Tag: Ink

  • ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮೇಲೆ ಮಸಿ ಎರಚಿದ ಕೈ ಕಾರ್ಯಕರ್ತರು

    ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮೇಲೆ ಮಸಿ ಎರಚಿದ ಕೈ ಕಾರ್ಯಕರ್ತರು

    ಭುವನೇಶ್ವರ್: ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಸಿ ಎರಚಿದ ಘಟನೆ ಒಡಿಶಾದಲ್ಲಿ ನಡೆದಿದೆ.

    ಒಡಿಶಾದ ಪುರಿಯ ಮಾರ್ಕೆಟ್ ಸ್ಕ್ವೇರ್ ಮೂಲಕ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕೇಂದ್ರ ಸಚಿವರು ನಗರದ ಶ್ರೀಮಂದಿರದಲ್ಲಿ ತ್ರಿಮೂರ್ತಿಗಳ ದರ್ಶನ ಪಡೆದು ಹಿಂದಿರುಗುತ್ತಿದ್ದರು. ಈ ವೇಳೆ ಪೆಟ್ರೋಲ್, ಡೀಸೆಲ್ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದನ್ನು ಖಂಡಿಸಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ) ಕಾರ್ಯಕರ್ತರು ಅವರ ವಾಹನಕ್ಕೆ ಕಪ್ಪು ಮಸಿ ಎಸೆದಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    ಈ ಕುರಿತು ಎನ್‍ಎಸ್‍ಯುಐ ಒಡಿಶಾ ಅಧ್ಯಕ್ಷ ಯಾಶೀರ್ ನವಾಜ್ ಮಾತನಾಡಿ, ಪ್ರತಿಯೊಂದು ಕುಟುಂಬವು ಹಣದುಬ್ಬರ ಮತ್ತು ಎಲ್‍ಪಿಜಿ ಸಿಲಿಂಡರ್‌ಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೊಚ್ಚಿಗೆದ್ದಿವೆ. ಕುಟುಂಬ ನಿರ್ವಹಣೆಯ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿರುವಾಗ ಆದಾಯವು ಕುಂಠಿತವಾಗಿದೆ. ಬಿಜೆಪಿ ಇತರ ಸಂಬಂಧವಿಲ್ಲದ ವಿಷಯಗಳ ಮೂಲಕ ಜನಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

    ಎನ್‍ಎಸ್‍ಯುಐ ಕಾರ್ಯಕರ್ತರು ಒಡಿಶಾಗೆ ಭೇಟಿ ನೀಡುವ ಯಾವುದೇ ಕೇಂದ್ರ ಸಚಿವರನ್ನು ಗುರಿಯಾಗಿಸಿಕೊಂಡಿದ್ದಾರೆ. ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ವಿರುದ್ಧ ಪ್ರತಿಭಟಿಸುತ್ತಾರೆ ಎಂದು ಹೇಳಿದರು.

    ಇದಕ್ಕೂ ಮುನ್ನ, ಏರುತ್ತಿರುವ ಹಣದುಬ್ಬರದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರ ಮೇಲೆಯೂ ಸಹ ಕಾಂಗ್ರೆಸ್‍ನ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಕಪ್ಪು ಮಸಿ ಎಸೆದು, ಕಪ್ಪು ಬಾವುಟವನ್ನು ಎಸೆದಿದ್ದರು.

  • ಪೂಜೆ ಮುಗಿಸಿ ಬರುತ್ತಿದ್ದ ಕಾಳಿ ಸ್ವಾಮಿ ಮುಖಕ್ಕೆ ಮಸಿ

    ಪೂಜೆ ಮುಗಿಸಿ ಬರುತ್ತಿದ್ದ ಕಾಳಿ ಸ್ವಾಮಿ ಮುಖಕ್ಕೆ ಮಸಿ

    ಬೆಂಗಳೂರು: ದೇವಾಲಯದಲ್ಲಿ ಪೂಜೆ ಮುಗಿಸಿ ಹೊರಬರುತ್ತಿದ್ದ ಕಾಳಿ ಸ್ವಾಮಿಗೆ ಗುಂಪೊಂದು ಏಕಾಏಕಿ ಮಸಿ ಬಳಿದಿರುವ ಘಟನೆ ನಡೆದಿದೆ.

    ಕಾಳಿಕಾ ಸೇನೆಯ ವತಿಯಿಂದ ಮಲ್ಲೇಶ್ವರಂನ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಪೂಜೆ ಮುಗಿಸಿ ಕಾಳಿ ಸ್ವಾಮಿ ಹೊರಬರುತ್ತಿದ್ದರು. ಈ ವೇಳೆ ಅವರಿಗೆ ಎದುರಾದ ಗುಂಪೊಂದು ಏಕಾಏಕಿ ಮಸಿ ಬಳಿದಿದೆ. ಇದನ್ನೂ ಓದಿ: ಬೆಂಗಳೂರಿನ ಬಿಜೆಪಿ ಮುಖಂಡ ನೇಣಿಗೆ ಶರಣು

    ಕಾಳಿ ಸ್ವಾಮಿ ಸ್ಪಷ್ಟನೆ
    ಗಂಗಮ್ಮ ದೇವಾಲಯದಲ್ಲಿ ಪೂಜೆ ಇತ್ತು. ಪೂಜೆ ಬಹಳ ಚೆನ್ನಾಗಿ ಆಯ್ತು, ನನಗೆ ಬಹಳ ಖುಷಿಯೂ ಆಯ್ತು. ಪೂಜೆ ಮುಗಿಸಿ ಹೊರ ಬರುವ ವೇಳೆ ಕೆಲವರು ಬಂದು, `ನೀವು ಕುವೆಂಪು ಅವರನ್ನು ಮತ್ತು ಕನ್ನಡಪಡೆಗಳನ್ನು ನಿಂದಿಸಿದ್ದೀರಾ’ ಎಂದು ನನ್ನ ಬಳಿ ಜಗಳ ತೆಗೆದರು. ನಂತರ ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕುವೆಂಪು ಅವರು ಮತ್ತು ಕನ್ನಡಪಡೆಗಳನ್ನು ನಾನು ಯಾವತ್ತಿಗೂ ನಿಂದಿಸಿಲ್ಲ. ನಿಮ್ಮ ಬಳಿ ದಾಖಲೆಗಳಿದ್ದರೆ ಅದನ್ನು ತೋರಿಸಬೇಕು. ಅದನ್ನು ಬಿಟ್ಟು ಏಕಾಏಕಿ ಕಪ್ಪು ಮಸಿ ಬಳಿದರೆ? ನಾನು ನನ್ನನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ಬಹಳ ಖುಷಿ ಆಯ್ತು. ನೀವು ಮಸಿ ಬಳಿಯುವ ಮೂಲಕ ಕಾಳಿಯ ರುದ್ರಾವತಾರ ತೋರಿಸಿದ್ದೀರಿ. ಕಾಳಿ ಇರೋದೆ ಕಪ್ಪು, ಅದನ್ನು ನೀವು ನನಗೆ ಹಾಕಿದ್ದೀರಾ ಅಷ್ಟೇ ಎಂದು ಕೃತ್ಯ ಎಸಗಿದವರಿಗೆ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಬಿರುಗಾಳಿ ಎಬ್ಬಿಸಿದ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಹೇಳಿಕೆ: ತೆಲಂಗಾಣದಲ್ಲಿ ಟಿಆರ್‌ಎಸ್ ಭರ್ಜರಿ ಪ್ರಚಾರ

    ಇದನ್ನು ನಾನು ಮಸಿ ಎಂದು ತಿಳಿದುಕೊಳ್ಳುತ್ತಿಲ್ಲ. ಇದನ್ನು ಒಂದು ಮೆಟ್ಟಿಲು ಎಂದು ತಿಳಿದುಕೊಳ್ಳುತ್ತೇನೆ. ನಮ್ಮ ಹೋರಾಟದ ದಿಕ್ಕು ವೇಗವಾಗಿ ನುಗ್ಗಿದ್ದರಿಂದ ನಿಮಗೆಲ್ಲ ಆತಂಕವಾಗಿದೆ. ಖುಷಿ ಆಗಿದೆಯಾ ನಿಮಗೆಲ್ಲ? ಮಸಿ ಬಳಿದವರು ಯಾರೋ ಹಿಂದೂಗಳಂತೆ. ಈಗ ಖುಷಿ ಮುಸ್ಲಿಮರಿಗೆ ಅಲ್ವ? ಮಸಿ ಹಾಕಿರೋ ಎಡಚರು ಖುಷಿ ಪಡಬೇಡಿ. ಇದರಿಂದ ನನಗೂ ಖುಷಿ ಆಗಿದೆ. ನೀವು ನನ್ನ ಮೇಲೆ ಮಸಿ ಹಾಕ್ತಿದ್ದೀರಾ ಅಂದರೆ, ನಿಮ್ಮನ್ಮು ನಾನು ತಲುಪಿದ್ದೀನಿ ಎಂದರ್ಥ ಎಂದು ತಿಳಿಸಿದ್ದಾರೆ.

    ಕೈಯಲ್ಲಿ ಆಗದೆ ಮಸಿ ಬಳಿಯುತ್ತೀರಾ? ನಿಮಗೆ ಧಮ್ ಇದ್ರೆ ನಾನು ಕುವೆಂಪು ಅವರನ್ನು, ಕನ್ನಡಪಡೆಗಳನ್ನು ನಿಂದಿಸಿದ್ದನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡಿ. ನೀವು ಗಂಡಸರಾಗಿದ್ರೆ ಎಂದು ಸವಾಲು ಹಾಕಿದ್ದಾರೆ.

  • ವೋಟ್ ಹಾಕಿದ ಕೂಡಲೇ ಶಾಯಿಯನ್ನು ಅಳಿಸಬಹುದು!

    ವೋಟ್ ಹಾಕಿದ ಕೂಡಲೇ ಶಾಯಿಯನ್ನು ಅಳಿಸಬಹುದು!

    ನವದೆಹಲಿ: ಪ್ರಜಾಪ್ರಭುತ್ವದ ಹಬ್ಬ ಇಂದಿನಿಂದ ಆರಂಭಗೊಂಡಿದೆ. ಆದರೆ ಈ ಹಬ್ಬದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಕೈ ಬೆರಳನ್ನು ಎತ್ತಿ ತೋರಿಸಿ ಹೆಮ್ಮೆಯಿಂದ ಹೇಳಿಕೊಳ್ಳಲು ಕಾರಣವಾಗುವ ಶಾಯಿಯನ್ನು ಅಳಿಸಬಹುದು ಎನ್ನುವ ಸ್ಫೋಟಕ ಸುದ್ದಿ ಈಗ ಪ್ರಕಟವಾಗಿದೆ.

    ಹೌದು. ಚುನಾವಣಾ ಶಾಯಿ ಸುಲಭವಾಗಿ ಅಳಿಸಲು ಸಾಧ್ಯವಿಲ್ಲ ಮತ್ತು ಹಲವು ದಿನಗಳವರೆಗೆ ಇರುತ್ತದೆ. ಆದರೆ ಇಂದು ಮತ ಕೇಂದ್ರದಲ್ಲಿ ಹಾಕಿದ ಶಾಯಿಯನ್ನು ಕೆಲವೇ ನಿಮಿಷದಲ್ಲಿ ಅಳಿಸಿ ಹಾಕಬಹುದು ಎಂದು ವರದಿಯಾಗಿದೆ.

    ದೇಶದ ಹಲವು ಕಡೆ ಮತದಾರರು ಶಾಯಿಯನ್ನು ಕೂಡಲೇ ಅಳಿಸಿ ಹಾಕಿ ಯಾಕೆ ಇಷ್ಟೊಂದು ಕಳಪೆ ಗುಣಮಟ್ಟದ ಶಾಯಿಯನ್ನು ನೀಡಲಾಗಿದೆ ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಶಾಯಿಯನ್ನು ಅಳಿಸಿ ಹಾಕಿದರೆ ನಕಲಿ ಮತದಾನ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಆಯೋಗ ಕೂಡಲೇ ಈ ವಿಚಾರದ ಬಗ್ಗೆ ಗಮನ ಹರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

    ಮೈಸೂರಿನ ಶಾಯಿ:
    ದೇಶದಲ್ಲಿ ನಡೆಯುವ ಪ್ರತಿ ಚುನಾವಣೆಗೆ ಕರ್ನಾಟಕ ಸರ್ಕಾರಿ ಸ್ವಾಮ್ಯದ ಮೈಸೂರ್ ಪೇಂಟ್ಸ್ ಆ್ಯಂಡ್ ವಾರ್ನಿಷ್ ಲಿ. ಕಂಪನಿ ಪೂರೈಸುತ್ತದೆ. ಈ ಬಾರಿಯ ಲೋಕಸಭೆ ಚುನಾವಣೆಗೆ 26 ಲಕ್ಷ ಬಾಟಲ್ ಅಳಿಸಲಾಗದ ಶಾಯಿಯನ್ನು ಕಂಪನಿ ಚುನಾವಣಾ ಆಯೋಗಕ್ಕೆ ನೀಡಿದೆ.

    1962ರಲ್ಲಿ ಕೇಂದ್ರ ಚುನಾವಣಾ ಆಯೋಗವು ಮೈಸೂರ್ ಪೇಂಟ್ಸ್ ಜೊತೆ ಅಳಿಸಲಾಗದ ಶಾಯಿ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು. ಅಂದಿನಿಂದಲೂ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಿಗೆ ಈ ಕಂಪನಿಯೇ ಶಾಯಿ ಪೂರೈಸುತ್ತಿದೆ.