Tag: injury

  • ನ್ಯೂಜಿಲೆಂಡ್ ಟೂರ್ನಿಯಿಂದ ಹಿಟ್‍ಮ್ಯಾನ್ ರೋಹಿತ್ ಔಟ್!

    ನ್ಯೂಜಿಲೆಂಡ್ ಟೂರ್ನಿಯಿಂದ ಹಿಟ್‍ಮ್ಯಾನ್ ರೋಹಿತ್ ಔಟ್!

    ಮೌಂಟ್ ಮಾಂಗನುಯಿ: ಟೀಂ ಇಂಡಿಯಾ ಅನುಭವಿ ಆಟಗಾರ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಭಾನುವಾರ ನಡೆದ ಅಂತಿಮ ಟಿ20 ಪಂದ್ಯದ ಬ್ಯಾಟಿಂಗ್ ವೇಳೆ ರೋಹಿತ್ ಸ್ನಾಯು ಸೆಳೆತ ಸಮಸ್ಯೆಯಿಂದ ಆಟದ ನಡುವೆಯೇ ಹಿಂದಿರುಗಿದ್ದರು.

    ಅಂತಿಮ ಟಿ20 ಪಂದ್ಯದಲ್ಲಿ 41 ಎಸೆತಗಳಲ್ಲಿ 60 ರನ್ ಸಿಡಿಸಿದ್ದ ರೋಹಿತ್, ಪಂದ್ಯದಲ್ಲಿ ಸಿಕ್ಸರ್ ಸಿಡಿಸಿದ ಬಳಿಕ ಗಾಯದ ಸಮಸ್ಯೆಗೆ ಒಳಗಾದರು. ಸದ್ಯ ರೋಹಿತ್ ಮುಂಬರುವ ಏಕದಿನ ಮತ್ತು ಟೆಸ್ಟ್ ಟೂರ್ನಿಗಳಿಗೆ ಅಲಭ್ಯರಾದರೆ ಆ ಸ್ಥಾನದಲ್ಲಿ ಮಯಾಂಕ್ ಅಗರ್ವಾಲ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.

    ರೋಹಿತ್ ಗಾಯದ ಸಮಸ್ಯೆ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ವಕ್ತಾರರೊಬ್ಬರು, ರೋಹಿತ್ ಪ್ರವಾಸದಿಂದ ಹೊರಗಿದ್ದಾರೆ. ಅವರಿಗೆ ಆಗಿರುವ ಸಮಸ್ಯೆಯ ಪ್ರಭಾವ ಬಗ್ಗೆ ಮಾಹಿತಿ ಪಡೆಯಬೇಕಿದೆ. ಅವರು ಪ್ರವಾಸದ ಸರಣಿಯಲ್ಲಿ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಕಳೆದ ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಉನ್ನತಿ ನೀಡಿ ಆರಂಭಿಕರಾಗಿ ಕಣಕ್ಕೆ ಇಳಿಸಿದ್ದರು. ಆದರೆ ದೊರೆತ ಅವಕಾಶವನ್ನು ಬಳಿಸಿಕೊಳ್ಳಲು ಸಂಜು ಸ್ಯಾಮ್ಸನ್ ಮತ್ತೊಮ್ಮೆ ವಿಫಲರಾದರು. ಆ ಬಳಿಕ ಕೆಎಲ್ ರಾಹುಲ್ ಅವರನ್ನು ಕೂಡಿಕೊಂಡ ರೋಹಿತ್ 2ನೇ ವಿಕೆಟ್‍ಗೆ 88 ರನ್ ಜೊತೆಯಾಟ ನೀಡಿದ್ದರು. ಸರಣಿಯಲ್ಲಿ ರೋಹಿತ್ ಶರ್ಮಾ ಅವರಿಗೆ 4 ಟಿ20 ಪಂದ್ಯಕ್ಕೆ ವಿಶ್ರಾಂತಿ ನೀಡಿದ್ದರೆ, 5ನೇ ಪಂದ್ಯಕ್ಕೆ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು.

    ಟೀಂ ಇಂಡಿಯಾ ಫೆ.5ರಿಂದ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಫೆ 21 ರಿಂದ 2 ಪಂದ್ಯಗಳ ಟೆಸ್ಟ್ ಟೂರ್ನಿ ಆರಂಭವಾಗಲಿದೆ. ಸದ್ಯ ರೋಹಿತ್ ಅವರ ಸ್ಥಾನಕ್ಕೆ ಪೃಥ್ವಿ ಶಾ ಅಥವಾ ಶುಬ್‍ಮನ್ ಗಿಲ್ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

  • ಶಾಲಾ ಬಸ್ಸಿಗೆ ಡಿಕ್ಕಿ ಹೊಡೆದು ಹೆದ್ದಾರಿಯಲ್ಲೇ ಲಾರಿ ಪಲ್ಟಿ

    ಶಾಲಾ ಬಸ್ಸಿಗೆ ಡಿಕ್ಕಿ ಹೊಡೆದು ಹೆದ್ದಾರಿಯಲ್ಲೇ ಲಾರಿ ಪಲ್ಟಿ

    ನೆಲಮಂಗಲ: 50 ಮಂದಿ ವಿದ್ಯಾರ್ಥಿಗಳಿದ್ದ ಶಾಲಾ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬೂದಿಹಾಳ್ ಬಳಿ ನಡೆದಿದೆ.

    ಗೌರಿ ಲಂಕೇಶ್ ಒಡೆತನದ ಆಟದ ಉದ್ಯಾವನಕ್ಕೆ ಅಭ್ಯಾಸಕ್ಕೆಂದು ತೆರಳುತಿದ್ದ ಶಾಲಾ ಬಸ್ ಇದಾಗಿದೆ. ಈ ಘಟನೆಯಿಂದ ಬಾರಿ ದುರಂತ ತಪ್ಪಿದಂತಾಗಿದ್ದು, ಶಾಲಾ ಬಸ್ಸಿಗೆ ಡಿಕ್ಕಿ ಹೊಡೆದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಉರುಳಿ ಬಿದ್ದಿದೆ. ಇದೇ ವೇಳೆ ಲಾರಿ ಹಿಂದೆ ಬರುತ್ತಿದ್ದ ಕಾರಿಗೂ ಡಿಕ್ಕಿಯಾಗಿದೆ.

    ಈ ಘಟನೆಯಲ್ಲಿ ಬಿಷಾಪ್ ಶಾಲೆಯ ಐದಾರು ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಸ್ಥಳೀಯ ಅಂಬುಲೆನ್ಸ್ ನಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ.

    ಈ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಅಪಘಾತದಿಂದ ಕೆಲ ಕಾಲ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡಿದ ಪರಿಸ್ಥಿತಿ ಉಂಟಾಗಿತ್ತು. ನಂತರ ಸ್ಥಳೀಯರ ನೆರವಿನೊಂದಿಗೆ ನೆಲಮಂಗಲ ಟ್ರಾಫಿಕ್ ಪೊಲೀಸರು ಲಾರಿಯನ್ನ ತೆರವು ಮಾಡಿದ್ದಾರೆ.

  • 3 ವಾಹನಗಳ ನಡ್ವೆ ಭೀಕರ ಅಪಘಾತ- ಮೂವರು ದುರ್ಮರಣ

    3 ವಾಹನಗಳ ನಡ್ವೆ ಭೀಕರ ಅಪಘಾತ- ಮೂವರು ದುರ್ಮರಣ

    – 11ಕ್ಕೂ ಹೆಚ್ಚು ಮಂದಿಗೆ ಗಾಯ

    ಹಾಸನ: ಸಾರಿಗೆ ಬಸ್ ಸೇರಿ ಮೂರು ವಾಹನಗಳ ನಡುವೆ ಸರಣಿ ಅಪಘಾತವಾಗಿ ಮೂವರು ಮೃತಪಟ್ಟಿದ್ದು, 11ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಸೂಳೆಕೆರೆ ಬಳಿ ನಡೆದಿದೆ.

    ಬೆಂಗಳೂರು-ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಈ ಘಟನೆ ನಡೆದಿದೆ. ಬಸವರಾಜು, ಯಲ್ಲಪ್ಪ ಮತ್ತು ರಮೇಶ್ ಮೃತ ದುರ್ದೈವಿಗಳು. ತಿಪಟೂರಿನಿಂದ ಅರಸೀಕೆರೆ ಕಡೆಗೆ ಸಾರಿಗೆ ಬಸ್ ಹೋಗುತ್ತಿತ್ತು. ಇತ್ತ ಅರಸೀಕೆರೆ ಕಡೆಯಿಂದ ತಿಪಟೂರಿಗೆ ಟಾಟಾಮ್ಯಾಜಿಕ್ ವಾಹನ ಬರುತ್ತಿತ್ತು.

    ಬಸ್ ಮುಂದೆ ಲಾರಿಯೊಂದು ಹೋಗುತ್ತಿತ್ತು. ಈ ವೇಳೆ ಬಸ್ ಚಾಲಕ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಟಾಟಾಮ್ಯಾಜಿಕ್ ಡಿಕ್ಕಿ ಹೊಡೆದಿದ್ದಾನೆ. ನಂತರ ಸಾರಿಗೆ ಬಸ್, ಟಾಟಾಮ್ಯಾಜಿಕ್ ಮತ್ತು ಗೂಡ್ಸ್ ವಾಹನ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಟಾಟಾಮ್ಯಾಜಿಕ್‍ನಲ್ಲಿದ್ದ ಮೂವರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ 11ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಗಾಯಾಳು ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭೀಕರ ರಸ್ತೆ ಅಪಘಾತ- ತಾಯಿ, ಮಗ ಸೇರಿ ಮೂವರು ದುರ್ಮರಣ

    ಭೀಕರ ರಸ್ತೆ ಅಪಘಾತ- ತಾಯಿ, ಮಗ ಸೇರಿ ಮೂವರು ದುರ್ಮರಣ

    ಬೆಳಗಾವಿ: ಟ್ರಕ್ ಹಾಗೂ ಬೊಲೆರೋ ವಾಹನಗಳು ಓವರ್‌ ಟೆಕ್ ಮಾಡಲು ಹೋಗಿ ರಸ್ತೆ ಬದಿಯ ತಗ್ಗಿನಲ್ಲಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ ಘಟನೆ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಗ್ರಾಮದ ಬಳಿ ನಡೆದಿದೆ.

    ಶುಕ್ರವಾರ ತಡರಾತ್ರಿ ಈ ಅಪಘಾತ ನಡೆದಿದೆ. ಸೋಮನಟ್ಟಿ ಗ್ರಾಮದ ಫಕೀರಪ್ಪ ಭೀಮಶೆಪ್ಪ ತುಳಜನ್ನವರ (42), ತಾಯಿ ಮತ್ತು ಮಗ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದವರಾಗಿದ್ದು, ತಾಯಿಯನ್ನು ಲಕ್ಷ್ಮಿ (35) ಮತ್ತು ಮಗ ಕುಮಾರ್ (6) ಎಂದು ಗುರುತಿಸಲಾಗಿದೆ.

    ಟ್ರಕ್ ಚಾಲಕನು ಬೆಳಗಾವಿಯಿಂದ ಕಡಬಿ ಗ್ರಾಮದ ಕಡೆ ಹೊರಟಿದ್ದ ಎನ್ನಲಾಗಿದೆ. ಆದರೆ ಸೋಮನಟ್ಟಿ ಗ್ರಾಮದ ಬಳಿ ಬೊಲೆರೋ ಹಾಗೂ ಟ್ರಕ್ ಎರಡೂ ವಾಹನಗಳು ಓವರ್‌ ಟೆಕ್ ಮಾಡಲು ಹೋಗಿ ರಸ್ತೆ ಬದಿಯ ತಗ್ಗಿನಲ್ಲಿ ಬಿದ್ದು ಜಖಂಗೊಂಡಿವೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಟ್ರಕ್ ಚಾಲಕ ಬಸರಿಕಟ್ಟಿ, ಬೊಲೆರೋ ಚಾಲಕ ಪ್ರಕಾಶ್ ಮಹಾದೇವ ಮತ್ತು ಬಸವರಾಜ ಗುಡದೋಳಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟಿರುವ ತಾಯಿ, ಮಗ ಮತ್ತು ಗಾಯಗೊಂಡಿರುವ ತಂದೆ ಬಸವರಾಜ ಯರಗಟ್ಟಿಯಿಂದ ಬೆಳಗಾವಿ ಕಡೆ ಹೊರಟಿದ್ದರು. ಮೃತಪಟ್ಟಿರುವ ಫಕೀರಪ್ಪ ಸೋಮನಟ್ಟಿ ಗ್ರಾಮದಿಂದ ಸಾಂಬ್ರಾ ಕಡೆ ಹೊರಟಿದ್ದನು ಎಂದು ತಿಳಿದು ಬಂದಿದೆ.

    ಮಾಹಿತಿ ತಿಳಿದು ಸಿಪಿಐ ಮಂಜುನಾಥ ಕುಸಗಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಒಂದೇ ದಿನ ರಸ್ತೆ ಅಪಘಾತಕ್ಕೆ 7 ಬಲಿ

    ಒಂದೇ ದಿನ ರಸ್ತೆ ಅಪಘಾತಕ್ಕೆ 7 ಬಲಿ

    ಧಾರವಾಡ: ಸಂಕ್ರಾಂತಿ ಹಬ್ಬದ ಸಂಭ್ರಮ ಜಿಲ್ಲೆಯ ಪಾಲಿಗೆ ಸೂತಕದ ದಿನವಾಗಿ ಪರಿಣಿಮಿಸಿದೆ. ಯಾಕೆಂದರೆ ಧಾರವಾಡ ಜಿಲ್ಲೆಯಲ್ಲಿ ಒಂದೇ ದಿನ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 2 ವರ್ಷದ ಮಗು ಸೇರಿ ಒಟ್ಟು ಏಳು ಜನರು ಮೃತಪಟ್ಟಿದ್ದಾರೆ. ಇದನ್ನೂ ಓದಿ:  ಟಿಫಿನ್ ಮಾಡಿ ಹೊರಟ 5 ನಿಮಿಷದಲ್ಲೇ ನಾಲ್ವರು ದುರ್ಮರಣ

    ಇಂದು ಬೆಳಗ್ಗೆ ಧಾರವಾಡ ಹೊರವಲಯದ ಯರಿಕೊಪ್ಪ ಬೈಪಾಸ್ ಬಳಿ ನಡೆದ ಟೆಂಪೋ ಮತ್ತು ಕಾರು ಮಧ್ಯದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಧಾರವಾಡ-ಬೆಳಗಾವಿ ರಸ್ತೆಯ ಪೆಪ್ಸಿ ಕಂಪನಿ ಬಳಿಯ ಸರಣಿ ಅಪಘಾತದಲ್ಲಿ ಓರ್ವ ಟಾಟಾ ಏಸ್ ಚಾಲಕ ಸಾವನ್ನಪ್ಪಿದ್ದನು. ಸಂಜೆ ಹೊತ್ತಿಗೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ನಡೆದ ಬಸ್ ಹಾಗೂ ಬೈಕ್ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

    ಹುಬ್ಬಳ್ಳಿ-ಗದಗ ಹೆದ್ದಾರಿಯಲ್ಲಿ ಸಾರಿಗೆ ಸಂಸ್ಥೆ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಈ ಅಪಘಾತದಿಂದ ಬೈಕ್ ಮೇಲಿದ್ದ ಶಿವಪ್ಪ ಕಾಳೆ (25) ಹಾಗೂ ದುರ್ಗಪ್ಪ ಅಬ್ಬಿಗೇರಿ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಬೈಕ್ ಮೇಲಿದ್ದ ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ ಸಂಕ್ರಮಣದ ಸಂದರ್ಭದಲ್ಲಿ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದು, ಸಂಭ್ರಮದ ಬದಲಿಗೆ ಕರಾಳ ಸಂಕ್ರಾಂತಿಯಾಗಿ ಹೋಗಿದೆ.

  • ಟಿಫಿನ್ ಮಾಡಿ ಹೊರಟ 5 ನಿಮಿಷದಲ್ಲೇ ನಾಲ್ವರು ದುರ್ಮರಣ

    ಟಿಫಿನ್ ಮಾಡಿ ಹೊರಟ 5 ನಿಮಿಷದಲ್ಲೇ ನಾಲ್ವರು ದುರ್ಮರಣ

    ಧಾರವಾಡ: ಕಾರು ಮತ್ತು ಗೂಡ್ಸ್ ಟೆಂಪೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊರವಲಯದ ಯರಿಕೊಪ್ಪ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

    ಕೊಪ್ಪಳ ಮೂಲದ ರುದ್ರಪ್ಪ ಮರಕುರಿ (65), ಈರಮ್ಮ ಮರಕುರಿ (55), ಮಂಜುನಾಥ್ ಮರಕುರಿ (35) ಹಾಗೂ ಶಿವರಾಜ್ ಅಳವಂಡಿ (2) ಮೃತ ದುರ್ದೈವಿಗಳು. ಕಾರಿನಲ್ಲಿ ಆರು ಮಂದಿ ಕೊಪ್ಪಳದಿಂದ ಬೆಳಗಾವಿ ಕಡೆ ಹೊರಟಿದ್ದರು. ಟೆಂಪೋ ಹುಬ್ಬಳ್ಳಿ ಕಡೆಗೆ ಹೋಗುತ್ತಿತ್ತು. ಆದರೆ ಯರಿಕೊಪ್ಪ ಬೈಪಾಸ್ ರಸ್ತೆಯಲ್ಲಿ ಕಾರು ಮತ್ತು ಟೆಂಪೋ ವೇಗವಾಗಿ ಬಂದು ಮುಖಾಮುಖಿ ಡಿಕ್ಕಿ ಹೊಡೆದಿವೆ.

    ಡಿಕ್ಕಿಯ ರಭಸಕ್ಕೆ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮಮತಾ ಮತ್ತು ಸಾನ್ವಿ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರುದ್ರಪ್ಪ ಮರಕುರಿ ಮತ್ತು ಈರಮ್ಮ ಮರಕುರಿ ಇಬ್ಬರನ್ನು ಚಿಕಿತ್ಸೆಗೆಂದು ಕೊಪ್ಪಳದಿಂದ ಬೆಳಗಾವಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

    ಅಪಘಾತ ನಡೆಯುವ 5 ನಿಮಿಷದ ಮೊದಲು ಕಾರಿನಲ್ಲಿದ್ದವರೆಲ್ಲರೂ ಬೈಪಾಸ್ ರಸ್ತೆಯಲ್ಲಿರುವ ರಮ್ಯಾ ರೆಸಿಡೆನ್ಸಿಯಲ್ಲಿ ಟಿಫಿನ್ ಮಾಡಿದ್ದರು. ಟಿಫಿನ್ ಮಾಡಿ ಹೊರಟ 5 ನಿಮಿಷದಲ್ಲೇ ಈ ಘಟನೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 2 ಮಕ್ಕಳ ತಾಯಿಯ ಜೊತೆ 25ರ ಯುವಕನ ಲಿವ್‍ಇನ್ ರಿಲೇಶನ್‍ಶಿಪ್

    2 ಮಕ್ಕಳ ತಾಯಿಯ ಜೊತೆ 25ರ ಯುವಕನ ಲಿವ್‍ಇನ್ ರಿಲೇಶನ್‍ಶಿಪ್

    – ಮಗುವಿನ ಕೆನ್ನೆ ಕಚ್ಚಿ ಪೊಲೀಸ್ರ ಅತಿಥಿಯಾದ

    ಚಿಕ್ಕಬಳ್ಳಾಪುರ: ನಾಲ್ಕು ವರ್ಷದ ಮಗುವಿನ ಕೆನ್ನೆ ಕಚ್ಚಿ ಗಾಯಗೊಳಿಸಿ, ಆಕೆಯ ಮೇಲೆ ಹಲ್ಲೆ ಮಾಡಿ ವಿಕೃತಿ ಮೆರೆದ ಯುವಕನೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಯಳ್ಳುಪುರ ಗ್ರಾಮದಲ್ಲಿ ನಡೆದಿದೆ.

    ನಾಗರಾಜ್ (25) ಪೊಲೀಸರು ವಶಕ್ಕೆ ಪಡೆದಿರುವ ಆರೋಪಿ. ನಾಗರಾಜ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಫೇಸ್‍ಬುಕ್ ಮೂಲಕ ಬಳ್ಳಾರಿ ಮೂಲದ ಮಹಿಳೆ ಪರಿಚಯವಾಗಿದ್ದಳು. ಮಹಿಳೆ ತನಗೆ ಪತಿಯಿಲ್ಲ ಇಬ್ಬರು ಮಕ್ಕಳಿದ್ದಾರೆ. ನನಗೆ ತುಂಬಾ ಕಷ್ಟ ಇದೆ ಎಂದು ತನ್ನ ನೋವು ಹೇಳಿಕೊಂಡಿದ್ದಳು. ಆಗ ಆರೋಪಿ ಮಹಿಳೆಗೆ ಬಾಳು ಕೊಡುತ್ತೇನೆ ಎಂದು ಕರೆದುಕೊಂಡು ಬಂದಿದ್ದು, ಆಕೆಯ ಜೊತೆ ಲಿವ್‍ಇನ್ ರಿಲೇಶನ್‍ಶಿಪ್‍ನಲ್ಲಿದ್ದನು.

    40 ವರ್ಷದ ಮಹಿಳೆಗೆ 9 ವರ್ಷದ ಮಗ ಮತ್ತು 4 ವರ್ಷದ ಹೆಣ್ಣು ಮಗಳಿದ್ದಳು. ಎಳ್ಳುಪುರ ಗ್ರಾಮದಲ್ಲಿ ಮಹಿಳೆಯ ಜೊತೆ ನಾಗರಾಜ್ ವಾಸವಾಗಿದ್ದನು. ಆದರೆ ಇದೀಗ ಆರೋಪಿ ಮಹಿಳೆಯ ಮಗಳ ಕೆನ್ನೆಯನ್ನು ಕಚ್ಚಿ ಗಾಯಗೊಳಿಸಿದ್ದಾನೆ. ಮಗುವಿನ ಕೈ ಸಹ ಊತ ಬಂದಿದೆ. ಹೀಗಾಗಿ ನಾಗರಾಜ್ ಮಗುವಿನ ಮೇಲೆ ಹಲ್ಲೆ ಮಾಡಿರುವ ಅನುಮಾನ ಬಂದಿದೆ.

    ಇತ್ತ 40 ವರ್ಷದ ಮಹಿಳೆ, ಇಬ್ಬರು ಮಕ್ಕಳ ತಾಯಿಯ ಜೊತೆ 25 ವರ್ಷದ ಯುವಕ ಇರೋದನ್ನ ಕಂಡ ಸ್ಥಳೀಯರು ಅವರಿಬ್ಬರ ಸಂಬಂಧದ ಬಗ್ಗೆ ಸಾಕಷ್ಟು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದರು. ಈಗ ಮಗುವಿಗೆ ಆಗಿರುವ ಗಾಯಗಳನ್ನು ಕಂಡು ಸ್ಥಳೀಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಸಂಬಂಧ ಮನೆಗೆ ಭೇಟಿ ನೀಡಿ ಮಗುವಿನ ಪರಿಶೀಲನೆ ನಡೆಸಿದ ಅಧಿಕಾರಿಗಳು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಗರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ.

    ಈ ಸಂಬಂಧ ಆರೋಪಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ನಾನು ಮಗುವನ್ನು ಮುದ್ದುಮಾಡಲು ಹೋದೆ ಆಗ ಸಣ್ಣ ಗಾಯವಾಗಿತ್ತು. ಗಾಯಕ್ಕೆ ಮದ್ದು ಮಾಡಿದ ನಂತರ ಇನ್ಫೆಕ್ಷನ್ ಆಗಿ ದೊಡ್ಡದಾಗಿದೆ ಎಂದು ಹೇಳಿದ್ದಾನೆ. ಸದ್ಯಕ್ಕೆ ತಾಯಿ ಹಾಗೂ ಇಬ್ಬರು ಮಕ್ಕಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿದ್ದಾರೆ.

  • ಕೆಎಸ್ಆರ್‌ಟಿಸಿ ಬಸ್‍ಗಳ ನಡ್ವೆ ಡಿಕ್ಕಿ

    ಕೆಎಸ್ಆರ್‌ಟಿಸಿ ಬಸ್‍ಗಳ ನಡ್ವೆ ಡಿಕ್ಕಿ

    ವಿಜಯಪುರ: ಎರಡು ಕೆಎಸ್ಆರ್‌ಟಿಸಿ ಬಸ್‍ಗಳು ಪರಸ್ಪರ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಜಿಲ್ಲೆಯ ವಿಜಯಪುರ ತಾಲೂಕಿನ ಸಾರವಾಡ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ವಿಜಯಪುರದಿಂದ ಜಮಖಂಡಿ ಕಡೆಗೆ ಹೊರಟಿದ್ದ ಬಸ್ ಹಾಗೂ ಜಮಖಂಡಿ ಕಡೆಯಿಂದ ವಿಜಯಪುರ ಕಡೆಗೆ ಬರುತ್ತಿದ್ದ ಬಸ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಆಗಿದೆ. ಈ ಅಪಘಾತದಿಂದ ಎರಡು ಬಸ್‍ಗಳ ಮುಂಭಾಗ ನುಜ್ಜುಗುಜ್ಜಾಗಿದ್ದು, ಬಸ್‍ಗಳ ಮುಂಭಾಗದ ಗಾಜುಗಳು ಪುಡಿಪುಡಿ ಆಗಿವೆ.

    ಬಸ್ ಮುಂಭಾಗದ ಒಡೆದ ಗಾಜಿನ ಮೂಲಕವೇ ಪ್ರಯಾಣಿಕರು ಹೊರ ಬಂದಿದ್ದಾರೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಿಂದ ಕೆಲ ಕಾಲ ರಸ್ತೆ ಸಂಚಾರ ಅಸ್ಥವ್ಯಸ್ಥವಾಗಿತ್ತು. ವಿಜಯಪುರ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

  • ಚಿತ್ರದುರ್ಗ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಲಾರಿ, ಬಸ್ ಮುಖಾಮುಖಿ ಡಿಕ್ಕಿ

    ಚಿತ್ರದುರ್ಗ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಲಾರಿ, ಬಸ್ ಮುಖಾಮುಖಿ ಡಿಕ್ಕಿ

    -ಆನೇಕಲ್ ಬಳಿ ಸಿನಿಮಾ ಸ್ಟೈಲ್‍ನಲ್ಲಿ ಅಪಘಾತ

    ಚಿತ್ರದುರ್ಗ: ನಸುಕಿನಜಾವ ಲಾರಿ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ಸಿಗೆ ಬೆಂಕಿ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕಪಿಲೆಹಟ್ಟಿ ಬಳಿ ನಡೆದಿದೆ.

    ಲಾರಿ ಚಾಲಕ ವೆಂಕಟೇಶ್ (40) ಮೃತ ದುರ್ದೈವಿ. ಖಾಸಗಿ ಬಸ್ ಬೆಂಗಳೂರಿನಿಂದ ಬಳ್ಳಾರಿ ಕಡೆ ತೆರಳುತ್ತಿತ್ತು. ಲಾರಿ ಚಳ್ಳಕೆರೆಯಿಂದ ಬೆಂಗಳೂರಿನತ್ತ ತೆರಳುತ್ತಿತ್ತು. ಹಿರಿಯೂರು ತಾಲೂಕಿನ ಕಪಿಲೆಹಟ್ಟಿ ಬಳಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಗ ತಕ್ಷಣ ಎಚ್ಚೆತ್ತ ಪ್ರಯಾಣಿಕರು ಬೆಂಕಿ ಜೋರಾಗಿ ಹೊತ್ತುವ ಮುನ್ನವೇ ಬಸ್ಸಿನಿಂದ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅದೃಷ್ಟವಶಾತ್ ಭಾರೀ ದುರಂತ ತಪ್ಪಿದಂತಾಗಿದೆ.

    ಈ ಘಟನೆಯಿಂದಾಗಿ ಲಾರಿ ಚಾಲಕ ವೆಂಕಟೇಶ್ ಮೃತಪಟ್ಟಿದ್ದಾನೆ. ಖಾಸಗಿ ಬಸ್ಸಿನಲ್ಲಿದ್ದ 15 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳೀಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

    ಇತ್ತ ಆನೇಕಲ್ ಗಡಿಯಲ್ಲಿ ಸಿನಿಮಾ ಸ್ಟೈಲ್‍ನಲ್ಲಿ ಅತಿವೇಗವಾಗಿ ಅಡ್ಡಾದಿಡ್ಡಿ ನುಗ್ಗಿದ ಟೆಂಪೋವೊಂದು ರಸ್ತೆಯಲ್ಲಿದ್ದ ಬೈಕ್, ಕಾರು, ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಮತೋರ್ವನಿಗೆ ಗಂಭೀರವಾಗಿ ಗಾಯವಾಗಿದೆ. ಟೆಂಪೋ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ದು, ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಟೆಂಪೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಸರ್ಕಾರಿ ರಾಜಹಂಸ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಸರ್ಕಾರಿ ರಾಜಹಂಸ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಗದಗ: ಸರ್ಕಾರಿ ರಾಜಹಂಸ ಬಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, 5 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಬಳಿ ನಡೆದಿದೆ.

    ರಾಜಹಂಸ ಬಸ್ ಯಾದಗಿರಿಯಿಂದ ಗದಗ ಮಾರ್ಗವಾಗಿ ಧಾರವಾಡಕ್ಕೆ ತೆರಳುತ್ತಿತ್ತು. ಆದರೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಬಳಿ ಬರುತ್ತಿದ್ದಂತೆ ಬಸ್ ರಸ್ತೆ ಬದಿ ಪಲ್ಟಿಯಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳು ನರಳಾಡುತ್ತಿರುವುದನ್ನ ಕಂಡ ಸ್ಥಳೀಯರು ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಚಾಲಕನ ಅಜಾಗರೂಕತೆಯಿಂದ ಬಸ್ ರಸ್ತೆ ಬದಿ ಉರುಳಿದೆ ಎನ್ನಲಾಗುತ್ತಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.