Tag: injury

  • ಚಾಲಕನ ಸಮಯ ಪ್ರಜ್ಞೆಯಿಂದ 35 ಪ್ರಯಾಣಿಕರು ಪಾರು!

    ಚಾಲಕನ ಸಮಯ ಪ್ರಜ್ಞೆಯಿಂದ 35 ಪ್ರಯಾಣಿಕರು ಪಾರು!

    ಹಾಸನ: ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, 35 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಜಿಲ್ಲೆಯ ಸಕಲೇಶಪುರದ ಹುಲ್ಲಹಳ್ಳಿ ಬಳಿ ಈ ಅವಘಡ ಸಂಭವಿಸಿದೆ. ಹೊಂಗಡಹಳ್ಳ- ಆನೇಕಲ್ ಮಾರ್ಗದ ಸರ್ಕಾರಿ ಬಸ್ ಇದ್ದಾಗಿದ್ದು, ಈ ಬಸ್ಸಿನಲ್ಲಿ ಸುಮಾರು 35ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಸ್ ಹುಲ್ಲಹಳ್ಳಿ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಆಗ ಚಾಲಕ ಬಸ್ಸನ್ನು ಅಡ್ಡದಿಡ್ಡಿಯಾಗಿ ಚಲಾಯಿಸಿ, ನಂತರ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.

    ಚಾಲಕ ಮರಕ್ಕೆ ಡಿಕ್ಕಿ ಹೊಡೆಯದಿದ್ದರೆ ಬಸ್ ಪ್ರಪಾತಕ್ಕೆ ಉರುಳುತ್ತಿತ್ತು. ಆದ್ದರಿಂದ ಚಾಲಕ ಪ್ರಪಾತಕ್ಕೆ ಉರುಳದಂತೆ ತಡೆಯುವ ಸಲುವಾಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಓರ್ವ ಪ್ರಯಾಣಿಕರ ತಲೆಗೆ ಪೆಟ್ಟಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

    ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಮುಂಭಾಗ ನಜ್ಜುಗುಜ್ಜಾಗಿದೆ. ಈ ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

  • ಕಾರು ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

    ಕಾರು ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

    ತುಮಕೂರು: ಹಳೆದ್ವೇಷದ ಹಿನ್ನೆಲೆಯಲ್ಲಿ ಕಾರು ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ತುರುವೆಕೆರೆ ತಾಲೂಕಿನ ಮಾಯಸಂದ್ರ ಬಳಿ ನಡೆದಿದೆ.

    ಮಾಯಸಂದ್ರ ನಿವಾಸಿ ಸಚಿನ್(30) ಹಲ್ಲೆಗೊಳಗಾದ ದಲಿತ ಯುವಕ. ಕಳೆದ ರಾತ್ರಿ ಸಚಿನ್ ತನ್ನ ಕಾರಿನಲ್ಲಿ ಮನೆಗೆ ಹಿಂದಿರುಗುವಾಗ ಎರಡು ಬೈಕ್ ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಕಾರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಸಚಿನ್ ಗಂಭೀರ ಗಾಯಗೊಂಡಿದ್ದಾರೆ.

    ಗಾಯಗೊಂಡಿದ್ದ ಸಚಿನ್‍ನನ್ನು ತುರುವೆಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ತುರುವೆಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಬಸ್ಸಿನಿಂದ ಕೆಳಗಿಳಿಯುತ್ತಿದ್ದಂತೆ ಕಾಲಿನ ಮೇಲೆ ಹರಿದ ಬಸ್

    ಬಸ್ಸಿನಿಂದ ಕೆಳಗಿಳಿಯುತ್ತಿದ್ದಂತೆ ಕಾಲಿನ ಮೇಲೆ ಹರಿದ ಬಸ್

    ಮೈಸೂರು: ಬಸ್ಸಿನಿಂದ ಕೆಳಗಿಳಿಯುತ್ತಿದ್ದ ಪ್ರಯಾಣಿಕನ ಎಡಗಾಲಿನ ಮೇಲೆ ನಗರ ಸಾರಿಗೆ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಗ್ರಹಾರ ವೃತ್ತದಲ್ಲಿ ನಡೆದಿದೆ.

    ವಿವೇಕಾನಂದ ನಗರದಿಂದ ನಗರ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿತ್ತು. ಅರವಿಂದ ನಗರದ ನಿವಾಸಿ ಅಗ್ರಹಾರ ವೃತ್ತದಲ್ಲಿ ಬಸ್ ಇಳಿಯಲು ಮುಂದಾದಾಗ ಈ ಅವಘಡ ಸಂಭವಿಸಿದೆ.

    ಬಸ್ ನಿಲುವ ಮೊದಲೇ ಬಸ್ ಬಾಗಿಲು ತೆರೆದು ಕೊಂಡಿದೆ. ಈ ವೇಳೆ ಪ್ರಯಾಣಿಕ ಇಳಿಯಲು ಮುಂದಾದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಎಡಗಾಲಿನ ಮೇಲೆ ಅದೇ ಬಸ್ಸಿನ ಹಿಂಬದಿಯ ಚಕ್ರ ಹರಿದಿದೆ. ಪರಿಣಾಮ ವ್ಯಕ್ತಿ ಎಡಗಾಲಿಗೆ ಗಂಭೀರ ಗಾಯವಾಗಿದೆ. ನಂತರ ಸ್ಥಳದಲ್ಲಿದ್ದವರು ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ.

    ಈ ಘಟನೆ ಕೆ.ಆರ್.ಪುರಂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

  • ಕಾರಿನಡಿ ಸಿಲುಕಿದರೂ, ಪ್ರಾಣಾಪಾಯದಿಂದ ಪಾರಾದ ಬಾಲಕಿ: ವಿಡಿಯೋ ನೋಡಿ

    ಕಾರಿನಡಿ ಸಿಲುಕಿದರೂ, ಪ್ರಾಣಾಪಾಯದಿಂದ ಪಾರಾದ ಬಾಲಕಿ: ವಿಡಿಯೋ ನೋಡಿ

    ಹಾಸನ: ನಗರದ ಕುವೆಂಪು ಬಡಾವಣೆಯಲ್ಲಿ ಚಾಲಕನೊಬ್ಬ ಕಾರನ್ನು ಹಿಂತೆಗೆದುಕೊಳ್ಳುವ ಭರದಲ್ಲಿ ಬಾಲಕಿ ಮೇಲೆಯೇ ಕಾರನ್ನು ಹರಿಸಿ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಅಮೃತವರ್ಷಿಣಿ (14) ಪ್ರಾಣಾಪಾಯದಿಂದ ಪಾರಾದ ಬಾಲಕಿ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಕುವೆಂಪು ನಗರದಲ್ಲಿರುವ ಮನೆಯ ಮುಂದೆ ಬಾಲಕಿಯು ನಿಂತಿರುವಾಗ, ಏಕಾಏಕಿ ಮಾರುತಿ ಕಂಪೆನಿಯ ಆಲ್ಟೋ ಕಾರೊಂದು ಹಿಂಬದಿಯಿಂದ ಆಕೆಯ ಮೇಲೆ ಹರಿದು ಹೋಗಿದೆ. ಕಾರ್ ಹರಿದ ಪರಿಣಾಮ ಬಾಲಕಿ ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾಳೆ. ಬಾಲಕಿ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಘಟನೆ ಸಂಬಂಧ ಸ್ಥಳೀಯರು ಹತ್ತಿರದ ಎಂಬ್ರಾಯಿಡರಿ ಸೆಂಟರ್‍ನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಬಾಲಕಿಯ ಮೇಲೆ ಕಾರ್ ಹರಿದಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಬಾಲಕಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ. ಬಾಲಕಿ ಹುಟ್ಟಿನಿಂದಲೂ ಕೊಂಚ ಬುದ್ದಿಮಾಂದ್ಯಳಾಗಿರುವ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಬೇಜವಾಬ್ದಾರಿ ರೀತಿಯಲ್ಲಿ ಕಾರ್ ಚಲಾಯಿಸಿ ಮಗಳ ಮೇಲೆ ಹರಿಸಿರುವ ಕಾರು ಚಾಲಕನನ್ನು ಕಂಡು ಹಿಡಿದು, ನ್ಯಾಯ ದೊರಕಿಸಿ ಎಂದು ಪೋಷಕರು ಆಗ್ರಹಿಸಿದ್ದಾರೆ.

    https://www.youtube.com/watch?v=1spHMGbVDZo

  • ಬ್ರೇಕ್ ಫೇಲ್ – 35ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಕಾಲೇಜ್ ಬಸ್ ಪಲ್ಟಿ

    ಬ್ರೇಕ್ ಫೇಲ್ – 35ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಕಾಲೇಜ್ ಬಸ್ ಪಲ್ಟಿ

    ಕೋಲಾರ: ಬ್ರೇಕ್ ಫೇಲ್ ಆದ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜು ಬಸ್ಸೊಂದು ಪಲ್ಟಿಯಾಗಿದ್ದು, ಭಾರೀ ಅನಾಹುತ ತಪ್ಪಿ ವಿದ್ಯಾರ್ಥಿಗಳು ಪಾರಾಗಿದ್ದಾರೆ.

    ಜಿಲ್ಲೆಯ ಮಾಲೂರು ತಾಲೂಕಿನ ತೊರಲಕ್ಕಿ ಬಳಿ ಈ ಘಟನೆ ಸಂಭವಿಸಿದೆ. ಕೋಲಾರ ನಗರದ ಹೊರವಲಯದಲ್ಲಿರುವ ಸಹ್ಯಾದ್ರಿ ಖಾಸಗಿ ಕಾಲೇಜಿಗೆ ಸೇರಿದ ಬಸ್ ಇದಾಗಿದ್ದು. ಈ ಬಸ್ಸಿನಲ್ಲಿ ಸುಮಾರು 35 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು.

    ಇಂದು ಬೆಳಗ್ಗೆ ಕಾಲೇಜ್ ಬಸ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಮಾಲೂರು ತಾಲೂಕಿನ ಮಾಸ್ತಿ ಮಾರ್ಗದಿಂದ ಕೋಲಾರಕ್ಕೆ ಹೋಗುತ್ತಿತ್ತು. ಮಾಲೂರು ತಾಲೂಕಿನ ತೊರಲಕ್ಕಿ ಬಳಿ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಬಸ್ಸಿನ ಬ್ರೇಕ್ ಫೇಲಾಗಿದೆ. ಇದರಿಂದ ಬಸ್ ಅಡ್ಡಾ-ದಿಡ್ಡಿ ಚಲಿಸಿ ಕೊನೆಗೆ ಪಲ್ಟಿ ಹೊಡೆದಿದೆ. ಬಸ್ ಪಲ್ಟಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಮೂರು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ತಕ್ಷಣ ಸ್ಥಳದಲ್ಲಿದ್ದವರು ಬಂದು ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಮಾಸ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಅವಘಡದಿಂದ ಸಣ್ಣ ಪುಟ್ಟ ಗಾಯಗಳಾಗಿದ್ದು, ಎಲ್ಲ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ 6 ಮಂದಿಗೆ ಗಾಯ!

    ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ 6 ಮಂದಿಗೆ ಗಾಯ!

    ಬೆಂಗಳೂರು: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ನಡೆದಿದೆ.

    ಈ ಸಿಲಿಂಡರ್ ಸ್ಫೋಟದಿಂದ ಮನೆಯಲ್ಲಿದ್ದ 6 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ವಿಜಯ್ ಕುಮಾರ್, ಬಲಭೀಮ, ಕಾಶಿನಾಥ್, ರಾಜಶೇಖರ್, ಗಣೇಶ್ ಮತ್ತು ಫಾತಿಮಾ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲರೂ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಈ ಘಟನೆಗೆ ಅನಿಲ ಸೋರಿಕೆ ಕಾರಣವಾಗಿದ್ದು, ಇದರ ಅರಿವಿರದ ಮನೆಯವರು ಬೆಳಗ್ಗೆ ಸ್ಟವ್ ಹಚ್ಚಿದ್ದಾರೆ. ಆಗ ಸ್ಫೋಟವಾಗಿದೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಮನೆಯ ಮುಂಬಾಗಿಲು ಛಿದ್ರವಾಗಿದೆ.

    ಘಟನೆ ನಡೆದ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನೋಡ ನೋಡುತ್ತಿದ್ದಂತೆ ಕುಸಿದ ನೂರಾರು ಜನ ಕುಳಿತಿದ್ದ ಶೆಡ್ ವಿಡಿಯೋ ನೋಡಿ

    ನೋಡ ನೋಡುತ್ತಿದ್ದಂತೆ ಕುಸಿದ ನೂರಾರು ಜನ ಕುಳಿತಿದ್ದ ಶೆಡ್ ವಿಡಿಯೋ ನೋಡಿ

    – 17 ಮಂದಿಗೆ ಗಂಭೀರ ಗಾಯ

    ಜೈಪುರ: ಟ್ರಾಕ್ಟರ್ ರೇಸ್ ನೋಡುವ ವೇಳೆ ಶೆಡ್ ಕುಸಿದು 17 ಮಂದಿ ಗಾಯಗೊಂಡಿರುವ ಘಟನೆ ರಾಜಸ್ತಾನದ ಶ್ರೀ ಗಂಗಾನಗರದಲ್ಲಿ ನಡೆದಿದೆ.

    ಭಾನುವಾರ ಪಡಂಪುರ್ ಪ್ರದೇಶದಲ್ಲಿನ ಆನಾಜ್ ಮಂಡಿಯಲ್ಲಿ ವಾರ್ಷಿಕ ಜಾತ್ರೆಯ ಅಂಗವಾಗಿ ಟ್ರಾಕ್ಟರ್ ರೇಸ್ ಅನ್ನು ಆಯೋಜಿಸಲಾಗಿತ್ತು. ರೇಸ್ ನೋಡಲು ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ರೇಸ್ ಕಾಣುತ್ತಿರಲಿಲ್ಲ ಎಂದು ನೂರಾರು ಜನರು ಶೆಡ್ ಮೇಲೆ ಕುಳಿತು ವೀಕ್ಷಿಸುತ್ತಿದ್ದರು. ಅತಿ ಹೆಚ್ಚು ಜನರು ಕುಳಿತಿದ್ದರಿಂದ ಶೆಡ್ ಕುಸಿದಿದೆ. ಶೆಡ್ ಕುಸಿಯುವ ದೃಶ್ಯಗಳು ಸ್ಥಳೀಯ ವ್ಯಕ್ತಿಯೊಬ್ಬರ ಮೊಬೈಲನಲ್ಲಿ ಸೆರೆಯಾಗಿವೆ.

    ಶೆಡ್‍ನ ಅಡಿ ಸಿಲುಕಿದ್ದ ಜನರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಒಟ್ಟು 17 ಮಂದಿ ಗಾಯಗೊಂಡಿದ್ದು, ಅದರಲ್ಲಿ 7 ಮಂದಿಗೆ ಗಂಭೀರವಾದ ಗಾಯಗಳಾಗಿವೆ. ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದ10 ಜನರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.

    ಈ ಕಾರ್ಯಕ್ರಮವನ್ನು ಆಯೋಜಿಸಲು ಆಡಳಿತ ಮಂಡಳಿಯ ಆಯೋಜಕರು ಯಾವುದೇ ಅನುಮತಿಯನ್ನು ಪಡೆದುಕೊಂಡಿರಲಿಲ್ಲ. ಟ್ರಾಕ್ಟರ್ ರೇಸ್ ನೋಡುವುದಕ್ಕಾಗಿ ಗ್ರಾಮಸ್ಥರು ಆಗಮಿಸಿದ್ದರು.

  • ಆಯುರ್ವೆದಿಕ್ ಸೆಂಟರ್ ಗೆ ಹೋದ್ರೆ ಮಸಾಜ್ ಅಲ್ಲ, ಸೆಕ್ಸ್ ಮಾಡ್ಲೇಬೇಕು!

    ಆಯುರ್ವೆದಿಕ್ ಸೆಂಟರ್ ಗೆ ಹೋದ್ರೆ ಮಸಾಜ್ ಅಲ್ಲ, ಸೆಕ್ಸ್ ಮಾಡ್ಲೇಬೇಕು!

    – ಬಟ್ಟೆ ಬಿಚ್ಚಿಸಿ ಹುಡ್ಗಿ ಪಕ್ಕ ಮಲಗಿಸಿ ಫೋಟೋ ಕ್ಲಿಕ್
    – ಮಸಾಜ್‍ಗೆ ಹೋಗಿದ್ದ ಓಲಾ ಚಾಲಕನಿಗೆ ಥಳಿತ

    ಬೆಂಗಳೂರು: ನಗರದಲ್ಲಿ ಆಯುರ್ವೆದಿಕ್ ಮಸಾಜ್ ಸೆಂಟರ್ ಹೆಸರಿನಲ್ಲಿ ಅಕ್ರಮ ಮಾಂಸ ದಂಧೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಬಾಣಸವಾಡಿಯಲ್ಲಿ 15 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಯುರ್ವೆದಿಕ್ ಮಸಾಜ್ ಮಾಡಿಸಿಕೊಳ್ಳಲು ಹೋಗಿದ್ದ ಓಲಾ ಕ್ಯಾಬ್ ಚಾಲಕ ಲೈಂಗಿಕ ಕ್ರಿಯೆ ನಡೆಸದೆ ಇದ್ದ ಕಾರಣ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈಗ ಗಾಯಗೊಂಡಿದ್ದ ಕ್ಯಾಬ್ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಕ್ಯಾಬ್ ಚಾಲಕ ನಂದಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ನನ್ನ ಮೊಬೈಲ್ ಗೆ 2 ಸಾವಿರ ರೂ.ಗೆ ಆರ್ಯುವೇದಿಕ್ ಬಾಡಿ ಮಸಾಜ್ ಮಾಡಲಾಗುತ್ತದೆ ಎಂದು ಸಂದೇಶ ಬಂದಿತ್ತು. ಅದರಂತೆಯೇ ನಾನು ಮಸಾಜ್ ಪಾರ್ಲರ್ ಗೆ ಹೋಗಿದ್ದೆ. ಅಲ್ಲಿದ್ದವರ ನಡವಳಿಕೆ ಸರಿಯಿರಲಿಲ್ಲ. ಬಳಿಕ ಇದು ಅಕ್ರಮ ವೇಶ್ಯಾವಾಟಿಕೆ ಎಂದು ವಾಪಸ್ ಹೋಗುತ್ತಿದ್ದೆ. ಆದರೆ ಅವರು ನನ್ನ ಮೊಬೈಲ್ ಕಿತ್ತುಕೊಂಡು ಹಣ ಕೊಡುವಂತೆ ಒತ್ತಾಯ ಮಾಡಿದರು. ಬಳಿಕ ಇಬ್ಬರು ಹುಡುಗರು ನನ್ನನ್ನು ಎಳೆದುಕೊಂಡು ಹೋಗಿ ಬಟ್ಟೆ ಬಿಚ್ಚಿಸಿ ಅಪರಿಚಿತ ಹುಡುಗಿಯ ಜೊತೆ ಮಲಗಿಸಿ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಇದನ್ನು ಯಾರಿಗಾದರೂ ಹೇಳಿದರೆ ಮೀಡಿಯಾಗೆ ಕೊಟ್ಟು, ಕೇಸ್ ದಾಖಲಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದರು.

    ನಾನು ಅವರಿಂದ ತಪ್ಪಿಸಿಕೊಂಡು ಕಾರಿನಲ್ಲಿ ಹೊರಟೆ. ಆಗ ಅವರು ನನ್ನನ್ನು ಕಾರು ಮತ್ತು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದರು. ಕೊನೆಗೆ ಚಿಂತಾಮಣಿ ರಸ್ತೆ ಶಿವನಾಪುರ ಕ್ರಾಸ್ ಬಳಿ ದಾಳಿ ಮಾಡಿ ಅವಾಚ್ಯ ಶಬ್ಧಗಳಿಂದ ಬೈದು ನನ್ನ ಮೇಲೆ ಚಾಕು ಮತ್ತು ಮದ್ಯದ ಬಾಟಲ್ ನಿಂದ ಹಲ್ಲೆ ಮಾಡಿದರು. ಜೊತೆಗೆ ನನ್ನ ಬಳಿ ಇದ್ದ ಹಣ, ಚಿನ್ನ ಎಲ್ಲವನ್ನು ಕಿತ್ತುಕೊಂಡು ಗಲಾಟೆ ಮಾಡುತ್ತಿದ್ದರು. ಅಷ್ಟರಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಜನರನ್ನು ನೋಡಿ ಪರಾರಿಯಾದರು. ಬಳಿಕ ನಾನು ನನ್ನ ಸ್ನೇಹಿತನಿಗೆ ಮಾಹಿತಿ ತಿಳಿಸಿದ್ದೆ. ಆತನು ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದನು. ಇಷ್ಟು ದಿನ ನಾನು ಚಿಕಿತ್ಸೆ ಪಡೆಯುತ್ತಿದ್ದೆ. ಆದ ಕಾರಣ ತಡವಾಗಿ ನಾನು ದೂರು ನೀಡುತ್ತಿದ್ದೇನೆ. ಬಾಣಸವಾಡಿ ನಿವಾಸಿಗಳಾದ ಆಶ್ರಫ್, ಕಾರ್ತಿಕ್, ಜಾನ್, ಸುರೇಶ್ ಹಾಗೂ ಇತರರು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಬಗ್ಗೆ ಪೊಲೀಸರ ತನಿಖೆ ಮಾಡಿದ್ದು, ಆರೋಪಿಗಳ ಜಾಡುಹಿಡಿದಿದ್ದಾರೆ. ಅಷ್ಟೇ ಅಲ್ಲದೇ ಕ್ಯಾಬ್ ಚಾಲಕ ಆರೋಪಿಗಳ ಹೆಸರು, ಫೋಟೊ,ಅವರ ಹಿನ್ನೆಲೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ನನ್ನ ಮೇಲೆ ಹಲ್ಲೆ ಮಾಡುವಾಗ ಪಿಸ್ತೂಲ್ ಬಿಟ್ಟು ಹೋಗಿದ್ದರು. ಆದರೆ ಅದರ ಬಗ್ಗೆ ದೂರಿನಲ್ಲಿ ಉಲ್ಲೇಖಿಸದಂತೆ ಬಾಣಸವಾಡಿ ಇನ್ಸ್ ಪೆಕ್ಟರ್ ಹೇಳಿದ್ದರು. ಈಗ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದರೂ ಪೊಲೀಸರು ಬಂಧಿಸಿಲ್ಲ ಎಂದು ಕ್ಯಾಬ್ ಚಾಲಕ ಆರೋಪ ಮಾಡಿದ್ದಾರೆ.

    ಸದ್ಯ ಕ್ಯಾಬ್ ಚಾಲಕ ಮತ್ತೆ ನಂದಗುಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಜಾಲಿ ರೈಡಿಗೆ ಯುವ ವೈದ್ಯ ದುರ್ಮರಣ

    ಜಾಲಿ ರೈಡಿಗೆ ಯುವ ವೈದ್ಯ ದುರ್ಮರಣ

    ಬೆಂಗಳೂರು: ಜಾಲಿ ಬೈಕ್ ರೈಡ್‍ಗೆ ವೈದ್ಯನೊಬ್ಬ ಮೃತಪಟ್ಟಿದ್ದು, ಮೊತ್ತಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ನಗರದಲ್ಲಿ ಸಂಭವಿಸಿದೆ.

    ಬೈಕ್ ಸವಾರ ಡಾ.ನಿಶಾದ್ (28) ಮೃತ ದುರ್ದೈವಿ. ಬೆಂಗಳೂರಿನ ಕೊಡಿಗೆಹಳ್ಳಿ ಫ್ಲೈಓವರ್  ನಲ್ಲಿ ಈ ಘಟನೆ ನಡೆದಿದೆ. ಈ ಅಪಘಾತದಿಂದ ಹಿಂಬದಿ ಸವಾರ ನವೀದ್‍ ಗೆ ಗಂಭೀರವಾಗಿ ಗಾಯವಾಗಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

    ಮೃತ ಡಾ.ನಿಶಾದ್ ಸೇರಿದಂತೆ ಇಂದು 15 ಜನರ ತಂಡ ನಂದಿ ಬೆಟ್ಟಕ್ಕೆ ಹೊರಟಿತ್ತು. ಇವರು ಕೆಟಿಎಂ ಸೇರಿದಂತೆ ಐಷರಾಮಿ ಬೈಕ್‍ ಗಳಲ್ಲಿ ಜಾಲಿ ರೈಡ್ ಹೊರಟಿದ್ದರು. ಆದರೆ ಅತೀ ವೇಗವಾಗಿ ಬೈಕ್ ಚಲಾಯಿಸುತ್ತಿದ್ದು, ಕೊಡಿಗೆಹಳ್ಳಿ ಫ್ಲೈಓವರ್ ನಲ್ಲಿ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಿಶಾದ್ ಸುಮಾರು 40 ಅಡಿ ದೂರಕ್ಕೆ ಬಿದ್ದಿದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಮೃತ ಬೈಕ್ ಸವಾರ ನಿಶಾದ್ ಕೋರಮಂಗಲದಲ್ಲಿ ವಾಸವಿದ್ದು, ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ನಿಶಾದ್ 13 ಲಕ್ಷದ ಬೈಕ್ ನಲ್ಲಿ ಜಾಲಿ ರೈಡ್ ಹೊರಟಿದ್ದರು.

    ಘಟನೆ ನಡೆದ ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬಂಧಿಸಲು ಹೋದಾಗ ಮುಗಿಬಿದ್ದ ರೌಡಿ – ಗುಂಡು ಹಾರಿಸಿ ಆಸ್ಪತ್ರೆಗೆ ಸೇರಿಸಿದ ಪೊಲೀಸ್ರು

    ಬಂಧಿಸಲು ಹೋದಾಗ ಮುಗಿಬಿದ್ದ ರೌಡಿ – ಗುಂಡು ಹಾರಿಸಿ ಆಸ್ಪತ್ರೆಗೆ ಸೇರಿಸಿದ ಪೊಲೀಸ್ರು

    ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದೆ. ಬಂಧಿಸಲು ಹೋದಾಗ ರೌಡಿಯೊಬ್ಬ ಮುಗಿಬಿದ್ದ ಪರಿಣಾಮ ಪೊಲೀಸರು ಆತನಿಗೆ ಗುಂಡು ಹಾರಿಸಿದ್ದಾರೆ.

    ಬಿನ್ನಮಿಲ್ ಕ್ಯಾಂಟೀನ್ ಬಳಿ ಈ ಘಟನೆ ನಡೆದಿದೆ. ರೌಡಿ ಶೀಟರ್ ಕಿರಣ್ ಅಲಿಯಾಸ್ ಕಿರ್ಬ ಗುಂಡೇಟಿನಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೆ.ಪಿ ಅಗ್ರಹಾರ ಇನ್ಸ್ ಪೆಕ್ಟರ್ ಎಸ್.ಎಸ್. ಮಂಜು ಅವರು ಆರೋಪಿಗೆ ಗುಂಡು ಹಾರಿಸಿದ್ದಾರೆ. ಇದನ್ನು ಓದಿ: ರಾಜಕೀಯ ದ್ವೇಷ: ಕಾಂಗ್ರೆಸ್ ಕಚೇರಿಯಲ್ಲಿನ ವಸ್ತುಗಳ ನಾಶ – 25ಕ್ಕೂ ಹೆಚ್ಚು ವಾಹನಗಳ ಗಾಜು ಪೀಸ್‍ ಪೀಸ್

    ಹೇಗಾಯಿತು?:
    ರೌಡಿ ಶೀಟರ್ ಕಿರಣ್ ಅಲಿಯಾಸ್ ಕಿರ್ಬ ಮತ್ತು ಆತನ ಗ್ಯಾಂಗ್ ಇದೇ ತಿಂಗಳ 25ರ ರಾತ್ರಿ ಚೋಳೂರುಪಾಳ್ಯ ಮತ್ತು ಕೆ.ಪಿ ಅಗ್ರಹಾರದಲ್ಲಿ ದಾಂಧಲೆ ನಡೆಸಿದ್ದರು. ಸುಮಾರು 25 ಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿದ್ದರು. ಅಷ್ಟೇ ಅಲ್ಲದೇ ಕಾಂಗ್ರೆಸ್ ಕಚೇರಿಗೆ ನುಗ್ಗಿ ಅಲ್ಲಿ ಧ್ವಂಸ ಮಾಡಿ, ಇನ್ನು ಮುಂದೆ ಕಚೇರಿ ಓಪನ್ ಮಾಡದಂತೆ ಬೆದರಿಸಿ ಮಚ್ಚು ಬಿಸಾಕಿದ್ದರು. ಬಳಿಕ ಈ ಬಗ್ಗೆ ಪೊಲೀಸರು ಗಂಭೀರವಾಗಿ ವಿಚಾರಣೆ ಮಾಡಿ ಅವರನ್ನು ಬಂಧಿಸಲು ಮುಂದಾಗಿದ್ದರು.

    ಪೊಲೀಸರು ಆರೋಪಿಗಳಿರುವ ಬಗ್ಗೆ ಮಾಹಿತಿ ತಿಳಿದುಕೊಂಡು ಇಂದು ಬೆಳಗಿನ ಜಾವ ಬಿನ್ನಿಮಿಲ್ ಬಳಿ ಬಂಧಿಸಲು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರು ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಆರೋಪಿ ಕಿರ್ಬಾ ಬಂಧಿಸಲು ಹೋಗಿದ್ದ ಹೆಡ್ ಕಾನ್ ಸ್ಟೇಬಲ್ ನಾಗರಾಜಪ್ಪ ಕೈಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಆಗ ಆರೋಪಿಗಳ ಪೈಕಿ ಒಬ್ಬನ ಕಾಲಿಗೆ ಇನ್ಸ್ ಪೆಕ್ಟರ್ ಎಸ್.ಎಸ್. ಮಂಜು ಅವರು ಗುಂಡು ಹಾರಿಸಿದ್ದಾರೆ.

    ಸದ್ಯಕ್ಕೆ ಗುಂಡೇಟು ತಿಂದಿದ್ದ ಆರೋಪಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.