Tag: injury

  • ಹಣ ಕೊಡಲು ಕರೆಸಿ, ಲೈಂಗಿಕ ಸಂಪರ್ಕಕ್ಕೆ ಒತ್ತಾಯ – ಬೇಡ ಅಂದಿದ್ದೇ ತಪ್ಪಾಯ್ತು

    ಹಣ ಕೊಡಲು ಕರೆಸಿ, ಲೈಂಗಿಕ ಸಂಪರ್ಕಕ್ಕೆ ಒತ್ತಾಯ – ಬೇಡ ಅಂದಿದ್ದೇ ತಪ್ಪಾಯ್ತು

    ಬೆಂಗಳೂರು: ವ್ಯಕ್ತಿಯೊಬ್ಬ ಮಹಿಳೆಯನ್ನು ಚಾಕುವಿನಿಂದ ಇರಿದು ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರಾಘವೇಂದ್ರ ಶಾಸ್ತ್ರಿ ಅಲಿಯಾಸ್ ರಘು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ ಆರೋಪಿ. ಈ ಘಟನೆ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನೈಸ್ ರಸ್ತೆಯಯ ನಿವಾಸಿಯೊಬ್ಬರಿಗೆ ಚಾಕುವಿನಿಂದ ಚುಚ್ಚಿದ್ದು, ಈಗ ಆಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆರೋಪಿ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಲೈಂಗಿಕ ಸಂಪರ್ಕ ಬೇಡ ಅಂದಿದ್ದಕ್ಕೆ ಚಾಕು ಖರೀದಿಸಿ ಕೊಲೆ ಮಾಡಲು ಚುಚ್ಚಿದ್ದನು ಎಂದು ತಿಳಿದು ಬಂದಿದೆ.

    ನಡೆದಿದ್ದೇನು?
    ಈ ಹಿಂದೆ ಆರೋಪಿ ವಿವಾಹಿತ ಮಹಿಳೆಯನ್ನ ಪ್ರೀತಿಸಿ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದನು. ನಂತರ ಕೌಟುಂಬಿಕ ಕಾರಣದಿಂದ ಮಹಿಳೆ ದೂರವಾಗಿದ್ದರು. ಈ ನಡುವೆ ಮತ್ತೆ ಇಬ್ಬರು ಹಣಕಾಸಿನ ವಿಚಾರವಾಗಿ ಸಂಪರ್ಕ ಹೊಂದಿದ್ದರು. ನಂತರ ಅಂದಿನಿಂದಲೂ ಮಹಿಳೆ ಮತ್ತು ರಘು ಫೋನಿನಲ್ಲಿ ಸಂಪರ್ಕದಲ್ಲಿದ್ದರು.

    ರಘು ಹಣ ನೀಡುತ್ತೇನೆ ಎಂದು ಬನಶಂಕರಿಗೆ ಕರೆದಿದ್ದರು. ಬಳಿಕ ಮಹಿಳೆ ಅದಕ್ಕೆ ನಿರಾಕರಿಸಿ ಆರ್ ಆರ್ ನಗರದ ಬಳಿ ಇರುವ ಆರ್ಮುಗಂ ದೇವಸ್ಥಾನಕ್ಕೆ ಕರಸಿಕೊಂಡಿದ್ದರು. ಈ ಮೊದಲೇ ರಘು ಇಟ್ಟಮಡುವಿನಲ್ಲಿ ಚಾಕು ಖರೀದಿಸಿ ಕದಿರೇನಹಳ್ಳಿಯ ಕರ್ನಾಟಕ ಬಾರಿನಲ್ಲಿ ಮದ್ಯ ಸೇವಿಸಿದ್ದನು. ನಂತರ ನೈಸ್ ರಸ್ತೆಯ ಬ್ರಿಡ್ಜ್ ಬಳಿ ಮಹಿಳೆ ಬಂದಿದ್ದರು. ಆದರೆ ಈ ವೇಳೆ ರಘು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದನು. ಆದರೆ ಮಹಿಳೆ ಇದಕ್ಕೆ ನಿರಾಕರಿಸಿದ್ದಾರೆ.

    ಮೊದಲೇ ಕೊಲ್ಲಲೇಬೇಕೆಂದು ನಿರ್ಧರಿಸಿದ್ದ ರಘು ದೈಹಿಕ ಸಂಪರ್ಕಕ್ಕೆ ನಿರಾಕರಿಸಿದವಳ ಎದೆ ಮತ್ತು ಹೊಟ್ಟೆಗೆ 10ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾನೆ. ನಂತರ ಚಾಕುವನ್ನು ಅಲ್ಲಿಯೇ ಬಿಟ್ಟು ಪೊಲೀಸ್ ಠಾಣೆಗೆ ಹೋಗಿ ಸರಂಡರ್ ಆಗಿದ್ದಾನೆ. ಸದ್ಯಕ್ಕೆ ಗಾಯಾಳು ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದಾರೆ.

    ಈ ಕುರಿತು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರ್‍ಆರ್ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಬಂಧಿತ ರಘುವಿಗೆ ಈಗಾಗಲೇ ಮದುವೆಯಾಗಿದ್ದು, ಆತನಿಗೆ ಎರಡು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎರಡು ಪ್ರತ್ಯೇಕ ಅಪಘಾತ ಪ್ರಕರಣ- ಮೂವರ ದುರ್ಮರಣ, ಐವರು ಗಂಭೀರ

    ಎರಡು ಪ್ರತ್ಯೇಕ ಅಪಘಾತ ಪ್ರಕರಣ- ಮೂವರ ದುರ್ಮರಣ, ಐವರು ಗಂಭೀರ

    ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಪಟ್ಟಣದ ಬಳಿ ಪ್ರತ್ಯೇಕ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

    ತಮಿಳುನಾಡು ಮೂಲದ ಕೇಶವನ್(35), ಮಂಜುನಾಥ್(30) ಮತ್ತು ಗುರುಪ್ರಸಾದ್(40) ಮೃತ ದುರ್ದೈವಿಗಳು. ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಕೇಶವನ್ ಮೃತಪಟ್ಟಿದ್ದಾರೆ.

    ಇತ್ತ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಮತ್ತು ಟಿಟಿ ವಾಹನ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಟಿಟಿ ವಾಹನದಲ್ಲಿ ಬೆಂಗಳೂರಿನಿಂದ ಶಿರಸಿಗೆ ತೆರಳುತ್ತಿದ್ದರು. ಈ ವೇಳೆ ಲಾರಿ ಮತ್ತು ಟಿಟಿ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿವೆ. ಪರಿಣಾಮ ಮಂಜುನಾಥ್ ಮತ್ತು ಗುರುಪ್ರಸಾದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಅಪಘಾತದಲ್ಲಿ ಟಿಟಿ ವಾಹನದಲ್ಲಿದ್ದ ಐವರಿಗೆ ಗಂಭೀರವಾಗಿ ಗಾಯವಾಗಿದ್ದು, ಗಾಯಾಳುಗಳನ್ನು ಹಿರಿಯೂರು ಮತ್ತು ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಗ್ಗೆ ಮಾಹಿತಿ ತಿಳಿದ ಹಿರಿಯೂರು ಪೊಲೀಸ್ ಠಾಣೆಯ ಸಿಪಿಐ ಗುರುರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ಹಿರಿಯೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಿಲ್ಲಾ ಪಂಚಾಯ್ತಿ ಸಿಇಓ ಪ್ರಯಾಣಿಸ್ತಿದ್ದ ಕಾರ್ ಪಲ್ಟಿ

    ಜಿಲ್ಲಾ ಪಂಚಾಯ್ತಿ ಸಿಇಓ ಪ್ರಯಾಣಿಸ್ತಿದ್ದ ಕಾರ್ ಪಲ್ಟಿ

    ಹಾವೇರಿ: ಜಿಲ್ಲಾ ಪಂಚಾಯ್ತಿ ಸಿಇಓ ಪ್ರಯಾಣಿಸುತ್ತಿದ್ದ ಕಾರ್ ಪಲ್ಟಿಯಾಗಿದ್ದು, ಸಿಇಓ ಸೇರಿ ನಾಲ್ವರು ಗಾಯಗೊಂಡ ಘಟನೆ ಹಾವೇರಿ ನಗರದ ಹೊರವಲಯದಲ್ಲಿರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಬಳಿ ನಡೆದಿದೆ.

    ಅಪಘಾತದಲ್ಲಿ ಗಾಯಗೊಂಡರನ್ನ ಸಿಇಓ ಶಿಲ್ಪಾ ನಾಗ್, ಸಿಇಓ ಪುತ್ರ ರಿಷಿ, ಅರ್ಚನಾ ಪಿಳ್ಳೆ ಮತ್ತು ವಿಶ್ವನಾಥ್ ಎಂದು ಗುರುತಿಸಲಾಗಿದೆ. ಸ್ವಂತ ಕಾರಿನಲ್ಲಿ ಶಿಲ್ಪಾ ನಾಗ್ ಪ್ರಯಾಣಿಸುತ್ತಿದ್ದು, ಇವರು ದೇವಗಿರಿ ಗ್ರಾಮದ ಬಳಿ ಇರುವ ನಿವಾಸದ ಕಡೆಯಿಂದ ಬರುತ್ತಿದ್ದರು. ಈ ವೇಳೆ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಕಾರ್ ಚಾಲಕಿಯ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

    ಅಪಘಾತದಲ್ಲಿ ಗಾಯಗೊಂಡು ಗಾಯಾಳುಗಳನ್ನ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರನ್ನ ಶಿಲ್ಪಾ ನಾಗ್ ಸ್ನೇಹಿತೆ ಅರ್ಚನಾ ಎಂಬವರು ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಘಟನೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆ ಅಂಗಳದಲ್ಲಿ ಆಟವಾಡ್ತಿದ್ದ ಮಗುವಿನ ಮೇಲೆ ಹಂದಿ ದಾಳಿ!

    ಮನೆ ಅಂಗಳದಲ್ಲಿ ಆಟವಾಡ್ತಿದ್ದ ಮಗುವಿನ ಮೇಲೆ ಹಂದಿ ದಾಳಿ!

    ಕೊಪ್ಪಳ: ಮನೆ ಅಂಗಳದಲ್ಲಿ ಆಟವಾಡುವ ಸಮಯದಲ್ಲಿ ಮಗುವಿನ ಮೇಲೆ ಹಂದಿ ದಾಳಿ ಮಾಡಿರುವ ಘಟನೆ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ನಡೆದಿದೆ.

    ಕೊಪ್ಪಳದ ಗಂಗಾವತಿಯ ಬನ್ನಿ ಗಿಡದ ಕ್ಯಾಂಪ್‍ನಲ್ಲಿ ಈ ಘಟನೆ ಸಂಭವಿಸಿದ್ದು, 2 ವರ್ಷದ ರಿಹಾನ್ ಎಂಬ ಮಗು ಮನೆಯ ಹೊರಗಡೆ ಆಟವಾಡುತ್ತಿದ್ದಾಗ ಹಂದಿ ದಾಳಿ ಮಾಡಿ ಮಗುವನ್ನು ತೀವ್ರ ಗಾಯಗೊಳಿಸಿದೆ. ಕೂಡಲೇ ಹಂದಿಯಿಂದ ಮಗುವನ್ನು ಬಿಡಿಸಿದ ಸ್ಥಳೀಯರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಹಂದಿ ಈ ರೀತಿ ದಾಳಿ ಮಾಡುತ್ತಿರೋದು ಇದೆ ಮೊದಲಲ್ಲ, ಸಾಕಷ್ಟು ಬಾರಿ ಇಂತಹ ಘಟನೆ ನೆಡೆದಿವೆ. ಈ ಕುರಿತು ಹಲವು ಬಾರಿ ಗಂಗಾವತಿ ನಗರಸಭೆ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಕ್ಯಾರೇ ಅಂದಿಲ್ಲಾ. ಇವಾಗ ಆರಿಸಿ ಬಂದಿರುವ ಹೊಸ ಕೌನ್ಸಲರ್ ಆದರೂ ಈ ಕಡೆ ಗಮನ ಹರಿಸಿ ಹಂದಿ ದಾಳಿಯಿಂದ ಮುಕ್ತಿ ಕೊಡಿಸಿ ಎಂದು ಜನರು ಆಕ್ರೋಶವನ್ನು ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆ ಪಕ್ಕದಲ್ಲಿ ನಿಂತಿದ್ದ ಜನರ ಮೇಲೆ ಹರಿದ ಲಾರಿ: ಮೂವರು ಸಾವು

    ರಸ್ತೆ ಪಕ್ಕದಲ್ಲಿ ನಿಂತಿದ್ದ ಜನರ ಮೇಲೆ ಹರಿದ ಲಾರಿ: ಮೂವರು ಸಾವು

    ಕಲಬುರಗಿ: ರಸ್ತೆ ಪಕ್ಕದಲ್ಲಿಯೇ ನಿಂತಿದ್ದ ಜನರ ಮೇಲೆ ಲಾರಿಯೊಂದು ಹರಿದು, ಮೂವರು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಬಳಿ ನಡೆದಿದೆ.

    ಮೃತ ದುರ್ದೈವಿಗಳನ್ನು ಜೇರಟಗಿ ಗ್ರಾಮದ ಯುವಕರಾದ ಶ್ರೀಕಾಂತ್ ಬಡಿಗೇರ್ (25), ಮೋಹಿದ್ (18) ಹಾಗೂ ಉತ್ತರ ಪ್ರದೇಶ ಮೂಲದ ಪಾನಿಪುರಿ ವ್ಯಾಪಾರಿ ಎಂದು ಗುರುತಿಸಲಾಗಿದೆ. ಜನರು ರಸ್ತೆ ಪಕ್ಕದಲ್ಲಿ ನಿಂತಿದ್ದರು. ಈ ವೇಳೆ ಏಕಾಏಕಿ ಬಂದ ಲಾರಿ ಅವರ ಮೇಲೆ ಹರಿದಿದೆ.

    ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ವಿಜಯಪುರದ ಸಿಂದಗಿ ತಾಲೂಕಿನ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳಲ್ಲಿ ಓರ್ವನ ಎಡರೂ ಕಾಲುಗಳು ಕಟ್ ಆಗಿವೆ ಎಂಬುದಾಗಿ ತಿಳಿದುಬಂದಿದೆ.

    ಇತ್ತೀಚೆಗಷ್ಟೇ ರಸ್ತೆ ಅಗಲಿಕರಣಕ್ಕಾಗಿ ಅಲ್ಲಿನ ಬಸ್ ನಿಲ್ದಾಣ ತೆರವು ಮಾಡಿದ್ದು, ಜನ ರಸ್ತೆಯ ಪಕ್ಕದಲ್ಲಿ ನಿಂತು ಬಸ್‍ಗಾಗಿ ಕಾಯುತ್ತಿರುವಾಗ ಈ ಘಟನೆ ನಡೆದಿದೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನ ನಿರ್ಲಕ್ಷ್ಯವನ್ನು ಖಂಡಿಸಿ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾದಚಾರಿಗೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ- 45 ನಿಮಿಷ ರಸ್ತೆಯಲ್ಲೇ ಗಾಯಾಳು ನರಳಾಟ

    ಪಾದಚಾರಿಗೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ- 45 ನಿಮಿಷ ರಸ್ತೆಯಲ್ಲೇ ಗಾಯಾಳು ನರಳಾಟ

    ಬೆಂಗಳೂರು:  ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು, ಗಾಯಾಳು ಪಾದಚಾರಿಯೊಬ್ಬರು 45 ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲೇ ನರಳಾಟ ನಡೆಸಿದ ಮನಕಲಕುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಹಿಮಾಪುರ ಗೇಟ್ ಬಳಿ ನಡೆದಿದೆ.

    ಅಪಫಾತ ಸಂಭವಿಸಿದ ನಂತರ ಆಸ್ಪತ್ರೆಗೆ ದಾಖಲಿಸುವಂತೆ ಗಾಯಾಳು ಕೈ ಮುಗಿದು ಬೇಡಿಕೊಂಡರೂ ಸ್ಥಳೀಯರು ಹಾಗೂ ಸವಾರರು ಮಾನವೀಯತೆ ಮರೆತಿದ್ದಾರೆ. ಆಸ್ಪತ್ರೆಗೆ ಸೇರಿಸಲು ಮೀನಾಮೇಷ ಮಾಡಿದ್ದಾರೆ. ಟೋಲ್ ಸಿಬ್ಬಂದಿ ಕೂಡ ಕೂಡಲೇ ಯುವಕನನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿಲ್ಲ.

    ಈ ಘಟನೆಯ ಬಳಿಕ ಕೆಎಸ್ಆರ್‌ಟಿಸಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನನ್ನು ನಂತರ ಸ್ಥಳೀಯ ಆಸ್ಪತ್ರೆಗೆ ಅಲ್ಲಿನ ವಾಹನ ಸವಾರರು ದಾಖಲಿಸಿದರು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೋವಾದಿಂದ ಬೆಂಗ್ಳೂರಿಗೆ ಬರ್ತಿದ್ದ ಎಸಿಸ್ಲೀಪರ್ ಬಸ್ ಪಲ್ಟಿ

    ಗೋವಾದಿಂದ ಬೆಂಗ್ಳೂರಿಗೆ ಬರ್ತಿದ್ದ ಎಸಿಸ್ಲೀಪರ್ ಬಸ್ ಪಲ್ಟಿ

    ಹಾವೇರಿ: ಸರ್ಕಾರಿ ಎಸಿಸ್ಲೀಪರ್ ಬಸ್ ಪಲ್ಟಿಯಾದ ಪರಿಣಾಮ 13 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರು ಗಂಭೀರಗೊಂಡಿರುವ ಘಟನೆ ಹಾವೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.

    ಸರ್ಕಾರಿ ಎಸಿಸ್ಲೀಪರ್ ಬಸ್ ಗೋವಾದಿಂದ ಬೆಂಗಳೂರು ಕಡೆ ಸಂಚರಿಸುತ್ತಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಬರುತ್ತಿದ್ದಂತೆಯೇ ಬಸ್ ಪಲ್ಟಿಯಾಗಿದೆ. ಚಾಲಕ ನಿದ್ರೆಯ ಮಂಪರಿಗೆ ಜಾರಿದ್ದ ಕಾರಣ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಬಸ್ಸಿನಲ್ಲಿ ಸುಮಾರು 30 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

    ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಲಕ್ಷ್ಮೀ ಪಾಟೀಲ(26) ಮತ್ತು ಶ್ರೀನಿವಾಸಿ(28) ಎಂದು ಗುರುತಿಸಲಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಘಟನೆಯಲ್ಲಿ ಗಾಯಗೊಂಡ 13 ಜನ ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಾವೇರಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೂಟಿಂಗ್ ವೇಳೆ ಅಪಘಾತ – ಕಿಚ್ಚ ಸುದೀಪ್ ಸ್ಪಷ್ಟನೆ

    ಶೂಟಿಂಗ್ ವೇಳೆ ಅಪಘಾತ – ಕಿಚ್ಚ ಸುದೀಪ್ ಸ್ಪಷ್ಟನೆ

    ಬೆಂಗಳೂರು: ಕೆಲವು ದಿನಗಳ ಹಿಂದೆ ನಟ ಸುದೀಪ್ ಅವರಿದ್ದ ಕಾರು ಅಪಘಾತವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ನಟ ಸುದೀಪ್ ಅವರೇ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ.

    ಸೋಮವಾರ ‘ದಿ ವಿಲನ್’ ಸಿನಿಮಾದ ಹೊಚ್ಚ ಹೊಸ ಟೀಸರ್ ಬಿಡುಗಡೆಯಾಗಿದೆ. ಈ ಕಾರ್ಯಕ್ರಮಕ್ಕೆ ಸುದೀಪ್ ಅವರು ಬಂದಿರಲಿಲ್ಲ. ಶೂಟಿಂಗ್ ವೇಳೆ ಬಿದ್ದು ಪೆಟ್ಟಾಗಿರುವ ಕಾರಣದಿಂದ ‘ದಿ ವಿಲನ್’ ಮಾಧ್ಯಮಗೋಷ್ಠಿಗೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿತ್ತು. ಸುದೀಪ್ ಈ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ಈಗ ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ?
    ‘ದಿ ವಿಲನ್’ ಚಿತ್ರ ತಂಡಕ್ಕೆ ನನ್ನ ಶುಭಾಶಯಗಳು. ‘ದಿ ವಿಲನ್’ ಪತ್ರಿಕಾಗೋಷ್ಠಿಯಲ್ಲಿ ನಾನು ಭಾಗವಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಾಧ್ಯಮ ಸ್ನೇಹಿತರು ಮತ್ತು ಚಿತ್ರತಂಡಕ್ಕೆ ಕ್ಷಮಾಪಣೆಯನ್ನು ತಿಳಿಸುತ್ತಿದ್ದೇನೆ. ಇಂದು ಸಿನಿಮಾದ ಶೂಟಿಂಗ್ ನಡೆಯುವ ವೇಳೆ ನನ್ನ ಬೆನ್ನಿನ ಭಾಗಕ್ಕೆ ಪೆಟ್ಟಾಗಿದೆ. ಹಾಗಾಗಿ ನಾನು ಪ್ರಯಾಣ ಮಾಡಲು ಸಾಧ್ಯವಾಗಲಿಲ್ಲ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು’ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ಸುದೀಪ್ ಅವರು ತಮಗೆ ಪೆಟ್ಟಾಗಿದೆ ಎಂದು ಹೇಳಿದ್ದಾರೆ. ಆದರೆ ಯಾವ ಸಿನಿಮಾದ ಚಿತ್ರೀಕರಣದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿಲ್ಲ. ಇತ್ತೀಚೆಗೆ ಹೈದರಾಬಾದಿನಲ್ಲಿ ‘ಪೈಲ್ವಾನ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಆದ್ದರಿಂದ ಪೈಲ್ವಾನ್ ಚಿತ್ರೀಕರಣದಲ್ಲಿಯೇ ಸುದೀಪ್ ಅವರಿಗೆ ಪೆಟ್ಟಾಗಿರಬಹುದು ಎಂದು ಹೇಳಲಾಗುತ್ತಿದೆ.

    ಹರಿದಾಡಿದ್ದ ಸುದ್ದಿಯೇನು?:
    ನಟ ದರ್ಶನ್ ಅವರ ಕಾರ್ ಮೈಸೂರಿನಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡ ಬೆನ್ನಲ್ಲೇ ನಟ ಸುದೀಪ್ ಅವರ ಕಾರ್ ಕೂಡ ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿತ್ತು. ಈ ಸುದ್ದಿ ಜೊತೆಗೆ ಸುದೀಪ್ ಹಾಗೂ ಅಪಘಾತಕ್ಕೀಡಾದ ಕಾರಿನ ಫೋಟೋ ಕೂಡ ಪೋಸ್ಟ್ ಮಾಡಲಾಗಿತ್ತು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಅಭಿಮಾನಿಗಳು, ಈ ಸುದ್ದಿ ಸುಳ್ಳು. ಕಿಚ್ಚ ಆರಾಮಾಗಿದ್ದಾರೆ. ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದರು. ಆದ್ರೆ ಇದ್ಯಾವುದಕ್ಕೂ ಸುದೀಪ್ ಅವರು ಪ್ರತಿಕ್ರಿಯಿಸಿರಲಿಲ್ಲ. ಆದ್ರೆ ಇದೀಗ ಬೆನ್ನಿಗೆ ಗಾಯವಾಗಿದೆ ಅಂತ ಹೇಳುವ ಮೂಲಕ ಕಿಚ್ಚ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

    ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಟಿಸಿರುವ ‘ದಿ ವಿಲನ್’ ಸಿನಿಮಾದ ಟೀಸರ್ ಸೋಮವಾರ ರಿಲೀಸ್ ಆಗಿದೆ. ಸದ್ಯಕ್ಕೆ ಟೀಸರ್ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ 1 ನಲ್ಲಿ ಇದೆ. ಅಕ್ಟೋಬರ್ 18 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ತಿಂಗಳು 18 ಕ್ಕೆ ‘ದಿ ವಿಲನ್’ ಸಿನಿಮಾ ಬಿಡುಗಡೆಯಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವಕನ ಮೇಲೆ ಪಿಎಸ್‍ಐ ಹಲ್ಲೆ ಪ್ರಕರಣ- ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ಪೊಲೀಸರಿಂದ ದೂರು

    ಯುವಕನ ಮೇಲೆ ಪಿಎಸ್‍ಐ ಹಲ್ಲೆ ಪ್ರಕರಣ- ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ಪೊಲೀಸರಿಂದ ದೂರು

    ಬಾಗಲಕೋಟೆ: ಇಳಕಲ್ ನಗರದಲ್ಲಿ ಬೈಕ್ ನಲ್ಲಿ ಟ್ರಿಪಲ್ ರೈಡ್ ವಿಚಾರಕ್ಕಾಗಿ ಯುವಕನ ಮೇಲೆ ಪಿಎಸ್‍ಐ ಹಲ್ಲೆ ಮಾಡಿದ್ದು, ಇದೀಗ ಪೊಲೀಸರು ಯುವಕನ ವಿರುದ್ಧವೇ ದೂರು ದಾಖಲಿಸಿದ್ದಾರೆ.

    ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದ ಪಿಎಸ್‍ಐ ಎನ್ ಆರ್ ಖಿಲಾರೆ ಹಾಗೂ ಪೇದೆ ಸಿ ಆರ್ ಬಳಿಗಾರ ನಮ್ಮ ಮೇಲೆಯೇ ಹಲ್ಲೆ ನಡೆದಿದೆ ಎಂದು ಭಾನುವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆಗಿದ್ದಾರೆ. ಅಷ್ಟೇ ಅಲ್ಲದೇ ಯುವಕನೇ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ಇಳಕಲ್ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

    ಏನಿದು ಪ್ರಕರಣ?:
    27 ವರ್ಷದ ಶಿವರಾಜ್ ಚಿಲವೇರಿ ಟ್ರಿಪಲ್ ಬೈಕ್ ರೈಡ್ ಮಾಡಿದಕ್ಕೆ ಆತನ ಮೇಲೆ ಪಿಎಸ್‍ಐ ಎನ್‍ಆರ್ ಖಿಲಾರೆ ಹಾಗೂ ಪೇದೆ ಸಿಆರ್ ಬಳಿಗಾರ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಭಾನುವಾರ ಯುವಕ ಮತ್ತು ಆತನ ಸಂಬಂಧಿಕರು ಆರೋಪ ಮಾಡಿದ್ದರು. ಯುವಕನನ್ನು ಇಳಕಲ್ ಸರಕಾರಿ ಆಸ್ಪತ್ರೆಗೆ ಕೂಡ ದಾಖಲು ಮಾಡಲಾಗಿತ್ತು. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ, ಪಿಎಸ್‍ಐ ಮೇಲೆ ಕ್ರಮ ಕೈಗೊಳ್ಳಬೇಕು ಪೊಲೀಸರಿಂದ ಅಮಾಯಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಯುವಕ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿ ಒದರಾಡುತ್ತಿದ್ದ ಎಂದು ಶಿವರಾಜ್ ಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ್ದಕ್ಕೆ ಆಕ್ರೋಶಗೊಂಡ ಶಿವರಾಜ್, ಪೊಲೀಸ್ ಠಾಣೆಗೆ ಬಂದು ಪಿಎಸ್‍ಐ ಹಾಗೂ ಪೇದೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ದೂರು ದಾಖಲು ಮಾಡಲಾಗಿದೆ. ಈ ವಿಷಯ ಖಂಡಿಸಿ ಇಂದು ಇಳಕಲ್ ನಗರದಲ್ಲಿ ಪಿಎಸ್‍ಐ ವಿರುದ್ಧ ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಪ್ರಕರಣ ಸಂಪೂರ್ಣ ರಾಜಕೀಯ ತಿರುವು ಪಡೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 9 ಕಾಡಾನೆಗಳ ಹಿಂಡಿನಿಂದ ಆನೆಯೊಂದು ದಾಳಿ- ವ್ಯಕ್ತಿಯ ಸ್ಥಿತಿ ಗಂಭೀರ

    9 ಕಾಡಾನೆಗಳ ಹಿಂಡಿನಿಂದ ಆನೆಯೊಂದು ದಾಳಿ- ವ್ಯಕ್ತಿಯ ಸ್ಥಿತಿ ಗಂಭೀರ

    ಮಡಿಕೇರಿ: ಕಾಡಾನೆ ದಾಳಿಯಿಂದಾಗಿ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಕೆಳಕೊಡ್ಲಿ ಗ್ರಾಮದಲ್ಲಿ ನಡೆದಿದೆ.

    ಸತೀಶ್ ಗಂಭೀರ ಗಾಯಗೊಂಡ ವ್ಯಕ್ತಿ. ಇಂದು ಬೆಳಗ್ಗೆ 7 ಗಂಟೆಗೆ ಎಂದಿನಂತೆ ತಮ್ಮ ತೋಟಕ್ಕೆ ತಮ್ಮ ಮೋಟರ್ ಬೈಕಿನಲ್ಲಿ ತೆರಳುತ್ತಿದ್ದಾಗ 9 ಕಾಡಾನೆಗಳ ಹಿಂಡಿನಿಂದ ಬಂದ ಆನೆಯೊಂದು ದಾಳಿ ಮಾಡಿದೆ. ಹಿಂಬದಿಯಲ್ಲಿ ಬರುತ್ತಿದ್ದ ಜನರು ಕೂಗಾಡಿದ್ದರಿಂದ ಕಾಡಾನೆಗಳು ಕಾಡಿನೊಳಗೆ ಸೇರಿದೆ.

    ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸತೀಶ್ ಅವರಿಗೆ ಕೂಡಲೇ ಕೊಡ್ಲಿಪೇಟೆ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗಿದೆ. ಯಸಳೂರು ಭಾಗದಿಂದ ಕಟ್ಟೆಪುರ ಅರಣ್ಯದೆಡೆಗೆ ಈ ಕಾಡಾನೆ ಹಿಂಡು ಬಂದಿದೆ.

    ಕಳೆದ ಎರಡು ದಿನದ ಹಿಂದೆ ಯಸಳೂರು ಭಾಗದಲ್ಲಿ ಮರಿಯಾನೆಯೊಂದು ಮೃತಪಟ್ಟಿತ್ತು. ಇದರಿಂದ ಈ ಭಾಗಕ್ಕೆ ಬಂದಿದೆ ಎಂದು ಸ್ಥಳಿಯರು ಹೇಳುತ್ತಿದ್ದಾರೆ. ಸ್ಥಳಕ್ಕೆ ಶನಿವಾರ ಸಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv