Tag: injections

  • ಅಕ್ರಮವಾಗಿ ರೆಮ್ ಡಿಸಿವರ್ ಚುಚ್ಚುಮದ್ದುಗಳ ಮಾರಾಟ – ಮೂವರ ಬಂಧನ

    ಅಕ್ರಮವಾಗಿ ರೆಮ್ ಡಿಸಿವರ್ ಚುಚ್ಚುಮದ್ದುಗಳ ಮಾರಾಟ – ಮೂವರ ಬಂಧನ

    ಭೋಪಾಲ್: ಕೋವಿಡ್-19 ರೋಗಿಗಳ ಚಿಕಿತ್ಸೆಗೆಂದು ರೆಮ್ ಡಿಸಿವರ್ ಚುಚ್ಚುಮದ್ದುಗಳನ್ನು ಆಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೆಡಿಕಲ್ ಶಾಪ್ ಮಾಲೀಕ ಹಾಗೂ ಮತ್ತಿಬ್ಬರನ್ನು ಮಧ್ಯಪ್ರದೇಶದ ಪೊಲೀಸರ ವಿಶೇಷ ಕಾರ್ಯಪಡೆ(ಎಸ್‍ಟಿಎಫ್) ಗುರುವಾರ ಬಂಧಿಸಿದೆ.

    ಆರೋಪಿಗಳನ್ನು ರಾಜೇಶ್ ಪಟಿದಾರ್, ಜ್ಞಾನೇಶ್ವರ ಬಾರಸ್ಕರ್ ಮತ್ತು ಅನುರಾಗ್ ಸಿಂಗ್ ಸಿಸೋಡಿಯಾ ಎಂದು ಗುರುತಿಸಲಾಗಿದೆ. ಈ ವಿಚಾರವಾಗಿ ಮಾಹಿತಿ ದೊರೆತ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಬಳಿ ಇದ್ದ ಎಸ್‍ಟಿಎಫ್ ಸ್ಲೀತ್‍ನ ಎರಡು ವಿಭಿನ್ನ ಬ್ರಾಂಡ್‍ಗಳ 12 ಬಾಟಲ್ ಚುಚ್ಚುಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೀಶ್ ಖತ್ರಿ ಹೇಳಿದ್ದಾರೆ.

    ಬಾಟಲುಗಳ ಮೇಲೆ ಮಾರಾಟದ ನಿಗದಿ ಬೆಲೆಯನ್ನು ಮುದ್ರಿಸಿರಲಿಲ್ಲ. ಆದರೆ ಆರೋಪಿಗಳು ಪ್ರತಿ ಚುಚ್ಚುಮದ್ದಿಗೆ 20,000ರೂ. ಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • 9 ಕ್ಯಾನ್ಸರ್ ಔಷಧಿಗಳ ಬೆಲೆ 87% ಇಳಿಕೆ!

    9 ಕ್ಯಾನ್ಸರ್ ಔಷಧಿಗಳ ಬೆಲೆ 87% ಇಳಿಕೆ!

    ನವದೆಹಲಿ: ಬಡ ಕ್ಯಾನ್ಸರ್ ರೋಗಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಸಹಾಯವಾಗಲೆಂದು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ(ಎನ್‍ಪಿಪಿಎ) 9 ಕ್ಯಾನ್ಸರ್ ಔಷಧಿಗಳ ಬೆಲೆಯನ್ನು 87%ದಷ್ಟು ಇಳಿಕೆ ಮಾಡಿದೆ.

    ಈ ಒಂಬತ್ತು ಔಷಧಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಕಿಮೊಥೆರಪಿ ಚುಚ್ಚುಮದ್ದುಗಳು ಒಳಗೊಂಡಿದೆ. ಪರಿಷ್ಕೃತ ಆದೇಶದ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಬಳಸಲಾಗುವ ಪೆಮ್ಸೆಸೆಲ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ 500 ಮಿ.ಗ್ರಾಂ ಇಂಜೆಕ್ಷನ್ ಬೆಲೆ 22,000 ರೂ.ಗಳಿಂದ 2,800 ರೂ.ಗೆ ಇಳಿದಿದೆ. ಹಾಗೆಯೇ 100 ಮಿ.ಗ್ರಾಂ ಡೋಸ್ ಇದೇ ಇಂಜೆಕ್ಷನ್ ಬೆಲೆ 7,700 ರೂ.ಗಳಿಂದ 800 ರೂಪಾಯಿಗೆ ಇಳಿದಿದೆ.

    ಅದೇ ರೀತಿ, ಎಪಿಕ್ಲೋರ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎಪಿರುಬಿಸಿನ್ 10 ಮಿ.ಗ್ರಾಂ ಡೋಸ್ ಇಂಜೆಕ್ಷನ್‍ಗೆ 561 ರೂ.ಗಳಿಂದ 276.8 ರೂಪಾಯಿಗೆ ಇಳಿದಿದೆ. ಅದೇ ಇಂಜೆಕ್ಷನ್‍ನ 50 ಮಿ.ಗ್ರಾಂ ಡೋಸ್ ಬೆಲೆ 2,662 ರೂ.ಗಳಿಂದ 960 ರೂ. ಆಗಿದೆ.

    ಎರ್ಲೋಟಾಜ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎರ್ಲೋಟಿನಿಬ್ 100 ಮಿ.ಗ್ರಾಂ 10 ಮಾತ್ರೆಗಳುಳ್ಳ ಪ್ಯಾಕ್‍ಗೆ 6,600 ರೂ.ಗಳಿಂದ 1,840 ರೂ.ಗೆ ಬಂದಿದೆ. ಹಾಗೆಯೇ 150 ಮಿ.ಗ್ರಾಂನ 10 ಮಾತ್ರೆಗಳುಳ್ಳ ಒಂದು ಪ್ಯಾಕ್ ಬೆಲೆ 8,800 ರೂ.ಗಳಿಂದ 2,400 ರೂ.ಗೆ ಇಳಿಕೆಯಾಗಿದೆ.

    ಲಾನೋಲಿಮಸ್ ಹೆಸರಿನಲ್ಲಿ ಮಾರಾಟವಾಗುವ ಎವೆರೋಲಿಮಸ್‍ನ ಬೆಲೆ 0.25 ಮಿ.ಗ್ರಾಂ ಮತ್ತು 0.5 ಮಿ.ಗ್ರಾಂನ ಡೋಸ್‍ಗೆ 1,452 ರೂ., 726 ಹಾಗೂ 739 ರೂ.ಗಳಿಂದ 406 ರೂ.ಗೆ ಇಳಿಕೆಯಾಗಿದೆ.

    ಈ ಬಗ್ಗೆ ಆರೋಗ್ಯ ಉದ್ಯಮದ ವಕ್ತಾರರು ಪ್ರತಿಕ್ರಿಯಿಸಿ, ಔಷಧಿಗಳ ಬೆಲೆ ಕಡಿಮೆ ಮಾಡುವ ಹಿನ್ನೆಲೆ ಔಷಧಿಯ ಗುಣಮಟ್ಟ ಹಾಗೂ ಪ್ರಮಾಣವನ್ನು ಕಡಿತಗೊಳಿಸಬಾರದು ಎಂದು ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

    ಎನ್‍ಪಿಪಿಎ ದೇಶದಲ್ಲಿ ಔಷಧಿ ಬೆಲೆಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವ ಯೂನಿಯನ್ ಸಚಿವಾಲಯವಾದ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಖಾತೆಯ ಅಡಿಯಲ್ಲಿ ಬರುವ ಸ್ವತಂತ್ರ ಸಂಸ್ಥೆಯಾಗಿದೆ. ಮಾರ್ಚ್ ನಂತರ ಎರಡನೇ ಭಾರಿ ಎನ್‍ಪಿಪಿಎ ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಕಡಿತಗೊಳಿಸಿದೆ.

  • ವಿಜಯಪುರ: ವೈದ್ಯನ ಚುಚ್ಚುಮದ್ದಿಗೆ ಬಾಲಕಿ ಸಾವು

    ವಿಜಯಪುರ: ವೈದ್ಯನ ಚುಚ್ಚುಮದ್ದಿಗೆ ಬಾಲಕಿ ಸಾವು

    ವಿಜಯಪುರ: ವೈದ್ಯನ ಎಡವಟ್ಟಿನಿಂದ ಬಾಲಕಿ ಸಾನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ನಡೆದಿದೆ.

    8 ವರ್ಷದ ರೂಪಾ ರಾಮಣ್ಣ ಬಂಡಿವಡ್ಡರ ಮೃತಪಟ್ಟಿರುವ ಬಾಲಕಿ. ಅಲಮೇಲ ಪಟ್ಟಣದ ನಿವಾಸಿ ರಾಮು ಬಂಡಿವಡ್ಡರ ಎಂಬವರು ಮಗಳು. ಮೂರು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದಳು.

    ತೀವ್ರ ಜ್ವರದಿಂದ ಬಳಲುತ್ತಿದ್ದ ತಮ್ಮ ಮಗಳು ರೂಪಾಳನ್ನು ಪೋಷಕರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯ ಚಂದ್ರಶೇಖರ ರೂಪಾಗೆ ಚುಚ್ಚುಮದ್ದು ನೀಡಿದ್ದಾನೆ. ಆದರೆ ಚುಚ್ಚುಮದ್ದು ವ್ಯತಿರಿಕ್ತ ಪರಿಣಾಮ ಬೀರಿ ಬಾಲಕಿ ರೂಪಾ ಇಂದು ಸಾವನ್ನಪ್ಪಿದ್ದಾಳೆ. ರೂಪಾಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಹಿನ್ನೆಲೆಯಲ್ಲಿ ಆಲಮೇಲ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ನೀಡಲಾಗಿದೆ. ಆದರೆ ಎಡವಟ್ಟು ಮಾಡಿದ ವೈದ್ಯ ಪರಾರಿಯಾಗಿದ್ದಾನೆ.

    ಇದನ್ನು ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ರಾತ್ರಿ ಮತ್ತೊಂದು ಮಗು ಸಾವು – ರಾಜ್ಯದಲ್ಲಿ ಸಾವಿನ ಸಂಖ್ಯೆ 33ಕ್ಕೆ ಏರಿಕೆ