂಶಗಳನ್ನು ಸಶಕ್ತಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Budget 2024: ಜನಸಂಖ್ಯಾ ಸ್ಫೋಟ ತಡೆಗೆ ಉನ್ನತ ಅಧಿಕಾರಿಗಳ ಸಮಿತಿ

    ಆದಾಯ ತೆರಿಗೆ ವಿನಾಯಿತಿಯಿಂದ ಮಧ್ಯಮ ವರ್ಗದ ಸುಮಾರು 1 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವಾಗಲಿದೆ. ಈ ಬಜೆಟ್‍ನಲ್ಲಿ ರೈತರಿಗಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರ ಸಬಲೀಕರಣ ಮತ್ತು ಅವರಿಗೆ ಅವಕಾಶಗಳನ್ನು ಸೃಷ್ಟಿಸಲು ಬಜೆಟ್ ಒತ್ತು ನೀಡುತ್ತದೆ. ಬಡವರಿಗೆ ಇನ್ನೂ 2 ಕೋಟಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಲಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಸಿಗಲಿದೆ ಎಂದಿದ್ದಾರೆ.

    ಈ ಬಜೆಟ್‍ನಲ್ಲಿ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಬಜೆಟ್‌ ಮಂಡನೆ ಮಾಡಲಾಗಿದೆ. ಅರ್ಥಶಾಸ್ತ್ರಜ್ಞರ ಭಾಷೆಯಲ್ಲಿ ಹೇಳುವುದಾದರೆ ಇದೊಂದು ಸ್ವೀಟ್ ಸ್ಪಾಟ್ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪಿಎಂ ಸೂರ್ಯೋದಯ ಯೋಜನೆಗೆ ವಿಶೇಷ ಒತ್ತು – ಒಂದು ಕೋಟಿ ಮನೆಗಳಿಗೆ ಸೋಲಾರ್ ಮೇಲ್ಛಾವಣಿ

  • ಪಿಎಂ ಸೂರ್ಯೋದಯ ಯೋಜನೆಗೆ ವಿಶೇಷ ಒತ್ತು – ಒಂದು ಕೋಟಿ ಮನೆಗಳಿಗೆ ಸೋಲಾರ್ ಮೇಲ್ಛಾವಣಿ

    ಪಿಎಂ ಸೂರ್ಯೋದಯ ಯೋಜನೆಗೆ ವಿಶೇಷ ಒತ್ತು – ಒಂದು ಕೋಟಿ ಮನೆಗಳಿಗೆ ಸೋಲಾರ್ ಮೇಲ್ಛಾವಣಿ

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಡಿಸಿದ ಮಧ್ಯಂತರ ಬಜೆಟ್‍ನಲ್ಲಿ (Interim Budget) ಇತ್ತೀಚೆಗೆ ಘೋಷಣೆಯಾದ `ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’ಗೆ (Pradhan Mantri Suryoday Yojna) ವಿಶೇಷ ಒತ್ತು ನೀಡಲಾಗಿದೆ. ಮನೆಗಳಿಗೆ ಸೋಲಾರ್ ಮೇಲ್ಛಾವಣಿ (Rooftop Solar Scheme) ಅಳವಡಿಸುವ ಈ ಯೋಜನೆ ಬಗ್ಗೆ ಅವರು ತಮ್ಮ ಬಜೆಟ್ ಭಾಷಣದಲ್ಲಿ ವಿಶೇಷವಾದ ಮಾಹಿತಿ ಹಂಚಿಕೊಂಡಿದ್ದಾರೆ.

    ಈ ಯೋಜನೆಯ ಮೂಲಕ ಒಂದು ಕೋಟಿ ಮನೆಗಳಲ್ಲಿ ಸೌರ ಮೇಲ್ಛಾವಣಿ ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದ ಒಂದು ಮನೆಗೆ ತಿಂಗಳಿಗೆ ಸುಮಾರು 300 ಯೂನಿಟ್ ವಿದ್ಯುತ್ ಉಳಿತಾಯವಾಗುತ್ತದೆ. ವಾರ್ಷಿಕವಾಗಿ 15,000-18,000 ರೂ.ಗಳ ಉಳಿತಾಯವಾಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡುವ ಗುರಿ: ವಿತ್ತ ಮಂತ್ರಿ

    ಸರ್ಕಾರಿ ಸ್ವಾಮ್ಯದ ಆರ್‌ಇಸಿ ಲಿಮಿಟೆಡ್‍ನ್ನು ಯೋಜನೆಯ ಅನುಷ್ಠಾನ ಏಜೆನ್ಸಿಯಾಗಿ ನೇಮಿಸಲಾಗಿದೆ. ಒಂದು ವರ್ಷದೊಳಗೆ ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿ ಸೌರ ಅಳವಡಿಕೆಗಳನ್ನು ಹೊಂದುವ ಗುರಿಯನ್ನು ಹೊಂದಿದೆ. ಜ.22 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭದ ನಂತರ ಅಯೋಧ್ಯೆಯಿಂದ ಹಿಂದಿರುಗಿದ ನಂತರ ಒಂದು ಕೋಟಿ ಮನೆಗಳಲ್ಲಿ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.

    ಈ ಯೋಜನೆಯು ಈಗಾಗಲೇ ಜಾರಿಯಲ್ಲಿದೆ, ಇದು ಹೊಸ ಮಾರ್ಗಸೂಚಿಗಳು ಮತ್ತು ಪ್ರೋತ್ಸಾಹಗಳೊಂದಿಗೆ ಜಾರಿಯಾಗಲಿದೆ. ಇದನ್ನೂ ಓದಿ: ಮಧ್ಯಂತರ ಬಜೆಟ್‌ನಲ್ಲಿ ನಾರಿಶಕ್ತಿಗೆ ಹೆಚ್ಚಿನ ಒತ್ತು

  • ಇಂದು ಬಹುನಿರೀಕ್ಷಿತ ಮಧ್ಯಂತರ ಬಜೆಟ್ – ನಿರ್ಮಲಾ ಸೀತಾರಾಮನ್‌ರಿಂದ 6ನೇ ಬಾರಿಗೆ ಆಯವ್ಯಯ ಮಂಡನೆ

    ಇಂದು ಬಹುನಿರೀಕ್ಷಿತ ಮಧ್ಯಂತರ ಬಜೆಟ್ – ನಿರ್ಮಲಾ ಸೀತಾರಾಮನ್‌ರಿಂದ 6ನೇ ಬಾರಿಗೆ ಆಯವ್ಯಯ ಮಂಡನೆ

    – ಪ್ರಧಾನಿ ಮೋದಿ 2.0 ಅವಧಿಯ ಕೊನೆ ಬಜೆಟ್‌

    ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಇಂದು (ಗುರುವಾರ) ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವರಾಗಿ ಸೀತಾರಾಮನ್‌ ಮಂಡಿಸಲಿರುವ 6ನೇ ಬಜೆಟ್ ಇದಾಗಿದೆ. ಅಲ್ಲದೇ ಪ್ರಧಾನಿ ಮೋದಿ (Narendra Modi) ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್‌ ಕೂಡ ಆಗಲಿದೆ.

    ಲೋಕಸಭೆ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ ಮಧ್ಯಂತರ ಬಜೆಟ್ (Union Budget 2024) ಮಧ್ಯಂತರ ಅವಧಿಯ ಹಣಕಾಸಿನ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಹೊಸ ಸರ್ಕಾರದಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು. ಇದನ್ನೂ ಓದಿ: ಗುರುವಾರ ಕೇಂದ್ರ ಬಜೆಟ್‌ – ರೈತರು, ಜನಸಾಮಾನ್ಯರ ನಿರೀಕ್ಷೆ ಏನು?

    ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡುವ ಮೂಲಕ ಸಂಸತ್ತಿನ ಬಜೆಟ್ ಅಧಿವೇಶನ ಬುಧವಾರ ಪ್ರಾರಂಭವಾಯಿತು. ರಾಷ್ಟ್ರಪತಿ ಭಾಷಣದಲ್ಲಿ, 2023 ದೇಶಕ್ಕೆ ಐತಿಹಾಸಿಕ ವರ್ಷವಾಗಿದೆ. ದೇಶವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ವೇಗವನ್ನು ಮುಂದುವರೆಸಿದೆ ಎಂದು ಹೇಳಿದ್ದರು.

    ಈ ಏಪ್ರಿಲ್‌ನಲ್ಲಿ ಪ್ರಾರಂಭವಾಗುವ 2024-25 ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7 ರ ಸಮೀಪಕ್ಕೆ ಬರುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವಾಲಯವು ಪರಿಶೀಲನಾ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಲಕ್ನೋದಿಂದ 6 ದಿನ ಕಾಲ್ನಡಿಗೆಯಲ್ಲಿ ತೆರಳಿ ರಾಮಲಲ್ಲಾಗೆ ನಮಿಸಿದ 350 ಮಂದಿ ಮುಸ್ಲಿಮರು!

    ಭಾರತದ ಆರ್ಥಿಕತೆಯು 2022-23ರಲ್ಲಿ ಶೇ.7.2 ಮತ್ತು 2021-22ರಲ್ಲಿ ಶೇ.8.7ರಷ್ಟು ಬೆಳವಣಿಗೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2023-24 ರಲ್ಲಿ ಭಾರತದ ಆರ್ಥಿಕತೆಯು ಶೇ.7.3 ಬೆಳವಣಿಗೆ ನಿರೀಕ್ಷಿಸಲಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ.

  • ಕೇಂದ್ರ ಬಜೆಟ್ 2019: ಗ್ರಾಮೀಣ ವಿಭಾಗಕ್ಕೆ ಪಿಯೂಶ್ ಗೋಯಲ್ ನೀಡಿದ್ದೇನು?

    ಕೇಂದ್ರ ಬಜೆಟ್ 2019: ಗ್ರಾಮೀಣ ವಿಭಾಗಕ್ಕೆ ಪಿಯೂಶ್ ಗೋಯಲ್ ನೀಡಿದ್ದೇನು?

    ನವದೆಹಲಿ: ರೈತ ಮತ್ತು ಕಾರ್ಮಿಕ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದು, ರೈತರ ಖಾತೆಗೆ ನೇರವಾಗಿ ವಾರ್ಷಿಕವಾಗಿ 6 ಸಾವಿರ ರೂ. ಹಾಕುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿದೆ.

    2 ಹೆಕ್ಟೇರ್(4.94 ಎಕ್ರೆ)ಜಾಗ ಇರುವ ರೈತರ ಖಾತೆಗೆ 2 ಸಾವಿರದಂತೆ ಮೂರು ಕಂತುಗಳಲ್ಲಿ ಹಣವನ್ನು ಜಮೆ ಮಾಡಲಾಗುವುದು. 2018ರ ಪೂರ್ವಾನ್ವಯದಂತೆ ಇದು ಜಾರಿಯಾಗಲಿದೆ ಎಂದು ಪಿಯೂಶ್ ಗೋಯಲ್ ತಿಳಿಸಿದರು.

    ಬಜೆಟ್ ಘೋಷಣೆ ಏನು?
    ಪ್ರತಿಯೊಂದು ಗ್ರಾಮಗಳಿಗೆ ವಿದ್ಯುಚ್ಛಕ್ತಿ ನೀಡಲಾಗುತ್ತಿದ್ದು, ಮಾರ್ಚ್ 2019ರೊಳಗೆ ದೇಶದ ಪ್ರತಿ ಕುಟುಂಬಗಳ ಮನೆಯಲ್ಲಿ ವಿದ್ಯುತ್ ದೀಪ ಬೆಳಗಲಿದೆ. ಈ ಯೋಜನೆಗಾಗಿ 143 ಕೋಟಿ ಎಲ್‍ಇಡಿ ವಿದ್ಯುತ್ ದೀಪಗಳನ್ನು ಉತ್ಪಾದಿಸಲಾಗಿದ್ದು, ಇವುಗಳ ಬಳಕೆಯಿಂದಾಗಿ 50 ಸಾವಿರ ಕೋಟಿ ರೂ. ಮೌಲ್ಯದ ವಿದ್ಯುಚ್ಛಕ್ತಿ ಉಳಿತಾಯವಾಗಲಿದೆ ಎಂದು ವಿತ್ತ ಸಚಿವರು ತಿಳಿಸಿದರು.

    ಐದು ವರ್ಷದ ಆಡಳಿತಾವಧಿಯಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿಯಲ್ಲಿ 1.53 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. 2014ಕ್ಕಿಂತ ಹೋಲಿಕೆ ಮಾಡಿದ್ರೆ ಮನೆಗಳ ನಿರ್ಮಾಣ ಐದು ಪಟ್ಟು ಹೆಚ್ಚಳವಾಗಿದೆ ಎಂದು ವಿತ್ತ ಸಚಿವರು ಸ್ಪಷ್ಟಪಡಿಸಿದರು.

    ಬಡ ಮತ್ತು ಮಧ್ಯಮ ವರ್ಗದವರು ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳು ಲಭ್ಯವಾಗಲು 2018-19 ಅವಧಿಯಲ್ಲಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ಖರ್ಚು ಮಾಡಿದೆ. 2013-14ರಲ್ಲಿ ಕೇವಲ 92 ಕೋಟಿ ರೂ. ಖರ್ಚು ಮಾಡಲಾಗಿತ್ತು. ಮನರೇಗಾ ಯೋಜನೆಗಾಗಿ 60 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ.

    ಬಡ ವರ್ಗದ ಜನರು ಸಹ ದೇಶದಲ್ಲಿರುವ ಸಂಸದರನ್ನು ಪ್ರಶ್ನಿಸಬಹುದು. ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಸ್‍ಸಿ-ಎಸ್‍ಟಿ ಮತ್ತು ಓಬಿಸಿ ಕೋಟಾದಡಿ ಶೇ.10 ಮೀಸಲಾತಿ ನೀಡಲಾಗಿದೆ. ಇದರಿಂದ ಅಂದಾಜು 2 ಲಕ್ಷ ಸೀಟ್ ಗಳು ಲಭ್ಯವಾಗಲಿದೆ ಎಂದು ವಿತ್ತ ಸಚಿವರು ತಿಳಿಸಿದ್ರು.

    2019-20 ಅವಧಿಗೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶದ ರಸ್ತೆ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಗೆ 19 ಸಾವಿರ ಕೋಟಿ ಮೀಸಲು. ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆ ಕಾರ್ಯ ಐದು ವರ್ಷಗಳಲ್ಲಿ ಮೂರುಪಟ್ಟು ಹೆಚ್ಚಳವಾಗಿದ್ದು, ಕಳೆದ ವರ್ಷ 15,500 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು.

    2013-14ರಲ್ಲಿ ರಸ್ತೆ ಕಾಮಗಾರಿ ಪ್ರತಿ ದಿನ 69 ಕಿ.ಮೀ. ನಡೆಯುತ್ತಿತ್ತು. 2014-15ರಿಂದ ಪ್ರತಿದಿನ 100 ಕಿ.ಮೀ.ನಷ್ಟು ಕಾಮಗಾರಿ ನಡೆಯುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕೇಂದ್ರದ ಮಧ್ಯಂತರ ಬಜೆಟ್-ರೈಲ್ವೆ ಇಲಾಖೆಗೆ ಸಿಕ್ಕಿದ್ದೇನು?

    ಕೇಂದ್ರದ ಮಧ್ಯಂತರ ಬಜೆಟ್-ರೈಲ್ವೆ ಇಲಾಖೆಗೆ ಸಿಕ್ಕಿದ್ದೇನು?

    ನವದೆಹಲಿ: ಕೇಂದ್ರ ಹಣಕಾಸು ಮತ್ತು ರೈಲ್ವೆ ಸಚಿವರಾಗಿರುವ ಪಿಯೂಶ್ ಗೋಯಲ್ ಮೋದಿ ಸರ್ಕಾರದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಕಾರ್ಮಿಕ, ಮಧ್ಯಮ ವರ್ಗಕ್ಕೆ ಭರಪೂರ ಯೋಜನೆಗಳನ್ನು ಮಂಡನೆ ಮಾಡಲಾಗಿದೆ. ಇದೇ ವೇಳೆ ರೈಲ್ವೆ ಇಲಾಖೆಗೆ ಅನುದಾನವನ್ನು ಘೋಷಿಸಲಾಯ್ತು.

    1. ರೈಲ್ವೆ ಅಭಿವೃದ್ಧಿಗಾಗಿ 1.58 ಲಕ್ಷ ಕೋಟಿ ಅನುದಾನ ಮೀಸಲಿರಿಸಿದೆ. 2018ರ ಬಜೆಟ್ ನಲ್ಲಿ ಸರ್ಕಾರ 1.48 ಲಕ್ಷ ಕೋಟಿ ಅನುದಾನವನ್ನು ಬಿಡುಗಡೆ ಮಾಡಿತ್ತು.
    2. ಬ್ರಾಡ್‍ಗೇಜ್ ಮಾರ್ಗದಲ್ಲಿ ಮಾನವ ರಹಿತ ಕ್ರಾಸಿಂಗ್ ತೆಗೆದು ಹಾಕಲಾಗಿದ್ದು ಈಗ ಮಾನವ ಸಹಿತ ಕ್ರಾಸಿಂಗ್ ಇದೆ.

    3. ಪೂರ್ವ ರಾಜ್ಯಗಳಲ್ಲಿ ರೈಲ್ವೆ ವಿಸ್ತಾರ ಹೆಚ್ಚಾಗುತ್ತಿದೆ. ಮಿಜೋರಾಂ, ತ್ರಿಪುರಾ ಮತ್ತು ಮೇಘಾಲಯಗಳಲ್ಲಿ ಮೊದಲ ಬಾರಿಗೆ ರೈಲ್ವೆ ಸೇವೆಯನ್ನು ವಿಸ್ತರಿಸಲಾಗುತ್ತಿದೆ.

    4. ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ವಂದೇ ಭಾರತ್ ಹೆಸರಿನ ಹೈ ಸ್ಪೀಡ್ ರೈಲು ನಿರ್ಮಿಸಲಾಗಿದ್ದು, ವಿದೇಶಿ ರೈಲುಗಳ ಅನುಭವವನ್ನು ಪ್ರಯಾಣಿಕರಿಗೆ ನೀಡಲಿದೆ. ಈ ಯೋಜನೆಯಿಂದ ಉದ್ಯೋಗ ಸೃಷ್ಟಿಯಾಗಲಿದೆ. ಇದರ ಹೊರತಾಗಿ ಟಿಕೆಟ್ ದರ ಹೆಚ್ಚಳ ಸೇರಿದಂತೆ ಸರ್ಕಾರ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಜ.31 ರಿಂದ ಫೆ.13ರವರೆಗೆ ಬಜೆಟ್ ಅಧಿವೇಶನ – ಏನಿದು ಮಧ್ಯಂತರ ಬಜೆಟ್?

    ಜ.31 ರಿಂದ ಫೆ.13ರವರೆಗೆ ಬಜೆಟ್ ಅಧಿವೇಶನ – ಏನಿದು ಮಧ್ಯಂತರ ಬಜೆಟ್?

    ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭಗೊಂಡು ಫೆಬ್ರವರಿ 13ರ ವರೆಗೆ ನಡೆಯಲಿದ್ದು, ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ.

    ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಪಿಎ) ಸಭೆಯಲ್ಲಿ ಬಜೆಟ್ ಅಧಿವೇಶನದ ಬಗ್ಗೆ ದಿನಾಂಕ ನಿಗದಿ ಸಂಬಂಧ ಚರ್ಚೆ ನಡೆಸಲಾಯಿತು.

    ಪಂಚರಾಜ್ಯಗಳ ಚುನಾವಣೆಯಲ್ಲಿ ಪ್ರಮುಖ ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಹೀಗಾಗಿ ಜನರನ್ನು ಸೆಳೆದು ಎರಡನೇ ಬಾರಿ ಅಧಿಕಾರಕ್ಕೆ ಏರುವ ಕನಸು ಕಾಣುತ್ತಿರುವ ಮೋದಿ ಸರ್ಕಾರಕ್ಕೆ ಸಿಗುವ ಕೊನೆಯ ಅವಕಾಶ ಇದಾಗಿದ್ದು, ಎಲ್ಲರ ಕಣ್ಣು ಈಗ ಮಧ್ಯಂತರ ಬಜೆಟ್ ಮೇಲೆ ಬಿದ್ದಿದೆ.

    ಯಾಕೆ ಮಧ್ಯಂತರ ಬಜೆಟ್?
    ಹಾಲಿ ಇರುವ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಕಾಲಾವಕಾಶದ ಕೊರತೆ ಇದ್ದರೆ ಅಥವಾ ಸಾರ್ವತ್ರಿಕ ಚುನಾವಣೆ ಹತ್ತಿರ ಬಂದಾಗ ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ. ಹೊಸದಾಗಿ ಚುನಾಯಿತಗೊಂಡ ಸರ್ಕಾರ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತದೆ. ಇದನ್ನೂ ಓದಿ: ಬಜೆಟ್ ಮಂಡನೆ ಆಗುವುದು ಹೇಗೆ? ಅಧಿಕಾರಿಗಳು ರಹಸ್ಯ ಹೇಗೆ ಕಾಪಾಡುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ

    ಲೇಖಾನುದಾನ ಎಂದರೇನು?
    ಭಾರತದಲ್ಲಿ ಏಪ್ರಿಲ್ 1 ರಂದು ಆರ್ಥಿಕ ವರ್ಷ ಆರಂಭಗೊಂಡರೆ ಮಾರ್ಚ್ 31ರಂದು ಕೊನೆಯಾಗುತ್ತದೆ. ಆರ್ಥಿಕ ವರ್ಷದ ಕೊನೆ ದಿನವಾದ ಮಾರ್ಚ್ 31ರ ಅವಧಿಗೆ ಅನ್ವಯವಾಗುವಂತೆ ಪ್ರತಿ ವರ್ಷ ಆಯವ್ಯಯಕ್ಕೆ ಸಂಸತ್ತು ಅನುಮೋದನೆ ನೀಡುತ್ತದೆ. ಒಂದು ವೇಳೆ ಆರ್ಥಿಕ ವರ್ಷ ಮುಕ್ತಾಯವಾಗುವುದರೊಳಗೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸರ್ಕಾರಕ್ಕೆ ಸಾಧ್ಯ ಆಗದೇ ಇದ್ದರೆ ಹೊಸ ಸರ್ಕಾರ ಬಜೆಟ್ ಮಂಡಿಸುವ ತನಕದ ಅವಧಿಯ ವೆಚ್ಚಗಳಿಗೆ ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ. ಈ ಕಾರಣಕ್ಕಾಗಿ ಮಧ್ಯಂತರ ಬಜೆಟ್ ಮಂಡಿಸಿ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯಲಾಗುತ್ತದೆ.

    ಪೂರ್ಣ ಪ್ರಮಾಣದ ಬಜೆಟ್ ಮಂಡನೆಯ ತನಕದ ಆಡಳಿತಾತ್ಮಕ ಖರ್ಚು ವೆಚ್ಚಗಳಿಗೆ ಲೇಖಾನುದಾನದಿಂದ ಅನುಕೂಲವಾಗುತ್ತದೆ. ಮೂರರಿಂದ ನಾಲ್ಕು ತಿಂಗಳಿಗೆ ಎಷ್ಟು ಖರ್ಚಾಗುತ್ತದೋ ಅಷ್ಟು ವೆಚ್ಚವನ್ನು ಮಾತ್ರ ಸರ್ಕಾರ ಪರಿಗಣಿಸಿ ಲೇಖಾನುದಾನಕ್ಕೆ ಅನುಮತಿ ಪಡೆಯುತ್ತದೆ. 2014ರ ಫೆಬ್ರವರಿಯಲ್ಲಿ ಪಿ. ಚಿದಂಬರಂ ಮಧ್ಯಂತರ ಬಜೆಟ್ ಮಂಡಿಸಿದ್ದರೆ, 2014ರ ಜುಲೈನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದರು.