Tag: Insurance Bond

  • ಶಾಸಕ ಗೌರಿಶಂಕರ್‌ಗೆ ಮುಳುವಾಗುತ್ತಾ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಕೇಸ್‌?

    ಶಾಸಕ ಗೌರಿಶಂಕರ್‌ಗೆ ಮುಳುವಾಗುತ್ತಾ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಕೇಸ್‌?

    – ತುಮಕೂರು ಗ್ರಾಮಾಂತರ ಜೆಡಿಎಸ್‌ ಶಾಸಕ ಗೌರಿಶಂಕರ್‌ಗೆ ಸಂಕಷ್ಟ
    – ಖುದ್ದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್‌ ಸಮನ್ಸ್‌

    ಬೆಂಗಳೂರು: ನಕಲಿ ವಿಮಾ ಬಾಂಡ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌ಗೆ ಸಂಕಷ್ಟ ಎದುರಾಗಿದೆ.

    ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗೌರಿಶಂಕರ್‌ ಅವರಿಗೆ ಅಕ್ಟೋಬರ್ 22 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ. ಈ ಮೂಲಕ ಶಾಸಕ ಗೌರಿ ಶಂಕರ್ ವಿರುದ್ಧದ ಹೋರಾಟ ತೀವ್ರ ಕುತೂಹಲ ಮೂಡಿಸಿದೆ.

    ಏನಿದು ಪ್ರಕರಣ?
    ಗೌರಿ ಶಂಕರ್‌ 2018ರ ವಿಧಾನ ಸಭಾ ಚುನಾವಣೆ ವೇಳೆ ಸರ್ಕಾರಿ ಶಾಲಾ ಮಕ್ಕಳ ಹೆಸರಲ್ಲಿ ವಿಮಾ ಬಾಂಡ್ ಹಂಚಿಕೆ ಮಾಡಿದ್ದರು. ಚುನಾವಣೆಯಲ್ಲಿ ಪೋಷಕರ ಮತಗಳನ್ನು ಪಡೆಯುವ ಉದ್ದೇಶದಿಂದ ಮಕ್ಕಳಿಗೆ ವಿಮಾ ಪಾಲಿಸಿಯ ನಕಲಿ ಬಾಂಡುಗಳನ್ನು ವಿತರಿಸಲಾಗಿದೆ ಎಂದು ರಮೇಶ್‌ ಬೆಟ್ಟಯ್ಯ ಆರೋಪಿಸಿದ್ದರು. ಅಲ್ಲದೆ, ಈ ಸಂಬಂಧ ತನಿಖೆ ನಡೆಸುವಂತೆ ಮುಖ್ಯ ಚುನಾವಣಾ ಅಧಿಕಾರಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಇದನ್ನೂ ಓದಿ: ವಿಮಾನದ ಇಂಧನಕ್ಕಿಂತಲೂ ದುಬಾರಿ ಆಯ್ತು ಪೆಟ್ರೋಲ್‌ ಬೆಲೆ

    ರಮೇಶ್‌ ಅವರ ಆರೋಪದ ಅಡಿಯಲ್ಲಿ ತುಮಕೂರು ಗ್ರಾಮಾಂತರದ ಪೊಲೀಸ್‌ ಠಾಣೆಯಲ್ಲಿ ಐಆರ್‌ಡಿಎಐ ಕಾಯ್ದೆಯಡಿ ಶಾಸಕ ಡಿ.ಸಿ. ಗೌರಿಶಂಕರ್‌, ದಿ.ನ್ಯೂ ಇಂಡಿಯಾ ಇನ್ಸೂರೆನ್ಸ್‌ ಕಂಪನಿಯ ವ್ಯವಸ್ಥಾಪಕ ಮತ್ತು ಅಧಿಕಾರಿಗಳು ಸೇರಿದಂತೆ, ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ ಸಂಸ್ಥೆ ಮತ್ತು ಪದಾಧಿಕಾರಿಗಳು, ಒನ್‌ ರೂಪಿ ಚಾರಿಟೆಬಲ್‌ ಟ್ರಸ್ಟ್‌ನ ಪದಾಧಿಕಾರಿ ಹಾಗೂ ಅಸಿಸ್ಟೈನ್ಸ್‌ ಕಂಪನಿ ಅಧಿಕಾರಿಗಳ ಮೇಲೆ 2020ರ ಜುಲೈನಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಪ್ರಕರಣ ರದ್ದು ಮಾಡುವಂತೆ ಗೌರಿಶಂಕರ್‌ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಆದರೆ ಕೋರ್ಟ್‌ಗಳು ಪ್ರಕರಣದ ರದ್ದು ಮಾಡಲು ನಿರಾಕರಿಸಿದ್ದವು. ಪ್ರಕರಣದ ವಿಚಾರಣೆ ನಡೆಸಿದ ಸಿಐಡಿ ಗೌರಿಶಂಕರ್, ಕಿಶೋರ್ ವರದಾಚಾರ್, ಗೌರಮ್ಮ ಹಾಗೂ ಆನಂತು ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.

    16,386 ವಿದ್ಯಾರ್ಥಿಗಳಿಗೆ ನಕಲಿ ಆರೋಗ್ಯ ವಿಮೆಯ ಬಾಂಡ್ ಹಂಚಿಕೆ ಮಾಡಲಾಗಿದೆ. ಚೆನ್ನಿಗಪ್ಪ ಅಧ್ಯಕ್ಷರಾಗಿದ್ದ ಮಾರುತಿ ಸೇವಾ ಟ್ರಸ್ಟ್‌ನಿಂದ ನ್ಯೂ ಇಂಡಿಯ ಇನ್ಶುರೆನ್ಸ್‌ ಕಂಪನಿ ಮೂಲಕ ಮೆಡಿ ಅಸಿಸ್ಟ್ ಬಾಂಡ್ ಹಂಚಿಕೆ ಮಾಡಲಾಗಿದೆ. ವಿಮಾ ಕಾರ್ಡ್ ಜೊತೆಗೆ ಜೆಡಿಎಸ್ ನಾಯಕರ ಪೋಟೋ ಇರುವ ದಾಖಲೆಗಳ ಹಂಚಲಾಗಿದೆ. ತನಿಖೆಯ ವೇಳೆ ಅಕ್ರಮ ಎಸಗಿರುವುದು ಪತ್ತೆಯಾಗಿದೆ ಎಂದು ಸಿಐಡಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು.