Tag: injury

  • ಹಳ್ಳಕ್ಕೆ ಬಿದ್ದ ಸ್ಕೂಲ್ ವ್ಯಾನ್- ಪ್ರಾಣವನ್ನೂ ಲೆಕ್ಕಿಸದೆ ಮಕ್ಕಳ ಜೀವ ಉಳಿಸಿ, ದಾದಿ ದುರ್ಮರಣ!

    ಹಳ್ಳಕ್ಕೆ ಬಿದ್ದ ಸ್ಕೂಲ್ ವ್ಯಾನ್- ಪ್ರಾಣವನ್ನೂ ಲೆಕ್ಕಿಸದೆ ಮಕ್ಕಳ ಜೀವ ಉಳಿಸಿ, ದಾದಿ ದುರ್ಮರಣ!

    ತಿರುವಂತನಪುರಂ: ರಸ್ತೆ ಅಪಘಾತದಲ್ಲಿ ದಾದಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೇ ಐದು ಮಕ್ಕಳ ಜೀವವನ್ನು ಉಳಿಸಿ ಬಳಿಕ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕೇರಳದ ಮರಡು ಬಳಿಯ ಕಟ್ಟಿತ್ತರದಲ್ಲಿ ಈ ಘಟನೆ ನಡೆದಿದೆ. 35 ವರ್ಷದ ಲತಾ ಉಣ್ಣಿ, ಐದು ಮಕ್ಕಳ ಪ್ರಾಣ ಉಳಿಸಿ ಮೃತಪಟ್ಟ ದಾದಿ. ಸೋಮವಾರ ಸ್ಕೂಲ್ ವ್ಯಾನ್ `ಕಿಡ್ಜ್ ವರ್ಲ್ಡ್’ ಶಾಲೆಯಿಂದ ಎಂಟು ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೊರಟಿತ್ತು.

    ಸುಮಾರು 3.45 ರ ವೇಳೆಗೆ ಕಟ್ಟಿತ್ತರ ರಸ್ತೆಯಲ್ಲಿ ವ್ಯಾನಿನ ಹಿಂಬದಿ ಚಕ್ರವು ಕೆಸರಿನಲ್ಲಿ ಸಿಲುಕಿದೆ. ನಂತರ ನಿಧಾನವಾಗಿ ಚಾಲಕ ತಿರುವು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ವ್ಯಾನ್ ಕೊಳದಲ್ಲಿ ಬಿದ್ದಿದೆ. ಪರಿಣಾಮ ಎಲ್ಲಾ ಮಕ್ಕಳು ನೀರಿನಲ್ಲಿ ಮುಳುಗಿದ್ದರು. ಲತಾ ಉಣ್ಣಿ ಅವರು ಕಿಟಿಕಿಯಲ್ಲಿ ಸಿಲುಕಿಕೊಂಡಿದ್ದರು. ಕೊನೆಗೆ ನಾನು ಸಾಯುವ ಮುನ್ನ ಮಕ್ಕಳನ್ನು ಉಳಿಸೋಣ ಎಂದು ನಿರ್ಧಾರ ಮಾಡಿದ್ದು, ಅವರು ಒಬ್ಬರಂತೆ ಐದು ಮಕ್ಕಳನ್ನು ಕಿಟಿಕಿಯಿಂದ ಹೊರಗೆ ತಳ್ಳಿ ಅವರ ಜೀವವನ್ನು ಕಾಪಾಡಿದ್ದಾರೆ.

    ಅಲ್ಲೇ ಇದ್ದ ಸ್ಥಳೀಯರು ಗಮನಿಸಿ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಆ ಮಕ್ಕಳನ್ನು ಕಾಪಾಡಿದ್ದಾರೆ. ಈ ವೇಳೆ ಅವರು ಕಿಟಕಿಯಲ್ಲಿ ಸಿಲುಕಿಕೊಂಡಿದ್ದು, ಪ್ರಜ್ಞಾಹೀನರಾಗಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಎಲ್ಲಾ ದೃಶ್ಯಗಳು ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಅಪಘಾತದಲ್ಲಿ ಗಾಯಗೊಂಡಿದ್ದ ವಾಹನ ಚಾಲಕ ಅನಲ್ಕುಮಾರ್ ನನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಲ್ಲಿ ರಕ್ಷಿಸಿದ ಐದು ಮಕ್ಕಳು ಸುರಕ್ಷಿತರಾಗಿದ್ದು, ಅವರ ಪೋಷಕರು ಬಂದು ಕರೆದುಕೊಂಡು ಹೋಗುವವರೆಗೂ ಸಮೀಪದ ಒಂದು ಮನೆಯಲ್ಲಿ ಮಕ್ಕಳನ್ನು ಇರಿಸಲಾಗಿತ್ತು. ಆದರೆ ಈ ಘಟನೆಯಿಂದ 4 ವರ್ಷದ ವಿದ್ಯಾ ಲಕ್ಷ್ಮೀ ಮತ್ತು ಆದಿತ್ಯ ಎಸ್. ನಾಯರ್ ಸೇರಿದಂತೆ ಲತಾ ಉಣ್ಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಲತಾ ಉಣ್ಣಿಗೆ ಇಬ್ಬರು ಅವಳಿ ಹೆಣ್ಣು ಮಕ್ಕಳಿದ್ದು, ಅವರ ಪತಿ ಕೆಎಲ್ ಅವರು ದೈನಂದಿನ ವೇತನ ಕಾರ್ಮಿಕರಾಗಿದ್ದಾರೆ. ಇವರು ಐದು ವರ್ಷಗಳಿಂದ `ಕಿಡ್ಜ್ ವರ್ಲ್ಡ್’ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.

  • ಧೂಳಿಗೆ 7 ದುರ್ಮರಣ, 21 ಮಂದಿಗೆ ಗಾಯ!

    ಧೂಳಿಗೆ 7 ದುರ್ಮರಣ, 21 ಮಂದಿಗೆ ಗಾಯ!

    ಲಕ್ನೋ: ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಧೂಳಿನ ಬಿರುಗಾಳಿಗೆ ಏಳು ಮಂದಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

    ಕಳೆದ 24 ಗಂಟೆಗಳಲ್ಲಿ ಧೂಳಿನ ಬಿರುಗಾಳಿಯಿಂದ ಏಳು ಮಂದಿ ಮೃತಪಟ್ಟಿದ್ದಾರೆ. ಗೋಂಡಾ ಮತ್ತು ಸೀತಾಪುರದಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಫೈಜಾಬಾದ್ ನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವಕ್ತಾರರು ಲಕ್ನೋದಲ್ಲಿ ಹೇಳಿದ್ದಾರೆ.

    ಇನ್ನು ಫೈಜಾಬಾದ್ ನಲ್ಲಿ 11 ಮಂದಿ ಹಾಗೂ ಸೀತಾಪುರದಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ಪಡೆದಿದ್ದು, ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲದೇ ಧೂಳಿನ ಬಿರುಗಾಳಿಯಿಂದ ಮೃತಪಟ್ಟವರಿಗೆ ಪರಿಹಾರ ಧನವನ್ನು ಪಾವತಿಸಬೇಕೆಂದು ಆದೇಶಿಸಿದ್ದಾರೆ.

    ಯೋಗಿ ಆದಿತ್ಯನಾಥ್ ಅವರು ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದು, ರಾಜ್ಯ ಸರ್ಕಾರವು ಧೂಳಿನ ಬಿರುಗಾಳಿ ಮತ್ತು ಇತರೆ ಸಂಬಂಧಿತ ಘಟನೆಗಳಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಎಲ್ಲಾ ಸಹಾಯವನ್ನು ವಿಸ್ತರಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

  • ಪಾದಚಾರಿಗಳ ಮೇಲೆ ಹರಿದ ಲಾರಿ – ಚಕ್ರಕ್ಕೆ ಸಿಲುಕಿ ಓರ್ವ ಸಾವು, ಮತ್ತೊಬ್ಬ ಗಂಭೀರ

    ಪಾದಚಾರಿಗಳ ಮೇಲೆ ಹರಿದ ಲಾರಿ – ಚಕ್ರಕ್ಕೆ ಸಿಲುಕಿ ಓರ್ವ ಸಾವು, ಮತ್ತೊಬ್ಬ ಗಂಭೀರ

    ಬೆಂಗಳೂರು: ವೇಗವಾಗಿ ಬಂದ ನೀರಿನ ಟ್ಯಾಂಕರ್ ರಸ್ತೆ ದಾಟುತ್ತಿದ್ದವರ ಮೇಲೆ ಹರಿದ ಪರಿಣಾಮ ಓರ್ವ ಸಾವನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.

    ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಬಳಿ ರಸ್ತೆ ದಾಟುವಾಗ ನಿರ್ಲಕ್ಷ್ಯದಿಂದ ವೇಗವಾಗಿ ಬಂದ ನೀರಿನ ಟ್ಯಾಂಕರ್ ವಾಹನ ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯೊಬ್ಬ ಟ್ಯಾಂಕರ್ ಮುಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಇನ್ನು ಅಪಘಾತದ ನಂತರ ಚಾಲಕ ಪರಾರಿಯಾಗಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಸ್ಟಂಟ್ ಮಾಡಲು ಹೋಗಿ ಶಾಶ್ವತವಾಗಿ ಕಣ್ಣಿಗೆ ಗಾಯಮಾಡಿಕೊಂಡ ಜಾಕ್ವೇಲಿನ್!

    ಸ್ಟಂಟ್ ಮಾಡಲು ಹೋಗಿ ಶಾಶ್ವತವಾಗಿ ಕಣ್ಣಿಗೆ ಗಾಯಮಾಡಿಕೊಂಡ ಜಾಕ್ವೇಲಿನ್!

    ಮುಂಬೈ: ಬಾಲಿವುಡ್ ಬೆಡಗಿ ಜಾಕ್ವೇಲಿನ್ ಫರ್ನಾಂಡಿಸ್ ರೇಸ್- 3 ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈಗ ತಮ್ಮ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

    ಜಾಕ್ವೇಲಿನ್ ರೇಸ್-3 ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರು ಸಾಕಷ್ಟು ಆ್ಯಕ್ಷನ್ ಸ್ಟಂಟ್ ಮಾಡಿದ್ದಾರೆ. ಹೀಗೆ ಮಾರ್ಚ್ ತಿಂಗಳಲ್ಲಿ ಜಾಕ್ವೇಲಿನ್ ಚಿತ್ರಕ್ಕಾಗಿ ಸಾಹಸ ದೃಶ್ಯ ಮಾಡುವಾಗ ತಮ್ಮ ಕಣ್ಣಿಗೆ ಗಾಯ ಮಾಡಿಕೊಂಡಿದ್ದರು. ಆದರೆ ಈ ಗಾಯ ಈಗ ಶಾಶ್ವತವಾಗಿರುತ್ತದೆ ಎಂದು ಹೇಳುವ ಮೂಲಕ ಜಾಕ್ವೇಲಿನ್ ತಮ್ಮ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

    ಜಾಕ್ವೇಲಿನ್ ತಮ್ಮ ಕಣ್ಣಿನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ “ಈ ಗಾಯ ಈಗ ಶಾಶ್ವತವಾಗಿ ಇರುತ್ತದೆ. ನನ್ನ ಐರಿಸ್ ಎಂದಿಗೂ ವೃತ್ತಾಕಾರ ಆಗುವುದಿಲ್ಲ. ಆದರೆ ನನಗೆ ಸರಿಯಾಗಿ ಕಣ್ಣು ಕಾಣಿಸುತ್ತಿರುವುದು ಸಂತೋಷವಾಗಿದೆ. ಇದು ರೇಸ್-3 ಚಿತ್ರದ ನೆನಪು” ಎಂದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

    ರೇಸ್-3 ಚಿತ್ರ ಅಬುಧಾಬಿಯಲ್ಲಿ ಚಿತ್ರೀಕರಿಸುವಾಗ ಜಾಕ್ವೇಲಿನ್ ಸ್ಕ್ವಾಶ್ ಆಡುತ್ತಿದ್ದರು. ಆ ವೇಳೆ ತಮ್ಮ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದರು. ಆಗ ತಕ್ಷಣ ಜಾಕ್ವೇಲಿನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡಿದ್ದರು.

    ಜಾಕ್ವೇಲಿನ್ ಅವರ ಕಣ್ಣಿಗೆ ಗಾಯವಾಗಿದೆ. ಇದು ಒಂದು ಸಾಮಾನ್ಯವಾದ ಗಾಯ. ಸ್ಕ್ವಾಶ್ ಆಡುವಾಗ ಜಾಕ್ವೇಲಿನ್ ಕಣ್ಣಿನ ಮೇಲ್ಭಾಗಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ಈಗ ಜಾಕ್ವೇಲಿನ್ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ರೇಸ್-3 ಚಿತ್ರದ ನಿರ್ಮಾಪಕ ರಮೇಶ್ ತೌರಾಣಿ ಹೇಳಿದ್ದರು.

    ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್, ಬಾಬಿ ಡಿಯೋಲ್, ಅನಿಲ್ ಕಪೂರ್, ಡೈಸಿ ಷಾ ಹಾಗೂ ಸಾಕಿಬ್ ಸಲೀಮ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಜೂನ್ 15ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

  • ರಸ್ತೆ ಬಿಟ್ಟು ಮನೆಗೆ ನುಗ್ಗಿದ ಸಾರಿಗೆ ಬಸ್!

    ರಸ್ತೆ ಬಿಟ್ಟು ಮನೆಗೆ ನುಗ್ಗಿದ ಸಾರಿಗೆ ಬಸ್!

    ಹಾಸನ: ಸಾರಿಗೆ ಬಸ್ಸೊಂದು ಸ್ಟೇರಿಂಗ್ ನಲ್ಲಿ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ರಸ್ತೆ ಬಿಟ್ಟು ಮನೆಗೆ ನುಗ್ಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.

    ಸಾರಿಗೆ ಬಸ್ ಹಾಸನದಿಂದ ಮೈಸೂರಿಗೆ ತೆರಳುತಿತ್ತು. ಈ ವೇಳೆ ಹೊಳೆನರಸೀಪುರ ಮಾರ್ಗದಲ್ಲಿ ಬರುತ್ತಿದ್ದಂತೆಯೇ ಬಸ್ ನ ಸ್ಟೇರಿಂಗ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಿ ರಸ್ತೆ ಬಿಟ್ಟು ಮನೆಗೆ ನುಗ್ಗಿದೆ. ಬಸ್ ನುಗ್ಗಿ ಮನೆಯ ಮುಂಭಾಗದ ಛಾವಣಿಗೆ ಡಿಕ್ಕಿ ಹೊಡೆದಿದೆ.

    ಈ ಅಪಘಾತದಿಂದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

  • ಹೆಲ್ಮೆಟ್ ಹಾಕಿಕೊಂಡ್ರೆ ಜೀವ ಉಳಿಯುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ

    ಹೆಲ್ಮೆಟ್ ಹಾಕಿಕೊಂಡ್ರೆ ಜೀವ ಉಳಿಯುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ

    ಮನಿಲಾ: ಲಾರಿಯಡಿ ಬಿದ್ದು ಅದರ ಹಿಂಬದಿ ಚಕ್ರ ಬೈಕ್ ಸವಾರನ ಮೇಲೆ ಹರಿದರೂ ಆತ ಎದ್ದು ನಿಂತ ಅಚ್ಚರಿಯ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ಫಿಲಿಪೈನ್ಸ್ ನ ಕೈಂಟಾ ನಗರದಲ್ಲಿ ನಡೆದಿದ್ದು, ಈ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೋಟರ್ ಬೈಕ್ ಸವಾರ ಲಾರಿ ಕೆಳಗೆ ಬಿದ್ದರೂ, ಪವಾಡ ಸದೃಶವೆಂಬಂತೆ ಎಂದು ನಿಂತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ?:
    ಲಾರಿಯೊಂದು ಮುಂದೆ ಹೋಗುತ್ತಿರುತ್ತದೆ. ಅದರ ಹಿಂದೆ ಇಬ್ಬರು ಮೋಟರ್ ಬೈಕ್ ಸವಾರರು ಹೋಗುತ್ತಿರುತ್ತಾರೆ. ಮುಂದೆ ಹೋಗುತ್ತಿದ್ದ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದು, ಆತ ಲಾರಿಯನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಲು ಪ್ರಯತ್ನಿಸುತ್ತಾನೆ. ಆಗ ಪಾದಾಚಾರಿ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಬೈಕಿನ ನಿಯಂತ್ರಣ ತಪ್ಪಿ ಬಿದ್ದು, ಲಾರಿಯಡಿ ಸಿಲುಕುತ್ತಾನೆ.

    ಲಾರಿ ಕೆಳಗೆ ಬಿದ್ದ ಸವಾರನ ಮೇಲೆ ಲಾರಿಯ ಹಿಂಬದಿಯ ಚಕ್ರ ಹರಿಯುತ್ತದೆ. ಆದರೆ ಆತ ತನಗೇನೂ ಆಗಿಲ್ಲವೆಂಬಂತೆ ಕೆಲವೇ ಸೆಕೆಂಡ್ ಗಳಲ್ಲಿ ಎದ್ದು ನಿಲ್ಲುತ್ತಾನೆ. ಈ ಅಪಘಾತದಿಂದ ಬೈಕ್ ಸವಾರನ ತಲೆಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅಪಘಾತವಾದರೂ ಲಾರಿ ಚಾಲಕ ಮಾತ್ರ ಕೆಳಗಿಳಿದು ಬಂದು ನೋಡಲಿಲ್ಲ. ಆದ್ರೆ ಅಪಘಾತವಾದ ತಕ್ಷಣವೇ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಬೈಕ್ ಸವಾರ ಸಹಾಯಕ್ಕೆ ಬಂದಿದ್ದಾರೆ.

    ಈ ಎಲ್ಲಾ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಭೀಕರ ಅಪಘಾತವಾದರೂ ಹೆಲ್ಮೆಟ್ ನಿಂದಾಗಿ ಬೈಕ್ ಸವಾರನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ.

    https://www.youtube.com/watch?v=ivQHuU-Ykws

     

     

  • ಅಮ್ಮನ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದ ಮಗ ದುರ್ಮರಣ!

    ಅಮ್ಮನ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದ ಮಗ ದುರ್ಮರಣ!

    ಹೈದರಾಬಾದ್: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಮಗ ಮೃತಪಟ್ಟಿರುವ ಮಲಕಲಕುವಂತಹ ಘಟನೆ ತೆಲಂಗಾಣದ ಕೊಡದ್ ನಗರದಲ್ಲಿ ನಡೆದಿದೆ.

    ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿರುವ ಅರುಮಿಲ್ಲಿ ವೀರಾ ವೆಂಕಟ ಸತ್ಯನಾರಾಯಣ(32) ಮತ್ತು ಸತ್ಯನಾರಾಯಣ ಅವರ ನಾದಿನಿ ಗುಲ್ಲಾಪಳ್ಳಿ ವೆಂಕಟ ಮಾಧುರಿ ಮೃತ ದುರ್ದೈವಿಗಳು. ಈ ಘಟನೆ ಕೊಡದ್ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಸಂಭವಿಸಿದೆ.

    ಮೃತ ಸತ್ಯನಾರಾಯಣ ಕುಟುಂಬವು ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗಾಂಟದಲ್ಲಿ ಸಿದ್ದಂತನ್ ನಲ್ಲಿ ವಾಸವಾಗಿತ್ತು. ಇವರ ತಾಯಿ ಭಾನುವಾರ ಸುಮಾರು 12.15 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ತಾಯಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸತ್ಯನಾರಾಯಣ ಕ್ಯಾಬ್ ಬುಕ್ ಮಾಡಿ ಪತ್ನಿ ಮತ್ತು ನಾದಿನಿ ಜೊತೆ ಹೈದರಾಬಾದ್ ನಿಂದ ಗೋದಾವರಿ ಜಿಲ್ಲೆಗೆ ಹೊರಟಿದ್ದರು.

    ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸತ್ಯನಾರಾಯಣನ ಮತ್ತು ನಾದಿನಿ ಮಾಧುರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಪತ್ನಿ ಗರ್ಭಿಣಿಯಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಕ್ಯಾಬ್ ಚಾಲಕನಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಕ್ಯಾಬ್ ಚಾಲಕ ಸೀಟ್ ಬೆಲ್ಟ್ ಧರಿಸಿದ್ದು, ಉಳಿದವರು ಸೀಟ್ ಬೆಲ್ಟ್ ಹಾಕಿರಲಿಲ್ಲ. ಆದ್ದರಿಂದ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ವಿಜಯ್ ಪ್ರಕಾಶ್ ಹೇಳಿದ್ದಾರೆ.

    ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನೆ ಕುರಿತು ಮೃತ ಸತ್ಯನಾರಾಯಣ ಚಿಕ್ಕಪ್ಪ ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತ ಪತಿ ಕಳೆದುಕೊಂಡ ಪತ್ನಿ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಕಾರ್ಪೋರೇಟರ್ ಮಗನ ಅಟ್ಟಹಾಸ – ಹುಡುಗಿಗಾಗಿ ಸ್ನೇಹಿತನ ಎದೆಗೆ ಚೂರಿ

    ಕಾರ್ಪೋರೇಟರ್ ಮಗನ ಅಟ್ಟಹಾಸ – ಹುಡುಗಿಗಾಗಿ ಸ್ನೇಹಿತನ ಎದೆಗೆ ಚೂರಿ

    ದಾವಣಗೆರೆ: ಯುವತಿಗೊಬ್ಬಳಿಗಾಗಿ ಕಾರ್ಪೋರೇಟರ್ ಮಗ ತನ್ನ ಸ್ನೇಹಿತನಿಗೆ ಚಾಕುವಿಂದ ಇರಿದು ಅಟ್ಟಹಾಸ ಮೆರೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಕೆಟಿಜೆ ನಗರದ ನಿವಾಸಿಗಳಾದ ಹರೀಶ್ ಹಾಗೂ ರಾಕೇಶ್ ಸ್ನೇಹಿತರಾಗಿದ್ದು, ಹುಡುಗಿಯೊಬ್ಬಳ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಅತೀ ರೇಕಕ್ಕೆ ಹೋಗಿದ್ದು, ಕಾರ್ಪೋರೇಟರ್ ಪುತ್ರ ರಾಕೇಶ್ ಸ್ನೇಹಿತ ಹರೀಶ್ ಗೆ ನಡುಬೀದಿಯಲ್ಲಿ ಚಾಕು ಹಾಕಿದ್ದಾನೆ.

    ಹರೀಶ್ ಎದೆ ಮತ್ತು ತಲೆ ಭಾಗಕ್ಕೂ ಪೆಟ್ಟು ಬಿದ್ದಿದೆ. ತಕ್ಷಣ ಗಾಯಾಳು ಹರೀಶ್ ನನ್ನು ಸಮೀಪದ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ರಾಕೇಶ್ ಮತ್ತು ಹರೀಶ್ ಇಬ್ಬರು ಯುವತಿಯ ಸ್ನೇಹಿತರಾಗಿದ್ದು, ಇತ್ತೀಚೆಗೆ `ಡೇಂಜರ್ಸ್ ಗರ್ಲ್’ ಎಂಬ ವಿಡಿಯೋ ಆಲ್ಬಂ ಸಾಂಗ್ ಶೂಟ್ ಮಾಡಿದ್ದರು.

    ಆಲ್ಬಂ ಶೂಟಿಂಗ್ ನಡೆದ ನಂತರ ರಾಕೇಶ್ ಮತ್ತು ಯುವತಿ ನಡುವೆ ಪ್ರೇಮಾಂಕುರ ಇತ್ತು. ಇತ್ತ ಹರೀಶ್ ಕೂಡ ಯುವತಿ ಜೊತೆ ಕ್ಲೋಸ್ ಆಗಿ ಇದ್ದ ಕಾರಣ ರಾಕೇಶ್ ಅನುಮಾನಗೊಂಡು ಹರೀಶ್ ಜೊತೆ ಜಗಳಕ್ಕಿಳಿದು ಚಾಕು ಹಾಕಿದ್ದಾನೆ.

    ಸದ್ಯಕ್ಕೆ ರಾಕೇಶ್ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ 307 ಪ್ರಕರಣ ದಾಖಲಾಗಿದೆ. ಕಾರ್ಪೋರೇಟರ್ ಪುತ್ರನ ಅಟ್ಟಹಾಸಕ್ಕೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

  • ಲಾರಿ, ತೂಫಾನ್ ವಾಹನ ಮುಖಾಮುಖಿ ಡಿಕ್ಕಿ – ಇಬ್ಬರ ಸಾವು, 10 ಮಂದಿ ಗಂಭೀರ

    ಲಾರಿ, ತೂಫಾನ್ ವಾಹನ ಮುಖಾಮುಖಿ ಡಿಕ್ಕಿ – ಇಬ್ಬರ ಸಾವು, 10 ಮಂದಿ ಗಂಭೀರ

    ಕಾರವಾರ: ಲಾರಿ ಮತ್ತು ತೂಫಾನ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಮಹಿಳೆ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ರಾಗಿಹೊಸಳ್ಳಿ ಬಳಿ ಘಟನೆ ನಡೆದಿದೆ.

    ಗದಗ ಜಿಲ್ಲೆಯ ರೋಣ ಮೂಲದ ರಮೇಶ್ ಮತ್ತು ಕೃಷ್ಣ ಬಾಯಿ ಮೃತ ದುರ್ದೈವಿಗಳು. ರಾಗಿಹೊಸಳ್ಳಿ ಬಳಿಯ ದೇವಿಮನೆ ಘಾಟ್ ನಲ್ಲಿ ಈ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ 10 ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸಮೀಪದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗದಗ ಜಿಲ್ಲೆಯ ರೋಣದಿಂದ ಗೋಕರ್ಣಕ್ಕೆ 12 ಜನ ಪ್ರವಾಸಕ್ಕೆ ಹೋಗಿದ್ದರು. ಮತ್ತೆ ಅಲ್ಲಿಂದ ಮರಳಿ ಗೋಕರ್ಣದಿಂದ ಶಿರಸಿಗೆ ತೆರಳುವ ವೇಳೆ ದೇವಿಮನೆ ಘಾಟ್ ನ ತಿರುವಿನಲ್ಲಿ ಶಿರಸಿ ಭಾಗದಿಂದ ಬಂದ ಲಾರಿ ನೇರ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.

    ಈ ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಧಿಯ ಕ್ರೂರ ಅಟ್ಟಹಾಸಕ್ಕೆ ಪತ್ನಿಯ ಎದುರೇ ಪ್ರಾಣಬಿಟ್ಟ ಪತಿ

    ವಿಧಿಯ ಕ್ರೂರ ಅಟ್ಟಹಾಸಕ್ಕೆ ಪತ್ನಿಯ ಎದುರೇ ಪ್ರಾಣಬಿಟ್ಟ ಪತಿ

    ಮಂಡ್ಯ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪತ್ನಿಯ ಎದುರೇ ಪತಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಾರಕದಹಳ್ಳಿ ಗ್ರಾಮದ ಬಳಿ ನಡೆದಿದೆ.

    ಚನ್ನೇಗೌಡ (55) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಮೃತ ಚನ್ನೇಗೌಡ ನಾಗಮಂಗಲ ತೋಟಗಾರಿಕೆ ಇಲಾಖೆಯಲ್ಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಚೆನ್ನೇಗೌಡ ಹಾಗೂ ಅವರ ಪತ್ನಿ ಸರೋಜಮ್ಮ ದಂಪತಿ ನೆರೆ ಗ್ರಾಮದಲ್ಲಿ ಬೀಗರ ಊಟ ಮುಗಿಸಿ ಬೈಕಿನಲ್ಲಿ ಮನೆಗೆ ವಾಪಸ್ ಬರುತ್ತಿದ್ದರು.

    ಈ ವೇಳೆ ಬೈಕಿಗೆ ಎದುರು ಬದಿಯಿಂದ ಬಂದ ಟಿವಿಎಸ್ ಸ್ಕೂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚನ್ನೇಗೌಡ ಪತ್ನಿಯ ಎದುರೇ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ ಹಿಂಬದಿ ಕುಳಿತಿದ್ದ ಚನ್ನೇಗೌಡರ ಪತ್ನಿ ಸರೋಜಮ್ಮ ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಸಂಬಂಧ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದು ವೇಳೆ ಅಪಘಾತ ಸಂಭವಿಸದಿದ್ದರೆ ಕೆಲ ಕ್ಷಣಗಳಲ್ಲೇ ಚನ್ನೇಗೌಡ ಸುರಕ್ಷಿತವಾಗಿ ಮನೆ ಸೇರುತ್ತಿದರು.