Tag: INS Kadamba

  • ಫಸ್ಟ್‌ ಟೈಂ ಕಾರವಾರಕ್ಕೆ ಬಂತು ಐಎನ್‌ಎಸ್‌ ವಿಕ್ರಾಂತ್‌ – ನಿಲುಗಡೆಯಾಗುತ್ತಿರುವುದು ಯಾಕೆ?

    ಫಸ್ಟ್‌ ಟೈಂ ಕಾರವಾರಕ್ಕೆ ಬಂತು ಐಎನ್‌ಎಸ್‌ ವಿಕ್ರಾಂತ್‌ – ನಿಲುಗಡೆಯಾಗುತ್ತಿರುವುದು ಯಾಕೆ?

    ಕಾರವಾರ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಎಂದೇ ಹೆಗ್ಗುರುತಿಗೆ ಪಾತ್ರವಾಗಿರುವ ಐಎನ್ಎಸ್ ವಿಕ್ರಾಂತ್ (INS Vikrant) ಕದಂಬ ನೌಕಾನೆಲೆಯ ಜಟ್ಟಿಗೆ (ಬರ್ತಿಂಗ್ ಜಾಗ) ಮೊದಲ ಬಾರಿ ಆಗಮಿಸಿದೆ.

    ಈ ಹಿಂದೆ ವಿಕ್ರಾಂತ್ ಹಡಗು ಕೊಚ್ಚಿಯಲ್ಲಿಯೇ ಇದ್ದು ನಂತರ ಅರಬ್ಬಿ ಸಮುದ್ರದಲ್ಲಿ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಿತ್ತು. ಇದೀಗ ಕಾರವಾರದ ಕದಂಬ ನೌಕಾ ನೆಲೆಯಲ್ಲಿ (INS Kadamba Naval Base) ಯಶಸ್ವಿಯಾಗಿ ನಿಲುಗಡೆಯಾಗಿರುವ ವಿಕ್ರಾಂತ್‌ ಒಂದು ತಿಂಗಳ ಕಾಲ ಇಲ್ಲಿಯೇ ಇರಲಿದೆ. ನಂತರ ಇಂಧನ, ಆಹಾರ ತುಂಬಿಕೊಂಡು ಪೂರ್ವ ಹಾಗೂ ಪಶ್ಚಿಮ ಕರಾವಳಿಯಲ್ಲಿ ಕಾರ್ಯಾಚರಣೆ ನಡೆಸಲಿದೆ.

    ಏಷ್ಯಾದ ಅತೀ ದೊಡ್ಡ ನೌಕಾ ನೆಲೆ ಎಂದೇ ಪ್ರಸಿದ್ಧಿ ಪಡೆದಿರುವ ಕದಂಬದಲ್ಲಿ ಈಗಾಗಲೇ 40 ಯುದ್ದ ಹಡಗುಗಳು, ಜಲಾಂತರ್ಗಾಮಿ ನೌಕೆ ನಿಲ್ಲುವಷ್ಟು ವ್ಯವಸ್ಥೆ ಕಲ್ಪಿಸಲಾಗಿದೆ. ದೇಶದ ಮೊದಲ ಹಡಗುಗಳನ್ನು ರಿಪೇರಿ ಮಾಡಲು ಸಮುದ್ರದಿಂದಲೇ ಮೇಲೆತ್ತಿ ದಡಕ್ಕೆ ತರುವ  ʼಟ್ರಾಲಿ ಶಿಪ್ಟಿಂಗ್ ಸಿಸ್ಟಮ್ʼತಂತ್ರಜ್ಞಾನ ಇಲ್ಲಿರುವುದು ವಿಶೇಷ. ಇದನ್ನೂ ಓದಿ: MIG-21 ಫೈಟರ್‌ ಜೆಟ್‌ ಹಾರಾಟ ಬಂದ್ – IAF ಮಹತ್ವದ ನಿರ್ಧಾರ

    ಸೀ ಬರ್ಡ್‌ ಸ್ಟೇಜ್ -1 ರಲ್ಲಿ ಮೂರು ಜಟ್ಟಿಗಳು ನಿರ್ಮಾಣಗೊಂಡಿದ್ದವು. ಆದರೆ ಸ್ಟೇಜ್-2 ನಲ್ಲಿ ಮತ್ತೆ ಮೂರು ಜಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು ಎರಡು ಜಟ್ಟಿಯಲ್ಲಿ ಏಷ್ಯಾದ ಅತೀ ದೊಡ್ಡ ಯುದ್ಧ ಹಡಗು ನಿಲುಗಡೆ ಮಾಡಬಹುದಾಗಿದೆ. ಈ ಕಾರಣಕ್ಕೆ ವಿಕ್ರಮಾದಿತ್ಯ ಹಾಗೂ ವಿಕ್ರಾಂತ್ ಯುದ್ದ ವಿಮಾನ ವಾಹಕಗಳಿಗೆ ಇಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ.

    ಐಎನ್ಎಸ್ ವಿಕ್ರಾಂತ್ ವಿಶೇಷತೆ ಏನು?
    ಕೊಚ್ಚಿಯ ಹಡಗು ಕಾರ್ಖಾನೆಯಲ್ಲಿ 2000 ತಂತ್ರಜ್ಞರು, 13 ವರ್ಷಗಳಿಂದ ಕೆಲಸ ಮಾಡಿ ನಿರ್ಮಾಣ ಮಾಡಿದ ಯುದ್ಧನೌಕೆ ಇದಾಗಿದ್ದು, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ (PM Narendra Modi) ಲೋಕಾರ್ಪಣೆ ಮಾಡಿದ್ದರು.

    40 ಸಾವಿರ ಟನ್‌ ತೂಕದ 23 ಸಾವಿರ ಕೋಟಿ ರೂ. ಹಣ ವ್ಯಯಿಸಿ ಯುದ್ಧವಿಮಾನ ವಾಹಕ ನೌಕೆಯನ್ನು ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿಸುವ ಮೂಲಕ ವಿಶ್ವದ 6 ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ. ಈ ಹಿಂದೆ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್‌, ಇಂಗ್ಲೆಂಡ್‌, ಇಟಲಿ ಮಾತ್ರವೇ ಈ ಸಾಧನೆಗೈದಿದ್ದವು. ಇದನ್ನೂ ಓದಿ: ವೇದಿಕೆಯಲ್ಲೇ ಎಂ.ಬಿ ಪಾಟೀಲ್‌ಗೆ ಗದರಿದ ಡಿಕೆಶಿ – ಮುಜುಗರಕ್ಕೆ ಒಳಗಾಗಿ ಸುಮ್ಮನೆ ಕುಳಿತ MBP

    ಉದ್ದ 262 ಮೀಟರ್‌, ಅಗಲ 62 ಮೀಟರ್‌, ಎತ್ತರ- 59 ಮೀಟರ್‌ ಹೊಂದಿರುವ ಯುದ್ಧ ನೌಕೆಯಲ್ಲಿ 18 ಮಹಡಿಗಳಿದ್ದು 2,400 ವಿಭಾಗಗಳು ಇವೆ. ಒಂದೇ ಬಾರಿಗೆ 1600 ನೌಕಾ ಸಿಬ್ಬಂದಿಯನ್ನು ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ನಿಯೋಜಿಸಬಹುದಾಗಿದೆ.

    ಮಿಗ್‌- 29 ಕೆ, ಕಮೋವ್‌- 31 ಹೆಲಿಕಾಪ್ಟರ್‌ಗಳು, ಅಮೆರಿಕ ನಿರ್ಮಿತ ಎಫ್‌-18ಎ ಸೂಪರ್‌ ಹಾರ್ನೆಟ್‌, ಫ್ರಾನ್ಸ್‌ ನಿರ್ಮಿತ ರಫೇಲ್‌ ಯುದ್ಧ ವಿಮಾನಗಳು, ಫೈಟರ್‌ ಜೆಟ್‌ ಎಂಎಚ್‌- 60 ರೋಮಿಯೊ ಮಲ್ಟಿರೋಲ್‌ ಹೆಲಿಕಾಪ್ಟರ್‌ಗಳು,  32 ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಚಿಮ್ಮುವ ವಾಯು ಕ್ಷಿಪಣಿಗಳು ಮತ್ತು ಎಕೆ- 630 ಫಿರಂಗಿ ಗನ್‌ಗಳೂ ವಿಕ್ರಾಂತ್‌ ಬತ್ತಳಿಕೆಯಲ್ಲಿದೆ.

    ಇದರ ರನ್‌ ವೇ 262 ಮೀಟರ್‌ಗಳಷ್ಟು ಉದ್ದವಿದೆ. ಬರೋಬ್ಬರಿ 2 ಫುಟ್ಬಾಲ್‌ ಮೈದಾನದಷ್ಟು ದೊಡ್ಡದಾಗಿದೆ.  2 ಒಲಿಂಪಿಕ್ಸ್‌ ಈಜುಕೊಳಗಳನ್ನು ನಿರ್ಮಿಸಬಹುದಾದಷ್ಟು ಉದ್ದವಾದ ರನ್‌ವೇ ಹೊಂದಿದೆ.

    2,500 ಕಿ.ಮೀ. ಉದ್ದದ ವಿದ್ಯುತ್‌ ಕೇಬಲ್‌ ವಿಕ್ರಾಂತ್‌ನ ಒಡಲೊಳಗಿದೆ. ಇದರ ಅಡುಗೆಮನೆಯಲ್ಲಿ ಒಂದೇ ದಿನದಲ್ಲಿ 4,800 ಜನರಿಗೆ ಅಡುಗೆ ಸಿದ್ಧಪಡಿಸಬಹುದು. 1 ಗಂಟೆಯಲ್ಲಿ 3 ಸಾವಿರ ಚಪಾತಿ ಮಾಡುವ, ಇಡ್ಲಿ ಬೇಯಿಸುವ ಅತ್ಯಾಧುನಿಕ ಯಂತ್ರಳಿವೆ.

    ಈ ನೌಕೆ ಗಂಟೆಗೆ 33 ಕಿ.ಮೀ. ವೇಗದಲ್ಲಿ ಚಲಿಸಿ, ಒಂದೇ ಬಾರಿಗೆ 7,500 ನಾಟಿಕಲ್‌ ಮೈಲು ಕ್ರಮಿಸಬಲ್ಲದು. 250 ಟ್ಯಾಂಕರ್‌ಗಳಷ್ಟು ಇಂಧನ ಇದರಲ್ಲಿರುತ್ತದೆ. ಸಿಬ್ಬಂದಿ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಲು 16 ಬೆಡ್‌ಗಳ ಆಸ್ಪತ್ರೆ ಕೂಡ ಇದೆ.

    2025ಕ್ಕೆ ದೇಶಕ್ಕೆ ಸಮರ್ಪಣೆ
    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿ ಕದಂಬ ನೌಕಾನೆಲೆಯು ಏಷ್ಯಾದಲ್ಲೇ ಅತೀ ದೊಡ್ಡ ನೌಕಾನೆಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಭೂ ಪ್ರದೇಶ ವೈರಿಗಳಿಗೆ ಚಿತ್ತ ಕಾಣದಂತೆ ಮಾಡಿ ಶತ್ರುಗಳ ಮೇಲೆ ಮುಗಿಬೀಳಲು ಸುವ್ಯವಸ್ಥಿತ ನೌಕಾ ತಾಣವಾಗಿ ಮಾರ್ಪಡುತಿದ್ದು ಇದೀಗ ನೌಕಾ ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿದೆ. ಒಂದು ಲಕ್ಷ ಸಿಬ್ಬಂದಿಗೆ ವಸತಿ ನಿಲಯ ,ಕಚೇರಿ ಸಂಕೀರ್ಣ, ರಿಪೇರಿ ಯಾರ್ಡ್‌ಗಳು ಈಗಾಗಲೇ ನಿರ್ಮಾಣದ ಅಂತಿಮ ಹಂತ ತಲುಪಿದ್ದು ನೌಕಾ ದಳದ ಮಾಹಿತಿ ಪ್ರಕಾರ 2025ರ ವೇಳೆಗೆ ದೇಶಕ್ಕೆ ಸಮರ್ಪಣೆಗೊಳ್ಳಲಿದೆ.

  • ಕದಂಬ ನೌಕಾನೆಲೆಯಿಂದ 15 ಲಕ್ಷ ರೂ. ಸಾಗಿಸುತ್ತಿದ್ದ ಅಧಿಕಾರಿ ವಶಕ್ಕೆ

    ಕದಂಬ ನೌಕಾನೆಲೆಯಿಂದ 15 ಲಕ್ಷ ರೂ. ಸಾಗಿಸುತ್ತಿದ್ದ ಅಧಿಕಾರಿ ವಶಕ್ಕೆ

    ಕಾರವಾರ: ಸೂಟ್‍ಕೇಸ್‍ನಲ್ಲಿ 15 ಲಕ್ಷ ರೂ.ಗೂ ಅಧಿಕ ಹಣ ಸಾಗಿಸುತ್ತಿದ್ದ ಕದಂಬ ನೌಕಾನೆಲೆಯ ಅಧಿಕಾರಿಯನ್ನು ನೌಕಾನೆಲೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ನೌಕಾನೆಲೆಯಲ್ಲಿರುವ ಮಿಲಿಟರಿ ಎಂಜಿನಿಯರಿಂಗ್ ಸರ್ವಿಸ್‍ನ ಅಧಿಕಾರಿಯೋರ್ವ ನೇವಲ್ ಬೇಸ್‍ನಲ್ಲೇ 15 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ಸೂಟ್‍ಕೇಸ್‍ನಲ್ಲಿ ಬೇಸ್‍ನ ಹೊರಗಡೆ ಕೊಂಡೊಯ್ಯುತ್ತಿದ್ದ. ಈ ವೇಳೆ ಸೂಟ್‍ಕೇಸ್ ಜತೆ ಹೊರ ಬರುತ್ತಿದ್ದ ಎಂಇಎಸ್ ಅಧಿಕಾರಿಯನ್ನು ನೇವಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಎಂಇಎಸ್ ಅಧಿಕಾರಿಯನ್ನು ಹಿಡಿದು ನೇವಲ್ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಭಾರೀ ಮೊತ್ತದ ಹಣ ಎಲ್ಲಿಂದ ಬಂತು? ಎಲ್ಲಿಗೆ ಸಾಗಾಟವಾಗುತ್ತಿದೆ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ಹಿಂದೆ ಅಧಿಕಾರಿಯೋರ್ವರು ಲಂಚ ಪಡೆದ ಪ್ರಕರಣ, ಬಳಿಕ ಸಿಬ್ಬಂದಿ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪ್ರಸ್ತುತ ಎಂಇಎಸ್ ಅಧಿಕಾರಿಯಲ್ಲಿ ದೊರೆತಿರುವ ಹಣ ಹಲವು ಅನುಮಾನಗಳಿಗೆ ಎಡೆಮಾಡಿದ್ದು, ವಿಚಾರಣೆಯ ಬಳಿಕವೇ ಸತ್ಯಾಂಶ ತಿಳಿದುಬರಬೇಕಷ್ಟೇ ಎನ್ನಲಾಗಿದೆ.

  • ಭಾರತೀಯ ನೌಕಾದಳಕ್ಕೆ ಹೊಸ ಕ್ಷಿಪ್ರ ರಕ್ಷಣಾ ನೌಕೆ ಸಮರ್ಪಣೆ

    ಭಾರತೀಯ ನೌಕಾದಳಕ್ಕೆ ಹೊಸ ಕ್ಷಿಪ್ರ ರಕ್ಷಣಾ ನೌಕೆ ಸಮರ್ಪಣೆ

    ಕಾರವಾರ: ಪಶ್ಚಿಮ ಕರಾವಳಿಯ ಮುಂಬೈನಲ್ಲಿ ಸಮುದ್ರ ಮೂಲಕ ಉಗ್ರಗಾಮಿಗಳು ತಾಜ್ ಹೋಟಲ್ ಮೇಲೆ ಆಕ್ರಮಣ ಮಾಡಿದ ನಂತರ ನೌಕಾದಳದವರು ಎಚ್ಚೆತ್ತುಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೆ ಕೇಂದ್ರ ಗುಪ್ತದಳ ಕಾರವಾರ ಕದಂಬ ನೌಕಾ ನೆಲೆಗೆ ಉಗ್ರಗಾಮಿಗಳು ಟಾರ್ಗೆಟ್ ಮಾಡಿರುವ ಕುರಿತು ವರದಿ ನೀಡಿದ ನಂತರ ಕ್ಷಿಪ್ರ ಕಾರ್ಯಾಚರಣೆಗೆ ಸಜ್ಜಾಗಿದ್ದು ಇಂದು ಹೊಸ ಕ್ಷಿಪ್ರ ಕಾರ್ಯಾಚರಣೆಗಾಗಿ ನೌಕೆಯೊಂದು ಸೇರ್ಪಡೆಯಾಗಿದೆ.

    ಕಾರವಾರ ತಾಲೂಕಿನ ಅರಗ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಕರ್ನಾಟಕದ ನೌಕಾದಳದ ವೈಸ್ ಅಡ್ಮಿರಲ್ ಗಿರೀಶ್ ಲೂಥ್ರಾ ಅವರು ಹೊಸ ಕ್ಷಿಪ್ರ ರಕ್ಷಣಾ ನೌಕೆ `ಐಎನ್‍ಎಸ್ ತಿಲ್ಲಾಂಚಾಂಗ್’ ಸಮರ್ಪಣೆ ಮಾಡಿದರು.

    ಏನಿದರ ವಿಶೇಷತೆ?:
    ಅರಬ್ಬಿ ಸಮುದ್ರದ ಕರಾವಳಿಯ ಭಾಗದಲ್ಲಿ ಶತ್ರುಗಳನ್ನ ಹಿಮ್ಮೆಟಿಸಲು ಸಜ್ಜಾಗಿರುವ ಐಎನ್‍ಎಸ್ ತಿಲ್ಲಾಂಚಾಂಗ್ ಕೋಲ್ಕತ್ತಾದ ಗಾರ್ಡನ್ ರೀಚ್ ಹಡಗು ನಿರ್ಮಾಣ ಕೇಂದ್ರದಲ್ಲಿ ನಿರ್ಮಾಣವಾಗಿದೆ. 48.9 ಮೀಟರ್ ಉದ್ದವಿರುವ ಈ ನೌಕೆ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತೆ. ಅಂಡಮಾನ್ ನಿಕೋಬಾರ ಬಳಿ ಇರುವ ತಿಲ್ಲಾಂಚಾಂಗ್ ಎಂಬ ದ್ವೀಪದ ಹೆಸರನ್ನ ಈ ನೌಕೆಗೆ ಇಡಲಾಗಿದೆ.

    ನೌಕೆ ಚಿಕ್ಕದಾಗಿದ್ರೂ 50 ಜನ ಸಿಬ್ಬಂದಿಗಳು ಅರಾಮವಾಗಿ ಕಾರ್ಯನಿರ್ವಹಿಸಬಹುದಾಗಿದೆ. ಒಂದು ಬಾರಿ ಸಮುದ್ರದಲ್ಲಿ ಸಂಚರಿಸಲು ಪ್ರಾರಂಭಿಸಿದ್ರೆ ಒಂದು ವಾರದಷ್ಟು ಕಾಲ ಅಲ್ಲಿಯೇ ಇರುವಷ್ಟು ಸಾಮರ್ಥ್ಯ ಇದಕ್ಕಿದ್ದು ಸುಸಜ್ಜಿತ ಅಡುಗೆ ಮನೆ, ಡೈನಿಂಗ್ ಹಾಲ್, ರೆಸ್ಟ್ ರೂಮ್ ಸೇರಿದಂತೆ ಎರಡು ರಬ್ಬರ್ ಬೋಟ್ ಗಳು ಇದರಲ್ಲಿವೆ.

    ಇನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಲು ಒಳ ಭಾಗದಿಂದ ವೀಕ್ಷಣೆಗಾಗಿ ಸಿ.ಸಿ ಟಿ.ವಿ ಜೊತೆಯಲ್ಲಿ 30 ಎಂ.ಎಂ. ಮೈನ್ ಗನ್, ಸಣ್ಣ ಹಾಗೂ ದೊಡ್ಡ ಮಿಷನ್ ಗನ್‍ಗಳು ಇದರಲ್ಲಿದ್ದು ಕರಾವಳಿ ಭದ್ರತೆಗಳಿಗಲ್ಲದೇ, ಪ್ರಕೃತಿ ವಿಕೋಪ ಮುಂತಾದ ಕಾರ್ಯಗಳಿಗೂ ಈ ನೌಕೆಯನ್ನು ಬಳಸಿಕೊಳ್ಳಬಹುದು. ಈ ಹೊಸ ನೌಕೆಯನ್ನು ಕರ್ನಾಟಕ ನೇವೆಲ್ ಪ್ಲಾಗ್ ಆಫೀಸರ್ ಕಮಾಂಡೆಂಡ್ ನೋಡಿಕೊಳ್ಳಲಿದ್ದು ಇದರ ನೇತೃತ್ವವನ್ನು ಸಿ.ಡಿ.ಆರ್. ಅದಿತ್ ಪಾಟ್ನಾಯಕ್ ವಹಿಸಿದ್ದಾರೆ. ಕಾರವಾರದ ಕದಂಬ ನೌಕಾ ನೆಲೆಯಿಂದಲೇ ಈ ಸ್ಪೀಡ್ ವಾಟರ್ ಜಟ್ ನೌಕೆ ಕಾರ್ಯ ನಿರ್ವಹಿಸಲಿದೆ.