Tag: injection

  • ವೈದ್ಯರ ಎಡವಟ್ಟಿನಿಂದಾಗಿ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು

    ವೈದ್ಯರ ಎಡವಟ್ಟಿನಿಂದಾಗಿ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು

    ಕೊಪ್ಪಳ: ವೈದ್ಯರ ಎಡವಟ್ಟಿನಿಂದಾಗಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕಿಯನ್ನು ಗಾಯಿತ್ರಿ(11) ಎಂದು ಗುರುತಿಸಲಾಗಿದೆ. ವೈದ್ಯ ಡಾ. ಸಂತೋಷ್ ಕುಮಾರ್ ಎಂಬವರು ಈ ಎಡವಟ್ಟು ಮಾಡಿದ್ದಾರೆ ಎನ್ನಲಾಗಿದೆ.

    ಬಾಲಕಿ ಗಾಯಿತ್ರಿ ಜ್ವರದಿಂದ ಬಳಲುತ್ತಿದ್ದಳು. ಹೀಗಾಗಿ ಪೋಷಕರು ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಡಾ. ಸಂತೋಷ್ ಚುಚ್ಚು ಮದ್ದು ಕೊಟ್ಟಿದ್ದಾರೆ. ಆ ಬಳಿಕ ಬಾಲಕಿಯ ತೊಡೆಯ ಭಾಗದಲ್ಲಿ ಹಸಿರುಬಣ್ಣಕ್ಕೆ ತಿರುಗಿ ಊತವುಂಟಾಗಿದೆ. ಹೀಗಾಗಿ ಮೆಡಿಸಿನ್ ರಿಯಾಕ್ಷನ್ ನಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.

    ಇದೀಗ ಪೋಷಕರು ವೈದ್ಯನ ನಿರ್ಲಕ್ಷ್ಯದಿಂದ ಬಾಲಕಿ ಮೃತಪಟ್ಟಿದ್ದಾಳೆ ಅಂತ ಆರೋಪ ಮಾಡುತ್ತಿದ್ದಾರೆ. ಮಗಳನ್ನು ಕಳೆದುಕೊಂಡ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

    ಈ ಘಟನೆ ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

     

  • ಮೆಡಿಕಲ್ ವಿದ್ಯಾರ್ಥಿ ದೆಹಲಿಯಲ್ಲಿ ನಿಗೂಢ ಸಾವು

    ಮೆಡಿಕಲ್ ವಿದ್ಯಾರ್ಥಿ ದೆಹಲಿಯಲ್ಲಿ ನಿಗೂಢ ಸಾವು

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಮಿಳುನಾಡಿನ ಮೆಡಿಕಲ್ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

    ಸ್ನಾತಕೋತ್ತರ ವಿದ್ಯಾರ್ಥಿಯಾದ ಎಸ್. ಶರತ್ ಪ್ರಭು (24) ಬುಧವಾರ ತನ್ನ ಫ್ಲ್ಯಾಟ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಗುರು ತೇಗ್ ಬಹದ್ದೂರ್ ಮೆಡಿಕಲ್ ಆಸ್ಪತ್ರೆಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶರತ್ ಬುಧವಾರ ಬೆಳಗ್ಗೆ ಪ್ರಜ್ಞೆಯಿಲ್ಲದೇ ವಾಶ್‍ರೂಮಿನಲ್ಲಿ ಬಿದ್ದಿದ್ದರು.

    ಶರತ್ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ನೋಡಿದ ಸ್ನೇಹಿತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದಾರಿ ಮಧ್ಯದಲ್ಲೇ ಶರತ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾಗ ಶರತ್ ಪ್ರಜ್ಞೆ ತಪ್ಪಿಬಿದ್ದ ಸ್ಥಳದಲ್ಲಿ ಇಂಜೆಕ್ಷನ್ ಪತ್ತೆಯಾಗಿದೆ.

    ಶರತ್ ಸಾವಿನ ಹಿಂದಿನ ದಿನ ನಮ್ಮ ಜೊತೆ ಚೆನ್ನಾಗಿ ಮಾತನಾಡಿದ್ದನು. ಆಗ ಅವನು ಚೆನ್ನಾಗಿಯೇ ಇದ್ದ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ಶರತ್ ಪೋಷಕರು ಹೇಳಿದ್ದಾರೆ.

    ಶರತ್ ಸಾವಿನಿಂದ ದೆಹಲಿಯಲ್ಲಿ ಓದುತ್ತಿರುವ ತಮಿಳು ನಾಡು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ವಿದ್ಯಾರ್ಥಿ ಸಂಘಗಳು ಹಾಗೂ ರಾಜಕೀಯ ಪಕ್ಷಗಳು ಈ ಪ್ರಕರಣದ ಬಗ್ಗೆ ಕ್ರಮ ತೆಗೆದುಕೊಳ್ಳಲು ತಮಿಳು ನಾಡು ಸರ್ಕಾರಕ್ಕೆ ತಿಳಿಸಿದೆ.

    ಈ ಹಿಂದೆ ಎಂದರೆ ಕಳೆದ ವರ್ಷ ತಮಿಳು ನಾಡಿನ ವಿದ್ಯಾರ್ಥಿಯಾದ ಸರವಣನ್ ಕೂಡ ನಿಗೂಢವಾಗಿ ಸಾವನ್ನಪ್ಪಿದ್ದರು. ಸರವಣನ್ ಕೂಡ ದೆಹಲಿಯಲ್ಲಿ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಯಾಗಿದ್ದರು. ಸರವಣನ್ ಸಾವನ್ನಪ್ಪಿದ್ದ ಜಾಗದಲ್ಲೂ ಕೂಡ ಇಂಜೆಕ್ಷನ್ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ಬಂದ ನಂತರ ಲೆತಲ್ ಇಂಜೆಕ್ಷನ್‍ನಿಂದ ಸರವಣನ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.

    ಈ ಘಟನೆಯಲ್ಲಿ ಸಾವನ್ನಪ್ಪಿದ ಸರವಣನ್ ಹಾಗೂ ಶರತ್ ಬಾಬು ಇಬ್ಬರೂ ತಮಿಳು ನಾಡಿನ ತಿರುಪೂರುದವರಾಗಿದ್ದು, ಇಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದರು ಎಂದು ವರದಿಯಾಗಿದೆ.

  • ಚುಚ್ಚುಮದ್ದು ಸೋಂಕಿನಿಂದ ಬಿಎಸ್ಸಿ ಪದವೀಧರೆ ಸಾವು – ಕ್ಲಿನಿಕ್ ಮುಚ್ಚಿ ಡಾಕ್ಟರ್ ಪರಾರಿ

    ಚುಚ್ಚುಮದ್ದು ಸೋಂಕಿನಿಂದ ಬಿಎಸ್ಸಿ ಪದವೀಧರೆ ಸಾವು – ಕ್ಲಿನಿಕ್ ಮುಚ್ಚಿ ಡಾಕ್ಟರ್ ಪರಾರಿ

    ಮೈಸೂರು: ನಗರದಲ್ಲಿ ವೈದ್ಯನೊಬ್ಬನ ಚುಚ್ಚುಮದ್ದು ಸೋಂಕಿನಿಂದ ಬಿ.ಎಸ್‍ಸಿ ಪದವೀಧರೆಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನ ಹೆಚ್‍ಡಿ ಕೋಟೆ ತಾಲೂಕಿನ ಕಾಳಿಹುಂಡಿ ಬಳಿ ನಡೆದಿದೆ.

    ಮೃತ ದುರ್ದೈವಿ ವಿದ್ಯಾರ್ಥಿನಿಯನ್ನು 21 ವರ್ಷದ ಅಂಕುಶ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಅಂಕುಶಳಿಗೆ ವಾರದ ಹಿಂದೆ ಜ್ವರ ಬಂದಿತ್ತು. ಹೀಗಾಗಿ ಈಕೆ ತಾಲೂಕಿನಲ್ಲಿರೋ ಕ್ಲಿನಿಕ್‍ವೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಅಂತೆಯೇ ಅಲ್ಲಿನ ವೈದ್ಯ ರಾಜು ಎಂಬಾತ ಅಂಕುಶಳಿಗೆ ಇಂಜೆಕ್ಷನ್ ನೀಡಿ ಚಿಕಿತ್ಸೆ ಕೊಟ್ಟಿದ್ದನು. ಮರುದಿನವೇ ಇಂಜೆಕ್ಷನ್ ನೀಡಿದ್ದ ಜಾಗದಲ್ಲಿ ಊತ ಆರಂಭವಾಗಿ ನೋವು ಕಾಣಿಸಿಕೊಂಡಿತ್ತು. ಅಲ್ಲದೇ ಆ ಜಾಗ ಗಂಟಾಗಿ ಕೀವು ತುಂಬಲು ಪ್ರಾರಂಭವಾಗಿತ್ತು.

    ಈ ಹಿನ್ನೆಲೆಯಲ್ಲಿ 2 ದಿನಗಳ ನಂತರ ರಾಜು ಬಳಿ ತೆರಳಿದಾಗ ವೈದ್ಯ ತಾನೇ ಮೈಸೂರಿನ ಖಾಸಗಿ ವೈದ್ಯರ ಬಳಿ ಕರೆದ್ಯೊಯ್ದು ಚಿಕಿತ್ಸೆ ಕೊಡಿಸಿದ್ದನು. ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ವೈದ್ಯ ಎಸ್ಕೇಪ್: ಇತ್ತ ಯುವತಿಯ ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ವೈದ್ಯ ರಾಜು ಕ್ಲಿನಿಕ್ ಬೋರ್ಡ್ ತೆಗೆದು ತಲೆಮರೆಸಿಕೊಂಡಿದ್ದಾನೆ. ಅಲ್ಲದೇ ಈ ಕುರಿತು ಅಂಕುಶ ಕುಟುಂಬಸ್ಥರು ಕೂಡ ಯಾವುದೇ ದೂರು ನೀಡದೆ ಅಂತ್ಯಕ್ರಿಯೆ ನಡೆಸಿದ್ದಾರೆ.

    ಆದ್ರೆ ಸ್ಥಳೀಯರು ಮಾತ್ರ ಡಾ ರಾಜು ಅಸಲಿ ವೈದ್ಯನೇ ಅಲ್ಲ ಅಂತ ಆರೋಪಿಸಿದ್ದು, ನಕಲಿ ವೈದ್ಯನ ಯಡವಟ್ಟಿನಿಂದ ಯುವತಿ ಬಲಿಯಾಗಿದ್ದಾಳೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.

  • ವೈದ್ಯನ ಎಡವಟ್ಟಿನಿಂದ ಯುವಕನ ಪ್ರಾಣಕ್ಕೆ ಕುತ್ತು – ಇಂಜೆಕ್ಷನ್ ನೀಡಿದ ಜಾಗ ಕೊಳೆತೇ ಹೋಯ್ತು

    ವೈದ್ಯನ ಎಡವಟ್ಟಿನಿಂದ ಯುವಕನ ಪ್ರಾಣಕ್ಕೆ ಕುತ್ತು – ಇಂಜೆಕ್ಷನ್ ನೀಡಿದ ಜಾಗ ಕೊಳೆತೇ ಹೋಯ್ತು

    ವಿಜಯಪುರ: ವೈದ್ಯನ ಎಡವಟ್ಟಿಗೆ ಯುವಕನ ಜೀವಕ್ಕೆ ಕುತ್ತು ಬಂದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಸತೀಶ ಎಂಬ ಯುವಕ ಜ್ವರ ಬಂದ ಕಾರಣ ಗ್ರಾಮದ ಸುನೀಲ ಕುಸಗಲ್ ಎಂಬ ವೈದ್ಯನ ಹತ್ತಿರ ಚಿಕಿತ್ಸೆ ಪಡೆದಿದ್ದರು. ಆದ್ರೆ ವೈದ್ಯ ಸುನೀಲ ನೀಡಿದ ಚುಚ್ಚು ಮದ್ದು ರಿಯಾಕ್ಷನ್ ಆಗಿ ಸತೀಶನ ಹಿಂಭಾಗದಲ್ಲಿ ಶೇಕಡ 90 ರಷ್ಟು ಭಾಗ ಹುಳು ಹತ್ತಿದೆ.

    ಅಲ್ಲದೆ ಈ ಚುಚ್ಚು ಮದ್ದಿನಿಂದ ಕಿಡ್ನಿ ವೈಫಲ್ಯದ ಸಂಭವವಿದೆ ಎಂದು ಹಿರಿಯ ವೈದ್ಯರು ಹೇಳಿದ್ದಾರೆ.

    ನನ್ನ ಕಾಲುಗಳೆರಡೂ ನೋವಾಗ್ತಿತ್ತು. ಆಸ್ಪತ್ರೆಗೆ ಬಂದಾಗ ವೈದ್ಯರು ಇರ್ಲಿಲ್ಲ. ನಂತರ 12 ಗಂಟೆಗೆ ವೈದ್ಯರು ಬಂದು ಇಂಜೆಕ್ಷನ್ ಕೊಟ್ರು ಎಂದು ಸತೀಶ್ ಹೇಳಿದ್ದಾರೆ.

    ಸತೀಶ ಬಹಳ ದಿನ ಬದುಕುವುದು ಸಂಶಯ ಎಂದು ವೈದ್ಯರು ಹೇಳಿದ್ದಾರೆ. ವೈದ್ಯ ಸುನೀಲ ಸದ್ಯಕ್ಕೆ ಕ್ಲಿನಿಕ್ ಮುಚ್ಚಿ ಪರಾರಿಯಾಗಿದ್ದಾನೆ.

  • ಒಂದೇ ಗಂಟೆಯಲ್ಲಿ 5 ಇಂಜೆಕ್ಷನ್, 2 ಗ್ಲುಕೋಸ್ – ಓವರ್ ಡೋಸ್‍ಗೆ ಯುವಕ ಬಲಿ?

    ಒಂದೇ ಗಂಟೆಯಲ್ಲಿ 5 ಇಂಜೆಕ್ಷನ್, 2 ಗ್ಲುಕೋಸ್ – ಓವರ್ ಡೋಸ್‍ಗೆ ಯುವಕ ಬಲಿ?

    ದಾವಣಗೆರೆ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನಿಗೆ ಓವರ್ ಡೋಸ್ ಔಷಧಿ ನೀಡಿ ಸಾವನ್ನಪ್ಪುವಂತೆ ಮಾಡಿದ್ದಾರೆ ಎಂದು ಅರೋಪಿಸಿ ಕ್ಲಿನಿಕ್ ಮುಂಭಾಗ ರೋಗಿಯ ಸಂಬಂಧಿಕರು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.

    ನಗರದ ಕೆ ಬಿ ಬಡಾವಣೆಯಲ್ಲಿರುವ ಜಾಧವ್ ಕ್ಲಿನಿಕ್ ಗೆ ದಾವಣಗೆರೆ ಜಿಲ್ಲೆಯ ಹೊನ್ನೂರು ಗ್ರಾಮದ ಮಾರುತಿ (18) ಯನ್ನು ದಾಖಲು ಮಾಡಿದ್ರು. ರಾತ್ರಿ 8 ಗಂಟೆಯಿಂದ 9 ಗಂಟೆಯ ಒಳಗೆ ಐದು ಇಂಜೆಕ್ಷನ್, 2 ಗ್ಲೂಕೋಸ್ ನೀಡಿದ್ರು. ನಂತರ ಹಾಗೇ ಡಿಸ್ಚಾರ್ಜ್ ಮಾಡಿ ಕಳಿಸಿದ್ದಾರೆ.

    ಆದ್ರೆ ಡಿಸ್ಚಾರ್ಜ್ ಮಾಡಿ 2 ಕಿಲೋಮೀಟರ್ ಸಾಗುತ್ತಿದ್ದಂತೆಯೇ ಯುವಕನ ಬಾಯಲ್ಲಿ ನೊರೆ ಬಂದಿದೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಸ್ಥಳೀಯ ಅಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೇ ಮಾರುತಿ ಮೃತಪಟ್ಟಿದ್ದಾನೆ ಅಂತ ವೈದ್ಯರು ಹೇಳಿದ್ದಾರೆ.

    ಇದರಿಂದ ಅಕ್ರೋಶಗೊಂಡ ಯುವಕನ ಸಂಬಂಧಿಕರು ಜಾಧವ್ ಕ್ಲಿನಿಕ್ ಬಳಿ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾಸನ: ಪತಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಕೇಸಿಗೆ ಮತ್ತೊಂದು ಟ್ವಿಸ್ಟ್

    ಹಾಸನ: ಪತಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಕೇಸಿಗೆ ಮತ್ತೊಂದು ಟ್ವಿಸ್ಟ್

    ಹಾಸನ: ಪತ್ನಿಯೇ ಪತಿಗೆ ಜ್ಯೂಸ್ ನಲ್ಲಿ ನಿದ್ದೆ ಮಾತ್ರೆ ಕುಡಿಸಿ ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ ಆರೋಪ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಆರೋಪಿಯಾಗಿರುವ ಪತ್ನಿಗೆ ಬೇರೊಬ್ಬನ ಜೊತೆ ಸ್ನೇಹ ಇರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಹಾಸನ ತಾಲೂಕು ಕಿತ್ತನಕೆರೆಯಲ್ಲಿ ಕೃಷಿ ಮಾಡುತ್ತಿದ್ದ ವಿಶ್ವನಾಥ್ ಮತ್ತು ಮೆಡಿಕಲ್ ಶಾಪ್ ನಲ್ಲಿ ಉದ್ಯೋಗದಲ್ಲಿದ್ದ ಕೌಶಿಕ ಗ್ರಾಮದ ಆಶಾ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಆದರೆ ಈ ಮದುವೆಗೆ ಮೊದಲು ಸಂತೋಷ್ ಎಂಬಾತನ ಜೊತೆ ಆಶಾ ಸ್ನೇಹ ಬೆಳೆಸಿದ್ದಳು. ಕಳೆದ ಐದಾರು ವರ್ಷಗಳ ಹಿಂದಿನಿಂದಲೂ ಆಶಾ ಮತ್ತು ಸಂತೋಷ್ ಗೆಳೆತನ ಹೊಂದಿದ್ದು, ಮದುವೆಯಾಗಿ ಮೂರು ತಿಂಗಳಾಗಿದ್ದರೂ ಆಶಾ ಅಂತರ ಕಾಯ್ದುಕೊಂಡಿದ್ದಳು.

    ಪ್ರವಾಸ ಹೋಗಿದ್ದ ವೇಳೆ ಆಶಾಳಿಗೆ ಪರಿಚಯವಾಗಿದ್ದ ಸಂತೋಷ್ ನಂತರ ಆಕೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಅಷ್ಟೇ ಅಲ್ಲದೇ ಆಶಾಳಿಗೆ ಮೊಬೈಲ್ ಕೊಡಿಸಿದ್ದ. ಈ ಎಲ್ಲ ಮಾಹಿತಿಯನ್ನು ಆಶಾಳ ಮಾವ ಬೋರಶೆಟ್ಟಿ ತಿಳಿಸಿದ್ದು, ಈ ಕೊಲೆಗೆ ಸಂತೋಷ್ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.

    ಏನಿದು ಕೊಲೆ ಕೇಸ್?
    ವಿಶ್ವನಾಥ್ ಮತ್ತು ಆಶಾ, ಹತ್ತಿರದ ಸಂಬಂಧಿಗಳಾಗಿದ್ದರಿಂದ ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದಿದ್ದರು. ಈ ಕಾರಣಕ್ಕೆ ಫೆಬ್ರವರಿ 15 ರಂದು ಇವರಿಬ್ಬರ ಮದುವೆ ನಡೆದಿತ್ತು. ಮದುವೆಗೆ ಎರಡೂ ಮನೆಯವರ ಸಹಕಾರವಿತ್ತು. ಮದುವೆಯಾದ ಒಂದೆರಡು ತಿಂಗಳವರೆಗೂ ನವಜೋಡಿ ಸಂಬಂಧಿಕರ ಮನೆ, ಸಿನಿಮಾ ಹೀಗೆ ಎಲ್ಲಾ ಕಡೆ ಓಡಾಡಿಕೊಂಡಿದ್ದರು. ಆದ್ರೆ ಇಬ್ಬರ ನಡುವೆ ಏನಾಯಿತೋ ಏನೋ ಮದುವೆಯಾದ ಎರಡೇ ತಿಂಗಳಿಗೆ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.

    ಆದರೆ ಸಂಬಂಧ ಹಾಳಾಗಲಿದೆ ಎನ್ನುವ ಒಂದೇ ಕಾರಣಕ್ಕೆ ಈ ವಿಷಯವನ್ನು ವಿಶ್ವನಾಥ್ ಯಾರ ಬಳಿಯೂ ಹೇಳಿರಲಿಲ್ಲ. ಕಳೆದ ಏಪ್ರಿಲ್ 24 ರಂದು ಸಂಬಂಧಿಕರ ಮಗುವಿನ ನಾಮಕರಣಕ್ಕೆ ಹೋಗಬೇಕು ಎಂದು ಗಂಡನೊಂದಿಗೆ ಹಾಸನಕ್ಕೆ ಆಶಾ ಹೋಗಿದ್ದಳು. ಮಹಾರಾಜ ಪಾರ್ಕ್ ನಲ್ಲಿ ಇಬ್ಬರು ಕುಳಿತುಕೊಂಡಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ವಿಶ್ವನಾಥ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಸಂಜೆ ಮನೆಗೆ ಬಂದ ವಿಶ್ವನಾಥ್ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮಾರನೇ ದಿನ ಅನಾರೋಗ್ಯಕ್ಕೆ ತುತ್ತಾಗಿದ್ದ ವಿಶ್ವನಾಥ್ ಅವರನ್ನು ಹಾಸನ, ಅಲ್ಲಿಂದ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವಿಶ್ವನಾಥ್ ಅವರು ಮೇ 2ರ ಸಂಜೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ವಿಶ್ವನಾಥ್ ಹೇಳಿದ್ದೇನು?
    ಮದುವೆಯಾದ ಬಳಿಕ ಹುಟ್ಟುವ ಮಗುವಿನ ಬಗ್ಗೆ ನಮ್ಮಲ್ಲಿ ಚರ್ಚೆ ನಡೆದಿತ್ತು. ಮಹಾರಾಜ ಪಾರ್ಕ್ ನಲ್ಲಿ ನಾವು ಕುಳಿತ್ತಿದ್ದಾಗ ಆಶಾ ಭವಿಷ್ಯದಲ್ಲಿ ಹುಟ್ಟುವ ಮಗು ಬೆಳ್ಳಗಿರಬೇಕು ಎಂದು ಹೇಳಿ ಮಾತ್ರೆ ಮತ್ತು ಜ್ಯೂಸ್ ನೀಡಿದ್ದಳು. ಆಕೆಯ ಮಾತನ್ನು ನಂಬಿ ನಾನು ಜ್ಯೂಸ್‍ನೊಂದಿಗೆ 4-5 ಮಾತ್ರೆ ನುಂಗಿದ್ದೇನೆ. ಬಳಿಕ ಆಕೆ ಇಂಜೆಕ್ಷನ್ ನೀಡಿದ್ದಾಳೆ. ಬಳಿಕ ನನಗೆ ಏನಾಯ್ತು ಗೊತ್ತಿಲ್ಲ ಎಂದು ಎಂದು ವಿಶ್ವನಾಥ್ ಸಂಬಂಧಿಕರಿಗೆ ಆಸ್ಪತ್ರೆಯಲ್ಲಿ ತಿಳಿಸಿದ್ದರು.

    ಸಂಬಂಧಿಕರು ಹೇಳೋದು ಏನು?
    ಗಂಡ ತನ್ನ ಬಣ್ಣಗೆ ಮ್ಯಾಚ್ ಆಗಲ್ಲ. ನನಗಿಂತ ಎತ್ತರ ಆಗಿದ್ದಾನೆ ಎಂದು ಆಶಾ ನಿಂದಿಸುತ್ತಿದ್ದಳು. ಆಶಾ ಮೊದಲೇ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದುರಿಂದ ಆಕೆ ದುರುದ್ದೇಶದಿಂದಲೇ ಹೀಗೆ ಮಾಡಿದ್ದಾಳೆ. ಅಲ್ಲದೇ ಆಕೆಗೆ ಬೇರೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ತಿಳಿದು ಮುಂದೆ ಗಂಡ ಎಲ್ಲಿ ಅಡ್ಡಿ ಬರುತ್ತಾನೋ ಎಂಬ ಕಾರಣದಿಂದ ವಿಷದ ಜ್ಯೂಸ್ ನೀಡಿದ್ದಾಳೆ. ಪತಿ ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ ಎಂದು ವಿಶ್ವನಾಥ್ ಅವರ ತಂದೆ ಬೋರ ಶೆಟ್ಟಿ ಆರೋಪಿಸಿದ್ದಾರೆ.

    ತನಿಖೆ ಎಲ್ಲಿಯವರೆಗೆ ಬಂದಿದೆ?
    ವಿಶ್ವನಾಥ್ ಮನೆಯವರು ನೀಡಿದ ದೂರು ಆಧರಿಸಿ ಆಶಾಳನ್ನು ವಶಕ್ಕೆ ಪಡೆದಿರುವ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆ ವರದಿ ಬಂದ ನಂತರ ವಿಶ್ವನಾಥ್ ಸಾವಿನ ರಹಸ್ಯ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.