Tag: injury

  • ಮಕ್ಕಳು, ವೃದ್ಧೆಯರೇ ರೌಡಿ ಮಂಗನ ಟಾರ್ಗೆಟ್ – ತಲೆ ಕೆಡಿಸ್ಕೊಂಡ ಅರಣ್ಯ ಇಲಾಖೆ

    ಮಕ್ಕಳು, ವೃದ್ಧೆಯರೇ ರೌಡಿ ಮಂಗನ ಟಾರ್ಗೆಟ್ – ತಲೆ ಕೆಡಿಸ್ಕೊಂಡ ಅರಣ್ಯ ಇಲಾಖೆ

    ಧಾರವಾಡ: ಜಿಲ್ಲೆಯಲ್ಲಿ ಮಂಗವೊಂದು ರೌಡಿಸಂ ಆರಂಭಿಸಿದ್ದು, ಈ ರೌಡಿ ಮಂಗ ಮಕ್ಕಳು ಹಾಗೂ ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ.

    ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ಕೋತಿಯ ಹಾವಳಿ ವಿಪರೀತವಾಗಿದೆ. ಕಳೆದ ಒಂದು ತಿಂಗಳಿಂದ ಈ ಕೋತಿ ಬರೋಬ್ಬರಿ 25ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಹಾಗೂ ಮನೆಯ ಮುಂದೆ ಕುಳಿತ ವೃದ್ಧೆಯರನ್ನೇ ಕೋತಿ ಟಾರ್ಗೆಟ್ ಮಾಡಿ ಗಾಯಗೊಳಿಸಿದೆ.

    ರೌಡಿ ಮಂಗನ ಭಯದಿಂದ ಗ್ರಾಮದ ಜನರು ಕೈಯಲ್ಲಿ ಕೊಡಲಿ ಅಥವಾ ಕುಡುಗೋಲನ್ನು ಹಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಈ ರೌಡಿ ಮಂಗನನ್ನು ಹಿಡಿಯಲು ಅರಣ್ಯ ಇಲಾಖೆ ತಜ್ಞ ವ್ಯಕ್ತಿಗಳನ್ನು ಕರೆಸಿದ್ದರೂ ಪ್ರಯೋಜನವಾಗಿಲ್ಲ.

    ಸದ್ಯ ಈ ಮಂಗನಿಂದ ಗಾಯಗೊಂಡ ಮಕ್ಕಳು ಹಾಗೂ ವೃದ್ಧೆಯರು ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ರೌಡಿ ಮಂಗ ಹೊಡೆತಕ್ಕೆ ಕೆಲವರು ಕೈಗಳನ್ನ ಮುರಿದುಕೊಂಡಿದರೆ, ಇನ್ನೂ ಕೆಲವರ ಮೈಮೇಲೆ ಎಲ್ಲ ಪರಚಿದ ಗಾಯಗಳಾಗಿವೆ. ಸದ್ಯ ಈ ಮಂಗನನ್ನು ಹಿಡಿಯಲು ತಾಲೂಕು ಪಂಚಾಯ್ತಿ ಅಧಿಕಾರಿಗಳು ಕೂಡ ತಲೆ ಕೆಡಿಸಿಕೊಂಡಿದ್ದಾರೆ.

    ಆರಂಭದಲ್ಲಿ ರೌಡಿ ಮಂಗ ಮಾತ್ರ ತೊಂದರೆ ಕೊಡುತ್ತಿದ್ದರೆ ಈಗ ಮೂರು ಕೋತಿಗಳು ಸೇರ್ಪಡೆಯಾಗಿದೆ. ಹೀಗಾಗಿ ಈ ಮಂಗಗಳನ್ನು ಸೆರೆ ಹಿಡಿಯಲು ಅಧಿಕಾರಿಗಳು ನಾನಾ ಪ್ರಯತ್ನ ನಡೆಸುತ್ತಿದ್ದಾರೆ.

  • ಗಾಯಗೊಂಡ ನಾಗರಹಾವಿನ ಮರಿಗೆ ಚಿಕಿತ್ಸೆ ನೀಡಿದ ಅಗ್ನಿಶಾಮಕ ಸಿಬ್ಬಂದಿ

    ಗಾಯಗೊಂಡ ನಾಗರಹಾವಿನ ಮರಿಗೆ ಚಿಕಿತ್ಸೆ ನೀಡಿದ ಅಗ್ನಿಶಾಮಕ ಸಿಬ್ಬಂದಿ

    ಮೈಸೂರು: ಗಾಯಗೊಂಡಿದ್ದ ನಾಗರ ಹಾವಿನ ಮರಿಗೆ ಮೈಸೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಸ್ನೇಕ್ ಕೆಂಪರಾಜು ಅವರು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಬನ್ನಿಮಂಟಪ ಬಳಿ ವಾಹನ ಹರಿದು ನಾಗರ ಹಾವಿನ ಮರಿ ಗಾಯಗೊಂಡಿತ್ತು. ಇದನ್ನು ಗಮನಿಸಿದ ಸ್ನೇಕ್ ಕೆಂಪರಾಜು ಅವರು ನಾಗರ ಮರಿಯನ್ನು ರಕ್ಷಿಸಿದ್ದರು. ವಾಹನ ಹರಿದ ಪರಿಣಾಮ ಹಾವಿನ ಬೆನ್ನು ಮೂಳೆಗೆ ಗಾಯವಾಗಿತ್ತು. ಹೀಗಾಗಿ ಹಾವು ಮುಂದೆ ಹೋಗಲು ಸಾಧ್ಯವಾಗದೇ ಪರದಾಡುತ್ತಿತ್ತು.

    ಆಗ ಪಶು ವೈದ್ಯರ ಮಾರ್ಗದರ್ಶನದೊಂದಿಗೆ ಸ್ನೇಕ್ ಕೆಂಪರಾಜು ಅವರು ಹಾವಿಗೆ ಔಷಧಿ ಹಾಕಿ, ಬ್ಯಾಂಡೇಜ್ ಕಟ್ಟಿ ಚಿಕಿತ್ಸೆ ನೀಡುವ ಮೂಲಕ ಒಂದು ಪುಟ್ಟ ಜೀವವನ್ನು ಉಳಿಸಿದ್ದಾರೆ.

    ಕೆಂಪರಾಜು ಅವರು ಹಾವಿಗೆ ಚಿಕಿತ್ಸೆ ನೀಡಿ ಬಳಿಕ ಅದನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಈಗಿನ ಕಾಲದಲ್ಲಿ ಮನುಷ್ಯ ಸಾಯುತ್ತಿದ್ದರೆ ಸಹಾಯಕ್ಕೆ ಮುಂದೆ ಬಾರದ ಜನರ ಮಧ್ಯೆ ಪುಟ್ಟ ಹಾವಿನ ಮರಿಯನ್ನು ರಕ್ಷಿಸಿ ಉರಗ ಪ್ರೇಮ ಮೆರೆದಿರುವ ಕೆಂಪರಾಜು ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    https://www.youtube.com/watch?v=6zmwUI78LMk

  • ಉರುಳಿದ ತೂಫಾನ್ ವಾಹನ – 6 ವರ್ಷದ ಕಂದಮ್ಮ ಸಾವು, 17 ಮಂದಿ ಗಂಭೀರ

    ಉರುಳಿದ ತೂಫಾನ್ ವಾಹನ – 6 ವರ್ಷದ ಕಂದಮ್ಮ ಸಾವು, 17 ಮಂದಿ ಗಂಭೀರ

    ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ತೂಫಾನ್ ವಾಹನ ಉರುಳಿದ ಪರಿಣಾಮ ಮಗು ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕೋವರ್ ಕೊಲ್ಲಿ ಬಳಿ ರಾತ್ರಿ ನಡೆದಿದೆ.

    ಸೋಮವಾರಪೇಟೆ ತಾಲೂಕಿನ ಮಡಿಕೇರಿ ರಾಜ್ಯ ಹೆದ್ದಾರಿಯ ಕೋವರ್ ಕೊಲ್ಲಿ ಸಮೀಪ ಭಾನುವಾರ ರಾತ್ರಿ ಸುಮಾರು 9:30ಕ್ಕೆ ಈ ಅಪಘಾತ ನಡೆದಿದೆ. ಬೆಳಗಾವಿ ಮೂಲದ ತಂಡ ವಾಹನದಲ್ಲಿ ಧರ್ಮಸ್ಥಳ ತೀರ್ಥಯಾತ್ರೆಗೆ ಹೊರಟಿತ್ತು ಎನ್ನಲಾಗಿದೆ. ಈ ವೇಳೆ ಕೋವರ್ ಕೊಲ್ಲಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ತೂಫಾನ್ ವಾಹನ ಉರುಳಿದ ಪರಿಣಾಮ ವಾಹನದಲ್ಲಿದ್ದ ಆರು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟಿದೆ.

    ಒಂಬತ್ತು ಮಕ್ಕಳು ಸೇರಿದಂತೆ 17 ಮಂದಿಗೆ ಮುಖ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ವಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಅಪಘಾತದಿಂದಾಗಿ ತಲೆ ಭಾಗದಲ್ಲಿ ಗಂಭೀರವಾಗಿ ಗಾಯಗಳಾಗಿರುವ ಇಬ್ಬರು ಮಹಿಳೆಯರ ಸ್ಥಿತಿ ಶೋಚನೀಯವಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆರೇಳು ಜನರ ಮೇಲೆ 40ಕ್ಕೂ ಹೆಚ್ಚು ಮಂದಿಯಿಂದ ಹಲ್ಲೆ -ಐವರ ಸ್ಥಿತಿ ಚಿಂತಾಜನಕ

    ಆರೇಳು ಜನರ ಮೇಲೆ 40ಕ್ಕೂ ಹೆಚ್ಚು ಮಂದಿಯಿಂದ ಹಲ್ಲೆ -ಐವರ ಸ್ಥಿತಿ ಚಿಂತಾಜನಕ

    ಬೆಳಗಾವಿ:  ಗುಂಪು ಘರ್ಷಣೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು ಐವರಿಗೆ ಗಂಭೀರ ಗಾಯವಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೆಳಗಾವಿ ತಾಲೂಕಿನ ಸಾವಗಾಂವ್ ಗ್ರಾಮದ ಹೊರವಲಯದಲ್ಲಿ ತಡರಾತ್ರಿ ನಡೆದಿದೆ.

    ಬರಕ್ಕೆ ಊರು ಬಿಟ್ಟು ಬೇರೆ ಕಡೆ ಕುರಿ ಮೇಯಿಸಲು ಬಂದವರ ಮೇಲೆ ಹಲ್ಲೆ ನಡೆಸಲಾಗಿದೆ. ಕುರಿಗಾಹಿಗಳು ಗೋಕಾಕ್‍ದಿಂದ ಬೆಳಗಾವಿಗೆ ಬಂದಿದ್ದರು. ಆದರೆ ಬೆಳಗಾವಿಯಲ್ಲಿ ಮಳೆಯಿಲ್ಲದೇ ಬರಗಾಲದಿಂದ ಅಲ್ಲಿನ ದನ-ಕರುಗಳಿಗೆ ಮೇವು-ನೀರು ಸಿಗುತ್ತಿಲ್ಲ. ಇದರಿಂದ ಕೋಪಗೊಂಡ ಗ್ರಾಮಸ್ಥರು ಆರೇಳು ಕುರಿಗಾಹಿಗಳು ಮೇಲೆ 40ಕ್ಕೂ ಹೆಚ್ಚು ಜನರು ಹಲ್ಲೆ ಮಾಡಿದ್ದಾರೆ.

    ಪರಿಣಾಮ ಕುರಿಗಾಹಿಗಳು ದಿಕ್ಕೆಟ್ಟು ಓಡಾಡಿದ್ದಾರೆ. ಈ ಗುಂಪು ಘರ್ಷಣೆಯಿಂದ 400ಕ್ಕೂ ಹೆಚ್ಚು ಕುರಿಗಳು ತೋಟದಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಇನ್ನೂ ಘಟನೆಯಲ್ಲಿ ಗಾಯಗೊಂಡಿದ್ದ ಗಾಯಾಳು ಮಲ್ಲವ್ವಾ, ಭಾರತಿ ಸೇರಿ ಐವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಠ್ಠಲ್, ರಾಮಪ್ಪ ಎಂಬವರ ಸ್ಥಿತಿ ಚಿಂತಾಜನಕವಾಗಿದೆ.

    ಈ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಚಾಲಕನ ನಿರ್ಲಕ್ಷ್ಯದಿಂದ NEKRTC ಬಸ್ ಪಲ್ಟಿ

    ಚಾಲಕನ ನಿರ್ಲಕ್ಷ್ಯದಿಂದ NEKRTC ಬಸ್ ಪಲ್ಟಿ

    ವಿಜಯಪುರ: ಈಶಾನ್ಯ ಸಾರಿಗೆ ಬಸ್ಸೊಂದು ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿಯಾದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರ ಬಳಿ ನಡೆದಿದೆ.

    ಈಶಾನ್ಯ ಸಾರಿಗೆ ಬಸ್ ಬಳಗಾನೂರನಿಂದ ಸಿಂದಗಿ ಹೊರಟ್ಟಿತ್ತು. ಆದರೆ ಬಸ್ ಬಳಗಾನೂರದಿಂದ ಸ್ವಲ್ಪ ದೂರ ಚಲಿಸಿದ್ದು, ಅಷ್ಟರಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಬಸ್ ಪಲ್ಟಿಯಾಗಿದೆ. ಬಸ್ ಪಲ್ಟಿಯಾದ ತಕ್ಷಣ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಬಸ್ ಕಿಟಕಿ ಮತ್ತು ಡ್ರೈವರ್ ಬಳಿ ಇರುವ ಬಾಗಿಲ ಮೂಲಕ ಬಸ್ಸಿನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ.

    ಈ ಅವಘಡದಿಂದ ಬಸ್ಸಿನಲ್ಲಿದ್ದ 35ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಆಟೋ, KSRTC ಬಸ್ ನಡ್ವೆ ಅಪಘಾತ – ಮಗು ಸೇರಿ ಮೂವರ ದುರ್ಮರಣ

    ಆಟೋ, KSRTC ಬಸ್ ನಡ್ವೆ ಅಪಘಾತ – ಮಗು ಸೇರಿ ಮೂವರ ದುರ್ಮರಣ

    ಹಾಸನ: ಆಟೋ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತವಾದ ಪರಿಣಾಮ ಪುಟ್ಟ ಮಗು ಸೇರಿ ಮೂವರ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಲಕ್ಷ್ಮಮ್ಮ (55), ಚಂದ್ರಕಲಾ (32) ಮತ್ತು ಚಂದ್ರಕಲಾ ಜೊತೆಯಲ್ಲಿದ್ದ ಮೂರು ತಿಂಗಳ ಹಸುಗೂಸು ಮೃತ ದುರ್ದೈವಿಗಳು. ಇನ್ನೂ ಈ ಅಪಘಾತದಲ್ಲಿ ನಾಲ್ವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಕೆಎಸ್‌ಆರ್‌ಟಿಸಿ ಬಸ್ ಹಾಸನದಿಂದ ಬೇಲೂರು ಕಡೆಗೆ ಹೋಗುತ್ತಿತ್ತು. ಇತ್ತ ರಂಗನಕೊಪ್ಪಲು ಗ್ರಾಮದಿಂದ ಅಂದಲೆ ಗ್ರಾಮಕ್ಕೆ ಆಟೋ ಬರುತ್ತಿತ್ತು. ಆದರೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂದಲೆ ಗ್ರಾಮದ ಬಳಿ ಆಟೋ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿಯಾಗಿದೆ ಪರಿಣಾಮ ಆಟೋದಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.

    ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಹಳೆಬೀಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬರ್ತ್ ಡೇ ಪಾರ್ಟಿ ಮುಗ್ಸಿ ಬರುವಾಗ ಸ್ವಿಫ್ಟ್ ಕಾರ್ ಅಪಘಾತ – ಇಬ್ಬರ ದುರ್ಮರಣ

    ಬರ್ತ್ ಡೇ ಪಾರ್ಟಿ ಮುಗ್ಸಿ ಬರುವಾಗ ಸ್ವಿಫ್ಟ್ ಕಾರ್ ಅಪಘಾತ – ಇಬ್ಬರ ದುರ್ಮರಣ

    ಚಿಕ್ಕಬಳ್ಳಾಪುರ: ಸ್ವಿಫ್ಟ್ ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆ ಸೇರಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಅಪೋಲೋ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

    ನಗರ ಹೊರವಲಯದ ಎಸ್‍ಜೆಸಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಹನುಮೇಶ್ (22) ಹಾಗೂ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯ ಎಂಜಿ ಬೇಕರಿ ಮಾಲೀಕ ಪುನೀತ್ (23) ಮೃತ ದುರ್ದೈವಿಗಳು. ಅಪಘಾತದಲ್ಲಿ ಎಸ್‍ಜೆಸಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಯಶ್ವಂತ್ ಹಾಗೂ ನಂದೀಶ್ ಗಾಯಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗಾಯಾಳು ನಂದೀಶ್ ಬರ್ತ್ ಡೇ ಪ್ರಯುಕ್ತ ನಂದಿ ಕ್ರಾಸ್‍ಗೆ ನಾಲ್ವರು ಯುವಕರು ಪುನೀತ್ ಸ್ವಿಫ್ಟ್ ಕಾರಿನಲ್ಲಿ ಹೋಗಿದ್ದರು. ನಂತರ ಪಾರ್ಟಿ ಮುಗಿಸಿ ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

    ಮಾಹಿತಿ ತಿಳಿದು ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್‍ಐ ಚೇತನ್ ಹಾಗೂ ಸಂಚಾರಿ ಠಾಣಾ ಪಿಎಸ್‍ಐ ಬಂದು ಮೃತದೇಹಗಳನ್ನ ಶವಾಗಾರಕ್ಕೆ ರವಾನಿಸಿದ್ದಾರೆ. ಜೊತೆಗೆ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಾಕಿಸ್ತಾನದ ಲಾಹೋರ್​ನಲ್ಲಿ ಬಾಂಬ್ ಸ್ಫೋಟ- ನಾಲ್ವರ ದುರ್ಮರಣ

    ಪಾಕಿಸ್ತಾನದ ಲಾಹೋರ್​ನಲ್ಲಿ ಬಾಂಬ್ ಸ್ಫೋಟ- ನಾಲ್ವರ ದುರ್ಮರಣ

    ಲಾಹೋರ್: ಏಷ್ಯಾದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾದ ಡಾಟಾ ದರ್ಬಾರ್ ಸಮೀಪ ಇಂದು ಬಾಂಬ್ ಸ್ಫೋಟವಾಗಿದೆ. ಈ ವೇಳೆ 4 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

    ಸ್ಫೋಟ ಸಂಭವಿಸಿದಾಗ ನೂರಾರು ಯಾತ್ರಿಕರು ಡಾಟಾ ದರ್ಬಾರ್ ದೇವಾಲಯದ ಒಳಗೆ ಮತ್ತು ಹೊರಗಡೆ ಇದ್ದರು. ರಂಜಾನ್ ಹಬ್ಬದ ಉಪವಾಸ ನಡೆಯುತ್ತಿರುವುದರಿಂದ ಯಾತ್ರಿಕರು ಈ ಸಮಯದಲ್ಲಿ ಡಾಟಾ ದರ್ಬಾರ್ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

    ನಗರದ ಪೊಲೀಸ್ ಅಧಿಕಾರಿ ಮುಖ್ಯಸ್ಥ ಘಝನ್ಫರ್ ಅಲಿ ಅವರು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ, ಈ ದೇವಾಲಯದ ಹೊರಗೆ ಇದ್ದ ಪೊಲೀಸ್ ಅಧಿಕಾರಿಗಳು ಬಾಂಬ್ ದಾಳಿಗೆ ಗುರಿಯಾಗಿದ್ದಾರೆ ಎಂದು ಹೇಳಿದರು.

    ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರವಾದ ಸ್ಫೋಟದ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಪೊಲೀಸ್ ಅಧಿಕಾರಿಗಳನ್ನೇ ದಾಳಿಕೋರರು ಟಾರ್ಗೆಟ್ ಮಾಡಿದ್ದರು ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಈ ಸ್ಫೊಟದಲ್ಲಿ ಹಾನಿಗೊಳಗಾದ ಪೊಲೀಸ್ ವಾಹನವೇ ತಾಜಾ ಉದಾಹರಣೆಯಾಗಿದೆ. ಸದ್ಯ ಬಾಂಬ್ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಆದರೆ ಸ್ಫೋಟದ ತೀವ್ರತೆ ನೋಡಿದರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

    ಪಾಕಿಸ್ತಾನದವರು ದೊಡ್ಡ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಹಿಂದೆ 2010 ರಲ್ಲಿ ಇದೇ ಪ್ರದೇಶದಲ್ಲಿ ಎರಡು ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಆಗ 40ಕ್ಕೂ ಹೆಚ್ಚು ಮಂದಿ ಯಾತ್ರಿಕರು ಬಲಿಯಾಗಿದ್ದರು. ಜೊತೆಗೆ ಹಲವರು ಗಾಯಗೊಂಡಿದ್ದರು.

  • ಡಿವೈಡರ್‌ಗೆ ಕಾರು ಡಿಕ್ಕಿ- ದಂಪತಿ ದುರ್ಮರಣ

    ಡಿವೈಡರ್‌ಗೆ ಕಾರು ಡಿಕ್ಕಿ- ದಂಪತಿ ದುರ್ಮರಣ

    ದಾವಣಗೆರೆ: ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ದಾವಣಗೆರೆ ಹೊರವಲಯದ ಹೊಸಕುಂದವಾಡ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ.

    ಬೆಂಗಳೂರು ಮೂಲದ ಶಿವಪ್ರಕಾಶ್ (43) ಮತ್ತು ಉಮಾ (40) ಮೃತ ದಂಪತಿ. ಬೆಂಗಳೂರಿನಿಂದ ಹರಿಹರ ತಾಲೂಕಿನ ಉಕ್ಕಡಗಾತ್ರಿಗೆ ಹೋಗುತ್ತಿದ್ದರು. ಇಂದು ಅಮಾವಾಸ್ಯೆ ಇದ್ದುದರಿಂದ ಉಕ್ಕಡಗಾತ್ರಿ ಅಜ್ಜಯ್ಯನ ದೇವಾಲಯಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

    ಹೊಸಕುಂದವಾಡ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಕುರಿತು ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.

  • ಮಗಳ ಕನಸನ್ನ ಪೂರ್ಣಗೊಳಿಸಲು ಹೊರಟ ತಂದೆ ಅಪಘಾತದಲ್ಲಿ ಸಾವು

    ಮಗಳ ಕನಸನ್ನ ಪೂರ್ಣಗೊಳಿಸಲು ಹೊರಟ ತಂದೆ ಅಪಘಾತದಲ್ಲಿ ಸಾವು

    ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶದ ಅನಂತಪುರದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗಳ ಕನಸನ್ನು ಪೂರ್ಣ ಮಾಡಲು ಹೊರಟ ತಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ಮೃತ ವ್ಯಕ್ತಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಮಂಜುನಾಥ್ ಅಯ್ಯರ್ (45) ಅಂತ ತಿಳಿದು ಬಂದಿದೆ. ಅಂದಹಾಗೆ ಚಿಂತಾಮಣಿ ನಗರದ ಅಶ್ವಿನಿ ಬಡಾವಣೆಯ ಗುತ್ತಿಗೆದಾರರಾಗಿದ್ದ ಮಂಜುನಾಥ್ ಅಯ್ಯರ್ ತಮ್ಮ ಮಗಳಾದ ಕಾವ್ಯಾರನ್ನ ಐಎಎಸ್ ಕೋಚಿಂಗ್‍ಗೆ ಹೈದರಾಬಾದ್‍ಗೆ ಬಿಟ್ಟು ಬರಲು ತೆರಳುತ್ತಿದ್ದರು.

    ಮಾರ್ಗ ಮಧ್ಯೆ ಅನಂತಪುರದ ಬಳಿ ಕಾರು ಲಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಅಪಘಾತದಲ್ಲಿ ಮಂಜುನಾಥ್ ಅಯ್ಯರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕಾರು ಚಾಲಕ ಯಲ್ಲಪ್ಪ, ಮಗಳು ಕಾವ್ಯ ಹಾಗೂ ಕೆಲಸದಾಳುವಿನ ಮಗ ವಿನಯ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಅನಂತಪುರ ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.