ಬಳ್ಳಾರಿ: ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಸಚಿವರೊಬ್ಬರು ಫೋನ್ ರಿಸೀವ್ ಮಾಡಲಿಲ್ಲ ಅಂತಾ ಡಿವೈಎಸ್ ಪಿ ಅನುಪಮಾ ಶೆಣೈರನ್ನ ಎತ್ತಂಗಡಿ ಮಾಡಿದ ಪ್ರಕರಣ ಇನ್ನೂ ರಾಜ್ಯದ ಜನರ ಮನಸ್ಸಿನಿಂದ ಮಾಸಿಲ್ಲ. ನಾನು ಡಿವೈಎಸ್ಪಿ ಎತ್ತಂಗಡಿ ಮಾಡೇ ಇಲ್ಲಾ ಅಂತಾ ವಾದಿಸಿ ಕೊನೆಗೆ ಸಿಕ್ಕಿಕೊಂಡಿದ್ದ ಮಾಜಿ ಮಂತ್ರಿಗಳು ಇದೀಗ ಮತ್ತೊಂದು ಕಿತಾಪತಿ ಮಾಡಿದ್ದಾರೆ.
ಮಾಜಿ ಮಂತ್ರಿ ಮತ್ತು ಹಾಲಿ ಶಾಸಕ ಪಿಟಿ ಪರಮೇಶ್ವರ ನಾಯ್ಕ್, ಚುನಾವಣೆಯಲ್ಲಿ ಅಧಿಕಾರಿಯೊಬ್ಬರ ಸಹೋದರ ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಅಂತಾ ಜೆಸ್ಕಾ ಇಲಾಖೆಯ ಎಇಇ (ಅಸಿಸ್ಟೆಂಟ್ ಎಜ್ಯೂಕ್ಯೂಟಿವ್ ಎಂಜಿನಿಯರ್) ಗೆ ತುಂಬಿದ ಸಭೆಯಲ್ಲಿ ಎಲ್ಲರೆದುರೆಗೆ ಅವಮಾನ ಮಾಡಿ ಮನೆಗೆ ಕಳುಹಿಸಿದ್ದಾರೆ.
ಹೂವಿನಹಡಗಲಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಜೆಸ್ಕಾ ಎಇಇ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸ ಮಂತ್ರೋಂಡಿಯವರ ಸಹೋದರರೊಬ್ಬರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಓದು ಗಂಗಪ್ಪ ಪರ ಕೆಲಸ ಮಾಡಿದ್ದರು. ಇದನ್ನೆ ಅಸ್ತ್ರವಾಗಿ ಮಾಡಿಕೊಂಡ ಪರಮೇಶ್ವರ ನಾಯ್ಕ್ ಎಇಇ ಶ್ರೀನಿವಾಸರನ್ನ ನೀವೂ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿಲ್ಲವೆಂದು ತುಂಬಿದ ಸಭೆಯಲ್ಲಿ ಅವಮಾನ ಮಾಡಿದ್ದಾರೆ. ಅಲ್ಲದೇ ನೀವೂ ಇಲ್ಲಿಂದ ಹೋಗಿಬಿಡಿ ಇಲ್ಲದಿದ್ದರೇ ನಿಮ್ಮ ಮೇಲೆ ನಾನೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮಾಡುವೆ ಅಂತಾ ಧಮ್ಕಿ ಹಾಕಿದ್ದಾರೆ.
ಹೀಗಾಗಿ ಶಾಸಕರ ಸೇಡಿನ ರಾಜಕಾರಣಕ್ಕೆ ಮನನೊಂದ ಜೆಸ್ಕಾನ ಎಇಇ ಶ್ರೀನಿವಾಸರು ದೀರ್ಘ ರಜೆ ಹಾಕಿ ಮನೆಗೆ ಹೋಗಿದ್ದಾರೆ. ಅಲ್ಲದೇ ಈ ಅವಕಾಶವನ್ನೆ ಬಳಸಿಕೊಂಡ ಪರಮೇಶ್ವರ ನಾಯ್ಕ್ ಅದೇ ಜೆಸ್ಕಾಗೆ ತಮ್ಮ ಆಪ್ತರಾದ ಹಡಗಲಿ ಮೂಲದ ಮೋಟ್ಲಾ ನಾಯ್ಕ್ ಅವರನ್ನು ಪೋಸ್ಟಿಂಗ್ ಸಹ ಮಾಡಿಸಿಕೊಂಡು ಬಂದಿದ್ದಾರೆ. ತಮ್ಮ ವಿರುದ್ಧ ಕೆಲಸ ಮಾಡಿದವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿರುವ ಪರಮೇಶ್ವರ ನಾಯ್ಕ್ ರ ವರ್ತನೆಯಿಂದ ಮತ್ತೊಬ್ಬ ಪ್ರಾಮಾಣಿಕ ಅಧಿಕಾರಿ ಮನನೊಂದು ಮನೆಗೆ ಹೋಗಿದ್ದಾರೆ.
ಅಷ್ಟೇ ಅಲ್ಲದೇ ತಮ್ಮಗಾದ ಅವಮಾನವನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಈಗಾಗಲೇ ಹಲವಾರು ಅಧಿಕಾರಿಗಳಿಗೆ ಕಿರುಕುಳ ನೀಡಿರುವ ಪರಮೇಶ್ವರ ನಾಯ್ಕ್ ಇದೀಗ ಸಿಎಂ ಕುಮಾರಸ್ವಾಮಿಯವರ ಇಲಾಖೆಯ ಅಧಿಕಾರಿಗೆ ಅವಮಾನ ಮಾಡಿ ಮನೆಗೆ ಕಳುಹಿಸಿರುವುದರಿಂದ ಸಿಎಂ ಕುಮಾರಸ್ವಾಮಿ ತಮ್ಮ ಇಲಾಖೆಯ ಅಧಿಕಾರಿಗಾದ ಅವಮಾನಕ್ಕೆ ನ್ಯಾಯ ಕೊಡಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
















