Tag: injury

  • ಸಿಎಂ ಭೇಟಿ ವೇಳೆಯೇ ಹೊನ್ನಾವರದಲ್ಲಿ ಕೋಮು ಗಲಭೆ – ಇಬ್ಬರಿಗೆ ಗಾಯ, ಟೆಂಪೋ ಜಖಂ

    ಸಿಎಂ ಭೇಟಿ ವೇಳೆಯೇ ಹೊನ್ನಾವರದಲ್ಲಿ ಕೋಮು ಗಲಭೆ – ಇಬ್ಬರಿಗೆ ಗಾಯ, ಟೆಂಪೋ ಜಖಂ

    ಕಾರವಾರ: ಸಿಎಂ ಸಿದ್ದರಾಮಯ್ಯ ಕಾರವಾರ ಭೇಟಿ ಸಂದರ್ಭದಲ್ಲೇ ಕೋಮು ಘರ್ಷಣೆ ಸಂಭವಿಸಿದೆ. ಒಂದು ಕೋಮಿನ ಯುವಕನ ದ್ವಿಚಕ್ರ ವಾಹನಕ್ಕೆ ಇನ್ನೊಂದು ಕೋಮಿನ ಆಟೋ ಚಾಲಕ ಆಟೋ ಡಿಕ್ಕಿ ಹೊಡೆಸಿದ ಸಂಬಂಧ ಎರಡು ಕೋಮುಗಳ ಯುವಕರು ಕಲ್ಲುತೂರಾಟ ನಡೆಸಿ ದೊಣ್ಣೆಗಳನ್ನ ಹಿಡಿದು ಹೊಡೆದಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಸ್ ಸ್ಟಾಂಡ್ ನಲ್ಲಿ ನಡೆದಿದೆ.

    ಕಲ್ಲು ತೂರಾಟದಿಂದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಲಭೆಯಲ್ಲಿ ಗಾಯಗೊಂಡ ನಗರದ ಶರತ್ ಮಹಾಲೆ ಮತ್ತು ನರಸಿಂಹ ಮೇಸ್ತರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಟೆಂಪೋಗಳ ಗಾಜುಗಳು ಜಖಂ ಆಗಿವೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗಲಭೆ ನಿರತ ಹತ್ತಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದಿದ್ದಾರೆ.

    ಸದ್ಯ ಗಲಭೆ ನಿಯಂತ್ರಣಕ್ಕೆ ಬಂದಿದ್ದು ಬಸ್ ಸ್ಟಾಂಡ್ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಾಕಾಬಂಧಿ ಹಾಕಿದ್ದು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಮೂರು ದಿನಗಳ ಹಿಂದೆ ಚಂದಾವರದಲ್ಲಿ ಧ್ವಜ ನೆಡುವ ವಿಷಯದಲ್ಲಿ ಎರಡು ಕೋಮುಗಳ ನಡುವೆ ಗಲಭೆಯಾಗಿ 27 ಜನ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

  • ಬೊಲೆರೋ ಪಿಕಪ್ ವಾಹನ, ಖಾಸಗಿ ಬಸ್ ಡಿಕ್ಕಿ- ಇಬ್ಬರ ಸಾವು, ಬೊಲೆರೋ ಚಾಲಕನ ಎರಡೂ ಕಾಲು ಕಟ್

    ಬೊಲೆರೋ ಪಿಕಪ್ ವಾಹನ, ಖಾಸಗಿ ಬಸ್ ಡಿಕ್ಕಿ- ಇಬ್ಬರ ಸಾವು, ಬೊಲೆರೋ ಚಾಲಕನ ಎರಡೂ ಕಾಲು ಕಟ್

    ದಾವಣಗೆರೆ: ಬೆಳಗಿನ ನಸುಕಿನಲ್ಲಿ ಬೊಲೆರೋ ಪಿಕಪ್ ವಾಹನ ಮತ್ತು ಖಾಸಗಿ ಬಸ್ ನಡುವೆ ಅಪಘಾತವಾಗಿ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಬಳಿ ನಡೆದಿದೆ.

    ಬೊಲೆರೋ ಪಿಕಪ್ ವಾಹನದಲ್ಲಿದ್ದ ದರ್ಶನ್(24) ಹಾಗೂ ಹರೀಶ್(25) ಮೃತ ದುರ್ದೈವಿಗಳು. ಘಟನೆಯಲ್ಲಿ ಪಿಕಪ್ ವಾಹನದ ಚಾಲಕ ಸೇರಿದಂತೆ 6 ಮಂದಿಗೆ ಗಂಭೀರ ಗಾಯವಾಗಿದ್ದು, ಚಾಲಕನ ಎರಡೂ ಕಾಲು ಕಟ್ ಆಗಿದೆ. ಪ್ರವೀಣ್, ಪ್ರಹ್ಲಾದ ಹಾಗೂ ಮಹಾಂತರಾಜ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಹೊನ್ನಾಳಿ ತಾಲೂಕಿನ ಚಟ್ನಹಳ್ಳಿ ಗ್ರಾಮದಿಂದ ಹರಿಹರ ತಾಲೂಕಿನ ಕಡೆ ಅಡಕೆ ಕೊಯ್ಯುವ ಕೂಲಿ ಕೆಲಸಕ್ಕೆ 6 ಕಾರ್ಮಿಕರು ಹೋಗುತ್ತಿದ್ದರು. ಈ ವೇಳೆ ಬೊಲೆರೋ ಪಿಕಪ್ ವಾಹನದ ಚಾಲಕ ಎತ್ತಿನ ಗಾಡಿ ತಪ್ಪಿಸಲು ಹೋಗಿ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಪಘಾತದಿಂದಾಗಿ ಬೊಲೆರೋ ವಾಹನ ಸಂಪೂರ್ಣ ಜಖಂಗೊಂಡಿದ್ದು, ಖಾಸಗಿ ಬಸ್ ಜಮೀನಿಗೆ ನುಗ್ಗಿದೆ. ಘಟನಾ ಸ್ಥಳಕ್ಕೆ ಹೊನ್ನಾಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಮನೆಯ ಛಾವಣಿ ಕುಸಿದು ವ್ಯಕ್ತಿಯ ದುರ್ಮರಣ

    ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಮನೆಯ ಛಾವಣಿ ಕುಸಿದು ವ್ಯಕ್ತಿಯ ದುರ್ಮರಣ

    ಮೈಸೂರು: ನಿರಂತರವಾಗಿ ಸುರಿದ ಮಳೆಯಿಂದ ಶಿಥಿಲಗೊಂಡಿದ್ದ ಮನೆಯ ಛಾವಣಿ ಕುಸಿದು ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಮಂಡಿಮೊಹಲ್ಲಾದ ಸೊಪ್ಪಿನ ಬೀದಿಯಲ್ಲಿ ನಡೆದಿದೆ.

    45 ವರ್ಷದ ನಾಗೇಶ್ ಮೃತ ದುರ್ದೈವಿ. ಘಟನೆಯಿಂದ ಮನೆಯಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ನಿರಂತರವಾಗಿ ಸುರಿದ ಮಳೆಯಿಂದ ಶಿಥಿಲಗೊಂಡಿದ್ದ ಪರಿಣಾಮ ಇಂದು ಮುಂಜಾನೆ ಅನಿರೀಕ್ಷಿತವಾಗಿ ಮನೆ ಛಾವಣಿ ಕುಸಿದಿದೆ. ಇದರಿಂದ ಮನೆಯ ಅವಶೇಷಗಳ ಅಡಿ ಸಿಲುಕಿ ನಾಗೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಮನೆಯ ನೆರೆಹೊರೆಯವರು ಬಂದು ಮನೆಯಲ್ಲಿದ್ದ ಇತರನ್ನು ರಕ್ಷಿಸಿ ಆಂಬುಲೆನ್ಸ್ ಗೆ ಕರೆ ಮಾಡಿ ಬಳಿಕ ಸಮೀಪದ ಕೆ.ಆರ್. ಆಸ್ಪತ್ರೆ ಸೇರಿಸಿದ್ದಾರೆ.

    ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಮೃತ ದೇಹವನ್ನು ಹೊರತೆಗೆದ್ದಾರೆ.

     

  • ಗದಗ್ ನಲ್ಲಿ ಸರ್ಕಾರಿ ಬಸ್ ಪಲ್ಟಿಯಾಗಿ ಮಹಿಳೆ ದುರ್ಮರಣ- 8 ಮಂದಿಗೆ ಗಾಯ

    ಗದಗ್ ನಲ್ಲಿ ಸರ್ಕಾರಿ ಬಸ್ ಪಲ್ಟಿಯಾಗಿ ಮಹಿಳೆ ದುರ್ಮರಣ- 8 ಮಂದಿಗೆ ಗಾಯ

    ಗದಗ: ಸರ್ಕಾರಿ ಬಸ್ ಪಲ್ಟಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟು, 8 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಸಮೀಪದ ಕೊಡಗಾನೂರು ಬಳಿ ನಡೆದಿದೆ.

    ನಾಗವ್ವ ಅಳವಂಡಿ (50) ಮೃತ ದುರ್ದೈವಿ. ಘಟನೆಯಲ್ಲಿ ಗಾಯಗೊಂಡ 8 ಮಂದಿಯನ್ನು ಸ್ಥಳೀಯ ಗಜೇಂದ್ರಗಡ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಸುಮಾರು 30 ಪ್ರಯಾಣಿಕರಿದ್ದ ಬಸ್ ಗಜೇಂದ್ರಗಡದಿಂದ ಇಂದು ಬೆಳಗ್ಗೆ ಸುಮಾರು 7 ಗಂಟೆಗೆ ಗದಗಕ್ಕೆ ತೆರಳುತ್ತಿತ್ತು. ಬಸ್ ಕೊಡಗಾನೂರು ಬಳಿ ಬರುತ್ತಿದ್ದಂತೆ ಚಾಲಕನ ಅಜಾಗರುಕತೆಯಿಂದ ಬಸ್ ರಸ್ತೆ ಪಕ್ಕಕ್ಕೆ ಪಲ್ಟಿ ಹೊಡೆದಿದೆ. ಪರಿಣಾಮ ನಾಗವ್ವ ಎಂಬವರಿಗೆ ಗಂಭೀರ ಗಾಯವಾಗಿದ್ದು, ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆಂಬುಲೆನ್ಸ್ ಸೂಕ್ತ ಸಮಯಕ್ಕೆ ಬಾರದ ಕಾರಣ ಇನ್ನೊಂದು ಸರ್ಕಾರಿ ಬಸ್‍ನಲ್ಲಿಯೇ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ನಾಗವ್ವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಅಪಘಾತ ಗಜೇಂದ್ರಗಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ. ಮೃತರ ಹಾಗೂ ಗಾಯಾಳು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

  • ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟ- ಮೂವರಿಗೆ ಗಂಭೀರ ಗಾಯ

    ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟ- ಮೂವರಿಗೆ ಗಂಭೀರ ಗಾಯ

    ಕೋಲಾರ: ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮೇಲಾಗಣಿ ಗ್ರಾಮದಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಸಿಂಪರಪ್ಪ (55), ಮುನಿರಾಜು (35) ಹಾಗೂ ರೂಪ (20) ಎಂಬವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಅಗ್ನಿ ನಂದಿಸುವ ಕಾರ್ಯ ಮಾಡಿದ್ದಾರೆ.

    ಮೂರು ಜನ ಗಾಯಾಳುಗಳನ್ನು ಸ್ಥಳೀಯ ಮಾಲೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಲಿಂಡರ್ ಸ್ಫೋಟದಿಂದಾಗಿ ಮನೆಯಲ್ಲಿದ್ದ ಗೃಹಬಳಕೆ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿದೆ.

    ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

     

     

     

  • ದೀಪಾವಳಿ ಹಬ್ಬದಂದೇ ಅಕ್ರಮ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: 8 ಸಾವು

    ದೀಪಾವಳಿ ಹಬ್ಬದಂದೇ ಅಕ್ರಮ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: 8 ಸಾವು

    ಭುವನೇಶ್ವರ: ದೀಪಾವಳಿ ಹಬ್ಬದಂದೇ ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು ಸುಮಾರು 8 ಜನರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.

    ಸ್ಫೋಟದಿಂದ ಕಾರ್ಖಾನೆಯ ಅವಶೇಷಗಳ ಕೆಳಗೆ ಇನ್ನೂ ಕಾರ್ಮಿಕರು ಸಿಲುಕಿಕೊಂಡಿರುವ ಸಾಧ್ಯತೆಗಳಿದೆ. ಆದರೆ ಅವರನ್ನು ರಕ್ಷಣೆ ಮಾಡುವ ಕಾರ್ಯಕ್ಕೆ ನಿರಂತರವಾಗಿ ಸುರಿಯುತ್ತಿರುವ ಮಳೆಯು ಅಡ್ಡಿ ಆಗಿತ್ತು. ಇತ್ತೀಚಿನ ವರದಿಯ ಪ್ರಕಾರ ಘಟನೆಯಲ್ಲಿ 8 ಜನ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

    ಬಾಲಸೋರ್‍ನಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಬಹಾಬಲ್ಪುರ್‍ನಲ್ಲಿ ಈ ಫ್ಯಾಕ್ಟರಿ ಇದೆ. ಬುಧವಾರ ಸಂಜೆ ಸುಮಾರು 4.00 ಗೆ ಈ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿಯೇ 6 ಜನರು ಮೃತಪಟ್ಟಿದ್ದರು. ಸತ್ತವರ ದೇಹಗಳನ್ನು ಪತ್ತೆ ಮಾಡಲಾಗಿದೆ. ಈ ಫ್ಯಾಕ್ಟರಿ ಯಾವುದೇ ರೀತಿ ಅಧಿಕೃತ ಲೈಸೆನ್ಸ್ ಹೊಂದದೆ ಅಕ್ರಮವಾಗಿ ಪಟಾಕಿ ತಯಾರಿಸುತ್ತಿತ್ತು ಎಂದು ಜಿಲ್ಲಾಧಿಕಾರಿ ಪ್ರಮೋದ್ ಕುಮಾರ್ ದಾಸ್ ತಿಳಿಸಿದ್ದಾರೆ.

    ಈ ಅವಘಡದಿಂದ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಬಾಲಸೋರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಫೋಟದ ಪರಿಣಾಮ ಪಟಾಕಿ ಫ್ಯಾಕ್ಟರಿ ನಡೆಸುತ್ತಿದ್ದ ಕಟ್ಟಡಕ್ಕೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ಅಷ್ಟೇ ಅಲ್ಲದೇ ದೇಹಗಳು ಚಿದ್ರಚಿದ್ರವಾಗಿ ಗುರುತಿಸುವುದಕ್ಕೂ ಕಷ್ಟವಾಗಿತ್ತು. ಫ್ಯಾಕ್ಟರಿ ಮಾಲೀಕ ಪಟಾಕಿಗಳನ್ನು ಹೊರಗಡೆಯೂ ಮಾರಾಟ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ದಾಸ್, ಎಸ್‍ಪಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಚರಣೆಯನ್ನು ನಡೆಸಿದ್ದಾರೆ. ಘಟನೆಗೆ ನಿಖರವಾದ ಕಾರಣ ಏನೆಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬೈಕ್ ಸಮೇತ 5 ಅಡಿ ಆಳದ ಗುಂಡಿಗೆ ಬಿದ್ದ ಇಬ್ಬರು ಫೋಟೋಗ್ರಾಫರ್!

    ಬೈಕ್ ಸಮೇತ 5 ಅಡಿ ಆಳದ ಗುಂಡಿಗೆ ಬಿದ್ದ ಇಬ್ಬರು ಫೋಟೋಗ್ರಾಫರ್!

    ರಾಯಚೂರು: ಪುರಸಭೆಯ ಕಾರ್ಯಕರ್ತರ ನಿರ್ಲಕ್ಷ್ಯದಿಂದ ಪತ್ರಿಕಾ ಛಾಯಾಗ್ರಾಹಕರಿಬ್ಬರು ಬೈಕ್ ಸಮೇತ ನೀರಿನ ಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ಜಿಲ್ಲೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ನಡೆದಿದೆ.

    ಛಾಯಾಗ್ರಾಹಕರಾದ ಗಯಾಸ್ ಹಾಗೂ ಶೇಕ್ ಬಾಬಾ ಗಾಯಗೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ಕ್ಯಾಮೆರಾ, ಲಾಪ್ ಟಾಪ್, ಪೆನ್‍ಡ್ರೈವ್ ಮತ್ತು ಮೊಬೈಲ್ ಹಾಳಾಗಿವೆ.

    ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅವಾಂತರಗಳು ಸೃಷ್ಟಿಯಾಗುತ್ತಿವೆ. ಶಾಲಾ ಆವರಣದಲ್ಲಿ ನಿಲ್ಲುತ್ತಿದ್ದ ಮಳೆ ನೀರಿನ ಸಂಗ್ರಹಕ್ಕೆ 5 ಅಡಿ ಆಳದ ಗುಂಡಿ ತೋಡಲಾಗಿತ್ತು. ಆದರೆ ಮಾನ್ವಿ ಪಟ್ಟಣದ ಪುರಸಭೆಯವರು ಅಕ್ಕ ಪಕ್ಕ ಯಾವುದೇ ರೀತಿಯ ಸೂಚನಾ ಫಲಕವನ್ನು ಹಾಕಿಲ್ಲ. ಹೀಗಾಗಿ ಶಾಲಾ ಗೇಟ್ ಪಕ್ಕದಲ್ಲೇ ಇರುವ ಗುಂಡಿಯ ಆಳ ತಿಳಿಯದೇ ಬಂದ ಛಾಯಾಗ್ರಾಹಕರು ಬೈಕ್ ಸಹಿತವಾಗಿ ಗುಂಡಿಯಲ್ಲಿ ಬಿದ್ದಿದ್ದಾರೆ. ವಿದ್ಯಾರ್ಥಿಗಳು ಓಡಾಡುವ ಸ್ಥಳದಲ್ಲೇ ಗುಂಡಿಯನ್ನು ತೋಡಿ ಹಾಗೇ ಬಿಟ್ಟಿರುವುದು ದೊಡ್ಡ ಅನಾಹುತಗಳಿಗೆ ಆಹ್ವಾನದಂತಿವೆ.

    ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಾನ್ವಿ ಪುರಸಭೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಛಾಯಾಗ್ರಾಹಕರು ಮುಂದಾಗಿದ್ದಾರೆ.

  • ಸಿಂಹದ ತಲೆ ಸವರಲು ಹೋದ ಆಟಗಾರ: ಮುಂದೇ ಏನಾಯ್ತು ವಿಡಿಯೋ ನೋಡಿ

    ಸಿಂಹದ ತಲೆ ಸವರಲು ಹೋದ ಆಟಗಾರ: ಮುಂದೇ ಏನಾಯ್ತು ವಿಡಿಯೋ ನೋಡಿ

    ಜೋಹಾನ್ಸ್ ಬರ್ಗ್: ನೀವು ಪ್ರಾಣಿ ಪ್ರಿಯರಾಗಿದ್ದು, ಅವುಗಳನ್ನು ಪ್ರೀತಿಯಿಂದ ಮುಟ್ಟಲು ಹೋದರೆ ಹುಷಾರಾಗಿರಿ. ವ್ಯಕ್ತಿಯೊಬ್ಬರು ಪ್ರೀತಿಯಿಂದ ಸಿಂಹದ ತಲೆ ಸವರಲು ಹೋಗಿ ಈಗ ಕಚ್ಚಿಸಿಕೊಂಡು ಎರಡು ಹೊಲಿಗೆಯನ್ನು ಹಾಕಿಸಿಕೊಂಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

    ವೆಲ್ಷಿ ರಗ್ಬಿ ಆಟಗಾರ ಸ್ಕಾಟ್ ಬಾಲ್ಡ್ವಿನ್ ಮತ್ತು ಅವರ ತಂಡ ವೆಲ್ಟೆವ್ರೆಡೆನ್ ಗೇಮ್ ಲಾಡ್ಜ್ ಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಸಿಂಹಗಳನ್ನು ನೋಡುತ್ತಾ ತಲೆ ಸವರುತ್ತಾ ಖುಷಿ ಪಡುತ್ತಿದ್ದರು. ಆದರೆ ತಲೆ ಸವರಲು ಹೋದ ಸ್ಕಾಟ್ ಬಾಲ್ಡ್ವಿನ್‍ನ ಕೈಯನ್ನು ಸಿಂಹ ಬಾಯಿಯಲ್ಲಿ ಹಿಡಿದು ಕೊಂಡಿದೆ. ಸಿಂಹ ಹಿಡಿದುಕೊಂಡ ಪರಿಣಾಮ ನೋವು ತಾಳಲಾಗದೆ ಕಿರುಚಾಡಿ ಕೈ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೊನೆಗೂ ಸಿಂಹದ ಬಾಯಿಂದ ಕೈಯನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಎರಡು ಹೊಲಿಗೆ ಹಾಕಿದ್ದಾರೆ.

    ಈ ಅವಘಡದಿಂದ ಅವರು ಹಾಗೂ ಅವರ ತಂಡ ಇನ್ನೊಮ್ಮೆ ಯಾವುದೇ ಕಾರಣಕ್ಕೂ ಪ್ರಾಣಿಗಳ ಹತ್ತಿರ ಹೋಗಬಾದರು ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಾಕಿದ್ದು, ಸ್ಕಾಟ್ ಮತ್ತು ಅವರ ತಂಡಕ್ಕೆ ಎಚ್ಚರಿಕೆ ನೀಡಲಾಗಿದೆ.

    https://twitter.com/AndyGoode10/status/913879469798166528

  • ಸ್ಪಿರಿಟ್ ತುಂಬಿದ್ದ ಟ್ಯಾಂಕರ್‍ಗೆ ಖಾಸಗಿ ಬಸ್ ಡಿಕ್ಕಿ: ಇಬ್ಬರ ಸಾವು, 30 ಜನರಿಗೆ ಗಾಯ

    ಸ್ಪಿರಿಟ್ ತುಂಬಿದ್ದ ಟ್ಯಾಂಕರ್‍ಗೆ ಖಾಸಗಿ ಬಸ್ ಡಿಕ್ಕಿ: ಇಬ್ಬರ ಸಾವು, 30 ಜನರಿಗೆ ಗಾಯ

    ಹಾವೇರಿ: ಸ್ಪಿರಿಟ್ ತುಂಬಿದ್ದ ಟ್ಯಾಂಕರ್ ಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, 30 ಜನರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದ ಹಲಗೇರಿ ಬ್ರಿಡ್ಜ್ ಬಳಿ ನಡೆದಿದೆ.

    ಬಸ್‍ನಲ್ಲಿದ್ದ ರಾಜಸ್ಥಾನ ಮೂಲದ 54 ವರ್ಷ ವಯಸ್ಸಿನ ಅರವಿಂದ ಕೊಠಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಮೃತ ಮಹಿಳೆ ಹೆಸರು ತಿಳಿದುಬಂದಿಲ್ಲ. ಗಾಯಾಳುಗಳನ್ನು ರಾಣೇಬೆನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಖಾಸಗಿ ಬಸ್ ಮುಂಬೈನಿಂದ ಮೈಸೂರಿಗೆ ಹೊರಟ್ಟಿತ್ತು. ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್ ನಿಂದ ಸ್ಪಿರಿಟ್ ಸೋರಿಕೆಯಾಗಿದೆ. ಹೀಗಾಗಿ ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕ್ರೇನ್ ಮೂಲಕ ವಾಹನವನ್ನ ಬೇರೆ ಕಡೆಗೆ ವರ್ಗಾವಣೆ ಮಾಡಲಾಗುತ್ತಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಣೇಬೆನ್ನೂರು ಪೊಲೀಸರು ಹಾಗೂ ಎಸ್ಪಿ ಕೆ.ಪರಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ರಾಯಚೂರಲ್ಲಿ ರಾತ್ರಿಯಿಡೀ ಮಳೆ: ಮನೆ ಕುಸಿತ ಮೂವರಿಗೆ ಗಾಯ

    ರಾಯಚೂರಲ್ಲಿ ರಾತ್ರಿಯಿಡೀ ಮಳೆ: ಮನೆ ಕುಸಿತ ಮೂವರಿಗೆ ಗಾಯ

    ರಾಯಚೂರು: ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ಎರಡು ಮನೆ ಕುಸಿದು ಬಿದ್ದಿದ್ದು ಮೂವರು ಗಾಯಗೊಂಡಿರುವ ಘಟನೆ ಸಿಯತಲಾಬ್ ನಗರದಲ್ಲಿ ನಡೆದಿದೆ.

    ಸೈದಾ ರೆಡ್ಡಿ, ನಾಗವೇಣಿ, ಸಂಸ್ಕೃತಿ ಗಾಯಗೊಂಡಿದ್ದಾರೆ. ಪಕ್ಕದ ಮನೆ ಗೋಡೆ ಕುಸಿದಿದ್ದರಿಂದ ಸೈದಾರೆಡ್ಡಿ ಅವರ ಮನೆ ಮನೆ ಸಂಪೂರ್ಣ ಜಖಂಗೊಂಡಿದೆ.

    ಮನೆಯಲ್ಲಿ ಸಿಕ್ಕಿಬಿದ್ದಿದ್ದ ಕುಟುಂಬದವರನ್ನ ಅಕ್ಕಪಕ್ಕದ ಮನೆಯವರು ಕಾಪಾಡಿ ಹೊರಗೆ ಕರೆತಂದಿದ್ದಾರೆ. ಮೂರು ವರ್ಷದ ಮಗಳು ಸಂಸ್ಕೃತಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

    ಈ ಕುರಿತು ಸದರ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.