Tag: innovation

  • ಪ್ರಧಾನಿ ಮೋದಿ ಮನಗೆದ್ದ ನಾಸಿಕ್ ರೈತನ ಕೊರೊನಾ ನಿಯಂತ್ರಣ ಕ್ರಮ

    ಪ್ರಧಾನಿ ಮೋದಿ ಮನಗೆದ್ದ ನಾಸಿಕ್ ರೈತನ ಕೊರೊನಾ ನಿಯಂತ್ರಣ ಕ್ರಮ

    – ಕೊರೊನಾ ನಿಯಂತ್ರಣಕ್ಕೆ ಸಂಶೋಧನೆಗಳು ಅಗತ್ಯ
    – ಸೇವಾ ಮನೋಭಾವ ಬೆಳೆಸಿಕೊಳ್ಳಲು ಮೋದಿ ಕರೆ

    ನವದೆಹಲಿ: ಮಹಾರಾಷ್ಟ್ರ ರೈತರೊಬ್ಬರ ಸಂಶೋಧನೆ ಪ್ರಧಾನಿ ನರೇಂದ್ರ ಮೋದಿ ಅವರ ಮನ ಗೆದ್ದಿದೆ. ಈ ವಿಚಾರವನ್ನು ‘ಮನ್ ಕೀ ಬಾತ್’ನಲ್ಲಿ ತಿಳಿಸಿದ್ದಾರೆ. ಜೊತೆಗೆ ಆರ್ಥಿಕ ಚೇತರಿಕೆ, ಕೊರೊನಾ ವಿರುದ್ಧದ ಹೋರಾಟದ ಬಗ್ಗೆ ಮೋದಿ ಮಾತನಾಡಿದ್ದಾರೆ.

    ಕಳೆದ ಬಾರಿ ನಾನು ನಿಮ್ಮೊಂದಿಗೆ ಮನ್ ಕೀ ಬಾತ್‍ನಲ್ಲಿ ಮಾತನಾಡಿದಾಗ, ಪ್ರಯಾಣಿಕರ ರೈಲು, ಬಸ್‍ಗಳು, ವಿಮಾನಯಾನ ಸೇವೆಗಳನ್ನು ಮುಚ್ಚಲಾಗಿತ್ತು. ಆದರೆ ಈ ಬಾರಿ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಶ್ರಮಿಕ್ ವಿಶೇಷ ರೈಲುಗಳು, ಇತರ ವಿಶೇಷ ರೈಲುಗಳು ಮತ್ತು ವಿಮಾನಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪುನರಾರಂಭಗೊಂಡಿವೆ ಎಂದು ತಿಳಿಸಿದರು.

    ಆರ್ಥಿಕತೆಯ ಪ್ರಮುಖ ಭಾಗವು ಈಗ ಸಕ್ರಿಯವಾಗಿದೆ. ಜನರು ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು ಮತ್ತು ಸಾಧ್ಯವಾದಷ್ಟು ಮನೆಯೊಳಗೆ ಉಳಿಯಲು ಪ್ರಯತ್ನಿಸಬೇಕು. ನಾವು ಈಗ ಹೆಚ್ಚು ಜಾಗರೂಕರಾಗಿರಬೇಕಿದೆ. ಎಲ್ಲರ ಬೆಂಬಲವಿದ್ದರೆ ಕೊರೊನಾ ವಿರುದ್ಧ ಹೋರಾಟ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ನನ್ನ ಹೃದಯವನ್ನು ಮುಟ್ಟಿದ ಇನ್ನೊಂದು ವಿಷಯವೆಂದರೆ ಈ ಬಿಕ್ಕಟ್ಟಿನ ಕ್ಷಣದಲ್ಲಿ ಸಂಶೋಧನೆ ನಡೆಸಿರುವುದು. ಹಳ್ಳಿಗಳು ಮತ್ತು ನಗರಗಳಿಂದ, ಸಣ್ಣ ಪ್ರಮಾಣದ ವ್ಯಾಪಾರಿಗಳಿಂದ ಹಿಡಿದು ಸ್ಟಾರ್ಟ್‍ಅಪ್‍ಗಳವರೆಗೆ ಅನೇಕರು ಕೊರೊನಾ ವಿರುದ್ಧ ಹೋರಾಡುವ ಹೊಸ ಮಾರ್ಗಗಳನ್ನು ರೂಪಿಸಿದ್ದಾರೆ. ನಾಸಿಕ್ ರೈತ ರಾಜೇಂದ್ರ ಎಂಬವರು ತಮ್ಮ ಗ್ರಾಮದಲ್ಲಿ ಕೊರೊನಾ ನಿಯಂತ್ರಿಸಲು ತಮ್ಮ ಟ್ರ್ಯಾಕ್ಟರ್ ನಿಂದ ಸ್ಯಾನಿಟೈಜರ್ ಸಿಂಪಡಣೆ ಮಾಡುತ್ತಿದ್ದಾರೆ. ಇಂತಹ ಹೊಸ ಹೊಸ ಸಂಶೋಧನೆಗಳಿಂದ ಕೊರೊನಾ ವಿರುದ್ಧ ಹೋರಾಟಕ್ಕೆ ಸಹಾಯಕವಾಗಲಿದೆ. ಕೊರೊನಾ ವಿರುದ್ಧದ ಹೋರಾಟ ಸುದೀರ್ಘವಾಗಿದೆ ಎಂದು ಹೇಳಿದರು.

    ನಾವು ಇತರ ದೇಶಗಳನ್ನು ನೋಡಿದಾಗ ಭಾರತೀಯರ ಸಾಧನೆ ಎಷ್ಟು ದೊಡ್ಡದಾಗಿದೆ ಎಂದು ನಮಗೆ ಅರ್ಥವಾಗುತ್ತದೆ. ನಮ್ಮ ದೇಶದ ಜನಸಂಖ್ಯೆಯು ಇತರ ದೇಶಗಳಿಗಿಂತ ಹಲವು ಪಟ್ಟು ಹೆಚ್ಚಾಗಿದೆ. ಆದರೂ ಕೊರೊನಾ ವೈರಸ್ ಇತರ ದೇಶಗಳಂತೆ ವೇಗವಾಗಿ ಹರಡಲಿಲ್ಲ ಹಾಗೂ ಸಾವು ಕೂಡ ಹೆಚ್ಚಾಗಲಿಲ್ಲ. ಪ್ರಸ್ತುತ ದಿನಗಳಲ್ಲಿ ಸಾವಿನ ಪ್ರಮಾಣವೂ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.

    ರೈಲ್ವೆ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಕೇಂದ್ರವಾಗಲಿ, ರಾಜ್ಯವಾಗಲಿ, ಸ್ಥಳೀಯ ಸ್ವರಾಜ್ ಸಂಸ್ಥೆಗಳಾಗಲಿ ಎಲ್ಲರೂ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ರೈಲ್ವೆ ನೌಕರರು ಕೊರೊನಾ ವಿರುದ್ಧ ಹೋರಾಟದಲ್ಲಿ ಎಲ್ಲ ರೀತಿ ಸಿದ್ಧರಾಗಿದ್ದಾರೆ. ಅವರು ಕೂಡ ಕೊರೊನಾ ವಾರಿಯರ್ಸ್ ಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಲೂನ್ ನಡೆಸುತ್ತಿರುವ ತಮಿಳುನಾಡಿನ ಸಿ ಮೋಹನ್ ಎಂಬವರು ಮಗಳ ಮದುವೆಗಾಗಿ 5 ಲಕ್ಷ ರೂ. ಕೂಡಿಟ್ಟಿದ್ದರು. ಆದರೆ ಆ ಹಣವನ್ನು ಸಂಕಷ್ಟದಲ್ಲಿರುವ ಜನರಿಗಾಗಿ ನೀಡಿದ್ದಾರೆ. ಪಂಜಾಬ್‍ನ ಪಠಾಣ್‍ಕೋಟ್‍ನ ಅಂಗವಿಕಲ ರಾಜು ಎಂಬವರು ಇತರರ ಸಹಾಯದಿಂದ 3,000ಕ್ಕೂ ಹೆಚ್ಚು ಮಾಸ್ಕ್ ಗಳನ್ನು ತಯಾರಿಸಿದ್ದಾರೆ. ಅವುಗಳನ್ನು ಮಾರಿ 100 ಬಡ ಕುಟುಂಬಗಳಿಗೆ ರೇಷನ್ ವಿತರಿಸಿದ್ದಾರೆ. ಇಂತಹ ಸೇವಾ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ಸೇವಾ ಮನೋಭಾವದಿಂದ ಮಾನಸಿಕ ನೆಮ್ಮದಿ, ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.

    ಭಾರತದ ಪೂರ್ವ ಭಾಗವು ಚಂಡಮಾರುತದಿಂದ ಉಂಟಾಗುವ ನೈಸರ್ಗಿಕ ವಿಪತ್ತನ್ನು ಎದುರಿಸುತ್ತಿದ್ದರೆ ದೇಶದ ಅನೇಕ ಭಾಗಗಳು ಮಿಡತೆಗಳ ದಾಳಿಗೆ ಒಳಗಾಗುತ್ತಿವೆ. ಇದರಿಂದ ಮತ್ತಷ್ಟು ತೊಂದರೆ ಉಂಟಾಗಿದೆ ಎಂದು ಹೇಳಿದರು.

    ನಿಧಾನವಾಗಿ ರೈಲು ಪ್ರಾರಂಭವಾಗಲಿದ್ದು, ದೇಶದ ಆರ್ಥಿಕತೆ ಚಟುವಟಿಕೆ ಚೇತರಿಕೆ ಸಿಗಲಿದೆ. ದೇಶದ ವಿವಿಧ ಪ್ರದೇಶದಲ್ಲಿ ‘ಮೇಕ್ ಇನ್ ಇಂಡಿಯಾ’ ಯಶಸ್ವಿಯಾಗುತ್ತಿದೆ. ಕೊರೊನಾ ಬಿಕ್ಕಟ್ಟು ಮುಕ್ತಾಯದ ವೇಳೆ ಭಾರತದ ಆಮದು ಪ್ರಮಾಣ ಕಡಿಮೆಯಾಗಲಿದ್ದು, ರಫ್ತು ಹೆಚ್ಚಾಗುವ ಸಾಧ್ಯತೆ ಇದೆ. ದೇಶದಲ್ಲಿ ಬಿದಿರಿನಿಂದ ತಯಾರಿಸಿದ ವಸ್ತುಗಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

    ವಿಶ್ವ ಯೋಗ ದಿನವನ್ನು ಮುಂದಿನ ತಿಂಗಳು ಆಚರಿಸಲಾಗುತ್ತದೆ. ಯೋಗದಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಎಲ್ಲವರೂ ಯೋಗಾಸನವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನೀರು ಸಂರಕ್ಷಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೆರೆ, ಇಂಗು ಗುಂಡಿ ನಿರ್ಮಾಣ ನಡೆಯಬೇಕು ಎಂದು ತಿಳಿಸಿದರು.

  • ಬರೆದ ಪದಗಳನ್ನು ಲೆಕ್ಕ ಹಾಕುವ `ಪೆನ್’ ಕಂಡುಹುಡುಕಿದ 3ನೇ ಕ್ಲಾಸಿನ ಬಾಲಕ!

    ಬರೆದ ಪದಗಳನ್ನು ಲೆಕ್ಕ ಹಾಕುವ `ಪೆನ್’ ಕಂಡುಹುಡುಕಿದ 3ನೇ ಕ್ಲಾಸಿನ ಬಾಲಕ!

    ಶ್ರೀನಗರ: ಬರೆಯುತ್ತಿದ್ದಂತೆಯೇ ಪದಗಳನ್ನು ಲೆಕ್ಕ ಹಾಕುವಂತಹ ಅಪರೂಪದ ಪೆನ್ ಒಂದನ್ನು 9 ವರ್ಷದ ಬಾಲಕನೊಬ್ಬ ಕಂಡುಹುಡುಕಿದ್ದಾನೆ.

    ಉತ್ತರ ಕಾಶ್ಮೀರದ ಗುರೇಜ್ ವ್ಯಾಲಿಯ ಪ್ರೊಡಿಗಿ ನಿವಾಸಿ ಮೂರನೇ ತರಗತಿಯಲ್ಲಿ ಓದುತ್ತಿರುವ ಮುಜಾಫರ್ ಅಹಮ್ಮದ್ ಖಾನ್ “ಕೌಂಟಿಂಗ್ ಪೆನ್” ಕಂಡುಹಿಡಿದಿದ್ದಾನೆ.

    ಈ ಪೆನ್ ನ ಹಿಂಭಾಗದಲ್ಲಿ ಕವಚವೊಂದಿದೆ. ಅಲ್ಲದೇ ಸಣ್ಣದಾದ ಎಲ್‍ಸಿಡಿ ಮಾನಿಟರ್ ನ್ನು ಕೂಡ ಪೆನ್ ಗೆ ಅಳವಡಿಸಲಾಗಿದೆ. ಹೀಗಾಗಿ ನಾವು ಬರೆಯುತ್ತಿದ್ದಂತೆಯೇ ಅದು ಅಕ್ಷರಗಳನ್ನು ಲೆಕ್ಕ ಮಾಡುತ್ತದೆ. ಅಲ್ಲದೇ ಇದರ ಇನ್ನೊಂದು ವಿಶೇಷತೆ ಏನೆಂದರೆ ನೀವು ಎಷ್ಟು ಅಕ್ಷರಗಳನ್ನು ಬರೆದಿದ್ದೀರಿ ಅನ್ನೋ ಮೆಸೇಜ್ ನಿಮ್ಮ ಮೊಬೈಲ್ ಗೂ ಬರುತ್ತದೆ ಅಂತ ಬಾಲಕ ತಿಳಿಸಿದ್ದಾನೆ.

    ಪೆನ್ ಕಂಡುಹಿಡಿದಿದ್ದು ಯಾಕೆ?
    ಕಳೆದ ಬಾರಿ ಪರೀಕ್ಷೆಯನ್ನು ನಾನು ಕಡಿಮೆ ಪದಗಳನ್ನು ಬರೆದಿದ್ದರಿಂದ ನನಗೆ ಕಡಿಮೆ ಅಂಕಗಳು ಬಂದಿತ್ತು. ಇದರಿಂದ ನಾವು ಯೋಚನೆ ಮಾಡಲು ಆರಂಭಿಸಿದೆ. ಆ ಕ್ಷಣದಿಂದಲೇ ನನ್ನ ಸಮಯ ಉಳಿಸಿಕೊಳ್ಳಲು ಏನಾದ್ರೂ ಕಂಡುಹಿಡಿಯಬೇಕು ಅನ್ನೋದನ್ನು ಚಿಂತಿಸಿದೆ. ಹೀಗಾಗಿ ಕೊನೆಗೆ ಕೌಂಟಿಂಗ್ ಪೆನ್ ಕಂಡುಹಿಡಿದೆ ಅಂತ ಬಾಲಕ ವಿವರಿಸಿದ್ದಾನೆ.

    ರಾಷ್ಟ್ರಪತಿ ಮೆಚ್ಚುಗೆ:
    ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಯೋಜಿಸಿದ್ದ ಆವಿಷ್ಕಾರ ಮತ್ತು ವಾಣಿಜ್ಯೋದ್ಯಮ ಉತ್ಸವದಲ್ಲಿ ಮುಜಾಫ್ಫರ್ ತನ್ನ ‘ಕೌಂಟಿಂಗ್ ಪೆನ್’ ಪ್ರದರ್ಶಿಸಿದ್ದ. ಮುಜಾಫ್ಫರ್ ಆವಿಷ್ಕರಿಸಿರುವ ಅಪರೂಪ ‘ಕೌಂಟಿಂಗ್ ಪೆನ್’ ಉತ್ಸವದಲ್ಲಿ ಎಲ್ಲರನ್ನೂ ಆಕರ್ಷಿಸಿತ್ತು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಕೂಡ ಪುಟ್ಟ ಬಾಲಕನ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.