Tag: injury

  • ಸೋರಿಕೆಯಾದ ಸಿಲಿಂಡರ್ ಹೊರಗೆ ತರುವಾಗ ಸ್ಫೋಟ – ರಸ್ತೆ ಬದಿ ನೋಡುತ್ತಾ ನಿಂತಿದ್ದ ಮಹಿಳೆ ದುರ್ಮರಣ

    ಸೋರಿಕೆಯಾದ ಸಿಲಿಂಡರ್ ಹೊರಗೆ ತರುವಾಗ ಸ್ಫೋಟ – ರಸ್ತೆ ಬದಿ ನೋಡುತ್ತಾ ನಿಂತಿದ್ದ ಮಹಿಳೆ ದುರ್ಮರಣ

    ಶಿವಮೊಗ್ಗ: ಸಿಲಿಂಡರ್ ಸ್ಫೋಟಗೊಂಡು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿಯ ಕೂಲಿ ಬ್ಲಾಕ್ ಶೆಡ್ ನಲ್ಲಿ ನಡೆದಿದೆ.

    ಸರಸ್ವತಿ ಮೃತಪಟ್ಟ ದುರ್ದೈವಿ. ಈ ಅವಘಡದಿಂದ ಗಾಯಗೊಂಡಿರುವ ಮೂವರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ನಗರದ ನಿವಾಸಿ ಕಲಾ ಎಂಬವರ ಮನೆಯಲ್ಲಿ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅವರು ಸಿಲಿಂಡರನ್ನು ಹೊರಗೆ ತಂದಿಟ್ಟು ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಈ ಎಲ್ಲಾ ಘಟನೆಗಳನ್ನು ನೋಡುತ್ತಾ ರಸ್ತೆ ಬದಿ ನಿಂತಿದ್ದ ಸರಸ್ವತಿ ಅವರಿಗೆ ಬಡಿದಿದ್ದು, ತಕ್ಷಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಶಾಸಕ ಅಪ್ಪಾಜಿಗೌಡ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿದ್ದಾರೆ.

  • ಹೆಚ್ಚು ಗಾಯವಾಗಿಲ್ಲ, ಎದ್ದು ಹೋಗ್ತಾನೆ ಅಂತಾ ಅಪಘಾತಕ್ಕೀಡಾದ ವ್ಯಕ್ತಿಯನ್ನು ಬಿಟ್ಟು ಹೋದ ಆಂಬುಲೆನ್ಸ್ ಸಿಬ್ಬಂದಿ!

    ಹೆಚ್ಚು ಗಾಯವಾಗಿಲ್ಲ, ಎದ್ದು ಹೋಗ್ತಾನೆ ಅಂತಾ ಅಪಘಾತಕ್ಕೀಡಾದ ವ್ಯಕ್ತಿಯನ್ನು ಬಿಟ್ಟು ಹೋದ ಆಂಬುಲೆನ್ಸ್ ಸಿಬ್ಬಂದಿ!

    ಮಂಡ್ಯ: ಅಪಘಾತದಲ್ಲಿ ಗಾಯಗೊಂಡು ಇಡೀ ರಾತ್ರಿ ನರಳಾಡಿದ್ರೂ ಸ್ಥಳಕ್ಕೆ ಬಂದಿದ್ದ ಆಂಬುಲೆನ್ಸ್ ಸಿಬ್ಬಂದಿ ಕೂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯದೇ ಅಮಾನವೀಯವಾಗಿ ವರ್ತಿಸಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.

    ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕ ಸಿಟಿ ಕ್ಲಬ್ ಎದುರು ಅಪರಿಚಿತ ವ್ಯಕ್ತಿಯೊಬ್ಬ ಅಪಘಾತದಲ್ಲಿ ಗಾಯಗೊಂಡು ರಸ್ತೆ ಪಕ್ಕ ಬಿದ್ದಿದ್ದರು. ತಡರಾತ್ರಿ ಅಪಘಾತ ನಡೆದಿದ್ದು, ಸಾರ್ವಜನಿಕರು ಈ ಬಗ್ಗೆ ಆಂಬುಲೆನ್ಸ್ ಗೆ ಮಾಹಿತಿ ನೀಡಿದ್ದಾರೆ.

    ಈ ವೇಳೆ ರಾತ್ರಿಯೇ ಸ್ಥಳಕ್ಕೆ ಬಂದ ಆಂಬುಲೆನ್ಸ್ ಸಿಬ್ಬಂದಿ ಹೆಚ್ಚು ಗಾಯವಾಗಿಲ್ಲ, ಎದ್ದು ಹೋಗುತ್ತಾನೆ ಅಂತಾ ಹೇಳಿ ನಿರ್ಲಕ್ಷ್ಯದಿಂದ ಹೊರಟು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಮುಂಜಾನೆ ಐದೂವರೆ ಸುಮಾರಿಗೆ ವಿಷಯ ತಿಳಿದ ಮಂಡ್ಯ ತಾಲೂಕು ವೈದ್ಯಾಧಿಕಾರಿ ಶಶಿಧರ್ ಸ್ಥಳಕ್ಕೆ ಆಗಮಿಸಿ, ಮತ್ತೆ ಆಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಅವರು ಸ್ಥಳಕ್ಕೆ ಬಂದ ನಂತರವೂ ಆಂಬುಲೆನ್ಸ್ ತಡವಾಗಿ ಆಗಮಿಸಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಶಿಧರ್, ನಾನು ಕರೆ ಮಾಡಿದಾಗ ಒಂದು ಆಂಬುಲೆನ್ಸ್ ನಂಬರ್ ಸ್ವಿಚ್ ಆಫ್ ಆಗಿತ್ತು ಹಾಗೂ ರಾತ್ರಿಯೇ ಆಂಬುಲೆನ್ಸ್ ಸ್ಥಳಕ್ಕೆ ಬಂದು ಗಾಯಗೊಂಡಿದ್ದ ವ್ಯಕ್ತಿಯನ್ನು ಇಲ್ಲಿಯೇ ಬಿಟ್ಟು ಹೋದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರು ನೀಡುತ್ತೇನೆ. ಮುಂದೆ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

  • ಫ್ಲೈ ಓವರ್ ಮೇಲೆ ನಿಂತಿದ್ದ ಟಾಟಾ ಏಸ್‍ಗೆ ಓಮ್ನಿ ಕಾರು ಡಿಕ್ಕಿಯಾಗಿ ಪಲ್ಟಿ – ನಾಲ್ವರು ಗಂಭೀರ

    ಫ್ಲೈ ಓವರ್ ಮೇಲೆ ನಿಂತಿದ್ದ ಟಾಟಾ ಏಸ್‍ಗೆ ಓಮ್ನಿ ಕಾರು ಡಿಕ್ಕಿಯಾಗಿ ಪಲ್ಟಿ – ನಾಲ್ವರು ಗಂಭೀರ

    ಬೆಂಗಳೂರು: ಫ್ಲೈ ಓವರ್ ಮೇಲೆ ನಿಂತಿದ್ದ ಟಾಟಾ ಏಸ್‍ಗೆ ಓಮ್ನಿ ಕಾರು ಡಿಕ್ಕಿ ಹೊಡೆದು ಬಳಿಕ ಪಲ್ಟಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗದಲ್ಲಿ ನಡೆದಿದೆ.

    ಈ ಘಟನೆ ನೆಲಮಂಗಲದ ಸೊಂಡೆಕೊಪ್ಪ ಬೈಪಾಸ್ ಫ್ಲೈ ಓವರ್ ಮೇಲೆ ಸಂಭವಿಸಿದ್ದು, ಫ್ಲೈ ಓವರ್ ಮೇಲೆ ಟಾಟಾಏಸ್ ಕೆಟ್ಟು ನಿಂತಿತ್ತು. ಈ ವೇಳೆ ತುಮಕೂರನಿಂದ ಬೆಂಗಳೂರಿಗೆ ಓಮ್ನಿ ಕಾರು ಬರುತ್ತಿತ್ತು. ಫ್ಲೈ ಓವರ್ ಮೇಲೆ ವೇಗವಾಗಿ ಬಂದು ನಿಂತಿದ್ದ ಟಾಟಾ ಏಸ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಓಮ್ನಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು, ಸಂಚಾರಿ ಪೊಲೀಸರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಅಪಘಾತದಿಂದ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

  • ಮದ್ವೆಗೆ ಹೋಗುತ್ತಿದ್ದ ಐಷರಾಮಿ ಬಸ್, ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ – 9 ಮಂದಿ ದುರ್ಮರಣ

    ಮದ್ವೆಗೆ ಹೋಗುತ್ತಿದ್ದ ಐಷರಾಮಿ ಬಸ್, ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ – 9 ಮಂದಿ ದುರ್ಮರಣ

    ಗಾಂಧಿನಗರ: ಐಷರಾಮಿ ಬಸ್ ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿದ್ದು, 15ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ ನ ಕುಚ್ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಕಂಕುಬೆನ್ ಅನವಾಡಿಯಾ (60), ಪಮಿಬೆನ್ ಅನವಾಡಿಯಾ (55), ಜಿಜಿಯಾಬೆನ್ ಅನವಾಡಿಯಾ (25), ದಯಾಬೆನ್ ಅನಾವಾಡಿಯಾ (35), ಮಾನಬೆನ್ ಅನವಾಡಿಯಾ (50), ನಿಶಬೆನ್ ಅನವಾಡಿಯಾ (17), ರಾಮಬೆನ್ ಅನವಾಡಿಯಾ (60) , ಕಿಶೋರ್ ಅನವಾಡಿಯಾ (10) ಮತ್ತು ವಿಶಾಲ್ ಅನವಾಡಿಯಾ (20) ಎಂದು ಗುರುತಿಸಲಾಗಿದೆ.

    ರಾಜ್ಯ ಹೆದ್ದಾರಿ 42 ರ ಯೂರೋ ಸೆರಾಮಿಕ್ ಕಾರ್ಖಾನೆಯ ಬಳಿ ಇಂದು ಬೆಳಿಗ್ಗೆ 10:30 ರ ವೇಳೆಗೆ ಅಪಘಾತ ಸಂಭವಿಸಿದ್ದು, ಇದು ಕುಚ್ ಜಿಲ್ಲೆಯ ಪ್ರಧಾನ ಕಚೇರಿಯಾದ ಭುಜ್ನೊಂದಿಗೆ ಭಚೌ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು ಸೌರಾಷ್ಟ್ರ-ಕುಚ್ ಪ್ರದೇಶದ ಮೂರನೇ ಭೀಕರ ಅಪಘಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಐಷರಾಮಿ ಬಸ್ ಕುಚ್ ಗ್ರಾಮದಿಂದ ಸಿಖ್ರಾ ಗ್ರಾಮಕ್ಕೆ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗುತ್ತಿತ್ತು. ಇದರ ವಿರುದ್ಧ ದಿಕ್ಕಿನಿಂದ ಅಂದರೆ ಸಿಖ್ರಾ ಗ್ರಾಮದಿಂದ ಚಾದಾರ್ದಾ ಗ್ರಾಮಕ್ಕೆ ಮದುವೆ ಸಮಾರಂಭಕ್ಕೆಂದು ಪ್ರಯಾಣಿಕರನ್ನು ತುಂಬಿಕೊಂಡು ಟ್ರ್ಯಾಕ್ಟರ್ ತೆರಳುತ್ತಿತ್ತು. ಈ ವೇಳೆ ರಾಜ್ಯ ಹೆದ್ದಾರಿ 42ರಲ್ಲಿ ವೇಗವಾಗಿ ಬಂದ ವಾಹನಗೆಳೆರಡು ಮುಖಾಮುಖಿ ಡಿಕ್ಕಿ ಹೊಡೆದಿದೆ.

    ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ. 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಟ್ರ್ಯಾಕ್ಟರ್ ರಸ್ತೆಯಲ್ಲಿ ಸರಿಯಾದ ಮಾರ್ಗದಲ್ಲಿ ಚಲಿಸದೆ ಇದ್ದುದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕ್ಷಕಿ ಭಾವನ ಪಟೇಲ್ ತಿಳಿಸಿದ್ದಾರೆ.

    https://www.youtube.com/watch?v=cn2ggUHm-MU

  • ಎರಡು ಕುಟುಂಬಗಳ ನಡುವೆ ಕಲ್ಲು ಹಾಗೂ ದೊಣ್ಣೆಗಳಿಂದ ಮಾರಾಮಾರಿ – ವಿಡಿಯೋ

    ಎರಡು ಕುಟುಂಬಗಳ ನಡುವೆ ಕಲ್ಲು ಹಾಗೂ ದೊಣ್ಣೆಗಳಿಂದ ಮಾರಾಮಾರಿ – ವಿಡಿಯೋ

    ಬೆಳಗಾವಿ: ಜಮೀನಿಗಾಗಿ ಎರಡು ಕುಟುಂಬಗಳ ಸದಸ್ಯರು ಕಲ್ಲು ಹಾಗೂ ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆ ರಾಯಬಾಗ ತಾಲ್ಲೂಕಿನ ಬೆಕ್ಕೇರಿ ಗ್ರಾಮದಲ್ಲಿ ನಡೆದಿದೆ.

    ಮಾಯಪ್ಪ ಪಾಯಪ್ಪಗೋಳ ಹಾಗೂ ರಾಮ ಪಾಯಪ್ಪಗೋಳ ಕುಟುಂಬದ ಸುಮಾರು 15ಕ್ಕೂ ಹೆಚ್ಚು ಮಂದಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

    https://www.youtube.com/watch?v=EZPfOAIfFEY

  • ಮಹಾರಾಷ್ಟ್ರದಲ್ಲಿ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ಟ್ರಕ್ ಪಲ್ಟಿ- ಮಹಿಳೆಯರು ಸೇರಿ ವಿಜಯಪುರದ 17 ಮಂದಿ ದುರ್ಮರಣ

    ಮಹಾರಾಷ್ಟ್ರದಲ್ಲಿ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ಟ್ರಕ್ ಪಲ್ಟಿ- ಮಹಿಳೆಯರು ಸೇರಿ ವಿಜಯಪುರದ 17 ಮಂದಿ ದುರ್ಮರಣ

    ಮುಂಬೈ: ಮಹಾರಾಷ್ಟ್ರದಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ ಮೆರೆದಿದ್ದು, ಟ್ರಕ್ ಹೆದ್ದಾರಿಯ ಬ್ಯಾರ್‍ಕೇಡ್ ಗೆ ಡಿಕ್ಕಿ ಹೊಡೆದು ನಂತರ ಪಲ್ಟಿಯಾದ ಪರಿಣಾಮ 17 ಮಂದಿ ಮೃತಪಟ್ಟಿದ್ದಾರೆ.

    ಈ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಖಂಡಾಲಾದ ಬಳಿ ನಡೆದಿದೆ. ಘಟನೆಯಲ್ಲಿ ಹಲವು ಮಹಿಳೆಯರು ಸೇರಿ 17 ಮಂದಿ ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ವಿಜಯಪುರದಿಂದ ಪುಣೆ ಕಡೆ ತೆರಳುತ್ತಿತ್ತು. ಟ್ರಕ್ ಮುಂಬೈ- ಬೆಂಗಳೂರು ಹೆದ್ದಾರಿಯಲ್ಲಿ ತೆರಳುತ್ತಿದ್ದಂತೆಯೇ ಖಂಬಡ್ಕಿ ಘಾಟ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಕ್ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದಿದ್ದು, ಪಲ್ಟಿಯಾಗಿದೆ ಅಂತ ಸತಾರಾ ಎಸ್‍ಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಖಂಡಾಲಾ ಸರಂಗ ಮಾರ್ಗವು `ಎಸ್’ ಆಕಾರದ ತಿರುವಿನಲ್ಲಿದೆ. ಈ ಮೊದಲು ಇಲ್ಲಿ ಅನೇಕ ಅಪಘಾತಗಳು ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ ಇದೊಂದು ಅಪಘಾತವಲಯವಾಗಿದೆ ಎನ್ನಲಾಗಿದೆ.

    ಘಟನೆಯಲ್ಲಿ 17 ಮಂದಿ ಸ್ಥಳದಲ್ಲೇ ಮೃತಪಟ್ಟರೆ, 15ಕ್ಕೂ ಹೆಚ್ಚು ಮಂದಿ ಗಾಯಗಳಾಗಿವೆ. ಅಪಘಾತ ಸಂಭವಿಸಿದ ಕೂಡಲೇ ಖಂಡಾಲಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

    ಸದ್ಯ ಘಟನೆಗೆ ಕಾರಣವೇನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಾಲಕ ನಿದ್ದೆಯ ಮಂಪರಿನಲ್ಲಿ ಈ ಅವಘಡ ಸಂಭವಿಸರಬಹುದೆಂದು ಅವರು ಶಂಕಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

    ಮೃತ ದೇಹಗಳನ್ನು ಪೋಸ್ಟ್ ಮಾರ್ಟಮ್ ಗೆ ರವಾನಿಸಲಾಗಿದ್ದು, ಮೃತರ ಗುರುತು ಪತ್ತೆ ಇನ್ನಷ್ಟೇ ತಿಳಿದುಬರಬೇಕಿದೆ.

  • ಕಾರು, ಬೈಕ್ ಮುಖಾಮುಖಿ ಡಿಕ್ಕಿ- ಅಯ್ಯೋ ಕಾಪಾಡಿ ಎಂದು ಗಾಯಾಳು ಅಂಗಲಾಚಿದ್ದರು ಸುಮ್ಮನೇ ನಿಂತ ಜನ!

    ಕಾರು, ಬೈಕ್ ಮುಖಾಮುಖಿ ಡಿಕ್ಕಿ- ಅಯ್ಯೋ ಕಾಪಾಡಿ ಎಂದು ಗಾಯಾಳು ಅಂಗಲಾಚಿದ್ದರು ಸುಮ್ಮನೇ ನಿಂತ ಜನ!

    ಹಾಸನ: ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಕಾಲು ಮುರಿದುಕೊಂಡು ಗಂಟೆಗಟ್ಟಲೆ ನರಳಾಡಿದರೂ ಯಾರೊಬ್ಬರು ನೆರವಿಗೆ ಬಾರದೆ ಅಮಾನವೀಯತೆ ತೋರಿದ ಘಟನೆ ಹಾಸನ ಜಿಲ್ಲೆ ಆಲೂರು ಬಳಿ ನಡೆದಿದೆ.

    ಪ್ರಸನ್ನ ಅಪಘಾತದಲ್ಲಿ ಕಾಲು ಮುರಿದುಕೊಂಡ ಬೈಕ್ ಸವಾರ. ಬೇಲೂರು ತಾಲೂಕು ಬಿಕ್ಕೋಡು ಗ್ರಾಮದ ಪ್ರಸನ್ನ ಸುಮಾರು 1 ಗಂಟೆ ಕಾಲ ರಸ್ತೆಯಲ್ಲಿಯೇ ನರಳಾಡಿದ್ದರು. ಆಲೂರು ಹೊರವಲಯದ ಅರೇಬಿಕ್ ಕಾಲೇಜ್ ಹತ್ತಿರ ಸೋಮವಾರ ಮಧ್ಯಾಹ್ನ ಅಪಘಾತ ಸಂಭವಿಸಿತ್ತು.

    ಹಾಸನ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರು, ಆಲೂರು ಕಡೆಯಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಬೈಕ್ ಸವಾರ ಪ್ರಸನ್ನರ ಕಾಲು ಹಾಗೂ ತಲೆಗೆ ಬಲವಾಗಿ ಪೆಟ್ಟು ಬಿದ್ದು, ಕಾಲು ಮುರಿದಿತ್ತು. ಇದರಿಂದ ಮೇಲೆಳಲಾಗದೇ ರಸ್ತೆಯಲ್ಲಿ ರಕ್ತದ ಮಧ್ಯೆ ಗಾಯಾಳು ಒದ್ದಾಡುತ್ತಿದ್ದರು ಯಾರೊಬ್ಬರೂ ಪ್ರಸನ್ನ ನೆರವಿಗೆ ಬಾರದೇ ಮೂಕ ಪ್ರೇಕ್ಷಕರಾಗಿದ್ದರು.

    ಅಯ್ಯೋ ಕಾಪಾಡಿ ಎಂದು ಗಾಯಾಳು ಅಂಗಲಾಚಿದ್ದರು ಜನ ಸುಮ್ಮನೇ ನಿಂತಿದ್ದರು. ನಂತರ ಯಾರೋ ಆಲೂರು ಪೊಲೀಸರು ಮತ್ತು ಹಾಗೂ ಆಂಬುಲೆನ್ಸ್ ಗೆ ಕರೆ ಮಾಡಿದರು. ಫೋನ್ ಮಾಡಿ ಸುದ್ದಿ ತಿಳಿಸಿದ್ದರು. ನಂತರ ಗಂಟೆ ಕಳೆದರು ಪೊಲೀಸರು ಬಾರಲೇ ಇಲ್ಲ.

    ಅತ್ತ ರಿಪೇರಿ ಇದೆ ಎನ್ನುವ ಕಾರಣ ನೀಡಿ ಸರ್ಕಾರಿ ಆಂಬುಲೆನ್ಸ್ ಸಹ ಬರಲಿಲ್ಲ. ಕೊನೆಗೆ ತಡವಾಗಿಯಾದರು ಹಾಸನದಿಂದ ಆಗಮಿಸಿದ ಆಂಬುಲೆನ್ಸ್ ಮೂಲಕ ಪ್ರಸನ್ನ ರನ್ನು ಸಾಗಿಸಲಾಯಿತು. ಸದ್ಯ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ.

  • ವೇಗವಾಗಿ ಬಂದು ತಪಾಸಣಾ ಗೇಟ್ ಗೆ ಡಿಕ್ಕಿ ಹೊಡೆಯಿತು ಲಾರಿ – ಪಾಲಕನಿಗೆ ಗೇಟ್ ಬಡಿಯೋದನ್ನು ನೋಡಿ

    ವೇಗವಾಗಿ ಬಂದು ತಪಾಸಣಾ ಗೇಟ್ ಗೆ ಡಿಕ್ಕಿ ಹೊಡೆಯಿತು ಲಾರಿ – ಪಾಲಕನಿಗೆ ಗೇಟ್ ಬಡಿಯೋದನ್ನು ನೋಡಿ

    ಮಡಿಕೇರಿ: ರಭಸದಿಂದ ಬಂದ ಲಾರಿಯೊಂದು ಅರಣ್ಯ ತಪಾಸಣಾ ಗೇಟ್ ಗೆ ಡಿಕ್ಕಿ ಹೊಡೆದು ಆ ಗೇಟ್ ಪಾಲಕನಿಗೆ ಬಡಿದ ಘಟನೆ ಕೊಡಗು ಜಿಲ್ಲೆಯ ಸಂಪಾಜೆಯಲ್ಲಿ ನಡೆದಿದೆ.

    ರಾಜಪ್ಪ ಗಂಭೀರವಾಗಿ ಗಾಯಗೊಂಡಿದ್ದ ಗೇಟ್ ಪಾಲಕ. ರಾಜಪ್ಪ ಅರಣ್ಯ ಇಲಾಖೆಯ ಹಂಗಾಮಿ ನೌಕರನಾಗಿದ್ದು ಗೇಟ್ ಹಾಕುವ ಕೆಲಸ ಮಾಡುತ್ತಿದ್ದರು. ಈ ವೇಳೆ ಲಾರಿಯೊಂದು ರಭಸದಿಂದ ಬಂದು ಗೇಟ್‍ಗೆ ಡಿಕ್ಕಿ ಹೊಡೆದಿದೆ. ಆ ಗೇಟ್ ಪಾಲಕನಿಗೆ ಎರಡು ಬಾರಿ ಹೊಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಏಪ್ರಿಲ್ 6ರ ಬೆಳಿಗ್ಗೆ 10.50 ಕ್ಕೆ ಘಟನೆ ನಡೆದಿದ್ದು, ರಾಜಪ್ಪ ಗೇಟ್ ಹಾಕುವ ಕೆಲಸ ಮಾಡುತ್ತಿದ್ದರು. ಮಡಿಕೇರಿ ಕಡೆಯಿಂದ ಬಂದ ಲಾರಿ ಏಕಾಏಕಿ ಗೇಟ್ ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಗೇಟ್ ರಸ್ತೆ ಬದಿ ನಿಲ್ಲಿಸಿದ ಇಕೋ ವಾಹನಕ್ಕೆ ಸೇರಿಸಿ ರಾಜಪ್ಪ ಅವರಿಗೆ ಎರಡು ಬಾರಿ ಅಪ್ಪಳಿಸಿದೆ.

    ಲಾರಿಯ ಬ್ರೇಕ್ ವಿಫಲಗೊಂಡ ಪರಿಣಾಮ ರಾಜಿ ಸಂಧಾನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ರಾಜಪ್ಪ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    https://www.youtube.com/watch?v=wgpKi3w4EeU&feature=youtu.be

  • ಧಾರವಾಡದಲ್ಲಿ ಭೀಕರ ಅಪಘಾತ- ಸಾರಿಗೆ ಬಸ್, ಟವೇರಾ ಮುಖಾಮುಖಿ ಡಿಕ್ಕಿಯಾಗಿ ಹೆಣ್ಣು ಮಗು ಸೇರಿ ನಾಲ್ವರ ದುರ್ಮರಣ

    ಧಾರವಾಡದಲ್ಲಿ ಭೀಕರ ಅಪಘಾತ- ಸಾರಿಗೆ ಬಸ್, ಟವೇರಾ ಮುಖಾಮುಖಿ ಡಿಕ್ಕಿಯಾಗಿ ಹೆಣ್ಣು ಮಗು ಸೇರಿ ನಾಲ್ವರ ದುರ್ಮರಣ

    ಧಾರವಾಡ: ಜಿಲ್ಲೆಯ ಮುರಕಟ್ಟಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಇಮ್ರಾನ್ ಮಕಾಂನದಾರ(38), ಆಫ್ರೀನ ಮಕಾಂನದಾರ (28), ಮಗಳು ಆಯಿಷಾ(4) ಮತ್ತು ಟವೇರಾ ಚಾಲಕ ಮೃತ ದುರ್ದೈವಿಗಳು. ಮೃತರನ್ನು ಧಾರವಾಡ ಕಂಠಿ ಒಣಿಯ ನಿವಾಸಿಗಳು ಎಂದು ತಿಳಿದುಬಂದಿದೆ.

    ಇಂದು ಬೆಳಗ್ಗೆ ಕಂಠಿ ಓಣಿಯ ಕುಟುಂಬ ಕಾರವಾರಕ್ಕೆ ಪ್ರವಾಸಕ್ಕೆ ಹೊರಟಿತ್ತು. ಈ ವೇಳೆ ಸರ್ಕಾರಿ ಸಾರಿಗೆ ಬಸ್ ಹಾಗೂ ಮಕಾಂದಾರ ಕುಟುಂಬ ಹೊರಟಿದ್ದ ಟವೇರಾ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿವೆ.

    ಅಪಘಾತದ ರಭಸಕ್ಕೆ ಟವೇರಾದಲ್ಲಿದ್ದ ಒಂದೇ ಕುಟುಂಬದ ಮೂವರು ಹಾಗೂ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದ 5 ಜನ ಗಾಯಾಳುಗಳನ್ನ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಚಾಲಕನ ಹೆಸರು ತಿಳಿದುಬಂದಿಲ್ಲ. ಸದ್ಯ ಶವಗಳನ್ನ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಗಾಯಾಳುಗಳನ್ನ ಹೆಚ್ಚಿನ ಚಿಕಿತ್ಸೆ ನೀಡಲು ಕಿಮ್ಸ್ ಆಸ್ಪತ್ರೆಗೆ ರವಾನಿಸುವ ಸಾಧ್ಯತೆ ಇದೆ.

    ಈ ಘಟನೆ ಸಂಬಂಧ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಟವೇರಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

  • SSLC ಪರೀಕ್ಷೆಗೆ ವಿದ್ಯಾರ್ಥಿಗಳನ್ನ ಕರೆದೊಯ್ಯುತ್ತಿದ್ದಾಗ ಟಾಟಾ ಏಸ್ ಪಲ್ಟಿ – 15 ಮಂದಿಗೆ ಗಾಯ

    SSLC ಪರೀಕ್ಷೆಗೆ ವಿದ್ಯಾರ್ಥಿಗಳನ್ನ ಕರೆದೊಯ್ಯುತ್ತಿದ್ದಾಗ ಟಾಟಾ ಏಸ್ ಪಲ್ಟಿ – 15 ಮಂದಿಗೆ ಗಾಯ

    ಬಾಗಲಕೋಟೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದ ಬಳಿ ನಡೆದಿದೆ.

    ಘಟನೆಯಲ್ಲಿ 15 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಸಮೀಪದ ಕೆರೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳನ್ನು ಯಂಕಚಿ ಗ್ರಾಮದ ಸರಕಾರಿ ಶಾಲೆ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

    ವಿದ್ಯಾರ್ಥಿಗಳು ಇಂದು ಯಂಕಂಚಿ ಗ್ರಾಮದಿಂದ ನೀರಬೂದಿಹಾಳ ಗ್ರಾಮಕ್ಕೆ ಪರೀಕ್ಷೆ ಬರೆಯಲೆಂದು ತೆರಳುತ್ತಿದ್ದರು. ಈ ವೇಳೆ ಹೂಲಗೇರಿ ಗ್ರಾಮದ ಬಳಿ ರಸ್ತೆ ದುರಸ್ತಿ ಇದ್ದ ಕಾರಣ ಹಾಗೂ ಚಾಲಕ ವೇಗವಾಗಿ ಓಡಿಸುತ್ತಿದ್ದ ಪರಿಣಾಮ ಟಾಟಾ ಏಸ್ ವಾಹನ ಪಲ್ಟಿಯಾಗಿದೆ. ಗಾಯಗೊಂಡವರೆಲ್ಲಾ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಾಗಿದ್ದು, ಅವರಲ್ಲಿ ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಘಟನೆ ಸಂಬಂಧ ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.